ಹೊಸ ಉತ್ತಮ ಸಾಹಿತ್ಯ ಸೃಷ್ಟಿ ಮಾಡುವುದಕ್ಕೆ ಹೊರಟಿರುವೆವು-ಬಿ.ಎಂ.ಶ್ರೀ.

Date: 28-01-2020

Location: ಬೆಂಗಳೂರು


ಕನ್ನಡ ನಾಡು-ನುಡಿ ಸೇವೆಯ ಗೌರವಾರ್ಥ ಶ್ರೇಷ್ಠ ಚಿಂತಕ ಬಿ.ಎಂ.ಶ್ರೀ ಅವರು ಗುಲಬರ್ಗಾದಲ್ಲಿ 1928 ರಲ್ಲಿ ಜರುಗಿದ 14ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (ಜೂನ್ 1 ರಿಂದ 3ವರೆಗೆ) ಅಧ್ಯಕ್ಷರಾಗಿದ್ದರು.  ‘ಶ್ರೀ’ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯದಲ್ಲಿ ಪರಿಚಿತರಾಗಿರುವ ಬಿ.ಎಂ. ಶ್ರೀಕಂಠಯ್ಯ ಅವರು ’ಕನ್ನಡದ ಕಣ್ವ’ ಎಂದು ಖ್ಯಾತರಾಗಿದ್ದರು. ಹಳೆಗನ್ನಡ ಸಾಹಿತ್ಯ ಸೃಷ್ಟಿಯಿಂದ ಮರೆಯಾಗುವ ಮತ್ತು ಹೊಸಗನ್ನಡ ಸಾಹಿತ್ಯ ಇನ್ನೂ ನೆಲೆ ಕಂಡುಕೊಳ್ಳದ ಕಾಲಘಟ್ಟದಲ್ಲಿ ಶ್ರೀ ಅವರು ನವೋದಯದ ಆಚಾರ್ಯರಾಗಿ ಕನ್ನಡ ಸಾಹಿತ್ಯದ ದಿಕ್ಕನ್ನು ನಿರ್ದೇಶಿಸಿದವರು.ಕನ್ನಡ ನಾಡಿಗೆ ಹತ್ತು ಹಲವು ಪ್ರಥಮಗಳನ್ನು ನೀಡಿದ ಗುಲಬರ್ಗಾದಲ್ಲಿ ಈ ಸಮ್ಮೇಳನವು ಅಖಿಲ ಭಾರತ ಮಟ್ಟದಲ್ಲಿ ನಡೆದಿದ್ದು ಅದೇ ಮೊದಲಾಗಿತ್ತು. ಈಗ ಮತ್ತೆ ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಿ ಅವರ ಅಧ್ಯಕ್ಷೀಯ ಮಾತುಗಳ ಮುಖ್ಯಾಂಶಗಳನ್ನು ’ಬುಕ್ ಬ್ರಹ್ಮ’  ನೆನಪಿಸಿಕೊಳ್ಳುತ್ತಿದೆ-

**

ನಮ್ಮದು, ಆದುದರಿಂದ ಹೆಮ್ಮೆಯದು ಎಂಬ ದುರಭಿಮಾನವನ್ನು ಬಿಡೋಣ. ತಾರತಮ್ಯ ಬಿಟ್ಟು, ಮನೆಯ ಮಕ್ಕಳಿಗಿಂತ ಮುದ್ದಾಗಿದ್ದರೆ, ಹೊಟ್ಟೆ ಉರಿದರೂ, ಅವರ ಚೆಲುವನ್ನು ಒಪ್ಪಿಕೊಳ್ಳೋಣ. ಆಗ್ಗೆ ನಮ್ಮ ವಿನೀತರಲ್ಲಿ ಮರ್ಯಾದೆ ಹುಟ್ಟುವುದು.ನಿಜವಾದ ಸೌಂದರ್ಯದ ಸರಿಯಾದ ಪರಿಜ್ಞಾನವುಂಟಾಗುವುದು.

***

ಈ ನೂತನ ಪ್ರಪಂಚಕ್ಕೆ, ಈ ನೂತನ ಸಮಾಜದ ಅಭಿಲಾಷೆಗಳು, ರುಚಿಗಳು, ಜೀವನ ವ್ಯಾಪಾರಗಳು-ಇವುಗಳಿಗೆ ಅನುಕೂಲಿಸುವಂತಹ ಹೊಸ ಸಾಹಿತ್ಯವನ್ನು ನಿರ್ಮಾಣ ಮಾಡಿದಲ್ಲದೆ, ಕನ್ನಡ ಭಾಷೆಯ ಸೇವೆಗಾಗಲಿ, ಕನ್ನಡ ದೇಶದ ಏಳಿಗೆಗಾಗಲಿ, ನಾವು ಈ ಪರಿಷತ್ತು ಸಾಕಾದಷ್ಟು ಶ್ರದ್ಧೆಯನ್ನು ವಹಿಸಿ, ಋಣವನ್ನು ತೀರಿಸಿದಂತಾಯಿತೆಂದು ನಾನು ಹೇಳಲಾರೆನು.

***

(ಹೊಸ ಲೇಖಕ) ಪುರಾತನರ ಜ್ಞಾನಕೋಶವನ್ನು ಮತ್ತೊಮ್ಮೆ ವಿಮರ್ಶಿಸಿ, ಜಳ್ಳನ್ನು ತೂರಿ, ಕಾಳನ್ನು ಕಣಜಕ್ಕೆ ತುಂಬಿ, ಉಂಡು, ಮತ್ತೆ ಬಿತ್ತಿ, ಹೊಸ ಬೆಳೆಯನ್ನು ನೂರರಷ್ಟು ಹೆಚ್ಚಿಸುವನು. ಈ ಬಗೆಯ ಬರವಣಿಗೆಗಾರನು ನೂತನ ಲೋಕದ ಶಿಶು; ನೂತನ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಿತ ನಾದವನು; ಇಂಗ್ಲಿಷ್ ಮುಂತಾದ ಪರಭಾಷೆಗಳನ್ನು ಕಲಿಯುವುದು ಒಂದುಅಶುದ್ಧತೆ ಎಂದು ಬಗೆಯದವನು; ಅವನ್ನು ಕಲಿತಿದ್ದರಿಂದ ತನ್ನ ಮಾತೃಭಾಷೆಯನ್ನು ತಿರಸ್ಕರಿಸದವನು; ತನ್ನ ಜ್ಞಾನವನ್ನು ತಾಯ್ನುಡಿಯ ಮೂಲಕ ತನ್ನ ಜನಕ್ಕೆ ಕೊಡಬಲ್ಲವನು; ತನ್ನ ದೇಶದ ತನ್ನ ಜನರ ಪೂರ್ವದ ಮಹಿಮೆಗೂ, ಸಂಸ್ಕೃತಿಗೂ, ನ್ಯಾಯವಾದ ಭಕ್ತಿಯನ್ನು ಅರ್ಪಿಸಿ, ನೂತನ ಸಂಸ್ಕೃತಿಗೂ, ಮಹಾತ್ಮಕ್ಕೂ, ತಕ್ಕ ಬೆಲೆಯನ್ನು ಕಟ್ಟಬಲ್ಲವನು; ಈತನು ಇಂಗ್ಲಿಷಿನಲ್ಲಿ ಪ್ರವೀಣನಾಗಿರಬೇಕೆಂದು ನಾನು ಒತ್ತಿ ಹೇಳುತ್ತಿರುವುದನ್ನು ಒಂದು ತಪ್ಪಾಗಿ ತಾವು ಭಾವಿಸಕೂಡದು. ಇಂಗ್ಲಿಷ್ ಒಂದನ್ನೇ ಅನನ್ಯ ಭಾವದಿಂದ ಶರಣು ಹೋಗಬೇಕೆಂದು ನನ್ನ ಭಾವವಲ್ಲ; ಅದಿಲ್ಲದೆ, ಮುಕ್ತಿಯೇ ಇಲ್ಲವೆಂದು ನಾನು ಹೇಳುತ್ತಿಲ್ಲ.

***

ನಮ್ಮ ಕನ್ನಡ ನಾಡು ಚಿಕ್ಕದಿರಬಹುದು; ನಮ್ಮ ಕನ್ನಡಿಗರು ಸ್ವಲ್ಪ ಜನರಿರಬಹುದು. ಚರಗವನ್ನು ಚೆಲ್ಲಿದಂತೆ ಚೆದುರಿ ಹೋಗಿರಬಹುದು. ಆದರೆ, ಕರ್ನಾಟಕದ ಪೂರ್ವ ಚರಿತ್ರೆಯನ್ನೂ, ಪ್ರಕೃತ ಸಾಹಸಗಳನ್ನೂ ನೆನೆಸಿಕೊಂಡರೆ, ನಮ್ಮ ಪುರೋಭಿವೃದ್ಧಿಯಲ್ಲಿ ಯಾವ ಸಂದೇಹಕ್ಕೂ ಕಾರಣವಿರುವುದಿಲ್ಲ. ಈ ಪುಣ್ಯಕ್ಷೇತ್ರದಲ್ಲಿ ಬೇರೂರಿ, ಆಕಾಶ ಹಬ್ಬಿರುವ ಎಲ್ಲ ಪ್ರದೇಶಗಳಿಂದಲೂ ಗಾಳಿಯನ್ನೂ, ಬೆಳಕನ್ನೂ, ಆಹಾರವನ್ನೂ, ತೇಜಸ್ಸನ್ನೂ ಹೀರಿಕೊಳ್ಳುವ ಉದಾರ ಹೃದಯವೊಂದನ್ನು ನಾವು ಭದ್ರವಾಗಿ ಕಾಪಾಡಿಕೊಂಡರೆ;- ಅವರನ್ನು ಅನುಕರಿಸುವುದು, ಇವರನ್ನು ಧಿಕ್ಕರಿಸುವುದು, ಒಬ್ಬರ ವೇಷವನ್ನು ತಾಳಿ ಕುಣಿವುದು, ಮತ್ತೊಬ್ಬರ ಮಹಿಮೆಯನ್ನು ಸಹಿಸಲಾರದೆ ಕುಯುಕ್ತಿಗಳನ್ನು ಹೂಡಿ ಆಡಿಕೊಳ್ಳುವುದು-ಈ ಅಸಭ್ಯ ಚೇಷ್ಠೆಗಳನ್ನು, ಮನೋವಿಕಾರಗಳನ್ನು ಬಿಟ್ಟುಬಿಡುವುದಾದರೆ ;- ಸ್ವಪ್ರಕೃತಿ, ಸ್ವಪ್ರತಿಭೆಯನ್ನು ವಿಚಾರ ಮಾಡಿ ಅರಿತು, ನಮ್ಮ ಆವರಣ,ನಮ್ಮ ಅನುಕೂಲ್ಯವನ್ನು ಮನದಟ್ಟು ಮಾಡಿಕೊಂಡು, ನ್ಯೂನತೆಗಳನ್ನು, ದೌರ್ಬಲ್ಯಗಳನ್ನು ಪರಿಶೋಧಿಸಿ, ತ್ಯಜಿಸಿ, ಸತ್ಯಸಂಧರಾಗಿ, ಋಜುಮಾರ್ಗದಲ್ಲಿ ಕರ್ಮವೀರರಾಗಿ ಮುಂದಕ್ಕೆ ಹೆಜ್ಜೆಯನ್ನಿಡುವ ಪಕ್ಷದಲ್ಲಿ,-ನಮ್ಮ ಜನವೂ, ಜನದೊಡನೆ ಸಾಹಿತ್ಯವೂ, ಸಾಹಿತ್ಯದೊಡನೆ ಜನವೂ, ಅಮೂಲ್ಯವಾಗುವುದು. ಅಮೋಘವಾಗುವುದು, ಸತ್ಯ ಪ್ರತಿಷ್ಠಾಪಿತವಾಗುವುದು; ಧರ್ಮ ಪ್ರತಿಷ್ಠಾಪಿತವಾಗುವುದು.

***

ಏಳಿ, ಎಚ್ಚರಗೊಳ್ಳಿ, ಆರಂಭ ಮಾಡಿ. ಹಿಂದೆ ಯುರೋಪಿನಲ್ಲಿ ರಿನೇಸಾನ್ಸ್ ಎಂಬ ಸಾಹಿತ್ಯದ ಪುನರ್ಜನ್ಮವುಂಟಾದಾಗ, ಒಬ್ಬ ಮಹಾ ಪಂಡಿತನು-’ ನಾವು ಸತ್ತವರನ್ನು ಎಬ್ಬಿಸುವುದಕ್ಕೆ ಹೋಗುತ್ತೇವೆ” ಎಂದು ಘೋಷಿಸಿದನು. ನಾವೂ ಕನ್ನಡಿಗರು, ಇಂದು ಸತ್ತವರನ್ನು ಎಬ್ಬಿಸುವುದೇ ಅಲ್ಲ; ಬದುಕಿರುವವರನ್ನು ಎಚ್ಚರಗೊಳಿಸುವುದಕ್ಕೆ ಹೊರಟಿರುವೆವು. ಹಿಂದಿನ ಸಾಹಿತ್ಯವನ್ನು ಪ್ರಯೋಜನಕಾರಿಯಾಗಿ ಮಾಡುವುದಕ್ಕೆ ಅಲ್ಲ; ಹೊಸ ಉತ್ತಮ ಸಾಹಿತ್ಯವೊಂದನ್ನು ಸೃಷ್ಟಿ ಮಾಡುವುದಕ್ಕೆ ಹೊರಟಿರುವೆವು.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...