ಹೊಸ ಯುಗದ ಪ್ರವಾದಿ ಪ್ರಜ್ಞೆ ಲೆವ್‌ ಟಾಲ್‌ಸ್ಟಾಯ್‌

Date: 09-09-2019

Location: ಬೆಂಗಳೂರು


(ಸೆಪ್ಟೆಂಬರ್‌ ೯, ೧೮೨೮- ನವೆಂಬರ್‌ ೨೦, ೧೯೧೦)

ಗಮ್ಯವಿರದ ನಿರಂತರ ಯಾತ್ರಿಕ
- ಮಾಕ್ಸಿಂ ಗಾರ್ಕಿ

(ತರುಣ ತಲೆಮಾರಿನ ಕಲಾವಿದ ಸುಲೇರ್‌, ಮಹಾನ್‌ ಕಥೆಗಾರ ಆಂಟನ್‌ ಚೆಕಾಫ್‌ ಮತ್ತು ಜನಲೇಖಕ ಮಾಕ್ಸಿಂ ಗಾರ್ಕಿ, ಲೆವ್‌ ಟಾಲ್‌ಸ್ಟಾಯ್‌ರ ಅತ್ಯಂತ ಪ್ರೀತಿಪಾತ್ರ ಕಿರಿಯ ಗೆಳೆಯರು. ಟಾಲ್‌ಸ್ಟಾಯ್‌ ಅವರನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಿದ್ದರು.)
*
ಟಾಲ್‌ಸ್ಟಾಯ್‌ ಅವರ ಕೈಗಳು ಆಕರ್ಷಕವೇನೂ ಅಲ್ಲ, ಆದರೆ ಮಾಂತ್ರಿಕತೆ ತುಂಬಿರುವಂಥವು. ತಮ್ಮ ಕ್ರಿಯಾಶೀಲತೆಯ ಸಾಮರ್ಥ್ಯವನ್ನು ಎತ್ತಿ ತೋರಿಸುವಂತೆ ಕಾಣುವ ಉಬ್ಬಿದ ನರಗಳು. ಬಹುಶಃ ಲಿಯೋನಾರ್ಡೊ ಡ ವಿಂಚಿ ಕೂಡ ಇಂಥದ್ದೇ ಕೈಗಳನ್ನು ಪಡೆದಿದ್ದನೆನಿಸುತ್ತದೆ. ಇಂಥ ಕೈಗಳಿರುವ ವ್ಯಕ್ತಿಯೊಬ್ಬ ಏನನ್ನು ಬೇಕಾದರೂ ಸೃಷ್ಟಿಸಿಯಾನು. ಅವರು ಗಹನವಾದುದನ್ನು ಏನಾದರೂ ಹೇಳಬೇಕಾದರೆ ತಮ್ಮ ಬೆರಳುಗಳನ್ನು ಅಲುಗಿಸುತ್ತ, ಮುಷ್ಟಿಯೊಳಗೆ ಮಡಚಿಕೊಂಡು ಇದ್ದಕ್ಕಿದ್ದಂತೆ ಅರಳುವಂತೆ ಬಿಚ್ಚುತ್ತಾರೆ. ಆತ ಉತ್ಸವಮೂರ್ತಿಯಲ್ಲ, ಬದಲಿಗೆ, ಗ್ರಾಮಗಳಲ್ಲಿ ಬಂಗಾರದ ನಿಂಬೆಮರಗಳಡಿ ಪ್ರತಿಷ್ಠಾಪಿಸುವ ಗ್ರಾಮದೇವತೆ, ಸಾಂಪ್ರದಾಯಿಕ ದೇವತೆಗಳಿಗಿಂತ ಮಹಾ ಕಿಲಾಡಿ!

ಕಲಾವಿದ ಸುಲೇರ್‌ನನ್ನು ಆತನೊಬ್ಬ ಹೆಣ್ಣು ಎಂಬಂತೆ ಅವರು ನಯವಾಗಿ ವರ್ತಿಸುತ್ತಾರೆ. ಆಂಟನ್‌ ಚೆಕಾಫ್‌ನನ್ನು ತಂದೆಯಂತೆ ಪ್ರೀತಿಸುತ್ತಾರೆ. ಈ ಅಂತಃಕರಣದಲಿ ಸೃಷ್ಟಿಕರ್ತನ ಹೆಮ್ಮೆ ಇಣುಕುವುದು. ಆದರೆ, ಸುಲೇರ್‌ನೊಂದಿಗಿನ ಅವರ ಪ್ರೇಮ, ವೃದ್ಧನೊಬ್ಬ ತನ್ನ ಸಾಕಿದ ಗಿಳಿಗೆ, ನಾಯಿಮರಿಗೆ, ಸಾಕಿದ ಬೆಕ್ಕಿಗೆ ತೋರಿಸುವಂಥದ್ದು. ಸುಲೇರ್‌ನಾದರೂ ಅನಾಮಿಕ ನೆಲದ ಕಾಡುಹಕ್ಕಿಯಂತೆ. ಹಲವೊಮ್ಮೆ ಆತನ ಅರಾಜಕತೆಯ ರಾಜಕೀಯ ಸಿದ್ಧಾಂತವೆಂದರೆ ಅವರಿಗೆ ಇರುಸುಮುರುಸು. ಕೆರಳಿದ ದನಿಯಲ್ಲಿ, "ಸಾಕು ನಿಲ್ಲಿಸಯ್ಯ. ಗಿಳಿಪಾಠದಂತೆ ಸ್ವಾತಂತ್ರ್ಯ, ಸ್ವಾತಂತ್ರ್ಯ ಅಂತ ಬಡಬಡಸ್ತೀಯ. ನೀನು ಬಯಸುವಂಥ ಸ್ವಾತಂತ್ರ್ಯ ಸಿಕ್ಕರೆ ಭವಿಷ್ಯ ಹೇಗಿರುತ್ತೆ ಅಂತ ಗೊತ್ತೇನಯ್ಯ? ಸೈದ್ಧಾಂತಿಕವಾಗಿ ಹೇಳೋದಾದ್ರೆ, ತಳಬುಡವಿಲ್ಲದ ಶೂನ್ಯ! ವಾಸ್ತವಿಕ ನೆಲೆಯಲ್ಲಿ ಬದುಕಿನಲ್ಲಿ ಸ್ವಾತಂತ್ರ್ಯವನ್ನು ಆಚರಿಸುವಾಗ ನೀನೊಬ್ಬ ಮೈಗಳ್ಳ, ತಿರುಪೆಯವನೂ ಆಗಿರ್ತೀಯ. ಹಕ್ಕಿಗಳನ್ನು ನೋಡಯ್ಯ. ಅವೂ ಸ್ವತಂತ್ರವಾಗಿವೆ, ಆದರೂ ಗೂಡು ಕಟ್ತವೆ. ನಿನ್ನ ಬಿಡುಗಡೆಯ ಕಲ್ಪನೆ ಹಾಗಲ್ಲ, ಎದುರಿಗೆ ಕಾಣುವ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಹಪಾಹಪಿತನದ್ದು. ನೀನೇ ಗಂಭೀರವಾಗಿ ಯೋಚಿಸಿ ನೋಡು. ಸ್ವಾತಂತ್ರ್ಯ ಅನ್ನೋದು ಬಂಧನದಿಂದ ಮುಕ್ತವಾದ, ಅಂತಿಮ ಶೂನ್ಯಾವಸ್ಥೆ ಅಂತ ನಿನಗೇ ಅರಿವಾಗುತ್ತೆ."

ಉಕ್ಕುತ್ತಿದ್ದ ಕೋಪವನ್ನು ತಡೆಯುವಂತೆ ಕೊಂಚ ಮೌನವಾಗಿದ್ದು, ಆಮೇಲೆ ಮೆದುವಾಗಿ ಹೇಳಿದರು: "ಕ್ರಿಸ್ತ ಮತ್ತು ಬುದ್ಧ ಎಲ್ಲದರಿಂದ ಮುಕ್ತವಾಗಿದ್ದರಯ್ಯ. ಇಬ್ಬರೂ ಲೋಕದ ಪಾಪಗಳನು ತಮ್ಮ ಮೇಲೆ ಹೊರೆಸಿಕೊಂಡರು. ಅಷ್ಟೇಅಲ್ಲ ಕಣಯ್ಯ, ಭೂಮಿಯ ಮೇಲಿನ ಸೆರೆವಾಸದಂಥ ಬದುಕನ್ನು ಒಪ್ಪಿ ತಮ್ಮದಾಗಿಸಿಕೊಂಡರು. ಅದರಾಚೆಗೆ ಹೋಗಲು ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ನಾವೆಲ್ಲ ನಮ್ಮ ನಡುವಿನ ಮನುಷ್ಯನ ಬಗ್ಗೆ ನಮಗಿರುವ ಹೊಣೆಗಾರಿಕೆಯಿಂದ ಸ್ವಾತಂತ್ರ್ಯ ಬಯಸ್ತಾ ಇದಿವಿ. ಆದರೆ, ಇಂಥ ಜವಾಬ್ದಾರಿಯೇ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತಿರುವುದು. ಈ ಕರ್ತವ್ಯ ಭಾವ ನಮ್ಮನ್ನು ತುಂಬದಿದ್ದರೆ ನಾವು ಪ್ರಾಣಿಗಳಂತೆ ಬದುಕುತ್ತೇವಷ್ಟೇ. . ."

ತಕ್ಷಣ ಮುಖದಲ್ಲಿ ನಗು ತುಂಬಿಕೊಂಡು ಹೇಳಿದರು: "ಅದೆಲ್ಲ ಇರಲಿ, ನಾವೀಗ ಮಾಡ್ತಾ ಇರೋ ವಾದ ಕೂಡ ನಾವೆಲ್ಲ ಚೆನ್ನಾಗಿ ಬದುಕುವುದು ಹೇಗೆ ಅನ್ನೋದರ ಬಗ್ಗೇನೆ. ಇಲ್ಲೇ ನೋಡು. ನಮ್ಮ ವಾಗ್ವಾದ ನಿನ್ನಲ್ಲಿ ಮೂಗು ಕೆಂಪಾಗುವಷ್ಟು ಸಿಟ್ಟು ಬರಿಸುತ್ತೆ. ಅದಕ್ಕಾಗಿ ನೀನು ನನ್ನನ್ನೇನು ಚಚ್ಚಿ ಹಾಕ್ತಿಲ್ವಲ್ಲ? ಅಷ್ಟ್ಯಾಕೆ, ನನ್ನನ್ನು ಕೆಕ್ಕರಿಸಿ ಕೂಡ ನೋಡ್ತಿಲ್ಲ. ನೀನು ನಿಜಕ್ಕೂ ಸ್ವತಂತ್ರ ಅನ್ನೋ ಭಾವವಿದ್ರೆ ನನಗೆ ಚೆನ್ನಾಗಿ ಬಾರಿಸ್ತಿದ್ದೆ. ಇದು ಅಷ್ಟೇ ಸರಳ ವಿಚಾರನಯ್ಯ. ಸ್ವಾತಂತ್ರ್ಯ ಅಂದರೆ, ಪ್ರತಿಯೊಂದು, ಪ್ರತಿಯೊಬ್ಬರು ನನ್ನೊಂದಿಗೆ ಸಹಮತ ವ್ಯಕ್ತಪಡಿಸೋದು. ಹಾಗಾದಾಗ, ಅಲ್ಲಿ ನಾನು ಅನ್ನೋದು ಅಸ್ತಿತ್ವದಲ್ಲಿ ಇರೋದಿಲ್ಲ. ನಾನು ಅನ್ನೋದು ಅಸ್ತಿತ್ವಕ್ಕೆ ಬರೋದು ಸಂಘರ್ಷ, ವಿರೋಧಾಭಾಸ ಇದ್ದಾಗ ಮಾತ್ರ."
*
ಟಾಲ್‌ಸ್ಟಾಯ್‌ ಹೇಳಿದರು: "ಎಲ್ಲವನ್ನೂ ಈಗಾಗಲೇ ತಮ್ಮದನ್ನಾಗಿಸಿಕೊಂಡಿದ್ದಾರಲ್ಲ, ಅಂಥವರಿಗೆ ದೇವರು ಬೇಕು. ಬಹುಸಂಖ್ಯಾತ ಜನರಿಗೆ ದೇವರು ಬೇಕಾಗಿರೋದು ತಮ್ಮ ಬಳಿ ಏನೂ ಇಲ್ಲದಿರೋದರಿಂದ. ಅದನ್ನೇ ಹೀಗೆ ಹೇಳ್ತೀನಿ: ಬಹಳ ಜನ ದೇವರನ್ನು ನಂಬುವುದು ಮನಸ್ಸಿನಲ್ಲಿ ಆವರಿಸಿರೋ ಭಯ, ಅಳ್ಳೆದೆಯಿಂದಾಗಿ. ಎಲ್ಲೋ ಕೆಲವರು ಮಾತ್ರ ತಮ್ಮ ಆತ್ಮದ ಹಿರಿಮೆಯನ್ನು ಬಲ್ಲರು, ಅಷ್ಟೇ".

ಬುದ್ಧ ಮತ್ತು ಕ್ರಿಸ್ತನ ಕುರಿತು ತತ್ತ್ವಶಾಸ್ತ್ರ ಗ್ರಂಥಗಳನ್ನು ಓದು ಎಂದೊಮ್ಮೆ ನನಗವರು ಹೇಳಿದರು. ಬುದ್ಧ ಮತ್ತು ಕ್ರಿಸ್ತನ ಬಗ್ಗೆ ಮಾತಾಡಬೇಕಾದರೆ ಟಾಲ್‌ಸ್ಟಾಯ್‌ ತುಂಬ ಭಾವುಕರಾಗಿಬಿಡುತ್ತಿದ್ದರು. ಆದರೂ, ಅವರಿಗೆ ಕ್ರಿಸ್ತನ ಬಗ್ಗೆ ಅಷ್ಟೊಂದೇನು ಉಮೇದು ಕಾಣದು. ಒಂದು ಬಗೆಯ ಉದಾಸೀನತೆಯನ್ನೇ ತೋರುತ್ತಿದ್ದರು. ಕ್ರಿಸ್ತನ ಕುರಿತು ಅಭಿಮಾನ ವ್ಯಕ್ತಪಡಿಸುತ್ತಿದ್ದರೂ ಉತ್ಸುಕತೆ, ಒಳಗಿನ ಉರಿ ಮರೆಯಾಗಿಬಿಡುತ್ತಿತ್ತು. ಕ್ರಿಸ್ತ ಒಬ್ಬ ಮುಗ್ಧ, ಕರುಣಾಜನಕ ವ್ಯಕ್ತಿ ಎಂದು ಅವರು ಭಾವಿಸುತ್ತಿದ್ದರು. ಇದರರ್ಥ ಆತನ ಮೇಲೆ ಪ್ರೇಮವಿರಲಿಲ್ಲವೆಂದಲ್ಲ. ಕ್ರಿಸ್ತನೇನಾದರೂ ನಮ್ಮ ದೇಶದ ಹಳ್ಳಿಗಳಿಗೆ ಹೋದರೆ ಆತನ ಕರುಣಾಜನಕ ಸ್ಥಿತಿಯನ್ನು ಕಂಡು ಹುಡುಗಿಯರು ಗೇಲಿ ಮಾಡಿ ನಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿತ್ತು.

ಟಾಲ್‌ಸ್ಟಾಯ್‌ ಅವರನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಹೊಳೆವ ಚಿತ್ರ: ತಮ್ಮ ಇಡೀ ಬದುಕನ್ನು ಭೂಮಿಯ ಮೇಲಿನ ಪುಣ್ಯಕ್ಷೇತ್ರಗಳನು ಸುತ್ತಲು ಸಾವಿರಾರು ರಹದಾರಿ-ಹರದಾರಿಗಳನು ದಾಟುತ್ತ, ದಾಟುತ್ತ ನಿಜವಾದ ಅರ್ಥದಲಿ ಮನೆಮಾರು ಇಲ್ಲದವರಾದ, ಸುತ್ತಲಿನ ಎಲ್ಲರಿಗೂ, ಎಲ್ಲದಕೂ ಅಪರಿಚಿತರಾಗಿ ಕಾಣುವ, ಗಮ್ಯವಿರದ ಯಾತ್ರಿಕರದ್ದು. ಅಂಥವರಿಗೆ ಲೋಕದ ಬದುಕು ಹೇಳಿ ಮಾಡಿಸಿದ್ದಲ್ಲ. ಅಂತೆಯೇ, ದೇವರು ಕೂಡ ಅಂಥವರಿಗೆ ತಕ್ಕವನಲ್ಲ. ಅಭ್ಯಾಸ ಬಲದಿಂದಲಷ್ಟೇ ಅವರು ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ ಆಳದಲ್ಲಿ ಆತನನ್ನು ತಿರಸ್ಕರಿಸಿರುತ್ತಾರೆ. ದೇವರೇಕೆ ಅಂಥವರನ್ನು ಭೂಮಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ತಳ್ಳುತ್ತಲೇ ಇರುತ್ತಾನೆ, ಏಕೆ?

’ಜನ ಏನಿದ್ದರೂ ನೀನು ನಡೆಯುವ ದಾರಿಯಲ್ಲಿ ಎದುರಾಗುವ ರೆಂಬೆಕೊಂಬೆ, ಬೇರು, ಕಲ್ಲುಗಳಂತೆ. ನೀನು ಅವರಿಗೆ ಎದುರಾಗಿ ಓಡುತ್ತಿರುತ್ತೀಯ. ಜನ ಆಗೀಗ ನಿನ್ನನ್ನು ನೋಯಿಸುತ್ತಾರೆ. ಅವರನ್ನು ಬಿಟ್ಟರೆ ನಿನಗೆ ಬದುಕಿಲ್ಲ. ಆದಾಗ್ಯೂ, ತಮ್ಮಂತೆ ಇಲ್ಲದ ಮನುಷ್ಯನೊಬ್ಬನನ್ನು, ಆತನ ಯಾವ ವಿಚಾರವನ್ನೂ ಒಪ್ಪಿಕೊಳ್ಳದವನೊಬ್ಬನನ್ನು ಕಂಡಾಗ ಜನರ ಮುಖದ ಮೇಲೆ ಮೂಡುವ ಅಚ್ಚರಿ ಕೆಲವೊಮ್ಮೆ ನಿನಗೆ ಸುಖ ತರಬಹುದು.’
*
ನನ್ನ ಕಥೆಯೊಂದನ್ನು ಅವರಿಗೆ ಓದಿ ಹೇಳಿದಾಗ ಬಹಳ ಹೊತ್ತು ನಕ್ಕು, ಭಾಷೆಯ ಕೈಚಳಕದಲ್ಲಿ ಚೆನ್ನಾಗಿ ನುರಿತಿದ್ದೀಯ, ಎಂದು ಹೊಗಳಿದರು. ಆದ್ರೆ ಶಬ್ದಗಳು ಕಿಕ್ಕಿರಿದಿವೆ. ನಿನ್ನ ರೈತರು ಬಹಳ ಬುದ್ಧವಂತರಂತೆ ಮಾತಾಡ್ತಾರೆ. ನಿಜ ಜೀವನದಲ್ಲಿ ಅವರು ಹೆಡ್ಡರಂತೆ ಮತ್ತು ಅಸಹ್ಯವಾಗಿ ವರ್ತಿಸ್ತಾರಯ್ಯ. ಅವರು ಏನು ಹೇಳೋಕೆ ಪ್ರಯತ್ನಿಸ್ತಿದಾರೆ ಅನ್ನೋದು ನಮಗ್ಯಾವತ್ತೂ ಗೊತ್ತಾಗೊಲ್ಲ. ಅದನ್ನು ಬೇಕೆಂದೇ ಮಾಡ್ತಾರೆ. ಅವರ ಹೆಡ್ಡತನದ ಪ್ರದರ್ಶನದ ಶಬ್ದಗಳ ಹಿಂದೆ ಎದುರು ವ್ಯಕ್ತಿ ಏನು ಮಾತಾಡ್ತಾನೆ ಮೊದಲು ನೋಡೋಣ ಅನ್ನೋ ಜಾಣತನವಿರುತ್ತದೆ. ಬುದವಂತ ರೈತನೊಬ್ಬ ತಾನೇನು ಯೋಚಿಸ್ತಿದೀನಿ ಅನ್ನೋದನ್ನ ಯಾವತ್ತೂ ಬಿಟ್ಟುಕೊಡೊಲ್ಲ. ಜನ ಹೆಡ್ಡರನ್ನು ಯಾವುದೇ ಪೇಚಿಗೆ ಸಿಲುಕಿಸದೆ ಸರಳವಾಗಿ ಸ್ವೀಕರಿಸ್ತಾರೆ ಅನ್ನೋದು ರೈತನಿಗೆ ಗೊತ್ತು. ಅದೇ ಅವನ ಒಳಸಂಚು. ಎಲ್ಲವನ್ನೂ ಬಿಟ್ಟುಕೊಟ್ಟು ಆತನೆದುರು ನಿಂತ ನಿನ್ನ ಬಲಹೀನತೆಗಳು ಆತನಿಗೆ ಚೆನ್ನಾಗಿ ತಿಳಿದಿರುತ್ತವೆ. ಆದರೆ ನೀನು ಬರಿತಿರೋ ರೈತ ಮಾತ್ರ ತನ್ನ ಮನಸ್ಸನ್ನ ಶರ್ಟಿನ ತೋಳಿಗೆ ಸಿಕ್ಕಿಸಿಕೊಂಡವನಂತೆ ಕಾಣ್ತಾನೆ.

ಬರವಣಿಗೆಯಲ್ಲಿ ಬೇಕಾಬಿಟ್ಟಿ ಪೌರುಷದ ಹೇಳಿಕೆಗಳನ್ನ ಬಳಸಬೇಡ. ಹಾಗಾದಾಗ ನೀನು ಎಲ್ಲವನ್ನೂ ಚಂದ ಕಾಣಿಸುವಂತೆ ಮಾಡೋಕೆ ಹೊರಡ್ತೀಯ. ಬರೀ ವಿಲಕ್ಷಣತೆಗಳನ್ನ ತುಂಬಬೇಡ. ಯಾರೂ ಓದಲ್ಲ. ಯಾರಿಗೂ ಮರಳಾಗಬೇಡ, ಯಾರಿಗೂ ಭಯಾನೂ ಪಡ್ಬೇಡ. ಎಲ್ಲಾ ಸರಿ ಹೋಗುತ್ತೆ.
*
ನನ್ನ ಲೋಅರ್‌ ಡೆಪ್ತ್ಸ್‌ (ಈ ಕೆಳಗಿನವರು) ನಾಟಕದ ಕೆಲವು ದೃಶ್ಯಗಳನ್ನು ಅವರಿಗೆ ಓದಿ ಹೇಳಿದೆ.

"ನೀನೇಕೆ ಎಲ್ಲದರ ಮೇಲೂ ಅದೊಂದು ಆಟದ ವಸ್ತು ಅನ್ನೋಥರ ದಾಳಿ ಮಾಡ್ತೀಯ? ಇನ್ನೊಂದು ವಿಷಯ ಅಂದ್ರೆ ಓರೆಕೋರೆಗಳಿಗೆ ನಿನ್ನ ಬಣ್ಣದ ಗರಿಯಿಂದ ಮುಚ್ಚಿ ಹಾಕ್ತೀಯ. ಚಿನ್ನದ ಹೊಳಪು ಹೊರಟುಹೋಗುತ್ತೆ, ಎಮ್ಮೆ ಚರ್ಮ ಉಳಿಯುತ್ತೆ. ಅದನ್ನೇ ನಮ್ಮ ರೈತರು, ಎಲ್ಲಾನೂ ಸರಿದು ಹೋಗಿ ಸತ್ಯ ಒಂದೇ ಕೊನೆಗೆ ಉಳಕೊಳ್ಳೋದು ಅಂತ ಹೇಳ್ತಾರೆ. ಯಾವುದನ್ನೂ ನಿನ್ನ ಬಣ್ಣದಿಂದ ಮರೆ ಮಾಚಬೇಡ. ಕೆಲವೊಮ್ಮೆ ಅಸಂಬದ್ಧ ಅನ್ನಿಸಿದರೂ ಜನಸಾಮಾನ್ಯರು ಯಾವಾಗ್ಲೂ ಸರಳವಾಗಿಯೇ ಮಾತಾಡೋದು. ಚಮತ್ಕಾರ ಮಾಡೋಕ್ಕೆ ಹೋಗಬೇಡ. ಸತ್ಯವನ್ನ ಮುಚ್ಚಿಡೋಕೆ ಆಗೋಲ್ಲ. ನಿನ್ನ ಬರಹದಲ್ಲಿ ಲೇಖಕನೇ ಮಾತಾಡುವ ಕಳಪೆ ವಿಚಾರಗಳು ತುಂಬಿವೆ. ಅದು ಯಾಕೆಂದ್ರೆ ನಿನ್ನ ಎಲ್ಲ ಪಾತ್ರಗಳೂ ಒಂದೇ ಥರ ಮಾತಾಡೋದ್ರಿಂದ. ಅವಕ್ಕೆ ಬೇರೆ ಬೇರೆ ಮುಖಗಳಿಲ್ಲ. . .
*
ಒಂದು ಬೇಸಿಗೆಯ ದಿನ ಕೆಳರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದೆ. ಟಾಲ್‌ಸ್ಟಾಯ್‌ ಠಾಕುಠೀಕು ದಿರಿಸಿನಲಿ ಕುದುರೆಯ ಮೇಲೆ ಎಲ್ಲೋ ಹೊರಟಿದ್ದರು. ಕುದುರೆ ಮೇಲೆ ಕುಳಿತೇ ನನ್ನೊಂದಿಗೆ ಮಾತಿಗೆ ತೊಡಗಿದರು. ನಾನು ಹಾದಿಗುಂಟ ಅವರೊಂದಿಗೆ ಹೆಜ್ಜೆ ಹಾಕಿದೆ. ಮಾತಿನ ನಡುವೆ ಲೇಖಕರೊಬ್ಬರ ಹೆಸರನ್ನು ಹೇಳಿದ್ದೆ,

"ಆತ ದೇವರನ್ನ ನಂಬುತ್ತಾನೇನಯ್ಯ? ಎಂದು ಗಡ್ಡ ತುರಿಸುತ್ತ ಸಿಟ್ಟಿನಲ್ಲಿ ಕೇಳಿದರು.

"ನನಗೆ ತಿಳಿಯದು", ನಾನೆಂದೆ.

"ಮುಖ್ಯ ವಿಷಯದ ಕುರಿತೇ ನಿನಗೆ ತಿಳುವಳಿಕೆ ಇಲ್ಲ. ಆತ ನಂಬುತ್ತಾನೆ. ಆದರೆ ನಾಸ್ತಿಕರ ಎದುರು ಹೇಳಿಕೊಳ್ಳೋಕೆ ಪುಕ್ಕಲುತನ." ಹೀಗೆ ಮಾತಾಡುತ್ತ ಬೀದಿಯ ಕೊನೆ ತಲುಪಿದೆವು. ಅಲ್ಲಿ ದೊರೆ ವಂಶಸ್ಥ ಎ.ಎಂ ರಮನೋವ್‌ರ ತೋಟ. ರೊಮನೋವ್‌ ಕುಟುಂಬದ ಮೂವರು ರಸ್ತೆಗೆ ಒತ್ತಾಗಿ ನಿಂತು ಹರಟೆಯಲ್ಲಿ ತೊಡಗಿದ್ದರು. ಎಲ್ಲರೂ ದಷ್ಟಪುಷ್ಟ ಆಕರ್ಷಕ ಆಸಾಮಿಗಳು. ಕುದುರೆ ಸಾರೋಟೊಂದು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಹಿಂದಿನ ಕುದುರೆ ಅಡ್ಡವಿದ್ದುದರಿಂದ ಟಾಲ್‌ಸ್ಟಾಯ್‌ ಬೀದಿ ದಾಟಿ ಹೋಗುವಂತಿರಲಿಲ್ಲ. ಟಾಲ್‌ಸ್ಟಾಯ್‌, ರೊಮನೋವ್‌ಗಳ ಕಡೆಗೆ ನಿರೀಕ್ಷಿತ ಕಠೋರ ದೃಷ್ಟಿ ಬೀರಿದರು. ಆದರೆ ಅವರಾಗಲೇ ಬೆನ್ನು ತಿರುಗಿಸಿದ್ದರು. ಜೀನುಹೊತ್ತ ಕುದುರೆ ನೆಲ ಕುಟ್ಟುತ್ತ, ಟಾಲ್‌ಸ್ಟಾಯ್‌ ಹೋಗಲು ದಾರಿ ಮಾಡಿಕೊಡುವಂತೆ ಒಂದು ಬದಿ ಸರಿಯಿತು.

ಎರಡು ನಿಮಿಷದ ಮೌನ ಸವಾರಿಯ ಬಳಿಕ ಅವರು ಹೇಳಿದರು:

"ಆ ಅವಿವೇಕಿಗಳು ನನ್ನನ್ನು ಗುರುತಿಸಿದರು."

ಚಣಹೊತ್ತು ಬಿಟ್ಟು ಅಂದರು:

"ಟಾಲ್‌ಸ್ಟಾಯ್‌ಗೆ ದಾರಿ ಬಿಟ್ಟು ಕೊಡಬೇಕೆಂದು ಕುದುರೆಗೂ ಗೊತ್ತು ಕಣಯ್ಯ!"
*
(ಮಾಕ್ಸಿಂ ಗಾರ್ಕಿ- (೧೮೬೮-೧೯೩೬)-ರಿಕಲೆಕ್ಷನ್ ಆಫ್‌ ಟಾಲ್‌ಸ್ಟಾಯ್, ೧೯೧೯)
*
ಮುಗ್ಧ ತಂದೆಯ ಪ್ರೀತಿ
- ಆಂಟನ್‌ ಚೆಕಾಫ್‌

ಚೆಕಾಫ್‌, ವೃತ್ತಿಯಲ್ಲಿ ವೈದ್ಯ. ತನ್ನ ವೃತ್ತಿಯ ಅವಧಿಯಲ್ಲಿ ಯಸ್ನಿಯಾ ಪೊಲ್ಯಾನಕ್ಕೆ ಬಹಳ ಹತ್ತಿರದಲ್ಲಿಯೇ ಮೂರು ವರ್ಷ ಕೆಲಸ ಮಾಡುತ್ತಿದ್ದರೂ ಲೆವ್‌ ಟಾಲ್‌ಸ್ಟಾಯ್‌ರನ್ನು ಭೇಟಿಯಾಗೆಂಬ ಗೆಳೆಯರ ಸಲಹೆಯನ್ನು ಆತಂಕ, ತಳಮಳ ಭಯದ ಕಾರಣದಿಂದ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಒಂದೊಮ್ಮೆ ಲೆವ್‌ರ ಸಂಪರ್ಕಕ್ಕೆ ಬಂದಿದ್ದೆ ಇಬ್ಬರದೂ ತಂದೆ-ಮಗನ ಸಂಬಂಧವಾಗಿ ಬದಲಾಯಿತು. ೧೮೯೫ರ ಒಂದು ದಿನ ಮುದಿಸಿಂಹವನ್ನು ಭೇಟಿಯಾದಾಗ ಹತ್ತಿಯ ಪಂಚೆಯಲ್ಲಿದ್ದ ಟಾಲ್‌ಸ್ಟಾಯ್‌, ಸ್ನಾನಕ್ಕೆಂದು ಬಚ್ಚಲುಮನೆಗೆ ಹೊರಟಿದ್ದರು. ಚೆಕಾಫ್‌ನನ್ನು ಬಚ್ಚಲುಮನೆಗೇ ಕರೆದೊಯ್ದು, ಆತನೆದುರೆ ಬೆತ್ತಲಾಗಿ ನೀರಿನ ಹರಿವಾಣದಲ್ಲಿ ಬಿದ್ದರು. ನೀರಿನಲ್ಲಿ ತಲೆ-ಮೈಯನ್ನು ಮುಳುಗಿಸುತ್ತ, ತನ್ನ ಕಿರಿಯ ಅತಿಥಿಯೊಂದಿಗೆ ಮಾತುಕತೆ ನಡೆಸಿದರು. ಸಂಜೆ ಇನ್ನೂ ಕರಡು ಸ್ಥಿತಿಯಲ್ಲಿದ್ದ ತನ್ನ ಮಹಾ ಕಾದಂಬರಿ ’ಪುನರುತ್ಥಾನ’ದ ಕೆಲವು ಪುಟಗಳನ್ನು ಆಂಟನ್‌ಗಾಗಿ ಓದಿದರು. ಚೆಕಾಫ್‌ ಪಾಲಿಗೆ ಮುಂದೆ ಯಸ್ನಯಾ ಪೊಲ್ಯಾನಾದ ಇಗರ್ಜಿಯಷ್ಟು ಪವಿತ್ರ ಸ್ಥಳವಾಯಿತು. ಅಲ್ಲಿ ಕಳೆದ ಆ ರಾತ್ರಿ ಆಂಟನ್‌ ಪಾಲಿಗೆ ಮರೆಯಲಾಗದ ಮಧುರ ನೆನಪಾಗಿತ್ತು.
ಚೆಕಾಫ್‌ನ ಕಥೆಗಳನ್ನು ಟಾಲ್‌ಸ್ಟಾಯ್ ಮೆಚ್ಚಿಕೊಂಡಿದ್ದರು. ಆದರೆ, ಕೊಂಚ ದೃಷ್ಟಿಕೋನದ ಕೊರತೆ ಇದ್ದಂತಿದೆ ಎಂಬುದು ಅವರ ಅಂಬೋಣವಾಗಿತ್ತು.. ತನ್ನ ಅತಿಥೇಯನ ಅಭಿಪ್ರಾಯಕ್ಕೆ ತದ್ವಿರುದ್ಧ ಅನ್ನಿಸಿಕೆಗಳಿದ್ದರೂ ಚೆಕಾಫ್‌ ಅವನ್ನು ಒಳಗೆ ಅದುಮಿಟ್ಟುಕೊಂಡಿದ್ದ. ‘ಹರಿದು ಚಿಂದಿಯಾಗಿರುವ ಬಟ್ಟೆಗಳನ್ನು ಕಿತ್ತೊಗೆಯದೆ, ಮಣ್ಣಿನತ್ತ ಮುಖ ಮಾಡದೆ ರಶ್ಯಾದ ಬದುಕು-ಭವಿಷ್ಯ ಬದಲಾಗದು’, ಎಂದು ಲೆವ್‌ ಮೊದಲ ಭೇಟಿಯಲ್ಲಿ ಹೇಳಿದ್ದರು. ಉನ್ನತ ಶಿಕ್ಷಣ, ಆಸ್ತಿ ಹಕ್ಕು, ಅಷ್ಟೇಕೆ ವೈದ್ಯಕೀಯ ಶಿಕ್ಷಣವೂ ಬೇಡ ಎಂಬುದು ವೃದ್ಧನ ಅಭಿಪ್ರಾಯವಾಗಿತ್ತು.

ಇದಕ್ಕೆ ವಿರುದ್ಧವೆಂಬಂತೆ ಟಾಲ್‌ಸ್ಟಾಯ್‌ ಕಾದಂಬರಿಗಳಲ್ಲಿನ ಬಲವಂತದಿಂದ ಹೇರಿದ ನೈತಿಕತೆ, ದ್ವಂದ್ವಯುತ ನಿಲುಗಳ ಬಗ್ಗೆ ಚೆಕಾಫ್‌ ಕಟುವಾದ ನಿಲುವನ್ನು ಹೊಂದಿದ್ದ. ಅಂದಿನ ಭೇಟಿಯ ನಂತರ ಮತ್ತೆ ಮತ್ತೆ ಕೈಗೊಂಡ ಯಸ್ನಯಾ ಪೊಲ್ಯಾನ ಯಾತ್ರೆಯಲ್ಲಿ ಚೆಕಾಫ್‌ ಈ ವಿಷಯಗಳ ಕುರಿತು ಟಾಲ್‌ಸ್ಟಾಯ್‌ಯೊಂದಿಗೆ ಜಗಳವನ್ನೂ ಆಡುತ್ತಿದ್ದ. ಕೊನೆಕೊನೆಯಲ್ಲಿ ಲೆವ್‌ರ ಆರೋಗ್ಯ ಬಿಗಡಾಯಿಸಿದಾಗ, ತಾನೇ ಸ್ವತಃ ಕಾಯಿಲೆಗೊಳಗಾದವನಾಗಿದ್ದರೂ ಚೆಕಾಫ್‌, ಮುದಿಸಿಂಹದ ಆರೋಗ್ಯದ ಕುರಿತು ಚಿಂತಿತನಾಗಿ, ಆತಂಕಗೊಳ್ಳುತ್ತಿದ್ದ. ಟಾಲ್‌ಸ್ಟಾಯ್‌ ಒಬ್ಬ ’ಚಾಲಾಕಿ ಮುದುಕ’ ಎನ್ನುತ್ತಿದ್ದ ಚೆಕಾಫ್‌,’ ಈತನಷ್ಟು ಇನ್ಯಾರನ್ನೂ ನಾನು ಪ್ರೀತಿಸಲಾರೆ’, ಎಂದೂ ಹೇಳಿಕೊಳ್ಳುತ್ತಿದ್ದ. ’ಸಾಹಿತ್ಯದಲ್ಲಿ ಟಾಲ್‌ಸ್ಟಾಯ್‌ ಹೆಸರಿರುವವರೆಗೂ ನಾವೂ ಸಾಹಿತಿಯಾಗಿರುವುದು, ಬರಹಗಾರ ಎಂದು ಗುರುತಿಸಿಕೊಳ್ಳುವುದು ಹೆಮ್ಮೆಯ, ಆನಂದದ ವಿಷಯ’ ಎನ್ನುತ್ತಿದ್ದ. ತನ್ನ ಆತ್ಮೀಯ ಗೆಳೆಯ ಇನ್ನೊಬ್ಬ ಮಹಾನ್‌ ಲೇಖಕ ಇವಾನ್‌ ಬುನಿನ್‌ ಬಳಿ ಚೆಕಾಫ್‌, ಟಾಲ್‌ಸ್ಟಾಯ್‌ ಕುರಿತು ಸಾಕಷ್ಟು ಹರಟುತ್ತಿದ್ದ. ಚೆಕಾಫ್‌ ಹೇಳಿದ್ದನ್ನು ಬುನಿನ್‌ ದಾಖಲಿಸುತ್ತಾನೆ:
"ನಾನು ಅವರನ್ನು ತುಂಬ ಗೌರವಿಸುತ್ತೇನೆ. ನಾವೆಲ್ಲ ಬರಹದಲ್ಲಿ ಮಕ್ಕಳಂತೆ ಎಂಬುದು ಅವರ ಅಭಿಪ್ರಾಯ. ನಮ್ಮ ಕಥೆಗಳು, ಕಾದಂಬರಿ, ನಾಟಕ ಏನೇ ಇರಬಹುದು, ತನ್ನದಕ್ಕೆ ಹೋಲಿಸಿದರೆ ಮಕ್ಕಳ ಬರಹದಂತೆ ಕಾಣುತ್ತದೆ ಎಂಬುದು ಅವರ ಅನ್ನಿಸಿಕೆ! ಆದರೆ ಅದೇ ಶೇಕ್ಸ್‌ಪಿಯರ್‌ನನ್ನು ಕಂಡರೆ ಕೆಂಡಾಮಂಡಲ. . ಅದಕ್ಕೆ ಕಾರಣ, ಆತ ಬೆಳೆದು ಬಲಿತ ಲೇಖಕ ಅನ್ನೋದು. ಬೆಳೆದವನಾದರೂ ತನ್ನಂತೆ ಬರೆಯಲಾರ ಎಂದು ವೃತ್ತಿ ಮಾತ್ಸರ್ಯ".

ತನ್ನ ತರುಣ ಗೆಳೆಯ ಚೆಕಾಫ್‌ನೊಬ್ಬ ಮಹಾನ್‌ ಗದ್ಯ ಲೇಖಕ. ಆತನ ಕೆಲವು ಕಥೆಗಳನ್ನು ಎಷ್ಟುಸಲ ಓದಿದರೂ ಸಾಲದು, ಎಂಬುದು ಲೆವ್‌ರ ಅಭಿಪ್ರಾಯವಾಗಿತ್ತು. ಆದರೆ, ಆತನ ನಾಟಕಗಳ ಕುರಿತು ಲೆವ್‌ಗೆ ತೀವ್ರ ಅಸಮಾಧಾನ. "ನೀನು ಶೇಕ್ಸ್‌ಪಿಯರ್‌ಗಿಂತ ಕೆಟ್ಟ ನಾಟಕಕಾರ ಕಣಯ್ಯ! ನಾಟಕಕಾರನೊಬ್ಬ ಪ್ರೇಕ್ಷಕರನ್ನು ಕೈಹಿಡಿದುಕೊಂಡು ತಾನೆಲ್ಲಿ ಕರೆದುಕೊಂಡು ಹೋಗಬೇಕೆಂದಿರುವನೊ ಅಲ್ಲಿಗೆ ನಡೆಸಿಕೊಂಡು ಹೋಗಬೇಕು. ನಿನ್ನ ಪಾತ್ರಗಳನ್ನು ನಾನೆಲ್ಲಿಗೆ ಹಿಂಬಾಲಿಸಬೇಕು? ದಿವಾನಖಾನೆ ಕುರ್ಚಿಯವರೆಗೆ. ಅಲ್ಲಿಂದ ಮತ್ತೆ ಮೊದಲಿಗೆ ಸ್ಥಳಕ್ಕೆ ಅವು ಬಂದು ಕೂರುತ್ತವೆ. ಯಾಕೆಂದ್ರೆ ಅವಕ್ಕೆ ಹೋಗೋದಕ್ಕೆ ಬೇರೆ ಸ್ಥಳವೇ ಇಲ್ಲವಲ್ಲ?" ಎಂದು ತಕರಾರು ಎತ್ತುತ್ತಿದ್ದ.

ಲೆವ್‌ರೊಂದಿಗಿನ ತನ್ನ ಭೇಟಿ ಮತ್ತು ಜಗಳಗಳ ಕುರಿತು ಚೆಕಾಫ್‌ ಇನ್ನೊಂದೆಡೆ ಹೀಗೆ ಬರೆದುಕೊಂಡಿದ್ದಾನೆ:

‘ಇತ್ತೀಚೆಗೆ ಟಾಲ್‌ಸ್ಟಾಯ್‌ರನ್ನು ಭೇಟಿಯಾದೆ. ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಬೇರೆ ಎಷ್ಟೋ ವಿಷಯಗಳ ಜತೆಗೆ, ನನ್ನ ಬಗ್ಗೆ, ನನ್ನ ಕೃತಿಗಳ ಬಗ್ಗೆ ಬಹಳ ಹೊತ್ತು ಮಾತಾಡಿದರು. ಕೊನೆಗೆ, ಇನ್ನೇನು ಹೊರಡುವ ಸಮಯದಲ್ಲಿ, ನನ್ನ ಕೈಗಳನ್ನು ಹಿಡಿದುಕೊಂಡು, ವಿದಾಯದ ಮುತ್ತು ಕೊಡಯ್ಯ ಅಂದರು. ನಾನು ಅವರಿಗೆ ಮುತ್ತಿಡಲು ಬಾಗಿದಾಗ, ಆ ವೃದ್ಧ ಕಿವಿಯಲ್ಲಿ ಉಸುರಿದ ಮಾತುಗಳಿನ್ನೂ ಬಿಸಿಯಾಗಿ ಕೇಳುತ್ತಿವೆ: ನಿನಗೆ ಗೊತ್ತಾ? ನಿನ್ನ ನಾಟಕಗಳನ್ನು ನಾನು ಇಷ್ಟ ಪಡಲಾರೆ. ಶೇಕ್ಸ್‌ಪಿಯರ್‌ ಕೆಟ್ಟ ನಾಟಕಕಾರ. ನಿನ್ನ ನಾಟಕಗಳು ಅವನ ನಾಟಕಗಳಿಗಿಂತ ಕೆಟ್ಟದಾಗಿವೆ.’

ಆದರೇನು, ಪ್ರೀತಿಯ ವಿಷಯದಲ್ಲಿ ಚೆಕಾಫ್‌ ವೃದ್ಧನಿಗೆ ಮಗನಂತೆ. ಆತನ ಗದ್ಯವನ್ನು ’ಮಹಾ ಮೇರು’ ಎಂದು ಮುದಿ ಸಿಂಹ ಹೊಗಳಿದ್ದ. ತನ್ನ ಕಾಲದ ಸಾಹಿತ್ಯದ ಮೊಸೆಸ್‌ನಿಂದ ಇದಕ್ಕಿಂತ ಹೆಚ್ಚಿನ ಹೊಗಳಿಗೆ ದೊರಕಲು ಸಾಧ್ಯವಿರಲಿಲ್ಲ.
(ಆಂಟನ್‌ ಚೆಕಾಫ್‌: ೧೮೬೦-೧೯೦೪)
*
(ಮೋಹನ ದಾಸ ಕರಮಚಂದ ಗಾಂಧಿ ಮಹಾ ಹೋರಾಟಗಾರರಾಗಿ ಹೊಮ್ಮುವ ಪೂರ್ವಪ್ರಕ್ರಿಯೆ ನಡೆದಿದ್ದು ಬ್ರಿಟಿಶ್ ಆಡಳಿತದ ದಕ್ಷಿಣ ಆಫ್ರಿಕಾದಲ್ಲಿ. ೧೯೦೮ರ ಸುಮಾರಿಗೆ ಅಲ್ಲಿನ ಭಾರತೀಯರನ್ನು ಬ್ರಿಟಿಶರ ಅನ್ಯಾಯದ ವಿರುದ್ಧ ಸಂಘಟಿಸುವಲ್ಲಿ ಗಾಂಧಿ ವಹಿಸಿದ ಪಾತ್ರ ಐತಿಹಾಸಿಕ. ಮಹಾ ಕಾದಂಬರಿಕಾರ ಕೌಂಟ್ ಲಿಯೋ ಟಾಲ್‌ಸ್ಟಾಯ್‌ರ ಬದುಕು, ಬರಹದಿಂದ ಗಾಂಧಿ ಪ್ರಭಾವಕ್ಕೆ ಒಳಗಾಗಿದ್ದು ಅಷ್ಟಿಷ್ಟಲ್ಲ. ಟಾಲ್‌ಸ್ಟಾಯ್ ತಮ್ಮ ಬದುಕಿನ ಕೊನೆ ದಿನಗಳಲ್ಲಿ ಬರೆದ ’ಎ ಲೆಟರ್ ಟು ಎ ಹಿಂದೂ’ ಇಬ್ಬರ ನಡುವೆ ಹೊಸ ಸಂಬಂಧವನ್ನು ಬೆಸೆಯಿತು. ಟಾಲ್‌ಸ್ಟಾಯ್‌ರನ್ನು ತಮ್ಮ ಮಾನಸಿಕ ಗುರುವಾಗಿ ಸ್ವೀಕರಿಸಿದ್ದ ಗಾಂಧಿ ಪತ್ರ ವ್ಯವಹಾರದ ಮೂಲಕ ಸಲಹೆ, ಸಮಾಧಾನಗಳನ್ನು ಪಡೆದರು. ಅಂಥ ಚಿಕ್ಕ ಪತ್ರಗಳು ಇಲ್ಲಿವೆ.)
*
ಮಹಾತ್ಮ ಗಾಂಧಿ- ಟಾಲ್‌ಸ್ಟಾಯ್ಪತ್ರ-ಒಂದು
೦೧, ಅಕ್ಟೋಬರ್ ೧೯೦೯

ಸನ್ಮಾನ್ಯ ಕೌಂಟ್‌ಲಿಯೊ ಟಾಲ್‌ಸ್ಟಾಯ್ ಅವರೆ,
ಈ ಮೂರು ವರ್ಷಗಳಿಂದ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ವಾಲ್‌ನಲ್ಲಿ ನಡೆಯುತ್ತಿರುವ ಸಂಗತಿಗಳ ಕುರಿತು ನಿಮ್ಮ ಗಮನ ಸೆಳೆಯ ಬಯಸುವೆ.

ಬ್ರಿಟಿಶರ ಈ ವಸಾಹತುವಿನಲ್ಲಿ ಹದಿಮೂರು ಸಾವಿರಾರು ಭಾರತೀಯರು ವಾಸವಿದ್ದಾರೆ. ವರ್ಷಗಳಿಂದ ಹಲವಾರು ಕಾನೂನು ಕಂಟಕಗಳನ್ನು ಎದುರಿಸುತ್ತ ಬದುಕು ದೂಡುತ್ತಿದ್ದಾರೆ. ಈ ವಸಾಹತುವಿನಲ್ಲಿ ವರ್ಣ ತಾರತಮ್ಯವಲ್ಲದೆ ಒಟ್ಟಾರೆ ಏಶಿಯನ್ನರ ಬಗ್ಗೆ ಪೂರ್ವಗ್ರಹ ಪೀಡನೆಯಿದೆ. ಇದು ಬಹುಪಾಲು ವ್ಯಾಪಾರಿ ಮತ್ಸರ. ಮೂರು ವರ್ಷಗಳ ಹಿಂದೆ ಕಾನುನೊಂದನ್ನು ಜಾರಿಗೊಳಿಸಿ ಈ ಸಮುದಾಯವನ್ನು ಅಸಹಾಯಕರನ್ನಾಗಿಸ ಲಾಯಿತು ಎಂದು ನಮ್ಮ ಕೆಲವರ ಭಾವನೆಯಾಗಿದೆ. ಈ ಕಾನೂನನ್ನು ಒಪ್ಪಿಕೊಳ್ಳುವುದೆಂದರೆ ನೈಜ ಧಾರ್ಮಿಕತೆಗೆ ಧಕ್ಕೆಯಾದಂತೆಯೇ ಎಂದು ನನಗನ್ನಿಸುತ್ತದೆ. ಕೆಡುಕಿನ ಸಿದ್ಧಾಂತವನ್ನು ಪ್ರತಿರೋಧಿಸಬಾರದು ಎಂಬ ನಂಬಿಕೆಯನ್ನು ನಾನು, ಕೆಲವು ಗೆಳೆಯರು ಈಗಲೂ ಹೊಂದಿದ್ದೇವೆ. ನಿಮ್ಮ ಬರಹಗಳನ್ನು ಅಧ್ಯಯನ ನಡೆಸುವ ಸದಾವಕಾಶ ನನಗೆ ದೊರಕಿದ್ದು, ಅವು ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿವೆ.

ಈ ಶಾಸನವನ್ನು ಒಪ್ಪಿಕೊಳ್ಳುವುದಕ್ಕಿಂತ ಕಾನೂನು ಉಲ್ಲಂಘಿಸಿ ಸೆರೆವಾಸವನ್ನೊ ಇಲ್ಲವೆ ದಂಡ ತೆರವುದನ್ನು ಆಯುವುದು ಉತ್ತಮವೆಂಬ ಸಲಹೆಗೆ ಬ್ರಿಟಿಶ್ ಭಾರತೀಯರು ತಲೆ ಬಾಗಿದರು. ಆದಾಗ್ಯೂ, ಒಟ್ಟಾರೆ ಪರಿಣಾಮವೆಂದರೆ, ಅರ್ಧದಷ್ಟು ಬ್ರಿಟಿಶ್‌ ಭಾರತೀಯರು ಹೋರಾಟದ ಬಿಸಿ, ಸೆರೆವಾಸದ ಯಾತನೆಗಳನ್ನು ಸಹಿಸಲಾರದೆ ಹೋದರು. ಬದಲಿಗೆ, ತಮ್ಮನ್ನು ಅವಮಾನಿಸುವ ಕಾನೂನು ಜಾರಿಯಲ್ಲಿರುವ ಟ್ರಾನ್ಸ್‌ವಾಲ್‌ನಿಂದಲೇ ದೂರ ಸರಿಯಲು ಯೋಚಿಸಿದರು. ಸುಮಾರು ಎರಡೂ ಸಾವಿರದಷ್ಟು ಜನ ತಮ್ಮ ಮನಸ್ಸಿನ ಮಾತಿಗೆ ಬೆಲೆ ಕೊಟ್ಟು ಸೆರೆಮನೆಗೆ ಹೋದರು. ಕೆಲವರಂತೂ ಐದು ಸಲ ಸರಳುಗಳ ಹಿಂದೆ ಹೋದುದುಂಟು. ಈ ಸೆರೆವಾಸವು ನಾಲ್ಕು ದಿನಗಳಿಂದ ಆರು ತಿಂಗಳವರೆಗಿನದು. ಬಹಳಷ್ಟು ಸಲ ಕಠಿಣ ದೈಹಿಕ ಪರಿಶ್ರಮವನ್ನು ಒಳಗೊಂಡಿರುವಂಥದ್ದು. ಈ ಕಾರಣವಾಗಿ ಅನೇಕರು ಹಣಕಾಸಿನ ಮುಗ್ಗಟ್ಟಿಗೆ ಒಳಗಾದರು. ಸದ್ಯಕ್ಕೆ ಟ್ರಾನ್ಸ್‌ವಾಲ್‌ಕಾರಾಗೃಹದಲ್ಲಿ ನೂರರಷ್ಟು ಸಹನಶೀಲ ಹೋರಾಟಗಾರರಿದ್ದಾರೆ.

ಇವರಲ್ಲಿ ಕೆಲವರು ಅತಿ ಬಡವರಾಗಿದ್ದು ಬದುಕಿಗಾಗಿ ದಿನಗೂಲಿಯ ಗಳಿಕೆಯನ್ನು ನೆಚ್ಚಿದವರು. ಇಂಥವರ ಹೆಂಡತಿ-ಮಕ್ಕಳು ಹೋರಾಟದ ಕುರಿತು ಸಹಾನುಭೂತಿ ಇರುವವರು ನೀಡುವ ಉದಾರ ದೇಣಿಗೆ ಮತ್ತು ಸಾರ್ವಜನಿಕ ಕಾಣಿಕೆಯ ಮೇಲೆ ಅವಲಂಬಿತರಾಗಿದ್ದಾರೆ. ಇದು ಬ್ರಿಟಿಶ್‌ಭಾರತೀಯರ ಮೇಲೆ ತೀವ್ರ ಒತ್ತಡವನ್ನು ಹೇರಿದೆ. ನನಗನ್ನಿಸುವುದು ಅವರು ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸಲೇಬೇಕು. ಹೋರಾಟವಿನ್ನೂ ನಡೆದಿದ್ದು, ಕೊನೆ ಯಾವಾಗಲೋ ಯಾರೂ ಅರಿಯರು. ಇದ್ದರೂ, ದುಷ್ಟಶಕ್ತಿಯ ಎದುರು ಸಹನಶೀಲ ಪ್ರತಿರೋಧವು ಗೆಲುವು ಸಾಧಿಸುತ್ತದೆ ಎಂದು ನಮ್ಮಲ್ಲಿ ಕೆಲವರಾದರೂ ಕಂಡುಕೊಂಡಿದ್ದೇವೆ. ನಮ್ಮಲ್ಲಿನ ದೌರ್ಬಲ್ಯದಿಂದಾಗಿ ಹೋರಾಟವು ನಿಧಾನಗತಿಗೆ ತಿರುಗಿತು. ನಿತ್ರಾಣಗೊಂಡಿರುವ ನಮ್ಮಿಂದ ಸರ್ಕಾರವನ್ನು ಎದುರಿಸುವ ಸಾಮರ್ಥ್ಯ ಉಳಿಯಲಾರದು ಎಂದು ಸರ್ಕಾರ ಭಾವಿಸಿದಂತಿದೆ. ನಮ್ಮ ನಿಲುವನ್ನು ಸಾಮ್ರಾಜ್ಯಶಾಹಿ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟು ಪರಿಹಾರ ಹುಡುಕಲು ನನ್ನ ಗೆಳೆಯರೊಂದಿಗೆ ಇಲ್ಲಿಗೆ ಬಂದಿದ್ದೇನೆ.

ಸರ್ಕಾರಕ್ಕೆ ಯಾವ ಮನವಿಯನ್ನೂ ಸಲ್ಲಿಸಬೇಕಿಲ್ಲವೆಂಬುದು ಸಾತ್ವಿಕ ಹೋರಾಟಗಾರರ ನಿಲುವು. ಆದರೆ, ಅಹವಾಲು ಬರುತ್ತಿರುವುದು ಸಮುದಾಯದ ದುರ್ಬಲ ಸದಸ್ಯರಿಂದ. ಇದು ಅವರ ಸಾಮರ್ಥ್ಯಕ್ಕಿಂತ ಬಲಹೀನತೆಯನ್ನೇ ಎತ್ತಿ ತೋರಿಸುತ್ತದೆ. ನೈತಿಕತೆ ಮತ್ತು ಸಾತ್ವಿಕ ಪ್ರತಿರೋಧದ ಸಾಮರ್ಥ್ಯದ ಕುರಿತು ಒಂದು ಸಾಮಾನ್ಯ ಪ್ರಬಂಧದ ಸ್ಪರ್ಧೆಯನ್ನು ಏರ್ಪಡಿಸಿದರೆ ಈ ಹೋರಾಟವು ಜನಪ್ರಿಯವಾಗಿ, ಸಾಮಾನ್ಯರು ಆ ಕುರಿತು ಯೋಚಿಸುವಂತಾದೀತು ಎಂಬುದು ನನ್ನ ಗ್ರಹಿಕೆ. ನೈತಿಕತೆಯ ವಿಷಯದ ಕುರಿತು ನಿಮ್ಮ ಅಭಿಪ್ರಾಯವೇನು ತಿಳಿಸಿ ಎಂದು ನಿಮ್ಮನ್ನು ಆಗ್ರಹಿಸಬಹುದೆ? ಈ ಕುರಿತು ಅಭಿಪ್ರಾಯಗಳನ್ನು ಆಹ್ವಾನಿಸುವುದು ತಪ್ಪಲ್ಲವೆಂದು ನಿಮಗೆ ಮನವರಿಕೆಯಾದರೆ, ಆ ವಿಷಯದ ಕುರಿತು ಬರೆಯುವವರ ಹೆಸರುಗಳನ್ನು ತಿಳಿಸಿದರೆ ನಾನು ಅವರನ್ನು ಸಂಪರ್ಕಿಸಬಹುದು. ನಮಗಾಗಿ ನಿಮ್ಮ ಸಮಯವನ್ನು ಮೀಸಲಿಡುವ ಇನ್ನೊಂದು ಮನವಿಯನ್ನು ಮಾಡಿಕೊಳ್ಳುತ್ತಿರುವೆ. ಭಾರತದಲ್ಲಿನ ಪ್ರಸ್ತುತ ಕ್ಷೋಬೆಯ ಕುರಿತು ನೀವು ಬರೆದ ಹಿಂದೂವಿಗೆ ಪತ್ರವನ್ನು ಗೆಳೆಯರೊಬ್ಬರು ನನಗೆ ನೀಡಿದರು. ಮೇಲ್ನೋಟಕ್ಕೆ ನಿಮ್ಮ ನಿಲುವನ್ನು ಈ ಪತ್ರವು ವ್ಯಕ್ತಪಡಿಸುತ್ತದೆ. ನನ್ನ ಗೆಳೆಯರ ಅಭಿಮತವೆಂದರೆ ತಮ್ಮದೇ ಖರ್ಚಿನಲ್ಲಿ ಇಪ್ಪತ್ತು ಸಾವಿರ ಪ್ರತಿಗಳನ್ನು ಮುದ್ರಿಸಿ ವಿತರಿಸುವುದು ಮತ್ತು ಭಾಷಾಂತರ ಮಾಡಿಸುವುದು.

ಆದಾಗ್ಯೂ, ನಮಗಿನ್ನೂ ಮೂಲಪ್ರತಿ ದೊರಕಿಲ್ಲದಿರುವುದರಿಂದ, ಅದು ನಿಮ್ಮದೇ ಪತ್ರವೆಂದು ಖಚಿತವಾಗುವರೆಗೆ ಮುದ್ರಿಸುವುದು ಸಾಧುವಾಗಲಾರದೆಂದು ತಿಳಿದಿದ್ದೇವೆ. ಇದರೊಂದಿಗೆ ಪ್ರತಿಯೊಂದರ ನಕಲನ್ನು ಕಳಿಸುತ್ತಿದ್ದು, ತಾವು ದಯವಿಟ್ಟು ಇದು ತಮ್ಮದೇ ಪತ್ರವೆಂದೂ, ನಿಖರವಾಗಿದೆಯೆಂದೂ ದೃಢಪಡಿಸಿ ಪ್ರಕಟಣೆಗೆ ಅನುಮತಿಯನ್ನು ನೀಡಿ. ಪತ್ರದಲ್ಲಿ ಇನ್ನೇನಾದರೂ ಸೇರಿಸಬೇಕೆಂದಿದ್ದರೆ ಸೇರಿಸಿ. ಇಲ್ಲಿಯೇ ನನ್ನದೊಂದು ಸಲಹೆಯನ್ನು ನೀಡುತ್ತಿರುವೆ. ಕೊನೆಯ ಪ್ಯಾರಾದಲ್ಲಿ ಪುನರವತಾರದ ನಂಬಿಕೆಯಿಂದ ಓದುಗನನ್ನು ವಿಮುಖನನ್ನಾಗಿಸುತ್ತಿದ್ದೀರಿ. ಇದನ್ನು ಕೇಳುವ ಔಚಿತ್ಯ ತಿಳಿಯದಾದರೂ ಈ ಕುರಿತು ನೀವು ಅಧ್ಯಯನ ನಡೆಸಿದ್ದೀರೋ? ಎಂಬುದರ ಅರಿವು ನನಗಿಲ್ಲ. ಪುನರುತ್ಥಾನ ಅಥವ ಪುರ್ನಜ್ಮದಲ್ಲಿ ಭಾರತೀಯರಿಗಷ್ಟೇ ಏಕೆ ಚೀನಿಯರಿಗೂ ಅಪಾರವಾದ ನಂಬಿಕೆ. ಇದೊಂದು ವ್ಯಕ್ತಿಗತ ವಿಶ್ವಾಸವಾಗಿದ್ದು, ಬೌದ್ಧಿಕವಾಗಿ ಸ್ವೀಕಾರಾರ್ಹವಲ್ಲವೆಂದು ಯಾರಾದರೂ ಹೇಳಬಹುದು. ಇದು ಬದುಕಿನ ಮಹಾವಿಸ್ಮಯವನ್ನು ಸೂಚಿಸುವುದಷ್ಟೇ. ಟ್ರಾನ್ಸ್‌ವಾಲ್‌ನ ಸೆರೆವಾಸಿಗಳಾದ ಸಾತ್ವಿಕ ಹೋರಾಟಗಾರರಲ್ಲಿ ಕೆಲವರಿಗಾದರೂ ಈ ಅಂಶ ಸಾಂತ್ವನ ನೀಡುವ ವಿಷಯವಾಗಿತ್ತು. ಪತ್ರದಲ್ಲಿ ನೀವು ಉಲ್ಲೇಖಿಸಿರುವ ಅನೇಕ ಸಾಲುಗಳು ಶ್ರೀಕೃಷ್ಣ ಹೇಳಿರುವುದೆಂದು ಸೂಚಿಸಿದ್ದೀರಿ. ನಿಮ್ಮ ಆಕರಗಳನ್ನು ತಿಳಿಸಿದರೆ ಉಪಕೃತ.

ಈ ಪತ್ರದಿಂದ ನಿಮ್ಮನ್ನು ದಣಿಸಿರುವೆ. ನಿಮ್ಮನ್ನು ಗೌರವಿಸುವವರು, ನಿಮ್ಮ ದಾರಿಯಲ್ಲಿ ನಡೆಯಲು ಬಯಸುವವರು ನಿಮ್ಮ ಸಮಯ ವ್ಯರ್ಥಗೊಳಿಸದೆ, ಸಾಧ್ಯವಾದಷ್ಟು ಸಾರ್ಥಕಗೊಳಿಸಲು ಯತ್ನಿಸಬೇಕೆಂದು ಬಲ್ಲೆ. ಆದಾಗ್ಯೂ, ಅಪರಿಚಿತನಾಗಿದ್ದೂ ಸತ್ಯದ ದೆಸೆಯಿಂದ ನಿಮಗೆ ತೊಂದರೆ ನೀಡಿರುವೆ. ಮತ್ತು ನಿಮ್ಮ ಬದಕಿನಲ್ಲಿ ಕಾರ್ಯಸಾಧುವಾಗಿರುವ ಅನುಭವದ ಮೇಲೆ ನಿಮ್ಮಿಂದ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರಗಳನ್ನು ಬಯಸುತ್ತಿರುವೆ.

ಗೌರವದಿಂದ, ನಿಮ್ಮ ವಿಧೇಯ
ಎಂ.ಕೆ. ಗಾಂಧಿ
*
ಪತ್ರ- ಎರಡು

೧೦, ನವೆಂಬರ್ ೧೯೦೯

ಸನ್ಮಾನ್ಯರೆ,
ನಾನು ಬರೆದ ಪತ್ರಕ್ಕೆ ನಿಮ್ಮ ಉತ್ತರಕ್ಕಾಗಿ ಕೃತಜ್ಞನಾಗಿದ್ದೇನೆ.
ನಿಮ್ಮ ಆರೋಗ್ಯವು ಮತ್ತೆ ಸುಧಾರಿಸಿರುವುದು ತಿಳಿದು ಸಂತೋಷವಾಯಿತು. ನಿಮ್ಮ ಬೋಧನೆಯ ಅತ್ಯಂತ ಮಹತ್ವದ ವಿಷಯಗಳನ್ನು ನಿಮ್ಮೊಂದಿಗೆ ಮತ್ತೆ ಚರ್ಚಿಸಲು ಅನುಕೂಲವಾದಂತಾಯಿತು.

ನನ್ನ ಅಭಿಪ್ರಾಯದಲ್ಲಿ ಟ್ರಾನ್ಸ್‌ವಾಲ್‌ನಲ್ಲಿನ ಭಾರತೀಯರ ಹೋರಾಟವು ಆಧುನಿಕ ಕಾಲದ ಮಹತ್ವದ ಕ್ರಿಯೆಯಾಗಿದೆ. ಈ ಹೋರಾಟದ ಗುರಿ ಮತ್ತು ಅದಕ್ಕಾಗಿ ಆಯ್ದುಕೊಂಡ ದಾರಿಗಳ ಎರಡೂ ಆದರ್ಶಪ್ರಾಯವಾಗಿವೆ. ಹೋರಾಟದಲ್ಲಿ ಪಾಲ್ಗೊಂಡವರು ಕೊನೆಯಲ್ಲಿ ಯಾವುದೇ ವೈಯಕ್ತಿಯ ಪ್ರಯೋಜನವನ್ನು ಪಡೆಯದ ಮತ್ತು ಭಾಗವಹಿಸಿದವರಲ್ಲಿ ಶೇಕಡ ಐವತ್ತರಷ್ಟು ಜನಸಾಮಾನ್ಯರು ಕೇವಲ ತತ್ತ್ವಕ್ಕಾಗಿ ಕಷ್ಟನಷ್ಟವನ್ನು, ವಿಚಾರಣೆಯನ್ನು ಎದುರಿಸಬೇಕಾಗಿ ಬಂದ ಬೇರಾವುದೇ ಹೋರಾಟದ ಕುರಿತು ನನಗರಿವಿಲ್ಲ.

ನಾನು ಬಯಸಿದ ಪ್ರಮಾಣದಲ್ಲಿ ಈ ಹೋರಾಟವನ್ನು ಜನಪ್ರಿಯಗೊಳಿಸಲು ನನ್ನಿಂದ ಸಾಧ್ಯವಾಗದು. ವಾಸ್ತವಾಂಶಗಳಿಂದ ಸಮರ್ಥಿಸಬಹುದಾದ ಈ ಹೋರಾಟವನ್ನು ತಮ್ಮ ಪ್ರಭಾವವನ್ನು ಬಳಸಿ ಯಾವುದಾದರೂ ರೀತಿಯಲ್ಲಿ ಜನಪ್ರಿಯಗೊಳಿಸಬಹುದೆ? ಹಾಗೊಮ್ಮೆ ಸಾಧ್ಯವಾದರೆ ಅದು ಕೇವಲ ಸುಳ್ಳಿನ ವಿರುದ್ಧ ಧರ್ಮ, ಸತ್ಯ ಮತ್ತು ಪ್ರೀತಿಗಳ ವಿಜಯವಾಗುವುದಿಲ್ಲ. ಬದಲಿಗೆ, ಭಾರತದ ಮತ್ತು ವಿಶ್ವದ ಮಿಲಿಯಗಟ್ಟಲೆ ತುಳಿತಕ್ಕೊಳಗಾದ ಜನರಿಗೆ ಹಿಂಸೆಯನ್ನು ಜಯಿಸುವಲ್ಲಿ ಮಾದರಿಯಾಗಬಲ್ಲದು. ಕಡೆಯಪಕ್ಷ ಭಾರತದ ಮಟ್ಟಿಗಾದರೂ ಇದು ನಿಜವಾಗಬಹುದು.

ನಿಮ್ಮ ವಿಧೇಯ
ಎಂ.ಕೆ. ಗಾಂಧಿ

(ಪಟಗಳು: ಚೆಕಾಫ್‌, ಟಾಲ್‌ಸ್ಟಾಯ್‌, ಮಾಕ್ಸಿಂ ಗಾರ್ಕಿ, ದಕ್ಷಿಣ ಆಫ್ರಿಕದಲ್ಲಿದ್ದಾಗ ಗಾಂಧಿ)

 

 

 

- ಕೇಶವ ಮಳಗಿ

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...