"ಅಧ್ಯಯನದ ಉದ್ದೇಶ ಮತ್ತು ಮಹತ್ವ ಎಂಬುವ ಮೊದಲ ಅಧ್ಯಾಯದಲ್ಲಿ ಇರುವ ಭಾಷೆಯನ್ನು, ಭಾಷಾ ಸಂಸ್ಕೃತಿಯ ಸಾಂಸ್ಕೃತಿಕ ವಲಯಗಳನ್ನು ಕಾಪಿಟ್ಟುಕೊಳ್ಳುವ, ಪ್ರತಿರೋಧಗಳಲ್ಲೂ ತನ್ನ ಅಸ್ಮಿತೆಯ ಐಡೆಂಟಿಟಿಗಳನ್ನು ಉಳಿಸಿಕೊಳ್ಳುವ ಉಳಿಸಿಕೊಳ್ಳುವ ಪ್ರಯತ್ನವಾಗಿ ಕನ್ನಡ ವಿಚಾರ ಸಾಹಿತ್ಯ ಹೇಗೆ ಹೆಗಲೆಣೆಯಾಗಿದೆ ಎಂಬುವ ಮಹತ್ವದ ಆರಂಭಿಕ ವಿಚಾರಗಳನ್ನು ಮೊದಲನೆಯ ಅಧ್ಯಾಯದಲ್ಲೇ ಚರ್ಚಿಸಿದ್ದಾರೆ," ಎನ್ನುತ್ತಾರೆ ಡಾ.ನಿಂಗಪ್ಪ ಮುದೇನೂರು. ಅವರು ಡಾ. ಸರ್ಜಾಶಂಕರ ಹರಳಿಮಠ ಅವರ "ಕನ್ನಡತನ" ಕೃತಿ ಕುರಿತು ಬರೆದಿರುವ ವಿಮರ್ಶೆ.
‘ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು’ – ಈ ವಿಷಯದ ಮೇಲೆ ಸಂಶೋಧನೆ ಕೈಗೊಂಡಿರುವ ಸರ್ಜಾಶಂಕರ್ ಹರಳಿಮಠ ಅವರು ಈ ಪ್ರಬಂಧದ ಹನ್ನೊಂದು ಅಧ್ಯಾಯಗಳಲ್ಲಿ ದೀರ್ಘವಾದ ಮತ್ತು ಮಹತ್ವವಾದ ಹಲವು ಚರ್ಚೆಗಳನ್ನು ವಿಸ್ತರಿಸಿದ್ದಾರೆ. ಕನ್ನಡದ ಸಂಸ್ಕೃತಿ ಚಿಂತಕರೂ, ಈ ಪ್ರಬಂಧದ ಮಾರ್ಗದರ್ಶಕರೂ ಆದ ಡಾ.ರಹಮತ್ ತರೀಕೆರೆಯವರು ಹಲವು ಸಂವಾದ, ಚರ್ಚೆ, ಪರಿಕಲ್ಪನಾತ್ಮಕ ಪ್ರಶ್ನೆಗಳ ಮೂಲಕ ಈ ವಿಷಯಕ್ಕೆ ನ್ಯಾಯ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಇಂತಹ ಸಹಮತಗಳೇ ಒಳ್ಳೆಯ ಪ್ರಬಂಧವನ್ನು ರೂಪಿಸಿದೆ ಎಂಬುದು ನನ್ನ ತಿಳುವಳಿಕೆ.
ಅಧ್ಯಯನದ ಉದ್ದೇಶ ಮತ್ತು ಮಹತ್ವ ಎಂಬುವ ಮೊದಲ ಅಧ್ಯಾಯದಲ್ಲಿ ಇರುವ ಭಾಷೆಯನ್ನು, ಭಾಷಾ ಸಂಸ್ಕೃತಿಯ ಸಾಂಸ್ಕೃತಿಕ ವಲಯಗಳನ್ನು ಕಾಪಿಟ್ಟುಕೊಳ್ಳುವ, ಪ್ರತಿರೋಧಗಳಲ್ಲೂ ತನ್ನ ಅಸ್ಮಿತೆಯ ಐಡೆಂಟಿಟಿಗಳನ್ನು ಉಳಿಸಿಕೊಳ್ಳುವ ಉಳಿಸಿಕೊಳ್ಳುವ ಪ್ರಯತ್ನವಾಗಿ ಕನ್ನಡ ವಿಚಾರ ಸಾಹಿತ್ಯ ಹೇಗೆ ಹೆಗಲೆಣೆಯಾಗಿದೆ ಎಂಬುವ ಮಹತ್ವದ ಆರಂಭಿಕ ವಿಚಾರಗಳನ್ನು ಮೊದಲನೆಯ ಅಧ್ಯಾಯದಲ್ಲೇ ಚರ್ಚಿಸಿದ್ದಾರೆ. ಇಪ್ಪತ್ತನೆಯ ಶತಮಾನ ಹಲವು ಬದಲಾವಣೆಗಳಿಗೆ ಮುನ್ನುಡಿಯಾದ ಕಾಲದ ಹಲವು ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಅವೈದಿಕ ಧಾರೆಯ ಸೃಜನಶೀಲ ಅಭಿವ್ಯಕ್ತಿ ನೆಲೆಗಳಿಗೆ ಕಾರಣವಾದ ಚಾರಿತ್ರಿಕ ಸನ್ನಿವೇಷಗಳನ್ನು ಈ ಸಂಶೋಧಕರು ಇಲ್ಲಿ ಮಹತ್ವವಾಗಿ ಉಲ್ಲೇಖಿಸಿದ್ದಾರೆ. ಅದರಲ್ಲೂ ಆಧುನಿಕತೆಯನ್ನು ಅರಿವಿನ ಪ್ರಜ್ಞೆಯಾಗಿ ಬರಮಾಡಿಕೊಂಡ ಕುವೆಂಪು ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಿರುವುದು ಈ ಪ್ರಬಂಧದ ವಿಷಯಕ್ಕೆ ಶಕ್ತಿ ನೀಡಿದೆ.
ಸೃಜನಶೀಲ, ಸೃಜನೇತರ ಸಂಗತಿಗಳನ್ನು ಕನ್ನಡ ಅಸ್ಮಿತೆಯ ವಿಷಯದಲ್ಲಿ ಹೇಗೆ ಕಾಲ ಕಾಲಕ್ಕೆ ಬದಲಾಗುತ್ತ ಬಂದವು ಎಂಬುವ ವಿಶ್ಲೇಷಣೆಗಳನ್ನು ಬಿ.ಎಂ.ಶ್ರೀ, ಡಿವಿಜಿ, ಮಾಸ್ತಿಯವರಿಂದ ಹಿಡಿದು ಡಿ.ಆರ್.ನಾಗರಾಜ, ಬರಗೂರು ರಾಮಚಂದ್ರಪ್ಪ ಇವರ ಚಿಂತನೆಗಳ ವಿಕಾಸಶೀಲ ನಡಿಗೆಯನ್ನು ಇಲ್ಲಿ ವಿಮರ್ಶಾತ್ಮಕವಾಗಿಯೇ ಗುರುತಿಸಿದ್ದಾರೆ. ಆರಂಭದ ಕನ್ನಡ ಭಾಷೆಗೆ ಎದುರಾದ ಬಿಕ್ಕಟ್ಟುಗಳನ್ನು ಕನ್ನಡ ಚಿಂತನೆಯೇ ಹೇಗೆ ತನ್ನ ಹೊಸನಡಿಗೆಯಲ್ಲಿ ಪೂರೈಸಿಕೊಂಡಿತು ಎಂಬ ಸಂಗತಿ ಇಲ್ಲಿ ವ್ಯಾಖ್ಯಗೊಂಡಿದೆ. ರಾಷ್ಟ್ರೀಯವಾದಿ ಚಿಂತನೆಗಳಿಗೆ ರ‍್ಯಾಯವಾದ ಮಾರ್ಗವನ್ನು ಕನ್ನಡ ದೇಶೀಯವಾಗಿಯೇ ಹುಡುಕಿಕೊಂಡ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಅದೆಂದರೆ ಕನ್ನಡ ಸಾಹಿತ್ಯ ಮೀಮಾಂಸೆಗೆ, ಅದರ ಕಟ್ಟುವಿಕೆಗೆ ದೊರೆತ ಬರಹಗಳೇ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳಿಗೆ ಮುಖ್ಯ ಆಕರಗಳಾಗಿರುವುದೂ ಇಲ್ಲಿನ ವಿಶೇಷವೆನ್ನಬಹುದು.
ಇದೇ ದಾರಿಯನ್ನು ಕ್ರಮಿಸಿಕೊಂಡೇ ಸರ್ಜಾಶಂಕರ್ ಅವರು ಕನ್ನಡ ಅಸ್ಮಿತೆಯ ಸಂವಿಧಾನದವರೆಗೂ ಬಂದು ನಿಂತಿರುವುದು.
ಅಧ್ಯಾಯ 9 ರ ಕನ್ನಡ ಅಸ್ಮಿತೆ: ಸಾಹಿತ್ಯವಾದಿ ನೆಲೆ ಎಂಬಲ್ಲಿ ಬಿ.ಎಂ.ಶ್ರೀ, ಕುವೆಂಪು, ಲಂಕೇಶ್ ಅವರ ಮುಖ್ಯ ಚಿಂತನಾಬರಹಗಳನ್ನಿಟ್ಟುಕೊಂಡು ಕನ್ನಡ ಹೊಸಕಾಲದ ಅರಿವಿನ ನೆಲೆಯಾಗಿ ಬೆಳೆದು ಬರುತ್ತಿದ್ದ ಸ್ವಾಯತ್ತರೂಪಗಳನ್ನು ಇಲ್ಲಿ ಗುರುತಿಸಲಾಗಿದೆ. ಇಂಗ್ಲಿಷ್ ಶಿಕ್ಷಣ, ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವಗಳೂ ಹೇಗೆ ಕನ್ನಡವನ್ನು ಕನ್ನಡತನವಾಗಿ ನೋಡಲು ಪ್ರೇರೇಪಿಸಿದವು ಮತ್ತು ಅವು ಸೃಜನಶೀಲ ದಾರಿಗೆ ಹೇಗೆ ಅಣಿಗೊಂಡವು ಎಂಬುವ ಬಗೆಯನ್ನು ಇಲ್ಲಿ ಗಮನಿಸಬಹುದು. ಇಂದಿನ ಕಾಲವನ್ನು ‘ಉದ್ವಿಗ್ನತೆಯ ಯುಗ’ವೆಂದು ಗುರುತಿಸುತ್ತಿರುವಾಗ ಇದರ ಜೊತೆಯಲ್ಲೇ ಹೊಯ್‌ಕೈಯಾಗಿ ಬೆಳೆದುಬಂದ ಜ್ಞಾನಯುಗದ ವಿವೇಕದ ಸಂಗತಿಗಳನ್ನೂ, ಅವು ಪಡೆಯುತ್ತಿದ್ದ ಮೂರ್ತ ವಿಚಾರಗಳನ್ನೂ ಸಂಶೋಧಕರ ಪ್ರಧಾನವಾಗಿ ಇಲ್ಲಿ ಚರ್ಚಿಸಿದ್ದಾರೆ. ಮುಖ್ಯವಾಗಿ ಒಂದು ಸಾಹಿತ್ಯ (ಲಿಟರೇಚರ್) ಎಂಬುವ ಪರಿಭಾಷೆಯೊಂದು ಮೂಡಿ ಇಲ್ಲಿಯವರೆಗೂ ಕಾಲಘಟ್ಟಗಳನ್ನು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಬೆಳಗಿಸಿಕೊಂಡು ಬಂದ ಬಗೆಯನ್ನು ಅಭಿವ್ಯಕ್ತಿಸಿರುವುದು ಈ ಪ್ರಬಂಧದ ಒಂದು ವಿಶೇಷ ಗುಣ.
ಸಂಶೋಧನೆ ಸಾಹಿತ್ಯದ ವಲಯವನ್ನು ಪ್ರವೇಶಿಸಿದ್ದು ರೈತ ದಲಿತ, ಮಹಿಳಾ ಚಳವಳಿ, ಕರಪತ್ರಗಳೂ ಸಾಮಾಜಿಕ ಅರಿವಿನಲ್ಲಿ ಮಹತ್ವ ಪಡೆದದ್ದು, ನಮ್ಮ ಅರಿವಿನ ಪಠ್ಯಗಳೂ ಆದದ್ದರ ನೆನಪನ್ನು ಈ ಪ್ರಬಂಧ ಮೂಡಿಸುತ್ತಿದೆ. ಆಧುನಿಕ ಜ್ಞಾನ ಒಂದಾಗಿ ಪ್ರವಹಿಸುವ ಸ್ಥಿತಿಯನ್ನು ಇಂದು ನೋಡುತ್ತಿರುವುದು ಈ ಕಾರಣಕ್ಕಾಗಿ. ‘ಜಗತ್ತು ಒಂದು ಹಳ್ಳಿ’ ಎನ್ನುವ ಪರಿಕಲ್ಪನೆ ನಮ್ಮ ಈ ಜ್ಞಾನದ ಪರಿಧಿಗೂ ಅನ್ವಯಿಸುತ್ತದೆ. ಕನ್ನಡದ ಚಳುವಳಿಗಳು ‘ಸಾಹಿತ್ಯ’ವಾಗಿ ರೂಪುಗೊಂಡ ಬಗೆಯನ್ನು ಮುಖ್ಯವಾಗಿ ದಲಿತ-ಬಂಡಾಯ ಸಾಹಿತ್ಯ ಚಳುವಳಿಯೂ ಆಗಿ ೭೦-೮೦ ರ ದಶಕವನ್ನು ಇಂದಿನವರೆಗೂ ಬಳ್ಳಿಯಂತೆ ಚಾಚಿ ನಿಂತಿರುವ ಬಗೆಯನ್ನು ಗಮನಿಸಿದರೆ ಈ ಅಧ್ಯಯನದ ಸಾಫಲ್ಯತೆಗಳು ನಮಗೆ ಅರ್ಥವಾಗುತ್ತವೆ. ‘ಕನ್ನಡ ಮಾತು ತಲೆ ಎತ್ತುವ ಬಗೆ’ ಹೇಗೆಂಬುದರ ಪ್ರಶ್ನೆ ಹಾಗೆ ಮರೆಯಾಗಿ ಕನ್ನಡ ವಿಶ್ವಾತ್ಮಕ ಭಾಷೆಯಾಗುತ್ತಿರುವ ಪ್ರಾದೇಶಿಕವೆಂಬ ಅಸ್ಮಿತೆಯೇ ಜಾಗತಿಕ ರೂಪಾಂತರವನ್ನು ಕಾಣುವ ಅಂತರ್ಜಾಲದ ಲೋಕದೃಷ್ಟಿಯಲ್ಲಿ ಬಂದು ನಿಂತಿರುವುದು ನಮ್ಮ ಈ ಚರ್ಚೆಯನ್ನು ಇನ್ನಷ್ಟು ವಿಸ್ತರಿಸುವಂತೆ ಮಾಡುತ್ತಿದೆ. ಇಂತಹ ಹಲವು ಹೊಸ ಚಿಂತನೆಗಳಿಗೆ ಈ ಪ್ರಬಂಧ ಇಂಬಾಗಿ ನಿಂತುಕೊಂಡಿದೆ. ಜೊತೆಗೆ ಕನ್ನಡ ಚಳುವಳಿಯ ಅಸ್ಮಿತೆಯ ಹುಡುಕಾಟದ ಕಥನವಾಗಿಯೂ ನಮ್ಮ ಮುಂದಿದೆ.
ಕನ್ನಡ ಅಸ್ಮಿತೆಯನ್ನು ಬಹುವಾಗಿ ಕಾಡಿದ ಇನ್ನೊಂದು ಬಗೆಯನ್ನು ಸಂಶೋಧಕರು ತಮ್ಮ ಮೂರನೇ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ‘ಕನ್ನಡ ಕುಲಪುರೋಹಿತ’ರೆಂದು ಇಂದಿಗೂ ಕನ್ನಡ ಅಸ್ಮಿತೆಯನ್ನು ಈ ಬಗೆಯಲ್ಲಿ ಉಳಿಸಿಕೊಂಡಿರುವ ಆಲೂರು ವೆಂಕಟರಾಯರು ಮತ್ತು ಇಂದಿನ ಸಂಶೋಧನೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕತ್ವ ಎಂಬುವ ಭಾಷಾಸಂಸ್ಕೃತಿ ರೂಪಗಳನ್ನು ದೇಶಕಾಲಗಳಲ್ಲಿ ಹುಡುಕುತ್ತಿರುವ ಡಾ.ಎಂ.ಚಿದಾನಂದ ಮೂರ್ತಿಯವರು ಹೇಗೆ ಸಂಸ್ಕೃತಿಯೊಳಗೆ ಮೂಲಭೂತವಾದಿ ನೆಲೆಗಳನ್ನೂ ಏಕಮುಖಗೊಳಿಸಿಕೊಂಡು ಇದೇ ಅಧ್ಯಯನದ ಶಿಸ್ತು ಎಂಬ ಹಠಮಾರಿತನಕ್ಕೆ ಬಂದು ನಿಂತಿರುವ ಬಗೆಯನ್ನು, ಅವರ ಚಿಂತನೆಗಳ ಹಿನ್ನೆಲೆಯಲ್ಲಿಯೇ ಗುರುತಿಸಿದ್ದಾರೆ. ಈ ಇಬ್ಬರ ನಿಲುವುಗಳಲ್ಲೂ ವೈಚಾರಿಕ ಕರ್ನಾಟಕ ಮತ್ತು ಹಿಂದುತ್ವದ ಕರ್ನಾಟಕ ಒಂದಾಗಲಾರದು. ಒಂದೆಡೆ ಆಧ್ಯಾತ್ಮದ ಪರಿಭಾಷೆ, ಇನ್ನೊಂದೆಡೆ ಹಿಂದುತ್ವದ ಪರಿಭಾಷೆಗಳು ‘ಕನ್ನಡ’ದ ಸಹಬಾಳ್ವೆಗೆ ಕೈಗೂಡಿಸಲಾರವು ಎಂಬುವ ಆಲೋಚನಾಕ್ರಮವೊಂದು ಇಲ್ಲಿ ಚೆಲ್ಲುವರಿದು ನಿಂತಿದೆ. ಆಲೂರರು ಮತ್ತು ಚಿದಾನಂದ ಮೂರ್ತಿಗಳಿಬ್ಬರ ಚಿಂತನೆಗಳನ್ನು ತೌಲನಿಕ ಕ್ರಮದಲ್ಲಿ ವಿಶ್ಲೇಷಿಸಿರುವುದು ಈ ಅಧ್ಯಾಯದ ಒಂದು ವಿಶೇಷತೆ.
ಅಧ್ಯಾಯ-4ರಲ್ಲಿ ಸಾಂಸ್ಕೃತಿಕ ಹುಡುಕಾಟದ ನೆಲೆಯಾಗಿ ಕನ್ನಡ ಅಸ್ಮಿತೆಯನ್ನು ಶಂಬಾ ಅವರ ಚಿಂತನೆಗಳ ನೆಲೆಯಲ್ಲಿ, ಯು.ಆರ್.ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ ಅವರ ಚಿಂತನೆಗಳ ಹಿನ್ನೆಲೆಯಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಂಶೋಧಕರಾಗಿ ಬೆಳೆದ ಶಂಬಾರವರು ಕನ್ನಡನುಡಿ, ಕನ್ನಡ ಜನಾಂಗ, ಕನ್ನಡದೇಶ, ಕನ್ನಡಪ್ರಭುತ್ವ ಇವೆಲ್ಲವನ್ನೂ ಒಳಗೊಂಡ ಒಂದು ವಿಶಿಷ್ಟವಾದ ಕುಲಜ್ಞಾನ ಪರಂಪರೆಯನ್ನು ರೂಪಿಸಿದ ಬಗೆಯನ್ನು ನಾವು ಕಾಣುತ್ತೇವೆ. ಶಂಬಾರವರ ಶೋಧನೆಯ ಬಹುದೊಡ್ಡ ಸಂಕರವೆಂದರೆ (ಇದನ್ನು ‘ವೈರುಧ್ಯ’ ಎನ್ನಲಾರೆ) ಅವೈದಿಕ ಧಾರೆಗಳನ್ನು ಹುಡುಕಲು ವೈದಿಕ ಸಾಹಿತ್ಯ, ಸಂಹಿತೆಗಳನ್ನು ಆಕರಿಸುವುದು. ಅವರ ‘ಬಿತ್ತಿದ್ದನ್ನು ಬೆಳೆದುಕೋ’ ಕೃತಿಯೇ ಇದನ್ನು ಸಾಕ್ಷೀಕರಿಸುತ್ತದೆ. ‘ಮಾನವನ ಇತಿಮಿತಿಯ ಹುಡುಕಾಟ’ ಎನ್ನುವ ಅವರ ಸಾಂಸ್ಕೃತಿಕ ಶೋಧವೇ ವೈದಿಕ-ಅವೈದಿಕ ಇವೆರಡು ಧಾರೆಗಳಲ್ಲಿ ಫಲಿತಗೊಂಡ ಶೋಧಗಳ ಅಧ್ಯಯನದ ಬಹುನೆಲೆಗಳಾಗಿರುವ ಸಂಗತಿಗಳನ್ನು ನಾವು ಕಾಣಬಹುದು. ಇಷ್ಟಾದರೂ ಸಂಶೋಧಕರು ಶಂಬಾ ಅವರ ಸಂಶೋಧನೆಯ ಸ್ಥಿತಿಯನ್ನು ‘ಗತದ ಅವಿವೇಕದ ಗಾಯಗಳಿಗೆ ಮದ್ದು ಹುಡುಕುವ ಸಂಶೋಧನೆ’ ಎಂದು ಗುರುತಿಸಿರುವುದು ಕನ್ನಡದ ವಿವೇಕದಂತಿದೆ. ವಲಸೆಗಾರ ದ್ರಾವಿಡ ಪರಂಪರೆ ಹಾಗೂ ನೆಲೆನಿಂತ ಕೃಷಿಕ ಪರಂಪರೆ ಇವೆರೆಡನ್ನೂ ಹಟ್ಟಿಕಾರ ಗ್ರಾಮ ಈ ಪರಿಕಲ್ಪನೆಯ ನೆಲೆಯಲ್ಲಿ ಶೋಧಿಸಿರುವ ‘ಹಾಲುಮತದರ್ಶನ’ವೇ ಕನ್ನಡ ಸಂಸ್ಕೃತಿಯ ಬಹುದೊಡ್ಡ ಆಕರಶೋಧದಂತಿದೆ. ‘ಕರ್ನಾಟಕತ್ವ’ ಎಂದರೆ ಇಂತಹ ಶೋಧಗಳೇ. ಈ ಅಧ್ಯಯನದ ಸಂಶೋಧಕರು ಸಮಕಾಲೀನ ಸಂಗತಿಗಳಿಗೂ ಶಂಬಾ ಪ್ರಸ್ತುವಾಗುವ ಬಗೆಯನ್ನು ಇಲ್ಲಿ ಕಂಡರಿಸಿದ್ದಾರೆ. ಶಂಬಾ ಅವರ ಪ್ರಜ್ಞಾಪಾತಳಿಯ ವಿವಿಧ ಹಂತಗಳನ್ನು ಕನ್ನಡ ಅಸ್ಮಿತೆಯ ಭಾಗವಾಗಿಯೇ ಗುರುತಿಸಿದ್ದಾರೆ. ಹಾಗೆನೇ ಏಕಸಂಸ್ಕೃತಿಯ ಹೇರಿಕೆಗೆ ವಿರೋಧವನ್ನಿಟ್ಟುಕೊಂಡೇ ಬರೆದ – ಚಿಂತಿಸಿದ ಯು.ಆರ್.ಅನಂತಮೂರ್ತಿಯವರ ಚಿಂತನೆಗಳು ಕನ್ನಡದ ಖಚಿತತೆಯಲ್ಲಿ ಅರಳಿದ ಬಗೆ, ಸಾಹಿತ್ಯವಿಮರ್ಶೆಯಿಂದ ಸಮಾಜವಿಮರ್ಶೆಯತ್ತ ಬಂದ ಇವರ ನಡಿಗೆಯನ್ನು ಇಲ್ಲಿ ಗುರುತಿಸಿದ್ದಾರೆ. ಅದೇ ರೀತಿ ಕೆ.ವಿ.ಸುಬ್ಬಣ್ಣನವರ ಚಿಂತನೆಗಳು – ರಂಗಭೂಮಿ ಸಾಹಿತ್ಯದ ಹಲವು ಸಾಮಾಜಿಕ ವಲಯಗಳನ್ನು ದಾಟುತ್ತಲೇ ದೇಶಿಭಾಷೆಯ ಪ್ರಜ್ಞೆಯ ಮೂಲಕ ವಿಶ್ವಾತ್ಮಕಗೊಂಡ ಇವರ ಚಿಂತನೆಗಳು. ನನ್ನ ಕನ್ನಡ ಜಗತ್ತು, ಕವಿರಾಜಮಾರ್ಗವು ನಿರ್ಮಿಸಿದ ಕನ್ನಡ ಜಗತ್ತು, ಕನ್ನಡವು ಕನ್ನಡವಾಗೇ ದಕ್ಕಿಸಿಕೊಂಡ ಅರಿವು ಮತ್ತು ಎಚ್ಚರ ಈ ಬಗೆಯ ಜ್ಞಾನದ ನಿರ್ಮಿತಿಗಳಿಂದ ಕನ್ನಡ ಅಸ್ಮಿತೆಯ, ರಾಜಕೀಯ ಅರಿವಿನ ಪ್ರಜ್ಞೆಯಾಗಿಯೂ ಬೆಳೆದು ನಿಂತ ಬಗೆಯನ್ನು ಸಂಶೋಧಕರು ಇಲ್ಲಿ ಕಾಣಿಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ಸಾಹಿತ್ಯದ ಪಠ್ಯಗಳೂ ಹೇಗೆ ಕನ್ನಡ ಅಸ್ಮಿತೆಯ ಅರಿವಾಗಬಲ್ಲದು ಎಂಬುವ ವಿವೇಕದ ನೋಟವೂ ಈ ಪ್ರಬಂಧದಲ್ಲಿ ಕೂಡಿಕೊಂಡಿದೆ. ಮತ್ತೆ ಹಿಂದಿನಂತೆ ಈ ಚಿಂತನೆಗಳೊಳಗೂ ತೌಲನಿಕವಾದ ವಿಶ್ಲೇಷಣೆ ಒದಗಿ ಬಂದಿದೆ.
ಅಧ್ಯಾಯ 5-ಕನ್ನಡ ಅಸ್ಮಿತೆ : ಜನಪ್ರಿಯ ನೆಲೆ ಎಂಬುದು. ಇಲ್ಲಿ ಗಮನಿಸಬಹುದಾದ ಅಂಶವೆಂದರೆ, ಇದುವರೆಗಿನ ಓದುಗಳು ಅನಕೃ ಅವರನ್ನು ಕಾದಂಬರಿಕಾರರೆಂದಷ್ಟೇ ಓದು ಒಂದು ಸೀಮಿತ ಚೌಕಟ್ಟಿನಲ್ಲಿ ಬಂಧಿಸಿದ್ದು. ಅನಕೃ ಕಾದಂಬರಿಕಾರರಾಗಿ ಎಷ್ಟು ಜನಪ್ರಿಯಗೊಂಡಿದ್ದರೋ, ಅಷ್ಟೇ ಜನಪ್ರಿಯ ಚಿಂತಕರೂ ಆಗಿದ್ದರೆಂಬುದು ಈ ಅವರ ಬರಹಗಳ ಅವಲೋಕನದಿಂದ ತಿಳಿಯುತ್ತದೆ. ಕನ್ನಡ ಭಾಷೆಯ ಬಗೆಗೆ ನೆರೆಯ ಭಾಷೆಗಳ ಜೊತೆಗಿನ ಕನ್ನಡ ಸಂಬಂಧಗಳ ಬಗೆಗೆ, ಪ್ರಜಾಪ್ರಭುತ್ವಕ್ಕೆ ಬೇಕಿರುವ ಜಾತ್ಯತೀತ ಚಿಂತನೆಗಳ ಬಗೆಗೆ ಅನಕೃರವರಿಗೆ ಸಾಮಾಜಿಕ, ರಾಜಕೀಯ ಪ್ರಜ್ಞೆ ಇರುವುದನ್ನು ಸವಿವರವಾಗಿ ಸಂಶೋಧಕರಾದ ಸರ್ಜಾಶಂಕರ್ ಅವರು ವಿಶ್ಲೇಷಿಸಿದ್ದಾರೆ. ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕರಾಗಿಯೂ ಅವರ ಬರಹಗಳು ಎಷ್ಟು ಮುಖ್ಯವೆನ್ನುವ ಸಂಗತಿ ಹಾಗೇ ‘ವಿಶ್ವವಾಣಿ’, ‘ಕರ್ನಾಟಕ ಪ್ರಗತಿಶೀಲ ಸಂಘ’ ಹೀಗೆ ಕನ್ನಡದ ಬಹುರೂಪಗಳಲ್ಲಿ ಕಾರ್ಯನಿರ್ವಹಿಸಿದ ಬಗೆಯನ್ನು ಇಲ್ಲಿ ಶೋಧಿಸಿದ್ದಾರೆ. ಕನ್ನಡಭಾಷೆಯ ಅಸ್ಮಿತೆಯಾಗಿ ದುಡಿದ ವ್ಯಕ್ತಿತ್ವದ ರೂಪವೊಂದನ್ನು ಇಲ್ಲಿ ಕಾಣಿಸಿದ್ದಾರೆ. ಜೊತೆಗೆ ಕರವೇ ಕಾಲಕಾಲಕ್ಕೆ ದಾಖಲಿಸಿದ ಹೋರಾಟ ಮತ್ತು ಕನ್ನಡಪರ ಚಿಂತನೆಗಳನ್ನೂ ಮೊದಲ ಬಾರಿಗೆ ಎಂಬಂತೆ ಇಲ್ಲಿ ಅಧ್ಯಯನ ಮಾಡಿರುವುದು ವರ್ತಮಾನದ ಸಂಶೋಧನೆಗೆ ಹಿಡಿದ ಕನ್ನಡಿಯೂ ಆಗಿದೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಕನ್ನಡ ದುಡಿಮೆ, ಈ ನೆಲದಲ್ಲಿ ನಡೆದ ಹಲವು ಈ ಬಗೆಯ ಪ್ರೇರಣೆಗಳು ಈಗ ಚಳುವಳಿಯ ಜತೆಗೆ ಕರವೇ ನಲ್ನುಡಿ ಪತ್ರಿಕೆ, ಆದರ ಆಶಯ, ದೃಷ್ಟಿಕೋನಗಳನ್ನು ಇಲ್ಲಿ ಅಧ್ಯಯನಕ್ಕೆ ಒಳಪಡಿಸಿರುವ ವಿಧಾನ, ಕನ್ನಡದ ನಿಜದ ಹಾದಿಯ ಹೆಜ್ಜೆಗುರುತುಗಳ ಹುಟುಕಾಟವೆಂದರೆ ಇದೇ ತಾನೇ ಎಂಬಂತೆ ಮೂರು ಹೊಸ ಆಲೋಚನಾಕ್ರಮ ಮಂಡಿತವಾಗಿದೆ. ಕನ್ನಡ ಅಸ್ಮಿತೆಯ ಕುರಿತಾಗಿ ಕರವೇ ಹೋರಾಟ, ಚಿಂತನೆಗಳ ರೂಪಿಸಿದರೂ ಅದು ತನ್ನ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಾಂಸ್ಥಿಕ ಸಂರಚನೆಯನ್ನು ರೂಪಿಸಿಕೊಂಡು ಜನಸಮುದಾಯದ ವಿಶ್ವಾಸವನ್ನು ಹಿಗ್ಗಿಸಬೇಕೆಂಬ ತುಡಿತ ಈ ಬರಹದಲ್ಲಿ ಎದ್ದು ಕಾಣುತ್ತದೆ. ಜಾತೀಯತೆ, ರಾಜಕೀಯ ಕೇಂದ್ರಿತ ಮತ್ತು ಮತೀಯತೆ, ವ್ಯಕ್ತಿಕೇಂದ್ರಿತ ಹೊರತಾಗಿ ಕರವೇ ಇದ್ದಷ್ಟೂ ಅದು ಬೆಳೆಯುವ ಆಶಾಭಾವನೆಯೊಂದನ್ನು ಈ ಅಧ್ಯಯನಕಾರರು ಇಲ್ಲಿ ಮೂಡಿಸುತ್ತಾರೆ. ಹಾಗೆ ಇಂಗ್ಲಿಷ್, ಹಿಂದಿ, ನೆರೆಭಾಷೆಗಳ ಜತೆ ನಾವಿಟ್ಟುಕೊಳ್ಳಬಹುದಾದ ಸಂಬಂಧ ಮತ್ತು ಸೈದ್ಧಾಂತಿಕ ವಿರೋಧಗಳ ಕುರಿತಾಗಿಯೂ ಇಲ್ಲಿ ಚರ್ಚಿಸಿದ್ದಾರೆ.
‘ಕನ್ನಡ ಅಸ್ಮಿತೆ: ದ್ರಾವಿಡಶೋಧದ ನೆಲೆ’ ಎಂಬುವ ಅಧ್ಯಾಯ ಆರರಲ್ಲಿ ಕನ್ನಡ ಒಂದು ಭಾಷಿಕವಾಗಿ ರೂಪುಗೊಂಡ ಪರ-ವಿರೋಧಗಳ ನೆಲೆಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಕನ್ನಡದ ಪ್ರಮುಖ ಭಾಷಾತಜ್ಞರಾದ ಡಿ.ಎನ್. ಶಂಕರಭಟ್ಟ ಮತ್ತು ಕೆ.ವಿ.ನಾರಾಯಣ ಅವರ ಚಿಂತನೆಗಳನ್ನು ತೌಲನಿಕವಾಗಿಯೇ ಕಟ್ಟಿಕೊಟ್ಟಿದ್ದಾರೆ. ಇದನ್ನು ‘ಕನ್ನಡ ಅಸ್ಮಿತೆಯ ದ್ರಾವಿಡಶೋಧದ ನೆಲೆ’ ಎಂಬುವುದಕ್ಕಿಂತ ‘ಕನ್ನಡ ಅಸ್ಮಿತೆ : ಭಾಷಾ ವಿಜ್ಞಾನದ ನೆಲೆ’ ಎಂದಿದ್ದರೆ ಈ ಅಧ್ಯಯನ ಇನ್ನೊಂದು ಮಾನವಿಕ ವಿಜ್ಞಾನವನ್ನು ಒಳಗೊಂಡು ಪ್ರವಹಿಸುತ್ತಿತ್ತು. ನಮ್ಮಲ್ಲಿ ದ್ರಾವಿಡ ಸಂಸ್ಕೃತಿ, ಪರಂಪರೆಗಳ ಶೋಧವೇ ಭಾಷಿಕ ಚಿಂತನೆಯ, ಸಂಸ್ಕೃತ, ಕನ್ನಡ ವ್ಯಾಕರಣ ಮೀಮಾಂಸೆಯ, ಇಂಗ್ಲಿಷಿನ ಗ್ರಹಿಕೆಯನ್ನೂ ಮೀರಿ ನಿಂತಿದೆ. ಕನ್ನಡ ಜನಪದ ಮಹಾಕಾವ್ಯಗಳಂತೂ ಕನ್ನಡ ಅಸ್ಮಿತೆಯನ್ನು ಬಹುದೊಡ್ಡದಾಗಿ ಸಾರಿ ನಿಂತಿದೆ ಎಂಬುದನ್ನೂ ನಾವು ಗಮನಿಸಬೇಕಿದೆ.
ಕನ್ನಡ ಭಾಷೆಯ ಚರಿತ್ರೆಯನ್ನು ಹೊಸದಾಗಿ ಕಟ್ಟುವ ಪ್ರಯತ್ನಗಳು ವರ್ತಮಾನದಲ್ಲಿ ಹೇಗೆ ನಡೆದಿವೆ ಎಂಬುವ ಶೋಧವನ್ನೂ ಈ ಈರ್ವರ ಚಿಂತನೆಗಳ ನೆಲೆಯಲ್ಲಿಯೇ ಚರ್ಚಿಸಿದ್ದಾರೆ. ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎಂಬುವ ನಿಲುವು ಇತ್ತೀಚೆಗೆ ‘ಕನ್ನಡ ಕಾವ್ಯಮೀಮಾಂಸೆ’ಯನ್ನೂ ಕಟ್ಟಲು ಸಾಧ್ಯ ಮಾಡಿದಂತಿದೆ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ದ್ರಾವಿಡನೆಲೆಯ ಕನ್ನಡ ಅಸ್ಮಿತೆ ಕಲಿತ ಚಿಂತನೆಗಳಿಗೇ ಒಂದು ಅಧ್ಯಾಯವನ್ನು ಮೀಸಲಿಟ್ಟು ಭಿನ್ನವಾಗಿ ಚರ್ಚಿಸಲು ಸಾಧ್ಯವಿತ್ತು.
ಇನ್ನು ಏಳನೆಯ ಅಧ್ಯಾಯ ‘ಕನ್ನಡ ಅಸ್ಮಿತೆ : ಸಾಮಾಜಿಕ ನೆಲೆ’ಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ಚಿಂತನೆಗಳಿಗೆ ಮೀಸಲಿಟ್ಟ ಅಧ್ಯಾಯದಂತಿದೆ ಇದು. ವರ್ತಮಾನದಲ್ಲಿ, ಅದರಲ್ಲೂ ದಲಿತ-ಬಂಡಾಯದ ಸಂದರ್ಭದಲ್ಲಿ ಮಾಡಿದ ಚಿಂತನೆಗಳು, ಪರಿಭಾಷೆಗಳು, ಸಾಮುದಾಯಿಕ ಸಹಭಾಗಿತ್ವ ಬರಗೂರರನ್ನಷ್ಟೇ ಬೆಳೆಸಲಿಲ್ಲ. ದೇವನೂರು, ಸಿದ್ಧಲಿಂಗಯ್ಯ, ಚೆನ್ನಣ್ಣ ವಾಲೀಕಾರ, ಎಸ್.ಎಸ್.ಹಿರೇಮಠ, ಚಂಪಾ, ಬಿ.ಟಿ.ಲಲಿತಾನಾಯಕ, ಸಾರಾ ಅಬೂಬಕರ್ ಹಲವು ಬರಗೂರರನ್ನು ಪ್ರಜಾತಾಂತ್ರಿಕವಾಗಿಯೇ ಬೆಳೆಸಿತು. ಇಲ್ಲಿ ಒಂದು ಚಿಂತನೆ, ಒಂದು ಪ್ರಣಾಳಿಕೆ ವ್ಯಕ್ತಿಕೇಂದ್ರಿತವಾಗಿಲ್ಲ. ಆ ಎಲ್ಲಾ ದನಿಗಳು ಒಂದು ಕೊರಳ-ಕೊಳಲ ಹಾಡಾದಂತಿವೆ. ಈ ಸನ್ನಿವೇಷಗಳನ್ನು ಇಲ್ಲಿ ಚರ್ಚಿಸಲು ಸಾಧ್ಯವಿತ್ತು. ಆದರೂ ಸಂಸ್ಕೃತಿಚಿಂತಕರಾದ ಬರಗೂರರ ಒಟ್ಟು ಚಿಂತನಾಕ್ರಮವನ್ನಿಟ್ಟುಕೊಂಡು ಒಂದಿಷ್ಟು ಮೊದಲಿಗಿಂತ ಭಿನ್ನವಾಗಿ ಸಮುದಾಯದ ಆಶೋತ್ತರಗಳು ಹೇಗೆ ಹೋರಾಟದ, ಕನ್ನಡ ಅಸ್ಮಿತೆಯ ಭಾಗವಾದವು ಎಂಬ ಸಕಾರಣಾತ್ಮಕ ಅಂಶಗಳನ್ನು ಇಲ್ಲಿ ಗುರ್ತಿಸಿ ಚರ್ಚಿಸಿದ್ದಾರೆ.
ಕನ್ನಡ ಅಸ್ಮಿತೆಯಲ್ಲಿ ಎದುರಾಗುವ ‘ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು ಒಂದೇ ನೆಲೆಯಲ್ಲಿ ನೋಡುವ ಸಮಸ್ಯೆಯೊಂದನ್ನು ಮುಂದಿಟ್ಟುಕೊಂಡು ಇಲ್ಲಿ ಪರಿಹಾರವನ್ನು ಹುಡುಕುವ ಸಂದರ್ಭಕ್ಕೆ ಈ ಅಧ್ಯಾಯವನ್ನು ಮೀಸಲಿರಿಸಇದ್ದಾರೆ. ಅದು ಬರಗೂರರ ಆತಂಕ ಹೇಗೋ ಹಾಗೇ ಈ ಅಧ್ಯಯನದ ಒಂದು ಸಮಸ್ಯೆಯೂ ಹೌದು. ‘ಅವರವರ ಸಂಸ್ಕೃತಿಯ ಮನೆಮಾದರಿ’ಗಳಲ್ಲಿ, ಆ ಪರಿಸರದಲ್ಲಿ ಕನ್ನಡ ರೂಪಿಸುವ ವಾತಾವರಣ ಇರಬೇಕೆನ್ನುವ ನಿಲುವು, ಈ ನಿಲುವಿಗೆ ಸಂಶೋಧಕರು ‘ಪೂರ್ವಗ್ರಹ ಚಿಂತನೆ’ ಎಂದಷ್ಟೇ ಹೇಳಿ ಇದಷ್ಟೇ ಪರ್ಯಾಯವಾಗುವ ಸ್ಥಿತಿ ಯಾವುದು? ಎಂಬುದು ಇಲ್ಲಿ ಕಾಣಿಸದಿರುವುದು. ‘ದಲಿತನೆಲೆ’ ಎಂಬಲ್ಲಿ ದಲಿತರ ಎಲ್ಲ ಬಗೆಯ ಬಿಡುಗಡೆಗೆ ಇಂಗ್ಲಿಷ್ ಸಾಧ್ಯವೆಂಬುವ ಹಲವು ಚರ್ಚೆಯನ್ನೆತ್ತಿಕೊಂಡೇ ಇಲ್ಲಿ ಸಂಶೋಧಕರು ವಿಶ್ಲೇಷಿಸಿದ್ದಾರೆ. ಇಂತಹ ಚಿಂತನೆಯನ್ನು ಮೊಗಳ್ಳಿಯವರ ‘ದಲಿತರು ಮತ್ತು ಜಾಗತೀಕರಣ’ ಕೃತಿಯಲ್ಲಿಯೇ ಕಾಣಬಹುದು. ಕೆ.ವಿ.ನಾರಾಯಣರ ಬರಹಗಳನ್ನು ಮತ್ತೊಮ್ಮೆ ಇಲ್ಲಿ ಶೋಧಿಸಿದ್ದಾರೆ. ಡಿ.ಆರ್, ದೇವನೂರು, ಕುವೆಂಪು, ಕೆ.ಬಿ.ಸಿದ್ಧಯ್ಯ, ಬಿ.ಕೃಷ್ಣಪ್ಪ ಮುಂತಾದವರ ಈ ಕುರಿತಾದ ನಿಲುವುಗಳು ಇಲ್ಲಿ ವಿಶ್ಲೇಷಣೆ ಪಡೆದಿವೆ. ಇದರ ಜತೆಗೇ ಮೊಗಳ್ಳಿಯವರ ‘ದಲಿತನೆಲೆ’ಯ ಚಿಂತನೆಗಳನ್ನೇ ಇಲ್ಲಿ ಬೆಳೆಸಬಹುದಿತ್ತು.
ಒಂದು ಸಮಾಜಕ್ಕೆ ಜಾತಿ, ವರ್ಗ,ವರ್ಣಗಳ ಅಂತಸ್ತು, ಪ್ರಮಾಣ, ಅಸಮಾನತೆಗಳು ಹೇಗಿರುತ್ತವೆಯೋ ಭಾಷೆಗೂ ಇಂತಹ ಶ್ರೇಷ್ಠತಮ, ಕನಿಷ್ಟಥಮವೆನ್ನುವ ಕಂದರಗಳು ಇರುತ್ತವೆ ಎಂಬುವ ಸಂಗತಿಗಳ ಜತೆ, ಭಾಷೆಯ ಹಲವು ವೈಲಕ್ಷಣಗಳ ಕುರಿತು ಇಲ್ಲಿ ಸಾದೃಶ್ಯವಾಗಿ ಚಿಂತಿಸಲಾಗಿದೆ. ‘ಕನ್ನಡ ಪ್ರಭುತ್ವವಾಗಿ ಬೆಳೆದು ಬಂದ ಭಾಷೆ, ಕಾಲಕಾಲಕ್ಕೆ ಅದರ ಸ್ವರೂಪಗಳೂ ಸ್ಥಿತ್ಯಂತರಗೊಂಡಿವೆ. ಕನ್ನಡದ ಹಲವು ಜ್ಞಾನಪರಂಪರೆಗಳಲ್ಲಿ ಕನ್ನಡವೇ ಬದಲಾಗಿದೆ. ಇಷ್ಟಾದರೂ ಅದು ಸಂಸ್ಕೃತದಿಂದ, ಇಂಗ್ಲಿಷಿನಿಂದ, ಹಿಂದಿಯಿಂದ ಬೇರೆ ಸಹೋದರ ಭಾಷಾವಲಯಗಳಿಂದ ಹಲವು ಜ್ಞಾನಗಳನ್ನು ಪಡೆದುಕೊಂಡಿದೆ. ತನ್ನ ಜ್ಞಾನವನ್ನು ಅದು ವಿಶ್ವಾತ್ಮಕಗೊಳಿಸಿದೆ.
ಇಲ್ಲಿ ಗಾಂಧಿ, ಲೋಹಿಯಾ, ತೇಜಸ್ವಿ, ನಮ್ಮ ಪೂರ್ವಿಕರ ಆಡುಭಾಷೆ ಮತ್ತು ನಮ್ಮ ಲಿಖಿತವೆಂಬುವ ಪ್ರಮಾಣ ಭಾಷೆಗಳು, ಈ ಕನ್ನಡವೆಂಬುವ ‘ಪ್ರಮಾಣ ಭಾಷೆ’ ಉಳಿದ ಅಧೀನ ಭಾಷೆಗಳನ್ನು ಉಪಸಂಸ್ಕೃತಿಯ ಭಾಷೆಗಳನ್ನು, ಉದಾಹರಣೆಗೆ ಸೋಲಿಗ, ಕೊರಗ, ಬಡಗ ಈ ಸಮುದಾಯಗಳಾಡುವ ಬುಡಕಟ್ಟು ಭಾಷೆಯನ್ನು ಹೇಗೆ ನೋಡುತ್ತೇವೆ ಎಂಬ ಚರ್ಚೆ ಈ ಎಂಟನೆಯ ಅಧ್ಯಾಯದಲ್ಲಿದೆ. ಇಂದು ಭಾರತವನ್ನು ನಲುಗಿಸುತ್ತಿರುವ ಸಂಗತಿಗಳೆಂದರೆ, ಧರ್ಮ, ಜಾತಿ ಮತ್ತು ಭಾಷೆ. ನೀರು-ಗಡಿ ಸಮಸ್ಯೆಗಳೂ ಇದರ ಜತೆಗೆ ಕೂಡಿಕೊಂಡಿವೆ. ಇಲ್ಲವೇ ಆನಂತರದ ಸಂಗತಿಗಳಾಗಿ ಬಂದಿವೆ. ಹಾಗೇ ನಾವು ‘ಜನಪದ ಸಾಹಿತ್ಯ’ವನ್ನು ಅಭಿಜಾತವೆನ್ನಲು ಸಾಧ್ಯವೇ? ಇಂತಹ ಹಲವು ವೈರುಧ್ಯಗಳ ನಡುವೆಯೂ ‘ಕನ್ನಡ ಅಸ್ಮಿತೆ’ಯಾಗಿ ಬೆಳೆದುಬಂದಿರುವ ಸಂಗತಿಗಳನ್ನು ಗುರುತಿಸಲು ಇನ್ನಷ್ಟು ಹೊಸದಾಗಿ ಗುರುತಿಸಲು ಸಾಧ್ಯವಿದೆ. ಪ್ರಾದೇಶಿಕ ಭಾಷಾ ಅಧ್ಯಯನದ ಸಮಸ್ಯೆ, ಪಠ್ಯದಲ್ಲಿ ಭಾಷಾ ಬೋಧನೆಯ ಸಮಸ್ಯೆ, ಸಾಹಿತ್ಯದಲ್ಲಿಯೂ ಇಂತಹ ಸಮಸ್ಯೆಗಳು ಹೇಗೆ ಬಂದವು, ಅದಕ್ಕೆ ಬಿ.ಎಂ.ಶ್ರೀಯಂಥವರು ಹೇಗೆ ಸಂಸ್ಕೃತದ ಹಂಗಿಲ್ಲದ ಪರಿಹಾರವನ್ನು ರೂಪಿಸಿಕೊಂಡರು ಎಂಬ ವಿವರಗಳನ್ನು ಈ ಸಂಶೋಧಕರು ಇಲ್ಲಿ ಚರ್ಚಿಸಿದ್ದಾರೆ. ಜೊತೆಗೆ ಎಂ.ಚಿದಾನಂದಮೂರ್ತಿ, ಡಿವಿಜಿ, ಶಂಕರಭಟ್ಟ, ಕೆ.ವಿ.ಸುಬ್ಬಣ್ಣ, ಕೆ.ವಿ.ನಾರಾಯಣ ಹಲವರ ಚಿಂತನೆಯ ಶೃತಿರೂಪಗಳು ಇಲ್ಲಿವೆ.
ಅಧ್ಯಾಯ ಒಂಬತ್ತರಲ್ಲಿ ಏಕೀಕರಣಪೂರ್ವ, ಏಕೀಕರಣ, ಏಕೀಕರಣೋತ್ತರ ಕರ್ನಾಟಕದ ರಾಜಕೀಯ ಸ್ಥಿತಿ-ಗತಿಗಳ ಕುರಿತು ಮುಖ್ಯವಾಗಿ ಭಾಷಾ ವಿಷಯಗಳಲ್ಲಿ ಅವುಗಳ ಪಾತ್ರ, ಸನ್ನಿವೇಷ, ಒತ್ತಡ, ಪ್ರಭಾವಗಳ ಕುರಿತು, ಕನ್ನಡ ಆಡಳಿತ ಭಾಷೆಯಾಗಲು ಹೆಣಗುತ್ತಿರುವ ಸನ್ನಿವೇಷಗಳ ಕುರಿತು ಒಂದು ಸಮಕಾಲೀನ ಚಾರಿತ್ರಿಕ ನೋಟವನ್ನು ಇಲ್ಲಿ ಅಧ್ಯಯನಕಾರರು ನಡೆಸಿದ್ದಾರೆ. ಹಾಗೇ ರಾಷ್ಟಿಯ ನೀತಿ-ಧೋರಣೆಗಳ ಹೇರಿಕೆಗೆ ಜನಸಮುದಾಯಗಳ ವಿರೋಧ, ಪ್ರತಿಕ್ರಿಯೆಗಳು ಹೇಗಿವೆ ಎಂಬುವ ಬಗೆಯನ್ನೂ ಇಲ್ಲಿ ವಿವರಿಸಲಾಗಿದೆ. ಆಯಾ ಭಾಷಾವಾರು ಪ್ರಾದೇಶಿಕ, ಆಡಳಿತಾತ್ಮಕ ವಿಭಾಗಗಳೇ ಹೇಗೆ ಆಯಾ ಭಾಷಾ ಆಸ್ಮಿತೆಯ ಜೊತೆ ಭಾಷೆಯ ಆತಂಕಕ್ಕೂ ಕಾರಣವಾಗುತ್ತವೆ ಎಂಬುವ ಸಂಗತಿಗಳ ಬಗೆಗೆ ಈ ಅಧ್ಯಾಯ ಬೆಳಕು ಚೆಲ್ಲುತ್ತದೆ.
‘ಕರ್ನಾಟಕ ಏಕೀಕರಣವೂ ಒಂದು ರಾಜಕೀಯದ ನಿರ್ಧಾರದ ಪರಿಣಾಮವೇ?’ ಎಂಬುವ ಕೆ.ವಿ.ಎನ್ ಅವರ ಮಾತಿನ ಸತ್ಯವನ್ನು ಈ ಪ್ರಬಂಧ ಸಾಕ್ಷೀಕರಿಸಿದೆ. ಇಂತಹ ಹಲವು ಬಹುಮುಖ್ಯ ಚರ್ಚೆಗಳು, ಇದುವರೆಗೆ ಈ ವಿಷಯದಲ್ಲಿ ನಡೆದಿರುವ ಸಂವಾದಗಳು, ಚರ್ಚೆಗಳು, ಭಾಷಣಗಳು, ಬರಹಗಳು, ಆಡಳಿತರೂಢ ಸರ್ಕಾರಗಳ ದಿವ್ಯಮೌನ, ಖಾಸಗಿವಲಯಗಳ ದರ್ಪ, ಕೇಂದ್ರದ ಅಸಮಾನತೆಯ ಧೋರಣೆ ಈ ಹಲವು ಸಂಗತಿಗಳು ಕನ್ನಡಭಾಷೆಯ ಅಸ್ಮಿತೆಗೆ ಹೇಗೆ ಅಡ್ಡಿಯಾಗಿವೆ ಎಂಬುವ ವಿಚಾರಗಳ ವಿಮರ್ಶಾತ್ಮಕ ವಿಶ್ಲೇಷಣೆ ಇಲ್ಲಿದೆ. ಇದೇ ಸಂಗತಿಗಳನ್ನು ತಮ್ಮ ಕೊನೆಯ ಅಧ್ಯಾಯ ಸಮಾರೋಪದ ನುಡಿಗಳಲ್ಲೂ ಆಡಿದ್ದಾರೆ. ಈ ಸಂಶೋಧನೆಯ ಮತ್ತು ಸಂಶೋಧಕರ ಸದಾಶಯವೆಂದರೆ, ಕನ್ನಡ ಅಸ್ಮಿತೆಯೆಂಬುದು ಇನ್ನೊಂದರ್ಥದಲ್ಲಿ ಕನ್ನಡ ರಾಜಕೀಯ ಪ್ರಜ್ಞೆಯ ಅಸ್ಮಿತೆಯೂ ಆಗಿ ಬೆಳಗಬೇಕೆಂಬ ನಿಲುವು ಈ ಪ್ರಬಂಧವನ್ನು ಅಂತಿಮವಾಗಿ ಷರಾ ನೀಡಿ ರೂಪಿಸಿ ನಿಂತಂತಿದೆ.
ಒಟ್ಟಾರೆ ‘ಕನ್ನಡ ವಿಚಾರಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು’ ಎಂಬುವ ಈ ಪ್ರಬಂಧ ಹಲವು ಚರ್ಚೆ, ಸಂವಾದ, ವಿಶ್ಲೇಷಣೆ, ಹೊಸ ಹೊಳಹುಗಳ ಜೊತೆಗೆ ಇನ್ನಡ ವಿಚಾರ ಸಾಹಿತ್ಯಕ್ಕೆ ಹಲವು ಮಾನವಿಕ ಜ್ಞಾನಗಳ ಸಾಹಿತ್ಯಪಠ್ಯಗಳನ್ನಿಟ್ಟುಕೊಂಡು ಅಧ್ಯಯನ ಮಾಡಿರುವುದು ಈ ಪ್ರಬಂಧದ ಹೆಗ್ಗಳಿಕೆ ಮತ್ತು ಮೌಲ್ಯವನ್ನು ಹೆಚ್ಚಿಸಿದೆ. ಸರ್ಜಾಶಂಕರ್ ಹರಳಿಮಠ ಅವರು ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ರೂಪಿಸಿರುವ ಈ ಪ್ರಬಂಧ ಕನ್ನಡದ ವಿವೇಕವನ್ನು ಹೊಸ ನೆಲೆಯಲ್ಲಿ ಹುಡುಕಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ. ಈ ಕಾರಣಕ್ಕೆ ಈ ಸಂಶೋಧಕರು, ಮಾರ್ಗದರ್ಶಕರು ಅಭಿನಂದನಾರ್ಹರು.
ಇಷ್ಟಾದರೂ ಈ ಪ್ರಬಂಧದಲ್ಲಿ ಹಲವು ಮುಖ್ಯವೆನ್ನಿಸುವ ಮಿತಿಗಳಿವೆ. ಅವೆಂದರೆ,
1. ಒಟ್ಟಾರೆ ಕನ್ನಡ ಅಸ್ಮಿತೆಯನ್ನು ಒಪ್ಪಿಕೊಳ್ಳುವ ನಾವು ಈ ಅಸ್ಮಿತೆಯ ಮುಂದುವರೆದ ಪ್ರತಿನೆಲೆಯಂತಿರುವ ‘ಕನ್ನಡ ಪ್ರಮಾಣ ಭಾಷೆ’ಯಾಗುವ ಸಂದರ್ಭವನ್ನು ಒಪ್ಪಿಕೊಳ್ಳಲು ಆತಂಕಪಡುವ ನೀತಿ ಯಾಕೆ ನಿರ್ಮಾಣವಾಗಿದೆ? ಹಾಗೆ ನಿರ್ಮಾಣವಾದಂತಿದೆ ಇಲ್ಲಿನ ಆಲೋಚನಾ ಭಿತ್ತಿ. ಹಲವು ಕನ್ನಡಗಳಿರುವ ಈ ಲೋಕದಲ್ಲಿರುವ ‘ಪ್ರಮಾಣ ಭಾಷೆ ಯಾವುದು ಎಂಬ ಪ್ರಶ್ನೇಯೇ ಮೊದಲು ಎದುರಾಗುವುದು. ನನಗನ್ನಿಸಿದಂತೆ ಕವಿರಾಜಮಾರ್ಗಕಾರ ಶ್ರೀ ವಿಜಯನಿಗೂ ಇದು ಕಾಡಿದಂತಿದೆ. ‘ಹಲವು ಕನ್ನಡಂಗಳ್’ ಎಂದೇಳಿ ಅವನು ಭಾಷಾಸಾಮರಸ್ಯವನ್ನು ಮೂಡಿಸಿದಂತೆ ಕಂಡರೂ ‘ಹಲವು ಕನ್ನಡಗಳನ್ನೂ ವಿವರಿಸಲಾಗದ, ವಿಸ್ತರಿಸಲಾಗದ ಸಾಂಸ್ಕೃತಿಕ, ರಾಜಕೀಯ ಇಕ್ಕಟ್ಟಿನಲ್ಲಿಯೂ ಅವನು ಇದ್ದಂತಿದೆ. ಅಂಥದೇ ಇಕ್ಕಟ್ಟನ್ನು ಈ ಪ್ರಬಂಧವೂ ಅನುಭವಿಸಿದೆ.
2. ದ್ರಾವಿಡ ಚಿಂತನೆಗೆ ಸಂಬಂಧಿಸಿ ದ್ರಾವಿಡಭಾಷೆಯ ವ್ಯಾಕರಣ, ನುಡಿಸ್ವರೂಪಗಳನ್ನು ವಿಶ್ಲೇಷಿಸಿರುವುದು. ಆದರೆ ಕನ್ನಡದ ವೈಚಾರಿಕ ನೆಲೆಗೆ, ಪ್ರಜ್ಞೆಗೆ, ವಿಚಾರ ಸಾಹಿತ್ಯದ ತಾತ್ವಿಕ ವಿಸ್ತಾರಕ್ಕೆ ಸ್ಪಷ್ಟ ಕೈಗನ್ನಡಿಯಂತಿರುವ ಮಾರ್ಕ್ಸ್, ಎಂಗೆಲ್ಸ್ರ ಚಿಂತನೆಗಳನ್ನೂ, ಥಾಮ್ಸನ್, ಡಿ.ಡಿ.ಕೋಸಾಂಬಿ, ರೋಮಿಲಾ ಥಾಪರ್, ದೇವಿಪ್ರಸಾದ ಚಟ್ಟೋಪಾಧ್ಯಯ, ಸಮಾಜವಿಜ್ಞಾನಿಯೂ, ಆಧುನಿಕ ಭಾಷಾ ವಿಜ್ಞಾನಿಯಂತಿರುವ ಡಾ.ಬಿ.ಆರ್ ಅಂಬೇಡ್ಕರರ ಚಿಂತನೆಗಳು, ಕನ್ನಡದಲ್ಲಿ ಆ ಬಗೆಯಲ್ಲಿ ನಡೆದ ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆಯ ಶೋಧದ ಹುಡುಕಾಟಗಳು, ಮುಖ್ಯ ಆಕರಗಳನ್ನು, ಕೃತಿಗಳನ್ನು ಇಲ್ಲಿ ಬಳಸದೇ ಇರುವುದು. ಉದಾ.ಹಬ್ಬಗಳು, ಜಾತ್ರೆಗಳು, ದರ್ಶನಗಳ ಮೂಲಕ ಮೂಡಿ ನಿಂತಿರುವ ಎಸ್.ಎಸ್.ಹಿರೇಮಠರ ಚಿಂತನೆಗಳು ಇಲ್ಲಿ ಗೈರುಹಾಜರಾಗಿರುವುದು ಎದ್ದು ಕಾಣುತ್ತದೆ. ಆ ಒಂದು ಮುಖ್ಯಮಿತಿ ಈ ಪ್ರಬಂಧಕ್ಕೆ ಇದೆ.
3. ಕನ್ನಡ ಅಸ್ಮಿತೆಯ ಹುಡುಕಾಟವೆಂದರೆ ಏಕಮುಖವಾಗಿರದ ಭಾಷೆ, ಭಾಷೆಯನ್ನು ರೂಪಿಸಿದ ಜನಾಂಗ, ಸಂಸ್ಕೃತಿ, ಅವರ ಆಚರಣೆಗಳ ಕ್ರಿಯಾತ್ಮಕ ಬಗೆಗಳು, ಹಬ್ಬ, ಜಾತ್ರೆ, ವಿಧಿ, ವಿಧಾನಗಳ ಸಾಂಸ್ಕೃತಿಕ ಶೋಧಗಳೂ ಮುಖ್ಯವಾಗುತ್ತವೆ. ಜೊತೆಗೆ ಶಾಸನ, ವೀರಗಲ್ಲು, ಮಹಾಸತಿಕಲ್ಲುಗಳು, ಕೈಫಿಯತ್ತುಗಳೇ ನಮ್ಮ ನೆರವಿಗೆ ಬರುತ್ತವೆ. ಇಂದಿನ ಕನ್ನಡ ಅಸ್ಮತೆಯ ಹೊಸ ವಿವೇಕದ ಬಾಗಿಲನ್ನು ತೆರೆದಿರುವ ಕನ್ನಡ ಜನಪದ ಮಹಾಕಾವ್ಯಗಳೂ, ಆ ಕಾವ್ಯಗಳ ಸಾಂಸ್ಕೃತಿಕ ವೀರರೂ ಮುಖ್ಯ ಆಕರ ಶೋಧಗಳಾಗುತ್ತಾರೆ. ಕನ್ನಡದ ಕುಲಪಂಥಗಳ ಲೋಕಜ್ಞಾನವನ್ನು ವಿಸ್ತರಿಸಿದ ಹರಡಿರುವ ಮಂಟೇಸ್ವಾಮಿ, ಮಲೆಮಾದೇಶ್ವರ , ಮೈಲಾರಲಿಂಗ, ಜುಂಜಪ್ಪ ಮೊದಲಾದ ಸಾಂಸ್ಕೃತಿಕ ದೈವಪಂಥಗಳೂ ಈ ಅಸ್ಮಿತೆಯ ಭಾಗವಲ್ಲವೇ? ಈ ಅಂಶಗಳನ್ನು ಸಂಶೋಧಕರು ಪರಿಗಣಿಸಿ ಈ ಚರ್ಚೆಗಳನ್ನೂ ಪ್ರಬಂಧದ ನೆಲೆಗೆ ಅಳವಡಿಸಿಕೊಂಡರೆ ಉತ್ತಮವೆನ್ನುವ ಭಾವನೆ ನನ್ನದು.
ಡಾ. ನಿಂಗಪ್ಪ ಮುದೇನೂರು
ಸಹಾಯಕ ಪ್ರಾಧ್ಯಾಪಕರು,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
“ರೇಷ್ಮೆ ಬಟ್ಟೆಯ ನುಣುಪಿನ ಕಾರಣಕ್ಕೆ ಸಾವಿರಾರು ಮೈಲುಗಳ ಒರಟು ದಾರಿಯೊಂದು ಯವನದಿಂದ ಚೀನಾದವರೆಗೆ ತೆರೆದುಕೊಂಡು ...
“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...
"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...
©2024 Book Brahma Private Limited.