ಹೋಟೆಲ್ ಕೆಲಸದಿಂದ ಏಕಕಾಲಕ್ಕೆ ಹಲವು ಕೆಲಸಗಳ ಕಲೆ ಕಲಿತೆ: ಜೋಗಿ

Date: 22-02-2020

Location: ಸುಚಿತ್ರ ಫಿಲ್ಮಂ ಸೊಸೈಟಿ


ಹೋಟೆಲ್ ಕೆಲಸ ಮಾಡುತ್ತಿದ್ದಾಗ ಏಕಕಾಲಕ್ಕೆ ಹಲವಾರು ಕೆಲಸ ಮಾಡುವ ಅಗತ್ಯ ಹಾಗೂ ಅನಿವಾರ್ಯ. ಹೀಗಾಗಿ, ಮಲ್ಟಿಟಾಸ್ಕ್‌ ಕಲೆ ಎಂಬುದು ನನಗೆ ತಿಳಿಯದ ಹಾಗೇ ನನ್ನೊಳಗೆ ಇಳಿದಿತ್ತು ಎನ್ನುವ ಮೂಲಕ ಪತ್ರಕರ್ತ- ಸಾಹಿತಿ ಜೋಗಿ (ಗಿರೀಶರಾವ್ ಹತ್ವಾರ್) ಬರೆಹಗಾರರಾಗಿ ತಮ್ಮ ವ್ಯಕ್ತಿತ್ವ ರೂಪು ತಳೆದ ಬಗೆಯನ್ನು ಎಳೆಎಳೆಯಾಗಿ ಹಂಚಿಕೊಂಡರು. ನಗರದ ಸುಚಿತ್ರ ಫಿಲ್ಮ್ಂ ಸೊಸೈಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಜೋಗಿಯೊಂದಿಗೆ ಅವಲೋಕನ’ ಕಾರ್ಯಕ್ರಮದಲ್ಲಿ ತಮ್ಮ ವ್ಯಕ್ತಿಗತ ಬದುಕು, ಸಾಹಿತ್ಯ, ಪತ್ರಕರ್ತರ ವೃತ್ತಿ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಮಾತನಾಡಿದರು

ಹೋಟೆಲ್ ಕೆಲಸದಲ್ಲಿ ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಬೆಂಚುಗಳನ್ನುಒರೆಸುವುದು ಹೀಗೆ ಹಲವು ಕೆಲಸಗಳನ್ನು ಮಾಡಬೇಕಿತ್ತು. ಆ ಸ್ಥಳದಲ್ಲಿ ಕೆಲಸ ಮಾಡಬೇಕಾದರೆ ಅದೇ ಕನಿಷ್ಠ ಹಾಗೂ ಮೂಲ ಅರ್ಹತೆ. ಅದು ವ್ಯಕ್ತಿತ್ವದ ಭಾಗವೇ ಆಯಿತು. ಮುಂದೆ, ನಾನು ಅಕೌಂಟೆಂಟ್ ಆಗಿ ಕೆಲಸ ಮಾಡಿದೆ. ಅಲ್ಲಿಯೂ ಸಣ್ಣ ವಿಷಯದ ಮೇಲೂ ಲೆಕ್ಕಾಚಾರ ಆವರಿಸಿಕೊಳ್ಳುತ್ತಿತ್ತು ಎಂದರು.

ಐ ಅಮ್ ಎ ಬ್ಯಾಡ್‌ ರಿಪೋರ್ಟರ್‌ : ಅಕೌಂಟೆಂಟ್ ವೃತ್ತಿಯಿಂದ ಮಾಧ್ಯಮ ವಲಯ ಪ್ರವೇಶಿಸಿದೆ. ವಿಶೇಷವಾಗಿ, ಲಂಕೇಶ ಪತ್ರಿಕೆ ನನ್ನನ್ನು ರೂಪಿಸಿತು. ವಿಚಾರ-ಬರೆಹದ ದಾಟಿಯನ್ನು ಕಲಿಸಿತು. ‘ಹಾಯ್ ಬೆಂಗಳೂರು’ನಲ್ಲೂ ಅಂಕಣಗಳನ್ನು ಬರೆದೆ. ನಂತರ, ವೈ.ಎನ್.ಕೆ. ಅವರಂತಹ ಒಡನಾಟದ ಫಲವಾಗಿ ಕನ್ನಡಪ್ರಭದಂತಹ ಪತ್ರಿಕೆಗೆ ಬಂದೆ. ಆದರೆ, ನಾನೊಬ್ಬ ಬ್ಯಾಡ್ ರಿಪೋರ್ಟ್‌ರ್. ವರದಿ ಮಾಡುವುದು ನನ್ನಿಂದ ಈಗಲೂ ಸಾಧ್ಯವಾಗದು. ಹೀಗಾಗಿ, ಸಾಹಿತ್ಯ ಸ್ಪಂದನವಿರುವ ವಲಯವನ್ನೇ ಆಯ್ಕೆ ಮಾಡಿಕೊಂಡು ವೃತ್ತಿ  ಜೀವನ ನಡೆಸುವಂತಾಯಿತು ಎಂದರು.

ತೊದಲು ಬದಲು ಬರೆದೆ : ಸಾರ್ವಜನಿಕವಾಗಿ ಮಾತನಾಡಲು ನನ್ನೊಳಗೆ ಭಯವೋ, ಆತಂಕವೋ ಗೊತ್ತಿಲ್ಲ. ನಾನು ತೊದಲುತ್ತಿದ್ದೆ. ಈ ದೌರ್ಬಲ್ಯವನ್ನು ಮೀರಲು ಬರೆಯತೊಡಗಿದೆ. ಅದು ನನಗೆ ಅನಿವಾರ್ಯವೂ ಆಯಿತು. ಅಣ್ಣ ಐದು ವರ್ಷದವನಿದ್ದಾಗ ಯಕ್ಷಗಾನದ ಹಾಡುಗಳನ್ನು ಹೇಳುತ್ತಿದ್ದರೆ ತನಗೇಕೆ ಸಾಧ್ಯವಾಗುತ್ತಿಲ್ಲ ಎಂಬ ಅಳುಕು ಕಾಡುತ್ತಿತ್ತು ಎಂದು ಹೇಳಿಕೊಂಡರು.

‘ಜೋಗಿ’ ಜಗಳಾಡಿದ್ದು ಕಡಿಮೆ : ವೃತ್ತಿಯಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇರುತ್ತದೆ. ಅದನ್ನು ಜಗಳ ಅನ್ನುವಂತಿಲ್ಲ. ಆದರೆ, ಪಾರ್ಕಿನಲ್ಲಿ ಜಗಳವಾಡಿರಬಹುದು ಎಂದು ನಗೆಯ ಅಲೆ ಎಬ್ಬಿಸಿದರು. ‘ನನ್ನ ಪುಸ್ತಕದ ಬಹುತೇಕ ಶೀರ್ಷಿಕೆಗಳು ಗಿಮಿಕ್ ಉದ್ದೇಶದವಲ್ಲ; ‘ಪ್ರೀತಿಸಿದವನನ್ನು ಕೊಂಡು ಬಿಡಿ’  ಪುಸ್ತಕದ ಶೀರ್ಷಿಕೆಯಡಿ ಒಂದು ವಿಚಾರಪೂರ್ಣ ಸಾಲು ಇರುತ್ತದೆ. ಏಕಕಾಲಕ್ಕೆ ಒಂದು ಭಾವದ ಎರಡು ಮುಖಗಳನ್ನು ಪರಿಚಯಿಸುವುದು ಒಂದು ರೀತಿಯಲ್ಲಿ ಚಂದ ಎನಿಸುತ್ತದೆ. ನನಗೆ ಹೀಗೆ ಕೊಡಬೇಕು ಎನ್ನಿಸುತ್ತದೆ ಅಷ್ಟೆ’ ಎಂದು ಓದುಗರ ಪ್ರತಿಕ್ರಿಯೆಗೆ ಸ್ಪಂದಿಸಿದರು.

ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ್ ಅವರು ‘ಜೋಗಿ’ ಸಾಹಿತ್ಯ-ಬದುಕು -ಬರೆಹ ಕುರಿತು ಜೋಗಿ ಅವರೊಂದಿಗೆ ಅವಲೋಕಿಸಿದರು. ಕಿರುತೆರೆಯ ಧಾರಾವಾಹಿಯ ನಿರ್ದೇಶಕ, ನಟ ಟಿ. ಎನ್. ಸೀತಾರಾಮ್, ಚಲನಚಿತ್ರ ನಿರ್ದೇಶಕ ಬಿ. ಸುರೇಶ್, ಸಾಹಿತಿಗಳಾದ ಜಯಶ್ರೀ ದೇಶಪಾಂಡೆ, ಭಾರತಿ ಬಿ. ವಿ., ಜ್ಯೋತಿ ಗಿರೀಶ್ ರಾವ್ ಹತ್ವಾರ್‌, ಸಂಧ್ಯಾ ರಾಣಿ, ಪ್ರಕಾಶಕರಾದ ಜಮೀಲ್ ಸಾವಣ್ಣ, ರಮೇಶ್ ಉಡುಪ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...