ಹೊತ್ತು ಗೊತ್ತಿಲ್ಲದ ಕಥೆಗಳು

Date: 05-07-2021

Location: ಬೆಂಗಳೂರು


‘ಕತೆಯೆಂಬುದು ಇನ್ನೊಬ್ಬರಿಗಾಗಿ ಹೇಳಲಿಕ್ಕೆಂದು ಇದೆಯೋ ಅಥವಾ ತನಗೇ ತಾನು ಕೇಳಿಕೊಳ್ಳಲಿಕ್ಕೆ ಇದೆಯೋ ಎಂಬ ಅಚ್ಚರಿಯನ್ನು ರಶೀದರ ಕತೆಗಳು ಮೂಡಿಸುತ್ತವೆ’ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ಅಬ್ದುಲ್ ರಶೀದ್ ಅವರ ಹೊತ್ತು ಗೊತ್ತಿಲ್ಲದ ಕಥೆಗಳು ಕೃತಿಯ ಕುರಿತು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ಈ ಕತೆಗಳ ಬಗ್ಗೆ ಬರೆಯಲು ಹಲವು ದಿನಗಳಿಂದ ಯೋಚಿಸುತ್ತ ಬರೆಲಾಗದೇ ಹೋಗಿದ್ದೇನೆ. ಕತೆಗಳನ್ನು ಸುಮ್ಮನೆ ಆಸ್ವಾದಿಸಬೇಕು, ಅದನ್ನು ಬೌದ್ಧಿಕತೆಯ ಗಾಳಕ್ಕೆ ಸಿಕ್ಕಿಸಲು ಆಗುವುದಿಲ್ಲ ಎನಿಸಿದಷ್ಟೂ ಅವು ಪುಳಕ್ಕನೆ ಜಾರಿ ನಿಗೂಢ ಆಳದೊಳಗೆಲ್ಲೋ ಅವಿತುಕೊಂಡಿದ್ದು ಕಾಡುತ್ತವೆ. ಕತೆ ಚೌಕಟ್ಟಿಲ್ಲದ ಆಕಾಶದಂಥಹುದು. ಅದು ಮುಗಿದಂತೆ ತೋರಿದರೂ ಎಂದೂ ಮುಗಿಯುವುದಿಲ್ಲ. ಅದು ನಮ್ಮೊಳಗೆ ಬೆಳೆಯುತ್ತ ನಮ್ಮ ಸಂವೇದನೆಗಳನ್ನು ಹಿಗ್ಗಿಸುತ್ತ ಹೋಗುತ್ತದೆ. ಕತೆಯನ್ನ ನಮ್ಮ ಪ್ರತ್ಯೇಕ ನಿಲುವುಗಳಿಂದ, ಕರಾರುವಾಕ್ಕಾದ ನೋಟಗಳಿಂದ ಹಿಡಿಯಬೇಕೆಂಬ ಕಣ್ಣು ಬಾಡ ತೊಡಗುತ್ತದೆ. ಆನಂತರ ನಮ್ಮ ತರ್ಕಕ್ಕೆ ಸಿಗದ ಸ್ವಪ್ನಲೋಕದಂಥದೊಂದು ನಮ್ಮನ್ನು ಆವರಿಸಿಕೊಳ್ಳುತ್ತಾ ಅನುಭೂತಿಯಾಳದಲ್ಲಿ ನಮ್ಮನ್ನು ಮುಳುಗಿಸುತ್ತದೆ. ಅಲ್ಲಿಗೆ ನಾವು ಪರವಶಗೊಳ್ಳದೇ ವಿಧಿಯಿಲ್ಲ. ಅಬ್ದುಲ್ ರಶೀದರ ಕತೆಗಳ ಲೋಕದಲ್ಲಿ ಸಂಚರಿಸಿದಾಗಲೆಲ್ಲ ಹೀಗನಿಸಿದೆ. ಈ ಕತೆಗಳ ಮೇಲೆ ವಿಮರ್ಶೆಯ ಪರಿಭಾಷೆಗಳನ್ನು ಹೇರುವುದು ಎಷ್ಟು ಕೃತಕ ಎಂದೆನಿಸುವುದು ಕತೆಗಾರನ ಗೆಲುವು ಅಂತಲೇ ಅನಿಸುತ್ತದೆ. ತಮ್ಮ ಕತೆಗಳ ಕುರಿತು ಮಾತಾಡುತ್ತ ಅವರು “ಕತೆ ಹುಟ್ಟುವುದೂ ಅಲ್ಲ, ಹುಟ್ಟಿಸಲೂ ಆಗುವುದಿಲ್ಲ ಅದು ಇರುತ್ತದೆ. ಮುಟ್ಟಿದರೆ ಸಿಗುತ್ತದೆ” ಎನ್ನುತ್ತಾರೆ. ಕತೆಗಳೆಂಬ ಈ ಅನಂತ ಹರಿವನ್ನು ಕೆಲಕಾಲ ನಮ್ಮ ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳುವ, ಆ ಮೂಲಕ ಸ್ಪರ್ಷಿಸುವ ಅನುಭವಕ್ಕೆ ಪಕ್ಕಾಗುವುದೇ ನಾವು ಸಂವೇದಿಸಬೇಕಾದ ಕ್ರಮವೆಂಬ ಸೂಚನೆಯನ್ನು ಅವರು ಕೊಡುತ್ತಾರೆ. ಹಾಗಾದರೆ ಕತೆಗೂ ಕಾಲಕ್ಕೂ ಅಂತಃಸಂಬಂಧವೇನು? ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ. ಕಾಲದ ಪ್ರಶ್ನೆಗಳಿಗೆ ಕತೆಗಾರ ದನಿಯಾಗಬೇಕೇ? ಅಥವಾ ಕತೆಗಾರ ಪ್ರತ್ಯೇಕ ಕಾಲವೊಂದನ್ನು ನಿರ್ಮಿಸಿಕೊಳ್ಳುತ್ತಾನೆಯೇ? ಎಂಬ ಪ್ರಶ್ನೆ ಸರಿದು ಹೋಗುತ್ತದೆ. ಮನುಷ್ಯನ ಆದಿಮ ಭಾವನೆಗಳು ಎಲ್ಲ ಕಾಲಗಳಲ್ಲೂ ಗುಪ್ತನದಿಯಂತೆ ಒಳಗೊಳಗೆ ಹರಿದೇ ಇರುತ್ತವೆ. ಅದಕ್ಕೆ ನಮ್ಮ ಕಾಲದ ಮಾತುಗಳನ್ನು ಮಾತ್ರ ನಾವು ಕೊಡುತ್ತೇವೆ ಎಂಬುದು ಬಹುಶಃ ನಿಜವಿರಬಹುದು. ಅವರ ‘ಹೊತ್ತು ಗೊತ್ತಿಲ್ಲದ ಕತೆಗಳು’ ಇದನ್ನೇ ನಮಗೆ ದಾಟಿಸುತ್ತವೆ.

ಕಾಲದ ಫ್ರೇಮುಗಳನ್ನು ಕಳಚಿಟ್ಟು ಅಲೆಮಾರಿಯಂತೆ ಚಲಿಸುತ್ತಿರುವುದು ಎಷ್ಟು ಸರಳವೆನಿಸುತ್ತದೆಯೋ ಅದು ಅಷ್ಟೇ ಗಹನವಾದ ಸಂಗತಿಯೂ ಆಗಿಬಿಡುತ್ತದೆ. ಏಕೆಂದರೆ ನಿಶ್ಚಿತ ನೋಟಕ್ರಮಗಳು ಆಭ್ಯಾಸವಾದ ನಮಗೆ ಅದನ್ನು ಮೀರಿ ಸದಾ ಧುಮ್ಮಿಕ್ಕಿ ಹರಿಯುವ ಚೈತನ್ಯವನ್ನು ಅರಿಯುವುದು ಸವಾಲು. ಅದರ ಸಂಗಡ ಸುಮ್ಮನೇ ಹರಿಯುತ್ತಾ ಹೋಗುವುದು ಚಂದ. ಹೊಸನೋಟಗಳು ಮಾತ್ರ ನಮ್ಮನ್ನು ರೋಮಾಂಚಿತಗೊಳಿಸುತ್ತವೆ. ಕಥನಕ್ಕೆ ಅಂಥ ಬೆರಗಿನ ಕಂಪನ ವಿಸ್ತಾರ ಬೇಕು. ಈ ಗುಟ್ಟನ್ನು ರಶೀದರ ಕತೆಗಳು ಹೊಟ್ಟೆಯೊಳಗಿಟ್ಟುಕೊಂಡಿವೆ.

ಕತೆಯೆಂಬುದು ಇನ್ನೊಬ್ಬರಿಗಾಗಿ ಹೇಳಲಿಕ್ಕೆಂದು ಇದೆಯೋ ಅಥವಾ ತನಗೇ ತಾನು ಕೇಳಿಕೊಳ್ಳಲಿಕ್ಕೆ ಇದೆಯೋ ಎಂಬ ಅಚ್ಚರಿಯನ್ನು ರಶೀದರ ಕತೆಗಳು ಮೂಡಿಸುತ್ತವೆ. ಕತೆ ಹೇಳುವುದು ಬೇರೆಯಲ್ಲ ಕೇಳುವುದು ಬೇರೆಯಲ್ಲ ಎಂಬಂತಹ ಅನೂಹ್ಯ ಕಾಲವೊಂದು ಅಲ್ಲಿ ಸೃಷ್ಟಿಯಾಗುವ ಬೆರಗಿಗಾಗಿ ಅವರೊಳಗಿನ ಕತೆಗಾರ ಹಂಬಲಿಸುತ್ತಾನೆ. ಕತೆಯೆಂಬುದು ಒಂದು ರಾಗಾಲಾಪನೆಯ ಹಾಗೆ ಎಂದು ಅವರಿಗೆ ಕಂಡಿದೆ. ರಾಗದ ಆರೋಹ- ಅವರೋಹಗಳು ಮನಸ್ಸಿನ ಅಲೆಗಳೊಂದಿಗೆ ಒಂದಾಗುತ್ತ ನಾವೂ ಆ ರಾಗವೇ ಆಗಿಬಿಡುವ ಅನುರಾಗವಿದು. ಹಾಡುವವನ ರಾಗ ಕೇಳುವವನ ರಾಗದಲ್ಲಿ ಬೆರೆವ ಸಮ್ಮೋಹಕತೆ ಈ ಕತೆಗಳ ಹೆಚ್ಚುಗಾರಿಕೆ. ಕತೆ ಹೇಳುವುದು ಪ್ರಜ್ಞಾಪೂರ್ವಕ ಕ್ರಿಯೆಯಲ್ಲ ಎಂಬುದು ರಶೀದರ ಒಟ್ಟೂ ಕತೆಗಳ ಓದು ಹೊಮ್ಮಿಸುವ ಧ್ವನಿ. ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಕತೆ ಹೊಸೆಯುವ ಕಸುಬುದಾರಿಕೆಯಿಂದ ಸದಾ ಆಚೆಯೇ ನಿಲ್ಲುವ ಈ ‘ಹೊತ್ತುಗೊತ್ತಿಲ್ಲದ ಕತೆಗಳು’ ಸಧ್ಯದ ಹಂಗಿನಿಂದ ದೂರ ಉಳಿಯುತ್ತವೆ. ಸದ್ಯದ ರಾಜಕೀಯ ನಿಲುವುಗಳು ಹಾಗೂ ಸಾಹಿತ್ಯದ ಒಲವುಗಳಿಂದ ಹೊರತಾಗಿ ತನ್ನ ಸ್ವಾಯತ್ತ ನೆಲೆಯೊಂದನ್ನು ಕಟ್ಟಿಕೊಳ್ಳುವ ಬರಹಗಾರ ಸದಾ ತನ್ನಲ್ಲೇ ತನ್ಮಯಗೊಳ್ಳುವ ಗುಣ ಹೊಂದಿರುತ್ತಾನೆ. “ಅಕಾಲದಲ್ಲಿ ಬರೆಯುವವನು ಎಂತಹ ಅಭಿಜಾತ ಪ್ರತಿಭಾವಂತನಾಗಿದ್ದರೂ ಕಾಲ ಆತನನ್ನು ಅಂಡು ಒರೆಸುವ ಕಾಗದದಂತೆ ಬಳಸಿಕೊಳ್ಳುತ್ತದೆ. ಹಾಗಾಗಿ ತಂತ್ರಗಾರಿಕೆ ಕಲಾತ್ಮಕತೆ ಇತ್ಯಾದಿಗಳಿಂದ ಸುಸ್ತುಹೊಡೆಸಿಕೊಳ್ಳದೆ ಬದುಕಿನ ಇತರ ಸೌಂದರ್ಯಗಳತ್ತ ಮುಖಮಾಡುವುದು ಜಾಣತನ ಎಂಬುದು ನನ್ನ ಅನುಭವ” ಎನ್ನುವ ಕತೆಗಾರರು ಬದುಕಿನ ಚೆಲುವನ್ನು ಅದರ ರಹಸ್ಯಮಯತೆಯಲ್ಲಿ, ಅನುಭವಗಳ ಅತಾರ್ಕಿಕತೆಯಲ್ಲಿ, ಐಂದ್ರಿಕಾನುಭೂತಿಯಲ್ಲಿ ಅರಳುವ ಮನುಷ್ಯಸಹಜ ವಾಂಛೆಗಳಲ್ಲಿ ಕಾಣುತ್ತ ಹೋಗುತ್ತಾರೆ. ಹಾಗೆ ಕಂಡಿದ್ದನ್ನು ಎಲ್ಲಿಯೂ ವಾಚ್ಯಗೊಳಿಸದೇ ಧ್ವನಿಪೂರ್ಣ ಸೂಕ್ಷ್ಮತೆಯಲ್ಲಿ ಕಟ್ಟುತ್ತಾರೆ. ಕಾವ್ಯದ ಮಾಂತ್ರಿಕತೆ ಕತೆಗಳಲ್ಲಿ ಸುಳಿದಾಡುವುದರಿಂದಲೇ ಅವರ ಕತೆಗಳು ಅನನ್ಯವೆನಿಸುತ್ತವೆ.

ಕತೆಯ ನಿರೂಪಕ ತನ್ನ ಕತೆಯನ್ನೇ ಹೇಳಿಕೊಂಡಂತಿರುವ ಇಲ್ಲಿನ ಅನೇಕ ಕತೆಗಳು, ಬಾಲ್ಯದ ಸ್ಮೃತಿಗಳನ್ನು ಗಾಢವಾಗಿ ಕಟ್ಟಿಕೊಡುವ ಅನುಭವ ಸಾಂದ್ರತೆಯಿಂದಾಗಿ ಆವರಿಸಿಕೊಳ್ಳುತ್ತಾ ಹೋಗುತ್ತವೆ. ಕೊಡಗು ಹಾಗೂ ದಕ್ಷಿಣ ಕನ್ನಡದ ಪರಿಸರ, ಕಾಫಿತೋಟಗಳ ಪರಿಮಳ, ಮಂಜು ಮುಸುಕಿದ ಮಲೆಗಳ ಅಲೌಕಿಕ ಚೆಲುವು, ಸಮುದ್ರದ ಮೊರೆತ, ಕಾಡು ಕಣಿವೆಗಳ ಕಾಲಾತೀತ ಚೆಲುವುಗಳು ಕತೆಯ ಪಾತ್ರಗಳೇ ಆಗಿ ಜೀವಂತವೆನಿಸುತ್ತವೆ. ಇಂಥ ಪ್ರಕೃತಿಯ ಲೀಲೆಯಲ್ಲಿ ಕ್ಷಣಭಂಗುರವಾದ ಮನುಷ್ಯ ಪ್ರಪಂಚದ ಕೇಡುಗಳು, ವಾಂಛೆಗಳು, ಮೋಹಗಳು, ಅಸಹಾಯ ಸುಯ್ಲುಗಳು ಸುಳಿದಾಡುತ್ತವೆ. ಪ್ರಕೃತಿಯ ಲಯವನ್ನೂ ಭಾವಪ್ರಪಂಚದ ಲಯವನ್ನೂ ಗ್ರಹಿಸಿ ಸಜೀವವಾಗಿ ಹಿಡಿದಿಡುವ ಬಗೆ ರಶೀದರ ಕತೆಗಾರಿಕೆಯ ಶ್ರೇಷ್ಠತೆ. ‘ಈ ಮಳೆಯ ನಂತರ’ ಎಂಬ ಕತೆ ಒಂದು ಊರು ಸೃಷ್ಟಿಯಾಗುವ ಹಾಗೂ ನಾಶವಾಗುವ ವಾಸ್ತವ ಸಂಗತಿಗಳನ್ನು ನಿರೂಪಿಸುತ್ತಲೇ ಅಲ್ಲಿ ಬದುಕುತ್ತಿರುವ ಮನುಷ್ಯಲೋಕದ ಕಡುಮೋಹದ ರಾಗಾಲಾಪವನ್ನು ಅದರ ವಿಸಂಗತಿಗಳನ್ನು ಮಿಂಚಿನಂತೆ ಹೊಳೆಯಿಸುತ್ತ ಹೋಗುತ್ತದೆ. ಕತೆಯು ತಾರ್ಕಿಕ ಅಂತ್ಯವನ್ನು ಪಡೆಯದೇ ಮುಗಿಯದ ಅಚ್ಚರಿಯನ್ನು ಉಳಿಸಿಬಿಡುತ್ತದೆ. ರಸ್ತೆಯೊಂದು ಯಾವ ಗಮ್ಯಗಳನ್ನೂ ತಲುಪಿಸುವ ಗೋಜಿಗೆ ಹೋಗದೇ ತನ್ನಪಾಡಿಗೆ ಬಿದ್ದುಕೊಂಡಿರುವಂತೆ ಮನುಷ್ಯ ವ್ಯಾಪಾರಗಳಿಗೆ ಸಾಕ್ಷಿಯಾಗಿ ಉಳಿದುಬಿಡುತ್ತದೆ.

ಕಾಫಿತೋಟಗಳು, ತೇಗದ ನೆಡುತೋಪು, ಬೀಟೆ, ಸಿಲ್ವರ್ ಮರಗಳು, ಕಾಫಿ, ಕಿತ್ತಳೆ, ಕರಿಮೆಣಸು ಬೆಳೆವ ಬೆಟ್ಟಗಳು, ಇದನ್ನೆಲ್ಲ ಹಾದುಹೋಗುವ ರಸ್ತೆ, ಹಾಡಿಗಳಲ್ಲಿ ವಾಸಿಸುವ ಜೇನುಕುರುಬರು, ಮಾವುತರು ಹಾಗೂ ಅವರ ಸೊರಗಿದ ಆನೆಗಳನ್ನು ಅಲ್ಲಲ್ಲಿ ಎದುರಾಗುತ್ತದೆ. ಅಂಥಲ್ಲಿ ಒಂದೂರು. ಚರ್ಚು, ಮಸೀದಿ, ಅಯ್ಯಪ್ಪಸ್ವಾಮಿ ದೇವಾಲಯ, ಸರ್ಕಾರಿಶಾಲೆ, ದನದ ಆಸ್ಪತ್ರೆ, ಹೀಗೆ ಒಂದು ಊರಿನ ಚಹರೆ ರೂಪುಗೊಂಡಿದೆ. ಅಂಥ ಊರಲ್ಲಿ ಕೇಶವ ನಾಯರ್ ಹಾಗೂ ಸುಶೀಲ ಟೀಚರ್ ನಡುವಿನ ಫಲಿಸದ ಪ್ರೇಮದ ವಿಲಕ್ಷಣ ಕತೆಯೊಂದಿದೆ. ಸುಶೀಲ ಟೀಚರ್ ಯೋಧನಾಗಿದ್ದ ಗಂಡ ಯುದ್ಧದಲ್ಲಿ ಕಾಣೆಯಾಗಿ ಸತ್ತುಹೋಗಿದ್ದಾನೆಂದೇ ತಿಳಿದವ ಕೊನೆಯಲ್ಲಿ ವಾಪಸಾಗಿ ನಿರೂಪಕನೊಂದಿಗೆ ರಮ್ಮಿ ಆಡುತ್ತ ಹಾಯಾಗಿರುತ್ತಾನೆ!. ಈ ನಡುವೆ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಅವಳ ಮಾವ ಆಗಾಗ ಬಂದುಹೋಗುತ್ತ ಅವರ ನಡುವಿನ ಒಂದು ಹೆಸರಿಲ್ಲದ ಗುಪ್ತ ಪ್ರಣಯದ ಸೂಚನೆಯು ಕತೆಯ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಪ್ರೇಮಪತ್ರಗಳಲ್ಲಿ ಮಾತ್ರ ಅಮೂರ್ತವಾಗಿ ಪ್ರೇಮಿಸುವ ಕೇಶವ ನಾಯರ್ ಹೆಣವಾಗಿ ಹೋದಾಗ ಅವನ ಪ್ರೇಮಪತ್ರಗಳೂ ಅವನೊಂದಿಗೆ ಸುಟ್ಟುಹೋಗುತ್ತವೆ. ಹೊರಗಿನಿಂದ ಗಂಭೀರವಾಗಿ ಕಾಣುತ್ತಿದ್ದ ಸುಶೀಲ ಟೀಚರ್ ಮನದಾಳದ ನೆರಳು ಬೆಳಕುಗಳು ನಮ್ಮ ಗ್ರಹಿಕೆಯಾಚೆ ಉಳಿದುಬಿಡುತ್ತವೆ. ನೈತಿಕ, ಅನೈತಿಕವೆಂಬ ತೀರ್ಮಾನಗಳ ಆಚೆ ಉಳಿದುಬಿಡುವ ಈ ಮನುಷ್ಯ ಪ್ರವೃತ್ತಿಯ ನಿಗೂಢತೆ ನಿರೂಪಕನ ಕಣ್ಣಲ್ಲಿ ಹಾಗೇ ಬಿಂಬದಂತೆ ಉಳಿಯುತ್ತದೆ. ಈ ಲೋಕದಲಿ ಇರುವುದು ನಾವು ಮಾತ್ರವೇನೋ, ಈ ಉದ್ದರಸ್ತೆ ಹಾದುಹೋಗಿರುವುದು ನಮ್ಮೂರಿಂದಾಗಿ ಮಾತ್ರವೇನೋ ಎಂಬ ಮುಗ್ಧನಂಬಿಕೆಯ ಪುಟ್ಟ ಜಗತ್ತು ಅಭಿವೃದ್ದಿಯ ಹೆಸರಿನಲ್ಲಿ ಇಲ್ಲವಾಗುವುದು ಚೋದ್ಯ. ಮಳೆಗಾಲ ಬಂದರೆ ಈ ಊರು ಇರುವುದಿಲ್ಲ ಕಾಳಿಂಗಸರ್ಪದಂಥ ರಸ್ತೆ ಮಾತ್ರ ಸುರುಳಿಸುತ್ತಿಕೊಂಡು ಕಾಫಿತೋಟಗಳ ನಡುವೆ ಇಳಿದು ಹೋಗುತ್ತಿರುತ್ತದೆ ಎಂದು ಹಲವು ಉಮ್ಮಳಗಳನ್ನು ಉಳಿಸಿ ಕೊನೆಯಾಗದೇ ಉಳಿವ ಕತೆ ನಮ್ಮನ್ನು ಅಲುಗಾಡಿಸಿ ಬಿಡುತ್ತದೆ. ಚರಿತ್ರಾತೀತವಾಗಿ ಉಳಿದ ಕಾಡು ಕಣಿವೆಗಳ ಬೃಹತ್ ಜಗತ್ತು ಹಾಗೂ ಮನುಷ್ಯನ ಎಡಬಿಡಂಗಿತನಗಳ ಕ್ಷಣಿಕ ಜಗತ್ತನ್ನು ಮುಖಾಮುಖಿಯಾಗಿಸುವ ಮೂಲಕ ಕತೆಗಳಿಗೆ ಒಂದು ತೀವೃತೆ ಉಂಟಾಗುವಂತೆ ರಶೀದ್ ಸದಾ ನೋಡಿಕೊಳ್ಳುತ್ತಾರೆ. ಹಿಂದೂ ಮುಸ್ಲಿಂ ಗಲಭೆಗೆ ಸಿಲುಕಿ ಸುಟ್ಟು ಕರಕಲಾದ ಇಸಬುವಿನ ತಟ್ಟಿ ಹೋಟೆಲಿನಿಂದ ತೆರೆದುಕೊಳ್ಳುವ ‘ಮಣ್ಣಾಂಗಟ್ಟಿ’ ಎಂಬ ಕತೆ ಮನುಷ್ಯ ಸಂಬಂಧಗಳ ವಿಚಿತ್ರ ವಿನ್ಯಾಸಗಳನ್ನು ತೆರೆದಿಡುತ್ತ ಹೋಗುತ್ತದೆ. ಮನುಷ್ಯನೊಳಗಿನ ಅಸ್ವಸ್ಥ ಲೋಕವು ತನ್ನ ಅಸಂಗತ ತೀರ್ಮಾನಗಳಲ್ಲಿ ಛಿದ್ರವಾಗುತ್ತಲೇ ಇರುವದನ್ನು ಕಾಣಿಸುವ ಕತೆಯಿದು. ದೇವರ ಭಯ, ಧರ್ಮದ ಭಯ, ಸೈತಾನನ ಭಯ, ಎಲ್ಲವೂ ಬದುಕನ್ನು ಛಿದ್ರಗೊಳಿಸುತ್ತವೆ. ಇವುಗಳ ಆಳದಲ್ಲಿ ಇರುವ ಮನುಷ್ಯನ ಸ್ವಾರ್ಥ, ಅಧಿಕಾರ ಪ್ರವ್ರತ್ತಿ, ಕಾಮ ಎಲ್ಲವೂ ಕಂಗೆಡಿಸುತ್ತವೆ. ಆದರೆ ಈ ಬದುಕನ್ನು ಸುತ್ತುವರೆದ ಸ್ವರ್ಗಸದೃಶ ಪ್ರಕೃತಿ ಈ ಎಲ್ಲವುಗಳ ನಶ್ವರತೆಯನ್ನು ಅಣಕಿಸುವಂತೆ ತೋರುತ್ತದೆ. ‘ದೇವರಕೊಲ್ಲಿಯ ತಿರುವಿನ ಆ ಸ್ವರ್ಗಸದೃಶ ಪರಿಸರದಲ್ಲಿ ಮಂಜು ಮುಸುಕಿಕೊಳ್ಳಲು ತೊಡಗಿತ್ತು. ಕಾಡೂ ನದಿಯೂ ರಸ್ತೆಯೂ ಹೋಟೆಲ್ಲೂ ಮಲೆಗಳೂ ಮನುಷ್ಯರೂ ಎಲ್ಲವೂ ಮಂಜಿನೊಳಗೆ ಸಿಲುಕಿಕೊಂಡು ಇಲ್ಲಿ ಸಾವಿರಾರು ವರ್ಷಗಳಿಂದ ಒಂದು ಹುಲ್ಲುಕಡ್ಡಿಯೂ ಬದಲಾಗಿಲ್ಲ ಎನ್ನುವ ಸುಳ್ಳುನಂಬಿಕೆ ಹುಟ್ಟಿಸುತ್ತಿತ್ತು.” ಮನುಷ್ಯರ ಅಸಂಗತತೆಯನ್ನು ಕಲಸಿ ಬಿಸಾಕುವ ಕಾಲ ಹಾಗೂ ಮೇಲೆ ಹೊದೆಸಿದ ಪ್ರಕೃತಿಯ ಆಚ್ಛಾದಗಳು ಕತೆಯನ್ನು ಸಂಕೀರ್ಣಗೊಳಿಸಿವೆ.

ಇಲ್ಲಿನ ಕತೆಗಳ ಮಾಯಕತೆಯ ಮೂಲವನ್ನು ಹುಡುಕಿಹೊರಟರೆ, ಜಗತ್ತಿನ ಎಲ್ಲ ಸಂಸ್ಕೃತಿಗಳ ತಳದಲ್ಲಿ ಇರಬಹುದಾದ ಒಂದು ಗುಪ್ತಲೋಕಕ್ಕೆ ಅದು ನಮ್ಮನ್ನು ಕರೆದೊಯ್ಯುತ್ತದೆ. ಮಿಸ್ಟಿಕ್ ಆದ ಅನುಭವಗಳು, ಮನುಷ್ಯ ಪ್ರಜ್ಞೆಯ ನಿಗೂಢ ಸಂಗತಿಗಳು, ಕನಸು ಹಾಗೂ ವಾಸ್ತವಗಳು ಅಭೇದವಾಗಿ ಬೆರೆತ ವಿಶಿಷ್ಟ ಮನಸ್ಥಿತಿ ಎಲ್ಲವನ್ನೂ ಈ ಕತೆಗಳು ತೆಕ್ಕೆಹಾಯುತ್ತವೆ. ಅತೀಂದ್ರಿಯವಾದದ್ದು ಹಾಗೂ ಇಂದ್ರಿಯ ಜಗತ್ತುಗಳು ಕಲೆಸಿಹೋಗುವ ಸಂಕೀರ್ಣ ಸ್ಥಿತಿಯೊಂದನ್ನು ನಮ್ಮ ಪ್ರಜ್ಞೆಗೆ ವರ್ಗಾಯಿಸುವ ಕತೆಗಳು ದಿಗ್ಭ್ರಮೆಗೊಳಿಸುತ್ತವೆ. ಈ ಸಂಕಲನದ ಮುನ್ನುಡಿಯಲ್ಲಿ ರಾಜೇಂದ್ರ ಚೆನ್ನಿಯವರು ಇದನ್ನು ಪ್ರಸ್ತಾಪಿಸುತ್ತಾರೆ. ಈ ಮಾಂತ್ರಿಕತೆಯನ್ನು ರಶೀದ್ ಮಾರ್ಕೇಜ್‍ನ ಮ್ಯಾಜಿಕಲ್ ರಿಯಲಿಸಮ್ ನಿಂದ ಕಲಿತರು ಎಂದನಿಸಿದರೂ, ಸ್ವತಃ ಮಾರ್ಕೇಜ್ ಅದನ್ನು ಉಮ್ಮಾಗಳಿಂದ ಕದ್ದ! ಎನ್ನುತ್ತಾರೆ. “ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ಉಮ್ಮಾಗಳ ಒಂದು ಗುಪ್ತಸಮಾಜವಿದೆ. ಈ ಉಮ್ಮಾಗಳು ದೇವರಕೊಲ್ಲಿಯಿಂದ ಕೊಲಂಬಿಯಾದ ಮಾಕೆಂಡೋವರೆಗೆ ಅಮೇರಿಕದ ದಕ್ಷಿಣ ರಾಜ್ಯವಾದ ಓಹಿಯೋನಿಂದ ಚಿಲಿಯ ಸ್ಯಾಂತಿಯಾಗೋವರೆಗೆ ಭಾಷೆಯೇ ಬೇಕಿರದ ಟೆಲಿಪತಿಯ ಮೂಲಕ ಜಗತ್ತಿನೆಲ್ಲಾ ಕತೆಗಳನ್ನು ಸೃಷ್ಟಿಸಿಬಿಟ್ಟಿದ್ದಾರೆ.” ಅಂಥ ಜಗತ್ತಿನ ಅರಿವಿನಲ್ಲಿ ತಮ್ಮ ಸಂವೇದನೆಗಳ ಮೂಲವನ್ನು ಹುಡುಕಿಕೊಳ್ಳುವ ಕ್ರಿಯೆಯೊಂದು ಇಲ್ಲಿ ಸಂಭವಿಸಿದೆ. ತಮ್ಮ ಕತೆಗಳ ಮೂಲಕ ಆ ಪರ್ಯಾಯ ಜಗತ್ತೊಂದನ್ನು ಕಟ್ಟುವ ಕಲೆಗಾರಿಕೆಯೂ ಇಲ್ಲಿ ಮೇಳೈಸಿದೆ. ಬರೆಯುವ ಪ್ರಕ್ರಿಯೆಯಲ್ಲಿ ಬಾಹ್ಯಪ್ರಜ್ಞೆ, ಕನಸು, ಸುಪ್ತಪ್ರಜ್ಞೆ ಎಲ್ಲವನ್ನೂ ಏಕಕಾಲಕ್ಕೆ ತೊಡಗಿಸುವ ಈ ಸಾಧ್ಯತೆಯನ್ನು ಕನ್ನಡದಲ್ಲಿ ಬೇಂದ್ರೆ, ದೇವನೂರು ಮಹಾದೇವರಂಥವರಲ್ಲೂ ಕಾಣಬಹುದು. ರಶೀದರ ಕತೆಗಳಲ್ಲಿ ಬರುವ ಸೈತಾನ, ಇಬಿಲಿಸ್, ಜಿನ್‍ಗಳು, ಪಡೆದವನು ಇವರೆಲ್ಲ ನಿಗೂಢ ವಿಶ್ವವೊಂದರ ವ್ಯಕ್ತ ಸಂಕೇತಗಳಂತೆ ಕಂಡುಬರುತ್ತಾರೆ.

‘ಪ್ರಾಣಪಕ್ಷಿ’ ಕತೆಯಲ್ಲಿ ಬರುವ ಪಂಡಿತ್ ಅಹಮದ್ ಹಾಜಿ ಎಂಬ ಹಸ್ತಸಾಮುದ್ರಿಕೆ ಹೇಳುವ ಮುದುಕನ ಪರಿಭಾವಿಸುವಿಕೆಯಲ್ಲಿ ಗುಪ್ತವಿಶ್ವದ ಮಾಂತ್ರಿಕ ವಿವರಗಳಿವೆ. ಅವನ ಗೂಡಂಗಡಿಯೊಳಗೆ ಇಂಥ ವಿಶ್ವವೇ ನೆರೆದಿರುವುದು. ಗೂಡಂಗಡಿಯಿಂದ ಅವರು ಹೊರನಡೆದಾಗ ಒಳಗೆ ಕಬ್ಬಿಣದ ಪೆಟ್ಟಿಗೆಯೊಳಗೆ ಶೀಷೆಯೊಳಗೆ ಬಿರಡೆ ಹಾಕಿ ಕೂಡಿ ಹಾಕಲ್ಪಟ್ಟ ಜಿನ್ನುಗಳ, ಸೈತಾನರ, ಇಬಲೀಸುಗಳ,ಮಾಟಗಾರ್ತಿಯರ ಪ್ರಾಣಪಕ್ಷಿಗಳು ಕುಲಕಿಕೊಂಡು ನಿಟ್ಟುಸಿರಿಡಲು ತೊಡಗುವವು. ಹಾಗೆ ನೋಡಿದರೆ, ಪಂಡಿತ್ ಹಾಜಿಗೇ ತಾವು ಮನುಷ್ಯನೋ ಮೃಗವೋ ಎಂದು ಗೊತ್ತಿಲ್ಲ. ಕಡಲಲ್ಲಿ ತೇಲಿಬಂದ ಶೀಷೆಯೊಂದರ ಬಿರಡೆಯನ್ನು ಯಾರೋ ತೆರೆದಾಗ ಹೊರಬಂದ ಜಿನ್ನಿನಂತಹ ಪ್ರಾಣಪಕ್ಷಿ ತಾವು ಎಂದು ಸ್ವತಃ ಅವರಿಗೇ ಅನಿಸುತ್ತಿರುತ್ತದೆ. ಯಾರದೋ ದೇಹದೊಳಗೆ ಇನ್ಯಾರದೋ ಪ್ರಾಣಪಕ್ಷಿನ್ನು ಸೇರಿಸುವ ಮಾಂತ್ರಿಕ ವಿದ್ಯೆ ಬಲ್ಲ ಈ ವ್ಯಕ್ತಿಯ ಕತೆಯೇ ಒಂದು ಸೋಜಿಗದಂತೆ ಸುತ್ತಿಕೊಳ್ಳತ್ತದೆ. ಮಲೆಯಾಳ ಮಾಂತ್ರಿಕರೊಡನೆ ಕದನವಾಡಿ ಕುಟ್ಟಿಚಾತ್ತನ್ ದೈವವನ್ನು ಕೈವಶಮಾಡಿಕೊಂಡು, ಕೊಡಗುದೇಶದ ಗಾಳಿ ದೇವರುಗಳನ್ನು ಆವಾಹಿಸಿಕೊಂಡು, ಬಾಗ್ದಾದ್ ಸೇರಿ, ಕಹಬಾದ ಕರಿಶಿಲೆ ತಬ್ಬಿಕೊಂಡು, ಕಾಡುದಾರಿಯಾಗಿ ಕಾಶ್ಮೀರ ತಲುಪಿ.. ಹೀಗೆ ಈ ಅಲೆಮಾರಿತನದಲ್ಲಿ ಸಿದ್ದಿಸಿಕೊಂಡ ಸಿದ್ದಿಗಳ ವಿವರಗಳಲ್ಲಿ ರಹಸ್ಯಮಯತೆಯಿದೆ. ಮಿಶ್ರಸಂಸ್ಕೃತಿಯ ಗುಪ್ತಸಮಾಜದ ಒಳದಾರಿಗಳು ನಿಗೂಢವಾಗಿ ಕಾಡುತ್ತವೆ. ಕತೆಯ ಕೊನೆಯಲ್ಲಿ ಕೂಡ ಪಂಡಿತ ಹಾಜಿಯ ‘ಯಾರ ಪ್ರಾಣಪಕ್ಷಿಯನ್ನು ಯಾವಜೀವದಲ್ಲಿ ಇರಿಸಿದೆ’ ಎಂಬ ವಿಹ್ವಲತೆಯಲ್ಲಿಯೇ ಅನುರಣಿಸುತ್ತದೆ.

ಕಪ್ಪುಹುಡುಗನ ಹಾಡು, ಸಂಪೂರ್ಣ ಪಾರಿಜಾತ, ಒಂದು ಪುರಾತನ ಪ್ರೇಮ, ಇಂಥ ಕತೆಗಳು ತಮ್ಮ ಕಾವ್ಯಾತ್ಮಕ ತೀವ್ರತೆ ಹಾಗೂ ಪ್ರಜ್ಞೆಯಾಳದಲ್ಲಿ ಹರಿವ ನದಿಯ ಸಂಗೀತವನ್ನು ಕೇಳುವಂಥ ಬೆಡಗು ಹಾಗೂ ಬೆರಗಿನಿಂದ ಅಚ್ಚೊತ್ತುತ್ತವೆ. ಅವರ ಆರಂಭದ ಕತೆಗಳಾದ ಹಾಲುಕುಡಿದ ಹುಡುಗಾ ಮತ್ತು ಮೂಸಾಮೊಯಿಲಿಯಾರರ ಮುದ್ದಿನಮಗಳು ಎಂಬ ಕತೆಗಳಲ್ಲೂ ಇದೇ ಮಾಯಕತೆಯಿದೆ. ಆದ್ದರಿಂದಲೇ ಅವರ ಕತೆಗಳು ಕನ್ನಡದ ಸಂವೇದನೆಗೆ ಹೊಚ್ಚಹೊಸಸೇರ್ಪಡೆಗಳಂತೆ ಕಂಡವು. ಮಾತಿಗೆ ಮೀರಿದ ಸ್ಪಂದನೆಗಳನ್ನು ಕತೆಯಾಗಿಸುವ ಲಯಗಾರಿಕೆಯಿಂದಾಗಿ ಅವು ನಮ್ಮನ್ನು ಸೆಳೆದವು. ಹಮೀದೆ ಎಂಬ ಬಾಲಕನ ಅಸ್ತಿತ್ವದ ಹುಡುಕಾಟದಿಂದ ಆರಂಭವಾಗುವ ಕತೆ ‘ಕಪ್ಪುಹುಡುಗನ ಹಾಡು’. ತನ್ನ ತಾಯಿ ಯಾರು ಎಂದು ತಳಮಳಿಸುವ ಅವನ ತಬ್ಬಲಿತನ ಹಾಗೂ ಸಾರಾ ತಾತಾ ಎಂಬ ಹೆಂಗಸಿನ ತಾಯ್ತನಗಳ ನಡುವೆ ಕತೆ ಜೀಕುತ್ತ ಮನುಷ್ಯನೊಳಗಿನ ಸುಪ್ತರಾಗಗಳನ್ನು ಕೇಳಿಸುತ್ತದೆ. ಕನ್ನಡಿಯ ಮುಂದೆ ಕನ್ನಡಿ ಹಿಡಿದಾಗ ಅಸಂಖ್ಯ ಕನ್ನಡಿಗಳು ಕಾಣುವಂತೆ ಈ ಕತೆಯೊಳಗೊಂದು ಕತೆ ತೆರೆದುಕೊಳ್ಳತ್ತಾ ಕತೆಗಳ ಕಾಡನ್ನೇ ಹೊಕ್ಕ ಅನುಭವವಾಗುತ್ತದೆ. ತಾಯ್ತನದ ತುಡಿತವೇ ಒಂದು ಭಾಷೆಯಾಗಿ ಇಬ್ಬರ ನಡುವೆ ಅಗೋಚರವಾಗಿ ಹರಿಯುವಾಗ ಹಮೀದೆಗೆ ಸಾರಾತಾತಾಳೇ ತನ್ನ ತಾಯಿಯೆಂದು ಗಾಢವಾಗಿ ಅನಿಸುತ್ತದೆ. ಅವಳು ಹೇಳುವ ಮುತ್ತುಮೋಳುವಿನ ಕತೆಯಲ್ಲಿ ಬರುವ ಕಪ್ಪುಹುಡುಗನೇ ತನ್ನ ತಂದೆಯೆಂದೂ, ಮುತ್ತುಮೋಳುವೇ ಅವಳೆಂದೂ ತಿಳಿಯುತ್ತದೆ. ಕಾಣದ ಕಪ್ಪುಹುಡುಗನ ಪೀಪಿ ದನಿಗೆ ಮನಸೋತು ಪರವಶಳಾಗುವ ಮುತ್ತುಮೋಳು ಅವನಿಂದ ಮಗುವೊಂದನ್ನು ಪಡೆದು ಕಾಡುಪಾಲಾಗುತ್ತಾಳೆ. ಕೊನೆಯಲ್ಲಿ ಅವಳೊಂದು ಕಾಫಿಗಿಡವಾಗಿ, ಅವಳ ಕೂಸಿನ ಥರಥರದ ಕಣ್ಣುಗಳು ಕಾಫಿ ಹೂವುಗಳಾಗಿ ಕಾಫಿಕಾಡೇ ಅಲ್ಲಿ ನಿರ್ಮಾಣವಾಗುತ್ತದೆ. ಜನಪದ ಕತೆಗಳ ಈ ಮಾಯಕಸತ್ಯವನ್ನು ತನ್ನ ವಾಸ್ತವದ ಕತೆಗೆ ತಳುಕುಹಾಕಿ ಹೇಳುವ ಸಾರಾತಾತಾ ಮುಗಿಯದ ಕತೆಗಳ ಅನೂಹ್ಯ ಸಾಧ್ಯತೆಯಾಗಿ ತೋರುತ್ತಾಳೆ. ಒಂದು ಪುರಾತನ ಪ್ರೇಮ ಕತೆಯಲ್ಲಿ ಬರುವ ಪಾತುಂಞ ಕೂಡ ಸ್ವತಃ ಇಂಥ ಮೋಹಕ ಸಾಧ್ಯತೆ. ತಾನು ಬೆಳ್ಳೆಕ್ಕಾರ ಅಂದರೆ ಬ್ರಿಟಿಷ್ ದೊರೆಯ ಮೊಮ್ಮಗಳೆಂದು ಭಾವಿಸುವ ಆಕೆ ತನ್ನ ಬೆಳ್ಳಗಿನಮೈಯನ್ನು ತೋರಿಸಲೆಂದೇ ನದಿಯಲ್ಲಿ ಮೀಯುತ್ತಾಳೆ. ವಿಪರ್ಯಾಸವೆಂದರೆ ಆಕೆ ಕುರುಡುಗಂಡನ ಹೆಂಡತಿ!. ಮೌಲಾನಾ ಕುಟ್ಟಿ ಎಂಬ ಗಂಡಸು ಅವಳು ತನ್ನವಳೆಂದು ಭ್ರಮಿಸುತ್ತಾ ಇಡೀ ಆಯಸ್ಸು ಅವಳಿಗಾಗಿ ಕಾಯುತ್ತಾನೆ. ಅವಳು ನದಿಯಲ್ಲಿ ಮೀಯುವುದನ್ನು ನೋಡುವ ಸ್ವರ್ಗೀಯ ಅನುಭೂತಿ ಅವನಿಗೆ ಜಗತ್ತಿನ ಎಲ್ಲ ಲೌಕಿಕವ್ಯವಹಾರಗಳಾಚಿನದು. ಇದನ್ನೆಲ್ಲ ಬಾಲ್ಯದಲ್ಲಿ ಗಮನಿಸುವ ನಿರೂಪಕ ಎಷ್ಟೋ ವರ್ಷಗಳ ನಂತರ ಈ ಇಬ್ಬರು ಅಮರಪ್ರೇಮಿಗಳಾದ ಮುದುಕರನ್ನು ಬಸ್ ಸ್ಟ್ಯಾಂಡಿನಲ್ಲಿ ಭೇಟಿಯಾಗುತ್ತಾನೆ. ಹೋಟೇಲೊಂದರ ಮುಂದೆ ಉಪವಾಸ ಮುರಿಯಲು ತಿನ್ನಲು ಏನಾದರೂ ಕೊಡಿ ಎಂದು ಕೈಯೆತ್ತಿ ಬೇಡುವ ಇವರನ್ನು ಕಂಡು ಕಣ್ತುಂಬಿಕೊಳ್ಳುವ ನಿರೂಪಕನ ಪ್ರಜ್ಞೆಯಲ್ಲಿ ಅವರಿಬ್ಬರೂ ಅಲೌಕಿಕ ಪ್ರಭೆಯಲ್ಲಿ ಹೊಳೆಯುತ್ತಾರೆ. ಪ್ರೇಮವೆಂಬ ಕಾಲದೇಶಗಳನ್ನು ಮೀರಿದ, ನೈತಿಕ ಗಡಿಗಳನ್ನು ದಾಟಿಹರಿವ ನದಿಯಲ್ಲಿ ಕತೆ ನಮ್ಮನ್ನು ಮೀಯಿಸುತ್ತದೆ.

ಮನಸಿನ ಒಳಸುಳಿಗಳಲ್ಲಿ ಗಿರಿಗಿಟ್ಲೆಯಾಡಿಸುವ ಈ ಕತೆಯೆಂಬ ಮೋಹ ತಮ್ಮ ಆಯ್ಕೆಯಲ್ಲ, ಅದು ಸ್ವಭಾವವೇ ಆಗಿದೆ ಎಂದು ಅಬ್ದುಲ್ ರಶೀದರು ಭಾವಿಸುತ್ತಾರೆ. ಸಿದ್ದಮಾದರಿಗಳನ್ನು ತಮಾಷೆಮಾಡುವ, ನಿಶ್ಚಿತ ಸಿದ್ಧಾಂತಗಳಿಗಾಗಿ ಕತೆ ಬರೆಯುವುದನ್ನು ಸೂಕ್ಷ್ಮವಾಗಿ ಛೇಡಿಸುವ ಅವರ ಕತೆಗಳು, ತಮ್ಮ ಮಾದರಿಯನ್ನು ತಾವೇ ಕಟ್ಟಿಕೊಳ್ಳುವ ಸ್ವಚ್ಛಂದ ಲಹರಿಯಲ್ಲಿ ಹೊರಟವು. ಹುಸಿಕ್ರಾಂತಿಯ ಆವೇಶವನ್ನು ತಣ್ಣಗೆ ಛೇಡಿಸುವ ಅವರ ‘ಕಾಮ್ರೇಡ್ ಮತ್ತು ಉಮ್ಮ’ ಈ ಮಾದರಿಯದು. ಒಡಲಿನಾಳದಿಂದ ಮೂಡುವ ಹಸಿವು, ಕಾಮ ಹಾಗೂ ಪ್ರೇಮ ಒಂದೆಡೆಯಾದರೆ, ಆದರ್ಶಗಳಲ್ಲಿ ಬಿಗಿದುಹೋಗಿ ನವಿರನ್ನು ನಿರಾಕರಿಸುವ ಕಾಮ್ರೇಡ್‍ಗಳ ಜಗತ್ತು ಇನ್ನೊಂದೆಡೆ. ನಡುವೆ ಸಂಸಾರ ತಾಪತ್ರಯಗಲ್ಲಿ ಮುಳುಗಿದ ಮಧ್ಯಮವರ್ಗದ ತಟಸ್ಥ ಜಗತ್ತು. ಇವುಗಳ ಮಧ್ಯೆ ಗಿರಕಿಹೊಡೆವ ನಿರೂಪಕನ ಯೌವ್ವನ. ಯಾವುದೋ ಘೋಷಿತ ಆದರ್ಶವನ್ನು ಬದುಕಲುಹೋಗಿ ಒಡಲ ಕಂಪನಗಳನ್ನು ಕಡೆಗಣಿಸುವ ಕೈವಲ್ಯನನ್ನು ಮೆಚ್ಚುಗೆ ತುಂಬಿದ ಅಚ್ಚರಿಯಲಿ ಕಾಣುವ ನಿರೂಪಕನಿಗೆ ಕ್ರಾಂತಿಯ ಅಗತ್ಯವನ್ನು ಮುಸ್ಲಿಂ ಹಾಸ್ಟೆಲಿನ ಇತರ ಹುಡುಗರಿಗೆ ಹೇಳಲು ಭಾಷೆಯೇ ಇರುವುದಿಲ್ಲ!. ಮನುಷ್ಯ ಯಾಕೆ ತನ್ನ ಸಹಜ ಬಯಕೆಗಳನ್ನು ಅದುಮಿಟ್ಟು ಬರಡಾಗುತ್ತಾನೆ? ಯಾಕೆ ಅದಕ್ಕಾಗಿ ವ್ಯಗ್ರನೂ ಆಗುತ್ತಾನೆ? ಎಂಬುದು ಉತ್ತರವಿಲ್ಲದ ಪ್ರಶ್ನೆಗಳೇ. ರಶೀದರ ಕತೆಗಳು ಇಂಥ ಪ್ರಶ್ನೆಗಳನ್ನು ತುಂಟತನದಿಂದ ಮುಂದೆಮಾಡುತ್ತವೆ.

ಕತೆಯ ಕುರಿತ ಮೀಮಾಂಸೆಯನ್ನೂ, ಕತೆಗಾರನ ಜಾತಿಮತಗಳನ್ನು ಆದರಿಸಿ ಆಯಾ ಸಂವೇದನೆಗಳನ್ನು ಹುಡುಕಿ ಕಟ್ಟುವ ಸಾಹಿತ್ಯ ರಾಜಕಾರಣದ ಕ್ರಮವನ್ನೂ ಅವರು ತಮಾಷೆಮಾಡುತ್ತಾರೆ. ಜಾತ್ರೆಯಲ್ಲಿ ತೊಟ್ಟಿಲು ತೂಗಿಸುವ ಬ್ಯಾರಿಗೆ ತಾನು ವಿವೇಕ ಶಾನುಭಾಗನೆಂದು ಪರಿಚಯಿಸಿಕೊಂಡು ಪರಕಾಯ ಪ್ರವೇಶದ ಮೋಜನ್ನು ಅನುಭವಿಸುವ ಸಂದರ್ಭವನ್ನು ಅವರ ‘ಸಂಪೂರ್ಣ ಪಾರಿಜಾತ’ ಕತೆ ಕಟ್ಟಿಕೊಟ್ಟಿರುವುದು ಇದಕ್ಕೆ ರೂಪಕದಂತಿದೆ. ಈ ಕಾಲವು ಮುಸ್ಲಿಂ ಲೇಖಕನೊಬ್ಬನ ಬರವಣಿಗೆಯಲ್ಲಿ ಮುಸ್ಲಿಂ ಸಂವೇದನೆಯನ್ನು ಹುಡುಕುತ್ತಾ, ಅವನ ರಾಜಕೀಯ ಹಕ್ಕೊತ್ತಾಯಗಳನ್ನು ನಿರೀಕ್ಷಿಸುತ್ತಾ ಇರುವಾಗ ಅಬ್ದುಲ್ ರಶೀದರು ಅದನ್ನೆಲ್ಲ ಪ್ರಜ್ಞಾಪೂರ್ವಕವಾಗಿ ಕಳಚಿಕೊಂಡು ಮುನ್ನಡೆಯುತ್ತಾರೆ. ಹಾಗಂತ ಅವರ ಕತೆಗಳಲ್ಲಿ ಕತೆಹೇಳುವ ಸಾರಾತಾತಾ, ಪಂಡಿತ್ ಹಾಜಿ, ಉಮ್ಮಾ ಎಲ್ಲರೂಇದ್ದಾರೆ. ಕತೆಕೇಳಲೆಂದೇ ಆತುಕೊಳ್ಳುತ್ತಿದ್ದ ತಮ್ಮತಂಗಿಯರು ಹಾಗೂ ಆ ಅಪೂರ್ವ ಸುಂದರಿಯೂ ಇದ್ದಾರೆ. ಆದರೆ ಅವರೆಲ್ಲ ಹಸಿಯುವ, ಹುಸಿಯುವ, ಪ್ರೇಮಿಸುವ, ಕಾಮಿಸುವ ಅಪ್ಪಟ ಮನುಷ್ಯರಾಗಿ ಮಾತ್ರ ಇದ್ದಾರೆ. ಮನುಷ್ಯನ ತಲ್ಲಣಗಳ ಆಳವನ್ನು ಹುಡುಕುತ್ತ ಹೋಗುವಾಗ ಜಾತಿಮತಗಳ ಅಸ್ಮಿತೆ ಕಳಚಿಬೀಳುವುದನ್ನು ಅವರ ಕತೆಗಳು ಕಾಣಿಸುತ್ತವೆ. ಮುಸ್ಲಿಂ ಸಮುದಾಯದ ಸ್ಮೃತಿಗಳು, ಮಿಥ್‍ಗಳು, ಕಥನಗಳು ಹೀಗೆ ಆ ಬದುಕಿನ ವಿಶಿಷ್ಟ ಪರಿಮಳವನ್ನು ಮಾತ್ರ ಹೀರಿಕೊಂಡು ಹರಡುವ ಅಪ್ಪಟ ಕತೆಗಾರರಾಗಿ ರಶೀದ್ ಕಾಣಿಸುತ್ತಾರೆ.

ಸೃಷ್ಟಿಯ ಕ್ಯಾನ್ವಾಸಿನಲ್ಲಿ ಮನುಷ್ಯನ ಭಯ, ಬಯಕೆಗಳ ಲೋಕವನ್ನು ತುಂಬ ತೀವ್ರವಾಗಿ ಅನುಭವಿಸುವಂತೆ ಮಾಡುವ ಕತೆಗಳು ಮನುಷ್ಯನೂ ಪ್ರಕೃತಿಯ ಒಂದು ಭಾಗ ಎಂಬುದನ್ನು ನೆನಪಿಸುತ್ತವೆ. ಮಂಜು, ಬಿಸಿಲು, ಮಳೆ ಹೀಗೆ ಮಗ್ಗಲು ಬದಲಿಸುವ ಪ್ರಕೃತಿಯಂತೆ ಮಗ್ಗಲು ಬದಲಿಸುತ್ತಾ ಹರಿಯುವ ಮನುಷ್ಯನ ಜಂಗಮತ್ವವನ್ನು ಧ್ಯಾನಿಸುವಂತೆ ಮಾಡುತ್ತಾರೆ. ಮನುಷ್ಯಾನುಭವಗಳೆಲ್ಲವೂ ಕ್ಷಣಿಕ. ಅದಕ್ಕೇ ಸುಂದರ. ರೋಮಾಂಚಕ. ಅದನ್ನು ಶಾಶ್ವತಗೊಳಿಸುವ, ಆದರ್ಶೀಕರಿಸುವ ಗೋಜಿಗೆ ಹೋಗದೇ ಇರುವನ್ನು ಸುಮ್ಮನೆ ಆಸ್ವಾದಿಸುವ ನೋಟಕ್ರಮದಿಂದಾಗಿ ಹೊತ್ತುಗೊತ್ತಿಲ್ಲದ ಕತೆಗಳು ಆವರಿಸಿಕೊಳ್ಳುತ್ತವೆ.

ಈ ಅಂಕಣದ ಹಿಂದಿನ ಬರೆಹಗಳು

ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ

ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು

ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಯಕ್ಷಗಾನ ಮತ್ತು ನಾವು ...

25-10-2021 ಬೆಂಗಳೂರು

'ಯಕ್ಷಗಾನ ಮತ್ತು ನಾವು' ಎಂಬ ಈ ಲೇಖನದ ಮೂಲಕ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ನಿತ್ಯಾನಂದ ಬಿ ಶೆ...

ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ...

23-10-2021 ಬೆಂಗಳೂರು

'ಬೆಂಗಳೂರಿನಿಂದ ಗಂಟುಮೂಟೆ ಹೊತ್ತು 2013ರಲ್ಲಿ ಸಿಂಗಾಪುರಕ್ಕೆ ಬಂದಿಳಿದಿದ್ದ ನಮಗೆ ಸಮಯ ಕಳೆದಂತೆ ಒಂದೊಂದೇ ಅಚ್ಚರಿ...

ಮಾಸ್ತಿ ಪುರಸ್ಕಾರದ ಗೌರವ: ಎಚ್.ಎಸ್...

23-10-2021 ಬೆಂಗಳೂರು

‘ಆಧುನಿಕ ಕನ್ನಡ ಸಾಹಿತ್ಯ ಕಂಡ ಮಹಾ ಚೇತನಗಳಲ್ಲೊಬ್ಬರೆನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ವಿಶೇಷವಾಗಿ ಕ...