ಮಹಿಳಾ ಸಾಹಿತ್ಯಕ ಅಸ್ತಿತ್ವದ ಅರ್ಥಪೂರ್ಣ ವಿಶ್ಲೇಷಣೆ: ಕಸಾಪ ವಿಚಾರ ಸಂಕಿರಣ ಯಶಸ್ವಿ

Date: 18-04-2021

Location: ಬೆಂಗಳೂರು


ಕಳೆದ ಮೂರು ವರ್ಷದ ಹಿಂದೆ (2015) ದಲಿತ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವ ಮೂಲಕ ಜನ್ನಡ ಸಾಹಿತ್ಯ ಪರಿಷತ್ತು ತನ್ನ ಪಾರಂಪರಿಕ ಕಾರ್ಯವೈಖರಿಗೆ ಹೊಸತನವನ್ನು ತಂದಕೊಂಡಿದ್ದರ ಫಲವಾಗಿ 2021ರ ಏಪ್ರಿಲ್ 17 ರಿಂದ ಎರಡು ದಿನಗಳ ಕಾಲ ಮಹಿಳಾ ಸಾಹಿತ್ಯ ಸಂಪುಟಗಳ ಕುರಿತು ಬೆಂಗಳೂರಿನ ಚಾಮರಾಜಪೇಟೆಯ ಪರಿಷತ್ತಿನ ಶ್ರೀಕೃಷ್ಣರಾಜ್ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವು ಯಶಸ್ವಿಯಾಯಿತು.

ಕಾವ್ಯ ಸಂಪುಟ (ಸಂ: ಡಾ. ಪಿ. ಚಂದ್ರಿಕಾ),ಕಥೆ ಸಂಪುಟ (ಸಂ: ಡಾ. ಪದ್ಮಿನಿ ನಾಗರಾಜ್) ವಿಮರ್ಶೆ ಸಂಪುಟ (ಸಂ: ಎಂ..ಎಸ್. ಆಶಾದೇವಿ), ಸ್ತ್ರೀವಾದಿ ಚಿಂತನೆ ಸಂಪುಟ (ಸಂ: ಡಾ. ಧರಣಿದೇವಿ ಮಾಲಗತ್ತಿ), ಲಲಿತ ಪ್ರಬಂಧಗಳ ಸಂಪುಟ (ಸಂ: ತಮಿಳು ಸೆಲ್ವಿ), ಅಂಕಣಗಳ ಸಂಪುಟ- ಈ ಎಲ್ಲ ವಿಷಯಗಳ ಬೃಹತ್ ಸಂಪುಟಗಳು ಲೋಕಾರ್ಪಣೆಗೊಂಡವು.

ಸಾಹಿತ್ಯಕ ಆರಂಭ ಕಾಲದಿಂದಲೂ ಸಾಹಿತ್ಯಕವಾಗಿ ಮಹಿಳೆಯರ ಕೊಡುಗೆ, ಪುರುಷ ಪ್ರದಾನ ವ್ಯವಸ್ಥೆಯಡಿ ಕಡೆಗಣಿಸಲ್ಪಟ್ಟ ಅವರ ಸಾಹಿತ್ಯಕ ಸಾಧನೆ, ಸಂಚಿ ಹೊನ್ನಮ್ಮಳ ಹದಿಬದಿಯ ಧರ್ಮವನ್ನೂ ಸಂಶಯ ದೃಷ್ಟಿಯಿಂದ ನೋಡಿ, ಅದು ಪುರುಷ ಪ್ರಾಧಾನ್ಯತೆಯನ್ನು ಹೇಳುತ್ತದೆ ಎಂಬ ಅಂಶವನ್ನು, ಮಹಿಳೆಯೆಡೆಗಿನ ದೇವರ್ಷಿ ವಿಶ್ವಾಮಿತ್ರನ ದ್ವಂದ್ವ ನೀತಿ, ಹೆಣ್ಣನ್ನು ಲೈಂಗಿಕ ಅಥವಾ ಭೋಗವಸ್ತುವೆಂದೇ ಪರಿಗಣಿಸಲ್ಪಟ್ಟ ಆಳರಸರ ದೃಷ್ಟಿ , ಹೀಗೆ ವೈವಿಧ್ಯಮಮಯತೆಯನ್ನು ಒಳಗೊಂಡ ಸಂಪುಟಗಳ ಬರಹಗಳು ಚರ್ಚೆಗೆ ಇಂಬು ನೀಡಿದವು. ಮಾತ್ರವಲ್ಲ; ಪಾರಂಪಾರಿಕವಾಗಿ ನಡೆದು ಬಂದ ಸಾಮಾಜಿಕ ವ್ಯವಸ್ಥೆಯನ್ನು ಟೀಕಿಸುತ್ತಾ ಕೂಡದೇ ಪರ್ಯಾಯ ವ್ಯವಸ್ಥೆಯನ್ನು ಸಾಹಿತ್ಯ ರಚನೆಯ ಮೂಲಕ ಕಟ್ಟಿಕೊಳ್ಳುವತ್ತಲೂ ಮಹಿಳೆಯರು ಯೋಚಿಸಬೇಕು ಎಂಬ ಸಂದೇಶವೂ ರವಾನೆಯಾಯಿತು

ಟೀಕೆ ಸಾಕು: ಪರ್ಯಾಯ ವ್ಯವಸ್ಥೆ: ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯವನ್ನು ಪ್ರಕಟಿಸುತ್ತಾ ಬರುವ ಮೂಲಕ ಪ್ರೇರಣೆ ನೀಡಿದೆ ಎಂದು ವಿಚಾರ ಸಂಕಿರಣ ಉದ್ಘಾಟಿಸಿದ ನ್ಯಾಯವಾದಿ-ಲೇಖಕಿ ಹೇಮಲತಾ ಮಹಿಷಿ ಅಭಿಪ್ರಾಯಪಟ್ಟರು..

ಕನ್ನಡ ವಿ.ವಿ. ನಿವೃತ್ತ ಕುಲಪತಿ ಹಾಗೂ ಮಹಿಳಾ ಸಾಹಿತ್ಯ ಸಂಪುಟಗಳ ಪ್ರಧಾನ ಸಂಪಾದಕಿ ಡಾ. ಮಲ್ಲಿಕಾ ಘಂಟಿ ಮಾತನಾಡಿ `ಮಹಿಳೆಯರಿಗಾಗಿ ಈ ಸಮಾಜ ಪಾರಂಪಾರಿಕವಾಗಿ ಒಂದು ಗೆರೆ ಎಳೆದಿದೆ. ಈ ಗೆರೆಯು ಮಹಿಳೆಯರ ಪ್ರತಿ ಪ್ರತಿಭೆ ಅನಾವರಣಕ್ಕೂ ಅಡ್ಡಿಯಾಗಿದೆ. ಈ ಗೆರೆಯ ಕುರಿತು ಮಾತನಾಡುವುದು ಬೇಡ. ಅದು ಕೇವಲ ಕಾಲಹರಣ. ಆದ್ದರಿಂದ, ಆ ಗೆರೆಯ ಪಕ್ಕದಲ್ಲೇ ಮತ್ತೊಂದು ಗೆರೆ ಎಳೆಯೋಣ. ಅದು ಮೊದಲಿನ ಗೆರೆಗಿಂತ ಉದ್ದವಾಗಿರಲಿ. ಅದು ಸ್ತ್ರೀ ಗೌರವದ ಸೂಚಕದಂತಿರಲಿ ಎಂದು ಕನ್ನಡ ವಿ.ವಿ. ನಿವೃತ್ತ ಕುಲಪತಿ ಹಾಗೂ ಮಹಿಳಾ ಸಾಹಿತ್ಯ ಸಂಪುಟಗಳ ಪ್ರಧಾನ ಸಂಪಾದಕಿ ಡಾ. ಮಲ್ಲಿಕಾ ಘಂಟಿ ಹೇಳಿದ್ದು, ವಿಚಾರ ಸಂಕಿರಣಕ್ಕೆ ಹೊಸ ವಿಚಾರ ದೃಷ್ಟಿ ನೀಡಿತು.

ಅರ್ಥಪೂರ್ಣ ಗೋಷ್ಠಿಗಳು: ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ವಿವಿಧ ಪ್ರಾಕಾರದ ವಿಷಯಗಳ ಪೈಕಿ ಮೊದಲ ಗೋಷ್ಠಿಯಲ್ಲಿ ಕಥ ಸಂಪುಟ ಕುರಿತು ಡಾ. ಪದ್ಮಿನಿ ನಾಗರಾಜ್ ಮಾತನಾಡಿ ‘ಮಹಿಳೆಯರು ಆಯಾ ಕಾಲಘಟ್ಟದಲ್ಲಿ ವಾಸ್ತವವನ್ನೇ ಕೇಂದ್ರವಾಗಿಸಿಕೊಂಡು ಸಾಹಿತ್ಯ ರಚಿಸಿದ್ದಾರೆ. ಆದರೂ, ಅಡುಗೆ ಮನೆ ಸಾಹಿತ್ಯ ಎಂದು ಹೆಸರಿಸುವುದು ಸೂಕ್ತವಲ್ಲ. ಸಾಹಿತ್ಯ ವಿಮರ್ಶೆಯು ತನ್ನ ನೋಟವನ್ನು ಪುನರ್‍ ಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಎರಡನೇ ಗೋಷ್ಠಿಯು ಸ್ತ್ರೀವಾದಿ ಚಿಂತನೆ ಕುರಿತು ಮಾತನಾಡಿದ ಡಾ. ಧರಣಿದೇವಿ ಮಾಲಗತ್ತಿ ಅವರು ‘ಸ್ತ್ರೀವಾದಿ ಚಿಂತನೆಯು ಪಾಶ್ಚಾತ್ಯ ಚಿಂತನೆಯ ಫಲವಲ್ಲ. ಪಶ್ಚಿಮದ ಸರಕಲ್ಲ. ಭಾರತೀಯ ಸ್ತ್ರೀವಾದವು ಸಾಂಸ್ಕೃತಿಕತೆಯನ್ನು ಮೂಲವಾಗಿಸಿದೆ. ಭಾರತೀಯ ಮಹಿಳೆಯು ತನ್ನ ಸಂಕಷ್ಟಗಳನ್ನು ಹತ್ತು ಹಲವು ಆಯಾಮಗಳಿಂದ ಸಾಹಿತ್ಯ ರಚನೆ ಮಾಡಿದ್ದಿದೆ. ಇದನ್ನು ವಿಮರ್ಶಕರು ಗುರುತಿಸಬೇಕು. ಸ್ತ್ರೀವಾದಿ ಚಿಂತನೆ ಎಂದರೆ ಪುರುಷ ವಿರೋಧಿಯಲ್ಲ. ಅವಳ ಹಕ್ಕು ಸ್ಥಾನಮಾನಗಳಿಗಾಗಿ ನಡೆಸುವ ಹಾಗೂ ಸಮರ್ಥಿಸಿಕೊಳ್ಳುವತ್ತ ಅವಳ ಹೋರಾಟವಾಗಿದೆ ಎಂದು ಗಮನ ಸೆಳೆದರು.

ಮೂರನೇ ಗೋಷ್ಠಿಯಲ್ಲಿ ವಿಮರ್ಶಕಿ ಡಾ. ಎಲ್.ಜಿ. ಮೀರಾ ಅವರು ವಿಮರ್ಶೆ ಸಂಪುಟಗಳ ಕುರಿತು ತಮ್ಮ ವಿಚಾರ ಮಂಡಿಸಿ ‘ ಮಹಿಳೆ ಸುಖಿಯಾಗಿದ್ದರೂ ಅವಳ ಸಾಹಿತ್ಯದಲ್ಲಿ ಮಾತ್ರ ಒಂಟಿತನ ಕಾಡುವುದನ್ನು ಕಾಣಬಹುದು. ಇದು ಭಾರತೀಯ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನದ ಚರಿತ್ರೆಯೂ ಆಗಿದೆ. ಆದ್ದರಿಂದ, ಮಹಿಳಾ ಸಾಹಿತ್ಯವನ್ನು ವಿಮರ್ಶಾ ಲೋಕ ಗುರುತಿಸಿಲ್ಲ. ಅವಳ ಅಸಮಾಧಾನವನ್ನು ಹೆಚ್ಚಿಸಿದೆ. ಪ್ರಗತಿಪರ ವಿಚಾರಗಳನ್ನು ಸಾಹಿತ್ಯವಾಗಿ ಪ್ರತಿಪಾದಿಸಿದ್ದರೂ ವ್ಯಕ್ತಿಗತವಾಗಿ ಹಾಗೂ ಸಾಹಿತ್ಯಕವಾಗಿ ನಿರ್ಲಕ್ಷ್ಯಕ್ಕೆ ಒಳಪಡಿಸಲಾಗಿದೆ. ಆದರೆ, ಮಹಿಳಾ ಸಾಹಿತ್ಯದೆಡೆಗಿನ ಪುರುಷರ ನೋಟ ಈಗ ಬದಲಾಗಬೇಕು ಎಂದು ಆಶಿಸಿದರು.

ಲಲಿತ ಪ್ರಬಂಧ ಹಾಗೂ ಕಾವ್ಯ ಎಂಬ ಎರಡು ಪ್ರತ್ಯೇಕ ಸಂಪುಟಗಳ ಕುರಿತು ಕ್ರಮವಾಗಿ ತಮಿಳ್ ಸೆಲ್ವಿ ಹಾಗೂ ಎಚ್.ಎಲ್. ಪುಷ್ಪಮಾತನಾಡಿ ‘ ಲಲಿತ ಪ್ರಬಂಧಗಳಲ್ಲಿ ಮಹಿಳೆಯರ ಬರಹಗಳು ಹೆಚ್ಚು ತೀವ್ರತೆ ಪಡೆಯುತ್ತಿದೆ ಎಂದರೆ ಕಾವ್ಯ ವಲಯದಲ್ಲೂ ಮಹಿಳೆಯರು ಹೆಚ್ಚು ಸೂಕ್ಷ್ಮವಾಗಿ ಸಂವೇದನಾಶೀಲವಾಗಿ ಬಂಡಾಯದ ಮನೋಧರ್ಮದೊಂದಿಗೆ ಅಭಿವ್ಯಕ್ತಿಪಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸವಿತಾ ಶ್ರೀನಿವಾಸ ಹಾಗೂ ಡಾ. ಪದ್ಮಿನಿ ನಾಗರಾಜ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಎಲ್ಲ ಗೋಷ್ಠಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ ಅಧ್ಯಕ್ಷತೆವಹಿಸಿದ್ದರು. ಕಸಾಪ ಗೌರವಕಾರ್ಯದರ್ಶಿಗಳಾದ ಪದ್ಮರಾಜ್ ದಂಡಾವತಿ ಹಾಗೂ ಕೆ. ರಾಜಕುಮಾರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಗೌರವಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನ, ಸಿ.ಆರ್. ಕುಸುಮ, ಕುಮಾರಿ ಧವಳ ಹಾಗೂ ಇತರರು ನಿರೂಪಿಸಿದರು.

ನೇರ ಪ್ರಸಾರ: ಮಹಿಳೆಯರ ಸಾಹಿತ್ಯ ಕುರಿತ ಸಂಪುಟಗಳು ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಎರಡೂ ದಿನಗಳ ಈ ವಿಚಾರ ಸಂಕಿರಣದಲ್ಲಿ ವ್ಯಕ್ತವಾದ ವಿಚಾರಗಳನ್ನು ‘ಬುಕ್ ಬ್ರಹ್ಮ’ ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಪ್ರಸಾರ ಮಾಡಿತು.

 

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...