‘ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ’ ಮತ್ತದೇ ಸ್ವರ ಮಾಧುರ್ಯದ ಸೊಗಸು…!


ಶರಧಿಯಲ್ಲಿ ಮಳೆಯ ಒಂದು ಹನಿಗೆ ಸ್ಥಾನವಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕವಿತೆ ಬರಹಕ್ಕಿಳಿದ ಕವಯತ್ರಿ ಶಾಂತಾ ಜಯಾನಂದ್ ಅವರು ತಮ್ಮ ‘ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ’ ಸಂಕಲನದ ಮೂಲಕ, ಹೆಣ್ಣಿನ ಸೂಕ್ಷ್ಮ ಮನಸ್ಸಿನ ಸೊಗಸನ್ನು ಕವಿತೆಯಾಗಿಸಿದ್ದಾರೆ ಎಂದು ಪತ್ರಕರ್ತ ವೆಂಕಟೇಶ ಮಾನು ವಿಶ್ಲೇಷಿಸಿದ ಬರಹವಿದು.

ಸಹಜ ಹಾಗೂ ಸಿದ್ಧಾಂತದ ವೈವಿಧ್ಯಮಯ ನೆಲೆಗಳಲ್ಲಿ ಭಾವಾಭಿವ್ಯಕ್ತಿಗೆ ಹಾತೊರೆಯುವುದರ ಪ್ರತೀಕವಾಗಿ ಹೆಣ್ಣೊಂದರ ಸ್ಪಂದನೆ ಹಾಗೂ ಪ್ರತಿಕ್ರಿಯೆಗಳು ಕವನಗಳಾಗಿ ರೂಪುಗೊಂಡ ಸೂಕ್ಷ್ಮ ಪರಿಯ ಸೊಬಗು-‘ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ’. ಕವಯತ್ರಿ ಶಾಂತಾ ಜಯಾನಂದ್, ತಮ್ಮ ಕಾವ್ಯಭಾವಗಳಿಗೆ ‘ಸಹಜತೆ’ಯ ಸ್ವರೂಪ ನೀಡದೇ, ಅವು ಸುದೀರ್ಘ ಕಾಲದಿಂದ ‘ಹುದುಗಿಟ್ಟ ಭಾವಗಳು’ ಎನ್ನುವ ಮೂಲಕ ‘ತೀವ್ರತೆ;ಯನ್ನು ಹೆಚ್ಚಿಸಿದ್ದಾರೆ. ‘ಬೇಗನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತುಂಬು ಕುಟುಂಬದ ಬಹಳಷ್ಟು ಜವಾಬ್ದಾರಿಗಳನ್ನು ಮುಗಿಸುವಲ್ಲಿ’ ಹೀಗೆ ಕಾರಣಗಳನ್ನು ನೀಡುವ ಕವಯತ್ರಿಗೆ, ಹಿತೈಷಿಗಳ ಪ್ರೋತ್ಸಾಹವು ‘ಶರಧಿಯಲ್ಲಿ ಮಳೆಯ ಒಂದು ಹನಿಗೆ ಸ್ಥಾನವಿಲ್ಲವೆ?’ ಎಂದು ಭಾವಗಳನ್ನು ಧುಮ್ಮಿಕ್ಕಿಸುವ ಶಕ್ತಿಯಾಗಿ, ಕವನಗಳು ರೂಪು ಪಡೆದ ಬಗೆಯನ್ನು ನಿವೇದಿಸಿದ್ದಾರೆ.

‘ಶರಧಿಯಲ್ಲಿ ಮಳೆಯ ಒಂದು ಹನಿಗೆ ಸ್ಥಾನವಿಲ್ಲವೆ?’ ಎಂದು ಪ್ರಶ್ನಿಸುವ ಕವಯತ್ರಿಯ ಭಾವವು ‘ಉದ್ಧಟತನದ ಮುದ್ದೆ’ಯಲ್ಲ. ಅದು, ಶರಧಿಯ ಭೀಕರ-ಸೌಂದರ್ಯದ ಮೂಲವೇ ಹನಿ. ಶರಧಿಯ ಎಲ್ಲ ವಿರಾಟ ಗುಣಲಕ್ಷಣಗಳು ಹನಿಯ ಸಂಕ್ಷಿಪ್ತ ರೂಪದಲ್ಲಿ ಅಡಗಿವೆ’. ಹೀಗಾಗಿ, ಹುದುಗಿಟ್ಟ ಭಾವನೆಗಳನ್ನು‘ಓದಿ ಬರೆಯುವ ಹುಚ್ಚಿನಿಂದ’ ಮತ್ತೆ ನುಡಿಸಿದೆ ಎಂಬುದು ಕವಯತ್ರಿಯ ಸಮರ್ಥನೆ.

ಹುದುಗಿಟ್ಟ ಭಾವಗಳ ಸ್ವರೂಪ ಬೇರೆ ಬೇರೆ, ಅವುಗಳ ಸ್ವಭಾವವೂ ಬೇರೆ. ತೀವ್ರತೆಯಲ್ಲೂ ಏರುಪೇರು. ‘ಹುದುಗಿಟ್ಟ’ ಎಂಬುದು ಪ್ರಜ್ಞಾಪೂರ್ವಕವಾಗಿ ನಡೆಸುವ ಕ್ರಿಯೆ. ಬಲವಂತವಾಗಿ ಹತ್ತಿಕ್ಕುವ ಈ ವರ್ತನೆಗೆ ಕಾರಣಗಳು ಬೇರೆ ಬೇರೆ. ಮನುಷ್ಯ ಸಂಬಂಧಗಳು, ಮನೋ ಸಂವೇಗಗಳನ್ನು ಕಾಪಿಟ್ಟುಕೊಳ್ಳುವ ರಕ್ಷಣಾತ್ಮಕ ತಂತ್ರ ಅದು. ಸಮಾಜ ಸುಧಾರಣೆಯ ಸಂಕೇತವಾಗಿ ಚರ್ಮ; ಅದರ ಕಾಂತಿಗೆ ಯಾವ ಕ್ರೀಮು ಸಹಕರಿಸುತ್ತಿಲ್ಲ. ಆದರೆ, ಕವಿತೆ ಹೊಸ ಕಾಂತಿ ನೀಡುತ್ತಿದೆ. ಆದ್ದರಿಂದ ಕವಿತೆ ಬರೆಯುತ್ತಿದ್ದೇನೆ ಎಂಬುದು ಕವಯತ್ರಿಯ ಸಮರ್ಥನೆ. ಎಲ್ಲ ಕವಿತೆಗಳಿಗೆ ‘ಹೆಣ್ಣೇ’ ಕೇಂದ್ರ. ಹೀಗಾಗಿ, ಇಲ್ಲಿಯ ಕವಿತೆಗಳನ್ನು ಮೂರು ನೆಲೆಗಳಲ್ಲಿ ವಿಶ್ಲೇಷಿಸುವುದು ಅಗತ್ಯ ಹಾಗೂ ಅನಿವಾರ್ಯ;

  1. ಹೆಣ್ಣು-ಸಹಜತೆ

  2. ಹೆಣ್ಣು- ಸಮಾಜ-ಸಿದ್ಧಾಂತ

  3. ಹೆಣ್ಣು-ಪ್ರೀತಿ..ಇತ್ಯಾದಿ

ಹೆಣ್ಣಿನ ಸಹಜತೆ: ಗಂಡಿಗಿಂತ ಹೆಚ್ಚು ಕರುಣಾಮಯಿ ಹೆಣ್ಣು. ಮನುಷ್ಯನ ಸಂವೇಗಳ ಗ್ರಹಿಕೆಯಲ್ಲೂ ಆಕೆಯೇ ಮುಂದು ಎಂಬುದು ಮನೋವಿಜ್ಞಾನ. ಸಹಜವಾಗಿ ಬರುವ ಈ ಸಾಮರ್ಥ್ಯಗಳ ಅಭಿವ್ಯಕ್ತಿಗೆ ಸಹನೆಯೇ ಉಸಿರು. ಹೀಗಾಗಿ, ಕಾಲ ಸೂಕ್ತವಾಗಿಲ್ಲದಿದ್ದರೆ ಅಥವಾ ತ್ಯಾಗದ ಅಗತ್ಯವಿದ್ದರೆ ಅದನ್ನು ಪೂರೈಸಲೂ ಸಹ ಹೆಣ್ಣು ಸಿದ್ಧ. ಹೀಗಾಗಿ, ಅದೆಷ್ಟೋ ಅವಳ ಕನಸುಗಳಿಗೆ ‘ಹುದುಗಿಡುವ’ ಅನಿವಾರ್ಯತೆ. ಬುದ್ಧನಂತಾಗುವ ಬಲವಾದ ಕನಸಿದ್ದರೂ ‘ನೀನೆಂದೆ ಸ್ವತಂತ್ರ ಸನ್ಯಾಸಿ/ ನಾನು ಅರಮನೆಯೆಂಬ/ ಸೆರೆಮನೆಯಲ್ಲಿ ಬಂಧಿ/ನೀನು ಬುದ್ಧ, ಲೋಕ ಮಾನ್ಯ/ ನಾನೊಬ್ಬಳು ತಾಯಿ ಅಷ್ಟೇ. (ಕವನ: ಬುದ್ಧ ಮತ್ತು ತಾಯಿ) ಎಂದು ತನ್ನ ಸಂಕಲ್ಪವನ್ನು ಹುದುಗಿಸಿಟ್ಟುಕೊಳ್ಳುತ್ತಾಳೆ. ಆದರೆ, ‘ತಾಯಿ ಅಷ್ಟೇ’ ಎನ್ನುವುದು ಸಾವಿರಾರು ಹೊಣೆಗಾರಿಕೆಯನ್ನು ಪ್ರತಿನಿಧಿಸುತ್ತದೆ. ಅದು ಬುದ್ಧನಾಗುವುದಕ್ಕಿಂತ ಹೆಚ್ಚು ಮಾನವೀಯ ಎಂಬ ಧ್ವನಿ ಅಡಗಿದೆ. ‘ಹೆಣ್ಣಿಗೆ ಗಂಡನ ಮನೆಯೇ ಶಾಶ್ವತ; ತವರು ತಾತ್ಕಾಲಿಕ’ವಾದರೂ ತವರಿನ ನೆಲಕ್ಕೇ ಅಂಟಿಕೊಳ್ಳುವ ಆಕೆಯ ಮನಸ್ಸಿಗೆ ‘ಎಷ್ಟು ಚಂದಿತ್ತು ಆ ದಿನಗಳು….ಅಜ್ಜ-ಅಜ್ಜಿಯರ ಜೊತೆ ಮನೆ ತುಂಬಾ ಮಕ್ಕಳು’ (ಕವನ: ಕುಟುಂಬ ದ್ವೀಪ) ಎಂದೇ ಸಂತಸ, ಮಾತ್ರವಲ್ಲ; ‘ಇದು ಮನೆ ಮನದ ಕಥೆ’ಯಾಗಬೇಕು ಎಂಬುದೇ ಆಕೆಯ ಆಶಯವಾಗಿರುತ್ತದೆ. ಗಂಡಿನ ಮನೆಯಲ್ಲಿ ಇಂತಹ ಸಂಭ್ರಮ ಇರದಿದ್ದರೆ ಅದು ವ್ಯರ್ಥ ಎಂಬ ಭಾವ. ‘ನಿನ್ನ ಪ್ರೀತಿ ತುಂಬಿದ/ ಮಡಿಲಲ್ಲಿ ತಲೆಯಿಟ್ಟು ಮಲಗಬೇಕಮ್ಮ (ಕವನ: ಅಮ್ಮನಿಗೊಂದು ಪತ್ರ) ಎಂದೇ ಆಕೆಯ ಮನಸ್ಸು ಚಡಪಡಿಸುತ್ತದೆ. ಮಾತ್ರವಲ್ಲ; ಅಮ್ಮನನ್ನು ದೊಡ್ಡ ಸೌರವ್ಯೂಹಕ್ಕೆ ಹೋಲಿಸಿದರೆ, ಭೂಮಿ ಮೇಲಿನ ಜನರಿಗೂ ಆಕೆ ಆಶ್ರಯದಾತಳೇ. ಅದನ್ನು ತಾಯಿಯ ಮೂಲಕ ಹೇಳುವ ಪರಿಯ ಸೊಬಗು ಹೀಗಿದೆ; ‘ಹೌದು ಮಗಳೇ/ ಒಂದು ಗಡಿಯಲ್ಲ/ ಯಾವೊಂದು ಸೀಮೆಯಲ್ಲ/ ಪೊರೆವ ಭೂಮಿಗೆ ಇಲ್ಲ ಯಾವ ಹೆಸರು (ಕವನ: ತಾಯಿ-ಮಗಳ ಸಂವಾದ) ತವರು ಹೇಗಿರುತ್ತದೆ ಎಂಬುದಕ್ಕೆ ‘ಕಷ್ಟ-ಸುಖಕ್ಕೆ ದೊಡ್ಡ ಕವಿಗಳು/ ದ್ವೇಷ-ಅಸೂಯೆಗೆ ಪಟ್ಟು ಬಾಯಿ/ ಇದುವೇ ನನ್ನ ತವರು (ಕವನ: ತವರು) ವ್ಯಾಖ್ಯಾನಿಸುತ್ತಾಳೆ. ತಾನು ಹೆಣ್ಣಾಗಿರುವ ಹಾಗೂ ಹೇಗಿರಬೇಕು ಎಂಬುದರ ಸೂಕ್ಷ್ಮ ಪ್ರಜ್ಞೆಯ ಅಂತರಾವಲೋಕನ ಮಾಡುವುದು ಸಾಮಾನ್ಯವಾಗಿ ಹೆಣ್ಣೇ ಹೆಚ್ಚು. ಗಂಡಲ್ಲ; ಅದಕ್ಕೆ ಕಾರಣಗಳು ಬೇರೆ. ಈ ಪ್ರಕ್ರಿಯೆಯನ್ನು ಕವಯತ್ರಿ ಬಣ್ಣಿಸುವ ಪರಿ ಇದು ‘ ಪೊರೆ ಕಳಚಿ/ ಮತ್ತೆ ಹೊಸ ರೂಪ ಧರಿಸಿ/ ಹೆಣ್ಣಾಗಬೇಕಿದೆ/ ಹೆಣ್ತನವೆಂದರೆ/ ಮುಟ್ಟು ಮೈ ಮಾಂಸಗಳ ಬಿಟ್ಟು/ ಮತ್ತೇ ಮುಟ್ಟಬಲ್ಲ/ ರೂಪರೂಪಗಳನ್ನು ದಾಟಿದವಳು, ಅಲ್ಲವೇ? (ಕವನ: ಹೆಣ್ತನ) ಹೆಣ್ತನವೆಂದರೆ ಬೆಳವಣಿಗೆಯ ಒಂದು ಹಂತವಲ್ಲ; ಅದು, ಗಂಡಿನ ಅಸಹಾಯಕ ಸ್ಥಿತಿಯನ್ನೂ ಸಮರ್ಥವಾಗಿ ನಿರ್ವಹಿಸಬಲ್ಲಳು. ಇಂತಹ ಎಷ್ಟೋ ರೂಪುಗಳನ್ನು ದಾಟಿದವಳು ಎಂದು ‘ಹೆಣ್ತನ’ದ ವೈಶಾಲ್ಯತೆಯನ್ನು ತೋರಿ, ಹೆಣ್ಣಾಗಿ ಹುಟ್ಟಿದ್ದಕ್ಕೆ ಅಭಿಮಾನ ಪಡುವ ದಿಟ್ಟತನ ಈ ಸಾಲುಗಳಲ್ಲಿದೆ. ಮಾತ್ರವಲ್ಲ; ಆಕೆಗೇನು ತಿಳಿದಿಲ್ಲ? ‘ನದಿಗಳಿಗೂ ನೆನಪಿದೆ ಎನ್ನುವ ಕವಿತೆಯಲ್ಲಿ ‘ನಾಗರಿಕತೆಯ ಇತಿಹಾಸ-ವಿಕಾಸ-ಜನ ಸಂಸ್ಕೃತಿ-ಬೆಟ್ಟ-ಗುಡ್ಡದ ಭೂಗೋಲ ಎಲ್ಲವೂ ಕೊನೆಗೆ ‘ನಾನೂ ನಿನ್ನಂತೆ ನೀರಾಗಬೇಕು’ ಎಂದು ಹಂಬಲಿಸುತ್ತಾಳೆ. ಇಷ್ಟೆಲ್ಲ ರೂಪುಗಳನ್ನು ಪಡೆಯಲು ಹೆಣ್ಣಿಗೆ ಮಾತ್ರ ಸಾಧ್ಯ. ಗಂಡಿಗಲ್ಲ. ಆದ್ದರಿಂದ, ಹೆಣ್ಣಿನ ಈ ಹಂಬಲಕ್ಕೆ ಈ ಕವಿತೆಯು ಹೆಚ್ಚು ಅರ್ಥ ಸಾಧ್ಯತೆಗಳನ್ನು ಧ್ವನಿಸುತ್ತದೆ.

ಸಾಮಾಜಿಕ ಕ್ರೌರ್ಯ: ಹೆಣ್ಣಿಗೆ ಸಹನೆಯೇ ಭೂಷಣ. ಆದರೆ, ಅದಕ್ಕೂ ಮಿತಿ ಇದೆ ಎಂಬುದರ ಎಚ್ಚರವನ್ನು ಈ ಕವಿತೆಗಳು ಧ್ವನಿಸುತ್ತವೆ. ಹುದುಗಿಟ್ಟ ಭಾವಗಳ ಮತ್ತೆ ನುಡಿಸಲು ಕರೆ ನೀಡುತ್ತಾಳೆ. ಧುಮ್ಮಿಕ್ಕುವ ಭಾವಗಳು ‘ಕೊರಳೊಳಗೆ ಉಸಿರು ತಂಬಿ/ ಶಿವ ಡಮರುಗದಂತೆ/ ಒಮ್ಮೆ ಸುಮ್ಮನೆ ಹರಿಯುವ ಗಂಗೆಯಂತೆ/ ಒಮ್ಮೊಮ್ಮೆ ಲಾವಾರಸ ಉಕ್ಕಿಸುವ/ ಅಗ್ನಿಪರ್ವತದಂತೆ/ ಮತ್ತೊಮ್ಮೆ ಶಾಂತವಾಗಿ ನಿಂತ ಹಿಮಾಲಯದಂತೆ (ಕವನ: ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ) ಇರುವಂತೆ ಆಶಿಸುತ್ತಾಳೆ. ಸಾಂತ್ವನಕ್ಕಾಗಿ ಮೊದಲು ಯಾರ ಬಳಿ ಹೇಳಲಿ…ಹೇಳಲಾಗದ, ಹಂಚಲಾಗದ ಅನುಭವವನ್ನು ಒಬ್ಬಳೇ ಹೇಗೆ ಸಹಿಸಲಿ? (ಪಾಂಚಾಲಿಯ ಪ್ರಶ್ನೆಗಳು) ಎಂದು ತಲ್ಲಣಿಸುವ ಪಾಂಚಾಲಿಯ ಮನಸ್ಸನ್ನು ವಿಶ್ಲೇಷಿಸುವ ಕವಯತ್ರಿ, ಯಾವ ಸಮಾಜ ಏನಂದರೇನು? ‘ಋಣಮುಕ್ತಳಾಗಬೇಕಿದೆ/ ಸುವಾಸನೆಯ ಸ್ಫುರಿಸುವ/ ಸಂಪಿಗೆಯೋ? ಮಲ್ಲಿಗೆಯೋ/ ನಿನ್ನ ನೆಚ್ಚಿನ ಪಾರಿಜಾತವೋ?/ ನನ್ನ ಇಷ್ಟಕ್ಕೆ ನಾನು ನಗಬೇಕಿದೆ’ (ಕವನ : ನಗಬೇಕಿದೆ) ಎಂದು ತನ್ನನ್ನೇ ಮಾದರಿಯಾಗಿಸಿ, ಅಸಹಾಯಕ ಹೆಣ್ಣುಗಳಿಗೆ ಧೈರ್ಯ ತುಂಬುವ ಪರಿ ಅದ್ಭುತ. `ತ್ರೇತಾಯುಗದಲ್ಲಷ್ಟೇ ಅಲ್ಲ/ ಸೀತೆಯ ಅಗ್ನಿಪ್ರವೇಶಕ್ಕೆ ಈಗಲೂ ಕಾಯುತ್ತಿದ್ದಾರೆ (ಕವನ: ಇಂಥವರು ಇನ್ನೂ ಇದ್ದಾರೆ) ಎಂದು ಎಚ್ಚರಿಸುತ್ತಾರೆ. ‘ಜೋಗತಿ’ ಪದ್ಧತಿಯ ಸೃಷ್ಟಿಯಿಂದ ಬಾಲೆಯರು ನಲುಗಿದ ಪರಿಯನ್ನೂ ಹಾಗೂ ‘ಬಾಲೆಯ ಬಾಳಿಗೆ ಬೆಳಕಾಗಿ ಬಾರವ್ವ’ ಎಂದು ಸಾಮಾಜಿಕ ವ್ಯವಸ್ಥೆಯ ಅಮಾನವೀಯತೆಯನ್ನೇ ಪ್ರಶ್ನಿಸುತ್ತಾಳೆ. ಮನೆ ಕಟ್ಟುವಿಕೆಯ ಹಿಂದೆ ಬರೀ ಪುರುಷ ಪ್ರಾಧಾನ್ಯತೆಯನ್ನು ಕಾಣುವ ಸಮಾಜದ ಅಜ್ಞಾನಕ್ಕೆ ಕವಯತ್ರಿಯ ಅಸಮಾಧಾನವಿದೆ. ‘ನನ್ನನ್ನು ಬಿಟ್ಟು ಅವರನ್ನು ಮಾತ್ರ ಕಾಣುವ ಲೋಕಕ್ಕೆ ಏನು ಹೇಳಬೇಕು? (ಕವಿತೆ: ಮನೆ) ಎಂದು ಆಕ್ರೋಶವಿದೆ. ಈ ಸಮಾಜ ಎಷ್ಟೊಂದು ಹೊಲಸಾಗಿದೆ ಎನ್ನುವುದರ ವಿವರಣೆ ನೀಡುತ್ತಾ ‘ಪ್ರತಿಕ್ರಿಯಿಸಬೇಡ ಕವಿಯಾಗಿ ನೀನು/ ನಿನ್ನ ಕವಿತೆಯೇ ಮಾತನಾಡುವಂತೆ ಕವಿತೆ ಕಟ್ಟು’ (ಕವಿತೆ: ಕವಿತೆ ಕಟ್ಟು) ಎಂದು ಈ ಸಮಾಜದ ಕಪಾಳಕ್ಕೆ ಹೊಡೆದಂತೆ ಸ್ತ್ರೀ ಸಮೂಹವನ್ನು ಎಚ್ಚರಿಸುತ್ತಾಳೆ. ಕಾಲ ವ್ಯರ್ಥವಾಗಿದ್ದರ ಚಿಂತೆ ಬೇಡ ಎಂಬ ಸಲಹೆಯೊಂದಿಗೆ ‘ಬಾಳ ಸಂಜೆಯ ಪ್ರಶ್ನೆಯೆದುರು ಇನ್ನೂ ಕತ್ತಲಾಗಿಲ್ಲ (ಕವಿತೆ: ಬಾಲಸಂಜೆಯ ಪ್ರಶ್ನೆಗಳು) ಎಂದು ಧೈರ್ಯ ತುಂಬುತ್ತಾಳೆ. ಪುರುಷನ ಸೀಮಿತ ಜ್ಞಾನವನ್ನು ಅಣುಕಿಸುವಂತೆ ‘ಅರಳುವ ಪ್ರೇಮಕ್ಕೆ/ ಒಂದೇ ರೂಪವೇನು?/ ಮುತ್ತುಗಕ್ಕೂ ಪ್ರೀತಿಯ ಮುತ್ತಿದೆ/ ಅಲ್ಲವೇನು? (ಕವಿತೆ: ಮುತ್ತುಗ) ಎಂದು ಆತನ ಅಹಂಕಾರವನ್ನು ಪ್ರಶ್ನಿಸುತ್ತಾಳೆ. ಹೀಗೆ ತನ್ನ ವೈಚಾರಿಕ ಶಕ್ತಿಯ ಮೂಲಕ ಸಿದ್ಧಾಂತವಾಗಬೇಕಾದ ಅಗತ್ಯ -ಅನಿವಾರ್ಯತೆಯನ್ನು ಇಲ್ಲಿಯ ಕವಿತೆಗಳು ಧ್ವನಿಸುತ್ತವೆ.

ಹೆಣ್ಣು-ಪ್ರೀತಿ : ಪ್ರೀತಿ ಎಂದರೆ ಗಂಡಿಗೆ ಬದುಕಿನ ಅರ್ಥ ಭಾಗ ಮಾತ್ರ; ಆದರೆ, ಹೆಣ್ಣಿಗದು ಬದುಕೇ ಆಗಿದೆ ಎಂದು ಬ್ರಿಟನ್ ಲೇಖಕಿ ಮೇರಿ ಕೊರೆಲ್ಲಿ, ತಮ್ಮ‘open confession to a man from a woman’ ಕಾದಂಬರಿಯಲ್ಲಿ ಉಲ್ಲೇಖಿತ ಮಾತು. ಅದಕ್ಕೆ, ಪ್ರೀತಿ ವಂಚಿತಳಾದರೆ ಹೆಣ್ಣು ಹೆಚ್ಚಾಗಿ ಅಳುತ್ತದೆ. ಗಂಡಲ್ಲ. ಹೃದಯ ಕಮಲದಿ/ ಅಂದು ನೀನಿಟ್ಟ/ ಕಾವ್ಯ ಪ್ರೀತಿಯ ಸೆಲೆ/ ನೀನಂದೇ ಮರೆತೆಯೇನೋ ಸಖಾ (ಕವಿತೆ: ಸಖಾ) ಎಂದು ಕಂಗಾಲಾಗಿ ತಳಮಳಗೊಳ್ಳುತ್ತಾಳೆ. ಜಗವೇ ಸ್ತಬ್ಧವಾದಂತೆ / ನೀ ನನ್ನೆದುರೇ ಮೌನವಾಗುವುದು ಏಕೆ ಹೀಗೆ ಸಖಾ? (ಕವಿತೆ: ಏಕೆ ಹೀಗೆ) ಎಂದೂ ಪ್ರಶ್ನಿಸುತ್ತಾಳೆ. ‘ನಾ ಕೊಟ್ಟ ಮಾತು / ನೀ ಕೊಟ್ಟ ಭಾಷೆ/ ಸೋಲುತ್ತಿರುವಾಗ/ ವೀಣೆಯ ತಂತಿ ಕಿತ್ತು ಬರುವಂತೆ/ ನುಡಿಯಬೇಡ/ ನೋಡದಲ್ಲೇ ಚುಚ್ಚಿ ಹಿಂಸಿಸಬೇಡ (ಕವಿತೆ: ನೀ ಹೀಗೆ ನೋಡಬೇಡ) ಎಂದೂ ದಯನೀಯವಾಗಿ ಬೇಡಿಕೊಳ್ಳುತ್ತಾಳೆ. ಮಾತ್ರವಲ್ಲ; ಪ್ರೀತಿ ಎಂದರೆ ರೋಗ ಗೆಲ್ಲುವ ಮಂತ್ರವೆಂಬುದು ಮತ್ತೂ ಅರ್ಥವಾಯಿತು (ಕವಿತೆ:ಅರ್ಬುದ) ಹಾಗೂ ಆಧುನಿಕತೆಯನ್ನು ವಿಡಂಬಿಸುವ ‘ರೇಷ್ಮೆಗೂಡಿನಂಥ ಕೋಣೆಗಳ ಪಾಡು/ ಮೇಲ್ಮೈ ಸುಂದರ/ ಒಳಗೆ ಯಾರೂ ಹಿಡಿಯಲಾರದ ನೋವು (ಕವಿತೆ: ರೇಷ್ಮೆಗೂಡು) ಇಂತಹ ಸಾಲುಗಳ ಮೂಲಕ ಅರ್ಥಪೂರ್ಣ ಸಂದೇಶಗಳನ್ನು, ಕಾವ್ಯ ಮಾಧುರ್ಯದ ಸೊಗಸಿನ ಕವಿತೆಗಳಿವು.

(ಪುಟ:86 ಬೆಲೆ: 90 ರೂ. ಕಾಜಾಣ ಪ್ರಕಾಶನ, ಬೆಂಗಳೂರು, 2021)

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...