‘ಇದು ಎಂಥಾ ಜೀವದ ಬ್ಯಾಟಿ...’

Date: 22-01-2021

Location: .


ಸಾರ್ವಜನಿಕವಾಗಿ ಅಭಿವ್ಯಕ್ತಿಸದ , ಆದರೆ ಮನದಲ್ಲಿ ಎದ್ದು ನಿಲ್ಲುವ ಹಿಂಸೆ ಹಾಗೂ ಕ್ರೌರ್ಯವನ್ನು ಮುಖಾಮುಖಿಯಾಗಿಸಿ, ತಾವೂ ಸಮಾಜದ ಭಾಗವೇ ಆಗಿ ಮನುಷ್ಯರಾಗುವುದರ ಕುರಿತು ಹಿರಿಯ ವಿಮರ್ಶಕ ಡಾ. ಎಚ್‌.ಎಸ್‌. ರಾಘವೇಂದ್ರರಾವ್‌ ಅವರು ತಮ್ಮ ’ಆವುಗೆಯ ಕಿಚ್ಚು’ ಅಂಕಣದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದರ ಪಠ್ಯ ಇಲ್ಲಿದೆ;

ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
...........

‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲಾ...’ - ಅಂಬಿಕಾತನಯದತ್ತ

ನನಗಂತೂ ಇದು ಬಿಡಿಸಲಾರದ ಪ್ರಶ್ನೆ. ನನ್ನ ಮನಸ್ಸು ಹಿಂಸೆ ಮತ್ತು ಅಹಿಂಸೆ ಎಂಬ ಪದಗಳ ಸುತ್ತ ತಾಕಲಾಡುತ್ತದೆ. ಪ್ರಾಣಿಲೋಕ, ಮನುಷ್ಯ ಲೋಕಗಳು ಎಂದಿನಿಂದಲೂ ಬದುಕಿ ಬಂದಿರುವ ಬಗೆಯನ್ನು ನೋಡಿದಾಗ, ಯಾವುದು ಸಹಜ ಯಾವುದು ಅಸಹಜ ಎಂಬ ಪ್ರಶ್ನೆ ನಿರಂತರವಾಗಿ ಕಾಡಿದೆ.

ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕುವುದಿದೆ. ಪ್ರೀತಿಯಿಂದಲೇ ಸಾಕುವುದಿದೆ. ಬೆಕ್ಕು, ನಾಯಿ, ಕಾಗೆ, ಕುರಿಗಳನ್ನು ಮನೆಯವರಂತೆಯೇ ಪ್ರೀತಿಸುವ, ಅವುಗಳ ನೋವಿನಲ್ಲಿ ಕರಗುವ, ಅವುಗಳಿಂದ ಬೆಚ್ಚನೆಯ ಪ್ರೀತಿ ಪಡೆಯುವ ಮಾಂಸಾಹಾರಿಗಳನ್ನು ನೋಡಿದ್ದೇನೆ. ಸಸ್ಯಾಹಾರಿಗಳನ್ನೂ ನೋಡಿದ್ದೇನೆ. ಅದರಂತೆಯೇ ಸಸ್ಯಲೋಕ, ಪ್ರಾಣಿಲೋಕಗಳ ಜೊತೆಗೆ ಯಾವುದೇ ಸಂಬಂಧ ಇಟ್ಟುಕೊಳ್ಳದ, ಮನುಷ್ಯರಿಗೂ ಬೆಚ್ಚನೆಯ ಪ್ರೀತಿ ಕೊಡದ ಸ್ವ-ಕೇಂದ್ರಿತ ಸಸ್ಯಾಹಾರಿಗಳನ್ನೂ ನೋಡಿದ್ದೇನೆ. ಅಂತೆಯೇ, ಬೆಳಗಿನ ಜಾವ, ಇರುವೆಗಳಿಗೆ ಸಕ್ಕರೆ ಹಾಕಿ, ದಿನವೆಲ್ಲಾ ಮನುಷ್ಯರ ಜೀವಕ್ಕೆ ಕಂಟಕವಾಗುವ ‘ಅಹಿಂಸಾಪರ’ರನ್ನು ಕಂಡಿದ್ದೇನೆ. ನಾನು ಮಿಡಲ್ ಸ್ಕೂಲಿನಲ್ಲಿರುವಾಗ ಓದಿದ ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಬರುವ ‘ಬಲೀಂದ್ರ ಹೋತದ ಪ್ರಸಂಗ’ ಮತ್ತು ಅಲ್ಲಿ ಬರುವ ಬಾಡುಗಳ್ಳ ಸೋಮ, ಹೂವಯ್ಯ, ಪುಟ್ಟಣ್ಣರಂತಹ ಪಾತ್ರಗಳು ಮತ್ತು ಅಲ್ಲಿನ ನಾಯಿಗಳ ಲೋಕ ಇವೆಲ್ಲವೂ ನನಗೆ ಹೊಸ ತಿಳಿವಳಿಕೆಯನ್ನು ಕೊಟ್ಟವು. ಹಿಂಸೆ ಮತ್ತು ಅಹಿಂಸೆ ಎಂಬ ಪರಿಕಲ್ಪನೆಗಳನ್ನು ವಿಶಾಲವಾದ ಭಿತ್ತಿಯಲ್ಲಿ ನೋಡುವುದನ್ನು ಕಲಿಸಿದವು. ಹಾಗೆಯೇ ಲಂಕೇಶ್ ಅವರ ‘ನಾನು, ಗಾಂಧಿ ಮತ್ತು ನಮ್ಮ ಮೇಷ್ಟ್ರು’ ಕವಿತೆಯಲ್ಲಿ ಕವಿಯು ಗಾಂಧಿಗೆ ಕೇಳುವ ಪ್ರಶ್ನೆಗಳು ಮೌಲಿಕವೆನಿಸಿದವು. ಯಾವುದು ಹಿಂಸೆ, ಯಾವುದು ಅಹಿಂಸೆ ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಂಡೆ. ಹಾಗೆಯೇ ಎಸ್. ದಿವಾಕರ ಅವರ ‘ಕ್ರೌರ್ಯ’ ಕಥೆಯಲ್ಲಿ ಒಂದು ಹನಿ ರಕ್ತವೂ ಚೆಲ್ಲದೆ ಬಂಧುಬಾಂಧವರು ಮಾಡುವ ಹಿಂಸೆಯೂ ಚೂರಿ ಹಾಕಿ ಕೊಂದವನ ಹಿಂಸೆಗಿಂತ ಕ್ರೂರವೆನ್ನಿಸುತ್ತದೆ. ಆದ್ದರಿಂದಲೇ ‘ಹಿಂಸೆ’ಯೆಂಬ ಪರಿಕಲ್ಪನೆಯನ್ನು ಮಾಂಸಾಹಾರ/ಸಸ್ಯಾಹಾರಗಳಿಗೆ ಮಾತ್ರ ಸೀಮಿತಗೊಳಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಹಾಗಾದರೆ, ಯಾವುದು ಹಿಂಸೆ, ಯಾವುದು ಕ್ರೌರ್ಯ, ನಮ್ಮ ಅನುಕಂಪದ ವಲಯ ಯಾರನ್ನು ಎಷ್ಟರ ಮಟ್ಟಿಗೆ ಯಾಕೆ ಒಳಗೊಳ್ಳುತ್ತದೆ? ಅದು ಯಾರನ್ನು ಯಾಕೆ ಆಚೆ ಇಡುತ್ತದೆ? ‘ಪುಣ್ಯಕೋಟಿ’ಯ ಸತ್ಯನಿಷ್ಠೆಯಿಂದ ಪಶ್ಚಾತ್ತಾಪ ಪಟ್ಟ ‘ಅರ್ಬುತ’ನೆಂಬ ಚಂಡವ್ಯಾಘ್ರನಲ್ಲಿ ಅಂತಹ ಭಾವನೆಗಳನ್ನು ಬಿತ್ತಿದವರಾರು? ಮಾಂಸಾಹಾರಿಯಾದ ಎಲ್ಲ ಪ್ರಾಣಿಗಳೂ ಈ ಬಗೆಯ ನಿರಶನ ಹಾಗೂ ಆತ್ಮಹತ್ಯೆಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವೇ?. ಮಾಂಸ ಮತ್ತು ಸಸ್ಯ ಎರಡನ್ನೂ ತಿಂದು ಅರಗಿಸಿಕೊಳ್ಳಬಲ್ಲ ಮನುಷ್ಯ ಪ್ರಾಣಿಯು ಕೇವಲ ಸಸ್ಯಾಹಾರಕ್ಕೆ ತನ್ನನ್ನು ಸೀಮಿತಗೊಳಿಸಿಕೊಳ್ಳಲು ಇದ್ದ ಕಾರಣಗಳು/ಒತ್ತಡಗಳು ಯಾವುವು? ಈಚೆಗೆ ನನ್ನ ಮೂರು ವರ್ಷದ ಮೊಮ್ಮಗ ನೀವ್ ‘ಪ್ಲಾನೆಟ್ ಅರ್ತ್’ ಡಾಕ್ಯುಮೆಂಟರಿಯಲ್ಲಿ ಹುಲಿಯು ಜಿಂಕೆಯನ್ನು ಬೇಟೆಯಾಡುವುದನ್ನು ನೋಡುತ್ತಿದ್ದನಂತೆ. ನನ್ನ ಮಗನೋ ಸೊಸೆಯೋ ಹುಲಿಗೆ ಆಹಾರವಾಗುತ್ತಿದ್ದ ಜಿಂಕೆಯ ಬಗ್ಗೆ ಅಯ್ಯೋ ಎಂದಾಗ, ಇವನು ‘ಬಟ್, ದ ಟೈಗರ್ ಈಸ್ ಹಂಗ್ರಿ’ ಎಂದನಂತೆ. ಹುಲಿಯ ಹಸಿವಿನ ಭಾಷೆಯು, ‘ಅಹಿಂಸೆಯ ಪಾಠ’ಗಳಿಂದ ಪ್ರಭಾವಿತವಾಗದ ಮಗುವಿಗೆ ಅರ್ಥವಾಯಿತು. ಆದರೆ, ಇದೇ ಮಗು, ತನ್ನ ಮನೆಯ ಹಿತ್ತಲಿನಲ್ಲಿ ಓಡಾಡುತ್ತಿದ್ದ ಪುಟ್ಟ ಬಸವನ ಹುಳವನ್ನು ಮನೆಯೊಳಗೆ ಇಟ್ಟುಕೊಂಡು ಸಾಕೋಣವೇ ಎಂದು ತಂದೆ ಕೇಳಿದಾಗ, ‘ನೋ, ಇಟ್ಸ್ ಮಮ್ಮಿ ವಿಲ್ ಬಿ ವೈಟಿಂಗ್ ಫಾರ್ ಇಟ್. ಲೆಟ್ ಇಟ್ ಗೋ.’ ಎಂದನಂತೆ. ಅವನಿಗೆ ಆ ಹುಳದ ತಾಯಿತನವೂ ಅರ್ಥವಾಗುತ್ತದೆ. ಇದು ಪ್ರಕೃತಿಗೆ ಹತ್ತಿರವಾದ ಮಗು-ಮನಸ್ಸು ಕೆಲಸ ಮಾಡುವ ರೀತಿ. ನಾವು ಹಿರಿಯರು ಹಸುವಿನ ಬಾಯಲ್ಲಿ “ಖಂಡವಿದೆ ಕೋ, ಮಾಂಸವಿದೆ ಕೋ..” ಎಂದು ಹೇಳಿಸಿ ಹುಲಿಯ ಬಾಯಲ್ಲಿ ಎನ್ನ ಒಡಹುಟ್ಟಮ್ಮ ನೀನು. ನಿನ್ನ ಕೊಂದು ನಾನೇನ ಪಡೆವೆನು” ಎಂದು ಹೇಳಿಸುತ್ತೇವೆ. ಆ ಕಥೆಗೆ ಇರಬಹುದಾದ ಇತರ ಅರ್ಥಗಳನ್ನು ಪಕ್ಕಕ್ಕಿಟ್ಟು ನೋಡಿದಾಗ, ಅದು ಪ್ರಕೃತಿಸತ್ಯಗಳನ್ನು ಸರಿಯಾಗಿ ಗ್ರಹಿಸದ ಕವಿತೆ ಎನ್ನಿಸುತ್ತದೆ. ನಾಗರಿಕತೆಯ ವಿಕಾಸದ ಯಾವ ಹಂತದಲ್ಲಿ, ಯಾವ ಸಂಸ್ಕೃತಿಯಲ್ಲಿ ಯಾವ ಆಚರಣೆಗಳು ಬಂದು ಸೇರುತ್ತವೆ ಎಂದು ಹೇಳುವುದು ಕಷ್ಟ. ಇಡೀ ಜಗತ್ತಿನಲ್ಲಿ ಇಂಡಿಯಾದಲ್ಲಿ ಮಾತ್ರ ಅದೂ ಜೈನ ಧರ್ಮದ ಹಿನ್ನೆಲೆಯಲ್ಲಿ ಮೈದಳೆದು, ಹಿಂದೂಧರ್ಮದ ಕೆಲವೇ ಕೆಲವು ಜಾತಿಗಳಿಗೆ ಹರಡಿದ ಸಸ್ಯಾಹಾರದ ಪರಿಕಲ್ಪನೆಯನ್ನು ಆ ಚೌಕಟ್ಟಿನಲ್ಲಿಯೇ ಅರ್ಥ ಮಾಡಿಕೊಳ್ಳಬೇಕು. ಜನ್ನನ ‘ಯಶೋಧರ ಚರಿತೆ’ಯಲ್ಲಿ ಹಿಟ್ಟಿನ ಹುಂಜವನ್ನು ಬಲಿಕೊಟ್ಟು ಸಂಕಲ್ಪಹಿಂಸೆ ಮಾಡಿದ ಯಶೋಧರ ಮತ್ತು ಅವನ ತಾಯಿ ಚಂದ್ರಮತಿ ನಂತರದ ಏಳು ಜನ್ಮಗಳಲ್ಲಿ ಪಟ್ಟ ಪಡಿಪಾಟಲುಗಳನ್ನು ನೋಡಿದರೆ, ಅಪರಾಧಕ್ಕಿಂತ ಶಿಕ್ಷೆಯೇ ಹಿಂಸ್ರಕವೂ ಕ್ರೂರವೂ ಆಗಿರುವ ‘ಧರ್ಮ’ವು ಕಣ್ಣಿಗೆ ಕಟ್ಟುತ್ತದೆ. ಅದರಿಂದಲೇ ಬೇಂದ್ರೆಯವರು “ಮನೆಯವರು ವೈದಿಕರು, ಊರು ಧರ್ಮದ ತವರು. ಶಾಸ್ತ್ರವಿರೆ ಬೇರೆಯ ವಿಚಾರವೇಕೆ?” ಎಂದು ‘ಪುಟ್ಟ ವಿಧವೆ’ ಕವಿತೆಯಲ್ಲಿ ಹೇಳಿದ್ದು. ಈ ಮಾತಿಗೆ ಮರುನುಡಿಗೊಡುವಂತೆ ಕುವೆಂಪು, ಅವರು ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು ಹೇಳುತ್ತಾರೆ.

ಇಷ್ಟೆಲ್ಲ ಹೇಳಿದರೂ ಹುಟ್ಟಿನಿಂದ ಬಂದ ಅಭ್ಯಾಸಗಳ ಹಾಗೂ ಭಾವಸಂಕೀರ್ಣಗಳ ಬಂಧನವನ್ನು ಮೀರುವುದು ಅಸಾಧ್ಯವೆನ್ನುವಷ್ಟು ಕಷ್ಟ. ತರ್ಕ ಮತ್ತು ಬುದ್ಧಿಗಳು ಏನೇ ಹೇಳಿದರೂ ಜೀವಂತವಾಗಿರುವ ಪ್ರಾಣಿಯನ್ನು ಕೊಲ್ಲುವ ವಿಚಾರವನ್ನು ನನ್ನ ಅಸ್ತಿತ್ವವು ಇಡಿಇಡಿಯಾಗಿ ನಿರಾಕರಿಸುತ್ತದೆ. ಹಾಗೆ ಮಾಡುವವರ ಕ್ರಿಯೆಯು ಸಹಜ ಮತ್ತು ಸರಿ ಎಂದು ಗೊತ್ತಿದ್ದರೂ ‘ನೀನು ಹಾಗೆ ಮಾಡಬೇಡ.’ ಎಂದೇ ಹೇಳುತ್ತದೆ. ಕೊನೆಗೂ ಹೇಳುವುದೇನು. ಅವರದೂ ತಪ್ಪಲ್ಲ, ನನ್ನದೂ ಅಲ್ಲ. ಒಬ್ಬರಿಗೆ ಇನ್ನೊಬ್ಬರ ಮೇಲೆ ಒತ್ತಾಯ ಮಾಡುವ ಹಕ್ಕಿಲ್ಲ. ತಾನು ಸಸ್ಯಾಹಾರಿಯೆಂಬ ಕಾರಣದಿಂದ ‘ಮೇಲರಿಮೆ’ ಪಡುವ ಹಕ್ಕು ಯಾರಿಗೂ ಇಲ್ಲ. ಈ ಮಾತನ್ನು ನಾವೆಲ್ಲ ಒಪ್ಪಿದರೂ ಅದು ನಮ್ಮ ಸಾಮಾಜಿಕ ನಡವಳಿಕೆಯ ಭಾಗವಾಗುವುದು ಎಷ್ಟೊಂದು ಕಷ್ಟ! ನಾವು ನಮ್ಮನ್ನೇ ಮೀರುವುದು ಬಹಳ ದೊಡ್ಡ ಮೀರುವಿಕೆಯೆಂದು ತೋರುತ್ತದೆ.

ಈ ರೀತಿಯಲ್ಲಿ, ಅನ್ಯರನ್ನು ಒಳಗೊಳ್ಳುವಿಕೆ ಮತ್ತು ಹೊರಗಿಡುವಿಕೆಗೆ ಕಾರಣವೇನು? ನಮಗೆ ಹುಟ್ಟಿದಾಗಿನಿಂದಲೂ ಅಭ್ಯಾಸವಾಗಿರುವ ಹಾಗೆ ಬದುಕುತ್ತಾ ಹೋಗುವುದು ಬಹಳ ಸುಲಭ. ನೂರಕ್ಕೆ ತೊಂಬತ್ತು ಜನ ಇರುವುದು ಹಾಗೆಯೇ. ಆದರೆ, ಕೆಲವರು ತಮ್ಮ ಬದುಕಿನ ಬಗೆಯನ್ನು ಪರಿಶೀಲಿಸಿ, ಬದಲಾವಣೆಯ ಅಗತ್ಯವನ್ನು ಮನಗಂಡು ಬೇರೇನೋ ಆಗಲು ಪ್ರಯತ್ನಿಸುತ್ತಾರೆ. ಅದು ಒಂದು ಬಗೆ. ಆದರೆ, ತಮ್ಮ ಅನಿಸಿಕೆಗಳಿಗೆ ಅನುಗುಣವಾಗಿ ಇತರರನ್ನು ಬದಲಾಯಿಸಲು ತೀರ್ಮಾನಿಸುವುದು, ಆ ಬಗ್ಗೆ ಒತ್ತಾಯ ತರುವುದು ಕೂಡ ನಡೆಯುತ್ತದೆ. ಅದು ಕೇವಲ ಆಹಾರಪದ್ಧತಿಗಳಿಗೆ ಸೀಮಿತವಾಗಿ ಉಳಿಯುವುದಿಲ್ಲ. ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕದಲ್ಲಿ ಬರುವ ಕೆಲವು ಸನ್ನಿವೇಶಗಳು ನನ್ನ ಮೇಲೆ ತೀವ್ರ ಪ್ರಭಾವ ಬೀರಿವೆ. ಅಲ್ಲಿ ಬರುವ ಕೆಂಚ, ರುದ್ರ, ಉಜ್ಜ ಮುಂತಾದವರಲ್ಲಿ ಬಸವಣ್ಣನವರ ವಿಚಾರಗಳು/ನಿಲುವುಗಳು ತಿಳಿದೋ ತಿಳಿಯದೆಯೂ ಹುಟ್ಟಿಸುವ ತಲ್ಲಣ, ಯಾತನೆಗಳು ಬಹಳ ವಾಸ್ತವವೆನಿಸುತ್ತದೆ. ಖಂಡ, ಹೆಂಡ ಮತ್ತು ಹೆಣ್ಣುಗಳಿಗಾಗಿ ಹಂಬಲಿಸುವ ಉಜ್ಜನ ಬಗ್ಗೆ ನಮ್ಮ ಮನಸ್ಸಿನಲ್ಲಿ ಮೆಚ್ಚಿಗೆ, ಅನುಕಂಪಗಳೇ ಹುಟ್ಟುತ್ತವೆ. ಅದೇ ನಾಟಕದಲ್ಲಿ ಶರಣಧರ್ಮವನ್ನು ಒಪ್ಪಿಕೊಂಡ, ಬಸವಣ್ಣನವರನ್ನು ಆರಾಧಿಸುವ ಉಷಾ ಮತ್ತು ರುದ್ರ ಒಬ್ಬರಿಗೊಬ್ಬರು ಕೊಟ್ಟುಕೊಳ್ಳುವ ಹಿಂಸೆಯು ಮನಸ್ಸನ್ನು ನಡುಗಿಸಿಬಿಡುತ್ತದೆ. ನಾವು ಸ್ವತಃ ನಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಅಂದುಕೊಳ್ಳುವುದಕ್ಕೂ ಅವರು ವಾಸ್ತವದಲ್ಲಿ ಇರುವುದಕ್ಕೂ ಮತ್ತು ಕಾಲಕ್ರಮದಲ್ಲಿ ಬದಲಾಗುವುದಕ್ಕೂ ಇರುವ ಅಂತರವು ಎಷ್ಟೊಂದು ಬಗೆಯ ಹಿಂಸೆಗಳಿಗೆ ಕಾರಣವಾಗುತ್ತದೆ. ಅಲ್ಲವೇ? ಕೊನೆಗೂ ಅನ್ಯವನ್ನು ಅರ್ಥ ಮಾಡಿಕೊಳ್ಳುವುದು, ಅವರ ಸ್ವಾತಂತ್ರ್ಯವನ್ನು ಗೌರವಿಸುವುದು, ಅವರನ್ನು ಸಹಿಸಿಕೊಳ್ಳುವುದಲ್ಲ, ಪ್ರೀತಿಸುವುದು ಇವೆಲ್ಲವೂ ಅ-ಹಿಂಸೆಯ ಮೂಲಗಳು. ವ್ಯಕ್ತಿಯ ನೆಲೆಯಲ್ಲಿಯೂ ಅಷ್ಟೆ, ಸಮುದಾಯಗಳ ನೆಲೆಯಲ್ಲಿಯೂ ಅಷ್ಟೆ.

ನಾವು ನಮ್ಮ ‘ನಾಯಕ’ರನ್ನು ಗುರುತಿಸುವ, ವಿವರಿಸಿಕೊಳ್ಳುವ ಬಗೆಯಲ್ಲಿಯೇ ಸಮಸ್ಯೆಗಳಿವೆ. ನಮಗೆ ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳುವುದಕ್ಕಿಂತ ಬೇರೆ ಯಾರನ್ನೋ ಹಿಂಬಾಲಿಸುವುದು ಇಷ್ಟ. ಯಾಕೆಂದರೆ ಅದು ಸುಲಭ. ಸ್ವಾತಂತ್ರ್ಯವನ್ನು ಅನುಭವಿಸುವುದೂ ಬಹು ದೊಡ್ಡ ಜವಾಬ್ದಾರಿ. ನಮ್ಮ ನಾಯಕರಲ್ಲಿ ನಾವು ಆಕ್ರಮಣಶೀಲತೆ, ಹಟಮಾರಿತನ, ಕ್ರೌರ್ಯ ಮುಂತಾದ ಗುಣಗಳನ್ನು ಮೆಚ್ಚಿಕೊಳ್ಳುತ್ತೇವೆ. ನಾವು ಮುಖ್ಯವೆಂದು ನಂಬಿರುವ ‘ಸಂಗತಿ’ಗಳನ್ನು ಕಾಪಾಡಲೆಂದು ಮಾಡುವ ಹಿಂಸೆಯನ್ನು ಪರಾಕ್ರಮ, ಪೌರುಷ ಮುಂತಾದ ಹೆಸರುಗಳಿಂದ ಕರೆಯಲು ನಮಗೆ ಯಾವ ಹಿಂಜರಿಕೆಯೂ ಇಲ್ಲ. ಒಂದು ವೇಳೆ ಆ ತೋಳ ಹಳ್ಳಕ್ಕೆ ಬಿದ್ದರೆ, ಕಲ್ಲೆಸೆಯಲು ಕೂಡ ನಾವು ಸದಾ ಸಿದ್ಧರು. ನಾವು ಮೆಚ್ಚುವ ಮೆಚ್ಚುತ್ತಿರುವ ರಾಜಕಾರಣ ಕೂಡ ಈ ಬಗೆಯದೇ. ಇಂದು ನಮ್ಮ ಸುತ್ತಲೂ ಮೆರೆಯುತ್ತಿರುವ ಬಗೆಬಗೆಯ ಹೆಗ್ಗಣಗಳು ನಮಗೆ ಬಹಳ ಮುದ್ದಾಗಿ ಕಾಣುತ್ತಾರೆ. ಆದರೆ ದಶಕಗಳಿಂದ ಜನಹಿತಕ್ಕಾಗಿಯೇ ಅಹಿಂಸಾತ್ಮಕವಾಗಿಯೇ ದುಡಿದ, ದುಡಿಯುತ್ತಿರುವ ಇರೋಮ್ ಚಾನು ಶರ್ಮಿಳಾ, ಮೇಧಾ ಪಾಟ್ಕರ್, ಮಹಾಶ್ವೇತಾದೇವಿ, ಗೋದಾವರಿ ಪರುಳೇಕರ್, ಸಾವಿತ್ರೀಬಾಯಿ ಫುಲೆ, ಬಾಬಾ ಅಮ್ಟೆ ಮುಂತಾದವರ ಕಡೆ ನಾವು ತಲೆ ಎತ್ತಿಯೂ ನೋಡುವುದಿಲ್ಲ. ಈ ಪಟ್ಟಿಯಲ್ಲಿ ಬಹು ಪಾಲು ಮಹಿಳೆಯರೇ ಇರುವುದು ಆಕಸ್ಮಿಕವಲ್ಲ. ನಮ್ಮ ‘ಪೌರುಷ’ದ ಕಲ್ಪನೆಯಲ್ಲಿಯೇ ಹಿಂಸೆಯ ಬೀಜಗಳಿವೆ. ಇದು ಮಾಂಸ ತಿನ್ನುವುದು ಅಥವಾ ತಿನ್ನದಿರುವುದು ಅನ್ನುವಷ್ಟು ಸರಳವಲ್ಲ. ಬೇರೆಯವರಿಗೆ ಆಗುವ ದೈಹಿಕ/ಭಾವನಾತ್ಮಕ/ಮಾನಸಿಕ ನೋವಿನ ಬಗೆಗಿನ ನಿರ್ಲಕ್ಷ್ಯಕ್ಕೂ ‘ತಾನು ಸಂತೋಷವಾಗಿ ಇದ್ದರೆ ಸಾಕು’ ಎಂಬ ಸ್ವಾರ್ಥಕ್ಕೂ ಬಹಳ ಹತ್ತಿರದ ಸಂಬಂಧವಿರುವಂತೆ ಕಾಣುತ್ತದೆ. ಬೇರೆಯವರ ನೋವನ್ನು ಗ್ರಹಿಸಲು ಅಗತ್ಯವಾದ ಸಂವೇದನಶೀಲತೆಯನ್ನು ಮನುಷ್ಯನು ಹೇಗೆ, ಯಾಕೆ ಕಳೆದುಕೊಳ್ಳುತ್ತಾನೆ ಎನ್ನುವುದರ ಬಗ್ಗೆ ನಾವು ಇನ್ನಷ್ಟು ಯೋಚಿಸಬೇಕು.

ಬಾಲ್ಯದ ಅನುಭವಗಳು ನಮ್ಮ ವ್ಯಕ್ತಿತ್ವಕ್ಕೆ ಮಾಡುವ ಗಾಯಗಳು ನಮ್ಮನ್ನು ರೂಪಿಸಿರುತ್ತವೆ. ಪ್ರತಿಯೊಂದು ಕುಟುಂಬಕ್ಕೂ ತನ್ನದೇ ಆದ ಸ್ವಭಾವರೂಪಣದ ಸಾಮರ್ಥ್ಯವಿರುತ್ತದೆ. ನಮ್ಮ ತಂದೆ, ತಾಯಿ, ಅಣ್ಣ, ಅಕ್ಕ, ತಮ್ಮ, ತಂಗಿಯರ ಸಂಗಡ ನಮಗೆ ಬೆಳೆಯುವ ಭಾವಮೈತ್ರಿ ಮತ್ತು ಅಭಿವ್ಯಕ್ತಿಯ ಬಗೆಗಳೇ ಇಡೀ ಲೋಕದ ಸಂಗಡ ನಾವು ನಡೆದುಕೊಳ್ಳುವ ರೀತಿಯನ್ನೂ ತೀರ್ಮಾನಿಸುತ್ತವೆ. ಅಷ್ಟೇ ಅಲ್ಲ, ಒಂದೇ ಕುಟುಂಬದ ಬೇರೆ ಬೇರೆ ಸದಸ್ಯರ ನಡುವಿನ ಡೈನಾಮಿಕ್ಸ್ ಕೂಡ ಬೇರೆ ಬೇರೆಯಾಗಿರುತ್ತದೆ. ಒಟ್ಟಿಗೆ ಬೆಳೆದವರೂ ಭಿನ್ನ ಭಿನ್ನವಾಗಿರುತ್ತಾರೆ. ಅಣ್ಣ ಇದ್ದ ಹಾಗೆ ತಮ್ಮನಿರುವುದಿಲ್ಲ. ಅಕ್ಕ ಇದ್ದ ಹಾಗೆ ತಂಗಿ ಇರುವುದಿಲ್ಲ. ಈ ಭಿನ್ನತೆಯ ಕಾರಣವನ್ನು ವಂಶವಾಹಿಗಳ ಮೇಲೆ ಹಾಕುವುದೋ, ಗೆಳೆತನಗಳ ಮೇಲೆ ಹಾಕುವುದೋ ಶಿಕ್ಷಣದ ಮೇಲೆ ಹಾಕುವುದೋ. ಪ್ರಶ್ನೆ ಸುಲಭ, ಉತ್ತರ ಸಂಕೀರ್ಣ.

ಹೀಗೆ, ಬೇರೆ ಬೇರೆ ಹಿನ್ನೆಲೆಯ ಕುಟುಂಬಗಳಿಂದ ಬಂದ ಹೆಣ್ಣು-ಗಂಡು ಸಂಧಿಸಿ ಒಡಬಾಳಲು ತೊಡಗಿದಾಗ ಯಾರ ತಪ್ಪೂ ಇಲ್ಲದಿದ್ದರೂ ಚಕಮಕಿಗಳು ನಡೆಯುತ್ತವೆ. ಯಾಕೆಂದರೆ, ಅವರು ತಮ್ಮ ತವರುಮನೆಗಳಲ್ಲಿ ಬೇರೆ ಬೇರೆ ಭಾಷೆಗಳನ್ನು ಕಲಿತಿರುತ್ತಾರೆ. ಸಹಜವಾಗಿಯೇ ಒಬ್ಬರಿಗೊಬ್ಬರು ಅರ್ಥವಾಗುವುದಿಲ್ಲ. ಒಬ್ಬರಿಗೆ ಪ್ರೀತಿಯೆನಿಸಿದ್ದು ಇನ್ನೊಬ್ಬರಿಗೆ ಹಾಗೆ ತೋರುವುದಿಲ್ಲ. ಇದು ಕೂಡ ಪರಸ್ಪರ ಹಿಂಸೆಯ ಬೀಜವೇ.

ಕುಟುಂಬದ ಹಾಗೆಯೇ ಧರ್ಮ, ಜಾತಿ, ಭಾಷೆ, ದೇಶ ಅಷ್ಟೇ ಏಕೆ ನೈತಿಕತೆಯ ಕಲ್ಪನೆಗಳು ಕೂಡ ಹಿಂಸೆಯಂತಹ ಹಿಂಸೆಯೂ ಕರ್ತವ್ಯ ಎಂದು ನಂಬುವಂತೆ ಮಾಡುತ್ತವೆ. ಇದಕ್ಕೆ ನಿದರ್ಶನಗಳನ್ನು ನಮ್ಮ ಕಣ್ಣೆದುರಿನಲ್ಲಿಯೇ ನೋಡುತ್ತಿದ್ದೇವೆ. ಅಪಾರವಾದ ಹಿಂಸೆಗೆ ಗುರಿಯಾಗಿದ್ದ ಸಮುದಾಯಗಳು ಕೂಡ ಬಹು ಬೇಗ ಅದೆಲ್ಲವನ್ನೂ ಮರೆತು ಸ್ವತಃ ತಾವು ಇತರರನ್ನು ಹಿಂಸೆಗೆ ಗುರಿಪಡಿಸುತ್ತವೆ. ಅಂದಿನ ಬಲಿಪಶುಗಳೇ ಇಂದಿನ ಭಯೋತ್ಪಾದಕರಾಗಿ ಬಿಡುತ್ತಾರೆ. ಒಂದೇ ಜೀವಸಂಕುಲದಲ್ಲಿರುವ ಜೀವಿಗಳ ನಡುವೆ ಇರುವ ಬಗೆಯ ಪರಸ್ಪರ ಆಕ್ರಮಣಶೀಲತೆ ಹಾಗೂ ಹಿಂಸೆಗಳು ಪ್ರವೃತ್ತಿಜನ್ಯವೇ?

ಆದರೆ, ಸಾವಿರಾರು ವರ್ಷಗಳ ಸಾಮಾಜಿಕ ಜೀವನವು ಮತ್ತು ನೀತಿ-ನಿಯಮಗಳು ನೇರವಾದ ದೈನಂದಿನದ ಹಿಂಸೆಯ ಪ್ರಮಾಣವನ್ನು ಕೊಂಚ ಕಡಿಮೆ ಮಾಡಿವೆ. ಹೊಂದಿ ಬಾಳುವುದನ್ನು ಕಲಿಸಿವೆ. ಅನೇಕ ಸಲ ಅವು ನಿರ್ದಿಷ್ಟವಾದ ವರ್ಗ, ವರ್ಣ, ಲಿಂಗ ಮತ್ತು ಜನಾಂಗಗಳ ಪರವಾಗಿ ಪಕ್ಷಪಾತ ತೋರಿಸಿದರೂ ಒಂದು ಮಟ್ಟದ ಸಹಜೀವನ ಸಾಧ್ಯವಾಗಿದೆ. ಇಲ್ಲಿಯೂ ಹಿಂಸೆಯ ಒಳಸುಳಿಗಳು ಇದ್ದರೂ ‘ನೀ ನನಗಿದ್ದರೆ ನಾ ನಿನಗೆ’ ಎನ್ನಲು ಸಾಧ್ಯವಾಗಿದೆ. ಪ್ರಾಣಿಯಾಗಿಯೇ ಹುಟ್ಟಿದವನು ಪ್ರಾಣಿಯಾಗಿಯೇ ಸಾಯುವನಾದರೂ ಒಂದಿಷ್ಟು ಹೊಸ ಗುಣಗಳನ್ನು ಕಲಿಯಲು ಸಂಘಜೀವನವು ಅನುವು ಮಾಡಿಕೊಟ್ಟಿದೆ. ಆದರೂ ಒಟ್ಟಂದದಲ್ಲಿ ಇರುವುದು ಹಿಂಸೆಗಳ ರಾಜ್ಯಭಾರವೇ.

ಈ ವಿಷವರ್ತುಲದಿಂದ ಬಿಡುಗಡೆಯಿದೆಯೇ? ತಿಳಿವಳಿಕೆಯೊಂದೇ ಸಂಯಮವೊಂದೇ ಅನುಕಂಪವೊಂದೇ ಪ್ರೀತಿ ಮಾತ್ರವೇ ಬಿಡುಗಡೆಯ ಮೂಲ ಇರಬಹುದು. ಆದರೆ, ಸಾವಿರಾರು ವರ್ಷಗಳ ಮನುಷ್ಯನ ಇತಿಹಾಸ ಇನ್ನಷ್ಟು ಮತ್ತಷ್ಟು ವ್ಯವಸ್ಥಿತವಾದ ಕ್ರೌರ್ಯ ಮತ್ತು ಅದರ ಬಗೆಗಿನ ನಿರ್ಲಕ್ಷ್ಯದ ಕಡೆಗೆ ಚಲಿಸುತ್ತಿದೆ. ಶಿಕ್ಷಣವೂ ಸೋಲುತ್ತಿದೆ, ಸಮುದಾಯಗಳೂ ಸೋಲುತ್ತಿವೆ. ನಾಗರಿಕತೆಗಳ ಹುಟ್ಟು ಸಾವುಗಳ ಚರಿತ್ರೆಯಾಚೆಗೆ, ಜೀವಸಂಕುಲಗಳ ಹುಟ್ಟುಸಾವುಗಳ ಇತಿಹಾಸವೂ ಇದೆಯಲ್ಲವೇ. ಅದು ನನ್ನ ನಿಮ್ಮ ಜೀವಿತ ಕಾಲದ ಆಚೆಗಿನ ಸಂಗತಿಯೇ ಇರಬಹುದು. ಆದರೆ, ಆ ಅರಿವು ನನ್ನ ನಿಮ್ಮ ಇಂದಿನ ಬಾಳಾಟವನ್ನು ಬದಲಿಸಬಲ್ಲುದೇ? ಇದಕ್ಕೆ ಅಗತ್ಯವಾದ ಶಕ್ತಿಯು ಬೇರೆಲ್ಲಿಂದಲೂ ಬರುವುದಿಲ್ಲ. ‘ಲೋಕ ಬದಲಾಗುತ್ತದೆ, ಅದರ ಪರಿಣಾಮವಾಗಿ ನಾನು ಬದಲಾಗುತ್ತೇನೆ.’ ಎನ್ನುವ ತರ್ಕ ಇಲ್ಲಿ ಸರಿಹೋಗುವಂತೆ ಕಾಣುವುದಿಲ್ಲ. ‘ನನಗೆ ತೋರಿದಷ್ಟು, ನನಗೆ ಸಾಧ್ಯವಿರುವಷ್ಟು ಬದಲಾಗಲು ನಾನು ಪ್ರಯತ್ನಿಸುತ್ತೇನೆ.’ ಎಂದುಕೊಂಡು ಹಾಗೆ ಮಾಡುವುದು ಸರಿಯೇನೋ. ಏಕೆಂದರೆ, ಪ್ರತಿಯೊಬ್ಬ ಮನುಷ್ಯನೂ ಸಮಾಜದ ಭಾಗವೇ ಆದರೂ ಅವನಿಗೆ ತನ್ನದೇ ಆದ ಪಥ ಇರುತ್ತದೆ. ಅದನ್ನು ಆರಿಸಿಕೊಳ್ಳುವ, ನೇರ್ಪಡಿಸಿಕೊಳ್ಳುವ ಸಾಧ್ಯತೆಗಳು ಅವನಿಗೆ ಮುಕ್ತವಾಗಿರುತ್ತವೆ. ಯಶವಂತ ಚಿತ್ತಾಲರು ಹೇಳಿದಂತೆ, ನಾವು ಮನುಷ್ಯರಾಗಿ ಹುಟ್ಟಿದವರಲ್ಲ, ಮನುಷ್ಯರಾಗಲು ಹುಟ್ಟಿದವರು. ಅವರ ಮನಸ್ಸಿನಲ್ಲಿರುವ ಮನುಷ್ಯ ಕೂಡ ಒಂದು ‘ಪರಿಕಲ್ಪನೆ. ಆ ದಾರಿಯಲ್ಲಿ ನಡೆಯಲು ಪ್ರಯತ್ನಿಸೋಣ. ಸಾಧ್ಯವಾಗದಿದ್ದರೆ ಬಹಳ ಕೊರಗುವುದು ಬೇಡ.

ಈ ಅಂಕಣದ ಹಿಂದಿನ ಬರೆಹಗಳು

ಬುಸುಗುಟ್ಟುವ ಹಾವು

ಯಾರು ಹಿತವರು ನಿನಗೆ......?

‘ಬೆಳದಿಂಗಳಾತು ಬನದಾಗ….’

‘ಸಂಬಂಜ ಅನ್ನೋದು ದೊಡ್ಡದು ಕಣಾ’

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...