ಇಲ್ಲಿ ರುಚಿ ನೋಡಿ, ಲೋಕ ಪಾಕಶಾಲೆಯಲ್ಲಿ ಊಟ ಮಾಡಿ!


‘ಕಾಕ್ ಟೇಲ್’ -ಲೇಖಕಿ ಚೇತನಾ ತೀರ್ಥಹಳ್ಳಿ ಅವರ ಹೊಸ ಕೃತಿ. ಅವರೇ ಹೇಳುವಂತೆ ಇದೊಂದು ಮಿಶ್ರಣಗಳ ಕಾಕ್ ಟೇಲ್. ಈ ಕೃತಿಯ ಕುರಿತು ಸ್ವತಃ ಲೇಖಕಿ ಚೇತನಾ ತೀರ್ಥಹಳ್ಳಿ ಅವರು ಬರೆದಿರುವ ಪ್ರವೇಶಿಕೆ ನಿಮ್ಮ ಓದಿಗಾಗಿ.

ಒಂದು ಓದು ಮತ್ತೊಂದು ಓದಿನ ಕುತೂಹಲಕ್ಕೆ ಹಚ್ಚುವಂತಿರಬೇಕು. ಒಂದು ಬರಹ ಮತ್ತೊಂದು ಬರಹವನ್ನು ಬರೆಸುವಂತಿರಬೇಕು. ಒಂದು ಚಿಂತನೆ ಮತ್ತೊಂದು ಚಿಂತನೆಗೆ ದಾರಿಯಾಗಬೇಕು. ಇದು ನನ್ನ ನಂಬಿಕೆ. ಮತ್ತು ನನ್ನ ಓದು, ನನ್ನ ಬರಹಗಳು, ನನ್ನ ಚಿಂತನೆ ಕೂಡಾ ಹುಟ್ಟಿಕೊಂಡಿದ್ದು ಹೀಗೇ.

ಸಾಮಾನು ಕಟ್ಟಿಕೊಟ್ಟ ಪೇಪರಿನಲ್ಲಿ ಕಂಡ ಯಾವುದೋ ಕಥೆಯ ಯಾವುದೋ ಪಾತ್ರ ಅಥವಾ ಹೊಳಹು ಇಷ್ಟವಾಗಿಬಿಟ್ಟರೆ ಆ ಪಾತ್ರದ ಬಗ್ಗೆ, ಆ ಹೊಳಹಿನ ಬಗ್ಗೆ ಮತ್ತಷ್ಟು ಓದಲು ಚಡಪಡಿಸಿ ಹೋಗುತ್ತಿದ್ದೆ. ಸುಬ್ಬಣ್ಣನವರು ಅದೆಲ್ಲೋ ಬರೆದಿದ್ದ ‘ಝೆನ್’ ಪದ ನನ್ನನ್ನು ಝೆನ್ ಲೋಕಕ್ಕೆ ಒಯ್ದಂತೆ ಡಿ.ಆರ್. ನಾಗರಾಜರ ‘ಬೆತ್ತಲಾಗು ನೀನು ಅಂದ ಜಲಾಲುದ್ದೀನ ರೂಮಿ’ ನನ್ನನ್ನು ಸೂಫಿ ಲೋಕಕ್ಕೆ ಒಯ್ದಿತ್ತು. ಇನ್ನು ಬಾಲ್ಯದಿಂದ ಒಡನಾಡಿಕೊಂಡು ಬೆಳೆದ ಅಪ್ಪನ ಮಂತ್ರಗಳು ವೇದೋಪನಿಷತ್ತಿನ ಕಡೆಗೂ ಅಮರ ಚಿತ್ರಕಥೆ ಭಾರತ ಮಾತ್ರವಲ್ಲದೆ, ಜಾಗತಿಕ ಪುರಾಣಗಳು ಮತ್ತು ಜಾನಪದ ಕಥೆಗಳ ಕಡೆಗೂ ಒಯ್ದಿದ್ದವು. ಹಾಗೆಂದ ಮಾತ್ರಕ್ಕೆ, ಇವನ್ನೆಲ್ಲ ಓದಿ ಕಡಿದು ಕಟ್ಟೆ ಹಾಕಿದ್ದೇನೆ ಅಂತ ಅಲ್ಲ. ಈ ಎಲ್ಲವನ್ನು ಓದಲಿಕ್ಕೆ ಇಂತಿಂಥ ಮೂಲಗಳು ಇಂಬು ಕೊಟ್ಟವು ಅಂತ ಹೇಳ್ತಿದ್ದೀನಷ್ಟೆ. ಮತ್ತೆ ಈ ಎಲ್ಲದರ ಬಗ್ಗೆ ನನ್ನ ಓದು ಒಂದು ಬೊಗಸೆಗಿಂತಲೂ ಕಡಿಮೆ.

ಮತ್ತೀಗ, ನಾನು ಹೇಗೆ ಪ್ರೇರಣೆ ಪಡೆದು ಭಿನ್ನ ಭಿನ್ನ ರುಚಿಯ ಓದಿಗೆ ಹಚ್ಚಿಕೊಂಡೆನೋ ಹಾಗೇ ಮತ್ತೊಬ್ಬರಿಗೂ ಅಂಥದೇ ರುಚಿ ಹತ್ತಿಸುವ ಚಿಕ್ಕ ಆಸೆಯಿಂದ ಈ ಪುಸ್ತಕ ಸಿದ್ಧ ಮಾಡಿದ್ದೇನೆ. ಇಲ್ಲಿನ ಕಥೆಗಳಲ್ಲಿ ಕೆಲವು ಯಾವ ಯಾವಾಗಲೋ ಎಲ್ಲೆಲ್ಲೋ ಓದಿದ್ದು, ಕೇಳಿದ್ದು. ಅವನ್ನು ಒಂದು ಎಳೆಯಲ್ಲಿ ನನ್ನ ಬರಹ ಶೈಲಿಯಲ್ಲಿ ಪೋಣಿಸಿದ್ದೇನಷ್ಟೆ. ಕೆಲವಕ್ಕೆ ನನ್ನ ಗ್ರಹಿಕೆಯ ಟಿಪ್ಪಣಿಗಳೂ ಇವೆ. ಮತ್ತೆ ಕೆಲವು ನನ್ನ ಕಲಿಕೆಯ ಹಂತದಲ್ಲಿ ಮೂಡಿದ ತೊದಲು ಚಿಂತನೆಗಳು. ಇದು ಹೀಗಿರಬಹುದೇ ಅನ್ನುವ ಅಚ್ಚರಿಯೊಂದಿಗೆ, ಹುಡುಕಾಟದಲ್ಲಿ ಬರೆದಂಥವು.

ಇಲ್ಲಿ ಪ್ರೇಮವಿದೆ, ಅಧ್ಯಾತ್ಮವಿದೆ, ಪರಿಚಯ ಕಥನಗಳಿವೆ. ಶ್ಲೋಕಗಳಿವೆ, ದೋಹೆಗಳಿವೆ, ಪದ್ಯಗಳೂ ಇವೆ. ಬುದ್ಧ ಇದ್ದಾನೆ, ಸೂಫಿಗಳಿದ್ದಾರೆ, ಝೆನ್ ಇದೆ, ವೇದಗಳ ಉಲ್ಲೇಖವಂತೂ ಇದ್ದೇ ಇವೆ. ಇದರ ಉದ್ದೇಶ ಇಷ್ಟೇ, ಯಾರಿಗೆ ಏನು ಬೇಕೋ ಅದನ್ನು ಓದಬಹುದು. ಮತ್ತು ಈ ಪುಸ್ತಕದಲ್ಲಿ ಅವೆಲ್ಲದರ ಒಂದೊಂದು ಚಮಚೆ ರುಚಿ ನೋಡಿ ವಿಶಾಲ ಅಕ್ಷರ ಜಗತ್ತಿನಲ್ಲಿ ಹೆಚ್ಚಿನ ಓದಿಗೆ ಕೈಹಚ್ಚಬಹುದು. ಇಲ್ಲಿ ಏನನ್ನಾದರೂ ಓದಿ “ಅರೆ, ಇದನ್ನು ಮತ್ತಷ್ಟು ತಿಳಿಯಬೇಕಲ್ಲ” ಅನ್ನುತ್ತ ನೀವು ಹುಡುಕಾಟ ಹೊರಟರೆ ಈ ಪುಸ್ತಕ ಸಾರ್ಥಕ.

ಎಲ್ಲ ಯಾಕೆ ಗುಡ್ಡೆ ಹಾಕಿ ಚಿತ್ರಾನ್ನ ಮಾಡಿದ್ದಾರೆ, ಒಂದೋ ಕಥೆಗಳು, ಒಂದೋ ಲೇಖನಗಳು ಹೀಗೆ ಮಾಡಬಹುದಿತ್ತಲ್ಲ ಅಂತ ಯಾರಾದರೂ ಕೇಳಬಹುದು. ಕಾರಣ ಇಷ್ಟೇ, ‘ಲೋಕೋ ಭಿನ್ನ ರುಚಿಃ’. ಎಲ್ಲರ ಓದಿನ ರುಚಿ ಮತ್ತು ಆಸಕ್ತಿಯೂ ಒಂದೇ ಥರ ಇರುವುದಿಲ್ಲ. ಒಂದೇ ವಿಷಯವನ್ನು ಕಥೆಯ ರೂಪದಲ್ಲೂ ಹೇಳಬಹುದು, ಪ್ರಬಂಧವಾಗಿಯೂ, ಲೇಖನವಾಗಿಯೂ. ಈ ಪುಸ್ತಕದ ಒಟ್ಟಾರೆ ಆಶಯ ಒಂದೇ, ಅದನ್ನು ಹೇಳಲು ಬಳಸಿದ ಬಗೆ ಬೇರೆ ಬೇರೆ ಅಷ್ಟೇ. ಆದ್ದರಿಂದಲೇ ಇದು ಹಲವು ಮಿಶ್ರಣಗಳ ಕಾಕ್ ಟೇಲ್!

ಚಿಯರ್ಸ್!! ಅಂದರೆ, ಖುಷಿಯಾಗಿರಿ. ಮತ್ತು ಓದಿರಿ.

ಪ್ರೀತಿಯಿಂದ
ಚೇತನಾ ತೀರ್ಥಹಳ್ಳಿ

ಕಾಕ್ ಟೇಲ್ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...