ಇಂದಿನ ಮಕ್ಕಳು: ಇಂದಿನ ಪ್ರಜೆಗಳು

Date: 12-10-2021

Location: ಬೆಂಗಳೂರು


‘ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂದ ತಕ್ಷಣ ಸಂವಿಧಾನದ ನಾಗರಿಕತ್ವದ (ಪ್ರಜೆ) ಅರ್ಥಕ್ಕೆ ಧಕ್ಕೆಯಾದಂತೆ ಹಾಗೂ ಮಕ್ಕಳ ಹಕ್ಕುಗಳಿಗೆ ಧಕ್ಕೆ ಮಾಡಿದಂತೆ’ ಎನ್ನುತ್ತಾರೆ ಮಕ್ಕಳ ಸಂರಕ್ಷಣಾ ವಿಷಯ ಪರಿಣಿತರಾದ ಕೆ.ರಾಘವೇಂದ್ರ ಭಟ್. ಅವರ "ಮಕ್ಕಳ ಹಕ್ಕುಗಳು ಮತ್ತು ನಾವು" ಅಂಕಣದಲ್ಲಿ ಸಂವಿಧಾನಾತ್ಮಕವಾಗಿ ಮಕ್ಕಳ ಹಕ್ಕುಗಳ ಕುರಿತು ವಿಶ್ಲೇಷಿದ್ದಾರೆ. 

ನವೆಂಬರ್ ತಿಂಗಳು “ಮಕ್ಕಳ ದಿನಾಚರಣೆ”ಯ ಸಂಭ್ರಮ. ದೇಶ, ರಾಜ್ಯದೆಲ್ಲೆಡೆ ವಿವಿಧ ಕಾರ್ಯಕ್ರಮಗಳು. ವರ್ಷಾವಧಿಯಂತೆ ರಾಜ್ಯ, ಜಿಲ್ಲೆಗಳಲ್ಲಿ ಕೂಡ ವಿಶೇಷ ಕಾರ್ಯಕ್ರಮಗಳು. ಜಿಲ್ಲೆಯೊಂದರ ಕಾರ್ಯಕ್ರಮದಲ್ಲಿ ಇಲಾಖೆಯ ಒತ್ತಡಕ್ಕೆ ಮಣಿದು ಸಂಘಟಕರು 500 ರಿಂದ 600 ಮಕ್ಕಳನ್ನು ತಂದು ರಂಗಮಂದಿರದಲ್ಲಿ ತುಂಬಿದ್ದರು. ಅಧಿಕಾರಿಗಳೇ ಆಯ್ಕೆ ಮಾಡಿದ ಕೆಲವು ಉತ್ತಮ (ದೊಡ್ಡವರಿಗೆ) ಅನ್ನಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೆಳಿಗ್ಗೆ 08ಕ್ಕೆನೇ ಬಂದು 9 ಗಂಟೆಗೆ ವೇಷ ಭೂಷಣ, ಮೇಕಪ್ ಹಾಕಿ ಕೆಲವು ಮಕ್ಕಳು ರೆಡಿ. ಹೊಟ್ಟೆ ಹಸಿದಿದ್ದರೂ ಪರವಾಗಿಲ್ಲ ಎಂಬಂತೆ, ಪ್ರತಿಭೆ ಪ್ರದರ್ಶಿಸಲು ಮಕ್ಕಳು ತಯಾರಾಗಿದ್ದರು. ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಬೇಕು. ಗಂಟೆ 10.30 ಆದರೂ ವೇದಿಕೆಯ ಅಲಂಕಾರ ಸಿದ್ಧತೆಯಲ್ಲಿ ಸಂಘಟಕರು ತೊಡಗಿದ್ದರು. 10.45ಕ್ಕೆ ಯಾರೋ ಪುಣ್ಯಾತ್ಮರು ಮಕ್ಕಳಿಗಾಗಿ ಒಂದಷ್ಟು ಉಪ್ಪಿಟ್ಟು’ ಮತ್ತು ನೀರಿನ ಪ್ಯಾಕೆಟ್ ನೀಡಲು ಪ್ರಾರಂಬಿಸಿದರು. ‘ಹಸಿದ ಹೊಟ್ಟೆಗೆ ಇರಲಿ ಎಂದು ಒಂದು ಚಮಚ ಉಪ್ಪಿಟ್ಟು ಎಂದು, ಉಪ್ಪಿಟ್ಟು ಪಡೆಯಲು ಮಕ್ಕಳ ನೂಕು ನುಗ್ಗಲು, ಕಿರುಚಾಟ, ಬೊಬ್ಬೆ. ಅಷ್ಟರಲ್ಲಿ ಅದೆಲ್ಲಿದ್ದರೋ ಗೊತ್ತಿಲ್ಲ ರಂಗಮಂದಿರದಲ್ಲಿ ಹಾಳಾಗಿ ಬಿದ್ದಿದ್ದ ನೀರಿನ ಪೈಪುಗಳನ್ನು ಹಿಡಿದು ಮಕ್ಕಳಿಗೆ ಶಿಸ್ತು ಕಲಿಸುವವರು  ಓಡಿ ಬಂದರು, ಓಡಿ  ಬರುತ್ತಾ ‘ಕ್ಯೂನಲ್ಲಿ ನಿಲ್ಲಿ ಏಯ್...ಏಯ್...’ ಎಂದು ಕಿರುಚಾಡುತ್ತಾ ಮಕ್ಕಳ ಬೆನ್ನಿಗೆ, ಕಾಲಿಗೆ, ತಲೆಗೆ ಮಕ್ಕಳ ದಿನಾಚರಣೆಯ ಸಿಹಿ ಉಣಬಡಿಸಿದರು. ಆ ಸಿಹಿಯನ್ನು ತಿಂದು ಉಪ್ಪಿಟ್ಟಿಗಾಗಿ ಹೋರಾಟ ನಡೆಸಿ ಒಂದಿಷ್ಟು ಮಕ್ಕಳು ಉಪ್ಪಿಟ್ಟು ಪಡೆಯುವಲ್ಲಿ ಯಶಸ್ವಿಯಾಗಿ “ರಾಷ್ಟ್ರಪ್ರಶಸ್ತಿ ಸಿಕ್ಕಿದಂತೆ” ಹೆಮ್ಮೆಯಿಂದ ಉಪ್ಪಿಟ್ಟನ್ನು ಒಂದೇ ಉಸಿರಿಗೆ ತಿಂದು ಮುಗಿಸಿದರು. ಕೈಯನ್ನು ಚಡ್ಡಿಗೆ, ಲಂಗಕ್ಕೆ ಒರೆಸಿಕೊಂಡರು (ಕೈತೊಳೆಯಲು ಯಾವುದೇ ವ್ಯವಸ್ಥೆ ಇರಲಿಲ್ಲ). ಉಪ್ಪಿಟ್ಟು ತಿಂದು ಗಂಟಲು ಕಟ್ಟಿಕೊಂಡಾಗ ಪಕ್ಕದವರಿಗೆ ಸಿಕ್ಕಿದ್ದ ನೀರಿನ (1 ರೂ.ನ) ಪ್ಯಾಕೆಟನ್ನು ಕೊಂಡು ಕುಡಿದರು. ಅಷ್ಟರಲ್ಲಿ 11.30 ಆಯಿತು. ಉಪ್ಪಿಟ್ಟು ಖಾಲಿ ಆಗಿತ್ತು. ರಂಗಮಂದಿರದ ಧ್ವನಿವರ್ಧಕ ಕಿರುಚುತ್ತಿತ್ತು. “ಮಕ್ಕಳೆಲ್ಲಾ ಬಂದು ಕುಳಿತುಕೊಳ್ಳಬೇಕು” ಅತಿಥಿಗಳು ಬರುತ್ತಿದ್ದಾರೆ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ ಎಂದು. 

ಯುದ್ಧದಲ್ಲಿ ಸೋಲುಂಡ ಸೈನಿಕರಂತೆ, ಕೆಲವು ಮಕ್ಕಳು (ಉಪ್ಪಿಟ್ಟು ಸಿಗಲಾರದೇ) ವ್ಯವಸ್ಥೆಯ ಬಗ್ಗೆ, ಅಧಿಕಾರಿಗಳನ್ನು ಮತ್ತು ಸಂಘಟಕರನ್ನು ಮನಸ್ಸಿನಲ್ಲೇ ಎಂತಹ ಜನ ಇವರು ಎಂದು ಬೈದುಕೊಳ್ಳುತ್ತಾ, ಹೊಟ್ಟೆ ಉಜ್ಜಿಕೊಳ್ಳುತ್ತಾ ಬೆನ್ನಿನ ಮೇಲೆ ಬಿದ್ದ ನೀರಿನ ಪೈಪಿನ ಸಿಹಿಯನ್ನೇ ಮುಟ್ಟುತ್ತಾ ರಂಗಮಂದಿರದ ಆಸನದಲ್ಲಿ ಕುಳಿತರು. ಈ ಉಪ್ಪಿಟ್ಟಿನ ಜಗ್ಗಾಟ, ಹೊಡೆದಾಟದಲ್ಲಿ ಆದ ಸಣ್ಣ ಸಣ್ಣ ಗಾಯಗಳನ್ನು ಕೆಲವು ಮಕ್ಕಳು ಉಜ್ಜಿಕೊಳ್ಳುತ್ತಿದ್ದರೆ, ಇನ್ನು ಕೆಲವು ಮಕ್ಕಳು ತಮ್ಮ ಹಳೆಯದಾದ ಚಪ್ಪಲಿಗಳು ತಳ್ಳಾಟದಲ್ಲಿ ಕಿತ್ತು ಹೋದ ಕಾರಣ ಅದನ್ನು ಸರಿಪಡಿಸುವಲ್ಲಿ ತೊಡಗಿದ್ದರು. ಇದೇ ಮಕ್ಕಳ ದಿನಾಚರಣೆಯ ಉಡುಗೊರೆಯೆಂದು ಮೌನಕ್ಕೆ ಶರಣಾದರು. ಇನ್ನೊಂದಿಷ್ಟು ಮಕ್ಕಳು ಬೊಬ್ಬೆಹಾಕಿ, ಶಿಳ್ಳೆ ಹಾಕಿ, ಕಿರುಚಾಡುತ್ತಾ ಅವ್ಯವಸ್ಥೆಯ ಬಗ್ಗೆ ಅಸಮಾಧಾನವನ್ನು ಹೊರಹಾಕುತ್ತಿದ್ದರು.

ಹೆಣ್ಣು ಮಕ್ಕಳು ತಮ್ಮ ತಮ್ಮೊಳಗೆ ಗುಸು ಗುಸು ಮಾತಾಡಿಕೊಂಡರು, ನಮಗೆ ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಮಾಡಿದ್ದರೆ ಚೆನ್ನಾಗಿತ್ತು. ಸುಮ್ಮನೇ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದು ಕೂರಿಸಿ ಇವರು ಎಂತಹ ಕಾರ್ಯಕ್ರಮ ಮಾಡುವುದು? ನಮ್ಮನ್ನು ಇಲ್ಲಿ ಯಾರೂ ಕ್ಯಾರೇ ಮಾಡುತ್ತಿಲ್ಲ. ಇವರಿಗೆ ಜನ ಬೇಕು ಅಂತ, ನಮ್ಮನ್ನು ಯಾಕೆ ಇಲ್ಲಿಗೆ ಕರೆಯಬೇಕು? ಇವರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕೂರಿಸಲಿ! ಎನ್ನುತ್ತಾ ಮಕ್ಕಳು ಮನಸ್ಸೊಳಗೆ ನಗುವುದನ್ನು ರಂಗಮಂದಿರದ ಎಲ್ಲಾ ಕುರ್ಚಿಗಳು ಕೇಳಿಸಿಕೊಂಡು, ದಾಖಲಿಸಿದವು. ಅಷ್ಟರಲ್ಲಿ ವೇದಿಕೆಯಿಂದ ನಿರೂಪಕರು ಅತಿಥಿಗಳು ಆಗಮಿಸುತ್ತಿದ್ದಾರೆ ಎಂದು ಕಿರುಚಲು ಪ್ರಾರಂಭಿಸಿದರು. ಮಕ್ಕಳೆಲ್ಲಾ ಚಪ್ಪಾಳೆ ಬಡಿಯಿರಿ ಎಂದರು, ಎಂದಿನಂತೆ ಮಕ್ಕಳು  ಶಿಸ್ತಿನಿಂದ ಅತಿಥಿಗಳಿಗೆ ಚಪ್ಪಾಳೆ ಮುಖಾಂತರ ಸ್ವಾಗತ ಕೋರಿದರು, ಸುಮಾರು 6 ರಿಂದ 8 ನಿಮಿಷ ಚಪ್ಪಾಳೆ ಬಡಿದು ಕೆಂಪಾದ ಕೈಗಳನ್ನು ಚಡ್ಡಿಗೆ, ಲಂಗಕ್ಕೆ ಒರೆಸಿಕೊಂಡರು. ಅತಿಥಿಗಳ ಸಾಲೇ ಬಂದಿತ್ತು. ಗಂಟೆ ಮಧ್ಯಾಹ್ನ 12.00 ಆಗಿತ್ತು, ಸಾಲಾಗಿ ಬಂದ ಅತಿಥಿಗಳಲ್ಲಿ ಕೆಲವು ಕೋಟ್‍ಗಳು, ಬಿಳಿತಲೆಗಳು ಹಾಗೂ ಕಾರ್ಯಕ್ರಮಕ್ಕೆಂದು ಸಿದ್ಧಪಡಿಸಿದ ವಸ್ತ್ರಧರಿಸಿ 8 ರಿಂದ 10 ಜನ ಬಂದು ವೇದಿಕೆಯ ಆಸನದಲ್ಲಿ ಆಸೀನರಾದರು. 

ಎಂದಿನಂತೆ ಸ್ವಾಗತ ನೃತ್ಯ, ಪ್ರಾರ್ಥನೆ, ನಾಡಗೀತೆಯನ್ನು ಮಕ್ಕಳು ಅಚ್ಚುಕಟ್ಟಾಗಿ ಯಾವುದೇ ಕೊರತೆ ಆಗದಂತೆ ಅವುಗಳ ಘನತೆಯನ್ನು ಕಾಪಾಡುತ್ತಾ ವೇದಿಕೆಗೆ ಮೆರಗು ತಂದರು. ಅವುಗಳಿಗೆಲ್ಲಾ ಮಕ್ಕಳ ಚಪ್ಪಾಳೆ ರಂಗಮಂದಿರದಲ್ಲಿ ಮೊಳಗಿತ್ತು. ಭಾಷಣಕ್ಕಾಗಿ ಕಾದು ಕುಳಿತಿರುವ ಗಣ್ಯರು ಮತ್ತು ಅತಿಥಿಗಳು ಕೇವಲ 2 ಸಲ ಚಪ್ಪಾಳೆ ಬಡಿದು ಸಣ್ಣ ನಗು ನಗುತ್ತಾ ಚಪ್ಪಾಳೆ ನಿಲ್ಲಿಸಿದರು. ಅಷ್ಟರಲ್ಲಿ ಮೈಕಾಸುರರು ಕಿರುಚಲು ಪ್ರಾರಂಭಿಸಿದರು, “ಮಕ್ಕಳು ಮೌನದಿಂದಿರಬೇಕು! ಇದು ನಿಮ್ಮ ಕಾರ್ಯಕ್ರಮ! ಇಂದು ನಿಮ್ಮ ದಿವಸ! ಮಕ್ಕಳು ಶಾಂತವಾಗಿರಬೇಕು! ಮಕ್ಕಳು ಮಾತನಾಡಬಾರದು!” ಎಂದು. ಅಷ್ಟರಲ್ಲಿ ಮಕ್ಕಳು ನಮ್ಮ ದಿನ ಅಂತೆ, ನಾವು ಮಾತನಾಡಬಾರದಂತೆ, ಮೌನವಾಗಿರಬೇಕಂತೆ, ಎಂಥ ಕರ್ಮ ಇವರದ್ದು! ಎಂದು ಒಂದಿಷ್ಟು ಮಕ್ಕಳು ಗೊಣಗಾಡಿಕೊಂಡು ಚಪ್ಪಾಳೆ ನಿಲ್ಲಿಸಿದರು. ಅಷ್ಟರಲ್ಲಿ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಒಂದಿಷ್ಟು ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು, ಹಿರಿಯ ಅಧಿಕಾರಿಗಳು, ಪತ್ರಕರ್ತರು ಅವರ ಎಲ್ಲ ಕೆಲಸ ಮುಗಿಸಿದ ನಂತರ ರಂಗಮಂದಿರದ ಒಳಗೆ ನುಗ್ಗಿದರು. ಸಭಾಂಗಣದ ಕುರ್ಚಿಗಳಲ್ಲಿ ನಮ್ಮ ದಿನ ಎಂದು ನಂಬಿದ ಮಕ್ಕಳು ಕುಳಿತಿದ್ದರು. ಒಂದು ದಿನವಾದರೂ ಇಂತಹ ಕುರ್ಚಿಗಳಲ್ಲಿ ಕುಳಿತುಕೊಳ್ಳೋಣ ಎಂದು ಅದನ್ನು ಅನುಭವಿಸುತ್ತಿದ್ದರು. ಕುರ್ಚಿಗಳು ಕೂಡ ಮಕ್ಕಳ ಸ್ವರ, ಮಾತು, ಚಿಲಿಪಿಲಿ, ಸುಂದರ ಮನಸ್ಸಿನ ಮಾತುಗಳನ್ನು ಕೇಳುತ್ತಾ ಸಂತೋಷ ಪಡುತ್ತಿದ್ದವು. ಅಷ್ಟರಲ್ಲಿ ಮತ್ತೆ ಅದೇ ಮಕ್ಕಳಿಗೆ ಶಿಸ್ತು ಕಲಿಸುವವರ ಆಗಮನ, ಮುಂದಿನ ಒಂದಿಷ್ಟು ಕುರ್ಚಿಗಳಿಂದ ಮಕ್ಕಳನ್ನು ಎಬ್ಬಿಸಲು ಪ್ರಾರಂಭಿಸಿದರು. ಗಬ್ಬು ವಾಸನೆ ಬರುವ ಖಾಲಿ ಸಿಮೆಂಟ್‍ನ ಚೀಲಗಳಿಂದ ಮಾಡಿದ ಕಾರ್ಪೆಟ್ ಸಭಾಂಗಣದ ಮುಂಭಾಗದಲ್ಲಿ ಬಿದ್ದವು. ಸಣ್ಣ ಮಕ್ಕಳೆಲ್ಲಾ ಕೆಳಗೆ ಕುಳಿತುಕೊಂಡು ದೊಡ್ಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮತ್ತೆ ಮೈಕ್ ಕಿರುಚಲು ಪ್ರಾರಂಭಿಸಿತು. ಒಲ್ಲದ ಮನಸ್ಸಿನಿಂದ “ಹಳೆ ನೀರಿನ ಪೈಪಿನ” ಏಟಿಗೆ ಹೆದರಿ ಒಂದಷ್ಟು ಮಕ್ಕಳು “ಪರವಾಗಿಲ್ಲ” ಹೋಗಲಿ ಬಿಡು ದೊಡ್ಡವರಲ್ವಾ? ಪಾಪ ಎಂದು ಕುರ್ಚಿ ಬಿಟ್ಟುಕೊಟ್ಟು ನೆಲದಲ್ಲಿ ಕುಳಿತುಬಿಟ್ಟರು. ಕೆಲವು ಮಕ್ಕಳು ಕೆಳಗೆ ಬಾರದ ಕಾರಣ ಸಣ್ಣ-ಸಣ್ಣ ಸಿಹಿ ಏಟುಗಳನ್ನು ಅನುಭವಿಸಿದರು. ಮುಂದಿನ 3 ಸಾಲುಗಳಲ್ಲಿ ಸೆಂಟ್ ಹೊಡೆದುಕೊಂಡು ಬಂದ ದೊಡ್ಡವರು ಅನ್ನಿಸಿಕೊಂಡವರು ಕುಳಿತೇಬಿಟ್ಟರು. ಹಿಂದೆ ಕುಳಿತ ಹೆಚ್ಚಿನ ಮ್ಕಕಳಿಗೆ ವೇದಿಕೆ ನೋಡಲು ಅಡ್ಡವಾಗಿ ಬಂಡೆ ಕಲ್ಲುಗಳು ಬಂದು ನಿಂತಂತಾಗಿ ವೇದಿಕೆ ಕಾಣದಂತಾಯಿತು. ಆ ಕಡೆ, ಈ ಕಡೆ ಬಗ್ಗಿ-ಬಗ್ಗಿ ವೇದಿಕೆಯನ್ನು ಇಣುಕಿ ನೋಡಬೇಕಾಯಿತು. ಮಕ್ಕಳ ಗಲಾಟೆ ಮತ್ತೆ ಸ್ವಲ್ಪ ಜಾಸ್ತಿಯಾಯಿತು. ಮತ್ತೆ ಅದೇ ಸ್ವರ, ಮಕ್ಕಳು ಮಾತನಾಡಬಾರದು! ಗಲಾಟೆ ಮಾಡಬಾರದು! ಮೌನದಿಂದಿರಬೇಕು! ಇಂದು ನಿಮ್ಮ ದಿನ! ನಿಮ್ಮದೇ ಕಾರ್ಯಕ್ರಮ! ನೀವೇ ಗಲಾಟೆ ಮಾಡಿದರೆ ಹೇಗೆ? ಎಂಬ ಶಬ್ದಗಳು ಮೈಕಾಸುರರಿಂದ ನಿರಂತರ ಕೇಳುತ್ತಿದ್ದವು. ಕೆಲವು ಹೆಣ್ಣು ಮಕ್ಕಳು ವೇದಿಕೆ ಕಾಣದಿದ್ದಾಗ ಮುಂದೆ ಕುಳಿತ ದೊಡ್ಡವರಿಗೆ ಸರ್ ಕಾಣಿಸುತ್ತಿಲ್ಲ ನಿಮ್ಮ ತಲೆ ಅಡ್ಡವಾಗುತ್ತಿದೆ ಎಂದು ಮೆಲ್ಲಗೆ ಹೇಳಿಯೇ ಬಿಟ್ಟರು. ಆಗ ದೊಡ್ಡವರು “ಸುಮ್ಮನಿರಮ್ಮ, ಈಗ ನಿಮಗೇನಿದೆ ನೀವು ಡಾನ್ಸ್ ನೋಡೊಕೆ ಬಂದಿದ್ದು ಅಲ್ವಾ? ಉದ್ಘಾಟನೆ ಆಗುವವರೆಗೆ ಅಷ್ಟೇ.... ನಂತರ ನಾವು ಹೋಗುತ್ತೇವೆ ಆಮೇಲೆ ನೀವು ನೋಡಿ” ಎಂದು ಗಂಟುಕಟ್ಟಿದ ಮುಖ ಮಾಡಿಕೊಂಡು ಸಿಟ್ಟಿನಿಂದ ಮಕ್ಕಳ ಬಾಯಿ ಮುಚ್ಚಿಸಿದರು. ಆಗ ಪಕ್ಕದಲ್ಲಿದ್ದ ಬಾಲಕಿಯರು ಹೋಗಲಿ ಬಿಡಿ, ಅವರು ಸ್ಪಲ್ಪ ಹೊತ್ತಲ್ಲಿ ಹೋಗ್ತಾರಂತೆ, ನಮ್ಮ ಡಾನ್ಸ್, ನಾಟಕ, ಹಾಡು, ನೃತ್ಯ ಅವರು ನೋಡಲ್ವಂತೆ” ಎಂದು ಮುಗ್ಧವಾಗಿಯೇ ಸಮಾಧಾನ ಮಾಡಿಕೊಂಡರು.

ಇದನ್ನೆಲ್ಲಾ ನೋಡುತ್ತಿದ್ದ ರಂಗಮಂದಿರಕ್ಕೆ ಮತ್ತು ಕುರ್ಚಿಗಳಿಗೆ ಮಕ್ಕಳ ಮನಸ್ಸಿನ ಮೇಲೆ ಆಗುವ ಹೊಡೆತಗಳನ್ನು ಕಂಡು ಕಣ್ಣಲ್ಲಿ ನೀರು ಬರಲಾರಂಭಿಸಿತು. ಅಷ್ಟರಲ್ಲಿ ಸಣ್ಣದಾಗಿ ಮಳೆಬಂದು ಅವುಗಳ ಕಣ್ಣೀರುಗಳು ಮಳೆ ಹನಿಗಳೊಂದಿಗೆ ಸೇರಿ ಚರಂಡಿ ಸೇರಿಕೊಂಡವು, ಅಷ್ಟೊತ್ತಿಗಾಗಲೇ ಮಧ್ಯಾಹ್ನ 12.45 ಆಗಿತ್ತು. ಇದನ್ನೆಲ್ಲಾ ನೋಡಿದ ಕರೆಂಟ್‍ಗೆ ಏನನ್ನಿಸಿತ್ತೋ ಏನೋ? ಹೊರಟೇಬಿಟ್ಟಿತು. ಇಡೀ ಸಭಾಂಗಣ ಪೂರ್ತಿ ಕತ್ತಲು. ಅಷ್ಟರಲ್ಲಿ “ಮಕ್ಕಳ ದಿನಾಚರಣೆ” ಆಚರಿಸಲು ಇದೇ ಅವಕಾಶ ಎಂದು ತಿಳಿದ “ಮಕ್ಕಳು” ಅವರ ದಿನವನ್ನು 4 ನಿಮಿಷ ಸಂಭ್ರಮದಿಂದ ಆಚರಿಸಿಯೇ ಬಿಟ್ಟರು” (ಬೊಬ್ಬೆ, ಕಿರುಚಾಟ, ಶಿಳ್ಳೆ, ಹಾಡು, ನೃತ್ಯ ಗಲಾಟೆ ಎಲ್ಲಾ) 4 ನಿಮಿಷಗಳ ಕಾಲ ಮಕ್ಕಳು ಮಕ್ಕಳದ್ದೇ ಆದ ದಿನಾಚರಣೆ ಆಚರಿಸುತ್ತಿದ್ದಂತೆ, ಅದೇನು ಭಯಂಕರ ಕಾರ್ಖಾನೆಯ ಮಿಷನ್ ಶಬ್ದದಂತೆ ಶಬ್ದ ಬರಲಾರಂಭಿಸಿತು. ಕರೆಂಟ್ ಮಕ್ಕಳು ಖುಷಿ ಪಡಲಿ ಎಂದು ಅವಕಾಶ ಕೊಟ್ಟರೂ, ಸಂಘಟಕರು ಜನರೇಟರ್ ಆನ್ ಮಾಡಿದರು. ಸಭಾಂಗಣದ ಮೈಕ್, ದೀಪಗಳು ಮಕ್ಕಳ ಗಲಾಟೆ, ಚಿಲಿ-ಪಿಲಿ ಸಿಳ್ಳೆ ಕೇಳಿ ಸಂಭ್ರಮಿಸಿ ಮತ್ತೆ ವೇದಿಕೆಗೆ ಸಹಕರಿಸಲು ಪ್ರಾರಂಭಿಸಿದವು.

ಮತ್ತೆ ಅದೇ ಮೈಕಾಸುರನ ಕಿರುಚಾಟ ಮಕ್ಕಳು ಗಲಾಟೆ ಮಾಡಬಾರದು! ಮಾತನಾಡಬಾರದು! ಮೌನವಾಗಿರಬೇಕು! ಇದು ನಿಮ್ಮ ಕಾರ್ಯಕ್ರಮ! ಇಂದು ನಿಮ್ಮ ದಿನ! ಎಂದು. ಹೋಗಲಿ ಬಿಡು ಪಾಪ ದೊಡ್ಡವರು ಎಂದೋ ಅಥವಾ ಸೈಡಿನಲ್ಲಿ ನಿಂತ ಶಿಸ್ತು ಕಲಿಸುವವರ ಕೈಯಲ್ಲಿನ ಪೈಪುಗಳಿಗೆ ಹೆದರಿಯೊ ಗೊತ್ತಿಲ್ಲ! ಮಕ್ಕಳು ಸುಮ್ಮನಾದರು. ಈ ರೀತಿ ಮಕ್ಕಳನ್ನು ಸುಮ್ಮನಾಗಿಸುವ ಕ್ರಮಕ್ಕೆ ಮೈಕ್‍ಗೂ ಬೇಸರವಾಗಿ ಅದು ದೊಡ್ಡವರ ವಿರುದ್ಧ ಆಗಾಗ ಪ್ರತಿಭಟನೆಗೆ ನಿಂತು ಒಮ್ಮೊಮ್ಮೆ ಜೋರಾಗಿ ಕರ್ಕಶವಾಗಿ ಅವರಿಗೆ ಬೈಯ್ಯುತ್ತಿತ್ತು. ಕೆಲವು ಸಲ ಯಾರಿಗೂ ಕೇಳದಂತೆ ಸುಮ್ಮನೆ ಕುಳಿತುಕೊಂಡಿತು. ಅದಕ್ಕೆ ಆ ದೊಡ್ಡವರು ವೇದಿಕೆಯಲ್ಲಿ ಭೂಕಂಪವೇ ಆದಂತೆ ವರ್ತಿಸಿ ಅದನ್ನು ಹಿಡಿದು ಎಳೆದು, ಜಗ್ಗಿ ಅದನ್ನು ಕಿತ್ತು ತೆಗೆದುಕೊಂಡು ಹೋಗಿ ಮತ್ತೊಂದು ಮೌತ್ ಸ್ಪೀಕರ್ ತಂದು ಇಟ್ಟು ದೊಡ್ಡವರ ಭಾಷಣಕ್ಕೆ ಅಣಿಗೊಳಿಸಿದರು. ಅಷ್ಟರಲ್ಲಿ “ಮಕ್ಕಳ ದಿನಾಚರಣೆ” ಎಂದರೆ ನಮ್ಮ ದಿನ, ಹಾಗಾಗಿ, ಏನೋ ಸಂಭ್ರಮ ಇರಬಹುದು, ಸಂತೋಷ ಪಡಬಹುದು ಎಂದು ನಂಬಿ ಬೆಳಿಗ್ಗೆ ಬೇಗನೇ ಎದ್ದು ತಯಾರಾಗಿ ಬಂದ ಕೆಲವು ಮಕ್ಕಳು ನಿದ್ದೆಗೆ ಜಾರಿದ್ದರು. 

ಅಷ್ಟರಲ್ಲಿ ಈಗ ಉದ್ಘಾಟನೆ ಎಂದು ನಿರೂಪಕರು ಹೇಳಿದ ತಕ್ಷಣ ಮೊಬೈಲ್‍ನಲ್ಲಿ ಗುರುಟುತಿದ್ದ ಅತಿಥಿಗಳು ತಕ್ಷಣ ತಲೆ ಎತ್ತಿ ಕೋಟ್, ಡ್ರೆಸ್ ಎಲ್ಲಾ ಸರಿಮಾಡಿ ಹೂಗಳಿಂದ ಅಲಂಕೃತವಾದ ಸುಂದರವಾಗಿ ನಿಂತಿದ್ದ ದೀಪದ ಹತ್ತಿರ ಬಂದು ನಿಂತರು. ದೀಪ ಒಂದು ಕ್ಷಣ ಆತಂಕಕ್ಕೆ ಒಳಗಾಯಿತು. ಆದರೆ ಅದನ್ನೆ ಅಭ್ಯಾಸವಾಗಿಸಿಕೊಂಡ ದೀಪ ರೆಡಿಯಾಗಿ ನಿಂತಿತು. ಆಗ ಒಬ್ಬರು ಓಡಿ ಬಂದು ಕ್ಯಾಂಡಲ್ ಉರಿಸಲು 3 ಬೆಂಕಿಕಡ್ಡಿ ಗೀರಿದರು. ಅದು ನಂದಿ ಹೋಗುತಿತ್ತು.  ಅಷ್ಟರಲ್ಲಿ ಅತಿಥಿಗಳು ಫ್ಯಾನ್ ಆಫ್ ಮಾಡಿ ಎಂದು ಕೂಗಲಾರಂಭಿಸಿದರು. ಅಷ್ಟರಲ್ಲಿ ಯಾರೋ ಒಬ್ಬರು ಓಡಿ ಹೋಗಿ ಒಂದಷ್ಟು ಸ್ವಿಚ್‍ಗಳನ್ನು ಆಫ್ ಮಾಡಿದರು. ಅಷ್ಟರಲ್ಲಿ ವೇದಿಕೆಯ ಎಲ್ಲಾ ಲೈಟ್, ಮೈಕ್ ಆಫ್ ಆಯಿತು. ಈಗ ನಾನೇ ಇವರಿಗೆ ಬೆಳಕು ನೀಡಬೇಕು ಎಂದುಕೊಂಡ  ದೀಪ ವೇದಿಕೆಗೆ ಬೆಳಕು ಕೊಟ್ಟಿತು. ಮಕ್ಕಳ ಮುಗ್ದ ಪುಟ್ಟ ಪುಟ್ಟ ಚಪ್ಪಾಳೆಗೆ ದೀಪದ 4 ಬತ್ತಿಗಳು ಉರಿಯಲಾರಂಭಿಸಿತು. ಇನ್ನೊಂದು ಬತ್ತಿ ಉಳಿದಿದ್ದು ಗಣ್ಯರೊಬ್ಬರಿಗೆ ಮಕ್ಕಳ ದಿನಾಚರಣೆ ನೆನಪಾಗಿ ಇಬ್ಬರು ಮಕ್ಕಳು ಬನ್ನಿ ಎಂದು ಕರೆದರು. ಅಷ್ಟರಲ್ಲಿ ಒಂದಿಷ್ಟು ಮಕ್ಕಳು ವೇದಿಕೆಗೆ ಓಡಿ ಹೋದರು. ಅವರಲ್ಲಿ ಕೆಲವರನ್ನು ಕೆಳಗೆ ಪುನಃ ವಾಪಾಸು ಕಳುಹಿಸಿ ಇಬ್ಬರು ಮಕ್ಕಳಿಂದ ಉಳಿದ ಒಂದು ಬತ್ತಿಯನ್ನು ಮಕ್ಕಳು ಉರಿಸಿದಾಗ ಸಭಾಂಗಣಕ್ಕೆ ಒಂದು ಕ್ಷಣ ನಿಜವಾದ “ಮಕ್ಕಳ ದಿನಾಚರಣೆ” ಸಂಚಲನ ಮೂಡಿತು ಮಕ್ಕಳ ಚಪ್ಪಾಳೆ ಸಭಾಂಗಣ ತುಂಬಾ ಮೊಳಗಿತು.

ಈಗ ಗಣ್ಯರಿಂದ ಮಾತುಗಳು, ಒಬ್ಬರು ಗಣ್ಯರು ಮೈಕ್ ಮುಂದೆ ಬಂದು ಯಾವುದೇ ತಪ್ಪು ಮಾಡದ ಮೈಕ್‍ಗೆ ಎರಡು ಏಟು ಹೊಡೆದರು. ಅದು “ಡಬ್-ಡಬ್” ಎಂದು ಅತ್ತಿತು. ಗಣ್ಯರು ಎಲ್ಲಾ ರೇ. .  ರೇ. . .  ರೇ. . . ಗಳನ್ನು ಮುಗಿಸಿ “ಮುದ್ದು ಮಕ್ಕಳೇ” ಎಂದಾಗ ಮತ್ತೊಮ್ಮೆ ಮಕ್ಕಳ ಸಂತೋಷದ ಚಪ್ಪಾಳೆಯ ಉತ್ತರ ಬಂತು.

 ಗಣ್ಯರು ಮಕ್ಕಳೇ ಈಗ ನೀವು ಎಲ್ಲರೂ ಜೋರಾಗಿ ಕೂಗಬೇಕು ಎಂದು ಹೇಳಿ “ಇಂದಿನ ಮಕ್ಕಳೇ. . . . ಎಂದಾಗ ಹೆಚ್ಚಿನ ದೊಡ್ಡವರಿಂದ ಮತ್ತು ಕೆಲವು ಮಕ್ಕಳಿಂದ ಅಭ್ಯಾಸ ಬಲದಿಂದಾಗಿ ಮುಂದಿನ ಪ್ರಜೆಗಳು” ಎಂಬ ಕೂಗು ಕೇಳಿ ಬಂತು. ಅದರ ಮಧ್ಯದಲ್ಲಿ ಕೆಲವು ಮಕ್ಕಳು ಬೇರೆ ಶಬ್ದಗಳನ್ನು ಉಚ್ಛರಿಸಿದರೂ ಅದನ್ನೇ ನಂಬಿದ, ಅದನ್ನೇ ಹೇಳಿಕೊಂಡು ಬಂದ, ಅದನ್ನೇ ಹೇಳಲು ತಯಾರು ಮಾಡಿಕೊಂಡು, ಚೀಟಿಯಲ್ಲಿ ಬರೆದುಕೊಂಡು ಬಂದ ಆ ಗಣ್ಯರಿಗೆ ಆ ಶಬ್ದಗಳು ಕೇಳಲೇ ಇಲ್ಲ. ಆಹಾಂ  ಸರಿಯಾಗಿ ಹೇಳಿದಿರಿ! “ಇಂದಿನ ಮಕ್ಕಳೇ  ಮುಂದಿನ ಪ್ರಜೆಗಳು” ಎಂದು ಮತ್ತೆ ಹೇಳಿದಾಗ ಸಭೆ ಮೌನ. ನಂತರ ಗಣ್ಯರಿಂದ ಮಕ್ಕಳಿಗೆ ಒಂದಷ್ಟು ಹಿತವಚನ, ನಿರ್ದೇಶನ, ತತ್ವ, ಸಿದ್ಧಾಂತದಂತಹ ಮುತ್ತುಗಳನ್ನು ಉದುರಿಸಿದರು. ಏನೂ ಅರ್ಥ ಆಗದಿದ್ದರೂ ಮಕ್ಕಳ ಉತ್ತರ ಚಪ್ಪಾಳೆಯೇ ಆಗಿತ್ತು. ನಂತರ ಬಂದ ಮಖ್ಯ ಅತಿಥಿಗಳು ಕೂಡ ಶಿಕ್ಷಣ, ಬದುಕು, ಮುಂತಾದ ತತ್ವಗಳ ಪಟ್ಟಿ ಹೇಳುತ್ತಾ ಆದ್ದರಿಂದ “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ಅವರ ಮನಸ್ಸಿನಲ್ಲಿ ಧ್ವನಿಮುದ್ರಿತವಾದ ಸುರುಳಿಯನ್ನು ಬಿಚ್ಚಿಟ್ಟರು. ನಂತರ ಬಂದ ಗಣ್ಯರು ಇದೇ ಘೋಷಣೆಯನ್ನು ಕೂಗಿದರು. ಮಕ್ಕಳು ಇರಬಹುದೇನೋ ಎಂದು ತಿಳಿದು ಅವರ ಗೆಳೆಯರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಸ್ವಾಧಿಸಲು ಕಾತುರದಿಂದ ಬೇಗ-ಬೇಗ ಚಪ್ಪಾಳೆ ಬಡಿದರು. ಕೆಲವು ಗಣ್ಯರ ಭಾಷಣ ನಿಲ್ಲಿಸಲಿ ಎಂದು ಮಕ್ಕಳು ಚಪ್ಪಾಳೆ ಬಡಿದರೂ, ಮಕ್ಕಳು ನಿಜವಾಗಿ ನನ್ನ ಭಾಷಣ ಇಷ್ಟ ಪಟ್ಟಿದ್ದಾರೆ ಎಂದು ತಿಳಿದು, ತಾನು ಎಂದೂ ಪಾಲಿಸದ ಅಲ್ಲಲ್ಲಿ ಓದಿದ ಭಾಷಣಕ್ಕೆಂದೇ ಸಂಗ್ರಹ ಮಾಡಿಕೊಂಡ ಕತೆ, ಘಟನೆ, ತತ್ವ ನಿರ್ದೇಶನಗಳನ್ನು ಹೇಳುತ್ತಲೇ ಇದ್ದರು. ಮಕ್ಕಳ ಚಪ್ಪಾಳೆ ಜಾಸ್ತಿಯಾದ ನಂತರ ನಿರೂಪಕರ ಚೀಟಿ ಅವರ ಕೈ ಸೇರಿತು, ಚೀಟಿಯಲ್ಲಿ ಸರ್! ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾಯುತ್ತಿದ್ದಾರೆ. 9.00 ಗಂಟೆಯಿಂದ ಮೇಕಪ್ ಮಾಡಿ ಕೂತಿದ್ದಾರೆ ಪ್ಲೀಸ್ ಸರ್” ಎಂದಿತ್ತು. ಚೀಟಿ ಓದಿದ ಗಣ್ಯರು ಸಿಡುಕು ಮುಖ ಮಾಡಿಕೊಂಡು ಅದೇ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೋಷಣೆಯೊಂದಿಗೆ ಭಾಷಣ ನಿಲ್ಲಿಸಿದರು.

ಈ ಮಧ್ಯದಲ್ಲಿ ಗಣ್ಯರೊಬ್ಬರು “ಮಕ್ಕಳಿಗೆ ಏನಾದರೂ ಪ್ರಶ್ನೆ ಕೇಳಲು ಇದೆಯಾ? ಎಂದು ಕೇಳಿಯೇ ಬಿಟ್ಟರು. ಆಗ ಮಕ್ಕಳು ಕೆಲವು ಸೌಲಭ್ಯಗಳ ಕುರಿತು ಕೆಲವು ವಿಜ್ಞಾನ, ಕೆಲವು ವೈಯುಕ್ತಿಕ ಪ್ರಶ್ನೆಗಳನ್ನು ಗಣ್ಯರ ಮುಂದೆ ಕೇಳಿದರು. ಅದಕ್ಕೆ ಅವರುಗಳಿಂದ ಉತ್ತರವಾಗಿ ನೀವು ಇನ್ನು ತುಂಬಾ ಕಲಿಯಲು ಇದೆ, ಮಕ್ಕಳಾಟಿಕೆಯೊಂದಿಗೆ ನಿಮ್ಮ ಕರ್ತವ್ಯ ಜವಾಬ್ದಾರಿ ಇದೆ, ನೀವು ಶಿಸ್ತು ಕಲಿಯಬೇಕು ಎಂಬ ಭಾಷಣಗಳನ್ನು ಬಿಟ್ಟು ಮಕ್ಕಳನ್ನು ಸುಮ್ಮನಾಗಿಸಿದರು. ಮಕ್ಕಳಿಗೆ ಸಮಾಧಾನವಾಗದಿದ್ದರೂ ಹೋಗಲಿ ಪಾಪ ಎಂದು ಮಕ್ಕಳು ಸುಮ್ಮನಾದರು. ಅಷ್ಟರಲ್ಲಿ 13ರ ವಯಸ್ಸಿನ ನೀಲಿ, ಬಿಳಿ ಬಣ್ಣದ ಸಮವಸ್ತ್ರ ಧರಿಸಿದ ಬಾಲಕಿಯೊಬ್ಬಳು ಎದ್ದು ನಿಂತಳು ಸರ್.. ಸರ್.. ಎಂದಳು ಅದು ಅವರ ಕಿವಿಗೆ ಬೀಳಲೇ ಇಲ್ಲ. ಅಷ್ಟರಲ್ಲಿ ವೇದಿಕೆಯಲ್ಲಿರುವ ಗಣ್ಯರಿಗೆ ಗೋಡಂಬಿ, ದ್ರಾಕ್ಷಿ, ಚಿಪ್ಸ್, ಬಾಟಲಿ ನೀರು ಮತ್ತು ಬಿಸಿ-ಬಿಸಿ ಚಹಾ ನೀಡುವ ಸೇವಾ ಕಾರ್ಯದಲ್ಲಿ ಸಂಘಟಕರು ತಲ್ಲೀನರಾಗಿದ್ದರು. ಮತ್ತೆ ಪುನಃ ಅದೇ ಬಾಲಕಿ ಸರ್... ಸರ್.. ಆಗ ನಿರೂಪಕರು ಕೊನೆ ಪ್ರಶ್ನೆ ಕೇಳಮ್ಮಾ ಎಂದು ಅವಕಾಶ ಕೊಟ್ಟರು. ಆಗ ಬಾಲಕಿ ಸರ್ ನೀವೆಲ್ಲರೂ “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂದು ಹೇಳ್ತಿದ್ದೀರಾ! ತಾನೆ?, ಹಾಗಾದರೆ ಮುಂದೆ ಎಂದರೆ ಯವಾಗ ನಾವು ಪ್ರಜೆಗಳಾಗುವುದು ಸರ್? ಎಂದು ಕೇಳಿಯೇ ಬಿಟ್ಟಳು. ಚಿಪ್ಸ್ ಮತ್ತು ಗೋಡಂಬಿ ಸೇವನೆಯಲ್ಲಿ ತಲ್ಲೀನರಾಗಿದ್ದ ಗಣ್ಯರಿಗೆ ಈ ಪ್ರಶ್ನೆ ಸರಿಯಾಗಿ ಕೇಳಲೇ ಇಲ್ಲ. ಏನು? ಏನು? ಇನ್ನೊಮ್ಮೆ ಕೇಳು ಎಂದು ವೇದಿಕೆಯಿಂದ ಮರು ಉತ್ತರ, ಆಗ ಬಾಲಕಿ ಸರ್ ನಾವು ಮಕ್ಕಳು ಮುಂದಿನ ಪ್ರಜೆಗಳಾದರೆ, ಯಾವಾಗ ನಾವು ಪ್ರಜೆಗಳಾಗುತ್ತೇವೆ? ಎಂದು ಕೇಳಿದಳು. ಸಭೆಯಲ್ಲಿ ಜೋರಾದ ನಗು, ಗಣ್ಯರೆಲ್ಲರೂ ಮುಖ-ಮುಖ ನೋಡಿದರು. ಒಬ್ಬರೂ ಉತ್ತರ ಕೊಡಲು ಸಿದ್ಧರಿರಲಿಲ್ಲ. ಅಲಲ್ಲಿ ಬಂದ ಉತ್ತರಗಳು ಹೀಗಿದ್ದವು. ದೊಡ್ಡವರಾದ ಮೇಲೆ, ಚೆನ್ನಾಗಿ ಓದಿ ದೊಡ್ಡವರಾದ ಮೇಲೆ. 18 ವರ್ಷ ಆದ ಮೇಲೆ. 18 ವರ್ಷ ಆಗಿ ಓಟು ಹಾಕಲು ಅಧಿಕಾರ ಸಿಗುತ್ತೆ ಅಲ್ವಾ? ಆವಾಗ, ಓದಿ ಒಳ್ಳೆ ವಿದ್ಯೆಬುದ್ಧಿ, ಕಲಿತು ಜಾಣೆ ಆದ ಮೇಲೆ ಹೀಗೆ ಉತ್ತರ ಬರುತ್ತಾ ನಗುವಿನೊಂದಿಗೆ ಬಾಲಕಿಯ ಪ್ರಶ್ನೆ ಮಾಯವಾಯಿತು.

ಅಷ್ಟರಲ್ಲಿ ವೇದಿಕೆಯಲ್ಲಿದ್ದ ಹಿರಿಯ ಅಧಿಕಾರಿಗಳೊಬ್ಬರು ವೇದಿಕೆಯಲ್ಲಿ ಓಡಾಡುತ್ತಿದ್ದ ಒಬ್ಬರನ್ನು ಕರೆದು ಅವನ ಕಿವಿಯ ಹತ್ತಿರ ಬಂದು ಮೆಲ್ಲಗೆ ಅತಿಥಿಗಳನ್ನು ತೋರಿಸುತ್ತಾ ಇವರಿಗೆ ಪ್ರವಾಸಿ ಮಂದಿರ(ಐ.ಬಿ)ದಲ್ಲಿ ಊಟ ರೆಡಿ ಇದೆಯಾ ಕೇಳು ಎಂದರು. ಅವಾಗ ಅವರು 1:30ಕ್ಕೆ ಊಟ ರೆಡಿಯಾಗಿದೆ ಸರ್, ಎಂದು ಉತ್ತರಿಸಿದ್ದು ರಂಗಮಂದಿರದ ಎಲ್ಲಾ ನಿರ್ಜೀವ ವಸ್ತುಗಳಿಗೂ ಕೇಳಿಸಿತು. ಅಷ್ಟರಲ್ಲಾಗಲೇ ಮಧ್ಯಾಹ್ನ 2 ಗಂಟೆ ಆಗಿತ್ತು, ಅರ್ಧದಷ್ಟು ಮಕ್ಕಳು ಉಪ್ಪಿಟ್ಟಿನ ಪ್ರಭಾವ ಕಡಿಮೆ ಆಗಿ ನಿದ್ದೆಗೆ ಜಾರಿದ್ದರು. 

ಆಗ ವೇದಿಕೆಯಿಂದ ಈಗ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಘೋಷಣೆ ಕೇಳಿ ಬಂತು. ಅವಾಗ ಅದ್ಯಾವುದೋ ಶಕ್ತಿ ಮಕ್ಕಳ ಮೈಯಲ್ಲೆಲ್ಲಾ ಹರಿದಾಡಿದಂತೆ ಸಂಭ್ರಮಿಸಿದರು. ರಂಗಮಂದಿರದಲ್ಲಿ ಮಿಂಚು, ಗುಡುಗು ಆದ ಅನುಭವ ಎಲ್ಲರದ್ದು. ಮುಂದುವರಿದು ಮಾತನಾಡಿದ ನಿರೂಪಕರು ನಿಮಗೆಲ್ಲ ಹಸಿವಾಗುತ್ತಿರುವ ಕಾರಣ 12 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೇವಲ 6ನ್ನು ಮಾತ್ರ ಪ್ರಸ್ತುತಪಡಿಸೋಣ ಉಳಿದ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಿಮ್ಮ ನಿಮ್ಮ ಶಾಲಾ ವ್ಯಾಪ್ತಿಯಲ್ಲಿ ಮಾಡಿ ಎಂದು ಅಂದವಾಗಿ, ಚಂದವಾಗಿ ಹೇಳಿದರು. ಆದರೆ ಅದು ಮಕ್ಕಳ ಕಿವಿಗೆ ಕರ್ಕಶವಾಗಿ ಕೇಳಿ ಕಿರುಚಾಡಿದರು, ಕೂಗಿದರು. ಅಷ್ಟರಲ್ಲಾಗಲೇ ಮೊದಲನೇ ಕಾರ್ಯಕ್ರಮ ವೇದಿಕೆಯಲ್ಲಿ ಪ್ರಾರಂಭವಾಯಿತು. ಮಕ್ಕಳು ಅವರ ಹಕ್ಕುಗಳ ಉಲ್ಲಂಘನೆಗಳನ್ನು ಮರೆತು ಕಾರ್ಯಕ್ರಮ ಸವಿದರು. ನಂತರ ಒಂದೊಂದಾಗಿ ಕಾರ್ಯಕ್ರಮ ನೀಡುತ್ತಾ, ಆರು ಕಾರ್ಯಕ್ರಮ ಹೋಗಿ ಮಕ್ಕಳ ಒತ್ತಾಯಕ್ಕೆ ಎಂಟು ಕಾರ್ಯಕ್ರಮಗಳನ್ನು ಮಕ್ಕಳು ಅದ್ಬುತವಾಗಿ ಪ್ರದರ್ಶಿಸಿದರು. ವೇದಿಕೆಯ ಗೌರವ ಕಾಪಾಡಿದರು. ಕೇವಲ ಒಂದೇ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ, ಒಲ್ಲದ ಮನಸ್ಸಿನಿಂದ ಹಾಜರಿದ್ದ ಗಣ್ಯರೆಲ್ಲರೂ ಪ್ರವಾಸಿ ಮಂದಿರದ (ಐ,ಬಿ) ಊಟದ ಪರಿಮಳಕ್ಕೊ, ಬಿ.ಪಿ. ಶುಗರ್ ಸಮಸ್ಯೆಗೋ ಏನೋ ಗೊತ್ತಿಲ್ಲ ಹೊರಟು ಹೋಗಿ ಹೋಳಿಗೆ, ರೊಟ್ಟಿಯೊಂದಿಗೆ ಭಾಂದವ್ಯ ಬೆಳೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಮುಂದೆ ಕುಳಿತಿದ್ದ ಮಕ್ಕಳಿಗೆ ಅಡ್ಡವಾಗಿ ಕುಳಿತಿದ್ದ ದೊಡ್ಡ ದೊಡ್ಡ ತಲೆಗಳು ಮಾಯವಾಗಿದ್ದವು. ಮಕ್ಕಳ ಸಂಭ್ರಮ ಸವಿಯಲು ಬಂದ ಕೆಲವು ಪೋಷಕರು ಮಾತ್ರ ಮಕ್ಕಳ ಸಂಭ್ರಮದಲ್ಲಿ ಪಾಲುದಾರರಾಗಿದ್ದರು.

ಮಕ್ಕಳ ಕಾರ್ಯಕ್ರಮ ಪೂರ್ತಿ ಮುಗಿಯುವಾಗ ಸಂಜೆ 3:30 ಆಗಿತ್ತು, ಮಕ್ಕಳನ್ನು ಕರೆದುಕೊಂಡ ಬಂದ ಕೆಲವು ಗೂಡ್ಸ್ ವಾಹನಗಳು ಒಂದೊಂದಾಗಿ ಸ್ಟಾಟ್ ಆಗಿ ವಿಚಿತ್ರ ಶಬ್ಧ ಮಾಡುತ್ತಾ ಮಕ್ಕಳನ್ನು ಕರೆದುಕೊಂಡು ಹೋಗಲು (ಕಾನೂನು ಬಾಹಿರವಾಗಿ) ಸಿದ್ದವಾಗಿದ್ದವು. ಅದೆ ಸಂದರ್ಭಕ್ಕೆ ಸರಿಯಾಗಿ ಮಕ್ಕಳನ್ನು ಯಾವುದೇ ತೊಂದರೆ ಇಲ್ಲದೇ ಕರೆದುಕೊಂಡು ಹೋಗಬೇಕು ಎಂಬ ಮಾತುಗಳು ಮೈಕ್‍ನಲ್ಲಿ ಕೇಳಿಬರುತ್ತಿತ್ತು. ವಾಹನ ಹತ್ತುವಾಗ ಮಕ್ಕಳಿಗೆ ಕೈಗೆ ತರಕಾರಿಯೇ ಕಾಣದ ಹೆಚ್ಚು ಪೇಪರ್ ಮತ್ತು ಪ್ಲಾಸ್ಟಿಕ್ ಪೇಪರೇ ಇರುವ “ಪಲಾವ್” ಎಂಬ ಹೆಸರಿನ ಆಹಾರದ ಕಟ್ಟು ಮಕ್ಕಳ ಕೈ ಸೇರಿಸಿತು. ಮತ್ತೆ ಅದೇ 1 ರೂಪಾಯಿಯ ನೀರಿನ ಪ್ಯಾಕೇಟ್ ಕೂಡ ಕೈ ಸೇರಿಸಿತು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಕುಣಿದು ಕುಪ್ಪಳಿಸಿ, ಸಹಕಾರ ನೀಡಿದ ವಿದ್ಯುತ್, ಲೈಟ್‍ಗಳು ಮತ್ತು ಮೈಕ್ ಸಂಪೂರ್ಣ ಬೆಂಬಲ ನೀಡಿತು. ಮಕ್ಕಳ ಹಾಡು, ನೃತ್ಯ, ರೂಪಕ, ತಮಾಷೆ ಛದ್ಮವೇಷವನ್ನು ನೋಡಿ ತುಂಬಾ ಸಂತೋಷಪಟ್ಟ ರಂಗಮಂದಿರ ಮಕ್ಕಳಿಗೆ ಹೆಮ್ಮೆಯಿಂದ, ಗೌರವದಿಂದ, ಘನತೆಯ ಬಿಳ್ಕೊಡುಗೆಯನ್ನು ನೀಡಿತು. ಕಾರ್ಯಕ್ರಮದಲ್ಲಿ ಉದ್ಘಾಟನೆಗೇ ಹೆಚ್ಚು ಒತ್ತು ನೀಡಿ, ಅತಿಥಿಗಳು ಮತ್ತು ಗಣ್ಯರನ್ನೇ ಗಮನಿಸಿದ ಸಂಘಟಕರಿಗೆ, ಮಕ್ಕಳಿಗಾಗಿಯೇ ಮತ್ತು ಮಕ್ಕಳಿಗೆ ನೀಡಲು ತರಿಸಿದ ಚಾಕಲೇಟ್‍ಗಳನ್ನು ಮಕ್ಕಳಿಗೆ ನೀಡಲು ಮರೆತು ಹೋಗಿತ್ತು. ರಂಗಮಂದಿರದ ಮೂಲೆಯ ಕವರ್‍ನಲ್ಲಿ ಚಾಕಲೇಟ್‍ಗಳು ಮಕ್ಕಳ ಜೇಬು ಸೇರಲು ಕಾಯುತ್ತಿದ್ದವು. ನಂತರ ಶಾಲೆಗಳಿಗೆ ಕಳುಹಿಸಿದರಾಯಿತು ಎಂಬ ಮಾತನ್ನು ಕೇಳಿದ ಚಾಕಲೇಟ್‍ಗಳು ಸ್ವಲ್ಪ ಸಮಾಧಾನಗೊಂಡವು.

ಇಷ್ಟೆಲ್ಲಾ ನಡೆದರೂ ಕೊನೆಗೂ ಉಳಿದಿರುವ ಪ್ರಶ್ನೆ ಬಾಲಕಿ ಕೇಳಿದ ಪ್ರಶ್ನೆ, ನಾವು ಅಂದರೆ “ಮಕ್ಕಳು” ನಾಳಿನ ಪ್ರಜೆಗಳಾಗುವುದಾದರೆ ನಾಳೆ ಎಂದರೆ ಯಾವಾಗ? ನಾವು ಯಾವಾಗ ಪ್ರಜೆಗಳಾಗುತ್ತೇವೆ? ನಾವು ಪ್ರಜೆಗಳಾಗುವುದು ಯಾವಾಗ? ಎಂಬುದು. ಕಾರ್ಯಕ್ರಮದುದ್ದಕ್ಕೂ ನಮಗಾರಿಗೂ ಅರಿವಿಲ್ಲದಂತೆಯೇ ಮಕ್ಕಳಿಗೆಂದೇ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂಚು ಇಂಚಿಗೂ ಮಕ್ಕಳಿಗೆ ಮತ್ತು ನಮಗೆ ಗೊತ್ತಿಲ್ಲದೆಯೇ ಮಕ್ಕಳನ್ನು ನಿರ್ಲಕ್ಷ್ಯಕ್ಕೆ, ಒಳಪಡಿಸಿರುವುದು ಕಾಣುತ್ತದೆ. ಕಾರ್ಯಕ್ರಮದ ಓಟ್ಟು ಆಶಯ ಉತ್ತಮವಾದದ್ದೇ ಇರಬಹುದು, ಆದರೆ ಮಕ್ಕಳು ‘ಅನುಭವಿಸಿದ್ದು’ ಏನು? ಎನ್ನುವುದು ಪ್ರಶ್ನೆ. ಮಕ್ಕಳು “ನಾಳಿನ” ಪ್ರಜೆ ಅಲ್ವಾ? ಮತ್ತೆ ನೋಡಿದರಾಯಿತು, ಈಗ ಮಕ್ಕಳು ತಾನೇ! ಪಾಪ! ಏನು ಗೊತ್ತಿಲ್ಲ! ಮುಗ್ದರು! ತಿಳುವಳಿಕೆ ಬಂದಿಲ್ಲ! ದೊಡ್ಡವರಾಗಬೇಕು! ಜ್ಞಾನ ಬಂದಿಲ್ಲ! ಇನ್ನೂ ಅರಿವು ಬಂದಿಲ್ಲ! ಅವರಿಗೆ ಏನು ಗೊತ್ತಾಗುತ್ತೇ?  ಪಾಪ! ಅಂತಲೇ ಏನೋ ಗೊತ್ತಿಲ್ಲ, ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಲ್ಲೇ ಬಂದೆವು ಅಲ್ವಾ?. ಅದಕ್ಕೆ ನಾವೆಲ್ಲರೂ ಕಾರಣರಾದೆವು. “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಆದರೆ ಇಂದು ಏನು? ಎನ್ನುವ ಪ್ರಶ್ನೆ ಕಾಡುತ್ತದೆ. ಮಕ್ಕಳು ಹೌದು! ಆದರೆ ಮಕ್ಕಳು ಈ ದೇಶದ ಪ್ರಜೆಗಳು ಅಲ್ವಾ? ಮಕ್ಕಳು ಪ್ರಜೆಗಳು ಅಲ್ಲವೇ? ಸಂವಿಧಾನದಲ್ಲಿ ಹೇಳಿದ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮಕ್ಕಳಿಗೆ ಅನ್ವಯಿಸುವುದಿಲ್ಲವೇ? ನಾಳೆ ಎಂದರೆ ಯಾವಾಗ? ನಾಳೆ ಎನ್ನುವುದಕ್ಕೆ ಅಂತ್ಯ ಎಲ್ಲಿ? ನಾಳೆ ಎನ್ನುವುದಕ್ಕೆ ಅರ್ಥ ಏನು? ಎಲ್ಲಿಯವರೆಗೆ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ?. ಇದಕ್ಕೆಲ್ಲಾ ಉತ್ತರವನ್ನು ಭಾರತದ ಸಂವಿಧಾನ ಸ್ಪಷ್ಟ ಉತ್ತರ ನೀಡಿದೆ. ಆದರೆ ನಾವು ಅರ್ಥೈಸಿಕೊಳ್ಳದೇ ಹೋದೆವಲ್ಲಾ ಎಂಬುದಷ್ಟೇ ಬೇಸರದ ಸಂಗತಿ. ಸಂವಿಧಾನದಲ್ಲಿ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಅಲ್ಲ, ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಎಂಬುದನ್ನು ಸಂವಿಧಾನದ ಭಾಗ 2 ನಾಗರಿಕತ್ವದ ಅರ್ಥ ಮತ್ತು ವಿವರಣೆಯ ಪರಿಚ್ಛೇದ 5ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದು ಏನೆಂದರೆ “ಯಾವ ಮಗು ತನ್ನ ತಾಯಿಯ ಹೊಟ್ಟೆಯಿಂದ ಈ ಭೂಮಿಗೆ ಬರುತ್ತೋ ಆ ಕ್ಷಣದಿಂದ ಈ ದೇಶದ ಪ್ರಜೆ ಎಂಬುದನ್ನು ಹೇಳಿದೆ”. ಅದು ಹೇಗೆಂದರೆ: ಸಂವಿಧಾನದ ಭಾಗ-2 ನಾಗರಿಕತ್ವದ ಅಧ್ಯಾಯದಲ್ಲಿ ಪರಿಚ್ಛೇಧ-5: ಈ ಸಂವಿಧಾನದ ಪ್ರಾರಂಭದಲ್ಲಿ, ಭಾರತದ ರಾಜ್ಯಕ್ಷೇತ್ರದಲ್ಲಿ ಆದಿವಾಸವುಳ್ಳ ಮತ್ತು (ಎ) ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿರುವ ಅಥವಾ (ಬಿ) ತನ್ನ ತಾಯಿಯಾಗಲಿ, ತಂದೆಯಾಗಲಿ ಭಾರತದ ರಾಜ್ಯ ಕ್ಷೇತ್ರದಲ್ಲಿ ಹುಟ್ಟಿದಲ್ಲಿ ಅಥವಾ (ಸಿ) ಸಂವಿಧಾನದ ಪ್ರಾರಂಭಕ್ಕೆ ನಿಕಟ ಪೂರ್ವದಲ್ಲಿ 05 ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲದಿಂದ ಭಾರತ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯವಾಗಿ ನಿವಾಸಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಭಾರತದ ನಾಗರಿಕನಾಗತಕ್ಕದ್ದು ಎಂದು ಹೇಳಿದೆ. ಆಂಗ್ಲ ಆವೃತ್ತಿಯ ಯಥಾ ನಕಲು: 

Indian Constitution, PART II: CITIZENSHIP: 5. Citizenship at the commencement of the Constitution.—At the commencement of this Constitution, every person who has his domicile in the territory of India and—(a) who was born in the territory of India; or (b) either of whose parents was born in the territory of India; or (c) who has been ordinarily resident in the territory of India for not less than five years immediately preceding such commencement, shall be a citizen of India.

ಎಷ್ಟು ಸ್ಪಷ್ಟತೆ, ಸುಂದರ ಮತ್ತು ಅದ್ಬುತ ನೋಡಿ. ಅಂದರೆ ಭಾರತದ ಭೂಕ್ಷೇತ್ರದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಈ ದೇಶದ ಪ್ರಜೆ ಅಥವಾ ನಾಗರಿಕನಾಗತಕ್ಕದ್ದು ಎಂದು ಹೇಳಿದೆ. ಆದರೆ ನಾವು ನಾಳಿನ ಪ್ರಜೆಗಳು ಅಂದೆವಲ್ಲ? ಛೇ!! ಎಂತಹ ತಪ್ಪು ಮಾಡಿದೆವು ಅಲ್ವಾ?. ಹಾಗಾದರೆ ಇದುವರೆಗೆ ಹಲವಾರು ವರ್ಷಗಳಿಂದ ಶಾಲೆಗಳಲ್ಲಿ ಮತ್ತು ಇತರ ಕಡೆಗಳಲೆಲ್ಲಾ ದೊಡ್ಡವರು, “ಇಂದಿನ ಮಕ್ಕಳೇ, ನಾಳಿನ ಪ್ರಜೆಗಳು” ಎಂದು ಹೇಳಿದ್ದು ತಪ್ಪಾ? ಎನ್ನುವ ಪ್ರಶ್ನೆ ನಮ್ಮಲ್ಲಿ ಬರುತ್ತೆ ತಾನೇ? ಅದು ಕೇವಲ ಮಕ್ಕಳಿಗೆ ಪ್ರೋತ್ಸಾಹಕ ಮತ್ತು ಹುರಿದುಂಬಿಸುವ ವಾಕ್ಯವಾಗಿ ಇರಬಹುದೋ ಏನೋ ಗೊತ್ತಿಲ್ಲ.  ಆದರೆ ಅದು ಸಂವಿಧಾನದ ಆಶಯದ ವಿರುದ್ಧ ಎನ್ನುವ ಅಂಶವನ್ನು ಈಗಲಾದರು ಅರಿಯಬೇಕು. ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂದ ತಕ್ಷಣ ಸಂವಿಧಾನದ ನಾಗರಿಕತ್ವದ (ಪ್ರಜೆ) ಅರ್ಥಕ್ಕೆ ಧಕ್ಕೆಯಾದಂತೆ ಹಾಗೂ ಮಕ್ಕಳ ಹಕ್ಕುಗಳಿಗೆ ಧಕ್ಕೆ ಮಾಡಿದಂತೆ. ಸಂವಿಧಾನದ ಭಾಗ-2 ಪರಿಚ್ಛೇಧ 5ರ ನಾಗರಿಕತ್ವದ ಅರ್ಥ ವಿವರಣೆಯಲ್ಲಿ ಎಲ್ಲಿಯೂ ಕೂಡ ನಾಗರಿಕತ್ವಕ್ಕೆ ಯಾವುದೇ ವಯಸ್ಸಿನ ಮಿತಿಯನ್ನು ಹೇಳಲಿಲ್ಲ ಹಾಗೂ ಎಲ್ಲಿಯೂ ಲಿಂಗ, ಧರ್ಮ, ಜಾತಿ, ಬಣ್ಣ, ಮತ, ವರ್ಗಬೇಧದ ಯಾವ ಅಂಶವು ಇಲ್ಲ. ಅದು ಭಾರತದ ಭೂ ಕ್ಷೇತ್ರದಲ್ಲಿ ಹುಟ್ಟಿದ ಎಲ್ಲರಿಗೂ ನಾಗರಿಕತ್ವವನ್ನು ನೀಡಿದೆ. ಆದ್ದರಿಂದ ಇಂದಿನ ಮಕ್ಕಳು, ಇಂದಿನ ಪ್ರಜೆಗಳೂ ಹೌದು, ನಾಗರಿಕರೂ ಹೌದು ಮತ್ತು ನಾಳಿನ ಪ್ರಜೆಗಳೂ, ನಾಗರಿಕರೂ ಹೌದು. 

ಒಂದು ವೇಳೆ ನಾವು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂದು ಹೇಳಿದ ತಕ್ಷಣ ಸಂವಿಧಾನದಲ್ಲಿ ನಾಗರಿಕರಿಗಾಗಿ ಹೇಳಿರುವ ಆಶಯಗಳಾದ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ತತ್ವಗಳು ಅನ್ವಯಿಸುವುದಿಲ್ಲ ಅಥವಾ ಅನ್ವಯವಾಗುವುದಿಲ್ಲ ಎಂಬ ಅರ್ಥ ಬರುತ್ತದೆ. ಅಂದರೆ ಅದು ಸಂವಿಧಾನದ ಉಲ್ಲಂಘನೆಯ ಮಾತುಗಳಾಗಿವೆ. ನಾಳೆ ಎನ್ನುವುದಕ್ಕೆ ಅರ್ಥ ಏನು?.  ನಾಳೆ ಅಂದ ತಕ್ಷಣ ಇಂದು ಯಾವುದೂ ಅನ್ವಯಿಸುವುದಿಲ್ಲ ಎನ್ನುವ ಅರ್ಥ ಬರುತ್ತದೆ. 18 ವರ್ಷ ಆದ ನಂತರ ಮತದಾನ ಮಾಡುವ ಹಕ್ಕನ್ನೇ “ಪ್ರಜೆ ಅಥವಾ ನಾಗರಿಕತ್ವ” ಎಂದು ಅರ್ಥೈಸಿಕೊಂಡವರು ಇರಬಹುದು. ಮತದಾನ ಪ್ರಜೆಗಳಿಗೆ ನೀಡಿರುವ ಸಂವಿಧಾನದತ್ತ ಹಕ್ಕಾದರು, ಅದು 18 ವರ್ಷ ಪೂರ್ಣಗೊಂಡ ನಾಗರಿಕರಿಗೆ ತನ್ನ ಭಾಗವಹಿಸುವಿಕೆಯ ಹಕ್ಕನ್ನು, ಚಲಾಯಿಸಲು ಇರುವ ಒಂದು ಅವಕಾಶ ಅಷ್ಟೇ. ಈ ಹಕ್ಕು ಮತ್ತು ಅವಕಾಶವನ್ನು ಚಲಾಯಿಸಲು 18 ವರ್ಷ ಆಗಿರಬೇಕೇ ಹೊರತು, ಈ ಹಕ್ಕಿನ ಅವಕಾಶ ಸಿಕ್ಕಿದ ಮೇಲೆ ಅಥವಾ 18 ವರ್ಷ ತುಂಬಿದ ಮೇಲೆ ಎಲ್ಲಾ ವ್ಯಕ್ತಿಗಳು ಪ್ರಜೆಗಳಾಗುತ್ತಾರೆ ಎನ್ನುವ ಅಂಶ ಎಲ್ಲಿಯು ಇಲ್ಲ, ಆದ್ದರಿಂದ ಮತದಾನದ ಹಕ್ಕಿಗೂ ಪ್ರಜೆ ಮತ್ತು ನಾಗರಿಕತ್ವದ ಅಂಶಗಳಿಗೂ ಯಾವುದೇ ಸಂಬಂಧವಿಲ್ಲ, ಈ ಎರಡೂ ವಿಚಾರ ಮತ್ತು ಪರಿಭಾಷೆಗಳು ಬೇರೆ ಬೇರೆಯೇ ಆಗಿವೆ.

ಆದ್ದರಿಂದ ‘ಇಂದಿನ ಮಕ್ಕಳು ಇಂದಿನ ಪ್ರಜೆಗಳು’ ಎಂದು ಸಂವಿಧಾನದ ಮೂಲ ತತ್ವ ಮತ್ತು ಆಶಯವನ್ನು ಎತ್ತಿ ಹಿಡಿಯುವ ಮುಖಾಂತರ ಮಕ್ಕಳು ಮತ್ತು ಅವರ ಹಕ್ಕುಗಳನ್ನು ನೋಡಬೇಕು. ತನ್ಮೂಲಕ ಮಕ್ಕಳನ್ನು ಪ್ರಜೆಗಳೆಂದೇ ಸ್ವೀಕರಿಸಿ ಗೌರವಿಸುವುದರ ಮುಖಾಂತರ ಮಕ್ಕಳ ಹಕ್ಕುಗಳನ್ನು ಅರ್ಥೈಸಿಕೊಳ್ಳಬೇಕು. ಸಂವಿಧಾನದಲ್ಲಿ ಹೇಳಿದ ಮೂಲಭೂತ ಹಕ್ಕುಗಳು ಪರಿಚ್ಚೇಧ 12 ರಿಂದ 35ರ ತನಕದ ಎಲ್ಲಾ ಅಂಶಗಳು, ರಾಜ್ಯ ನಿರ್ದೇಶಕ ತತ್ವಗಳು ಪರಿಚ್ಚೇಧ 36 ರಿಂದ 54 ಮತ್ತು ಮೂಲಭೂತ ಕರ್ತವ್ಯಗಳು 51ಎ ಯಿಂದ 51ಕೆ ವರೆಗಿನ ಅಂಶಗಳು ಈ ದೇಶದ ಎಲ್ಲಾ ಮಕ್ಕಳಿಗೂ ಅನ್ವಯಿಸುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಈ ಮೂಲಕ ಮಕ್ಕಳಿಗೂ ಸಂವಿಧಾನದತ್ತ ಹಕ್ಕುಗಳು ಮತ್ತು ಇತರ ಹಕ್ಕುಗಳು ಇವೆ ಎಂಬುದನ್ನು ತಿಳಿಯಬೇಕು. ಮಕ್ಕಳು ಅವರ ಹಕ್ಕುಗಳನ್ನು ಅನುಭವಿಸಲು ಮತ್ತು ಸಂಭ್ರಮಿಸಲು ನಾವು ಮಕ್ಕಳಿಗೆ ಬಿಡಬೇಕು ಎಂಬ ಕನಿಷ್ಠ ಸಂವಿಧಾನದ ಆಶಯದ ಜ್ಞಾನ ನಮಗಿರಲಿ. 

ಮಕ್ಕಳು ಎಂದರೆ ದೇವರಿಗೆ ಸಮಾನ ಎಂದು ನಂಬಿದ ಜಗತ್ತಿನ ಪ್ರಥಮ ರಾಷ್ಟ್ರದಲ್ಲಿ ಮಕ್ಕಳು ಈ ದೇಶದ ಪ್ರಜೆಗಳು ಎಂದು ಹೇಳಲು, ಇನ್ನೂ ಯೋಚಿಸುತ್ತಿರುವವರು, ಆಲೋಚಿಸುತ್ತಿರುವವರು ಇರುವುದು ಇದು ಒಂದು ರೀತಿಯಲ್ಲಿ ಖೇದದ ಸಂಗತಿಯೇ ಹೌದು. ಸಂವಿಧಾನ ತಜ್ಞರು, ನ್ಯಾಯಾಲಯಗಳು, ಮಾನವ ಅಭಿವೃದ್ಧಿ ಕಾರ್ಯಕರ್ತರುಗಳು ಮತ್ತು ಮಕ್ಕಳ ಹಕ್ಕು ಮತ್ತು ಸಂರಕ್ಷಣೆಯ ಕಾರ್ಯಕರ್ತರು ಇದನ್ನು ಹೇಳಿದಾಗ ಒಂದು ರೀತಿಯ ವಿರೋಧ ವ್ಯಕ್ತವಾಗಿತ್ತು, ಅದು ಹೇಗೆ ಸಾಧ್ಯ, ಹಾಗಾದರೆ ಹಿಂದಿನವರು ಎಲ್ಲಾ ಹೇಳಿದ್ದು ತಪ್ಪಾ? ಎಂದು ಪ್ರಶ್ನಿಸುತ್ತಲೇ ಮಕ್ಕಳನ್ನು ಈ ದೇಶದ ಪ್ರಜೆಗಳು ಎಂದು ಒಪ್ಪಿಕೊಂಡಿರಲಿಲ್ಲ. ಸುಮಾರು ವರ್ಷಗಳಿಂದ ಈ ಘೋಷಣೆಯನ್ನು ಹೇಳಿದವರೆಲ್ಲಾ  ದಡ್ಡರೇ? ಎಂದು ಸವಾಲೆಸೆದರು. ಆದರೆ ಅವರು ದಡ್ಡರೆಂದು ನಾವೇಕೆ ಹೇಳಲಿ? ಮಕ್ಕಳು ನಾಳಿನ ಪ್ರಜೆಗಳು ಎಂದು ಹೇಳಿದ ತಕ್ಷಣ ಸಂವಿಧಾನದಲ್ಲಿ ಹೇಳಿದ ಅಂಶಗಳು ಮಕ್ಕಳಿಗೆ ಅನ್ವಯಿಸುವುದಿಲ್ಲವೇ ಎನ್ನುವ ಪ್ರಶ್ನೆಯಷ್ಟೇ ನಮ್ಮದು. ಉದಾಹರಣೆಗೆ ಪರಿಚ್ಛೇಧ 19ರ ಸ್ವಾತಂತ್ರ್ಯದ ಹಕ್ಕು, ಪರಿಚ್ಛೇಧ 20ರ ದುರುಪಯೋಗದಿಂದ ರಕ್ಷಣೆಯ ಹಕ್ಕು, 21 ಬದುಕುವ ಮತ್ತು ಜೀವಿಸುವ ಹಕ್ಕು ಮತ್ತು 21(ಎ) ಶಿಕ್ಷಣ ಮೂಲಭೂತ ಹಕ್ಕು, ಇವು ಯಾವುದೂ ಮಕ್ಕಳಿಗೆ ಇಲ್ಲ ಎಂದಾಗುತ್ತದೆ ಅಲ್ಲವೇ? ಈ ನಾಳೆ ಎಂದು ಇಂದು ಆಗುವುದು? ಅಥವಾ ಯಾವಾಗ ಆಗುವುದು? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಆದ್ದರಿಂದ ಇಂದಿನ ಮಕ್ಕಳು ಇಂದಿನ ಪ್ರಜೆಗಳೂ ಹೌದು ಮತ್ತು ನಾಳಿನ ಪ್ರಜೆಗಳೂ ಹೌದು. ದೇವರಿಗೆ ಸಮಾನರಾದ ಮಕ್ಕಳನ್ನೇ ಸಂವಿಧಾನದ ನಾಗರಿಕತ್ವದಿಂದ ದೂರ ಇಟ್ಟರೇ ಹೇಗೆ? ಅಲ್ವೇ?. ಭಾರತ ಎಂತಹ ರಾಷ್ಟ್ರ ಎಂದರೆ ನನ್ನ ದೇಶದ ಪ್ರಜೆ ಬರುತ್ತಿದ್ದಾಳೆ...ಬರುತ್ತಿದ್ದಾನೆ ಎಂದು ಗರ್ಭಿಣಿ ತಾಯಂದಿರಿಗೆ ವಿಶೇಷ ಯೋಜನೆಗಳನ್ನು ನೀಡಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಗೌರವಿಸಿದ ರಾಷ್ಟ್ರ ಭಾರತ. ಅಂತಹ ಮಕ್ಕಳನ್ನು ನಾಳಿನ ಪ್ರಜೆಗಳು ಎಂದರೆ ಹೇಗೆ?. 

ಸುಮಾರು ಚರ್ಚೆ, ಸಂವಾದಗಳ ನಂತರ ಇದೀಗ ಸರಕಾರವೇ ಮಕ್ಕಳನ್ನು ಪ್ರಜೆಗಳೆಂದು ಒಪ್ಪಿಕೊಂಡು ತನ್ನ ದಾಖಲೆಗಳಲ್ಲಿ, “ಇಂದಿನ ಮಕ್ಕಳು ಇಂದಿನ ಪ್ರಜೆಗಳು” ಎಂದು ಹೇಳಿ ದಾಖಲಿಸಿರುವುದು ಮಕ್ಕಳ ಹಕ್ಕುಗಳಿಗೆ ಸಿಕ್ಕಿದ ಜಯವೇ ಸರಿ. 

ಈ ಸಂದರ್ಭದಲ್ಲಿ ಒಂದು ಘಟನೆ ನೆನಪಾಯಿತು. ಮಕ್ಕಳ ಕುರಿತು ಮಾತನಾಡುವ ಅವಕಾಶ ಜಿಲ್ಲೆಯೊಂದರಲ್ಲಿ ಸಿಕ್ಕಿತ್ತು. ಮಕ್ಕಳ ಹಕ್ಕುಗಳ ಮತ್ತು ಸಂರಕ್ಷಣೆಯ ಕುರಿತು ಮಾತನಾಡುವ ಮುನ್ನ, ಮಕ್ಕಳೆಲ್ಲಾ ಈ ದೇಶದ ಪ್ರಜೆಗಳು ಎಂದು ನೆನಪಿಸುವುದಕ್ಕಾಗಿ ವೇದಿಕೆಯಲ್ಲಿ “ಇಂದಿನ ಮಕ್ಕಳು, ಇಂದಿನ ಪ್ರಜೆಗಳು” ಎಂದು ಹೇಳಿ ಮಕ್ಕಳ ಹಕ್ಕುಗಳ ಸಂಪೂರ್ಣ ವಿವರಣೆಯನ್ನು ಸಭೆಯಲ್ಲಿ ನೀಡಿದೆ. ಅದಾದ ಒಂದು ವಾರದ ನಂತರ ಮಾಹಿತಿ ಹಕ್ಕಿನಡಿಯಲ್ಲಿ ಕಾರ್ಯಕರ್ತರೊಬ್ಬರು “ಇಂದಿನ ಮಕ್ಕಳು, ಇಂದಿನ ಪ್ರಜೆಗಳು” ಎಂದು ಎಲ್ಲಿ ಹೇಳಿದೆ? ಎಂದು ಪ್ರಶ್ನಿಸುತ್ತಾ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಹಾಕಿ ಕೇಳಿದರು. ಅರ್ಜಿಯನ್ನು ನೋಡಿ ಆಶ್ಚರ್ಯ ಮತ್ತು ಸಂತೋಷವು ಆಯಿತು. ಅವರಿಗೆ ಉತ್ತರಿಸುವ ಮುನ್ನ ನ್ಯಾಯಾಧೀಶರೊಬ್ಬರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಈ ಮಾಹಿತಿಯನ್ನು ಅವರ ಮುಂದಿಟ್ಟೆ. ಇದು ಸಂವಿಧಾನದಲ್ಲಿರುವ ಅಂಶ, ಅವರಿಗೆ ಸಂವಿಧಾನವನ್ನು ಓದಲು ಹೇಳಿ ಎಂದು ತಿಳಿಸಿದರು. ನಂತರ ಅವರಿಗೆ ಸಂವಿಧಾನದ ಭಾಗ-2, ಪರಿಚ್ಛೇಧ 5ರ ಅರ್ಥ ಮತ್ತು ವಿವರಣೆಯ ನಕಲು ಪ್ರತಿಯನ್ನು ಕಳುಹಿಸಲಾಯಿತು. ಈ ಮಾಹಿತಿಯನ್ನು ಸ್ವೀಕರಿಸಿದ ಅವರು, ಒಂದು ವಾರದ ನಂತರ ನನ್ನನ್ನು ಭೇಟಿಯಾಗಿ ನಿಮ್ಮ ಮಾಹಿತಿ ಓದಿ ತುಂಬಾ ಸಂತೋಷವಾಯಿತು ಸರ್ ಎಂದರು. ಈ ಅಂಶವನ್ನು ನಾವು ಇದುವರೆಗೂ ಯೋಚಿಸಲಿಲ್ವೇ? ಎಂಬ ನೋವನ್ನು ವ್ಯಕ್ತಪಡಿಸಿದರು ಹಾಗೂ ಇದರಿಂದ ಸಂವಿಧಾನದ ಮೇಲೆ, ಮಕ್ಕಳ ಮೇಲೆ ಗೌರವ ಮತ್ತು ಪ್ರೀತಿ ಜಾಸ್ತಿಯಾಯಿತು ಎಂದು ಧನ್ಯವಾದ ತಿಳಿಸಿದರು. 

ಇಷ್ಟೆಲ್ಲಾ ಆದರೂ ಇನ್ನೂ ಕೆಲವರು ಮಕ್ಕಳನ್ನು ಪ್ರಜೆಗಳೆಂದು ಓಪ್ಪಿಕೊಳ್ಳಲು ಕಷ್ಟಪಡುವುದನ್ನು ನೋಡಿದರೆ ಬೇಸರವಾಗುತ್ತದೆ. ಇನ್ನು ಮಕ್ಕಳಿಗೆ ಹಕ್ಕುಗಳಿವೆ, ಅವರಿಗೆ ಅವುಗಳನ್ನು ಅನುಭವಿಸಲು ಬಿಡಬೇಕು ಎಂದು ಹೇಳಿದರೆ ಇವರು ಒಪ್ಪಲು ಎಷ್ಟು ಕಷ್ಟಪಡುತ್ತಾರೋ ಎಂಬ ಆತಂಕ ಅಂದು ಇತ್ತು, ಇಂದೂ ಇದೆ. 

ತತ್ವಜ್ಞಾನಿಯೊಬ್ಬರು ಹೇಳಿದಂತೆ “ಮಗು ಎಂದರೇನೇ ಇಂದು” ಎಂಬ ಅರ್ಥ ಹೇಳಿರುವ ಸಂಗತಿ ನಮ್ಮ ಮಂದೆ ಇದೆ. ಮಕ್ಕಳಿಗೆ ಸಂವಿಧಾನದಲ್ಲಿ ಹೇಳಿದ ಎಲ್ಲಾ ಹಕ್ಕುಗಳು ಮತ್ತು ಅಂಶಗಳು ಮಕ್ಕಳಿಗೆ ಅನ್ವಯಿಸುತ್ತದೆ ಎಂಬುದನ್ನು ಈಗಲಾದರೂ ಅರಿಯೋಣ. ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆಗಾಗಿ ಸಂವಿಧಾನದಲ್ಲಿ ಪ್ರತ್ಯೇಕವಾಗಿ ಹಕ್ಕುಗಳನ್ನು ಕೂಡಾ ನೀಡಲಾಗಿದೆ. ಯಾವುದೇ ನಾಗರಿಕರ ಶೋಷಣೆ, ನಿರ್ಲಕ್ಷ್ಯ, ತಾರತಮ್ಯ, ಹಿಂಸೆಯಿಂದ ರಕ್ಷಿಸಲು ಇರುವ ಮೂಲಭೂತ ಹಕ್ಕುಗಳು, ನಾಗರಿಕರೂ, ಪ್ರಜೆಗಳೂ ಆದ ಮಕ್ಕಳನ್ನು ಸೇರಿದಂತೆ ನಮಗೆಲ್ಲರಿಗೂ ಅನ್ವಯಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಭಾರತವು 1989ರ ನವೆಂಬರ್ 20ರಂದು ‘ವಿಶ್ವಸಂಸ್ಥೆಯು ಅಂಗೀಕರಿಸಿದ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ’ ಭಾರತ ಸರಕಾರವು 1992 ಡಿಸೆಂಬರ್ 11ರಂದು ಸಹಿ ಮಾಡಿ ಅನುಷ್ಠಾನಕ್ಕೆ ತರುತ್ತಿದೆ. ಈ ಕಾರಣದಿಂದಲೇ ನಮ್ಮ ದೇಶದ ಅನೇಕ ಕಾನೂನುಗಳು ಮಕ್ಕಳ ಸಂರಕ್ಷಣೆಗಾಗಿ ತಿದ್ದುಪಡಿಗೊಂಡವು. ಆ ನಿಟ್ಟಿನಲ್ಲಿ ಅನುಷ್ಠಾನದಲ್ಲಿ ಇದೆ, ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಮಕ್ಕಳು ದೇವರ ಸಮಾನ ಎಂಬುವುದನ್ನು ನಂಬುವುದಾದರೆ ಮತ್ತು ಒಪ್ಪುವುದಾದರೆ ಮೊತ್ತ ಮೊದಲು ಮಕ್ಕಳನ್ನು ಪ್ರಜೆಗಳೆಂದು ಗೌರವಿಸಬೇಕು, ಆ ಮೂಲಕ ಮಕ್ಕಳ ಹಕ್ಕುಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಬೇಕು. ಅದೇ ಉತ್ತಮ ನಾಗರಿಕತೆಯ ಲಕ್ಷಣ ಹಾಗೂ ಮಾನವ ಅಭಿವೃದ್ಧಿಯ ಮೊದಲ ಹೆಜ್ಜೆ.  

ಆದ್ದರಿಂದ “ಇಂದಿನ ಮಕ್ಕಳು, ಇಂದಿನ ಪ್ರಜೆಗಳು” ಎಂಬ ಸಂವಿಧಾನದ ಆಶಯವುಳ್ಳ ಸತ್ಯದ ಅರಿವು ನಮಗೆಲ್ಲಾ ಆಗಲಿ. ಅದನ್ನು ಒಡಲಾಳದಿಂದ ಒಪ್ಪಿ ಮಕ್ಕಳ ಹಕ್ಕುಗಳ ಅನುಷ್ಠಾನಕ್ಕೆ ಮತ್ತು ಸಂರಕ್ಷಣೆಗೆ ಮುಂದಾಗಿ. ಅದು ಸಂವಿಧಾನಕ್ಕೆ ಮತ್ತು ಮಕ್ಕಳ ಹಕ್ಕುಗಳಿಗೆ ನೀಡುವ ಗೌರವ. ಇನ್ನಾದರೂ ‘ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು’ ಎಂದು ಹೇಳುವುದನ್ನು ನಿಲ್ಲಿಸೋಣ. ಇಂದಿನ ಮಕ್ಕಳು, ಇಂದಿನ ಪ್ರಜೆಗಳು ಎಂಬ ಘೋಷಣೆ ಎಲ್ಲರ ಮನೆ, ಮನ, ಹೃದಯಾಂತರಾಳದಿಂದ ಬರಲಿ ಮತ್ತು ಮನಸಾರೆ ಒಪ್ಪಿಕೊಳ್ಳಿ.  ಈ ಲೇಖನದಲ್ಲಿ ಪ್ರಸ್ತುತಪಡಿಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ವಿವರಣೆ ಸತ್ಯವಾದರೂ, “ಇಂದಿನ ಮಕ್ಕಳು, ಇಂದಿನ ಪ್ರಜೆಗಳು” ಎಂಬ ಅಂಶವನ್ನು ಅರ್ಥೈಸಲು ಒಂದು ಸಾಂಧರ್ಬಿಕವಾಗಿ ಬಳಸಿದ ಒಂದು ಘಟನೆ ಅಷ್ಟೆ. “ಇಂದಿನ ಮಕ್ಕಳು, ಇಂದಿನ ಪ್ರಜೆಗಳು”  ಎಂಬ ಸತ್ಯದ ಅರಿವು ನಿಮಗಾದರೆ, ಇನ್ನು ಮುಂದಿನ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಕಾರ್ಯಕ್ರಮದ ರೂಪಗಳು ಬದಲಾಗಿ ‘ಮಕ್ಕಳ ಹಕ್ಕಿನ ಪರಿಕಲ್ಪನೆ’ ಯಲ್ಲಿ ಹಾಗೂ ಮಕ್ಕಳನ್ನು ತೊಡಗಿಸಿಕೊಂಡ ಮಕ್ಕಳ ಕಾರ್ಯಕ್ರಮಗಳೇ ಆಗಬಹುದು ಎಂಬ ನಂಬಿಕೆ ನಮ್ಮದು. ಇಂದಿನಿಂದ ನಿಮ್ಮ ಮನದಲ್ಲಿ ಹಾಗೂ ಸಮಾಜದಲ್ಲಿ “ಇಂದಿನ ಮಕ್ಕಳು, ಇಂದಿನ ಪ್ರಜೆಗಳು” ಎಂಬ ಘೋಷಣೆ ಜನಜನಿತವಾಗಲಿ ಎಂಬುದಷ್ಟೇ ನಮ್ಮ ಆಶಯ. ಅದು ನಿಮ್ಮಿಂದ ಪ್ರಾರಂಭವಾಗಲಿ. 

(ಮುಂದಿನ ಅಂಕಣದಲ್ಲಿ, ಹಕ್ಕು ಎಂದರೇನು? ಹಕ್ಕಿನ ಪರಿಭಾಷೆ ಏನು? ಮತ್ತು ಸಂವಿಧಾನದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಏನು ಹೇಳಿದ್ದಾರೆ? ಎಂಬ ಅಂಶಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ) 

 

MORE NEWS

ಬಿಡುಗಡೆಯ ಹಾದಿಯ ಪಿಸುಮಾತು It's O...

15-10-2021 ಬೆಂಗಳೂರು

‘ಬದುಕಿನ ತಿರುವುಗಳಿಗೆ ನಾವು ಹೇಗೆ ಪ್ರತಿಸ್ಪಂದಿಸುತ್ತೇವೆ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ನಿರ್ಧರಿಸಲ್ಪಡುವ...

ಮಹಿಳೆಯರ ಹಕ್ಕುಗಳು ಮತ್ತು ಸಂವಿಧಾನ...

15-10-2021 ಬೆಂಗಳೂರು

‘ಇಂದು ಮಹಿಳಾ ಹಕ್ಕುಗಳ ಗುರುತಿಸುವಿಕೆಗೆ ಮೂಲ ಶಕ್ತಿ ಎಂದೇ ಹೇಳಬಹುದಾದ ಅನುಚ್ಛೇದ 15 (3)[ii] ರ ಚರ್ಚೆ ಸೋಜಿಗ ...

ಪ್ರದಿ ಪೂವನ್ಕೋಳಿ: ಮೈ ಮುಟ್ಟುವವರಿ...

14-10-2021 ಬೆಂಗಳೂರು

'ಸಿನಿಮಾ ಎಂದರೆ ಅದು ಸಾಹಿತ್ಯದಿಂದ ದೂರಾದ ಒಂದು ಪ್ರತ್ಯೇಕ ಕಲಾ ಪ್ರಕಾರ ಅನ್ನುವ ಮೂಢನಂಬಿಕೆಗೆ ವಿರುದ್ಧವಾಗಿ ನಿಲ್...