ಇಂದು ನಮಗೆ ಬೇಕಾದ ಹಿಂದುಸ್ತಾನ

Date: 05-03-2021

Location: .


ಬಾಲ್ಯದಿಂದಲೇ ಸಂಗೀತವನ್ನು ಉಸಿರಾಡಿದ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ಅವರದ್ದು ಭಾರತೀಯ ಹಿಂದುಸ್ತಾನಿ ಸಂಗೀತದಲ್ಲಿ ದೊಡ್ಡ ಹೆಸರು. ಅವರ ವ್ಯಕ್ತಿತ್ವವನ್ನು ಹಾಗೂ ಕಲಾ ಬದುಕಿನ ಬಗ್ಗೆ ನಮ್ರತಾ ಗುಪ್ತ ಖಾನ್ ಅವರು ಬರೆದ ಅಪರೂಪದ ಎ ಡ್ರೀಂ ಐ ಲೀವ್ಡ್ ಅಲೋನ್’ ಕೃತಿ ಯ ಮೂಲಕ ದಾಖಲಾದ ಅವರ ಕಲಾ ಬದುಕಿನ ವ್ಯಕ್ತಿವನ್ನು ಲೇಖಕರಾದ ಶೈಲಜ ಹಾಗೂ ವೇಣುಗೋಪಾಲ್ ಅವರು ತಮ್ಮ ‘ಸ್ವರಲಿಪಿ’ ಅಂಕಣದಲ್ಲಿ ಚಿತ್ರಿಸಿದ್ದು ಇಲ್ಲಿದೆ.

ಇತ್ತೀಚೆಗೆ ನಮ್ಮನ್ನು ಅಗಲಿದ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ಹಿಂದುಸ್ತಾನಿ ಸಂಗೀತದಲ್ಲಿ ದೊಡ್ಡ ಹೆಸರು. ಎ ಅರ್ ರೆಹಮಾನ್, ಸೋನು ನಿಗಂ, ವಹೀದಾ ರೆಹಮಾನ್, ಶಾನ್, ಹರಿಹರನ್, ಮುಂತಾದವರೆಲ್ಲ ಇವರಲ್ಲಿ ಪಾಠ ಕಲಿತಿದ್ದಾರೆ. ಹಾಗಂತ, ಇವರು ದೊಡ್ಡವರಾಗಿರುವುದಕ್ಕೆ ಇದು ಕಾರಣವಲ್ಲ, ಇವರು ದೊಡ್ಡ ಕಲಾವಿದರಾಗಿರುವುದಕ್ಕೆ ಅವರೆಲ್ಲ ಇವರ ಬಳಿ ಬಂದಿದ್ದಾರೆ.
ಸಾಮಾನ್ಯವಾಗಿ ಸಂಗೀತಗಾರರು ಮಾತನಾಡುವುದು ಕಡಿಮೆ. ಹಾಗಾಗಿ ಅವರ ಬದುಕು, ಅವರ ಕಾಲದ ಬದುಕು ಈ ಬಗ್ಗೆ ಗೊತ್ತಾಗುವುದೇ ಇಲ್ಲ. ಕೆಲವೊಮ್ಮೆ ಯಾರೋ ಅವರನ್ನು ಮಾತನಾಡಿಸಿ ಒಂದಿಷ್ಟನ್ನು ದಾಖಲು ಮಾಡಿರುತ್ತಾರೆ. ಆ ದೃಷ್ಟಿಯಿಂದ ‘ಎ ಡ್ರೀಂ ಐ ಲೀವ್ಡ್ ಅಲೋನ್’ ಒಂದು ಉಪಯುಕ್ತ ಪುಸ್ತಕ. ತಮ್ಮದೇ ಕನಸನ್ನು ಕಟ್ಟಿಕೊಂಡು ಅದರಲ್ಲೇ ಬದುಕಿದ ಉಸ್ತಾದರ ಬದುಕನ್ನು ನಮ್ರತಾ ಗುಪ್ತಾ ಖಾನ್ ದಾಖಲಿಸಿದ್ದಾರೆ. ನಮ್ರತಾ ಉಸ್ತಾದರ ಸೊಸೆ. ಹುಟ್ಟಿನಿಂದ ಹಿಂದು. ಗೆಳತಿಯ ಮೂಲಕ ಪರಿಚಯವಾದ ’ರಬ್ಬಾನಿ’ಯನ್ನು ಪ್ರೀತಿಸಿದಳು. ಸ್ವಾಭಾವಿಕವಾಗಿಯೇ ಮನೆಯವರು ಗಾಬರಿಯಾದರು. ಮದುವೆ ಬೇಡ ಅಂದರು. ರಬ್ಬಾನಿ ಪ್ರಖ್ಯಾತ ಸಂಗೀತಗಾರ ಗುಲಾಂ ಮುಸ್ತಾಫಾ ಖಾನರ ಮಗ ಅನ್ನೋದು ನಮ್ರತಳಿಗೆ ಗೊತ್ತಿರಲಿಲ್ಲ. ವಿಷಯ ತಿಳಿದ ಉಸ್ತಾದರೇ ನಮ್ರತಳ ಮನೆಗೆ ಹೋಗಿ, ನಮಗೆ ಸೊಸೆ ಕೂಡ ನಮ್ಮ ಮಗಳೆ. ನಮ್ರತ ನಮ್ಮ ಮಗಳು. ಈವರೆಗೂ ನೀವು ಸಾಕಿದ್ದೀರಿ. ಈಗ ನಮಗೆ ನೋಡಿಕೊಳ್ಳಲು ಅವಕಾಶ ಕೊಡಿ ಅಂತ ಅವರ ತಂದೆತಾಯಿಯನ್ನು ಕೇಳಿಕೊಂಡರು. ಆ ನಾಲ್ಕು ಮಾತುಗಳು ನಮ್ರತಳ ಪೋಷಕರ ಮನಸ್ಸನ್ನು ಬದಲಾಯಿಸಿಬಿಟ್ಟಿತು. ನಮ್ರತಾ ಎರಡೂ ಕುಟುಂಬಗಳ ಮಗಳಾದಳು. ಉಸ್ತಾದ್ ಮುಸ್ತಾಫಾ ಖಾನರ ವ್ಯಕ್ತಿತ್ವವೇ ಅಂಥದ್ದು. ನಮ್ರತಾ ಕೂಡ ಅಷ್ಟೇ ಪ್ರೀತಿಯಿಂದ ಅವರ ಬದುಕನ್ನು ದಾಖಲಿಸಿದ್ದಾರೆ.
ಇದರಲ್ಲಿ ಅವರ ಸಾಧನೆಯ ಹುಚ್ಚು, ಅದು ತಂದ ಇಕ್ಕಟ್ಟುಗಳು, ಅವರು ಅನುಭವಿಸಿದ ಪಾಡುಗಳು, ಆ ಕಾಲದ ಕಲಾವಿದರು ತೋರಿದ ಅಸಹನೆ, ಸಣ್ಣತನ ಎಲ್ಲವೂ ದಾಖಲಾಗಿದೆ. ಬಹುಶಃ ಬಹುಪಾಲು ಯಶಸ್ವಿ ಕಲಾವಿದರ ಬದುಕು ಹೀಗೆ ಇರುತ್ತದೆ. ಕಲಾವಿದನ ಬದುಕಿನ ಕೇಳಿಲ್ಲದ ಕಥೆಗಳನ್ನು ಈ ಪುಸ್ತಕ ನಮಗೆ ಪರಿಚಯಿಸಿತು.
ಉಸ್ತಾದ್ ಗುಲಾಂ ಮುಸ್ತಾಫಾ ಖಾನರು ಹುಟ್ಟಿದ್ದು ಮಾರ್ಚ್ 3, 1931ರಲ್ಲಿ ಉತ್ತರ ಪ್ರದೇಶದ ಬದೌನಿಯಲ್ಲಿ. ತಂದೆ ಉಸ್ತಾದ್ ವಾರಿಸ್ ಹುಸೇನ್ ಖಾನ್. ತಾತ ಪ್ರಖ್ಯಾತ ಗಾಯಕ ಉಸ್ತಾದ್ ಮುರೀದ್ ಭಕ್ಷ್. ತಾಯಿ ರಾಮಪುರ್ ಸಹಸ್ವಾನ್ ಘರನಾದ ಸ್ಥಾಪಕ ಉಸ್ತಾದ್ ಇನಾಯತ್ ಹುಸೇನ್ ಖಾನರ ಮಗಳು. ಅವರ ತಂದೆ ಉಸ್ತಾದ್ ಮೆಹಬೂಬ್ ಖಾನ್ ಸಾಹೇಬರು. ರಾಂಪುರದ ಅಸ್ಥಾನದಲ್ಲಿ ಗಾಯಕರಾಗಿದ್ದವರು. ಹೀಗೆ ಉಸ್ತಾದ್ ಗುಲಾಂ ಮುಸ್ತಾಫಾ ಖಾನರ ಸಂಗೀತ ಪರಂಪರೆ ತಾನ್‌ಸೇನರವರೆಗೆ ಬೆಳೆಯುತ್ತಾ ಹೋಗುತ್ತದೆ.
ಸ್ವತಃ ಉತ್ತಮ ಗಾಯಕರಾಗಿದ್ದ ವಾರಿಸ್ ಹುಸೇನ್ ಖಾನರು ಮಗನನ್ನು ಬೆಳೆಸುವುದರಲ್ಲಿ ತಮ್ಮ ಕನಸನ್ನು ಸಾಕ್ಷಾತ್ಕರಿಸಿಕೊಂಡರು. ಮಗನ ಯಶಸ್ಸಿನ ಹಿಂದಿನ ತಂದೆಯ ತ್ಯಾಗವಿದೆ. ಮಗನನ್ನು ಉಸ್ತಾದ್ ನಿಸ್ಸಾರ್ ಹುಸೇನ್ ಖಾನರಲ್ಲಿ ಸಂಗೀತ ಕಲಿಯಲು ಸೇರಿಸಿದರು. ನಿಸ್ಸಾರ್ ಹುಸೇನರದ್ದು ಮುಕ್ತ ಮನಸ್ಸು. ಶಿಷ್ಯನನ್ನು ಎಲ್ಲಾ ತೆರನಾದ ಸಂಗೀತವನ್ನು ಕಲಿಯಲು ಪ್ರೇರೇಪಿಸಿದರು. ಗುಲಾಂ ಮುಸ್ತಾಫಾ ಠುಮ್ರಿ, ದಾದ್ರ, ಖಜ್ರಿ ಇತ್ಯಾದಿ ಸಂಗೀತ ಪ್ರಕಾರಗಳನ್ನೂ ಕಲಿತರು. ಇಂತಹ ಕಲಿಕೆಯಿಂದ ಉಸ್ತಾದರ ಮನಸ್ಸು ತುಂಬಾ ವಿಶಾಲವಾಯಿತು. ನಿಮ್ಮ ಆತ್ಮವೇ ಸಂಗೀತಾತ್ಮಕವಾಗಿದ್ದರೆ ಯಾವ ಸಂಗೀತವೂ ಬೇರೆಯದು ಅನಿಸುವುದಿಲ್ಲ. ವಿಭಿನ್ನ ಸಂಗೀತಗಳು ಹೂತೋಟದಲ್ಲಿನ ವಿಭಿನ್ನ ಹೂಗಳಿದ್ದಂತೆ. ಎಲ್ಲದಕ್ಕೂ ಅದರದೇ ಆದ ಸೊಬಗು, ಕಂಪು ಇರುತ್ತದೆ. ಎನ್ನುತ್ತಿದ್ದರು.
ಇವರು ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದ್ದು ಕೃಷ್ಣ ಜನ್ಮಾಷ್ಠಮಿಯ ಸಮಾರಂಭದಲ್ಲಿ. ಆಗ ಸ್ಥಳೀಯ ಮುನಿಸಿಪಾಲಿಟಿಗೆ ಅಲಿ ಮಕ್ಸೂದ್ ಅಧ್ಯಕ್ಷರಾಗಿದ್ದರು. ಅವರು ಗುಲಾಂ ಮುಸ್ತಾಫಾರ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದರು. ಆಗವರಿಗೆ 8 ವರ್ಷ. ಜನ ಮೆಚ್ಚಿಕೊಂಡರು. ಇವೆಲ್ಲಾ ನಮ್ಮ ಸಾಂಸ್ಕೃತಿಕ ಚರಿತ್ರೆಯ ಭಾಗ. ಹುಡುಗನ ಸಂಗೀತವನ್ನು ಜನ ಮೆಚ್ಚಿ ಮಾತನಾಡತೊಡಗಿದಾಗ ತಂದೆಗೆ ಗಾಬರಿ. ಮೆಚ್ಚುಗೆ ತಲೆಗೆ ಏರಿದರೆ ಸಂಗೀತ ಹಾಳಾಗಿಬಿಡುತ್ತೆ ಅನ್ನೋ ಆತಂಕ. ಆ ಬಗ್ಗೆ ತುಂಬಾ ಎಚ್ಚರದಿಂದಿದ್ದರು. ಯಾರಾದರೂ ಮಗನನ್ನು ಅವನೆದುರಿಗೆ ಹೊಗಳಿದರೆ, ಹುಡುಗನನ್ನು ಹಾಳು ಮಾಡಬೇಡಿ ಎಂದು ಬಯ್ದು ಕಳಿಸುತ್ತಿದ್ದರು. ಸದಾ ಅವರ ಜ್ಞಾನವೆಲ್ಲಾ ಮಗನ ರಿಯಾಜಿನ ಮೇಲೆ. ತಾವಿಲ್ಲದೇ ಇದ್ದಾಗ ಅಕ್ಕಪಕ್ಕದ ಮನೆಯವರಿಗೆ ಹುಡುಗನ ಸಂಗೀತದ ಮೇಲೆ ನಿಗಾ ಇಡಲು ಹೇಳಿಹೋಗುತ್ತಿದ್ದರು. ನನ್ನ ಗಮನ ಬೇರೆ ಕಡೆ ಹೋಗುವುದಕ್ಕೆ ಅವಕಾಶವೇ ಇರಲಿಲ್ಲ. ನನಗೆ ಸಿಕ್ಕ ಸಿಕ್ಕ ಕಂಬ, ಮರ ಹತ್ತುವ ಗೀಳು. ಸಲೀಸಾಗಿ ಹತ್ತಿಬಿಡುತ್ತಿದ್ದೆ. ಅಪ್ಪನಿಗೆ ಹೇಗೋ ವಿಷಯ ಗೊತ್ತಾಗಿಬಿಟ್ಟಿತು. ಚೆನ್ನಾಗಿಯೇ ಹೊಡೆತ ಬಿತ್ತು. ಈ ವಿದ್ಯೆ ಅಲ್ಲಿಗೆ ನಿಂತು ಹೋಯಿತು.
ರಿಯಾಜ್ ಇವರ ಬದುಕಿನ ಬಹು ಮುಖ್ಯ ಭಾಗವಾಯಿತು. ತಾಯಿಯೂ ಸಂಗೀತದ ಕುಟುಂಬದಿಂದ ಬಂದವಳೇ. ಅವಳಿಗೂ ರಿಯಾಜಿನ ಮಹತ್ವ ತಿಳಿದಿತ್ತು. ಹೊಗಳಿಯೋ, ರಮಿಸಿಯೋ, ಆಮಿಷ ತೋರಿಸಿಯೋ, ಶಿಕ್ಷಿಸಿಯೋ ಮಗನನ್ನು ರಿಯಾಜಿಗೆ ಹಚ್ಚುತ್ತಿದ್ದಳು. ವ್ಯವಸ್ಥಿತವಾಗಿ ನಡೆಯುತ್ತಿದ್ದ ಸಂಗೀತಾಭ್ಯಾಸ ನ್ಯುಮೋನಿಯದಿಂದಾಗಿ ನಿಂತು ಹೋಯಿತು. ಜೊತೆಗೆ ಕಟ್ಟುನಿಟ್ಟಿನ ಪಥ್ಯ ಬೇರೆ. ಬಾಯೆಲ್ಲಾ ಕೆಟ್ಟುಹೋಗಿತ್ತು. ತಡೆದುಕೊಳ್ಳಲಾಗದೆ ಹುಡುಗ ಇಡೀ ಜಾಡಿ ಉಪ್ಪಿನಕಾಯಿ ತಿಂದುಬಿಟ್ಟ. ಮನೆಯವರು ಕಂಗಾಲಾಗಿಬಿಟ್ಟರು. ಅಷ್ಟೊಂದು ಉಪ್ಪಿನಕಾಯಿ ಹೇಗೆ ತಿಂದ ಅಂತ ಆಶ್ಚ್ವರ್ಯ ಒಂದು ಕಡೆಯಾದರೆ, ಏನಾಗಬಹುದು ಅನ್ನೋ ಗಾಬರಿ ಇನ್ನೊಂದು ಕಡೆ. ಆದರೆ ಆಶ್ಚರ್ಯವೆಂದರೆ, ನ್ಯುಮೋನಿಯಾ ಮಂಗಮಾಯ. ಅಷ್ಟೇ ಅಲ್ಲ ಮುಂದೆ ಯಾವತ್ತೂ ಬರಲಿಲ್ಲ. ಉಪ್ಪಿನಕಾಯಿ ತಿಂದದ್ದೂ ಅದೇ ಕೊನೆ.
ಆಗೆಲ್ಲಾ ಸಂಗೀತ ಅಂದರೆ ಗುರುಗಳ ಮನೆಗೆ ಹೋಗಿ ಒಂದೆರಡು ಗಂಟೆ ಕಲಿತು ಬರುವ ವಿದ್ಯೆ ಆಗಿರಲಿಲ್ಲ. ಅವರ ಮನೆಯಲ್ಲೇ ಇದ್ದು, ಗುರುಗಳಿಗೆ ಸೇವೆ ಮಾಡುತ್ತಾ, ಅವರ ರಿಯಾಜ಼ನ್ನು ಕೇಳುತ್ತಾ, ಅವರು ಕಲಿಸಿದಾಗ ಕಲಿತು, ಅಭ್ಯಾಸ ಮಾಡುತ್ತಾ ಸಂಗೀತವನ್ನು ಕರಗತ ಮಾಡಿಕೊಳ್ಳಬೇಕಿತ್ತು. ಅರ್ಥಾತ್ ಅವರ ಮನೆಯ ಭಾಗವಾಗಿಯೇ ಇದ್ದುಕೊಂಡು ಶಿಕ್ಷಣ ಪಡೆಯಬೇಕಿತ್ತು. ಮನೆಗೆ ನೀರು ಹೊತ್ತು ತರುವುದು, ಅಂಗಡಿಯಿಂದ ಸಾಮಾನು ತರುವುದು ಎಲ್ಲವನ್ನು ಮಾಡಬೇಕಿತ್ತು. ಉಸ್ತಾದ್ ಗುರುಗಳ ಸೈಕಲ್ಲನ್ನೂ ಒರಿಸಿ, ಕ್ಲೀನ್ ಮಾಡುತ್ತಿದ್ದರು.
ಕ್ರಮೇಣ ಸಂಗೀತಾಭ್ಯಾಸ ಹುಡುಗನಿಗೆ ಒಂದು ಗೀಳಾಯಿತು. ಸಂಗೀತ ಬಿಟ್ಟು ಬೇರೆ ಬದುಕೇ ಇರಲಿಲ್ಲ. ಬೆಳಗ್ಗೆ ಮನೆ ಕೆಲಸ, ಪಾಠ, ರಿಯಾಜು ಮುಗಿಸಿ ಮಧ್ಯಾಹ್ನ ಗುರುಗಳು ಮಲಗುವಾಗ ಮನೆಗೆ ಹೋಗುವುದು ಕ್ರಮವಾಗಿತ್ತು. ಕ್ರಮೇಣ ಮನೆಗೆ ಹೋಗುವುದೂ ಕಾಲಹರಣ ಅನ್ನಿಸಿ, ರಿಯಾಜ಼ಿ ಜಾಗ ಹುಡುಕಿಕೊಂಡು, ಎಲ್ಲೂ ಜಾಗ ಸಿಗದೆ, ಕೊನೆಗೆ ಸ್ಮಶಾನದಲ್ಲಿ ಮಧ್ಯಾಹ್ನ ರಿಯಾಜು ಮಾಡತೊಡಗಿದರು. ಯಾರೋ ಬೊಂಬಿನಲ್ಲಿ ಮಾಡಿಕೊಟ್ಟ ತಂಬೂರವನ್ನು ಮೀಟಿಕೊಂಡು ಯಾವ ಪರಿವೆಯೂ ಇಲ್ಲದೆ ಅಭ್ಯಾಸ ಮಾಡುತ್ತಿದ್ದರು. ಅಭ್ಯಾಸ ಮುಗಿದ ಮೇಲೆ ತಂಬೂರವನ್ನು ಯಾವುದೋ ಗಿಡದ ಪೊದೆಯಲ್ಲಿ ಮುಚ್ಚಿಟ್ಟು ಬರುತ್ತಿದ್ದರು. ಅದು ಅವರ ಅಮೂಲ್ಯವಾದ ಆಸ್ತಿಯಾಗಿತ್ತು.
ಅಭ್ಯಾಸದ ಗೀಳು ಎಷ್ಟಾಯಿತೆಂದರೆ ಒಂದು ಹಂತದಲ್ಲಿ ಗುರುವಿನ ಮನೆಯಲ್ಲಿ ಮಾಡುವ ಇತರ ಕೆಲಸ ಕೂಡ ಅಭ್ಯಾಸಕ್ಕೆ ಅಡ್ಡಿ ಅಂತ ಅನ್ನಿಸತೊಡಗಿತು. ಅದನ್ನು ಆದಷ್ಟು ತಪ್ಪಿಸತೊಡಗಿದರು. ಗುರುಗಳ ಮನೆಯವರ ಗಮನಕ್ಕೂ ಅದು ಬಂತು. ಸ್ವಲ್ಪ ಅಸಮಾಧಾನವೂ ಆಯಿತು. ಆದರೆ ಹುಡುಗನ ಮನಸ್ಸೆಲ್ಲಾ ಕೇವಲ ರಿಯಾಜ಼ಿನ ಮೇಲೆ. ಕೊನೆಗೆ ಯಾರಿಗೂ ಹೇಳದೆ ಊರು ಬಿಟ್ಟು ಓಡಿಹೋದರು. ಹೀಗೆ ಅಲೆಯುತ್ತಿರುವಾಗ ಇವರ ತಾತನ ಶಿಷ್ಯ ಠಾಕೂರ್ ಇಸ್ಮಾಯಿಲ್ ಅವರ ಕಣ್ಣಿಗೆ ಬಿದ್ದರು. ಅವರು ದೊಡ್ಡ ಜಮೀನುದಾರರು. ವಿಧಿಯಿಲ್ಲದೆ ಅವರಿಗೆ ಕಥೆಯನ್ನೆಲ್ಲಾ ಹೇಳಿದರು. ಜೊತೆಗೆ ಮನೆಗೆ ವಿಷಯ ತಿಳಿಸಿದರೆ ಇಲ್ಲಿಂದ ಓಡಿಬಿಡುತ್ತೇನೆ ಅನ್ನೋ ಧಮಕಿಯನ್ನು ಹಾಕಿದರು. ಠಾಕೂರರು ಅಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು. ಹಗಲು ರಾತ್ರಿಯೆನ್ನದೆ ರಿಯಾಜ್ ಮಾಡತೊಡಗಿದರು. ಇವರಿಗೇನೊ ಅದು ನೆಮ್ಮದಿಯ ವಿಷಯ. ಆದರೆ ಅಕ್ಕಪಕ್ಕದ ಮನೆಯವರಿಗೆ ಇವರ ಸಂಗೀತಾಭ್ಯಾಸ ದೊಡ್ಡ ತಲೆನೋವಾಗಿತ್ತು. ಒಂದು ರಾತ್ರಿ ಪಕ್ಕದ ಮನೆಯವನು ಕತ್ತಲಲ್ಲಿ ವಿಚಿತ್ರವಾಗಿ ವೇಷಧರಿಸಿ ನಮ್ಮ ಉಸ್ತಾದರನ್ನು ಹೆದರಿಸಿದ್ದೂ ಉಂಟು. ವಿಷಯ ತಿಳಿದ ಥಾಕೂರ್ ಸಾಹೇಬರು ಅವನನ್ನು ಗದರಿಸಿ ಸುಮ್ಮನಾಗಿಸಿದ ಮೇಲೆ ರಿಯಾಜು ಮುಂದುವರೆಯಿತು. ಇವರ ಹೊತ್ತು ಗೊತ್ತಿಲ್ಲದ ರಿಯಾಜು ಹೋದ ಕಡೆಯಲ್ಲೆಲ್ಲಾ ಒಂದಲ್ಲ ಒಂದು ತೊಂದರೆಯನ್ನು ತಂದಿತು. ಬಹುಪಾಲು ಸಂಗೀತಗಾರರು ಪ್ರಖ್ಯಾತರಾಗುವವರೆಗೂ ಈ ಕಷ್ಟವನ್ನು ಎದುರಿಸಿದ್ದಾರೆ. ಲಕ್ನೋದಲ್ಲೂ ಹೀಗೆ ಒಂದು ಬಾಡಿಗೆ ಮನೆಯಲ್ಲಿ ಇದ್ದಾಗ ಪಕ್ಕದ ಮನೆಯಲ್ಲಿದ್ದ ಒಬ್ಬ ನ್ಯಾಯಾಧೀಶ ಪೊಲೀಸರಲ್ಲಿ ದೂರು ಕೊಡುವುದಾಗಿ ಬೆದರಿಕೆ ಹಾಕಿದ. ಕೊನೆಗೆ ಅಭ್ಯಾಸಕ್ಕೆ ಅಂತ ಯಾರು ಬಳಸದೇ ಖಾಲಿಬಿದ್ದಿದ್ದ ಒಂದು ಕೊಠಡಿಯನ್ನು ಹುಡುಕಿಕೊಂಡರು. ಯಾರಿಗೂ ತೊಂದರೆಯಾಗಬಾರದು ಅಂತ ಒಂದು ಮಡಕೆಯಲ್ಲಿ ತಲೆ ಇಟ್ಟು ಅಭ್ಯಾಸ ಮಾಡತೊಡಗಿದರು. ಅಂತೂ ಬಚಾವಾದರು. ಅಕ್ಕಪಕ್ಕದವರ ದೂರು ನಿಂತಿತ್ತು.
ಮುಂದೆ ಕಾನ್‌ಪುರದ ಅನುಭವ ಇನ್ನು ವಿಚಿತ್ರ. ಅಲ್ಲೂ ಅಕ್ಕಪಕ್ಕದವರು ಅಭ್ಯಾಸ ಸಾಕುಮಾಡಿ ಅಂದರು. ಅಭ್ಯಾಸವಿಲ್ಲದೆ ಬದುಕೋದು ಹೇಗೆ ಅಂತ ಇವರಿಗೆ. ನೆರೆಹೊರೆಯವರಿಗೆ ಅಭ್ಯಾಸದ ಪ್ರಾಮುಖ್ಯತೆಯನ್ನು ವಿವರಿಸಿದರು. ಅವರಿಗದು ಅರ್ಥವಾಗಲಿಲ್ಲ. ಇವರ ರಿಯಾಜ಼ನ್ನು ತಪ್ಪಿಸಲು ಇವರ ಮೇಲೆ ಗೂಂಡಾಗಳನ್ನು ಬಿಟ್ಟರು. ಉಸ್ತಾದರು ರಸ್ತೆಯಲ್ಲಿ ತಮ್ಮಷ್ಟಕ್ಕೆ ಯಾವುದೋ ರಾಗವನ್ನು ಗುನುಗಿಕೊಂಡು ಹೋಗುತ್ತಿದ್ದಾಗ, ಆ ಗೂಂಡಾ ಇವರಿಗೆ ಬಲವಾಗಿ ಗುದ್ದರಿಸಿದ. ಗುದ್ದಿದ ರಭಸಕ್ಕೆ ಕೆಳಗೆ ಬೀಳುವುದರಲ್ಲಿದ್ದರು. ಹೇಗೋ ಸಾವರಿಸಿಕೊಂಡು ನಿಂತರು. ಗುದ್ದರಿಸಿದವನ ಮುಖದಲ್ಲಿ ಯಾವ ಬೇಸರವೂ ಕಾಣಲಿಲ್ಲ. ಬದಲಿಗೆ ಕಣ್ಣು ಕಾಣಿಸೋದಿಲ್ವಾ? ಅಂತ ಇವರ ಮೇಲೇ ಜೋರು ಮಾಡಿದ. ಇವರೇ ಕೊನೆಗೆ ಕ್ಷಮಿಸಿ. ಯಾವುದೋ ಗುಂಗಿನಲ್ಲಿದ್ದೆ. ಗಮನಿಸಲಿಲ್ಲ ಅಂತ ಕೇಳಿದರು. ಅವನು ಮರು ಮಾತಿಲ್ಲದೆ ಹೋದ. ಆದರೆ ಇವರ ವರ್ತನೆ ಅವನ ಮೇಲೊಂದಿಷ್ಟು ಪರಿಣಾಮ ಬೀರಿತೆನಿಸುತ್ತದೆ. ಇಷ್ಟು ಒಳ್ಳೆಯವರನ್ನು ಹೊಡೆಯಲು ಕಳಿಸಿದಿರಲ್ಲಾ, ಅಂತ ಹಣಕೊಟ್ಟು ಹೊಡೆಯಲು ಕಳಿಸಿದವರ ಮೇಲೇ ಸಿಟ್ಟು ಮಾಡಿಕೊಂಡನಂತೆ. ಅದನ್ನು ಇವರ ನೆರೆಯವರೇ ಆನಂತರ ಇವರ ಬಳಿ ಹೇಳಿದರು. ಇದಕ್ಕಿಂತಲೂ ವಿಚಿತ್ರವೆಂದರೆ, ಅವನು ಮುಂದೆ ಇವರ ಸಂಗೀತದ ಭಕ್ತನಾಗಿಬಿಟ್ಟ. ಅಷ್ಟೇ ಅಲ್ಲ, ಯಾರಾದರೂ ತೊಂದರೆ ಮಾಡಿದರೆ ತನ್ನ ಗಮನಕ್ಕೆ ತರಲು ಹೇಳಿದ. ಮುಂದೆ ಕಾನ್ಪುರದಲ್ಲಿ ಇವರ ಸಂಗೀತಾಭ್ಯಾಸ ನಿರಾತಂಕವಾಗಿ ಮುಂದುವರೆಯಿತು.
ಬಾಂದ್ರದಲ್ಲೂ ಹೀಗೆ ಆಯಿತು. ಇವರು ರಿಯಾಜು ಪ್ರಾರಂಭಿಸಿದೊಡನೆ ಅಕ್ಕಪಕ್ಕದವರು ಇವರ ಮನೆ ಮೇಲೆ ಕಲ್ಲು ತೂರಲು ಪ್ರಾರಂಭಿಸುತ್ತಿದ್ದರಂತೆ. ಕೊನೆಗೆ ಇವರಿಗೆ ಪದ್ಮಭೂಷಣ ಇತ್ಯಾದಿ ಪ್ರಶಸ್ತಿಗಳು ಬಂದ ಮೇಲೆ ಅದೇ ಮಂದಿ ನಿಮ್ಮ ಪಕ್ಕದಲ್ಲಿದ್ದದ್ದು, ನಮ್ಮ ಸೌಭಾಗ್ಯ ಅಂತ ಹೇಳಿ, ಹೊಗಳಿದ್ದು ಬೇರೆ ಮಾತು.
ಇನ್ನು ಇವರ ಸಂಗೀತ ಜೀವನಕ್ಕೆ ಮರಳಿದರೆ, ಇವರು ಗುರುಗಳ ಮನೆಯಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿಕೊಂಡು ಮನೆ ಬಿಟ್ಟು ಹೋಗಿ, ಠಾಕೂರ್ ಇಸ್ಮೈಲ್ ಮನೆಯಲ್ಲಿದ್ದಾಗ ಆಕಾಶವಾಣಿಯಿಂದ ಕಾರ್ಯಕ್ರಮ ನೀಡಲು ಆಹ್ವಾನ ಬಂತು. ಹಾಡಿದ್ದೂ ಆಯಿತು. ಮನೆಯವರು, ಗುರುಗಳು ಎಲ್ಲರೂ ಕೇಳಿದರು. ಮಗ ಎಲ್ಲಿದ್ದಾನೆ ಅಂತ ಗೊತ್ತಾದ ಮರುದಿನವೇ ತಂದೆ ಲಕ್ನೋಗೆ ಬಂದು ಮಗನನ್ನು ಮತ್ತೆ ಬದೌನಿಗೆ ಕರೆದೊಯ್ದರು. ಉಸ್ತಾದ್ ಫಿದಾ ಹುಸೇನ್ ಖಾನ್ ಮತ್ತು ಉಸ್ತಾದ್ ನಿಸ್ಸಾರ್ ಹುಸೇನ್ ಖಾನ್ ಅವರಲ್ಲಿ ಸಂಗಿತಪಾಠ ನಿರಂತರವಾಗಿ ಮುಂದುವರಿಯಿತು ಆಗ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಎಲ್ಲರಿಗೂ ಲಡ್ಡು ಹಂಚುವಾಗ, ಹುಡುಗ ಹಾಡುತ್ತಾನೆ ಅಂತ ಇವನಿಗೆ ಎರಡು ಲಾಡು ಸಿಕ್ಕಿತು. ಅದು ಅವರ ಪಾಲಿಗೊಂದು ಸಂಭ್ರಮದ ಘಳಿಗೆಯಾಗಿತ್ತು.
ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ದೊಡ್ಡ ಆಘಾತ ಕಾದಿತ್ತು. 1948ರಲ್ಲಿ ಗುರು ಫಿದಾ ಹುಸೇನ್ ಖಾನ್ ನಿಧನಹೊಂದಿದರು. ಅದು ಇವರ ಮನಸ್ಸಿನಲ್ಲಿ ಕೊನೆಯವರೆಗೂ ಉಳಿದಿತ್ತು. ಗುರುಗಳ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಬಾಯಿಂದ ಸುರಿಯುತ್ತಿದ್ದ ಜೊಲ್ಲನ್ನು ಒರೆಸುತ್ತಾ ಕೂಳಿತಿದ್ದೆ. ನನ್ನನ್ನು ಗುರುಗಳು ಮರೆತಿರಬಹುದೆಂದು ನನ್ನ ತಂದೆಗೆ ಅನುಮಾನ. ನನ್ನ ಕಡೆ ತೋರಿಸುತ್ತಾ ನನ್ನ ಗುರುಗಳಿಗೆ, ಇವನು ನಿಮ್ಮ ಗುಲಾಮ ಅಂತ ಅಂದರು. ಅದಕ್ಕೆ ನನ್ನ ಗುರುಗಳು ಅವನು ನನ್ನ ಗುಲಾಮ ಅಲ್ಲ, ನನ್ನ ಗುಲಾಬಿ ಅಂದರು. ನನ್ನ ಕಣ್ತುಂಬಾ ನೀರು. ಜನ ತೀರಿಹೋದ ಕೂಡಲೆ ಸಂಬಂಧಗಳು ಅಳಿಸಿಹೋಗುವುದಿಲ್ಲ. ಅವರ ಅನುಪಸ್ಥಿತಿ ನನ್ನನ್ನು ತುಂಬಾ ದಿನ ಕಾಡುತ್ತಿತ್ತು. ಆ ನೋವನ್ನು ಸಂಗೀತ ಮತ್ತು ರಿಯಾಜ಼ಿನಲ್ಲಿ ಮರೆಯಲು ಪ್ರಯತ್ನಿಸಿದೆ. ಫಿದಾ ಹುಸೇನರ ನಿಧನದ ನಂತರ ಉಸ್ತಾದ್ ನಿಸ್ಸಾರ್ ಹುಸೇನ್ ಖಾನರೇ ನನ್ನ ಸರ್ವಸ್ವವಾದರು. ರಿಯಾಜಿನ ಹುಚ್ಚು ಮತ್ತಷ್ಟು ತೀವ್ರವಾಯಿತು.
1949ರಲ್ಲಿ ಆಕಾಶವಾಣಿಯ ಗ್ರೇಡೆಡ್ ಕಲಾವಿದರಾದರು. ಆಗ ಇದ್ದದ್ದೇ ಆರು ಕೇಂದ್ರಗಳು. ದೆಹಲಿ ಮದ್ರಾಸ್ ಬಾಂಬೆ, ಲಕ್ನೊ ಮತ್ತು ತಿರುಚಿನಾಪಳ್ಳಿ. ಇವರು ಆಯ್ಕೆಯಾಗಿದ್ದು ಲಕ್ನೋ ಕೇಂದ್ರದಿಂದ. ಹಿಂದೆ ಯಾರಿಗೂ ಹೇಳದೆ ಲಕ್ನೋಗೆ ಓಡಿಬಂದಿದ್ದರು. ಈ ಬಾರಿ ಗುರುಗಳ ಆಶೀರ್ವಾದ ಪಡೆದು ಹೊರಟರು. ಅಭ್ಯಾಸಕ್ಕೆ ಅಂತ ಒಂದು ಮನೆ ಹಿಡಿದರು. ಅಭ್ಯಾಸ ನಿರಂತರ ಮುಂದುವರಿದಿತ್ತು. ಅಷ್ಟರಲ್ಲಿ ಅಮ್ಮನಿಗೆ ಆರೋಗ್ಯ ತಪ್ಪಿತು. ಮತ್ತೆ ಮರಳಿ ಊರಿಗೆ. ಹಿರಿಯ ಮಗನಾಗಿ ಜವಾಬ್ದಾರಿ ನಿರ್ವಹಿಸಬೇಕಿತ್ತು. ಅಮ್ಮನ ಖಾಯಿಲೆ ಏನಂದು ತಿಳಿಯಲೇ ಇಲ್ಲ. ತುಂಬಾ ದಿನ ಬದುಕಲಿಲ್ಲ. ಹೋಗಿಬಿಟ್ಟರು. ಸೋದರ ಸೋದರಿಯರನ್ನು ಬಿಟ್ಟು ಬರುವ ಹಾಗಿರಲಿಲ್ಲ. ಬದೌನಿಯಲ್ಲಿ ಉಳಿಯುವುದು ಇವರ ನೈತಿಕ ಹೊಣೆಯಾಗಿತ್ತು. ಅಮ್ಮನ ಸಾವು ತುಂಬಾ ಕಾಡುತ್ತಿತ್ತು. ಮೌನ ತುಂಬಿಕೊಂಡಿತ್ತು. ಇವರಿಗೆ ಅಮ್ಮನೊಂದಿಗಿದ್ದ ಸಂಬಂಧ ತುಂಬಾ ಆತ್ಮೀಯವಾಗಿತ್ತು. ಅಮ್ಮ ಇವರಿಗೆ ಕೊಟ್ಟ ದುಡ್ಡನ್ನು ಗೋಡೆಯಲ್ಲಿ ಒಂದು ತೂತು ಮಾಡಿ ಅದರಲ್ಲಿ ಇಡುತ್ತಿದ್ದರು. ಅಮ್ಮನ ಆರೋಗ್ಯ ತಪ್ಪಿದ್ದಾಗ ಊರಿಗೆ ಬಂದ ಇವರು ಗೋಡೆಯ ಸಂದಿನಲ್ಲಿ ಕೈಹಾಕಿದಾಗ ಅದು ಖಾಲಿಯಿತ್ತು. ಅದನ್ನು ಗಮನಿಸಿದ ಅಮ್ಮನ ಕಣ್ಣನಲ್ಲಿ ನೀರೂರಿತ್ತು. ಇವೆಲ್ಲಾ ನೂರೆಂಟು ವಿಷಯಗಳನ್ನು ಹೇಳಿಬಿಡುತ್ತವೆ. ಆ ಮನೆಯ ಮೂಲೆ ಮೂಲೆಯೂ ಹಲವು ನೆನಪುಗಳನ್ನು ಮೂಡಿಸುತ್ತಿತ್ತು. ಅಲ್ಲಿ ಬದುಕುವುದು ಕಷ್ಟವೆನಿಸಿತು. ರಿಯಾಜ಼್ ಸಾಧ್ಯವೇ ಆಗುತ್ತಿರಲಿಲ್ಲ. ಊರು ಬದಲಿಸುವುದು ಅನಿವಾರ್ಯ ಅನ್ನಿಸಿ, ಕಾನ್‌ಪುರಕ್ಕೆ ಬಂದರು.
ಮತ್ತೆ ಸಂಗೀತದ ಬದುಕು ಪ್ರಾರಂಭವಾಯಿತು. ಇವರ ಸಂಗೀತಪ್ರತಿಭೆ ಎಲ್ಲರ ಗಮನಕ್ಕೂ ಬರಲಾರಂಭಿಸಿತು. ಜನ ಮೆಚ್ಚುಗೆ ಹೆಚ್ಚಾಯಿತು. ಖ್ಯಾತಿ ಅರಸಿ ಬಂತು. ಅಂತೆಯೇ ಕರುಬುವವರೂ ಹೆಚ್ಚಾದರು. ಕೆಲವೊಮ್ಮೆ ಅದು ವಿಪರೀತಕ್ಕೆ ಹೋದದ್ದೂ ಉಂಟು. ಒಮ್ಮೆ ಇವರು ಕಾರ್ಯಕ್ರಮದಲ್ಲಿ ಹಾಡುತ್ತಿದ್ದಾಗ, ಇದ್ದಕ್ಕಿದ್ದಂತೆ, ಎಲ್ಲರೂ ನೋಡುತ್ತಿದ್ದ ಹಾಗೆಯೇ ಯಾರೋ ವೇದಿಕೆಯ ಹಿಂದಿನಿಂದ ಬಂದು ಇವರ ಮೇಲೆ ಬಕೀಟು ತುಂಬಾ ನೀರು ಸುರಿದರು. ಕ್ಷಣ ಕಾಲ ತಬ್ಬಿಬ್ಬಾದರು. ನೀರು ಬಿದ್ದು ತಂಬೂರಿ ಹಾಳಾಯಿತು. ಬೇಸರಿಸಿಕೊಳ್ಳದೆ ಕಾರ್ಯಕ್ರಮ ಮುಂದುವರಿಸಿದರು. ಇದು ಒಬ್ಬ ಕಲಾವಿದನ ಆತ್ಮದ ಮೇಲೆ ನಡೆಸಿದ ದಾಳಿ. ಕಾನ್ಪುರದಲ್ಲಿ ಇವರ ವಿರುದ್ಧ ಸಾಕಷ್ಟು ಪಿತೂರಿಗಳೂ ನಡೆದಿದ್ದವು. ಕಾರ್ಯಕ್ರಮಗಳು ನಿಗದಿಯಾಗುತ್ತಿದ್ದವು. ಆದರೆ ಇದ್ದಕ್ಕಿದ್ದಂತೆ ರದ್ದಾಗುತ್ತಿದ್ದವು. ಇವರು ವಿದೇಶಿದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ಧಿಯನ್ನು ಹರಡಲು ಪ್ರಾರಂಭಿಸಿದರು. ಇದು ಇವರನ್ನು ವ್ಯಾಕುಲಗೊಳಿಸಿತು. ರಿಯಾಜಿನ ಮೇಲೂ ಪರಿಣಾಮ ಬೀರುತ್ತಿತ್ತು. ಆದರೂ ವಿಚಲಿತರಾಗದೆ ಅಲ್ಲಾನ ಮೇಲೆ ಭಾರ ಹಾಕಿ ಸಂಗೀತದಲ್ಲಿ ಮುಳಗಿದರು.
ಇದರ ನಡುವೆ ಒಳ್ಳೆಯದೂ ಆಯಿತು. ಪ್ರಖ್ಯಾತ ಸಂಗೀತಜ್ಞ ಆಚಾರ್ಯ ಕೆ ಸಿ ದೇವ್ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿದ್ದರು, ಅದರಲ್ಲಿ ನಾಟ್ಯಶಾಸ್ತ್ರದ ಕೆಲವು ರಚನೆಗಳನ್ನು ಹಾಗೂ ಮತಂಗ ಮುನಿಯ ಬೃಹದ್ದೇಶಿಯ ಕೆಲವು ಭಾಗಗಳನ್ನು ಹಾಡಲು ಇವರನ್ನು ಕೇಳಿಕೊಂಡರು. ಹಿಂದೂ ರಚನೆಗಳನ್ನು ಮುಸ್ಲಿಮರು ಹಾಡುವುದರ ಬಗ್ಗೆ ಒಂದಿಷ್ಟು ತಕರಾರುಗಳಿದ್ದವು. ಆದರೆ ಆಚಾರ್ಯರು ಅಚಲರಾಗಿದ್ದರು. ಅದನ್ನು ಹಾಡುವ ಅವಧಿಯಲ್ಲಿ ಇವರು ಮಾಂಸವನ್ನಾಗಲಿ, ಬೆಳ್ಳುಳ್ಳಿಯನ್ನಾಗಲಿ ತಿನ್ನಲಿಲ್ಲ. ಅದು ವಾಗ್ಗೇಯಕಾರರ ಭಾವನೆ ಹಾಗೂ ಅವರ ಸಂಪ್ರದಾಯಕ್ಕೆ ಗೌರವ ತೋರಿಸುವ ಉಸ್ತಾದರ ಕ್ರಮವಾಗಿತ್ತು. ಇವರ ಸಂಗೀತಲೋಕ ವಿಸ್ತಾರವಾಯಿತು. ಕಲಾವಿದ ಹಾಗೂ ಶ್ರೋತೃ ಇಬ್ಬರೂ ಬೆಳೆದರು.
ಒಮ್ಮೆ ಬಾಂಬೆಯಲ್ಲಿ ಬಾಬುಬಾಯಿ ಬ್ಯಾಂಕರ್ ಅವರ ಮನೆಯಲ್ಲಿ ಇವರ ಸಂಗೀತ ಏರ್ಪಾಡಾಗಿತ್ತು. ಅವರು ದೊಡ್ಡ ಸಂಗೀತಗಾರರನ್ನು ಕರೆಸಿ, ತಮ್ಮ ಮನೆಯಲ್ಲೇ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಮೊತ್ತ ಮೊದಲ ಬಾರಿಗೆ ಇವರ ಹೆಸರ ಹಿಂದೆ ಉಸ್ತಾದ್ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಂದಿನ ಇವರ ಕಾರ್ಯಕ್ರಮಕ್ಕೆ ಉಸ್ತಾದ್ ಬಡೇ ಗುಲಾಂ ಅಲಿ ಖಾನ್, ಉಸ್ತಾದ್ ಅಮೀರ್ ಖಾನ್ ಸಾಹೇಬ್ ಎಲ್ಲಾ ಬಂದಿದ್ದರು. ಇವರು ನಡುಗಿಹೋಗಿದ್ದರು. ಹೆದರಿಕೆ ಮರೆಯಲು ಮನೆಯ ಮಹಡಿಯ ಮೇಲೆ ಹೋಗಿ ನಿಂತರು. ಯಾರೋ ಹಿಂದೆ ಬಂದಂತಾಗಿ, ತಿರುಗಿ ನೋಡಿದರೆ. ಬಡೇ ಗುಲಾಂ ಅಲಿ ಖಾನ್! ಏನಾಗಬೇಡ ಹುಡುಗನ ಸ್ಥಿತಿ. ನೀನೋ, ಯುವ ಉಸ್ತಾದ್? ಚೆನ್ನಾಗಿ ಹಾಡುತ್ತೀಯೆ ಎಂದು ಕೇಳಿದ್ದೇನೆ ಎಂದು ಆಶೀರ್ವದಿಸಿ ಕೆಳಗೆ ಹೋದರು. ಆ ಕ್ಷಣಕ್ಕೆ ಆತಂಕವೆಲ್ಲಾ ಕರಗಿಹೋಯಿತು. ಕಾರ್ಯಕ್ರಮ ಮುಗಿಯಿತು. ಬಡೇ ಗುಲಾಂ ಅಲಿ ಖಾನರು ಒಳ್ಳೆಯದಾಗಲಿ ಮಗನೆ. ಚೆನ್ನಾಗಿ ಹಾಡುತ್ತೀಯ. ಉಸ್ತಾದ್ ಅಂತ ಕರೆಸಿಕೊಳ್ಳಲು ಲಾಯಕ್ಕಾಗಿರುವೆ ಎಂದರು. ಹುಡುಗನಿಗೆ ಇನ್ಯಾವ ಪ್ರಶಸ್ತಿ ಬೇಕು?
ಉಸ್ತಾದ್ ಆಗಿ ಬೆಳೆದ ಹುಡುನಿಗೆ ಎಲ್ಲೆಡೆಯಿಂದ ಆಹ್ವಾನಗಳು ಬರತೊಡಗಿದವು. ವಿದೇಶಗಳಲ್ಲೂ ಬೇಡಿಕೆ ಹೆಚ್ಚಾಯಿತು. ರೇಡಿಯೋ, ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಸೀಮೆಯನ್ನು ಮೀರಿಕೊಂಡು ಸಿನಿಮಾ ಕ್ಷೇತ್ರದಲ್ಲೂ ಹಾಡಿದರು. ಮೃಣಾಲ್ ಸೇನರ ಭುವನ್ ಶೋಮ್ ಇವರ ಮೊದಲ ಚಿತ್ರ. ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದರು.
ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಹೀಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಹುಡುಕಿಕೊಂಡು ಬರತೊಡಗಿದವು. ಇವರ ಬಳಿ ಕಲಿಯಲು ಜನ ಹಾತೊರೆಯುತ್ತಿದ್ದರು. ವಹೀದಾ ರೆಹಮಾನ್, ಹರಿಹರಿನ್, ಸೋನು ನಿಗಂ ಅಂತಹವರೆಲ್ಲಾ ಇವರ ಬಳಿಯೇ ಕಲಿಯಬೇಕೆಂದು ಪಟ್ಟು ಹಿಡಿದು ಕಲಿತರು. ವಹೀದಾ ರೆಹಮಾನ್ ಅಂತಹವರು ಈ ಜನ್ಮದಲ್ಲಿ ಸರಿಯಾಗಿ ಕಲಿಯಲು ಆಗಲಿಲ್ಲ. ಅವರ ಹತ್ತಿರ ಕಲಿಯುವುದಕ್ಕೆ ಮುಂದಿನ ಜನ್ಮದಲ್ಲಿ ಹುಟ್ಟಬೇಕು ಅಂತ ಹೇಳಿಕೊಂಡಿದ್ದಾರೆ. ಲತಾ ಮಂಗೇಶ್ಕರ್ ಅಂತಹವರು ’ನನ್ನ ಗುರುಗಳು’ ಅಂತ ಇವರನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ನನ್ನನ್ನು ಗುರು ಎಂದು ಹೇಳಿಕೊಳ್ಳುವುದು ಲತಾ ಅವರ ದೊಡ್ಡ ಗುಣ ಅಷ್ಟೆ ಅಂತ ವಿನಯವಾಗಿ ಉಸ್ತಾದರು ಹೇಳುತ್ತಾರೆ. ಆದರೆ ವಿದ್ಯಾರ್ಥಿಗಳ ಒಮ್ಮತದ ಅಭಿಪ್ರಾಯವೆಂದರೆ ’ಇವರು ವಿದ್ಯಾರ್ಥಿಗಳಿಗೆ ಸಂಗೀತವನ್ನು ಪ್ರೀತಿಯಿಂದ ಮುಕ್ತವಾಗಿ ಹೇಳಿಕೊಡುತ್ತಿದ್ದರು.’
ಒಳ್ಳೆಯದು ಕೆಟ್ಟದ್ದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಎಲ್ಲಾದಕ್ಕೂ ಅಲ್ಲಾನ ಮೇಲೆ ಭಾರ ಹಾಕಿ ನೆಮ್ಮದಿಯಿಂದ ತಾವೇ ಕಟ್ಟಿಕೊಂಡ ಕನಸಿನಲ್ಲಿ ಬದುಕುತ್ತಿದ್ದರು. ಹಾಡಿದ್ದು ತಾವಲ್ಲ, ಅಲ್ಲಾ ತಮ್ಮ ಮೂಲಕ ಹಾಡಿಸುತ್ತಿದ್ದಾನೆ ಅನ್ನೋರು. ಅವರ ಬದುಕಿನಲ್ಲಿ ಆ ನಂಬಿಕೆಗೆ ಪೂರಕವಾದ ಹಲವು ಘಟನೆಗಳು ನಡೆದಿವೆ ಎಂದು ಲೇಖಕಿ ಉಲ್ಲೇಖಿಸುತ್ತಾರೆ:
ಒಮ್ಮೆ ಸೋಲಾಪುರದಲ್ಲಿ ಇವರ ಕಾರ್ಯಕ್ರಮ ಆಯೋಜಿತವಾಗಿತ್ತು. ಊರು ತಲುಪತ್ತಿದ್ದಂತೆ ವಿಪರೀತ ತಲೆನೋವು. ತಡೆದುಕೊಳ್ಳಲಾಗದೆ. ಡಾಕ್ಟರ್ ಹತ್ತಿರ ಹೋದಾಗ, ಇವರನ್ನು ಪರೀಕ್ಷಿಸಿದ ವೈದ್ಯರು, ಮೆನಿಂಜಸೈಟೈಸ್ ಆಗಿದೆ. ಮಿದುಳಿಗೆ ಸೋಂಕು ತಗುಲಿದೆ, ಯಾವುದೇ ಕಾರಣಕ್ಕೂ ಹಾಡಬಾರದು ಎಂದರಂತೆ. ವಿಷಯ ಸಂಘಟಕರಿಗೆ ಗೊತ್ತಾದಾಗ ಅವರು ಕಂಗಾಲಾಗಿಬಿಟ್ಟರು. ಟಿಕೇಟು ಮಾರಿಯಾಗಿತ್ತು. ಪರ್ಯಾಯವಾಗಿ ಏನು ವ್ಯವಸ್ಥೆ ಮಾಡುವುದು ಅಂತ ತಿಳಿಯದೆ ಗೊಂದಲದಲ್ಲಿದ್ದಾಗ ಆಗಿದ್ದಾಗಲಿ ಅಂತ ಉಸ್ತಾದರು ಹಾಡಿಯೇ ಬಿಟ್ಟರು. ಕಾರ್ಯಕ್ರಮ ಸೊಗಸಾಗಿ ಆಯಿತು. ಇವರಿಗೆ ಆರೋಗ್ಯ ಸರಿ ಇರಲಿಲ್ಲ ಅಂತ ಯಾರಿಗೂ ಅನ್ನಿಸಲೇ ಇಲ್ಲ. ಆದರೆ ಇವರಿಗೆ ಮತ್ತೆ ಎಚ್ಚರವಾದಾಗ ಆಸ್ಪತ್ರೆಯ ಹಾಸಿಗೆಯಲ್ಲಿದ್ದರು. ಆಪರೇಷನ್ ಕೂಡ ಆಗಿತ್ತು. ನಾನು ಹಾಡಿದ್ದಲ್ಲ ಅದು ಅಲ್ಲಾ ಹಾಡಿಸಿದ್ದು ಅಂತಲೇ ಅವರ ನಂಬಿಕೆ. ಹೀಗೆ ಹಲವು ಬಾರಿ ಆಗಿದೆ. ಇನ್ನೊಮ್ಮೆ ಮದ್ರಾಸಿಗೆ ಕಛೇರಿಗೆಂದು ಹೊರಟಿದ್ದಾಗ, ಸ್ನೇಹಿತರ ಒತ್ತಾಯಕ್ಕೆ ರೈಲಿನಲ್ಲಿ ವಡೆ ತಿಂದು ಗಂಟಲು ಹಾಳು ಮಾಡಿಕೊಂಡರು. ಅದೇನು ಮಾಯವೋ ಹಾಡಲು ಶುರುಮಾಡಿದ ತಕ್ಷಣ ಗಂಟಲು ಸಮಸ್ಯೆ ಕಾಡಲೇ ಇಲ್ಲ.
ಹೀಗೆ ಕಲಾವಿದನೊಬ್ಬನ ಬದುಕನ್ನು ಕಟ್ಟಿಕೊಡುವುದರ ಜೊತೆಗೆ ಆ ಕಾಲದ ತಂತ್ರಜ್ಞಾನದ ಬೆಳವಣಿಗೆಗೆ ಒಂದು ಪ್ರತಿಕ್ರಿಯೆಯೂ ಇಲ್ಲಿ ಸಿಗುತ್ತದೆ. ಇವರು ಬದುಕಿದ ಅವಧಿಯಲ್ಲಿ ಗ್ರಾಮೋಫೋನ್, ಆಕಾಶವಾಣಿ, ದೂರದರ್ಶನ ಇವೆಲ್ಲಾ ಬೆಳೆಯುತ್ತಾ ಹೋಯಿತು. ಉಸ್ತಾದರು ಕಂಡ, ಅವರನ್ನು ಬೆಳೆಸಿದ ಈ ತಂತ್ರಜ್ಞಾನದ ಬದುಕು ಓದುಗರ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇದು ಹಲವು ಕಾರಣಕ್ಕೆ ಓದಬಹುದಾದ ಪುಸ್ತಕ. ಅವರ ಸಂಗೀತದ ಶೈಲಿಯ ಬಗ್ಗೆ, ಅವರ ಸಂಗೀತ ರೂಪಗೊಂಡ ಬಗ್ಗೆ, ಅವರ ಸಮಕಾಲೀನರ ಸಂಗೀತವನ್ನು ಇವರು ಗ್ರಹಿಸಿಕೊಂಡ ಬಗ್ಗೆ ಇನ್ನೊಂದಿಷ್ಟು ಒಳನೋಟ ಸಾಧ್ಯವಿತ್ತು. ಹಾಗೆಯೇ ಇವರ ಸಂಗೀತದ ಬಗ್ಗೆಯೂ ಚರ್ಚೆ ಸಾಧ್ಯವಿತ್ತು. ಬಹುಶಃ ಅವರ ಉದ್ದೇಶ ಅಷ್ಟಾಗಿ ಪರಿಚಿತವಲ್ಲದ ಉಸ್ತಾದರ ಬದುಕನ್ನು ಕಟ್ಟಿ ಕೊಡುವುದೇ ಆಗಿದ್ದರಿಂದ, ಉಸ್ತಾದರೊಂದಿಗೆ ಅವರ ಒಡನಾಟವೂ ಅದೇ ಸ್ತರದಲ್ಲಿ ಇದ್ದುದರಿಂದ ಅದನ್ನು ನಿರೀಕ್ಷಿಸಬಾರದೆನಿಸುತ್ತದೆ. ತಮ್ಮ ಸರಸ್ವತಿ ರಾಗದಂತಹ ಹಲವು ರಾಗಗಳಿಂದ ನಮ್ಮನ್ನು ಭಾವುಕಗೊಳಿಸಿದ ಉಸ್ತಾದರ ಬದುಕಿನ ಈ ಮುಖವನ್ನು ದಾಖಲಿಸಿದ ನಮ್ರತ ಅವರು ನಿಜವಾಗಿಯೂ ಪ್ರಶಂಸನೀಯರು.

A Dream I Lived Alone
Ustad Ghulam Mustapa Khan with Namrata Gupta Khan
An Imprint of Penguin Random House

ಇದನ್ನೂ ಓದಿ : ಈಜಿಪ್ಟಿನ ನಾಲ್ಕನೆಯ ಪಿರಮಿಡ್ ‘ಉಮ್ ಕುಲ್ಸುಂ’

ಒಂದು ಸಂಜೆಗಣ್ಣಿನ ಹಿನ್ನೋಟ...!

ಮೃದಂಗದ ಜಾಡು ಹಿಡಿದು ಹೊರಟ 'ವರ್ಗೀಕರಣ' ಮೀರಿದ ಕೃತಿ

ಬದುಕೇ ಹಾಡಾದ ಮಮ್ಮಾ ಆಫ್ರಿಕಾ ಮೀರಿಯಂ ಮಕೇಬಾ

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...