ಇರುವದೆಲ್ಲವ ಬಿಟ್ಟು : ಬದುಕಿನ ಅನ್ವೇಷಣೆಯಲ್ಲಿ ಹುಟ್ಟಿದ ಕಾವ್ಯ


ಭಾರತಿ ಪಾಟೀಲವರ ಕಾವ್ಯ ದೊಡ್ಡ ಜಲಪಾತದಿಂದ ಧುಮ್ಮಿಕ್ಕುವ ನೀರಿನಂತೆ ಭೋರ್ಗರೆಯುವುದಿಲ್ಲ. ಆದರೆ ಅದು ನದಿಯಲ್ಲಿ ವಿವಿಧ ಸ್ತರಗಳನ್ನು ನಿರ್ಮಿಸಿ ಸಲಿಲವಾಗಿ ಹರಿಯುವ ನೀರಿನ ನಡಿಗೆಯಂತೆ ಕಾಣುತ್ತದೆ. ಕಾವ್ಯಕ್ಕೆ ಒಂದು ಬಂಧ ಬೇಕೆನ್ನುವವರು ಭಾರತಿ ಪಾಟೀಲರ ಆ ಹಿನ್ನೆಲೆಯ ಅಚ್ಚುಕಟ್ಟುತನವನ್ನು ಕಂಡು ಬೆರಗಾಗಬಹುದು ಎನ್ನುತ್ತಾರೆ ಲೇಖಕ ಸಿ.ಎಸ್.ಭೀಮರಾಯ (ಸಿಎಸ್ಬಿ). ಲೇಖಕಿ ಭಾರತಿ ಪಾಟೀಲಇರುವದೆಲ್ಲವ ಬಿಟ್ಟು ಕೃತಿಯ ಬಗ್ಗೆ ಅವರು ಬರೆದ ವಿಮರ್ಶೆ ನಿಮ್ಮ ಓದಿಗಾಗಿ..


ಕೃತಿ: ಇರುವದೆಲ್ಲವ ಬಿಟ್ಟು
ಲೇಖಕಿ: ಭಾರತಿ ಪಾಟೀಲ
ಪುಟ: 56, ಬೆಲೆ: 50
ಪ್ರಕಾಶನ: ಭೂಮಿ ಪ್ರಕಾಶನ, ವಿಜಯಪುರ

ಭಾರತಿ ಪಾಟೀಲ ನಾಡಿನ ಹಿರಿಯ ಕವಯತ್ರಿ. ಕಳೆದ ಎಂಬತ್ತರ ದಶಕದಲ್ಲಿ ಕಾವ್ಯರಂಗ ಪ್ರವೇಶಿಸಿದ ಭಾರತಿ ಪಾಟೀಲ ನಮ್ಮ ಆಧುನಿಕ ಮಹಿಳಾ ಕಾವ್ಯವನ್ನು ತನ್ನ ಅಂತಃಸತ್ವದಿಂದ ಕಟ್ಟಿದ ಪ್ರಮುಖ ಕವಯತ್ರಿಯರಲ್ಲಿ ಒಬ್ಬರಾಗಿದ್ದಾರೆ. ವಾಸ್ತವ ಬದುಕಿನ ಅನುಭವಗಳನ್ನು ಸ್ವೀಕರಿಸುವ, ವಿಶ್ಲೇಷಿಸುವುದು ಇವರ ಕಾವ್ಯ ರಚನಾ ಕ್ರಮವಾಗಿದೆ. ಕಾವ್ಯ ಮಾಧ್ಯಮವನ್ನು ತಮ್ಮ ಅನುಭವದ ಶೋಧನೆಗೆ ಸ್ವೀಕರಿಸಬಲ್ಲ ಶಕ್ತಿ ಹೊಂದಿದ ಭಾರತಿ ಪಾಟೀಲ ಕನ್ನಡ ಕಾವ್ಯಪರಂಪರೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರು ಕೇವಲ ಮಹಿಳಾಪರ ನಿಲುವಿಗೆ ಅಂಟಿಕೊಳ್ಳದೆ ಮನುಷ್ಯ ಸಂಬಂಧಗಳ ಮಹತ್ವ, ಸದ್ಯದ ಸಮಾಜದ ಸಂಕಟಗಳನ್ನು ಕವಿತೆಯಾಗಿ ಹೆಣೆದು ತಮ್ಮ ಸೃಜನಶೀಲತೆ ತೋರಿದ್ದಾರೆ.

ಪ್ರಸ್ತುತ ‘ಇರುವದೆಲ್ಲವ ಬಿಟ್ಟು’ ಭಾರತಿ ಪಾಟೀಲರ ಐದನೆಯ ಕವನಸಂಕಲನ. ಇದು ಇಪ್ಪತ್ತೆಂಟು ಕವಿತೆಗಳನ್ನು ಒಳಗೊಂಡಿದೆ. ಅವರ ಕಾವ್ಯ ಈ ಸಂಕಲನದಲ್ಲಿ ಒಂದು ಹಂತದ ಪ್ರಬುದ್ಧಾವಸ್ಥೆಯನ್ನು ತಲುಪಿರುವುದನ್ನು ಗಮನಿಸಬಹುದು. ಈ ಕವಯತ್ರಿಯ ಪಾಲಿಗೆ ಕಾವ್ಯವೆನ್ನುವುದು ನಿಶ್ಚಿಂತಳಾಗಲು ಹೊರಟ ಯಾನ. ಇಲ್ಲಿಯ ಎಲ್ಲ ತಲ್ಲಣಗಳಿಗೂ ಸಿದ್ಧ ಪರಿಹಾರಗಳಿರುವುದರಿಂದ ಆ ಸರತಿಸಾಲಿಗೆ ಸೇರಲು ನಡೆಸುವ ಹಂಬಲವನ್ನು ಅಚ್ಚುಕಟ್ಟಾಗಿ ವ್ಯಕ್ತಪಡಿಸುವ ಕವಿತೆಗಳು ಈ ಸಂಕಲದಲ್ಲಿರುವುದನ್ನು ಓದುಗರು ಸಹಜವಾಗಿ ಗಮನಿಸಬಹುದು. ಅವರ ಕಾವ್ಯದ ಪ್ರಧಾನ ಆಸಕ್ತಿಗಳು ಇಲ್ಲಿ ಸ್ಪಷ್ಟವಾಗಿ ಅರಳಿವೆ. ಈ ಹೊತ್ತಿನಲ್ಲಿ ಕವಯತ್ರಿ ಏನನ್ನು ಪಡೆದಿದ್ದಾರೋ ಮತ್ತು ಅವರನ್ನು ಆವರಿಸಿದೆಯೋ ಅವೇ ಕವಿತೆಗಳಾಗಿ ಮಾರ್ಪಟ್ಟಿವೆ. ಅವರ ಕಾವ್ಯ ಅಸಹಾಯಕರ, ದುಃಖಿತರ ಮತ್ತು ಶೋಷಿತರ ದನಿಯಾಗುವ ಆಸೆಯನ್ನು ಮೊದಲಿನಿಂದಲೂ ಹೊತ್ತು ಸಾಗಿದೆ. ಮಾಗಿದ ಅಭಿವ್ಯಕ್ತಿ ಮತ್ತು ಜೀವನಾನುಭವಗಳಿಂದ ಅವರ ಕವಿತೆಗಳಿಗೆ ಹೆಚ್ಚಿನ ಆಳ, ವ್ಯಾಪ್ತಿ ಲಭಿಸಿದೆ. ಸಂಕಲನದ ಹೆಸರೇ ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ದಾಟುವ ಜೀವಂತ ಕ್ರಿಯೆಯನ್ನು ತೋರುವಂಥದ್ದು. ಅಂಥ ಶಬ್ದಚಿತ್ರಗಳನ್ನು, ರೂಪಕಗಳನ್ನು, ಕವಯತ್ರಿಯ ಭಾವಭಂಗಿಗಳನ್ನು ಇಲ್ಲಿನ ತಮ್ಮ ಅನೇಕ ಕವಿತೆಗಳ ಮೂಲಕ ದಾಟಿಸಲು ಭಾರತಿ ಪಾಟೀಲರು ಪ್ರಯತ್ನಿಸಿದ್ದಾರೆ. ಇದು ಅಹಂಕಾರದ್ದಲ್ಲ, ಬದಲಾಗಿ ಇನ್ನೊಂದು ಮನಸ್ಸನ್ನು ಮುಟ್ಟಬೇಕೆನ್ನುವ ತಹತಹದ್ದು, ಮಮಕಾರದ್ದು, ತೀವ್ರ ಚಡಪಡಿಕೆ, ತುರ್ತು ಇರುವ ಮನುಷ್ಯನದ್ದು. ವೈಯಕ್ತಿಕವಾದುದನ್ನು ಹೇಳುತ್ತಲೇ ಸಾಮಾಜಿಕ ಎನ್ನುವಂಥದ್ದಕ್ಕೆ ಕೈಚಾಚಿರುವ ಅವರ ಕಾವ್ಯ ಇಲ್ಲಿ ಹೊಸ ದೃಷ್ಟಿಯಿಂದ ಲೋಕದ ಡೊಂಕುಗಳತ್ತ ವಿಸ್ಮಯದ ನೋಟ ಬೀರುವಂತಿದೆ. ಬದುಕಬೇಕೆಂದು ಹುಟ್ಟುವ ಜೀವನ ಪ್ರೀತಿಯೊಡನೆ ಆತಂಕದ ಎಳೆಯೂ ಜೊತೆ ಜೊತೆಯಲ್ಲಿಯೇ ಇರುತ್ತದೆಯೆಂಬ ವಾಸ್ತವ ಪ್ರಜ್ಞೆ ಈ ಕವಯತ್ರಿಗೆ ಇದೆ. ಆದ್ದರಿಂದ ವಾಸ್ತವವನ್ನು ಮರೆಯಲಾಗದ ಆದರೆ ಅದಕ್ಕಿಂತ ಉತ್ತಮವಾಗಿ ಬದುಕ ಬೇಕೆಂದು ಬಯಸುವ ಜೀವನ ತುಡಿತವನ್ನು ಈ ಕವನ ಸಂಕಲನ ಚೆನ್ನಾಗಿ ದರ್ಶಿಸುತ್ತದೆ.

ಭಾರತಿ ಪಾಟೀಲವರ ಕಾವ್ಯ ದೊಡ್ಡ ಜಲಪಾತದಿಂದ ಧುಮ್ಮಿಕ್ಕುವ ನೀರಿನಂತೆ ಭೋರ್ಗರೆಯುವುದಿಲ್ಲ. ಆದರೆ ಅದು ನದಿಯಲ್ಲಿ ವಿವಿಧ ಸ್ತರಗಳನ್ನು ನಿರ್ಮಿಸಿ ಸಲಿಲವಾಗಿ ಹರಿಯುವ ನೀರಿನ ನಡಿಗೆಯಂತೆ ಕಾಣುತ್ತದೆ. ಕಾವ್ಯಕ್ಕೆ ಒಂದು ಬಂಧ ಬೇಕೆನ್ನುವವರು ಭಾರತಿ ಪಾಟೀಲರ ಆ ಹಿನ್ನೆಲೆಯ ಅಚ್ಚುಕಟ್ಟುತನವನ್ನು ಕಂಡು ಬೆರಗಾಗಬಹುದು. ಇಲ್ಲಿ ಮಹಿಳಾ ಪರ ದನಿಯಿದೆ. ಆದರೆ ಅದು ಎಲ್ಲೂ ತಾನು ಇದ್ದೇನೆ ಎಂದು ಗಟ್ಟಿಯಾಗಿ ಹೇಳಿಕೊಳ್ಳುವುದಿಲ್ಲ. ಹಾಗೇ ಸಾರಿಕೆಯ ದನಿ ಭಾರತಿ ಪಾಟೀಲರದ್ದು ಅಲ್ಲ. ಈ ಸಂಕಲನಕ್ಕೆ ಭಾರತಿಯವರು ಕೊಟ್ಟ ಶೀರ್ಷಿಕೆ ಸಹ ಅವರ ಬದುಕು,ಕನಸು, ಆಸೆ, ಆಕಾಂಕ್ಷೆಗಳನ್ನೆ ಸಹಜವಾಗಿ ಸೂಚಿಸುವಂತಿದೆ. ಕವಯತ್ರಿ ಒಳಗೊಳ್ಳಲು, ಹಿಡಿಯಲು ಪ್ರಯತ್ನಿಸುತ್ತಿರುವ ಜಗತ್ತು, ಬದುಕು ದೊಡ್ಡದಾಗಿಯೇ ಇದೆ. ಅವು ಇಲ್ಲಿನ ಕವಿತೆಗಳಲ್ಲಿ ಇರುವುದನ್ನು ಓದುಗರು ಮನಗಾಣಬಹುದು. ವರ್ತಮಾನದ ಹಲವಾರು ಸೂಕ್ಷö್ಮವಾದ ಸಂಗತಿ, ಅನುಭವಗಳನ್ನು ಅವರು ಕವಿತೆಯಾಗಿಸುತ್ತಾರೆ. ಅಲ್ಲಿ ಅವರದೆಯಾದ ಮೆಲು ದನಿಯೊಂದು ಕೇಳುತ್ತದೆ.

ಭ್ರಮೆಯಲ್ಲ
ನಿನ್ನ ನೆನೆಪು ಕಾಡಿ ಹಗಲೆಲ್ಲ
ಅದು ನನ್ನ ಹಣೆಬರಹವೆನ್ನದೆ
ಕಾದು ಕುಳಿತಿದ್ದೇನೆ ಇನ್ನೂ ||
(ಕಾದು ಕುಳಿತಿದ್ದೇನೆ ಇನ್ನೂ)

ಈ ಸಾಲುಗಳು ಕಟ್ಟಿಕೊಡುವ ಶಬ್ದಚಿತ್ರ ಅಪೂರ್ವವಾದದ್ದು. ಅಪೂರ್ವವಾದ ಆಧ್ಯಾತ್ಮದೊಲವು, ಅಸಾಧಾರಣವಾದ ಚಿಂತನೆ, ಅನುಪಮ ಜೀವನ ಪ್ರೀತಿ ಪನ್ನೀರ ಪರಿಮಳವಿದೆ. ಈ ಪ್ರೀತಿ-ಗೀತ ಒಲವಿನ ಧಾರೆಯನ್ನೇ ಈ ಕವಿತೆಯಲ್ಲಿ ಓತಪ್ರೋತವಾಗಿ ಹರಿಸಿದೆ. ಈ ಕವಿತೆ ವೈಯಕ್ತಿಕವಾದ, ಆಪ್ತವಾದ, ಆರ್ದ್ರವಾದ ಆತ್ಮೀಯ ಮುಖವನ್ನು ತೆರೆದು ತೋರಿಸುವಲ್ಲಿ ಯಶಸ್ವಿಯಾಗುತ್ತದೆ.

ಅವನಿಗೆ ಮನೆಯಿದೆ
ಕಿಲ ಕಿಲ ನಗುವ ಮಗುವಿದೆ
ಆದರೂ ಆತ ಖರೀದಿಸುತ್ತಿದ್ದಾನೆ
ಬಂದೂಕನ್ನು ||
(ಇರುವದೆಲ್ಲವ ಬಿಟ್ಟು.......)
ಹೀಗೆ ವರ್ತಮಾನದ ಗಂಭೀರ ಸಮಸ್ಯೆಯನ್ನು ಕವಿತೆಯಾಗಿಸುವ ಕ್ರಮದಲ್ಲೇ ಭಾರತಿ ಪಾಟೀಲರ ವಿಶಿಷ್ಟತೆಯಿದೆ. ಆಧುನಿಕ ಕಾಲದ ಯಾಂತ್ರಿಕ, ಕೃತ್ರಿಮ ಬದುಕಿನ ಸೂಕ್ಷ್ಮ ವಿಡಂಬನೆಗೆ ಈ ಕವಿತೆಯೇ ಉತ್ತಮ ನಿದರ್ಶನ. ಅವರು ಕಾವ್ಯದಲ್ಲಿ ಚಿಂತನಶೀಲತೆಯನ್ನು, ಪ್ರಬುದ್ಧತೆಯನ್ನೂ ನಿಚ್ಚಳವಾಗಿ ತೋರುತ್ತಾರೆಂಬ ವಾಸ್ತವ ನಿಜಾಂಶ ಸಹೃದಯರಿಗೆ ಮನವರಿಕೆಯಾಗುತ್ತದೆ.

ಒಡಲಾಳದ ಕಡಲಿನಲಿ
ಒಲವುಕ್ಕಿ ಮೊರೆದಿದೆ
ನೆಲದಾಳದ ಮಡಿಲಿನಲಿ
ಗಿಡವೊಂದು ಚಿಗುರಿದೆ ||
( ಸಾವಿಲ್ಲದ ಬೆಳಕಿನಲ್ಲಿ )
ಎಂದು ಹಿತವಾದ ಅನುಭವ ನೀಡುವುದರ ಜೊತೆಗೆ ಈ ನೆಲದ ಸಂಕಟ-ಆತಂಕವನ್ನು ತುಸು ಕಡಿಮೆ ಮಾಡಬಯಸುವ ಒಂದು ಮನಸ್ಥಿತಿಯನ್ನು ಅನಾವರಣ ಮಾಡುತ್ತದೆ. ಈ ಚಿಗುರು ಮುಗುಳಾಗಿ ಮುಗಿಲಿನಡೆಗೆ ಮೊಗವೆತ್ತಿ ನಮನ ಸಲ್ಲಿಸುತ್ತದೆ. ಆದರ್ಶದ ಆಕಾಶವನ್ನು ತಲುಪಲು ಹವಣಿಸುತ್ತದೆ.ಮನುಷ್ಯನ ಬದುಕಿನ ಶೋಧನೆ ಪ್ರಸ್ತುತ ಕವಿತೆಯಲ್ಲಿದೆ. ಈ ಕವಿತೆ ನಮಗೆ ಬದುಕಿನ ಪೂರ್ಣ ವಾಸ್ತವತೆಯ ದರ್ಶನವನ್ನೇ ಮಾಡಿಸುತ್ತದೆ.

ಕೋವಿಗಳ ಕಾವಲಲಿ ಜಗವ ಕಾಯುವದೇವ
ಈಗ ಬಂದಾನೋ ದೇವ/ ಆಗ ಬಂದಾನೋ
ಎಂದು ಕಾಯುತ್ತಿದ್ದಾರೆ ಕಾಶ್ಮೀರದ ಹುಡುಗಿಯರು
ಕಾಣುತ್ತಿಲ್ಲ ಪ್ರೀತಿ ಪ್ರೇಮದ ಕನಸು ||
(ಕಾಶ್ಮೀರದ ಹುಡುಗಿಯರು )
ಈ ಕವಿತೆಯ ಸಾಲುಗಳು ಓದುಗರಿಗೆ ಚುಚ್ಚುತ್ತವೆ. ಕಾಶ್ಮೀರದ ನೆಲದಲ್ಲಿ ಪ್ರೀತಿ, ಪ್ರೇಮ, ಸ್ನೇಹ, ನಂಬಿಕೆ, ವಿಶ್ವಾಸಗಳಿಗೆ ಬರಗಾಲ. ಕಾಶ್ಮೀರದಲ್ಲಿ ನಡೆಯುವ ನಿತ್ಯ ಭಯೋತ್ಪದನೆ, ಕೋಮುಗಲಬೆ ಅಲ್ಲಿಯ ಜನಸಾಮಾನ್ಯರ ಎದೆಯಲ್ಲಿ ಸಾಕಷ್ಟು ಆತಂಕ,ತಳಮಳ ಮೂಡಿಸಿದೆ. ಹುಡುಗ- ಹುಡುಗಿಯರ ನಡುವೆ ಮಾತಿಲ್ಲ, ಸ್ನೇಹವಿಲ್ಲ. ಮದ್ದು-ಬಂದೂಕಗಳ ಆರ್ಭಟವೇ ಅಲ್ಲಿನ ದಿನ ನಿತ್ಯದ ಉತ್ಸವ. ಕಾಶ್ಮೀರ ಈ ದೇಶದ ಅಧಿಕ ‘ಹಾಟ್ ಸ್ಟೇಟ್’ ಅಲ್ಲದೆ ಮತ್ತೇನು ......?

ಮುಂಗಾರು ಮಳೆಯ ಹನಿಹನಿಯ ಸಾಲು
ಕೂಡಿಟ್ಟ ಬಾನ -ಬಯಲು
ಮನ ಮಥಿಸಿ ಬಂದ ಕಲೆ-ಕಾವ್ಯ ಮಾಲೆ
ರಸ ತುಂಬಿ ನಿಂತ ಜೇನು ||
( ಕರುನಾಡ ಧಾತ್ರಿ )
ಹೀಗೆ ಭಾರತಿ ಪಾಟೀಲರ ಕವಿತೆ ಪರಿಪ್ಲುತವಾಗುವುದು ನೈಸರ್ಗಿಕ; ಚೆಲುವೂ ಚುಂಬಕ. ಇಲ್ಲಿನ ಪದಗಳ ಹೆಣಿಗೆಯೂ ಅಧಿಕ ಆಕರ್ಷಕವಾಗಿದೆ. ನಿಸರ್ಗಕ್ಕೆ ಮಣಿಯದ ಕವಿಯಿಲ್ಲ; ಕುಣಿದು ಹಾಡದ ಮನವಿಲ್ಲ. ಪ್ರಕೃತಿ ಸಾವಿರದ ಕವಿತೆಗಳನ್ನು ತನ್ನ ಸೌಂದರ್ಯದಲ್ಲಿ ಸೃಷ್ಟಿಸಿದೆ; ಸೊಬಗಿನ ಆವಿಷ್ಕಾರವೇ ಆ ಬಗೆಯದು. ಸ್ನೇಹಜೀವಿ ಕವಯತ್ರಿ ಭಾರತಿ ಪಾಟೀಲವರನ್ನೂ, ಅವರ ಕಾವ್ಯ ಮನೋಧರ್ಮವನ್ನೂ ಅರ್ಥಮಾಡಿಕೊಳ್ಳಲು ಇಷ್ಟು ನಿದರ್ಶನ ಸಾಕಲ್ಲವೇ..............?

ಹರಿದ ಸೀರೆಯಂಚಿಗೆ
ಹಾಕಿದ ಗಂಟಿನಲಿ
ಸಾ/ವಿರದ ಮಮತೆಯ
ಹೊತ್ತ ತಂದವಳು ||
( ಸಾ/ವಿರದ ಮಮತೆ )
ಎಂಬ ಸಾಲುಗಳಲ್ಲಿ ವ್ಯಕ್ತವಾಗುವ ಭಾವವು ಪೂರ್ಣ ದೃಷ್ಟಿಕೋನದಿಂದ ಕೂಡಿದೆ. ವಾತ್ಸಲ್ಯದ ಝರಿಯ ಪರಿ ಇದು. ಸ್ತ್ರೀಯು ಸಂಸ್ಕೃತಿಯ ಹೆಸರಿನಲ್ಲಿಯೇ ಹೆಚ್ಚು ಶೋ಼ಣೆಗೆ ಒಳಗಾಗುತ್ತಾಳೆ. ದುಡಿಮೆ ಅವಳ ಬದುಕಿನ ಬಹು ಭಾಗವಾದರೂ ಅವಳೆಂದೂ ಜೀವನದ ಚೈತನ್ಯಶಕ್ತಿಯನ್ನು ಕಳೆದುಕೊಂಡಿಲ್ಲ. ಆರ್ಥಿಕ ಬಡತನದ ನಡುವೆಯೂ ಸಂತೋಷದಿಂದ ಬಾಳುತ್ತಾಳೆ, ಸಂಭ್ರಮವನ್ನು ಹಂಚುತ್ತಾಳೆ. ಅವಳು ಹಚ್ಚಿದ ಒಲವಿನ ಗಿಡವು ಎಂದು ಬಾಡುವುದಿಲ್ಲ. ಅವಳ ಬದುಕಿನ ಚಿಂತನೆಗಳಲ್ಲಿ ಕಾಣುವ ತ್ಯಾಗ, ಪ್ರೀತಿ, ನಿಷ್ಠೆ, ಮಮತೆ, ವಾತ್ಸಲ್ಯಗಳನ್ನು ಈ ಕವಿತೆ ಸಮರ್ಥವಾಗಿ ಕಟ್ಟಿಕೊಡುತ್ತದೆ.

ಕೆಂಪು ದೀಪದ ಕೆಳಗೆ
ಬೆಂಕಿಯಲಿ ಬೆಂದು
ಉಧೋ ಉಧೋ ಎಂದ
ರೇಣುಕೆಯರು.......||
(ನ್ಯಾಯ ಕೇಳದಂತೆ )
ಇಂಥ ಕವಿತೆಯ ಸಾಲುಗಳು ಈ ಕವಯತ್ರಿಯ ಕಾವ್ಯ ಸಾಮರ್ಥ್ಯವನ್ನು ಸಮರ್ಥವಾಗಿ ಪ್ರಕಟಿಸುವಂತಿವೆ. ಕೆಂಪು ದೀಪದ ಬೀದಿಯಲ್ಲಿ ನಡೆದ ಹೆಣ್ಣಿನ ದೈನ್ಯ, ದುರ್ದೆಸೆಗಳನ್ನು ಕವಯತ್ರಿ ಆರ್ದ್ರವಾಗಿ ಚಿತ್ರಿಸಿದ್ದಾರೆ. ಅಸಹಾಯಕ ಹೆಣ್ಣಿನ ದುಃಖಿತ, ದುಗುಡದ ದಳ್ಳುರಿಯೇ ಇಲ್ಲಿದೆ. ಮಾನವ ಸಮಾಜವನ್ನು ಕತ್ತಲಲ್ಲ ಇಟ್ಟ ದೇವರು-ಧರ್ಮದಂಥ ಕಲ್ಪನೆಗಳನ್ನು ತೀವ್ರ ಕಟುವಾಗಿ ಟೀಕಿಸುವ ಕವಯತ್ರಿ ಸಹಜವಾಗಿಯೇ ಏರುಧ್ವನಿಯನ್ನು ಬಳಸಿಕೊಂಡಿದ್ದು, ಇದರಿಂದಾಗಿ ಕಾವ್ಯದ ಸೂಕ್ಷ್ಮಗಳು ಅಲ್ಲಲ್ಲಿ ಮರೆಯಾಗುವುದುಂಟು. ಸಾಮಾಜಿಕವಾದ ಏರುಪೇರುಗಳನ್ನು ಗಟ್ಟಿ ಧ್ವನಿಯಲ್ಲಿ ಹೀಗೆ ಹೇಳಲು ಹೊರಟವರು ಎದುರಿಸಲೇಬೇಕಾದ ಅಭಿವ್ಯಕ್ತಿಯ ಸಮಸ್ಯೆಯಿದು.

ನನ್ನ ದ್ವೇಷಿಸಲಾದರೂ
ಅವರು ಪರಸ್ಪರ
ಕೈ ಕುಲುಕುತ್ತಾರಲ್ಲ
ಅದಕ್ಕಾಗಿ ಸಂತಸಪಡು........||
(ದಾರಿ ಬಿಡು )
ಹೀಗೆ ಸಶಕ್ತವಾದ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಲು ಕವಯತ್ರಿ ಶ್ರಮಿಸುವುದೂ ಕವಿತೆಯಲ್ಲಿ ಅವಿಭಾಜ್ಯವಾಗಿ ಪಲ್ಲವಿಸುತ್ತದೆ. ಒಂಟಿತನ, ಅನಾಥಭಾವ, ಪರಕೀಯ ಪ್ರಜ್ಞೆಗಳು ಬಹುಮಟ್ಟಿಗೆ ವೈಚಾರಿಕ ನೆಲೆಯಲ್ಲಿ ಸಂಗ್ರಹಿಸಿದ ಪರಿಕಲ್ಪನೆಗಳಾಗಿ ಕಾಣುತ್ತವೆ. ಆದರೆ ಈ ಕವಯತ್ರಿಗೆ ಇವೆಲ್ಲವೂ ಜೀವನ ನೀಡಿದ ನಿಷ್ಠುರ ಪಾಠಗಳು. ಭಾರತಿ ಪಾಟೀಲರ ಕಾವ್ಯದ ವೈಶಿಷ್ಟ್ಯವೆಂದರೆ ಕಾಡುವ ಇಂಥ ಮನೊವೃತ್ತಿಗಳನ್ನು ಮೀರಿ ಸಹೃದಯ ಸ್ಪಂದನವುಳ್ಳ ಜೀವನವನ್ನು ಅವರು ಸೃಷ್ಟಿಸಬಯಸುತ್ತಾರೆ.

ಭಾರತಿ ಪಾಟೀಲರ ಬರವಣಿಗೆ ಮುಖ್ಯವಾಗಿ ಪ್ರತೀಮಾತ್ಮಕ ವಿಧಾನವನ್ನೇ ತನ್ನ ಅಭಿವ್ಯಕ್ತಿಯ ನಿಚ್ಚಳ ಮಾಧ್ಯಮವಾಗಿ ಸ್ವೀಕರಿಸಿರುವಂಥದ್ದು. ಆದ್ದರಿಂದಲೇ ಈ ಸಂಕಲನದಲ್ಲಿನ ಕವಿತೆಗಳ ದನಿ ನಮ್ಮನ್ನು ಬಹುಕಾಲ ಕಾಡುತ್ತದೆ. ಅಲ್ಲದೆ ಎಲ್ಲ ವಾಚ್ಯಾರ್ಥಗಳನ್ನೂ ಮೀರಿ ಸಹೃದಯರ ಮೇಲೆ ಪರಿಣಾಮ ಬೀರುತ್ತವೆ. ಅವಶ್ಯಕವೆಂದೇ ಗದ್ಯದ ಲಯಗಾರಿಕೆಯೂ, ವೈಚಾರಿಕ ಮೊನಚೂ ಕಸಿಯಾಗಿ ಕವಿತೆಯ ರೂಪಣ ಭೌದ್ಧಿಕ ನೆಲೆಗಳಲ್ಲಿ ತುಡಿಯುವುದರಿಂದ ಭಾರತಿ ಪಾಟೀಲರ ಕಾವ್ಯಕ್ಕೊಂದು ಬೆಲೆ ಇದೆ. ಈ ಸಂಕಲನದ ‘ ಕಾದು ಕುಳಿತಿದ್ದೇನೆ ಇನ್ನೂ’, ‘ಇರುವದೆಲ್ಲವ ಬಿಟ್ಟು’, ‘ಸಾವಿಲ್ಲದ ಬೆಳಕಿನಲ್ಲಿ’, ‘ಕರುನಾಡ ಧಾತ್ರಿ,’ ‘ಕವಿತೆ’, ‘ನ್ಯಾಯ ಕೇಳಿದರಂತೆ’, ‘ಸಾ/ವಿರದ ಕವಿತೆ,’ ‘ಮರಣ ಮೃದಂಗ’-ಮುಂತಾದ ಕವಿತೆಗಳನ್ನೆಲ್ಲಾ ಓದಿಯೇ ಆನಂದಿಸಬೇಕು. ಒಟ್ಟಿನಲ್ಲಿ ಇಲ್ಲಿನ ಬಹುತೇಕ ಕವಿತೆಗಳು ಸಹೃದಯ ಓದುಗನನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತವೆ.

- ಸಿ.ಎಸ್.ಭೀಮರಾಯ (ಸಿಎಸ್ಬಿ)

MORE FEATURES

ಹೊಚ್ಚ ಹೊಸ ನಿರೂಪಣಾ ಶೈಲಿಯ ಕಾದಂಬರ...

06-12-2022 ಬೆಂಗಳೂರು

ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ...

ಅಧೋಲೋಕದ ನಂಬಿಕೆಯ ನಾವೆಗೆ ಇಂಬು ನೀ...

06-12-2022 ಬೆಂಗಳೂರು

''ಅಂಬೇಡ್ಕರ್ ಅವರದು ಬಹುಮುಖೀ ವ್ಯಕ್ತಿತ್ವ. ನ್ಯಾಯವಾದಿ, ಪ್ರಾಧ್ಯಾಪಕ, ಪತ್ರಕರ್ತ, ಸಮಾಜ ಸುಧಾರಕ, ಚಿಂತಕ, ತ...

ಕುಳಿತಲ್ಲೇ ಒಂದು ಸಾಹಸಯಾತ್ರೆ ಮಾಡಿ...

06-12-2022 ಬೆಂಗಳೂರು

ನಮಗೆ ಬದುಕಲು ಸಕಲ ಸೌಲಭ್ಯಗಳಿದ್ದರೂ ನಮ್ಮ ವ್ಯವಸ್ಥೆಯನ್ನು ಸದಾ ಬೈಯುವ ನಾವು ಸಮುದ್ರ ಮಟ್ಟದಿಂದ 10,000 ಅಡಿ ಮೇಲಿನ ವಂ...