ಇತ್ತೀಚಿನ ಸಾಂಸ್ಕೃತಿಕ ಪಲ್ಲಟಗಳು

Date: 05-08-2020

Location: ಬೆಂಗಳೂರು


ವರ್ತಮಾನದ ಬಿಕ್ಕಟ್ಟುಗಳನ್ನು ಬಹುತ್ವದ ನೆಲೆಯಲ್ಲಿ ಕಟ್ಟಿಕೊಡಲು ಯತ್ನಿಸಿರುವ ಹಿರಿಯ ವಿದ್ವಾಂಸ ಡಾ. ನಟರಾಜ ಬೂದಾಳು ಅವರು ಚಾರಿತ್ರಿಕ ಹಿನ್ನೋಟ ಹಾಗೂ ಸಾಗುವ ದಾರಿಯ ಹೊಳಹುಗಳನ್ನೂ ನೀಡಿದ್ದಾರೆ. ಭಾರತದ ಬಹುತ್ವದ ನೆಲೆ ಹಾಗೂ ವೈದಿಕ-ಶ್ರಮಣ ಧಾರೆಗಳ ನಡುವಿನ ಅವಿರತ ತಿಕ್ಕಾಟ-ಹುಡುಕಾಟ-ಪರಸ್ಪರ ಕೊಡುಕೊಳೆಗಳನ್ನು ಈ ಬರೆಹದಲ್ಲಿ ವಿವರಿಸಿದ್ದಾರೆ.

ಮೂರು ನಾಲ್ಕು ದಶಕಗಳ ಸಾಂಸ್ಕೃತಿಕ ಪಲ್ಲಟದ ಅವಲೋಕನಕ್ಕೆ ಸಿಗುವ ಮೊದಲ ನೋಟವೆಂದರೆ: ಆರ್ಥಿಕವಾಗಿ ಗರಿಗಟ್ಟಿಕೊಂಡ ಮಧ್ಯಮವರ್ಗ ಸಾರಾ ಸಗಟಾಗಿ ನವ ವೈದಿಕಶಾಹಿಯ ಹಿಡಿತಕ್ಕೆ ವರ್ಗಾವಣೆಗೊಂಡದ್ದು, ಇದಕ್ಕೆ ನಿರ್ದಿಷ್ಟವಾದ ಒಂದು ಪಕ್ಷ, ಒಂದು ಸಂಸ್ಥೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗದು. ವೈದಿಕ ವಸಾಹತುಶಾಹಿಯ ಪುನರ್‌ಸ್ಥಾಪನೆಯಲ್ಲಿ ಎಡಪಕ್ಷಗಳನ್ನೂ ಸೇರಿಸಿಕೊಂಡು ಎಲ್ಲರ ಪಾಲೂ ಇದೆ. ಈ ಪಲ್ಲಟ ಒಂದು ರೀತಿಯಲ್ಲಿ ಇಬ್ಬಾಯಿಯ ಕತ್ತಿ. ತನ್ನತನದ ನಿರಾಕರಣೆ ಮತ್ತು ಅನ್ಯದ ಗುಲಾಮಗಿರಿಗೆ ದೂಡಲ್ಪಡುವ ಈ ಪ್ರಕ್ರಿಯೆಯ ಪ್ರಮುಖ ಹತಾರುಗಳೆಂದರೆ ಒಂದು ಆಮ್ನೀಷಿಯಾ (ಮರೆವು) ಇನ್ನೊಂದು ಅನಸ್ತೇಷಿಯಾ (ಅರಿವಳಿಕೆ). ಈ ಎರಡೂ ಪ್ರಕ್ರಿಯೆಗಳಿಗೆ ದೀರ್ಘಕಾಲೀನ ಚರಿತ್ರೆ ಇದೆ. ಆದರೆ ಈ ಪ್ರಕ್ರಿಯೆ ತೀವ್ರವಾದ ವೇಗ ಪಡೆದುಕೊಂಡಿದ್ದು ಈಗ ಮಾತ್ರ.
ಯಾವಾಗಲೂ ಭ್ರಮೆಗಳನ್ನು ಬಿತ್ತಿ ಪೋಷಿಸುವ ಮಾರ್ಗ ಆಕ್ರಮಣಕಾರಿ ಆಗಿರುತ್ತದೆ. ಈ ಆಕ್ರಮಣಕಾರಿ ಪ್ರವೃತ್ತಿಯ ತುತ್ತ ತುದಿಗೆ ಬಂದು ನಿಂತಿದ್ದೇವೆ. ಪ್ರಜಾಸತ್ತೆಯ ರಾಜಕೀಯ ಸಂವಿಧಾನವನ್ನು ಪಲ್ಲಟಿಸಿ, ವಸಾಹತುಶಾಹಿ ಸಾಂಸ್ಕೃತಿಕ ಸಂವಿಧಾನವನ್ನು ಹೇರುವ ಭಯ ನಮ್ಮ ಸದ್ಯದ ಆತಂಕ. ಅದನ್ನು ಹೊಸದಾಗಿ ಹೇರುವ ಅಗತ್ಯವಿದೆಯೆ? ಏಕೆಂದರೆ ವಸಾಹತುಶಾಹಿ-ವೈದಿಕ ಸಂವಿಧಾನವೊಂದು ದೀರ್ಘಕಾಲದಿಂದ - ಸುಮಾರು ಎರಡು ಸಾವಿರ ವರುಷಗಳಿಂದ - ಈ ನೆಲವನ್ನು ಆಳುತ್ತಿದೆ. ಹಿಂದಿನ ಅರ್ಧ ಶತಮಾನದಲ್ಲಿ ಅದಕ್ಕೆ ಉಂಟಾದ ಪಲ್ಲಟಗಳೇನು ಮತ್ತು ಈ ಅರ್ಧ ದಶಕದಲ್ಲಿ ಉಂಟಾಗುತ್ತಿರುವ ಪಲ್ಲಟಗಳೇನು ಎನ್ನುವುದು ಈ ಬರೆಹದ ಆಸಕ್ತಿ. ಈ ಅರ್ಧದಶಕವಂತೂ ಪ್ರಜಾಸತ್ತೆಯ ವಾದಿಗಳಿಗೆ ಏದುಬ್ಬಸ ತಂದಿಟ್ಟಿದೆ. ಅಂದಮಾತ್ರಕ್ಕೆ ಅದಕ್ಕೆ ಹಿಂದೆ ನಿರಾಳವಾಗಿದ್ದೆವು ಎಂದೇನಲ್ಲ. ದಲಿತರ ಮೇಲೆ ಅತ್ಯಾಚಾರಗಳು, ಅವರ ಮನೆ ಮಠಗಳನ್ನು ಸುಡುವುದು, ಮಲತಿನ್ನಿಸುವುದು ಎಲ್ಲ ನಡೆದೇ ಇತ್ತು. ಆದರೆ ಹಿಂದಿನ ಅರ್ಧಶತಮಾನದಲ್ಲಿ ರಾಜಕೀಯ ಸಂವಿಧಾನ ಮತ್ತು ಸಾಂಸ್ಕೃತಿಕ ಸಂವಿಧಾನದ ನಡುವಿನ ತಿಕ್ಕಾಟದಲ್ಲಿ ರಾಜಕೀಯ ಸಂವಿಧಾನ ನಿಧಾನ ಗತಿಯಲ್ಲಿ ನಿಯಂತ್ರಣ ಸಾಧಿಸುತ್ತ ಬರುತ್ತಿತ್ತು. ಆದರೆ ಹಿಂದಿನ ಅರ್ಧ ದಶಕದಲ್ಲಿ ಮತ್ತೆ ವಸಾಹತುಶಾಹಿ ಸಾಂಸ್ಕೃತಿಕ ಸಂವಿಧಾನದ ಕೈ ಮೇಲಾಗುತ್ತಿದೆ.
ನಮ್ಮ ಸಂವಿಧಾನದಲ್ಲಿ ನಮ್ಮ ಪರಂಪರೆಯಿಲ್ಲ; ನಮ್ಮ ಸಂಸ್ಕೃತಿ ಇಲ್ಲ ಇತ್ಯಾದಿ ತಕರಾರುಗಳನ್ನು ಬಲಪಂಥೀಯರು ನಿರಂತರವಾಗಿ ತೆಗೆಯುತ್ತಲೇ ಬಂದಿದ್ದಾರೆ. ಇವರು ಹೇಳುತ್ತಿರುವುದು ಅರ್ಧಮಾತು. ಇನ್ನರ್ಧವೆಂದರೆ ಇವರು ಸಂವಿಧಾನದಲ್ಲಿ ಹುಡುಕುತ್ತಿರುವುದು ವೈದಿಕ ಪರಂಪರೆಯನ್ನು. ಇದು ಈ ಹೊತ್ತಿನ ಹೊಸ ನಿಲುವಲ್ಲ. ಪ್ರಜಾಸತ್ತೆಯನ್ನು ನಿರ್ದೇಶಿಸುತ್ತಿರುವ ರಾಜಕೀಯ ಸಂವಿಧಾನದ ಬದಲಿಗೆ ಇವರು ಇಡಬಯಸುವ ಸಾಂಸ್ಕೃತಿಕ ಸಂವಿಧಾನವು ಪ್ರತಿಪಾದಿಸುವ ಕೆಲವು ದುಷ್ಟ ಸಮೀಕರಣಗಳಿವೆ. ಈ ವೈದಿಕ ಸಾಂಸ್ಕೃತಿಕ ಸಂವಿಧಾನ ಅನೇಕ ದುಷ್ಟ ಸಮೀಕರಣಗಳನ್ನು ಬಿತ್ತಿ ಬೆಳೆಯುತ್ತಿದೆ. ನಾವೀಗ ಅನೇಕ ದುಷ್ಟ ಸಮೀಕರಣಗಳ ನಟ್ಟ ನಡುವೆ ನಿಂತಿದ್ದೇವೆ. ಅವುಗಳ ಒಂದು ಪಟ್ಟಿಯನ್ನು ಕೊಡಬಹುದು.

ದುಷ್ಟ ಸಮೀಕರಣಗಳು:
ಹಿಂದೂ ಧರ್ಮವೆನ್ನುವುದು ಏಕಾಕಾರಿಯಾದ ಸನಾತನ ಧರ್ಮ.
ವೈದಿಕ ಧರ್ಮವೇ ಹಿಂದೂ ಧರ್ಮ.
ವೈದಿಕ ಆಚರಣೆಗಳೇ ಹಿಂದೂ ಧರ್ಮದ ಮಾದರಿ ಆಚರಣೆಗಳು
ಮನುಸ್ಮೃತಿಯಾದಿಯಾಗಿ ವೇದೋಪನಿಷತ್ತು ಮುಂತಾದ ವೈದಿಕ ಆಕರಗಳು ಹಿಂದೂ ಧರ್ಮದ ಪ್ರಮಾಣಗ್ರಂಥಗಳು
ವೈದಿಕರ ಸಾಂಸ್ಕೃತಿಕ ಯಜಮಾನಿಕೆ ಪ್ರಶ್ನಾತೀತವಾದದ್ದು ಮತ್ತು ಶ್ರೇಯಸ್ಕರವಾದದ್ದು
ಹಿಂದೂ ಧರ್ಮದ ವೈರಿಗಳೆಂದರೆ ಮುಸ್ಲಿಮರು, ಕ್ರಿಶ್ಚಿಯನ್ನರು, ಪ್ರಶ್ನಿಸುವ ಬುದ್ಧಿಜೀವಿಗಳು.
ವೈದಿಕ ಅಸ್ಮಿತೆಯೇ ಹಿಂದೂ ಧರ್ಮದ ನಿಜವಾದ ಅಸ್ಮಿತೆ.
ಭಾರತವೆಂದರೆ ವೈದಿಕ ಹಿಂದೂ ದೇಶ.
ಭಾರತದಲ್ಲಿ ಇದ್ದ, ಇರುವ ಶ್ರಮಣ ಧಾರೆಗಳೆಲ್ಲ ವೈದಿಕ ಹಿಂದೂ ಧರ್ಮದ ಕವಲುಗಳು.
ಹಿಂದೂಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಹೊಂದುವವರು ದೇಶದ್ರೋಹಿಗಳು.
ವೈದಿಕ ಹಿಂದೂ ಧರ್ಮವನ್ನು ಅವೈದಿಕರೂ ಅನ್ಯ ಧರ್ಮದವರೂ ಶ್ರೇಷ್ಠವೆಂದು ಗೌರವಿಸಬೇಕು. ಅದಕ್ಕೆ ಒಪ್ಪದವರು ಧರ್ಮದ್ರೋಹಿಗಳೂ ಹೌದು, ದೇಶದ್ರೋಹಿಗಳೂ ಹೌದು. ಏಕೆಂದರೆ ದೇಶಭಕ್ತಿ ಮತ್ತು ವೈದಿಕ ಹಿಂದೂಧರ್ಮ ಎರಡೂ ಪರಸ್ಪರ ಪ್ರತ್ಯೇಕಿಸಲಾಗದ ಸಂಗತಿಗಳು ಇತ್ಯಾದಿ.

ಇಂತಹ ಅಪವ್ಯಾಖ್ಯಾನಗಳ ಮೂಲಕ ದುಷ್ಟ ಸಮೀಕರಣಗಳನ್ನು ಸೃಷ್ಟಿಸಲಾಗುತ್ತಿದೆ. ಈ ಸಮೀಕರಣಗಳನ್ನೇ ಸಂಸ್ಕೃತಿಯ ಅಭಿವೃದ್ಧಿ ಎನ್ನುವಂತೆ ಮುಂದಿಡಲಾಗುತ್ತಿದೆ. ಇದಕ್ಕೆ ಯುವ ಪೀಳಿಗೆಯ ಒಪ್ಪಿಗೆಯನ್ನು ಭಾವಾವೇಶವನ್ನು ಸೃಷ್ಟಿಸಿ ಪಡೆಯಲಾಗುತ್ತಿದೆ. ಎತ್ನಿಕ್ ಕ್ಲೀನ್ಸಿಂಗ್ ಎನ್ನುವ ಕೇಡಿಗ ಪರಿಕಲ್ಪನೆಯೊಂದನ್ನು ಮುಂದುಮಾಡಿಕೊಂಡು ಈ ವಸಾಹತುಶಾಹಿಯನ್ನು ಕವುಚಲಾಗುತ್ತಿದೆ. ಈ ನವ ಸಾಹತುಶಾಹಿಯ ಪ್ರೊಮೋರ‍್ಸ್ ಮತ್ತು ಬಲಿಪಶುಗಳೆಂದರೆ ಎಲ್ಲ ಶೂದ್ರ ಜಾತಿಗಳವರೇ ಆಗಿದ್ದಾರೆ ಎನ್ನುವುದು ಮತ್ತೂ ವಿಪರ್ಯಾಸದ ಸಂಗತಿ.
ದೇಸಿ ಅಸ್ಮಿತೆ ಮತ್ತು ಬಹುತ್ವದ ನಾಶ = ರಾಷ್ಟ್ರಭಕ್ತಿ!
ಹಿಂದೂ ಧರ್ಮ ಎನ್ನುವ ತೀರಾ ಇತ್ತೀಚಿನ ಪದ ಅನೇಕ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಮೇಲ್ನೋಟಕ್ಕೆ ಇಲ್ಲೇನೂ ಸಮಸ್ಯೆಯೇ ಇಲ್ಲವೆನಿಸುತ್ತದೆ. ಆದರೆ ಹೀಗೆ ಹಿಂದೂ ಧರ್ಮವನ್ನು ಏಕಾಕಾರಿಯಾಗಿ ಗ್ರಹಿಸುವುದರಲ್ಲಿರುವ ಅಪಾಯ ಶೂದ್ರ ಸಮೂಹಗಳಿಗೆ ಅರಿವಾಗುತ್ತಿಲ್ಲ. ಹಿಂದೂ ಧರ್ಮದ ಜೀವದ್ರವ್ಯವೇ ಬಹುತ್ವ. ಇಲ್ಲಿ ಎಲ್ಲರಿಗೂ ಬದುಕುವ ಅವಕಾಶಗಳಿವೆ. ಎಲ್ಲರೂ ಸಮಾನರು ಎಂಬ ಅಂಶವೇ ಏಕಾಕಾರಿ ಹಿಂದೂ ಧರ್ಮದಲ್ಲಿ ನಾಪತ್ತೆಯಾಗುತ್ತದೆ. ಸಂಸ್ಕೃತಿ, ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಮುಂತಾದ ಪದಗಳೂ ಅಪವ್ಯಾಖ್ಯಾನಕ್ಕೆ ಈಡಾಗಿವೆ.

ನಿರ್ಣಾಯಕವಾಗಿ ಭಾರತದ ತಾತ್ವಿಕತೆಯನ್ನು ಎರಡು ತತ್ವಧಾರೆಗಳನ್ನಾಗಿ ವಿಭಾಗಿಸಿಕೊಂಡು ಅಧ್ಯಯನ ಮತ್ತು ಅನುಸಂಧಾನ ಮಾಡುತ್ತ ಬರಲಾಗಿದೆ. ಒಂದು ವೈದಿಕ ಧಾರೆ ಇನ್ನೊಂದು ಶ್ರಮಣ ಧಾರೆ. ಮೊದಲಿಗೆ ಇವು ಚಿಂತನಾ ಧಾರೆಗಳಾಗಿದ್ದವು. ನಂತರ ಜಾತಿ ಸಂಸ್ಥೆಗಳಾದವು. ಈ ವರ್ಗೀಕರಣ ತುಂಬಾ ಪ್ರಾಚೀನವಾದುದು ಮತ್ತು ಈ ಹೊತ್ತೂ ಚಾಲ್ತಿಯಲ್ಲಿರುವಂಥದ್ದು. ಈಗಂತೂ ಈ ವರ್ಗೀಕರಣವನ್ನು ಮುಂದಿಡಲು ಯಾವ ಹಿಂಜರಿಕೆಯೂ ಇಲ್ಲ. ಶ್ರಮಣ ಧಾರೆಗಳೆಂದು ಬೌದ್ಧ, ನಾಥ, ಶಾಕ್ತ, ಸಿದ್ಧ, ಅನೇಕ ಶೈವ ಪಂಥಗಳು, ಸೂಫಿ, ಚಾರ್ವಾಕ, ವಚನ ಹಾಗೂ ಅಚಲ, ಅದ್ವಯ, ವೀರಶೈವ ಮುಂತಾದ ವಿವಿಧ ತತ್ವಪದಕಾರ ಪರಂಪರೆಗಳನ್ನು ಗುರುತಿಸಬಹುದು. ಹಿಂದೂ ಧರ್ಮ ಎಂದು ಕರೆಯುತ್ತಿರುವ ಈ ಆವರಣವನ್ನು ವೈದಿಕ ಹಿಂದೂ ಧರ್ಮ ಮತ್ತು ಅವೈದಿಕ ಹಿಂದೂ ಧರ್ಮ ಎಂಬ ಸರಳ ವಿಭಜನೆಯೊಂದನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. (ಅವೈದಿಕ ಪದಕ್ಕೆ ಸಮಾನವಾದ ಬೇರೆ ಪದವನ್ನು ಅಗತ್ಯವೆನ್ನಿಸಿದರೆ ಗುರುತಿಸಿಕೊಳ್ಳಬಹುದು). ಶ್ರಮಣಧಾರೆಗಳಲ್ಲಿ ಗುರುತಿಸಿಕೊಂಡಿದ್ದ ಕೆಲವು ಗುಂಪುಗಳು ಈಗ ಸಾಂಸ್ಕೃತಿಕ ಮತ್ತು ರಾಜಕೀಯ ಕಾರಣಗಳಿಗಾಗಿ ವೈದಿಕ ಧಾರೆಯ ಜೊತೆ ಕೈಜೋಡಿಸಿವೆ. ಇದೀಗ ಕೆಲವು ಚಿಂತಕರು ಹಿಂದೂ ಪದ ಮತ್ತು ವೈದಿಕರ ಮೂಲ ಆವಾಸಸ್ಥಾನಗಳನ್ನು ಕುರಿತಾದ ಸಂಶೋಧನೆಗಳನ್ನು ದೊಡ್ಡ ದನಿಯಲ್ಲಿ ಮುಂದಿಡುತ್ತಿದ್ದಾರೆ. ಹರಿಯಾಣದ ರಾಖಿಗಡಿಯ ಉತ್ಖನನದಲ್ಲಿ ದೊರೆತ ಆಧಾರಗಳು ಮತ್ತು ಆ ನಂತರದ ಮಾನವ ಜಿನೋಗ್ರಾಂಗಳ ಅಧ್ಯಯನದ ಫಲಿತಗಳನ್ನು ನಮ್ಮ ಯುವಕರು ಗಮನಿಸಬೇಕಾಗಿದೆ. ಅದನ್ನು ನಮ್ಮ ಹಿರಿಯರು ಕೂಡ ಕೇಳಿಸಿಕೊಳ್ಳಬೇಕಾಗಿದೆ. ವೈದಿಕ ಧಾರೆಯು ವೇದ ಉಪನಿಷತ್ತು, ಬ್ರಾಹ್ಮಣಗಳು, ಅರಣ್ಯಕಗಳು ಇತ್ಯಾದಿ ತಾತ್ವಿಕ ಆಕರವನ್ನಾಧರಿಸಿವೆ. ಶ್ರಮಣ ಧಾರೆಗಳಾದ ಬೌದ್ಧ, ಜೈನ, ನಾಥ, ಸಿದ್ಧ, ಸೂಫಿ, ಆಜೀವಿಕ, ಕಾಪಾಲಿಕ, ವಿವಿಧ ಧಾರೆಗಳ ತತ್ವಪದಕಾರರು ಮತ್ತು ವಚನಕಾರರು ಪರಸ್ಪರ ಕೊಳು ಪಡೆಯನ್ನಾಧರಿಸಿ ಅನೇಕ ತಾತ್ವಿಕ ಆಕರಗಳ ಮೂಲಕ ತಮ್ಮ ದರ್ಶನಗಳನ್ನು ಸೂತ್ರೀಕರಿಸಿಕೊಂಡಿವೆ. ತೀರಾ ಹಿಂದಿನಿಂದಲೂ ಈ ಎರಡು ಧಾರೆಗಳನ್ನು ಬ್ರಾಹ್ಮಣ ಧಾರೆ ಮತ್ತು ಶ್ರಮಣ ಧಾರೆ ಎಂದು ಕರೆದುಕೊಂಡು ಬಂದಿದ್ದಾರೆ. ಹಿಂದೆಲ್ಲ ಈ ಧಾರೆಗಳಲ್ಲಿರುವ ತಾತ್ವಿಕರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗಿ ಬರಲು ಅವಕಾಶವಿತ್ತು. ಹಾಗಾಗಿಯೇ ಅನೇಕ ಶೂದ್ರರೂ ಉಪನಿಷತ್ತುಗಳನ್ನು, ವೇದಗಳನ್ನು ಅನುಸಂಧಾನ ಮಾಡಿದ್ದಾರೆ. ಹಾಗೆಯೇ ಅನೇಕ ಬ್ರಾಹ್ಮಣರೂ ಶ್ರಮಣ ಧಾರೆಗಳ ಒಳಗಿದ್ದಾರೆ. ಆಗ್ಗೆ, ಅವು ಚಿಂತನಾಧಾರೆಗಳು ಮಾತ್ರ. ನಂತರ ಅವು ಜಾತಿಗಳಾಗಿ, ವರ್ಣಗಳಾಗಿ ಬದಲಾದವು. ಇವುಗಳನ್ನು ಹಿಂದೂ ಧರ್ಮ ಎಂಬ ಒಂದೇ ಹೆಸರಿನಿಂದ ಕರೆಯಲು ಆರಂಭಿಸಿದ್ದು ತೀರಾ ಇತ್ತೀಚೆಗೆ. ಹೀಗೆ ಒಂದೇ ಹೆಸರಿನಿಂದ, ಒಂದೇ ಧಾರ್ಮಿಕ ಗುಂಪು ಎಂದು, ಒಂದೇ ಧರ್ಮ ಎಂದು, ಒಂದೇ ಬದುಕಿನ ಕ್ರಮ ಎಂದು ಗುರುತಿಸುವುದರಿಂದಾಗಿ ಈ ಧರ್ಮದ ಜೀವದ್ರವ್ಯವಾದ ಬಹುತ್ವವು ಅಪಾಯಕ್ಕೆ ಸಿಲುಕಿಕೊಂಡಿದೆ. ಹಾಗೆ ನೋಡಿದರೆ ಇಡೀ ವಚನ ಚಳವಳಿಯೇ ವೈದಿಕ ಹಿಂದೂ ಧರ್ಮದ ವಿರುದ್ಧ ಎದ್ದ ದಂಗೆ ಎಂದರೂ ಅದು ಸಮ್ಮತವೆನ್ನಿಸುತ್ತದೆ..

ಇರುವುದು ಎರಡೇ ವರ್ಣ

ನೂರಾರು ಪ್ರತಿಭಟನೆಗಳ ನಂತರವೂ ಚಾಲ್ತಿಯಲ್ಲಿರುವ ವರ್ಣಾಶ್ರಮ ಧರ್ಮದ ಈ ಹೊತ್ತಿನ ವರ್ಗೀಕರಣವೆಂದರೆ: ಈಗ ಇರುವುದು ಎರಡೇ ವರ್ಣ: ಒಂದು ಬ್ರಾಹ್ಮಣ ಇನ್ನೊಂದು ಶೂದ್ರ. ಉಳಿದೆರಡು ವರ್ಣಗಳನ್ನು ಇವೆರಡೂ ಹಂಚಿಕೊಂಡಿವೆ. ಈಗ ಎರಡೇ ವರ್ಣಗಳು ಉಳಿದಿರುವುದರಿಂದ ಶೂದ್ರ ವರ್ಣವನ್ನು ನಿಯಂತ್ರಿಸುವುದು ಮೇಲಿನ ವರ್ಣಕ್ಕೆ ಸುಲಭ ಸಾಧ್ಯವಾಗಿದೆ. ಇದರಿಂದಾಗಿ ಶೂದ್ರ ವರ್ಣದಲ್ಲಿ ಅಂತಃಕಲಹ ಆರಂಭವಾಗಿದೆ. ಈ ಸಂಘರ್ಷ ಮೇಲಿನ ವರ್ಣಕ್ಕೆ ವಿಸ್ತರಿಸದ ಹಾಗೆ ಎಚ್ಚರವಹಿಸಲಾಗಿದೆ.

ತಾನು ವಸಾಹತುವನ್ನಾಗಿ ಆಕ್ರಮಿಸಿಕೊಂಡಿರುವ ನೆಲದ ಎಲ್ಲ ಸಾಂಸ್ಕೃತಿಕ ಚಹರೆಗಳನ್ನು ಮೊದಲು ನಾಶಮಾಡುವುದು ಎಲ್ಲ ವಸಾಹತುಶಾಹಿಗಳ ವಿಧಾನ. ಹಾಗೆ ನಾಶ ಮಾಡಲು ಅಲ್ಲಿನ ಎಲ್ಲ ಸಾಂಸ್ಕೃತಿಕ ಸಂಕೇತಗಳನ್ನು ಅಪಮಾನಿಸುವ, ಅಪಹರಿಸುವ, ಭ್ರಷ್ಟಗೊಳಿಸುವುದಕ್ಕೆ ಅಗತ್ಯವಾದ ಆಚರಣೆಗಳನ್ನು ತನ್ನ ಆಚರಣೆಗಳನ್ನಾಗಿ ಮುಂದಿಡುತ್ತದೆ. ಹೀಗೆ ತಾನೇ ಮುಂದಿಡುವ ಆಚರಣೆಗಳ ಬಗೆಗೆ ಕೂಡ ಅದಕ್ಕೆ ಗೌರವವಿರುವುದಿಲ್ಲ! ಆದರೆ ಸ್ಥಳೀಯತೆಯನ್ನು ನಾಶ ಮಾಡುವವರೆಗೆ ಅವುಗಳ ಬಗೆಗೆ ಕಠಿಣ ನಿಷ್ಠೆಯನ್ನು ತೋರುತ್ತದೆ. ಉದಾಹರಣೆಗೆ: ಪೂಜೆಗೆ ಬದಲು ಯಜ್ಞ, ಮಾಂಸಾಹಾರಕ್ಕೆ ಬದಲು ಸಸ್ಯಾಹಾರ, ಶಿವ ಸಂಸ್ಕೃತಿಗೆ ಬದಲು ವಿಷ್ಣು ಸಂಸ್ಕೃತಿ, ಜಲಸಂಸ್ಕೃತಿಗೆ ಬದಲಾಗಿ ಅಗ್ನಿ ಸಂಸ್ಕೃತಿ, ಮಾತೃ ಸಂಸ್ಕೃತಿಗೆ ಬದಲಾಗಿ ಪಿತೃಸಂಸ್ಕೃತಿ, ಇತ್ಯಾದಿ ಅನೇಕ ವಿಧಾನಗಳನ್ನು ಇಲ್ಲಿ ಬಳಸಲಾಗುತ್ತದೆ. ತಿರಸ್ಕರಿಸುವ, ಅಪಹರಿಸುವ, ಭ್ರಷ್ಟಗೊಳಿಸುವ, ಸಂಕಲನಾನುಸಂಧಾನದ ಮೂಲಕ ತನ್ನದಾಗಿಸಿಕೊಳ್ಳುವ ವಿಧಾನಗಳನ್ನು ಈ ಉದ್ಯೋಗಕ್ಕೆ ಬಳಸಿಕೊಳ್ಳುತ್ತದೆ. ಇದಕ್ಕಾಗಿ ನೂರಾರು ಭ್ರಮಾತ್ಮಕ ಸಂರಚನೆಗಳು, ಪುರಾಣಗಳು, ಮಹಾಕಾವ್ಯಗಳು, ನಂಬಿಕೆಗಳು, ಇತ್ಯಾದಿಗಳನ್ನು ಸೃಷ್ಟಿಸಲಾಗುತ್ತದೆ. ಸಾಂಸ್ಕೃತಿಕ ವಸಾಹತುಶಾಹಿಯೆಂಬುದು ಒಂದು ನಿರ್ಲಜ್ಜ ಚಟುವಟಿಕೆ. ಅದು ಯಾವ ಎಗ್ಗೂ ಇಲ್ಲದೆ ಪರರ ಮನೆಯೊಳಕ್ಕೆ ನುಗ್ಗಬಲ್ಲದು. ಉದಾಹರಣೆಗೆ ಯಾವುದಾದರೂ ಒಂದು ಕೆಳಸ್ತರದ ಸಮೂಹ – ಎಡಗೈನವರೋ ಬಲಗೈನವರೋ ಬೌದ್ಧರಾದರೆ, ಕ್ರಿಶ್ಚಿಯನ್ನರಾದರೆ ಅಂತಹ ಮತಾಂತರವು ಲಿಂಗಾಯಿತರಿಗೆ, ಒಕ್ಕಲಿಗರಿಗೆ, ಗೊಲ್ಲರಿಗೆ, ಬೇಡರಿಗೆ, ಬೆಸ್ತರಿಗೆ ಏನೂ ಅನ್ನಿಸುವುದಿಲ್ಲ. ಆದರೆ ಕೇವಲ ಎರಡೂವರೆ ಪರ್ಸೆಂಟ್ ಇರುವ ಮೇಲು ಜಾತಿಯವರು ಆಕಾಶವೇ ಕಳಚಿ ಹಿಂದೂ ಧರ್ಮದ ಮೇಲೆ ಬೀಳುತ್ತಿರುವ ಹಾಗೆ ಹುಯ್ಲಿಡುತ್ತಾರೆ! ತಮ್ಮ ಸಾಂಸ್ಕೃತಿಕ ಮತ್ತು ರಾಜಕೀಯ ಯಜಮಾನಿಕೆಯ ರಕ್ಷಣೆಗೆ ಸದಾ ಬದ್ಧವಾಗಿರುವ ವೈದಿಕ ಸಮೂಹ ಎಂತಹ ರಾಜಿಗೂ ಯಾವಾಗಲೂ ಸಿದ್ಧವಾಗಿರುತ್ತದೆ. ಇದರಿಂದಾಗಿ ಅದನ್ನು ಒಂದು ಇದಿರನ್ನಾಗಿ ಗುರುತಿಸಿ ನಿರ್ವಹಿಸುವುದು ಮತ್ತೂ ಕಷ್ಟಕರವಾದುದು.
ಉದಾರಿ ಅದ್ವೈತದ ಮಾರುಕಟ್ಟೆ:
ಇಂದು ಉದಾರಿ ಅದ್ವೈತವು ಭಾರತವನ್ನು ವಿಶ್ವ ಮಾರುಕಟ್ಟೆಗೆ ಸಿದ್ಧಪಡಿಸುವ ಕೆಲಸವನ್ನು ನಿರ್ವಹಿಸುತ್ತಿದೆ. ಇದಕ್ಕೆಂದೇ ಅನೇಕ ದೇವಮಾನವರು ನಿಯೋಜಿತರಾಗಿದ್ದಾರೆ. ಅದಕ್ಕೆ ಅಗತ್ಯವಾದ ಜೀವನಕ್ರಮವನ್ನು, ಚಿಂತನಾಕ್ರಮಗಳನ್ನು, ಸಂಸ್ಕೃತಿ ಸಂರಚನೆಗಳನ್ನು, ಧಾರ್ಮಿಕತೆಯನ್ನು ತಮಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿಕೊಳ್ಳುತ್ತಾರೆ ಮತ್ತು ಪ್ರಚೋದಿಸುತ್ತಾರೆ. ನಮ್ಮ ಪಾರಂಪರಿಕ ಅರಿವು ಕೂಡ ಅದಕ್ಕೆ ತಾನು ಮಾರಬಲ್ಲ ಸರಕಾಗುತ್ತದೆ. ಪ್ರತಿರೋಧದ ನೆಲೆಗಳಿಗೆ ಅನೇಕ ಬಿಕ್ಕಟ್ಟುಗಳನ್ನು ಸೃಷ್ಟಿಸಲಾಗಿದೆ. ಸಾಂಸ್ಕೃತಿಕ ವಸಾಹತುಶಾಹಿಯು ತನ್ನ ವಿರುದ್ಧ ಮಾಡಬೇಕಾದ ಪ್ರತಿಭಟನೆಗಳನ್ನೂ ತಾನೇ ಸಿದ್ಧ ಮಾಡಿ ಒದಗಿಸುತ್ತದೆ. ಅವು ಸಾಧಾರಣವಾಗಿ ಎರಡು ರೀತಿಯಲ್ಲಿ ಇರುತ್ತವೆ.
ಸ್ಥಳೀಯ ಅಸಲಿ ಚಹರೆಗಳು ಅತ್ಯಂತ ಅಪಾಯಕಾರಿಯಾದವುಗಳೆಂದು ನಂಬಿಸಲು ಅಗತ್ಯವಾದ ಒಪ್ಪಿಗೆಯ ಉತ್ಪಾದನೆಯ ಕಂತ್ರಾಟುಗಳನ್ನು ಕೊಡುವುದು.
‘ಭಾರತೀಯ’ ಮುಂತಾದ ಹೆಸರಿನಲ್ಲಿ ಅಧಿಕಾರಾರೂಢವಾಗಿರುವ ವಸಾಹತುಶಾಹಿ ಚಹರೆಗಳನ್ನು ಉತ್ಪ್ರೇಕ್ಷಿಸುವುದು.
ಈ ಸಾಂಸ್ಕೃತಿಕ ವಸಾಹತುಶಾಹಿಗೆ ಅಗತ್ಯವಾದ ಒಪ್ಪಿಗೆಗಳನ್ನು ಉತ್ಪಾದಿಸಿಕೊಡುವ ಕೆಲಸವನ್ನು ಈಗ ನಿರ್ವಹಿಸುತ್ತಿರುವವರು ಯಾರು? ಈ ಪ್ರಶ್ನೆಗೆ ಉತ್ತರವನ್ನು ಹುಡುಕಿ ತೆಗೆಯಬೇಕಿಲ್ಲ. ಬದಲಿಗೆ ಕಣ್ಣಿಗೆ ರಾಚುವಂತೆ ಅದನ್ನು ‘ಭಾರತೀಯ’ ಎನ್ನುವ ಹೆಸರಿನಡಿಯಲ್ಲಿ ಅದೇ ವೈದಿಕತೆಯೆ ನಿರ್ವಹಿಸುತ್ತಿದೆ. ಅದಕ್ಕಾಗಿ ಕೆಲವು ಹತಾರುಗಳನ್ನು ಹೊಂದಿಸಿಕೊಂಡಿದೆ. ಸಮೂಹದ ಒಪ್ಪಿಗೆಯನ್ನು ಉತ್ಪಾದಿಸಿಕೊಡುವ ಕೆಲಸವನ್ನು ಹಿಂದೆ ಪ್ರಮಾಣಗಳು ನಿರ್ವಹಿಸುತ್ತಿದ್ದವು. ಪುರಾಣದಲ್ಲಿ ಅದನ್ನು ವಿಷ್ಣು ನಿರ್ವಹಿಸಿದರೆ, ಚರಿತ್ರೆಯಲ್ಲಿ ಚಾಣಕ್ಯ ನಿರ್ವಹಿಸಿದನು. ಈಗ ಅದನ್ನು ಮಾಧ್ಯಮಗಳು ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು, ಕಾರ್ಪೊರೇಟ್ ವಲಯಗಳು ನಿರ್ವಹಿಸುತ್ತಿವೆ.
ಟಿ.ಎಂ. ಕೃಷ್ಣ ಎನ್ನುವ ಕರ್ನಾಟಕ ಸಂಗೀತದ ಕಲಾವಿದರೊಬ್ಬರನ್ನು ಇತ್ತೀಚೆಗೆ ಆವರಣವೊಂದರಿಂದ ಹೊರದಬ್ಬಲಾಯಿತು. ಎಲ್ಲರ ಜೊತೆಗೆ ಇರುತ್ತಾರೆ ಎನ್ನುವ ಕಾರಣಕ್ಕೆ! ಹೊರಗೆ ನಿಲ್ಲಿಸುವವರಿಗೆ ಇದೇನೂ ಹೊಸದಲ್ಲ. ಕನಕದಾಸರನ್ನು ಹೊರಗೆ ನಿಲ್ಲಿಸಿದ್ದೊಂದನ್ನೆ ಮಾತನಾಡುತ್ತ ಬಂದಿದ್ದೇವೆ. ಆದರೆ ಇವತ್ತಿಗೂ ಹೊರಗೆ ನಿಂತಿರುವ ತತ್ವಪದಕಾರರ ಬಗೆಗೆ ಮಾತನಾಡಬೇಕೆಂಬುದೂ ನಮಗೆ ಅರಿವಾಗಿಲ್ಲ. ಅಮ್ಮಿನಭಾವಿ ಅಯ್ಯಣ್ಣಜ್ಜ, ಹುಚ್ಚೀರಜ್ಜ, ಶಂಕರಾನಂದಯೋಗಿ, ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫ, ಕೆಸ್ತೂರದೇವ, ಶಂಕರದೇವ, ನಿಜಗುಣ ಶಿವಯೋಗಿ, ಹಾಗಲವಾಡಿ ಮುದ್ದುವೀರಸ್ವಾಮಿ, ಬಯಲಪ್ಪಸ್ವಾಮಿ, ಪುರದ ನಾಗಣ್ಣ, ಹೊನ್ನಗಂಗ, ಎಡೆಯೂರು ಸಿದ್ಧಲಿಂಗ, ಗೋಸಲ ಚನ್ನಬಸವೇಶ, ಹರಿಹರಗುರು, ಮುಂತಾದ ತತ್ವಪದಕಾರರೆಲ್ಲ ಹೊರಗೇ ಇದ್ದಾರೆ. ಇದೆಲ್ಲ ಅಚಾನಕ್ಕಾಗಿ ನಡೆದಿರುವ ಸಂಗತಿಗಳಲ್ಲ. ಇಲ್ಲಿಯ ಎಲ್ಲ ಆಯ್ಕೆ ಮತ್ತು ನಿರಾಕರಣೆಗಳ ಹಿಂದೆ ಬಲವಾದ ಸಾಂಸ್ಕೃತಿಕ ರಾಜಕಾರಣವಿದೆ. ತತ್ವಪದಕಾರರು ವೈಷ್ಣವ ಭಕ್ತಿಪಂಥದವರಲ್ಲ ಎಂಬ ಒಂದೇ ಕಾರಣಕ್ಕೆ ಅವರೆಲ್ಲರನ್ನು ಹೊರಗಿಡಲಾಗಿದೆ. ವೆಂಕಟೇಶ್ ಕುಮಾರ್ ಅವರು ಸ್ಮರಣೆ ಮಾತ್ರ ಸಾಲದೆ ಎನ್ನುವ ವೈಷ್ಣವ ಭಕ್ತಿ ಪಂಥದ ಕೀರ್ತನೆ ಶುರು ಮಾಡಿದರೆ ಸಾಕು ಅದೇನು ವಿದ್ಯುತ್ ಸಂಚಾರ ಆಗಿಬಿಡುತ್ತದೆ ಎನ್ನುವುದನ್ನು ಗಮನಿಸಬೇಕು! ಇನ್ನು ಕಾಸಿ ಕಮ್ಮಾರನಾದ ಎನ್ನುವ ವಚನ ಹಾಡಿದರೆ ಮಕಾ ಸಿಂಡರಿಸಿಕೊಳ್ಳುವುದನ್ನೂ ನೋಡಬೇಕು! ಇವೆಲ್ಲ ಸಣ್ಣ ಸಂಗತಿಗಳಲ್ಲ! ಎಷ್ಟೊಂದು ಜನ ಮೇಲುಜಾತಿಯ ಶಿಷ್ಯರುಗಳು ಮುಸ್ಲಿಮ್ ಗುರುಗಳಿಂದ ಸಂಗೀತ ಕಲಿತು ಧನ್ಯರಾಗಿದ್ದಾರೆ. ಯಾರಾದರೊಬ್ಬ ಮೇಲ್ಜಾತಿಯ ಗುರು ಒಬ್ಬನಾದರೂ ಮುಸ್ಲಿಂ ಹುಡುಗನಿಗೆ ಕಲಿಸಿದರಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಲಾರದು.

ನಮ್ಮನ್ನು ನಾವೇ ಸೀಳಿಕೊಂಡಿದ್ದೇವೆ!

ಇಡಿಯಾಗಿ ಭಾರತದ ಬದುಕು (ಇಸ್ಲಾಂ, ಕ್ರೈಸ್ತ ಮುಂತಾದ ಅನ್ಯ ಧರ್ಮಗಳ ಹೊರತಾಗಿ) ವೈದಿಕ ಮತ್ತು ಶ್ರಮಣ (ಅವೈದಿಕ) ಎಂದು ತನ್ನನ್ನೇ ಸೀಳಿಕೊಂಡಿದೆ. ನಮ್ಮದು ನಾವೇ ಸೀಳಿಕೊಂಡ ಬದುಕು. ಸ್ಕೀಜೋಫ್ರೇನಿಕ್ ಅವಸ್ಥೆ ಕೇವಲ ಮನಸ್ಸಿಗೆ ಸಂಬಂಧಿಸಿದುದಲ್ಲ; ಬದಲಿಗೆ ಭಾರತೀಯ ಬದುಕಿಗೇ ಸಂಬಂಧಿಸಿದುದು. ಈ ಎರಡು ಸೀಳುಗಳನ್ನು ವೈದಿಕ ಮತ್ತು ಶ್ರಮಣ ಎಂದು ವರ್ಗೀಕರಿಸಿಕೊಳ್ಳುವುದನ್ನು ಶ್ರಮಣಧಾರೆಗಳು ಒಪ್ಪುತ್ತವೆ. ವೈದಿಕ ಧಾರೆಗೆ ಭಾರತೀಯ ಬದುಕು ಹೇಗೇ ಕಾಣ ಸಲಿ, ನಮ್ಮ ನಡುವಿನ ತರತಮಗಳಂತೂ ನಿತ್ಯ ಬದುಕಿನ ವಾಸ್ತವವಾಗಿರುವುದರಿಂದ ಇಂತಹ ವಿಭಜನೆ ಅನಿವಾರ್ಯ.

ಕರ್ನಾಟಕದ ನೆಲದಲ್ಲಿ ಇತ್ತೀಚಿಗಿನ ಒಂದು ಸಾಂಸ್ಕೃತಿಕ ಪಲ್ಲಟವನ್ನು ಕುರಿತು ನಾವೀಗ ಚಿಂತಿಸಬೇಕಾಗಿದೆ. ಇಲ್ಲಿ ವಚನಗಳೆಂದು ಕರೆಯುವ ಒಂದು ತಾತ್ವಿಕ ಆವರಣವಿದೆ. ಲಿಂಗಾಯಿತ/ವೀರಶೈವ ಎಂದು ಕರೆದುಕೊಳ್ಳುವ ಸಮೂಹವಿದೆ. ವಚನವನ್ನು ಚಳವಳಿ ಎಂದು ಕೆಲವರು ಕರೆದರೆ, ಕೆಲವರು ಬೇರೆಯದೇ ಧರ್ಮ ಎನ್ನುತ್ತಾರೆ. ಇನ್ನು ಕೆಲವರು ಎಲ್ಲ ಜಾತಿಗಳ ಬಿಡುಗಡೆಯ ಮಾರ್ಗ ಎಂದು ಒಂದು ಕಾಲಕ್ಕೆ ನಂಬಿದ್ದರು. ಇನ್ನು ಕೆಲವರು ಇದು ಶ್ರೇಷ್ಠ ಜಾತಿ ಎಂದು ನಂಬಿದ್ದಾರೆ. ಇನ್ನು ಕೆಲವರಿಗೆ ವಚನಗಳು ನಮ್ಮ ನಡುವಿನ ತಾರತಮ್ಯಗಳನ್ನು ಪ್ರತಿರೋಧಿಸಲು ಒದಗಿ ಬರುವ ಉದಾಹರಣೆಗಳಾಗಿವೆ ಮತ್ತೂ ಕೆಲವರಿಗೆ ಇದು ಏಕಾಕಿಯಾಗಿ ಒಂದೇ ಸಾರಿ ಅವತರಿಸಿದ ಧರ್ಮವಾಗಿದ್ದು ಎಲ್ಲಿಂದಲೋ ಬಂದು ಅವತರಿಸಿದ್ದೆಂದು ಅವರು ನಂಬುತ್ತಾರೆ. ವಚನ ತಾತ್ವಿಕತೆಯ ಜೀವಾಳವೆಂದರೆ ಬಹುತ್ವ. ಇದು ಅನೇಕ ಧಾರೆಗಳ ಸಂಗಮ. ಇಲ್ಲಿ ಮಾದಾರ ಧೂಳಯ್ಯನೂ ಇದ್ದಾನೆ, ಸೂಳೆ ಸಂಕವ್ವೆಯೂ ಇದ್ದಾಳೆ, ವಕ್ಕಲಿಗರ ಮುದ್ದಣ್ಣನೂ ಇದ್ದಾನೆ, ಹೆಂಡದ ಮಾರಿತಂದೆಯೂ ಇದ್ದಾನೆ, ಹಗ್ಗ ನುಲಿಯೋ ಕೊರಚರ ಚಂದಯ್ಯನೂ ಇದ್ದಾನೆ. ಇದನ್ನು ಒಂದು ಆವರಣ ಎಂದು ಓದುವುದರಲ್ಲಿಯೇ ಅನೇಕರನ್ನು ಹೊರಗೆ ನಿಲ್ಲಿಸಿಬಿಡುತ್ತೇವೆ. ಒಬ್ಬ ವಚನಕಾರನನ್ನು ಕೇಂದ್ರದಲ್ಲಿಟ್ಟು ಓದುವುದರಿಂದಲೂ ಇಂತಹದೇ ಹೊರಹಾಕುವಿಕೆ ಸಂಭವಿಸುತ್ತದೆ. ಇದೊಂದು ನಿರ್ಣಾಯಕ ಸಂಗತಿ. ಹೊರಗೆ ನಿಲ್ಲಿಸದೆ ಎಲ್ಲರನ್ನೂ ಒಳಗೆ ಕರೆದ ವಚನಕಾರರನ್ನು ಓದುವ ಅನೇಕ ಬಗೆಗಳನ್ನು ನಾವಿನ್ನೂ ಕಂಡುಕೊಳ್ಳಬೇಕಿದೆ. ಅಂತಹ ಒಂದು ಓದಿನ ಪಲ್ಲಟಕ್ಕೆ ವಚನಗಳು ಕಾಯುತ್ತಿವೆ.

ಈ ನೆಲದ ಸಾಂಸ್ಕೃತಿಕ ಆವರಣದಲ್ಲಿ ಅನೇಕ ಪಲ್ಲಟಗಳು ಸಂಭವಿಸುತ್ತಿವೆ. ಜ್ಞಾನದ ಹೊಸ ವಿಸ್ತರಣೆಗಳು ಸಂಭವಿಸಿವೆ. ಹೊಸ ಓದುಗ ಮತ್ತು ಕವಿಗಳು ಐಟಿ ವಲಯಗಳಿಂದ ಬರುತ್ತಿದ್ದಾರೆ. ಭಿನ್ನ ಬದುಕಿನ ಮಾದರಿಗಳು ಮುನ್ನೆಲೆಗೆ ಬರುತ್ತಿವೆ. ಅತಿ ಹೆಚ್ಚು ಅಂತರ್ಜಾತೀಯ, ಅಂತರ್ ಧರ್ಮೀಯ ಮದುವೆಗಳು ಈಗ ನಡೆಯುತ್ತಿರುವುದು ಈ ವಲಯದಲ್ಲಿಯೇ ಹೊರತು, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಅಲ್ಲ. ಅವು ಜಾತಿಯ ಮಹಾಕೂಪಗಳಾಗುತ್ತಿವೆ. ಹೊಸ ಗಾಳಿಯನ್ನು ನಾವೀಗ ನಿರೀಕ್ಷಿಸಬಹುದಾದ ಆವರಣಗಳು ನಮ್ಮ ಪಾರಂಪರಿಕೆ ಆವರಣಗಳಲ್ಲ ಎನ್ನುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.
**

(ಹಿರಿಯ ಕಲಾವಿದ ಅಕ್ಬರ್‌ ಪದಮ್‌ಸಿ ಹಾಗೂ ಸಾಂಪ್ರಾದಾಯಿಕ ಮಿನಿಯೇಚರ್‌ ಚಿತ್ರಗಳು)

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...