ಇವು ಕೇವಲ ಒಂದು ಹಳ್ಳಿಯ ಕಥೆಗಳಲ್ಲ...

Date: 19-09-2025

Location: ಬೆಂಗಳೂರು


"ಮುಖ್ಯಮಂತ್ರಿ ಸಿದ್ಧರಾಮಯ್ಯ ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ವಾರ್ಷಿಕ ₹ ಐದುಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಹಣವೇನೋ ಯಥೇಚ್ಛ ಬರುತ್ತದೆ. ಆದರೆ ಸುಸೂಕ್ತ ಮತ್ತು ಸುಸೂತ್ರ ಯೋಜನೆ - ಯೋಚನೆಗಳಿಲ್ಲದೇ 'ಗ್ರಾಮಿಣ ಕಲ್ಯಾಣ ಕರ್ನಾಟಕ' ವರ್ಷ ವರ್ಷವೂ ಹಿಂದುಳಿದು ಅನಾಥವಾಗುತ್ತಿದೆ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಲೇಖನವಿದು.

ಹೌದು ಇವು ಒಂದು ಹಳ್ಳಿಯ ಕಥೆಗಳಲ್ಲ. ಕಲ್ಯಾಣ ಕರ್ನಾಟಕ ಅರ್ಥಾತ್ ಹಳೆಯ ಹೈದ್ರಾಬಾದ್ ಕರ್ನಾಟಕದ ಬಹುತೇಕ ಊರುಗಳ ಕರುಳಿನ ಕಥೆಗಳು. ಮೂಲಭೂತ ನಾಗರಿಕ ಸೌಲಭ್ಯಗಳಿಲ್ಲದೇ ನರಳುತ್ತಿರುವ ಸಾವಿರಾರು ಹಳ್ಳಿಗಳ ಒಡಲಾಳದ ವ್ಯಥೆಗಳು. ಅಕ್ಷರಗಳ ಹಿಡಿತಕ್ಕೆ ಸಿಗದಷ್ಟು ಸಂಕಟದ ಸಂವೇದನೆಗಳು. 15.08.1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ದೇಶಕ್ಕೆ ಬಂದ ಸ್ವಾತಂತ್ರ್ಯ ಅಂದಿನ ನಮ್ಮ ಹೈದ್ರಾಬಾದ್ ಕರ್ನಾಟಕಕ್ಕೆ ಬರಲಿಲ್ಲ.

ದೇಶೀಯ ಆಳರಸ ನಿಜಾಮನಿಂದ 17.09.1948 ರಂದು ವಿಮೋಚನೆ ಪಡೆದದ್ದು. 'ಹೈದ್ರಾಬಾದ್ ಕರ್ನಾಟಕ' ಎಂಬ ಪರಕೀಯ ಹೆಸರು ವಚನ ಕಲ್ಯಾಣ ನೆಲದ ಭಾವಪ್ರಜ್ಞೆಗೆ ಉಚಿತ ಎನಿಸುತ್ತಿರಲಿಲ್ಲ. ಅದಕ್ಕೆಂದು 17.09.2019 ರ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನದಂದು "ಕಲ್ಯಾಣ ಕರ್ನಾಟಕ" ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮರು ನಾಮಕರಣ ಮಾಡಿದರು. ಅದು ಕೇವಲ ಹೆಸರಿನ ಬದಲಾವಣೆ ಆಯಿತು. ಹೊರತು, ಹದಗೆಟ್ಟ ಹೈದ್ರಾಬಾದ್ ಕರ್ನಾಟಕದ ನಿಟ್ಟುಸಿರಲ್ಲಿ ಯಾವ ಬದಲಾವಣೆಗಳು ಆಗಲಿಲ್ಲ. ನಮ್ಮ ಹಳ್ಳಿಗಳೆದೆಯ ಕಡಲ ತುಂಬ‌ ಕಾಡುವ ಪೀಡೆಗಳು ತೊಲಗಲಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ವಾರ್ಷಿಕ ₹ ಐದುಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಹಣವೇನೋ ಯಥೇಚ್ಛ ಬರುತ್ತದೆ. ಆದರೆ ಸುಸೂಕ್ತ ಮತ್ತು ಸುಸೂತ್ರ ಯೋಜನೆ - ಯೋಚನೆಗಳಿಲ್ಲದೇ 'ಗ್ರಾಮಿಣ ಕಲ್ಯಾಣ ಕರ್ನಾಟಕ' ವರ್ಷ ವರ್ಷವೂ ಹಿಂದುಳಿದು ಅನಾಥವಾಗುತ್ತಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಂತೂ ಇಲ್ಲಿಯ ಜಿಲ್ಲೆಗಳಿಗೆ ಶೋಚನೀಯ ಸ್ಥಾನ.

ನೆನಪಿರಲಿ; ಕಲ್ಯಾಣ ಕರ್ನಾಟಕವು ಇಬ್ಬರು ಮುಖ್ಯಮಂತ್ರಿಗಳನ್ನು ಮೂರುಬಾರಿ ಕಂಡಿದೆ. ಅದರಲ್ಲೂ ವೀರೇಂದ್ರ ಪಾಟೀಲರು ಎರಡು ಬಾರಿ ಮತ್ತು ಧರ್ಮಸಿಂಗ್ ಅವರು ಒಂದುಬಾರಿ ಮುಖ್ಯಮಂತ್ರಿ ಆಗಿದ್ದರು. ಧರ್ಮಸಿಂಗ್, ನಮ್ಮ ಜೇವರ್ಗಿ ವಿಧಾನಸಭಾ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿ ಹತತ್ರ ಅಷ್ಟೇಸಲ ಮಂತ್ರಿಯೂ ಆಗಿದ್ದರು. ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾವು ಹುಟ್ಟಿಬೆಳೆದ ಮಣ್ಣಿನ ಋಣ ತೀರಿಸಲಾದರೂ ಜೇವರ್ಗಿ ಮತಕ್ಷೇತ್ರ 'ನಂದನವನ' ಮಾಡಬಹುದಿತ್ತು.

ಕಡೆಯಪಕ್ಷ ಹತ್ತಾರು ಕೈಗಾರಿಕೆಗಳ ಆಡುಂಬೊಲ ಮಾಡಬಹುದಿತ್ತು. ಇನ್ನೇನು ಬೇಡ ಅರ್ಧ ಮತಕ್ಷೇತ್ರದ ಹಳ್ಳಿಗಳ ಕನಸಿನ ಕೂಸಾದ 'ಮಲ್ಲಾಬಾದಿ ಏತ ನೀರಾವರಿ ಯೋಜನೆ' ಇಂದಿಗೂ ಪೂರ್ಣಗೊಂಡಿಲ್ಲ. ಧರ್ಮಸಿಂಗ್ ತರುವಾಯ ಅವರ ಮಗ ಡಾ‌. ಅಜಯಸಿಂಗ್ ನಿರಂತರ ಮೂರನೇ ಬಾರಿ ಅದೇ ಜೇವರ್ಗಿ ಮತಕ್ಷೇತ್ರದ ಶಾಸಕರಾಗಿದ್ದಾರೆ. ಅಷ್ಟಲ್ಲದೇ ಏಳು ಜಿಲ್ಲೆಗಳ ವ್ಯಾಪ್ತಿಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಸಿಂಹಪಾಲು ಅಧಿಕಾರ ಮಂಡಳಿ ಅಧ್ಯಕ್ಷರ ಕೈಯಲ್ಲೇ ಇರುತ್ತದೆ‌. ಮೇಲಾಗಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಖಾತೆಯ ಸಚಿವ ಪ್ರಿಯಾಂಕ ಖರ್ಗೆ ಕಲಬುರ್ಗಿಯವರೇ ಇದ್ದಾರೆ. ಆದಾಗ್ಯೂ ಸಕಾರಾತ್ಮಕ ಫಲಿತಾಂಶಗಳು ಅದೇಕೆ ಫಲಿಸುತ್ತಿಲ್ಲವೆಂದು ಅರ್ಥವಾಗುತ್ತಿಲ್ಲ. ಇದಕ್ಕೆ ಜೇವರ್ಗಿಯ ಅಜಯಸಿಂಗ್ ಅವರ ತವರು ಮತಕ್ಷೇತ್ರಕ್ಕೆ ಸೇರಿದ ನನ್ನೂರು 'ಕಡಕೋಳ' ಗ್ರಾಮವೇ ಪ್ರಾತಿನಿಧಿಕ ನಿದರ್ಶನ. ನಾಗರಿಕ ಸೌಲಭ್ಯಗಳಿಲ್ಲದೇ ನರಳುತ್ತಿರುವ ನಮ್ಮೂರಿನ ನರಕಸದೃಶ ದೃಷ್ಟಾಂತಗಳು ಹತ್ತಾರು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನೇ ಇಲ್ಲಿ ಉಲ್ಲೇಖಿಸುವುದಾದರೆ...,

ಗ್ರಾಮ ಪಂಚಾಯ್ತಿ ಕೇಂದ್ರವಾಗಿರುವ ನಮ್ಮೂರಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. ಅದು ಸ್ಥಾಪನೆಯಾಗಿ ಹದಿನೆಂಟು ವರುಷಗಳು ಕಳೆದಿವೆ. ಅವತ್ತಿನಿಂದ ಇವತ್ತಿನವರೆಗೂ ಆ ಶಾಲೆಗೆ ವಿದ್ಯುತ್ತಿನ ಪರಿಚಯವೇ ಇಲ್ಲ. ಪವರ್ ಸಂಪರ್ಕ ವಂಚಿತ ಶಾಲೆ ಎಂಬ ಕಾರಣಕ್ಕೆ 'ಸ್ಮಾರ್ಟ್ ಕ್ಲಾಸ್' ಸೇರಿದಂತೆ ಅನೇಕ ಮಹತ್ವದ ಅವಕಾಶಗಳಿಂದಲೂ ಅದು ವಂಚಿತ. ಅದರಿಂದಾಗಿ ನಮ್ಮೂರ ಪ್ರೌಢಶಾಲೆಯ‌ ಆರೇಳು ಹಳ್ಳಿಗಳ ಸಾವಿರಾರು ಮಕ್ಕಳ ಭವಿಷ್ಯವೂ ವಂಚಿತಗೊಂಡಿದೆ. ಸಾರಿಗೆ ಸೌಕರ್ಯ ಇಲ್ಲದ ಕಾರಣ ಐದಾರು ಹಳ್ಳಿಗಳಿಂದ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ದಿನವೂ ಹರದಾರಿ ದೂರ ಕಾಲ್ನಡಿಗೆಯಲ್ಲೇ ಶಾಲೆಗೆ ಬರುತ್ತಾರೆ. ಶಿಕ್ಷಣದ ಹೊರತಾಗಿಯೂ ಈ ಮಕ್ಕಳ ಹಳ್ಳಿಗಳ ಬದುಕು ಇನ್ನಷ್ಟು ದುರ್ಭರ.

ಗ್ರಾಮೀಣ ಜನಾರೋಗ್ಯದ ಜೀವಾಳವೇ ಆಗಬೇಕಿರುವ 'ಆರೋಗ್ಯ ಉಪಕೇಂದ್ರ' ಹೆಸರಿಗೆಂಬಂತೆ ನಮ್ಮೂರಲ್ಲಿ ಅದರ ಕಟ್ಟಡವಿದೆ. ಮಹಿಳಾ ಸಿಬ್ಬಂದಿ ವಾಸಿಸಲು ಮೂಲಭೂತ ಸೌಕರ್ಯಗಳಿಲ್ಲದೇ ಅದು ಹುಟ್ಟಿದಾಗಿಂದಲೂ ಸಿಬ್ಬಂದಿ ವಾಸವಾಗಿಲ್ಲ. ಅಂತೆಯೇ ಅದರ ಸುತ್ತಲೂ ತಿಪ್ಪೇಗುಂಡಿ ಮತ್ತು ಹಂದಿಗಳ ಆವಾಸಸ್ಥಾನ. ಹೀಗಾಗಿ ಸಣ್ಣಪುಟ್ಟ ಜಡ್ಡು ಜಾಪತ್ರಿಗಳಿಗೆ ದೀಡು ಹರದಾರಿ ದೂರದ ಯಡ್ರಾಮಿಯ ಖಾಸಗಿ ದವಾಖಾನೆಗಳೇ ನಮ್ಮೆಲ್ಲ ಹಳ್ಳಿಗಳಿಗೆ ಗತಿ. ಅಂತೆಯೇ ಅಕ್ಷರ ಮತ್ತು ಆರೋಗ್ಯ ಆವಿಷ್ಕಾರಗಳ ಅನುಷ್ಠಾನಕ್ಕೆ ಸಮುದಾಯದ ಸ್ಪಂದನವೇ ಸಿಗಲಿಲ್ಲ.

ನಮ್ಮೂರ ಹೊರಗೆ ಹೆಣ್ಣುಮಕ್ಕಳ ಬಯಲು ಹೇಲಿಕೇರಿಗಳಿವೆ. ಸುಶಿಕ್ಷಿತ ಭಾಷೆಯಲ್ಲಿ ಅವು ರಸ್ತೆ ಬದಿಯ ಬಯಲು ಶೌಚಾಲಯಗಳು. ನಮ್ಮೂರ ಹೆಣ್ಣುಮಕ್ಕಳು ಮಲಮೂತ್ರ ವಿಸರ್ಜನೆ ಮಾಡಲು ಇವತ್ತಿಗೂ ಹೊತ್ತು ಮುಳುಗಿ ಕತ್ತಲೆಗಾಗಿ ಕಾಯುತ್ತಾರೆ. ಕಾರ್ಗತ್ತಲೆಯಲ್ಲೂ ಕಾರು, ಟ್ರ್ಯಾಕ್ಟರ್, ಮೊಟಾರ್ ಬೈಕ್, ಇತ್ಯಾದಿ ವಾಹನಗಳು ಉಗುಳುವ ಬೆಳಕಿನ ಕಾಟ. ಶೌಚಕ್ಕೆ ಕುಂತ ಮಹಿಳೆಯರು ಎದ್ದುಕುಂತು, ಎದ್ದು‌ಕುಂತು ಮಲವನ್ನು ನಿಯಂತ್ರಿಸಿ, ನಿಯಂತ್ರಿಸಿ ಮಲರೋಗ ಬಾಧೆಗೆ ತುತ್ತಾಗುತ್ತಾರೆ.

ಜಲವೊಂದೇ ಶೌಚಾಚಮನಕ್ಕೆ ಎಂಬ ವಚನದಂತೆ ನಮ್ಮೂರ ಜನಗಳು ಮತ್ತು ದನಗಳು ಕುಡಿಯುವ ಜಲವೊಂದೇ. ಊರಮುಂದೆಯೇ ಹಿರೇಹಳ್ಳ ತುಂಬಿ ಹರಿಯುತ್ತಿದ್ದರೂ ಪರಿಶುದ್ಧ ಕುಡಿಯುವ ನೀರಿನ ಬವಣೆ ಹಿಂಗಿಲ್ಲ. ನೀರೆಂಬ ಪದಾರ್ಥ ಸಿಕ್ಕರೆ ಸಾಕು ಅದು ಶುದ್ಧಾಶುದ್ಧ ಎಂಬ ಭೇದವೆಣಿಸದ ಯತಾರ್ಥತೆ ನಮ್ಮದು. ಈ ಬಾರಿಯ ರಣಮಳೆಯಿಂದಾಗಿ ಬೆಳೆಗಳೆಲ್ಲ ಕೊಳೆತಿವೆ. ನಮಗೆ ಅನಾವೃಷ್ಟಿಯ ಒಣ'ಬರ'ದಂತೆ ಅತಿವೃಷ್ಟಿಯ ಹಸೀ'ಬರ'ವೂ ಘೋರವೇ. ಇವು ಕೇವಲ ನನ್ನೂರ ಕತೆಗಳು ಮಾತ್ರವಲ್ಲ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಹಳ್ಳಿಗಳ ಗ್ರೌಂಡ್ ರಿಯಾಲಿಟಿ ಇನ್ನೂ ಭಯಾನಕ.

ಹೀಗಿರುವಾಗ ಅಭಿವೃದ್ಧಿಯಲ್ಲಿ ಹಳೇ ಮೈಸೂರು ಪ್ರಾಂತ್ಯದ ಜತೆ ನಮ್ಮ ಹೋಲಿಕೆ ಸಾಧ್ಯವಾಗದು. ಹಿಂದುಳಿದಿರುವಿಕೆಯ ಸಂಗೋಪನೆಯಿಂದಾಗಿ ನಮ್ಮ ಕಲ್ಯಾಣ ಕರ್ನಾಟಕ ಪ್ರದೇಶವು ದಕ್ಷಿಣಕ್ಕಿಂತ ಅಜಮಾಸು ಐವತ್ತು ವರ್ಷಗಳಷ್ಟು ಹಿಂದುಳಿದಿದೆ. ಇಂತಹ ಅನೇಕ ಸವಾಲುಗಳನ್ನು ಎದುರಿಸಲು ಸಾಂವಿಧಾನಿಕ 371 (ಜೆ) ಜೊತೆಗೆ ನಮ್ಮದೇ "ಕಲ್ಯಾಣ ಕರ್ನಾಟಕ ಗ್ರಾಮಾಭಿವೃದ್ಧಿ ನೀತಿ" ರಚನೆಯ ಅಗತ್ಯವಿದೆ. ಇನ್ನೂ ಮೊನ್ನೆಯಷ್ಟೇ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಈ ಸಚಿವಾಲಯದ ವ್ಯಾಪ್ತಿಗೆ ಬರಲಿವೆ. ಸಚಿವಾಲಯದ ಕೇಂದ್ರ ಕಚೇರಿ ಕಲಬುರಗಿಯಲ್ಲಿದ್ದರೆ ಹೆಚ್ಚು ಉಪಯುಕ್ತ. ಇದು ಅಕ್ಷರಶಃ ಸ್ವಾಗತಾರ್ಹ ನಿರ್ಣಯ. ತನ್ಮೂಲಕವಾದರೂ ನಮ್ಮ ಕಲ್ಯಾಣ ಕರ್ನಾಟಕ ನೆಲದ ಸಂವೇದನಾಶೀಲ ಅನನ್ಯತೆ ಮತ್ತು ಸಂಕಟಗಳನ್ನು ಗುರುತಿಸುವಂತಾಗಬೇಕಿದೆ.

371 (ಜೆ) ಕಲಮಿನಿಂದಾಗಿ ಮೆಡಿಕಲ್, ಎಂಜಿನಿಯರಿಂಗ್ ಸೀಟುಗಳ ಹಂಚಿಕೆ, ಉದ್ಯೋಗಗಳಲ್ಲಿ ಅವಕಾಶಗಳು ಸಿಗುತ್ತಿರುವುದು ಸಂತಸ. ದುರಂತವೆಂದರೆ ನಮ್ಮ ಗ್ರಾಮೀಣರು 'ಗುಳೆ' ಹೋಗುವುದನ್ನು ಯಾವ ಸರ್ಕಾರದಿಂದಲೂ ತಡೆಯಲಾಗಿಲ್ಲ. ಕಾರ್ಪೊರೇಟ್ ಮಾದರಿಯ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ., ಇನ್ನೂ ಮೊದಲಾದ ನಗರಮುಖಿ ಅಭಿವೃದ್ಧಿ ಯೋಜನೆಗಳ ಅಬ್ಬರ. ಅದು ಕೂಡದು ಎಂದರ್ಥವಲ್ಲ. ಆದರೆ ಕಲ್ಯಾಣ ಕರ್ನಾಟಕದ ಗ್ರಾಮಗಳು ದಿನೆದಿನೇ ಬಡತನ‌ ಮತ್ತು ಪಥನದ ಹಾದಿಯಲ್ಲಿವೆ.

ಅಧೋಮುಖಿ ಹಾದಿಯ ಹಳ್ಳಿಗಳ ಅಭಿವೃದ್ಧಿಗೆ ತುರ್ತುಚಿಕಿತ್ಸೆ ನಿಗಾಘಟಕದ ಅಗತ್ಯವಿದೆ. ಕೃಷ್ಣೆ ತುಂಬಿ ಹೊಲಗಳಲ್ಲಿ ಹರಿದಾಗ ಇನ್ನೇನು ನಮ್ಮ ಕಷ್ಟಗಳು ನಿವಾರಣೆ ಆದವು ಅಂದುಕೊಂಡೆವು. ಆದರೆ ಆಗಲಿಲ್ಲ. 371(ಜೆ) ಅನುಷ್ಠಾನಗೊಂಡಾಗ ನಿಸ್ಸಂದೇಹವಾಗಿ ನಮ್ಮ ಸಂಕಟಗಳ ಕಾಲ ಖಂಡಿತಾ ಖತಂ ಆಯಿತೆಂದುಕೊಂಡೆವು. 371(ಜೆ) ಜಾರಿಗೆ ಬಂದು ದಶಕವೇ ಕಳೆದು ಹೋಯಿತು. ಆದರೆ ದುರಿತನಿವಾರಕ ಚಿಕಿತ್ಸೆಯಿಲ್ಲದೇ ನಮ್ಮ ನರಳಾಟ ನಿಲ್ಲಲೇ ಇಲ್ಲ. ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ನಲವತ್ತೊಂದು ಎಂ. ಎಲ್. ಎ., ಹತ್ತಾರು ಎಂ. ಎಲ್.ಸಿ., ಐದಾರು ಸಂಸದರು, ನಿಗಮ ಮಂಡಳಿಗಳ ಗೂಟದ ಕಾರಿನ ಅಧ್ಯಕ್ಷರು, ಇನ್ನಿತರರು ಕಲ್ಯಾಣ ಕರ್ನಾಟಕ ಪ್ರತಿನಿಧಿಸುತ್ತಾರೆ. ಅಷ್ಟಲ್ಲದೇ ಕೇಂದ್ರದಲ್ಲೂ ಮಂತ್ರಿ ಪದವಿಗಳು. ಹೀಗೆ ಕಣ್ಣಿಗೆ ನೆದರಾಗುವಷ್ಟು ರಾಜಕೀಯ ಅವಕಾಶಗಳು. ಪ್ರಜಾಪ್ರಭುತ್ವ ನಾಚುವ ವೆಗ್ಗಳದ ರಾಜಕೀಯಪ್ರಭುತ್ವ. ಇದರಿಂದ ರಾಜಕಾರಣಿ ಹಾಗೂ ಅಧಿಕಾರಶಾಹಿ ಕುಟುಂಬಗಳ ಕಲ್ಯಾಣವಾಗಿದೆ. ಕೆಲವರಂತೂ ಬಿಸ್ಲೇರಿ ನೀರಲ್ಲೇ ಜಳಕ ಮಾಡುವಷ್ಟು, ಏಸಿ ಕಾರು, ಬೆಂಗಳೂರುವಾಸಿ ಬಂಗಲೆಗಳಲ್ಲಿ ಉಂಡುಟ್ಟು ನೆಮಲು ಹಾಕುವಷ್ಟು ಸುಖಾಸೀನ ಸಂಪನ್ನರು.

ನಿಜವಾದ ರಾಜಕೀಯ ಪ್ರಜ್ಞೆಯೇ ಇಲ್ಲದ ಹಳ್ಳಿಗಳ ಮೊಗಲಾಯಿ ಮಂದಿ ನಾವು. ಪಕ್ಷದ ಕಾರ್ಯಕರ್ತರಾಗಿ ಮಾತಾಡುವುದೇ ರಾಜಕೀಯ ವ್ಯಾಕರಣವೆಂಬ ರೂಢನಂಬಿಕೆ. ಹೀಗಾಗಿ ರಾಜಕಾರಣಿಗಳನ್ನು ಹಳಿದು ಪ್ರಯೋಜನವಿಲ್ಲ. ಎಲ್ಲದಕ್ಕೂ 'ಜಾಂದೇ ಚೋಡೋ' ಎಂಬ ಜೋಭದ್ರಗೇಡಿತನ ನಮ್ಮದು. ಸೌಲಭ್ಯಗಳನ್ನು ಹಕ್ಕಿನಿಂದ ದಕ್ಕಿಸಿಕೊಳ್ಳುವ ಹಕ್ಕಿನೊಡೆಯರಿಲ್ಲದೇ ಕಲ್ಯಾಣ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ದಿನೇ ದಿನೇ ಸೊರಗುತ್ತಲಿದೆ.
ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...

ಹರಿಹರ ಬಸ್ ನಿಲ್ದಾಣದಲ್ಲಿ ಕಳ್ಳರು ದೋಚಿದ ಪರ್ಸಿನಲ್ಲಿ ಇದ್ದದ್ದು ಹಣ ಮಾತ್ರವಲ್ಲ.

28-11-2025 ಬೆಂಗಳೂರು

"ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ...