ಜಾತಿ ಪದ್ಧತಿಯ ಮೈಮನಗಳು-ಹದಿಮೂರನೇ ಕಂತು

Date: 22-11-2020


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಹದಿಮೂರನೇ ಕಂತಿನ ಬರಹ ಇಲ್ಲಿದೆ.

ಕ್ರಿ.ಪೂ. ಆರನೆಯ ಶತಮಾನದಲ್ಲಿ ಏಳಿಗೆ ಹೊಂದತೊಡಗಿದ ಹೊಸ ಭೌತಿಕ ಪರಿಸರವು ಭಾರತದ ಇತಿಹಾಸದ ಮೇಲೆ ದೂರಗಾಮಿಯಾದ ಪರಿಣಾಮಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿತ್ತು. ಈ ವರೆಗೆ ನಾವು ನಡೆಸಿದ ಚರ್ಚೆ ವರ್ಣಧರ್ಮಕ್ಕಷ್ಟೇ ಸೀಮಿತವಾಗಿದ್ದುದರಿಂದ ಆ ಭೌತಿಕ ಪರಿಸರದ ಎಲ್ಲ ಆಯಾಮಗಳನ್ನೂ ಚರ್ಚೆಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಅದರ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ಅವಲೋಕಿಸುವುದು ಇದೀಗ ಅವಶ್ಯಕವಾಗಿದೆ. ಏಕೆಂದರೆ ಕ್ರಿ.ಶ. ನಾಲ್ಕನೆಯ ಶತಮಾನದ ನಂತರ ವಿಕಾಸ ಪಡೆಯತೊಡಗಿದ ಭೌತಿಕ ವ್ಯವಸ್ಥೆಯು ಇದರೊಂದಿಗಿನ ತುಲನೆಯಲ್ಲಿ ಮೂಲಭೂತ ವ್ಯತ್ಯಾಸಗಳನ್ನು ಹೊಂದಿತ್ತು. ಇಲ್ಲಿನ ಭಿನ್ನತೆಗಳನ್ನು ತಕ್ಕಮಟ್ಟಿಗೆ ಅರ್ಥೈಸಿಕೊಳ್ಳಲು ಈ ಅವಲೋಕನದ ನೆರವು ಅಗತ್ಯವಾಗಿದೆ.
ವಂಶ ಶುದ್ಧಿ ಹಾಗೂ ವರ್ಣಸಂಕರದ ಪ್ರಜ್ಞೆ ಬೆಳೆದುಬಂದುದನ್ನೂ ಲಿಂಗಸಂಬಂಧಗಳಲ್ಲಿ ಇವು ಬಹುದೂರದ ಪರಿವರ್ತನೆಗಳನ್ನು ಉಂಟುಮಾಡಿದ್ದನ್ನೂ ಈಗಾಗಲೇ ಚರ್ಚಿಸಿದ್ದೇವೆ. ಮೌರ್ಯರ ಕಾಲದಿಂದ ವಾಸ್ತುಕಲೆ ಮತ್ತು ಶಿಲ್ಪಕಲೆಗಳು ಸಾಧಿಸಿದ ಮುನ್ನಡೆಯನ್ನೂ ಕಳೆದ ಅಧ್ಯಾಯದಲ್ಲಿ ಸ್ಥೂಲವಾಗಿ ವಿವರಿಸಿದ್ದೇವೆ. ಈ ಭೌತಿಕ ಸಂರಚನೆಯ ಇತರ ವೈಶಿಷ್ಟ್ಯಗಳು ಕೆಳಕಂಡಂತಿವೆ.
ಭಾರತದಲ್ಲಿ ಮೊದಲ ಬಾರಿಗೆ ರಾಜ್ಯಸ್ಥಾಪನೆ ನಡೆದದ್ದು ಕ್ರಿ.ಪೂ. ಆರನೆಯ ಶತಮಾನದಲ್ಲಿ. ಇದಕ್ಕೆಂದು ಮಗಧ, ಕೋಸಲ, ಅವಂತಿ ಹಾಗೂ ವತ್ಸ ಜನಪದಗಳ ನಡುವೆ ನಡೆದ ಪೈಪೋಟಿಯಲ್ಲಿ ಕಡೆಗೆ ಮಗಧವು ಯಶಸ್ವಿಯಾಯಿತು. ಮೊದಲಿಗೆ ಅಂಗ ಜನಪದವನ್ನು ವಶಪಡಿಸಿಕೊಂಡ ಮಗಧವು ಎರಡನೆಯ ತಲೆಮಾರು ಕೊನೆಗೊಳ್ಳುವ ವೇಳೆಗೆ ಲಿಚ್ಛವಿ, ಕಾಶಿ ಹಾಗೂ ಕೋಸಲ ಜನಪದಗಳನ್ನು ತನ್ನ ವ್ಯಾಪ್ತಿಗೆ ತಂದುಕೊಂಡಿತ್ತು. ಹೀಗೆ ಮುಂದುವರೆದ ರಾಜ್ಯದ ಭೌಗೋಳಿಕ ವಿಸ್ತರಣೆ ನಂದವಂಶದ ಕಾಲದಲ್ಲಿ ಅಪಾರ ಹೆಚ್ಚಳವನ್ನು ಕಂಡು ವೌರ್ಯರ ಕಾಲಕ್ಕೆ ದಕ್ಷಿಣಭಾರತದ ಕೃಷ್ಣಾ, ತುಂಗಭದ್ರಾ ನದಿಗಳ ಕಣಿವೆಯ ವರೆಗೆ ಚೆಲ್ಲಿಕೊಂಡಿತು. ಅನಂತರ ಇತರೆಡೆಗಳಲ್ಲಿ ರಾಜ್ಯಗಳು ಏಳಿಗೆ ಪಡೆಯತೊಡಗಿದ್ದರಿಂದ ಮಗಧವು ಕ್ರಮೇಣ ಕ್ಷೀಣಿಸತೊಡಗಿದ್ದನ್ನು ಆಕರಗಳು ಸೂಚಿಸುತ್ತವೆ. ಭೌಗೋಳಿಕ ದೃಷ್ಟಿಯಿಂದ ಈ ಯುಗದ ರಾಜ್ಯಗಳ ವ್ಯಾಪ್ತಿ ಎಲ್ಲಿಯವರೆಗೆ ಹರಡಿತ್ತೋ ಅಲ್ಲಿಯವರೆಗಿನ ಎಲ್ಲ ಪ್ರದೇಶಗಳ ಮೇಲೂ ಆ ರಾಜ್ಯಗಳಿಗೆ ಸ್ವಾಮ್ಯವಿತ್ತೆಂದು ಇದರರ್ಥವಲ್ಲ. ತಮ್ಮ ಮೂಲ ನೆಲೆ ಹಾಗೂ ಆಸುಪಾಸಲ್ಲಿ ಅದಕ್ಕೆ ಹೊಂದಿಕೊಂಡಿದ್ದ ಭೂವಲಯಗಳಲ್ಲಿ ಇವರು ತಕ್ಕಮಟ್ಟಿನ ಪ್ರಭಾವ ಹೊಂದಿದ್ದರು. ಅದರಾಚೆಗೆ ದೂರದ ಪ್ರದೇಶಗಳಲ್ಲಿ ಅಲ್ಲಲ್ಲಿ ಕೆಲವು ಕ್ಷೇತ್ರಗಳನ್ನು ಮಾತ್ರ ತಮ್ಮ ಅಧೀನಕ್ಕೆ ತಂದುಕೊಳ್ಳುತ್ತಿದ್ದರು. ಯಾವ ಕ್ಷೇತ್ರಗಳನ್ನು ಈ ರೀತಿಯ ನಿಯಂತ್ರಣಕ್ಕೆ ತಂದುಕೊಳ್ಳಬೇಕು ಎಂಬುದು ಅಲ್ಲಿ ದೊರಕುವ ಸಂಪನ್ಮೂಲಗಳು ಹಾಗೂ ನೆಲ ಯಾ ಜಲಮಾರ್ಗದ ಸಾರಿಗೆ ವ್ಯವಸ್ಥೆಯ ಸ್ವರೂಪದಿಂದ ನಿಗದಿಯಾಗುತ್ತಿತ್ತು. ಅಂಥ ಎಲ್ಲ ಪ್ರದೇಶಗಳಲ್ಲಿಯೂ ರಾಜನು ನೇಮಿಸಿದ ವಿವಿಧ ಅಧಿಕಾರಿಗಳು ಆತನ ಪ್ರತಿನಿಧಿಗಳಾಗಿ ಆಡಳಿತ ನಡೆಸಿದ್ದರು. ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸ್ವಾಯತ್ತತೆ ಹೊಂದಿದ್ದವರು ರಾಜ್ಯದ ವ್ಯಾಪ್ತಿಗೆ ಬಂದ ಪ್ರದೇಶಗಳಲ್ಲಿ ಇರಲಿಲ್ಲ. ಇರಲೇ ಇಲ್ಲ ಎಂಬುದು ಅಸಹಜವೆನಿಸುತ್ತದೆ. ತಮ್ಮ ವರ್ಚಸ್ಸನ್ನು ಎತ್ತಿಹಿಡಿಯುವ ವರ್ಗಗಳು ಈ ಪ್ರದೇಶಗಳಲ್ಲಿ ಇದ್ದಿರಲೇ ಬೇಕು. ಆದ್ದರಿಂದ ಸ್ವಾಯತ್ತತೆ ಇರಲಿಲ್ಲ ಎಂಬ ಮಾತನ್ನು ಸ್ವಾಯತ್ತತೆಗೆ ರಾಜನೀತಿಯಲ್ಲಿ ಅಧಿಕೃತವಾದ ಮಾನ್ಯತೆ ಇರಲಿಲ್ಲ ಎಂದು ಅರ್ಥೈಸಿಕೊಳ್ಳತಕ್ಕದ್ದು.
ಹರಪ್ಪಾ, ಮೊಹೆಂಜೋ ದಾರೋ ಮುಂತಾದಲ್ಲಿನ ಆದಿಮ ನಗರಗಳು ಕೊನೆಗೊಂಡ ಬಳಿಕೆ ಹೊಸ ನಗರಗಳು ಬೆಳೆದುಬಂದದ್ದು ಕ್ರಿ.ಪೂ. ಆರನೆಯ ಶತಮಾನದಿಂದ ಈಚೆಗೆ. ಈ ನಗರಗಳು ಸಾಮಾನ್ಯವಾಗಿ ಕೋಟೆಯಂತ ವಿಶಾಲ ಗೋಡೆಗಳಿಂದ ಆವೃತ್ತ ವಾಗಿದ್ದವು. ಗೋಡೆಗಳ ಪ್ರವೇಶದ್ವಾರದಲ್ಲಿ ದ್ವಾರಪಾಲಕರಿದ್ದುದಕ್ಕೆ ಸೂಚನೆಗಳಿವೆ. ಈ ಗೋಡೆಗಳನ್ನು ಕೃತಕವಾದ ಹಳ್ಳವೊಂದು ಹೊರಗಿನಿಂದ ಸುತ್ತುವರೆದಿತ್ತು. ಹೀಗಾಗಿ ಪ್ರವೇಶದ ಮೇಲೆ ನಿಯಂತ್ರಣ ಏರ್ಪಟ್ಟಿದ್ದು ನಗರದ ನಿವಾಸಿಗಳು ಯಾರೆಂದು ಗುರುತಿಸುವುದು ಕಷ್ಟತರವಾಗಿರಲಿಲ್ಲ. ಹೊರಗಿನಿಂದ ವಿವಿಧ ಅಗತ್ಯಗಳಿಗೆಂದು ನಗರಕ್ಕೆ ಬಂದವರ ಮೇಲೆ ನಿಗಾ ವಹಿಸುವುದೂ ಸಾಧ್ಯವಿತ್ತು. ಈ ನಗರಗಳ ಆಗುಹೋಗುಗಳು ಅಲ್ಲಿನ ಅಧಿಕಾರಿಗಳ ಹಾಗೂ ಆರ್ಥಿಕವಾಗಿ ಪ್ರಬಲರಾಗಿದ್ದಂತ ವರ್ಗಗಳ ನಿಯಂತ್ರಣದಲ್ಲಿದ್ದವು. ನಗರಗಳು ಅಧಿಕಾರ, ಉತ್ಪಾದನೆ, ವಿನಿಮಯ, ವಾಣಿಜ್ಯ, ಶಿಕ್ಷಣ ಹಾಗೂ ಸೈನಿಕ ಕೇಂದ್ರಗಳಾಗಿ ಮತ್ತು ಸಂಚಾರಿಗಳು ಮಳೆಗಾಲದಲ್ಲಿ ನಾಲ್ಕು ತಿಂಗಳ ಕಾಲ ವಸತಿ ಹೂಡಿವ ಚಾತುರ್ಮಾಸದ ತಾಣಗಳಾಗಿ ನೆಲೆಗೊಂಡಿದ್ದವು. ಬೌದ್ಧ, ಜೈನ, ಆಜೀವಿಕ ಮೊದಲಾದ ಸಮಣಪಂಥಗಳ ಸಂಘಗಳಿಗೂ ಈ ನಗರಗಳು ನೆಲೆಯಾಗಿದ್ದವು. ಎಲ್ಲ ನಗರಗಳಲ್ಲಿಯೂ ಈ ಎಲ್ಲ ಚಟುವಟಿಕೆಗಳೂ ಜರುಗಿದ್ದವು ಎಂಬುದು ಇದರರ್ಥವಲ್ಲ. ಆದರೆ ಬಹುತೇಕ ನಗರಗಳು ಒಂದಕ್ಕಿಂತ ಹೆಚ್ಚು ಕಾರ್ಯಗಳಲ್ಲಿ ನಿರತವಾಗಿದ್ದುದರಿಂದ ಸಂಕೀರ್ಣ ಸ್ವರೂಪ ಹೊಂದಿದ್ದವು. ನಗರದ ನಿವಾಸಿಗಳು ಅನೇಕ ರೀತಿಯ ತೆರಿಗೆ ಹಾಗೂ ಶುಲ್ಕಗಳನ್ನು ಪಾವತಿ ಮಾಡಬೇಕಿತ್ತು. ಆದರೆ ಈ ನಗರಗಳಲ್ಲಿ ಮನೆಗಳ ಮೇಲೆ, ನೆಲದ ಮೇಲೆ ಯಾ ಅಂಗಡಿ ಮುಂಗಟ್ಟುಗಳ ಮೇಲೆ ಬಾಡಿಗೆ ವಸೂಲಿ ನಡೆಯುತ್ತಿದ್ದುದಾಗಿ ಎಲ್ಲಿಯೂ ಸೂಚನೆಗಳಿಲ್ಲ. ಐತಿಹಾಸಿಕ ದೃಷ್ಟಿಯಿಂದ ಇದೊಂದು ಮಹತ್ವದ ಅಂಶವಾಗಿದೆ.
ಕ್ರಿ.ಪೂ. ಆರನೆಯ ಶತಮಾನಕ್ಕಿಂತ ಹಿಂದೆ ಕೃಷಿಯಲ್ಲದೆ ಇತರ ಉತ್ಪಾದನಾ ಕಾರ್ಯಗಳಲ್ಲಿ ನಿರತರಾಗಿದ್ದವರ ಪೈಕಿ ನೇಕಾರರು, ಕಮ್ಮಾರರೇ ಮೊದಲಾದ ಲೋಹಗಾರರು, ಬಡಗಿಗಳು ಹಾಗೂ ಕುಂಬಾರರು ಪ್ರಮುಖರಾಗಿದ್ದರು. ಹೊಸ ಭೌತಿಕ ಪರಿಸರದಲ್ಲಿ ಉಪಭೋಗದ ಸ್ವರೂಪದಲ್ಲಿ ಆಮೂಲಾಗ್ರ ಪರಿವರ್ತನೆ ಉಂಟಾಗಿ ಉತ್ಪಾದನಾ ಕಾರ್ಯವು ವೈವಿಧ್ಯಮಯವಾಗಿ ಮಾರ್ಪಟ್ಟಿತು. ಸುಟ್ಟ ಹಾಗೂ ಸುಡದ ಇಟ್ಟಿಗೆಗಳು, ಬಿದಿರಿನ ಸಾಮಗ್ರಿಗಳು, ತೊಗಲಿನ ವಸ್ತುಗಳು, ಹೀಗೆ ಹಿಂದೆ ಆನುಷಂಗಿಕವಾಗಿ ಮಾತ್ರ ತಯಾರಾಗುತ್ತಿದ್ದ ವಸ್ತುಗಳಿಗೆ ಬೇಡಿಕೆ ಹೆಚ್ಚಿ, ಈ ಕಾರ್ಯದಲ್ಲೇ ನಿರತರಾದ ಕರ್ಮಿಗಳ ಒಕ್ಕೂಟಗಳು ಹುಟ್ಟಿಕೊಂಡವು. ನಗರಗಳಲ್ಲಿ ವಸ್ತ್ರ, ಲೋಹ, ಮರದ ಸಾಮಗ್ರಿಗಳು ಮತ್ತು ಮಡಕೆಕುಡಿಕೆಗಳು ಅಪಾರ ಪ್ರಮಾಣದಲ್ಲಿ ಅಗತ್ಯವಿದ್ದುದರಿಂದ ಅದಕ್ಕೆ ಸಂಬಂಧಿಸಿದ ಕರ್ಮಿಗಳೂ ಒಕ್ಕೂಟಗಳನ್ನು ಕಟ್ಟಿಕೊಂಡರು. ಇಂಥ ಒಕ್ಕೂಟಗಳನ್ನು ನಿಗಮಗಳು ಅಥವಾ ಶ್ರೇಣಿಗಳು ಎನ್ನುತ್ತಿದ್ದರು. ಅಂದಿನ ನಗರಗಳಲ್ಲಿ ಎಣ್ಣೆ ಉತ್ಪಾದಿಸುವ ತೈಲಪೀಶಕರೆಂಬ ಗಾಣಿಗರಿದ್ದರು, ನೀರಿನ ಯಂತ್ರಗಳನ್ನು ನಿರ್ಮಿಸುವ ಓದಯಾಂತ್ರಿಕರೆಂಬ ತಜ್ಞರಿದ್ದರು, ಸುಗಂಧತೈಲವನ್ನು ತಯಾರಿಸುವ ಗಂಧತೈಲಿಕರಿದ್ದರು. ಇಂಥ ಕಸುಬುಗಳನ್ನು ಕೈಗೆತ್ತಿಕೊಂಡ ಗುಂಪುಗಳನ್ನು ವೈದಿಕ ಯುಗದಲ್ಲಿ ಕಾಣೆವು. ಕಪಿಲವಸ್ತು ಕುರಿತು ಬೌದ್ಧರ ಮಹಾವಸ್ತುವಿನಲ್ಲಿ ನೀಡಲಾದ ವಿವರಣೆಯಂತೆ ಅಲ್ಲಿನ ಜೀವನಾಧಾರದ ಸ್ವರೂಪಗಳಲ್ಲಿ ಬೆರಗೆಬ್ಬಿಸುವ ವೈವಿಧ್ಯತೆಯಿತ್ತು. ಅಕ್ಕಸಾಲಿಗರು (ಸ್ವರ್ಣಕಾರ), ಅಸಂಸ್ಕೃತ ಚಿನ್ನದ ಕೆಲಸಗಾರರು (ಹೈರಣ್ಯಿಕ), ಪೊಟ್ಟಣಗಳನ್ನು ಮಾರುವವರು (ಪ್ರಾವಾರಿಕ), ಶಂಖದ ವಸ್ತುಗಳನ್ನು ತಯಾರಿಸುವವರು (ಶಂಖಿಕ), ಆನೆಯ ದಂತದ ಕೆಲಸಗಾರರು (ದಂತಕಾರ), ಮುತ್ತಿನ ಹಾರ ನಿರ್ಮಿಸುವವರು (ಮಣಿಕಾರ), ಕಲ್ಲಿನ ಕೆತ್ತನೆ ನಡೆಸುವವರು (ಪ್ರಾಸ್ತರಿಕ), ಸುಗಂಧದ್ರವ್ಯಗಳನ್ನು ಉತ್ಪಾದಿಸುವವರು/ಮಾರುವವರು (ಗಂಧಿಕ), ಉಣ್ಣೆವಸ್ತ್ರಗಳ ನೇಕಾರರು (ಕೋಶಾವಿಕ), ಗಾಣಿಗರು (ತೈಲಿಕ), ತುಪ್ಪದ ಗಡಿಗೆಗಳನ್ನು ಮಾಡುವವರು (ಘೃತಕುಂಡಿಕ), ಬೆಲ್ಲದ ಪಾಕ ತಯಾರಿಸುವವರು (ಗೌಲಿಕ), ಮದಿರೆಯ ಪಾತ್ರೆಗಳ ತಯಾರಿಕೆಯಲ್ಲಿ ನಿರತರಾದವರು (ವಾರಿಕ), ಹತ್ತಿಯ ವ್ಯಾಪಾರಿಗಳು (ಕರ್ಪಾಸಿಕ), ಮೊಸರು ಮಾರುವವರು (ದಧ್ಯಿಕ), ಸಿಹಿ ರೊಟ್ಟಿ ಮಾರುವವರು (ಪೂಪಿಕ), ಸಕ್ಕರೆ ತಯಾರಿಸುವವರು (ಖಂಡಕಾರಕ), ಸಿಹಿತಿನಿಸು ತಯಾರಿಸುವವರು (ಮೋದಕಕಾರಕ), ಬೆತ್ತದ ವಸ್ತುಗಳನ್ನು ನಿರ್ಮಿಸುವವರು (ಕಂಡುಕ), ಹಸಿ ಹಿಟ್ಟು ತಯಾರಿಸುವವರು (ಸಮಿತಕಾರಕ), ಉರಿಗಡಲೆ ಹಿಟ್ಟು ತಯಾರಿಸುವವರು (ಸಕ್ತುಕಾರಕ), ಹಣ್ಣು ಮಾರುವವರು (ಫಲವಾಣಿಜ), ಕಂದಮೂಲಗಳ ವ್ಯಾಪಾರ ನಡೆಸುವವರು (ಮೂಲವಾಣಿಜ), ಚೂರ್ಣ ತಯಾರಿಸುವವರು (ಚೂರ್ಣಕುಟ್ಟ), ಸುಗಂಧ ತೈಲ ಉತ್ಪಾದಿಸುವವರು (ಗಂಧತೈಲಿಕ), ಹೀಗೆ ಮುಂದುವರೆಯುವ ಮಹಾವಸ್ತಿವಿನ ಪಟ್ಟಿಯಲ್ಲಿ ಮೇಲೆ ಹೇಳಿದ್ದಲ್ಲದೆ ಸುಮಾರು ಐವತ್ತರಷ್ಟು ಇತರ ಕಸುಬುಗಳ ಉಲ್ಲೇಖ ಬರುತ್ತದೆ.
ದೀರ್ಘದೂರದ ವ್ಯಾಪಾರಜಾಲಗಳು ಕ್ರಿ.ಪೂ. ಆರನೆಯ ಶತಮಾನದಿಂದ ಈಚೆಗೆ ಅನೇಕ ಹಂತಗಳಲ್ಲಿ ನಿರ್ಮಾಣಗೊಂಡವು. ಉತ್ತರದ ಶ್ರಾವಷ್ಠಿಯಿಂದ ಮಹಾರಾಷ್ಟ್ರದ ಪ್ರತಿಷ್ಠಾನದವರೆಗೆ ಸಾಗಿದ್ದ ದಕ್ಷಿಣಾಪಥ ಹಾಗೂ ಬಿಹಾರದ ಚಂಪಾದಿಂದ ನೈಋತ್ಯದ ಪುಷ್ಪಪುರದ ವರೆಗೆ ಹರಿದಿದ್ದ ಉತ್ತರಾಪಥ ಅಂದಿನ ಪ್ರಮುಖ ವ್ಯಾಪಾರಮಾರ್ಗಗಳು. ಇವಲ್ಲದೆ ವ್ಯಾಪಾರಿಗಳ ನಿರಂತರ ಸಂಚಾರದಿಂದಾಗಿ ಇನ್ನೂ ಹತ್ತಾರು ಮಾರ್ಗಗಳು ಹುಟ್ಟಿಕೊಂಡವು. ಹೊಸ ಮಾರ್ಗಗಳು ಜನ್ಮ ಪಡೆಯುತ್ತಿದ್ದದ್ದು ಹೇಗೆ ಎಂಬುದನ್ನು ಬೌದ್ಧರ ಜಾತಕ ಕಥೆಯೊಂದರಲ್ಲಿ ಬಣ್ಣಿಸಲಾಗಿದೆ. ಅನೇಕ ಮಾಸಗಳ ಕಾಲ ಜರುಗುತ್ತಿದ್ದ ದೂರದ ಪ್ರಯಾಣಗಳನ್ನು ಸುಗಮಗೊಳಿಸಲು ಈ ಕಾಲದಲ್ಲಿ ವ್ಯಾಪಾರಿಗಳು ಸಾರ್ತವಾಹರಾಗಿ ಕೆಲಸ ಮಾಡುತ್ತಿದ್ದರು. ಸಾರ್ತವಾಹರು ದೊಡ್ಡ ಗುಂಪಾಗಿ ತಮ್ಮ ವ್ಯಾಪಾರ ಸಾಮಗ್ರಿಗಳನ್ನು ಅನೇಕ ಬಂಡಿಗಳಲ್ಲಿ ತುಂಬಿಕೊಂಡು ಆಹಾರ ಪದಾರ್ಥಗಳು ಹಾಗೂ ಕುಡಿಯುವ ನೀರಿನೊಂದಿಗೆ ಹೊರಡುತ್ತಿದ್ದರು. ಜಾತಕ ಕಥೆಯೊಂದರಲ್ಲಿ ಐನೂರು ಬಂಡಿಗಳ ಬೃಹತ್ತಾದ ಸಾರ್ತವಾಹ ಸಂಘದ ಪ್ರಸ್ತಾಪವಿದೆ. ಈ ಸಂಖ್ಯೆ ಅತಿಶಯೋಕ್ತಿಯೇ ಆಗಿರಬಹುದು. ಆದರೆ ಇದು ಅಂದು ಸಾರ್ತವಾಹರಿಗಿದ್ದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
ಬೌದ್ಧ, ಜೈನ, ಆಜೀವಿಕಗಳಂತಾ ಸಮಣಪಂಥಗಳ ಏಳಿಗೆಯೊಂದಿಗೆ ಧಾರ್ಮಿಕ ಜೀವನವು ಸಾಂಸ್ಥಿಕ ರೂಪ ಪಡೆದುಕೊಂಡದ್ದು ಈ ಕಾಲದಲ್ಲೇ ಆಗಿತ್ತು. ದೀಕ್ಷೆ ಪಡೆದು ಅರಣ್ಯದಲ್ಲಿ ವಾಸ್ತವ್ಯ ಹೂಡಿದ್ದ ಯಾ ಊರಿಂದ ಊರಿಗೆ ಸಂಚರಿಸುತ್ತಿದ್ದ ಒಬ್ಬೊಂಟಿ ಸನ್ಯಾಸಿಗಳು ಎಲ್ಲ ಪಂಥಗಳಲ್ಲಿಯೂ ಇದ್ದರು. ನಗರಗಳಲ್ಲಿ ಸಮಣ ಪರಂಪರೆಗಳು ಸಾಮಾನ್ಯವಾಗಿ ಸಂಘಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಇವರಿಗೆ ಶ್ರೇಷ್ಟಿ, ಗೃಹಪತಿ, ಸಾರ್ತವಾಹ ಮೊದಲಾದ ವ್ಯಾಪಾರಿ ವರ್ಗದವರ ಸಂಘಗಳೊಂದಿಗೆ ನಿಕಟ ಸಂಬಂಧವಿತ್ತು. ಅನೇಕ ಸಂದರ್ಭಗಳಲ್ಲಿ ಇವರು ರಾಜಾಶ್ರಯವನ್ನೂ ಪಡೆದಿದ್ದರು. ಮೊದಲನೆಯ ಸಹಸ್ರಮಾನ ಕೊನೆಗೊಳ್ಳುವ ವೇಳೆಗೆ ಶಿವನನ್ನು ಆರಾಧಿಸುವ ಪಾಶುಪತರು ಹಾಗೂ ವಿಷ್ಣುವಿನ ಆರಾಧಕರಾದ ಭಾಗವತರು ಉತ್ತರಭಾರತದ ಅನೇಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದರು. ಮುಂದೆ ಆಗಮಿಕ ಪರಂಪರೆಗಳಾಗಿ ಪರಿವರ್ತನೆ ಹೊಂದಿದ ಈ ಗುಂಪುಗಳ ಸಾಂಸ್ಥಿಕತೆಯ ಮೊದಲ ಹಂತವನ್ನು ಇಲ್ಲಿ ಗುರುತಿಸಬಹುದಾಗಿದೆ. ಸಂಸ್ಥೆಗಳಾಗಿ ಆವಿಷ್ಕಾರ ಪಡೆದ ಈ ಪರಂಪರೆಗಳು ಶಿಕ್ಷಣ, ಅಧ್ಯಯನ, ಆಚರಣೆ, ಸಭೆಸಮಾರಂಭಗಳೇ ಮೊದಲಾದ ಕಾರ್ಯಗಳಿಗೆಂದು ವಿವಿಧ ನಗರಗಳಲ್ಲಿ ತಮ್ಮದೇ ಆದ ನೆಲೆಗಳನ್ನು ಸ್ಥಾಪಿಸಿಕೊಂಡಿದ್ದವು. ತಕ್ಷಶಿಲೆ, ಶ್ರಾವಷ್ಠಿ, ಮಥುರಾ, ಸಾಂಚಿ, ಭಾರ್ಹುತ್, ಕಾರ್ಲೇ, ನಾಗಾರ್ಜುನಕೊಂಡ, ಅಮರಾವತಿ ಮೊದಲಾದ ನಗರಗಳು ಇಂಥ ಸಂಘಗಳ ವಿಕಾಸಕ್ಕೆ ಎಡೆಮಾಡಿಕೊಟ್ಟದ್ದನ್ನು ಇತಿಹಾಸಕಾರರು ಬಲು ಹಿಂದೆಯೇ ಗುರುತಿಸಿದ್ದಾರೆ.
ವೈದಿಕ ಯುಗದಲ್ಲಾಗಲಿ ಬುದ್ಧನ ಕಾಲದಲ್ಲಾಗಲಿ ಭಾರತದಲ್ಲಿ ಬರಹ ಪ್ರಚಾರದಲ್ಲಿರಲಿಲ್ಲ. ಅಶೋಕನ ಶಿಲಾ ಹಾಗೂ ಸ್ತಂಭ ಶಾಸನಗಳಲ್ಲಿ ಲಿಪಿಯ ಪ್ರಥಮ ರೂಪವನ್ನು ಕಾಣುತ್ತೇವೆ. ಭಾರತದ ಬಹುತೇಕ ಭಾಷೆಗಳ ಲಿಪಿಗಳು ನಾವಿಂದು ಬ್ರಾಹ್ಮೀ ಎಂದು ಕರೆಯುವ ಈ ಲಿಪಿಯಿಂದಲೇ ಬೆಳೆದು ಬಂದದ್ದೆಂದು ಶಾಸನ ಹಾಗೂ ಲಿಪಿಶಾಸ್ತ್ರ ತಜ್ಞರು ಪತ್ತೆಹಚ್ಚಿದ್ದಾರೆ. ಲಿಪಿಯ ಆಗಮನ ಇತಿಹಾಸದ ಬಹುದೊಡ್ಡ ಮೈಲಿಗಲ್ಲುಗಳಲ್ಲಿ ಒಂದು. ಭಾರತಕ್ಕಿಂತ ಮೊದಲು ಇದು ಪರ್ಶಿಯಾದಲ್ಲಿ ಕಾಣಿಸಿಕೊಂಡಿತ್ತು. ನೈಋತ್ಯ ಭಾರತದ ತಕ್ಷಶಿಲೆಯಂತ ನಗರಗಳ ನಿವಾಸಿಗಳಿಗೆ ಈ ಪರ್ಶಿಯನ್ ಬರಹ ಕುರಿತು ಅರಿವಿದ್ದಿರುವ ಸಾಧ್ಯತೆಯಿದೆ. ಕ್ರಿ.ಪೂ. ನಾಲ್ಕನೆಯ ಶತಮಾನದ ಆಸುಪಾಸಲ್ಲಿ ಜೀವಿಸಿದ್ದನೆಂದು ಊಹಿಸಲಾಗಿರುವ ಪಾಣಿನಿ ಈ ಪ್ರಾಂತ್ಯಕ್ಕೆ ಸೇರಿದವನು. ಲಿಪಿಗಳ ಅಸ್ತಿತ್ವ ಕುರಿತು ಅವನಿಗೆ ಗೊತ್ತಿತ್ತು. ಪರ್ಶಿಯಾದೊಂದಿಗಿನ ಸಂಪರ್ಕದಿಂದಲೇ ಅಶೋಕನ ಕಾಲದಲ್ಲಿ ಭಾರತವು ಬರಹದ ಆಗಮನವನ್ನು ಕಂಡದ್ದು ಎಂದು ಆತನ ಶಾಸನಗಳ ಹಾಗೂ ಪರ್ಶಿಯಾದ ಹಕ್ಷಮನೀಯರ ಶಾಸನಗಳ ತೌಲನಿಕ ಅಧ್ಯಯನ ನಡೆಸಿರುವ ಲಿಪಿತಜ್ಞರು ಹೇಳುತ್ತಾರೆ.
ಬೌದ್ಧಿಕ ಕ್ಷೇತ್ರದಲ್ಲಿಯೂ ಈ ಯುಗವು ಹಿಂದೆಂದಿಗಿಂತ ಮಹತ್ವದ ಸಾಧನೆಗಳನ್ನು ಕಂಡವು. ಸಾಂಖ್ಯ, ಯೋಗ, ನ್ಯಾಯ ಮತ್ತು ವೈಶೇಷಿಕ ದರ್ಶನಗಳ ಉದ್ಭವ ಈ ಕಾಲದಲ್ಲಿ ನಡೆಯಿತು. ಜೈನರ ಸ್ಯಾದ್ವಾದ ಯಾ ಅನೇಕಾಂತವಾದ ಮತ್ತು ಬೌದ್ಧರ ಶೂನ್ಯವಾದದಂತ ಪ್ರಮುಖ ದರ್ಶನಗಳು ಈ ಕಾಲದ ಬಳುವಳಿಗಳಾಗಿವೆ. ಬೌದ್ಧರ ಆರಂಭದ ತತ್ವಗಳ ಸ್ಪಷ್ಟವಾದ ನಿರೂಪಣೆಗೆಂದು ಅಶೋಕನ ಕಾಲದಲ್ಲಿ ಅಭಿಧರ್ಮಪೀಠಕವನ್ನು ಸಂಗ್ರಹಿಸಲಾಯ್ತು. ಕಾರ್ಯಕಾರಣ ಸಂಬಂಧದ ಶೋಧವು ಬುದ್ಧನ ಅತಿದೊಡ್ಡ ಕೊಡುಗೆಯಾಗಿದೆ. ಆತನ ಪ್ರತೀತ್ಯಸಮುತ್ಪಾದ ಎಂಬ ದರ್ಶನದಲ್ಲಿ ಹನ್ನೆರಡು ಹಂತಗಳುಳ್ಳ ಕಾರ್ಯಕಾರಣದ ಶೃಂಖಲೆಯಿದೆ. ಅವಿದ್ಯೆ (ಅಜ್ಞಾನ), ಸಂಸ್ಕಾರ (ಕರ್ಮಗಳ ಉತ್ಪತ್ತಿ), ವಿಜ್ಞಾನ (ವಿಷಯಗಳ ಪ್ರಜ್ಞೆ), ನಾಮ-ರೂಪ, ಷಡಾಯತನ (ಪ್ರಜ್ಞೆಗೆ ಮೂಲವಾದ ಪ್ರಂಚೇಂದ್ರಿಯಗಳು ಹಾಗೂ ಮನಸ್ಸು), ಸ್ಪರ್ಶ, ವೇದನಾ (ಅನುಭೂತಿ), ತೃಷ್ಣಾ (ತೃಷೆ), ಉಪದಾನ (ಗ್ರಹಣ), ಭವ (ಜೀವಸಂಚಲನೆ), ಜಾತಿ (ಜನಿಸುವುದು), ಜರಾ-ಮರಣ, ಇವೇ ಆ ಹನ್ನೆರಡು ಹಂತಗಳು. ಭಗವದ್ಗೀತೆಯಲ್ಲಿಯೂ ಕಾರ್ಯಕಾರಣ ಸಂಬಂಧದ ಚಿತ್ರಗಳಿವೆ. ಒಂದೆಡೆಯಲ್ಲಿ ಅನ್ನದಿಂದ ಜೀವರಾಶಿಗಳು ಉಂಟಾಗುತ್ತವೆ, ಅನ್ನವು ಮಳೆಯಿಂದ, ಯಜ್ಞದಿಂದ ಮಳೆ, ಕರ್ಮದಿಂದ ಯಜ್ಞ, ಬ್ರಹ್ಮದಿಂದ ಕರ್ಮ ಹಾಗೂ ಅಕ್ಷರದಿಂದ ಬ್ರಹ್ಮ ಎಂಬ ಶೃಂಖಲೆಯಿದೆ. ಮತ್ತೊಂದೆಡೆಯಲ್ಲಿ ವಿಷಯಗಳಿಂದ ಸಂಗ, ಸಂಗದಿಂದ ಕಾಮ, ಕಾಮದಿಂದ ಕ್ರೋಧ, ಕ್ರೋಧದಿಂದ ಸಮ್ಮೋಹ, ಸಮ್ಮೋಹದಿಂದ ಸ್ಮೃತಿಭ್ರಮಣೆ, ಸ್ಮೃತಿಭ್ರಮಣೆಯಿಂದ ಬುದ್ಧಿನಾಶ, ಬುದ್ಧಿನಾಶದಿಂದ ವಿನಾಶ ಎಂಬ ಇನ್ನೊಂದು ಶೃಂಖಲೆ ಕಂಡುಬರುತ್ತದೆ.
ಮಾನವನ ಬದುಕನ್ನು ಜೀವನಚರಿತೆಗೆ ಹೋಲುವಂಥ ರೀತಿಯಲ್ಲಿ ಜನನದಿಂದ ಮರಣದವರೆಗಿನ ವೃತ್ತಾಂತಗಳೊಂದಿಗೆ ಸೆರೆಹಿಡಿಯುವ ಪ್ರಪ್ರಥಮ ಪ್ರಯತ್ನವನ್ನು ಈ ಯುಗದಲ್ಲಿ ಕಾಣುತ್ತೇವೆ. ರಾಮನ ಕಥೆ ಹೇಳುವ ರಾಮಾಯಣ ಹಾಗೂ ಬುದ್ಧನ ಕಥೆ ಹೇಳುವ ಬುದ್ಧಚರಿತ ಈ ಸಾಲಿಗೆ ಸೇರಿದ ಕೃತಿಗಳು. ಬದುಕನ್ನು ಸಮಗ್ರವಾಗಿ ಅದರ ಎಲ್ಲ ಸಂಕೀರ್ಣತೆ ಮತ್ತು ಸೂಕ್ಷ್ಮತೆಯೊಂದಿಗೆ ಬಣ್ಣಿಸುವ ಪ್ರಯತ್ನವನ್ನು ಈ ಕೃತಿಗಳಲ್ಲಿ ನಡೆಸಲಾಗಿದೆ. ಮೌರ್ಯರಿಗಿಂತ ಹಿಂದಿನ ಕಾಲದಲ್ಲಿ ಇದಕ್ಕೆ ಸಮನಾದ ಕೃತಿಗಳು ದೊರಕುವುದಿಲ್ಲ. ಅಲ್ಲಿ ತ್ರಸದಸ್ಯು, ಜನಮೇಜಯ ಮೊದಲಾದ ಕೆಲವು ಯೋಧರ ಅಥವಾ ವಿಶ್ವಾಮಿತ್ರ, ಉದ್ದಾಲಕ ಆರುಣಿ ಇತ್ಯಾದಿ ಜ್ಞಾನಿಗಳ ಬದುಕಿನ ಬಿಡಿಯಾದ ಘಟನೆಗಳ ಚಿತ್ರಗಳು ಮಾತ್ರ ಸಿಗುತ್ತವೆ. ಬದುಕನ್ನು ನೋಡುವ ಕ್ರಮದಲ್ಲಿ ನಡೆದ ದೊಡ್ಡ ಪಲ್ಲಟವೊಂದರ ಪರಿಣಾಮವೇ ಈ ಹೊಸ ಕಥನಪ್ರಜ್ಞೆ ಎನ್ನಬಹುದು. ಇದರ ಇನ್ನೊಂದು ಮುಖವೇ ಓರ್ವ ವ್ಯಕ್ತಿಗಷ್ಟೇ ಸೀಮಿತವಾಗಿರದೆ ಅನೇಕ ತಲೆಮಾರುಗಳ ಕಥೆಯೊಂದನ್ನು ಹೇಳುವ ಮಹಾಭಾರತ. ಭೌತಿಕ ಪರಿಸರವು ಮಾತ್ರವಲ್ಲ, ಭೌತಿಕ ಪ್ರಜ್ಞೆಯೂ ಬದಲಾದುದಕ್ಕೆ ಕಾರ್ಯಕಾರಣ ಸಂಬಂಧದ ವಿವರಣೆ ಹಾಗೂ ಜೀವನದ ಸಮಗ್ರ ಕಥನ ಹೊಂದಿರುವ ರಾಮಾಯಣ, ಮಹಾಭಾರತ ಹಾಗೂ ಬುದ್ಧಚರಿತದಂತ ಕಥನಗಳು ನಿದರ್ಶನಗಳಾಗಿವೆ.
ಈ ಯಾವತ್ತು ವಿದ್ಯಮಾನಗಳು ಬುದ್ಧ, ಮಹಾವೀರರ ಕಾಲಕ್ಕಿಂತ ಹಿಂದೆ ಭಾರತದಲ್ಲಿ ಎಲ್ಲಿಯೂ ಇರಲಿಲ್ಲ. ಕ್ರಿ.ಶ. ನಾಲ್ಕನೆಯ ಶತಮಾನದ ನಂತರ ರೂಪುಗೊಳ್ಳತೊಡಗಿದ ಹೊಸ ಭೌತಿಕ ಪರಿಸರವು ಯಾವ ರೀತಿಯಲ್ಲಿ ಭಿನ್ನವಾಗಿತ್ತು ಎಂಬುದನ್ನು ಮೇಲಿನ ಚರ್ಚೆಯಿಂದ ಮೂಡಿಬರುವ ಚಿತ್ರದ ಬೆಳಕಲ್ಲಿಟ್ಟು ಸಮೀಕ್ಷಿಸಬೇಕಿದೆ.

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಹನ್ನೆರಡನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹನ್ನೊಂದನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಏಳನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂದನೇ ಕಂತು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...