ಜಾತಿ ಪದ್ಧತಿಯ ಮೈಮನಗಳು-ಹನ್ನೊಂದನೇ ಕಂತು

Date: 07-11-2020

Location: .


ಭಾರತದ ಜಾತಿ ವ್ಯವಸ್ಥೆಯ ಸಂಕೀರ್ಣತೆಯನ್ನು ಚರ್ಚಿಸುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ತಮ್ಮ ಪ್ರತಿವಾರದ ಅಂಕಣದ ಭಾಗವಾಗಿ 11ನೇ ಕಂತಿನ ಈ ಬರಹದಲ್ಲಿ ಕ್ರಿ.ಪೂ. ಆರನೆಯ ಶತಮಾನದ ನಂತರ ಮಹಿಳೆಯರ ಲೈಂಗಿಕತೆಯನನ್ನು ನಿಯಂತ್ರಣಕ್ಕೆ ಒಳಪಡಿಸುವ ಪ್ರಕ್ರಿಯೆ ಕುರಿತು ವಿವಿಧ ಧರ್ಮಗಳ ಆಲೋಚನೆಗಳನ್ನು ವಿಶ್ಲೇಷಿಸಿದ್ದಾರೆ.

ಕ್ರಿ.ಪೂ. ಆರನೆಯ ಶತಮಾನದ ನಂತರ ಮಹಿಳೆಯರ ಲೈಂಗಿಕತೆಯು ಹೆಚ್ಚಿನ ನಿಯಂತ್ರಣಕ್ಕೆ ಗುರಿಯಾದದ್ದು ಯಾವುದೇ ನಿರ್ದಿಷ್ಟ ಧಾರ್ಮಿಕ ಪರಂಪರೆಯೊಂದರ ಬಳುವಳಿಯಲ್ಲ. ಅಂದಿನ ಬಹುತೇಕ ಪರಂಪರೆಗಳಲ್ಲಿ ಇದಕ್ಕೆ ಸ್ವೀಕೃತಿಯಿತ್ತು. ನಿರ್ದಿಷ್ಟವಾದ ಐತಿಹಾಸಿಕ ಸಂದರ್ಭವೊಂದರಲ್ಲಿ ಹುಟ್ಟಿಕೊಂಡ ಮನೋಧರ್ಮವಾಗಿ ಇದನ್ನು ಕಾಣಬೇಕಿದೆ.

ಲಿಂಗ ಸಂಬಂಧಗಳ ಕುರಿತು ಬೌದ್ಧರ ಅಥವಾ ಕಲ್ಪಸೂತ್ರಗಳ ಬ್ರಾಹ್ಮಣರ ನಿಲುವುಗಳಲ್ಲಿ ಕಾಣುವುದಕ್ಕಿಂತ ಭಿನ್ನವಾದ ಚಿತ್ರವನ್ನೇನೂ ನಾವು ಜೈನರಲ್ಲಿ ಕಾಣುವುದಿಲ್ಲ. ಅಲ್ಲಿಯೂ ಮಹಿಳೆಯರು ಅಲಕ್ಷ್ಯಕ್ಕೆ ಗುರಿಯಾದುದ್ದನ್ನೇ ಕಾಣುತ್ತೇವೆ. ಮಹಾವೀರ ದಿಗಂಬರನಾಗಿದ್ದ. ಅವನ ಸಮಕಾಲೀನರಾದ ಇತರ ಜೈನರಲ್ಲಿ ಅನೇಕರು ದಿಗಂಬರರಾಗಿದ್ದಿರಬಹುದು. ವಸ್ತ್ರಧಾರಿಗಳಾದ ಜೈನರೂ ಅಂದು ಇದ್ದಿರಬಹುದಾದ ಸಾಧ್ಯತೆಯಿದೆ. ಜೈನರಲ್ಲಿ ಶ್ವೇತಾಂಬರ ಹಾಗೂ ದಿಗಂಬರ ಎಂಬ ಭೇದವು ಕ್ರಿ.ಪೂ. ಆರನೆಯ ಶತಮಾನದಷ್ಟು ಹಳೆಯದಲ್ಲ. ಆದರೆ ಕ್ರಿ.ಪೂ. ಆರನೆಯ ಶತಮಾನದಲ್ಲಿಯೂ ಜೈನ ದೀಕ್ಷೆ ಪಡೆದ ಮಹಿಳೆಯೋರ್ವಳು ದಿಗಂಬರಿಯಾಗಿದ್ದಳು ಎಂದು ಯಾವು ಮೂಲಗಳೂ ಹೇಳುವುದಿಲ್ಲ.

ಹೀಗಿರುವಾಗಲೂ ಜೈನ ಧರ್ಮವು ಮಹಿಳೆಯರಿಗೆ ದೀಕ್ಷೆ ನೀಡುವುದನ್ನು ನಿಷೇಧಿಸಲಿಲ್ಲ. ಅನಂತರ ಶ್ವೇತಾಂಬರ-ದಿಗಂಬರ ಭೇದವು ತಲೆದೋರಿದಾಗಲೂ ಜೈನರಲ್ಲಿ ಮಹಿಳೆಯರು ದೀಕ್ಷೆ ಪಡೆದು ಆರ್ಯಿಕೆ ಎಂಬ ಪದವಿಯನ್ನು ಪಡೆಯುತ್ತಿದ್ದರು. ಆದರೆ ದಿಗಂಬರರಲ್ಲಿ ಅಂಥ ಮಹಿಳೆಯರು ಗಂಡಸರಂತೆ ವಸ್ತ್ರವನ್ನು ತ್ಯಜಿಸುವ ಪದ್ಧತಿಗೆ ಮನ್ನಣೆ ಇರಲಿಲ್ಲ. ದೀಕ್ಷೆಯಿಂದ ದಿಗಂಬರಿಯಾದರೂ ಆಕೆ ಆಚಾರದಿಂದ ವಸ್ತ್ರಧಾರಿಯೇ ಆಗಿದ್ದಳು. ಮಾತ್ರವಲ್ಲ, ಮಹಿಳೆಯು ಕೇವಲ ಜ್ಞಾನ ಹೊಂದಲು ಯೋಗ್ಯಳಲ್ಲ ಎಂಬ ಧೋರಣೆಯೂ ಜೈನರಲ್ಲಿ ಮೊದಲಿನಿಂದಲೂ ಮನೆ ಮಾಡಿತ್ತು.

ಜೈನ ಪುರಾಣಗಳಲ್ಲಿ ಓರ್ವ ಮಹಿಳೆ ಕೇವಲ ಜ್ಞಾನ ಪಡೆದುದ್ದಾಗಿ ಹೇಳಲಾಗಿದೆ. ಈಕೆ ಜೈನರ ದೊಡ್ಡ ಸಾಧಕಿಯರಲ್ಲಿ ಓರ್ವಳು. ಅರವತ್ತ ಮೂರು ಮಂದಿ ಶಲಾಕಪುರುಷರಲ್ಲಿ ಓರ್ವಳು ಮಾತ್ರವಲ್ಲ, ಈ ಅರವತ್ತ ಮೂರರಲ್ಲೇ ವಿಶೇಷ ಸ್ಥಾನ ಹೊಂದಿದ್ದ ಇಪ್ಪತ್ತ ನಾಲ್ಕು ತೀರ್ಥಂಕರರಲ್ಲಿಯೂ ಓರ್ವಳು. ಆದರೆ ಶಲಾಕಪುರುಷರು ಶಲಾಕ “ಪುರುಷ”ರಾಗಿದ್ದರು. ಈ ಪುರುಷರ ನಡುವಲ್ಲಿ ಹೆಣ್ಣೊಬ್ಬಳಿಗೆ ಸ್ಥಾನವಿರಲಿಲ್ಲ. ಹೀಗಾಗಿ, ಈ ಹೆಣ್ಣನ್ನು ಪುರಾಣಗಳು ಗಂಡಾಗಿಸಿಬಿಟ್ಟವು. ಮಲ್ಲಿ ಎಂಬ ಹೆಣ್ಣು ಮಲ್ಲಿನಾಥ ಎಂಬ ಗಂಡಾದಳು. ಶ್ವೇತಾಂಬರರು ಈ ಕಥೆಯನ್ನು ಒಪ್ಪಿಕೊಳ್ಳುತ್ತಾರೆ. ಆದರೆ ದಿಗಂಬರರಲ್ಲಿ ಈ ಕಥೆಗೆ ಸ್ವೀಕೃತಿಯಿಲ್ಲ. ಅವರ ಹೇಳಿಕೆಯಂತೆ ಮಲ್ಲಿನಾಥನು ಗಂಡಾಗಿಯೇ ಅವತರಿಸಿದ್ದು.

ಅಲೆಕ್ಸಾಂಡರನ ಹಲ್ಲೆಯ ಬಳಿಕ ಭಾರತಕ್ಕೆ ಆಗಮಿಸಿದ ಮೆಗಸ್ಥನೀ ಮೊದಲಾದ ಗ್ರೀಕ್ ಯಾತ್ರಿಕರು ಮಹಿಳೆಯರ ಕುರಿತು ನೀಡುವ ವಿವರಣೆಗಳು ಅಪಾರ ಗಮನ ಸೆಳೆಯುವಂಥದ್ದಾಗಿವೆ. ಕೆಲವು ವಿವರಣೆಗಳು ಅಂದಿನ ಆಚಾರಗಳ ಕುರಿತಾಗಿ ಮಾಹಿತಿ ಒದಗಿಸುತ್ತವೆ. ಉದಾಹರಣೆಗೆ, ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಏಳು ವಯಸ್ಸಾದ ಕೂಡಲೆ ಮದುವೆ ಮಾಡಿಸಲಾಗುತ್ತಿತ್ತು ಎಂದು ಅರಿಯನ್ ಹೇಳುತ್ತಾನೆ. ಎಲ್ಲ ಜನಾಂಗಗಳ ನಡುವಲ್ಲೂ ಇದೇ ಕ್ರಮವು ನೆಲೆಗೊಂಡಿತ್ತೆಂದು ಇದರ ಅರ್ಥವಲ್ಲ. ಆದರೆ ಗ್ರೀಕರಿಗೆ ಮಾಹಿತಿ ಒದಗಿಸಿದ ವರ್ಗಕ್ಕೆ ಸೇರಿದವರ ನಡುವಲ್ಲಿ ಇಂಥ ಬಾಲ್ಯ ವಿವಾಹವು ಮೌರ್ಯರ ಕಾಲಕ್ಕಾಗಲೇ ತಕ್ಕಮಟ್ಟಿಗೆ ನಡೆಯತೊಡಗಿತ್ತೆಂದು ಅರಿಯನ್‍ನ ಹೇಳಿಕೆಯಿಂದ ಊಹಿಸಬಹುದಾಗಿದೆ.

ಈ ವರ್ಗಕ್ಕೆ ಸೇರಿದ ಜನರಲ್ಲಿ ಅನೇಕರು ಮಹಿಳೆಯರ ಚಾರಿತ್ರ್ಯದ ಬಗ್ಗೆ ಆರೋಗ್ಯಕರವಲ್ಲದ ಧೋರಣೆಗಳನ್ನು ಪೋಷಿಸುವವರಾಗಿದ್ದರು ಎಂದು ಗ್ರೀಕ್ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಹೇಳಬಹುದಾಗಿದೆ. ಉದಾಹರಣೆಗೆ, ಭಾರತದಲ್ಲಿ ಗೃಹಿಣಿಯರು ಸ್ವಾಭಾವಿಕವಾಗಿಯೇ ಹಾದರದಲ್ಲಿ ನಿರತರಾಗಿರುತ್ತಾರೆ, ಈ ಕಾರಣದಿಂದ ಅವರ ಮೇಲೆ ಬಿಗಿಯಾದ ನಿಯಂತ್ರಣ ಏರ್ಪಡಿಸುವುದು ಅನಿವಾರ್ಯವೇ ಆಗುತ್ತದೆ ಎಂದು ಮೆಗಸ್ಥನೀ ತನ್ನ ಇಂಡಿಕಾ ಎಂಬ ಗ್ರಂಥದಲ್ಲಿ ಹೇಳಿದ್ದಾನೆ. ಮೆಗಸ್ಥನೀನ ಗ್ರಂಥವು ನಮಗೆ ಲಭ್ಯವಾಗಿಲ್ಲ. ಅದರಲ್ಲಿ ಹೇಳಿದ ಅನೇಕ ಸಂಗತಿಗಳನ್ನು ಸ್ಟ್ರಾಬೋ ತನ್ನ ಕೃತಿಯಲ್ಲಿ ಉದ್ಧರಿಸಿದ್ದಾನೆ. ಅದರಂತೆ “The wives prostitute themselves unless they are compelled to be chaste.” ಎಂಬುದು ಮೆಗಸ್ಥನೀನ ಮಾತು.

ಲಿಂಗ ಸಂಬಂಧಗಳಲ್ಲಿ ಗಂಡಾಳ್ವಿಕೆಯ ಅಂಶವು ದೊಡ್ಡ ಪ್ರಮಾಣದಲ್ಲಿ ಹಾಸುಹೊಕ್ಕಾಗಿರುವ ವ್ಯವಸ್ಥೆಯೊಂದನ್ನು ಇಂಥ ಗೃಹೀತಗಳು ತೋರಿಸುತ್ತವೆ. ಗಂಡಿನ ನಿಯಂತ್ರಣ ಇಲ್ಲದಿದ್ದರೆ ಹೆಣ್ಣು ಸಹಜವಾಗಿಯೇ ಹಾದರ ನಡೆಸುವಳು ಎಂಬುದು ರೋಗಗ್ರಸ್ಥ ನಿಲುವೆಂದು ಪ್ರತ್ಯೇಕ ಹೇಳಬೇಕಿಲ್ಲ. ಈ ನಿಯಂತ್ರಣವನ್ನು ಬಹುಶಃ ಬಾಲ್ಯ ವಿವಾಹದ ಮೂಲಕ ಸಾಧಿಸಲಾಗುತ್ತಿತ್ತು.

ಹೆಣ್ಣು ಮಗಳ ವಿವಾಹವು ಋತುಮತಿಯಾಗುವ ಮುನ್ನವೇ ನಡೆಯಬೇಕೆಂದು ಗೌತಮ ಧರ್ಮಸೂತ್ರ ನಿರ್ದೇಶಿಸುತ್ತದೆ. ಅದನ್ನು ನಡೆಸದ ತಂದೆಯು ದೋಷಿಯಾಗುತ್ತಾನೆ ಎಂದು ಅಲ್ಲಿ ಹೇಳಲಾಗಿದೆ. ತಂದೆಯ ಮೇಲೆ ಮಾನಸಿಕವಾದ ಒತ್ತಡ ಹೇರುವಂಥ ಮಾತುಗಳನ್ನೂ ಗೌತಮ ಧರ್ಮಸೂತ್ರದಲ್ಲಿ ಕಾಣಬಹುದು. ಮೂರು ಋತುಚಕ್ರಗಳು ಕಳೆದರೂ ವಿವಾಹವಾಗದೆ ಉಳಿದಲ್ಲಿ ಅಂಥ ಹೆಣ್ಣುಮಕ್ಕಳು ತಂದೆ ನೀಡಿದ ಒಡವೆಗಳನ್ನೆಲ್ಲ ತ್ಯಜಿಸಿ ಯಾವುದೇ ನಿಂದೆಗೆ ಪಾತ್ರನಾಗಿರದ ವ್ಯಕ್ತಿಯೋರ್ವನನ್ನು ವಿವಾಹವಾಗಬಹುದು.

ಬೌಧಾಯನ ಧರ್ಮಸೂತ್ರದ ಪ್ರಕಾರ, ಹುಡುಗಿಯ ವಿವಾಹವು ಇದಕ್ಕಿಂತ ಚಿಕ್ಕ ವಯಸ್ಸಿನಲ್ಲಿಯೇ ಆಗಬೇಕು. ನಗ್ನಿಕೆಯಾಗಿರುವಾಗಲೇ, ಅಂದರೆ ವಸ್ತ್ರ ಧರಿಸಲು ಗೊತ್ತಿರದೆ ಬೆತ್ತಲೆಯಾಗಿರುವ ಪ್ರಾಯದಲ್ಲೇ ಅವಳನ್ನು ಓರ್ವ ಬ್ರಹ್ಮಚಾರಿಗೆ ನೀಡಬೇಕೆಂದು ಅಲ್ಲಿ ವಿಧಿಸಲಾಗಿದೆ. ರಜಸ್ವಲೆಯನ್ನು ಮದುವೆ ಮಾಡಿಸದೆ ಮನೆಯಲ್ಲಿ ನಿಲ್ಲಿಸಬಾರದು. ಋತು ಮೂಡಿ ಮೂರು ವರ್ಷಗಳ ವರೆಗೆ ಮಗಳ ವಿವಾಹ ನಡೆಸದ ತಂದೆ ಭ್ರೂಣಹತ್ರ್ಯೆ ನಡೆಸಿದ ದೋಷಕ್ಕೆ ತುತ್ತಾಗುತ್ತಾನೆ.

ವಸಿಷ್ಠ ಧರ್ಮಸೂತ್ರದಲ್ಲಿಯೂ ಹುಡುಗಿಯ ವಿವಾಹವು ನಗ್ನಿಕೆಯಾಗಿರುವಾಗಲೇ ನಡೆಯಬೇಕೆಂದು ನಿರ್ದೇಶಿಸಲಾಗಿದೆ. ಗೌತಮ ಧರ್ಮಸೂತ್ರದಲ್ಲಿ ಹೇಳುವಂತೆಯೇ ಋತು ಆರಂಭಗೊಂಡು ಮೂರು ವರ್ಷಗಳ ಕಾಲ ವಿವಾಹವಾಗದೆ ಉಳಿದಲ್ಲಿ ಹುಡುಗಿಯು ತನಗೆ ಹೊಂದಾಣಿಕೆಯಾಗುವ ಗಂಡನನ್ನು ಸ್ವತಃ ಆಯ್ಕೆ ಮಾಡಿಕೊಳ್ಳಬಹುದೆಂದು ವಸಿಷ್ಠ ಧರ್ಮಸೂತ್ರವೂ ಹೇಳುತ್ತದೆ. ರಜಸ್ವಲೆಯಾದ ಬಳಿಕ ಆಕೆಯನ್ನು ಬಯಸಿ ಗಂಡಸರು ವಿವಾಹದ ಅಭ್ಯರ್ತನೆ ನಡೆಸತೊಡಗಿದ ಮೇಲೆ ಇನ್ನೂ ವಿವಾಹ ನಡೆಸದಿದ್ದರೆ ,ಅಂತಹ ತಂದೆ ತಾಯಿಯರು ದೋಷಿಗಳಾಗುತ್ತಾರೆ. ಎಷ್ಟು ಋತುಗಳು ಕಳೆದವೋ ಅಷ್ಟರ ಸಂಖ್ಯೆಯಲ್ಲಿ ಭ್ರೂಣಹತ್ಯೆ ನಡೆಸಿದ ದೋಷ ಇವರದಾಗುತ್ತದೆ.

ಈ ರೀತಿಯ ಅನೇಕ ನಿರ್ದೇಶ ಹಾಗೂ ಬೆದರಿಕೆಗಳ ಮೂಲಕ ಹೆಣ್ಣು ಮಕ್ಕಳ ಬಾಲ್ಯ ವಿವಾಹದ ಪದ್ಧತಿಯನ್ನು ಧರ್ಮಸೂತ್ರಗಳು ಪೋಷಿಸಿದವು. ಸಣ್ಣಂದಿನಲ್ಲೇ ದಾಂಪತ್ಯಕ್ಕೆ ಗುರಿಯಾದ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ನಿಯಂತ್ರಿಸುವುದು ಕಷ್ಟತರವಾಗಿರಲಿಲ್ಲ. ಇಲ್ಲಿ ಹೆಣ್ಣಿನ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲಾಗಿದೆ ಎಂಬ ಧ್ವನಿಯನ್ನುಂಟು ಮಾಡುವ ರೀತಿಯಲ್ಲಿ ಧರ್ಮಸೂತ್ರಕಾರರು ವಿಷಯವನ್ನು ಮಂಡಿಸಿದ್ದಾರೆ ಎಂಬುದು ಕುತೂಹಲಕರ. ತಂದೆ ವಿವಾಹ ನಡೆಸದಿದ್ದರೆ ತಾನು ಖುದ್ದಾಗಿ ವರನನ್ನು ಹುಡುಕಿಕೊಳ್ಳಬಹುದು ಎಂಬ ಹೇಳಿಕೆಯು ಈ ದೃಷ್ಟಿಯಿಂದ ಮಹತ್ವದ್ದು.

ಮಹಿಳೆಯರ ಲೈಂಗಿಕತೆಯ ಮೇಲೆ ನಿಯಂತ್ರಣ ಏರ್ಪಡಿಸಿದ್ದರ ಹಿಂದಿನ ನಿಜವಾದ ಕಾರಣ ಯಾವುದು? ಈವರೆಗೆ ಸಮೀಕ್ಷಿಸಿದ ಮೂಲಗಳಲ್ಲಿ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವೊಂದನ್ನು ಎಲ್ಲಿಯೂ ಕಾಣಲಾರೆವು. ಆಧುನಿಕ ಯುಗದಲ್ಲಿ ಮಾರ್ಕ್ಸ್‌ವಾದ ಪ್ರೇರಿತ ಮಾನವಶಾಸ್ತ್ರವು ಈ ಕುರಿತಾಗಿ ಊಹೆಯೊಂದನ್ನು ಮಂಡಿಸಿದೆ. ಭೂಸ್ವಾಮ್ಯಕ್ಕೆ ಒತ್ತು ನೀಡುವ ಆರ್ಥಿಕ ವ್ಯವಸ್ಥೆಯೊಂದು ಬೇರೂರಿಕೊಂಡಾಗ ಆದಾಯಕ್ರಮದ ಪ್ರಶ್ನೆಗಳು ತಲೆದೋರುತ್ತವೆ. ಆಸ್ತಿಯು ನ್ಯಾಯಸಮ್ಮತವಾದ ವಾರಸುದಾರರಿಗೆ ಹಸ್ತಾಂತರಗೊಳ್ಳಬೇಕು ಎಂಬ ನೀತಿಯು ಜಾರಿಗೊಳ್ಳುವ ಸಂದರ್ಭ ಇದಾಗಿದೆ. ನ್ಯಾಯ ಸಮ್ಮತ ವಾರಸುದಾರ ಎಂದರೆ ತನ್ನ ಪತ್ನಿಯಲ್ಲಿ ತನ್ನಿಂದ ಹುಟ್ಟಿದ ಕೂಸಾಗಬಹುದು, ಅಥವಾ ತನ್ನ ಇಚ್ಛೆಯಿಂದಲೋ ಅನುಮತಿಯಿಂದಲೋ ಕೈಗೊಂಡ ಒಪ್ಪಂದದ ಅಂಗವಾಗಿ ಆಕೆಗೆ ಮತ್ತೊಬ್ಬನಿಂದ ಜನಿಸಿದ ಕೂಸಾಗಬಹುದು. ಇವುಗಳಿಗಿಂತ ಭಿನ್ನವಾಗಿ ಗಂಡನ ಸಮ್ಮತಿ ಇಲ್ಲದೆ ಮತ್ತು ಯಾವುದೇ ಒಪ್ಪಂದ ಕೈಗೊಳ್ಳದೆ ಹೆಂಡತಿ ಮತ್ತೊಬ್ಬನಿಂದ ಗರ್ಭಿಣಿಯಾದರೆ ಮುಂದೆ ಆಸ್ತಿಯ ಹಸ್ತಾಂತರಕ್ಕೆ ಅದು ಅನೇಕ ರೀತಿಯ ಸಮಸ್ಯೆಗಳನ್ನು ಒಡ್ಡುವುದೆಂಬುದರಲ್ಲಿ ಸಂಶಯವಿಲ್ಲ. ಇಂಥ ಗೊಂದಲಗಳನ್ನು ತಡೆಗಟ್ಟುವ ಸಲುವಾಗಿಯೇ ವಂಶಶುದ್ಧಿ ಎಂಬ ತತ್ವವು ಜಾರಿಗೆ ಬಂತು ಹಾಗೂ ಮಹಿಳೆಯರ ಲೈಂಗಿಕತೆ ಬಿಗಿ ನಿಯಂತ್ರಣಕ್ಕೆ ಗುರಿಯಾಯ್ತು ಎಂಬುದೇ ಮಾನವಶಾಸ್ತ್ರದ ಈ ನಿಲುವಾಗಿದೆ.

ಈ ನಿಲುವು ಸಮರ್ಪಕವೇ ಆಗಿದೆ. ಅದರ ಹಿಂದಿನ ತರ್ಕವು ಮೇಲ್ನೋಟಕ್ಕಾದರೂ ಅಸಮಂಜಸ ಎಂದು ತೋರುವುದಿಲ್ಲ. ಆದರೆ ಇದರ ಹಿಂದೆ ಸಾಧನವಾದಿ (ಇನ್ಸ್ ಟ್ರುಮೆಂಟಲ್) ತತ್ವವೇ ಕೆಲಸ ಮಾಡಿದೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಸಾವಿರಾರು ವರ್ಷಗಳ ಕಾಲ ನೆಲೆಗೊಳ್ಳುವ ವ್ಯವಸ್ಥೆಯೊಂದನ್ನು ಇಂಥ ಸಾಧನವಾದಿ ತರ್ಕಗಳಿಂದ ಮಾತ್ರ ಎತ್ತಿ ಹಿಡಿಯಲಾಗದು. ಅದಕ್ಕೆ ಈ ಸಾಧನವಾದಿ ಕಾರಣವು ವಿಸ್ಥಿತಗೊಂಡು ಮೂಲ್ಯದ ರೂಪ ಪಡೆದುಕೊಳ್ಳಬೇಕು. ಮಾತೃತ್ವ, ಮಾನ, ಮರ್ಯಾದೆ, ಪಾತಿವ್ರತ್ಯ, ಸುಮಂಗಲಿಯಾಗಿ ನಿಧನ ಹೊಂದಬೇಕೆಂಬ ಇಚ್ಛೆ, ವೈಧವ್ಯ ಕುರಿತಾದ ಪಾಪಪ್ರಜ್ಞೆ, ಇಂಥ ಹತ್ತು ಹಲವು ಮೂಲ್ಯಗಳ ಮೂಲಕ ಆಸ್ತಿಗೆ ಸಂಬಂಧಿಸಿದ ಈ ಸಾಧನವಾದವನ್ನು ಪ್ರಜ್ಞೆಯ ಪ್ರಕಟವಾದ ನೆಲೆಗಳಿಂದ ಅಳಿಸಿ ಹಾಕಲಾಗುತ್ತದೆ. ಒಮ್ಮೆ ಅದೊಂದು ಮೌಲ್ಯವಾಗಿ ಪರಿವರ್ತನೆ ಹೊಂದಿತೆಂದರೆ ಅನಂತರ ಆಸ್ತಿಯ ವಾರಸುದಾರಿಕೆಯ ಪ್ರಜ್ಞೆ ಇಲ್ಲದಿರುವಾಗಲೂ ಹೆಣ್ಣಿನ ಲೈಂಗಿಕತೆಯನ್ನು ಗಂಡಾಳ್ವಿಕೆಯು ನಿಯಂತ್ರಣಕ್ಕೆ ಗುರಿ ಪಡಿಸುತ್ತಲೇ ಇರುತ್ತದೆ. ಯಾವ ಸ್ವತ್ತೂ ಇಲ್ಲದೆ ಕಡು ಬಡತನದ ಬದುಕನ್ನೇ ಬದುಕುತ್ತಿರುವಾಗಲೂ ಮರ್ಯಾದೆಯ ಯಾ ಸ್ವಾಭಿಮಾನದ ಸ್ವರೂಪದಲ್ಲಿ ಈ ಮೌಲ್ಯವು ಕೆಲಸ ಮಾಡುತ್ತದೆ. ಆದಾಗ್ಯೂ, ಅಂಥ ಮೌಲ್ಯಗಳು ಮುಂದುವರೆಯಬೇಕಾದರೆ ಭೂಸ್ವಾಮ್ಯದಂಥ ಆಸ್ತಿಯ ಭೌತಿಕ ಪರಿಸರವು ನೆಲೆಗೊಂಡಿರಬೇಕು. ಆ ಮೌಲ್ಯಗಳನ್ನು ಎತ್ತಿಹಿಡಿಯುವವರೆಲ್ಲ ಈ ಭೌತಿಕ ಪರಿಸರದ ಫಲಾನುಭವಿಗಳಾಗಿರಬೇಕಿಲ್ಲ. ಆದರೆ ಅಂಥ ಭೌತಿಕ ವ್ಯವಸ್ಥೆ ಇಲ್ಲದಿದ್ದರೆ ಮುಂದೆ ಆ ಮೌಲ್ಯಗಳಿಗೂ ಉಳಿಗಾಲವಿರುವುದಿಲ್ಲ.

ಹೆಣ್ಣಿನ ಲೈಂಗಿಕತೆಯನ್ನು ನಿಯಂತ್ರಣಕ್ಕೆ ಗುರಿಯಾಗಿಸಿದ್ದೇಕೆ ಎಂಬುದಕ್ಕೆ ಮಾನವಶಾಸ್ತ್ರದಲ್ಲಿರುವ ಸಾಧನವಾದಿ ನಿಲುವನ್ನು ಸಮರ್ಥಿಸಿಕೊಳ್ಳಲು ನಮ್ಮಲ್ಲಿ ಮಹತ್ವದ ಆಕರವೊಂದಿದೆ. ಅದೇ ಮನುಸ್ಮೃತಿ. ಮನುಸ್ಮೃತಿಯು ಹೆಣ್ಣಿಗೆ ಯಾಕೆ ಸ್ವಾತಂತ್ರ್ಯ ಸಲ್ಲದು ಎಂಬುದನ್ನು ದೀರ್ಘವಾಗಿ ಚರ್ಚಿಸುತ್ತದೆ. ಹೆಣ್ಣು ಹಗಲು ರಾತ್ರಿ ತಮ್ಮ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕು. ವಿಷಯ ವಾಸನೆಯುಳ್ಳ ಹೆಣ್ಣಾದರೆ ಆಕೆಯನ್ನು ಸದಾ ಹತೋಟಿಯಲ್ಲಿಟ್ಟುಕೊಳ್ಳಬೇಕು. ಹೆಣ್ಣಿನ ಕುರಿತ ಮನುಸ್ಮೃತಿಯ ಚರ್ಚೆ ಆರಂಭವಾಗುವುದೇ ಈ ಮಾತಿಂದ. ಇದಾದ ಕೂಡಲೆ ಅಲ್ಲಿ ಪ್ರಸಿದ್ಧವಾದ ಈ ಹೇಳಿಕೆ ಬರುತ್ತದೆ: ಪಿತಾ ರಕ್ಷತಿ ಕೌಮಾರೇ, ಭರ್ತಾ ರಕ್ಷತಿ ಯೌವನೇ, ರಕ್ಷಂತಿ ಸ್ಥವಿರೇ ಪುತ್ರಾಃ, ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ. ಆಂದರೆ, ಕೌಮಾರದಲ್ಲಿ ತಂದೆ ರಕ್ಷಿಸುತ್ತಾನೆ, ಯೌವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಪುತ್ರರು. ಹೆಣ್ಣಿಗೆ ಸ್ವತಂತ್ರಳಾಗಿರುವ ಅರ್ಹತೆ ಇಲ್ಲ.

ಹೆಣ್ಣಿನ ಸುರತಲೋಲುಪತೆಯೇ ಇದಕ್ಕೆ ಕಾರಣ ಎಂದು ಮನುಸ್ಮೃತಿ ಹೇಳುತ್ತದೆ. ಹೀಗಾಗಿ ಮಗಳನ್ನು ತಕ್ಕ ಪ್ರಾಯದಲ್ಲಿ ಮದುವೆ ಮಾಡಿಸದ ತಂದೆ, ಹೆಂಡತಿಯೊಂದಿಗೆ ಕಾಲಕಾಲಕ್ಕೆ ಕೂಡಿಕೆ ನಡೆಸದ ಗಂಡ, ತಂದೆ ಮರಣಹೊಂದಿದ ಬಳಿಕೆ ತಾಯಿಯನ್ನು ರಕ್ಷಿಸದ ಮಗ, ಇವರೆಲ್ಲರೂ ನಿಂದನೀಯರಾಗುತ್ತಾರೆ.

ಗಂಡೆಂದರೆ ಬೀಜ, ಹೆಣ್ಣು ಹೊಲ. ಈ ರೂಪಕವನ್ನು ಇಟ್ಟಿಕೊಂಡು ಮನುಸ್ಮೃತಿ ತನ್ನ ವಿವರಣೆ ಮುಂದುವರೆಸುತ್ತದೆ. ಬೀಜ, ಹೊಲ ಕೂಡಿ ಸೃಷ್ಟಿ ನಡೆಸುತ್ತವೆ. ಕೆಲವೊಮ್ಮೆ ಬೀಜವು ಉತ್ತಮವಾಗಿರುತ್ತದೆ, ಕೆಲವೊಮ್ಮೆ ಹೊಲ. ಎರಡೂ ಒಂದೇ ಗುಣಮಟ್ಟದ್ದಾಗಿರುವಾಗ ಅತ್ಯುತ್ತಮವಾದ ಫಲ ಉಂಟಾಗುತ್ತದೆ. ಬೀಜಕ್ಕೆ ಹೊಲಕ್ಕಿಂತ ಹೆಚ್ಚಿನ ಮಹತ್ವವುಂಟು. ಏಕೆಂದರೆ ಇಳುವರಿಯಲ್ಲಿ ಕಾಣುವುದು ಬೀಜದ ಗುಣವೇ ಹೊರತು ಹೊಲದ ಗುಣವಲ್ಲ. ಯಾವ ಬೀಜವನ್ನು ಹೊಲದಲ್ಲಿ ಬಿತ್ತುವೆವೋ, ಇಳುವರಿಯು ಆ ಬೀಜದ್ದೇ ಆಗಿರುತ್ತದೆ. ಬೀಜಕ್ಕೆ ಗರ್ಭದ ಗುಣಗಳಾವುವೂ ಇರುವುದಿಲ್ಲ. ಭತ್ತ, ಎಳ್ಳು, ಅಥವಾ ಬೇರಾವುದೇ ಬೆಳೆಯು ಅದರದೇ ಬೀಜದಿಂದ ಬೆಳೆಯುತ್ತದೆ, ಮತ್ತೊಂದರ ಬೀಜದಿಂದಲ್ಲ. ಒಂದು ಬೆಳೆಯ ಬೀಜದಿಂದ ಮತ್ತೊಂದು ಬೆಳೆ ಉಂಟಾಗದು. ಆದ್ದರಿಂದ ಬುದ್ಧಿವಂತನಾದ ವ್ಯಕ್ತಿಯು ತನ್ನ ಬೀಜವನ್ನು ಮತ್ತೊಬ್ಬನ ಹೆಂಡತಿಯಲ್ಲಿ ಬಿತ್ತುವುದಿಲ್ಲ. ಮತ್ತೊಬ್ಬನ ನೆಲದಲ್ಲಿ ಎಂದಿಗೂ ಬಿತ್ತನೆ ನಡೆಸಬಾರದೆಂದು ವಾಯುದೇವನು ಹೇಳಿದ್ದಾನೆ. ಹಾಗೆ ಮಾಡುವುದು ಮತ್ತೊಬ್ಬ ಈಗಾಗಲೇ ಹೊಡೆದು ಬೀಳಿಸಿದ ಮೃಗವನ್ನು ಬೀಳಿಸಲು ಮತ್ತೆ ಬಾಣ ಬಿಟ್ಟಂತೆ.

ಹೊಲ ಎಂಬುದು ಆ ನೆಲದ ಕಾಡು ಕಡಿದು ಸಪಾಟಾಗಿಸಿದವನಿಗೆ ಸೇರಿದ್ದು. ಬಾಣವು ಯಾರಿಗೆ ಸೇರಿದ್ದೋ ಬೇಟೆಯ ಜಿಂಕೆಯೂ ಅವನಿಗೇ ಸೇರಿದ್ದು. ಸ್ವಂತ ಹೊಲ ಇಲ್ಲದೆ ಮತ್ತೊಬ್ಬನ ಹೊಲದಲ್ಲಿ ಬೀಜ ಬಿತ್ತಿದವನಿಗೆ ಇಳುವರಿಯ ಮೇಲೆ ಯಾವ ಹಕ್ಕೂ ಇರುವುದಿಲ್ಲ. ಎತ್ತೊಂದು ಮತ್ತೊಬ್ಬನ ಗೋವಿನಲ್ಲಿ ಬೀಜ ಬಿತ್ತಿದರೆ ಅದರಿಂದ ಜನಿಸುವ ನೂರು ಕರುಗಳು ಗೋವಿನ ಮಾಲೀಕನಿಗೆ ಸೇರುತ್ತದೆಯೇ ಹೊರತು ಎತ್ತಿನ ಮಾಲೀಕನಿಗಲ್ಲ.

ಬೀಜದ ಮಾಲೀಕ ಹಾಗೂ ಹೊಲದ ಮಾಲೀಕರ ನಡುವೆ ಒಪ್ಪಂದ ಇಲ್ಲದಿದ್ದಾಗ ಹೀಗಾಗುತ್ತದೆ. ಈಗಾಗಲೇ ಒಪ್ಪಂದ ಇದ್ದಲ್ಲಿ ಅದರಂತೆ ಒಬ್ಬ ಮತ್ತೊಬ್ಬನ ಹೊಲದಲ್ಲಿ ಬಿತ್ತನೆ ನಡೆಸಬಹುದು. ಆಗ ಇಳುವರಿಯನ್ನು ಬೀಜದ ಮಾಲೀಕ ಹಾಗೂ ಹೊಲದ ಮಾಲೀಕ ಇಬ್ಬರೂ ಸಮನಾಗಿ ಹಂಚಿಕೊಳ್ಳತಕ್ಕದ್ದು. ಪ್ರವಾಹ, ಬಿರುಗಾಳಿ ಇತ್ಯಾದಿಗಳಿಂದಾಗಿ ಬೀಜವು ಮತ್ತೊಬ್ಬನ ಹೊಲಕ್ಕೆ ಬಂದು ಮೊಳಕೆದೋರಿದರೆ ಆ ಇಳುವರಿಯ ಮೇಲೆ ಬೀಜದ ಮಾಲೀಕನಿಗೆ ಹಕ್ಕುಗಳಿರುವುದಿಲ್ಲ.

ಮನುಸ್ಮೃತಿಯ ಈ ನಿರ್ದೇಶಗಳ ಬೆಳಕಲ್ಲಿ ಹೆಣ್ಣಿನ ಲೈಂಗಿಕತೆಯ ಮೇಲೆ ವಿಧಿಸಲಾದ ನಿಯಂತ್ರಣಕ್ಕೆ ಭೂಸ್ವಾಮ್ಯ ಹಾಗೂ ನ್ಯಾಯಸಮ್ಮತವಾದ ವಾರಸುದಾರಿಕೆ ಕುರಿತಾದ ಸಾಧನವಾದಿ ವಿಚಾರಗಳ ಬೆಂಬಲವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ವರ್ಣವ್ಯವಸ್ಥೆಯು ಆಯಾ ವರ್ಗಗಳ ಒಳವಿವಾಹವನ್ನು ಎತ್ತಿಹಿಡಿಯಿತು. ಸಂತಾನೋತ್ಪತ್ತಿಯು ನ್ಯಾಯಸಮ್ಮತವಾಗಿರಲೆಂದು ಹೆಣ್ಣಿನ ಲೈಂಗಿಕತೆಗೆ ಹತ್ತಾರು ಬಗೆಯ ಪ್ರತಿಬಂಧಗಳನ್ನು ಹಾಕಿತು. ಇದು ಅಸಮಾನತೆಯ ವ್ಯವಸ್ಥೆಯಾಗಿತ್ತು. ಆದ್ದರಿಂದಲೇ ಗಂಡಿನ ಲೈಂಗಿಕತೆ ಸಮನಾದ ನಿಯಂತ್ರಣಕ್ಕೆ ಗುರಿಯಾದುದ್ದನ್ನು ನಾವು ಅಷ್ಟಾಗಿ ಕಾಣುವುದಿಲ್ಲ.

 

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಹತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಏಳನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂದನೇ ಕಂತು

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...