ಜಾತಿ ಪದ್ಧತಿಯ ಮೈಮನಗಳು-1

Date: 08-08-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಮೊದಲ ಪೀಠಿಕೆ-ಮುನ್ನುಡಿ ರೂಪದ ಬರಹ ಇಲ್ಲಿದೆ.

1

ಭಾರತ ಜಾತಿಗಳ ದೇಶವೆಂದೇ ಪ್ರಸಿದ್ಧ. ಇದು ಜನಸಾಮಾನ್ಯರ ವಿವೇಕ ಮಾತ್ರವಲ್ಲ. ಮಾನವಿಕ ವಿಜ್ಞಾನಗಳಲ್ಲಿ ಸಂಶೋಧನೆ ನಡೆಸುತ್ತ ಬಂದಿರುವ ತಜ್ಞರೂ ಬಹುತೇಕ ಈ ನಿಲುವಿನವರೇ ಆಗಿದ್ದಾರೆ. ಜಾತಿ ವಿಶ್ವದ ಮತ್ತಾವುದೇ ದೇಶದಲ್ಲಿ ಕಾಣದ ವಿಶಿಷ್ಟವಾದ ವ್ಯವಸ್ಥೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಈ ಅರ್ಥದಲ್ಲಿ ಜಾತಿಯೇ ಭಾರತದ ಕೀಲು ಎಂದು ಭಾವಿಸುವವರು ಇದಕ್ಕೆ ಸಂಬಂಧಪಟ್ಟ ಎಲ್ಲ ಚರ್ಚೆಗಳಲ್ಲೂ ಮೇಲುಗೈ ಸಾಧಿಸಿದ್ದಾರೆ. ಅಂಥಲ್ಲಿ ನಾವು ಸುಯೋಜಿತ ವಿಧಾನಗಳ ಮೂಲಕ ಕೈಗೊಂಡ ಶಿಸ್ತುಬದ್ಧ ಶೋಧಕ್ಕಿಂತ ಹೆಚ್ಚಾಗಿ ಎತ್ತಿದ ದನಿ ಹಾಗೂ ಭಾವೋದ್ವೇಗದ ಪಾತ್ರವನ್ನೇ ಕಾಣುತ್ತೇವೆ.

ಕೆಲವರಿಗೆ ಜಾತಿ ಒಂದು ವರದಾನವಿದ್ದಂತೆ. ಜಾತಿಯ ಮೂಲಕವೇ ತಮ್ಮ ಸ್ವತ್ವದ ನಿರೂಪಣೆ ನಡೆಯುತ್ತದೆ, ಜಾತಿಯೇ ಮುಕ್ತಿಗೂ ದಾರಿ ಎಂಬ ನಿಲುವು ಇವರದ್ದು. ಕೆಲವರಿಗೆ ಅದು ವರ್ಗೀಕರಣದ ವೈಜ್ಞಾನಿಕ ವ್ಯವಸ್ಥೆ. ಎಲ್ಲರ ಹಿತಾಸಕ್ತಿಯನ್ನೂ ಕಾಪಾಡುವ ಉದಾತ್ತ ಮನೋಧರ್ಮವಾಗಿ ಜನ್ಮಪಡೆದ ಪದ್ಧತಿಯು ನಡೆದು ಬಂದಂತೆ ಕಲುಷಿತಗೊಳ್ಳುತ್ತ ಹೋಯ್ತೆಂಬುದು ಇನ್ನಿತರರ ನಂಬಿಕೆಯಾಗಿದೆ. ಅನೇಕರು ಜಾತಿಯನ್ನು ಅನಿವಾರ್ಯವಾದ ಕೆಡುಕು, ಅಂದರೆ ಎ ನೆಸೆಸರಿ ಈವಿಲ್, ಎಂಬು ಬಗೆಯುತ್ತಾರೆ. ಕೊನೆಯದಾಗಿ ಜಾತಿಯನ್ನು ತೊರೆದುಹಾಕಲೇ ಬೇಕಾದ ಶಾಪವೆಂದು ಕಾಣುವವರಿದ್ದಾರೆ. ಈ ವಿವಿಧ ನಿಲುವುಗಳನ್ನು ಸಾಂಪ್ರದಾಯಿಕರಿಂದ ಪ್ರಗತಿಶೀಲರ ವರೆಗಿನ ವಿಕಾಸದ ನಿಲುವುಗಳಾಗಿ ಕಾಣಬೇಕಿಲ್ಲ. ನಮ್ಮ ನಡುವಲ್ಲಿ ಜಾತಿ ವ್ಯವಸ್ಥೆ ಕೊನೆಗೊಳ್ಳಬೇಕು ಎಂಬ ನಿಲುವಿನ ಸಂಪ್ರದಾಯವಾದಿಗಳನ್ನು ಕಾಣಬಹುದು, ಹಾಗೆಯೇ ಜಾತಿ ವೈಜ್ಞಾನಿಕವಾದ ವರ್ಗೀಕರಣವಾಗಿದೆ ಎಂಬ ಧೋರಣೆ ಹೊಂದಿರುವ ಪ್ರಗತಿಶೀಲರನ್ನೂ ಕಾಣಬಹುದು. ಅದೇ ವೇಳೆಗೆ ಈ ನಿಲುವುಗಳಲ್ಲಿ ಒಂದಕ್ಕಿಂತ ಹೆಚ್ಚನ್ನು ಒಪ್ಪಿಕೊಳ್ಳುವವರೇ ಸಂಖ್ಯೆಯ ದೃಷ್ಟಿಯಿಂದ ಹೆಚ್ಚು ಎಂಬುದನ್ನು ಮರೆಯಬೇಕಿಲ್ಲ.

ಒಂದು ಶತಮಾನಕ್ಕೂ ಹೆಚ್ಚಿನ ಕಾಲ ಬಿರುಸಾದ ವೈಚಾರಿಕ ಚರ್ಚೆಗಳಿಗೆ ಪ್ರೇರಣೆಯಾಗಿದ್ದರೂ ಜಾತಿ ಕುರಿತಾದ ನಮ್ಮ ತಿಳುವಳಿಕೆ ಈಗಲೂ ಅಚಾರಿತ್ರಿಕವಾಗಿಯೇ ಉಳಿದಿರುವುದು ವಿಪರ್ಯಾಸ. ಈವರೆಗೆ ನಡೆದ ಬಹುತೇಕ ಎಲ್ಲ ಅಧ್ಯಯನಗಳೂ ವರ್ತಮಾನದ ಎತ್ನೋಗ್ರಾಫಿಕ್ ಕ್ಷೇತ್ರಕಾರ್ಯವನ್ನು ಆಧರಿಸಿವೆ, ಅಥವಾ ಬ್ರಿಟಿಶ್ ಆಳ್ವಿಕೆ ಕಾಲದಿಂದ ರೂಪುಗೊಳ್ಳುತ್ತ ಬಂದ ಪತ್ರಾಗಾರದಂತ (ಆರ್ಕೈವ್ಸ್) ಲಿಖಿತ ಮೂಲಗಳನ್ನು ಆಧರಿಸಿವೆ. ಕಾದಂಬರಿಯಂತ ಆಧುನಿಕ ಸಾಹಿತ್ಯವನ್ನೂ ಜಾತಿ ಅಧ್ಯಯನಕ್ಕೆ ಹೇರಳವಾಗಿ ಬಳಸಿಕೊಳ್ಳಲಾಗಿದೆ. ಜೊತೆಯಲ್ಲೇ ಇತ್ತೀಚಿನ ಈ ಮೂಲಗಳಲ್ಲಿ ತೋರುವ ಚಿತ್ರಗಳು ಪ್ರಾಚೀನ ಕಾಲದ ಧರ್ಮಸೂತ್ರ, ಗೃಹ್ಯಸೂತ್ರ, ಧರ್ಮಶಾಸ್ತ್ರ ಇತ್ಯಾದಿ ಸೂತ್ರಗಳಲ್ಲಿಯೂ ಕಾಣಬಹುದು ಎಂಬ ವಾದಮಂಡನೆ ನಡೆಯುತ್ತದೆ. ಅಂಥ ವಾದಗಳನ್ನು ಮುಂದಿಡುವವರಲ್ಲಿ ಅನೇಕರು ಪ್ರಾಕ್ತನಕಾಲದ ಸೂತ್ರಗಳ ಪರಿಚಯವಾಗಲಿ ಅಂಥ ಸೂತ್ರಗಳನ್ನು ಶೋಧಿಸುವ ತರಬೇತಿಯಾಗಲಿ ಹೊಂದಿದಂತೆ ತೋರುವುದಿಲ್ಲ.

ತಜ್ಞರಿಗಿಂತ ಹೆಚ್ಚಾಗಿ ಕಾರ್ಯಕರ್ತ (ಏಕ್ಟಿವಿಸ್ಟ್) ಮನೋಧರ್ಮವುಳ್ಳವರು ಜಾತಿ ಕುರಿತು ಹೇಳಿಕೆಯನ್ನು ಹೊರಡಿಸುವುದರಲ್ಲಿ ಮುಂದಾಗಿರುವುದು ನಮಗೆಲ್ಲ ತಿಳಿದುರುವ ಸಂಗತಿ. ಅಲ್ಲಿ ಬ್ರಾಹ್ಮಣ ಎಂದರೆ ಶೋಷಕ, ದಲಿತ ಎಂದರೆ ಶೂದ್ರ ಎಂಬ ಸರಳವಾದ ಸಮೀಕರಣವನ್ನು ಕಾಣುತ್ತೇವೆ. ಅದರೊಂದಿಗೆ ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಅಂಬೇಡ್ಕರ್-ಕೇಂದ್ರಿತ ಕಥನವೊಂದನ್ನು ಹೆಣೆದು ಅದರಲ್ಲಿ ಪಾತ್ರ ವಹಿಸಲು ಬುದ್ಧ, ಬಸವ, ಫೂಲೆ ಮತ್ತು ನಾರಾಯಣ ಗುರು ಜೀವನಚರಿತ್ರೆಗಳ ಸೇವೆ ಪಡೆಯಲಾಗುತ್ತದೆ. ಆಗಾಗ ಈ ಕಥನದಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರನ್ನೂ ಕೋಲ್ಹಾಪುರದ ಶಾಹೂ ಮಹಾರಾಜರನ್ನೂ ಕಾಣುತ್ತೇವೆ. ಹತ್ತೊಂಬತ್ತನೆಯ ಶತಮಾನದಲ್ಲಿ ದಮನಿತ ವರ್ಗಗಳ ಏಳಿಗೆಗೆಂದು ದುಡಿದ ಅಯ್ಯಾ ವೈಕುಂಠನ್ ಅಥವಾ ಮಹಿಮಾ ಗೋಸಾಯಿಗೆ ಈ ಕಥನದಲ್ಲಿ ಸ್ಥಾನವಿಲ್ಲ. ಹದಿನಾರನೆಯ ಶತಮಾನದಲ್ಲಿ ಜಾತಿವ್ಯವಸ್ಥೆಯ ಬಹುದೊಡ್ಡ ಕೇಂದ್ರವಾದ ಪುರಿಯ ಜಗನ್ನಾಥ ದೇವಾಲಯದಲ್ಲಿ ನಿಂತು ಓರ್ವ ಸಂತ ಆ ಪದ್ಧತಿಗೆ ನೇರ ಸವಾಲೆಸಗಿದ. ಅದೇ ಕಾಲಕ್ಕೆ ಯೂರೋಪಿನಲ್ಲಿ ಬಂಡಾಯ ನಡೆಸಿದ ಮಾರ್ಟಿನ್ ಲೂಥರ್‌ನ ಸುಧಾರಣೆಯಷ್ಟೆ ಮಹತ್ವದ ಕಾರ್ಯಾಚರಣೆ ಇವನದಾಗಿತ್ತು ಎಂದು ಅದನ್ನು ಇತ್ತೀಚೆಗೆ ಹಿರಿಯ ಚಿಂತಕ ಸತ್ಯಪ್ರಕಾಶ್ ಮಹಾಂತಿ ಬಣ್ಣಿಸಿದ್ದಾರೆ. ಲಕ್ಷ್ಮಿಪುರಾಣ ಎಂಬ ವಿದ್ರೋಹದ ಗ್ರಂಥವನ್ನು ರಚಿಸಿದ ಈ ಸಂತನ ಹೆಸರು ಬಳರಾಮದಾಸ. ನನಗೆ ತಿಳಿದಂತೆ ಅಂಬೇಡ್ಕರ್-ಕೇಂದ್ರಿತ ದಲಿತ ಕಥನದಲ್ಲಿ ಎಲ್ಲಿಯೂ ಈತನ ಉಲ್ಲೇಖವಿಲ್ಲ. ಈ ಕಥನದಲ್ಲಿ ಉಲ್ಲೇಖ ಪಡೆಯದ, ಆದರೆ ಜಾತಿ ವ್ಯವಸ್ಥೆಗೆ ಬಹುದೊಡ್ಡ ಸವಾಲನ್ನೆಸಗಿದ ನೂರಾರು ಮಂದಿಯನ್ನು ಭಾರತದ ಇತಿಹಾಸದ ವಿವಿಧ ಹಂತಗಳಲ್ಲಿ ಕಾಣುತ್ತೇವೆ. ಅದೇ ವೇಳೆಗೆ ಬುದ್ಧನಿಂದ ನಾರಾಯಣ ಗುರು ವರೆಗಿನ ನಾಕೆಂಟು ಇತಿಹಾಸಪುರುಷರನ್ನು ಕಥನವು ಆಯ್ಕೆ ಮಾಡಿಕೊಂಡುದ್ದರ ಹಿಂದಿನ ಪ್ರೇರಣೆ ಹಾಗೂ ಅಲ್ಲಿನ ಮನೋಧರ್ಮ, ಇದು ಉತ್ತಮವಾದ ಸಂಶೋಧನೆಯೊಂದಕ್ಕೆ ವಸ್ತುವಾಗಬಲ್ಲದು.

ಇಂಥ ಪ್ರಶ್ನೆಗಳನ್ನು ಕೇಳುವುದು ಅನೇಕ ಗೊಂದಲಗಳಿಗೆ ಕಾರಣವಾದೀತು. ಅಂಥ ವ್ಯಕ್ತಿ ಬ್ರಾಹ್ಮಣ ಅಥವಾ ಮೇಲು ಜಾತಿ ಎನ್ನಿಸಿಕೊಂಡ ಯಾವುದೇ ಜಾತಿಗೆ ಸೇರಿದ್ದರೆ ಬ್ರಾಹ್ಮಣವಾದಿ, ಮನುವಾದಿ, ಹಿಂದುತ್ವವಾದಿ ಇತ್ಯಾದಿ ವಿಶೇಷಣಗಳಿಗೆ ಪಾತ್ರವಾಗಬಹುದು, ದಲಿತ ಜನಾಂಗಕ್ಕೆ ಸೇರಿದರೆ ಬ್ಯಾಡ್ ಫೇತ್ ಬರಹಗಾರ ಎನ್ನಿಸಿಕೊಳ್ಳಬಹುದು. ಇಂಥ ಆರೋಪಣೆಗಳಿಗೆ ಕಿವಿಯೊಡ್ಡದೆ ತಮಗೆ ಸೈ ಕಂಡದ್ದನು ಹೇಳುವವರು ವಿರಳ.

ಇತ್ತೀಚೆಗೆ ಉದ್ವೇಗವನ್ನೇ ಅರಿವೆಂದು ಭಾವಿಸುವ ಹೊಸ ತಲೆಮಾರಿನ ಬರಹಗಾರರೊಬ್ಬರು ಮನುಸ್ಮೃತಿ ಈ ದೇಶದ ಕಾನೂನಾಗಿತ್ತು (ಲಾ ಆಫ್ ದಿ ಲ್ಯಾಂಡ್) ಎಂದು ಆವೇಶಭರಿತವಾಗಿ ಒದರಿದ್ದು ಗಮನಕ್ಕೆಬಂತು. ಕೆಲವೇ ಕೆಲವು ಬ್ರಾಹ್ಮಣ ಸಮುದಾಯಗಳಲ್ಲಿ ಮನ್ನಣೆಯಿದ್ದ ಕೃತಿ ಮನುಸ್ಮೃತಿ. ಕೇರಳದ ನಂಬೂದಿರಿಗಳಾಗಲಿ, ಕಾಶ್ಮೀರದ ಪಂಡಿತ್‌ಗಳಾಗಲಿ, ಓಡಿಶಾದ ಮಹಾಪಾತ್ರ ಅಥವಾ ಶತಪತಿ ಬ್ರಾಹ್ಮಣರಾಗಲಿ ಎಂದೂ ಈ ಗ್ರಂಥವನ್ನು ಅನುಸರಿಸಿದವರಲ್ಲ. ಮನುಸ್ಮೃತಿ ಕಟ್ಟಿಕೊಟ್ಟ ಧರ್ಮಕ್ಕಿಂತ ಭಿನ್ನವಾದ ಜನಜೀವನವನ್ನು ರೂಪಿಸಿಕೊಂಡ ವಚನಕಾರರಿಗೆ, ತತ್ವಪದಕಾರರಿಗೆ, ಸಿದ್ಧಪರಂಪರೆಗಳಿಗೆ ಯಾವ ಮಹತ್ವವೂ ಇರಲಿಲ್ಲವೇ ಅನ್ನಿಸಿಬಿಡುತ್ತದೆ, ಇಂಥ ನಿಯೋ-ದಲಿತ ಉದ್ಗಾರಗಳನ್ನು ಕೇಳಿದಾಗ. ದಲಿತ ಚಳುವಳಿಗೆ ಈ ಮಾದರಿಯ ಬಾಲಾರ್ಕರುಗಳಿಂದ ಆಗುತ್ತಿರುವ ಹಾನಿ ಸಣ್ಣದಲ್ಲ. 1970ರ ಹಾಗೂ 80ರ ದಶಕಗಳಲ್ಲಿ ಕಂಡಷ್ಟು ಪ್ರಾಮಾಣಿಕವಾಗಿ ದಲಿತ ಚಳುವಳಿಗಳು ಈಗ ಉಳಿದಿಲ್ಲ ಎಂಬುದು ಬೇರೆ ಮಾತು.

ಇಂದಿನ ಕಾರ್ಯಕರ್ತ ರಾಜಕಾರಣ ಕುರಿತು ವಿಸ್ತಾರವಾಗಿ ಬರೆಯುವ ಅಗತ್ಯವಿದೆ. ಆದರೆ ಪ್ರಸ್ತುತ ಬರಹ ಹೊಂದಿರುವ ಉದ್ದೇಶವೇ ಬೇರೆ. ಇದು ಜಾತಿ ವ್ಯವಸ್ಥೆಯ ಸ್ವರೂಪ ಕುರಿತು ಕೈಗೊಂಡ ಚಾರಿತ್ರಿಕ ಅನ್ವೇಷಣೆ. ಇಂದು ನಮ್ಮಲ್ಲಿರುವ ಬಹುತೇಕ ಧೋರಣೆಗಳನ್ನು ಇತಿಹಾಸದ ನೆಲೆಯಿಂದ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದಿರುವುದೇ ಈ ಅನ್ವೇಷಣೆಗೆ ಮುಖ್ಯ ಪ್ರೇರಣೆ. ಮಾನವಿಕ ವಿಜ್ಞಾನದ ತಜ್ಞರು ಮಂಡಿಸುತ್ತ ಬಂದಿರುವ ವಿಚಾರಗಳನ್ನು ಸಮೀಕ್ಷಿಸಿದಾಗ ಅಲ್ಲಿ ತೊಡಕುಗಳ ದೊಡ್ಡ ಶೃಂಖಲೆಯನ್ನೇ ಕಾಣಬಹುದು. ವರ್ತಮಾನದ ಅಧ್ಯಯನಗಳ ಫಲವನ್ನೇ ಎರಡೋ ಮೂರೋ ಸಾವಿರ ವರ್ಷಗಳಷ್ಟು ಹಳೆಯ ಮೂಲಗಳಲ್ಲೂ ಕಾಣಬಹುದು ಎಂದು ಅಂಥ ಮೂಲಗಳನ್ನು ವಿಸ್ತಾರವಾಗಿ ಪರಿಶೀಲಿಸದೆಯೇ ಹೇಳುವುದು ಭಾರತದ ಚರಿತ್ರೆ ಯಾವ ಮೌಲಿಕ ಪರಿವರ್ತನೆಯೂ ಆಗದಂತೆ ಪ್ರಾಚೀನ ಕಾಲದಿಂದ ಈತನಕ ಮುಂದುವರೆದಿದೆ ಎಂಬ ಬ್ರಿಟಿಶ್ ವಸಾಹತು ಕಾಲದ ಪೌರಸ್ತ್ಯವಾದಿ ಚಿಂತನೆಯ ಮುಂದುವರಿಕೆಯಾಗಿದೆ. ಭಾರತೀಯರಿಗೆ ಚರಿತ್ರಪ್ರಜ್ಞೆ ಇರಲಿಲ್ಲ, ಅವರ ಜೀವನಕ್ರಮದಲ್ಲಿ ಸಹಸ್ರಮಾಹಗಳ ಕಾಲ ಏನೂ ಪರಿವರ್ತನೆ ಉಂಟಾಗಲಿಲ್ಲ, ಇತ್ಯಾದಿ ಧೋರಣೆಗಳು ಈಗಲೂ ಕೆಲವು ಚಿಂತಕರ ಬರಹಗಳಲ್ಲಿ ಕಾಣಬಹುದು. ಸುನೀಲ್ ಖಿಲ್ನಾನಿ, ಸುದೀಪ್ತ ಕವಿರಾಜ್ ಮುಂತಾದ ರಾಜನೀತಿ ಶಾಸ್ತ್ರದ ತಜ್ಞರ ಬರಹಗಳು ಇದಕ್ಕೆ ಉದಾಹರಣೆ. ಆದರೆ 1950 ಮತ್ತು 60ರ ದಶಕಗಳಲ್ಲಿಯೇ ದಾಮೋದರ್ ಧರ್ಮಾನಂದ ಕೊಸಾಂಬಿ, ರಾಮ್ ಶರಣ್ ಶರ್ಮ, ಇರ್ಫಾನ್ ಹಬೀಬ್ ಮೊದಲಾದ ಇತಿಹಾಸಕಾರರ ಅಧ್ಯಯನಗಳು ಈ ಧೋರಣೆಗಳನ್ನು ಅಲ್ಲಗಳೆದು ಹೆಚ್ಚು ಕ್ರಿಯಾಶೀಲವಾದ ಇತಿಹಾಸವೊಂದರ ಚಿತ್ರವನ್ನು ಕಟ್ಟಿಕೊಟ್ಟಿತ್ತು. ಭಾರತೀಯರಲ್ಲಿದ್ದ ಚರಿತ್ರ ಪ್ರಜ್ಞೆಯ ವಿವಿಧ ನೆಲೆಗಳನ್ನು ರೊಮೀಲಾ ಥಾಪರ್ ನಾಲ್ಕು ದಶಕಗಳಿಂದ ಶೋಧಿಸುತ್ತ ಬಂದು ಹಲವು ಪ್ರಮುಖ ಲೇಖನಗಳನ್ನೂ, ಕಿರು ಹೊತ್ತಿಗೆಗಳನ್ನೂ, ದ ಪಾಸ್ಟ್ ಬಿಫೋರ್ ಅಸ್ ಎಂಬ ಮಹತ್ವಪೂರ್ಣ ಗ್ರಂಥವನ್ನೂ ಪ್ರಕಟಿಸಿದ್ದಾರೆ. ಇದಕ್ಕೆ ಸಮನಾದ ಬೇರೆಯೂ ಹತ್ತಾರು ಅಧ್ಯಯನಗಳಿವೆ. ಉದಾಹರಣೆಗೆ, ವೇಲ್ಚೇರು ನಾರಾಯಣ ರಾವ್, ಡೇವಿಡ್ ಶುಲ್ಮನ್, ಸಂಜಯ್ ಸುಬ್ರಹ್ಮಣ್ಯಂ, ಕೇಶವನ್ ವೆಳುತ್ತಾಟ್, ಪ್ರಾಚೀ ದೇಶಪಾಂಡೆ, ದಾವೂದ್ ಅಲಿ, ಕುಂಕುಂ ಚೆಟರ್ಜಿ ಮುಂತಾದವರ ವಿವಿಧ ಬರಹಗಳಲ್ಲಿ ಇದನ್ನು ಕಾಣಬಹುದು.

ಜಾತಿ ವ್ಯವಸ್ಥೆ ಕುರಿತು ಬರೆದವರೆಲ್ಲ ಬದಲಾಗದ ಭಾರತ ಎಂಬ ನಂಬಿಕೆಯನ್ನು ಪೋಷಿಸುವವರು ಎಂಬುದು ಇದರ ಅರ್ಥವಲ್ಲ. ಇವರಲ್ಲಿ ಅನೇಕರು ಸೂಕ್ಷವಾದ ಚಾರಿತ್ರಿಕ ಪ್ರಜ್ಞೆ ಹೊಂದಿದವರು. ಆದರೆ ಜಾತಿಯು ಮೂಲತಃ ಒಂದು ವೈಚಾರಿಕ ಸ್ಥರದ (ಐಡಿಯೇಶನಲ್) ಅಥವಾ ಮನೋಗುಣ ಎನ್ನಬಹುದಾದ ತತ್ವವಾಗಿದೆ ಎಂಬ ಪರಿಕಲ್ಪನೆ ಇವರಲ್ಲಿ ಹಾಸುಹೊಕ್ಕಾಗಿದೆ. ಆಚರಣೆಗಳ ರೂಪ ತಾಳಿಕೊಳ್ಳುವ ಜಾತಿಗೆ ಮನೋಗುಣವೇ ಆಧಾರ ಎಂಬುದು ಈ ಆಲೋಚನಾಕ್ರಮದ ತಿರುಳು. ಈ ಮನೋಗುಣಕ್ಕೆ ವೈಚಾರಿಕವಾದೊಂದು ಸ್ವಾಯತ್ತತೆಯನ್ನು ಕಲ್ಪಿಸಲಾಗುತ್ತದೆ. ಆಚರಣೆಗಳ ಸ್ಥರದಲ್ಲಿ, ಅವುಗಳ ತೀವ್ರತೆಯ ಮತ್ತು ಆಯಾಮಗಳ ಸ್ಥರದಲ್ಲಿ ಐತಿಹಾಸಿಕ ಒತ್ತಡಗಳಿಂದಾಗಿ ಸಾಕಷ್ಟು ಬದಲಾವಣೆಗಳು ನಡೆದಿವೆ ಎಂಬುವುದನ್ನು ಈ ಲೇಖಕರು ಒಪ್ಪಿಕೊಳ್ಳುತ್ತಾರೆ. ಆದರೆ ಅವರ ಪರಿಕಲ್ಪನೆಯಲ್ಲಿ ಜಾತಿ ಎಂಬ ಮನೋಗುಣ ಮಾತ್ರ ಯಾವುದೇ ಐತಿಹಾಸಿಕ ಯಾ ಭೌತಿಕ ಒತ್ತಡಗಳಿಗೆ ಗುರಿಯಾಗದೆ ಹಾಗೆಯೇ ಉಳಿದುಬಂದಿದೆ.

ಇದು ನಮ್ಮ ಪ್ರಜ್ಞೆಯು ನಮ್ಮ ಭೌತಿಕ ಪರಿಸರವನ್ನು ರೂಪಿಸುತ್ತದೆ ಎಂಬ ಹಳೆಯ ಪ್ರಜ್ಞಾವಾದದ (ಐಡಿಯಲಿಸಂ) ಮುಂದುವರಿಕೆ. ವಿಶ್ವದ ಬಹುತೇಕ ಎಲ್ಲ ಧರ್ಮಗಳಲ್ಲೂ ಪ್ರಜ್ಞಾವಾದದ ಪ್ರಭಾವವನ್ನು ಕಾಣಬಹುದು. ಬೌದ್ಧರ ಧಮ್ಮಪದ ಆರಂಭವಾಗುವುದೇ “ಮನೋ ಪುಬ್ಬಂಗಮಾ ಧಮ್ಮಾ ಮನೋ ಸೇಟ್ಠಾ ಮನೋಮಯಾ” ಎಂದು ಮನ ಅಥವಾ ಪ್ರಜ್ಞೆಗೆ ಪರಿಸರವನ್ನು ನಿರ್ಮಿಸುವ ಸಾಮರ್ಥ್ಯವಿದೆ ಎಂಬ ಹೇಳಿಕೆಯಿಂದ. ಮನವು ಮುಂದೆ ನಡೆಯುತ್ತದೆ, ಅದರ ಹಿಂದೆ ಧರ್ಮ, ಮನವೇ ಶ್ರೇಷ್ಟ, ಎಲ್ಲವೂ ಮನೋಮಯ, ನಮ್ಮ ಮಾತು ಅಥವಾ ಚರ್ಯೆ ಮನಸ್ಸಿನಿಂದ ಹೊಲಸಾದಾಗ ಅಥವಾ ಪ್ರಸನ್ನವಾಗಿದ್ದಾಗೆ ಗಾಡಿಯ ಚಕ್ರಗಳು ಕಾಲುಗಳನ್ನು, ಅಂದರೆ ಎತ್ತಿನ ಕಾಲುಗಳನ್ನು, ಹಿಂಬಾಲಿಸುವಂತೆ, ನೆರಳು ವ್ಯಕ್ತಿಯನ್ನು ಹಿಂಬಾಲಿಸುವಂತೆ, ದುಃಖವೂ ಸುಖವೂ ನಮ್ಮನ್ನು ಹಿಂಬಾಲಿಸುತ್ತವೆ. ಬೌದ್ಧರ ಈ ನಿಲುವು ಇತರ ಧರ್ಮಗಳಿಗೂ ಸಮ್ಮತವಾಗತಕ್ಕದ್ದು. ಈ ಪ್ರಜ್ಞಾವಾದದ ಆಧುನಿಕ ರೂಪವನ್ನು ಮ್ಯಾಕ್ಸ್ ವೇಬರ್‌ನ ಚಿಂತನೆಯಲ್ಲಿ ಕಾಣಬಹುದು. ಅಲ್ಲಿ ಭೌತಿಕ ನೆಲೆಗೆ ಸೇರಿದ ಚಾರಿತ್ರಿಕ ವ್ಯವಸ್ಥೆಗಳು ಪ್ರಜ್ಞೆಯ ನೆಲೆಗೆ ಸೇರಿದ ವಿಚಾರತತ್ವದಿಂದ (ಐಡಿಯಾಲಜಿ) ಜನಿಸುತ್ತವೆ ಎಂಬ ಪ್ರಜ್ಞಾವಾದದ ಹೊಸ ರೂಪವಿದೆ. ಬಂಡವಾಳಶಾಹಿ ವ್ಯವಸ್ಥೆಗೆ ಜಾನ್ ಕ್ಯಾಲ್ವಿನ್‌ನ ಕಾಲಿಂಗ್ ಎಂಬ ತತ್ವದ ಪ್ರೇರಣೆ ಕಾರಣವಾಯ್ತೆಂದು ವೇಬರ್ ವಾದಿಸಿದ್ದಾನೆ. ವೇಬರ್‌ನ ತಾಯಿಗೆ ಮಗನ ಈ ವಿಚಾರವು ಸಂತಸವನ್ನು ಉಂಟುಮಾಡಿರಬಹುದು. ಆಕೆ ಕ್ಯಾಲ್ವಿನಿಸಂನಲ್ಲಿ ಅಪಾರ ನಂಬಿಕೆಯಿಟ್ಟವಳು.

ಆದರೆ ವೇಬರ್ ಬರೆಯುವ ಹೊತ್ತಿಗೆ ಕಾರ್ಲ್ ಮಾರ್ಕ್ಸ್ ಈ ಪ್ರಜ್ಞಾವಾದವನ್ನು ಸಮರ್ಪಕವಾಗಿ ಪ್ರಶ್ನಿಸಿ ಭೌತಿಕತೆಯಲ್ಲಿ ಅಧಿಷ್ಠಿತವಾದ ತನ್ನ ಇತಿಹಾಸವಾದವನ್ನು ಮಂಡಿಸಿದ್ದ. “ಮಾನವರ ಅಸ್ತಿತ್ವವನ್ನು ಅವರ ಪ್ರಜ್ಞೆ ನಿಗದಿ ಪಡಿಸುವುದಿಲ್ಲ, ಬದಲಿಗೆ ಅವರ ಸಾಮಾಜಿಕ ಅಸ್ತಿತ್ವವು ಅವರ ಪ್ರಜ್ಞೆಯನ್ನು ನಿಗದಿಪಡಿಸುತ್ತದೆ.” ಎಂದು ಆತ ತನ್ನ ಎ ಕಾಂಟ್ರಿಬ್ಯೂಶನ್ ಟು ದಿ ಕ್ರಿಟೀಕ್ ಆಫ್ ಪೊಲಿಟಿಕಲ್ ಎಕಾನಮಿ ಕೃತಿಯ ಮುನ್ನುಡಿಯಲ್ಲಿ ಬರೆದ ಪ್ರಸಿದ್ಧ ಸಾಲು ಪ್ರಜ್ಞಾವಾದಕ್ಕೆ ಬರೆದ ಮರಣವಾರ್ತೆಯಂತಿದೆ. ಆದರೆ ಪ್ರಜ್ಞಾವಾದ ಕೊನೆಗೊಳ್ಳಲಿಲ್ಲ. ವೇಬರ್‌ನ ಮತ್ತು ಹೈಡೆಗರ್‌ನಂತ ಹರ್ಮೆನ್ಯೂಟಿಕ್ಸ್ನ ವಕ್ತಾರರ ಮೂಲಕ ಅದು ಹೊಸ ರೂಪ ಪಡೆದುಕೊಂಡಿತು.

ಜಾತಿ ಪದ್ಧತಿಯ ವಿಶ್ಲೇಷಣೆಗಳಲ್ಲಿ ಪ್ರಜ್ಞಾವಾದದ ಚೌಕಟ್ಟಿಗೆ ಮೇಲುಗೈ ಉಂಟಾದರೂ ಈವರೆಗೆ ಜಾತಿ ಎಂಬ ಮನೋಗುಣವು ತನ್ನ ಭೌತಿಕ ಪರಿಸರವನ್ನು ಹೇಗೆ ಸೃಷ್ಟಿಸುತ್ತದೆ, ಹೇಗೆ ಮಾರ್ಪಾಟುಗೊಳಿಸುತ್ತದೆ, ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರವಿಲ್ಲ. ಬಾಹ್ಮಣಿಕಲ್ ಎಂಬ, ಏನನ್ನು ಸೂಚಿಸುತ್ತಿದೆ ಎಂಬುದು ಸ್ಪಷ್ಟವಲ್ಲದ ಸೂಚಕವೊಂದರ ತೇಪೆಯಿಂದ ತಮ್ಮ ಅಸಮರ್ಪಕತೆಯನ್ನು ಮರೆಮಾಸಲು ಶ್ರಮಿಸುತ್ತ ಬಂದಿವೆ, ಈ ವಿಶ್ಲೇಷಣೆಗಳು. ಪ್ರಜ್ಞಾವಾದವನ್ನು ಒಪ್ಪಿಕೊಳ್ಳದಂತ ಮತ್ತು ಭೌತಿಕ ಪರಿಸರಕ್ಕೆ ಆದ್ಯತೆ ನೀಡುವಂತ ನನ್ನಂತ ಸಂಶೋಧಕರಿಗೆ ಜಾತಿಯನ್ನು ಅನೇಕ ಶತಮಾನಗಳ ಕಾಲ ನೆಲೆ ನಿಲ್ಲಿಸಿದ ಭೌತಿಕ ವ್ಯವಸ್ಥೆ ಎಂಥದ್ದು ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಬ್ರಾಹ್ಮಣರ ಹಿತಾಸಕ್ತಿಯೇ ಭೌತಿಕ ವ್ಯವಸ್ಥೆಯಾಗಿತ್ತು ಎಂಬ ತಿಳಿಯಾದ ಧೋರಣೆ ಎರಡೋ ಅದಕ್ಕಿಂತ ಹೆಚ್ಚೋ ಸಹಸ್ರಮಾನಗಳ ಚರಿತ್ರೆಯನ್ನು ಕ್ರಮಾನುಗತವಾಗಿ ಪರಿಶೀಲಿಸಿದಾಗ ಸಮರ್ಥಿಸಿಕೊಳ್ಳಲು ಅಸಾಧ್ಯವಾಗಿಬಿಡುತ್ತದೆ. ತಮ್ಮ ಹಿತಾಸಕ್ತಿಯನ್ನು ಅಷ್ಟೊಂದು ಕಾಳಜಿಯಿಂದ ಪೋಷಿಸುವವರು ಮೊದಲಿಗೆ ತಮ್ಮ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸಿಕೊಳ್ಳುವುದು ಸಹಜ. ವಸಾಹತುಪೂರ್ವ ಕಾಲದಲ್ಲಿ ಅಂಥ ಭದ್ರತೆ ಒದಗಿಸಿಕೊಟ್ಟದ್ದು ಭೂಮಾಲೀಕತ್ವ. ಆ ಕಾಲದ ಆಕರಗಳನ್ನು ಪರಿಶೀಲಿಸಿದಾಗ ಎಲ್ಲೆಡೆಯಲ್ಲೂ ಬ್ರಾಹ್ಮಣರು ಭೂಮಾಲೀಕರಾಗಿದ್ದರೆಂದು ಹೇಳಲು ಆಧಾರಗಳಿಲ್ಲ. ಒಕ್ಕಲಿಗ, ಲಿಂಗಾಯತ, ರೆಡ್ಡಿ, ವೆಳ್ಳಾಳ, ಮೊದಲಾದ ಸ್ಥಳೀಯ ಜಾತಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಮುಖ ಭೂಮಾಲೀಕರಾಗಿದ್ದರು, ಕುಸುಮಬಾಲೆ ಕಾದಂಬರಿಯ ಸೋಮಪ್ಪ, ಸಿದ್ದೂರ, ಯಾಡ ಮೊದಲಾದವರಂತೆ. ಅಂಥ ಜಾತಿಗಳನ್ನು ಎಂ.ಎನ್. ಶ್ರೀನಿವಾಸ್ ಮೇಲುಗೈ ಜಾತಿ (ಡಾಮಿನೆಂಟ್ ಕಾಸ್ಟ್) ಎಂದು ಬಣ್ಣಿಸಿದಾರೆ. ಚೋಳರ ಕಾಲದ ತಮಿಳುನಾಡಿನ ಶಾಸನಗಳು ಭೂಮಾಲೀಕತ್ವದ ಮೇಲೆ ಬ್ರಾಹ್ಮಣರಿಗಿದ್ದ ಸಣ್ಣಪ್ರಮಾಣದ ಹಿಡಿತವೂ ದುರ್ಬಲಗೊಳ್ಳುತ್ತಿದ್ದನ್ನು ನಮ್ಮ ಧೀಮಂತ ಇತಿಹಾಸಕಾರರಲ್ಲಿ ಓರ್ವರಾದ ವೈ. ಸುಬ್ಬರಾಯಲು ತೋರಿಸಿಕೊಟ್ಟಿದ್ದಾರೆ. ಮನುಸ್ಮೃತಿ ಈ ದೇಶದಲ್ಲಿ ಲಾ ಆಫ್ ದಿ ಲ್ಯಾಂಡ್ ಆಗಿತ್ತೆಂದು ಆವೇಶಗೊಳ್ಳುವವರು ಬಹುಶಃ ಮಿತಭಾಷಿಗಳಾದ ಸುಬ್ಬರಾಯಲು ಅವರ ಹೆಸರು ಕೇಳಿರಲಿಕ್ಕಿಲ್ಲ.

ಹತ್ತೊಂಬತ್ತನೆಯ ಶತಮಾನಕ್ಕಿಂತ ಹಿಂದೆ ಜಾತಿಗೆ ನಿರ್ದಿಷ್ಟವಾದ ಭೌತಿಕ ಚೌಕಟ್ಟೊಂದಿತ್ತು. ಅದನ್ನು ಮುಂಬರುವ ಅಧ್ಯಾಯಗಳಲ್ಲಿ ವಿವರಿಸುತ್ತೇನೆ. ಈ ವ್ಯವಸ್ಥೆ ಹತ್ತೊಂಬತ್ತನೆಯ ಶತಮಾನದಲ್ಲಿ ತೀವ್ರವಾದ ಮಾರ್ಪಾಟುಗಳಿಗೆ ಗುರಿಯಾಯ್ತು. ಕ್ಷೇತ್ರಕಾರ್ಯ ಮತ್ತು ಪತ್ರಾಗಾರದ ನೆರವಿನಿಂದ ತಜ್ಞರು ತಮ್ಮ ಸಂಶೋಧನೆಗಳನ್ನು ಆರಂಭಿಸುವ ವೇಳೆಗೆ ಹಳೆಯ ಜಾತಿ ವ್ಯವಸ್ಥೆ ಅಳಿದುಹೋಗಿತ್ತು. ದುಡಿಮೆಯ (ಲೇಬರ್) ಸ್ವರೂಪದಲ್ಲಿ ಆದ ಬಹುದೊಡ್ಡ ಪಲ್ಲಟವು ಈ ಮಾರ್ಪಾಟಿಗೆ ಕಾರಣವಾಗಿದೆ. ಅದರ ವಿವರಣೆಯನ್ನೂ ನಂತರದ ಅಧ್ಯಾಯದಲ್ಲಿ ನೀಡಿದ್ದೇನೆ. ಮೊದಲಿನಂತೆ ಈಗಲೂ ಸಂಪನ್ಮೂಲಗಳ ಮೇಲಿನ ನಿಯಂತ್ರಣಕ್ಕೆ ಜಾತಿಯಲ್ಲಿ ಮಹತ್ವದ ಪಾತ್ರವಿದೆ, ಆದರೆ ಈಗ ದುಡಿಮೆಯ ಹೊಸ ಸ್ವರೂಪ ಮತ್ತು ಅಧಿಕಾರಶಾಹಿಯ (ಬ್ಯೂರೋಕ್ರಸಿ) ಮೂಲಕ ನಿರ್ಣಯಗೊಳ್ಳುವ ಜಾತಿಗುರುತುಗಳಿಂದಾಗಿ ಇದು ಹಿಂದಿನಂತೆ ನಿರ್ದಿಷ್ಟವಾದ ವ್ಯವಸ್ಥೆಯಾಗಿ ಉಳಿದಿಲ್ಲ. ಅದು ಹೊಸ ವ್ಯವಸ್ಥೆಯನ್ನು ಪೋಷಿಸುವ ಜಾತೀಯತೆ ಎಂಬ ಮನೋಗುಣವಾಗಿ ಮಾರ್ಪಟ್ಟಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ವಿಕಾಸ ಹೊಂದತೊಡಗಿದ ವಿದ್ಯಮಾನವಾದ ಈ ಹೊಸ ಮನೋಗುಣವನ್ನೇ ಸಂಶೋಧಕರು ಪ್ರಾಕ್ತನ ಕಾಲದ ಬಳುವಳಿಯೆಂದು ಬಣ್ಣಿಸುತ್ತ ಬಂದಿರುವುದು. ಜಾತಿಯ ಸ್ವರೂಪದಲ್ಲಾದ ಪರಿವರ್ತನೆ ಎಷ್ಟು ಮೌಲಿಕವಾಗಿತ್ತೆಂದರೆ ಇತ್ತೀಚಿನ ಮೂರು ದಶಕಗಳಲ್ಲಿ ಕೆಲವು ತಜ್ಞರಿಗೆ ವಸಾಹತುಪೂರ್ವ ಭಾರತದಲ್ಲಿ ಸಮಾನವಾದ ವ್ಯವಸ್ಥೆಯೊಂದು ಕಾಣದಿರಲು ಹಿಂದೆ ಜಾತಿ ಎಂಬ ಪದ್ಧತಿಯೇ ಇರಲಿಲ್ಲ, ಉಂಟೆಂದು ಭಾವಿಸಿಕೊಳ್ಳುತ್ತ ಬ್ರಿಟಿಶರು ಜಾರಿಗೆ ತಂದದ್ದು ಎಂದು ವಾದಿಸುವ ಅತಿರೇಕಕ್ಕೂ ಹೋದದ್ದುಂಟು. ಈ ನಿಲುವುಳ್ಳ ತಜ್ಞರ ಸಾಲಿನ ಮುಂಚೂಣಿಯಲ್ಲಿದ್ದವರು ನಿಕಲಸ್ ಡರ್ಕ್ಸ್.

ಸಮಸ್ಯೆಯನ್ನು ಹತ್ತೊಂಬತ್ತನೆಯ ಶತಮಾನದ ಪರಿವರ್ತನೆಗಳ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಇಂದು ಭೌತಿಕ ಪರಿಸರವೊಂದರ ಮೇಲೆ ರೂಪು ಪಡೆದ ಜಾತಿ ಎಂಬ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ, ಇರುವುದು ಜಾತೀಯತೆ (ಕ್ಯಾಸ್ಟಿಸಂ) ಎನ್ನುವ ಮನೋಗುಣ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಸ್ಪೃಶ್ಯತೆ ಅಸ್ಪೃಶ್ಯತೆಗಳು ಪ್ರಾಮಾಣಿಕವಾದ ಆಚರಣೆಗಳಾಗಿರುವುದಿಲ್ಲ, ಮನೋಧರ್ಮದ ನೆಲೆಯಲ್ಲಿದ್ದು ಜಾತಿಯ ದೈನಂದಿನ ರಾಜಕಾರಣದ ಪಾತಳಿಯಲ್ಲಿ ಕೆಲಸಮಾಡುತ್ತವೆ. ಆದ್ದರಿಂದಲೇ ಅವರ್ಣರ ಮನೆಯಲ್ಲಿ ಉಣ್ಣಲು ಹಿಂಜರಿವ ಸವರ್ಣರು ತಾವು ಪದೆಪದೆ ಹೊಟೇಲಿನಲ್ಲಿ ಸೇವಿಸುವ ಆಹಾರವನ್ನು ಅವರ್ಣರು ತಯಾರಿಸಿರಬಹುದೇ ಎಂಬ ಯೋಚನೆಗೆ ಹೋಗುವುದಿಲ್ಲ.

ಜಾತೀಯತೆಯಲ್ಲಿ ಕುಲಮಹಿಮೆ, ವಂಶಶುದ್ಧಿ ಮತ್ತು ತಮ್ಮ ಜಾತಿಯ ಸುವರ್ಣ ಯುಗದ ಬಗ್ಗೆ ನಿರ್ಮಿಸಿಕೊಂಡ ಕಥನಗಳಿರುತ್ತವೆ. ಅದನ್ನು ಆಧರಿಸಿ ಒಳವಿವಾಹದ (ಎಂಡೋಗ್ಯಾಮಿ) ಸಂಪರ್ಕಗಳನ್ನು ನಿರ್ಮಿಸಿಕೊಳ್ಳಲಾಗುತ್ತದೆ, ಗುಂಪುಗಳನ್ನು ಬೇರ್ಪಡಿಸಲಾಗುತ್ತದೆ, ಹಾಗೂ ಸಂಪನ್ಮೂಲಗಳ ಮೇಲಿನ ನಿಯಂತ್ರಣದ ದೃಷ್ಟಿಯಿಂದ ಮೇಲಾಳು ಕೀಳಾಳು ಸಂಬಂಧಗಳನ್ನು ಕಟ್ಟಿಕೊಳ್ಳಲಾಗುತ್ತದೆ. ಇದರಲ್ಲಿ ಒಮ್ಮತ, ಹೊಂದಾಣಿಕೆ ಮತ್ತು ಸಹಿಷ್ಣುತೆಗಳು ಕೆಲಸ ಮಾಡುತ್ತವೆ, ಹಾಗೆಯೇ ಅಲಕ್ಷ್ಯ, ತಿರಸ್ಕಾರ ಮತ್ತು ಹಿಂಸೆಯೂ ತಲೆದೋರುತ್ತದೆ. ಜಾತೀಯತೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳುವುದು ಕಷ್ಟಕರವಲ್ಲ. ತನ್ನ ಉದಾರ ರೂಪದಲ್ಲಿ ಅದು ಆರ್.ಕೆ. ನಾರಾಯಣರ ಮಾಲ್ಗುಡಿ ಕಾದಂಬರಿಗಳಲ್ಲಿ ಕಂಡಂತೆ ಕಾಣುತ್ತದೆ. ಅಲ್ಲಿ ಇಪ್ಪತ್ತನೆಯ ಶತಮಾನದ ತಮಿಳು ಬ್ರಾಹ್ಮಣರ ಕೆಲವು ಮೂಲ್ಯಗಳನ್ನು ಜಾತಿಯ ಪರಿಭಾಷೆ ಇಲ್ಲದಂತೆ ಸಾರ್ವತ್ರಿಕವಾದ ಸಾರ್ವಜನಿಕ ಮೂಲ್ಯಗಳು ಎಂಬಂತೆ ಚಿತ್ರಿಸಲಾಗಿದೆ. ತನ್ನ ಮಾರಕ ರೂಪದಲ್ಲಿ ಅದು ಎಂಥ ಹಿಂಸಾತ್ಮಕ ಚೆಹರೆ ಪಡೆದುಕೊಳ್ಳುತ್ತದೆ ಎಂದು ತಿಳಿಯಲು ಪೆರುಮಾಳ್ ಮುರುಗನ್ ಅವರ ಪೂಕ್ಕುೞಿ ಎಂಬ ತಮಿಳು ಕಾದಂಬರಿ (ಇಂಗ್ಲಿಶ್‌ನಲ್ಲಿ ಪಯರ್) ಓದಿದರೆ ಸಾಕು.

ಜಾತೀಯತೆ ಚಾರಿತ್ರಿಕವಾದ ಹಲವು ಆಗುಹೋಗುಗಳೊಂದಿಗೆ ಬೆಸೆದುಕೊಂಡಿದೆ. ಮಧ್ಯಮ ವರ್ಗದ ಏಳಿಗೆ ಮತ್ತು ವಿಸ್ತಾರವು ಅವುಗಳಲ್ಲೊಂದು. ಹತ್ತೊಂಬತ್ತನೆಯ ಶತಮಾನ ಕೊನೆಗೊಳ್ಳುವ ಹೊತ್ತಿಗೆ ಮಧ್ಯಮ ವರ್ಗ ರೂಪು ಪಡೆದಿತ್ತು. ಆಗ ಅದು ಸಣ್ಣ ಮತ್ತು ನಿಗದಿತ ಸ್ವಭಾವಗಳುಳ್ಳ ವರ್ಗವಾಗಿತ್ತು. ಆಧುನಿಕ ಶಿಕ್ಷಣದ ಲಾಭ ಪಡೆದುಕೊಂಡವರೇ ಈ ವರ್ಗದ ಮುಂಚೂಣಿಯಲ್ಲಿದ್ದರು. ಬಡತನ ವ್ಯಾಪಕವಾಗಿದ್ದ ಆ ದಿನಗಳಲ್ಲಿ ಮಧ್ಯಮ ವರ್ಗದವರು ಒಟ್ಟು ಜನಸಂಖ್ಯೆಯ ಶೇಖಡ 5ಕ್ಕಿಂತ ಕಡಿಮೆಯೇ ಆಗಿದ್ದರು. ಈ ಪ್ರಮಾಣವು ಮುಂಬರುವ ದಶಕಗಳಲ್ಲಿ ಹೆಚ್ಚುತ್ತ ಬಂದು 70ರ ದಶಕದ ಭೂಸುಧಾರಣೆ ಮತ್ತು 80ರ ದಶಕದಲ್ಲಿ ಆರಂಭಗೊಂಡ ಆರ್ಥಿಕ ಪರಿವರ್ತನೆಗಳಿಂದಾಗಿ 2000ದ ಇಸವಿಯ ವೇಳೆಗೆ ಜನಸಂಖ್ಯೆಯ ಮುಕ್ಕಾಲು ಪಾಲು ಮಧ್ಯಮ ವರ್ಗದವರಾಗಿ ಹೋದರು. ಇದು ಮಧ್ಯಮ ವರ್ಗವನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿಲ್ಲದಂತೆ ಮಾಡಿತು. ತನ್ನೊಳಗೇ ಅನೇಕ ಸ್ಥರಗಳ ಭಿನ್ನತೆ ಹಾಗೂ ವರ್ಗೀಕರಣದಿಂದ ಕೂಡಿದ ವರ್ಗವಾಗಿ ಮಾರ್ಪಾಟು ಹೊಂದಿಕೊಂಡಿತು, ಈ ಮಧ್ಯಮ ವರ್ಗ. ಜಾತೀಯತೆ ಕೆಲಸ ಮಾಡುವ ರೀತಿಯೂ ಮಧ್ಯಮ ವರ್ಗದ ಸ್ವರೂಪ ಬದಲಾದಂತೆಲ್ಲ ಬದಲಾಗಿದೆ. 90ರ ದಶಕದಲ್ಲಿ ಇದರ ತೀವ್ರತೆ ಹೆಚ್ಚಿತು. ಆಗ ಜಾಗತೀಕರಣ, ವಿಕೇಂದ್ರೀಕರಣ, ಸ್ಥಳೀಯ ಸಂಸ್ಥೆಗಳನ್ನು ಸಬಲ ಗೊಳಿಸುವುದು, ಹೀಗೇ ನಾನಾ ಹೆಸರುಗಳಲ್ಲಿ ಸಣ್ಣ ಪಟ್ಟಣಗಳ ಹಾಗೂ ಗ್ರಾಮೀಣ ಪ್ರದೇಶಗಳ ವರೆಗೆ ನಿಯೋಲಿಬರಲ್ ಬಂಡವಾಳವು ಹರಿದುಬರತೊಡಗಿತು. ಅದರೊಂದಿಗೆ ಮನೆ, ಭೂಮಿ, ಅಂಗಡಿಮುಂಗಟ್ಟುಗಳು, ವಿಶಾಲವಾದ ಶಾಪಿಂಗ್ ಮಾಲ್‌ಗಳು ಮುಂತಾದವುಗಳಿಂದ ಬರುವ ಭೂಬಾಡಿಗೆಯ (ಗ್ರೌಂಡ್ ರೆಂಟ್) ಅಪಾರವಾದ ಆರ್ಥಿಕ ಜಾಲವೊಂದು ತೀವ್ರ ರೂಪ ಪಡೆದುಗೊಂಡಿತು. ಇದೊಂದು ಸಮಾನಾಂತರ ಆರ್ಥಿಕ ಜಾಲ. ಪ್ರತಿ ಮಾಸವೂ ಸಾವಿರಾರು ಕೋಟಿ ರೂಪಾಯಿಗಳನ್ನು ಉತ್ಪಾದಿಸುವ ಗ್ರೌಂಡ್ ರೆಂಟ್ ಜಾಲವಿದು. ಇದು ಲೆಕ್ಕಪುಸ್ತಕಗಳಲ್ಲಿ ಕಾಣದಂತ ಹಣಕಾಸು ವ್ಯವಹಾರಗಳ ನೆಲೆಯಾಗಿದೆ. ಇರುವ ಸಂಪನ್ಮೂಲಗಳ ಮೇಲಿನ ಹಿಡಿತವು ಇನ್ನಷ್ಟು ಪ್ರಬಲಗೊಳ್ಳಲು ಈ ಭೂಬಾಡಿಗೆಯ ಆರ್ಥಿಕ ಜಾಲವು ಕಾರಣವಾಯಿತು.

ಜಾತಿ ಕುರಿತು ನಡೆದಿರುವ ಯಾವ ಅಧ್ಯಯನದಲ್ಲಿಯೂ ಈ ಐತಿಹಾಸಿಕ ನೆಲೆಗಳ ಒಂದೂ ಪ್ರಸ್ತಾಪ ಕಾಣುವುದಿಲ್ಲ. ಅಲ್ಲಿ ಐತಿಹಾಸಿಕ ನೆಲೆಯು ತನ್ನಷ್ಟಕ್ಕೆ ತಾನಿರುತ್ತದೆ, ಜಾತಿ ಪದ್ಧತಿ ಈ ನೆಲೆಯೊಂದಿಗೆ ಏನೂ ಸಂಬಂಧವಿಲ್ಲದಂತೆ ಸಹಸ್ರಮಾನಗಳಿಂದ ತನ್ನಷ್ಟಕ್ಕೆ ಅಜ್ಜಿಕೂದಲು ಎನ್ನುವ ಬೀಜದಂತೆ ತೇಲಿಕೊಂಡಿರುತ್ತದೆ. ಈ ಅಧ್ಯಯನಗಳಿಂದ ಜಾತಿ ಕುರಿತ ನಮ್ಮ ಅರಿವು ಗಾತ್ರದಲ್ಲಿ ಮಾತ್ರ ಬೆಳೆದಿದೆ. ಗುಣಮಟ್ಟದ ದೃಷ್ಟಿಯಿಂದ ಒಂದುವರೆ ಶತಮಾನಗಳಿಗೂ ಹಿಂದೆ ಜ್ಯೋತಿಬಾ ಫೂಲೆ ಹೇಳಿಹೋದದ್ದಕ್ಕಿಂತ ವಿಶೇಷ ಮುನ್ನಡೆಯನ್ನೇನೂ ಇವು ಸಾಧಿಸಿಲ್ಲ. ಈಗಿರುವ ನಿಲುವುಗಳು ಆಳವಾಗಿ ಬೇರೂರಿಕೊಂಡದ್ದು. ಅಪಾರ ಸಂಖ್ಯೆಯಲ್ಲಿ ಅದರ ರಾಜಕೀಯ ಹಾಗೂ ಆರ್ಥಿಕ ಫಲಾನುಭವಿಗಳೂ ನಮ್ಮ ನಡುವಲ್ಲಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ಮೌಲಿಕವಾದ ಮರುಚಿಂತನೆ ಬಹುತೇಕ ಜನರಿಗೆ ಸ್ವೀಕೃತವಾಗಲಿಕ್ಕಿಲ್ಲ. ಸ್ವೀಕೃತಿ ಕಡಿಮೆಯುಳ್ಳ ಮರುಚಿಂತನೆಯ ಈ ದೀರ್ಘ ಲೇಖನಕ್ಕೆ ಪೀಠಿಕೆಯಂತೆ ಬರೆದ ಈ ವಿಮರ್ಶೆಯನ್ನು ಇಲ್ಲಿಗೆ ಕೊನೆಗಳಿಸುತ್ತೇನೆ. ಮುಂದಿನ ಭಾಗದಲ್ಲಿ ವಿಶ್ಲೇಷಣೆಯನ್ನು ಪ್ರಾರಂಭಿಸುತ್ತೇನೆ.

*

(ಸಾಂದರ್ಭಿಕ ಚಿತ್ರಗಳು)

ಎರಡನೆಯ ಕಂತು

ಪ್ರತಿಕ್ರಿಯೆಗಳು-

ಹರ್ಷಕುಮಾರ್‌ ಕುಗ್ವೆ ಪ್ರತಿಕ್ರಿಯೆ: ಜಾತಿ ಪದ್ಧತಿಯ ಮೈಮನಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...