ಜಾತಿ ಪದ್ಧತಿಯ ಮೈಮನಗಳು-ಹತ್ತನೇ ಕಂತು

Date: 18-10-2020

Location: .


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಹತ್ತನೇ ಕಂತಿನ ಬರಹ ಇಲ್ಲಿದೆ.


ಋಗ್ವೇದದಲ್ಲಿ ಕಾಣುವ ಜನಜೀವನವು ಪಿತೃ ಪ್ರಧಾನವಾದ್ದು, ಅಲ್ಲಿ ಹೆಣ್ಣಿಗಿಂತ ಗಂಡಿಗೇ ಹೆಚ್ಚಿನ ಮಹತ್ವ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಜಾಗತಿಕ ಇತಿಹಾಸದ ಸಂದರ್ಭದಲ್ಲಿ ಸಮನಾದ ವ್ಯವಸ್ಥೆಯೊಂದು ಜನ್ಮಪಡೆದದ್ದು ಹೇಗೆ ಮತ್ತು ಯಾವಾಗ ಎಂಬುದು ಅನೇಕ ಪ್ರಬುದ್ಧ ಚರ್ಚೆಗಳಿಗೆ ಗುರಿಯಾಗಿವೆ. ಮಾನವಶಾತ್ರ, ಪ್ರಾಕ್ತನಶಾಸ್ತ್ರ, ಇತಿಹಾಸ ಮೊದಲಾದ ಹಲವು ಕ್ಷೇತ್ರಗಳಿಗೆ ಸೇರಿದ ತಜ್ಞರು ಹತ್ತೊಂಬತ್ತನೆಯ ಶತಮಾನದಿಂದಲೇ ಈ ಕುರಿತು ವಿವಿಧ ರೀತಿಯ ಶೋಧಗಳನ್ನು ನಡೆಸುತ್ತ ಬಂದಿದ್ದಾರೆ. ಆದರೆ ಮಾನವ ಇತಿಹಾಸದ ಆರಂಭದ ಹಂತಗಳ ಕುರಿತು ಲಿಖಿತ ದಾಖಲೆಗಳ ಕೊರತೆಯಿರುವುದರಿಂದ ಈ ವಿಷಯದಲ್ಲಿ ಸ್ಪಷ್ಟವಾದ ಚಿತ್ರವೊಂದು ಇನ್ನೂ ತನಕ ಮೂಡಿ ಬಂದಿಲ್ಲ. ನಮ್ಮಲ್ಲಿರುವ ಅನೇಕ ಧೋರಣೆಗಳು ತರ್ಕಬದ್ಧವಾದ ಊಹೆಗಳನ್ನು ಅವಲಂಬಿಸಿವೆ. ಯಾವ ತರಹದ ಭೌತಿಕ ಪರಿಸರ ನಿರ್ಮಾಣಗೊಂಡರೆ ಗಂಡಾಳ್ವಿಕೆ ರೂಢಿಗತವಾಗುತ್ತದೆ ಎಂದು ಹೇಳಲು ನಮ್ಮಲ್ಲಿ ಉಪಾಯಗಳಿಲ್ಲ.

ಗಂಡಾಳ್ವಿಕೆ ನೆಲೆಗೊಳ್ಳುವುದಕ್ಕೆ ಹೆಚ್ಚುವರಿ ಕೃಷಿಯ ವಿಕಾಸ ಹಾಗೂ ಭೂಮಾಲೀಕತ್ವದ ಏಳಿಗೆಯೇ ಕಾರಣವೆಂದು ತಜ್ಞರು ನಂಬುತ್ತಾ ಬಂದಿದ್ದಾರೆ. ಋಗ್ವೇದದಲ್ಲಿ ಗಂಡಾಳ್ವಿಕೆಯಿದೆ, ಆದರೆ ಅಲ್ಲಿ ಹೆಚ್ಚುವರಿ ಕೃಷಿಯನ್ನಾಗಲಿ ಭೂಮಾಲೀಕ ವ್ಯವಸ್ಥೆಯನ್ನಾಗಲಿ ಕಾಣಲಾರೆವು. ಹೀಗಾಗಿ ಈ ನಿಲುವು ಅಸಮರ್ಪಕ ಅನ್ನಿಸುತ್ತದೆ. ಮಾನವ ಜೀವನದ ಕ್ರಮದಲ್ಲಿ ಗಂಡಸರು ಮೇಲ್ಗೈ ಸಾಧಿಸಿದ್ದಕ್ಕೆ ಆಹಾರೋತ್ಪಾದನೆಯ ವ್ಯವಸ್ಥೆ ಏಳಿಗೆ ಪಡೆದದ್ದೇ ಕಾರಣವೆಂದು ತೋರುತ್ತದೆ.

ಆಹಾರೋತ್ಪಾದನೆಯಲ್ಲಿ ದುಡಿಮೆಯ ಸುಯೋಜಿತ ಹಾಗೂ ಸಂಕೀರ್ಣ ರೂಪಗಳಿವೆ. ಅದು ಹೆಚ್ಚುವರಿ ಉತ್ಪಾದನೆಯ ಸ್ವರೂಪ ಹೊಂದಿರಬೇಕಿಲ್ಲ. ಹೊಸ ಶಿಲಾಯುಗ, ತಾಮ್ರ ಶಿಲಾಯುಗ ಹಾಗೂ ಬೃಹತ್ ಶಿಲಾಯುಗದ ನೆಲೆಗಟ್ಟುಗಳಲ್ಲಿ ಕಾಣುವಂತೆ ಸಣ್ಣ ಪ್ರಮಾಣದ ಸಾಗುವಳಿಯಾಗಿದ್ದರೂ ಸಾಕು. ಆಯಾ ಕುಟುಂಬಗಳಿಗೆ ಅಗತ್ಯವಾದ ಪ್ರಮಾಣದಲ್ಲಿ ಧಾನ್ಯವನ್ನೋ ಮತ್ತಾವುದೇ ಬೆಳೆಯನ್ನೋ ಬೆಳೆಯುವುದು ಮಾನವ ಇತಿಹಾಸದ ಬಹುದೊಡ್ಡ ಆರ್ಥಿಕ ಮುನ್ನಡೆಗಳಲ್ಲಿ ಒಂದು. ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರ ಮಹತ್ವ ಪಡೆದುದ್ದಾಗಿದೆ. ಆದಾಗ್ಯೂ ಬಸಿರು, ಹೆರಿಗೆ, ಬಾಣಂತನಗಳಿಂದಾಗಿ ಮಹಿಳೆಯರು ಪದೆ ಪದೆ ಧಾನ್ಯೋತ್ಪಾದನೆಯ ಚಟುವಟಿಕೆಯಿಂದ ದೂರ ಉಳಿಯಬೇಕಾದ ಸ್ಥಿತಿ ಉಂಟಾದದ್ದು ಉತ್ಪಾದನಾ ವ್ಯವಸ್ಥೆಯಲ್ಲಿ ಅವರಿಗೂ ಗಂಡಸರಿಗೂ ನಡುವೆ ದೊಡ್ಡ ಅಸಮತೋಲನವೊಂದನ್ನು ತಂದಿಕ್ಕಿತೆಂದು ತೋರುತ್ತದೆ.

ಇದು ನಮ್ಮ ಊಹೆ. ಐತಿಹಾಸಿಕ ಹಾಗೂ ಪ್ರಾಕ್ತನಶಾಸ್ತ್ರದ ಮೂಲಗಳಲ್ಲಿ ಇದನ್ನು ಸಮರ್ಥಿಸಿಕೊಳ್ಳುವ ಪುರಾವೆಗಳಿಲ್ಲ. ಆದರೆ ಒಂದು ವಿಚಾರವನ್ನು ಮಾತ್ರ ಸಂಶಯವಿಲ್ಲದೆ ಹೇಳಬಹುದು. ಆಹಾರೋತ್ಪಾದನೆಯ ವ್ಯವಸ್ಥೆ ಜಾರಿಗೊಳ್ಳುವ ಮುನ್ನ ದಿನನಿತ್ಯದ ಚಟುವಟಿಕೆಗಳಲ್ಲಿ ಮಹಿಳೆಯರು ತಿರಸ್ಕಾರವನ್ನು ಅನುಭವಿಸಿದ್ದು ಕಡಿಮೆ. ಅವರ ವಹಿಸಿದ ಪಾತ್ರವು ಅಲಕ್ಷೆಗೆ ಗುರಿಯಾದಂತೆ ತೋರುವುದಿಲ್ಲ. ಮಧ್ಯ ಪ್ರದೇಶದ ಭೀಮ್ಬೇಡ್ಕಾದಲ್ಲಿನ ಗವಿಚಿತ್ರಗಳು ಈ ಕುರಿತು ಅಪಾರ ಮಹತ್ವದ ಒಳನೋಟಗಳನ್ನು ಒದಗಿಸುತ್ತವೆ. ಅಲ್ಲಿನ ಮಹಿಳೆಯರ ಚಿತ್ರಣವನ್ನು ಕುಂಕುಂ ರಾಯ್ ಅವರು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.

ಭೀಮ್ಬೇಡ್ಕಾದ ಗವಿ ಚಿತ್ರಗಳು ಕ್ರಿ. ಪೂ. 5000ದ ಆಸುಪಾಸಲ್ಲಿ ರಚಿಸಲಾದ್ದು. ಅವುಗಳಲ್ಲಿ ಮಹಿಳೆಯರು ಹಣ್ಣು ಹಂಪಲುಗಳಂತ ಆಹಾರ ಪದಾರ್ಥಗಳ ಮತ್ತು ಕಾಡಿನಿಂದ ದೊರಕುವ ಇತರ ಸಾಮಗ್ರಿಗಳ ಸಂಗ್ರಹಣೆಯಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಬೇಟೆಯಾಡುತ್ತಿರುವ ಚಿತ್ರಗಳೂ ಸಿಗುತ್ತವೆ. ಬೇಟೆಗೆ ಮಹಿಳೆಯರು ಬುಟ್ಟಿ ಹಾಗೂ ಸಣ್ಣ ಬಲೆಗಳನ್ನು ಬಳಸುತ್ತಿರುವುದನ್ನು ಚಿತ್ರಗಳಲ್ಲಿ ಬಿಡಿಸಲಾಗಿದೆ.

ಬೇಟೆ ಹಾಗೂ ಆಹಾರ ಪದಾರ್ಥಗಳ ಸಂಗ್ರಹಣೆಯ ಈ ಯುಗದಲ್ಲಿ ತಾಯ್ತನವು ಮಹಿಳೆಯರಿಗೆ ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಲು ಅಡ್ಡಿ ಉಂಟು ಮಾಡಿರಲಿಲ್ಲ. ಚಿತ್ರವೊಂದರಲ್ಲಿ ಓರ್ವ ಮಹಿಳೆ ಹೆಗಲ ಮೇಲೆ ದೊಡ್ಡ ಬುಟ್ಟಿಯೊಂದನ್ನು ಕಟ್ಟಿ ಅದರಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿದ್ದಾಳೆ. ಜೊತೆಗೆ ಬೇಟೆಯಾಡಿದ ಪ್ರಾಣಿಯೊಂದನ್ನು ತಲೆಯ ಮೇಲೆ ಹೊತ್ತಿದ್ದಾಳೆ. ಬೇಟೆಯ ಬುಟ್ಟಿ ಹಾಗೂ ಬಲೆಗಳನ್ನು ಹೊತ್ತ ಚಿತ್ರಗಳಲ್ಲಿ ಅನೇಕ ಸಲ ಮಹಿಳೆಯರು ಗರ್ಭಿಣಿಯರಾಗಿರುವುದನ್ನು ನೋಡಬಹುದು. ಅಂಥ ಚಿತ್ರವೊಂದರಲ್ಲಿ ಒಬ್ಬಾಕೆ ಚಿಗರೆಯೊಂದನ್ನು ಎಳೆತರುತ್ತಿದ್ದಾಳೆ. ಇನ್ನೊಂದು ಚಿತ್ರದಲ್ಲಿ ಓರ್ವಳು ಮೀನು ಹಿಡಿಯುತ್ತಿದ್ದಾಳೆ. ಗುಂಪಾಗಿ ನಡೆಯುವ ಬೇಟೆಯ ಚಿತ್ರಗಳಲ್ಲಿಯೂ ಮಹಿಳೆಯರಿದ್ದಾರೆ. ಅಲ್ಲಿ ಅವರು ತಲೆಯ ಮೇಲೆ ವಸ್ತ್ರದಿಂದಲೋ, ಮೃಗಗಳ ಚರ್ಮದಿಂದಲೋ, ಮತ್ತೊಂದರಿಂದಲೋ ತಯಾರಿಸಿದ ಕಿರೀಟದಂತ ವಿಶಾಲವಾದ ವಸ್ತುವೊಂದನ್ನು ತೊಟ್ಟಿದ್ದಾರೆ. ಈ ಚಿತ್ರಗಳು ಬೇಟೆ ಯಶಸ್ವಿಯಾಗುವಲ್ಲಿ ಮಹಿಳೆಯರು ವಹಿಸಿದ ಮಹತ್ವದ ಪಾತ್ರವನ್ನಷ್ಟೇ ಒತ್ತಿ ಹೇಳುತ್ತಿಲ್ಲ, ಗರ್ಭಿಣಿ ಅಥವಾ ತಾಯಿಯಾಗಿರುವುದು ಅವರ ದಿನನಿತ್ಯದ ಚಟುವಟಿಕೆಗಳ ಮೇಲೆ ಪ್ರತಿ ಬಂಧಗಳನ್ನು ಹಾಕಿರಲಿಲ್ಲ ಎಂಬುದನ್ನೂ ಸಾರುತ್ತಿವೆ.

ಬೇಟೆ ಹಾಗೂ ಆಹಾರ ಸಂಗ್ರಹಣೆಯೇ ಜೀವನಾಧಾರವಾಗಿದ್ದ ಕಾಲಗಳಲ್ಲಿ ಗಂಡಸರು ಬೇಟೆಗೆ ಹೋಗುತ್ತಿದ್ದರು, ಹೆಂಗಸರು ಆಹಾರ ಸಂಗ್ರಹಣೆ ನಡೆಸುತ್ತಿದ್ದರು ಎಂಬ ವಾದವನ್ನು ತಜ್ಞರಲ್ಲಿ ಅನೇಕರು ಮಂಡಿಸಿದ್ದಾರೆ. ಈ ವಾದವನ್ನು ಒಪ್ಪಿಕೊಳ್ಳಬೇಕಿಲ್ಲ ಎಂದು ಭೀಮ್ಬೇಡ್ಕಾದ ಗವಿಚಿತ್ರಗಳ ಆಧಾರದ ಮೇರೆಗೆ ಹೇಳಬಹುದು. ಈ ಗವಿಚಿತ್ರಗಳ ಕಾಲಕ್ಕೆ ಲೈಂಗಿಕ ನೆಲೆಯಲ್ಲಿ ಶ್ರಮದ ಹಂಚಿಕೆಯು (ಸೆಕ್ಷುವಲ್ ಡಿವಿಷನ್ ಆಫ್‌ ಲೇಬರ್) ಇನ್ನೂ ಪ್ರಚಾರ ಪಡೆದಿರಲಿಲ್ಲ. ಮಹಿಳೆಯರು ಒಂದೇ ಸಮನೆ ಬೇಟೆಯನ್ನೂ ಆಹಾರ ಸಂಗ್ರಹಣೆಯನ್ನೂ ಕೈಗೊಳ್ಳುತ್ತಿದ್ದರು. ಜೀವನಾಧಾರಕ್ಕೆ ಅಗತ್ಯವಾದ ದುಡಿಮೆಯ ವಿವಿಧ ಪ್ರಕಾರಗಳಲ್ಲಿ ಅವರು ಗಂಡಸರಷ್ಟೇ ಸಕ್ರಿಯರಾಗಿದ್ದರು.

ಸೃಷ್ಟಿಯ ಕಾರ್ಯದಲ್ಲಿ ಮಹಿಳೆಯರು ಹೊಂದಿದ ಪಾತ್ರವು ಕ್ರಮೇಣ ಮಾತೃದೇವತೆಯ ಆರಾಧನೆಗೆ ಕಾರಣವಾದದ್ದು ಸಹಜವೇ ಆಗಿದೆ. ಆದರೆ ಋಗ್ವೇದದ ಕಾಲಕ್ಕಾಗಲೇ ಉತ್ಪಾದನೆಯ ಶಕ್ತಿಗಳಿಗೆ ಸದಾ ಪುರುಷನ ರೂಪವನ್ನು ನೀಡುವ ಕ್ರಮವು ಸ್ವೀಕೃತಿ ಪಡೆದಿತ್ತು. ಲಿಂಗಾರಾಧನೆ ಇದರ ಉತ್ತಮ ಉದಾಹರಣೆ. ಋಗ್ವೇದದಲ್ಲಿ ಕಾಣುವ ಬಹುತೇಕ ದೇವತೆಗಳು ಪ್ರಾಕೃತಿಕ ಶಕ್ತಿಗಳ ಮೂರ್ತ ಮಾನವ (ಎಂತ್ರೊಪೊಮಾರ್ಫಿಕ್) ರೂಪಗಳಾಗಿದ್ದವು. ಅವುಗಳಲ್ಲಿ ಉಷಸ್ ಮೊದಲಾದವು ಹೆಣ್ಣಾದರೆ ಉತ್ಪಾದನೆಯೊಂದಿಗೆ ಒಂದಲ್ಲ ಒಂದು ರೀತಿಯ ಸಂಬಂಧ ಹೊಂದಿದ್ದ ಶಕ್ತಿಗಳೆಲ್ಲವೂ ಗಂಡು ರೂಪವನ್ನು ಪಡೆದುಕೊಂಡವು. ಹೀಗಾಗಿ ಮಳೆ (ಇಂದ್ರ), ಬೆಂಕಿ (ಅಗ್ನಿ), ಗಾಳಿ (ವಾಯು), ಬಿರುಗಾಳಿ (ಮರುತ್), ಇವೆಲ್ಲವೂ ಗಂಡುದೇವತೆಗಳಾಗಿ ಮಾರ್ಪಟ್ಟವು. ಋಗ್ವೇದದಲ್ಲಿ ಪ್ರಾಕೃತಿಕ ಶಕ್ತಿಗಳಾಗಿರದಂತ ದೇವತೆಗಳನ್ನೂ ಕಾಣಬಹುದು. ತ್ವಷ್ಟೃ ಎಂಬ ಬಡಗಿ ಅಂಥ ದೇವತೆಗಳಲ್ಲಿ ಒಬ್ಬ. ಈತನ ಕಾಯಕವು ಉತ್ಪಾದನೆಯೊಂದಿಗೆ ಸಂಬಂಧ ಹೊಂದಿತ್ತು. ಹೀಗಾಗಿ ಈತ ಈತನಾದ, ಈಕೆಯಾಗಲಿಲ್ಲ. ಮುಂದೆ ಸೃಷ್ಟಿಗೆ ಕಾರಣವಾದ ಪರಮೋನ್ನತ ದೇವತೆಯ ಪರಿಕಲ್ಪನೆ ತಲೆದೋರಿದಾಗ ಆ ದೇವತೆಯನ್ನು ಗಂಡಾದ ಪುರುಷನೆಂದು ಭಾವಿಸಲಾಯ್ತೇ ಹೊರತು ಹೆಣ್ಣಾದ ಪ್ರಕೃತಿಯೆಂದು ಗುರುತಿಸಲಾಗಲಿಲ್ಲ.

ವೇದಗಳಲ್ಲಿ ಗಂಡುಹೆಣ್ಣಿನ ನಡುವೆ ಸಮಾನತೆ ಇರಲಿಲ್ಲ. ಆದಾಗ್ಯೂ ಅಲ್ಲಿನ ಲಿಂಗ ಸಂಬಂಧಗಳಲ್ಲಿ ತೀವ್ರತರವಾದ ಅಸಮತೋಲನವೂ ಮೈಗೂಡಿರಲಿಲ್ಲ. ಹೆಣ್ಣು ಗಂಡಿನ ಅಧೀನದಲ್ಲಿರುವಾಗಲೂ ಹೆಣ್ಣು ಎಂಬ ಒಂದೇ ಕಾರಣಕ್ಕೆ ಅಸಹನೆಯ ನಿಂದನೆಗೆ ಗುರಿಯಾದ ಸೂಚನೆಗಳನ್ನು ಅಲ್ಲಿ ಕಾಣೆವು. ಕ್ರಿ. ಪೂ. ಆರನೆಯ ಶತಮಾನದಲ್ಲಿ ಹೊಸ ಕಾರ್ಷಿಕ ವ್ಯವಸ್ಥೆ ಆಳವಾಗಿ ಬೇರೂರಿಕೊಳ್ಳುವ ವೇಳೆಗೆ ಚಾಲ್ತಿಯಲ್ಲಿದ್ದ ಲಿಂಗ ಸಂಬಂಧಗಳು ಅಪಾರ ಪರಿವರ್ತನೆಗೆ ಗುರಿಯಾಗಿ ಹೋದವು. ಹೆಣ್ಣಿನ ಕಾರ್ಯಚಟುವಟಿಕೆಗಳು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಬೇಕು ಎಂಬ ಧೋರಣೆಯ ಪ್ರಪ್ರಥಮ ಉಲ್ಲೇಖಗಳು ಈ ಸಂದರ್ಭದಲ್ಲಿ ದೊರಕುತ್ತವೆ. ವಂಶಶುದ್ಧಿಯನ್ನು ನೆಲೆಗೊಳಿಸಲು ಹೆಣ್ಣಿನ ಲೈಂಗಿಕತೆಯ ಮೇಲೆ ಬಿಗಿಯಾದ ನಿಯಂತ್ರಣ ವಿಧಿಸುವುದು ಅತ್ಯಗತ್ಯ ಎಂಬುದು ಇಲ್ಲಿನ ನಂಬಿಕೆಯಾಗಿತ್ತು. ಆದರೆ ಆರ್ಥಿಕ ವ್ಯವಸ್ಥೆಯು ಹಿಂದೆಂದಿಗಿಂತಲೂ ಹೆಚ್ಚಾಗಿ ಕೃಷಿಯನ್ನು ಅವಲಂಬಿಸುವ ದಿನಮಾನಗಳು ಇವಾಗಿದ್ದವು. ಕೃಷಿಯ ವಿವಿಧ ಹಂತಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವುದು ಅನಿವಾರ್ಯವೇ ಆಗಿತ್ತು. ಈ ವಾಸ್ತವಕ್ಕೂ ಹೆಣ್ಣಿನ ಸ್ಥಾನ ಮನೆಗಷ್ಟೇ ಸೀಮಿತ ಎಂಬ ಧೋರಣೆಗೂ ಹೊಂದಾಣಿಕೆಯಿರಲಿಲ್ಲ. ಈ ಗೊಂದಲ ಭರಿತ ಭೌತಿಕ ಪರಿಸರದಲ್ಲಿ ಗಂಡಾಳ್ವಿಕೆಯ ಸಾಂಪ್ರದಾಯಿಕ ಚಹರೆ ಮೊದಲ ಬಾರಿಗೆ ಅನಾವರಣಗೊಳ್ಳತೊಡಗಿತು. ಹೆಣ್ಣಿನ ದುಡಿಮೆಯ ಮೇಲಿನ ಬಿಗಿಯಾದ ಹಿಡಿತವು ವಿಸ್ಥಿತ (ರೀಯಿಫೈ) ಗೊಂಡು ಆಕೆಯ ಪುನರುತ್ಪಾದನಾ ಕ್ರಮವನ್ನೂ ಲೈಂಗಿಕತೆಯನ್ನೂ ನಿಯಂತ್ರಿಸುವ ವ್ಯವಸ್ಥೆಯೊಂದಕ್ಕೆ ದಾರಿ ಮಾಡಿಕೊಟ್ಟಿತು.

ವೈದಿಕ ಯುಗದಲ್ಲಿ ಮನೆಯ ಆವರಣದಲ್ಲಿ ಹೆಣ್ಣಿಗಿದ್ದ ಮಹತ್ವದ ಸ್ಥಾನವನ್ನು ಒಪ್ಪಿಕೊಳ್ಳಲಾಗಿತ್ತು. ಆದರೆ ಆ ಯುಗವು ಕೊನೆಗೊಳ್ಳುವ ವೇಳೆಗೆ ತೀವ್ರವಾದ ಪಕ್ಷಪಾತಗಳು ಕಾಣತೊಡಗಿದ್ದವು. ಶತಪಥ ಬ್ರಾಹ್ಮಣದಲ್ಲಿ ವ್ಯಭಿಚಾರಿಗಳಾದ ಮಹಿಳೆಯರ ಕುರಿತು ಅಸಹಿಷ್ಣುತೆ ತುಂಬಿದ ಪರಾಮರ್ಶೆಯಿದೆ. ವೈವಾಹಿಕ ಸಂಬಂಧಗಳನ್ನು ಪವಿತ್ರವೆಂದು ಬಗೆಯುವ ವ್ಯವಸ್ಥೆಯಲ್ಲಿ ಇಂಥ ಅಸಹಿಷ್ಣುತೆಯಲ್ಲಿ ತಪ್ಪೇನೂ ಇಲ್ಲವೆಂದು ವಾದಿಸಬಹುದು. ಆದರೆ ಅಂಥ ವ್ಯಭಿಚಾರದಲ್ಲಿ ಸಂಗಾತಿಗಳಾಗುವ ಗಂಡಸರ ಬಗ್ಗೆ ಶತಪಥ ಬ್ರಾಹ್ಮಣವು ಈ ರೀತಿಯ ಅಸಹಿಷ್ಣುತೆ ತೋರುವುದಿಲ್ಲ ಎಂಬುದನ್ನೂ ಮರೆಯುವಂತಿಲ್ಲ. ಲಿಂಗ ಸಂಬಂಧಗಳಲ್ಲಿ ಈಗಾಗಲೇ ಇದ್ದ ಅಸಮತೋಲನವು ಬೇರೂರಿಕೊಳ್ಳತೊಡಗಿದ್ದುದರ ಸೂಚನೆ ಇದಾಗಿದೆ. ಧರ್ಮಸೂತ್ರ, ಗೃಹ್ಯಸೂತ್ರ, ಶ್ರೌತಸೂತ್ರಗಳೇ ಮುಂತಾದ ಕಲ್ಪಸೂತ್ರಗಳ ಕಾಲಕ್ಕಾಗಲೇ ಲಿಂಗಸಂಬಂಧಗಳು ದೊಡ್ಡ ಪಲ್ಲಟಕ್ಕೆ ಗುರಿಯಾಗಿದ್ದವು.

ಗೌತಮ ಧರ್ಮಸೂತ್ರದಲ್ಲಿ ಮೇಲ್ವರ್ಣದ ಹೆಣ್ಣಿನೊಂದಿಗೆ ವಿವಾಹ ಬಾಹಿರ ಸಂಬಂಧ ನಡೆಸುವ ಕೆಳವರ್ಣದ ಗಂಡನ್ನು ಕೊಲ್ಲಬೇಕೆಂದು ರಾಜನನ್ನು ಒತ್ತಾಯಿಸಲಾಗಿದೆ. ತಪ್ಪಿತಸ್ತಳಾದ ಹೆಣ್ಣನ್ನೂ ಸುಮ್ಮನೆ ಬಿಡುವಂತಿಲ್ಲ. ಆಕೆಯನ್ನು ನಾಯಿಗಳಿಗೆ ತಿನ್ನಲು ಎಸೆಯಬೇಕು. ಸ್ವೇಚ್ಛೆಯಿಂದ ಗರ್ಭಪಾತ ನಡೆಸುವ ಕೆಳವರ್ಣದ ಗಂಡಸರೊಂದಿಗೆ ಮಲಗುವ ಹೆಂಗಸರಿಗೆ ಬಹಿಷ್ಕಾರ ಹಾಕಬೇಕು ಎಂಬ ನಿರ್ದೇಶವಿದೆ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ನಿರ್ಣಯ ಕೈಗೊಳ್ಳುವ ಹಕ್ಕು ಗಂಡನಿಗ ಮಾತ್ರ. ಹೆಂಡತಿಗೆ ಅಂಥ ಹಕ್ಕುಗಳಿಲ್ಲ. ಗೌತಮ ಧರ್ಮಸೂತ್ರದ ಈ ವಿಚಾರವನ್ನೇ ವಸಿಷ್ಟ ಧರ್ಮಸೂತ್ರವು ಮತ್ತೊಂದು ರೀತಿಯಲ್ಲಿ ಹೇಳುತ್ತದೆ. ಹೆಣ್ಣಿಗೆ ಸ್ವಾತಂತ್ರ್ಯವಿಲ್ಲ. ಅವಳು ಗಂಡಿನ ಅಧೀನದಲ್ಲಿರಬೇಕು. ಮಹಿಳೆಯರು ಶೂದ್ರರಿಗೆ ಸಮಾನರು ಎಂಬುದು ಬೌಧಾಯನ ಧರ್ಮಸೂತ್ರ ತಾಳುವ ನಿಲುವು. ಮಾತ್ರವಲ್ಲ, ಹೆಣ್ಣು ಕಾಮದ ವಸ್ತು. ಸುರತ ಕ್ರೀಡೆಯ ಸಂದರ್ಭದಲ್ಲಿ ಮಾತ್ರ ಆಕೆ ಶುದ್ಧ ರೂಪವನ್ನು ಹೊಂದಿರಬಲ್ಲಳು.

ಹೆಣ್ಣು ಮೈಲಿಗೆ ಉಂಟು ಮಾಡುವವಳು ಎಂಬ ವಿಚಾರವನ್ನು ಮಂಡಿಸಿದವರಲ್ಲಿ ಧರ್ಮ ಸೂತ್ರಗಳ ಕರ್ತೃಗಳೇ ಮೊದಲಿಗರು. ಋತುವಾದ ಹೆಣ್ಣು ಮೂರು ದಿನಗಳ ಕಾಲ ಅಶುದ್ಧಳಾಗಿರುತ್ತಾಳೆಂದು ವಸಿಷ್ಠ ಧರ್ಮಸೂತ್ರ ಹೇಳುತ್ತದೆ. ಈ ಅವಧಿಯಲ್ಲಿ ಆಕೆ ಬರಿನೆಲದ ಮೇಲೆ ಮಲಗಬೇಕು. ಕಣ್ಣಿಗೆ ಕಾಡಿಗೆ ಹಚ್ಚಬಾರದು, ಮೈಗೆ ಎಣ್ಣೆ ಹಾಕಬಾರದು, ಮೀಯಬಾರದೂ, ಹಲ್ಲನ್ನೂ ತಿಕ್ಕಬಾರದು. ಆ ದಿನಗಳಲ್ಲಿ ಆಕೆ ಓರ್ವ ಬ್ರಾಹ್ಮಣನನ್ನು ಕೊಂದ ವ್ಯಕ್ತಿಯಷ್ಟೇ ಪಾಪಿಷ್ಟೆಯಾಗಿರುತ್ತಾಳೆ. ಆಕೆ ಮೈಲಿಗೆ ಉಂಟುಮಾಡಬಲ್ಲಳು. ಆದ್ದರಿಂದ ಆಕೆಯ ಕೈಯಿಂದ ಯಾವುದೇ ಆಹಾರವನ್ನು ಸೇವಿಸಬಾರದು. ಅಂಥ ಹೆಣ್ಣಿಂದಾಗುವ ಮೈಲಿಗೆ ಎಂಥದ್ದೆಂದರೆ ಆಕೆ ವಾಸಿಸುವ ಮನೆಯ ಎಲ್ಲ ಸದಸ್ಯರನ್ನೂ ಆ ದಿನಗಳಲ್ಲಿ ಶೂದ್ರರೆಂದೇ ಭಾವಿಸಬೇಕು.

ಮೈಲಿಗೆ ಕುರಿತು ಧರ್ಮಸೂತ್ರಗಳಲ್ಲಿ ಒಮ್ಮತವಿಲ್ಲ. ಒಂದೇ ಧರ್ಮಸೂತ್ರದಲ್ಲಿಯೂ ಭಿನ್ನ ರೀತಿಯ ವರ್ಣನೆಗಳಿವೆ. ಋತುವು ಹೆಣ್ಣನ್ನು ಅಪವಿತ್ರಗೊಳಿಸುತ್ತದೆ ಎನ್ನುವ ವಸಿಷ್ಟ ಧರ್ಮಸೂತ್ರದಲ್ಲಿಯೇ ಋತುವು ಪ್ರತಿ ತಿಂಗಳು ಹೆಣ್ಣಿನ ಪಾಪಗಳನ್ನು ತೊಳೆದು ಹಾಕಿ ಆಕೆಯನ್ನು ಶುದ್ಧಗೊಳಿಸುತ್ತದೆ ಎಂಬ ಮಾತನ್ನೂ ಹೇಳಲಾಗಿದೆ. ಹೀಗೆ ಶುದ್ಧಿ ಪಡೆದುಕೊಳ್ಳುವ ಕಾರಣದಿಂದಲೇ ಬಲಾತ್ಕಾರ ಅಥವಾ ಅಪಹರಣಕ್ಕೆ ತುತ್ತಾದ ಹೆಣ್ಣನ್ನು ಕೈಬಿಡಕೂಡದು. ಏಕೆಂದರೆ ಅಂಥ ಪ್ರಮಾದಗಳ ಸಂದರ್ಭದಲ್ಲಿ ಉಂಟಾಗುವ ಮೈಲಿಗೆ ಮುಂದಿನ ಋತುಚಕ್ರದಲ್ಲಿ ಹೊರಟು ಹೋಗುತ್ತದೆ. ಹೆಂಡತಿಯನ್ನು ಕೈಬಿಡಲು ಯಾವುದೇ ವಿಧಿ ವಿಧಾನಗಳಿಲ್ಲ, ಆದ್ದರಿಂದ ಆಕೆಯನ್ನು ಯಾವ ಕಾರಣಕ್ಕೂ ಕೈಬಿಡಬಾರದು ಎಂದು ವಸಿಷ್ಠ ಧರ್ಮಸೂತ್ರವು ಒತ್ತಿ ಹೇಳುತ್ತದೆ.

ಧರ್ಮಸೂತ್ರಗಳ ಪೈಕಿ ಹೆಣ್ಣಿನ ಬಗ್ಗೆ ಕಟುವಾದ ನಿಲುವುಗಳು ಹೆಚ್ಚಾಗಿ ಇಲ್ಲದ ಕೃತಿಯೆಂದರೆ ಆಪಸ್ತಂಬ ಧರ್ಮಸೂತ್ರ. ಆದರೂ ಅಲ್ಲಿ ಬಲಾತ್ಕಾರಕ್ಕೆ ಗುರಿಯಾದ ಹೆಣ್ಣು ಮರಳಿ ಮನೆ ಸೇರುವ ಮುನ್ನ ಪರಿಹಾರ ಕ್ರಿಯೆಗಳನ್ನು ಕೈಗೊಳ್ಳಬೇಕು ಎನ್ನಲಾಗಿದೆ. ತನ್ನ ಪರಿವಾರಕ್ಕೆ ಮರಳಿ ಬರಲಾಗದ ಮಹಿಳೆಯರನ್ನು ರಕ್ಷಿಸುವುದು ರಾಜನ ಹೊಣೆಗಾರಿಕೆ. ಅಂಥ ಹೆಂಗಸರು ಮುಂದೆಂದೂ ಯಾರ ಜೊತೆಯಲ್ಲೂ ಲೈಂಗಿಕ ಸಂಬಂಧದಲ್ಲಿ ಏರ್ಪಡದಂತೆ ನೋಡಿಕೊಳ್ಳ್ಳಬೇಕೆಂದು ಆಪಸ್ತಂಬ ಧರ್ಮಸೂತ್ರವು ರಾಜನಿಗೆ ನಿರ್ದೇಶ ನೀಡುತ್ತದೆ.

ಬ್ರಾಹ್ಮಣರ ಕಲ್ಪಸೂತ್ರಗಳಲ್ಲಿ ಕುಟುಂಬವು ಅತ್ಯಂತ ಸಂಕೀರ್ಣ ಸಂರಚನೆಯಾಗಿ ಮೂಡಿ ಬಂದಿದೆ. ಗೃಹ್ಯ ಸೂತ್ರಗಳಲ್ಲಿ ಮನೆಯೊಳಗಿನ ಕಾರ್ಯಾಚರಣೆಗಳ ವೈವಿಧ್ಯತೆಯನ್ನು ಸಾಕಷ್ಟು ವಿವರಣೆಗಳೊಂದಿಗೆ ಬಿಡಿಸಿ ಹೇಳಲಾಗಿದೆ. ಮನೆಯೆಂಬುದು ಉತ್ಪಾದನೆಯ ಒಂದು ಘಟಕ. ಅಲ್ಲಿ ಹತ್ತು ಹಲವು ಆಚರಣೆಗಳು ನಡೆಯುತ್ತವೆ. ಶೋಡಶ ಪ್ರಿಯಗಳು ನಡೆಯುತ್ತವೆ. ಕಾಮ, ಪ್ರತ್ಯುಪ್ತಾದನೆ, ಮಕ್ಕಳ ಬೆಳವಣಿಗೆ, ವ್ಯಕ್ತಿಗಳ ನೈತಿಕ ಬೆಳವಣಿಗೆ ಮುಂತಾದವುಗಳು ಜರುಗುವುದು ಮನೆಯಲ್ಲಿಯೇ.

ಬೌದ್ಧರ ಪಾಲಿ ಗ್ರಂಥಗಳಲ್ಲಿ ಕಾಣುವ ಮನೆಯ ಚಿತ್ರ ಇದಕ್ಕಿಂತ ಭಿನ್ನವಾಗಿದೆ. ಅಲ್ಲಿ ಗೃಹ್ಯ ಸೂತ್ರಗಳಲ್ಲಿ ಕಾಣುವಂತ ಸಂಕೀರ್ಣತೆಗಳಿಲ್ಲ. ಈ ಕೃತಿಗಳು ಮನೆಯೊಂದಕ್ಕೆ ಸರಳ ಹಾಗೂ ಸೀಮಿತವಾದ ಅರ್ಥವನ್ನು ಮಾತ್ರ ನೀಡುತ್ತವೆ. ಬೌದ್ಧರ ದೃಷ್ಟಿಯಲ್ಲಿ ಮನೆಯೆಂದರೆ ಸುರತದ ಬಯಕೆಯು ಫಲಕಾಣುವ ನೆಲೆ. ದೀಘನಿಕಾಯದ ಅಗ್ಗಞ್ಞಸುತ್ತದಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ಮಂಡಿಸಲಾಗಿದೆ.

ಬುದ್ಧನ ನಾಲ್ಕು ಆರ್ಯ ಸತ್ಯಗಳಲ್ಲಿ ಸುರತದ ಬಯಕೆಯೇ ದುಃಖಕ್ಕೆ ಮೂಲವಾಗಿದೆ. ಹೀಗಾಗಿ, ಅಂಥ ಸುರತಕ್ಕೆ ಕಾರಣವಾಗುವ ಮನೆ ಎಂಬ ನೆಲೆಗೆ ತ್ರಿಪೀಟಕಗಳಲ್ಲಿ ಮನ್ನಣೆಯಿಲ್ಲ. ದುಃಖದ ನಿವಾರಣೆಗೆ ಸುರತದ ಬಯಕೆಯಿಂದ ದೂರಾಗಬೇಕು. ಅದಕ್ಕೆ ಮನೆಯನ್ನು ತೊರೆಯುವುದು ಅನಿವಾರ್ಯ. ಆದ್ದರಿಂದಲೇ ಮನೆ ಬಿಟ್ಟು ಮನೆಯಿಲ್ಲದವನಾಗಬೇಕು (ಅನಾಗರಿಕ) ಎಂಬ ಮಾತು ತ್ರಿಪೀಟಕಗಳಲ್ಲಿ ಪದೆ ಪದೆ ಕಂಡು ಬರುವುದು.

ಬುದ್ಧನ ಕಾಲದಲ್ಲಿ ಲೈಂಗಿಕ ಸುಖವನ್ನು ಹಾಗೂ ಮನೆಯನ್ನು ಬಿಡುವುದು ಎಂಬುದಕ್ಕೆ ಹೆಣ್ಣಿನ ಸಂಪರ್ಕದಿಂದ ದೂರಾಗುವುದು ಎಂಬ ಅರ್ಥವೂ ಇತ್ತು. ಮಹಿಳೆಯರ ವಿಷಯದಲ್ಲಿ ಬುದ್ಧ ಅಸಹಿಷ್ಣುವಾಗಿದ್ದದ್ದು ಈ ಕಾರಣದಿಂದಲೇ ಆಗಿದೆ. ಬುದ್ಧ ತನ್ನ ಸಂಘದಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದ. ಮುಂದೆ ಆತನ ಪ್ರಮುಖ ಶಿಷ್ಯರಲ್ಲಿ ಓರ್ವನಾದ ಆನಂದನ ಒತ್ತಾಯದ ಮೇರೆಗೆ ಈ ನಿರ್ಣಯವನ್ನು ಕೈಬಿಟ್ಟನಾದರೂ ಬುದ್ಧನಿಗೆ ಅದು ಸ್ವೀಕೃತವಾಗಿರಲಿಲ್ಲ. ತನ್ನ ಸಂಘವು ಸಾವಿರ ವರ್ಷಗಳ ಕಾಲ ನೆಲೆಗೊಳ್ಳಬಹುದಿತ್ತು, ಆದರೆ ಮಹಿಳೆಯರ ಪ್ರವೇಶದಿಂದಾಗಿ ಅದು ಐನೂರೇ ವರ್ಷಗಳಲ್ಲಿ ಕೊನೆಗೊಳ್ಳಲಿದೆ ಎಂಬ ಭವಿಷ್ಯವಾಣಿಯನ್ನು ಈ ಸಂದರ್ಭದಲ್ಲಿ ಬುದ್ಧ ನುಡಿಯುತ್ತಾನೆ.

ಬುದ್ಧ ಸತ್ಯಾನ್ವೇಷಣೆ ನಡೆಸಿದ್ದೇನೋ ಸರಿಯೇ. ಆದರೆ ಹೊಸ ಕಾರ್ಷಿಕ ಜೀವನದ ಸಂದರ್ಭದಲ್ಲಿ ಏಳಿಗೆ ಪಡೆದ ಗಂಡಾಳ್ವಿಕೆಯ ಹಲವು ಪೂರ್ವಾಗ್ರಹಗಳಿಗೆ ಆತನೂ ತುತ್ತಾಗಿದ್ದದನ್ನು ತ್ರಿಪೀಟಕಗಳಲ್ಲಿ ಮತ್ತೆ ಮತ್ತೆ ಕಾಣುತ್ತೇವೆ. ವಂಶ ಶುದ್ಧಿಯ ಪರಿಕಲ್ಪನೆ ಅವುಗಳಲ್ಲಿ ಒಂದು. ಹೆಂಗಸರ ಲೈಂಗಿಕತೆ ಕುರಿತಾದ ಆತಂಕ ಮತ್ತೊಂದು.

 

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಏಳನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂದನೇ ಕಂತು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...