ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

Date: 15-08-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಎರಡನೆಯ ಬರೆಹ ಇಲ್ಲಿದೆ.

2


ಇಂದು ನಮ್ಮ ಜಾತಿಯನ್ನು ನಿಗದಿಪಡಿಸುವ ಸ್ವಾತಂತ್ರ್ಯ ನಮಗಿಲ್ಲ. ಅದು ನಮ್ಮ ನಿಯಂತ್ರಣಕ್ಕೆ ಹೊರತಾದ ಸಂಗತಿ. ನಾವು ಈಗಾಗಲೇ ಸಿದ್ಧವಾದ ಜಾತಿಯೊಂದರಲ್ಲಿ ಜನಿಸುತ್ತೇವೆ. ಇಲ್ಲಿ ಆಯ್ಕೆ ಸಾಧ್ಯವಾಗದು. 19 ಜನವರಿ 2018ರಂದು ಸುನೀತಾ ಸಿಂಗ್ ವರ್ಸಸ್ ಸ್ಟೇಟ್ ಆಫ್ ಉತ್ತರ್ ಪ್ರದೇಶ್ ಪ್ರಕರಣದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವು ಹೊರಡಿಸಿದ ತೀರ್ಪು ಈ ನಿಲುವನ್ನೇ ಎತ್ತಿ ಹಿಡಿಯಿತು. ಜಾತಿಯು ಜನ್ಮಮೂಲವಾದದ್ದು. ಅದರ ಪರಿವರ್ತನೆ ಅಸಾಧ್ಯ. ವಿವಾಹದಿಂದಲೂ ಜಾತಿ ಬದಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅರುಣ್ ಎಂ. ಮಿಶ್ರಾ ಮತ್ತು ಮೋಹನ್ ಎಂ. ಶಾಂತನಗೌಡರ್ ಒತ್ತಿ ಹೇಳಿದರು. ಅಗರ್ವಾಲ್ ಮನೆತನಕ್ಕೆ ಸೇರಿದ ಮಹಿಳೆಯೋರ್ವಳು ಜಾತವ್ ಎಂಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿ ತಾನೂ ಜಾತವ್ ಜಾತಿಯ ಸದಸ್ಯಳೆಂದು ಪ್ರಮಾಣಪತ್ರ ಪಡೆದು ಅದರ ಲಾಭ ಗಳಿಸಿದ ಪ್ರಕರಣ ಇದಾಗಿತ್ತು. ತಮ್ಮ ಮತ್ತು ಮಿಶ್ರಾರ ಪರವಾಗಿ ಶಾಂತನಗೌಡರ್ ಬರೆದ ತೀರ್ಪಿನಲ್ಲಿ ಈ ನಿರ್ಣಯವನ್ನು ನೀಡಲಾಯ್ತು: “There cannot be any dispute that the caste is determined by birth and the caste cannot be changed by marriage with a person of scheduled caste. Undoubtedly, the appellant was born in “Agarwal” family, which falls in general category and not in scheduled caste. Merely because her husband is belonging to a scheduled caste category, the appellant should not have been issued with a caste certificate showing her caste as scheduled caste.”
ಜಾತಿ ಬದಲಾಗದು ಎಂಬ ಧೋರಣೆ ಕಳೆದ ನೂರೈವತ್ತು ವರ್ಷಗಳಿಂದ ಈಚೆಗೆ ಈ ಪದ್ಧತಿಯಲ್ಲಿ ಆದ ಮಾರ್ಪಾಟುಗಳ ಪರಿಣಾಮವಾಗಿದೆ. ಈ ಮಾರ್ಪಾಟುಗಳಿಗೆ ಇಂದಿನ ನಮ್ಮ ರಾಜಕೀಯ ಸಂರಚನೆಯ ಜೊತೆ ಮಹತ್ವದ ಸಂಬಂಧವುಂಟು. ಜನಸಾಮಾನ್ಯರು ಎಲ್ಲ ವ್ಯವಹಾರಗಳಿಗೂ ರಾಜ್ಯ ಎಂಬ ಸಂಸ್ಥೆಯೊಂದನ್ನು ಅವಲಂಬಿಸುವಂತೆ ಮಾಡುವ ಸಂರಚನೆ ಇದಾಗಿದೆ. ಹೀಗೆ ಇನ್ಸ್‌ಟಿಟ್ಯೂಶನಲ್ ಡಿಪೆಂಡೆನ್ಸ್ ಎನ್ನಬಹುದಾದ ಅವಲಂಬನೆಯ ಮೂಲಕ ನಮ್ಮನ್ನು ಈ ರಾಜಕೀಯ ಸಂರಚನೆಯು ಅಧಿಕಾರಶಾಹಿಗೆ ಅಧೀನಪಡಿಸುತ್ತದೆ. ಅಧಿಕಾರಶಾಹಿಯು ಆಚರಣೆಗಳ ನೆಲೆಯಲ್ಲಿ ರೂಪು ಪಡೆದುದ್ದಲ್ಲ. ಬದಲಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವೆಂಬ ವ್ಯವಸ್ಥೆಯ ನೆಲೆಯಲ್ಲಿ ಕಾಗದಪತ್ರಗಳ ಮೂಲಕ ತನ್ನ ಅಸ್ಥಿತ್ವವನ್ನು ಅಧಿಕೃತಗೊಳಿಸಿದ್ದು. ಕಾನೂನಿನ ಆಳ್ವಿಕೆ ಅಥವಾ ರೂಲ್ ಆಫ್ ಲಾ ಎಂಬ ತತ್ವವು ಈ ಅಧಿಕಾರಶಾಹಿಯ ಬೆನ್ನೆಲುಬು.
ಭಾರತದಲ್ಲಿ ವಸಾಹತುಕಾಲದಲ್ಲಿ ಈ ಅಧಿಕಾರಶಾಯಿಯು ಬೆಳೆದುಬಂದದ್ದು ಆಧುನಿಕ ಶಿಕ್ಷಣ ಪಡೆದವರ ನೇಮಕಾತಿ ಮೂಲಕವಾಗಿತ್ತು. ಆರಂಭ ಕಾಲದಲ್ಲಿ ಓದುಬರಹದ ದೀರ್ಘ ಪರಂಪರೆಯುಳ್ಳ ವಿವಿಧ ಬ್ರಾಹ್ಮಣ ಹಾಗೂ ಕಾಯಸ್ಥ ಅಥವಾ ಕರಣ ಜಾತಿಗಳೆಗೆ ಸೇರಿದವರು ಈ ಶಿಕ್ಷಣದ ಲಾಭ ಪಡೆದುಕೊಂಡರು. ಹೀಗಾಗಿ ಅಧಿಕಾರಶಾಹಿಯು ಇವರಿಂದಲೇ ತುಂಬಿಕೊಂಡಿತು. ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಅವರು ನೀತಿಗಳನ್ನು ಜಾರಿಗೆ ತಂದರು. ಅವರು ರೂಪು ನೀಡಿದ ಆಡಳಿತ ಪದ್ಧತಿಗಳಲ್ಲಿ ಜಾತಿಯ ಪರಿವರ್ತನೆಗೆ ಸ್ಥಾನವಿರಲಿಲ್ಲ. ಏಕೆಂದರೆ ಈ ಬ್ರಾಹ್ಮಣ ಮತ್ತು ಕಾಯಸ್ಥ ಅಥವಾ ಕರಣ ಜಾತಿಗಳು ತಮ್ಮ ಇತ್ತೀಚಿನ ಇತಿಹಾಸದಲ್ಲಿ ಜಾತಿ ಪರಿವರ್ತನೆಯನ್ನು ಕಂಡಿರಲಿಲ್ಲ. ಆದರೆ ಕ್ರಿಸ್ಚಿಯನ್ ಮಿಶನರಿಗಳು ಅಪಾರ ಪ್ರಮಾಣದಲ್ಲಿ ಮತಾಂತರ ನಡೆಸುತ್ತಿದ್ದ ಸಂದರ್ಭ ಇದಾಗಿತ್ತು. ಈ ಕಾರಣದಿಂದ ಮತಾಂತರವನ್ನು ಈ ಅಧಿಕಾರಶಾಹಿಯು ಗಣನೆಗೆ ತೆಗೆದುಕೊಂಡಿತು. ಅಧಿಕೃತ ಕಾಗದಪತ್ರಗಳ ಮೂಲಕ ಮಾತ್ರ ಎಲ್ಲವನ್ನೂ ನಿರ್ಣಯಿಸುವ ಅಧಿಕಾರಶಾಹಿಯು ಮತಾಂತರಕ್ಕೆ ಅಗತ್ಯವಾದ ಕಾನೂನು ಪದ್ಧತಿಗಳನ್ನು ಜಾರಿಗೆ ತಂದಿತು, ಆದರೆ ಜಾತಿಯನ್ನು ಪರಿವರ್ತಿಸಿಕೊಳ್ಳಲು ಸಮನಾದ ಯಾವುದೇ ಪದ್ಧತಿಯನ್ನು ಕಾರ್ಯರೂಪಕ್ಕೆ ತರಲಿಲ್ಲ. ಆದ್ದರಿಂದ ಇಂದು ನಾವು ನಮ್ಮ ಜಾತಿಯನ್ನು ಬದಲಾಯಿಸಲು ಉಪಾಯಗಳಿಲ್ಲ.
ಜಾತಿ ಪರಿವರ್ತನೆ ಸಾಧ್ಯವಿಲ್ಲ ಎಂದು ನಾವು ನಂಬಿರುವುದು ಈ ಕಾರಣದಿಂದಲೇ ಆಗಿದೆ. ಆದರೆ, ಐತಿಹಾಸಿಕವಾಗಿ ಸಮೀಕ್ಷಿಸಿದಾಗ ಈ ನಿಲುವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಜಾತಿ ಬದಲಾದ ಉದಾಹರಣೆಗಳು ದೇಶದ ವಿವಿಧೆಡೆಗಳಲ್ಲಿ ವಿವಿಧ ಕಾಲದ ಮೂಲಗಳಿಂದ ಹೇರಳವಾಗಿ ದೊರಕುತ್ತವೆ. ಇಪ್ಪತ್ತನೆಯ ಶತಮಾನಕ್ಕಿಂತ ಹಿಂದೆ ಯಾವುದೇ ಮನೆತನ ಅಥವಾ ಜಾತಿಯವರು ಅಧಿಕಾರ ಹಾಗೂ ಸಂಪನ್ಮೂಲಗಳ ನಿಯಂತ್ರಣ ಪಡೆದುಕೊಳ್ಳುವಲ್ಲಿ ಯಶಸ್ವಿಯಾದಾಗ ಹೆಚ್ಚಿನ ಸ್ವೀಕೃತಿ ಪಡೆದಿದ್ದ ಮತ್ತಾವುದೇ ಜಾತಿಗೆ ತಮ್ಮನ್ನು ಪರಿವರ್ತಿಸಿಕೊಳ್ಳುವುದು ಸಹಜವಾಗಿತ್ತು. ಬಾದಾಮಿಯ ಚಾಳುಕ್ಯರು ಕ್ಷತ್ರಿಯರಾಗಿರಲಿಲ್ಲ. ಮರಾಠರ ಶಿವಾಜಿಯೂ ಕ್ಷತ್ರಿಯ ಮೂಲದಿಂದ ಬಂದವನಲ್ಲ. ಇಂಥ ಅರಸರಿಗೆ ವಿಧಿವತ್ತಾಗಿ ಕ್ಷತ್ರಿಯ ಪದವಿ ಕಲ್ಪಿಸಿಕೊಡಲಾಯ್ತು. ಅದಕ್ಕೆಂದು ಹಿರಣ್ಯಗರ್ಭ, ತುಲಾಪುರುಷ ಮಹಾದಾನ ಮೊದಲಾದ ಆಚರಣೆಗಳನ್ನು ರೂಪಿಸಿಕೊಳ್ಳಲಾಗಿತ್ತು.
ದೊಡ್ಡ ಪ್ರಮಾಣದ ಯಾವುದೇ ಆಚರಣೆಗಳಿಗೆ ಅನೇಕ ಬ್ರಾಹ್ಮಣರ ಅಗತ್ಯವಿತ್ತು. ಆಯಾ ಪ್ರದೇಶಗಳಲ್ಲಿ ಆ ಪ್ರಮಾಣದಲ್ಲಿ ಬ್ರಾಹ್ಮಣರು ಇಲ್ಲದಿದ್ದಾಗ ಅವರನ್ನು ಉತ್ತರ ಪ್ರದೇಶದ ಅಹಿಚ್ಛತ್ರ, ಕನ್ನೌಜ್, ಅಥವಾ ಮತ್ತಾವುದೇ ಊರಿಂದ ಕರೆಸಿಕೊಳ್ಳಲಾಗುತ್ತಿತ್ತು. ಅದು ಸಾಧ್ಯವಿಲ್ಲದಿದ್ದಾಗ ಸ್ಥಳೀಯರಲ್ಲಿ ಪ್ರಮುಖರಾದವರನ್ನು ಬ್ರಾಹ್ಮಣರಾಗಿ ಪರಿವರ್ತಿಸುವ ಕಾರ್ಯವು ದೇಶದ ವಿವಿಧೆಡೆಗಳಲ್ಲಿ ನಡೆದಿತ್ತು. ರಾಜಸ್ಥಾನ, ಒಡಿಶಾ, ಅಸ್ಸಾಂ, ಬಂಗಾಳ, ಹಿಮಾಚಲ ಪ್ರದೇಶ, ಕಾಶ್ಮೀರ ಮುಂತಾದಲ್ಲಿ ಈ ರೀತಿ ಸ್ಥಳೀಯರು ಪರಿವರ್ತನೆ ಹೊಂದಿ ಬ್ರಾಹ್ಮಣರಾದವರ ಸಂಖ್ಯೆಯೇ ವಲಸಿಗ ಬ್ರಾಹ್ಮಣರಿಗಿಂತ ಹೆಚ್ಚು. ಈ ರೀತಿಯಲ್ಲಿ ಬ್ರಾಹ್ಮಣರಾದವರಿಗೆಂದು ಪ್ರತ್ಯೇಕ ಗೋತ್ರವೊಂದನ್ನು ನಿಗದಿಪಡಿಸಲಾಗಿತ್ತೆಂದು ಕೊಸಾಂಬಿ ಹೇಳಿದ್ದಾರೆ. ಅದು ಕಾಶ್ಯಪ ಗೋತ್ರ. ಬ್ರಾಹ್ಮಣರಲ್ಲಿ ಕಾಣುವ ತೀವ್ರ ಜನಾಂಗೀಯ ವ್ಯತ್ಯಾಸಗಳಿಗೆ ಇಂಥ ಪರಿವರ್ತನೆ ಕಾರಣವಾಗಿದೆ ಎಂಬುದು ಕೊಸಾಂಬಿಯವರ ನಿಲುವು. ತಮ್ಮ ಬರಹವೊಂದರಲ್ಲಿ ಅವರು ಜಾತಿಗಳಿಗೆ "ಹೊಸ ಸದಸ್ಯರ ನೇಮಕಾತಿ" ಕುರಿತಾಗಿಯೂ ಪ್ರಸ್ತಾಪಿಸಿದ್ದನ್ನು ಕಾಣುತ್ತೇವೆ.
ಅರಸನೊಬ್ಬ ಹೊಸ ಜಾತಿಯನ್ನು ಕಲ್ಪಿಸಿಕೊಡುವ ನಿದರ್ಶನಗಳೂ ಆಕರಗಳಲ್ಲಿ ದೊರಕುತ್ತವೆ. ಅಂಥ ಹಲವು ಉದಾಹರಣೆಗಳಲ್ಲಿ ಒಂದು ಉತ್ತರ ಕೇರಳದಲ್ಲಿ ಸಿಗುತ್ತದೆ. 1615ರ ದಾಖಲೆಯೊಂದರಲ್ಲಿ ಚಿಱಕ್ಕಲ್ ಮನೆತನಕ್ಕೆ ಸೇರಿದ ಕೋಲತ್ತಿರಿ ದೊರೆಯು ಚಾತ್ತಪ್ಪನ್ ಎಂಬ ವ್ಯಕ್ತಿಯೊಬ್ಬನನ್ನು ವಿಧಿವತ್ತಾಗಿ ನಾಯರ್ ಜಾತಿಗೆ ಸೇರಿಸಿಕೊಳ್ಳುತ್ತಾನೆ. ಚಾತ್ತಪ್ಪನ ಮೂಲ ಜಾತಿ ಯಾವುದೆಂದು ದಾಖಲೆಯಲ್ಲಿ ಉಲ್ಲೇಖವಿಲ್ಲ. ಹೊಸ ಜಾತಿಗೆ ಸೇರಿದಂತೆಯೇ ಅವನಿಗೆ ಕೋಲತ್ತಿರಿ ಸ್ವಂತ ಹಿಡಿವಳಿಯಾಗಿ ನೆಲವನ್ನೂ ನೀಡುತ್ತಾನೆ (ಇಂಥ ಹಿಡುವಳಿಯನ್ನು ಕೇರಳದಲ್ಲಿ ಜನ್ಮಂ ಎನ್ನುತ್ತಾರೆ). ಹದಿನೇಳನೆಯ ಶತಮಾನದಲ್ಲಿ ಮುಘಲ್ ಅಧೀನದಲ್ಲಿದ್ದ ಒಡಿಶಾದ ಖುರ್ದಾದಲ್ಲಿನ ದೊರೆ ನರಸಿಂಹನು ಸಾಮಂತ, ಭಟ್ಟಮಿಶ್ರ, ವೈದಿಕ ಎಂಬ ಕೆಲವು ಹೊಸ ಜಾತಿಗಳನ್ನು ಸೃಷ್ಟಿಸಿದ್ದಾನೆ. ಇಂಥ ಹತ್ತಾರು ಉದಾಹರಣೆಗಳನ್ನು ನೀಡಬಹುದು.
ಇಪ್ಪತ್ತನೆಯ ಶತಮಾನದ ಆರಂಭದಲ್ಲಿಯೂ ಇಂಥ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಒಂದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತೇನೆ. ಗೋದಾವರೀಶ ಮಿಶ್ರಾ ಎಂಬ ಒಡಿಶಾದ ಆರಂಭದ ರಾಷ್ಟ್ರವಾದಿಗಳಲ್ಲಿ ಓರ್ವರು ತಮ್ಮ ಆತ್ಮಚರಿತ್ರೆಯಲ್ಲಿ ಈಗ ನಮಗೆ ಕುತೂಹಲಕಾರಿ ಎನ್ನಿಸಬಹುದಾದ ಈ ವಿವರವನ್ನು ನೀಡಿದ್ದಾರೆ:
"ಕಡಿಮೆ ಘನತೆಯ "ಜೇನಾ" ಎಂಬ ಕುಲನಾಮವುಳ್ಳವನು ತನ್ನ ಮಗನಿಗೆ "ನರೇಂದ್ರ ಸಿಂಗ್" (ನರೇಂದ್ರ ಎಂಬ ಸಿಂಹ) ಎಂದು ಹೆಸರಿಡುತ್ತಾನೆ. ನರೇಂದ್ರ ಸಿಂಗ್‌ನ ಮಗನ ಕುಲನಾಮ ಇನ್ನೂ ದೀರ್ಘ: "ಬೀರಬರ ಚಂಪತಿರಾಯ ಅರಿದಮನ ಗುಮಾನ್ ಸಿಂಗ್" (ಸಿಂಹದ ಛಲದಿಂದ ವೈರಿಗಳನ್ನು ನಿಗ್ರಹಿಸುವ ವೀರವರನಾದ ಸೇನಾಪತಿ). ನನ್ನ ಸ್ನೇಹಿತ ಶ್ರೀ ಪರಶುರಾಮ್ ಅವರು ತನ್ನ ಏಳನೆಯ ತರಗತಿಯ ಪರೀಕ್ಷೆಯನ್ನು "ಮಹಾಂತಿ" ಎಂಬ ಕುಲನಾಮದಲ್ಲಿ ಬರೆದರು, "ಪರಶುರಾಮ್ ಪಟ್ಟನಾಯಕ್" ಆಗಿ ಹೈಸ್ಕೂಲ್ ತೇರ್ಗಡೆ ಹೊಂದಿದರು, ಹಾಗೂ ಇಂಟರ್ಮೀಡಿಯೆಟ್ ಪರೀಕ್ಷೆ ಬರೆದಾಗ ಪಟ್ಟನಾಯಕ್ ಪರಶುರಾಮ್ ಸಾಮಂತ್ ವರ್ಮಾ ಎಂಬ ಹೆಸರನ್ನು ಹೊಂದಿದ್ದರು. ಸ್ನಾತಕ ಪರೀಕ್ಷೆಯನ್ನು ಬರೆದದ್ದು ಪರಶುರಾಮ್ ಸಾಮಂತ್ ವರ್ಮಾ ಎಂಬ ಹೆಸರಲ್ಲಿ, ಮುಂದೆ ಅಧ್ಯಾಪಕರ ತರಬೇತಿಯ ಪದವಿ ಪಡೆದದ್ದು ಪರಶುರಾಮ್ ವರ್ಮಾ ಹೆಸರಲ್ಲಿ. ಶ್ರೀ ಪರಶುರಾಮ್ ಅನೇಕ ವರ್ಷಗಳಿಂದ ನನ್ನ ಹತ್ತಿರದ ಸ್ನೇಹಿತರಾಗಿದ್ದು ಪದೇಪದೆ ಅವರ ಹೆಸರು ಪರಿಷ್ಕರಣೆಗೆ ಒಳಪಡುವಾಗಲೂ ನನ್ನ ಬಗ್ಗೆ ಅವರಿಗಿರುವ ಭಾವನೆಗಳಲ್ಲಿ ನಾನು ಯಾವುದೇ ಪರಿವರ್ತನೆ ಕಂಡಿಲ್ಲ. ಮತ್ತೊಬ್ಬ ಸ್ನೇಹಿತ ದಾಶರಥಿ ಶಡಂಗಿ ತಮ್ಮ ಬದುಕಿನ ಉತ್ತರಾರ್ಧದಲ್ಲಿ ದಾಶರಥಿ ಬಹಿನೀಪತಿ ಶರ್ಮಾ ಆಗಿ ಮಾರ್ಪಟ್ಟರು. ಮಧು ಪಾತ್ರಾದಂತ "ಸಾಮಾನ್ಯ" ಹೆಸರುಳ್ಳವರು ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳಲೆಂದು ತಮ್ಮ ಹೆಸರನ್ನು ಮಧುಸೂದನ ಮಹಾಪಾತ್ರ ಎಂದು ಹಿಗ್ಗಿಸಿಕೊಳ್ಳುತ್ತಾರೆ. ಮಹತ್ವಾಕಾಂಕ್ಷಿ ಜನರು ತಮ್ಮನ್ನು ಪ್ರದರ್ಶಿಸಿಕೊಳ್ಳಲು ದೀರ್ಘ ಕಾಲ ಮನ್ನಣೆ ಪಡೆದ ಹೆಸರನ್ನೂ ಕುಲನಾಮಗಳನ್ನೂ ಹುಡುಕುತ್ತಾರೆ, ಮಾನವ ದೃಢವಾಗಿ ನಿರ್ಮಿಸಿದ ಮನೆ ಅಥವಾ ಒಳ್ಳೆಯ ವಸ್ತ್ರಗಳನ್ನು ಬಯಸುವಂತೆ. ಭಕ್ತಕವಿ ಮಧುಸೂದನ ರಾವ್ ಅವರ ಮೂಲ ಕುಲನಾಮ "ಸಿಂಗ್" ಆಗಿತ್ತು. ಆದರೆ ಯಾವುದೋ ಹಂತದಲ್ಲಿ ಅದಕ್ಕಿಂತ "ಶ್ರೇಷ್ಟ"ವಾದ "ರಾವ್" ಎಂಬ ಕುಲನಾಮವನ್ನು ಸ್ವೀಕರಿಸಿದರು."
ಜಾತಿ ಬದಲಿಸುವುದು ಅಸಾಧ್ಯ ಎಂಬುದೇ ನಮ್ಮೆಲ್ಲರ ಧೋರಣೆ. ಈ ಕಾರಣದಿಂದ ಒಂದು ಜಾತಿಯಿಂದ ಇನ್ನೊಂದು ಜಾತಿಗೆ ನಡೆಯುವ ಬದಲಾವಣೆ ಕುರಿತ ಸಂಶೋಧನೆಗಳು ನಡೆದಿಲ್ಲ. ಮಾತ್ರವಲ್ಲ, ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಲೆ ಹಾಕುವ ಕಾರ್ಯವೂ ಇಲ್ಲಿಯ ವರೆಗೆ ಆಗಿಲ್ಲ. ಆದರೆ ಹತ್ತೊಂಬತ್ತನೆಯ ಶತಮಾನದಲ್ಲಿಯೂ ಜಾತಿ ಪರಿವರ್ತನೆ ನಿರಂತರ ನಡೆದಿತ್ತು. ಭಾರತದ ವಾಯುವ್ಯ ಪ್ರದೇಶ ಹಾಗೂ ಅವಧ್‌ನ ಜಾತಿ ಪದ್ಧತಿ ಕುರಿತು ಬರೆಯುತ್ತ ಜಾನ್ ಕಾಲಿನ್ಸನ್ ನೆಸ್ಫೀಲ್ಡ್ ತಮಗೆ ತಿಳಿದಂತ ಒಂದು ಪ್ರಸಂಗವನ್ನು ವಿವರಿಸಿದ್ದಾರೆ. ಇದು ನಾಪಿತ್ (ಹಜಾಮ) ಜಾತಿಯಿಂದ ಬಢೈ (ಬಡಗಿ) ಜಾತಿಗೆ ಆದ ಪರಿವರ್ತನೆ. ಇಲ್ಲಿ ಮೊದಲಿಗೆ ನಾಪಿತ್ ಜಾತಿಯ ವ್ಯಕ್ತಿ ತನ್ನ ವೃತ್ತಿಯನ್ನು ಕೈಬಿಟ್ಟು ಬಡಗಿಯ ವೃತ್ತಿಯನ್ನು ಕೈಗೆತ್ತಿಕೊಳ್ಳುತ್ತಾನೆ. ಇದು ಪರಿವರ್ತನೆಯ ಆರಂಭದ ಹಂತ. ಆದರೆ ಆ ವ್ಯಕ್ತಿಗೆ ತನ್ನ ಜಾತಿಯನ್ನು ಬದಲಾಯಿಸಲು ಉಪಾಯಗಳಿಲ್ಲ. ತನ್ನ ಮನೆತನದ ಮುಂದಿನ ತಲೆಮಾರುಗಳಿಗೆ ಮಾತ್ರ ಈ ಪರಿವರ್ತನೆ ಅನ್ವಯಿಸುತ್ತದೆ. ತಾನು ಬಢೈಗಳೊಂದಿಗೆ ವ್ಯವಹಾರ ನಡೆಸುತ್ತಾನೆ. ಅವರ ವೃತ್ತಿಯನ್ನೇ ಕೈಗೊಳ್ಳುತ್ತಾನೆ. ಅವರ ಆಚರಣೆಗಳಲ್ಲಿ ಭಾಗಿಯಾಗುತ್ತಾನೆ. ಹೀಗೆ ತನ್ನನ್ನು ತಾನು ಬಢೈ ಎಂದು ಗುರುತಿಸಿಕೊಳ್ಳುತ್ತಾನೆ. ಆತನ ಮಕ್ಕಳು ಹಾಗೂ ಮೊಮ್ಮಕ್ಕಳು ಇದನ್ನು ಮುಂದುವರಿಸುತ್ತ ಬಂದರೆ ಮೊಮ್ಮಕ್ಕಳ ಯಾ ಮರಿಮಕ್ಕಳ ತಲೆಮಾರಿನಲ್ಲಿ ಅವರಿಗೆ ಇತರ ಬಢೈಗಳೊಂದಿಗೆ ವಿವಾಹ ಸಂಬಂಧ ಬೆಳೆಸಿಕೊಳ್ಳಲು ಮನ್ನಣೆ ದೊರೆತು ಅವರು ಬಢೈ ಜಾತಿಯ ಭಾಗವಾಗುತ್ತಾರೆ. ಇದೊಂದು ಬಿಡಿ ಉದಾಹರಣೆಯಲ್ಲ. ಒಂದು ಜಾತಿ ಬಿಟ್ಟು ಮತ್ತೊಂದು ಜಾತಿ ಸೇರುವ ಕಾರ್ಯ ನಿರಂತರ ನಡೆಯುತ್ತಿದೆ ಎಂಬುದು ನೆಸ್ಫೀಲ್ಡ್‌ರ ಗಮನಕ್ಕೆ ಬಂದಿತ್ತು. ಅವರು ಈ ಸಂದರ್ಭದಲ್ಲಿ “Migrations of this nature from one caste to another are perpetually being made” ಎಂದಿದ್ದಾರೆ. ಎಲ್ಲೆಡೆಯಲ್ಲೂ ಜಾತಿ ಪರಿವರ್ತನೆ ಈ ಕ್ರಮವನ್ನೇ ಅನುಸರಿಸಿರಲಿಲ್ಲ. ಸಾಮಾನ್ಯವಾಗಿ ಅದು ಆಚರಣೆಗಳ ಮೂಲಕ ನಡೆದಿತ್ತು.
ಹಳೆಯ ಕೆಲವು ವಿವರಣೆಗಳನ್ನು ನಂತರ ಕೈಗೊಳ್ಳಲಾದ ಅಧ್ಯಯನಗಳೊಂದಿಗೆ ಹೋಲಿಸಿದಾಗ ಜಾತಿ ಪರಿವರ್ತನೆ ಕೊನೆಗೊಂಡುದರ ಸೂಚನೆಗಳು ಸಿಗುತ್ತವೆ. ಬಲಾಹಿ ಜಾತಿಗೆ ಸೇರಲು ಅಗತ್ಯವಾದ ಆಚರಣೆಯ ಕುರಿತು ಆರ್.ವಿ. ರಸೆಲ್ ಬರೆದಿದ್ದಾರೆ. ಈ ಜಾತಿಗೆ ಸೇರಲು ಇಚ್ಛಿಸುವ ವ್ಯಕ್ತಿಗೆ ಮೊದಲು ತಲೆ ಬೋಳಿಸಲಾಗುತ್ತದೆ. ಬಳಿಕ ಆತನು ಹಗ್ಗ ಬಿಗಿದ ಮಂಚವೊಂದರ ಕೆಳಗೆ ನೆಲದ ಮೇಲೆ ಮಲಗುತ್ತಾನೆ. ಬಲಾಹಿಗಳಲ್ಲಿ ಕೆಲವರು ಆ ಮಂಚದ ಮೇಲೆ ಕೂತು ತಮ್ಮ ಮೇಲೆ ನೀರೆರೆದುಕೊಳ್ಳುತ್ತಾರೆ. ಹಗ್ಗದ ಸಂದುಗಳಿಂದ ಆ ನೀರು ಸೋರುತ್ತ ಮಂಚದ ಕೆಳಗೆ ಮಲಗಿದ ವ್ಯಕ್ತಿಯನ್ನು ತೊಯ್ಸುತ್ತದೆ. ಆ ನೀರಲ್ಲಿ ಪೂರ್ಣವಾಗಿ ಮಿಂದವನು ಬಲಾಹಿಗಳಿಗೆ ವಿಧಿವತ್ತಾಗಿ ಭೋಜನ ನೀಡುತ್ತಾನೆ. ಅಲ್ಲಿಗೆ ಆತ ಬಲಾಹಿ ಜಾತಿಯ ಸದಸ್ಯನಾದಂತೆ. ಇದು ರಸೆಲ್ 1916ರಲ್ಲಿ ಬರೆದದ್ದು. ಆದರೆ ಸ್ಟೀವೆನ್ ಫೂಕ್ಸ್ 1950ರಲ್ಲಿ ತನ್ನ ದಿ ಚಿಲ್ಡ್ರೆನ್ ಆಫ್ ಹರಿ ಎಂಬ ಕೃತಿ ಬರೆಯುವ ವೇಳೆಗೆ ಸ್ಥಿತಿ ಬದಲಾಗಿತ್ತು. ಜಾತಿಯ ಪರಿವರ್ತನೆ ಆಗಲೂ ಸಾಧ್ಯವಿತ್ತು. ಆದರೆ ಮೇಲೆ ಹೇಳಿದ ಆಚರಣೆ ಅಲ್ಲಿ ಉಳಿದಿರಲಿಲ್ಲ. ಹೀಗಾಗಿ ಅಂಥ ಆಚರಣೆ ಇನ್ನಿತರ ಜಾತಿಗಳಲ್ಲಿತ್ತು. ಅವುಗಳಲ್ಲಿ ಹೋಲ್ಕರ್ ರಾಜ್ಯದ ಭಿಲಾಲಾರದೂ ಒಂದು, ರಸೆಲ್ ಭಿಲಾಲಾರ ಆಚರಣೆಯನ್ನು ಬಲಾಹಿಗಳ ಆಚರಣೆಯೆಂದು ಗ್ರಹಿಸಿಕೊಂಡಿರಬಹುದೆಂದು ಫೂಕ್ಸ್ ಹೇಳುತ್ತಾರೆ. ಫೂಕ್ಸ್ ಕಂಡ ಬಲಾಹಿಗಳಲ್ಲಿ ಈ ಆಚರಣೆ ಇರಲಿಲ್ಲ. ತಮ್ಮೊಡನೆ ತಿಂದುಂಡು ಬಾಳ್ವೆ ನಡೆಸತೊಡಗಿದರೆ ಅಂಥ ವ್ಯಕ್ತಿ ಬಲಾಹಿಯೆಂಬ ಪರಿಗಣನೆಗೆ ಅರ್ಹತೆ ಹೊಂದುತ್ತಿದ್ದ. ತಮ್ಮ ಜಾತಿಯ ಕಾಗದ ಪತ್ರಗಳನ್ನು ನೋಡಿಕೊಳ್ಳುವ ಭಟ್ ಎಂಬ ಕರ್ಮಿಯು ನಿಗದಿತ ಶುಲ್ಕವೊಂದನ್ನು ಪಡೆದು ತನ್ನ ವಹಿಯಲ್ಲಿ ಆ ವ್ಯಕ್ತಿಯ ಹೆಸರನ್ನು ಸೇರಿಸುತ್ತಿದ್ದ. ಅಲ್ಲಿಗೆ ಜಾತಿ ಬದಲಾದಂತೆ. ಆದರೆ ಬಲಾಹಿಗಳು ತಮಗಿಂತ ಮೇಲ್ಜಾತಿಗೆ ಸೇರಿದವರನ್ನು ಮಾತ್ರ ತಮ್ಮ ಜಾತಿಗೆ ಸೇರಿಸಿಕೊಳ್ಳುತ್ತಿದ್ದರು. ಅವರಿಗಿಂತ ಕೆಳಜಾತಿಯ ಸದಸ್ಯರಿಗೆ ಬಲಾಹಿಗಳಾಗಲು ಅನುಮತಿ ಇರಲಿಲ್ಲ. 1966ರಲ್ಲಿ ಏಡ್ರಿಯನ್ ಮೇಯರ್ ತನ್ನ ಅಧ್ಯಯನವನ್ನು ಪ್ರಕಟಿಸುವ ವೇಳೆಗೆ ಆಚರಣೆಗಳ ಮೂಲಕ ಜಾತಿ ಬದಲಾಗುವ ಪದ್ಧತಿ ನಿಂತೇ ಹೋಗಿತ್ತು. ಆದರೆ ಆಗಲೂ ಜಾತಿ ಪರಿವರ್ತನೆ ನಡೆಯುತ್ತಿದ್ದುದನ್ನು ಮೇಯರ್ ಗುರುತಿಸಿದ್ದರು. ಇಂದು ಅದು ಅಸಾಧ್ಯವಾಗಿದೆ. ಮಾತ್ರವಲ್ಲ, ಒಂದು ಕಾಲಕ್ಕೆ ಜಾತಿಯನ್ನು ಬದಲಿಸುವುದು ಸಾಧ್ಯವಿತ್ತೆಂಬುದು ಆಶ್ಚರ್ಯವನ್ನು ಉಂಟುಮಾಡುವ ಸಂಗತಿಯಾಗಿ ಮಾರ್ಪಟ್ಟಿದೆ.
ಜಾತಿ ಪದ್ಧತಿಯ ಒಳಗಿದ್ದುಕೊಂಡೇ ತಮ್ಮ ಜಾತಿಯಿಂದ ಹೊರಬರುವ ಮಾರ್ಗಗಳಲ್ಲಿ ಬೇರೆ ಜಾತಿ ಸೇರುವುದು ಒಂದು. ಅಂಥ ಇನ್ನೊಂದು ಮಾರ್ಗವೆಂದರೆ ತಮ್ಮದೇ ಆದ ಹೊಸ ಜಾತಿಯೊಂದನ್ನು ಕಟ್ಟಿಕೊಳ್ಳುವುದು. ಜಾತಿ ಪದ್ಧತಿಯ ಇತಿಹಾಸದ ವಿವಿಧ ಹಂತಗಳಲ್ಲಿ ಜರುಗಿದ ಈ ಪ್ರಕ್ರಿಯೆ ಹದಿನಾರನೆಯ ಶತಮಾನದಿಂದ ಹದಿನೆಂಟನೆಯ ಶತಮಾನದ ವರೆಗಿನ ಅವಧಿಯಲ್ಲಿ ತೀವ್ರರೂಪ ಪಡೆದುಕೊಂಡಿತು. ಈಗ ಮಾನ್ಯತೆ ಕಳೆದುಕೊಂಡಿರುವ ಈ ಪ್ರಕ್ರಿಯೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿಯೂ ನಡೆದಿತ್ತು. ಪಶ್ಚಿಮ ಭಾರತದ ಮೋಚಿ ಜಾತಿಯಿಂದ ಆಗಷ್ಟೇ ಹೊರಬರತೊಡಗಿದ್ದ ಮೂರು ಹೊಸ ಜಾತಿಗಳ ಕುರಿತು ಆರ್.ಬಿ. ಎಂತೋವೆನ್ 1975ರಲ್ಲಿ ವರದಿ ಮಾಡಿದ್ದರು. ಇದರಲ್ಲಿ ಒಂದು ಅರಗಿನ ಬಳೆ ತಯಾರಿಸುವ ಚಾಂದ್‌ಲಾಗರಾ ಜಾತಿ, ಮತ್ತೊಂದು ಚಿತ್ರ ಬಿಡಿಸುವ ವೃತ್ತಿಯ ಚಿತಾರಾ ಜಾತಿ, ಮೂರನೆಯದು ಆಧಿನಿಕ ಎಲೆಕ್ಟ್ರೋಪ್ಲೇಟಿಂಗ್ ಕಾರ್ಯವನ್ನು ವೃತ್ತಿಯಾಗಿಸಿಕೊಂಡ ರಸಾನಿ ಜಾತಿ. ಮೋಚಿಗಳು ಚಮ್ಮಾರಿಕೆಯ ವೃತ್ತಿಯಲ್ಲಿ ತೊಡಗಿದ್ದವರು. ಹೀಗಾಗಿ ಮಡಿಮೈಲಿಗೆಗಳ ಪರಿಗಣನೆಯಿಂದ ಈ ಮೂರು ಜಾತಿಗಳು ಬೇರೆ ಅಸ್ಮಿತೆ ಪಡೆದಿರಬಹುದು ಎಂದು ದೀಪಾಂಕರ್ ಗುಪ್ತ ಹೇಳುತ್ತಾರೆ. ಆದರೆ ಈ ಮೂರು ಹೊಸ ಜಾತಿಗಳು ಪರಸ್ಪರ ಭಿನ್ನವಾಗಿವೆ. ಅವುಗಳ ನಡುವಲ್ಲಿ ಒಳವಿವಾಹದ ಸಂಬಂಧಗಳಿಲ್ಲ. ಇಲ್ಲಿ ಮೈಲಿಗೆಯಾಗುವಂತ ವೃತ್ತಿ ಇಲ್ಲದಿರಲು ಈ ಮೂರರ ನಡುವಿನ ಭಿನ್ನತೆಗೆ ಮಡಿಮೈಲಿಗೆಯನ್ನೇ ಕಾರಣವಾಗಿ ಹೇಳಲಾಗದು ಎಂದು ಗುಪ್ತ ಅಭಿಪ್ರಾಯಪಟ್ಟಿದ್ದಾರೆ. ಹೀಗೆ ತನ್ನ ಆಂತರಿಕ ವಿನ್ಯಾಸದಲ್ಲಿ ಜಾತಿ ಪದ್ಧತಿ ಏಕರೂಪತೆ ಇಲ್ಲದೆ ಅನೇಕ ಸ್ಥರದಲ್ಲಿ ವೈವಿಧ್ಯತೆ ಹೊಂದಿರುವುದನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ ಎನ್ನುತ್ತಾರೆ ಗುಪ್ತ.
ಇಪ್ಪತ್ತನೆಯ ಶತಮಾನದಲ್ಲಿ ಹೊಸ ಜಾತಿಗಳು ಏಳಿಗೆ ಪಡೆದುದ್ದಕ್ಕೆ ಇನ್ನೂ ಹಲವು ಉದಾಹರಣೆಗಳಿವೆ. ಪಟವಾರಿ ವೃತ್ತಿಯಲ್ಲಿ ತೊಡಗಿದ್ದ ಕಾಯಸ್ತರಿಂದ ದೂರ ಸರಿದು ಹೊಸ ಜಾತಿಯಾಗಿ ರೂಪುಪಡೆದವರು ಶ್ರೀವಾಸ್ತವರು. ಅವಧ್ ಪ್ರಾಂತ್ಯದ ತೇಲಿ (ತೆಲ್ಲಿಗರು) ಜಾತಿಯಿಂದ ಬೇರ್ಪಟ್ಟು ಎರಡು ಜಾತಿಗಳು ಹುಟ್ಟಿಕೊಂಡವು. ಒಂದು ಗಚ್ಛುವಾ ತೇಲಿ. ಇವರು ತೈಲೋತ್ಪಾದನೆಯ ಸಾಂಪ್ರದಾಯಿಕ ವಿಧಾನವನ್ನು ಕೈಬಿಟ್ಟು ಲಟ್ಟಣಿಗೆಯಂಥ ಮರದ ಉಪಕರಣಗಳನ್ನು ಬಳಸತೊಡಗಿದರು. ಇನ್ನೊಂದು ಭುಂಜ ತೇಲಿ. ಇವರು ಬೀಜವನ್ನು ಒಣಗಿಸಿ ಎಣ್ಣೆ ತೆಗೆವವರು. ಈ ಎರಡೂ ಹೊಸ ಪದ್ಧತಿಗಳಿಗೆ ಸಾಂಪ್ರದಾಯಿಕ ತೇಲಿಗಳಲ್ಲಿ ಮಾನ್ಯತೆ ಇರಲಿಲ್ಲ. ಹೀಗಾಗಿ ಈ ಗುಂಪುಗಳನ್ನು ತೇಲಿ ಜಾತಿಯಿಂದ ಬಹಿಷ್ಕರಿಸಲಾಯ್ತು. ಹೀಗೆ ಬಹಿಷ್ಕಾರ ಹೊಂದಿದ ಜನರು ತಮ್ಮದೇ ಆದ ಎರಡು ಹೊಸ ಜಾತಿಗಳನ್ನು ರಚಿಸಿಕೊಂಡು ಒಳವಿವಾಹವನ್ನು ಆಯಾ ಹೊಸ ಜಾತಿಗಳಿಗೆ ಸೀಮಿತಗೊಳಿಸಿದರು. ಶ್ರೀವಾಸ್ತವರದು ಇದಕ್ಕಿಂತ ಭಿನ್ನ. ಪಟವಾರಿ ಕಾಯಸ್ತರ ಕಂದಾಚಾರ ವಿರೋಧಿಸಿ ತಾವೆ ಆ ಜಾತಿಯಿಂದ ದೂರಾಗಿ ಹೊಸ ಜಾತಿಯನ್ನು ಕಟ್ಟಿಕೊಂಡವರು ಇವರು.
ಜಾತಿ ಪದ್ಧತಿಯ ನೆಲೆಗಳು ಪರಿವರ್ತನಶೀಲವಾಗಿದ್ದುದನ್ನು ಈ ಕಿರುಸಮೀಕ್ಷೆ ಸ್ಪಷ್ಟಪಡಿಸುತ್ತದೆ. ವ್ಯವಹಾರದ ಸ್ಥರದಲ್ಲಿ ಅಪಾರ ವಿಭಿನ್ನತೆ ಇದ್ದುದರಿಂದ ಎಲ್ಲೆಡೆಯಲ್ಲೂ ಜಾತಿ ಏಕರೂಪತೆ ಹೊಂದಲಿಲ್ಲ. ಆಯಾ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳ ಜೊತೆ ಹಾಗೂ ಅಲ್ಲಿ ಆವಿಷ್ಕಾರ ಪಡೆದ ಉತ್ಪಾದನಾ ಸಂಬಂಧಗಳ ಸಂರಚನೆಯ ಜೊತೆ ಸ್ಥಳೀಯತೆಯ ಸ್ವರೂಪ ಪಡೆದುಕೊಂಡಿತ್ತು. ಈ ಸ್ಥಳೀಯತೆ ಕುರಿತು ಮುಂದಿನ ಅಧ್ಯಾಯದಲ್ಲಿ ಚರ್ಚಿಸುತ್ತೇನೆ.

(ಸಾಂದರ್ಭಿಕ ಚಿತ್ರಗಳು)

**

ಜಾತಿ ಪದ್ಧತಿಯ ಮೈಮನಗಳು-1

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...