ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

Date: 22-08-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಮೂರನೆಯ ಬರೆಹ ಇಲ್ಲಿದೆ.

3

ವಸಾಹತುಪೂರ್ವ ಕಾಲದ ಜಾತಿ ಪದ್ಧತಿ ಸ್ಥಳೀಯ ನೆಲೆಯನ್ನು ಹೊಂದಿದ ವ್ಯವಸ್ಥೆಯಾಗಿತ್ತು. ಗ್ರಾಮಗಳ ಸಮೂಹವನ್ನು ವಿಷಯ, ನಾಡು, ಸೀಮೆ, ಆಹಾರ, ಮದಂಬ, ಹೀಗೆ ಬೇರೆಬೇರೆ ರೀತಿಯಲ್ಲಿ ಗುರುತಿಸಿಕೊಳ್ಳುವ ಕ್ರಮ ಅಂದು ಜಾರಿಯಲ್ಲಿತ್ತು. ಇಂಥ ಸ್ಥಳೀಯ ಘಟಕಗಳು ಏಳಿಗೆ ಪಡೆದದ್ದು ಯಾವಾಗ ಮತ್ತು ಹೇಗೆ ಎಂಬುದನ್ನು ಬರಲಿರುವ ಅಧ್ಯಾಯಗಳಲ್ಲಿ ಆ ಐತಿಹಾಸಿಕ ಸಂದರ್ಭವನ್ನು ಚರ್ಚಿಸುವಾಗ ವಿವರಿಸುತ್ತೇನೆ. ಸ್ಥಳೀಯ ಘಟಕಗಳಲ್ಲಿ ಜಾತಿಯು ಭೂಹಿಡುವಳಿ ಮತ್ತು ತಲೆಮಾರಿಂದ ತಲೆಮಾರಿಗೆ ಅದರ ಹಸ್ತಾಂತರದೊಂದಿಗೆ ಸಂಬಂಧ ಹೊಂದಿತ್ತು. ತನ್ನದೇ ಆದ ಸ್ವರೂಪವುಳ್ಳ ಕಾರ್ಷಿಕ ವ್ಯವಸ್ಥೆಯೊಂದರಲ್ಲಿ ಬೆಸೆದುಕೊಂಡಿದ್ದ ವ್ಯವಸ್ಥೆಯಿದು. ಕಾರ್ಷಿಕ ಉತ್ಪಾದನೆ ಮತ್ತು ಅವು ಮಾರಾಟವಾಗುವ ಸ್ಥಳೀಯ ಮಾರುಕಟ್ಟೆಗಳ ಜಾಲವೇ ಇದರ ಪಾತಳಿ. ಭೂಹಿಡುವಳಿ ಮತ್ತು ಅದರ ಹಸ್ತಾಂತರವು ಇಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ಈ ಕಾರಣದಿಂದ ಆರ್ಥಿಕ ಹಾಗೂ ವೈಯಕ್ತಿಕ ಸಂಬಂಧಗಳ ಮೇಲಿನ ನಿಯಂತ್ರಣವು ಸಮರ್ಪಕವಾಗಲು ಎಲ್ಲ ವ್ಯವಹಾರಗಳನ್ನೂ ಆಯಾ ನಾಡಿಗೋ, ಸೀಮೆಗೋ, ಇತರ ಸ್ಥಳೀಯ ಘಟಕಕ್ಕೋ ಸೀಮಿತಗೊಳಿಸುವ ಜೀವನಕ್ರಮವೊಂದು ಏಳಿಗೆ ಪಡೆಯಿತು. ಕ್ರಿಶ 300-600 ವರೆಗಿನ ಅವಧಿಯಲ್ಲಿ ಅಂಥ ವ್ಯವಸ್ಥೆಯೊಂದು ನಿರ್ಮಾಣವಾಗುತ್ತಿರುವ ಸೂಚನೆಗಳು ಭಾರತದ ವಿವಿಧ ಪ್ರದೇಶದ ಶಾಸನಗಳಲ್ಲಿ ದೊರಕುತ್ತವೆ. ಈ ಪ್ರಕ್ರಿಯೆ ಸಕ್ರಿಯೆಗೊಂಡು ಸುದೃಢವಾದ ವ್ಯವಸ್ಥೆಯಾಗಿ ಪರಿಣಾಮ ಹೊಂದಿದ್ದು ಕ್ರಿಶ 600-1200ರ ನಡುವಲ್ಲಿ.
ಈ ಜೀವನಕ್ರಮದಡಿಯಲ್ಲಿ ಜಾತಿಯೊಂದು ಆಯಾ ಸ್ಥಳೀಯ ನೆಲೆಯಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಹೀಗಾಗಿ ರಾಯಲಸೀಮೆಗೆ ಸೇರಿದ ರೆಡ್ಡಿಯದೇ ಬೇರೆ ಜಾತಿ, ಆಂಧ್ರದ ಕರಾವಳಿಗೆ ಸೇರಿದ ರೆಡ್ಡಿಯದೇ ಬೇರೆ. ಈ ಎರಡು ರೆಡ್ಡಿಗಳ ನಡುವೆ ವೈವಾಹಿಕ ಸಂಬಂಧ ಸಾಧ್ಯವಿರಲಿಲ್ಲ. ರೆಡ್ಡಿ ಜಾತಿಯ ಕನಿಷ್ಟ 80 ಸ್ಥಳೀಯ ಒಕ್ಕೂಟಗಳಿದ್ದವು. ಇವು ಪರಸ್ಪರ ನಂಟುವ್ಯವಹಾರಗಳಿಲ್ಲದ 80 ಭಿನ್ನ ಜಾತಿಗಳು.
ಉತ್ತರಪ್ರದೇಶದ ಪೂರ್ವಾಂಚಲ್ ಸೀಮೆಗೆ ಸೇರಿದ ಸವಾಲಾಖಿ (ಒಂದುಕಾಲು ಲಕ್ಷ) ಬ್ರಾಹ್ಮಣರು ರಾಜಸ್ಥಾನದಲ್ಲಿ ಶಾಕಂಬರಿಯ ಚಾಹಮಾನರು ಆಳುತ್ತಿದ್ದ ಪ್ರದೇಶದಿಂದ ವಲಸೆ ಬಂದವರು. ಚಾಹಮಾನರು ಆಳುತ್ತಿದ್ದ ಸೀಮೆಗೆ ಸಪಾದಲಕ್ಷ (ಒಂದುಕಾಲು ಲಕ್ಷ) ಎಂದು ಹೆಸರು. ಈ ಬ್ರಾಹ್ಮಣರ ವಿವಾಹ, ಕೊಡುಕೊಳೆಗಳೆಲ್ಲವೂ ಸಪಾದಲಕ್ಷ ಸೀಮೆಯಿಂದ ಬಂದವರೊಂದಿಗೆ ಮಾತ್ರ. ಸರಯೂ ನದಿಯ ಎಡ ದಂಡೆಯ ಬ್ರಾಹ್ಮಣರು ಸರಯೂಪಾರಿನ್ ಎಂಬ ಗುಂಪಿಗೆ ಸೇರಿದವರು. ಅವರಿಗೆ ಆ ನದಿಯ ಬಲ ದಂಡೆಯ ಬ್ರಾಹ್ಮಣರ ಜೊತೆ ವೈವಾಹಿಕ ಸಂಬಂಧಗಳಿಲ್ಲ. ಇಂಥ ಘಟಕಗಳು ಯಾವಾಗಲೂ ಅನೇಕ ಊರುಗಳ ಸಮುಚ್ಚಯವಾದ ಸೀಮೆಯೇ ಆಗಿರಬೇಕು ಎಂಬ ನಿರ್ಬಂಧಗಳಿರಲಿಲ್ಲ. ಹಲವು ಸಂದರ್ಭಗಳಲ್ಲಿ ಹೆಚ್ಚಿನ ಜನಸಂಖ್ಯೆಯುಳ್ಳ ನಗರಗಳು ಇಂಥ ಘಟಕಗಳಾಗಿ ಕೆಲಸ ಮಾಡಿದ್ದವು. ಹರ್ಷ ಮತ್ತು ಗೂರ್ಜರ ಪ್ರತೀಹಾರರಿಗೆ ರಾಜಧಾನಿಯಾಗಿದ್ದ ಕಾನ್ಯಕುಬ್ಜ (ಕನ್ನೌಜ್) ಅಂಥ ನಗರಗಳಲ್ಲಿ ಒಂದು. ಕಾನ್ಯಕುಬ್ಜ ಬ್ರಾಹ್ಮಣರು ಕಾನ್ಯಕುಬ್ಜರಲ್ಲದ ಬ್ರಾಹ್ಮಣರೊಂದಿಗೆ ನಂಟಸ್ತಿಕೆ ಸ್ಥಾಪಿಸುವುದು ನಿಷಿದ್ಧವಾಗಿತ್ತು. ಮುಂದೆ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ಕಾನ್ಯಕುಬ್ಜರಲ್ಲಿಯೇ ಪರಸ್ಪರ ವಿವಾಹ, ಆಚರಣೆ ಇತ್ಯಾದಿಗಳು ನಡೆಯದ ಐದು ಶಾಖೆಗಳು ಹುಟ್ಟಿಕೊಂಡವು. ಅದರಲ್ಲೊಂದು ಕಾನ್ಯಕುಬ್ಜ ಅಥವಾ ಕನೌಜಿಯಾ, ಇನ್ನೊಂದು ಮೇಲೆ ಉಲ್ಲೇಖಿಸಿದ ಸರಯೂಪಾರಿನ್. ಉಳಿದವು ಸಾನಾದಿಯಾ, ಜಿಝೋಟಿಯಾ ಮತ್ತು ಬಂಗಾಳದ ಕನೌಜಿಯಾ. ಈ ಎಲ್ಲ ಶಾಖೆಗಳಲ್ಲಿಯೂ ಸ್ಥಳೀಯತೆಯ ಆಧಾರದ ಮೇಲೆ ಉಪಜಾತಿಗಳು ಹುಟ್ಟಿಕೊಂಡವು.
ಇಂಥ ಭೇದಗಳಿಗೆ ಸ್ಥಳೀಯ ಕಥನಗಳ ಮೂಲಕ ಅಥವಾ ಪೌರಾಣಿಕತೆಯ ಪಾತಳಿಯಲ್ಲಿ ಕಾರಣವನ್ನು ಹೇಳುವುದು ಅಂದು ಸಹಜವಾಗಿತ್ತು. ಉದಾಹರಣೆಗೆ ಸರಯೂಪಾರಿನ್ ಹಾಗೂ ಕನೌಜಿಯಾಗಳ ನಡುವೆ ವಿವಾಹವ್ಯವಹಾರಗಳು ಏಕೆ ಕೂಡದು ಎಂಬುದನ್ನು ಸಮರ್ಥಿಸಿಕೊಳ್ಳುವ ಒಂದು ಕಥೆಯಿದೆ. ರಾಮ ಹದಿನಾಲ್ಕು ವರ್ಷ ವನವಾಸದಿಂದ ಬಂದ ಬಳಿಕ ತಂದೆ ದಶರಥನ ಶ್ರಾದ್ಧ ನಡೆಸಿದ. ಶ್ರಾದ್ಧದಲ್ಲಿ ಉಣ್ಣಲು ಬ್ರಾಹ್ಮಣರನ್ನು ಆಮಂತ್ರಿಸಿದ. ಸರಯೂಪಾರಿನ್‌ಗಳು ಹೋದರು. ಇಂಥ ನಿಮಂತ್ರಣಗಳನ್ನು ಸ್ವೀಕರಿಸುವುದು ಬ್ರಾಹ್ಮಣರ ಧರ್ಮ ಎಂಬುದು ಅವರ ನಿಲುವಾಗಿತ್ತು. ಕನೌಜಿಯಾಗಳು ಹೋಗಲಿಲ್ಲ. ಏಕೆಂದರೆ ರಾಮ ರಾವಣನನ್ನು ಕೊಂದಿದ್ದ. ರಾವಣ ಬ್ರಾಹ್ಮಣ. ಸಪ್ತರ್ಷಿಗಳಲ್ಲಿ ಓರ್ವನಾದ ಪುಲಸ್ತ್ಯನ ಮೊಮ್ಮಗ. ಬ್ರಾಹ್ಮಣ ಹತ್ಯೆ ಪಂಚಮಹಾಪಾತಕಗಳಲ್ಲಿ ಒಂದು. ಬ್ರಹ್ಮಹತ್ಯಾದೋಷವುಳ್ಳ ರಾಮನೊಂದಿಗೆ ವ್ಯವಹಾರ ಸಲ್ಲದು. ಹಾಗೆಯೇ ಆ ದೋಷವುಳ್ಳವನ ಮನೆಯಲ್ಲಿ ಆಹಾರ ಸೇವಿಸಿದವರೂ ಮಹಾಪಾತಕಿಗಳೇ. ಕನೌಜಿಯಾ ಬ್ರಾಹ್ಮಣರ ಪ್ರಕಾರ ಶೂದ್ರರ ಯಾ ಪಂಚಮರ ಸ್ಪರ್ಶವಾಗುವುದು ಸಣ್ಣ ದೋಷ. ಮಿಂದು ಹೊಸ ಜನಿವಾರ ತೊಟ್ಟರೆ ತೀರುವ ಮೈಲಿಗೆಯದು. ಆದರೆ ಸರಯೂಪಾರಿನ್ ಬ್ರಾಹ್ಮಣರನ್ನು ಸ್ಪರ್ಶಿಸುವುದು ಮಹಾಪಾತಕವೇ ಆಗುತ್ತದೆ. ಇದು ಅಸ್ಪೃಶ್ಯತೆಗಿದ್ದ ಸಾರ್ವತ್ರಿಕ ರೂಪ.
ಗಂಗಾ ಸಮತಲ ಪ್ರದೇಶಗಳಲ್ಲಿ ಒಂದೋ ಅದಕ್ಕಿಂಥ ಹೆಚ್ಚೋ ಗ್ರಾಮಗಳನ್ನು ಮೂಲ್ (ಮೂಲ) ಎಂದು ಪರಿಗಣಿಸಲಾಗಿತ್ತು. ಆಯಾ ಮೂಲ್‌ಗಳು ತಮ್ಮ ಸ್ಥಳೀಯ ಸ್ಥರದಲ್ಲಿ ಕೃಷಿ ಹಾಗೂ ಭೂಮಾಲೀಕತ್ವದ ಘಟಕಗಳಾಗಿದ್ದವು. ದಕ್ಷಿಣ ಭಾರತದಲ್ಲಿ ನಾಡು, ಸೀಮೆ, ಕೂಟ್ರಂ ಮೊದಲಾದ ಸಮಾನ ಘಟಕಗಳು ಏಳಿಗೆ ಪಡೆದಿದ್ದವು. ತಮ್ಮ ಘಟಕದಿಂದ ಹೊರಕ್ಕೆ ನಂಟು ಸಂಬಂಧ ಬೆಳೆಸಿಕೊಳ್ಳುವುದು ಎಂದರೆ ತಮ್ಮ ನಿಯಂತ್ರಣದಲ್ಲಿರುವ ನೆಲದ ಪ್ರಮಾಣವು ವರದಕ್ಷಿಣೆ, ವರೋಪಚಾರದಿಂದಾಗಿ ಕಡಿಮೆಯಾಗುವುದು. ಮುಂದೆ ಚರ್ಚಿಸುವಂತೆ, ಈ ನೆಲಗಳು ಏಕಸ್ವಾಮ್ಯದ ಹಿಡುವಳಿಗಳಾಗಿರದೆ ಅನೇಕ ಜನರ ಜೀವಿತ ಮತ್ತು ಹಿತಾಸಕ್ತಿಗಳು ಆನುವಂಶಿಕವಾಗಿ ಬೆಸೆದುಕೊಂಡಿದ್ದ ನೆಲಗಳಾಗಿರುತ್ತಿದ್ದವು. ಅದರೊಳಕ್ಕೆ ಆ ಸೀಮೆಯ ಹೊರಗಿನ ವ್ಯಕ್ತಿಗಳ ವಹಿವಾಟುಗಳು ಉಂಟಾದಾಗ ಅಲ್ಲಿನ ಆಸ್ತಿ ಸಂಬಂಧಗಳನ್ನೂ ಉತ್ಪಾದನಾ ಸಂಬಂಧಗಳನ್ನೂ ಅದು ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿತ್ತು. ಆದ್ದರಿಂದಲೇ ಭೂಸ್ವಾಮ್ಯ, ಕಾರ್ಷಿಕ ಉತ್ಪಾದನೆ, ವಿತರಣೆಗೆಂದು ರೂಪುಗೊಂಡ ಮಾರುಕಟ್ಟೆಯ ಜಾಲಗಳು, ವೈವಾಹಿಕ ಸಂಬಂಧಗಳು, ಜಾತಿ ಪದ್ಧತಿ, ಇವೆಲ್ಲವೂ ನಾಡೊಂದಕ್ಕೆ ಅಥವಾ ಸೀಮೆಯೊಂದಕ್ಕೆ ಸೀಮಿತವಾಗುವ ವ್ಯವಹಾರಗಳಾಗಿದ್ದವು. ಅಂದು ಎರಡು ಭಿನ್ನಭಿನ್ನ ನಾಡುಗಳಲ್ಲಿ ಭೂಸ್ವಾಮ್ಯ ಹೊಂದಿದ್ದ ಮನೆತನಗಳನ್ನು ಕಾಣದಿರಲು ಇದೇ ಕಾರಣ.
ಹೀಗಾಗಿ ಇಂದು ಪಟೇಲ ಎಂದಾಗ ಅಥವಾ ಚಟೋಪಾಧ್ಯಾಯ ಎಂದಾಗ ನಾವು ನಿರ್ದಿಷ್ಟವಾದೊಂದು ಜಾತಿಯನ್ನು ಕಾಣುವಂತೆ ಅಂದು ಇರಲಿಲ್ಲ. ಆಯಾ ಸೀಮೆಗಳಿಗೆ ಸೇರಿದ ಪಟೇಲರು ಯಾ ಚಟೋಪಾಧ್ಯಾಯರು ಇತರ ಸೀಮೆಯ ಪಟೇಲ, ಚಟೋಪಾಧ್ಯಾಯರಿಗಿಂತ ಭಿನ್ನ ಜಾತಿಯವರು. ಅನೇಕ ಸಂದರ್ಭಗಳಲ್ಲಿ ಪರಸ್ಪರ ಅಸ್ಪೃಶ್ಯತೆಯನ್ನು ಪಾಲಿಸುತ್ತಿದ್ದರು. ಕೇರಳದಲ್ಲಿ ಶುಕಪುರಂ ಮತ್ತು ಪನ್ನಿಯೂರ್ ಗ್ರಾಮಗಳಿಗೆ ಸೇರಿದ ನಂಬೂದಿರಿಗಳು ಪರಸ್ಪರ ಅಸ್ಪೃಶ್ಯರು. ಇವರು ಅವರ ಮನೆಯಿಂದ ನೀರನ್ನು ಸೇವಿಸುವುದೂ ನಿಷಿದ್ಧವಾಗಿತ್ತು. ಬಾಲೇಶ್ವರ ಪ್ರಾಂತ್ಯದ ಮಹಾಪಾತ್ರರ ಜಾತಿ ಒಂದಾದರೇ ಗಂಜಾಮ್ ಪ್ರಾಂತ್ಯದ ಮಹಾಪಾತ್ರರದು ಬೇರೆಯೇ ಜಾತಿ.
ಜಾತಿಯ ಭೌಗೋಳಿಕ ಸೀಮೆಗಳನ್ನು ಸ್ಪಷ್ಟವಾಗಿ ಗುರುತಿಸುವ ಕ್ರಮವು ಅನೇಕ ಕಡೆಗಳಲ್ಲಿತ್ತು. ಸರಯೂ ನದಿ ಕುರಿತು ಈಗಾಗಲೇ ಹೇಳಿದಂತೆ ಕೇರಳದ ಮಲಬಾರ್ ಭಾಗದಲ್ಲಿ ಕೋೞಿಕ್ಕೋಡ್ ಹಾಗೂ ಕೊಯಿಲಾಂಡಿ ನಗರಗಳ ನಡುವಲ್ಲಿರುವ ಕೋರಪ್ಪುೞ ಎಂಬ ನದಿಯನ್ನು ಗಡಿಯೆಂದು ನಿರ್ಣಯಿಸಲಾಗಿತ್ತು. ಈ ನದಿಯ ದಂಡೆಯ ಆಚೆಯುಳ್ಳವರು ಈಚೆಯುಳ್ಳವರೊಂದಿಗೆ ವಿವಾಹ, ಪೂಜೆ ಪುನಸ್ಕಾರ ಮುಂತಾದ ವ್ಯವಹಾರಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿತ್ತು, ಅವರು "ಅದೇ" ಜಾತಿಗೆ ಸೇರಿದವರಾದರೂ ಕೂಡ. ಬಂಗಾಳದಲ್ಲಿ ಕೆಲವು ಜಾತಿಗಳ ಒಳವಿವಾಹದ ಗಡಿಗಳನ್ನು ಆಯಾ ಮನೆತನಗಳ ಕುಲಪಾಂಜಿಕಾ ಎಂಬ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ವಿವರಣೆಯಂತೆ ಅಲ್ಲಿ ಬ್ರಾಹ್ಮಣರು ರಾಢೀ ಮತ್ತು ವಾರೇಂದ್ರಿ ಎಂಬ ಎರಡು ದೊಡ್ಡ ಶಾಖೆಗಳಾಗಿದ್ದು ಅವುಗಳ ಒಳಗೆ ಅನೇಕ ಉಪಶಾಖೆಗಳಿದ್ದವು. ಕಾಯಸ್ಥರಲ್ಲಿ ಉತ್ತರ ರಾಢೀ, ದಕ್ಷಿಣ ರಾಢೀ, ವಾರೇಂದ್ರಿ ಮತ್ತು ವಂಗಜ ಎಂಬ ನಾಲ್ಕು ವಿಭಾಗಗಳೂ ಅವುಗಳಲ್ಲಿ ಒಳವಿಭಾಗಳೂ ಇದ್ದವು. ಕೆಲವೊಮ್ಮೆ ದೊಡ್ಡ ಪ್ರಾಂತ್ಯವೊಂದು ಒಂದೇ ಘಟಕವಾಗಿ ಉಪಶಾಖೆಗಳಿಲ್ಲದೆ ಕೆಲಸ ಮಾಡುತ್ತಿದ್ದವು. ಮಿಥಿಲಾ ಪ್ರಾಂತ್ಯದ ಪಾಂಜೀ ಗ್ರಂಥಗಳಲ್ಲಿ ಅಲ್ಲಿನ ಬ್ರಾಹ್ಮಣರ ಶಾಖೆಗಳ ವಿವರಣೆಯಿಲ್ಲ. ಮೈಥಿಲಿ ಬ್ರಾಹ್ಮಣರಲ್ಲಿ ಶಾಖೆಗಳೂ ಇಲ್ಲ.
ಜನಸಂಖ್ಯೆ ಕಡಿಮೆಯಾಗಿದ್ದ ಹಿಮಾಚಲ ಪ್ರದೇಶದಲ್ಲಿ ರಾಜಮನೆತನವೊಂದರ ಗಡಿಗಳು ಸ್ಥಳೀಯ ಘಟಕಗಳಾಗಿ ಕೆಲಸ ಮಾಡುತ್ತಿದ್ದವು. ಕುಲ್ಲೂ, ಮಂಡಿ, ಸುಕೇತ್, ರಾಮ್‌ಪುರ್-ಬುಶೈರ್, ಬಿಲಾಸ್‌ಪುರ್, ಕಾಂಗ್ಡಾ, ಗುಲೇರ್, ಹೀಗೆ ವಿವಿಧ ರಾಜಮನೆತನಗಳ ಪ್ರದೇಶಗಳು ಒಳವಿವಾಹದ ಸೀಮೆಗಳಾಗಿ ರೂಪು ಪಡೆದಿದ್ದವು. ಮಂಡಿ ರಾಜನ ಸೀಮೆಯ ಖತ್ರಿಗಳು ಅಥವಾ ಪಂಡಿತ್‌ಗಳು ಸುಕೇತ್, ಕಾಂಗ್ಡಾ ಅಥವಾ ಮತ್ತಾವುದೇ ರಾಜನ ಸೀಮೆಯ ಖತ್ರಿಗಳೊಂದಿಗೆ ಇಲ್ಲವೇ ಪಂಡಿತ್‌ಗಳೊಂದಿಗೆ ನಂಟಸ್ತಿಕೆ ಬೆಳೆಸುತ್ತಿರಲಿಲ್ಲ.
ಈ ವ್ಯವಸ್ಥೆಯ ಅಡಿಯಲ್ಲಿ ಸ್ಥಳೀಯ ಗಡಿಗಳನ್ನು ಮೀರಿ ವೈವಾಹಿಕ ಸಂಬಂಧದಲ್ಲಿ ಏರ್ಪಟ್ಟವರು ಎಂದರೆ ರಾಜಮನೆತನಗಳು ಹಾಗೂ ರಾಜಕೀಯ ಮಹತ್ವಾಕಾಂಕ್ಷೆಯುಳ್ಳ ಪ್ರಭುಕುಟುಂಬಗಳು ಮಾತ್ರ. ಅವರಿಗೆ ವಿಶಾಲವಾದ ರಾಜಕೀಯ ಸಂಪರ್ಕಗಳ ವಲಯವನ್ನು ಸೃಷ್ಟಿಸಿಕೊಳ್ಳಲು ಈ ರೀತಿ ಗಡಿಗಳನ್ನು ಮೀರುವುದು ಅನಿವಾರ್ಯವಾಗಿತ್ತು.
ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭಗೊಂಡ ವಿದ್ಯಮಾನಗಳ ಫಲವಾಗಿ ಸ್ಥಳೀಯ ನೆಲೆಯ ಜಾತಿಯು ಪ್ರಾದೇಶಿಕ ವಿದ್ಯಮಾನವಾಗಿ ರೂಪಾಂತರ ಹೊಂದಿತು. ಅದರಿಂದ ಎಲ್ಲ ರೆಡ್ಡಿಗಳೂ ಒಂದೇ ಜಾತಿ ಅಥವಾ ಎಲ್ಲ ಮಲ್ಹೋತ್ರಾಗಳ ಜಾತಿಯೂ ಒಂದೇ ಎನ್ನುವಂತ ನೂತನ ವ್ಯವಸ್ಥೆಯೊಂದು ಚಾಲನೆ ಪಡೆಯಿತು. ಪಾಶ್ಚಾತ್ಯ ಶಿಕ್ಷಣ ಪಡೆದು ಅಧಿಕಾರಶಾಹಿ, ಪತ್ರಿಕೋದ್ಯಮ ಅಥವಾ ಯಾವುದೇ ಇತರ ಆಧುನಿಕ ನೌಕರಿವರ್ಗದ ಭಾಗವಾದ ಬಳಿಕ ಮಧ್ಯಮ ವರ್ಗದ ಹೊಸ ವರ್ಗಪ್ರಜ್ಞೆ ಮೂಡಿಕೊಳ್ಳುವುದು ಅನಿವಾರ್ಯವಾಗಿತ್ತು. ಆಗ ಸೀಮಿತವಾದ ಸ್ಥಳೀಯ ಆವರಣದಲ್ಲಿ ತನ್ನಂತೆ ಮಧ್ಯಮ ವರ್ಗದ ಸದಸ್ಯರಾದ ತನ್ನದೇ ಜಾತಿಯ ಇನ್ನೊಂದು ಕುಟುಂಬ ಇಲ್ಲದಿರುವುದು ಸಹಜವೇ ಆಗಿತ್ತು. ಹೀಗಾಗಿ ಹತ್ತೊಂಬತ್ತನೆಯ ಶತಮಾನ ಮುಗಿಯುವ ಹೊತ್ತಿಗೆ ವಿವಾಹ ಹಾಗೂ ನಂಟು ಸಂಬಂಧಗಳ ವಲಯವನ್ನು ವಿಸ್ತರಿಸಿಕೊಳ್ಳುವ ಅನಿವಾರ್ಯತೆ ತಲೆದೋರಿತ್ತು. ಅದೇ ವೇಳೆಗೆ ಆರಂಭಗೊಂಡ ಜನಗಣತಿ (ಸೆನ್ಸಸ್) ಮತ್ತಿತರ ಕಾರ್ಯಗಳು ಜಾತಿಯನ್ನು ಅತ್ತ ಬದಲಾಗದ ವ್ಯವಸ್ಥೆಯೆಂದು ಪರಿಕಲ್ಪಿಸಿಕೊಂಡರೆ ಇತ್ತ ಅದನ್ನು ಸ್ಥಳೀಯ ವಿದ್ಯಮಾನದಿಂದ ಪ್ರಾದೇಶಿಕ ವಿದ್ಯಮಾನವಾಗಿ ಮಾರ್ಪಾಟುಗೊಳಿಸಿತು. ಆದ್ದರಿಂದಲೇ ಹಾಸನದ ಒಕ್ಕಲಿಗರಿಗೆ ಚಿತ್ರದುರ್ಗದ ಒಕ್ಕಲಿಗರೊಂದಿಗೆ ಅಥವಾ ತಂಜಾವೂರಿನ ವೆಳ್ಳಾಳರಿಗೆ ಮಧುರೈ ಕ್ಷೇತ್ರದ ವೆಳ್ಳಾಳರೊಂದಿಗೆ ಒಳವಿವಾಹದ ಸಂಬಂಧ ಸಾಧ್ಯವಾದದ್ದು. ಈ ಪ್ರಕ್ರಿಯೆಯನ್ನು ರೂಢಿಗೆ ತರುವಲ್ಲಿ ಅಧಿಕಾರಶಾಹಿಯ ನಿಯಂತ್ರಣದಲ್ಲಿರುವ ಜ್ಞಾನೋತ್ಪಾದನೆಗೆ ಮತ್ತು ಜಾತಿಯಂಥ ಗುರುತುಗಳನ್ನು ಕಾಗದಪತ್ರಗಳ ಮೂಲಕ ನಿಗದಿಪಡಿಸುವ ಕ್ರಮಗಳಿಗೆ ಅಪಾರ ಮಹತ್ವವಿದೆ.
ಆಧುನಿಕ ಅಧಿಕಾರಶಾಹಿಯು ಏಳಿಗೆ ಪಡೆಯುವ ಮುನ್ನ ಹಾಗೂ ಜಾತಿ ಪ್ರಾದೇಶಿಕ ವಿದ್ಯಮಾನವಾಗಿ ಪರಿವರ್ತನೆ ಹೊಂದುವುದಕ್ಕಿಂತ ಹಿಂದೆ ಜಾತಿಯೊಂದರ ಸದಸ್ಯರನ್ನು ಸರಳವಾಗಿ ಗುರುತಿಸಬಹುದಿತ್ತು. ಏಕೆಂದರೆ ಸ್ಥಳೀಯ ಸಂರಚನೆಯಾದುದರಿಂದ ಯಾವುದೇ ಜಾತಿಯ ಮನೆತನಗಳ ಸಂಖ್ಯೆ ಸೀಮಿತವಾಗಿತ್ತು. ಅನೇಕ ಸಂದರ್ಭಗಳಲ್ಲಿ ಈ ಕುರಿತು ದಾಖಲೆಗಳಿರುತ್ತಿದ್ದವು. ಉದಾಹರಣೆಗೆ, ಪಶ್ಚಿಮ ಉತ್ತರಪ್ರದೇಶ, ಉತ್ತರಾಖಂಡ್, ಹರಿಯಾಣಾ, ಹಿಮಾಚಲ ಪ್ರದೇಶ ಮುಂತಾದಲ್ಲಿನ ಮನೆತನಗಳ ವಿವರಗಳು ಆಯಾ ಸೀಮೆಗಳಿಗೆಂದು ನಿಗದಿಯಾದ ಪಂಡಾಗಳ ಕೈಯ್ಯಲ್ಲಿರುತ್ತಿತ್ತು. ಈ ಪಂಡಾಗಳು ಹರಿದ್ವಾರ್ ನಿವಾಸಿಗಳು. ತಮ್ಮ ಮನೆಯಲ್ಲಿ ನಿಧನವೊಂದು ಸಂಭವಿಸಿದಾಗ ಅಂತ್ಯಕ್ರಿಯೆ ಮುಗಿಸಿ ಆ ಮನೆಯ ಹಿರಿಯರು ಹರಿದ್ವಾರ್‌ಗೆ ತೆರಳಿ ತಮ್ಮ ಪಂಡಾಗಳ ವಹಿಯಲ್ಲಿ ಮೃತಪಟ್ಟವರ ವಿವರಗಳನ್ನು ಸೇರಿಸುತ್ತಿದ್ದರು. ಕಳೆದ ಸುಮಾರು ಐನೂರು ವರ್ಷಗಳಿಂದ ನಡೆದುಬಂದಿರುವ ಪದ್ಧತಿಯಿದು. ಅಂಥ ಪಂಡಾಗಳ ಕೈಯ್ಯಲ್ಲಿ ಸೀಮೆಯೊಂದಕ್ಕೆ ಸೇರಿದ ಯಾವುದೇ ಜಾತಿಯ ಮನೆತನಗಳ ವಿವರಗಳಿರುತ್ತವೆ.
ಕುಲೂ ಸೀಮೆಯ ಠಾಕುರ ಮನೆತನದ ವ್ಯಕ್ತಿಯೋರ್ವನು ಮಂಡಿ ಯಾ ಸುಕೇತ್ ಸೀಮೆಯ ಠಾಕುರ್ ಮನೆತನದೊಂದಿಗೆ ವಿವಾಹ ಸಂಬಂಧ ಬೆಳೆಸುವಂತಿಲ್ಲ. ತಮಗೆ ಪರಿಚಯವಿಲ್ಲದ ಠಾಕುರ್ ಮನೆತನದಿಂದ ಸಂಬಂಧದ ಪ್ರಸ್ತಾಪ ಬಂದಾಗ ಆ ಮನೆತನದವರು ಹರಿದ್ವಾರ್‌ಗೆ ಸುದ್ದಿ ಮುಟ್ಟಿಸುತ್ತಿದ್ದರು. ತಮ್ಮ ಪಂಡಾನ ನೆರವಿನಿಂದ ಈ ಮನೆತನ ತಮ್ಮ ಸೀಮೆಯದೇ ಅಲ್ಲವೇ ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಒಂದು ಸೀಮೆಯಿಂದ ಇನ್ನೊಂದು ಸೀಮೆಗೆ ವಲಸೆಬಂದಾಗ ಅಂಥ ವಲಸಿಗ ಮನೆತನದವರು ಹರಿದ್ವಾರ್‌ನಲ್ಲಿ ತಮ್ಮ ವಿವರಗಳಿರುವ ವಹಿಯನ್ನು ಹೊಸ ಸೀಮೆಯ ಪಂಡಾನಿಗೆ ಹಸ್ತಾಂತರಿಸುವಂತೆ ನೋಡಿಕೊಳ್ಳುತ್ತಿದ್ದರು. ಆಗ ಮಾತ್ರ ಅವರು ಹಳೆಯ ಸೀಮೆಯ ಠಾಕುರ ಜಾತಿಯಿಂದ ಬೇರ್ಪಟ್ಟು ಹೊಸ ಸೀಮೆಯ ಠಾಕುರ್ ಜಾತಿಯ ಸದಸ್ಯರಾಗುವುದು ಸಾಧ್ಯವಿತ್ತು.
ಆಯಾ ಪ್ರದೇಶಗಳಲ್ಲಿ ಇದಕ್ಕೆ ಸಮನಾದ ವಿವಿಧ ರೀತಿಗಳಲ್ಲಿ ಜಾತಿಯ ಸದಸ್ಯತ್ವ ಖಾತ್ರಿಪಡಿಸುವ ಕ್ರಮಗಳು ಜಾರಿಯಲ್ಲಿದ್ದವು. ಸ್ಥಳೀಯ ಒಕ್ಕೂಟಗಳು ಸೀಮಿತ ಭೌಗೋಳಿಕ ವಿಸ್ತಾರ ಹೊಂದಿದ್ದ ಕಾರಣ ಇಂಥವುಗಳ ಮೇಲಿನ ನಿಯಂತ್ರಣ ಸಮರ್ಪಕವಾಗಿ ನಡೆದಿತ್ತು.
ಇಂದು ಜಾತಿಯು ಭಾಷೆಯೊಂದಿಗೂ ಸಂಬಂಧ ಹೊಂದಿದೆ. ಇದು ಜಟಿಲವಾದ ಸಂಬಂಧ. ಅದಕ್ಕೆ ಹಿಂದೆ ಸ್ಥಳೀಯತೆಗಿದ್ದಷ್ಟೇ ಮಹತ್ವವುಂಟು. ಭಾಷೆಯ ಈ ಆಯಾಮವನ್ನು ತಜ್ಞರು ಸದಾ ಅಲಕ್ಷಿಸುತ್ತ ಬಂದಿದ್ದಾರೆ. ಆದರೆ ಅಂತರ್ಜಾತೀಯ ವಿವಾಹವು ಅನಿವಾರ್ಯವಾದಾಗ ಒಂದು ಹಂತದ ವರೆಗೆ ಜನರು ತಮ್ಮ ಭಾಷೆ ಆಡುವವರೊಂದಿಗೆ ಮಾತ್ರ ಸಂಬಂಧ ಬೆಳೆಸಲು ಮುಂದಾಗುವ ಪರಿಸ್ಥಿತಿ ಅಸಾಮಾನ್ಯವಲ್ಲ. ಇದರಲ್ಲಿ ಪ್ರಾದೇಶಿಕತೆಯ ರೂಪದಲ್ಲಿ ಕೆಲಸ ಮಾಡುವ ವರ್ಗಪ್ರಜ್ಞೆ ಪ್ರಬಲವಾಗಿ ಹಾಸುಹೊಕ್ಕಾಗಿದೆ. ಉದಾಹರಣೆಗೆ, ಮಲಯಾಳಂ ಭಾಷಿ ಬ್ರಾಹ್ಮಣ ಮನೆತನವೊಂದಕ್ಕೆ ಅದೇ ಜಾತಿಯಲ್ಲಿ ವರ ಅಥವಾ ವಧು ಸಿಗದಂಥ ಪರಿಸ್ಥಿತಿ ಇದೆ ಎನ್ನಿ. ಆಗ ಅವರಿಗೆ ಎರಡು ಆಯ್ಕೆಗಳು ಮುಂದಾಗಬಹುದು. ಒಂದು, ಕನ್ನಡ ಅಥವಾ ತಮಿಳು ಮಾತನಾಡುವ ಬ್ರಾಹ್ಮಣ ಮನೆತನವೊಂದು ವಿವಾಹಸಂಬಂಧ ಬೆಳೆಸಲು ಮುಂದಾಗಿದೆ. ಎರಡು, ಬ್ರಾಹ್ಮಣರಲ್ಲದ, ಆದರೆ ಮಲಯಾಳಿಗಳಾದ ನಾಯರ್ ಅಥವಾ ಯಾವುದೇ ಅಂಬಲವಾಸಿ ಜಾತಿಯ (ವಾರಿಯರ್, ಪಿಷಾರಡಿ, ಪೊದುವಾಳ್ ಇತ್ಯಾದಿ) ಮನೆತನದಿಂದ ಪ್ರಸ್ತಾಪವೊಂದು ಬಂದಿದೆ. ಅಲ್ಲಿ ಸಹಜವಾಗಿಯೇ ಬ್ರಾಹ್ಮಣ ಎಂಬುದಕ್ಕಿಂತ ಮಲಯಾಳಿ ಎಂಬುದು ಹೆಚ್ಚು ಮಹತ್ವದ್ದಾಗುತ್ತದೆ. ಹೀಗಾಗಿ, ವಿವಾಹವು ನಾಯರ್ ಅಥವಾ ಅಂಬಲವಾಸಿ ಮನೆತನದೊಂದಿಗೆ ನಡೆಯುತ್ತದೆ. ಆದರೆ ಆ ಮಲಯಾಳಿ ಮನೆತನವು ಪುಲಯ, ಪಱಯ ಮೊದಲಾದ ಅಸ್ಪೃಶ್ಯ ಎನ್ನಲಾಗುವ ಜಾತಿಗೆ ಸೇರಿದ್ದರೆ ಆಗ ಸ್ಥಿತಿಯೇ ಭಿನ್ನ. ಅಲ್ಲಿ ಭಾಷಾಪ್ರಜ್ಞೆಗಿಂತ ಜಾತಿಪ್ರಜ್ಞೆ ಮೇಲುಗೈ ಸಾಧಿಸಿಕೊಳ್ಳುತ್ತದೆ. ಅಂಥ ಸಂದರ್ಭದಲ್ಲಿ ಆ ಪುಲಯ, ಪಱಯರೊಂದಿಗೆ ವಿವಾಹ ನಡೆಯುವುದಿಲ್ಲ. ನಡೆಯುವುದು ಆಗಲೇ ಹೇಳಿದ ತಮಿಳು ಯಾ ಕನ್ನಡ ಭಾಷಿ ಬ್ರಾಹ್ಮಣರೊಂದಿಗೆ. ಅಸ್ಪೃಶ್ಯತೆ ಜಾತಿಗೆ ಮಾತ್ರವಲ್ಲ, ಭಾಷೆಗೂ ಅಂಟಿಕೊಂಡಂತ ಪರಿಸ್ಥಿತಿಯಿದು.
ಮುಂದಿನ ಅಧ್ಯಾಯದಲ್ಲಿ ಋಗ್ವೇದದ ಪುರುಷಸೂಕ್ತದಿಂದ ಆರಂಭಗೊಳ್ಳುವ ವರ್ಣವ್ಯವಸ್ಥೆಯ ಚರಿತ್ರೆಯನ್ನು ಆರಂಭಿಸುತ್ತೇನೆ.

(ಸಾಂದರ್ಭಿಕ ಚಿತ್ರಗಳು)

ಜಾತಿ ಪದ್ಧತಿಯ ಮೈಮನಗಳು-1

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...