ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

Date: 29-08-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ನಾಲ್ಕನೆಯ ಬರೆಹ ಇಲ್ಲಿದೆ.

4


ಕಳೆದ ಎರಡು ಅಧ್ಯಾಯಗಳಲ್ಲಿ ನೀಡಲಾದ ವಿವರಣೆಗಳ ಬೆಳಕಲ್ಲಿ ಜಾತಿ ಪದ್ಧತಿಯ ಉಗಮ ಹಾಗೂ ವಿಕಾಸದ ಸ್ಥೂಲ ಚರಿತ್ರೆಯೊಂದನ್ನು ಈಗ ಪರಿಶೀಲಿಸತಕ್ಕದ್ದು. ಜಾತಿ ಪದ್ಧತಿ ಕ್ರಿಶ 600ರಿಂದ 1200ರ ವರೆಗಿನ ಆರು ಶತಮಾನಗಳ ಅವಧಿಯಲ್ಲಿ ಏಳಿಗೆ ಪಡೆಯಿತು. ಈ ಕಾಲದ ಆರ್ಥಿಕ ಪ್ರಕ್ರಿಯೆಗಳು ಮತ್ತು ಅದರೊಂದಿಗೆ ಬೆಸೆದುಕೊಂಡಿದ್ದ ರಾಜಕೀಯ ಪ್ರಕ್ರಿಯೆಗಳು ಇದಕ್ಕೆ ಕಾರಣವಾಗಿವೆ. ಇತ್ತೀಚಿನ ದಶಕಗಳಲ್ಲಿ ಇತಿಹಾಸಕಾರರು ಈ ಆರುನೂರು ವರ್ಷಗಳನ್ನು ಆರಂಭದ ಮಧ್ಯಯುಗ ಅಥವಾ ಅರ್ಲಿ ಮೆಡೀವಲ್ ಪೀರಿಯಡ್ ಎಂದು ಗುರುತಿಸಿ ಅದನ್ನು ಪ್ರಾಚೀನ ಅಥವಾ ಏನ್ಷಿಯೆಂಟ್ ಯುಗದಿಂದ ಬೇರ್ಪಡಿಸಿದ್ದಾರೆ. ಈ ಅವಧಿಯು ಭಾರತದ ಇತಿಹಾಸದ ನಿರ್ಣಾಯಕ ಹಂತಗಳಲ್ಲಿ ಒಂದು.

ಆದರೆ ಜಾತಿ ಕುರಿತ ಬಹುತೇಕ ಚಾರಿತ್ರಿಕ ಅವಲೋಕನಗಳು ಆರಂಭವಾಗುವುದು ಈ ಅವಧಿಯಿಂದಲ್ಲ. ಅದು ಋಗ್ವೇದದ ಹತ್ತನೆಯ ಮಂಡಲದ ತೊಂಬತ್ತನೆಯ ಸೂಕ್ತದಿಂದ ಶುರುವಾಗುತ್ತದೆ. ಇದೇ ಅಪಾರ ಚರ್ಚೆಗಳಿಗೆ ಗುರಿಯಾಗಿರುವ ಪುರುಷಸೂಕ್ತ. ಆದರೆ ಪುರುಷಸೂಕ್ತದಲ್ಲಿ ಕಾಣುವುದು ಜಾತಿ ವ್ಯವಸ್ಥೆಯಲ್ಲ, ವರ್ಣ ವ್ಯವಸ್ಥೆ. ಈ ಎರಡರ ನಡುವೆ ಅಪಾರವಾದ ಅಂತರವಿದೆ. ವರ್ಣ, ಜಾತಿ ಎರಡೂ ಒಂದೇ ಎಂಬ ವಾದವೊಂದನ್ನು ಅನೇಕರು ಮಂಡಿಸಿದ್ದಾರೆ. ಆದರೆ ಭೌತಿಕ ಪರಿಸರದ ದೃಷ್ಟಿಯಿಂದ ವಿಶ್ಲೇಷಿಸಿದಾಗ ಈ ನಿಲುವಿಗೆ ಆಕರಗಳಲ್ಲಿ ಸಮರ್ಥನೆ ದೊರಕುವುದಿಲ್ಲ. ಸಂದರ್ಭಗಳಿಗೆ ತಕ್ಕಂತೆ ಜಾತಿಯು ತನ್ನ ಸಮರ್ಥನೆಗೆ ವರ್ಣವ್ಯವಸ್ಥೆಯ ಚೌಕಟ್ಟನ್ನು ಸ್ವೀಕರಿಸಿದೆ. ಆದರೆ ಈ ಎರಡು ವ್ಯವಸ್ಥೆಗಳ ಭೌತಿಕ ಪರಿಸರಗಳು ಬೇರೆಬೇರೆ. ಕ್ರಿಶ ಏಳನೆಯ ಶತಮಾನದಿಂದ ಈಚೆಗೆ ರೂಪುಗೊಳ್ಳತೊಡಗಿದ ಜಾತಿ ಪದ್ಧತಿಯು ವರ್ಣ ವ್ಯವಸ್ಥೆಗಿಂಥ ಹೇಗೆ ಭಿನ್ನವಾಗಿತ್ತೆಂದು ತಿಳಿಯಲು ನಮ್ಮ ಅವಲೋಕನವೂ ಪುರುಷಸೂಕ್ತದಿಂದಲೇ ಆರಂಭಗೊಳ್ಳಬೇಕು.

ನಮಗೆ ಪರಿಚಿತವಾಗಿರುವ ಋಗ್ವೇದವು ಸುಮಾರು 10600 ಶ್ಲೋಕಗಳುಳ್ಳ (ಇವುಗಳನ್ನು ಶ್ಲೋಕ ಎನ್ನುವುದಿಲ್ಲ, ಋಚ ಎನ್ನುತ್ತಾರೆ) 1028 ಸೂಕ್ತಗಳ ಸಂಕಲನ. ದೇವತೆಗಳಿಗೆ ಸಲ್ಲಿಸಿದ ನಮನ ಹಾಗೂ ಪ್ರಶಂಸೆಯೇ ಇವುಗಳಲ್ಲಿ ಹೆಚ್ಚಾಗಿವೆ. ಯಜುರ್ವೇದದಲ್ಲಿ ವಿವರಿಸಲಾದ ಯಜ್ಞ, ಯಾಗಾದಿಗಳನ್ನು ನಡೆಸುವಾಗ ಹೇಳಬೇಕಾದ ಮಂತ್ರಗಳೇ ಈ ಋಗ್ವೇದದ ಸೂಕ್ತಗಳು. ಹಿಂದೆ ಯಜುರ್ವೇದವು ಬೇರೆಬೇರೆ ಆಚಾರ ಪರಂಪರೆಗಳಿಗೆ ಸೇರಿದ ಹತ್ತಾರು ರೂಪಗಳಲ್ಲಿ ದೊರೆತಿದ್ದವು. ಅಂಥ 108 ಯಜುರ್ವೇದ ಗ್ರಂಥಗಳಿದ್ದವು ಎಂದು ಪತಂಜಲಿಯ ಮಹಾಭಾಷ್ಯ ತಿಳಿಸುತ್ತದೆ. ಈ ಪೈಕಿ ಇಂದು ಉಳಿದಿರುವುದು ಆರು ಮಾತ್ರ. ಅವುಗಳಲ್ಲಿ ಕಾಠಕ ಸಂಹಿತೆ, ಕಪಿಷ್ಠಲ ಸಂಹಿತೆ, ತೈತ್ತಿರೀಯ ಸಂಹಿತೆ, ಮೈತ್ರಾಯನಿ ಸಂಹಿತೆ ಎಂಬ ನಾಲ್ಕು ಕೃಷ್ಣ ಯಜುರ್ವೇದಗಳು ಮತ್ತು ವಾಜಸನೇಯಿ ಸಂಹಿತೆ ಎಂಬ ಶುಕ್ಲ ಯಜುರ್ವೇದ ಎಂಬುದು ಐದು ಪ್ರಮುಖ ಪರಂಪರೆಗಳು. ವಾಜಸನೇಯಿ ಸಂಹಿತೆಯು ಎರಡು ಭಿನ್ನ ಶಾಖೆಗಳಲ್ಲಿ ಲಭ್ಯವಿದೆ: ಕಾಣ್ವ ಹಾಗೂ ಮಾಧ್ಯಂದಿನ. ಹೀಗಾಗಿ ಇದೀಗ ಲಭ್ಯವಿರುವ ಒಟ್ಟು ಯಜುರ್ವೇದಗಳು ಆರು. ಕೃಷ್ಣ ಯಜುರ್ವೇದಗಳಲ್ಲಿ ಸಂಹಿತೆಯ ಪಾಠವಾದ ಯಜುಸುಗಳಲ್ಲಿಯೇ ಅದರ ಗದ್ಯ ವಿವರಣೆಯನ್ನೂ ನೀಡಲಾಗುತ್ತದೆ. ಶುಕ್ಲ ಯಜುರ್ವೇದದಲ್ಲಿ ಅಂಥ ವಿವರಣೆಗಳು ಇರುವುದಿಲ್ಲ.

ಋಗ್ವೇದ ಕೂಡ ಹಲವು ಪರಂಪರೆಗಳಲ್ಲಿ ದೊರೆತಿತ್ತು. ಪತಂಜಲಿಯು ಅಂಥ ಇಪ್ಪತ್ತೊಂದು ಶಾಖೆಗಳ ಕುರಿತು ಹೇಳಿದ್ದಾನೆ. ಶೌನಕನ ಚರಣವ್ಯೂಹದಲ್ಲಿ ಐದು ಶಾಖೆಗಳ ಉಲ್ಲೇಖವಿದೆ: ಶಾಕಲ, ಶಾಂಖಾಯನ, ಆಶ್ವಲಾಯನ, ಬಾಷ್ಕಲ, ಹಾಗೂ ಮಾಂಡೂಕಾಯನ. ಇದಲ್ಲದೆ ವಾಲಖಿಲ್ಯ ಎಂಬ ಶಾಕೆಯ ಕುರಿತಾಗಿಯೂ ಮಾಹಿತಿಯಿದೆ. ಇಂದು 1017 ಸೂಕ್ತಗಳುಳ್ಳ ಶಾಕಲ ಸಂಹಿತೆ ಪೂರ್ಣ ರೂಪದಲ್ಲಿ ದೊರೆಯುತ್ತದೆ. ವಾಲಖಿಲ್ಯದ 11 ಸೂಕ್ತಗಳು ಉಳಿದಿವೆ. ಅವುಗಳನ್ನು ಶಾಕಲದಲ್ಲಿಯೇ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಇಂದು ಶಾಕಲ ಋಗ್ವೇದದ ಸೂಕ್ತಗಳ ಸಂಖ್ಯೆ 1028. ಮೂರು ದಶಕಗಳ ಹಿಂದೆ ಆಶ್ವಲಾಯನ ಸಂಹಿತೆಯ ಸಂಪೂರ್ಣ ಪಾಠವು ರಾಜಸ್ಥಾನದಿಂದ ಪತ್ತೆಯಾಗಿ ಪ್ರಕಟವಾಯ್ತು. ಇದರಲ್ಲಿ ಶಾಕಲಕ್ಕಿಂತ 212 ಋಚಗಳು ಹೆಚ್ಚಾಗಿವೆ. ಅದೇ ವೇಳೆಗೆ ರಾಜಸ್ಥಾನದಲ್ಲಿಯೇ ಶಾಂಖಾಯನ ಸಂಹಿತೆಯೂ ಪತ್ತೆಯಾಯ್ತು. ಆದರೆ ಅದು ಇನ್ನೂ ಪ್ರಕಟವಾಗಿಲ್ಲ.

ಒಟ್ಟು ಸೂಕ್ತಗಳನ್ನು ಋಗ್ವೇದವು ಹತ್ತು ಪ್ರತ್ಯೇಕ ಭಾಗಗಳಾಗಿ ವಿಂಗಡಿಸುತ್ತದೆ. ಈ ಭಾಗಗಳಿಗೆ ಮಂಡಲಗಳೆಂದು ಹೆಸರು. ಇದರಲ್ಲಿ ಎರಡರಿಂದ ಏಳನೆಯ ವರೆಗಿನ ಆರು ಮಂಡಲಗಳು ಅತ್ಯಂತ ಪುರಾತನ. ಈ ಆರೂ ಮಂಡಲಗಳು ಒಬ್ಬೊಬ್ಬ ಋಷಿ ಮತ್ತು ಆತನ ವಂಶಜರು ರಚಿಸಿದ್ದು ಎಂಬ ನಂಬಿಕೆಯಿದೆ. ಎರಡನೆಯ ಮಂಡಲ ಗೃತ್ಸಮದನದು, ಮೂರನೆಯದು ವಿಶ್ವಾಮಿತ್ರನದು, ನಾಲ್ಕನೆಯದು ವಾಮದೇವನದು, ಐದನೆಯದು ಅತ್ರಿಯದು, ಆರನೆಯದು ಭಾರದ್ವಾಜನದು, ಏಳನೆಯದು ವಸಿಷ್ಠನದು. ಇವುಗಳಲ್ಲಿ ಕೆಲವು ಪರಸ್ಪರ ಸಂಬಂಧವುಳ್ಳ ಋಷಿವಂಶಗಳಾಗಿದ್ದವು. ಉದಾಹರಣೆಗೆ ಗೃತ್ಸಮದನು ಆಂಗಿರಸ ಕುಲದವನು, ಭಾರದ್ವಾಜನು ಅದೇ ಆಂಗೀರಸ ಕುಲದ ಬಾರ್ಹಸ್ಪತ್ಯ ವಂಶಜನು. ಈ ರೀತಿಯ ಸಂಬಂಧಗಳು ಇದ್ದಿರದ ಕುಲಗಳೂ ಇದ್ದವು. ಪರಸ್ಪರ ಬದ್ಧ ವೈರಿಗಳಾಗಿದ್ದ ವಿಶ್ವಾಮಿತ್ರ, ವಸಿಷ್ಠರ ಕುಲಗಳು ಬೇರೆಬೇರೆ. ಎಂಟು ಮತ್ತು ಒಂಬತ್ತನೆಯ ಮಂಡಲಗಳು ಪ್ರಾಚೀನವೇ ಆದರೂ ಯಾವುದೇ ಒಂದು ಋಷಿವಂಶಕ್ಕೆ ಸೇರಿದ್ದಲ್ಲ. ಅವು ಅನೇಕ ಋಷಿಗಳು ರಚಿಸಿದ ಸೂಕ್ತಗಳ ಸಂಕಲನವಾಗಿವೆ. ಒಂಬತ್ತನೆಯ ಮಂಡಲವು ಸೋಮ ಎಂಬ ದೇವತೆಗೆ ಮೀಸಲಾದ್ದು. ಮೊದಲನೆಯ ಹಾಗೂ ಹತ್ತನೆಯ ಮಂಡಲಗಳೇ ಅತ್ಯಂತ ಈಚಿನವು. ಇವುಗಳೂ ಬಹುಋಷಿಕೃತ ಸೂಕ್ತಗಳ ಸಂಕಲನಗಳು. ಶಾಕಲ ಸಂಹಿತೆಯಲ್ಲಿ ಈ ಎರಡೂ ಮಂಡಲಗಳಲ್ಲಿ ತಲಾ 191 ಸೂಕ್ತಗಳಿವೆ. ಇತ್ತೀಚೆಗೆ ಪ್ರಕಟವಾದ ಆಶ್ವಲಾಯನ ಸಂಹಿತೆಯಲ್ಲಿ ಮೊದಲ ಮಂಡಲದಲ್ಲಿ 191 ಸೂಕ್ತಗಳಿದ್ದರೆ ಹತ್ತನೆಯ ಮಂಡಲದಲ್ಲಿ 200 ಸೂಕ್ತಗಳಿವೆ. ಶಾಕಲದಂತೆ ಇದರಲ್ಲಿಯೂ ಪುರುಷಸೂಕ್ತವು ತೊಂಬತ್ತನೆಯ ಸೂಕ್ತವೇ ಆಗಿದೆ.

ಪುರುಷಸೂಕ್ತವು ಜಾತಿಯ ಅಧ್ಯಯನಕ್ಕೆ ಮುಖ್ಯವಾಗಲು ಕಾರಣವೆಂದರೆ ಅಲ್ಲಿ ಶ್ರೇಣೀಕೃತವಾದ ವರ್ಗೀಕರಣದ ಪ್ರಥಮ ಚಿತ್ರ ನಮಗೆ ದೊರಕುತ್ತದೆ. ಇದು ವಂಶಗಳ ಯಾ ಬಣಗಳ ನಡುವಿನ ವರ್ಗೀಕರಣವಲ್ಲ. ಸಾರ್ವತ್ರಿಕ ಅಥವಾ ಸಾಧಾರಣ ಗುಣವುಳ್ಳ ಶ್ರೇಣೀಕರಣ. ಹಳೆಯ ಮಂಡಲಗಳಲ್ಲಿ ನಾವು ಇಂಥದ್ದನ್ನು ಕಾಣುವುದಿಲ್ಲ. ಈಚಿನ ಮಂಡಲಗಳಲ್ಲಿಯೂ ಜನರನ್ನು ಈ ರೀತಿ ಶ್ರೇಣೀಕರಿಸುವ ಉದಾಹರಣೆಗಳು ಸಿಗದ ಕಾರಣ ಪುರುಷಸೂಕ್ತದ ವರ್ಣನೆಯು ಆಗಷ್ಟೇ ಮೂಡಿಕೊಳ್ಳತೊಡಗಿದ ಹೊಸ ಮತ್ತು ಇನ್ನೂ ಸಾಕಷ್ಟು ಪ್ರಚಾರ ಪಡೆದಿರದ ವಿಚಾರವಾಗಿತ್ತು ಎಂದು ಹೇಳಬೇಕಾಗುತ್ತದೆ. ಇಂಡೋ ಯೋರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಇತರ ಜನಾಂಗಗಳಲ್ಲಿ ಇಂಥ ಶ್ರೇಣೀಕರಣವನ್ನು ಆ ಕಾಲದಲ್ಲಿ ಗುರುತಿಸಲಾರೆವು. ಗ್ರೀಕರ ಆರಂಭದ ಕೃತಿಗಳಲ್ಲಾಗಲಿ ಋಗ್ವೇದದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಇರಾನಿನ ಅವೆಸ್ತಾದಲ್ಲಾಗಲಿ ನಾಲ್ಕು ವರ್ಣಗಳನ್ನು ಹೋಲುವಂಥ ವಿಂಗಡನೆಗಳಿಲ್ಲ. ಹೀಗಾಗಿ ಪುರುಷಸೂಕ್ತದಲ್ಲಿ ಕಾಣುವ ಶ್ರೇಣೀಕರಣವು ವೈದಿಕರು ಭಾರತಕ್ಕೆ ಬಂದ ಮೇಲೆ ರೂಪು ಪಡೆದದ್ದೆಂಬ ನಿರ್ಣಯ ಸಮಂಜಸವಾದ್ದೆಂದು ಹೇಳಬಹುದು.

ಪುರುಷಸೂಕ್ತದ ಪ್ರಕಾರ ಪುರುಷನು ಪ್ರಪಂಚದ ಅವಿಘಟಿತವಾದ ಮೂರ್ತರೂಪ. ಅಂಥ ಪುರುಷನನ್ನು ದೇವತೆಗಳು, ಸಾಧ್ಯರು ಹಾಗೂ ಋಷಿಗಳು ಬಲಿಕೊಟ್ಟರು. ಬಲಿಯಾದ ಪುರುಷನ ದೇಹದಿಂದ ಭಿನ್ನತೆಗಳೂ ಪ್ರತ್ಯೇಕತೆಗಳೂ ಹುಟ್ಟಿಕೊಂಡವು. ಕುದುರೆ, ಗೋವು, ಮೇಕೆ ಮೊದಲಾದ ಪಶುಗಳು ಜನಿಸಿದ್ದು ಹೀಗೆ. ವೇದಗಳು, ಛಂದಸ್ಸುಗಳು, ಸೂರ್ಯಚಂದ್ರರು, ವಾಯು, ಇಂದ್ರಾಗ್ನಿಗಳು, ಹೀಗೆ ಸಕಲವೂ ಆ ದೇಹದಿಂದಲೇ ಹುಟ್ಟಿತು. ಆ ದೇಹದ ಮುಖವು ಬ್ರಾಹ್ಮಣರಾಗಿ ಪರಿವರ್ತನೆ ಹೊಂದಿತು, ಬಾಹುಗಳು ಕ್ಷತ್ರಿಯರಾದವು, ತೊಡೆಗಳು ವೈಶ್ಯರಾದವು, ಪಾದದಿಂದ ಶೂದ್ರರು ಹುಟ್ಟಿಬಂದರು. ಪುರುಷಸೂಕ್ತದಲ್ಲಿ ಶ್ರೇಣೀಕರಣವಿದೆ. ಆದರೆ ಈ ಸಂಗತಿಗೆ ಅಲ್ಲಿ ಒತ್ತುನೀಡಲಾಗಿಲ್ಲ. ಆದರೂ ಒಂದು ವ್ಯತ್ಯಾಸವನ್ನು ಇಲ್ಲಿ ಕಾಣುತ್ತೇವೆ. ಮುಖ, ಬಾಹುಗಳು, ತೊಡೆಗಳು ಮಾರ್ಪಾಟು ಹೊಂದಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಾದರು ಎನ್ನಲಾಗಿದೆ. ಆದರೆ ಪಾದಗಳು ಶೂದ್ರರಾಗಲಿಲ್ಲ. ಶೂದ್ರರು ಪಾದದಿಂದ ಹುಟ್ಟಿಬಂದವರು. ಪುರುಷಸೂಕ್ತದಲ್ಲಿ ಆದಿರೂಪನಾದ ಪುರುಷನ ಮುಖ ಅವನ ಪಾದಕ್ಕಿಂತ ಶ್ರೇಷ್ಟವೆಂಬ ಉಲ್ಲೇಖವಿದೆಯೇ ಎಂದು ತರ್ಕಕ್ಕಾಗಿ ಕೇಳಬಹುದು. ಆದರೆ ಅಂಥ ಉಲ್ಲೇಖವು ಮುಂದಿನ ಕಾಲದ ವೈದಿಕಗ್ರಂಥಗಳಲ್ಲಿ ಸಿಗುತ್ತವೆ. ನಂತರದ ಶತಮಾನಗಳಲ್ಲಿ ಸ್ಪಷ್ಟವಾದ ಶ್ರೇಣೀಕರಣ ತಲೆಯೆತ್ತಿದ ಬಳಿಕ ಶೂದ್ರರಿಗೆ ನಾಲ್ಕು ವರ್ಣಗಳಲ್ಲಿ ಸದಾ ಕೊನೆಯ ಸ್ಥಾನವೇ ಇದ್ದದ್ದು.
ಹಿಂದೆ ಇದ್ದಿರದ ಶ್ರೇಣೀಕರಣವು ಇತಿಹಾಸದ ನಿರ್ದಿಷ್ಟ ಹಂತವೊಂದರಲ್ಲಿ ತಲೆಯೆತ್ತಿದೆ. ಆದ್ದರಿಂದ ಆ ಹಂತ ಯಾವುದೆಂದು ಸ್ಪಷ್ಟವಾಗಿ ಗುರುತಿಸತಕ್ಕದ್ದು. ಇದು ಋಗ್ವೇದ ರಚಿತವಾದ ಕಾಲ ಯಾವುದು ಎಂಬ ಪ್ರಶ್ನೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಆ ಪ್ರಶ್ನೆಗೆ ಉತ್ತರ ಹುಡುಕುವಾಗ ಈಗ ಮಾನ್ಯತೆ ಪಡೆದಿರುವ ಕಾಲನಿರ್ಣಯಕ್ಕಿಂತ ಭಿನ್ನವಾದ ಚಿತ್ರವೊಂದು ಸಿಗುತ್ತದೆ.

ಇತಿಹಾಸಕಾರರ ಬಹುಮತದಂತೆ ಋಗ್ವೇದ ಕ್ರಿಪೂ 1500ರ ಆಸುಪಾಸಲ್ಲಿ ಸಂಗ್ರಹಗೊಂಡ ಕೃತಿ. ಅದರಲ್ಲಿ ಸುಮಾರು ಕ್ರಿಪೂ 2000-1500 ನಡುವಲ್ಲಿ ವಿವಿಧ ಹಂತಗಳಲ್ಲಿ ರಚಿತವಾದ ಸೂಕ್ತಗಳ ಸಂಗ್ರಹವಿದೆ ಎನ್ನಲಾಗಿದೆ. ಈ ತೇದಿಗಳನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಕೆಲವರು ಋಗ್ವೇದ ಕ್ರಿಪೂ 1200ಕ್ಕಿಂತ ಹಳೆಯದಲ್ಲ ಎನ್ನುತ್ತಾರೆ, ಇನ್ನೂ ಕೆಲವರು ಅದನ್ನು ಕ್ರಿಪೂ 1000ಕ್ಕೆ ತಂದು ನಿಲ್ಲಿಸುತ್ತಾರೆ. ಇತಿಹಾಸಕ್ಕಿಂತ ಹಿಂದುತ್ವ ರಾಜಕಾರಣದಲ್ಲಿ ಹೆಚ್ಚು ಕಾಳಜಿಯುಳ್ಳವರು ತಮತಮಗೆ ತೋಚಿದಂತೆ ಈ ಗ್ರಂಥ ಕ್ರಿಪೂ 5000ಕ್ಕೆ ಸೇರಿದ್ದು, 7000ಕ್ಕೂ ಹಿಂದಿನದು, 10,000ಕ್ಕಿಂತ ಈಚಿನದಲ್ಲ ಎಂದೆಲ್ಲ ವಕ್ತವ್ಯಗಳನ್ನು ಹೊರಡಿಸುತ್ತ ಬಂದಿದ್ದಾರೆ. ಅಂಥ ವಕ್ತವ್ಯಗಳನ್ನು ಶಿಸ್ತುಬದ್ಧ ತರಬೇತಿ ಹೊಂದಿದ ಇತಿಹಾಸಕಾರರು ಒಪ್ಪಿಕೊಳ್ಳಲಾರರು.

ಋಗ್ವೇದ ರಚಿಸಿದ ಮತ್ತು ಅದರಲ್ಲಿ ಪಾತ್ರವಹಿಸಿದ ಜನರನ್ನು ಹಿಂದೆ ಚಾರಿತ್ರಿಕ ಅಧ್ಯಯನಗಳಲ್ಲಿ ಆರ್ಯರೆಂದು ವ್ಯವಹರಿಸಲಾಗುತ್ತಿತ್ತು. ಅದನ್ನು ಮೂಲವಂಶ ಅಥವಾ ರೇಸ್ ಎಂಬ ರಕ್ತಶುದ್ಧಿ ಹೊಂದಿದ ಜನವಿಭಾಗದ ಪರಿಭಾಷೆಯಲ್ಲಿ ವಿವರಿಸಲಾಗಿತ್ತು. ಜೈವಿಕತೆಗೆ ಒತ್ತು ನೀಡುವ ಈ ನಿಲುವು ಈಗ ಮನ್ನಣೆ ಕಳೆದುಕೊಂಡಿದೆ. ರಕ್ತಶುದ್ಧಿ ಕಳೆದುಕೊಳ್ಳದ ಮೂಲವಂಶ ಎಂಬ ಧೋರಣೆ ಅವೈಚಾರಿಕ ಹಾಗೂ ಅಸಮರ್ಥನೀಯ ಎಂಬುದು ಖಾತ್ರಿಯಾಗುತ್ತ ಹೋದಂತೆ ಇತಿಹಾಸಕಾರರು ಇವರನ್ನು ಆರ್ಯರು ಎನ್ನುವ ಬದಲು ವೈದಿಕ ಜನರೆಂದು ಕರೆಯತೊಡಗಿದರು. ಇದು ಜನಾಂಗೀಯತೆ ಅಥವಾ ಎತ್ನಿಸಿಟಿ ಎಂಬ ವಿಚಾರದಿಂದ ಪ್ರೇರಿತವಾದದ್ದು. ಜನಾಂಗೀಯತೆಯಲ್ಲಿ ಮೂಲವಂಶದ ಹಾಗೆ ಜೈವಿಕ ಅಂಶಗಳಾದ ಮೈಬಣ್ಣ, ಮೂಗಿನ ಅಳತೆ, ಕಪಾಲದ ಆಕೃತಿ, ರಕ್ತಶುದ್ಧಿ, ಇತ್ಯಾದಿಗಳಿಗೆ ಸ್ವೀಕೃತಿಯಿಲ್ಲ. ಅಲ್ಲಿ ಆವಾಸದ ನೆಲೆ, ಭಾಷೆ, ಆಹಾರಕ್ರಮ, ವೇಷಭೂಷಾದಿಗಳು, ಆಚಾರಗಳು, ಇಂಥವುಗಳಲ್ಲಿ ಸಮಾನತೆಯಿರುವ ಜನವಿಭಾಗವನ್ನು ಒಂದು ಒಕ್ಕೂಟವಾಗಿ ಕಾಣಲಾಗುತ್ತದೆ. ಜನಾಂಗೀಯತೆಯಲ್ಲಿ ಚಾರಿತ್ರಿಕವಾಗಿ ಅನಾವರಣಗೊಂಡ ಅಂಶಗಳಿಗೆ ಮಹತ್ವವಿದೆಯೇ ಹೊರತು ಜೈವಿಕ ತತ್ವಕ್ಕಲ್ಲ. ಈ ದೃಷ್ಟಿಯಲ್ಲಿ ವೈದಿಕ ಜನ ಎಂದರೆ ಕ್ರಿಪೂ 1500ರ ಆಸುಪಾಸಲ್ಲಿ ಭಾರತಕ್ಕೆ ಆಗಮಿಸಿದವರು. ಅವರು ಪಶುಪಾಲನೆಯಲ್ಲಿ ನಿರತರಾಗಿದ್ದರು, ಪ್ರಕೃತಿಯ ಶಕ್ತಿಗಳಾದ ಮಳೆ, ಬೆಂಕಿ, ಸೂರ್ಯ, ಚಂದ್ರ, ವಾಯು ಇತ್ಯಾದಿಗಳನ್ನು ಆರಾಧಿಸುತ್ತಿದ್ದರು, ಯಜ್ಞಯಾಗಗಳನ್ನು ಕೈಗೊಳ್ಳುತ್ತಿದ್ದರು, ಕುದುರೆಯನ್ನು ಪಳಗಿಸಿದ್ದರು. ಕ್ವಿಪರ್‌ರಂತ ಭಾಷಾತಜ್ಞರು ಋಗ್ವೇದದ ನಾಮಪದಗಳಲ್ಲಿ ಇಂಡೋ ಯೂರೋಪಿಯನ್ ಪರಿವಾರಕ್ಕೆ ಸೇರಿರದ ಅನೇಕ ಬಣಗಳ ಹೆಸರನ್ನು ಗುರುತಿಸಿದ್ದಾರೆ. ಇದು ಆ ಜನರು ವಿವಿಧ ಭಾಷಾಮೂಲಗಳಿಂದ ಬಂದವರೆಂಬ ಸೂಚನೆ ನೀಡುತ್ತದೆ. ಪರಸ್ಪರ ವಿನಿಮಯಗಳನ್ನು ನಡೆಸಲು ಈ ಜನಾಂಗದವರು ಸಂಸ್ಕೃತ ಅಥವಾ ಅದರ ಪೂರ್ವರೂಪವಾದ ವೈದಿಕ ಭಾಷೆಯನ್ನು ಬಳಸುತ್ತಿದ್ದರು. ಹೀಗಾಗಿ, ಅವರೆಲ್ಲ ಒಂದೇ ರಕ್ತದ ಯಾ ಒಂದೇ ಮೂಲದಿಂದ ಬಂದವರೆಂಬ ಧೋರಣೆ ಈಗ ಮಾನ್ಯತೆ ಕಳೆದುಕೊಂಡಿದೆ.

ಪ್ರಾಕ್ತನ ತಜ್ಞರು ಸಿಂಧೂ ಕಣಿವೆಯ ಪ್ರದೇಶಗಳಲ್ಲಿ ಉತ್ಖನನ ನಡೆಸಿ ಹಲವು ಕಂಕಾಲಗಳನ್ನು ಪತ್ತೆಹಚ್ಚಿದ್ದಾರೆ. ಕೆನೆತ್ ಎ. ಆರ್. ಕೆನಡಿ ಅವರ ವಿಶ್ಲೇಷಣೆಯಲ್ಲಿ ಹಡಪ್ಪಾ, ಮೊಹೆಂಜೊದಾರೋ ಯುಗದ ಕಂಕಾಲಗಳೂ ಕ್ರಿಪೂ 1500ರ ಆಸುಪಾಸಲ್ಲಿ ಸಿಕ್ಕ ಕಂಕಾಲಗಳೂ ಒಂದೇ ಮೂಲದ ಜನರದೆಂದು ತಿಳಿದುಬಂದಿದೆ. (ಹಡಪ್ಪಾ ಎಂಬುದನ್ನು ಆಂಗ್ಲಭಾಷೆಯಲ್ಲಿ ಹರಪ್ಪಾ ಎಂದು ಬರೆಯುತ್ತಾರೆ. ಐರೋಪ್ಯ ಭಾಷೆಗಳಲ್ಲಿ ಮೂರ್ಧನ್ಯ ವ್ಯಂಜನಗಳು ಇಲ್ಲದಿರುವ ಕಾರಣ ಡಕಾರಕ್ಕೆ ಬದಲು ರಕಾರ ಬಳಸಲಾಗುತ್ತದೆ. ಹೀಗಾಗಿ ಅರೋಡಾ ಎಂಬುದು ಅರೋರಾ ಆಗುತ್ತದೆ, ಧಾರವಾಡ ಎಂಬುದು ಧಾರ್ವಾರ್ ಅನ್ನಿಸಿಕೊಳ್ಳುತ್ತದೆ, ಚೂಡೀದಾರ್ ಎಂಬುದನ್ನು ಚೂರೀದಾರ್ ಎಂದು ಬರೆಯಲಾಗುತ್ತದೆ. ಅದೇ ರೀತಿ ಹಡಪ್ಪಾ ಶಬ್ದ ಹರಪ್ಪಾ ಎಂದು ಮಾರ್ಪಾಟು ಹೊಂದಿದೆ.) ಸ್ಥಳೀಯರಲ್ಲದ ಹೊಸ ಜನ 1500ರ ಆಸುಪಾಸಲ್ಲಿ ಪಶ್ಚಿಮದಿಂದ ವಲಸೆಬಂದ ಸೂಚನೆಗಳಿಲ್ಲ. ಕಂಕಾಲಗಳಲ್ಲಿ ಅಂಥ ವಲಸೆ ನಡೆದಿರುವ ಸೂಚನೆ ಸಿಗುವುದು ಕ್ರಿಪೂ 6000 ಹಾಗೂ 4500ರ ನಡುವಲ್ಲಿ. ಈ ಸಂದರ್ಭದಲ್ಲಿ ಮೆಹೆರ್‌ಗಢ್ ಮುಂತಾದ ಹೊಸ ಶಿಲಾಯುಗದ ನೆಲೆಗಳಲ್ಲಿ ತಾಮ್ರ ಶಿಲಾಯುಗದ ಪ್ರಥಮ ಸೂಚನೆಗಳು ಕಾಣತೊಡಗಿದವು. ಇದನ್ನು ವೈದಿಕರ ಕೊಡುಗೆ ಎನ್ನಲಾಗದು. ಬಳಿಕ ಸ್ಥಳೀಯರಿಗಿಂತ ಭಿನ್ನವಾದ ಕಂಕಾಲಗಳು ಪತ್ತೆಯಾಗುವುದು ಸುಮಾರು ಕ್ರಿಪೂ 800ರ ಹೊತ್ತಿಗೆ ಎಂದು ಕೆನಡಿಯವರು ನಡೆಸಿದ ಕಂಕಾಲದ ಶೋಧವು ಸಾಬೀತುಬಡಿಸುತ್ತದೆ. ಸ್ಪಷ್ಟವಾದ ಭಿನ್ನತೆ ಕಾಣುವುದರಿಂದ ಕ್ರಿಪೂ 800ರ ವೇಳೆಗೆ ಹೊಸ ಜನಾಂಗಗಳ ಆಗಮನ ನಡೆಯಿತೆಂದು ಹೇಳಬಹುದು.

ಇಂಥ ಪರಿಶೋಧನೆಗಳಿಗೆ ಒದಗಿಬಂದ ಕಂಕಾಲಗಳ ಸಂಖ್ಯೆ ಕಡಿಮೆ. ಆದ್ದರಿಂದ ಅವುಗಳ ಮೇರೆಗೆ ಅಂತಿಮವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಹಾಗೆಯೇ, ಕಂಕಾಲದ ಶೋಧ ನಡೆದಿರುವ ಕಾರಣ ಇದು ಈಗ ಮನ್ನಣೆ ಪಡೆದಿರುವ ಜನಾಂಗೀಯತೆಗಿಂತ ಹಳೆಯ ಮೂಲವಂಶದ ಪರಿಕಲ್ಪನೆಗೆ ಹತ್ತಿರವಾದ ಅನ್ವೇಷಣೆ ಎನ್ನಬೇಕಾದೀತು. ಹಾಗಲ್ಲ ಎಂದು ಹೇಳಲು ಹಡಪ್ಪಾ ಮೊಹೆಂಜೊದಾರೋ ಕಾಲದ ಕಂಕಾಲಗಳಲ್ಲಿಯೇ ಸಾಕಷ್ಟು ವೈವಿಧ್ಯಗಳಿವೆ ಎಂಬುದು ಸ್ಪಷ್ಟವಾಗಬೇಕು. ಹಾಗೆಯೇ ಕ್ರಿಪೂ 800ರ ಸುಮಾರಿಗೆ ಕಾಣುವ ಹೊಸ ತರಹದ ಕಂಕಾಲಗಳಲ್ಲಿಯೂ ಏಕರೂಪತೆ ಇಲ್ಲದೆ ವೈವಿಧ್ಯಗಳು ನೆಲೆಗೊಂಡಿವೆ ಎಂಬುದು ಖಾತ್ರಿಯಾಗಬೇಕು. ಇಲ್ಲದಿದ್ದರೆ ಈ ಹೊಸ ಕಂಕಾಲಗಳು ರಕ್ತಸಂಬಂಧ ಹಂಚಿಕೊಂಡ ಸಣ್ಣ ಬಣವೊಂದರ ಸದಸ್ಯರಿಗಷ್ಟೇ ಸೇರಿದ್ದು ಎನ್ನಬೇಕಾಗುತ್ತದೆ. ಏಕೆಂದರೆ ಕೆನಡಿ ಶೋಧಿಸಿದ ಎಲ್ಲ ಕಂಕಾಲಗಳೂ ಸರಾಯ್ ಖೋಲಾ ಎಂಬ ಒಂದೇ ಒಂದು ಊರಿನ ಗೋರಿಗಳಿಂದ ದೊರೆತದ್ದು. ಒಂದೆಡೆಯಲ್ಲಿ ದೊರೆತ ಕೆಲವು ಕಂಕಾಲಗಳನ್ನು ಆಧರಿಸಿ ನಿರ್ಣಯಗಳನ್ನು ಕೈಗೊಳ್ಳುವುದು ಉಚಿತವಲ್ಲ.

ಈ ಮಾತನ್ನು ಹೇಳುವಾಗ ಮತ್ತೊಂದು ಸಂಗತಿಯನ್ನೂ ಗಮನದಲ್ಲಿಟ್ಟುಕೊಳ್ಳುವುದು ಲೇಸು. ಈ ಕಂಕಾಲಗಳ ಕಾಲ ಮುಗಿದು ಎರಡೇ ಶತಮಾನಗಳಲ್ಲಿ ಸರಾಯ್ ಖೋಲಾದ ಹತ್ತಿರ ಹೊಸ ನಗರವೊಂದು ವಿಕಾಸ ಪಡೆಯತೊಡಗಿತು. ಅದು ಮುಂಬರುವ ಕಾಲದ ಮಹತ್ವದ ಆಡಳಿತ ಹಾಗೂ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿತ್ತು. ಸರಾಯ್ ಖೋಲಾದಿಂದ ಅಲ್ಲಿಗೆ ಕಾಲ್ನಡಿಗೆಯಲ್ಲಿ ಕೇವಲ ಹತ್ತು ನಿಮಿಷಗಳ ದೂರ. ಆ ನಗರವೇ ತಕ್ಷಶಿಲೆ.
ಕೆನಡಿಯವರು ಕಂಕಾಲಗಳಲ್ಲಿ ಪರಿವರ್ತನೆ ಕಂಡುಬರುತ್ತಿವೆ ಎಂದಿದ್ದಾರೆ, ಆದರೆ ಈ ಹೊಸ ಕಂಕಾಲಗಳು ವೈದಿಕ ಜನಾಂಗಗಳದೇ ಎಂದು ಖಾತ್ರಿ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಋಗ್ವೇದ ನಮಗೆ ನೀಡುವ ಭೌಗೋಳಿಕ ಚಿತ್ರವು ಹೆಚ್ಚಾಗಿ ಅಫ್ಘಾನಿಸ್ತಾನಕ್ಕೆ ಸರಿಹೊಂದುತ್ತದೆ ಎಂದು ರಾಜೇಶ್ ಕೊಚ್ಛಾರ್ ವಾದಿಸಿದ್ದಾರೆ. ಅಲ್ಲದೆ ಋಗ್ವೇದದ ಬಹುತೇಕ ಸೂಕ್ತಗಳು ಐದು ತಲೆಮಾರುಗಳಿಗೆ ಸೇರಿದ ಜನರಿಂದ ರಚಿತವಾಗಿದ್ದು ಹಲವು ಶತಮಾನಗಳ ಅಂತರವುಳ್ಳ ಸೂಕ್ತಗಳು ಕೆಲವೇ ಕೆಲವು ಎಂದು ಮೈಕಲ್ ವಿಟ್ಸೆಲ್ ಪತ್ತೆಹಚ್ಚಿದ್ದಾರೆ. ಋಗ್ವೇದವು ವಲಸಿಗರಾದ ಪಶುಪಾಲಕರೇ ಹೆಚ್ಚಾಗಿರುವ ಗ್ರಂಥ. ಅಲ್ಲಿ ಸ್ಥಿರವಾದ ಕೃಷಿ ಕೈಗೊಳ್ಳುವವರನ್ನು ಕಾಣುತ್ತೇವೆ, ಆದರೆ ಅವರ ಪ್ರಮಾಣ ಬಹು ಸಣ್ಣದು.

ಕ್ರಿಪೂ 800ರ ನಂತರ ಸಂಕಲನಗೊಂಡ ಗ್ರಂಥವೇ ಋಗ್ವೇದ ಎಂಬುದು ವೈದಿಕ ಹಾಗೂ ಬೌದ್ಧ ಗ್ರಂಥಗಳ ಮಾಹಿತಿಗಳನ್ನು ಕಲೆಹಾಕಿದಾಗ ಸ್ಪಷ್ಟವಾಗಿತ್ತದೆ. ಐದು ತಲೆಮಾರುಗಳು ರಚಿಸಿದ ಸೂಕ್ತಗಳ ಸಂಕಲನವಾಗಿದ್ದು ಅದರಲ್ಲಿ ಅಫ್ಘಾನಿಸ್ತಾನದ ಭೂಪರಿಸರವನ್ನು ಗುರುತಿಸಬಹುದಾದರೆ ವೈದಿಕರು ಭಾರತಕ್ಕೆ ಆಗಮಿಸಿದ್ದು ಕ್ರಿಪೂ 800ರ ಆಸುಪಾಸಲ್ಲಿ ಎನ್ನಬೇಕಾದೀತು. ನಮ್ಮಲ್ಲಿರುವ ಮಾಹಿತಿ ಈ ಕೆಳಕಂಡಂತಿದೆ.

ಐತರೇಯ ಬ್ರಾಹ್ಮಣದಲ್ಲಿ ಜನಮೇಜಯನ ಪ್ರಸ್ತಾಪವಿದೆ. ಈತ ಪರಿಕ್ಷಿತ್‌ನ ಮಗ ಎಂದು ಅಲ್ಲಿ ಹೇಳಲಾಗಿದೆ. ಬ್ರಾಹ್ಮಣಗಳ ಹಾಗೂ ಉಪನಿಷತ್ತುಗಳ ಆಧಾರದಿಂದ ಜನಮೇಜಯನ ತರುವಾಯದ ಕೆಲವು ಸಂಗತಿಗಳು ಸ್ಪಷ್ಟವಾಗುತ್ತವೆ. ಜನಮೇಜಯನ ಪುರೋಹಿತರಲ್ಲಿ ಒಬ್ಬ ಇಂದ್ರೋತ ದೇವಾಪಿ ಶೌನಕ ಎಂದು ಶತಪಥ ಬ್ರಾಹ್ಮಣ ತಿಳಿಸುತ್ತದೆ. ಈ ಇಂದ್ರೋತನ ಮಗ ದ್ರಿತ ಐಂದ್ರೋತ, ಅವನ ಮಗ ಪುಲುಷ ಪ್ರಾಚೀನಯೋಗ್ಯ, ಈ ಪುಲುಷನ ಮಗ ಪೌಲುಷಿ ಸತ್ಯಯಜ್ಞ. ಸತ್ಯಯಜ್ಞನು ಉಪನಿಷತ್ತುಗಳಲ್ಲಿ ಹೇಳಲಾದ ಉದ್ದಾಲಕ ಆರುಣಿಯ ಸಮಕಾಲೀನ. ಉದ್ದಾಲಕನ ಶಿಷ್ಯ ಕಾಹೋಲ ಕೌಷೀತಕಿ, ಕಾಹೋಲನ ಶಿಷ್ಯ ಗುಣಾಖ್ಯ ಶಾಂಖಾಯನ. ಗುಣಾಖ್ಯನು ಆಶ್ವಲಾಯನನ ಸಮಕಾಲೀನ. ಈ ಆಶ್ವಲಾಯನ ಬುದ್ಧನ ಕಾಲದಲ್ಲಿ ಬದುಕಿದ್ದ ಎಂದು ಬೌದ್ಧರ ಮಜ್ಝಿಮ ನಿಕಾಯ ಹೇಳುತ್ತದೆ. ಅಂದರೆ ಜನಮೇಜಯ ಬುದ್ಧನಿಗಿಂತ ಕೇವಲ ಆರು ತಲೆಮಾರುಗಳ ಹಿಂದೆ ಇದ್ದವ. ಬುದ್ಧ ಕ್ರಿಪೂ 500ರಲ್ಲಿ ಜೀವಿಸಿದ್ದನಾದ್ದರಿಂದ ಕ್ರಿಪೂ 650ರ ಆಸುಪಾಸಲ್ಲಿ ಜನಮೇಜಯ ಬದುಕಿದ್ದ ಎಂಬುದು ನಿರ್ವಿವಾದಿತವಾಗುತ್ತದೆ.

ಜನಮೇಜಯನ ಪೂರ್ವಿಕರ ವಂಶಾವಳಿಯನ್ನು ವೈದಿಕ ಮೂಲಗಳಿಂದ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಹಾಭಾರತದಲ್ಲಿ ಹಾಗೂ ಪುರಾಣಗಳಲ್ಲಿ ಈ ವಂಶಾವಳಿಯಿದೆ. ಅಲ್ಲಿ ಹಲವು ತಲೆಮಾರುಗಳ ವರೆಗಿನ ಇವನ ಪೂರ್ವಿಕರ ಪಟ್ಟಿಯಲ್ಲಿ ಏಕರೂಪತೆಯಿದೆ. ಕಾಲ ಕಳೆದಂತೆ ವಂಶಾವಳಿಗಳು ದೀರ್ಘವಾಗುತ್ತ ಹೋಗುವುದು ಸಹಜ ಎಂದು ರೊಮೀಲಾ ಥಾಪರ್ ಮೊದಲಾದ ಇತಿಹಾಸಕಾರರು ಗುರುತಿಸಿದ್ದಾರೆ. ಹೊಸಹೊಸ ಹೆಸರುಗಳನ್ನು ನಡುವಲ್ಲಿ ತುರುಕುವ ಮೂಲಕ ಐದು ತಲೆಮಾರುಗಳು ಕೆಲವೇ ಶತಮಾನಗಳಲ್ಲಿ ಹತ್ತು ತಲೆಮಾರಾಗಿಯೋ ಹದಿನೈದು ತಲೆಮಾರಾಗಿಯೋ ರೂಪಾಂತರ ಹೊಂದುವುದು ಸಹಜ. ಆದರೆ ಜನಮೇಜಯನಿಗೂ ಅವನ ಪೂರ್ವಿಕನಾದ ಶಂತನುವಿಗೂ ನಡುವೆ ಕೇವಲ ಐದು ತಲೆಮಾರುಗಳಿದ್ದವು ಎಂಬುದನ್ನೇ ಎಲ್ಲ ಮೂಲಗಳೂ ಹೇಳಿರುವುದು ಗಮನಾರ್ಹ. ಭೀಷ್ಮ, ಚಿತ್ರಾಂಗದ, ವಿಚಿತ್ರವೀರ್ಯರದು ಮೊದಲ ತಲೆಮಾರು, ಧೃತರಾಷ್ಟ್ರ, ಪಾಂಡುಗಳದು ಎರಡನೆಯದು, ಪಾಂಡವ, ಕೌರವರದು ಮೂರನೆಯದು, ಅಭಿಮನ್ಯುವಿನದು ನಾಲ್ಕನೆಯದು, ಜನಮೇಜಯನ ತಂದೆ ಪರಿಕ್ಷಿತನದು ಐದನೆಯ ತಲೆಮಾರು. ಜನಮೇಜಯನ ಕಾಲ ಕ್ರಿಪೂ 650 ಆದರೆ ಶಂತನುವಿನ ಕಾಲ ಕ್ರಿಪೂ 800 ಆಗಬೇಕು.

ವೈದಿಕ ಆಕರಗಳಲ್ಲಿ ಜನಮೇಜಯನ ಹಲವು ಪೂರ್ವಿಕರ ಉಲ್ಲೇಖವಿದೆ. ಪರಿಕ್ಷಿತ್‌ನ ಹೆಸರು ಇದ್ದೇ ಇದೆ. ಪಾಂಡವ, ಕೌರವರ ಅಥವಾ ಅಭಿಮನ್ಯುವಿನ ತಲೆಮಾರಿನ ಯಾರ ಪ್ರಸ್ತಾಪವೂ ವೈದಿಕ ಗ್ರಂಥಗಳಲ್ಲಿ ಸಿಗುವುದಿಲ್ಲ. ಆದರೆ ಧೃತರಾಷ್ಟ್ರನ ಹೆಸರು ಐತರೇಯ ಬ್ರಾಹ್ಮಣದಲ್ಲಿದೆ. ಅಲ್ಲಿ ಅವನನ್ನು ಧೃತರಾಷ್ಟ ವೈಚಿತ್ರವೀರ್ಯ ಎನ್ನಲಾಗಿದೆ. ವಿಚಿತ್ರವೀರ್ಯನ ಮಗ ಇವನು ಎಂಬುದು ಇದರಿಂದ ಖಾತ್ರಿಯಾಗುತ್ತದೆ. ಈ ವಿಚಿತ್ರವೀರ್ಯ ಶಂತನುವಿನ ಮಗ ಎಂಬುದು ಮಹಾಭಾರತ ಹಾಗೂ ಪುರಾಣಗಳ ಹೇಳಿಕೆ. ವ್ಯಾಸನಿಗೂ ತಾಯಿಯಾದ ಸತ್ಯವತಿಯಲ್ಲಿ ಶಂತನುವಿಗೆ ಜನಿಸಿದ ಇಬ್ಬರು ಗಂಡುಮಕ್ಕಳಲ್ಲಿ ಕಿರಿಯ ಮಗ ಇವನು.
ಶಂತನುವಿನ ಉಲ್ಲೇಖ ಋಗ್ವೇದದ ಹತ್ತನೆಯ ಮಂಡಲದಲ್ಲಿಯೇ ಇದೆ. ಮಹಾಭಾರತದಲ್ಲಿ ಶಂತನುವಿಗೆ ದೇವಾಪಿ ಎಂಬ ಅಣ್ಣನಿದ್ದಾನೆ. ಋಗ್ವೇದದಲ್ಲಿ ದೇವಾಪಿ ಶಂತನುವಿನ ಪುರೋಹಿತನ ಹೆಸರು. ಈಗಾಗಲೇ ಸೂಚಿಸಿದಂತೆ ಶಂತನು ಕ್ರಿಪೂ 800ರಲ್ಲಿ ಜೀವಿಸಿದ್ದ ಎಂಬುದರಿಂದ ಅವನ ಉಲ್ಲೇಖವಿರುವ ಋಗ್ವೇದವು ಅವನ ಕಾಲದಲ್ಲಿ ಅಥವಾ ಅನಂತರ ಸಂಕಲಿತವಾದ ಸಂಹಿತೆ ಎಂಬ ನಿಲುವು ಸಮಂಜಸವಾದ್ದು ಎನ್ನಬಹುದು. ಋಗ್ವೇದವು ಕ್ರಿಪೂ 800ರಕ್ಕಿಂತ ಹಿಂದಿನದಲ್ಲ ಎಂಬುದು ಇದರರ್ಥ. ಇದು ಸನಾತನಿಗಳಿಗೆ ಸ್ವೀಕೃತವಾಗಲಿಕ್ಕಿಲ್ಲ. ಆದರೆ ಋಗ್ವೇದಕ್ಕೆ ನಾವು ಸೂಚಿಸುತ್ತಿರುವ ಕ್ರಿಪೂ 800ರ ಆಸುಪಾಸಿನ ತೇದಿಗೆ ಸ್ಪಷ್ಟವಾದ ಆಧಾರಗಳಿವೆ. ಇತಿಹಾಸಕಾರರು ಒತ್ತುನೀಡುತ್ತ ಬಂದಿರುವ ಕ್ರಿಪೂ 1000, 1200, 1500 ಮುಂತಾದ ತೇದಿಗಳೂ, ಹಿಂದುತ್ವವಾದಿಗಳು ಹೇಳುವಂತ ಕ್ರಿಪೂ 5000, 7000, 10,000 ಇತ್ಯಾದಿ ಕಾಲಗಳೂ ನಿಂತಿರುವುದು ಊಹೆಯ ಬಲದಲ್ಲಿ ಮಾತ್ರ.

ಈ ಸಮೀಕ್ಷೆಯಿಂದ ನಮ್ಮ ಚರ್ಚೆಗೆ ಸೊಪ್ಪು ನೀಡಬಲ್ಲ ವಿಚಾರವೆಂದರೇ ಪುರುಷಸೂಕ್ತದ ಕಾಲವು ಕ್ರಿಪೂ 800ಕ್ಕಿಂತ ಹಳೆಯದಲ್ಲ ಎಂಬುದು. ವೈದಿಕರಲ್ಲಿ ಈಮೊದಲು ಇದ್ದಿರದಂಥ ಶ್ರೇಣೀಕರಣವೊಂದು ಅವರು ಭಾರತಕ್ಕೆ ಆಗಮಿಸಿದ ನಂತರ ಉಂಟಾಗಿದೆ. ಅದನ್ನು ಉಂಟುಮಾಡಿದ ಸಂದರ್ಭ ಯಾವುದು? ಮುಂದಿನ ಅಧ್ಯಾಯದಲ್ಲಿ ಈ ಚರ್ಚೆಯ ಕಡೆಗೆ ತಿರುಗೋಣ.

ಹಿಂದಿನ ಅಂಕಣಗಳು

ಜಾತಿ ಪದ್ಧತಿಯ ಮೈಮನಗಳು-1

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...