ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

Date: 19-09-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಆರನೇ ಕಂತಿನ ಬರಹ ಇಲ್ಲಿದೆ.

6

ವೈದಿಕರ ಭೌತಿಕ ಪರಿಸರಕ್ಕೂ ರಾಮಾಯಣ, ಮಹಾಭಾರತಗಳಲ್ಲಿ ಕಾಣುವ ಭೌತಿಕ ಪರಿಸರಕ್ಕೂ ಸಾಕಷ್ಟು ಭಿನ್ನತೆಗಳಿವೆ. ವೈದಿಕರದು ಪಶುಪಾಲನೆ ಕೇಂದ್ರಿತ ಆರ್ಥಿಕ ಜೀವನ. ಅಲ್ಲಿ ಸಣ್ಣ ಪ್ರಮಾಣದ ಸಾಗುವಳಿ ಸಾಧ್ಯವಿತ್ತಾದರೂ ಹೆಚ್ಚುವರಿ ಧಾನ್ಯೋತ್ಪಾದನೆ ನಡೆದಿರಲಿಲ್ಲ. ರಾಜ್ಯಕೇಂದ್ರಿತ ಪ್ರಭುತ್ವವೂ ಅವರಲ್ಲಿ ಪ್ರವರ್ಧಮಾನವಾಗಿರಲಿಲ್ಲ. ಇದಕ್ಕಿಂತ ಭಿನ್ನವಾಗಿ ರಾಮಾಯಣ, ಮಹಾಭಾರತಗಳಲ್ಲಿ ರಾಜ್ಯಕೇಂದ್ರಿತ ಪ್ರಭುತ್ವವನ್ನು ಕಾಣುತ್ತೇವೆ. ಸಮೃದ್ಧವಾದ ಕೃಷಿಯನ್ನು ಕಾಣುತ್ತೇವೆ. ಅವುಗಳಿಂದ ಒದಗಿಬಂದ ಶ್ರೇಣೀಕರಣವನ್ನು ಆರ್ಥಿಕ ವ್ಯವಸ್ಥೆಯಲ್ಲಿಯೂ ವಿವಾಹ, ದಾಯಕ್ರಮಾದಿಗಳಲ್ಲಿಯೂ ಕಾಣುತ್ತೇವೆ.

ಭೌಗೋಳಿಕ ಪರಿಸರದಲ್ಲಿಯೂ ಈ ಹೊತ್ತಿಗೆ ಮಾರ್ಪಾಟು ಸಂಭವಿಸಿದೆ. ಋಗ್ವೇದದ ಭೂಪ್ರದೇಶಗಳು ಪಶ್ಚಿಮದಲ್ಲಿ ಅಫ್ಘಾನಿಸ್ತಾನದಿಂದ ಪೂರ್ವದಲ್ಲಿ ಗಂಗಾ, ಯಮುನಾ ನದಿಗಳ ಮೇಲ್ದಂಡೆ ತನಕ ಚೆಲ್ಲಿಕೊಂಡ ಪಂಜಾಬ್ ವರೆಗೆ ವ್ಯಾಪಿಸಿಕೊಂಡಿವೆ. ಆದರೆ ಮಹಾಭಾರತದ ಕೇಂದ್ರವು ಕುರು ಜನಪದ. ಇದು ಉತ್ತರ ಪ್ರದೇಶದ ಮೇರಠ್ ಸುತ್ತಮುತ್ತ ಗಂಗಾ, ಯಮುನಾ ನದಿಗಳ ನಡುವಲ್ಲಿದೆ. ಗಂಗಾನದಿಯ ಪೂರ್ವಕ್ಕೆ ಬರೇಲಿಯ ಆಸುಪಾಸಿನ ಪ್ರದೇಶಗಳು ಪಾಂಚಾಲ ಜನಪದಕ್ಕೆ ಸೇರಿದ್ದವು. ಪಾಂಚಾಲವೂ ಮಹಾಭಾರತದ ಪ್ರಮುಖ ನೆಲೆಗಳಲ್ಲಿ ಒಂದು. ಪೂರ್ವದಲ್ಲಿ ಈ ಜನಪದದ ವ್ಯಾಪ್ತಿಯು ಸುಮಾರು ಕಾಲೀ ನದಿ ವರೆಗೆ ಹರಡಿಕೊಂಡಿತ್ತು. ಪಾಂಚಾಲ ಜನಪದ ಕಳೆದರೆ ಮುಂದೆ ಪೂರ್ವ ಹಾಗೂ ಆಗ್ನೇಯ ದಿಕ್ಕುಗಳಲ್ಲಿ ದಟ್ಟ ಕಾನನವಿತ್ತು. ಅನೇಕ ಸತ್ರ ಹಾಗೂ ಯಜ್ಞಗಳಿಗೆ ನೆಲೆಯಾಗಿದ್ದ ಈ ಕಾನನವೇ ನೈಮಿಷಾರಣ್ಯ. ಅಲ್ಲಿಂದಾಚೆ ಮೂಡಲ ಸೀಮೆಗೆ ಹೊರಟರೆ ಕೋಸಲ ಜನಪದ. ಕ್ರಿಪೂ ಆರನೆಯ ಶತಮಾನದಲ್ಲಿ ಕೋಸಲದ ರಾಜಧಾನಿ ಶ್ರಾವಷ್ಠಿಯಾಗಿತ್ತು. ಆದರೆ ರಾಮಾಯಣದಲ್ಲಿ ಸರಯೂ ತೀರದ ಅಯೋಧ್ಯಾ ನಗರವನ್ನು ರಾಜಧಾನಿ ಎನ್ನಲಾಗಿದೆ.

ಈ ಪ್ರದೇಶಗಳಲ್ಲಿ ಈಗಾಗಲೇ ನೆಲೆಗೊಂಡಿದ್ದ ಹೊಸ ಶಿಲಾಯುಗ, ತಾಮ್ರ ಶಿಲಾಯುಗ ಹಾಗೂ ಬಳಿಕ ಬಂದ ಕಬ್ಬಿಣಯುಗಗಳ ನೆಲೆಗಳಲ್ಲಿ ಕೃಷಿ ಮುನ್ನಡೆ ಸಾಧಿಸಿತ್ತು. ಅಪಾರ ಪ್ರಮಾಣದಲ್ಲಿ ಹೆಚ್ಚುವರಿ ಉತ್ಪಾದನೆ ನಡೆಯದಿದ್ದರೂ ಕೃಷಿ ವ್ಯವಹಾರಗಳು ಅನೇಕ ಶತಮಾನಗಳಿಂದ ತಡೆಯಿಲ್ಲದೆ ಸಾಗಿದ್ದವು. ಆದರೆ ಉತ್ಖನನಗಳಲ್ಲಿ ದೊರೆತ ಪಳೆಯುಳಿಕೆಗಳನ್ನು ವಿಶ್ಲೇಷಿಸಿದಾಗ ಜನರ ನಡುವೆ ಸ್ಪಷ್ಟವಾದ ಶ್ರೇಣೀಕರಣಗಳನ್ನು ಅಲ್ಲಿ ಕಾಣುವುದಿಲ್ಲ. ಅದೇ ರೀತಿ ಹಿಂಸೆಯ ಮೇಲೆ ಏಕಸ್ವಾಮ್ಯ ಅಥವಾ ಮೊನೋಪೊಲಿ ಸ್ಥಾಪಿಸಿಕೊಳ್ಳಲು ಹವಣಿಸುವ ಅಧಿಕಾರ ವ್ಯವಸ್ಥೆಯೊಂದು ಬೇರೂರಿಕೊಂಡಿದ್ದ ಸೂಚನೆಗಳೂ ದೊರಕುವುದಿಲ್ಲ. ಆವಾಸ ಕೇಂದ್ರಗಳ ವಿನ್ಯಾಸದಲ್ಲಿ ಆಳುವ ವರ್ಗ ಆಳಿಸಿಕೊಳ್ಳುವ ವರ್ಗ ಎಂಬ ಭೇದ ಕಲ್ಪಿಸಿಕೊಳ್ಳತಕ್ಕ ಭಿನ್ನತೆಗಳನ್ನು ಉತ್ಖನಗಳ ವರದಿಗಳು ತೋರಿಸವು. ಕಾರ್ಷಿಕ ಚಕ್ರವು ಜೀವನಕ್ಕೆ ಒಂದುರೀತಿಯ ಸ್ಥಿರತೆಯನ್ನು ಒದಗಿಸಿಕೊಟ್ಟಿದ್ದರೂ ಮಾರಾಟ ಯಾ ಇತರ ಲೇವಾದೇವಿಗಳಿಗೆ ಯೋಗ್ಯವಾದ ಪ್ರಮಾಣದಲ್ಲಿ ಹೆಚ್ಚುವರಿ ಉತ್ಪಾದನೆ ನಡೆದಿರದ ಕಾರಣ ಸಂಪನ್ಮೂಲಗಳ ಮೇಲಿನ ನಿಯಂತ್ರಣವು ತೀವ್ರವಾದ ಅಸಾಮಾನತೆಗಳನ್ನು ಸೃಷ್ಟಿಸಿರಲಿಲ್ಲ. ಲಿಖಿತ ದಾಖಲೆಗಳು ಇಲ್ಲದ ಕಾರಣ ಈ ಕುರಿತಾಗಿ ಹೆಚ್ಚಿನ ಚರ್ಚೆ ಸೂಕ್ತವಲ್ಲ ಎನ್ನಿಸುತ್ತದೆ. ಆದರೆ ಉತ್ಖನನಗಳು ಒದಗಿಸಿದ ಪುರಾವೆಗಳ ಬೆಳಕಲ್ಲಿ ಇಷ್ಟನ್ನು ಮಾತ್ರ ಹೇಳಬಹುದು: ಅಧಿಕಾರಕ್ಕೆ ಹಾಗೂ ಆರ್ಥಿಕವೂ ಆರ್ಥಿಕೇತರವೂ ಆದ ನಿಯಂತ್ರಣಗಳಿಗೆ ಅಗತ್ಯವಾದ ವೈಚಾರಿಕ ಸಂಪನ್ಮೂಲಗಳು ಈ ನೆಲೆಗಳಲ್ಲಿ ಇರಲಿಲ್ಲ, ಏಕೆಂದರೆ ಅಂಥ ಭೌತಿಕ ಪರಿಸರವು ಈ ನೆಲೆಗಳಲ್ಲಿ ಏಳಿಗೆ ಪಡೆದಿರಲಿಲ್ಲ.

ವೈದಿಕರ ಸ್ಥಿತಿ ಇದಕ್ಕಿಂತ ಭಿನ್ನವಾಗಿತ್ತು. ಪಶುಪಾಲನೆಯಲ್ಲಿ ತೊಡಗಿದ್ದ ಇವರಿಗೆ ಇನ್ನೂ ಸ್ಥಿರವಾದ ಆವಾಸಕೇಂದ್ರಗಳು ಇದ್ದಿರದ ಕಾರಣ ಒಂದು ಪದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗುವ ಚಲನಶೀಲತೆ ಇವರಲ್ಲಿ ಹೆಚ್ಚಾಗಿತ್ತು. ಅಲ್ಲದೆ ಕೃಷಿಯಲ್ಲಿ ತೊಡಗಿದ್ದ ಭಾರತದ ಆವಾಸಕೇಂದ್ರಗಳಲ್ಲಿ ಇದ್ದಿರದ ಜಾನುವಾರೊಂದನ್ನು ಅವರು ಪಳಗಿಸಿದ್ದರು: ಕುದುರೆ. ಕ್ರಿಪೂ ಐದನೆಯ ಸಹಸ್ರಮಾನದಲ್ಲಿಯೇ ಮಧ್ಯ ಏಷ್ಯಾದ ಸ್ಟೆಪ್ ಹುಲ್ಲುಗಾವಲುಗಳಲ್ಲಿ ಅಲ್ಲಿನ ನಿವಾಸಿಗಳು ಕುದುರೆಯನ್ನು ಪಳಗಿಸತೊಡಗಿದ್ದರು. ಆದರೆ ಆ ಭೂಪರಿಸರದ ದಕ್ಷಿಣಕ್ಕಿದ್ದ ಮೆಸೊಪೊಟೇಮಿಯ, ಅಫ್ಘಾನಿಸ್ತಾನ್ ಮುಂತಾದಲ್ಲಿ ಕ್ರಿಪೂ 2000ದ ವರೆಗೆ ಕುದುರೆ ಅಪರಿಚಿತವಾಗಿಯೇ ಉಳಿದಿತ್ತು. ವೈದಿಕರು ತಮ್ಮ ಸೈನಿಕ ಕಾರ್ಯಾಚರಣೆಗಳಲ್ಲಿ ಕುದುರೆಯನ್ನು ಬಳಸಿ ಅದರ ಲಾಭ ಪಡೆದಿದ್ದರು. ತಮ್ಮ ಸೂಕ್ತಗಳಲ್ಲಿ ಕುದುರೆಯನ್ನು ನಿರಂತರ ಕೊಂಡಾಡಿದರು.

ಒಂದು ಬಣದವರು ರಾತ್ರೋರಾತ್ರಿ ಮತ್ತೊಂದು ಬಣದ ತಂಗುದಾಣಗಳಿಗೆ ನುಗ್ಗಿ ಗೋವುಗಳನ್ನು ಹಾಯಿಸಿಕೊಂಡು ಬರುವುದು ವೈದಿಕರಲ್ಲಿ ಸಾಮಾನ್ಯವಾಗಿತ್ತು. ಇದು ಪದೆಪದೆ ವಿವಿಧ ಬಣಗಳ ನಡುವೆ ಸಂಘರ್ಷಗಳಿಗೆ ಕಾರಣವಾಗುತ್ತಿತ್ತು. ಹೀಗಾಗಿ ಸಂಗ್ರಾಮಗಳೂ ಶೌರ್ಯ ಸಾಹಸದ ಕಥೆಗಳೂ ಅವರ ಆಚಾರ ವಿಚಾರಗಳಲ್ಲಿ ಮತ್ತು ವಾಙ್ಮಯದಲ್ಲಿ ಅಪಾರ ಮಹತ್ವ ಪಡೆದುಕೊಂಡಿತು. ಯುಧಿವಿಕ್ರಮರುಗಳಿಗೆ ಇಲ್ಲಿ ಇನ್ನಿಲ್ಲದ ಮನ್ನಣೆಯಿತ್ತು. ಹೀಗಾಗಿ ಅಧಿಕಾರ ಹಾಗೂ ನಿಯಂತ್ರಣವು ಅವರಲ್ಲಿ ವೈಚಾರಿಕ ನೆಲೆಯಲ್ಲಿ ವಿವಿಧ ರೀತಿಯಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿತು. ಒಡೆತನವನ್ನು ಸೂಚಿಸುವ ರಾಜ, ಪತಿ, ಗೋಪತಿ, ಜನಸ್ಯ ಗೋಪತಿ, ದೇವ, ಆಧಿಪತ್ಯ, ಶ್ರೇಷ್ಠ, ಶ್ರೇಷ್ಠತಮ, ಪರಮ, ಕ್ಷತ್ರಂ, ವರಿಷ್ಠ, ಮೊದಲಾದ ಪ್ರಯೋಗಗಳು ಋಗ್ವೇದದಲ್ಲಿಯೇ ಹೇರಳವಾಗಿವೆ. ಹೀಗೆ ಪ್ರಬಲ-ದುರ್ಬಲ, ಜಯ-ಅಪಜಯ, ಶ್ರೇಷ್ಠ-ಕನಿಷ್ಠ, ಪೋಷಕ-ಪೋಷಿತ ಮುಂತಾದ ಅಧಿಕಾರಸೂಚಕ ವಿಚಾರಗಳು ಅವರಲ್ಲಿ ಹಿಂದಿನಿಂದಲೇ ಹಾಸುಹೊಕ್ಕಾಗಿತ್ತು.

ಕ್ರಿಶ 800 ಹಾಗೂ 600ರ ನಡುವೆ ಈ ಎರಡು ಭಿನ್ನ ವ್ಯವಸ್ಥೆಗಳ ಸಮಾಗಮ ನಡೆಯಿತು. ಅಂದರೆ, ಸ್ಥಿರವಾದ ಆವಾಸಕೇಂದ್ರಗಳಲ್ಲಿ ನಡೆಯುವ ಕೃಷಿಯಂತಹ ನಿರಂತರ ವ್ಯವಸ್ಥೆಯೊಂದಿಗೆ ಅಧಿಕಾರಪ್ರಜ್ಞೆಯ ವೈಚಾರಿಕತೆ ಮತ್ತು ಅದರ ಭೌತಿಕ ಅಭಿವ್ಯಕ್ತಿಗಳು (ಯುದ್ಧ, ಕುದುರೆ ಇತ್ಯಾದಿ) ಸೇರಿಕೊಂಡು ನೂತನವಾದ ಭೌತಿಕ ಪರಿಸರವೊಂದರ ನಿರ್ಮಾಣ ಪ್ರಾರಂಭವಾಯ್ತು. ಚಾತುರ್ವರ್ಣ್ಯದ ವ್ಯವಸ್ಥೆ ಆರಂಭವಾದದ್ದು ಅಪಾರ ಚಾರಿತ್ರಿಕ ಮಹತ್ವವುಳ್ಳ ಈ ಸಮಾಗಮದಲ್ಲಿ.

ವೈದಿಕರು ಭಾರತಕ್ಕೆ ಆಗಮಿಸುವಾಗ ಅವರಲ್ಲಿ ಅತ್ಯಂತ ಹೆಚ್ಚಿನ ಮಹತ್ವವಿದ್ದದ್ದು ಪುರೊಹಿತರಿಗೆ ಮತ್ತು ಆಯಾ ಬಣಗಳ ಮುಖಂಡರಾದ ಒಡೆಯರುಗಳಿಗೆ. ಈ ಒಡೆಯರನ್ನು ರಾಜ ಎನ್ನಲಾಗುತ್ತಿತ್ತು. ವೈದಿಕ ಬಣಗಳಲ್ಲಿದ್ದ ಇತರ ಪ್ರಮುಖರೆಂದರೆ ಗೃಹಸ್ಥರು ಮತ್ತು ಗೋಪಾಲಕರು. ಪುರೋಹಿತರು ತಾವು ಸೇವೆ ಸಲ್ಲಿಸುತ್ತಿದ್ದ ಬಣಗಳ ಸದಸ್ಯರಾಗಿರಬೇಕೆಂದು ನಿರ್ಬಂಧಗಳಿರಲಿಲ್ಲ. ಭರತವಂಶದ ಸುದಾರಾಜನಿಗೆ ಒಮ್ಮೆ ವಿಶ್ವಾಮಿತ್ರ ಪುರೋಹಿತನಾಗಿದ್ದ. ಮತ್ತೊಮ್ಮೆ ವಸಿಷ್ಠ. ಪುರೋಹಿತರು ಯಜ್ಞ ಯಾಗಾದಿಗಳನ್ನು ಕೈಗೊಳ್ಳುತ್ತಿದ್ದರು. ಗಾಥಾ ಹಾಗೂ ನಾರಶಂಸಿಗಳಂಥ ಕಬ್ಬಗಳನ್ನು ಕಟ್ಟುತ್ತಿದ್ದರು. ಈ ಪುರೋಹಿತರೇ ಆ ಕಾಲದ ವೈದಿಕರ ಅರಿವಿನ ಪ್ರತಿನಿಧಿಗಳು. ಗಾಥಾ, ನಾರಶಂಸಿಗಳ ಮೂಲಕ ವೀರರ ಗುಣಗಾನವನ್ನು ಮಾಡುವ ಕಾರ್ಯವು ಮನ್ನಣೆ ಪಡೆದಿದ್ದ ವ್ಯವಸ್ಥೆ ಇದಾಗಿತ್ತು. ಯುದ್ಧಭೂಮಿಯಲ್ಲಿ ಯೋಧರು ಮೆರೆದ ಸಾಹಸವನ್ನು ಗಾಥಾ, ನಾರಶಂಸಿಗಳು ಸ್ತುತಿಸಿದವು. ಅರಿವು ಮತ್ತು ಶೌರ್ಯ, ಇವೇ ಅಂದಿನ ಶ್ರೇಷ್ಠತೆಯ ಚಿಹ್ನೆಗಳು.

ಯುದ್ಧ ಅಥವಾ ಗೋಸಂಬಂಧಿ ಕಾಳಗದಲ್ಲಿ ಬಂಧಿಯಾಗಿಸಿ ತಂದ ಗಂಡು ಹೆಣ್ಣುಗಳು ಬಣವೊಂದರ ಕೆಳಸ್ಥರಕ್ಕೆ ಸೇರಿದ್ದರು. ಹೀಗೆ ಬಂಧಿಯಾದವರ ಅವಸ್ಥೆ ಗುಲಾಮರದ್ದಕ್ಕಿಂತ ಹೆಚ್ಚೇನೂ ಭಿನ್ನವಾಗಿರಲಿಲ್ಲ. ವೈದಿಕರು ಪಣಿ ಎಂಬ ಬಣದೊಂದಿಗೆ ಸಂಘರ್ಷದಲ್ಲಿ ಏರ್ಪಟ್ಟಿದ್ದರು. ಪಣಿಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಅವರು ಯಶಸ್ವಿಯಾದಂತೆ ತೋರುವುದಿಲ್ಲ. ಆದರೆ ದಾಸ ಹಾಗೂ ದಸ್ಯು ಬಣಗಳಿಗೆ ಸೇರಿದವರು ಅನೇಕ ಸಲ ವೈದಿಕರ ಕೈಯಲ್ಲಿ ಸೋಲನ್ನಪ್ಪಿದ್ದಾಗಿ ತಿಳಿದುಬರುತ್ತದೆ. ಪಣಿ, ದಾಸ, ಇವೆರಡೂ ಇಂಡೋ ಯುರೋಪ್ಯನ್ ಭಾಷಾಮೂಲಕ್ಕೆ ಸೇರಿದ ಶಬ್ದಗಳು. ಆದರೆ ದಸ್ಯು ಈ ಮೂಲದ್ದಲ್ಲ. ಇದರರ್ಥ, ವೈದಿಕರು ಸಂಘರ್ಷ ನಡೆಸಿದ್ದು ವೈದಿಕೇತರರೊಂದಿಗೆ ಮಾತ್ರವಲ್ಲ, ವೇದಗಳ ಭೌತಿಕ ಪರಿಸರಕ್ಕೆ ಸೇರಿದವರೇ ಆದ ಅನೇಕ ಬಣಗಳೊಂದಿಗೂ ಅವರು ಘರ್ಷಣೆಗಳಲ್ಲಿ ತೊಡಗಿದ್ದರು. ಅಂಥ ವೈದಿಕರ ಸಾಲಿಗೆ ಸೇರಿದ ಎರಡು ಬಣಗಳೇ ಪಣಿ ಮತ್ತು ದಾಸ. ದಸ್ಯುಗಳು ವೈದಿಕ ಮೂಲದವರಲ್ಲ. ಅವರದು ಭಿನ್ನವಾದ ನುಡಿಗಟ್ಟು. ಋಗ್ವೇದವು ದಸ್ಯುಗಳನ್ನು ಅನಾಸ ಅಥವಾ ಮೂಗಿಲ್ಲದವರು ಎನ್ನುತ್ತದೆ. ಮೃಧ್ರವಾಚಃ, ಅಂದರೆ ಕಡುನುಡಿಗಳನ್ನು ಆಡುವವರು, ಎಂದು ಟೀಕಿಸುತ್ತದೆ. ದಸ್ಯುಗಳು ಬಹುಶಃ ವೈದಿಕರು ಆಗತಾನೇ ಕಾಲಿರಿಸ ತೊಡಗಿದ್ದ ನೆಲದಲ್ಲಿ ಈಗಾಗಲೇ ನೆಲೆಸಿರಬಹುದಾದ ಸಾಧ್ಯತೆಯಿದೆ. ಪುರುವಂಶದ ಒಡೆಯನೊಬ್ಬನು ಈ ದಸ್ಯುಗಳ ಎದೆಯಲ್ಲಿ ಭೀತಿ ಹುಟ್ಟಿಸಿದನೆಂದು ತೋರುತ್ತದೆ. ತ್ರಸದಸ್ಯು ಎಂಬ ಬಿರುದನ್ನು ಆತ ವ್ಯಕ್ತಿನಾಮವಾಗಿ ಬಳಸಿಕೊಂಡಿದ್ದಾನೆ. ದಸ್ಯುಗಳನ್ನು ಬಲದಿಂದ ಸದೆಬಡಿದ ಪ್ರಸಂಗಗಳು ಋಗ್ವೇದದಲ್ಲಿ ಅನೇಕ ಕಡೆಗಳಲ್ಲಿವೆ. ಇದರೊಂದಿಗೆ ಹೋಲಿಸಿದರೆ ದಾಸರು ಅನುಭವಿಸಿರಬಹುದಾದ ಯಾತನೆಗಳು ಎಷ್ಟೋಪಟ್ಟು ಕಡಿಮೆ ಎಂದು ಹೇಳಬಹುದು. ದಾಸ ಎಂಬುದು ಬಣವೊಂದರ ಹೆಸರು. ಆದರೂ ಆ ಶಬ್ದವು ಗುಲಾಮ ಎಂಬ ಅರ್ಥದಲ್ಲಿ ಬಳಕೆಯಾಗಲು ಶುರುವಾಯ್ತು. ದಾಸರ ಹೆಂಗಸರು, ಅಂದರೆ ದಾಸಿಯರು, ಅನೇಕ ಸಂದರ್ಭಗಳಲ್ಲಿ ತಮ್ಮನ್ನು ಸೋಲಿಸಿದ ಬಣಗಳ ಒಡೆಯರುಗಳ ಮಡದಿಯರಾಗಿ ಅಥವಾ ಭೋಗಿಯರಾಗಿ ಆ ಮನೆತನದ ಸದಸ್ಯರೇ ಆಗಿಬಿಡುತ್ತಿದ್ದರು. ಅಂಥ ದಾಸಿಯರಲ್ಲಿ ಜನಿಸಿದ ಪುತ್ರರು ಸೂಕ್ತಗಳನ್ನು ರಚಿಸಿದ ನಿದರ್ಶನಗಳೂ ಇವೆ. ಅಂಥ ಸೂಕ್ತಗಳು ಋಗ್ವೇದದಲ್ಲಿ ಸೇರ್ಪಡೆಯಾಗಿವೆ ಕೂಡ. ಕುಕ್ಷಿವನ್ ಮತ್ತು ಕವುಷ ಐಲುಷ ಹೀಗೆ ಸೂಕ್ತ ರಚಿಸಿದ ದಾಸೀಪುತ್ರರಲ್ಲಿ ಇಬ್ಬರು.

ಗೋವು ವೈದಿಕ ಜನಾಂಗಗಳ ಆರ್ಥಿಕ ಜೀವನದ ಕೇಂದ್ರಬಿಂದುವಾಗಿತ್ತು. ತಮ್ಮ ಸಂಪತ್ತುಗಳಲ್ಲಿ ಗೋವೇ ಸರ್ವಶ್ರೇಷ್ಟವೆಂದು ವೈದಿಕರು ಬಗೆದರು. ಗೋವು ವಿನಿಮಯದ ಸಾಧನವಾಗಿತ್ತು. ಗೋವಿಗಿದ್ದ ಮಹತ್ವವೂ ವೈವಿಧ್ಯಮಯವಾಗಿತ್ತು. ಗೋ ಅಥವಾ ಗೌ ಎಂಬ ಶಬ್ದದಿಂದ ಅನೇಕ ಪ್ರಯೋಗಗಳು ಚಾಲನೆಗೆ ಬಂದವು. ಗೋವನ್ನು ಕಾಯುವವನು ಗೋಪ. ಬಣವೊಂದರ ಒಡೆಯ ಗೋಪತಿ. ಒಮ್ಮೊಮ್ಮೆ ಆತನನ್ನು ಜನಸ್ಯ ಗೋಪತಿ ಎಂದೂ ಕರೆದದ್ದಿದೆ. ಗೋವು ಕರೆಯುವ ಶಬ್ದವನ್ನು ಕ್ರೋಷ ಎನ್ನುತ್ತಿದ್ದರು. ಎಲ್ಲಿಯ ವರೆಗೆ ಆ ಕರೆ ಕೇಳಿಸುತ್ತದೆಯೋ ಅಲ್ಲಿಯ ವರೆಗಿನ ದೂರವನ್ನೂ ಕ್ರೋಷ ಎಂದೇ ಕರೆಯಲಾಗಿತ್ತು. ಹಿಂದಿಯಲ್ಲಿ ಇಂದಿಗೂ ಕೋಸ್ ಎಂಬುದನ್ನು ದೂರಮಾಪಕ ಪ್ರಯೋಗವಾಗಿ ಬಳಸಲಾಗುತ್ತದೆ. ಸಲ್ತನತ್ ಹಾಗೂ ಮುಘಲ್ ಆಳ್ವಿಕೆಯ ಕಾಲಕ್ಕೆ ರಾಜ್ಯದ ಹೆದ್ದಾರಿಗಳಲ್ಲಿ ದೂರವನ್ನು ಸೂಚಿಸಲು ಮೈಲಿಗಲ್ಲುಗಳನ್ನು ನಿಲಿಸಿದ್ದರು. ಈ ಮೈಲಿಗಲ್ಲುಗಳನ್ನು ಕೋಸ್ ಮೀನಾರ್ ಎನ್ನುತ್ತಿದ್ದರು.

ಗೋವೇ ಪ್ರಮುಖ ಸಂಪತ್ತಾಗಿದ್ದ ಕಾರಣ ಅದರ ಸಂರಕ್ಷಣೆಗೆ ಇನ್ನಿರದ ಪ್ರಾಮುಖ್ಯತೆಯನ್ನು ಕಲ್ಪಿಸಿಕೊಡಲಾಗಿತ್ತು. ಒಂದು ಬಣವು ಮತ್ತೊಂದು ಬಣದ ಗೋವುಗಳನ್ನು ಹಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭಗಳು ವಿರಳವೇನೂ ಆಗಿರಲಿಲ್ಲ. ಆಗ ನಡೆಯುತ್ತಿದ್ದ ಘರ್ಷಣೆಯನ್ನು ಗವಿಷ್ಠಿ ಎಂಬ ಪ್ರಯೋಗದಿಂದ ವ್ಯವಹರಿಸುತ್ತಿದ್ದರು. ಮುಂದೆ ಗವಿಷ್ಠಿ ಶಬ್ದವು ಹೋರಾಟ ಎಂಬುದರ ಪರ್ಯಾಯವಾಯ್ತು. ಕಳೆದುಹೋದ ಗೋವುಗಳನ್ನು ಹುಡುಕಲು ಹೊರಡುವ ಗೋವಿನ ಅನ್ವೇಷಣೆಗೆ ಗವೇಷಣ ಎಂದು ಹೆಸರು. ಒಡಿಯಾ, ಮಲಯಾಳಂ ಮುಂತಾದ ಭಾಷೆಗಳಲ್ಲಿ ಈ ಶಬ್ದವು ಸಂಶೋಧನೆ ಎಂಬ ಅರ್ಥದಲ್ಲಿ ಇಂದು ಬಳಕೆಯಲ್ಲಿದೆ. ಹುಲ್ಲುಗಾವಲನ್ನು ಬಹುಶಃ ಗೋಚರ ಎನ್ನುತ್ತಿದ್ದರು. ಕ್ರಮೇಣ ಎಲ್ಲಿಯ ವರೆಗೆ ಕಣ್ಣಿಗೆ ಕಾಣುತ್ತದೆಯೋ ಅಲ್ಲಿಯ ವರೆಗೆ ಎಂಬ ಅರ್ಥದಲ್ಲಿ ಗೋಚರ ಶಬ್ದವನ್ನು ಪ್ರಯೋಗಿಸುವ ಪದ್ಧತಿಗೆ ಚಾಲನೆ ದೊರಕಿತು. ಗೋಚರ ಶಬ್ದವು ಋಗ್ವೇದದಲ್ಲಿಲ್ಲ. ಕಲ್ಪಸೂತ್ರಗಳಿಗಿಂತ ಹಿಂದಿನ ಯಾವುದೇ ಇತರ ಕೃತಿಯಲ್ಲಿಯೂ ಈ ಪ್ರಯೋಗವನ್ನು ಕಾಣೆವು. ಋಗ್ವೇದದಲ್ಲಿ ಹುಲ್ಲುಗಾವಲಿಗೆ ಗವ್ಯೂತಿ ಎಂದು ಹೆಸರು. ಈ ಶಬ್ದವನ್ನು ಅಲ್ಲಿ ಹದಿನಾಲ್ಕು ಸಲ ಪ್ರಯೋಗಿಸಲಾಗಿದೆ. ಇದರಲ್ಲಿ ಆರು ಪ್ರಯೋಗಗಳು ಎರಡರಿಂದ ಏಳರವರೆಗಿನ ಹಳೆಯ ಮಂಡಲಗಳಲ್ಲಿವೆ. ನಾಲ್ಕು ಪ್ರಯೋಗಗಳು ಸೋಮನಿಗೆಂದು ಮೀಸಲಾದ ಒಂಬತ್ತನೆಯ ಮಂಡಲದಲ್ಲಿದೆ. ಇನ್ನೆರಡು ಎಂಟನೆಯ ಮಂಡಲದಲ್ಲಿ. ಇತ್ತೀಚಿನ ಮಂಡಲಗಳಲ್ಲಿ ಈ ಪ್ರಯೋಗವು ಕೇವಲ ಮೂರು ಸಲ ಮಾತ್ರ ನಡೆದಿದೆ. ಇದು ಬಹುಶಃ ಮೊದಲನೆಯ ಹಾಗೂ ಹತ್ತನೆಯ ಮಂಡಲಗಳಲ್ಲಿನ ಸೂಕ್ತಗಳ ರಚನೆ ನಡೆಯುವ ವೇಳೆಗಾಗಲೇ ವೈದಿಕರು ವಲಸಿಗತನದಿಂದ ಕೂಡಿದ ಪಶುಪಾಲನೆಯನ್ನು ಕೈಬಿಟ್ಟು ಸ್ಥಿರವಾದ ಆವಾಸದ ನೆಲೆಗಳಲ್ಲಿ ಬದುಕು ಸಾಗಿಸುವಂತಾಗಿದ್ದರು ಎಂದು ಸೂಚಿಸುತ್ತಿದೆ. ಕೇವಲ ಒಂದು ಶಬ್ದದ ಪ್ರಯೋಗದ ರೀತಿಯನ್ನು ಗಮನಿಸಿ ಇಂಥ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಆದರೆ ಗವೇಷಣ ಶಬ್ದದ ಬಳಕೆಯಲ್ಲಿಯೂ ಇದೇ ಕ್ರಮವನ್ನು ಕಾಣಬಹುದಾಗಿದೆ ಎಂಬುದು ಗಮನಾರ್ಹ. ಈ ಶಬ್ದವು ಋಗ್ವೇದದಲ್ಲಿ ಆರು ಸಲ ಪ್ರಯೋಗಗೊಂಡಿದೆ. ಅವುಗಳಲ್ಲಿ ಎರಡು ಮಾತ್ರ ಇತ್ತೀಚಿನ ಮಂಡಲಗಳಲ್ಲಿವೆ. ಅವು ಎರಡಲ್ಲ, ಒಂದೇ ಎನ್ನಬಹುದು, ಯಾಕೆಂದರೆ ಎರಡೂ ಒಂದೇ ಋಚದಲ್ಲಿದೆ. ಇನ್ನುಳಿದ ನಾಲ್ಕು ಪ್ರಯೋಗಗಳಲ್ಲಿ ಎರಡು ಏಳನೆಯ ಮಂಡಲದಲ್ಲಿದ್ದರೆ ಆರನೆಯ ಮತ್ತು ಎಂಟನೆಯ ಮಂಡಲಗಳಲ್ಲಿ ತಲಾ ಒಂದೊಂದು ಪ್ರಯೋಗಗಳಿವೆ.
ವೈದಿಕರಲ್ಲಿ ವಿಶೇಷ ಪರಿಣತಿ ಅಗತ್ಯವುಳ್ಳ ಕಸಬುಗಳಿದ್ದವು. ಆದರೆ ಅಂಥ ಕುಶಲಕರ್ಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಲು ಬರುವುದಿಲ್ಲ. ನೇಕಾರ, ಲೋಹಕಾರ ಮತ್ತು ರಥ ನಿರ್ಮಿಸುವ ಬಡಗಿಯ ಪರಾಮರ್ಶೆಗಳು ದೊರಕುತ್ತವೆ. ಲೋಹಕಾರರ ಉಲ್ಲೇಖವು ಋಗ್ವೇದದ ಹತ್ತನೆಯ ಮಂಡಲದಲ್ಲಿ ಮಾತ್ರವಿದೆ. ವಲಸಿಗರಾಗಿದ್ದ ಕಾಲದಲ್ಲಿ ವೈದಿಕರಿಗೆ ಸ್ಥಿರವಾದ ಲೋಹಕಾರರ ಸೇವೆ ಬಹುಶಃ ಅಗತ್ಯವಿರಲಿಲ್ಲ ಎಂದು ತೋರುತ್ತದೆ. ತಮ್ಮ ಲೋಹದ ಬೇಡಿಕೆಗಳನ್ನು ಅವರು ಗೋವುಗಳೊಂದಿಗಿನ ಯಾನದ ಸಂದರ್ಭದಲ್ಲಿ ತಾಮ್ರ, ಕಂಚು ಮುಂತಾದವುಗಳನ್ನು ಉತ್ಪಾದಿಸುವ ನೆಲೆಗಳಿಂದ ಪಡೆದುಕೊಂಡಿರಬಹುದು. ಸ್ಥಿರವಾದ ಆವಾಸಕೇಂದ್ರದಲ್ಲಿ ಬದುಕತೊಡಗಿದಾಗ ಲೋಹಕಾರರ ಅಗತ್ಯ ಉಂಟಾಗಿರುವ ಸಾಧ್ಯತೆಯಿದೆ. ಭೂಸ್ವಾಮ್ಯ ಇದ್ದಿರದ ಗೋಕೇಂದ್ರಿತ ಆರ್ಥಿಕ ವ್ಯವಸ್ಥೆಯಲ್ಲಿ ಕೆಲವೇ ಕೆಲವು ಕುಶಲಕರ್ಮಿಗಳ ಅಗತ್ಯವಿತ್ತು. ಅದೇ ರೀತಿ ಅಲ್ಲಿನ ಶ್ರೇಣೀಕರಣಗಳೂ ಚಾತುರ್ವರ್ಣ್ಯದಂಥ ಸಂಕೀರ್ಣತೆಯನ್ನು ಹೊಂದಿರಲಿಲ್ಲ. ಅಂಥ ಶ್ರೇಣೀಕರಣವು ಮೇಲೆ ಹೇಳಿದ ಎರಡು ಭಿನ್ನ ವ್ಯವಸ್ಥೆಗಳ ಸಮಾಗಮದ ಸಂದರ್ಭದಲ್ಲಿ ತಲೆದೋರಿತು.

ವಂಶಾವಳಿ ಕುರಿತಂತೆ ಋಗ್ವೇದದಲ್ಲಿ ಹೆಚ್ಚಿನ ಮಾಹಿತೆಯಿಲ್ಲ. ಕೆಲವೇ ಕೆಲವು ಸಂದರ್ಭಗಳಲ್ಲಿ ಅದನ್ನು ಗುರುತಿಸಬಹುದಾಗಿದೆ. ಅಂಥಲ್ಲಿ ಸಾಮಾನ್ಯವಾಗಿ ವಂಶಾವಳಿ ಪಿತೃಮೂಲದ್ದಾಗಿದೆ. ಪುರುವಂಶದ ತ್ರಸದಸ್ಯುವನ್ನು ಪೌರುಕುತ್‌ಸ್ತಿ ಎನ್ನಲಾಗಿದೆ. ಹಾಗೆಂದರೆ ಅವನು ಪುರುಕುತ್‌ಸ್ತನ ಮಗ ಎಂದರ್ಥ. ಈ ತ್ರಸದಸ್ಯುವಿಗೆ ಇಬ್ಬರು ಪುತ್ರರು: ತ್ರಿಕ್ಷಿ ಮತ್ತು ಕುರುಶ್ರವಣ. ಪುರುಗಳೊಂದಿಗೆ ವ್ಯವಹಾರ ನಡೆಸಿದ ಕನಿಷ್ಟ ಎರಡು ಪಿತೃಮೂಲ ಮನೆತನಗಳ ಸದಸ್ಯರ ಪರಾಮರ್ಶೆಯಿದೆ, ಋಗ್ವೇದದಲ್ಲಿ. ಒಬ್ಬ ಗೈರಿಕ್ಷಿತ, ಅಂದರೆ ಗಿರಿಕ್ಷಿತ್‌ನ ಮಗ. ಇನ್ನೊಬ್ಬ ಧ್ವನ್ಯ ಲಕ್ಷ್ಮಣ್ಯ, ಅಂದರೆ ಲಕ್ಷ್ಮಣನ ಮಗ ಧ್ವನ್ಯ. ತ್ರಿತ್ಸುಗಳೂ ಪಿತೃಮೂಲದ ವಂಶಾವಳಿಯನ್ನು ಅನುಸರಿಸುತ್ತಿದ್ದರು. ದಿವೋದಾಸ ಮತ್ತು ಸುದಾ ಈ ವಂಶದ ಪ್ರಮುಖ ಒಡೆಯರುಗಳು. ತ್ರಿತ್ಸುವಂಶದ ಮತ್ತೊಬ್ಬ ಸದಸ್ಯನ ಹೆಸರು ಪಿತೃಮೂಲವನ್ನು ಸೂಚಿಸುತ್ತದೆ: ಪೈಜವನ, ಅಂದರೆ ಪಿಜವನ ಎಂಬುವನ ಮಗ. ಇಂಥ ಇನ್ನೂ ನಾಕಾರು ಉದಾಹರಣೆಗಳು ಸಿಗಬಹುದು. ಆದಾಗ್ಯೂ ಎರಡೋ ಮೂರೋ ತಲೆಮಾರಲ್ಲದೆ ಅನೇಕ ತಲೆಮಾರುಗಳ ವಂಶಾವಳಿಗಳು ಋಗ್ವೇದದಲ್ಲಿ ಎಲ್ಲಿಯೂ ಸಿಗುವುದಿಲ್ಲ. ಒಂದನೆಯ ಮತ್ತು ಹತ್ತನೆಯ ಮಂಡಲಗಳಲ್ಲಿಯೂ ಅವು ಇಲ್ಲ ಎಂಬುದು ಗಮನ ಸೆಳೆಯುವ ಸಂಗತಿಯಾಗಿದೆ.

ಅಷ್ಟೇ ಗಮನಾರ್ಹವಾದ ಮತ್ತೊಂದು ಸಂಗತಿಯೆಂದರೆ ಮಾತೃ ಮೂಲದ ಒಂದೂ ವಂಶಾವಳಿ ಋಗ್ವೇದದಲ್ಲಿ ಇಲ್ಲ ಎಂಬುದು. ವೈದಿಕರಿಗೆ ಹೆಣ್ಣುಮಕ್ಕಳಲ್ಲಿ ಅಪಾರ ಪ್ರೀತಿಯಿತ್ತು. ಹೆಣ್ಣುಮಕ್ಕಳು ಅಲಕ್ಷೆಗೆ ಗುರಿಯಾಗಿರಲಿಲ್ಲ. ಆದರೆ ಸಂತತಿಗಳಿಗೆಂದು ದೇವತೆಗಳನ್ನು ಬೇಡಿಕೊಳ್ಳುವಾಗ ಸದಾ ಗಂಡುಮಕ್ಕಳಾಗಬೇಕು ಎಂಬುದೇ ಅವರ ಪ್ರಾರ್ಥನೆಯಾಗಿತ್ತು, ಹೆಣ್ಣುಮಕ್ಕಳಾಗಬೇಕು ಎಂದಲ್ಲ. ಮೊದಲನೆಯ ಮಂಡಲದ ಸೂಕ್ತವೊಂದರಲ್ಲಿ ಹೀಗೆನ್ನಲಾಗಿದೆ: ನೂರು ಶರದೃತಗಳಲ್ಲಿ ದೇವತೆಗಳು ನಮ್ಮ ಒಡಲಲ್ಲಿ ಮುಪ್ಪು ತಂದಿಕ್ಕುತ್ತಾರೆ, ಪುತ್ರರು ತಂದೆಯರಾಗುತ್ತಾರೆ. ಪುತ್ರಿಯರು ತಾಯಿಯರಾಗುತ್ತಾರೆ ಎಂದು ಹೇಳುವ ಅಗತ್ಯ ತೋರಲಿಲ್ಲ, ವೈದಿಕರಿಗೆ.

ಬಣವೊಂದು ಅನೇಕ ಕುಟುಂಬಗಳಿಂದ ಕೂಡಿತ್ತು. ಇವು ಸಾಮಾನ್ಯವಾಗಿ ಕೆಲವು ಸದಸ್ಯರಷ್ಟೇ ಉಳ್ಳ ಸಣ್ಣ ಘಟಕವಾಗಿರುತ್ತಿತ್ತು. ಹತ್ತಾರು ಮಂದಿ ಸದಸ್ಯರುಳ್ಳ, ನಾವಿಂದು ಅವಿಭಕ್ತ ಕುಟುಂಬ ಎಂದು ಕರೆಯುವ ರೀತಿಯ ದೊಡ್ಡ ಮನೆತನಗಳ ಸೂಚನೆ ಋಗ್ವೇದದಲ್ಲಿಲ್ಲ. ಋಗ್ವೇದದಲ್ಲಿ ಪ್ರಸಿದ್ಧವಾದೊಂದು ಋಚವಿದೆ. ಅಲ್ಲಿ ನಾನು ಕಬ್ಬಿಗ, ನನ್ನ ತಂದೆ ವೈದ್ಯ, ತಾಯಿ ಧಾನ್ಯವನ್ನು ಕುಟ್ಟುವವಳು, ಮೂವರೂ ಕೂಡಿ ಸಂಪತ್ತು ಗಳಿಸಲೆಂದು ದುಡಿಯುತ್ತಿದ್ದೇವೆ ಎನ್ನಲಾಗಿದೆ. ಮೂರು ಮಂದಿ ಮಾತ್ರವುಳ್ಳ ಸಣ್ಣ ಕುಟುಂಬವಿದು.

ನಂಟುಸಂಬಂಧಗಳ ಪರಿಕಲ್ಪನೆ ಸೀಮಿತವಾಗಿತ್ತು. ಅದರಲ್ಲಿ ಸಂಕೀರ್ಣತೆಗಳಿರಲಿಲ್ಲ. ಅನಂತರದ ದಿನಮಾನಗಳಲ್ಲಿ ಸಂಸ್ಕೃತದಲ್ಲಿ ಕಂಡುಬಂದ ಹಲವು ನಂಟು ಸಂಬಂಧದ ಪ್ರಯೋಗಗಳನ್ನು ಋಗ್ವೇದದ ಹಳೆಯ ಮಂಡಲಗಳಲ್ಲಿ ಕಾಣೆವು. ತಾಯಿಯ ಸೋದರನನ್ನು ಸಂಬೋಧಿಸಲು ಬಳಕೆಯಾಗುವ ಸಂಸ್ಕೃತ ಶಬ್ದ ಮಾತುಲ. ಋಗ್ವೇದದಲ್ಲಿ ಈ ಶಬ್ದವಿಲ್ಲ. ಹೆಂಡತಿಯ ಸೋದರನನ್ನು ಸ್ಯಾಲ ಎನ್ನಲಾಗುತ್ತದೆ. ಈ ಪ್ರಯೋಗವು ಇತ್ತೀಚಿನದಾದ ಮೊದಲನೆಯ ಮಂಡಲದಲ್ಲಿ ಮಾತ್ರವಿದೆ. ಹಾಗೆಯೇ ಗಂಡನ ತಾಯಿಗಿರುವ ಶ್ವಶ್ರು ಮತ್ತು ಆತನ ತಂದೆಗಿರುವ ಶ್ವಶುರ ಶಬ್ದಗಳೆರಡೂ ಹತ್ತನೆಯ ಮಂಡಲದಲ್ಲಿ ಮಾತ್ರ ಇವೆ. ಮಗಳ ಗಂಡನನ್ನು ಸೂಚಿಸುವ ಜಾಮಾತಾ ಶಬ್ದವು ಮೊದಲ ಮತ್ತು ಎಂಟನೆಯ ಮಂಡಲಗಳಲ್ಲಿವೆ. ಈ ಯಾವ ಶಬ್ದಗಳೂ ಅತ್ಯಂತ ಹಳೆಯ, ಅಂದರೆ ಎರಡರಿಂದ ಏಳರ ವರೆಗಿನ ಮಂಡಲಗಳಲ್ಲಿ ಇಲ್ಲ.

ಅಣ್ಣ ತಂಗಿಯರ ನಡುವೆ ವಿವಾಹ ಸಂಬಂಧಗಳಿಗೆ ಮನ್ನಣೆಯಿದ್ದ ಕಾಲದಲ್ಲಿ ಮಾತುಲ, ಶ್ವಶುರ, ಶ್ವಶ್ರು, ಜಾಮಾತಾ ಮೊದಲಾದ ಪ್ರಯೋಗಗಳು ಅನಗತ್ಯ. ಋಗ್ವೇದದ ಕಾಲದಲ್ಲಿ ವೈದಿಕರಲ್ಲಿ ಇಂಥ ವಿವಾಹಗಳಿಗೆ ಮಾನ್ಯತೆ ಇತ್ತೆಂದು ತೋರುತ್ತದೆ. ಸೂಕ್ತವೊಂದರಲ್ಲಿ ಸೋದರರಿಲ್ಲದ ಹೆಣ್ಣೊಬ್ಬಳು ಇತರ ಗಂಡಸರ ಬೆನ್ನು ಹತ್ತುತ್ತಾಳೆ ಎಂದು ಹೇಳಲಾಗಿದೆ. ಅನೇಕ ಜನ ಸೋದರರಿಗೆ ಒಬ್ಬಳೇ ಹೆಂಡತಿ ಎನ್ನುವ ಬಹುಪತಿತ್ವ (ಫ್ರಟರ್ನಲ್ ಪಾಲಿಯಾಂಡ್ರಿ) ನೆಲೆಗೊಂಡಿದ್ದುದಕ್ಕೆ ಮಹಾಭಾರತದ ದ್ರೌಪದಿಯ ಕಥೆಯೇ ಉದಾಹರಣೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಋಗ್ವೇದದಲ್ಲಿ ಗೃಹಿಣಿಯೊಬ್ಬಳು ತನ್ನ ಹಲವು ಮನೆಗಳಲ್ಲಿ ಸಂಚರಿಸುವ ಉಲ್ಲೇಖವಿದೆ. ಇದೇ ಸಾಲುಗಳನ್ನು ಅಥರ್ವ ವೇದದಲ್ಲಿಯೂ ಕಾಣುತ್ತೇವೆ. ಇಲ್ಲಿ ಮನೆ ಎಂಬ ಏಕವಚನದ ಬದಲು ಮನೆಗಳು (ಗೃಹಾನ್) ಎಂಬ ಬಹುವಚನದ ಪ್ರಯೋಗ ನಡೆದಿರುವುದನ್ನು ಗಮನಿಸುವ ಸುವೀರಾ ಜಯಸ್ವಾಲ್ ಈ ಅನೇಕ ಮನೆಗಳು ಗೃಹಿಣಿಯ ಹಲವುಮಂದಿ ಗಂಡಂದಿರ ಮನೆಗಳಾದ್ದವು ಎಂದಿದ್ದಾರೆ. ಈಕೆ ಹಿರಿಯ ಮಗನ ಪತ್ನಿಯಾಗಿದ್ದು ಆತನ ಕಿರಿಯ ಸೋದರರಿಗೂ ಇವಳು ಲಭ್ಯವಿದ್ದಳೆಂದು ತೋರುತ್ತದೆ ಎಂದು ಜಯಸ್ವಾಲ್ ಹೇಳಿದ್ದಾರೆ. ಇದು ಬಹುಶಃ ವಾಸ್ತವವಿರಬಹುದು, ಬಹುಶಃ ವಾಸ್ತವವಲ್ಲದೆಯೂ ಇರಬಹುದು. ಆದರೆ ಇಷ್ಟು ಮಾತ್ರ ಸ್ಪಷ್ಟ. ಅಣ್ಣ ತಂಗಿಯರ ನಡುವಲ್ಲಿ ವಿವಾಹ ನಡೆವಾಗ ಅತ್ತೆ, ಮಾವ, ಅಳಿಯ ಮೊದಲಾದ ನಂಟುಗಳನ್ನು ಸೂಚಿಸಲು ಪ್ರತ್ಯೇಕ ಪದಗಳು ಅವಶ್ಯಕವಾಗಿರುವುದಿಲ್ಲ. ಆದ್ದರಿಂದಲೇ ಇರಬಹುದು, ಏಷ್ಯಾ ಮತ್ತು ಯೂರೋಪ್‌ನ ಇಂಡೋ ಯುರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ನುಡಿಗಟ್ಟುಗಳಲ್ಲಿ ತಂದೆ, ತಾಯಿ, ಅಣ್ಣ, ತಂಗಿ ಶಬ್ದಗಳು ಒಂದೇ ಮೂಲದ್ದಾಗಿವೆ, ಆದರೆ ಇತರ ನಂಟು ಸಂಬಂಧಗಳನ್ನು ಸೂಚಿಸುವ ಸಾಮಾನ್ಯ ಪ್ರಯೋಗಳಿಲ್ಲ. ಅಂಥ ಸಂಬಂಧಗಳು ಐತಿಹಾಸಿಕವಾಗಿ ರೂಪು ಪಡೆವ ಮುನ್ನವೇ ಈ ಭಾಷೆಗಳು ಪರಸ್ಪರ ಬೇರ್ಪಟ್ಟುದ್ದೇ ಇದಕ್ಕೆ ಕಾರಣ.

ಅಣ್ಣ ತಂಗಿಯರನ ನಡುವಿನ ವಿವಾಹ ಕುರಿತ ಸ್ಪಷ್ಟವಾದ ಪರಾಮರ್ಶೆಗಳನ್ನು ಬೌದ್ಧರ ಪಾಲಿ ಭಾಷೆಯ ತ್ರಿಪಿಟಕ ಗ್ರಂಥಗಳಲ್ಲಿ ಕಾಣಬಹುದು. ಋಗ್ವೇದದಲ್ಲಿ ವಿವಾಹದ ಬಗ್ಗೆ ಹೆಚ್ಚಿನ ಉಲ್ಲೇಖಗಳಿಲ್ಲ. ಹೀಗಾಗಿ ಅಣ್ಣ ತಂಗಿಯರ ನಡುವಿನ ವಿವಾಹವು ಎಷ್ಟು ವ್ಯಾಪಕವಾಗಿತ್ತೆಂದು ಹೇಳಲು ನಮ್ಮಲ್ಲಿ ಸಾಕಷ್ಟು ಆಧಾರಗಳಿಲ್ಲ. ಆದರೆ ಕ್ರಮೇಣ ಈ ಪದ್ಧತಿಯು ಮನ್ನಣೆ ಕಳೆದುಕೊಳ್ಳತೊಡಗಿತ್ತೆಂಬ ಸೂಚನೆ ಋಗ್ವೇದದಲ್ಲಿಯೇ ಇದೆ. ಹತ್ತನೆಯ ಮಂಡಲದಲ್ಲಿ ಯಮಿ ಎಂಬ ದೇವತೆ ತನ್ನ ಸೋದರನಾದ ಯಮನಲ್ಲಿ ಅನುರಕ್ತಳಾಗಿ ಆತನ ಮುಂದೆ ತಮ್ಮ ವಿವಾಹದ ಪ್ರಸ್ತಾಪವಿಕ್ಕುತ್ತಾಳೆ. ಯಮ ಇದಕ್ಕೆ ತನ್ನ ಅಸಮ್ಮತಿ ವ್ಯಕ್ತಪಡಿಸುತ್ತಾನೆ. ಏಕೆಂದರೆ ಸೋದರಿಯನ್ನು ವಿವಾಹವಾಗುವುದು ಪಾಪಕೃತ್ಯ. ಸೋದರ ಸೋದರಿಯರ ನಡುವಿನ ಸ್ವಚ್ಛಂದಭೋಗವು (ಪ್ರಾಮಿಸ್‌ಕ್ಯುವಿಟಿ) ಈ ಕಾಲಕ್ಕಾಗಲೇ ನಿಷಿದ್ಧವಾದ ಸಂಬಂಧವಾಗಿ (ಇನ್ಸೆಸ್ಟ್) ಮಾರ್ಪಾಟು ಹೊಂದತೊಡಗಿತ್ತು.

ಮನೆತನವೊಂದಕ್ಕೆ ಮಾತ್ರ ಸೀಮಿತವಾಗಿರದ, ಸಾರ್ವತ್ರಿಕ ಗುಣವುಳ್ಳ ಚಾತುರ್ವರ್ಣ್ಯದಂಥ ಪದ್ಧತಿಯನ್ನು ಜಾರಿಗೊಳಿಸಿದ ಕಾರ್ಷಿಕ ಹಾಗೂ ಭೂಮಾಲೀಕ ವ್ಯವಸ್ಥೆಯಲ್ಲಿ ನಂಟು ಸಂಬಂಧಗಳ ಸ್ವರೂಪದಲ್ಲಿ ಬದಲಾವಣೆಗಳು ಉಂಟಾಗುವುದು ಅನಿವಾರ್ಯವಾಗಿತ್ತು. ಏಕೆಂದರೆ ಈ ಸಾರ್ವತ್ರಿಕತೆಯಲ್ಲಿ ಕುಲ, ಬಣ, ವಂಶ ಇತ್ಯಾದಿಗಳಿಗಿಂತ ವರ್ಗಕ್ಕೆ ಪ್ರಾಮುಖ್ಯತೆಯಿತ್ತು. ಉತ್ಪಾದನೆ ಹಾಗೂ ಮರುವಿತರಣೆಯ ಮೇಲೆ ನಿಯಂತ್ರಣ ಹೊಂದಿದವರು ತಮ್ಮ ಸಂಪತ್ತಿನ ಬುನಾದಿಯನ್ನು ವಿಸ್ತರಿಸಿಕೊಳ್ಳಲು ಮನೆತವೊಂದಕ್ಕಷ್ಟೇ ಸೀಮಿತವಾದ ವಿವಾಹಸಂಬಂಧಗಳನ್ನು ಕೈಬಿಟ್ಟು ಇತರರೊಂದಿಗೆ ವರ್ಗರೂಪದ ಸಂಬಂಧಗಳನ್ನು ಕಟ್ಟಿಕೊಳ್ಳುವುದು ಇಲ್ಲಿ ಅನಿವಾರ್ಯವಾಗಿತ್ತು.

*

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-1

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...