ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

Date: 03-10-2020

Location: ಬೆಂಗಳೂರು


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಎಂಟನೇ ಕಂತಿನ ಬರಹ ಇಲ್ಲಿದೆ.


ಕಾರ್ಷಿಕ ವಿಸ್ತರಣೆಯಿಂದಾಗಿ ಅಪಾರ ಪ್ರಮಾಣದ ಹೆಚ್ಚುವರಿ ಧಾನ್ಯೋತ್ಪಾದನೆ ಸಾಧ್ಯವಾದ ಸಂದರ್ಭದಲ್ಲಿ ವರ್ಣವ್ಯವಸ್ಥೆ ಆವಿಷ್ಕಾರಗೊಂಡಿತು ಎಂಬುದನ್ನು ಈ ಹಿಂದಿನ ಚರ್ಚೆ ಸ್ಪಷ್ಟಪಡಿಸಿದೆ. ಋಗ್ವೇದೋತ್ತರ ವೈದಿಕ ಸಾಹಿತ್ಯದ ನೆರವಿನೊಂದಿಗೆ ರಾಜ್ಯ ಎಂಬ ವ್ಯವಸ್ಥೆಯ ಉಗಮದ ಕುರಿತಾಗಿಯೂ ಕೆಲವು ವಿಚಾರಗಳು ನಮ್ಮ ತಿಳಿವಿಗೆ ಬರುತ್ತವೆ. ಹೆಚ್ಚುವರಿ ಕೃಷಿಯ ಬುನಾದಿಯ ಮೇಲೆ ಉತ್ತರ ಭಾರತದಲ್ಲಿ ಕ್ರಿಪೂ ಎಂಟು ಹಾಗೂ ಏಳನೆಯ ಶತಮಾನಗಳಲ್ಲಿ ಅರಸುವಂಶಗಳು ತಲೆಯೆತ್ತಿದವು. ಈ ಬೆಳವಣಿಗೆಯು ಭೂಪ್ರದೇಶಗಳ ಮೇಲಿನ ನಿಯಂತ್ರಣ, ದಾಯಕ್ರಮ, ಉತ್ತರಾಧಿಕಾರ ಮೊದಲಾದ ಅನೇಕ ಸಂಕೀರ್ಣತೆಗಳನ್ನು ಹುಟ್ಟುಹಾಕಿದವು. ರಾಮಾಯಣ, ಮಹಾಭಾರತಗಳಲ್ಲಿ ಈ ಸಂಕೀರ್ಣತೆಗಳು ಕಥನರೂಪ ಪಡೆದುಕೊಂಡಿರುವ ಕ್ರಮವನ್ನು ಈಗಾಗಲೇ ನಡೆಸಿದ ವಿಶ್ಲೇಷಣೆಯಲ್ಲಿ ನೋಡಿದ್ದೇವೆ.

ಇವುಗಳ ಪರಿಣಾಮ ಸೈನಿಕ ಕಾರ್ಯಾಚರಣೆಗಳಲ್ಲಿ ಹೆಚ್ಚಳ ಉಂಟಾಯ್ತು. ತಮ್ಮ ನಿಯಂತ್ರಣದ ಭೂಪ್ರದೇಶಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಅರಸುಗಳಲ್ಲಿ ಅನೇಕರು ಅಶ್ವಮೇಧದಂತ ವಿಧಿವತ್ತಾದ ರೀತಿಯ ಸೈನಿಕ ಚಟುವಟಿಕೆಗಳನ್ನೂ ಕೈಗೊಂಡಿದ್ದರು. ಒಂದೆಡೆಯಲ್ಲಿ ಕೃಷಿ ವಿಸ್ತರಣೆ, ಅದರೊಂದಿಗೇ ಇನ್ನೊಂದೆಡೆಯಲ್ಲಿ ನೆಲವೆಂಬುದೊಂದು ಆರ್ಥಿಕ ಹಾಗೂ ರಾಜಕೀಯ ಸಂಪನ್ಮೂಲ ಎಂಬ ಪ್ರಜ್ಞೆ, ಇವೆರಡೂ ಸೇರಿ ಭೂಪ್ರದೇಶಗಳ ಮೇಲಿನ ರಾಜಕೀಯ ನಿಯಂತ್ರಣಕ್ಕೆ ಹೆಚ್ಚಿನ ಇಂಬು ನೀಡಿದವು. ಭೂನಿಯಂತ್ರಣವು ಈಗ ಮಹತ್ವದ ತತ್ವವಾಗಿ ರೂಪುಗೊಳ್ಳತೊಡಗಿತು. ಆರಂಭದ ಹಂತದಲ್ಲಿ ಇದು ಖಾಸಗಿ ಸ್ವತ್ತು ಎಂಬ ಸ್ವರೂಪ ಪಡೆದಿರಲಿಕ್ಕಿಲ್ಲ, ಬದಲಿಗೆ ಭೂವಲಯವೊಂದರ ಕಾರ್ಷಿಕ ಹೆಚ್ಚುವರಿಯ ಮೇಲಿನ ನಿಯಂತ್ರಣಕ್ಕೆ ಮಾತ್ರ ಸೀಮಿತವಾಗಿತ್ತೆಂದು ತೋರುತ್ತದೆ. ಕ್ರಿಪೂ ಆರನೆಯ ಶತಮಾನದ ವೇಳೆಗೆ ಖಾಸಗಿ ಭೂ ಹಿಡುವಳಿಗಳೂ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದವು.

ವರ್ಣವ್ಯವಸ್ಥೆಯ ಮಹತ್ವವನ್ನು ಅತ್ತ ಹಳೆಯ ಪಶುಪಾಲನೆಯ ಸಂದರ್ಭಕ್ಕೂ ಇತ್ತ ಉದಯೋನ್ಮುಖ ರಾಜ್ಯಗಳು, ಕಾರ್ಷಿಕ ಸಂಪತ್ತು ಹಾಗೂ ವಾರಸುದಾರಿಕೆಗೂ ನಡುವಿನ ಅಂತರದಲ್ಲಿ ನಿಲ್ಲಿಸಿ ನೋಡಬಹುದು. ನಾಲ್ಕು ವರ್ಣಗಳ ಪ್ರಪ್ರಥಮ ಉಲ್ಲೇಖಗಳಲ್ಲಿ ಏಕರೂಪತೆ ಇರಲಿಲ್ಲ ಎಂಬುದನ್ನು ಈ ಹಿಂದೆ ಗಮನಿಸಿದ್ದೇವೆ. ಬ್ರಾಹ್ಮಣರು ಹಾಗೂ ಕ್ಷತ್ರಿಯರು ಪರಸ್ಪರ ವಿರುದ್ಧ ಶ್ರೇಣಿಗಳನ್ನು ರಚಿಸಿಕೊಂಡಿದ್ದರು. ಕಾರ್ಷಿಕ ಹೆಚ್ಚುವರಿಯ ಸಂದರ್ಭದಲ್ಲಿ ಬ್ರಾಹ್ಮಣರಿಗೆ ಪೌರೋಹಿತ್ಯದಿಂದ ಒದಗಿ ಬಂದ ಮಹತ್ವದ ಮೇಲೆ ಹೊಸ ಆಳುವ ವರ್ಗದವರು ಸವಾಲನ್ನು ಎಸಗತೊಡಗಿದರು. ಅಂಥ ಹತ್ತಾರು ಉಲ್ಲೇಖಗಳು ಋಗ್ವೇದೋತ್ತರ ವೈದಿಕ ರಚನೆಗಳಲ್ಲಿ ಹಾಗೂ ಬೌದ್ಧರ ಆರಂಭದ ಗ್ರಂಥಗಳಲ್ಲಿ ನಮ್ಮನ್ನು ಇದಿರುಗೊಳ್ಳುತ್ತವೆ.

ಕ್ಷತ್ರಿಯನಾದ ಪಾಂಚಾಲಕುಲದ ರಾಜ ದ್ರುಪದನಿಗೂ ಬ್ರಾಹ್ಮಣನಾದ ದ್ರೋಣನಿಗೂ ಇದ್ದ ವೈರವು ಪ್ರಸಿದ್ಧವಾದದ್ದು. ಮಹಾಭಾರತ ಯುದ್ಧದಲ್ಲಿ ಹೇತುಪ್ರಾಯವಾಗಿ ಕೆಲಸ ಮಾಡಿದ ಅನೇಕ ಸಂಘರ್ಷಗಳಲ್ಲಿ ಇದೂ ಒಂದು. ಈ ಬ್ರಾಹ್ಮಣ-ಕ್ಷತ್ರಿಯ ಪೈಪೋಟಿಯ ಪೂರ್ವಸೂಚನೆಗಳನ್ನು ಋಗ್ವೇದದ ಕೊನೆಯ ಭಾಗಗಳಲ್ಲಿಯೇ ಕಾಣಬಹುದು. ಶಂತನುವಿಗೆ ದೇವಾಪಿ ಎಂಬ ಪುರೋಹಿತನಿದ್ದನೆಂದು ಋಗ್ವೇದದಲ್ಲಿ ಹೇಳಿರುವುದನ್ನು ಹಿಂದೊಮ್ಮೆ ಪ್ರಸ್ತಾಪಿಸಿದ್ದೇವೆ. ದೇವಾಪಿಯು ಶಂತನುವಿನ ಸೋದರನೆಂದು ಮುಂದಿನ ಕಾಲದ ಸೂತ್ರಗಳು ಹೇಳುವುದನ್ನು ಗಮನಿಸಿದರೆ ಈತ ಬ್ರಾಹ್ಮಣನಾಗಿರಲಿಲ್ಲ, ಕ್ಷತ್ರಿಯನಾಗಿದ್ದ ಎಂದು ಹೇಳಬೇಕಾಗುತ್ತದೆ. ಕ್ಷತ್ರಿಯನು ಇಲ್ಲಿ ಪುರೋಹಿತನಾಗಿದ್ದಾನೆ.

ಜನಮೇಜಯನಿಗೂ ಬ್ರಾಹ್ಮಣರಲ್ಲದ ಪುರೋಹಿತರಿದ್ದರು. ಬ್ರಾಹ್ಮಣರಾದ ಕಾಶ್ಯಪರನ್ನು ಅಲಕ್ಷಿಸಿ ಆತ ಬ್ರಾಹ್ಮಣರಲ್ಲದ ಭೂತವೀರರಿಗೆ ಯಜ್ಞವೊಂದನ್ನು ನಡೆಸುವ ಉಸ್ತುವಾರಿ ವಹಿಸಿಕೊಟ್ಟನು. ಕಾಶ್ಯಪರ ಗುಂಪಿಗೆ ಸೇರಿದ ಅಸಿತಮೃಗರು ಈ ಭೂತವೀರರನ್ನು ಹೊರಗಟ್ಟಿದರೆಂದು ಐತರೇಯ ಬ್ರಾಹ್ಮಣವು ತಿಳಿಸುತ್ತದೆ. ಜನಮೇಜಯನಿಗೂ ಬ್ರಾಹ್ಮಣರಿಗೂ ಇದ್ದ ವೈರದ ಕುರಿತು ಪುರಾಣಗಳಲ್ಲಿಯೂ ಅರ್ಥಶಾಸ್ತ್ರದಲ್ಲಿಯೂ ಬಂದಿರುವ ಉಲ್ಲೇಖಗಳಿಗೆ ಈ ಕಥೆ ಪ್ರೇರಣೆಯಾಗಿರಬಹುದು.

ಐತರೇಯ ಬ್ರಾಹ್ಮಣದಲ್ಲಿ ಈ ಪ್ರಸಂಗವನ್ನು ಸ್ಮರಿಸಿಕೊಳ್ಳುವ ಸಂದರ್ಭವೂ ಇದಕ್ಕೆ ಸಮನಾದದ್ದೇ ಆಗಿದೆ. ವಿಶ್ವಂತರ ಎಂಬ ಅರಸನು ಬ್ರಾಹ್ಮಣರಾದ ಶ್ವಾಪರ್ಣರು ತನ್ನ ಯಜ್ಞಗಳನ್ನು ನಡೆಸಕೂಡದೆಂಬ ನಿರ್ಣಯ ಕೈಗೊಳ್ಳುತ್ತಾನೆ. ಆಗ ಶ್ವಾಪರ್ಣರಲ್ಲಿ ಓರ್ವನಾದ ರಾಮ ಮಾರ್ಗವೇಯನು ಅದರ ವಿರುದ್ಧ ದಂಗೆಯೇಳುತ್ತಾನೆ. ಈ ಸಂದರ್ಭದಲ್ಲಿ ಜನಮೇಜಯನಿಗೂ ಕಾಶ್ಯಪರಿಗೂ ಇದ್ದ ಹಗೆಯನ್ನು ಸ್ಮರಿಸಿಕೊಳ್ಳಲಾಗಿದೆ.

ಐತರೇಯ ಬ್ರಾಹ್ಮಣದ ಪುರಾವೆಗಳನ್ನು ಆಧರಿಸಿ ಅರಸರು ವೈಶ್ಯರನ್ನು ಹಾಗೂ ಶೂದ್ರರನ್ನಷ್ಟೇ ಅಲ್ಲ, ಬ್ರಾಹ್ಮಣರನ್ನೂ ತಮ್ಮ ನಿಯಂತ್ರಣಕ್ಕೆ ತಂದುಕೊಳ್ಳಲು ಯತ್ನಿಸಿದ್ದರೆಂದು ರಾಮ್ ಶರಣ್ ಶರ್ಮರು ಹೇಳುತ್ತಾರೆ. ಬ್ರಾಹ್ಮಣರ ಹಾಗೂ ಕ್ಷತ್ರಿಯರ ನಡುವೆ ದೀರ್ಘವಾದ ಸಂಘರ್ಷವೊಂದು ನಡೆದಿತ್ತೆಂದು ಶರ್ಮರ ಅಧ್ಯಯನವು ಸೂಚಿಸುತ್ತದೆ.

ಶರ್ಮರು ಪತ್ತೆಹಚ್ಚಿದ ಈ ಸಂಘರ್ಷದ ಕುರಿತು ಮುಂದಿನ ದಶಕಗಳಲ್ಲಿ ಇತಿಹಾಸಕಾರರು ಹೆಚ್ಚಿನ ಗಮನ ವಹಿಸದ ಕಾರಣ ಈ ವಿಚಾರವು ಇಲ್ಲಿಯ ವರೆಗೆ ಗಂಭೀರವಾದ ಅಧ್ಯಯನಗಳಿಗೆ ಗುರಿಯಾಗಿಲ್ಲ. ಇತ್ತೀಚೆಗೆ ಕೇಶವನ್ ವೆಳುತ್ತಾಟ್ ಅವರು ಕೈಗೊಂಡ ಸಮೀಕ್ಷೆಯೊಂದರಲ್ಲಿ ಶರ್ಮರ ನಿಲುವನ್ನು ಸಮರ್ಥಿಸುವ ಅನೇಕ ಪುರಾವೆಗಳು ಬೆಳಕಿಗೆ ಬಂದಿವೆ. ಉಪನಿಷತ್ತುಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಸಿದ ಸಮೀಕ್ಷೆಯಿದು. ಉಪನಿಷತ್ತುಗಳು ಕ್ಷತ್ರಿಯರು ಬೆಂಬಲಿಸಿದ ಹೊಸ ಜ್ಞಾನರೂಪಗಳನ್ನು ಹೊಂದಿದ್ದವೆಂದು ವೆಳುತ್ತಾಟ್ ತೋರಿಸಿಕೊಟ್ಟಿದ್ದಾರೆ. ಉಪನಿಷತ್ತುಗಳು ರಚಿತವಾದ ಕಾಲಕ್ಕೆ ಅಲ್ಲಿ ಒತ್ತು ನೀಡಲಾದ ಅನೇಕ ತತ್ವಗಳು ಬ್ರಾಹ್ಮಣರಿಗಿಂತ ಕ್ಷತ್ರಿಯರಲ್ಲಿ ಮನ್ನಣೆ ಪಡೆದುಕೊಂಡಿತ್ತು. ಆತ್ಮನ್ ಎಂಬುದೊಂದೇ ಪರಮವಾದ ಸತ್ಯ ಎಂಬುದು ಅಂಥ ತತ್ವಗಳಲ್ಲಿ ಒಂದು. ವೇದಗಳ ಕರ್ಮಕಾಂಡದ ವಕ್ತಾರರಾಗಿದ್ದ ಬ್ರಾಹ್ಮಣರಿಗೆ ಯಜ್ಞಯಾಗಾದಿಗಳನ್ನು ಪದೆಪದೆ ಖಂಡಿಸುವ ಉಪನಿಷತ್ತುಗಳು ತೀವ್ರ ಗೊಂದಲಗಳನ್ನು ಉಂಟುಮಾಡಿದವು. ಆ ವೇಳೆಗಾಗಲೇ ಬ್ರಾಹ್ಮಣರು ಸಂಹಿತೆಗಳ ವಾರಸುದಾರಿಕೆಯನ್ನು ಹೊತ್ತುಕೊಂಡಿದ್ದರು. ಸಂಹಿತೆಗಳಲ್ಲಿ ಅಡಕವಾಗಿರುವ ಅರಿವು ಅಸಮರ್ಪಕ ಎಂಬ ಧೋರಣೆಯು ಉಪನಿಷತ್ತುಗಳಲ್ಲಿ ಆಗಾಗ ಕಾಣಿಸಿಕೊಂಡದ್ದು ಬ್ರಾಹ್ಮಣರಿಗೆ ಸವಾಲಾಯ್ತು.

ವೆಳುತ್ತಾಟ್ ಅವರು ಉದಾಹರಣೆಗಳನ್ನು ಸಂಕ್ಷಿಪ್ತವಾಗಿ ಮಾತ್ರ ನೀಡಿದ್ದಾರೆ. ಅವುಗಳನ್ನು ಆಳವಾದ ಪರಿಶೀಲನೆಗೆ ಒಡ್ಡಿದಾಗ ಇನ್ನಷ್ಟು ಸಮರ್ಪಕವಾದ ಚಿತ್ರವು ಮೂಡಿಬರತೊಡಗುತ್ತದೆ. ಅಂಥ ಉದಾಹರಣೆಗಳಲ್ಲಿ ಒಂದು ಛಾಂದೋಗ್ಯ ಉಪನಿಷತ್ತಿನಲ್ಲಿದೆ. ಉಪಮನ್ಯುವಿನ ಮಗ ಪ್ರಾಚೀನಶೀಲ, ಪುಲುಷನ ಮಗ ಸತ್ಯಯಜ್ಞ, ಭಾಲ್ಲವಿಯ ಮಗ ಇಂದ್ರದ್ಯುಮ್ನ, ಶರ್ಕರಕ್ಷನ ಮಗ ಜನ, ಅಶ್ವತರಾಶ್ವನ ಮಗ ಬುಡಿಲ, ಈ ಐದು ಜನ ಬ್ರಾಹ್ಮಣರು ಮಹಾಶಾಲೆಗಳನ್ನು ಹೊಂದಿದವರು. ಹಾಗೆಯೇ ಮಹಾಶ್ರೋತ್ರೀಯರು ಕೂಡ. ಇವರು ನಮ್ಮ ಆತ್ಮಗಳೆಂಬುವು ಯಾವುವು, ಬ್ರಹ್ಮ ಎಂದರೇನು, ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಾರೆ. ಪ್ರಸ್ತುತ ಅವರು ಬ್ರಾಹ್ಮಣನಾದ ಉದ್ದಾಲಕ ಆರುಣಿಯ ಬಳಿ ಬಂದು ತಮ್ಮ ಸಂಶಯವನ್ನು ಆತನ ಮುಂದಿಡುತ್ತಾರೆ. ಆದರೆ ಅವರ ಪ್ರಶ್ನೆಗಳಿಗೆ ತಾನು ಸಮರ್ಪಕವಾದ ಉತ್ತರ ನೀಡಲು ಯೋಗ್ಯನಲ್ಲವೆಂದು ಉದ್ದಾಲಕನಿಗೆ ತೋರುತ್ತದೆ. ಹೀಗಾಗಿ ಆತ ಅವರಿಗೆ ಕೇಕಯನ ಮಗನಾದ ಅಶ್ವಪತಿ ಎಂಬ ಕ್ಷತ್ರಿಯನನ್ನು ಕಾಣಲು ಹೇಳುತ್ತಾನೆ. ತಾನೂ ಅವರೊಂದಿಗೆ ಹೋಗುತ್ತಾನೆ. ಅಶ್ವಪತಿಯು ಪ್ರತಿಯೊಬ್ಬರನ್ನೂ ಪ್ರಶ್ನಿಸಿ ಅವರ ಸಂಶಯವನ್ನು ನೀಗಿಸುತ್ತಾನೆ. ಜೊತೆಯಲ್ಲಿ ಉದ್ದಾಲಕನಿಗೂ ಪಾಠ ಹೇಳುತ್ತಾನೆ. ಅಶ್ವಪತಿಯ ಮಾತುಗಳಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಆತ್ಮ ಮತ್ತು ಬ್ರಹ್ಮಗಳು ಅವುಗಳ ಉಪಾಸನೆಯಲ್ಲಿ ತೊಡಗಿದ ವ್ಯಕ್ತಿಗಳಿಗಷ್ಟೇ ಸೀಮಿತವಲ್ಲ, ಅವರ ಕುಲದಲ್ಲಿ ಎಲ್ಲ ತಲೆಮಾರುಗಳೂ ಇದರ ಲಾಭವನ್ನು ಪಡೆದುಕೊಳ್ಳುತ್ತವೆ.

ಈ ಕಥೆಯಲ್ಲಿ ಆಧ್ಯಾತ್ಮಿಕ ಸಿದ್ಧಿಗೆ ಆನುವಂಶಿಕತೆಯನ್ನು ಆರೋಪಿಸುವ ಯತ್ನ ನಡೆದಿದೆ. ಅದೇ ವೇಳೆಗೆ ಆರು ಮಂದಿ ಬ್ರಾಹ್ಮಣರು ಓರ್ವ ಕ್ಷತ್ರಿಯನಿಂದ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಕ್ಷತ್ರಿಯನಾದ ಅಜಾತಶತ್ರುವಿನ ವೃತ್ತಾಂತವೊಂದು ಬೃಹದಾರಣ್ಯಕ ಉಪನಿಷತ್ತಿನಲ್ಲಿದೆ. ಇದು ಬ್ರಾಹ್ಮಣ ಹಾಗೂ ಕ್ಷತ್ರಿಯರ ನಡುವಿನ ಸಂಘರ್ಷವನ್ನು ಹೆಚ್ಚು ಸಮರ್ಪಕವಾಗಿ ನಿರೂಪಿಸುತ್ತದೆ. ಇಲ್ಲಿ ಗಾರ್ಗ್ಯ ಬಾಲಾಕಿ ಎಂಬಾತ ಕಾಶಿಯ ಅರಸನಾದ ಅಜಾತಶತ್ರುವಿಗೆ ಬ್ರಹ್ಮಜ್ಞಾನವನ್ನು ನೀಡಲು ಬಂದಿದ್ದಾನೆ. ಆದಿತ್ಯ ಪುರುಷ, ಚಂದ್ರ ಪುರುಷ, ವಿದ್ಯುತಿ ಪುರುಷ ಮುಂತಾದ ಹನ್ನೆರಡು ಬಗೆಯ ಬ್ರಹ್ಮಗಳ ಕುರಿತು ಆತ ಪ್ರಸ್ತಾಪಿಸುತ್ತಾನೆ. ಅಜಾತಶತ್ರು ಇವು ಬ್ರಹ್ಮವಲ್ಲವೆಂದು ಸಮರ್ಪಕವಾಗಿ ನಿರೂಪಿಸಿದಾಗ ಗಾರ್ಗ್ಯನು ಸೋಲನ್ನೊಪ್ಪಿಕೊಂಡು ಅಜಾತಶತ್ರುವಿಗೆ ಶರಣಾಗಿ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕೆಂದು ಕೋರಿಕೊಳ್ಳುತ್ತಾನೆ. ಅದರಂತೆ ಅಜಾತಶತ್ರು ಗಾರ್ಗ್ಯನಿಗೆ ಬ್ರಹ್ಮಜ್ಞಾನದ ಉಪದೇಶ ನೀಡುತ್ತಾನೆ. ಆದರೆ ಅದಕ್ಕಿಂತ ಮೊದಲು ಆತ ಹೇಳುವ ಮಾತೊಂದಿದೆ: ಬ್ರಾಹ್ಮಣನು ಹೀಗೆ ಕ್ಷತ್ರಿಯನಿಗೆ ಶರಣಾಗುವುದು ಪ್ರತಿಲೋಮವಾದ್ದು, ಅಂದರೆ ರೂಢಿಗೆ ವಿರುದ್ಧವಾದದ್ದು.

ಬ್ರಾಹ್ಮಣರ ಅರಿವು ಅಸಮರ್ಪಕವಾದ್ದರಿಂದ ಅವರಿಗೆ ಕ್ಷತ್ರಿಯರು ಬೋಧನೆ ನೀಡುವ ಮತ್ತೊಂದು ಪ್ರಸಂಗ ಛಾಂದೋಗ್ಯ ಉಪನಿಷತ್ತಿನಲ್ಲಿದೆ. ಶಿಲಕ ಶಾಲಾವತ್ಯ ಮತ್ತು ಚೈಕಿತಾಯನ ದಾಲ್ಭ್ಯ, ಈ ಬ್ರಾಹ್ಮಣರಿಬ್ಬರು ಲೋಕದ ಗತಿ ಯಾವುದೆಂಬ ಚರ್ಚೆಯಲ್ಲಿದ್ದಾರೆ. ಪ್ರವಾಹಣ ಜೈವಲಿಯು ಅವರಿಗೆ ಸಾಕ್ಷಿಯಾಗಿದ್ದಾನೆ. ಶಿಲಕ ಹಾಗೂ ಚೈಕಿತಾಯನರ ವಾದಗಳು ಅಸಮರ್ಪಕವಾಗಲು ಆಕಾಶತತ್ವವೇ ಲೋಕದ ಗತಿ ಎಂಬ ವಿಚಾರವನ್ನು ಪ್ರವಾಹಣನು ಅವರಿಗೆ ಬೋಧಿಸುತ್ತಾನೆ.

ಪ್ರವಾಹಣನು ಅರುಣನ ಮೊಮ್ಮಗನಾದ ಶ್ವೇತಕೇತುವಿಗೆ ಬೋಧನೆ ನೀಡುವ ಪ್ರಸಂಗವು ಛಾಂದೋಗ್ಯ ಉಪನಿಷತ್ತಿನಲ್ಲಿದೆ. ಬ್ರಾಹ್ಮಣರ ಮತ್ತು ಕ್ಷತ್ರಿಯರ ನಡುವೆ ಅಂದು ತಲೆದೋರಿದ್ದ ಸಂಘರ್ಷಕ್ಕೆ ಈ ಪ್ರಸಂಗವು ಕನ್ನಡಿ ಹಿಡಿದಂತಿದೆ.

ಆರುಣೇಯನಾದ ಶ್ವೇತಕೇತುವು ಪಾಂಚಾಲರ ಸಮಿತಿಗೆ ಬಂದು ನಿಲ್ಲುತ್ತಾನೆ. ಜೀವಲನ ಮಗ ಪ್ರವಾಹಣನಿಗೂ ಅವನಿಗೂ ಸಂವಾದ ನಡೆಯುತ್ತದೆ.
ಕುಮಾರಾ, ನಿನಗೆ ನಿನ್ನ ತಂದೆ ಶಿಕ್ಷಣ ನೀಡಿದರೇ?, ಪ್ರವಾಹಣ ಕೇಳುತ್ತಾನೆ.
ನೀಡಿದರು ಭಗವನ್.
ಪ್ರಜೆಗಳು ಇಲ್ಲಿಂದ ಎಲ್ಲಿಗೆ ಹೋಗುತ್ತಾರೆ ಗೊತ್ತೇ?
ಇಲ್ಲ ಭಗವನ್.
ಮತ್ತೆ ಹೇಗೆ ಮರಳಿಬರುತ್ತಾರೆ ಗೊತ್ತೇ?
ಇಲ್ಲ ಭಗವನ್.
ದೇವಯಾನದ ಹಾಗೂ ಪಿತೃಯಾನದ ಪಥಗಳು ಎಲ್ಲಿ ಬೇರ್ಪಡುತ್ತವೆ ಗೊತ್ತೇ?
ಇಲ್ಲ ಭಗವನ್.
ಲೋಕವು ಪೂರ್ಣವಾಗದೆ ಉಳಿವುದು ಹೇಗೆ ಗೊತ್ತೇ?
ಇಲ್ಲ ಭಗವನ್.
ಐದನೆಯ ಆಹುತಿಯ ಬಳಿಕ ಜಲವು ಪುರುಷ ಅನ್ನಿಸಿಕೊಳ್ಳುವುದೇಕೆ ಗೊತ್ತೇ?
ಇಲ್ಲ ಭಗವನ್.
ಇವು ಯಾವುವೂ ಗೊತ್ತಿಲ್ಲ ಅಂದ ಮೇಲೆ ಶಿಕ್ಷಣ ಪಡೆದಿದ್ದೇನೆ ಎಂದು ಯಾಕೆ ಹೇಳಿದೆ? ಇವು ಒಂದೂ ಗೊತ್ತಿಲ್ಲದವನು ಶಿಕ್ಷಿತನೆಂದು ಹೇಳಿಕೊಳ್ಳುವುದು ಹೇಗೆ?
ಇದರಿಂದ ಬೇಸರಗೊಂಡು ಮರಳಿದ ಶ್ವೇತಕೇತುವು ತನ್ನ ತಂದೆ ಗೌತಮನಿಗೆ ಹೇಳುತ್ತಾನೆ, ಭಗವನ್, ನನಗೆ ಶಿಕ್ಷಣ ನೀಡದೆಯೇ ನೀಡಿದೆನೆಂದು ಹೇಳಿದಿರಿ. ರಾಜನ್ಯನಾದ ಪ್ರವಾಹಣನು ನನಗೆ ಐದು ಪ್ರಶ್ನೆಗಳನ್ನು ಹಾಕಿದ. ಒಂದಕ್ಕೂ ಉತ್ತರ ಹೇಳಲು ನನ್ನಿಂದಾಗಲಿಲ್ಲ. ಮಗನ ಈ ಮಾತಿಗೆ ತಂದೆ ಹೇಳುತ್ತಾನೆ, ಈ ಪ್ರಶ್ನೆಗಳಿಗೆ ನನ್ನಲ್ಲೇ ಉತ್ತರವಿಲ್ಲದಿರಲು ನಿನಗೆ ಹೇಗೆ ತಿಳಿಹೇಳಲಿ?
ಈಗ ಗೌತಮನು ಪ್ರವಾಹಣನನ್ನು ಕಾಣಲು ಹೋಗುತ್ತಾನೆ. ಪ್ರವಾಹಣನು ಗೌತಮನಿಗೆ ಮಾನವ ಸಂಪತ್ತನ್ನು (ಮಾನುಷಂ ವಿತ್ತಂ) ಕೇಳಿರಿ, ನೀಡುತ್ತೇನೆ ಎಂದಾಗ ಗೌತಮ ಖಿನ್ನನಾಗಿ ಹೇಳುತ್ತಾನೆ, ಆ ಸಂಪತ್ತು ನಿಮ್ಮಲ್ಲಿಯೇ ಇರಲಿ, ನನ್ನ ಮಗನಿಗೆ ಹೇಳಿದ್ದನ್ನು ನನಗೆ ತಿಳಿಸಿ. ಅದಕ್ಕೆ ಪ್ರವಾಹಣನು ಗೌತಮನಿಗೆ ಬೋಧನೆ ನೀಡುತ್ತಾನೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಅಜಾತಶತ್ರು ಮಾಡುವಂತೆ ಬೋಧನೆ ಆರಂಭಿಸುವ ಮುನ್ನ ಗೌತಮನಿಗೆ ಆತ ಈ ಮಾತುಗಳನ್ನು ಹೇಳುತ್ತಾನೆ: ನೀನು ಯಾವುದನ್ನು ಹೇಳು ಎಂದಿದ್ದೀಯೋ ಆ ವಿದ್ಯೆಯನ್ನು ಬ್ರಾಹ್ಮಣರು ಹಿಂದೆಂದೂ ಪಡೆದಿರಲಿಲ್ಲ. ಆದ್ದರಿಂದಲೇ ಎಲ್ಲ ಲೋಕಗಳಲ್ಲೂ ಕ್ಷತ್ರಿಯರದೇ ಆಳ್ವಿಕೆ ನಡೆದಿರುವುದು.

ಉಪನಿಷತ್ತುಗಳು ವೇದಗಳ ಯಜ್ಞಕೇಂದ್ರಿತ ಕರ್ಮಕಾಂಡವನ್ನು ಅನೇಕ ಸಂದರ್ಭಗಳಲ್ಲಿ ಸಮರ್ಥಿಸುತ್ತವೆ. ಇದು ಉಪನಿಷತ್ತುಗಳು ಒಂದೇ ಮೂಲದಿಂದ ಬಂದವುಗಳಲ್ಲ ಎಂಬುದನ್ನು ಸೂಚಿಸುತ್ತಿದೆ. ಹಾಗೆಯೇ ಅಲ್ಲಿನ ವಿಚಾರಗಳ ವೈವಿಧ್ಯತೆಯ ಕಡೆಗೂ ಬೆರಳೊಡ್ಡುತ್ತಿದೆ. ಕರ್ಮಕಾಂಡದ ಖಂಡನೆ ನಡೆದಿರುವಾಗಲೂ ಅದು ಬೌದ್ಧರ ತ್ರಿಪೀಟಕದಲ್ಲಿ ನಡೆದಿರುವಷ್ಟು ತೀವ್ರವಲ್ಲ ಎನ್ನುತ್ತಾರೆ ವೆಳುತ್ತಾಟ್. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಒಂದೆಡೆಯಲ್ಲಿ ಯಜ್ಞವನ್ನು ಪಶವ, ಅಂದರೆ ಪಶುಗಳ ವರ್ಗಕ್ಕೆ ಸೇರಿದ್ದು, ಎನ್ನಲಾಗಿದೆ. ಅದೇ ವೇಳೆಗೆ ಮೇಲೆ ಉಲ್ಲೇಖಿಸಿದ ಅಶ್ವಪತಿಯ ಪ್ರಸಂಗದಲ್ಲಿ ಯಜ್ಞವನ್ನು ಎತ್ತಿ ಹಿಡಿದಿರುವುದನ್ನೂ ಕಾಣುತ್ತೇವೆ. ರಾಜಸೂಯ, ಅಶ್ವಮೇಧ ಮೊದಲಾದ ಯಜ್ಞಗಳ ಮೂಲಕವೇ ಪ್ರಭುತ್ವವು ಅಭಿವ್ಯಕ್ತಿ ಹೊಂದುತ್ತಿದ್ದ ದಿನಗಳಲ್ಲಿ ಬಹುಶಃ ಯಜ್ಞಗಳನ್ನು ನಿರಾಕರಿಸುವುದು ಪ್ರಾಯೋಗಿಕವಲ್ಲ ಎಂದು ಅಂದಿನ ಕೆಲವಾದರೂ ಕ್ಷತ್ರಿಯ ಮನೆತನಗಳಿಗೆ ತೋರಿರಬಹುದು. ಮೇಲಾಗಿ, ನಂದಾದೀಪದಂತೆ ಬೆಂಕಿಯನ್ನು ಕಾಪಿಡುವ ತಂತ್ರವು ಇನ್ನೂ ಜಾರಿಗೆ ಬಂದಿರದ ಈ ಕಾಲದಲ್ಲಿ ಅರಣಿ ಮಂಥನದ ಮೂಲಕ ಹೊತ್ತಿಸಿದ ಬೆಂಕಿಯನ್ನು ಆರಿಹೋಗದಂತೆ ನೋಡಿಕೊಳ್ಳಲು ಕೆಲವಾದರೂ ಯಜ್ಞರೂಪದ ಆಚರಣೆಗಳು ಅಗತ್ಯವಾಗಿದ್ದಿರಬಹುದು. ಹೀಗಾಗಿ ಯಜ್ಞಗಳನ್ನು ಕೆಲವೊಮ್ಮೆಯಾದರೂ ಖಂಡಿಸಿದ ಉಪನಿಷತ್ತುಗಳು ಅವುಗಳ ಸಂಪೂರ್ಣ ನಿರಾಕರಣೆಗೆ ಮುಂದಾಗಲಿಲ್ಲ. ಅತ್ತ ಯಜ್ಞಗಳನ್ನು ಕೈಗೊಳ್ಳಲು ಬ್ರಾಹ್ಮಣರೇ ಬೇಕು ಎಂಬ ಧೋರಣೆಯನ್ನೂ ಜನಮೇಜಯ, ವಿಶ್ವಂತರ ಮುಂತಾದ ಅರಸುಗಳು ಅಲ್ಲಗಳೆದಿದ್ದರು.

ಬ್ರಾಹ್ಮಣ ಹಾಗೂ ಕ್ಷತ್ರಿಯರ ನಡುವಿನ ಈ ಐತಿಹಾಸಿಕ ಸಂಘರ್ಷದ ಪರಿಣಾಮಗಳು ಕ್ರಿ.ಪೂ. ಆರನೆಯ ಶತಮಾನದಿಂದ ಮುಂದೆ ಸುಮಾರು ನಾಲ್ಕು ಶತಮಾನಗಳ ಅವಧಿಯಲ್ಲಿ ಉತ್ತರ ಭಾರತದಲ್ಲಿ ಅನಾವರಣಗೊಂಡುದ್ದನ್ನು ಕಾಣುತ್ತೇವೆ. ಈ ಶತಮಾನಗಳಲ್ಲಿ ಬ್ರಾಹ್ಮಣರ ಜನಜೀವನದ ಆದರ್ಶಗಳು ಧರ್ಮಸೂತ್ರಗಳನ್ನು ಆಧರಿಸಿದ್ದವು. ಬೌಧಾಯನ ಧರ್ಮಸೂತ್ರ, ಆಪಸ್ತಂಬ ಧರ್ಮಸೂತ್ರ, ವಸಿಷ್ಠ ಧರ್ಮಸೂತ್ರ, ಗೌತಮ ಧರ್ಮಸೂತ್ರ ಮೊದಲಾದವು ಈ ಸಾಲಿಗೆ ಸೇರಿದ ಗ್ರಂಥಗಳು. ಧರ್ಮಸೂತ್ರಗಳಲ್ಲಿ ರಾಜತ್ವ ಅಥವಾ ರಾಜ್ಯಕೇಂದ್ರಿತ ಪ್ರಭುತ್ವಕ್ಕೆ ಅಷ್ಟೇನೂ ಮನ್ನಣೆ ಇರಲಿಲ್ಲ. ವರ್ಣಧರ್ಮಕ್ಕೆ ರಾಜ್ಯಪ್ರಭುತ್ವ ಬಾಹಿರವಾದ ಸ್ವತಂತ್ರ ಅಸ್ತಿತ್ವವೊಂದನ್ನು ಕಲ್ಪಿಸಿಕೊಡಲು ಈ ಕೃತಿಗಳು ಮುಂದಾದವು. ರಾಜಧರ್ಮವನ್ನು ಧರ್ಮಸೂತ್ರಗಳು ನಿರಾಕರಿಸಲಿಲ್ಲ. ಆದರೆ ಅದನ್ನು ಮಾನವ ಜೀವನದ ಅತ್ಯಗತ್ಯ ಮೂಲ್ಯಗಳಲ್ಲಿ ಒಂದೆಂದು ಒಪ್ಪಿಕೊಳ್ಳುವುದಕ್ಕೂ ಮುಂದಾಗಲಿಲ್ಲ.
ಇತ್ತ ಕ್ರಿ.ಪೂ. ಆರನೆಯ ಶತಮಾನದಲ್ಲಿ ಪ್ರಾಮುಖ್ಯತೆ ಹೊಂದತೊಡಗಿದ ಹಲವು ಮಹಾಜನಪದಗಳು ವೈದಿಕರ ಕರ್ಮಕಾಂಡದಿಂದ ದೂರವೇ ಉಳಿದವು. ಮಗಧ, ಕೋಸಲ, ಅವಂತಿ, ವತ್ಸ, ವೃಜ್ಜಿ ಮುಂತಾದ ಮಹಾಜನಪದಗಳಲ್ಲಿ ರಾಜತ್ವದ ಅಭಿವ್ಯಕ್ತಿಯು ರಾಜಸೂಯ, ವಾಜಪೇಯ, ಅಶ್ವಮೇಧಗಳಂತಾ ಯಜ್ಞಗಳನ್ನು ಅವಲಂಬಿಸಿರಲಿಲ್ಲ. ಅಲ್ಲಿ ಬೆಂಕಿಯನ್ನು ಕಾಪಿಡಲು ಅಗತ್ಯವಾದ ಸಣ್ಣ ಪ್ರಮಾಣದ ಯಜ್ಞಗಳು ನಡೆದಿರುವ ಸಾಧ್ಯತೆಯಿದೆ. ಇದಲ್ಲದೆ ಬೇರಾವುದೇ ವೈದಿಕ ಆಚರಣೆಗಳಿಗೆ ಈ ಪ್ರಭುತ್ವಗಳು ಪೋಷಣೆ ನೀಡಿದ್ದುದಾಗಿ ಆಕರಗಳು ಸೂಚಿಸುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಕಾಶಿಯ ರಾಜನೋರ್ವನು ಅಶ್ವಮೇಧ ನಡೆಸಲು ಹೊರಟಾಗ ಶತಾನೀಕ ಸಾತ್ರಾಜಿತನು ಹಲ್ಲೆನಡೆಸಿ ಅವನನ್ನು ಸೋಲಿಸಿದನೆಂದು ಹೇಳಲಾಗಿದೆ. ಇದಾದ ನಂತರ ಕಾಶಿಯ ಜನರು ಅಗ್ನಿಯ ಉಪಾಸನೆಯನ್ನು ನಿಲ್ಲಿಸಿಯೇ ಬಿಟ್ಟರೆಂದು ಶತಪಥ ಬ್ರಾಹ್ಮಣ ಹೇಳುತ್ತದೆ. ವೈದಿಕ ಕರ್ಮಕಾಂಡಕ್ಕೆ ರಾಜಾಶ್ರಯ ದೊರಕದ ಈ ಅವಸ್ಥೆ ನಂದ ಹಾಗೂ ಮೌರ್ಯವಂಶಗಳ ಆಳ್ವಿಕೆಯ ಕಾಲದಲ್ಲಿಯೂ ಹಾಗೆಯೇ ಮುಂದುವರೆಯಿತು.

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-7

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-1

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...