ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

Date: 10-10-2020

Location: .


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಒಂಬತ್ತನೇ ಕಂತಿನ ಬರಹ ಇಲ್ಲಿದೆ.

ವರ್ಣವ್ಯವಸ್ಥೆಯು ಪ್ರಪ್ರಥಮ ಬಾರಿಗೆ ಕುರು ಹಾಗೂ ಪಾಂಚಾಲ ಜನಪದಗಳಲ್ಲಿ ಚಲಾವಣೆಗೆ ಬಂದು ಮನ್ನಣೆ ಪಡೆದಿರುವ ಸಾಧ್ಯತೆಯಿದೆ. ಕ್ರಿ. ಪೂ. ಆರನೆಯ ಶತಮಾನದ ವೇಳೆಗೆ ಅದು ಗಂಗಾ ಕಣಿವೆಯ ಮಧ್ಯ ಭಾಗಗಳಲ್ಲಿ ಪ್ರಚಾರ ಪಡೆದುಕೊಂಡಿತ್ತು. ಉತ್ತರ ಪ್ರದೇಶದ ಅಲಾಹಾಬಾದ್ ಸುತ್ತಮುತ್ತಲ ಸೀಮೆಯಿಂದ ಬಿಹಾರದ ಭಗಲ್‍ಪುರ್ ವರೆಗಿನ ಪ್ರದೇಶ ಇದಾಗಿದೆ. ಇಲ್ಲಿಂದ ದೊರಕುವ ಕೃತಿಗಳಲ್ಲಿ ನಾಲ್ಕು ವರ್ಣಗಳ ಕುರಿತಾಗಿ ಹೇರಳವಾದ ಮಾಹಿತಿಯಿದೆ.

ಇಲ್ಲಿನ ನೆಲೆಗಳಿಗೆ ವಲಸಿಗರಾದ ವೈದಿಕರು ವರ್ಣವ್ಯವಸ್ಥೆಯನ್ನು ತಂದರೆಂದು ಇತಿಹಾಸಕಾರರು ನಂಬಿದ್ದಾರೆ. ಶತಪಥ ಬ್ರಾಹ್ಮಣದಲ್ಲಿ ವಿದೇಘ ಮಾಥವ ಎಂಬಾತನು ಸರಸ್ವತಿ ನದಿಯ ದಂಡೆಯಿಂದ ಸದಾನೀರಾ (ಗಂಡಕ್) ನದಿಯ ದಂಡೆವರೆಗೆ ಪ್ರಯಾಣ ಬೆಳೆಸಿದ ಕತೆಯಿದೆ. ಅಗ್ನಿ ವೈಶ್ವಾನರನು ತನ್ನ ಜ್ವಾಲೆಯನ್ನು ಚೆಲ್ಲುತ್ತ ಮುಂದೆ ಸಾಗಿದ, ಅವನ ಬೆನ್ನಿಗೆ ವಿದೇಘ ಮಾಥವ ನಡೆದ, ಸದಾನೀರಾ ತಲುಪಿದಾಗ ಅಗ್ನಿ ವೈಶ್ವಾನರನ ಪಯಣ ಮುಗಿಯಿತು. ಈ ಕಥೆಯನ್ನು ವೈದಿಕರ ವಲಸೆಗೆ ರೂಪಕಪ್ರಾಯವಾಗಿ ಗುರುತಿಸಲಾಗಿದೆ.

ಸದಾನೀರಾದಿಂದ ಪೂರ್ವಕ್ಕೆ ಹೊರಟಾಗ ಕಾಣುವು ನೆಲವು ಹಿಂದೆ ಕೃಷಿಗೆ ಯೋಗ್ಯವಾಗಿರಲಿಲ್ಲ, ಅಲ್ಲಿ ಬ್ರಾಹ್ಮಣರು ವಸತಿಗಳೂ ಇರಲಿಲ್ಲ, ಆದರೆ ಈಗ ಅಲ್ಲಿ ಬ್ರಾಹ್ಮಣರಿದ್ದಾರೆ, ಕೃಷಿಯೂ ಸಾಗಿದೆ ಎಂದು ಶತಪಥ ಬ್ರಾಹ್ಮಣ ಹೇಳುತ್ತದೆ. ಈ ನದಿ ಕೋಸಲ ಹಾಗೂ ವಿದೇಹ ಜನಪದಗಳ ಗಡಿಯಾಗಿದೆ ಎಂದು ಅಲ್ಲಿ ಹೇಳಲಾಗಿದೆ. ಹಿಂದೆ ಬ್ರಾಹ್ಮಣರಿದ್ದಿರದ ವಿದೇಹವು ಬೌದ್ಧರ ಹದಿನಾರು ಮಹಾಜನಪದಗಳ ಪಟ್ಟಿಯಲ್ಲಿ ಸೇರಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳತಕ್ಕದ್ದು.

ಗಂಗಾ ಕಣಿವೆಯ ಮಧ್ಯಭಾಗಗಳಲ್ಲಿ ಕ್ರಿ.ಪೂ. ಆರನೆಯ ಶತಮಾನದ ವೇಳೆಗೆ ಅನೇಕ ಶ್ರಮಣ ಪಂಥಗಳು ಏಳಿಗೆ ಪಡೆದಿದ್ದವು. ಅವುಗಳಲ್ಲಿ ಬೌದ್ಧ, ಜೈನ ಹಾಗೂ ಆಜೀವಿಕ ಪಂಥಗಳು ತಕ್ಕಮಟ್ಟಿಗೆ ಪ್ರಚಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಉಳಿದ ಪಂಥಗಳ ಕುರಿತಾಗಿ ನಮ್ಮಲ್ಲಿ ಹೆಚ್ಚಿನ ಮಾಹಿತಿಗಳಿಲ್ಲ. ಪಾಕೂಢ ಕಾತ್ಯಾಯನ, ಪೂರಣ ಕಾಶ್ಯಪ, ಸಂಜಯ ಬೇಲ್ಹತಿಪುತ್ರ ಮುಂತಾದ ನಾಕಾರು ಮಂದಿ ಶ್ರಮಣರ ಬಗ್ಗೆ ಕೆಲವೇ ಕೆಲವು ವಿಚಾರಗಳು ತಿಳಿದು ಬಂದಿವೆ.

ಮಗಧ, ಕೋಸಲ ಮೊದಲಾದ ಜನಪದಗಳಲ್ಲಿ ಆಳ್ವಿಕೆ ನಡೆಸಿದ್ದ ರಾಜ ಮನೆತನಗಳು ಈ ಶ್ರಮಣ ಪಂಥಗಳಿಗೆ ಪೋಷಣೆ ನೀಡಲು ಮುಂದಾದವು ಎಂದು ಈ ಪಂಥಗಳ ತ್ರಿಪಿಟಕ, ದ್ವಾದಶಾಂಗ ಮುಂತಾದ ಪವಿತ್ರ ಗ್ರಂಥಗಳ ಸಂಕಲನಗಳಲ್ಲಿ ಹೇಳಲಾಗಿದೆ. ಮಗಧದ ಬಿಂಬಿಸಾರ ಮತ್ತು ಅಜಾತಶತ್ರು ತಮ್ಮ ಪ್ರಮುಖ ಪೋಷಕರೆಂದು ಬೌದ್ಧರು ಹೇಳಿಕೊಂಡಿದ್ದಾರೆ, ಜೈನರೂ ಹೇಳಿಕೊಂಡಿದ್ದಾರೆ. ಕೋಸಲರ ರಾಜಧಾನಿಯಾದ ಶ್ರಾವಷ್ಠಿ ಮತ್ತು ಮಗಧರ ರಾಜಧಾನಿಯಾದ ರಾಜಗೃಹ ಬುದ್ಧನು ಅತಿಹೆಚ್ಚು ಚಾತುರ್ಮಾಸಗಳನ್ನು ಕಳೆದ ನಗರಗಳು.

ಈ ರಾಜಮನೆತನಗಳು ಚಾತುರ್ವಣ್ರ್ಯವನ್ನು ಅಲ್ಲಗಳೆಯಲಿಲ್ಲ. ಅದೇ ರೀತಿ ಶ್ರಮಣ ಪಂಥಗಳೂ ವರ್ಣ ಧರ್ಮವನ್ನು ನಿರಾಕರಿಸಲಿಲ್ಲ. ಪಾಲಿ ಗ್ರಂಥಗಳು ಅನೇಕ ಸಂದರ್ಭಗಳಲ್ಲಿ ನಾಲ್ಕು ವರ್ಣಗಳ ಉಲ್ಲೇಖ ನಡೆಸುತ್ತವೆ. ಅಲ್ಲಿ ನಾವು ಈ ವ್ಯವಸ್ಥೆ ಕುರಿತು ತಿರಸ್ಕಾರ ಭಾವವನ್ನು ಕಾಣುವುದಿಲ್ಲ, ಬದಲಿಗೆ ಮನ್ನಣೆಯನ್ನೇ ಕಾಣುತ್ತೇವೆ. ಆದರೆ ಬ್ರಾಹ್ಮಣರಿಗೆ ಮೊದಲ ಸ್ಥಾನವಿರುವ ಶ್ರೇಣೀಕರಣಕ್ಕೆ ಅಲ್ಲಿ ಸ್ವೀಕೃತಿಯಿಲ್ಲ. ದೀಘನಿಕಾಯದಲ್ಲಿ ಮೊದಲಿಗೆ ಕ್ಷತ್ರಿಯರ ಉಲ್ಲೇಖ ಬರುತ್ತದೆ. ಅನಂತರ ಬ್ರಾಹ್ಮಣರು, ವೈಶ್ಯರು ಹಾಗೂ ಶೂದ್ರರು ಬರುತ್ತಾರೆ. ಇದೇ ಶ್ರೇಣೀಕರಣವನ್ನು ಮಜ್ಝಿಮನಿಕಾಯದಲ್ಲಿಯೂ ಕಾಣುತ್ತೇವೆ.

ಪಾಲಿ ಗ್ರಂಥಗಳು ಇದಲ್ಲದೆ ಇನ್ನೂ ಕೆಲವು ಶ್ರೇಣೀಕರಣಗಳನ್ನು ಗುರುತಿಸುತ್ತವೆ. ಮಜ್ಝಿಮನಿಕಾಯದಲ್ಲಿ ಒಂದೆಡೆ ಕ್ಷತ್ರಿಯ, ಬ್ರಾಹ್ಮಣ, ಗೃಹಪತಿ, ಶ್ರಮಣ ಎಂಬ ವಿಂಗಡನೆಯಿದೆ. ಕೆಲವು ಸಂದರ್ಭಗಳಲ್ಲಿ ಶ್ರಮಣ ಇಲ್ಲದೆ ಉಳಿದ ಮೂರು ಮಾತ್ರ ಉಲ್ಲೇಖ ಪಡೆದಿವೆ. ಒಂದೆಡೆಯಲ್ಲಿ ಈ ಪ್ರತಿಯೊಂದು ಗುಂಪಿನವರೂ ತಮ್ಮದೇ ಆದ ಪರಿಷತ್ತುಗಳನ್ನು ಹೊಂದಿದ್ದರೆಂದು ಹೇಳಲಾಗಿದೆ. ದೀಘನಿಕಾಯದಲ್ಲಿ ಕಾಣುವ ಮತ್ತೊಂದು ವಿಂಗಡನೆಯಲ್ಲಿ ಆರು ಗುಂಪುಗಳಿವೆ: ರಾಜ, ರಾಜ ಮಹಾಮಾತ್ರ, ಕ್ಷತ್ರಿಯ, ಬ್ರಾಹ್ಮಣ, ಗೃಹಪತಿ, ಕುಮಾರ.

ದೀಘನಿಕಾಯದ ಅಗ್ಗಞ್ಞ ಸುತ್ತದಲ್ಲಿ ಬುದ್ಧನು ಬ್ರಾಹ್ಮಣರು ದಿವ್ಯರೆಂಬ ವಾದವನ್ನು ಖಂಡಿಸಿದ್ದಾನೆ. ಬ್ರಾಹ್ಮಣರು ಇತರರಂತೆ ಹೆಣ್ಣಿನ ಯೋನಿಯಲ್ಲಿ ಜನಿಸಿದವರು, ಬ್ರಹ್ಮಜಾತರೆಂದು ಅವರು ಹೇಳುವ ಮಾತು ಸುಳ್ಳು ಎನ್ನುತ್ತಾನೆ ಬುದ್ಧ. ವಸಿಷ್ಠ ಹಾಗೂ ಭಾರದ್ವಾಜ ಎಂಬ ಇಬ್ಬರು ಬ್ರಾಹ್ಮಣರು ತಮ್ಮ ಕುಲ ತೊರೆದು ಬುದ್ಧನ ಅನುಚರರಾಗಿದ್ದಾರೆ. ಒಮ್ಮೆ ಶ್ರಾವಷ್ಠಿಯಲ್ಲಿದ್ದಾಗ ಅವರು ಬುದ್ಧನನ್ನು ಭೇಟಿಯಾಗುತ್ತಾರೆ. ಬುದ್ಧ ಅವರನ್ನು ಕೇಳುತ್ತಾನೆ, ಬ್ರಾಹ್ಮಣ ಕುಲವನ್ನು ತೊರೆದುದ್ದಕ್ಕೆ ನಿಮ್ಮ ಮೇಲೆ ಬ್ರಾಹ್ಮಣರು ಆಕ್ರೋಶಗೊಳ್ಳುವುದಿಲ್ಲವೇ? ಆಕ್ರೋಶಗೊಳ್ಳುತ್ತಾರೆ ಎನ್ನುತ್ತಾನೆ ವಸಿಷ್ಠ. ಯಾವ ರೀತಿ ಆಕ್ರೋಶಗೊಳ್ಳುತ್ತಾರೆಂದು ಬುದ್ಧ ಕೇಳಲು ವಸಿಷ್ಠ ಹೀಗೆನ್ನುತ್ತಾನೆ: ಬ್ರಾಹ್ಮಣರು ಶ್ರೇಷ್ಠರು, ಇತರರು ಹೀನರು, ಬ್ರಾಹ್ಮಣರದು ಶುಕ್ಲವರ್ಣ, ಉಳಿದವರದು ಕಪ್ಪು, ಬ್ರಾಹ್ಮಣರು ಶುದ್ಧರು, ಇತರರು ಶುದ್ಧರಲ್ಲ, ಬ್ರಾಹ್ಮಣರು ಬ್ರಹ್ಮನ ನಿಜವಾದ ಸಂತತಿಗಳು, ಬ್ರಹ್ಮನ ಮುಖದಿಂದ ಜನಿಸಿದವರು, ಬ್ರಹ್ಮನೇ ಸೃಷ್ಟಿಸಿದವರು, ಬ್ರಹ್ಮನ ವಾರಸುದಾರರು, ಅಂಥ ಬ್ರಾಹ್ಮಣ ಕುಲವನ್ನು ಬಿಟ್ಟು ಬ್ರಹ್ಮನ ಪಾದದಿಂದ ಜನಿಸಿದ ಕರಿ ಬಣ್ಣದವರ ಜೊತೆ ಸೇರಿಕೊಂಡಿದ್ದೀರಿ ಎಂದು ಟೀಕಿಸುತ್ತಾರೆ. ಆಗ ಬುದ್ಧ ಹೇಳುತ್ತಾನೆ: ಬ್ರಾಹ್ಮಣರು ಹೀಗೆನ್ನುವಾಗ ತಮ್ಮ ಸನಾತನ ಪರಂಪರೆಯನ್ನು ಮರೆತಿದ್ದಾರೆ. ಬ್ರಾಹ್ಮಣ ಸ್ತ್ರೀಯರು ಋತುವಾಗುವುದನ್ನೂ ಗರ್ಭ ಧರಿಸುವುದನ್ನೂ ಹಡೆದು ಮಕ್ಕಳಿಗೆ ಹಾಲೊಡ್ಡುವುದನ್ನೂ ನಾವು ನೋಡಬಹುದು. ಆದರೂ ಯೋನಿಯಿಂದ ಜನಿಸಿದ ಈ ಬ್ರಾಹ್ಮಣರು ಬ್ರಹ್ಮನ ಬಾಯಿಂದ ಜನಿಸಿದವರೆಂದು ಹೇಳಿಕೊಳ್ಳುತ್ತಾರೆ, ಬ್ರಹ್ಮನನ್ನು ತಪ್ಪಾಗಿ ಬಣ್ಣಿಸಿ ಸುಳ್ಳು ಹೇಳುವ ಮೂಲಕ ಪುಣ್ಯವನ್ನು ಕಳೆದುಕೊಳ್ಳುತ್ತಾರೆ.

ಇಲ್ಲಿ ಬುದ್ಧನು ಪುರುಷಸೂಕ್ತದ ಪರಿಕಲ್ಪನೆಯನ್ನು ಲೇವಡಿ ಮಾಡುವ ಮೂಲಕ ಬ್ರಾಹ್ಮಣರ ಶ್ರೇಷ್ಟತೆಯ ವಾದವನ್ನು ನಿರಾಕರಿಸಿದ್ದಾನೆ. ಆದರೆ ಚಾತುರ್ವಣ್ರ್ಯವನ್ನು ಅಲ್ಲಗಳೆದಿಲ್ಲ. ಮೇಲಿನ ಮಾತುಗಳು ಮುಗಿದ ಕೂಡಲೆ ಆತ ವಸಿಷ್ಠನಿಗೆ ಹೇಳುವುದು ಕ್ಷತ್ರಿಯ, ಬ್ರಾಹ್ಮಣ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳಿವೆ ಎಂದು. “ಚತ್ತಾರೋ ಮೇ ವಾಸೇಟ್ಠಾ ವಣ್ಣಾ. ಖತ್ತಿಯಾ, ಬ್ರಾಹ್ಮಣಾ, ವೇಸಾ, ಸುದ್ದಾ”.

ಕುರು, ಪಾಂಚಾಲ ಮತ್ತು ಇತರ ಪಶ್ಚಿಮದ ಜನಪದಗಳಲ್ಲಿ ಬ್ರಾಹ್ಮಣರು ಪ್ರಮುಖ ಸ್ಥಾನವನ್ನು ಹೊಂದಿದ್ದರು. ಪೂರ್ವದ ಕೋಸಲ, ಮಗಧಗಳಲ್ಲಿಯೂ ಸ್ಥಿತಿ ಭಿನ್ನವಾಗಿರಲಿಲ್ಲ. ಆದರೆ ವೈದಿಕ ಯುಗವು ಕೊನೆಗೊಳ್ಳುವ ವೇಳೆಗೆ ತಾವು ಇತರರಿಗಿಂತ ಶ್ರೇಷ್ಟರು ಎಂಬ ಅವರ ವಾದವು ಕಟುವಾದ ಟೀಕೆಗೆ ಗುತಿಯಾಗಿತ್ತು. ಕ್ಷತ್ರಿಯರ ಮತ್ತು ಬ್ರಾಹ್ಮಣರ ನಡುವಿನ ಘರ್ಷಣೆ ಕುರಿತಾಗಿ ಕಳೆದ ಅಧ್ಯಾಯದಲ್ಲಿ ಚರ್ಚಿಸಿದ್ದೇವೆ. ಅಗ್ಗಞ್ಞ ಸುತ್ತದಲ್ಲಿ ಕಂಡು ಬರುವುದು ಇದರ ಮತ್ತೊಂದು ಅಭಿವ್ಯಕ್ತಿ.

ಹೊಸ ಯುಗದ ರಾಜಕಾರಣವು ನಗರಕೇಂದ್ರಿತವಾಗಿತ್ತು. ಪಶ್ಚಿಮದಲ್ಲಿ ಏಳಿಗೆ ಪಡೆಯತೊಡಗಿದ್ದ ಕಾಂಬೋಜ, ಗಾಂಧಾರ, ಶೂರಸೇನ ಮೊದಲಾದ ಜನಪದಗಳ ಅರಸುಗಳು ಕ್ಷತ್ರಿಯ ಮೂಲದಿಂದ ಬಂದವರಾಗಿರಲಿಲ್ಲ. ಆಸಂದಿವತ್‍ನಿಂದ ಆಳ್ವಿಕೆ ನಡೆಸಿದ್ದ ಕುರುಗಳು ಆಗಲೇ ತಮ್ಮ ನೆಲೆಯನ್ನು ಬಿಟ್ಟು ಕೌಶಾಂಬಿಗೆ ವಲಸೆ ಬಂದಿದ್ದರು. ಪೂರ್ವದಲ್ಲಿ ಏಳಿಗೆ ಪಡೆದ ಜನಪದಗಳು ವೈದಿಕ ಯಜ್ಞಗಳಿಗೆ ಪೋಷಣೆ ನೀಡುವವರಾಗಿರಲಿಲ್ಲ. ಹೀಗಾಗಿ ಅಂಥಲ್ಲಿ ಅಭಿವ್ಯಕ್ತಿ ಪಡೆದ ಹೊಸ ರಾಜಕೀಯ ಹಾಗೂ ಆರ್ಥಿಕ ಜೀವನದೊಂದಿಗೆ ಹೊಂದಿಕೊಳ್ಳುವುದು ಬ್ರಾಹ್ಮಣರಿಗೆ ಅನಿವಾರ್ಯವೇ ಆಗಿತ್ತು.

ಬ್ರಾಹ್ಮಣರಲ್ಲಿ ಉದಾರವಾದಿಗಳಾದ ಕೆಲವರು ಹಾಗೂ ಸಮಯ ಸಾಧಕರಾದ ಅನೇಕರು ಈ ಹೊಸ ಜೀವನದೊಂದಿಗೆ ರಾಜಿ ಮಾಡಿಕೊಂಡರೆಂದು ಬೌದ್ಧ ಗ್ರಂಥಗಳಲ್ಲಿ ಕಾಣುವ ಬ್ರಾಹ್ಮಣರ ವರ್ಣನೆಗಳ ಆಧಾರದ ಮೇಲೆ ಊಹಿಸಬಹುದು. ಆದರೆ ಬಹುತೇಕ ಬ್ರಾಹ್ಮಣರು ಈ ನಗರ ಕೇಂದ್ರಿತ ವ್ಯವಸ್ಥೆಯನ್ನು ತಿರಸ್ಕರಿಸಿ ಗ್ರಾಮೀಣ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬ್ರಾಹ್ಮಣ ಧರ್ಮವನ್ನು ಹಿಂದೆಂದೂ ಇದ್ದಿರದ ನಿಖರತೆಯೊಂದಿಗೆ ಸೃಷ್ಟಿಸಿಕೊಳ್ಳುವ ಶ್ರಮವು ಈ ಸಂದರ್ಭದಲ್ಲಿ ಆರಂಭವಾಯ್ತು. ಅದರ ಪರಿಣಾಮವೇ ಧರ್ಮಸೂತ್ರ, ಗೃಹ್ಯಸೂತ್ರ, ಶ್ರೌತಸೂತ್ರ ಮೊದಲಾದ ಗ್ರಂಥಗಳು. ಬ್ರಾಹ್ಮಣ್ಯದ ಸಾಂಪ್ರದಾಯಿಕ ಚೆಹರೆ ಈ ಸಂದರ್ಭದಲ್ಲಿ ಆರಂಭಗೊಳ್ಳುತ್ತದೆ.

ಕ್ರಿ.ಪೂ. ಆರನೆಯ ಶತಮಾನದಲ್ಲಿ ಆರಂಭವಾದ ಹೊಸ ರಾಜಕೀಯ-ಆರ್ಥಿಕ ವ್ಯವಸ್ಥೆಯಲ್ಲಿ ಭೂಸ್ವಾಮ್ಯವನ್ನು ಸಾಮೂಹಿಕವಾಗಿ ಹೊಂದಿದ್ದ ಗ್ರಾಮಿಕರೆಂಬ ವರ್ಗವೊಂದಿತ್ತು. ಹಾಗೆಯೇ ಖಾಸಗಿ ಹಿಡುವಳಿಗಳನ್ನು ಹೊಂದಿದ್ದ ಗೃಹಪತಿಗಳೆಂದೇ ಗುರುತಿಸಲ್ಪಟ್ಟ ಮತ್ತೊಂದು ವರ್ಗವಿತ್ತು. ರಾಜ್ಯಾಡಳಿತ ನಡೆಸಿದವರಿಗೆ ತಮ್ಮದೇ ಆದ ಹಿಡುವಳಿಗಳಿದ್ದವು. ಆರಂಭ ಕಾಲದಲ್ಲಿ ಇದನ್ನು ಏನನ್ನುತ್ತಿದ್ದರು ಎಂದು ಹೇಳಲು ನಮ್ಮಲ್ಲಿ ಆಧಾರಗಳಿಲ್ಲ. ಸಾತವಾಹನರ ಕಾಲದ ಶಾಸನವೊಂದರಲ್ಲಿ ಇದನ್ನು ಪ್ರಾಕೃತ ಭಾಷೆಯಲ್ಲಿ ರಾಜಕಂ ಖೇತಂ ಎನ್ನಲಾಗಿದೆ. ಗ್ರಾಮಿಕರು ತಮ್ಮ ನೆಲದಲ್ಲಿ ತಾವೇ ಕೃಷಿಯನ್ನು ಕೈಗೊಂಡರು. ಅಲ್ಲಿ ದುಡಿಮೆ ಕುಲ ಕೇಂದ್ರಿತವಾಗಿತ್ತು. ಗೃಹಪತಿಗಳ ನೆಲದಲ್ಲಿ ದಾಸ ಹಾಗೂ ಕರ್ಮಕಾರ ಎಂಬ ವರ್ಗಗಳನ್ನು ದೊಡ್ಡ ಪ್ರಮಾಣದಲ್ಲಿ ಉಳುಮೆಗೆಂದು ನಿಯೋಜಿಸಲಾಗಿತ್ತು.

ಭೂಮಾಲೀಕತ್ವ ಹಾಗೂ ಭೂನಿಯಂತ್ರಣವು ದುಡಿಮೆಯ ಪ್ರಶ್ನೆಯನ್ನಷ್ಟೇ ಅಲ್ಲ, ನ್ಯಾಯಸಮ್ಮತ ವಾರಸುದಾರಿಕೆ ಹಾಗೂ ದಾಯಕ್ರಮದ ಸವಾಲುಗಳನ್ನೂ ಸೃಷ್ಟಿಸಿತು. ಆಸ್ತಿಗೆ ಸಂಬಂಧಪಟ್ಟಂತ ಈ ಆಯಾಮಗಳು ಹಿಂದೆ ಅಂತ ಮಹತ್ವವನ್ನು ಪಡೆದಿರಲಿಲ್ಲ. ಆದರೆ ಈಗ ಅವು ಅಪಾರ ಪ್ರಾಮುಖ್ಯತೆಯನ್ನು ಪಡೆದುಕೊಳ್ಳತೊಡಗಿದ ಕಾರಣ ವಂಶ ಶುದ್ಧಿ ಎಂಬ ವಿಚಾರವು ಹರಳುಗಟ್ಟಿಕೊಳ್ಳತೊಡಗಿತು.

ದೀಘನಿಕಾಯದಲ್ಲಿ ಒಂದೆಡೆಯಲ್ಲಿ ಸೊಣದಂಡ ಎಂಬ ಬ್ರಾಹ್ಮಣನೂ ಬುದ್ಧನೂ ಒಂದೇ ರೀತಿ ಪವಿತ್ರತೆ ಹೊಂದಿದವರೆಂದು ಹೇಳಲಾಗಿದೆ. ಏಕೆಂದರೆ ಇಬ್ಬರ ವಂಶಗಳೂ ಏಳು ತಲೆಮಾರುಗಳ ತನಕ ಸಂಕರಗೊಳ್ಳದಂತೆ ಶುದ್ಧಿ ಪಡೆದಿವೆ. ಇಂಥ ಹೇಳಿಕೆಯೊಂದು ಬಹುಶಃ ಋಗ್ವೇದದ ದಿನಗಳಲ್ಲಿ ಯಾವ ಅರ್ಥವನ್ನೂ ಹೊರಡಿಸಿರಲು ಶಕ್ಯವಿಲ್ಲ. ಅಲ್ಲಿ ನಾವು ಇಂಥ ವಕ್ತವ್ಯಗಳನ್ನು ಕಾಣುವುದೂ ಇಲ್ಲ. ವಂಶಶುದ್ದಿ ನಿರ್ದಿಷ್ಟವಾದೊಂದು ಐತಿಹಾಸಿಕ ಸಂದರ್ಭದಲ್ಲಿ ಬೆಳೆದುಬಂದ ಪರಿಕಲ್ಪನೆ. ಋಗ್ವೇದದ ಕಾಲಕ್ಕೆ ಆ ಸಂದರ್ಭವು ಇನ್ನೂ ರೂಪುಗೊಂಡಿರಲಿಲ್ಲ. ದೀಘನಿಕಾಯದ ಕಾಲಕ್ಕೆ ಅದೊಂದು ವಾಸ್ತವವಾಗಿತ್ತು.

ಏಳು ತಲೆಮಾರುಗಳ ವರೆಗಿನ ಆಚಾರ್ಯರುಗಳ ಪ್ರಸ್ತಾಪವು ದೀಘನಿಕಾಯದಲ್ಲಿ ಮತ್ತೆಮತ್ತೆ ಬರುತ್ತದೆ. ಈ ಕೃತಿಯ ಸೊನದಂಡ ಸುತ್ತದ ಪ್ರಕಾರ ಬ್ರಾಹ್ಮಣರ ಐದು ವೈಶಿಷ್ಟ್ಯಗಳಲ್ಲಿ ಏಳು ತಲೆಮಾರುಗಳ ವರೆಗಿನ ವಂಶಶುದ್ಧಿಯೂ ಒಂದು. ಆದರೆ ಅದು ಅಷ್ಟೇನೂ ಮಹತ್ವದ ವೈಶಿಷ್ಟ್ಯವಲ್ಲ, ಬ್ರಾಹ್ಮಣರಿಗೆ ಅರಿವು ಮತ್ತು ನೀತಿಯೇ ಪ್ರಮುಖ ಗುರುತುಗಳು ಎಂದು ಈ ಸುತ್ತವು ಘೋಷಿಸುತ್ತದೆ.

ಸೊನದಂಡ ಸುತ್ತವು ದೀಘನಿಕಾಯದಲ್ಲಿ ಅಂಬಟ್ಠ ಸುತ್ತದ ನಂತರ ಬರುತ್ತದೆ. ಈ ಅಂಬಟ್ಠ ಸುತ್ತದಲ್ಲಿ ಕ್ಷತ್ರಿಯರೇ ಶ್ರೇಷ್ಟರು, ಬ್ರಾಹ್ಮಣರು ಹೀನರು ಎಂದು ಬುದ್ಧ ಹೇಳುತ್ತಾನೆ. ಯಾಕೆಂದರೆ ಕ್ಷತ್ರಿಯನಾದವನಿಗೆ ತಂದೆ, ತಾಯಿ ಇಬ್ಬರ ವಂಶಗಳಲ್ಲಿಯೂ ಏಳು ತಲೆಮಾರುಗಳ ವರೆಗೆ ವಂಶಶುದ್ಧಿ ಅತ್ಯಗತ್ಯ. ಈ ಮಾತಿಗೆ ಎರಡು ಅರ್ಥಗಳಿವೆ. ಮೊದಲನೆಯದಾಗಿ, ಅಗ್ಗಞ್ಞ ಸುತ್ತದಲ್ಲಿ ಬ್ರಾಹ್ಮಣರು ತಾವೇ ಶ್ರೇಷ್ಟರು, ಉಳಿದವರೆಲ್ಲ ಹೀನರು ಎಂದುದಕ್ಕೆ ಕ್ಷತ್ರಿಯ ಕುಲದಲ್ಲಿ ಜನಿಸಿದ ವ್ಯಕ್ತಿಯೋರ್ವನ ಪ್ರತಿಕ್ರಿಯೆ ಇದಾಗಿದೆ. ಎರಡನೆಯದಾಗಿ, ಕ್ರಿ.ಪೂ. ಆರನೆಯ ಶತಮಾನದಲ್ಲಿಯೂ ಬ್ರಾಹ್ಮಣರಲ್ಲಿ ಒಳವಿವಾಹವು ಅಷ್ಟೇನೂ ಆಳವಾಗಿ ಬೇರೂರಿರಲಿಲ್ಲ ಎಂದು ಈಗಾಗಲೇ ಮಂಡಿಸಿದ ವಿಚಾರಕ್ಕೆ ಇದು ಮತ್ತೊಂದು ಪುರಾವೆಯಂತಿದೆ.

ನಾಲ್ಕು ವರ್ಣಗಳ ಪೈಕಿ ವರ್ಣಸಂಕರದಿಂದ ಭ್ರಷ್ಟರಾಗಿಬಿಡುವೆವು ಎಂಬ ಭೀತಿ ಹೆಚ್ಚಾಗಿದ್ದದ್ದು ಕ್ಷತ್ರಿಯರಲ್ಲಿ. ಭಗವದ್ಗೀತೆಯ ಮೊದಲ ಅಧ್ಯಾಯವಾದ ಅರ್ಜುನವಿಷಾದಯೋಗದಲ್ಲಿ ಅರ್ಜುನ ತನ್ನ ಮುಂದಿರುವ ಯುದ್ಧವನ್ನು ನೆನೆದು ಆತಂಕಕ್ಕೊಳಗಾಗುತ್ತಾನೆ. ಕಾರಣವೇನು? ಕೇವಲ ಅಧಿಕಾರವನ್ನು ಪಡೆದುಕೊಳ್ಳುವ ಸಲುವಾಗಿ ತನ್ನ ಸೋದರರನ್ನೂ ಬಂಧುಗಳನ್ನೂ ಕೊಲ್ಲುವ ವ್ಯಥೆ ಇದ್ದೇ ಇದೆ. ಆದರೆ ಅದಕ್ಕಿಂತ ದೊಡ್ಡ ಭಯ ಎಂದರೆ ವರ್ಣಸಂಕರದಿಂದ ತನ್ನ ಕುಲವು ಅನುಭವಿಸಬಹುದಾದ ಹಾನಿಯನ್ನು ಕುರಿತಾದ್ದು. ಸ್ವಜನರನ್ನು ಕೊಲ್ಲುವುದರಿಂದ ಕುಲಕ್ಷಯ ಉಂಟಾಗುವುದು, ಇದು ಸನಾತನವಾದ ಕುಲಧರ್ಮದ ನಾಶಕ್ಕೆ ಕಾರಣವಾಗುತ್ತದೆ. ಕುಲಧರ್ಮ ನಶಿಸಿದಾಗ ಅಧರ್ಮ ತಲೆದೋರುತ್ತದೆ. ಅಧರ್ಮದಿಂದ ಕುಲಸ್ತ್ರೀಯರು ಕೇಡಿಗೆ ತುತ್ತಾಗುತ್ತಾರೆ. ಈ ವರ್ಣಸಂಕರವು ನರಕಕ್ಕೆ ದಾರಿ ಮಾಡಿಕೊಡುತ್ತದೆ. ಪಿಂಡೋದಕ ಕ್ರಿಯೆಗಳು ಕೊನೆಗೊಂಡು ಪಿತೃಗಳ ಪತನವಾಗುತ್ತದೆ.

ಅರ್ಜುನ ವಿಷಾದಯೋಗದ ನಲವತ್ತೇಳು ಶ್ಲೋಕಗಳಲ್ಲಿ ಅರ್ಜುನ ಮಾತನಾಡುವ ಇಪ್ಪತ್ತೊಂದು ಶ್ಲೋಕಗಳಿವೆ. ಅವುಗಳಲ್ಲಿ ಕುಲದ ಪ್ರಸ್ತಾಪ ಹನ್ನೊಂದು ಸಲ ನಡೆದಿದೆ. ಕುಲಕ್ಷಯಕೃತಂ ದೋಷಂ ಎಂಬ ಮಾತು ಎರಡು ಸಲ ಬಳಕೆಯಾಗಿದೆ. ಕುಲಘ್ನಾನಾಂ ಮತ್ತು ಕುಲಧರ್ಮ ಎಂಬ ಪದಗಳನ್ನೂ ಈ ಇಪ್ಪತ್ತೊಂದು ಶ್ಲೋಕಗಳಲ್ಲಿ ಎರಡೆರಡು ಸಲ ಕಾಣುತ್ತೇವೆ. ಕುಲಕ್ಷಯಃ, ಪ್ರದುಷ್ಯಂತಿ ಕುಲಸ್ತ್ರಿಯೈಃ ಮುಂತಾದಲ್ಲಿ ವರ್ಣಸಂಕರ ಕುರಿತ ಅವನ ಇನ್ನಿಲ್ಲದ ಆತಂಕವನ್ನು ಕಾಣಬಹುದು.

ಅರ್ಜುನನ ಈ ವಿಶಾದದಲ್ಲಿ ನಾವು ಗಮನಿಸಬೇಕಾದ ಒಂದು ಅಂಶವಿದೆ. ಕುಲಕ್ಕೆ ಹಾನಿಯುಂಟಾಗುವುದು ಬಂಧುಗಳನ್ನು ಕೊಲ್ಲುವುದರಿಂದಲ್ಲ, ಧರ್ಮವು ನಷ್ಟವಾಗುವುದರಿಂದಲೂ ಅಲ್ಲ. ಅಂಥ ದುರಂತಗಳು ಕುಲಸ್ತ್ರೀಯರ ಪತನಕ್ಕೆ ಕಾರಣವಾಗುತ್ತದೆ ಹಾಗೂ ವರ್ಣಸಂಕರಕ್ಕೆ ದಾರಿ ಮಾಡಿಕೊಡುತ್ತದೆ ಎಂಬಲ್ಲಿ ಕುಲದ ಹಾನಿಯಿದೆ. ವರ್ಣಧರ್ಮದ ಬುನಾದಿಯಾಗಿ ಶ್ರೇಣೀಕೃತ ಲಿಂಗ ಸಂಬಂಧಗಳು ಹಾಗೂ ಮಹಿಳೆಯರ ಲೈಂಗಿಕತೆಯ ಮೇಲಿನ ನಿಯಂತ್ರಣವು ಕೆಲಸ ಮಾಡಿರುವುದನ್ನು ಇದು ಬೆಳಕಿಗೆ ತರುತ್ತದೆ. ಇದು ವರ್ಣಧರ್ಮದ ಅನೇಕ ಅಂಶಗಳಲ್ಲಿ ಒಂದಲ್ಲ. ಇದೇ ವರ್ಣಧರ್ಮದ ಕೊಂಡಿ.

ಚಾತುರ್ವಣ್ರ್ಯ ಹಾಗೂ ಜಾತಿ ಪದ್ಧತಿ ಕುರಿತ ಯಾವುದೇ ಚರ್ಚೆಯು ಲಿಂಗವ್ಯವಸ್ಥೆ ಹಾಗೂ ಲೈಂಗಿಕತೆಯನ್ನು ಅಲಕ್ಷಿಸಿದರೆ ಅಸಮಗ್ರವಾಗಿ ಉಳಿದುಬಿಡುತ್ತದೆ. ಮಾತ್ರವಲ್ಲ, ಅಂಥ ಚರ್ಚೆಗಳು ಅಸಮರ್ಪಕವೂ ಆಗುತ್ತವೆ. ಈ ಲೇಖನದ ಬರುವ ಕಂತಿನಲ್ಲಿ ನಮ್ಮ ಸಮೀಕ್ಷೆಯನ್ನು ಈ ಆಯಾಮದ ಕಡೆಗೆ ತಿರುಗಿಸೋಣ.

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-7

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-1

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...