ಜಾತಿ ಪದ್ಧತಿಯ ಮೈಮನಗಳು-ಹದಿನೈದನೇ ಕಂತು

Date: 13-12-2020

Location: .


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್‌ ಅವರು ಐತಿಹಾಸಿಕ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಹದಿನೈದನೇ ಕಂತಿನ ಬರಹ ಇಲ್ಲಿದೆ.

ಕ್ರಿ.ಶ. ಐದನೆಯ ಶತಮಾನದಲ್ಲಿ ಭಾರತದ ವಿವಿಧೆಡೆಗಳಲ್ಲಿ ನಗರೀಕರಣದ ಪ್ರಕ್ರಿಯೆಯೊಂದು ಪುನಃ ಚಾಲನೆ ಪಡೆಯಿತು. ಹಿಂದಿನ ನಗರಗಳು ಅವನತಿ ಹೊಂದಿದ ಬಳಿಕ ಎರಡು ಶತಮಾನಗಳ ಕಾಲ ಉಪಭೂಖಂಡವು ಕೆಲವೇ ಕೆಲವು ನಗರಗಳಿಗೆ ನೆಲೆಯಾಗಿದ್ದು ಗ್ರಾಮೀಣ ಜೀವನವು ಆರ್ಥಿಕ ಹಾಗೂ ರಾಜಕೀಯ ಪ್ರಕ್ರಿಯೆಗಳ ಮೇಲೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಅವಧಿಯಲ್ಲಿ ಭೂ ಹಿಡುವಳಿಗಳ ನಿಯಂತ್ರಣ ಹಾಗೂ ವಿನಿಯೋಗದ ಪ್ರಕ್ರಿಯೆಗಳಲ್ಲಿ ಹೊಸ ತಿರುವೊಂದು ಕಾಣಿಸಿಕೊಂಡಿತು. ಅದೆಂದರೆ ಕೃಷಿಭೂಮಿಯ ಮೇಲೆ ಸಾಧಿಸಲಾದ ಶ್ರೇಣೀಕೃತ ನಿಯಂತ್ರಣದ ವ್ಯವಸ್ಥೆ ಹಾಗೂ ಅದರಿಂದಾದ ಉತ್ಪಾದನಾ ಹಾಗೂ ಆಸ್ತಿ ಸಂಬಂಧಗಳ ಪುನರ್ರಚನೆ.

ಇದನ್ನು ವಿವರಿಸುವ ಮೊದಲು ಕ್ರಿ.ಶ. ಮೊದಲ ಸಹಸ್ರಮಾನದ ಪೂರ್ವಾರ್ಧದಲ್ಲಿ ಘಟಿಸಿದ ಮತ್ತೊಂದು ಅಪಾರ ಮಹತ್ವದ ಆರ್ಥಿಕ ಬೆಳವಣಿಗೆಯೊಂದನ್ನು ಗಮನಿಸುವುದು ಅವಶ್ಯಕವಾಗಿದೆ. ಕ್ರಿ.ಪೂ. ಮೊದಲ ಸಹಸ್ರಮಾನದಲ್ಲಿ ಭಾರತದಲ್ಲಿ ರೈತಾಪಿ ವರ್ಗವೊಂದು ಏಳಿಗೆ ಪಡೆದಿರಲಿಲ್ಲ ಎಂದು ಹಿಂದಿನ ಅಧ್ಯಾಯವೊಂದರಲ್ಲಿ ಹೇಳಿದ್ದೇವೆ. ಗ್ರಾಮಿಕ ಎಂಬ ಭೂಮಾಲೀಕರ ಒಕ್ಕೂಟಗಳು ತಮ್ಮ ನಿಯಂತ್ರಣದಲ್ಲಿದ್ದ ನೆಲದಲ್ಲಿ ಸ್ವತಃ ಆರಂಭ ಕಾರ್ಯ ಕೈಗೊಂಡಿದ್ದರು. ಗಹಪತಿಗಳೆಂಬ ದೊಡ್ಡದೊಡ್ಡ ಭೂಮಾಲೀಕರು ತಮ್ಮ ಕೃಷಿನೆಲದಲ್ಲಿ ದುಡಿಯಲು ದಾಸ ಎಂಬ ಗುಲಾಮರನ್ನೂ ಕರ್ಮಕಾರ ಎಂಬ ವೇತನ ಪಡೆಯುವ ಕೆಲಸಗಾರರನ್ನೂ ನಿಯೋಗಿಸುತ್ತಿದ್ದರು. ಕಾರ್ಷಿಕ ಉತ್ಪಾದನೆಯಲ್ಲಿ ಕುಲಬಾಹಿರವಾದ (ಎಕ್ಸ್‌ಟ್ರಾ ಕಿನ್) ಹಾಗೂ ವರ್ಗದ ಪ್ರಜ್ಞೆಯನ್ನು ಹೊಂದಿದ ದುಡಿಮೆಯ ರೂಪಗಳು ನೆಲೆಗೊಂಡಿರಲಿಲ್ಲ. ಅಪಾರ ಪ್ರಮಾಣದಲ್ಲಿ ಕೃಷಿಯ ವಿಸ್ತರಣೆ ಉಂಟಾದ ಕಾರಣ ಕ್ರಿ.ಶ. ಮೊದಲ ಸಹಸ್ರಮಾನದಲ್ಲಿ ಭಾರತದಲ್ಲಿ ಉಳುಮೆ ನಡೆದಿದ್ದ ಬಹುತೇಕ ಎಲ್ಲೆಡೆಗಳಲ್ಲೂ ಕುಲಬಾಹಿರ ದುಡಿಮೆಯ ಸಂಬಂಧಗಳ ಬುನಾದಿಯ ಮೇಲೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡ ವರ್ಗವು ಹುಟ್ಟಿಕೊಂಡಿತು. ಇದೇ ರೈತಾಪಿ ವರ್ಗ ಅಥವಾ ಪೆಸೆಂಟ್ರಿ. ಭಾರತದ (ಹಾಗೂ ವಿಶ್ವದ) ಇತಿಹಾಸದಲ್ಲಿಯೇ ಅತ್ಯಂತ ಕ್ರಾಂತಿಕಾರಕವಾದ ಬೆಳವಣಿಗೆಯೇ ರೈತಾಪಿ ವರ್ಗದ ಉಗಮ.

ಹೆಚ್ಚೆಚ್ಚು ಭೂಪ್ರದೇಶಗಳು ಕೃಷಿಗೆ ಅಧೀನವಾಗುತ್ತ ಹೋದಂತೆ ಸ್ಥಳೀಯವಾದ ವಿನಿಮಯದ ಜಾಲಗಳು ಹುಟ್ಟಿಕೊಂಡದ್ದು ಅಲ್ಲೆಲ್ಲ ಅಧಿಕಾರದ ಸ್ಥಳೀಯ ರೂಪಗಳು ವಿಕಾಸ ಹೊಂದುವುದಕ್ಕೂ ಕಾರಣವಾಯ್ತು. ಸಮುದ್ರ ಗುಪ್ತನ ಅಲಹಾಬಾದ್ ಸ್ತಂಬ ಶಾಸನದಲ್ಲಿ ಹೇಳಲಾಗಿರುವ ಅನೇಕಾನೇಕ ರಾಜರುಗಳು ಈ ಹಿನ್ನೆಲೆಯಿಂದ ಬಂದವರು. ಕ್ರಿ.ಶ. 300-600ರ ನಡುವಲ್ಲಿ ಈ ಬೆಳವಣಿಗೆಯಿಂದಾಗಿ ರಾಜ್ಯ ಎಂದು ಕರೆಯಲಾಗುವ ಪ್ರಭುತ್ವದ ವ್ಯವಸ್ಥೆಯ ಸ್ವರೂಪವು ತೀವ್ರ ಮಾರ್ಪಾಟು ಹೊಂದಿತು. ಈ ಹೊಸ ಯುಗದ ರಾಜ್ಯಗಳಲ್ಲಿ ಆಡಳಿತದ ಸೇವೆಯಲ್ಲಿ ನಿರತರಾಗಿ ವೇತನ ಪಡೆಯುವ ವರ್ಗವು ಇರಲಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸಲಾಗಿರುವ ಸುಯೋಜಿತ ಆಡಳಿತವು ಬಹುಶಃ ಹಿಂದೆಯೂ ಇದ್ದಿರಲಿಕ್ಕಿಲ್ಲ. ಆದರೆ ಅಲ್ಲಿ ವೇತನ ಪಡೆಯುವ ಅಧಿಕಾರಿ ವರ್ಗವೊಂದು ನೆಲೆಗೊಂಡಿತ್ತು. ಮೌರ್ಯೋತ್ತರ ಕಾಲದಲ್ಲಿ ಈ ವರ್ಗದ ಪ್ರಭಾವವು ಕ್ರಮೇಣ ಇಳಿಮುಖಗೊಂಡಿತು. ಗುಪ್ತರ ಹಾಗೂ ಅವರ ಸಮಕಾಲೀನರಾದ ವಾಕಾಟಕ, ಪಲ್ಲವ, ಕದಂಬಾದಿ ರಾಜಮನೆತನಗಳ ಕಾಲಕ್ಕಾಗಲೇ ಸ್ಥಿತಿ ಸಂಪೂರ್ಣ ಬದಲಾಗಿತ್ತು. ಈ ಯುಗದ ರಾಜ್ಯಗಳು ತಮ್ಮ ನಿಯಂತ್ರಣಕ್ಕೆ ಬಂದ ಪ್ರದೇಶಗಳಲ್ಲಿ ಪ್ರಮುಖ ಭೂಮಾಲೀಕರನ್ನು, ಯುದ್ಧವೀರರನ್ನು ಆಯಾ ಸ್ಥಳೀಯ ಪ್ರಭುಗಳನ್ನು ರಾಜ್ಯದ ಸೇವೆಯಲ್ಲಿ ನೇಮಿಸಿಕೊಳ್ಳುತ್ತಿದ್ದರು. ಅಂಥವರಿಗೆ ವೇತನವಿರಲಿಲ್ಲ. ಬದಲಿಗೆ ನಿರ್ದಿಷ್ಟವಾದ ಭೂಹಿಡುವಳಿಯೊಂದನ್ನು ಅವರಿಗೆ ದತ್ತಿ ನೀಡಲಾಗುತ್ತಿತ್ತು. ಆ ನೆಲದಿಂದ ಬರುವ ಉತ್ಪನ್ನವು ಇತರ ಖರ್ಚು ವೆಚ್ಚಗಳ ತರುವಾಯ ಅವರಿಗೆ ಸಲ್ಲುತ್ತಿತ್ತು. ಇದೇ ಅವರ ವೇತನ. ಆ ಉತ್ಪನ್ನದ ಒಂದಂಶವು ರಾಜ್ಯಕ್ಕೆ ತೆರಿಗೆಯಾಗಿ ಸಲ್ಲುತ್ತಿತ್ತು. ಅದನ್ನು ಮನ್ನಾ ಮಾಡಿದ ಸಂದರ್ಭಗಳೂ ಉಂಟು.

ದತ್ತಿ ನೀಡಲಾದ ನೆಲವು ದತ್ತಿ ಪಡೆದವರ ಖಾಸಗಿ ಸ್ವತ್ತಲ್ಲ. ಅಲ್ಲಿ ಈಗಾಗಲೇ ಭೂಮಾಲೀಕರ ಒಕ್ಕೂಟಗಳಿದ್ದವು. ಅಂಥ ಒಕ್ಕೂಟಗಳನ್ನು ಕುಟುಂಬಿ, ಮಹತ್ತರ, ಮಹಾಜನ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿತ್ತು. ಈ ಒಕ್ಕೂಟಗಳು ಖಾಸಗಿ ನಿಯಂತ್ರಣವಿಲ್ಲದೆ ಒಟ್ಟಾರೆಯಾಗಿ, ಅಂದರೆ ಸಾಮೂಹಿಕವಾಗಿ ಈ ನೆಲಗಳನ್ನು ಹೊಂದಿದ್ದರು. ಅವರ ಅಡಿಯಲ್ಲಿ ರೈತಾಪಿ ವರ್ಗಕ್ಕೆ ಸೇರಿದ ಜನ ಜೀತಕ್ಕೆ ನಿಂತಿದ್ದರು. ಈ ಹಿಡುವಳಿಗಳಿಂದ ಜೀತದ ರೈತರಿಗೆ ಹಾಗೂ ಭೂ ಮಾಲೀಕ ಒಕ್ಕೂಟಗಳಿಗೆ ಸಲ್ಲುತ್ತಿದ್ದ ವರಮಾನವು ಈಗಲೂ ಅವರಿಗೇ ಸಲ್ಲುತ್ತಿತ್ತು. ಆದರೆ ಹೆಚ್ಚುವರಿಯ ವಿನಿಮಯದಿಂದ ಉಂಟಾಗುವ ಲಾಭವು ದತ್ತಿ ಪಡೆದವರಿಗೆ ಹೋಗುತ್ತಿತ್ತು. ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆಯೂ ದತ್ತಿ ಪಡೆದವರಿಗೇ ಸಲ್ಲುತ್ತಿತ್ತೇ ಇಲ್ಲವೇ ಎಂಬುದು ಆಯಾ ಸಂದರ್ಭದಲ್ಲಿ ಮಾಡಲಾದ ಒಪ್ಪಂದವನ್ನು ಅವಲಂಭಿಸಿತ್ತು.

ಸಾಮಾನ್ಯವಾಗಿ ರಾಜ್ಯದ ಸೇವೆಯಲ್ಲಿ ನಿಯುಕ್ತರಾದ ಭೂಮಾಲೀಕರು, ಯುದ್ಧವೀರರು ಹಾಗೂ ಸ್ಥಳೀಯ ಪ್ರಭುಗಳು ತೆರಿಗೆಯ ವಸೂಲಾತಿಯನ್ನು ನಡೆಸುತ್ತಿದ್ದರು. ಅದಕ್ಕೆಂದು ಅವರಿಗೆ ಭೂಕ್ಷೇತ್ರವೊಂದನ್ನು ವಹಿಸಿಕೊಡಲಾಗುತ್ತಿತ್ತು. ಸಾಮಾನ್ಯವಾಗಿ ಸಣ್ಣ ಪ್ರದೇಶಗಳಲ್ಲಿ ಈಗಾಗಲೇ ಪ್ರಬಲರಾಗಿ ಆಳ್ವಿಕೆ ನಡೆಸುತ್ತಿದ್ದ ಪ್ರಭು ಮನೆತನಗಳಿರುತ್ತಿದ್ದವು. ಅಂಥ ಪ್ರದೇಶಗಳು ರಾಜ್ಯವೊಂದರ ನಿಯಂತ್ರಣಕ್ಕೆ ಗುರಿಯಾದಾಗ ರಾಜನು ಕೆಲವೊಮ್ಮೆ ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದನು. ಆದರೆ ಹಲವು ಸಂದರ್ಭಗಳಲ್ಲಿ ಅಂಥ ಪ್ರದೇಶಗಳಿಗೆ ಸ್ವಾಯತ್ತತೆಯನ್ನು ನೀಡಿ ಅಲ್ಲಿನ ಪ್ರಭುವನ್ನು ಸಾಮಂತನಾಗಿ ತನ್ನ ಅಡಿಗೆ ತಂದುಕೊಳ್ಳುತ್ತಿದ್ದನು. ಅಂಥ ಸಾಮಂತನಿಗೆ ತನ್ನದೇ ಆದ ಸೈನ್ಯವಿರುತ್ತಿತ್ತು. ರಾಜನದನ್ನು ಹೋಲುವ ಆಡಳಿತದ ಪರಿಕರಗಳೂ ಇದ್ದವು. ಆತ ತನ್ನನ್ನು ರಾಜ ಯಾ ಮಹಾರಾಜ ಎಂದೇ ಕರೆದುಕೊಳ್ಳುತ್ತಿದ್ದ. ಆದರೆ ರಾಜನಿಗಿರುವ ಮಹಾರಾಜಾಧಿರಾಜ, ಪರಮಭಟ್ಟಾರಕ ಹಾಗೂ ಪರಮೇಶ್ವರ ಎಂಬ ಬಿರುದುಗಳು ಆತನಿಗೆ ಇರುತ್ತಿರಲಿಲ್ಲ. ತನ್ನ ಪ್ರದೇಶದಲ್ಲಿ ತಾನು ವಸೂಲಿ ಮಾಡುವ ಕಂದಾಯದ ಒಂದಂಶವನ್ನು ಸಾಮಂತನು ರಾಜನಿಗೆ ಸಲ್ಲಿಸುತ್ತಿದ್ದನು. ಅಲ್ಲದೆ, ರಾಜನು ಯುದ್ಧಕ್ಕೆ ಹೊರಟಾಗ ಆತನ ನೆರವಿಗೆ ತನ್ನ ಸೈನ್ಯವನ್ನು ಕಳಿಸಿ ಕೊಡುತ್ತಿದ್ದನು. ಈ ಸಾಮಂತನ ಆಳ್ವಿಕೆ ನಡೆದಿದ್ದ ಪ್ರದೇಶವನ್ನು ಗುರುತಿಸಲು ಏಕರೂಪದ ಸಂಜ್ಞೆ ಇರಲಿಲ್ಲ. ಅದನ್ನು ನಾಡು, ವಿಷಯ, ಭೋಗ, ಮಂಡಲ, ಆಹಾರ, ಮದಂಬ ಎಂದು ಬೇರೆ ಬೇರೆ ರೀತಿಯಲ್ಲಿ ವ್ಯವಹರಿಸಲಾಗಿತ್ತು. ಕ್ರಿ.ಶ. ಮೊದಲ ಸಹಸ್ರಮಾನದ ಉತ್ತರಾರ್ಧವು ಮುಂದಕ್ಕೆ ಸರಿದಂತೆ ಇಂಥ ಪ್ರದೇಶಗಳು ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಾ ಹೋದವು. ನಾಡಿನೊಳಗೆ ಮತ್ತೊಂದು ನಾಡು, ವಿಷಯದೊಳಗೆ ಇನ್ನೊಂದು ವಿಷಯ, ಮಂಡಲದ ಕೆಳಗೆ ವಿಷಯ, ವಿಷಯದ ಕೆಳಗೆ ಮಂಡಲ, ಹೀಗೆ ಅನೇಕ ರೀತಿಯಲ್ಲಿ ಈ ಪ್ರದೇಶಗಳು ಅಭಿವ್ಯಕ್ತಿ ಪಡೆದುಕೊಂಡವು. ಕೆಲವೊಮ್ಮೆ ಭೋಗ, ಅದರಡಿಯಲ್ಲಿ ಮಂಡಲ, ಅದರ ಕೆಳಗೆ ವಿಷಯ, ಈ ರೀತಿಯ ವ್ಯವಸ್ಥೆಯೊಂದು ಅನೇಕ ಕಡೆಗಳಲ್ಲಿ ಏಕರೂಪವಾಗಿ ಕಂಡು ಬಂದರೆ ಇದಕ್ಕಿಂತ ಭಿನ್ನವಾಗಿ ಸಂಯೋಜಿಸಲಾದ ವ್ಯವಸ್ಥೆಗಳೂ ಹೇರಳವಾಗಿಯೇ ಇದ್ದವು.

ರಾಜ್ಯವು ಕೆಲವೊಮ್ಮೆ ನಿರ್ದಿಷ್ಟವಾದ ಸೇವೆಗಳಿಗೆಂದು ಅದರಲ್ಲಿ ಪರಿಣಿತರಾದ ಮನೆತನಗಳ ವ್ಯಕ್ತಿಗಳನ್ನು ನಿಯುಕ್ತಪಡಿಸಿ ಅವರಿಗೆ ವೇತನದ ಬದಲು ನೆಲವನ್ನು ದತ್ತಿಯಾಗಿ ನೀಡುತ್ತಿತ್ತು. ಕ್ರಿ.ಪೂ. 300-600ರ ನಡುವಿನ ಬಹುತೇಕ ದಾಖಲೆಗಳಲ್ಲಿ ಇದನ್ನು ವ್ಯಕ್ತಿಯೋರ್ವನಿಗೆ ಆತನ ಜೀವಿತಾವಧಿಯವರೆಗೆ ಮಾತ್ರ ನೀಡಲಾಗಿದೆ ಎಂಬ ಸೂಚನೆ ದೊರಕುತ್ತದೆ. ಆದರೆ ಅಂಥ ವ್ಯಕ್ತಿ ಅನೇಕ ಸಂದರ್ಭಗಳಲ್ಲಿ ತನಗೆ ದೊರೆತ ಸವಲತ್ತನ್ನು ಆನುವಂಶಿಕಗೊಳಿಸುವ ಪ್ರಯತ್ನ ನಡೆಸಿದ್ದುದಕ್ಕೂ ಉದಾಹರಣೆಗಳು ಸಿಗುತ್ತವೆ. ಕ್ರಿ.ಶ. 600 ನಂತರ ಆನುವಂಶಿಕವಾಗಿ ನೀಡಲಾದ ದತ್ತಿಗಳು ಹೆಚ್ಚುತ್ತ ಹೋಗುತ್ತವೆ. ರಾಜ್ಯಕ್ಕೆಂದು ಯಜ್ಞಯಾಗಾದಿಗಳನ್ನು ಕೈಗೊಳ್ಳಲು ಬ್ರಾಹ್ಮಣರಿಗೆ ದತ್ತಿ ನೀಡಲಾಗುತ್ತಿತ್ತು. ಹಾಗೆಯೇ ಭದ್ರತೆ ಮತ್ತಿತರ ಕಾರ್ಯಗಳಿಗೆ ಸಂಬಂಧಿಸಿದ ಸೇವೆ ಸಲ್ಲಿಸಿದ ಅನೇಕರು ನೆಲವನ್ನು ದತ್ತಿ ಪಡೆದಿದ್ದರು. ಹಾಗೆ ದತ್ತಿ ಪಡೆದವರಿಗೆ ವೇತನವಿರಲಿಲ್ಲ. ದತ್ತಿನೆಲದ ಉತ್ಪನ್ನವೇ ಅವರ ವೇತನ.

ಕೃಷಿ ನೆಲದಲ್ಲಿ ಮೊದಮೊದಲು ಸಾಮೂಹಿಕ ಹಿಡುವಳಿಗಳೇ ಹೆಚ್ಚಾಗಿದ್ದರೂ ಖಾಸಗಿ ಹಿಡುವಳಿಗಳ ಸೂಚನೆಗಳೂ ನಮಗೆ ಅಲ್ಲಲ್ಲಿ ಸಿಗುತ್ತವೆ. ಅಂಥ ಉದಾಹರಣೆಗಳು ಹೇರಳವಾಗಿ ಏನೂ ದೊರಕುವುದಿಲ್ಲ. ಖಾಸಗಿ ಹಿಡುವಳಿಗಳನ್ನು ಹೊಂದಿದ್ದವರು ಸಹಜವಾಗಿಯೇ ತಮ್ಮ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಾಮೂಹಿಕ ಹಿಡುವಳಿದಾರರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದರು. ತಮ್ಮ ನೆಲದ ಮೇಲೆ ಅವರಿಗಿದ್ದ ನಿಯಂತ್ರಣವೂ ಹೆಚ್ಚು ಸಮರ್ಪಕವಾಗಿತ್ತು. ಈ ಕಾರಣದಿಂದಾಗಿ ಖಾಸಗಿ ಹಿಡುವಳಿಗಳನ್ನು ರಾಜ್ಯದ ತೆರಿಗೆಯ ವ್ಯಾಪ್ತಿಗೆ ತಂದುಕೊಳ್ಳುವುದು ಸಾಮೂಹಿಕ ಹಿಡುವಳಿಗಳನ್ನು ತಂದುಕೊಳ್ಳುವಷ್ಟು ಸುಲಭವಾಗಿರಲಿಲ್ಲ. ಆರು ಹಾಗೂ ಏಳನೆಯ ಶತಮಾನಗಳ ಪೂರ್ವಭಾರತದ ತಾಮ್ರ ಶಾಸನಗಳನ್ನು ಗಮನಿಸಿದಾಗ ಈ ಅಂಶವು ಸ್ಪಷ್ಟವಾಗುತ್ತದೆ. ಅಲ್ಲಿ ಅರಸರು ಬ್ರಾಹ್ಮಣರಿಗೆ ಹಾಗೂ ಬೌದ್ಧ ಸಂಘಗಳಿಗೆ ನೀಡಿದ ದತ್ತಿಯ ಶಾಸನವನ್ನು ಸಾಮಾನ್ಯವಾಗಿ ಅಲ್ಲಿನ ಕುಟುಂಬಿ ಎಂಬ ಸಾಮೂಹಿಕ ಭೂಮಾಲೀಕರನ್ನು ಉದ್ದೇಶಿಸಿ ರಚಿಸಲಾಗಿತ್ತು. ಆ ಭೂಮಾಲೀಕರಿಗೆ ರಾಜ್ಯವು ರವಾನಿಸಿದ ಸಂದೇಶಗಳೇ ಈ ಶಾಸನಗಳು. ಇದಕ್ಕಿಂತ ಭಿನ್ನವಾದ ಚಿತ್ರವೊಂದು ಉತ್ತರ ಒಡಿಶಾ ಹಾಗೂ ಬಂಗಾಳದ ಕೆಲವು ಶಾಸನಗಳಲ್ಲಿ ಸಿಗುತ್ತದೆ. ಉದಾಹರಣೆಗೆ, ಗೋಪಚಂದ್ರನ ಜಯರಾಮ್‌ಪುರ ಶಾಸನದಲ್ಲಿ ಬೌದ್ಧ ಸಂಘವೊಂದಕ್ಕೆ ದತ್ತಿ ನೀಡಲಾಗಿದೆ. ಈ ನೆಲವನ್ನು ಗೋಪಚಂದ್ರನು ಅದರ ಖಾಸಗಿ ಮಾಲೀಕನಿಂದ ಹಣ ಕೊಟ್ಟು ಕೊಂಡುಕೊಂಡ ಮೇಲೆ ದತ್ತಿಯಾಗಿ ನೀಡಿದನು. ರಾಜ್ಯ ಎಂಬ ವ್ಯವಸ್ಥೆ ಈ ಹಿಂದೆ ನೆಲೆಗೊಂಡಿತ್ತೆಂಬ ಯಾವ ಸೂಚನೆಯೂ ಇಲ್ಲದ ಸೀಮೆಗೆ ಸೇರಿದ ಊರು ಜಯರಾಮ್‌ಪುರ. ಗೋಪಚಂದ್ರನ ಶಾಸನವೇ ಅಲ್ಲಿ ರಾಜ್ಯಕೇಂದ್ರಿತ ಪ್ರಭುತ್ವದ ವ್ಯವಸ್ಥೆ ಜಾರಿಗೊಂಡುದ್ದರ ಪ್ರಪ್ರಥಮ ದಾಖಲೆಯಾಗಿದೆ. ಅಂಥಲ್ಲಿ ಈಗಾಗಲೇ ಖಾಸಗಿ ಹಿಡುವಳಿ ನೆಲೆಗೊಂಡಿದೆ. ಕುಟುಂಬಿಗಳೆಂಬ ಸಾಮೂಹಿಕ ಹಿಡುವಳಿದಾರರಿಗೆ ಆದೇಶವನ್ನು ಹೊರಡಿಸುವ ಮೂಲಕ ಫಲಾನುಭವಿಗಳಿಗೆ ದತ್ತಿ ನೀಡುವ ಕಾರ್ಯವು ಇಲ್ಲಿ ಅಂದು ಸಾಧ್ಯವಿರಲ್ಲ ಎಂಬುದು ಗೋಪಚಂದ್ರನ ಶಾಸನದಿಂದ ಸ್ಪಷ್ಟವಾಗುತ್ತದೆ. ಅಂಥ ಅನೇಕ ಉದಾಹರಣೆಗಳು ವಂಗ ಎಂಬ ಬಾಂಗ್ಲಾದೇಶದ ಪ್ರದೇಶದಿಂದ ಹಾಗೂ ವರ್ಧಮಾನವನ್ನು ಒಳಗೊಂಡ ರಾಢ ಎಂಬ ಪಶ್ಚಿಮ ಬಂಗಾಳದ ಪ್ರದೇಶದಿಂದ ಸಿಗುತ್ತವೆ.

ರಾಜ್ಯವು ಬ್ರಾಹ್ಮಣ, ಬೌದ್ಧ ಹಾಗೂ ಜೈನ ಫಲಾನುಭವಿಗಳಿಗೆ ನೆಲವನ್ನು ದತ್ತಿಯಾಗಿ ನೀಡುವ ಪ್ರಕ್ರಿಯೆಯನ್ನು ಕ್ರಿ.ಶ. 400ಕ್ಕಿಂತ ಹಿಂದೆ ಅಷ್ಟೇನೂ ಕಾಣಲಾರೆವು. ಅಂಥ ಮೊದಲ ಉಲ್ಲೇಖವು ಕ್ರಿ.ಪೂ. ಮೊದಲ ಶತಮಾನಕ್ಕೆ ಸೇರಿದ್ದಾಗಿದೆ. ಸಾತವಾಹನರ ಅರಸಿ ನಾಗನಿಕಾ ಎಂಬಾಕೆ ಓರ್ವ ಬ್ರಾಹ್ಮಣನಿಗೆ ನೀಡಿದ ದತ್ತಿಯೇ ಈ ಸಾಲಿಗೆ ಸೇರಿದ ಮೊದಲ ದಾಖಲೆ. ಅನಂತರ ಸಾತವಾಹನ ಅರಸುಗಳಾದ ಗೌತಮೀಪುತ್ರ ಸಾತಕರ್ಣಿ, ವಾಸಿಷ್ಠೀಪುತ್ರ ಪುಲುಮಾವಿ ಮುಂತಾದವರು ಬೌದ್ಧ ಸಂಘಗಳಿಗೆ ನಾಕಾರು ದತ್ತಿಗಳನ್ನು ನೀಡಿದ ವಿವರವು ಶಾಸನೋಕ್ತವಾಗಿ ನಮಗೆ ದೊರಕುತ್ತದೆ. ಬೌದ್ಧಸಂಘಗಳಿಗೆ ನೀಡಿದ ದತ್ತಿಗಳನ್ನು ಕೆಲವೊಮ್ಮೆ ಅಕ್ಷಯ ನೀವಿ ಎಂದು ಕರೆಯಲಾಗಿತ್ತು. ಹಾಗೆಂದರೆ ಚಿರಕಾಲ ಉಳಿಯುವ ದತ್ತಿ, ಅಲ್ಲದೆ ದತ್ತಿ ಪಡೆದವರ ಜೀವನಾವಧಿಗೆ ಮಾತ್ರ ಸೀಮಿತವಾದುದ್ದಲ್ಲ ಎಂದರ್ಥ. ಹೀಗೆ ಹಿಂದೆ ಅಪರೂಪಕ್ಕೆ ಮಾತ್ರ ಕಾಣುತ್ತಿದ್ದ ದತ್ತಿ ನೀಡುವ ವಿದ್ಯಮಾನವು ಐದನೆಯ ಶತಮಾನದ ನಂತರ ನಿಯಮಿತವಾಗಿ ನಡೆಯತೊಡಗಿತು. ರಾಜ್ಯವು ವಿವಿಧ ಸೇವೆಗಳಿಗೆಂದು ನೇಮಕಾತಿ ನಡೆಸುವ ವ್ಯಕ್ತಿಗಳಿಗೆ ನೀಡುವ ದತ್ತಿಯನ್ನು ವೃತ್ತಿ ಎಂದು ಕರೆಯಲಾಯ್ತು. ಈ ವೃತ್ತಿನೆಲಗಳ ವಿಸ್ತರಣೆಯೇ ಹೊಸ ಕಾರ್ಷಿಕ ವ್ಯವಸ್ಥೆಯ ಕೊಂಡಿಯಾಗಿತ್ತು.

ದತ್ತಿ ನೀಡಿದವರಿಗೆ ಭೂಮಾಲೀಕತ್ವದ ಹಕ್ಕುಗಳಿರಲಿಲ್ಲ. ಆದರೂ ಅವರು ಆ ನೆಲದಲ್ಲಿ ಅಪಾರ ಪ್ರಮಾಣದಲ್ಲಿ ಹಸ್ತಕ್ಷೇಪ ನಡೆಸುವ ಸಾಮರ್ಥ್ಯ ಹೊಂದಿದ್ದರಿಂದ ಅವರೇ ಭೂಮಾಲೀಕರಂತೆ ಕಂಗೊಳಿಸಿದ್ದು ಸಹಜವೇ ಆಗಿದೆ. ಇದು ಈಗಾಗಲೇ ಸಾಮೂಹಿಕವಾಗಿ ಹಿಡುವಳಿಗಳನ್ನು ಹೊಂದಿದ್ದ ವರ್ಗದವರಿಗೆ ಹೊರೆಯಾಗಿ ತೋರಿರಬೇಕು. ಈ ಸಂದರ್ಭದಲ್ಲಿ ನೆಲದ ಮೇಲಿನ ಒಡೆತನ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ತಲೆದೋರಿತು. ಹಿಡುವಳಿಗಳನ್ನು ಸಾಮೂಹಿಕವಾಗಿ ಯಾ ಖಾಸಗಿಯಾಗಿ ಹೊಂದಿದ್ದ ವ್ಯಕ್ತಿಗಳು ಭೂಮಾಲೀಕರೇ, ಅಥವಾ ಎಲ್ಲ ನೆಲವೂ ಅರಸನ ಮಾಲೀಕತ್ವಕ್ಕೆ ಸೇರಿದ್ದೇ? ಇತಿಹಾಸಕಾರರ ನಡುವಲ್ಲಿ ಇದು ದೊಡ್ಡ ಪ್ರಶ್ನೆಯಾಗಿ ಹಲವು ದಶಕಗಳ ಕಾಲ ಚರ್ಚೆಗೆ ಗುರಿಯಾದ ವಿಷಯವಾಗಿದೆ. ಹಿಡುವಳಿಗಳನ್ನು ಹೊಂದಿದವರು ಮಾಲೀಕರಾದರೆ ಅವರು ರಾಜ್ಯಕ್ಕೆ ಸಲ್ಲಿಸುವುದು ತೆರಿಗೆ ಅಥವಾ ಕಂದಾಯವಾಗುತ್ತದೆ. ಆದರೆ, ರಾಜನೇ ನಿಜವಾದ ಭೂಮಾಲೀಕ ಎಂದಾದರೆ ಹಿಡುವಳಿಗನ್ನು ಹೊಂದಿದ್ದ ಜನ ಕೇವಲ ಗೇಣಿದಾರರಾಗುತ್ತಾರೆ. ಈ ಕಾರಣದಿಂದ ಅವರು ರಾಜ್ಯಕ್ಕೆ ಸಲ್ಲಿಸುವುದು ಬಾಡಿಗಯಾಗುತ್ತದೆ. ಕ್ರಿ.ಶ. 700-1200ರ ನಡುವಿನ ಉತ್ತರ ಭಾರತದ ಆರ್ಥಿಕ ಚರಿತ್ರೆಯನ್ನು ಬರೆದ ಲಲ್ಲನ್‌ಜೀ ಗೋಪಾಲ್ ಹೇಳುವಂತೆ ಯಾರು ಮಾಲೀಕರು ಎಂಬುದು ಇತಿಹಾಸಕಾರರ ನಡುವಲ್ಲಿ ವಿವಾದಕ್ಕೆ ಕಾರಣವಾಗಿದ್ದಂತೆಯೇ ಅಂದು ಧರ್ಮಶಾಸ್ತ್ರಾದಿ ಗ್ರಂಥಗಳನ್ನು ರಚಿಸಿದ ಪಂಡಿತರ ನಡುವಲ್ಲಿಯೂ ಒಮ್ಮತವಿಲ್ಲದೆ ವಿವಾದಕ್ಕೆ ಹೇತುವಾಗಿತ್ತು. ಭೂಮಾಲೀಕತ್ವ ರಾಜ್ಯಕ್ಕೆ ಸೇರಿದ್ದೆಂದು ವಾದಿಸುವವರಿದ್ದರು, ಆದರೆ ಅವರ ಸಂಖ್ಯೆ ಕಡಿಮೆಯಾಗಿತ್ತು. ಹೆಚ್ಚಿನ ಸೂತ್ರಗಳಲ್ಲಿಯೂ ಆಯಾ ನೆಲದ ಮೇಲೆ ಒಡೆತನವಿದ್ದವರೇ ಭೂಮಾಲೀಕರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ ಎಂದು ಗೋಪಾಲ್ ತಿಳಿಸುತ್ತಾರೆ.

ಅಂಥ ರೈತಾಪಿ ವರ್ಗದ ಭೂಮಾಲೀಕರು ತಮ್ಮ ಹಿತಾಸಕ್ತಿಗಳ ಸಂರಕ್ಷಣೆಗೆಂದು ರಚಿಸಿಕೊಂಡ ಒಕ್ಕೂಟಗಳೇ ಕುಟುಂಬಿ, ಮಹತ್ತರ ಮೊದಲಾದ ಗುಂಪುಗಳು. ತಮ್ಮ ನೆಲದ ಮೇಲಿನ ನಿಯಂತ್ರಣವು ಬಿಗಿಯಾಗಿರಲೆಂದು ಇವರು ಎಲ್ಲ ಭೂಸಂಬಂಧಿ ವ್ಯವಹಾರಗಳನ್ನೂ ಸಣ್ಣ ಪ್ರದೇಶವೊಂದಕ್ಕೇ ಸೀಮಿತಗೊಳಿಸಿದ್ದರು. ಅಂಥ ಪ್ರದೇಶಗಳೇ ನಾಡು, ವಿಷಯ ಮೊದಲಾದ ಸಂಜ್ಞೆಯಿಂದ ಗುರಿತಿಸಲ್ಪಟ್ಟದ್ದು. ವೈವಾಹಿಕ ಸಂಬಂಧಗಳಲ್ಲಿ ವರದಕ್ಷಿಣೆಯ ಮೂಲಕ ನೆಲದ ಹಸ್ತಾಂತರಣ ನಡೆಯುವಕಾರಣ ಕಾರ್ಷಿಕ ಉತ್ಪಾದನೆಯ ಪ್ರಕ್ರಿಯಯಲ್ಲಿ ಹೊರಗಿನವರು ಆಗಮಿಸಿ ಈಗಾಗಲೇ ನೆಲೆಗೊಂಡಿದ್ದ ಸಂತುಲನೆಯನ್ನು ಅಸ್ತವ್ಯಸ್ತಗೊಳ್ಳಿಸದಿರಲೆಂದು ವಿವಾಹವನ್ನೂ ನಾಡು ಅಥವಾ ವಿಷಯಕ್ಕೇ ಸೀಮಿತಗೊಳಿಸುವ ನೀತಿ ರೂಢಿಗೆ ಬಂತು. ವಿವಾಹ ಸಂಬಂಧಗಳು ಸಣ್ಣ ಕ್ಷೇತ್ರವೊಂದರಲ್ಲಿ ಮಾತ್ರ ನಡೆಯುತ್ತಿತ್ತು, ಆಯಾ ನಾಡುಗಳ ಅಥವಾ ವಿಷಯಗಳ ಹೊರಕ್ಕೆ ಹೆಣ್ಣು ಕೊಡುವ ಪದ್ಧತಿ ಇರಲಿಲ್ಲ ಎಂದು ಆರಂಭದ ಅಧ್ಯಾಯವೊಂದರಲ್ಲಿ ಹೇಳಿದ್ದಕ್ಕೆ ಇದೇ ಕಾರಣವಾಗಿದೆ.

ಈ ರೀತಿ ಹೊಸ ಕಾರ್ಷಿಕ ವ್ಯವಸ್ಥೆಯಲ್ಲಿ ಒಳವಿವಾಹದ ಸಂಬಂಧಗಳನ್ನು ಬೆಳೆಸಿಕೊಂಡ ಕುಟುಂಬಿಗಳು ಮುಂದೆ ಕುನ್ವಿ, ಕುರ್ಮಿ ಮೊದಲಾದ ಜಾತಿಗಳಾಗಿ ಪರಿವರ್ತನೆ ಹೊಂದಿದರು. ಅದೇ ರೀತಿ ಮಹತ್ತರರು ಮೆಹತಾ, ಮಹತೋ, ಮಹಂತಾ, ಮಹಾಂತಿ, ಮಲ್ಹೋತ್ರಾ, ಮೆಹರೋತ್ರಾ, ಹೀಗೀ ತಮ್ಮ ತಮ್ಮ ಪ್ರದೇಶಗಳಲ್ಲಿ ಒಳವಿವಾಹದ ಜಾತಿಗಳಾಗಿ ಮಾರ್ಪಾಟುಗೊಂಡರು. ಕೆಲವೆಡೆಗಳಲ್ಲಿ ಅಂಥ ರೈತಾಪಿ ವರ್ಗದ ಭೂಮಾಲೀಕರನ್ನು ಗ್ರಾಮವೃದ್ಧ ಎನ್ನಲಾಗುತ್ತಿತ್ತು. ಕಾಳಿದಾಸನ ಮೇಘದೂತದಲ್ಲಿ ಉಜ್ಜಯಿನಿಯಲ್ಲಿ ಉದಯನ ರಾಜನ ಕಥೆ ಹೇಳುವಲ್ಲಿ ನಿಷ್ಣಾತರಾದ ಗ್ರಾಮವೃದ್ಧರ (ಉದಯನಕಥಾಕೋವಿದೋ ಗ್ರಾಮವೃದ್ಧಃ) ಉಲ್ಲೇಖ ಬರುತ್ತದೆ. ಗ್ರಾಮವೃದ್ಧ ಶಬ್ದವು ಪ್ರಾಕೃತದಲ್ಲಿ ಗಾಮವುಡ್ಢ ಎಂದಾಗಿ ಮುಂದೆ ಗಾಮುಂಡ, ಗಾವುಂಡ, ಗೌಡ, ಗೌಡ್, ಹೀಗೆಲ್ಲಾ ರೂಪಾಂತರ ಹೊಂದಿ ಜಾತಿಗಳಾದವು. ಪರ್ಶಿಯಾ ಮೂಲದ ಯಂತ್ರವೊಂದು (ಪರ್ಶಿಯನ್ ವೀಲ್) ನೀರಾವರಿಗೆಂದು ಬಳಕೆಯಾಗತೊಡಗಿದ್ದೂ ಈ ಸಂದರ್ಭದಲ್ಲಿಯೇ ಆಗಿದೆ. ಅರಘಟ್ಟ ಎಂಬ ಈ ಯಂತ್ರವು ಭಾರತದಲ್ಲಿ ರಟ್ಟ, ರಾಟ ಎಂಬ ಹೆಸರುಗಳನ್ನು ಪಡೆದುಕೊಂಡಿತು. ಕನ್ನಡದ ರಾಟೆಯು ಈ ಮೂಲದಿಂದ ಬಂದ ಶಬ್ದವಾಗಿದೆ. ಅನೇಕ ರೈತಾಪಿ ಭೂಮಾಲೀಕ ಮನೆತನಗಳು ತಮ್ಮನ್ನು ರಟ್ಟಕುಲದವರೆಂದು ಕರೆದುಕೊಂಡ ನಿದರ್ಶನಗಳು ಶಾಸನಗಳಲ್ಲಿ ದೊರಕುತ್ತವೆ. ಅಂಥವರು ಮೇಲೆ ಹೇಳಿದ ರೀತಿಯಲ್ಲಿಯೇ ಜಾತಿಯಾಗಿ ವಿಕಾಸ ಹೊಂದಿದರು. ರೆಡ್ಡಿ, ರಾಠಿ, ರಾಠೋಡ್, ಮೊದಲಾದವು ಅಂಥ ಜಾತಿಗಳು.

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಹದಿನಾಲ್ಕನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹದಿಮೂರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹನ್ನೆರಡನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹನ್ನೊಂದನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಏಳನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂದನೇ ಕಂತು

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...