ಜಾತಿ ಪದ್ಧತಿಯ ಮೈಮನಗಳು-ಹದಿನಾರನೇ ಕಂತು

Date: 09-01-2021

Location: .


ಭಾರತದ ಜಾತಿ ವ್ಯವಸ್ಥೆಯ ಪರ-ವಿರೋಧ ಹಾಗೂ ಅದರ ಸಂಕೀರ್ಣತೆಯ ಬಗ್ಗೆ ಚರ್ಚಿಸಿರುವ ಹಿರಿಯ ವಿದ್ವಾಂಸ ಡಾ. ಮನು ವಿ. ದೇವದೇವನ್ ಅವರು ಇತಿಹಾಸದ ಪರಿಪ್ರೇಕ್ಷದಲ್ಲಿಟ್ಟು ಜಾತಿ ಪದ್ಧತಿಯ ಕುರಿತ ವಿಶಿಷ್ಟ ಒಳನೋಟಗಳನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿ ವಾರಕ್ಕೊಮ್ಮೆ ಪ್ರಕಟವಾಗುವ ಈ ಸರಣಿಯ ಹದಿನಾರನೇ ಕಂತಿನ ಬರಹ ಇಲ್ಲಿದೆ.

ಕ್ರಿ.ಶ. 600-1200ರ ಅವಧಿಯಲ್ಲಿ ಹಿಂದೆ ಕೃಷಿ ನಡೆದಿರದಂತ ಅನೇಕ ಭೂಪ್ರದೇಶಗಳಲ್ಲಿ ಆರಂಭ ಕಾರ್ಯಗಳಿಗೆ ಚಾಲನೆ ದೊರಕಿತು. ಕಾರ್ಷಿಕ ಜೀವನವು ಇದರಿಂದಾಗಿ ಹೆಚ್ಚಿನ ಸಂಕೀರ್ಣತೆ ಹೊಂದಿತು. ಭೂಮಾಲೀಕತ್ವದ ಸ್ವರೂಪವನ್ನು ಈ ಬೆಳವಣಿಗೆಯು ಸಾರಭೂತವಾದ ಪರಿವರ್ತನೆಗೆ ಒಡ್ಡಿದ್ದು ಶಾಸನಗಳಿಂದ ವೇದ್ಯವಾಗುತ್ತದೆ. ಕಾರ್ಷಿಕ ವ್ಯವಸ್ಥೆಯಲ್ಲಿ ಮುಂದಾಳತ್ವ ವಹಿಸಿದ ವರ್ಗದವರು ಭೂ ಹಿಡುವಳಿಗಳ ಮೇಲೆ ಆನುವಂಶಿಕವಾದ ನಿಯಂತ್ರಣವನ್ನು ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾದ ಕಾಲ ಇದಾಗಿತ್ತು. ಅನೇಕ ಸಂದರ್ಭಗಳಲ್ಲಿ ಈ ನಿಯಂತ್ರಣವನ್ನು ಅಲ್ಲಿನ ಮಹಾಜನರಂಥ ಸ್ಥಳೀಯ ಪ್ರಭುಗಳು ಸಾಮೂಹಿಕ ಒಕ್ಕೂಟಗಳನ್ನು ಕಟ್ಟಿಕೊಳ್ಳುವ ಮೂಲಕವೇ ಸಾಧಿಸಿದರು. ಅಂಥಲ್ಲಿ ನೆಲವು ಖಾಸಗಿ ಆಸ್ತಿಯಾಗಿ ಮಾರ್ಪಡಲಿಲ್ಲ. ಇದಕ್ಕಿಂತ ಭಿನ್ನವಾಗಿ ಇತರೆಡೆಗಳಲ್ಲಿ ಭೂನಿಯಂತ್ರಣ ಖಾಸಗಿ ಭೂಮಾಲೀಕತ್ವದ ಹಾದಿ ಹಿಡಿದದ್ದನ್ನು ಕಾಣುತ್ತೇವೆ.

ಈ ಕುರಿತು ಭಾರತದ ಬಹುತೇಕ ಪ್ರದೇಶಗಳಲ್ಲಿ ಕೂಲಂಕಷವಾದ ಅಧ್ಯಯನಗಳು ಈವರೆಗೂ ನಡೆದಿಲ್ಲ. ತಮಿಳುನಾಡಿನ ಸಂದರ್ಭದಲ್ಲಿ ವೈ. ಸುಬ್ಬರಾಯಲು ಅವರು ಕೈಗೊಂಡ ವಿಶಿಷ್ಟ ಅಧ್ಯಯನಗಳ ಪರಿಣಾಮವಾಗಿ ನಮಗೆ ಸಮರ್ಪಕವಾದ ಹಲವು ಮಾಹಿತಿಗಳು ಲಭ್ಯವಾಗಿವೆ. ಕೇರಳದ ಕುರಿತು ನಾನು ಕೈಗೊಂಡ ಅಧ್ಯಯನ ಸುಬ್ಬರಾಯಲು ಅವರು ಬೆಳಕಿಗೆ ತಂದಿರುವ ಚಿತ್ರವನ್ನು ಸಮರ್ಥಿಸುತ್ತದೆ.

ಕ್ರಿ.ಶ. ಒಂಬತ್ತನೆಯ ಹಾಗೂ ಹದಿಮೂರನೆಯ ಶತಮಾನಗಳ ನಡುವಿನ ಶಾಸನಗಳಲ್ಲಿ ಕಾಣುವ ಭೂಮಾಲೀಕತ್ವದ ಸ್ವರೂಪವನ್ನು ಸುಬ್ಬರಾಯಲು ಸಮೀಕ್ಷಿಸಿದ್ದಾರೆ. ಅವರು ನೀಡುವ ವಿವರಗಳು ಈ ರೀತಿಯದಾಗಿವೆ. ಕ್ರಿ.ಶ. 850 ಹಾಗೂ 985 (ಇದು ರಾಜರಾಜ ಚೋಳನು ಅಧಿಕಾರಕ್ಕೆ ಬಂದ ವರ್ಷ) ನಡುವೆ ತಮಿಳುನಾಡಿನಲ್ಲು ಭೂವ್ಯಾಪಾರದ ಒಂದುನೂರ ಮೂವತ್ತೊಂಬತ್ತು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸಭಾ ಎಂಬ ಬ್ರಾಹ್ಮಣರ ಒಕ್ಕೂಟಗಳು ತಾವು ಹೊಂದಿದ್ದ ನೆಲವನ್ನು ಮಾರಿದ್ದು ಎಪ್ಪತ್ತಮೂರು ಸಲ. ಗ್ರಾಮದ ಕಾರ್ಷಿಕ ಪ್ರಭುಗಳು ಊರ್ ಎಂಬ ಒಕ್ಕೂಟದ ಮೂಲಕ ತಮ್ಮ ಸಾಮೂಹಿಕ ವ್ಯವಹಾರಗಳನ್ನು ನಡೆಸುತ್ತಿದ್ದರು. ಊರು‌ಗಳು ಮಾರಿದ ನೆಲಗಳ ಸಂಖ್ಯೆ ಇಪ್ಪತ್ತಮೂರು. ದೇವಾಲಯಗಳೂ ಅಂದು ಅಪಾರ ಪ್ರಮಾಣದಲ್ಲಿ ಭೂಹಿಡುವಳಿಗಳನ್ನು ಹೊಂದಿದ್ದವು. ಅವು ತಮ್ಮ ಹಿಡುವಳಿಯನ್ನು ಮಾರಿದ ಸಂದರ್ಭ ಒಂದೇ ಒಂದು.

ವ್ಯಕ್ತಿಗಳ ಪೈಕಿ ಭೂಸ್ವತ್ತನ್ನು ಮಾರಿದವರಲ್ಲಿ ಬ್ರಾಹ್ಮಣರ ಸಂಖ್ಯೆ ನಲವತ್ತು, ಬ್ರಾಹ್ಮಣೇತರರು ಎರಡೇ ಎರಡು. ಹೀಗೆ ಮಾರಾಟವಾದ ಒಂದುನೂರ ಮೂವತ್ತೊಂಬತ್ತು ಹಿಡುವಳಿಗಳನ್ನು ಕೊಂಡವರು ಯಾರು? ಬ್ರಾಹ್ಮಣರ ಸಭಾ ಒಕ್ಕೂಟವು ಕೊಂಡದ್ದು ಎರಡು, ಕಾರ್ಷಿಕ ಪ್ರಭುಗಳ ಊರ್ ಕೊಂಡದ್ದು ಒಂದು, ದೇವಾಲಯಗಳು ಕೊಂಡದ್ದು ಇಪ್ಪತ್ತಾರು, ಬ್ರಾಹ್ಮಣರು ವೈಯಕ್ತಿವಾಗಿ ಕೊಂಡದ್ದು ಇಪ್ಪತ್ತೊಂದು, ಬ್ರಾಹ್ಮಣೇತರರು ವೈಯಕ್ತಿಕವಾಗಿ ಕೊಂಡದ್ದು ಎಂಬತ್ತೊಂಬತ್ತು. ಅಂದರೆ, ಒಂದುನೂರ ಮೂವತ್ತೊಂಬತ್ತರಲ್ಲಿ ಒಟ್ಟಾರೆಯಾಗಿ ತೊಂಬತ್ತಾರು ಮಾರಾಟಗಳನ್ನು ಒಕ್ಕೂಟಗಳು ನಡೆಸಿದ್ದರೆ ನೂರ ಹತ್ತು ಖರೀದಿಗಳನ್ನು ವ್ಯಕ್ತಿಗಳು ಮಾಡಿದ್ದರು.

ಆರಂಭದ ಹಂತದಲ್ಲಿ ಕಂಡ ಈ ಚಿತ್ರವೇ ಚೋಳರ ಆಳ್ವಿಕೆಯ ಉಳಿದ ಅವಧಿಯಲ್ಲಿಯೂ ಮುಂದುವರೆಯುತ್ತದೆ. ಕ್ರಿ.ಶ. 985 ಮತ್ತು 1250 ನಡುವೆ ಭೂಹಿಡುವಳಿ ಮಾರಿದ ನೂರ ಮೂವತ್ತಾರು ದಾಖಲೆಗಳಿವೆ. ಈ ಪೈಕಿ ವಿವಿಧ ಸಭಾಗಳು ಐವತ್ತೈದು ಹಿಡುವಳಿಗಳನ್ನು ಮಾರಿದವು, ಆದರೆ ಒಂದೂ ಖರೀದಿಯನ್ನು ನಡೆಸಲಿಲ್ಲ. ಊರ್‌ಗಳು ಮೂವತ್ತಾರು ಮಾರಾಟಗಳನ್ನು ನಡೆಸಿದಾಗ ಖರೀದಿಸಿದ್ದು ಕೇವಲ ಒಂದು ಹಿಡುವಳಿಯನ್ನು ಮಾತ್ರ. ದೇವಾಲಯಗಳ ಸ್ಥಿತಿ ಸಭಾ ಹಾಗೂ ಊರ್‌ಗಳಿಗಿಂತ ಭಿನ್ನವಾಗಿತ್ತು. ಅವು ಮಾರಿದ್ದು ಹತ್ತು ಹಿಡುವಳಿಗಳನ್ನು, ಆದರೆ ಕೊಂಡದ್ದು ಮೂವತ್ತೇಳನ್ನು.

ವೈಯಕ್ತಿಕ ಬ್ರಾಹ್ಮಣರ ಸಂಖ್ಯೆ ಭೂವಹಿವಾಟುಗಳಲ್ಲಿ ಇಳಿಮುಖ ಕಂಡಿತು. ಅವರಲ್ಲಿ ಕೇವಲ ಐದೇ ಐದು ಖರೀದಿಗಳ ಪ್ರಕರಣಗಳು ದಾಖಲಾಗಿವೆ. ಐದೂ ಪ್ರಕರಣಗಳು ಕ್ರಿ.ಶ. 1070ಕ್ಕಿಂತ, ಅಂದರೆ ಮೊದಲನೆಯ ಕುಲೋತ್ತುಂಗನ ಆಳ್ವಿಕೆ ಪ್ರಾರಂಭವಾಗುವುದಕ್ಕಿಂತ ಹಿಂದಿನದು. 1070ರ ನಂತರ ಬ್ರಾಹ್ಮಣರು ವೈಯಕ್ತಿಕವಾಗಿ ನೆಲವನ್ನು ಕೊಂಡ ದಾಖಲೆಗಳಿಲ್ಲ. ಅದೇ ವೇಳೆಗೆ ಬ್ರಾಹ್ಮಣರು 985-1250 ಅವಧಿಯಲ್ಲಿ ಮಾರಿದ್ದು ಹದಿನಾರು ಹಿಡಿವಳಿಗಳನ್ನು. ಅವುಗಳಲ್ಲಿ ಹತ್ತು 1070ರ ನಂತರ ನಡೆದದ್ದು. ಬ್ರಾಹ್ಮಣೇತರರು ವೈಯಕ್ತಿಕವಾಗಿ ಇಪ್ಪತ್ತು ಹಿಡುವಳಿಗಳನ್ನು ಮಾರಿದರು, ಆದರೆ ಅವರು ಕೊಂಡದ್ದೋ, ತೊಂಬತ್ತಮೂರು ಹಿಡುವಳಿಗಳನ್ನು.

ಚೋಳರ ಕಾಲದಲ್ಲಿ ನಡೆದ ಒಟ್ಟು ಇನ್ನೂರ ಎಪ್ಪತ್ತೈದು ಭೂಮಾರಾಟಗಳಲ್ಲಿ ಬ್ರಾಹ್ಮಣೇತರರು ಒಂದುನೂರ ಎಂಬತ್ತಮೂರು ಹಿಡುವಳಿಗಳನ್ನು ಖರೀದಿಸಿದರು. ಇದು ಒಟ್ಟು ಮೊತ್ತದ 66.55% ಆಗುತ್ತದೆ. ಈ ರೀತಿಯಲ್ಲಿ ಭೂಸ್ವಾಮ್ಯವನ್ನು ಹೊಂದಲು ಸಾಧ್ಯವಾದದ್ದು ಅಂದು ತಮಿಳುನಾಡಿನಲ್ಲಿ ಬ್ರಾಹ್ಮಣರು ಸಾಧಿಸಿಕೊಂಡಿದ್ದ ಮೇಲುಗೈಗೆ ಬ್ರಾಹ್ಮಣೇತರರು ತೀವ್ರವಾದ ಸವಾಲನ್ನು ಒಡ್ಡುವಂತೆ ಮಾಡಿತು. ಹೀಗೆ ಭೂಮಾಲೀಕರಾದವರಲ್ಲಿ ಬಹುತೇಕರು ರೈತಾಪಿ ವರ್ಗಕ್ಕೆ ಸೇರಿದವರಾಗಿದ್ದರು. ಅಂಥವರು ಕ್ರಮೇಣ ವೆಳ್ಳಾಳರ್ ಎಂಬ ಜಾತಿಯಾಗಿ ರೂಪಾಂತರ ಹೊಂದಿದರು.

ಭೂ ಹಿಡುವಳಿಗಳ ಮೇಲೆ ವಿವಿಧ ರೀತಿಯ ನಿಯಂತ್ರಣ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾದ ಬ್ರಾಹ್ಮಣೇತರರು ತಮ್ಮತಮ್ಮ ನೆಲೆಗಳಲ್ಲಿ ಜಾತಿಗಳಾಗಿ ರೂಪಾಂತರ ಹೊಂದಿದರು. ತಮಿಳುನಾಡಿನ ಉದಾಹರಣೆ ಸೂಚಿಸುವಂತೆ ಎಲ್ಲೆಡೆಯಲ್ಲಿಯೂ ಇದು ಖಾಸಗಿ ಹಿಡುವಳಿಗಳ ಮೇಲಿನ ನಿಯಂತ್ರಣದ ಮೂಲಕವೇ ನಡೆದಿರಬೇಕಿಲ್ಲ. ಸಾಮೂಹಿಕವಾದ ಹಿಡುವಳಿಗಳ ಅನೇಕ ಉದಾಹರಣೆಗಳನ್ನು ಶಾಸನಗಳಲ್ಲಿ ಕಾಣಬಹುದಾಗಿದೆ.

ತಮ್ಮತಮ್ಮ ಹಿಡುವಳಿಗಳ ಮೇಲೆ ಬಿಗಿಯಾದ ನಿಯಂತ್ರಣ ಸ್ಥಾಪಿಸಿಕೊಳ್ಳುವ ಉದ್ದೇಶದಿಂದ ಭೂಪ್ರಭುಗಳು ತಮ್ಮ ಖಾಸಗಿ ಯಾ ಸಾಮೂಹಿಕ ಸ್ವತ್ತುಗಳೆಲ್ಲವೂ ಸಣ್ಣ ಹಾಗೂ ನಿರ್ದಿಷ್ಟ ಭೂಪ್ರದೇಶವೊಂದಕ್ಕೆ ಸೀಮಿತಗೊಳಿಸಿಕೊಂಡುದ್ದನ್ನು ಕಾಣುತ್ತೇವೆ. ಅಂದಿನ ಜಾತಿಯ ಸ್ವರೂಪದ ದೃಷ್ಟಿಯಿಂದ ಇದೊಂದು ಮಹತ್ವದ ವಿಚಾರವಾಗಿದೆ. ಈ ಭೂಪ್ರಭುಗಳ ಹಿಡುವಳಿಗಳು ಎಷ್ಟೇ ವಿಶಾಲವಾಗಿದ್ದರೂ ಅವು ಒಂದೇ ಒಂದು ಭೂಪ್ರದೇಶದ ವ್ಯಾಪ್ತಿಗೆ ಸೇರಿದ್ದೇ ಆಗಿರುತ್ತಿದ್ದವು. ಇತರ ಭೂಪ್ರದೇಶಗಳಲ್ಲಿ ಅವರು ಭೂನಿಯಂತ್ರಣವನ್ನು ಸಾಧಿಸುತ್ತಿರಲಿಲ್ಲ. ಹಾಗೆ ಸಾಧಿಸಿಕೊಂಡಿದ್ದೇ ಆದರೆ ಅದು ತಮ್ಮ ಮೂಲ ಕ್ಷೇತ್ರದ ಹಿಡುವಳಿಗಳನ್ನು ಕೈಬಿಟ್ಟಮೇಲೆ ಮಾತ್ರ.

ಭೂಪ್ರಭುಗಳು ಸ್ಥಳೀಯ ಮಾರುಕಟ್ಟೆಗಳನ್ನು ಸ್ವಾಧೀನಕ್ಕೆ ತಂದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು. ಅಂಥ ಮಾರುಕಟ್ಟೆಗಳು ಕಾರ್ಷಿಕ ಉತ್ಪನ್ನಗಳ ವಿನಿಮಯ ಹಾಗೂ ದೀರ್ಘದೂರದ ರಫ್ತು ಯಾ ಆಮದು ವ್ಯಾಪಾರಕ್ಕೆ ಅನುವು ಮಾಡಿಕೊಡುವ ಕೇಂದ್ರಗಳಾಗಿದ್ದವು. ಹೀಗೆ ಭೂಸ್ವಾಮ್ಯ, ಕಾರ್ಷಿಕ ಉತ್ಪಾದನೆ, ಮಾರುಕಟ್ಟೆ, ಈ ಮೂರು ಅಂಶಗಳು ಕೈಗೂಡಿಸಿಕೊಂಡು ಆಳಕ್ಕೆ ಬೇರುಗಳನ್ನು ಚೆಲ್ಲಿಕೊಂಡ ಆರ್ಥಿಕ ವ್ಯವಸ್ಥೆಯೊಂದು ಕ್ರಿ.ಶ. 600-1200 ಕಾಲದಲ್ಲಿ ಏಳಿಗೆ ಪಡೆಯಿತು. ಒಳವಿವಾಹದ ನಂಟುಗಳು ಸೀಮಿತವಾಗಿದ್ದುದು ಈ ಭೂಪ್ರದೇಶಗಳಿಗೇ ಆಗಿತ್ತು.

ಈ ಕಾರಣದಿಂದಾಗಿ, ಜಾತಿಗಳು ಸ್ಥಳೀಯ ಸ್ವರೂಪವನ್ನು ಪಡೆದುಕೊಂಡವು. ಕೆಲವಾರು ಗ್ರಾಮಗಳ ಸಮುಚ್ಚಯವೊಂದು ನಾಡು, ಸೀಮೆ ಅಥವಾ ಇನ್ನಾವುದೇ ಸಮಾನವಾದ ಹೆಸರಿನ ಸ್ಥಳೀಯ ಘಟಕವಾಗಿ ಕೆಲಸ ಮಾಡುತ್ತಿತ್ತು. ಕೆಲವೊಮ್ಮೆ ಒಂದೇ ಗ್ರಾಮವು ಅಂಥ ಘಟಕವಾಗಿ ರೂಪುಗೊಂಡಿತು. ಬಂಗಾಳದ ರಾಢೀ (ಅಂದರೆ ರಾಢ ಪ್ರದೇಶದ) ಬ್ರಾಹ್ಮಣರು ಐವತ್ತಾರು ಭಿನ್ನ ಉಪಜಾತಿಗಳಾಗಿ ಹಂಚಿಹೋಗಿದ್ದು ಇವೆಲ್ಲವು ಗಾಮಿಗಳೆಂಬ ಮೂಲ ಗ್ರಾಮಗಳನ್ನು ಸೂಚಿಸಿದ್ದವೆಂದು ಶರ್ಮ ಹೇಳುತ್ತಾರೆ. ಹನ್ನೊಂದರಿಂದ ಹದಿಮೂರನೆಯ ವರೆಗಿನ ಶತಮಾನದ ಶಾಸನಗಳಲ್ಲಿ ಅಂಥ ಹಲವು ಗಾಮಿಗಳ ಉಲ್ಲೇಖವಿದೆ. ಹನ್ನೊಂದನೆಯ ಶತಮಾನದ ಪಾಲರ ಶಾಸನವೊಂದು ಮೂರು ಗ್ರಾಮಗಳಿಗೆ ಸೇರಿದ ಬ್ರಾಹ್ಮಣರ ಉಲ್ಲೇಖ ಹೊಂದಿದೆ. ಹದಿನಾಲ್ಕನೆಯ ಶತಮಾನದಲ್ಲಿ ಹರಿಸಿಂಹದೇವನ ಶಾಸನವೊಂದು ಮೈಥಿಲಿ ಬ್ರಾಹ್ಮಣರ ಒಂದುನೂರ ಎಂಬತ್ತು ಮೂಲಗಳ ಬಗ್ಗೆ ಹೇಳುತ್ತದೆ. ಆದರೆ ಅನಂತರದ ಪ್ರಾದೇಶಿಕ ಇತಿಹಾಸವು ಅನಾವರಣಗೊಂಡ ಕ್ರಮದಿಂದಾಗಿ ಮೈಥಿಲಿ ಬ್ರಾಹ್ಮಣರಲ್ಲಿ ಅಂಥ ಉಪಜಾತಿಗಳು ಇಲ್ಲದಂತಾದವು. ಬಿಹಾರದ ಕರಣ ಕಾಯಸ್ಥ ಹಾಗೂ ಅಂಬಷ್ಠ ಕಾಯಸ್ತರು ಗುರುತಿಸಿಕೊಳ್ಳುವ ಮೂಲಗಳು ಹಿಂದೆ ಒಳವಿವಾಹದ ಗಡಿಗಳಂತೆ ವರ್ತಿಸಿದ ಗ್ರಾಮಗಳಾಗಿವೆ ಎನ್ನುತ್ತಾರೆ ಶರ್ಮ.

ಕ್ರಿ.ಶ. 600-1200 ಅವಧಿಯಲ್ಲಿ ಏಳಿಗೆ ಪಡೆದವುಗಳಲ್ಲಿ ಹಲವು ಜಾತಿಗಳು ಮೂಲತಃ ರಾಜ್ಯದ ಸೇವೆಯಲ್ಲಿದ್ದವರಿಂದ ಬೆಳೆದು ಬಂದದ್ದಾಗಿವೆ ಎಂದು ಶರ್ಮ ಹೇಳುತ್ತಾರೆ. ಗುಜರಾತಿನ ಚಾಲುಕ್ಯ ಹಾಗೂ ಮಧ್ಯಭಾರತದ ಪರಮಾರರ ಅಡಿಯಲ್ಲಿ ಕೋಟೆಗಳ ಸುರಕ್ಷೆಗೆಂದು ಸಿಬ್ಬಂದಿಗಳನ್ನು ನೇಮಿಸಲಾಗುತ್ತಿತ್ತು. ಈ ಸಿಬ್ಬಂದಿಗಳನ್ನು ಪಟ್ಟಕೀಲರೆಂದು ಕರೆಯಲಾಗಿತ್ತು. ಪಟ್ಟಕೀಲರಿಗೆ ರಾಜ್ಯವು ವೇತನವನ್ನು ನೀಡುತ್ತಿರಲಿಲ್ಲ. ಬದಲಿಗೆ ಹಿಡುವಳಿಯೊಂದನ್ನು ದತ್ತಿಯಾಗಿ ನೀಡುತ್ತಿತ್ತು. ಹಿಂದಿನ ಅಧ್ಯಾಯವೊಂದರಲ್ಲಿ ಸ್ಪಷ್ಟಪಡಿಸಿರುವಂತೆ ಈ ನೆಲದ ಉತ್ಪನ್ನವೇ ಈ ಪಟ್ಟಕೀಲರ ವೇತನವಾಗಿತ್ತು. ಅಂಥ ಪಟ್ಟಕೀಲರು ಮುಂದೆ ಪಟೇಲ್ ಹಾಗೂ ಪಾಟೀಲ್ ಎಂಬ ಜಾತಿಗಳಾಗಿ ರೂಪಾಂತರ ಹೊಂದಿದರು.

ಗ್ರಾಮೀಣ ಪ್ರದೇಶಗಳಲ್ಲಿ ಭದ್ರತೆಗೆಂದು ತೈನಾತು ಗೊಳಿಸಲಾದ ಸಿಬ್ಬಂದಿಗಳಲ್ಲಿ ಚೌರೋದ್ಧರಣಿಕ ಎಂಬುವರಿದ್ದರು. ಚೋರರನ್ನು ಉನ್ಮೂಲನಗೊಳಿಸಲೆಂದು ಇವರನ್ನು ನೇಮಿಸಲಾಗಿತ್ತು. ಈ ಚೌರೋದ್ಧರಣಿಕರೇ ಮುಂದೆ ಚೌಧರಿ ಎಂಬ ಜಾತಿಯಾಗಿ ಮಾರ್ಪಟ್ಟದ್ದು.

ರಾಜ್ಯದ ಲೆಕ್ಕಪತ್ರಗಳನ್ನು ಹಾಗೂ ಇತರ ದಾಖಲೆಗಳನ್ನು ನೋಡಿಕೊಳ್ಳಲು ನೇಮಿಸಲಾಗಿದ್ದ ಸಿಬ್ಬಂದಿಗಳನ್ನು ಅನೇಕ ರೀತಿಯ ಸಂಜ್ಞೆಗಳಿಂದ ಗುರುತಿಸಲಾಗಿತ್ತೆಂದು ಶರ್ಮ ಹೇಳುತ್ತಾರೆ. ಕರಣ, ಕರಣಿಕ, ಕಾಯಸ್ಥ, ಅಧಿಕೃತ, ಪುಸ್ತಪಾಲ, ದಿವರ, ಲೇಖಕ, ಚಿತ್ರಗುಪ್ತ ಮೊದಲಾದವು ಈ ಹೆಸರುಗಳು. ಕ್ರಮೇಣ ಈ ಶ್ರೇಣಿಗೆ ಸೇರಿದ ಎಲ್ಲರನ್ನೂ ಕಾಯಸ್ಥ ಎಂದೇ ಸಂಬೋಧಿಸುವ ಕ್ರಮ ಜಾರಿಗೆ ಬಂತು. ಇವರು ವಿವಿಧ ಹಿನ್ನೆಲೆಗಳಿಂದ ಬಂದವರಾದರೂ ಕಾಲಾಂತರದಲ್ಲಿ ತಮ್ಮ ಪೂರ್ವಿಕರೊಂದಿಗಿನ ಸಂಬಂಧ ಕಡಿದುಕೊಂಡು ತಮ್ಮತಮ್ಮಲ್ಲೇ ಒಳವಿವಾಹದ ನಂಟುಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಜಾತಿಯಾಗಿ ಪರಿಣಾಮ ಹೊಂದಿದರು ಎಂಬುದು ಶರ್ಮರ ವಿವರಣೆಯಾಗಿದೆ.

ರಾಜ್ಯದ ಸೇವೆಯಲ್ಲಿದ್ದವರು ಪ್ರತ್ಯೇಕ ಜಾತಿಗಳಾಗಿ ಮಾತ್ರವಲ್ಲ, ಆಗಾಗ ಹಲವು ಜಾತಿಗಳನ್ನು ಹೊಂದಿರುವ ಒಕ್ಕೂಟಗಳಾಗಿಯೂ ಬೆಳೆದುಬಂದದ್ದನ್ನು ಕಾಣಬಹುದು. ತಮಿಳುನಾಡಿನಲ್ಲಿ ಹಾಗೂ ಆಂಧ್ರ, ಕರ್ನಾಟಕದ ಕೆಲವೆಡೆಗಳಲ್ಲಿ ಚೋಳರ ಕಾಲದಿಂದ ಈ ರೀತಿಯಲ್ಲಿ ಎರಡು ಒಕ್ಕೂಟಗಳು ತಲೆಯೆತ್ತಿದ್ದನ್ನು ಶಾಸನಗಳು ಸ್ಪಷ್ಟಪಡಿಸುತ್ತವೆ. ಇಡಂಗೈ ಹಾಗೂ ವಲಂಗೈ ಎಂಬುದು ಈ ಸ್ಥೂಲವಾದ ಒಕ್ಕೂಟಗಳು. ಕರ್ನಾಟಕದಲ್ಲಿ ಇವುಗಳನ್ನು ಎಡಗೈ, ಬಲಗೈ ಎನ್ನುತ್ತಾರೆ. ಹತ್ತೊಂಬತ್ತನೆಯ ಶತಮಾನದಲ್ಲಿ ನಡೆದ ತೀವ್ರ ಪರಿವರ್ತನೆಗಳ ಪರಿಣಾಮವಾಗಿ ಇಂದು ತಮಿಳುನಾಡಿನಲ್ಲಿ ಇಡಂಗೈ ಎಂಬುದು ವ್ಯಾಪಾರಿಗಳ, ಕೆಲವು ಕುಶಲ ಕರ್ಮಿಗಳ ಮತ್ತು ಕಾರ್ಷಿಕೇತರ ಉತ್ಪಾದನೆಗಳಲ್ಲಿ ತೊಡಗಿದ ಕೆಲವು ಜಾತಿಗಳ ಒಕ್ಕೂಟವೆಂದು ಬಗೆಯಲಾಗಿದೆ. ಅದೇ ರೀತಿ, ವಲಂಗೈಯನ್ನು ಕೃಷಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಡಗಿರುವ ಜಾತಿಗಳು ಎನ್ನಲಾಗಿದೆ. ಹತ್ತೊಂಬತ್ತನೆಯ ಶತಮಾನಕ್ಕಿಂತ ಹಿಂದಿನ ದಾಖಲೆಗಳು ಈ ಸ್ವರೂಪವನ್ನು ಸಮರ್ಥಿಸುವುದಿಲ್ಲ. ಸುಬ್ಬರಾಯಲು ಅವರು ತಮ್ಮ ವಿಶ್ಲೇಷಣೆಯಲ್ಲಿ ಈ ಎರಡು ಗುಂಪುಗಳು ರಾಜರಾಜ ಚೋಳನ ಆಳ್ವಿಕೆಯ ಅವಧಿಯಲ್ಲಿ (ಕ್ರಿ.ಶ. 985-1014) ಏಳಿಗೆ ಪಡೆದದ್ದೆಂದು ತೋರಿಸಿದ್ದಾರೆ. ಇವು ಚೋಳರ ಸೈನ್ಯದ ಎರಡು ಪ್ರತ್ಯೇಕ ದಳಗಳಾಗಿದ್ದವು. ಒಂದು ಎಡಭಾಗದ್ದು. ಮತ್ತೊಂದು ಬಲಭಾಗದ್ದು. ಎರಡು ಭಾಗಗಳಲ್ಲಿಯೂ ವಿವಿಧ ವೃತ್ತಿಪರ ಹಿನ್ನೆಲೆಯಿಂದ ಬಂದವರಿದ್ದರು. ಹೀಗೆ ರಾಜ್ಯದ ಸೇವೆಯಲ್ಲಿ ನಿರತರಾದ ಸೈನಿಕರು ಅನಂತರ ತಮ್ಮತಮ್ಮ ಜಾತಿಗಳನ್ನು ಆಯಾ ವಿಭಾಗಕ್ಕೆ ಸೇರಿದ ಒಕ್ಕೂಟಗಳೊಂದಿಗೆ ಗುರುತಿಸಿಕೊಂಡು ಜಾತಿಗಳಾದರು. ಅಲ್ಲಿ ಬಲಗೈ ಎಂಬುದು ಕೇವಲ ಕೃಷಿಗೆ ಸಂಬಂಧಪಟ್ಟ ಜಾತಿಗಳು, ಎಡಗೈ ಎಂಬುದು ಇತರ ಜಾತಿಗಳು ಎಂಬ ಭೇದವಿರಲಿಲ್ಲ. ಎಡಗೈ ಒಕ್ಕೂಟದ ಸಭೆಗಳಲ್ಲಿ ಕಾರ್ಷಿಕ ನೆಲೆಗೆ ಸೇರಿದ ಜಾತಿಗಳು ಪಾತ್ರವಹಿಸುತ್ತಿದ್ದುದನ್ನು ಶಾಸನಾಧಾರಗಳ ಮೂಲಕ ಸುಬ್ಬರಾಯಲು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಚರ್ಚೆಯಲ್ಲಿ ಮುಖ್ಯವಾಗುವುದು ಈ ಭೇದದ ಸ್ವರೂಪವು ಎಷ್ಟು ಹಳೆಯದು ಎಂಬ ಪ್ರಶ್ನೆಯಲ್ಲ. ರಾಜ್ಯದ ಸೇವೆಯಲ್ಲಿದ್ದ ಗುಂಪುಗಳು ಮುಂದೆ ಜಾತಿಗಳಾಗಿ ಪರಿವರ್ತನೆ ಹೊಂದಿದರು ಎಂಬುದು ನಮ್ಮ ಪಾಲಿಗೆ ಪ್ರಮುಖ ಅಂಶವಾಗಿದೆ.

ಅನೇಕ ಸಂದರ್ಭಗಳಲ್ಲಿ ರಾಜ್ಯದ ಸೇವೆಯಲ್ಲಿದ್ದ ವಿವಿಧ ಮನೆತನಗಳು ಆಯಾ ರಾಜವಂಶದ ಹೆಸರಿನ ಮೂಲಕವೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು. ಅಂಥ ಮನೆತನಗಳ ನಡುವೆ ನಡೆದ ಬೆಳೆದುಬಂದ ಒಳವಿವಾಹಗಳು ಹತ್ತಾರು ಜಾತಿಗಳ ಏಳಿಗೆಗೆ ಹೇತುಪ್ರಾಯವಾಯ್ತು. ಬಂಗಾಳದಲ್ಲಿ ಪಾಲರೊಂದಿಗೆ ಸಂಬಂಧವಿದ್ದ ಇಂಥ ಮನೆತನಗಳು ಪಾಲ್ ಮತ್ತು ಸೇನವಂಶದ ಸೇವೆಯಲ್ಲಿದ್ದವುಗಳು. ಸೇನ್ ಎಂಬ ಜಾತಿಗಳಾಗಿ ಪರಿಣಾಮ ಹೊಂದಿದರು. ಹಾಗೆಯೇ, ಶಾಕಂಬರಿ ಮತ್ತಿತರ ನೆಲೆಗಳ ಚಾಹಮಾನರ ಸೇವೆಯಲ್ಲಿದ್ದವರು ಚೌಹಾನರಾದರು, ಪರಮಾರರ ಸೇವೆಯಲ್ಲಿದ್ದವರು ಪರ್‌ಮಾರ್‌ಗಳಾದರು, ಚಾಂದೇಲರ ಸೇವೆಯಲ್ಲಿದ್ದವರು ಚಂದೇಲ್‌ಗಳಾದರು. ಈ ಸಾಲಿಗೆ ಸೇರಿದ ಉದಾಹರಣೆಗಳು ವಿಂಧ್ಯಾಚಲದ ದಕ್ಷಿಣ ಭಾಗದಲ್ಲಿ ಕಂಡುಬರುವುದಿಲ್ಲ.

ಈ ಅಂಕಣದ ಹಿಂದಿನ ಬರೆಹಗಳು

ಜಾತಿ ಪದ್ಧತಿಯ ಮೈಮನಗಳು-ಹದಿನೈದನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹದಿನಾಲ್ಕನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹದಿಮೂರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹನ್ನೆರಡನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹನ್ನೊಂದನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಹತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂಬತ್ತನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಎಂಟನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಏಳನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಆರನೇ ಕಂತು

ಜಾತಿ ಪದ್ಧತಿಯ ಮೈಮನಗಳು-ಐದನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ನಾಲ್ಕನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಮೂರನೆಯ ಕಂತು

ಜಾತಿ ಪದ್ಧತಿಯ ಮೈಮನಗಳು- ಎರಡನೆಯ ಕಂತು

ಜಾತಿ ಪದ್ಧತಿಯ ಮೈಮನಗಳು-ಒಂದನೇ ಕಂತು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...