ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ: ಭಾಗ-4

Date: 29-05-2021

Location: ಬೆಂಗಳೂರು


ಮೀಸಲಾತಿಯ ನಿಗದಿತ ಪಾಲಿನಲ್ಲಿ ಹೆಚ್ಚಿನ ದಾಯಭಾಗವನ್ನು ಅಪೇಕ್ಷಿಸಿ ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಜಾತಿ ಸಮುದಾಯಗಳ ಬೀದಿ ಹೋರಾಟಗಳು ಸಂವಿಧಾನದ ಮೂಲ ಆಶಯವನ್ನೇ ಅಣಕಿಸುವಂತಿವೆ, ಅಪ್ರಸ್ತುತಗೊಳಿಸುವಂತಿವೆ. ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು? ಇದನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ? ಎಂಬ ಮೂಲಭೂತ ಪ್ರಶ್ನೆಗಳೊಂದಿಗೆ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರು ತಮ್ಮ 'ಲೋಕೋಕ್ತಿ' ಅಂಕಣದಲ್ಲಿ ಚರ್ಚೆಯನ್ನು ಆರಂಭಿಸಿದ್ದು, ಅದರ ನಾಲ್ಕನೇ ಭಾಗ ಇಲ್ಲಿದೆ

ರಾಜ್ಯದ ಉಗಮ ಹಾಗೂ ರಾಜ್ಯಾಧಿಕಾರದ ಸ್ವರೂಪ ಮತ್ತು ಪ್ರಜಾತಂತ್ರದ ಕುರಿತು ಮುಖ್ಯವಾದ ಕೆಲವು ಅಂಶಗಳನ್ನು ಪ್ರಸ್ತಾವಿಸದೆ ’ನಾಗರಿಕ ಸಮಾಜ’ ಮತ್ತು ’ರಾಜಕೀಯ ಸಮಾಜ’ ಎಂಬ ಪರಿಕಲ್ಪನಾತ್ಮಕ ವಿಷಯಗಳನ್ನು ಚರ್ಚಿಸುವುದು ಸಾಧ್ಯವಿಲ್ಲ. ಈ ಎಲ್ಲ ಅಂಶಗಳ ಬಗ್ಗೆ ಅನೇಕ ರಾಜಕೀಯ ಚಿಂತಕರು ಸುದೀರ್ಘವಾದ ಮತ್ತು ಮಹತ್ವದ ಒಳನೋಟಗಳುಳ್ಳ ಜಿಜ್ಞಾಸೆಯನ್ನು ನಡೆಸಿದ್ದಾರೆ. ಆ ಎಲ್ಲ ವಾಗ್ವಾದವನ್ನು ಗಮನದಲ್ಲಿಟ್ಟುಕೊಂಡು ಮೊದಲಿಗೆ ಥಾಮಸ್ ಹಾಬ್ಸ್ ಮತ್ತು ಜಾನ್ ಲಾಕ್ ಎಂಬ ಇಬ್ಬರು ರಾಜಕೀಯ ತತ್ತ್ವಚಿಂತಕರು ರಾಜ್ಯದ ಉಗಮ ಮತ್ತು ರಾಜ್ಯಾಧಿಕಾರದ ಸ್ವರೂಪದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.
ಹಾಬ್ಸ್‌ನ ಪ್ರಕಾರ ರಾಜ್ಯ ಹುಟ್ಟುವ ಮೊದಲಿನ ಸಾಮಾಜಿಕ ಸ್ಥಿತಿಯಲ್ಲಿ ಮನುಷ್ಯ ಪಶು ಸದೃಶನೇ ಆಗಿದ್ದ. ಸಾಮುದಾಯಿಕ ಜೀವನದ ಹಂಗಿಲ್ಲದ ಆತ ಏಕಾಕಿಯಾಗಿ ಅಲೆದಾಡುತ್ತಿದ್ದ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಆತಂಕದಲ್ಲಿ ಆತ ಇನ್ನೊಬ್ಬನನ್ನು ಕಂಡರೆ ಭೀತಿಗೊಳ್ಳುತ್ತಿದ್ದ ಅಥವಾ ಆ ಇನ್ನೊಬ್ಬನನ್ನು ನಾಶಗೊಳಿಸಲು ಅವನ ಮೇಲೆ ಏರಿ ಹೋಗುತ್ತಿದ್ದ. ಹಾಬ್ಸ್‌ನ ಪ್ರಕಾರ ಎಲ್ಲರೂ ಎಲ್ಲರ ವಿರುದ್ಧವೂ ನಡೆಸುವ ಈ ಯುದ್ಧದಿಂದಾಗಿ ಆ ಕಾಲದ ಮಾನವ ಜೀವನ ಸಂಕುಚಿತವೂ ಹಾಗೂ ಅಲ್ಪಕಾಲೀನವೂ ಆಗಿತ್ತು. ಮನುಷ್ಯ ಸಮಾಜದ ಬಗ್ಗೆ ಹಾಬ್ಸ್ ಇಂತಹ ಒಂದು ವಿಷಮ ಚಿತ್ರಣವನ್ನು ಯಾಕೆ ಕೊಡುತ್ತಾನೆ ಎಂದರೆ ಆತ ಬದುಕಿದ ಕಾಲದಲ್ಲಿ ಇಂಗ್ಲೆಂಡ್‌ಗೆ ಬಂದೊದಗಿದ ಅರಾಜಕತೆಯೇ ಕಾರಣ. ಇದನ್ನು ರೊಮಿಲಾ ಥಾಪರ್ ಅವರು ’ಹಾಬ್ಸ್‌ನಿಗೆ ಭೂತಕಾಲವೇ ವರ್ತಮಾನ ಅಥವಾ ವರ್ತಮಾನವೇ ಭೂತಕಾಲ’ ಎಂದಿದ್ದಾರೆ. ಹಾಬ್ಸ್‌ಗೆ ಆತನ ಕಾಲದ ವಾಸ್ತವವೇ ಆತನ ಚರಿತ್ರೆ. ಹಾಗಾಗಿ ತನ್ನ ಕಾಲದ ಪ್ರಕ್ಷುಬ್ಧ ಆತಂಕಗಳ ನಡುವೆ ಮಾನವ ಸ್ವಭಾವವನ್ನು ಚಿತ್ರಿಸಲು ಯತ್ನಿಸುತ್ತಾನೆ.

ಹಾಬ್ಸ್‌ನ ರಾಜಕೀಯ ತತ್ವಜ್ಞಾನದಲ್ಲಿ ನಮಗೆ ಮುಖ್ಯವಾಗುವುದು ರಾಜ್ಯದ ಸ್ಥಾಪನೆಗೆ ಸಂಬಂಧಿಸಿದಂತೆ ಆತ ಮುಂದಿಡುವ ವಿಚಾರಗಳು. ಹಾಬ್ಸ್ ರಾಜ್ಯದ ಉಗಮವನ್ನು ಜನರು ತಮ್ಮತಮ್ಮ ನಡುವೆ ಮಾಡಿಕೊಂಡ ಒಪ್ಪಂದ ಎಂದೇ ಗುರುತಿಸುತ್ತಾನೆ. ಅಸಹನೀಯವಾದ ಮತ್ತು ಸಂಕುಚಿತವಾದ ಹಾಗೂ ಸಂಘರ್ಷಾತ್ಮಕವಾದ ಬದುಕನ್ನು ಕೊನೆಗೊಳಿಸುವ ನೆಲೆಯಲ್ಲಿ ಮನುಷ್ಯರು ಮಾಡಿಕೊಂಡ ಒಪ್ಪಂದದ ಮೂಲಕ ರಾಜ್ಯ ಹುಟ್ಟಿಕೊಳ್ಳುತ್ತದೆ. ಈ ಒಪ್ಪಂದ ಮನುಷ್ಯರ ನಡುವಿನ ಏಕಪಕ್ಷೀಯವಾದ ಒಪ್ಪಂದವೇ ಹೊರತು ಅದು ರಾಜ್ಯ ಮತ್ತು ಜನರ ನಡುವಿನ ದ್ವಿಪಕ್ಷೀಯ ಒಪ್ಪಂದವಲ್ಲ. ಅರಾಜಕತೆಯ ಅಸಹನೀಯತೆಯಲ್ಲಿ ಜನರು ಸಂಪೂರ್ಣ ದಿಕ್ಕೆಟ್ಟ ಸ್ಥಿತಿಯಲ್ಲಿ ಪರಸ್ಪರ ಮಾಡಿಕೊಳ್ಳುವ ಸಹಮತದ ಒಪ್ಪಂದದಿಂದ ಪ್ರಭುತ್ವ ಅಸ್ತಿತ್ವಕ್ಕೆ ಬರುತ್ತದೆ ಎನ್ನುತ್ತಾನೆ ಹಾಬ್ಸ್.
ಹಾಬ್ಸ್‌ನ ಪ್ರಕಾರ ಮಾನವರು ಮಾಡಿಕೊಳ್ಳುವ ಈ ಒಡಂಬಡಿಕೆ ಒಂದು ಬಗೆಯಲ್ಲಿ ಸಾಮಾಜಿಕ ಒಪ್ಪಂದವೂ ಹೌದು. ಅಂತೆಯೇ, ಒಂದು ರಾಜಕೀಯ ಒಪ್ಪಂದವೂ ಹೌದು. ಆತನ ಪ್ರಕಾರ ಅನಾಗರಿಕರಾದ ಮನುಷ್ಯರನ್ನು ನಾಗರಿಕಗೊಳಿಸುವ ಮತ್ತು ಸಾಮಾಜಿಕಗೊಳಿಸುವ ಜವಾಬ್ದಾರಿ ಪ್ರಭುತ್ವದ್ದು. ಹಾಗಾಗಿ, ಹಾಬ್ಸ್‌ನಲ್ಲಿ ರಾಜ್ಯೋದಯವೆಂದರೆ ಅದು ಹೊಸ ಸಮಾಜದ ಉದಯವೂ ಹೌದು.
ಹಾಬ್ಸ್‌ನ ನಂತರದಲ್ಲಿ ಜಾನ್ ಲಾಕ್, ಜೆ ಎಸ್ ಮಿಲ್ ಮೊದಲಾದ ಅನೇಕ ಲಿಬರಲ್ ತತ್ವಜ್ಞಾನಿಗಳು ಪ್ರಮುಖವಾಗಿ ಪ್ರತಿಪಾದಿಸಿದ ಸ್ವಾತಂತ್ರ್ಯದ ಕಲ್ಪನೆ ಅಥವಾ ಹಕ್ಕುಗಳ ಕಲ್ಪನೆ ಹಾಬ್ಸ್‌ನ ರಾಜಕೀಯ ತತ್ವಜ್ಞಾನದಲ್ಲಿ ಕಾಣಿಸುವುದಿಲ್ಲ. ಹಾಬ್ಸ್‌ನ ಪ್ರಭುತ್ವದ ಕಲ್ಪನೆ ಆಳವಾದ ನೈತಿಕ ಪ್ರಜ್ಞೆಯಿಂದ ಕೂಡಿತ್ತು. ಆತ ರಾಜ್ಯ ತನ್ನ ಏಕೈಕ ಕರ್ತವ್ಯವಾದ ಪ್ರಜಾಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸಬೇಕು ಮತ್ತು ಜನರ ದೈನಂದಿನ ಬದುಕಿಗೆ ಅವಶ್ಯಕವಾದ ರಾಜಕೀಯ ಸ್ಥಿರತೆಯನ್ನು ಒದಗಿಸಬೇಕು. ರಾಜ್ಯ ಎಷ್ಟೇ ನಿರಂಕುಶವಾದರೂ ಪ್ರಜಾಸಂರಕ್ಷಣೆಯೇ ಅದರ ಮೂಲಭೂತ ಕರ್ತವ್ಯ, ಅದನ್ನು ರಾಜ್ಯ ನಿರ್ವಹಿಸದಿದ್ದಲ್ಲಿ ಅಂತಹ ರಾಜ್ಯಕ್ಕೆ ಮುಂದುವರಿದು ಕೊಂಡುಹೋಗುವ ಅಧಿಕಾರವಿಲ್ಲ ಎಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತಾನೆ. (ಆತನ ಈ ಮಾತನ್ನು ನಾವು ನಮ್ಮ ಈಗಿನ ಕೋವಿಡ್ ಕಾಲದ ಬರ್ಬರ ದಿನಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವುದು ಸೂಕ್ತ.)
ಹಾಬ್ಸ್‌ನ ನಂತರದವನಾದ ಜಾನ್ ಲಾಕ್ ರಾಜ್ಯ ಮತ್ತು ರಾಜ್ಯಾಧಿಕಾರದ ಸ್ವರೂಪದ ಕುರಿತು ಸಂಪೂರ್ಣ ಭಿನ್ನವಾದ ಚಿಂತನೆಯನ್ನು ಮುಂದಿಡುತ್ತಾನೆ. ನಾಗರಿಕ ಸಮಾಜದ ಅತ್ಯಂತ ಬಲವಾದ ಪ್ರತಿಪಾದನೆಯನ್ನು ಮಾಡಿದವನು ಜಾನ್ ಲಾಕ್. ಯಾಕೆಂದರೆ ಲಾಕ್‌ನ ಪ್ರಕಾರ ರಾಜ್ಯವೊಂದರ ಸುಗಮ ನಿರ್ವಹಣೆಗೆ ನಾಗರಿಕ ಸಮಾಜದ ಅವಶ್ಯಕತೆ ಬಹಳಬಹಳ ಮುಖ್ಯ. ಲಾಕ್‌ನ ಪ್ರಕಾರ ಮನುಷ್ಯ ಪ್ರಪಂಚದಲ್ಲಿ ರಾಜ್ಯ ಬರುವುದಕ್ಕಿಂತ ಮೊದಲು ನಮ್ಮಲ್ಲಿ ಒಂದು ಸಮಾಜ ಎಂಬುದು ಇತ್ತು. ಪರಸ್ಪರ ಸಹಾಯ-ಸಹಕಾರಗಳಿಂದ ಬದುಕುತ್ತಿರುವ ಸಮಾಜ ಅದು. ಆ ಸಮಾಜದಲ್ಲಿ ಅನೌಪಚಾರಿಕವಾದ ಕೆಲವು ಸಂಘ-ಸಂಸ್ಥೆಗಳೂ ಇದ್ದವು. ಪರಂಪರೆಯನ್ನು ನಿರ್ಮಿಸಿ, ಸಂಪ್ರದಾಯಗಳನ್ನು (ಕನ್‌ವೆನ್ಸಷನ್ಸ್ ಮತ್ತು ಕಸ್ಟಮ್ಸ್) ರೂಢಿಸಿರುವ ಈ ಸಂಘ-ಸಂಸ್ಥೆಗಳು ತಾವಾಗಿ ತೇಲಿ ಬಿಟ್ಟಿರುವ ರೀತಿ-ನೀತಿಗಳ ಚೌಕಟ್ಟಿನೊಳಗೆ ಜನರು ತಮ್ಮನ್ನು ತಾವು ನಿರ್ವಹಿಸಿಕೊಳ್ಳುತ್ತಿದ್ದರು. ಅನೌಪಚಾರಿಕವಾದ ಕ್ರಮದಲ್ಲೇ ಇರುವ ಈ ರೀತಿ-ರಿವಾಜುಗಳ ನಡುವೆ ಜನರು ಬದುಕುತ್ತಿದ್ದರೂ ಅವರಿಗೆ ಒಂದು ಸಣ್ಣ ಆತಂಕವೂ ಇತ್ತು. ಈಗಾಗಲೇ ಇರುವ ಕೆಲವು ಸಾರ್ವಜನಿಕ ಶಿಷ್ಟಾಚಾರಗಳನ್ನು ಸಮಾಜದ ಕೆಲವು ಜನರು ಉದ್ದೇಶಪೂರ್ವಕವಾಗಿಯೇ ಮುರಿಯುತ್ತಿದ್ದಾರಲ್ಲ; ಅವರನ್ನು ಹಾಗೆ ಮಾಡದಂತೆ ತಡೆಗಟ್ಟುವವರು ಯಾರು? (ಉದಾಹರಣೆ ಕೊಡುವುದಾದರೆ ಕೊರೊನಾದ ಸಂದರ್ಭದಲ್ಲಿ ದೈಹಿಕ ಅಂತರ ಕಾಪಾಡಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದು ವೈದ್ಯರು-ವಿಜ್ಞಾನಿಗಳು ಹೇಳುತ್ತಿದ್ದರೂ ಕೆಲವರು ಇದನ್ನು ಉಲ್ಲಂಘಿಸುತ್ತಾರಲ್ಲ, ಆಗ ಏನು ಮಾಡಬೇಕು?) ಸ್ವೇಚ್ಚಾಚಾರಿಗಳಾದ ಮನುಷ್ಯರು ಹಾಗೆ ನಡೆಯದಂತೆ ನೋಡಿಕೊಳ್ಳುವುದಕ್ಕೆ ಒಂದು ವ್ಯವಸ್ಥೆ ಬೇಕಾಗುತ್ತದೆ. ಆ ವ್ಯವಸ್ಥೆಯೇ ರಾಜ್ಯ.
ಹಾಬ್ಸ್ ಮತ್ತು ಲಾಕ್ ಇಬ್ಬರಲ್ಲೂ ಇದ್ದ ಒಂದು ಸಮಾನ ಅಂಶ ಅಂದರೆ ಅದು ಆತಂಕ. ಸಮಾಜದಲ್ಲಿ ಏನಾದರೂ ಹೆಚ್ಚು- ಕಡಿಮೆ ಸಂಭವಿಸಿದರೆ ಏನು ಮಾಡುವುದು ಎಂಬ ಆತಂಕ ಅವರಿಬ್ಬರಲ್ಲೂ ಇತ್ತು. ಈ ಭಯ ಇರುವುದರಿಂದಲೇ ರಾಜ್ಯ ಹುಟ್ಟುವುದು. ಅ-ವ್ಯವಸ್ಥೆಯ (ಡಿಸ್-ಆರ್ಡರ್) ಬಗೆಗಿನ ಭೀತಿಯೇ ರಾಜ್ಯದ ಹುಟ್ಟಿಗೆ ಕಾರಣ ಎಂಬ ಒಂದು ಅಂಶದಲ್ಲಿ ಈ ಇಬ್ಬರಿಗೂ ಯಾವ ವ್ಯತ್ಯಾಸವೂ ಇಲ್ಲ.
ಲಾಕ್‌ನ ಪ್ರಕಾರ ರಾಜ್ಯ ಬರುವುದಕ್ಕಿಂತಲೂ ಬಹುಮೊದಲೇ ಒಂದು ಸಾಮಾಜಿಕ ವ್ಯವಸ್ಥೆ ಇತ್ತು. ಅಲ್ಲಿ ವಿಚಾರ-ವಿನಿಮಯಗಳಿಗೆ ಅವಕಾಶವೂ ಇತ್ತು. ವಿನಿಮಯ ಆಗುತ್ತಲೂ ಇತ್ತು. ಒಂದು ಸಂಘಟಿತವಾದ ಸಮಾಜದಲ್ಲಿ ಜಾತಿ-ಮತ, ಮೇಲು-ಕೀಳು ಎಂಬಿತ್ಯಾದಿ ತರ-ತಮಗಳು ಇರುತ್ತವೆ. ಆದರೆ ನಾಗರಿಕ ಸಮಾಜ ಎನ್ನುವುದು ಸಾಮಾನ್ಯ ಒಳಿತಿನ ಬಗ್ಗೆ ಪ್ರತಿಪಾದನೆ ಮಾಡುವಂತಹ ಒಂದು ಸ್ಪೇಸ್. ಮನುಷ್ಯ ಸಮಾಜ ಅಂದರೆ ಬೇರೆ, ನಾಗರಿಕ ಸಮಾಜ ಅಂದರೆ ಬೇರೆ. ಆತನ ಪ್ರಕಾರ ಈ ಲೋಕದ ಸಮಗ್ರ ಒಳಿತಿನ ಬಗ್ಗೆ ನಿರ್ಭೀತಿಯಿಂದ ಮನುಷ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಮಾಡುವಂಥ ಒಂದು ಸ್ಥಳಾವಕಾಶವನ್ನು ನಾವು ನಾಗರಿಕ ಸಮಾಜ ಅಂತ ಕರೆಯಬಹುದು. ವಿಚಾರ ವಿನಿಮಯಕ್ಕೆ ಎಲ್ಲಿ ಅವಕಾಶ ಇದೆಯೋ ಮತ್ತು ಆ ವಿಚಾರ ವಿನಿಯಮದ ಒಟ್ಟು ಸಾರಾಂಶದ ಆಧಾರದಲ್ಲಿ ಸಾಮಾಜಿಕ-ರಾಜಕೀಯ ಬದುಕು ಎಲ್ಲಿ ನಿರ್ವಹಿಸಲ್ಪಡುತ್ತದೋ ಅಂತಹ ಸಮಾಜದಲ್ಲಿ ನಾಗರಿಕ ಸಮಾಜ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಇಂತಹ ನಾಗರಿಕ ಸಮಾಜ ಪ್ರಭುತ್ವವನ್ನು ತನ್ನ ಪ್ರಣಾಳಿಕೆಗಳಿಗೆ ಬೇಕಾಗುವಂತೆ ಬಗ್ಗಿಸುತ್ತದೆ. ವಿಶಾಲವಾದ ಅರ್ಥದಲ್ಲಿ ನಾಗರಿಕ ಸಮಾಜವನ್ನು ವಿಮರ್ಶಾತ್ಮಕ ಸಮಾಜ (ಡಿಸ್ಕರ್ಸಿವ್ ಸೊಸೈಟಿ) ಎಂದೂ ಕರೆಯಬಹುದು.
ಆದರೆ ಎಡಪಂಥೀಯ ಚಿಂತನೆಗಳ ದೃಷ್ಟಿಯಲ್ಲಿ ವಿಶೇಷವಾಗಿ ಕಾರ್ಲ್ ಮಾರ್ಕ್ಸ್‌ನ ಪ್ರಕಾರ ನಾಗರಿಕ ಸಮಾಜ ಅಂದರೆ ಒಂದು ಬೂರ್ಶ್ವಾ ಸಮಾಜ. ಆತನ ಪ್ರಕಾರ ನಾಗರಿಕ ಸಮಾಜ ಅಂದರೆ ಸಮಾಜದೊಳಗಿರುವ ಒಂದು ಸಣ್ಣ ಗುಂಪು. ಇದನ್ನು ತನ್ನನ್ನು ತಾನು ಸಭ್ಯ ಸಮಾಜ ಎಂದು ಕರೆದುಕೊಂಡಿದೆ. ಈ ಗುಂಪು ತಮಗೆ ಅನುಕೂಲವಾಗಿರುವ ಘಟನೆಗಳನ್ನು, ತಮಗೆ ಒಪ್ಪಿತವಾದ ನೀತಿ-ನಿಯಮಾವಳಿಗಳನ್ನು ಸಭ್ಯ ಎಂದೂ ತಮಗೆ ಕಿರಿಕಿರಿಯಾಗುವ ಘಟನೆಗಳನ್ನು, ಚಳವಳಿಗಳನ್ನು ಅ-ಸಭ್ಯ (ಅನ್-ಸಿವಿಲೈಸೈಡ್) ಎಂದೂ ಕರೆಯುತ್ತದೆ. ಮೇಲಾಗಿ ನಾಗರಿಕ ಸಮಾಜ ಎನ್ನುವುದು ಬಂಡವಾಳಶಾಹೀ ಉತ್ಪಾದನಾ ವ್ಯವಸ್ಥೆ ನಿರ್ಮಿಸಿರುವ, ಸಮಾಜದ ಪರವಾಗಿ, ನ್ಯಾಯದ ಪರವಾಗಿ ಇದ್ದೇವೆ ಎಂದು ಉಳಿದ ಸಾಮಾನ್ಯ ಜನರಲ್ಲಿ ಭ್ರಮೆ ಹುಟ್ಟಿಸಿರುವಂಥ ಮಾಯಾವಿ.
ಸಮಾಜವಾದದ ಪ್ರಕಾರ ಸಮಾಜದಲ್ಲಿ ಬಡವ-ಬಲ್ಲಿದ ಎಂಬ ಅಂತರ ಇರಕೂಡದು. ಆಧುನಿಕಪೂರ್ವ ಕಾಲದಲ್ಲಿ ಭೂಮಾಲೀಕರು ಮತ್ತು ಆಧುನಿಕ ಕಾಲದಲ್ಲಿ ಬಂಡವಾಳಶಾಹಿಗಳು ಸಮಾಜದ ಬಲುದೊಡ್ಡ ಸಂಪನ್ಮೂಲಗಳನ್ನು, ಸಾಮುದಾಯಿಕ ಶ್ರಮದಿಂದ ಉತ್ಪನ್ನಗೊಂಡಿರುವ ಸಾಮಾಜಿಕ ಆಸ್ತಿಯನ್ನು ಕಬಳಿಸಿಕೊಂಡಿದ್ದಾರೆ. ಈ ಆಸ್ತಿ ಯಾವತ್ತೂ ತಮ್ಮ ಕೈ ಜಾರದಂತೆ ಸಮಾಜದಲ್ಲಿ ಕೆಲವು ಸಂಘ-ಸಂಸ್ಥೆಗಳನ್ನು ಅವರು ಹುಟ್ಟಿಸುತ್ತಾರೆ. ಅಂತಹ ಸಂಘ-ಸಂಸ್ಥೆಗಳಲ್ಲಿ ಬಹಳ ದೊಡ್ಡ ಸಂಸ್ಥೆ ಅಂದರೆ ಅದು ರಾಜ್ಯ (ಸ್ಟೇಟ್). ಈ ರಾಜ್ಯ ಅಥವಾ ಪ್ರಭುತ್ವ ಮೇಲ್ನೋಟಕ್ಕೆ ಸರ್ವರ ಹಿತವನ್ನು ಕಾಯಬೇಕಾದ ಸಂಸ್ಥೆಯಾಗಿದ್ದರೂ ಅದು ಹಾಗೆ ಮಾಡದಂತೆ ಸಂಪತ್ತಿನ ಮೇಲೆ ನಿಯಂತ್ರಣಾಧಿಕಾರವುಳ್ಳ ಬಂಡವಾಳಶಾಹೀ ವರ್ಗ ನೋಡಿಕೊಳ್ಳುತ್ತದೆ. ನಿಜವಾಗಿ ನೋಡಿದರೆ ಈ ವರ್ಗವೇ ನಮ್ಮೆಲ್ಲರನ್ನೂ ಆಳುವ ವರ್ಗ. ಈ ಆಳುವ ವರ್ಗದ ಹಿತಾಸಕ್ತಿಯನ್ನು ಕಾಪಾಡುವುದೇ ನಾಗರಿಕ ಸಮಾಜದ ಗುಪ್ತ ಕಾರ್ಯಸೂಚಿ (ಹಿಡನ್ ಅಜೆಂಡಾ). ಇದು ಹೆಚ್ಚೂ ಕಡಿಮೆ ಕಾರ್ಲ್ ಮಾರ್ಕ್ಸ್‌ನ ಚಿಂತನೆ.
ಇದಕ್ಕಿಂತ ಕೊಂಚ ಭಿನ್ನವಾದ ನಿಲುವನ್ನು ಚಿಂತಕನೂ ಹಾಗೂ ವಿಮರ್ಶಾತ್ಮಕ ಎಡಪಂಥೀಯನೂ (ಕ್ರಿಟಿಕಲ್ ಲೆಫ್ಟ್) ಆದ ಆಂಟೋನಿಯೋ ಗ್ರಾಂಷಿ ತಾಳುತ್ತಾನೆ. ಬಲಪ್ರಯೋಗವಿಲ್ಲದೆ ಜನರನ್ನು ನಿಯಂತ್ರಿಸುವುದಕ್ಕೆ ನಾಗರಿಕ ಸಮಾಜ ಬಹಳ ಒಳ್ಳೆಯ ಭೂಮಿಕೆಯನ್ನು ಒದಗಿಸುತ್ತದೆ ಎನ್ನುವ ಗ್ರಾಂಷಿ ಪ್ರಭುತ್ವವನ್ನು ವಶಪಡಿಸಿಕೊಳ್ಳುವುದರಿಂದ ಮಾತ್ರ ಊಳಿಗಮಾನ್ಯ ಅಥವಾ ಬಂಡವಾಳಶಾಹೀ ವರ್ಗದ ಮೌಲ್ಯಗಳನ್ನು ನಾಶಪಡಿಸುವುದಕ್ಕಾಗುವುದಿಲ್ಲ. ಹಳೆಯ ಉತ್ಪಾದನಾ ವ್ಯವಸ್ಥೆಯಲ್ಲಿದ್ದ ಸಾಮಾಜಿಕ ಮೌಲ್ಯಗಳು ಜನರ ಬದುಕಿನ ಭಾಗವಾಗಿರುತ್ತವೆ. ಮಾತ್ರವಲ್ಲದೆ ಪ್ರಭುತ್ವವೂ ಕೂಡ ಜಮೀನುದಾರಿಯಂಥ ಹಳೆಯ ವ್ಯವಸ್ಥೆಯ ಆಡಳಿತ ಮಾದರಿಗಳಲ್ಲಿ ಕೆಲವನ್ನು ಪ್ರಜಾಪ್ರಭುತ್ವದಂಥ ಆಧುನಿಕ ವ್ಯವಸ್ಥೆಯಲ್ಲೂ ಕೊಂಚವೂ ಮುಜುಗರವಿಲ್ಲದೆ ಮುಂದುವರಿಸಿಕೊಂಡು ಬರುವಂಥ ಸಾಧ್ಯತೆಯೂ ಇರುತ್ತದೆ. (ಉದಾಹರಣೆಗೆ ಸರ್ಕಾರ ಮಠ-ಮಂದಿರಗಳಿಗೆ, ಜಾತಿ ಸಮುದಾಯಗಳ ಪ್ರಾಧಿಕಾರ, ನಿಗಮಗಳಿಗೆ ಕೋಟಿಗಟ್ಟಲೆ ಪ್ರಮಾಣದ ಅನುದಾನವನ್ನು ನೀಡುತ್ತಿರುವುದು. ಇಂತಹ ಕ್ಷುಲ್ಲಕ ರಾಜಕೀಯದಿಂದ ಪ್ರೇರಿತಗೊಂಡ ಜನ ಸಮುದಾಯವೂ ಅಷ್ಟೇ ಕ್ಷುಲ್ಲಕವಾಗಿ ಇಂಥ ಪ್ರಭುತ್ವವೇ ತಮ್ಮ ಹಿತಾಸಕ್ತಿಯನ್ನು ಪೋಷಿಸುವ ಪ್ರಭುತ್ವವೆಂದು ಭಾವಿಸಿ ಅದರ ಪರವಾಗಿ ಜನಾಭಿಪ್ರಾಯವನ್ನು ಮೂಡಿಸುವುದು ಇತ್ಯಾದಿ ಇತ್ಯಾದಿ.) ಹಾಗಾಗಿ ಸಮಾಜವಾದೀ ರಾಜಕೀಯ ಕೇವಲ ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳುವುದರ ಕಡೆಗೆ ಮಾತ್ರ ಮುಖ ಮಾಡಿದರೆ ಸಾಲದು ಎಂದು ಗ್ರಾಂಷಿ ಹೇಳುತ್ತಾನೆ. ಆತನ ಪ್ರಕಾರ ಸ್ಥೂಲವಾಗಿ ಹೇಳುವುದಾದರೆ ನಮ್ಮ ನಡುವೆ ಎರಡು ಮಾದರಿಯ ಪ್ರಭುತ್ವಗಳು ಇವೆ. ಅವನ್ನು ತೋಳ್ಬಲದ ಆಳ್ವಿಕೆಯ ಪ್ರಭುತ್ವ ಮತ್ತು ಜನಸಮ್ಮತಿಯ ಆಳ್ವಿಕೆಯ ಪ್ರಭುತ್ವ ಎಂದು ಕರೆಯಬಹುದು. ಆದರೆ ಇವುಗಳ ನಡುವಣ ವ್ಯತ್ಯಾಸ ಏನೇ ಇರಲಿ, ಕೊನೆಗೂ ಪ್ರಭುತ್ವ ಪ್ರಭುತ್ವವೇ. (ಕಹಿಬೇವಿನ ಮರದ ಕಡ್ಡಿಯಲ್ಲಿ ಯಾವ ಭಾಗವನ್ನು ಕಚ್ಚಿದರೂ ಕಹಿ ಕಹಿಯೇ ಎಂಬ ಜನಪದ ನುಡಿಗಟ್ಟಿನಂತೆ.) ಜನಸಮ್ಮತಿಯ ಆಳ್ವಿಕೆಯ ಪ್ರಭುತ್ವ ತನಗೆ ಮುಜುಗರವಾಗುವ ಅಥವಾ ತನ್ನ ಅಧಿಕಾರಕ್ಕೆ ಕುತ್ತು ಬರುವ ಪ್ರಸಂಗ ಬರುವ ಸಂದರ್ಭದಲ್ಲಿ ತೋಳ್ಬಲದ ಪ್ರಭುತ್ವವಾಗಿಯೂ ರೂಪಾಂತರಗೊಳ್ಳುತ್ತದೆ. ಹಾಗೆಯೇ ತೋಳ್ಬಲದ ಪ್ರಭುತ್ವ ತನಗೆ ಅನುಕೂಲಕರವಾದ ಜನಸಮ್ಮತಿಯನ್ನು ಜನಸಮೂಹದ ನಡುವೆಯೇ ಉತ್ಪಾದಿಸುವಂಥ ಕೆಲಸಕ್ಕೂ ಇಳಿಯುತ್ತದೆ. ತೋಳ್ಬಲದ ಪ್ರಭುತ್ವದಲ್ಲಿ ಇರುವ ಸರ್ವಾಧಿಕಾರಿ ಜಗತ್ತಿಗೇ ಕಾಣುತ್ತಾನೆ. ಆದರೆ ಜನಸಮ್ಮತಿಯ ಆಳ್ವಿಕೆಯ ಪ್ರಭುತ್ವದಲ್ಲಿರುವ ಸರ್ವಾಧಿಕಾರಿ ಜನಸೇವಕನೆಂಬ ಮುಸುಕಿನಲ್ಲಿ ಅವಿತುಕೊಂಡಿರುತ್ತಾನೆ. ಸೂಕ್ತವಾದ ಸಮಯ-ಸಂದರ್ಭಕ್ಕೆ ಕಾಯುತ್ತಿರುತ್ತಾನೆ ಅಷ್ಟೇ. ಹಾಗಾಗಿ ಇಂಥ ಪ್ರಭುತ್ವವನ್ನು ವಶಪಡಿಸಿಕೊಂಡು, ಉತ್ಪಾದನಾ ವ್ಯವಸ್ಥೆಯನ್ನು ಬದಲಾಯಿಸುವ ಮೂಲಕ ಅದುವರೆಗೆ ಅಸ್ತಿತ್ವದಲ್ಲಿದ್ದ ಪ್ರಭುತ್ವದ ಶಕ್ತಿಯನ್ನು ಅಲ್ಪ-ಸ್ವಲ್ಪ ಹ್ರಾಸಗೊಳಿಸಬಹುದು ಎಂದು ಹೇಳುವ ಗ್ರಾಂಷಿ ಇಂತಹ ಸಣ್ಣಪುಣ್ಣ ಬದಲಾವಣೆಗಳಿಂದ ಅದುವರೆಗೆ ಆಳ್ವಿಕೆ ಮಾಡುತ್ತಿದ್ದ ಆಳುವ ವರ್ಗದ ಶಕ್ತಿ ನಾಶವಾಗುವುದಿಲ್ಲ. ಆದುದರಿಂದ ಸಮಾಜವಾದೀ ರಾಜಕಾರಣ ನಿಜವಾದ ರಾಜಕಾರಣವನ್ನು ಮಾಡುವುದೇ ಹೌದಾದಲ್ಲಿ ಅದು ಹಳೆಯ ಕಾಲದ ತರ-ತಮವನ್ನು ಪೋಷಿಸುವ ಮೌಲ್ಯಗಳನ್ನು ಮತ್ತು ಆ ಮೌಲ್ಯಗಳನ್ನು ಜತನದಿಂದ ಕಾಪಿಟ್ಟುಕೊಂಡಿರುವ ಸಂಸ್ಥೆಗಳನ್ನು ಬೇರುಸಹಿತ ಕಿತ್ತು ಹಾಕಬೇಕು. ಜನಸಮುದಾಯದ ದೈನಂದಿನ ಬದುಕಿನ ಸತ್ಯಗಳ ಜೊತೆಗೆ ಸಮಾಜವಾದೀ ಮೌಲ್ಯಗಳು ಹೇಗೆ ಕೂಡಿಕೊಳ್ಳುತ್ತವೆ ಎಂಬುದನ್ನು ಜನರಿಗೆ ಮನಗಾಣಿಸಬೇಕು ಮತ್ತು ಅಂತಹ ಅವಕಾಶಗಳನ್ನು ಸೃಷ್ಟಿಸಬೇಕು.
ಒಟ್ಟಿನಲ್ಲಿ ಜನಸಾಮಾನ್ಯರಲ್ಲೇ ಸಮಾಜವಾದೀ ಮೌಲ್ಯ ಬೇರೆಯಲ್ಲ, ತಮ್ಮ ದೈನಂದಿನ ಬದುಕಿನ ದಂದುಗ ಬೇರೆಯಲ್ಲ ಎಂಬ ವಾಸ್ತವಿಕ ಸತ್ಯದ ಅರಿವನ್ನು ಮೂಡಿಸುವ ಹೊಸ ಸಮಾಜವಾದೀ ನಾಯಕತ್ವವನ್ನು ನಾಗರಿಕ ಸಮಾಜದೊಳಗಡೆಯೇ ಸೃಷ್ಟಿಸಬೇಕು. ಇದನ್ನೇ ’ಪ್ರತಿಯಜಮಾನಿಕೆ’ (ಕೌಂಟರ್ ಹೆಜಮನಿ) ಎಂದು ಗ್ರಾಂಷಿ ಪ್ರತಿಪಾದಿಸುತ್ತಾನೆ. ಪ್ರಭುತ್ವವನ್ನು ಸ್ವಾಧೀನ ಪಡಿಸಿಕೊಳ್ಳುವ ರಾಜಕೀಯವನ್ನು ಮಾಡುವುದರ ಜೊತೆಗೆ ಅಥವಾ ಅದಕ್ಕಿಂತಲೂ ಮೊದಲು ಪ್ರಥಮ ಪ್ರಾಶಸ್ತ್ಯದಲ್ಲಿ ನಾಗರಿಕ ಸಮಾಜದಲ್ಲೂ ಹೊಸ ಬಗೆಯ ನೈತಿಕ ನಾಯಕತ್ವವನ್ನು ಸೃಷ್ಟಿಸುವಂಥ ರಾಜಕೀಯವನ್ನು ನಡೆಸುವುದೇ ’ಪ್ರತಿಯಜಮಾನಿಕೆ’. ಹಾಗಾಗಿ ಉಳಿದ ಎಡಪಂಥೀಯ ಚಿಂತಕರಂತೆ ಗ್ರಾಂಷಿಯಲ್ಲಿ ನಾಗರಿಕ ಸಮಾಜದ ನಿರಾಕರಣೆಯಿಲ್ಲ. ನಾಗರಿಕ ಸಮಾಜದೊಳಗಿನಿಂದಲೇ ಸಮಾಜವಾದೀ ನಾಯಕತ್ವವನ್ನು ಹುಟ್ಟಿಸಬೇಕು ಎಂಬ ಕಾಣ್ಕೆ ಇದೆ. (ರಾಜಕೀಯವಾಗಿ ಬಹಳ ದೊಡ್ಡ ಮುನ್ನೋಟ ಇರುವ ಗ್ರಾಂಷಿಯ ಈ ಚಿಂತನೆಯನ್ನು ಸಮಾಜವಾದೀ ರಾಜಕೀಯವನ್ನು ನಡೆಸುವ ರಾಜಕೀಯ ಪಕ್ಷಗಳು-ಸಂಘಟನೆಗಳು ಅರ್ಥ ಮಾಡಿಕೊಂಡು ಕೆಲಸ ಮಾಡಿವೆಯೋ ಇಲ್ಲವೋ, ಆದರೆ ಬಲಪಂಥೀಯ ಸಂಘಟನೆಗಳಂತೂ ಗ್ರಾಂಷಿ ಹೇಳಿದ ಮಾದರಿಯಲ್ಲೇ ತಮ್ಮತಮ್ಮ ರಾಜಕಾರಣವನ್ನು ನಡೆಸುತ್ತಿವೆ ಎಂಬುದಕ್ಕೆ ನಮಗೆ ಇತಿಹಾಸದಲ್ಲೂ, ವರ್ತಮಾನದಲ್ಲೂ ಅನೇಕ ನಿದರ್ಶನಗಳು ಸಿಗುತ್ತವೆ. ಇದು ನಮ್ಮ ಕಾಲದ ಅನೇಕ ವಿಪರ್ಯಾಸಗಳಲ್ಲಿ ಮೊದಲನೆಯದು.)
ನಮ್ಮ ಕಾಲದಲ್ಲಿ ನಾಗರಿಕ ಸಮಾಜದ ಪಾತ್ರದ ಕುರಿತು ವಿಶೇಷವಾದ ಚರ್ಚೆ ನಡೆದಿರುವುದು ಪ್ರಜಾತಂತ್ರವನ್ನು ಒಪ್ಪಿಕೊಂಡ ದೇಶ-ಸಮಾಜಗಳಲ್ಲಿ. ಯಾಕೆಂದರೆ ಪ್ರಜಾತಂತ್ರದ ಆಳ್ವಿಕೆ ಇರುವ ದೇಶಗಳಲ್ಲಿ ನಾಗರಿಕ ಸಮಾಜದ ಪಾತ್ರ ಬಹಳ ಭಿನ್ನವೂ ಮತ್ತು ಸಂಕೀರ್ಣವೂ ಆಗಿರುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಪ್ರಜಾತಂತ್ರ ಅತ್ಯಂತ ಗಹನವಾದ ತತ್ತ್ವಜ್ಞಾನ. ಪ್ರಜಾತಂತ್ರಕ್ಕಿರುವ ರಾಜಕೀಯ ಆಯಾಮದ ದರ್ಶನ ಇಂದು ಅತಿ ಹೆಚ್ಚು ಕಂಡುಬರುವುದಾದರೂ ಅದಕ್ಕೆ ಅದೊಂದೇ ಮುಖ ಇರುವುದಲ್ಲ. ಬಹಳ ವಿಶಾಲವಾದ ಅರ್ಥದಲ್ಲಿ ಪ್ರಜಾತಂತ್ರ ಒಂದು ಬಗೆಯ ಲೋಕದರ್ಶನ. ಹಾಗಾಗಿ ಪ್ರಜಾತಂತ್ರವನ್ನು ತತ್ತ್ವಜ್ಞಾನೀಯವಾಗಿ ಅತ್ಯಂತ ಸಾಂದ್ರವಾದ ಮತ್ತು ಪ್ರಾಯೋಗಿಕವಾಗಿ ಬಹಳ ಕ್ಲಿಷ್ಟವಾದ ಒಂದು ವಿದ್ಯಮಾನ ಎಂದೇ ಇದುವರೆಗೆ ನಮ್ಮಲ್ಲಿ ಭಾವಿಸಲಾಗಿದೆ.
ಪ್ರಜಾತಂತ್ರದ ಪ್ರಕಾರ ಪೂರ್ವನಿಶ್ಚಿತವಾದ ’ಸತ್ಯ’ ಎಂಬುದೊಂದು ಇಲ್ಲ. ನಿತ್ಯನಿರಂತರವಾಗಿ ಚಲನಶೀಲಗತಿಯಲ್ಲಿ ’ಸತ್ಯ’ ಚಲಿಸುತ್ತಲೇ ಇರುತ್ತದೆ ಎಂಬ ಪ್ರತಿಪಾದನೆಯನ್ನು ಪ್ರಜಾತಂತ್ರ ’ಸತ್ಯ’ದ ಕುರಿತಾಗಿ ಮಂಡಿಸುತ್ತದೆ. ಸತ್ಯಕ್ಕೆ ಈ ನಿರಂತರತೆ ಅಥವ ಚಲನಶೀಲತೆ ಯಾಕೆ ಪ್ರಾಪ್ತವಾಗಿದೆಯೆಂದರೆ ಸತ್ಯ; ಜನಸಮುದಾಯಗಳ ಸತತವಾದ ಚಿಂತನ-ಮಂಥನಗಳ ನಡುವೆ ಉದಿಸಿಬರುವಂಥದ್ದು. ಇಂತಹ ಸತ್ಯವನ್ನು ರಾಜಕೀಯವಾಗಿ ವಾಸ್ತವಗೊಳಿಸುವುದೆಂದರೆ ಅದು ಸುಲಭದ ಸಂಗತಿಯೇನಲ್ಲ. (ಜನಸಮುದಾಯಗಳ ಕ್ಷೇಮಾಭ್ಯುದಯಕ್ಕಾಗಿ ಜನಸಮುದಾಯಗಳ ನಡುವಿನಿಂದಲೇ ಬರುವ ಶಾಸನ ರಚಿಸುವ ಶಾಸಕರು ಸ್ವತಃ ತಾವೇ ತತ್ತ್ವಜ್ಞಾನಿಗಳಾಗಿರಬೇಕು ಅಥವಾ ತತ್ತ್ವಜ್ಞಾನಿಗಳೇ ಶಾಸಕರಾಗಬೇಕು, ಹಾಗಿದ್ದಲ್ಲಿ ಮಾತ್ರ ಪ್ರಜಾತಂತ್ರ ಯಶಸ್ಸು ಗಳಿಸಲು ಸಾಧ್ಯ ಎಂಬ ಪ್ಲೇಟೋನ ಮಾತನ್ನೂ ನಾವು ಇದೇ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು.) ಸತ್ಯದ ಕುರಿತಾದ ಈ ಬಗೆಯ ವಿಚಾರಶೀಲ ಪ್ರತಿಪಾದನೆಯನ್ನು ರಾಜಕೀಯವಾಗಿ ವಾಸ್ತವಗೊಳಿಸಲು ಪ್ರಜಾತಂತ್ರ ಅನೇಕಾನೇಕ ಸಂಘ-ಸಂಸ್ಥೆಗಳ ಹಾಗೂ ಕ್ರಿಯಾಚರಣೆಗಳ ಒಂದು ಜಾಲವನ್ನು ಮುಂದಿಡುತ್ತದೆ.
ಯುರೋಪಿನ ಸಮಾಜದ ಕಾಲ-ದೇಶಗಳ ನಿರ್ದಿಷ್ಟತೆಯ ನಡುವೆ ಉದಿಸಿಬಂದ ಪ್ರಜಾತಂತ್ರ ಹಲವು ಶತಮಾನಗಳ ಈ ಸುದೀರ್ಘ ಕಾಲಾವಧಿಯಲ್ಲಿ ಇತರ ಅನೇಕ ಚಿಂತನ ಕ್ರಮಗಳ ಜೊತೆಗಿನ ಬೌದ್ಧಿಕ ಸೆಣಸಾಟ ಮತ್ತು ಬೌದ್ಧಿಕ ಸಹ-ವಾಸದಿಂದ ಇಂದು ಒಂದು ಸ್ಪಷ್ಟವಾದ ವಿಚಾರ ಪಂಥವಾಗಿ ನಮ್ಮ ಮುಂದೆ ಇದೆ. ಇದನ್ನು ರಾಜಕೀಯವಾಗಿಯೂ ಸಾಕಾರಗೊಳಿಸುವ ಪ್ರಯತ್ನವನ್ನು ಅನೇಕ ದೇಶ-ಸಮಾಜಗಳು ನಡೆಸುತ್ತಲೂ ಇವೆ. ಪ್ರಜಾತಂತ್ರದ ಸ್ವ-ಭಾವದಲ್ಲಿ ಸಹಜವಾಗಿರುವ ಅದರ ಮುಕ್ತಭಾವದ ಯೋಚನಾ ಲಹರಿ ಅದನ್ನು ಐರೋಪ್ಯೇತರ ಸಮಾಜಗಳಲ್ಲಿಯೂ ಜನಪ್ರಿಯಗೊಳಿಸಿದೆ. ಜನರ ಆಶೋತ್ತರಗಳನ್ನೇ ಪ್ರಧಾನವಾಗಿರಿಸಿಕೊಂಡು ರಾಜಕಾರಣದ ಪಥಸಂಚಲನವಾಗಬೇಕು ಎನ್ನುವ ಪ್ರಜಾತಂತ್ರದ ಪ್ರತಿಪಾದನೆ ಎಷ್ಟು ಆಕರ್ಷಕವಾಗಿದೆಯೆಂದರೆ ಜಗತ್ತಿನ ಎಲ್ಲರೂ ಅದನ್ನು ಸ್ವ-ಸಂತೋಷದಿಂದ ಸ್ವೀಕರಿಸುವಂತಹ ಸ್ಥಿತಿ ಪ್ರಾಪ್ತವಾಗಿದೆ. ಆದ್ದರಿಂದಲೇ, ಇಂದು ನಮ್ಮ ನಡುವೆ ಅತ್ಯಂತ ಬರ್ಬರವಾಗಿರುವ ಸರ್ವಾಧಿಕಾರೀ ವ್ಯವಸ್ಥೆಗಳು ತಮ್ಮನ್ನು ತಾವು ಪ್ರಜಾತಾಂತ್ರಿಕ ವ್ಯವಸ್ಥೆಗಳೆಂದೇ ಕರೆಯಿಸಿಕೊಳ್ಳಲು ಹೆಣಗಾಡುತ್ತಿವೆ.
ಇಂತಹ ಪ್ರಜಾತಂತ್ರ ಇಂದು ಒಂದು ಏಕಾಕಾರದ ತಾತ್ತ್ವಿಕ ಚೌಕಟ್ಟಿನಲ್ಲಿ ಉಳಿದಿಲ್ಲ. ಪ್ರಜಾತಂತ್ರವನ್ನು ಒಂದು ಸಿದ್ಧಾಂತವೆಂದು ತಿಳಿಯದೆ ಅನೇಕ ಸದ್ಭಾವನೆಗಳ ಅಥವಾ ಆದರ್ಶಗಳ ಕೂಡಲಸಂಗಮವೆಂದು ಪರಿಗಣಿಸಲಾಗಿದೆ. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಹಕ್ಕು, ಕರ್ತವ್ಯ ಮೊದಲಾದ ಅನೇಕ ಮೌಲಿಕ ಪರಿಕಲ್ಪನೆಗಳು ಪ್ರಜಾತಂತ್ರದ ಜೊತೆಗೂಡಿ ಇಂದು ನಮ್ಮ ಮುಂದೆ ಬಂದಿವೆ. ಅಂತೆಯೇ, ಬಹುತ್ವ, ವೈವಿಧ್ಯ, ಸಂಯುಕ್ತತತೆ, ಸಹನೆ ಹಾಗೂ ವಿಶ್ವ ಶಾಂತಿಗಳಂತಹ ಮಾನವೀಯ ಆದರ್ಶಗಳನ್ನು ಪ್ರಜಾತಾಂತ್ರಿಕ ಜೀವನ ದೃಷ್ಟಿಯ ಅತ್ಯಂತ ಮೂಲಭೂತ ನೆಲೆಗಟ್ಟು ಎಂದೂ ಈಗ ತಿಳಿಯಲಾಗಿದೆ. ಆದುದರಿಂದ ಪ್ರಜಾತಂತ್ರ ಕೇವಲ ರಾಜಕೀಯ ವ್ಯವಸ್ಥೆ ಮಾತ್ರವಲ್ಲ ಅದೊಂದು ಮೌಲಿಕ ಜೀವನ ಪದ್ಧತಿಯೂ ಹೌದು ಎನ್ನುವ ಮಾತನ್ನು ನಮ್ಮ ಅನೇಕ ಚಿಂತಕರು ಆಗಿಂದಾಗ್ಗೆ ಹೇಳಿದ್ದಿದೆ.
ಈಗಾಗಲೇ ವಿವರಿಸಿದಂತೆ ಪ್ರಜಾತಂತ್ರದ ಈ ಬಗೆಯ ತೆರೆದ ಅಂಚಿನ (ಓಪನ್ ಎಂಡೆಡ್) ತಾತ್ತ್ವಿಕತೆ ಹಾಗೂ ಮಾನವೀಯ ಮೌಲ್ಯಗಳಿಂದ ಒಡಗೂಡಿದ ಅದರ ರಾಜಕೀಯ ನಡೆ ಹಲವು ಬಗೆಯ ಪ್ರಜಾತಾಂತ್ರಿಕ ಮಾದರಿಗಳನ್ನು ವಿವಿಧ ದೇಶ-ಸಮಾಜಗಳಲ್ಲಿ ಹುಟ್ಟುಹಾಕಿದೆ. ಉದಾಹರಣೆಗೆ ಲಿಬರಲ್ ಪ್ರಜಾತಂತ್ರ, ಸಮಾಜವಾದಿ ಪ್ರಜಾತಂತ್ರ, ಸಾಮ್ಯವಾದಿ ಪ್ರಜಾತಂತ್ರ, ಸಾಮಾಜಿಕ ಪ್ರಜಾತಂತ್ರ ಇವೇ ಮೊದಲಾದ ಪ್ರಜಾತಂತ್ರದ ಹತ್ತು-ಹಲವು ರಾಜಕೀಯ ಸಂಕಥನಗಳಿಂದಲಾಗಿ ಪ್ರಜಾತಂತ್ರದ ’ವಿಶ್ವರೂಪ’ ಸಂಕೀರ್ಣವೂ ಹಾಗೂ ವ್ಯಾಪಕವೂ ಆಗಿದೆ.
ಇಷ್ಟೊಂದು ಉದಾತ್ತವಾದ ಆಲೋಚನಾ ಪ್ರಸ್ಥಾನ, ಒಂದು ರಾಜಕೀಯ ತತ್ತ್ವಜ್ಞಾನವಾಗಿ ನಮ್ಮ ನಡುವೆ ಕ್ರಿಯೆಯಲ್ಲಿ ತೊಡಗುವ ಸಂದರ್ಭದಲ್ಲಿ ಬಿಕ್ಕಟ್ಟುಗಳು-ಸಮಸ್ಯೆಗಳು-ತೊಡಕುಗಳು ಎದ್ದು ತೋರುವುದು ಯಾಕೆ? ನಾಗರಿಕ ಸಮಾಜ ಮತ್ತು ರಾಜಕೀಯ ಸಮಾಜಗಳು ಪ್ರಜಾತಂತ್ರದ ಆಳ್ವಿಕೆ ಇರುವ ದೇಶಗಳಲ್ಲಿ ತಮ್ಮತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಯಾವ ಬಗೆಯ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಮುಂದಿನ ಭಾಗದಲ್ಲಿ ಚರ್ಚಿಸೋಣ.

ತಿದ್ದುಪಡಿ : ಕಳೆದ ಸಂಚಿಕೆಯಲ್ಲಿ “ಈಗಿನ ಕೇರಳದ ಆಗಿನ ಸಾಮಾಜಿಕ ಸ್ವರೂಪವನ್ನು ನೋಡಿ ಮೆಗಾಸ್ತನೀಸ್ ಹೀಗೆ ಬರೆದಿದ್ದ” ಎಂದು ಬರೆದ ವಾಕ್ಯವನ್ನು ದುರಾತೆ ಬಾರ್ಬೋಸಾ ಎಂಬ ಪ್ರವಾಸಿಗ ಹೀಗೆ ಬರೆದಿದ್ದ ಎಂದು ಓದಿಕೊಳ್ಳಬೇಕಾಗಿ ವಿನಂತಿ.

ಈ ಅಂಕಣದ ಹಿಂದಿನ ಬರೆಹಗಳು:
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 3

ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 2

ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 1

‘ಸ್ವತಂತ್ರ ಭಾರತ’ ಎಂಬ ಇತ್ಯರ್ಥವಾಗದ ವಿದ್ಯಮಾನ

ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್ ಕಾದಂಬರಿಯೊಂದರ ಮೊದಲ ಪುಟಗಳು

ಅನೇಕಲವ್ಯ – 3

ಅನೇಕಲವ್ಯ-2

ಅನೇಕಲವ್ಯ-1

‘ಇಂದಿರಾಬಾಯಿ’ ಯ ರಾಜಕೀಯ ಓದು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...