ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 2

Date: 20-03-2021

Location: .


ಮೀಸಲಾತಿಯ ನಿಗದಿತ ಪಾಲಿನಲ್ಲಿ ಹೆಚ್ಚಿನ ದಾಯಭಾಗವನ್ನು ಅಪೇಕ್ಷಿಸಿ ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಜಾತಿ ಸಮುದಾಯಗಳ ಬೀದಿ ಹೋರಾಟಗಳು ಸಂವಿಧಾನದ ಮೂಲ ಆಶಯವನ್ನೇ ಅಣಕಿಸುವಂತಿವೆ, ಅಪ್ರಸ್ತುತಗೊಳಿಸುವಂತಿವೆ. ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು? ಇದನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ? ಎಂಬ ಮೂಲಭೂತ ಪ್ರಶ್ನೆಗಳೊಂದಿಗೆ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರು ತಮ್ಮ ಲೋಕೋಕ್ತಿ ಅಂಕಣದಲ್ಲಿ ಚರ್ಚೆಯನ್ನು ಆರಂಭಿಸಿದ್ದು, ಅದರ ಎರಡನೇ ಭಾಗ ಇಲ್ಲಿದೆ.

ಜಾತಿಯ ಬಗ್ಗೆ ನಮಗೆ ಹೇಳಿಕೊಡಲಾದ ಪ್ರಾಥಮಿಕ ಪಾಠದ ಕೆಲವು ಅಂಶಗಳನ್ನು ಈಗ ಪರಿಶೀಲಿಸೋಣ:

ಪ್ರಚಲಿತ ಸಂದರ್ಭದಲ್ಲಿ ಯಾವ ಸ್ವರೂಪದ ಮತ್ತು ಯಾವ ಪ್ರಮಾಣದ ಜಾತೀಯ ವೈಷಮ್ಯ ಮತ್ತು ಸೆಣಸಾಟಗಳು ಇವೆಯೋ ಅವಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದು ನಾವು ಈಗ ಸಾರಾಸಗಟಾಗಿ ಹೇಳುತ್ತಿದ್ದೇವೆ. ಆದರೆ ಈ ಸಾವಿರಾರು ವರ್ಷಗಳ ಇತಿಹಾಸ ಹೀಗೆಯೇ ಇತ್ತು ಎಂದು ’ಇದಮಿತ್ಥಮ್’ ಆಗಿ ಹೇಳುವುದು ಕಷ್ಟ. ಹಾಗೆಂದು ಆ ಕಾಲದಲ್ಲಿ ಜಾತೀಯ ಸಮಸ್ಯೆಗಳು ಇರಲಿಲ್ಲವೇ ಎಂದು ಕೇಳಿದರೆ ಖಂಡಿತವಾಗಿಯೂ ಇದ್ದವು. ಅದಕ್ಕೆ ನಮಗೆ ಅನೇಕ ನಿದರ್ಶನಗಳೂ ಸಿಗುತ್ತವೆ. ಆದರೆ ಈ ಕಾಲದಲ್ಲಿ ನಾವು ಇಂದು ಕಾಣುವ ಸಂಕೀರ್ಣ ರೂಪದ ಸಮಸ್ಯೆಗಳು ಆಗ ಇದ್ದವೋ ಇರಲಿಲ್ಲವೋ ಎಂಬುದು ಇಂದಿನ ನಮಗೆ ಗೊತ್ತಿಲ್ಲ. ಹಾಗಾಗಿ ಆಧುನಿಕಪೂರ್ವ ಕಾಲದ ಭಾರತೀಯ ಸಮಾಜದ ಸಾಮಾಜಿಕ ಸಂರಚನೆಯ ಸ್ವರೂಪಕ್ಕೂ, ಆಧುನಿಕ ಕಾಲದ ಭಾರತೀಯ ಸಮಾಜದ ಸಾಮಾಜಿಕತೆಗೂ ಇರುವ ಚಾರಿತ್ರಿಕ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡೇ ಜಾತಿಯ ಕುರಿತು ನಾವು ಚಿಂತನೆ ನಡೆಸಬೇಕಾಗುತ್ತದೆ. ಜಾತಿಯ ಕುರಿತು ನಾವು ಇಂದು ಕಾಣುವ ಅನೇಕ ಬಗೆಯ ಹೊಸ ಸಮಸ್ಯೆಗಳಿಗೆ ನೂರೈವತ್ತು ವರ್ಷಗಳ ಇತಿಹಾಸ ಇದೆ. ಹೊಸ ಸಮಸ್ಯೆಗಳು ಆಧುನಿಕ ಕಾಲದಲ್ಲಿ ತೀವ್ರವಾಗಿ ಬಿಗಡಾಯಿಸಿದ್ದುದರಿಂದ ಅದೇ ಪ್ರಮಾಣದಲ್ಲಿ ಆಧುನಿಕಪೂರ್ವದಲ್ಲೂ ಜಾತೀಯ ಸಮಸ್ಯೆಗಳು ಇದ್ದವು ಎಂದು ಊಹೆಯ ಬಲದಿಂದ ನಾವು ಈಗಿನ ಈ ತೀರ್ಮಾನಕ್ಕೆ ಬಂದಿದ್ದೇವೆ.

ಜಾತಿಯ ಕುರಿತು ನಮ್ಮಲ್ಲಿ ಪೊಲಿಟಿಕಲಿ ಕರೆಕ್ಟ್ ಆಗಿರುವ ಹಾಗೆಯೇ ಜನಪ್ರಿಯವೂ ಆಗಿರುವ ವಾಗ್ವೈಖರಿ ನಮಗೆಲ್ಲರಿಗೂ ತಿಳಿದಿರುವುದೇ ಆಗಿದೆ. ಅದರ ಬಗ್ಗೆ ಸಂದೇಹವನ್ನು ತಾಳುವುದರ ಜೊತೆಗೆ ಜಾತಿ ಎಂಬುದೊಂದು ’ಶ್ರೇಣೀಕರಣ ವ್ಯವಸ್ಥೆ’ ಎಂಬ ಹೇಳಿಕೆಯನ್ನೂ ನಾವು ಕೊಂಚ ಪರಿಶೀಲಿಸಬೇಕಾಗಿದೆ. ನಮ್ಮ ದೇಶದ ಚರಿತ್ರೆಯಲ್ಲಿ ಯಾವ ರಾಜ-ಮಹಾರಾಜರ ಕಾಲವನ್ನು ನೋಡಿದರೂ ಅಲ್ಲಿಯ ಆಡಳಿತ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಇದ್ದರು ಎಂಬುದೇನೋ ಸರಿ. ಆದರೆ ಅವರೇ ಅಧಿಕಾರದ ಕೇಂದ್ರದಲ್ಲಿದ್ದುದನ್ನು ನಾವು ಅಷ್ಟಾಗಿ ಕಾಣಲಾರೆವು. ಅಧಿಕಾರದ ಕೆಲವು ಆಯಕಟ್ಟಿನ ಜಾಗಗಳಲ್ಲಿ ಅವರಿದ್ದರೂ ರಾಜನ ರಕ್ತಸಂಬಂಧಿಕರೂ, ನೆಂಟರಿಷ್ಟರೂ ಸೇರಿದಂತೆ ರಾಜ ಪರಿವಾರದವರೂ ಅನೇಕರಿದ್ದರು. ಎಲ್ಲೋ ಒಬ್ಬ ಚಾಣಕ್ಯನ ಉದಾಹರಣೆಯನ್ನು ಕೊಡುವುದರಿಂದ ಬ್ರಾಹ್ಮಣ ಪಾರಮ್ಯದ ಈ ವಾದ ಗಟ್ಟಿಯಾಗುವುದಿಲ್ಲ. ಪ್ರಾಯಶಃ ಮಹಾರಾಷ್ಟ್ರದ ಪೇಶ್ವೆಗಳ ಕಾಲದಲ್ಲಿ ಬ್ರಾಹ್ಮಣರು ಪ್ರಭುಗಳಾಗಿ ಕಾಣಿಸಿಕೊಂಡುದುದನ್ನು ಹೊರತುಪಡಿಸಿದರೆ ಉಳಿದಂತೆ ಬ್ರಾಹ್ಮಣರಿಗೆ ಈ ದೇಶದ ಆಧುನಿಕ ಪೂರ್ವ ರಾಜಕೀಯ ಚರಿತ್ರೆಯಲ್ಲಿ ಬಹಳ ಪ್ರಧಾನವಾದ ಸ್ಥಾನವೇನೂ ಇದ್ದಿರಲಿಲ್ಲ. ಆದರೆ ಆಧುನಿಕ ರಾಜಕೀಯ ಚರಿತ್ರೆಯಲ್ಲಿ ಅಂಥ ಸ್ಥಾನವನ್ನು ಪಡೆಯುವ ಉದ್ದೇಶದಿಂದಲೇ ’ಹಿಂದುತ್ವ’ವನ್ನು ಪ್ರತಿಪಾದಿಸುವ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ಅವುಗಳ ಜನ್ಮಭೂಮಿಯೂ ಮಹಾರಾಷ್ಟ್ರವೇ ಆಗಿರುವುದು ಕಾಕತಾಳೀಯವೇನಲ್ಲ.

ಆಧುನಿಕ ಕಾಲದ ಬ್ರಿಟಿಷ್ ಭಾರತದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಬಂದ ಮಾನ್ಯತೆಯನ್ನು ಮತ್ತು ಆ ಸಮುದಾಯ ಆಡಳಿತಾತ್ಮಕವಾಗಿ ನಿರ್ಣಾಯಕವಾದ ಸ್ಥಾನಗಳಲ್ಲಿ ನೆಲೆಯೂರಿದ್ದನ್ನು ಗಮನದಲ್ಲಿಟ್ಟುಕೊಂಡು ಆಧುನಿಕಪೂರ್ವ ಕಾಲದಲ್ಲೂ ಬ್ರಾಹ್ಮಣ ಸಮುದಾಯದ ಪಾರುಪತ್ಯವೇ ಇತ್ತು ಎಂಬ ನಂಬಿಕೆಗೆ ನಾವು ಬಂದಂತಿದೆ. ನಮ್ಮ ಪ್ರಾಚೀನ ವಾಙ್ಮಯದಲ್ಲಿ ಬ್ರಾಹ್ಮಣ ಶ್ರೇಷ್ಠತೆಯನ್ನು ಬಿಂಬಿಸುವ ಎಷ್ಟು ಸಂಕಥನಗಳು ಇದ್ದುವೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬ್ರಾಹ್ಮಣರನ್ನು ವ್ಯಂಗ್ಯಮಾಡುವ, ಲೇವಡಿ ಮಾಡುವ ಪ್ರಕರಣಗಳೂ ಇವೆ. ಪ್ರಾಚೀನ ಕಾಲದ ರಂಗಭೂಮಿ ಪ್ರಕಾರಗಳಾದ ನಾಟಕ, ಯಕ್ಷಗಾನಗಳಲ್ಲಂತೂ ಇವು ಭರ್ಜರಿಯಾಗಿವೆ. ಉದಾಹರಣೆಗೆ ಮಹಿಷಾಸುರನ ಅಪ್ಪನಾದ ವಿದ್ಯುನ್ಮಾಲಿಯ ವಿವಾಹ ಪ್ರಕರಣದ ಬ್ರಾಹ್ಮಣ, ಅಂಬೆಯನ್ನು ಸಾಲ್ವನಲ್ಲಿಗೆ ಕರೆದೊಯ್ಯುವ ವೃದ್ಧ ಬ್ರಾಹ್ಮಣ ಇತ್ಯಾದಿ. ಜನಪದ ಕಥೆ/ನಂಬಿಕೆಗಳಲ್ಲಂತೂ ಈ ಲೇವಡಿ ತುರೀಯಾವಸ್ಥೆಯನ್ನೇ ತಲುಪಿದೆ. ಉದಾಹರಣೆಗೆ ವೇದ,ಶಾಸ್ತ್ರ ಓದಿದ ಬ್ರಾಹ್ಮಣ ಈಜು ಬಾರದೆ ಮುಳುಗಿ ಸಾಯುವುದು, ಒಂಟಿ ಬ್ರಾಹ್ಮಣ ಅಪಶಕುನ ಎಂಬ ನಂಬಿಕೆ, ಬದುಕಿನಲ್ಲಿ ಏಳಿಗೆಯನ್ನೇ ಕಾಣದ ದುರದೃಷ್ಟಶಾಲಿಯ ಮುಖವನ್ನು ಬೆಳಿಗ್ಗೆ ಎದ್ದು ನೋಡಿದವರು ’ ಅಯ್ಯೋ ಕರ್ಮವೇ, ಬೆಳಿಗ್ಗೆ ಬೆಳಿಗ್ಗೇನೇ ಬ್ರಾಹ್ಮಣನ ದರ್ಶನವಾಯಿತಪ್ಪ’ ಎಂದು ಮುಖಮುರಿಯೋದು ಇತ್ಯಾದಿ, ಇತ್ಯಾದಿ.

ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 4ರಷ್ಟಿರುವ ಬ್ರಾಹ್ಮಣರು 96 ಶೇಕಡಾದಷ್ಟು ಪ್ರಮಾಣದಲ್ಲಿರುವ ಇತರೆ ಸಮುದಾಯಗಳನ್ನು ನಿರಂತರವಾಗಿ ತುಳಿದುಕೊಂಡೇ ಬಂದರು ಮತ್ತು ಹಾಗೆ ತುಳಿಯುವ ಒಂದು ದೀರ್ಘಾವಧಿ ಯೋಜನೆಯ ಭಾಗವಾಗಿಯೇ ಕಾರ್ಯಾಚರಿಸಿದರು ಎಂಬುದನ್ನು ನಂಬುವುದು ಸ್ವಲ್ಪ ಕಷ್ಟವೇ. ಇಂಥ ಬೀಸು ಹೇಳಿಕೆಗಳ ಮೂಲಕ ’ತುಳಿಯುವವರ’ ಅಥವಾ ’ತುಳಿದವರ ಬಿಂಬ’ವನ್ನು ವಿಪರೀತ ಕೊಬ್ಬಿಸಿ ಮುಂದಿಡಲಾಗಿದೆ. ಹಾಗೆಯೇ, ಇನ್ನೊಂದು ದೊಡ್ಡ ಸಮುದಾಯವನ್ನು ತುಳಿಸಿಕೊಳ್ಳುವುದಕ್ಕೇ ಅರ್ಹವಾದ, ತಲೆಯೇ ಇಲ್ಲದ ಗಾಂಪರ ಗುಂಪು ಎಂದೂ ಭಾವಿಸಲಾಗಿದೆ. ಅಪ್ರತಿಮ ಚೈತನ್ಯಶಾಲಿಯೂ, ಅಪಾರ ಬುದ್ಧಿವಂತಿಕೆಯೂ ಇರುವ ಮತ್ತು ನಿರಂತರವಾಗಿ ಷಡ್ಯಂತ್ರವನ್ನು ಹೂಡುತ್ತಲೇ ಇರುವ ಸಮುದಾಯ ಒಂದು ಕಡೆಯೂ; ಸತತವಾಗಿ ದಬಾವಣೆಗೊಳಗಾದ, ಬಡಿಸಿಕೊಂಡ, ಕ್ರಿಯಾಶೂನ್ಯತೆಯ ಸಮುದಾಯಗಳು ಇನ್ನೊಂದು ಕಡೆಯೂ ಇದ್ದವು ಎಂದು ಭಾವಿಸುವುದು ಒಂದು ಬಗೆಯ ಓರಿಯೆಂಟಲ್ ವಾದವೇ ಹೌದು.

ಒಂದು ವೇಳೆ ನಾವು ಇಂದು ಕಾಣುವಂಥ ಜಾತಿಪದ್ಧತಿಯೇ ಆಗಲೂ ಇರುತ್ತಿದ್ದರೆ ಈ ವ್ಯವಸ್ಥೆಯಲ್ಲಿ ಯಾರು ಕೆಳಗಿದ್ದಾರೋ ಅವರೇನೂ ಇದನ್ನು ಬಹಳ ಬಲವಾಗಿ ಚಾಲೆಂಜ್ ಮಾಡಿದಂತಿಲ್ಲ. ಈ ವ್ಯವಸ್ಥೆಯನ್ನು ಅತ್ಯಂತ ಸಹಜವೇನೋ ಎಂದು ಅವರು ಒಪ್ಪಿಕೊಂಡಂತೆ ಇದ್ದ ಕಾಲ ಅದು. ಇದು ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಬೇರೆ. ಆದರೆ ಆ ಕಾಲದ ಸಮಾಜ ನಮ್ಮ ಇಂದಿನ ಸಮಾಜದಂತೆ ಬಹಳ ಸಂಕೀರ್ಣ ಸಮಾಜ ಆಗಿದ್ದಿರಲಿಕ್ಕಿಲ್ಲ. ಯಾಕೆಂದರೆ ಜನಸಮುದಾಯಗಳು ನಡೆದುಕೊಳ್ಳುವ ರೀತಿ-ರಿವಾಜುಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಕವಿ ಕೆ ಬಿ ಸಿದ್ದಯ್ಯನವರ ’ಗಲ್ಲೆಬಾನಿ’ ಖಂಡಕಾವ್ಯದಲ್ಲಿ ಮಾದಿಗರು ಚಪ್ಪಲಿ ಹೊಲಿಯಲೆಂದು ತಂದ ಸತ್ತ ದನ-ಎಮ್ಮೆಗಳ ಚರ್ಮವನ್ನು ಹದ ಮಾಡಿ ‘ಗಲ್ಲೆಬಾನಿ’ ಎಂಬ ಮಣ್ಣಪಾತ್ರೆಯಲ್ಲಿ ನೀರು ತುಂಬಿಸಿ, ಅದರಲ್ಲಿ ಚರ್ಮವನ್ನು ಕೆಲದಿನಗಳ ಕಾಲ ಅದ್ದಿ ಇಡುತ್ತಿದ್ದರು. ಆ ಗಲ್ಲೆಬಾನಿಯ ನೀರನ್ನು ಕದ್ದುಕೊಂಡು ಹೋಗಿ ಬ್ರಾಹ್ಮಣರು ತಮ್ಮ ಮದುವೆಯ ಸಂದರ್ಭದಲ್ಲಿ ಶುದ್ಧಿಯೇ ಮೊದಲಾದ ಕ್ರಿಯಾವಿಧಿಗಳಿಗೆ ಉಪಯೋಗಿಸಿಕೊಳ್ಳುವ ಸಂಪ್ರದಾಯ ಇತ್ತು ಎಂಬ ಉಲ್ಲೇಖ ಇದೆ. ಹಾಗೆಯೇ ಕರಾವಳಿ ಕಡೆಯ ಬ್ರಾಹ್ಮಣೇತರ ಸಮುದಾಯಗಳಲ್ಲಿ ಸಾವು ಸಂಭವಿಸಿದ ಮನೆಯಲ್ಲಿ ಶುದ್ಧಾಚಾರಗಳ ಕ್ರಿಯಾವಿಧಿಗಳನ್ನು ನಿರ್ವಹಿಸುವವರು ಮಡಿವಾಳರೇ ಹೊರತು ಬ್ರಾಹ್ಮಣರಲ್ಲ. ನನ್ನ ಮನೆತನದ ಬಂಧುಗಳು ಬಹಳ ಭಯ-ಭಕ್ತಿಯಿಂದ ನಡೆದುಕೊಳ್ಳುವ ನಾಗನಿಗೂ ಒಂದು ಕಾಲದಲ್ಲಿ ಪೂಜೆ ಮಾಡುತ್ತಿದ್ದವರು ಹೊಲೆಯರೇ ಹೊರತು ಬ್ರಾಹ್ಮಣರಲ್ಲ. ಇಂದಿಗೂ ಬಯಲು ಸೀಮೆಯ ಬ್ರಾಹ್ಮಣೇತರ ಜಾತಿಸಮುದಾಯಗಳ ದೈವಿಕ ಕುಲಾಚಾರಗಳನ್ನು ನೆರವೇರಿಸುವುದು ಆಯಾ ಜಾತಿಸಮುದಾಯಕ್ಕೆ ಸೇರಿದ ’ದಾಸಪ್ಪ’ಗಳೇ ಹೊರತು ಬ್ರಾಹ್ಮಣರಲ್ಲ. ಈ ಎಲ್ಲ ನಿದರ್ಶನಗಳನ್ನು ಕೊಟ್ಟ ಉದ್ದೇಶ ಹಳೆಯ ಜಾತಿ ಸಮಾಜದಲ್ಲಿ ಇದ್ದ ಫಾರ್ಮುಲಾಗಳೇ ಬೇರೆ ಎಂಬುದನ್ನು ಸೂಚಿಸುವುದಕ್ಕಾಗಿ.

ಆಧುನಿಕಪೂರ್ವ ಭಾರತೀಯ ಸಮಾಜದಲ್ಲಿರುವ ಈ ಸಂಕೀರ್ಣ ಸ್ವರೂಪದ ಜಾತಿಸಮಾಜದ ವಿಷಯಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿರುವ ಇತಿಹಾಸಕಾರ ಮನು ವಿ ದೇವದೇವನ್ರವರು ಬುಕ್ ಬ್ರಹ್ಮದಲ್ಲಿ ಬರೆಯುತ್ತಿರುವ ಲೇಖನಗಳನ್ನು ಈ ಹಿನ್ನೆಲೆಯಲ್ಲಿ ಹೆಚ್ಚಿನ ತಿಳಿವಿಗಾಗಿ ಓದಬಹುದು. “ರಾಜ್ಯದ ಸೇವೆಯಲ್ಲಿದ್ದ ಗುಂಪುಗಳು ಮುಂದೆ ಜಾತಿಗಳಾಗಿ ಪರಿವರ್ತನೆ ಹೊಂದಿದವು” ಹಾಗೂ ’ನಾವು ಈಗ ಬಳಸುತ್ತಿರುವ ಎಡಗೈ-ಬಲಗೈ ಎಂಬ ಪರಿಭಾಷೆಯ ಹಿಂದೆಯೂ ರಾಜನ ಎಡ ಮತ್ತು ಬಲಭಾಗದಲ್ಲಿ ಜಮಾವಣೆಗೊಳ್ಳುತ್ತಿದ್ದ ಸೇನಾಪಡೆಯ ಸ್ಥಾನ ನಿರ್ದಿಷ್ಟತೆಯೇ ಕಾರಣ’ ಎಂಬ ಅವರ ಮಾತು ಇಲ್ಲಿ ಉಲ್ಲೇಖನೀಯ.

ಈ ಕುರಿತು ಇನ್ನಷ್ಟು ವಿವರವಾಗಿ ಚಿಂತನೆ ಮಾಡೋಣ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನಿಗಿಂತಲೂ ಪೂರ್ವದ 7-8ನೇ ಶತಮಾನದಲ್ಲಿ ನಮ್ಮ ನಡುವೆ ಇಂದು ಇರುವಂಥ ಜಾತಿ ಸಮಾಜವೇ ಇತ್ತೇ? ಆಗಲೂ ಪಂಚಮಸಾಲಿ ಲಿಂಗಾಯತರು, ಕರಾಡ ಬ್ರಾಹ್ಮಣರು, ದಾಸ ಒಕ್ಕಲಿಗರು, ಬಂಟ-ಪರಿವಾರ ಬಂಟ-ಈಡಿಗ-ಬಿಲ್ಲವ-ಬಲಿಜ-ಸಫಳಿಗ-ಶೆಟ್ಟಿಗಾರ ಇತ್ಯಾದಿ ಜಾತಿ-ಉಪಜಾತಿಗಳು ಈಗಿನಂತೆ ಇದ್ದುವೇ? ಪ್ರಾಯಶಃ ಇದ್ದಿರಲಿಕ್ಕಿಲ್ಲ.

ಆಸೇತು ಹಿಮಾಚಲ ಪರ್ಯಂತ ಹರಡಿರುವ ಈ ನಮ್ಮ ವಿಶಾಲವಾದ ಜಂಬೂದ್ವೀಪದಲ್ಲಿ ಈಗ ನೂರಾಮೂವತ್ತು ಕೋಟಿ ಜನರಿದ್ದರೂ 8ನೇ ಶತಮಾನದಲ್ಲಿ ಇಲ್ಲಿಯ ಜನಸಂಖ್ಯೆ ಎಷ್ಟಿದ್ದಿರಬಹುದು? ಬ್ರಿಟಿಷರು ಹದಿನೆಂಟನೇ ಶತಮಾನದಲ್ಲಿ ನಮ್ಮಲ್ಲಿ ಮಾಡಿದ ಮೊದಲ ಜನಗಣತಿಯ ಪ್ರಕಾರವೇ ಅಂದಿನ ನಮ್ಮ ಜನಸಂಖ್ಯೆ ಸುಮಾರು 22 ಕೋಟಿ. (ಈ ಗಣತಿಯ ಅಂಕಿ-ಅಂಶಗಳ ನಿಖರತೆಯ ಬಗ್ಗೆ ಅನುಮಾನವಿಟ್ಟುಕೊಳ್ಳಬಹುದು.) ಆ ಅಂದಾಜಿನ ಬಲದಲ್ಲಿ ಹೇಳುವುದಾದರೆ, 8ನೇ ಶತಮಾನದಲ್ಲಿ ಈ ಭೂವಲಯದ ಜನಸಂಖ್ಯೆ ಅಬ್ಬಬ್ಬಾ ಅಂದರೂ ನಾಲ್ಕೈದು ಕೋಟಿ ಮೀರದು. ವಿಶಾಲವಾದ ಭೂಪ್ರದೇಶವೂ ಇದ್ದು ಜನಸಾಂದ್ರತೆಯೂ ಕಡಿಮೆ ಇದ್ದ ಆ ಕಾಲದಲ್ಲಿ ಕಡಿಮೆ ಸಂಖ್ಯೆಯ ಜಾತಿ-ಪಾತಿಗಳು ಇದ್ದರೂ, ಜನರ ಚಲನೆ ಬಹಳ ವಿರಳವಾಗಿತ್ತು. ಒಂದು ಜಾತಿಸಮುದಾಯ ಇನ್ನೊಂದು ಜಾತಿಸಮುದಾಯದ ಜೊತೆ ಬೆರೆಯುವ ಸಂದರ್ಭವೂ ಕಡಿಮೆಯಾಗಿತ್ತು. ಅಂದರೆ ‘ಸೋಶಿಯಲ್ ಮೊಬಿಲಿಟಿ’ ಅನ್ನುವುದು ಇರಲಿಲ್ಲ ಅಥವಾ ಅತ್ಯಂತ ಕನಿಷ್ಟ ಪ್ರಮಾಣದಲ್ಲಿತ್ತು.

ನಿರ್ದಿಷ್ಟ ಜಾತಿಯ ಜನರು ಸಾಧ್ಯವಾದಷ್ಟೂ ತಮ್ಮತಮ್ಮ ಜಾತಿಯ ಜನರ ನಡುವೆಯೇ ಇದ್ದು, ವೈವಾಹಿಕ ಸಂಬಂಧ ಬೆಳೆಸುತ್ತಿದ್ದುದರಿಂದ ಆ ಜಾತಿ ಸಮುದಾಯಗಳು ಸೇರಿಯೇ ಒಂದೊಂದು ಬೀದಿ, ಕೇರಿ, ಊರು ನಿರ್ಮಾಣ ಆಗುತ್ತಿತ್ತು. ಒಂದೊಂದು ಜಾತಿಯ ಜನ ಒತ್ತೊತ್ತಾಗಿ ಮನೆಗಳನ್ನು ಕಟ್ಟಿಕೊಂಡು ಇರುವುದನ್ನು ಇಂದೂ ನೋಡಬಹುದು. ಆದರೆ ಒಂದಂತೂ ಸ್ಪಷ್ಟ. ಸಮಾಜದ ಸ್ವರೂಪ ಹೀಗಿದ್ದುದರಿಂದ ಎಲ್ಲ ಸಮುದಾಯಗಳ ಜನರು ಬಂದು ನೆರೆಯುವುದಕ್ಕೆ ಊರ ಜಾತ್ರೆ-ಹಬ್ಬ ಇತ್ಯಾದಿ ಪಬ್ಲಿಕ್ ಸ್ಪೇಸ್ ಗಳು ಇರುತ್ತಿದ್ದರೂ ಜನ ನೆರೆಯುತ್ತಿದ್ದರೇ ಹೊರತು ಬೆರೆಯುತ್ತಿರಲಿಲ್ಲ. ಜನರು ಒಬ್ಬರ ಜೊತೆ ಇನ್ನೊಬ್ಬರು ಬೆರೆಯುವುದಕ್ಕೆ ತೊಡಗಿದಾಗಲೇ ಸಮಸ್ಯೆಗಳು ಆರಂಭವಾಗುವುದಲ್ಲವೇ? ಹಾಗೆ ಬೆರೆಯುವಂಥ ಅವಕಾಶಗಳು ಆಗಿನ ಕಾಲದಲ್ಲಿ ಇರಲಿಲ್ಲ.

ಜಾತಿವ್ಯವಸ್ಥೆ ಮತ್ತು ಈ ಮಡಿ-ಮೈಲಿಗೆಯನ್ನು ಬ್ರಾಹ್ಮಣರೇ ಆರಂಭಿಸಿದರು ಎಂಬ ಹೇಳಿಕೆಯಲ್ಲೂ ಅನೇಕ ಊಹಾಪೋಹಗಳಿವೆ. ಹಾಗೆಯೇ ಈ ಹೇಳಿಕೆಯನ್ನು ವಿರೋಧಿಸಿ ಮಂಡಿಸುತ್ತಿರುವ ವಾದದಲ್ಲೂ ಅನೇಕ ಊಹಾಪೋಹಗಳಿವೆ. ಹಾಗಿದ್ದೂ, ವಾದದ ಸಲುವಾಗಿ ಬ್ರಾಹ್ಮಣರೇ ಜಾತಿವ್ಯವಸ್ಥೆಯನ್ನು ರೂಪಿಸಿದರು ಎಂದೇ ಇಟ್ಟುಕೊಳ್ಳೋಣ. ಇಂದಿನ ದಿನ ಜಿ.ಎಸ್.ಟಿ.ಗೆ ಸಂಬಂಧಿಸಿದ ರೂಪು-ರೇಷೆಯನ್ನೋ ಅಥವಾ ಕೃಷಿಗೆ ಸಂಬಂಧಿಸಿದ ನೀತಿ-ನಿಯಮಾವಳಿಗಳನ್ನೋ ಶಾಸನಸಭೆಗಳಲ್ಲಿ ಚರ್ಚಿಸಿ-ರೂಪಿಸಿ ನಮ್ಮನ್ನು ಆಳುವ ಪ್ರಭುತ್ವ ಕಾಯಿದೆ ಮಾಡಿದರೆ , ಅದನ್ನು ಸಮಾಜದಲ್ಲಿ ಕಟ್ಟು-ನಿಟ್ಟಾಗಿ ಜಾರಿಗೊಳಿಸುವ ಬಹಳ ದೊಡ್ಡ ವ್ಯವಸ್ಥೆಯ ಜಾಲವನ್ನು ನಾವು ಈಗ ಹೊಂದಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆ ಇಂಥದ್ದೊಂದು ಮೇಲು-ಕೀಳಿನ ಜಾತಿ ವ್ಯವಸ್ಥೆಯನ್ನು ಬ್ರಾಹ್ಮಣರೇ ದುರುದ್ದೇಶದಿಂದ ಪರಿಕಲ್ಪಿಸಿದ್ದಾರೆ ಎಂದಿಟ್ಟುಕೊಂಡರೂ -

ಅದನ್ನು ಜಾರಿಗೊಳಿಸಿದ ವ್ಯವಸ್ಥೆ ಯಾವುದಾಗಿತ್ತು?

  • ಅಂಥ ಒಂದು ತಾರತಮ್ಯದ ಮತ್ತು ಹೀನಾಯವಾದ ವ್ಯವಸ್ಥೆಯನ್ನು ಸಶಕ್ತವಾಗಿ ಉಳಿಸಿಕೊಂಡು ಬರಲು ಅವರಿಗೆ ಹೇಗೆ ಸಾಧ್ಯವಾಯಿತು?
  • ಬ್ರಾಹ್ಮಣ ಮೇಲಿರುವ, ಉಳಿದವರು ಕೆಳಗಿರುವ ಜಾತಿ ವ್ಯವಸ್ಥೆಯನ್ನು ಬ್ರಾಹ್ಮಣರೇ ರೂಪಿಸಿದ್ದರೂ ಬ್ರಾಹ್ಮಣ ಜಾತಿ-ಉಪಜಾತಿಗಳೊಳಗೇ ಇರುವ ಮೇಲು-ಕೀಳನ್ನು ಹಾಗೂ ಬ್ರಾಹ್ಮಣೇತರವಾದ ಜಾತಿ-ಉಪಜಾತಿಗಳೊಳಗಿನ ಮಡಿ-ಮೈಲಿಗೆಯನ್ನು, ಉಚ್ಚ-ನೀಚ ತರತಮವನ್ನೂ ಬ್ರಾಹ್ಮಣರೇ ಸೃಷ್ಟಿಸಿ ಜಾರಿಗೊಳಿಸಿದರೇ?

- ಎಂಬ ಪ್ರಶ್ನೆಗಳಂತೂ ಉಳಿದೇ ಉಳಿಯುತ್ತವೆ. ಹೀಗಾಗಿ ಕೊನೆಗೂ ಇವೆಲ್ಲವನ್ನು ಬಗೆಹರಿಯದ ಸಂದೇಹದಿಂದಲೇ ನೋಡಬೇಕು ಹೊರತು ಒಂದು ಸುಸಂಗತ ಸಂರಚನೆಯಾಗಿ ಜಾತಿವ್ಯವಸ್ಥೆಯನ್ನು ನೋಡುವುದು ಮತ್ತು ಅರ್ಥ ಮಾಡಿಕೊಳ್ಳುವುದು ಕಷ್ಟದ ಸಂಗತಿಯೇ ಸರಿ.

ಇವಿಷ್ಟು ಜಾತಿಯ ಕುರಿತು ನಮ್ಮಲ್ಲಿ ನೆಲೆಗೊಂಡಿರುವ ’ಜನಪ್ರಿಯ ನಂಬಿಕೆಗಳ’ ಕುರಿತ ಸಂದೇಹವಾದರೆ, ಜಾತಿಯ ಕುರಿತು ಕನ್ನಡದಲ್ಲಿ ಹೊಸ ವಾಗ್ವಾದವನ್ನು ಆರಂಭಿಸಿದ ನಮ್ಮ ಪರ್ಯಾಯ ಚಿಂತಕರು ಹೇಳುವುದನ್ನು ಪರಿಶೀಲಿಸೋಣ.

’ಮನುಷ್ಯ ಸಮಾಜ ಎಲ್ಲೆಲ್ಲಿ ಇದೆಯೋ ಆ ಎಲ್ಲ ಕಡೆಗಳಲ್ಲೂ ತಾರತಮ್ಯ ಇದ್ದೇ ಇದೆ. ಹಾಗೆಯೇ ನಮ್ಮಲ್ಲೂ ಇದೆ’ ಇದು ಈ ಚಿಂತಕರ ವಾದದ ಆರಂಭಿಕ ಸಾಲು. ಅವರು ಹೀಗೆ ಹೇಳಿದರೆ ಅದರ ಅರ್ಥ ’ಎಲ್ಲ ಕಡೆಯೂ ತಾರತಮ್ಯ ಇರುವಂತೆ ನಮ್ಮಲ್ಲೂ ಇದೆ. ಇರಲಿ ಬಿಡಿ. ಏನಾಯಿತೀಗ?’ ಎಂದೇನೂ ಅಲ್ಲವಲ್ಲ. ತಮ್ಮ ವಾದದ ಮೊದಲ ಹೇಳಿಕೆಯನ್ನು ಅವರು ಉಡಾಫೆಯಿಂದ ಕೊಡುತ್ತಿಲ್ಲ ಅಥವಾ ಅಂಥ ತಾರತಮ್ಯ ಸರಿ ಇದೆ ಎಂದೂ ಹೇಳುತ್ತಿಲ್ಲ. ’ನಮ್ಮಲ್ಲಿ ಜಾತಿಯೂ ಇತ್ತು, ತಾರತಮ್ಯವೂ ಇತ್ತು. ಆದರೆ ಇಂದು ನೀವೆಲ್ಲರೂ ನಮ್ಮ ಮುಂದೆ ತೋರಿಸಿ ನಂಬಿಸಿರುವ ಹಾಗೆ ಪಿರಮಿಡ್ ರೂಪದ ವಿನ್ಯಾಸದಲ್ಲಿ ಈ ಜಾತಿ ಇರಲಿಲ್ಲ. ತಾರತಮ್ಯವೇ ಇಲ್ಲದ ಒಂದು ಇಗಾಲಿಟೇರಿಯನ್ ಸೊಸೈಟಿ (ಸಮಭಾವದ ಸಮಾಜ) ಇದ್ದರೆ ಬಹಳ ಸಂತೋಷ. ಆದರೆ ಭಾರತದ ಸಾಮಾಜಿಕತೆಯನ್ನು ಇದುವರೆಗೆ ಅಧ್ಯಯನ ಮಾಡಿದ ದೇಶೀ ಮತ್ತು ವಿದೇಶೀ ಚಿಂತಕರು ಇಂಥ ಒಂದು ಅಸಮಾನ ಸಮಾಜ ಭಾರತದಲ್ಲಿ ಮಾತ್ರ ಇದ್ದು, ಬೇರೆಲ್ಲೂ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಒಪ್ಪತಕ್ಕ ಮಾತಲ್ಲ. ಅಸಮಾನತೆ ಎನ್ನುವುದು ಬೇರೆಬೇರೆ ಸಮಾಜಗಳಲ್ಲಿ, ಬೇರೆಬೇರೆ ಕಾಲಗಳಲ್ಲಿ, ಬೇರೆಬೇರೆ ಹೆಸರುಗಳಲ್ಲಿ ಜಗತ್ತಿನೆಲ್ಲೆಡೆಯೂ ಇದೆ. ಯುರೋಪ್, ಜಪಾನ್, ಮಧ್ಯಪ್ರಾಚ್ಯ ಹೀಗೆ ಜಗತ್ತಿನ ವಿವಿಧ ಭಾಗಗಳಲ್ಲಿ ಬೇರೆಬೇರೆ ಸ್ವರೂಪದ ವರ್ಣ, ವರ್ಗ, ಪ್ರದೇಶ, ಲಿಂಗ, ಜಾತಿ, ವರದಕ್ಷಿಣೆ ಇತ್ಯಾದಿ ತಾರತಮ್ಯವೂ ಇದೆ ಹಾಗೆಯೇ, ಸಮಸ್ಯೆಗಳೂ ಇವೆ. ಹಾಗಾಗಿ ತಾರತಮ್ಯ ಭಾರತದಲ್ಲಿ ಮಾತ್ರ ಇದೆ ಅಂತ ತುತ್ತೂರಿ ಊದಬೇಡಿ’- ಅಂತ ಅವರು ಹೇಳುತ್ತಿದ್ದಾರೆ.

ಮುಂದುವರಿದು –

’ಭಾರತಕ್ಕೆ ಬ್ರಿಟಿಷರು ಬಂದ ಬಳಿಕ ಅವರು ನಮ್ಮಲ್ಲಿ ಹೊಸಬಗೆಯ ಸಮಾಜವೊಂದನ್ನು ನಿರ್ಮಾಣ ಮಾಡಿದರು. ಆ ಸಮಾಜದ ಒಟ್ಟೂ ಸ್ವರೂಪದಲ್ಲಿ ಹೆಚ್ಚುಹೆಚ್ಚು ಪಬ್ಲಿಕ್ ಸ್ಪೇಸ್ ಗಳು ಇದ್ದವು. ಅಂಥ ಪಬ್ಲಿಕ್ ಸ್ಪೇಸ್ ಗಳೆಂದರೆ ಶಾಲಾ-ಕಾಲೇಜುಗಳು, ಸಾರ್ವಜನಿಕ ಗ್ರಂಥಾಲಯಗಳು, ರೈಲು-ಬಸ್ಸುಗಳು, ಆಸ್ಪತ್ರೆ-ಹೊಟೇಲುಗಳಂತಹ ಜಾಗಗಳು.

ಈ ಹೊಚ್ಚಹೊಸ ಸ್ಥಳಾವಕಾಶಗಳಲ್ಲಿ ಜನಸಮುದಾಯಗಳು ಮೊತ್ತಮೊದಲ ಬಾರಿಗೆ ಬೆರೆಯುವುದಕ್ಕೆ ತೊಡಗಿದವು. ಹೊಸಸಮಾಜದಲ್ಲಿ ನಿರ್ಮಾಣವಾದ ಹೊಸ ಸ್ಪೇಸ್ ನಲ್ಲಿ ಒಬ್ಬರನ್ನು ಇನ್ನೊಬ್ಬರು ಸಮೀಪಿಸುವ ಸನ್ನಿವೇಶ ಉದ್ಭವಿಸಿದಾಗ ಜಾತಿ ಪರಿಹರಿಸಲಾಗದ ಸಮಸ್ಯೆಯಾಗಿ ಎದ್ದು ನಿಂತಿತು’ ಎಂದು ಅವರು ಹೇಳುತ್ತಾರೆ.

ನಮ್ಮ ಪರ್ಯಾಯ ಚಿಂತಕರು ಹೇಳುವ ಈ ವಾದವನ್ನು ಪರಿಶೀಲಿಸುವುದಕ್ಕೆ ನಮಗೆ ಫ್ರೆಂಚ್ ತತ್ತ್ವಚಿಂತಕ ಮಿಶೆಲ್ ಫುಕೋನ ಚಿಂತನೆಯ ನೆರವು ಬೇಕು. ಫುಕೋ ಏನು ಹೇಳ್ತಾನೆ ಅಂದರೆ; ’ನಾವು ಏನನ್ನು ಜ್ಞಾನ ಅಂತ ಕರೆಯುತ್ತೇವೋ ಅದು ನಿರ್ದಿಷ್ಟವಾಗಿ ಒಂದು ವಿಷಯ/ವಿದ್ಯಮಾನದ ಬಗ್ಗೆ ನಾವು ಯೋಚಿಸುವ/ಬರೆಯುವ ಮತ್ತು ಮಾತಾಡುವ ಒಂದು ಬಗೆಯ ಕ್ರಮ. ಕೆಲವೊಂದು ಸಂಗತಿಗಳ ಬಗ್ಗೆ ಚಾರಿತ್ರಿಕವಾಗಿ ಮಹತ್ವದ ಕಾಲದಲ್ಲಿ ನಾವು ಮಾತಾಡುವುದಕ್ಕೆ, ಚರ್ಚೆ ಮಾಡುವುದಕ್ಕೆ ತೊಡಗುತ್ತೇವೆ. ಹಾಗೆ ಚರ್ಚೆ ಮಾಡಿದಾಗಲೇ ಆ ಸಂಗತಿ/ವಿದ್ಯಮಾನಗಳ ಕುರಿತ ಒಂದು ಬಗೆಯ ಜ್ಞಾನ ನಿರ್ಮಾಣವಾಗುತ್ತದೆ’.

ಉದಾಹರಣೆಗೆ ತನ್ನ ಮನೆಯ ಹಿತ್ತಲಲ್ಲಿ ಸೇಬು ಹಣ್ಣು ಮರದಿಂದ ತೊಟ್ಟು ಕಳಚಿ ಭೂಮಿಗೆ ಬೀಳುವುದನ್ನು ನೋಡಿದ ನ್ಯೂಟನ್ ಈ ಚಲನೆಯ ಬಗ್ಗೆ ಧೇನಿಸಿ ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎಂದು ಹೇಳುತ್ತಾನೆ. ಹೀಗೆ ಗುರುತ್ವಾಕರ್ಷಣ ಎಂಬ ಹೊಸ ಪರಿಕಲ್ಪನೆ ಮತ್ತು ಹೊಸ ತಿಳಿವಳಿಕೆ ನಮ್ಮ ಜ್ಞಾನವಲಯದಲ್ಲಿ ಮೊತ್ತಮೊದಲ ಬಾರಿಗೆ ಬಂತು. ಆ ಬಳಿಕ ಇತರೆ ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು ಅದರ ಬಗ್ಗೆ ಮಾತಾಡಲು, ಯೋಚಿಸಲು ತೊಡಗಿದರು. ಇದರ ಬಳಿಕವೇ ನ್ಯೂಟನ್ ನ ಬಹುಪ್ರಸಿದ್ಧ “ನ್ಯೂಟನ್ಸ್ ಲಾ ಆಫ್ ಗ್ರಾವಿಟೇಶನ್” ಚಾಲ್ತಿಗೆ ಬಂತು. ಹಾಗಾದರೆ ನ್ಯೂಟನ್ ಹೇಳುವುದಕ್ಕಿಂತ ಮೊದಲು ಭೂಮಿಯಲ್ಲಿ ಗುರುತ್ವಾಕರ್ಷಣ ಶಕ್ತಿ ಇರಲಿಲ್ಲವೇ? ಖಂಡಿತವಾಗಿಯೂ ಇತ್ತು. ಆದರೆ ಅದರ ಬಗ್ಗೆ ಜನರು ಮಾತಾಡುತ್ತಿರಲಿಲ್ಲ, ಯೋಚಿಸುತ್ತಿರಲಿಲ್ಲ. ಒಂದು ಸಲ ಮಾತಾಡುವುದಕ್ಕೆ ತೊಡಗಿದ ಬಳಿಕ ಗುರುತ್ವಾಕರ್ಷಣೆಯ ಕುರಿತ ಜ್ಞಾನ ಬೆಳೆಯಿತು.

ಹಾಗೆಯೇ, ನೆಪೋಲಿಯನ್ ಬೊನಪಾರ್ಟೆ ಬಂದ ಬಳಿಕ ನಾವು ಪ್ರಜಾಸತ್ತೆಯ ಬಗ್ಗೆ ಮತ್ತೆ ಹೊಸದಾಗಿ ಚಿಂತನೆ ಮಾಡುವುದಕ್ಕೆ ಶುರು ಮಾಡಿದಿವಿ. ಪ್ರಜಾಸತ್ತೆಯ ಬಗ್ಗೆ ಹೊಸಬಗೆಯ ಜ್ಞಾನ ರೂಪುಗೊಂಡಿದ್ದೇ ನೆಪೋಲಿಯನ್ ಬಂದ ಬಳಿಕ. ಅದೇ ತರ್ಕದ ಆಧಾರದಲ್ಲಿ ಹೇಳುವುದಾದರೆ, ನಮ್ಮಲ್ಲಿ ಜಾತಿಯೂ ಇತ್ತು, ಜಾತಿಗೆ ಸಂಬಂಧಿಸಿದ ಕಟ್ಟು-ಕಟ್ಟಳೆಯೂ ಇತ್ತು, ಹಾಗೆಯೇ ಅಸಮಾನತೆಯೂ ಇತ್ತು. ಆದರೆ ಅದರ ಬಗ್ಗೆ ಜನರು ಸಾರ್ವಜನಿಕವಾಗಿ ಅಷ್ಟೊಂದು ತೀವ್ರವಾಗಿ ಮಾತಾಡುತ್ತಿರಲಿಲ್ಲ. ಬ್ರಿಟಿಷರು ಬಂದ ಬಳಿಕ ನಾವು ಆ ಕುರಿತು ಮಾತಾಡುವುದಕ್ಕೆ ಶುರು ಮಾಡಿದೆವು, ಚಿಂತನೆಗೆ ತೊಡಗಿದೆವು. ನಾವು ನಮ್ಮಷ್ಟಕ್ಕೆ ಯೋಚನೆ ಮಾಡುವುದರಿಂದ, ಯೋಚನೆ ಮಾಡಿದ್ದನ್ನು ಇನ್ನೊಬ್ಬರ ಬಳಿ ಮಾತಾಡುವುದರಿಂದ, ಸಮಾನ ಮನಸ್ಕರೊಂದಿಗೆ, ಭಿನ್ನ ಬಗೆಯ ಆಲೋಚನೆ ಮಾಡುವವರೊಂದಿಗೆ ಸಂವಾದ-ವಾಗ್ವಾದ ಮಾಡುವುದರಿಂದ ಮತ್ತು ಅಂಥ ಬೌದ್ಧಿಕ ಕೆಲಸಕ್ಕಾಗಿ ಇನ್ನಷ್ಟು ಚಿಂತನೆ ನಡೆಸುವುದರಿಂದ ಜ್ಞಾನ ಆರಂಭವಾಗುತ್ತದೆ. ಜೊತೆಗೆ ತಾಕಲಾಟವೂ ಆರಂಭವಾಗುತ್ತದೆ. ಜ್ಞಾನದಿಂದ ತಾಕಲಾಟ ಮತ್ತು ತಾಕಲಾಟದಿಂದ ಜ್ಞಾನ.

ಯೋಚನೆ ಮಾಡುವ, ಮಾತಾಡುವ, ಬರೆಯುವ, ಸಂವಾದ-ವಾಗ್ವಾದ ಮಾಡುವ ಈ ಎಲ್ಲ ಚಟುವಟಿಕೆಗಳನ್ನು ನಾವು ಭಾಷೆಯ ಮೂಲಕ ಮಾತ್ರ ಮಾಡುವುದಕ್ಕೆ ಸಾಧ್ಯ. ಭಾಷೆಯ ಮುಖೇನ ಮಾಡುವ ಈ ಎಲ್ಲ ಬಗೆಯ ಪ್ರಕ್ರಿಯೆಗಳನ್ನು ಒಟ್ಟಾಗಿ ನಾವು ’ವಾಙ್ಮಯ’ (ಡಿಸ್ಕೋರ್ಸ್) ಎಂದು ಕರೆಯುತ್ತೇವೆ. (ಡಿಸ್ಕೋರ್ಸ್ ಗೆ ಸಾಮಾನ್ಯವಾಗಿ ಕನ್ನಡದಲ್ಲಿ ’ಸಂಕಥನ’ ಎಂದು ಕರೆಯುತ್ತಾರೆ. ಆದರೆ ಆ ಪದ ಅಷ್ಟೊಂದು ಸಮುಚಿತವಾದ ಪರ್ಯಾಯ ಪದವಲ್ಲ. ವಾಙ್ಮಯ ಎಂಬುದೇ ಅತ್ಯಂತ ಸಮರ್ಥವಾದ ಸಮರೂಪದ ಪದ.) ವಾಕ್+ಮಯ ಎಂಬ ಈ ಪರಿಕಲ್ಪನೆಯಲ್ಲಿ ವಾಕ್ ಅಂದರೆ ಮಾತೂ ಹೌದು, ಯೋಚನೆಯೂ ಹೌದು. ಮಾತ್ರವಲ್ಲ ಬರವಣಿಗೆಯೂ ಹೌದು. ಮಯ ಅಂದರೆ ಇವೆಲ್ಲವನ್ನೂ ತನ್ನ ಸಮಗ್ರತೆಯಲ್ಲಿ ಒಳಗೊಂಡಿರುವುದು. ಈ ವಾಙ್ಮಯ ಕಾಲದಿಂದ ಕಾಲಕ್ಕೆ ಹುಟ್ಟಿಕೊಳ್ಳುತ್ತದೆ.

ಒಂದೊಂದು ಕಾಲದಲ್ಲಿ ಒಂದೊಂದು ಬಗೆಯ ವಾಙ್ಮಯ ಕಾಣಿಸಿಕೊಳ್ಳುತ್ತದೆ. ಆಮ್ಲಜನಕ ಮೊದಲಿನಿಂದಲೂ ಇತ್ತು. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಅದರ ಬಗ್ಗೆ ನಾವು ಮಾತಾಡುವುದಕ್ಕೆ ತೊಡಗಿದೆವು. ಹಾಗೆಯೇ ಗುರುತ್ವಾಕರ್ಷಣ ಶಕ್ತಿಯೂ ಭೂಮಿಯಲ್ಲಿ ಮಾತ್ರವಲ್ಲ ಗ್ರಹ-ತಾರೆ-ನೀಹಾರಿಕೆಗಳು ಮೊದಲ್ಗೊಳ್ಳುವುದಕ್ಕಿಂತ ಬಹುಹಿಂದಿನಿಂದಲೂ ಇತ್ತು. ಕೆಲಕಾಲದ ಹಿಂದೆಯಷ್ಟೇ ನಾವು ಅದರ ಬಗ್ಗೆ ಮಾತಾಡುವುದಕ್ಕೆ ತೊಡಗಿದೆವು. ಹಾಗೆಯೇ ಜಾತಿ ನಮ್ಮಲ್ಲಿ ಶತ-ಶತಮಾನಗಳ ಹಿಂದಿನಿಂದ ಇದ್ದಿದ್ದರೂ ನಾವು ಅದರ ಬಗ್ಗೆ ಮಾತಾಡುವುದಕ್ಕೆ, ಬರೆಯುವುದಕ್ಕೆ, ದಾಖಲೀಕರಣ ಮಾಡುವುದಕ್ಕೆ, ಜನಗಣತಿ- ಜಾತಿಗಣತಿಯಲ್ಲಿ ಅದನ್ನು ಘನೀಕರಿಸುವುದಕ್ಕೆ ತೊಡಗಿದ್ದು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ. ಆ ಕಾಲ ನಿಸ್ಸಂಶಯವಾಗಿಯೂ ವಸಾಹತುಶಾಹೀ ಕಾಲಘಟ್ಟ.

ಈಗ ಮತ್ತೆ ನಮ್ಮ ಪರ್ಯಾಯ ಚಿಂತಕರ ಬಳಿ ಬಂದು ಅವರ ವಾದವನ್ನು ಪೂರ್ತಿ ಕೇಳೋಣ:

’ಜಾತಿಯ ಕುರಿತು ಈಗ ನಮ್ಮ ನಡುವೆ ಇರುವ ಈ ವಾಙ್ಮಯವನ್ನು ಕಳೆದ ನೂರ ಐವತ್ತು ವರ್ಷಗಳಿಂದ ಈಚೆಗೆ ಕಟ್ಟಲಾಗಿದೆ. ಜಾತಿಗಳ ನಡುವೆ ಇರುವ ವ್ಯತ್ಯಾಸಗಳನ್ನು ಗಮನಿಸಿದ ಬ್ರಿಟಿಷರು ಅಂಥ ವ್ಯತ್ಯಾಸಗಳನ್ನು ಇನ್ನಷ್ಟು ಅಗಲಗೊಳಿಸುವುದಕ್ಕಾಗಿಯೇ ಅದಕ್ಕೊಂದು ಸಾಂಸ್ಥಿಕ ರೂಪ ಕೊಟ್ಟರು. ಯಾವ ರೀತಿಯ ಸಾಂಸ್ಥಿಕ ರೂಪವೆಂದರೆ ಜಾತಿ ಒಂದು ಅನಿಷ್ಟ, ಜಾತಿ ಒಂದು ಪಿರಮಿಡ್ ನ ರಚನೆಯಂತಿದೆ. ಈ ವ್ಯವಸ್ಥೆಯಲ್ಲಿ ಮೇಲಿರುವವನು ಯಾವತ್ತೂ ಷಡ್ಯಂತ್ರ ರೂಪಿಸುತ್ತ ಕೆಳಗಿರುವವರನ್ನು ಕೆಳಗೇ ಇರಿಸುವಂತೆ ಸಂಚು ರೂಪಿಸುತ್ತಿದ್ದಾನೆ. ಜಾತಿ ವ್ಯವಸ್ಥೆಯ ವಿರುದ್ಧ ಆಗಿಂದಾಗ್ಗೆ ಪ್ರತಿಭಟನೆಗಳು ಬಂದಿವೆ. ಇದರ ವಿರುದ್ಧ ನಿಂತ ಬುದ್ಧ, ಬಸವ ಮೊದಲಾದವರನ್ನೇ ಇದು ನುಂಗಿ ನೀರು ಕುಡಿದಿದೆ. ಇಂಥ ಒಂದು ವಾಙ್ಮಯವನ್ನು ನಮ್ಮಲ್ಲಿ ಸೃಷ್ಟಿ ಮಾಡಲಾಗಿದೆ. ಮಾತಾಡುವ, ಚಿಂತನೆಯ, ಬರವಣಿಗೆಯ ಕ್ರಮವನ್ನು ರೂಪಿಸಲಾಗಿದೆ. ಇದಕ್ಕೊಂದು ಜೆನೆಸಿಸ್ ಇದೆ. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಇದು ಹುಟ್ಟಿದೆ’.

ಪರ್ಯಾಯ ಚಿಂತಕರು ಹೇಳುವ ಎರಡನೆಯ ಅಂಶ ಇದು:

ಜಾತಿಯನ್ನು ನೀವು ಒಂದು ಶ್ರೇಣೀಕೃತ ವ್ಯವಸ್ಥೆಯಾಗಿ ನೋಡುತ್ತಿದ್ದೀರಿ. ಆದರೆ ಅದು ಹಾಗಿಲ್ಲ. ಜಾತಿ ಅಂದರೆ ಏನು? ಜಾತಿ ಅಂದರೆ ಬಹಳ ಸರಳವಾಗಿ ಸಮುದಾಯಗಳ ನಡುವಣ ವ್ಯತ್ಯಾಸ ಅಷ್ಟೇ. ನಮ್ಮ-ನಿಮ್ಮ ನಡುವೆ ಅಡುಗೆ ಮಾಡುವಲ್ಲಿ, ಬರವಣಿಗೆ ಮಾಡುವಲ್ಲಿ, ಬಟ್ಟೆ-ಬರೆ ತೊಡುವಲ್ಲಿ ಇರುವ ವ್ಯತ್ಯಾಸಗಳ ಹಾಗೆಯೇ ಜಾತಿಗಳೂ ಕೂಡ. ಕಾಸ್ಟ್ ಈಸ್ ದ ಮ್ಯಾಟರ್ ಆಫ್ ಡಿಫರೆನ್ಸ್. ನೀವು ಜಾತಿಗಳ ನಡುವಣದ ಈ ಅಂತರವನ್ನು ಅಥವಾ ವ್ಯತ್ಯಾಸವನ್ನು ಒಂದು ವ್ಯವಸ್ಥೆಯನ್ನಾಗಿ ಕಟ್ಟಿಕೊಳ್ಳುತ್ತಿದ್ದೀರಿ. ಈ ವ್ಯವಸ್ಥೆಯನ್ನು ರೂಪಿಸಿದವರು ಯಾರು? ಅವರು ನಿಸ್ಶಂಶಯವಾಗಿ ಬ್ರಿಟಿಷ್ ಆಡಳಿತಗಾರರು, ಬ್ರಿಟಿಷ್ ಬುದ್ಧಿಜೀವಿಗಳು ಮತ್ತು ಕ್ರಿಶ್ಚಿಯನ್ ಮಿಷನರಿಗಳು. ಕ್ರೈಸ್ತ ಮಿಷನರಿಗಳಿಗೆ ಇಲ್ಲಿಯ ಭಾರತೀಯರನ್ನು ಕ್ರಿಶ್ಚಿಯನ್ನರನ್ನಾಗಿ ಮತಾಂತರಿಸಬೇಕಿದ್ದರೆ ಇಲ್ಲಿಯ ಜನರಿಗೆ ಅವರ ಬಗ್ಗೆ ಅವರಿಗೇ ಹೇವರಿಕೆ ಹುಟ್ಟುವಂಥ ಸಂಗತಿಯನ್ನು ಹೇಳಬೇಕಾಗಿತ್ತು. ಅದಕ್ಕಾಗಿ, ಅವರು ಜಾತೀಯ ವ್ಯತ್ಯಾಸಗಳನ್ನು ಮುನ್ನೆಲೆಗೆ ತಂದರು. ಇಲ್ಲಿಯ ಕುರಿತು ಕಥೆಗಳನ್ನು ಕಟ್ಟಿದರು. ಈ ದೇಶದ ಜನರಾದ ನೀವು ಪಾಲಿಸುತ್ತಿರುವ ಧರ್ಮ ನಿಜವಾದ ಧರ್ಮ ಅಲ್ಲ. ಅದು ನಮ್ಮ ಧರ್ಮದಷ್ಟು ನಿರ್ಮಲವಾಗಿ ಇಲ್ಲ. ನಮ್ಮ ದೇವರ ಮುಂದೆ ಎಲ್ಲರೂ ಸಮಾನರು. ಆದರೆ ನಿಮ್ಮ ಧರ್ಮದಲ್ಲಿ ಎಷ್ಟೊಂದು ಅಸಮಾನತೆ ಇದೆ. ಆ ಅಸಮಾನತೆ ನಿಂತಿರುವುದೇ ಜಾತಿ ವ್ಯವಸ್ಥೆಯ ಮೇಲೆ. ನಮ್ಮದು ಸದ್ಧರ್ಮ. ಆ ಸದ್ಧರ್ಮದ ಮೌಲ್ಯಗಳು ನಮ್ಮ ಆರಾಧ್ಯಗ್ರಂಥದಲ್ಲಿ ಇದೆ. ಆ ಪವಿತ್ರ ಗ್ರಂಥವೇ ಬೈಬಲ್. ತಮ್ಮ ಬೈಬಲ್ ಅನ್ನು ಅವರು ಭಾರತದಲ್ಲಿ ಸತ್ಯವೇದ ಎಂದು ಕರೆದರು. ಅವರದ್ದು ಸತ್ಯವೇದವಾದರೆ ನಿಮ್ಮ ಪವಿತ್ರಗ್ರಂಥಗಳನ್ನು ಸುಳ್ಳುವೇದ ಅಂತ ಪ್ರತ್ಯೇಕವಾಗಿ ಹೇಳಬೇಕೇ?

ಅವರು ನಮ್ಮ ಧರ್ಮ ಯಾವುದು ಎಂಬ ಪ್ರಶ್ನೆ ಕೇಳಿದರು ಮತ್ತು ಈ ಪ್ರಶ್ನೆಯನ್ನು ಅವರು ಅವರ ಸಾಂಸ್ಕೃತಿಕ ಚೌಕಟ್ಟಿನಲ್ಲಿ ನೋಡುವುದಕ್ಕೆ ತೊಡಗಿದರು. ಆ ಪ್ರಕಾರ ಅವರ ಧರ್ಮ ಕ್ರಿಶ್ಚಿಯನ್ ಆಗಿರುವುದರಿಂದ ನಮ್ಮನ್ನು ಹಿಂದೂ ಅಂತ ಅವರೇ ನಿರ್ಣಯಿಸಿಬಿಟ್ಟರು. ಅವರ ಭಾಷೆ ಲ್ಯಾಟಿನ್ ಆಗಿದ್ದುದರಿಂದ ನಮ್ಮದನ್ನು ಸಂಸ್ಕೃತ ಎಂದೂ ಅವರೇ ನಿರ್ಧಾರ ಮಾಡಿದರು. ಅವರು ಹಿಂದೂ ಧರ್ಮವನ್ನು ನಮಗೆ ಕಟ್ಟಿಕೊಟ್ಟದ್ದು ಅವರ ಕ್ರಿಶ್ಚಿಯನ್ ಧರ್ಮವನ್ನು ಮಾದರಿ (ಮಾಡೆಲ್) ಆಗಿ ಇಟ್ಟುಕೊಂಡು. ತಮ್ಮ ಧರ್ಮದ ಪ್ರತಿಬಿಂಬವನ್ನೇ ಅವರು ಭಾರತದ ಸಂದರ್ಭದಲ್ಲೂ ಕಂಡರು. ಹತ್ತು-ಹಲವು ಸಂಪ್ರದಾಯಗಳಾಗಿದ್ದ ಇಲ್ಲಿಯ ಜೀವನಕ್ರಮವನ್ನು ಅವರು ಹಿಂದೂ ಧರ್ಮ ಎಂದು ಅನುವಾದಿಸಿಕೊಂಡರು. ತಮ್ಮ ಧರ್ಮದ ಲಕ್ಷಣಗಳು ವ್ಯಕ್ತರೂಪದಲ್ಲಿ ಕಾಣುವಂತೆ ಇಲ್ಲೂ ಆ ರೀತಿಯ ಲಕ್ಷಣಗಳು ಕಾಣಿಸುತ್ತಿವೆಯೇ ಎಂದು ಹುಡುಕ ಹೊರಟ ಅವರು, ಕ್ರಿಶ್ಚಿಯನ್ನರ ಧರ್ಮಗ್ರಂಥದ ಹಿನ್ನೆಲೆಯಲ್ಲಿ ಹಿಂದೂಧರ್ಮದ ಬೈಬಲ್ ಯಾವುದು ಎಂದು ಕೇಳಿದರು. ಆಗ ಅವರಿಗೆ ಭಗವದ್ಗೀತೆ ಸಿಕ್ಕಿತು. ಅವರು ಅವರ ಪೂಜಾಪದ್ಧತಿಯಲ್ಲಿ ಲ್ಯಾಟಿನ್ ಭಾಷೆಯನ್ನು ಬಳಸುತ್ತಿದ್ದುದರಿಂದ ಇಲ್ಲಿ ಸಂಸ್ಕೃತವನ್ನು ಬಳಸಲಾಗುತ್ತಿದೆ ಎಂದು ಅವರು ಕಂಡುಕೊಂಡರು. ಅವರಲ್ಲಿ ಪೂಜಾಪದ್ಧತಿಯನ್ನು ನಿರ್ವಹಿಸುವ ಪುರೋಹಿತರು ಪಾದ್ರಿಗಳಾದರೆ ನಮ್ಮಲ್ಲಿರುವ ಪುರೋಹಿತರು ಬ್ರಾಹ್ಮಣರು ಎಂದೂ ಅವರು ಭಾವಿಸಿಕೊಂಡರು. ಹಿಂದೂ ಧರ್ಮವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೊರಟ ಈ ’ಯುರೋಪಿಯನ್ ತ್ರಿ-ಮತಸ್ಥರು’ (ಬ್ರಿಟಿಷ್ ಆಡಳಿತಗಾರರು, ಬ್ರಿಟಿಷ್ ಬುದ್ಧಿಜೀವಿಗಳು ಮತ್ತು ಕ್ರಿಶ್ಚಿಯನ್ ಮಿಷನರಿಗಳು) ಜನರನ್ನು ಅರ್ಥ ಮಾಡಿಕೊಳ್ಳುವುದರಿಂದ ಭಾರತವನ್ನು ಆಳುವುದು ಸುಲಭವೆಂದು ಭಾವಿಸಿ ನಮ್ಮ ಜನಜೀವನವನ್ನು ಅರ್ಥ ಮಾಡಿಕೊಂಡದ್ದು ಮಾತ್ರ ಅವರ ಕ್ರಿಶ್ಚಿಯನ್ ಧರ್ಮದ ಚೌಕಟ್ಟಿನಲ್ಲೇ.

ಹೀಗೆ ’ನೋಡುವ’ ಪ್ರಕ್ರಿಯೆಯಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹಿಂದೂ ಧರ್ಮವನ್ನು ಅವನತಿ ಹೊಂದಿದ ಧರ್ಮವಾಗಿ ಕಂಡರು. ಅವರು ಹಿಂದೂಧರ್ಮದ ಕುರಿತು ಕಟ್ಟಿದ ಈ ನಿರೂಪಣೆ ಎಷ್ಟು ಪರಿಣಾಮಕಾರಿಯಾದ ನಿರೂಪಣೆಯಾಗಿತ್ತೆಂದರೆ ಇದರಿಂದ ಪ್ರಚೋದಿತಗೊಂಡ 19ನೇ ಶತಮಾನದ ಸಾಮಾಜಿಕ ಸುಧಾರಕರು ಹಿಂದೂ ಧರ್ಮವನ್ನು ಪುನರುದ್ಧಾರ ಮಾಡುವ, ಜೀರ್ಣೋದ್ಧಾರ ಮಾಡುವ ಕೆಲಸಕ್ಕೆ ತೊಡಗಿದರು. ಈ ಸಮಾಜ ಸುಧಾರಕರು ಹಿಂದೂ ಧರ್ಮ ಅದಾಗಲೇ ಜರಾಜೀರ್ಣವಾಗಿ ಹೋಗಿತ್ತು ಎಂದು ಬ್ರಿಟಿಷರು ಹೇಳಿದ್ದ ಕಥೆಯನ್ನು ನಂಬಿಯೇ ಬಿಟ್ಟಿದ್ದರು. ಹಾಗಾಗಿ ಸಮಾಜ ಸುಧಾರಣೆ ಬೇಕೇಬೇಕು ಎಂದು ಆಗ್ರಹಿಸುವುದಕ್ಕೆ ತೊಡಗಿದರು. ಇದರ ನಂತರದ ಹಂತದಲ್ಲಿ ಬ್ರಹ್ಮ ಸಮಾಜ ಮತ್ತು ಆರ್ಯ ಸಮಾಜಗಳು ಪರ್ಯಾಯ ಚರ್ಚ್ ನಂತೆಯೇ ಕಾರ್ಯಾಚರಣೆಗಿಳಿಯುವುದನ್ನು ನಾವು ನೋಡಬಹುದು.

ಇದನ್ನು ಪ್ರಸ್ತಾವಿಸುವ ನಮ್ಮ ಪರ್ಯಾಯ ಚಿಂತಕರು ಒಂದು ಕಾಲಕ್ಕೆ ಒಳ್ಳೆಯ ಧರ್ಮವಾಗಿದ್ದ ಈ ಹಿಂದೂ ಧರ್ಮ ಈಗ ಅವನತಿ ಹೊಂದುವುದಕ್ಕೆ ಇಲ್ಲಿಯ ಜಾತಿ ವ್ಯವಸ್ಥೆಯೇ ಕಾರಣ ಎಂದವರು ಬ್ರಿಟಿಷರು. ಇಂಥ ಒಂದು ಕಥೆಯನ್ನು ಅವರು ಕಟ್ಟಿದರು. ನೀವು ಅದನ್ನು ನಂಬಿದ್ದೀರಿ. ಹಾಗಾಗಿ ನಿಜವಾದ ಅರ್ಥದಲ್ಲಿ ನೀವು ಹಿಂದೂಗಳಲ್ಲ, ಹಿಂದೂ-ಕ್ರಿಶ್ಚಿಯನ್ನರು. ನಿಮ್ಮನ್ನು ನೀವು ಹಿಂದೂ ಎಂದು ಭಾವಿಸಿಕೊಂಡು ಆರತಿ ಎತ್ತುತ್ತೀರಿ, ಜಾಗಟೆ ಬಾರಿಸ್ತೀರಿ, ಸತ್ಯನಾರಾಯಣ ಪೂಜೆ ಮಾಡಿಸ್ತೀರಿ, ಹೋಮ-ಹವನ ಮಾಡಿಸ್ತೀರಿ. ಆದರೆ ನಿಮ್ಮ ಮನೋಧರ್ಮ ಮಾತ್ರ ಕ್ರಿಶ್ಚಿಯನ್ರದ್ದೇ ಆಗಿದೆ, ಆಚರಣೆ ಮಾತ್ರ ಹಿಂದೂಗಳದ್ದು. ನಿಮ್ಮ ಯೋಚನೆಯೂ ಕ್ರಿಶ್ಚಿಯನ್ನರದ್ದೇ ಆಗಿದೆ. ಹಾಗಾಗಿ ನಿಮ್ಮನ್ನು ಹಿಂದೂ-ಕ್ರಿಶ್ಚಿಯನ್ನರು ಎಂದು ಸಂಬೋಧಿಸುವುದೇ ಸೂಕ್ತ.

ಇಂಥ ಒಂದು ಚರಿತ್ರೆ ನಿಮಗೆ ಗೊತ್ತಿಲ್ಲದೆ ಬ್ರಿಟಿಷರು ಹೇಳಿದ್ದನ್ನೇ ನೀವು ‘ಉರು’ ಹೊಡೆಯುತ್ತಿದ್ದೀರಿ. ಈ ಭೂಪ್ರದೇಶವನ್ನು ಆಳಬೇಕಿದ್ದರೆ ಆಳಿಸಿಕೊಳ್ಳುವ ಜನ ಒಂದು ಬಗೆಯ ಕೀಳರಿಮೆಯಿಂದ ನರಳಬೇಕು. ಅವರಿಗೆ ಕೀಳರಿಮೆ ಬಂದರೆ ಮಾತ್ರ ಆಳುವವರ ಕಾರ್ಯಾಚರಣೆ ಸಲೀಸಾಗಿ ನಡೆಯುವುದು. ಅಂತಹ ಕೀಳರಿಮೆಯನ್ನು ಇಲ್ಲಿ ಉತ್ಪಾದಿಸುವುದಕ್ಕೆ ಹೊರಟ ಬ್ರಿಟಿಷ್ ಸಾಮ್ರಾಜ್ಯಶಾಹಿ ನಮ್ಮಲ್ಲಿ ಏನೂ ಸರಿಯಿಲ್ಲ. ನಾವು ನಾಗರಿಕರೇ ಅಲ್ಲ. ಅಸಲಿಗೆ ನಾವು ಮನುಷ್ಯರೂ ಅಲ್ಲ ಎಂಬಂತೆ ಕಥನಗಳನ್ನು ಕಟ್ಟಿತು. ನಾವು ನಿಮಗಿಂತ ಶ್ರೇಷ್ಟರು, ನಮ್ಮ ಸಮಾಜ ಒಳ್ಳೆಯದು, ನಿಮ್ಮ ಸಾಮಾಜಿಕ ವ್ಯವಸ್ಥೆ ಚೆನ್ನಾಗಿಲ್ಲ, ಅದನ್ನು ನೇರ್ಪುಗೊಳಿಸುವುದಕ್ಕಾಗಿ ನಾವು ಬಂದಿದ್ದೇವೆ. ನಾವು ಸ್ಥಾಪಿಸುವ ಸಾರ್ವಜನಿಕ ಸಂಘ-ಸಂಸ್ಥೆಗಳಿಂದ ನಿಮ್ಮಲ್ಲಿನ ವಿಷಮತೆ ಮಾಯವಾಗಲಿದೆ ಎಂದರು. ಬ್ರಿಟಿಷರು ಕಟ್ಟಿದ ಹೊಸ ಆಧುನಿಕ ಸಮಾಜದಲ್ಲಿ ಈ ‘ಸೋಶಿಯಲ್ ಮೊಬಿಲಿಟಿ’ ಹೆಚ್ಚಾಗುವುದಕ್ಕೆ ತೊಡಗಿತು. ಜನ ಸಂಪರ್ಕ ಹೆಚ್ಚಿದಂತೆ ಜನಸಮುದಾಯಗಳ ನಡುವಣ ಸರಸ-ವಿರಸ ಪ್ರಕರಣಗಳ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಿತು. ನಾವು ಆ ಸಂಘ-ಸಂಸ್ಥೆಗಳಲ್ಲಿ ಪಾಲ್ಗೊಳ್ಳಲು ತೊಡಗಿದ ಮೇಲೆ ಜಾತಿಗೆ ಹೊಸ ಅರ್ಥ ಬರುವುದಕ್ಕೆ ತೊಡಗಿತು.

ಇವಿಷ್ಟು ನಮ್ಮ ಪರ್ಯಾಯ ಚಿಂತಕರ ವಾದ. ಇದು ಹೌದೇ? ಇದನ್ನು ಒಪ್ಪಬಹುದೇ? ಬ್ರಿಟಿಷರೇ ಈ ಎಲ್ಲ ಕಿತಾಪತಿ ಮಾಡಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ನಿಜವಾದದ್ದು ಏನು? ಉತ್ತರ ನನಗೂ ಗೊತ್ತಿಲ್ಲ. ಇರುವುದು ಪ್ರಶ್ನೆಗಳಷ್ಟೇ.

ಮುಂದಿನ ಭಾಗದಲ್ಲಿ ನೋಡೋಣ

ಈ ಅಂಕಣದ ಹಿಂದಿನ ಬರಹಗಳು

ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 1

‘ಸ್ವತಂತ್ರ ಭಾರತ’ ಎಂಬ ಇತ್ಯರ್ಥವಾಗದ ವಿದ್ಯಮಾನ

ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್ ಕಾದಂಬರಿಯೊಂದರ ಮೊದಲ ಪುಟಗಳು

ಅನೇಕಲವ್ಯ – 3

ಅನೇಕಲವ್ಯ-2

ಅನೇಕಲವ್ಯ-1

‘ಇಂದಿರಾಬಾಯಿ’ ಯ ರಾಜಕೀಯ ಓದು

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...