ಜಗದ ಜ್ವರಕ್ಕೆ ಎದೆಹಾಲ ಔಷಧ:  ‘ಸಮಗಾರ ಭೀಮವ್ವ’

Date: 03-07-2022

Location: ಬೆಂಗಳೂರು


“ಇಂದಿನ ಮೂಲಭೂತವಾದ, ಜನಾಂಗದ್ವೇಷ, ಯುದ್ಧದಾಹಗಳು ನಮ್ಮನ್ನು ತಾಯ್ತನದ ಸೈರಣೆ, ಮಮತೆ, ಒಳಗೊಳ್ಳುವಿಕೆಯಿಂದ ವಿಮುಖಗೊಳ್ಳುವಂತೆ ಮಾಡಿವೆ. ವ್ಯಾಪಾರೀಕರಣದಿಂದ ಉಂಟಾದ ಸಾಂಸ್ಕೃತಿಕ ಮಾಲಿನ್ಯ, ನ್ಶೆತಿಕ ಪತನಗಳು ಕ್ರೌರ್ಯದ ನಾನಾ ಆಕಾರ ತಾಳಿ ದಿಗಿಲು ಹುಟ್ಟಿಸುತ್ತಿವೆ” ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿಎಚ್ ಎಸ್ ಶಿವಪ್ರಕಾಶ್ ಅವರ ’ಸಮಗಾರ ಭೀಮವ್ವ’ ಕವಿತೆಯ ಬಗ್ಗೆ ಚರ್ಚಿಸುತ್ತ, ದಾಹ, ಉದ್ವಿಗ್ನತೆಯಿಂದ ಬೇಯುತ್ತಿರುವ ಜಗತ್ತಿಗೆ ಅಗತ್ಯವಾದ ಶುದ್ಧ ಅನುಭಾವದ ನೆಲೆಗಳನ್ನು ವಿಶ್ಲೇಷಿಸಿದ್ದಾರೆ.

ಎಚ್ ಎಸ್ ಶಿವಪ್ರಕಾಶರ ಕವಿತೆ ‘ಸಮಗಾರ ಭೀಮವ್ವ’ ದಲಿತ ಹೆಣ್ಣೊಬ್ಬಳ ಅಂತಃಸತ್ವವನ್ನು ಆಧ್ಯಾತ್ಮಿಕ ಅನುಭವಕ್ಕಿಂತ ಎತ್ತರದಲ್ಲಿಟ್ಟು ನೋಡುವ ಮೂಲಕ ತಾಯ್ತನದ ತಾತ್ವಿಕತೆಯೊಂದನ್ನು ಕಟ್ಟಿಕೊಡುತ್ತದೆ. ಅನುಭವ ಮತ್ತು ಅನುಭಾವಗಳ ಹೆಣಿಗೆಯಲ್ಲಿ ಮೂಡಿದ ಈ ವಿಶಿಷ್ಟ ಕಾವ್ಯಾನುಭೂತಿ ಕವಿತೆಯನ್ನು ಕನ್ನಡದ ಮಹತ್ವದ ಕವಿತೆಗಳಲ್ಲೊಂದಾಗಿಸಿದೆ. ಯೋಗಿ ನಾಗಲಿಂಗನ ಯೌಗಿಕ ಅನುಭವಗಳು ಹಾಗೂ ಲೌಕಿಕದ ತಳಮಳಗಳು ಕವಿತೆಯ ಆದಿ ಆಧಾರವಾಗಿದ್ದು, ಕೊನೆಯಲ್ಲಿ ಅದನ್ನು ಮೀರುವ ವಿಶ್ವಾತ್ಮಕ ಭಾವದಲ್ಲಿ ವಿರಮಿಸುತ್ತದೆ. ಒಂದು ಕಾಲ-ದೇಶದ ವಿವರಗಳಲ್ಲಿ ಕಾಲೂರಿದ ಕವಿತೆಯು ಅದನ್ನು ದಾಟುತ್ತಾ ನಮ್ಮನ್ನು ಆವರಿಸಿಕೊಳ್ಳುತ್ತದೆ. ಕವಿತೆಯ ಧ್ವನಿ ಇಡೀ ಮನುಕುಲದ ಅಹವಾಲಿನಂತೆ ಕೇಳಿಸುವಲ್ಲಿ ನಮ್ಮದೂ ಆಗುತ್ತದೆ.

ಅನುಭಾವನ್ನು ವಿವರಿಸಲು ನೆಲ ಮುಗಿಲುಗಳ ರೂಪಕವನ್ನು ಬೆನ್ನುಹತ್ತುತ್ತೇವೆ. ಪ್ರಜ್ಞೆಯ ಚಲನೆಗಳು ಆಕಾಶದಂತೆ, ಅದಕ್ಕೆ ನಿಶ್ಚಿತವಾದ ರೂಹು ಇಲ್ಲ. ಸಾಧಕನ ಅಂತರಂಗವೊಂದು ಆಕಾಶ. ಅದು ಹಿಗ್ಗುತ್ತಾ ತನ್ನ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಈ ಸಾಧನೆಗೆ ದೇಹದ ಆಧಾರ ಬೇಕೇಬೇಕು. ಇಹದ ಬದುಕನ್ನು ನಿರಾಕರಿಸಿ ಪರತತ್ವವನ್ನು ಹೊಂದುವುದು ಅಸಾಧ್ಯ. ನಾದವು ಅಲೌಕಿಕವಾದರೂ ನಾದವನ್ನು ಹೊಮ್ಮಿಸುವ ಉಪಕರಣಗಳು ಹೇಗೆ ಲೌಕಿಕವೋ, ಹಾಗೆಯೇ ದೇಹ ಹಾಗೂ ಪ್ರಜ್ಞೆಗಳ ಸಂಬಂಧ. ರಕ್ತಮಾಂಸಗಳಿಂದ ನಿರ್ಮಿತವಾದ ಈ ದೇಹ ಹಾಗೂ ಅದರ ತಳಮಳಗಳನ್ನು ಮೀರುವುದು ಸುಲಭವಲ್ಲ. ಆಕಾಶದಲ್ಲಿ ಹಾರುವ ಹಕ್ಕಿ ಕೊನೆಗೂ ಭೂಮಿಯೆಂಬ ವಾಸ್ತವಕ್ಕೆ ಬಂದು ಗೂಡು ಕಟ್ಟಲೇಬೇಕು. ಮೀರಿ ಹಾರುವ ಆತ್ಮವೆಂಬ ಪಕ್ಷಿಯೂ ನೆಲದೆದೆಯಲ್ಲಿ ಸಾಂತ್ವನಕ್ಕಾಗಿ ತಪಿಸಲೇಬೇಕು. ಇದು ಮನುಷ್ಯಮಾತ್ರದವರ ಪಾಡು. ನಮ್ಮ ಪರಂಪರೆಯಲ್ಲಿ ಆಗಿಹೋದ ಅನೇಕ ಅಜ್ಞಾತ ಯೋಗಿಗಳು ಈ ತಳಮಳಗಳ ಭವಚಕ್ರದಲ್ಲಿ ಹಾಯ್ದುಹೋಗಿದ್ದಾರೆ. ಭವದ ಬಂಧನಗಳನ್ನು ಮೀರಲು ಹೊರಟ ಸಾಧಕರು ಏಕಕಾಲದಲ್ಲಿ ಈ ಮಣ್ಣ ಮನುಷ್ಯರೂ ಹೌದು. ಅದಕ್ಕೆಂದೇ ಸಂಬಂಧಗಳ ಕಕ್ಷೆಯನ್ನು ಅವರು ಮೀರುವುದು ಕಷ್ಟ. ಈ ನೆಲದೊಂದಿಗೆ ನಮ್ಮ ಸಂಬಂಧ ಅಂತಹುದು. ಅದು ತಾಯಿಯೊಂದಿಗೆ ಮಗುವಿಗಿರುವ ಸಾವಯವ ಸಂಬಂಧದಂತಹುದು. ತಾಯಿಕೊಟ್ಟ ಈ ಮೈಯ್ಯಿ ಹಾಗೂ ಅವಳ ಎದೆಹಾಲು ಜೀವದೊಂದಿಗೆ ಬೆರೆತದ್ದು. ಭೂಮಿ ಹಾಗೂ ತಾಯಿಯೊಂದಿಗಿನ ಜೀವ ಸಂಬಂಧವು ಎಲ್ಲ ಅಧಿಕಾರ ಸಂಬಂಧಗಳ ಕಕ್ಷೆಯಾಚಿನದು. ಅಧಿಕಾರ ಸಂಬಂಧದ ನಾನಾ ವಿಕಾರಗಳಿಂದ ಜ್ವರಗ್ರಸ್ಥವಾದ ಇಡೀ ಮನುಕುಲಕ್ಕೆ ಬೇಕಾದ ಎದೆಹಾಲನ್ನು ಎಚ್ ಎಸ್ ಶಿವಪ್ರಕಾಶರ ‘ಸಮಗಾರ ಭೀಮವ್ವ’ ಕವಿತೆ ಆರ್ತವಾಗಿ ಯಾಚಿಸುತ್ತದೆ.

ಮಧುರಚೆನ್ನರ ದ್ಯಾವಾಪೃಥ್ವಿಯಲ್ಲಿ ಬರುವಂತೆ ಈ ಕವಿತೆಯಲ್ಲೂ ಭೂಮಿ ಬರುತ್ತದೆ. ಆದರೆ ಇದು ಬರದಿಂದ ಕಂಗೆಟ್ಟು ಬಾಯ್ದೆರೆದ ಭೂಮಿ. ಆ ಬರ ಮನುಷ್ಯರ ಅಂತರಂಗದ್ದೂ ಹೌದು. ಅವರ ಸಾಂಸ್ಕೃತಿಕ ಸಂದರ್ಭದ್ದೂ ಹೌದು. ಇಂಥ ಬರದ ಜ್ವರದಿಂದ ತ್ರಸ್ಥವಾದ ಬದುಕಿಗೆ ಮದ್ದಿರುವುದು ನೆಲದ ಅಂತಃಸತ್ವದಲ್ಲಿಯೇ. ಈ ಬರ ಮೇಲ್ತೋರಿಕೆಯದಷ್ಟೆ! ಅಂತರಂಗದ ಸಮೃದ್ಧಿಯನ್ನು ಶೋಧಿಸಿಕೊಳ್ಳುವ ಹಂಬಲದಿಂದ ಕವಿತೆ ಹೊರಡುತ್ತದೆ. ದ್ಯಾವಾಪೃಥ್ವಿಯಲ್ಲಿ ಕವಿ ಭೂಮಿಯನ್ನು ಅಮೂರ್ತವಾದ ಮಾತೃಚೈತನ್ಯದ ಪ್ರತೀಕವಾಗಿ ಭಾವಿಸಿದರೆ, ಇಲ್ಲಿ ಆ ಚೈತನ್ಯ ಇದೇ ನೆಲದ ದಲಿತ ಹೆಣ್ಣಾದ ಭೀಮವ್ವಳಲ್ಲಿ ಮೈದೋರಿದೆ.

ಕವಿತೆಯು ನಾಗಲಿಂಗ ಯತಿಯ ಆಧ್ಯಾತ್ಮಿಕ ತಳಮಳ, ಹಸಿವು-ಜ್ವರಗಳ ಕುರಿತು ಹೇಳುತ್ತ ಅನುಭಾವವನ್ನು ನೆಲದ ಬದುಕಿಗೆ ಒರೆಹಚ್ಚಿ ನೋಡುತ್ತದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಬದುಕಿದ್ದ ನವಲಗುಂದದ ನಾಗಲಿಂಗ, ಶಿಶುವಿನಹಾಳದ ಶರೀಫ, ಕಡಕೋಳ ಮಡಿವಾಳಪ್ಪ ಇವರೆಲ್ಲ ಸಮಕಾಲೀನರು. ಆ ಕಾಲವು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಯಲ್ಲಿ ಇಡಿಯ ದೇಶವು ತತ್ತರಿಸುತ್ತಿದ್ದ ಕಾಲವೂ ಹೌದು. ಯಂತ್ರ ನಾಗರೀಕತೆಯು ತಂದೊಡ್ಡಿದ ಸಾಂಸ್ಕೃತಿಕ ಪಲ್ಲಟಗಳು ಹಾಗೂ ಆಘಾತಗಳಿಂದ ಸಮಾಜ ಅಲ್ಲೋಲಕಲ್ಲೋಲ ಸ್ಥಿತಿಯಲ್ಲಿದ್ದಾಗ ಅಂತರಂಗದ ಬೆಳಕನ್ನು ಅರಸುತ್ತ ಹೊರಟ ಈ ಸಾಧಕರ ಒಳಲೋಕ ಲೋಕಕ್ಕೆ ಕಾಣದೇ ಉಳಿದಿತ್ತು. ಇಂಥ ಗುಪ್ತಧಾರೆಗಳ ಬಗ್ಗೆ ಆಸ್ಥೆ ತೋರುವ ಶಿವಪ್ರಕಾಶರ ಕಾವ್ಯವು ನಾಗಲಿಂಗನ ತಳಮಳಗಳ ಮೂಲಕ ಅದನ್ನು ಪ್ರತಿಮಿಸಿದೆ.

ಆಧ್ಯಾತ್ಮ ಸಾಧನೆಯ ಬೆನ್ನು ಹಿಡಿದು ಆ ದಿವ್ಯ ಬೆಳಕನ್ನರಸುತ್ತ ಊರೂರು ಅಲೆದ ನಾಗಲಿಂಗ, ಹುಟ್ಟಿಲ್ಲದ, ಜಾತಿಯಿಲ್ಲದ, ಊರಿಲ್ಲದ, ಸೂರಿಲ್ಲದ ಜಂಗಮ. ಬಿಸಿಲು, ಮಳೆ, ಗಾಳಿ, ಇಬ್ಬನಿಗಳನ್ನೇ ಹೊದ್ದವನು ಆತ. ಯಾವ ಆವರಣವಿಲ್ಲದೇ ಅನಂತಕ್ಕೆ ತೆರೆದುಕೊಂಡ ಜೋಗಿ. ಆದರೂ ನಾಗಲಿಂಗನ ಮೈ ಇಂದು ಜ್ವರದಿಂದ ಕೆಂಡವಾಗಿದೆ. ಆತ ಹಸಿವಿನಿಂದ ತತ್ತರಿಸಿದ್ದಾನೆ. ಅದನ್ನು ಹಿಂಗಿಸುವ ‘ಎದೆಹಾಲು’ ಅವನಿಗೆ ಬೇಕು. ಆತ ಹುಡುಕಿ ಹೊರಟ ಆಧ್ಯಾತ್ಮದ ಚೈತನ್ಯ ಅವನನ್ನು ಸಂತೈಸಲು ಸೋತಿದೆ ಯಾಕೆ? ನೆಲದೆದೆಯ ಸಂಬಂಧ ಅವನನ್ನು ಮತ್ತೆ ತಾಯಮಡಿಲಿಗಾಗಿ ತತ್ತರಿಸುವಂತೆ ಮಾಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನು ಕವಿತೆ ಎತ್ತುತ್ತದೆ. ಆಧ್ಯಾತ್ಮಿಕ ಸಾಧನೆಯ ಹಾದಿ ನಿರಂತರ ಜೀವದಾಯಕವೇನಲ್ಲ. ಅಲ್ಲಿರುವ ಉದ್ವಿಗ್ನತೆ, ಹಿಡಿಯಲಾಗದ್ದನ್ನು ಹಿಡಿಯಬೇಕೆನ್ನುವ ಚಡಪಡಿಕೆ, ಸಿಗಲಾರದ್ದಕ್ಕೆ ಹತಾಶೆ, ಕಂಡ ಬೆಳಕನ್ನು ದಕ್ಕಿಸಿಕೊಳ್ಳಲಾಗದ, ಅದರ ಪ್ರಖರತೆಗೆ ಕಣ್ತೆರೆಯಲಾಗದ ಅಸಹಾಯಕತೆ, ಕಂಡೂ ಕಾಣದಾದ ಬೆಳಕಿನ ಬಗೆಗೆ ನಿರಂತರ ಹಪಹಪಿಕೆ ಇವೆಲ್ಲ ಅದನ್ನು ಒಂದು ಯಾತನಾಮಯ ಕ್ಷಣವನ್ನಾಗಿಸಿವೆ. ಆ ಆನಂದದ ಹಿಂದೆಮುಂದೆಲ್ಲ ಯಾತನಾಮಯ ಕ್ಷಣಗಳೇ ಹರಡಿವೆ.

ಏನಾಯ್ತು ನಿಟಿಲ ಭ್ರೂಮಧ್ಯ ಸ್ಪಟಿಕವರ್ಣ ದೀಪ್ತಿ
ಮೇರುದಂಡದಿ ಹರಿದ ತಿಳಿಬೆಳಕಿನ ಹಾದಿ
ದಾಟಿ ಕದಳಿ ಶಿಖರ ಮೀರಿ ಹಾರಿ
ಅಂಬರದಲ್ಲಿ ತೇಲಾಡಿ ನನ್ನ ಆತ್ಮದ ಪಕ್ಷಿ
ಯಾಕೆ ನಾಟಿತೋ ಯಾವ ಬಾಣವೋ ಏನೋ......
ಸೀದ ಕಿರುಮರಿ ಹಕ್ಕಿ
ಎದೆಗುಟುಕ ನೀಡವ್ವ ಸಮಗಾರ ಭೀಮವ್ವ
ಸಮಗಾರ ಭೀಮವ್ವ ಎದೆಹಾಲ ನೀಡವ್ವ (ಸಮಗಾರ ಭೀಮವ್ವ, ನಮ್ಮ ಕನ್ನಡ ಕಾವ್ಯ. ಪು.419)

ಆ ಆನಂದದ ಅಂಬರದಲ್ಲಿ ವಿಹರಿಸುತ್ತಿದ್ದ ಆತ್ಮದ ಪಕ್ಷಿಗೆ ಇದ್ದಕ್ಕಿದ್ದಂತೆ ನಾಟಿದ ಬಾಣ ಯಾವುದು? ನಾಟಿದ್ದು ಯಾಕೆ? ಕಾಣದ ಕೈ ನೀಡಿದ ತೀವ್ರ ಯಾತನೆಯಲ್ಲಿ ಬೆಂದು ಆ ಹಕ್ಕಿ ಇಂದು ಜ್ವರ-ಹಸಿವುಗಳ ಮುದ್ದೆಯಾಗಿದೆ. ಆ ಸೀದ ಕಿರುಮರಿ ಹಕ್ಕಿ ಭಿಮವ್ವನ ಮಡಿಲಿಗೆ ಬಂದುಬಿದ್ದಿದೆ! ಇದು ಅಂತರಾಳದ ಕಳವಳ. ಅಲ್ಲಿನ ತೀರದ ಜ್ವರ, ಹಿಂಗದ ಹಸಿವು, ಮುಗಿಯದ ಅನಾಥಪ್ರಜ್ಞೆ, ಕವಿತೆಯುದ್ದಕ್ಕೂ ಸ್ಥಾಯಿಯಾಗಿದೆ. ‘ಪುರುಷ ಪ್ರಯತ್ನ’ವೆಂಬ ಅಹಮ್ಮಿಗೆ ತಾಯ್ತನದ ನಮ್ರತೆ ಎದುರಾಗುತ್ತಲೇ ಹೋಗುತ್ತದೆ. ಆಕಾಶದ ಉದ್ದಗಲಕ್ಕೂ ರೆಕ್ಕೆಬಿಚ್ಚಿ ಹಾರಾಡುವ ಹಕ್ಕಿಗೆ ಎಂದೆಂದೂ ಹಾರಾಡುತ್ತಲೇ ಇರಲಾಗದು. ಅದು ನೆಲಕ್ಕಿಳಿಯಲೇ ಬೇಕು ಕೊನೆಗೂ ಇಳಿದು ಈ ನೆಲದ ನೋವುಗಳಿಗೆ ಮೈಕೊಡಲೇ ಬೇಕು. ಅದಕ್ಕೆ ಮದ್ದೆಂದರೆ ಈ ನೆಲದೆದೆಯ ಹಾಲೇ. ಅದನ್ನು ಕೊಡಲು ಭೀಮವ್ವಳಂಥವಳಿಗೆ ಸಾಧ್ಯ. ಈ ಆತ್ಮದ ತಬ್ಬಲಿ ಹಕ್ಕಿಗೆ ಎದೆಗುಟುಕು ನೀಡು ಬಾ ಎಂಬ ಆರ್ತತೆ, ಮಗುವಿನ ಅಳುದನಿಯಂತೆ ಕವಿತೆಯ ತುಂಬಾ ಗಾಢವಾಗಿ ಹಬ್ಬಿದೆ. ಈ ನಿಟ್ಟಿನಲ್ಲಿ ‘ಎದೆಹಾಲು’ ತನ್ನ ಅರ್ಥವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಅದು ಮೊಲೆಹಾಲಲ್ಲ. ಅಂತರಂಗದ ಹಸಿವನ್ನು ನೀಗಿಸಿ ಜೀವತುಂಬುವ ಜೀವದಾಯಕ ಸತ್ವ.

ಭೀಮವ್ವನ ಶಕ್ತಿಯಾದರೂ ಎಂಥದು ಹಾಗಾದರೆ? ಆಕೆ ಮೊಲೆಬರದ ಕೊಡಗೂಸು, ಮದುವೆಯಾದ ತಾಯಿ ‘ಮೊಲೆಹಾಲು ಬೇಡವ್ವ’ ಎಂಬಲ್ಲಿ ಅವಳ ಜೈವಿಕ-ಲೈಂಗಿಕ ಆವರಣಗಳು, ಅದರ ಮಿತಿಗಳು ಕಳಚುತ್ತವೆ. ಮೊಲೆ, ಮದುವೆಗಳ ಹಂಗಿಲ್ಲದ ತಾಯ್ತನದ ಪ್ರತಿನಿಧಿ ಆಕೆ. ಆಕೆಯ ತಾಯ್ತನದ ಸಾಂತ್ವನದ ಸ್ಪರ್ಷ ಬೇಕಾಗಿರುವುದು ಒಬ್ಬ ನಾಗಲಿಂಗನಿಗಲ್ಲ. ಬದಲಿಗೆ ಇಡೀ ಮನುಕುಲಕ್ಕೆ. ಸಾಮಾಜಿಕ, ರಾಜಕೀಯ, ಆರ್ಥಿಕ ಒಟ್ಟಾರೆ ಇಡಿಯ ಸಾಂಸ್ಕೃತಿಕ ಸಂದರ್ಭವೇ ಅಂದು ಅನಾಥ ಶಿಶುವಿನಂತಾಗಿತ್ತು.

ಕವಿತೆಯ ಮತ್ತೊಂದು ವೈಶಿಷ್ಟ್ಯವೆಂದರೆ, ಅದು ಇಡೀ ಭೂಮಿಯ ಬಗ್ಗೆ ಹೇಳುತ್ತಲೇ ನವಲಗುಂದದ ಬಿರುಬಿಸಿಲು, ಅಲ್ಲಿನ ಬರಗಳ ಕುರಿತು ಹೇಳುತ್ತ ಪ್ರಾದೇಶಿಕವಾಗುತ್ತದೆ. ಆ ಕಾಲದ ಚರಿತ್ರೆಯನ್ನು ಕಟ್ಟಿಕೊಡುತ್ತ ಸಮಕಾಲೀನವಾಗುತ್ತದೆ. ಆ ಚೌಕಟ್ಟುಗಳೊಳಗೇ ನಿಂತು ಕಾಲ-ದೇಶಗಳಾಚೆ ಕೈಚಾಚುತ್ತದೆ. ಇಡೀ ಭಾರತದ ಸಂದರ್ಭದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಸಾರ್ವಭೌಮತ್ವದಲ್ಲಿ ಮಸುಕಾದ ಈ ನೆಲದ ಆತ್ಮತೇಜ, ವ್ಯಾಪಾರೀ ಮನೋಭಾವದಲ್ಲಿ ಹಿನ್ನೆಲೆಗೆ ನಿಂತ ಆಧ್ಯಾತ್ಮದ ವಿಶಾಲ ಮನೋಭಾವ, ಹಾಗೆಯೇ ಕನ್ನಡದ ಸಂದರ್ಭಕ್ಕೆ ಬಂದರೆ, ಕಿತ್ತೂರು ವಂಶದ ರಾಜಕೀಯ ಹುನ್ನಾರಗಳು ತೆಗೆದುಕೊಂಡ ಬಲಿ, ಆ ಭಾಗವನ್ನು ವ್ಯಾಪಿಸಿ ಹಸುಗೂಸುಗಳನ್ನು ಬಲಿತೆಗೆದುಕೊಂಡ ಕಾಲರಾ, ಹಸಿರುಕ್ಕುವ ಹೊಲದಾಳದಲ್ಲಿ ಬಸಿರ ಮಕ್ಕಳನ್ನು ಹೂತ ಬಡವರ ದುರಂತದ ಬದುಕು, ಇವೆಲ್ಲ ಜ್ವಲಂತವಾದ ವಾಸ್ತವವಾಗಿದ್ದವು. ‘ಹಸಿರು ಜಗ್ಗನೆ ಉರಿವ’ ಎಂಬ ಅಭಿವ್ಯಕ್ತಿಯಲ್ಲಿ ಸಾಮಾಜಿಕ ಅಸಮಾನತೆಯ ವಿಷಬೀಜದ ಸೂಚನೆ ಥಟ್ಟನೆ ಅರಿವಾಗುತ್ತದೆ. ಸಮೃದ್ಧಿಗೆ ಕಾರಣರಾದವರ ಬದುಕು ಮಾತ್ರ ಬಡತನದಲ್ಲಿ ಬೆಂದುಹೋಗಿರುವ ವಿಪರ್ಯಾಸವಿದು. ಈ ಉರಿಯೋ ಸಂಸ್ಕೃತಿಯ ದುರಂತ. ತೊನೆದಾಡುವ ಜೋಳವೂ ಕಂಬನಿಯಂತೆ ಕಾಣುವುದು ಆ ದುರಂತದ ತೀಕ್ಷ್ಣ ಅಭಿವ್ಯಕ್ತಿ. ತೀವ್ರವಾದ ನೋವು ಅನುಭವವನ್ನು ಸಮರ್ಥವಾಗಿ ಕಟ್ಟಿಕೊಡುವ ಇಂಥ ಶ್ರೇಷ್ಠ ಅಭಿವ್ಯಕ್ತಿ ಕಾವ್ಯದುದ್ದಕ್ಕೂ ಸ್ಥಾಯಿಯಾಗಿದೆ. ಒಟ್ಟಾರೆ ಸಾವು, ನೋವು, ಯಾತನೆಯನ್ನು ತುಂಬಿದ ಬದುಕು, ಅದನ್ನು ಪೋಷಿಸುವ ಸಾಮಾಜಿಕ, ಆರ್ಥಿಕ, ರಾಜಕೀಯ ಸನ್ನಿವೇಶಗಳು..... ಒಟ್ಟಾರೆ ಸಂಸ್ಕೃತಿಗೇ ಕವಿದ ಈ ಸಂಕಷ್ಟಗಳಿಂದ ಪಾರುಮಾಡುವುದು ಆ ಜೀವಧಾರೆಯೇ. ಅದು ಸಮಗಾರ ಭೀಮವ್ವ ನೀಡುವ ಎದೆಹಾಲು.

ಹೆರದ, ಮೊಲೆಯೂಡಿಸಿದ ಭೀಮವ್ವಳ ಎದೆಹಾಲಾದರೂ ಎಂತಹದು? ಆಕೆ ಬಂಜೆ, ಮೊಲೆಬರದ ಕೂಡಗೂಸು. ಅದು ಲೌಕಿಕದ ಫಲವತ್ತತೆಯ ದೃಷ್ಟಿಗೆ. ಆದರೆ, ಆಕೆಯಲ್ಲೊಂದು ಅಲೌಕಿಕ ಫಲವಂತಿಕೆಯಿದೆ. ಅದು ಅವಳ ಎದೆಹಾಲು ಕೊಡುವ ಜೀವಚೈತನ್ಯ. ಕವಿತೆಯಲ್ಲಿ ಸಾಮಾಜಿಕ ಅಸಮಾನತೆಯ ಆವರಣವೊಂದನ್ನು ಸೂಚಿಸಲಾಗಿದೆ. ಅದು ಮನುಷ್ಯ ನಿರ್ಮಿತ ಕೇತಕ ಸಾಮಾಜಿಕ ವ್ಯವಸ್ಥೆಯ ದುರಂತ ಚಿತ್ರಣ. ಅಲ್ಲೀಕೆ ಮುಟ್ಟಬಾರದವಳು. ಸಾಮಾಜಿಕ ಶ್ರೇಣೀಕರಣದಲ್ಲಿ ತೀರ ಕೆಳಗಿರುವಾಕೆ. ಬಡತನವನ್ನೇ ಉಂಡು ಉಟ್ಟು ಹಾಸಿ ಹೊದೆವಾಕೆ. ಆದರೆ ಅವಳೊಳಗಿರುವ ಚೈತನ್ಯ ಈ ಕೃತಕ ವ್ಯವಸ್ಥೆಗಳನ್ನು ಮೀರಿದ್ದು. ಅದು ಆಧ್ಯಾತ್ಮದ ಅಸೀಮತೆಯನ್ನು ಪ್ರತಿನಿಧಿಸುವಂಥದು. ಅಲ್ಲಿ ಶೋಷಕರೂ ಇಲ್ಲ, ಶೋಷಿತರೂ ಇಲ್ಲ. ಅದೊಂದು ಅಖಂಡ ಬೆಳಕಿನ ಸ್ಥಿತಿ. ಅವಳ ಅಂತಃಸತ್ವವನ್ನು ವ್ಯವಸ್ಥೆಯ ಕ್ರೌರ್ಯಕ್ಕೆ ಮುಟ್ಟಲೂ ಸಾಧ್ಯವಿಲ್ಲ. ಈ ಲೌಕಿಕದ ನೋವುಗಳನ್ನುಂಡು ಆಕೆ ನಾಶವಾಗುವುದಿಲ್ಲ. ದೇಸಾಯಿ ಕುಲಕರಣಿಗಳ ಅಧಿಕಾರದ ಹಮ್ಮು ಈ ತಾಯಿಯiನ್ನು ನಾಶಮಾಡಲಾಗುವುದಿಲ್ಲ. ಈ ನೆಲದ ವೈಷಮ್ಯವನ್ನು ಮೆಟ್ಟಿನಿಲ್ಲುವ ಚೈತನ್ಯ ಈ ನೆಲದ್ದೇ ಆದ ಆಧ್ಯಾತ್ಮಿಕತೆಗಿದೆ. ಅದರ ಪ್ರತಿರೂಪ ಈ ಭೀಮವ್ವ. ಆಕೆ ಕಸವನ್ನೇ ಗೊಬ್ಬರ ಮಾಡಿ ಬೀಜ ಬಿತ್ತುವ ಕೈ. ದ್ವೇಷದ ಕಾವು ಕಡಿಯಲಾಗದಂಥ ಮರ ಆಕೆ. ಕಡಿದು ಕಟ್ಟಿಗೆ ಮಾಡಿ ಹೊಲೆಯೆಂಬ ಒಲೆಯಲ್ಲಿ ಸುಟ್ಟರೂ ಆಕೆ ಮಾತ್ರ ರೊಟ್ಟಿಯಾಗಿ ಹಸಿವ ನೀಗಿಸುವಂತ ಜೀವನ್ಮುಖಿ. ವ್ಯವಸ್ಥೆಗೆ ಒಡ್ಡುವ ಪ್ರತಿರೋಧ ಇನ್ನೂ ಶಕ್ತಿಶಾಲಿಯಾಗಿರಲು ಹೇಗೆ ಸಾಧ್ಯ? ಏಕೆಂದರೆ, ಈ ಪ್ರತಿರೋಧದಲ್ಲಿ ನಾಶವಿಲ್ಲ. ಬದಲಿಗೆ ಪ್ರತಿಸೃಷ್ಟಿಯ ಜೀವಪರ ಶಕ್ತಿಯಿದೆ. ಪ್ರತಿಸಂಸ್ಕೃತಿಯೊಂದನ್ನು ಹುಟ್ಟಿಸಬಲ್ಲ ಚೈತನ್ಯವಿದೆ. ಈ ದೃಷ್ಟಿಯಿಂದಲೂ ಭೀಮವ್ವ ತಾಯಿಯೇ.

ಸ್ವತಃ ಭೀಮವ್ವನಿಗೂ ತನ್ನ ಶಕ್ತಿಯ ಅರಿವಿಲ್ಲ. ಆಕೆ ಲಕ್ಷ ಯೋಜನದಾಚೆ, ಕೋಟಿಯೋಚನೆಯಾಚೆ ಕುಳಿತವಳು. ಅವಳು ಇಲ್ಲೇ ಈ ಕ್ಷಣ ಜೀವಂತವಾಗಿದ್ದರೂ ಕಾಲ-ದೇಶ, ಯೋಚನೆಗಳ ವ್ಯವಸ್ಥೆಗೆ ನಿಲುಕದಂಥವಳು. ಅವಳ ಮೌನವೂ ಕೂಡ ನಿಷ್ಫಲವಲ್ಲ. ಮೌನದೆಳೆಗಳನ್ನೇ ಸುತ್ತಿಸುತ್ತಿ ಬಟ್ಟೆ ನೇಯುವ ಸೃಷ್ಟಿಶೀಲಳು ಆಕೆ. ಆದರೂ, ಆಕೆ ಬಂಜೆಗಂಬನಿ ಮಣಿಯನ್ನು ಪೋಣಿಸುತ್ತಿದ್ದಾಳೆ. ಕಣ್ಣೀರು ಬರಿ ಬಂಜೆ. ಅಥವಾ ಬಂಜೆ ಎಂಬ ಲೋಕದೃಷ್ಟಿ ಕೊಟ್ಟ ಕಣ್ಣೀರು ಅದು. ತನ್ನ ಚೈತನ್ಯದ ಅರಿವು ಆಕೆಗಿಲ್ಲ. ಯಾಕೆಂದರೆ ಅವಳಿರುವುದೇ ಚೈತನ್ಯವಾಗಿ. ಆದ್ದರಿಂದ ಅದನ್ನು ಪಡೆಯುವ ಹಸಿವು ಅವಳಿಗಿಲ್ಲ. ಆ ಸಹಜ ಸ್ಥಿತಿ ನಮಗಿಂದು ಬೇಕಾಗಿದೆ. ಅದೇ ಕವಿತೆ ಕಟ್ಟಿಕೊಡುವ ಅನುಭಾವದ ಹೊಸದರ್ಶನವೂ ಹೌದು.

ಮನುಷ್ಯ ಸ್ವಾರ್ಥದೆದುರು ಥಟ್ಟನೇ ಮಗುತನದ ಕಂಪನ್ನು ಇಟ್ಟುಬಿಡುತ್ತದೆ ಕವಿತೆ. ಸಂತೆಯೆಂಬುದು ವ್ಯಾಪಾರೀ ಮನೋಭಾವಕ್ಕೆ ಸಂಕೇತ. ಅಲ್ಲಿ ಲಾಭ-ನಷ್ಟಗಳ ಪ್ರಶ್ನೆ ಮುಖ್ಯವೇ ಹೊರತು ಅಂತರಂಗದ ಪಿಸುದನಿಯಲ್ಲ. ಗದ್ದಲದ ಮಧ್ಯೆ ಮುಚ್ಚಿಹೋದ ನಿಜಭಾವದ ಹುಡುಕಾಟವಿದು. ಬದುಕಿನ ಚಿಂತೆಗಳ ಸಂತೆ ಸಾಕಾಗಿ ಶುದ್ಧ ಅನುಭಾವ ಬೇಕಾಗಿದೆ.

‘ಎಳೆತನ’ವೆಂಬುದು ಸಹಜ ಮಾರ್ದವ, ಅಂಥ ಸಹಜತೆಯ ಹಾದಿತೋರು, ಅದಕ್ಕಾಗಿ ಎದೆಹಾಲನ್ನು ಸಿಂಪಡಿಸು ಎಂದು ನಾಗಲಿಂಗ ಮೊರೆಯಿಡುವಲ್ಲಿ ಆಧುನಿಕ ಬದುಕಿನ ಸಂತೆಯಲ್ಲಿ ಸಿಕ್ಕಿಬಿದ್ದ ಎಲ್ಲ ಮನುಷ್ಯರ ಮೊರೆ ಕೇಳುತ್ತದೆ. ಎದೆ ಹಾಲನ್ನು ಸಿಂಪಡಿಸುವುದು ಎಲ್ಲಿ? ನವಲಗುಂದಕ್ಕೆ, ಯಾಂತ್ರೀಕರಣದಿಂದ ಕಿರುಗುಡುವ ಹುಬ್ಬಳ್ಳಿ ನಗರಕ್ಕೆ. ಅಲ್ಲಿಂದ ಮುಂದೆ ಕಾಲ ದೇಶಗಳಾಚೆ ಇರುವ ತಾರಾಮಂಡಲಕ್ಕೆ, ಇಡಿಯ ವ್ಯೋಮಕ್ಕೆ. ಈ ದಾಹ ಬರೀ ವ್ಯಕ್ತಿಯದಲ್ಲ. ಅಖಂಡ ವಿಶ್ವವೇ ಅದಕ್ಕಾಗಿ ತ್ರಸ್ಥವಾಗಿದೆಯೆಂಬ ಭಾವ ಕವಿಯದು.

ಬರದಿಂದ ಬಿರುಕುಬಿಟ್ಟ ನವಲಗುಂದದ ನೆಲ, ಜ್ವರದಲ್ಲಿ ಬೇಯುವ ನಾಗಲಿಂಗ, ಹೀಗೆ ಒಂದು ಬಗೆಯ ದಾಹ, ಉದ್ವಿಗ್ನತೆಯಿಂದ ಆರಂಭವಾಗುವ ಕವಿತೆ ಈ ಉದ್ವಿಗ್ನತೆ ಶಾಂತಗೊಳ್ಳುವ ಸೂಚನೆಯೊಂದಿಗೆ ಕೊನೆಯಾಗುತ್ತದೆ.

ತಾರವ್ವ ಮಳೆಯ ಎಳೆ ಎಳೆಯ ಎದೆಹಾಲ
ಸಿಂಪಡಿಸು ಗುಡ್ಡಕ್ಕೆ ನವಲಗುಂದಕ್ಕೆ
ಗದಗಕ್ಕೆ ಗಿರಣಿಗಳು ಕಿರುಗುಡುವ ಹುಬ್ಬಳ್ಳಿ ನಗರಕ್ಕೆ
ತಾರೆಮಂಡಲ ಬುಗುರಿ ಕೆದರಿರುವ ವ್ಯೋಮಕ್ಕೆ
ತಾರವ್ವ ಚಂದ್ರವ್ವ ಮುಗಿಲವ್ವ ಭುಗಿ ಭುಗಿಲವ್ವ
ಎದೆಯಲ್ಲಿ ಕರುಳಲ್ಲಿ ನೆಲದಲ್ಲಿ .......
ಏಸು ಕಾವಿತ್ತವ್ವ ಮಳೆಬಿದ್ದ ನೆಲದಲ್ಲಿ ಕಾವು ತಡೆಯದೆ ಹಾವೇಸು ಹುತ್ತವ
ಬಿಟ್ಟು
ನೆಲದುದ್ದ ನೆಲದಗಲ ಹೊರಳಿದುವ್ವವ್ವಾ.....
(ಸಮಗಾರ ಭೀಮವ್ವ, ನಮ್ಮ ಕನ್ನಡ ಕಾವ್ಯ, ಪು.421)

ಎದೆಹಾಲು ಅಲ್ಲಿ ಮಳೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಬರ, ಜ್ವರಗಳೆರಡೂ ಹಿಂಗುವ ಸೂಚನೆ ಕಾಣುತ್ತದೆ. ನಾಗಲಿಂಗನಿಗೆ ಎರಗಿದ ದುಃಸ್ವಪ್ನದ ಅಲ್ಲೋಲ ಕಲ್ಲೋಲ ಸ್ಥಿತಿ ಇದೇ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭದ ಸಂಕೇತವಾಗಿ ಕಾಣಿಸುತ್ತದೆ. ಆ ಸ್ಥಿತಿಗೆ ದೇಸೀಯ ಚೈತನ್ಯವೇ ಪರಿಹಾರ ಎಂಬ ನಿಲುವೂ ಇಲ್ಲಿ ವ್ಯಕ್ತವಾಗುತ್ತದೆ. ಅದೇ ಎದೆಹಾಲು. ಇಡೀ ಸಂದರ್ಭದ ಹಸಿವಿಗೆ ಆ ಎದೆಹಾಲು ಬೇಕು. ಹೀಗೆ ಏಕಕಾಲದಲ್ಲಿ ವ್ಯಕ್ತಿಗತ ಆಧ್ಯಾತ್ಮಿಕ ಚೈತನ್ಯದ ಹುಡುಕಾಟ ಹಾಗೂ ಒಟ್ಟಾರೆ ಸಾಮಾಜಿಕ ಸಂದರ್ಭದ ತೊಳಲಾಟಗಳು ಹೆಣೆದುಕೊಂಡು ಕವಿತೆಯಲ್ಲಿ ಧ್ವನಿಸುವ ಪರಿ ಅನನ್ಯವಾದುದು. ನೆಲದೊಡಲ ತಂಪಿಗೆ ಮೈಕೊಟ್ಟು ಹೊರಳುವ ಹಾವುಗಳ ಚಿತ್ರ ಎದೆಹಾಲನ್ನು ಪಡೆದುಕೊಂಡು ಶಾಂತವಾಗುವ ಪರಿಯೇ ಆಗಿದೆ.

ಇಂದಿನ ಮೂಲಭೂತವಾದ, ಜನಾಂಗದ್ವೇಷ, ಯುದ್ಧದಾಹಗಳು ನಮ್ಮನ್ನು ತಾಯ್ತನದ ಸೈರಣೆ, ಮಮತೆ, ಒಳಗೊಳ್ಳುವಿಕೆಯಿಂದ ವಿಮುಖಗೊಳ್ಳುವಂತೆ ಮಾಡಿವೆ. ವ್ಯಾಪಾರೀಕರಣದಿಂದ ಉಂಟಾದ ಸಾಂಸ್ಕೃತಿಕ ಮಾಲಿನ್ಯ, ನ್ಶೆತಿಕ ಪತನಗಳು ಕ್ರೌರ್ಯದ ನಾನಾ ಆಕಾರ ತಾಳಿ ದಿಗಿಲು ಹುಟ್ಟಿಸುತ್ತಿವೆ. ಉಪಭೋಗ ಸಂಸ್ಕೃತಿ ತಂದೊಡ್ಡಿದ ಆಮಿಷಗಳಲ್ಲಿ ಮನುಷ್ಯತ್ವ ಮರೆಯಾಗಿ ಪಶುತ್ವವೇ ವಿಜೃಂಭಿಸುತ್ತಿದೆ. ಮಣ್ಣಿನಿಂದ ದೂರಾದ ಮನುಷ್ಯನ ಅತಂತ್ರತೆ ಸುಪ್ತವಾಗಿ ಅವನನ್ನು ಕೊಲ್ಲುತ್ತಿದೆ. ಆಧುನಿಕ ಮನುಷ್ಯ ತನ್ನೆಲ್ಲ ಹೋರಾಟಗಳ ಮಧ್ಯೆಯೂ ತ್ರಸ್ಥನಾಗಿದ್ದಾನೆ. ಇಂದಿನ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ಮತ್ತೆ ನಮ್ಮ ಮೂಲಚೈತನ್ಯ ಧಾರೆಗಳನ್ನು ಹುಡುಕಿಕೊಳ್ಳದೇ ವಿಧಿಯಿಲ್ಲ. ತಾಯ್ತನದ ಮನಸ್ಥಿತಿಯನ್ನು ನಾವೆಲ್ಲರೂ ಆವಾಹಿಸಿಕೊಳ್ಳುವುದೇ ಈ ಜಗದ ಜ್ವರಕ್ಕೆ ಔಷಧ.

-ಡಾ. ಗೀತಾ ವಸಂತ

ಈ ಅಂಕಣದ ಹಿಂದಿನ ಬರೆಹಗಳು:
ಆಳವಾಗಿ ಕದಲಿಸುವ ‘ಬೀಜ’ಪ್ರಶ್ನೆಗಳು

ಸ್ತ್ರೀಲೋಕ
ಮಹಿಳಾ ಆತ್ಮಕಥೆಗಳೆಂಬ ಅಂತರಂಗದ ಪುಟಗಳು
ನಾದದ ನದಿಯೊಂದು ನಡೆದ್ಹಾಂಗ
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...