ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು

Date: 30-09-2021

Location: ಬೆಂಗಳೂರು


‘ಜಾಗತೀಕರಣದಿಂದ ಅವಕಾಶಗಳು ವೃದ್ಧಿಸಿವೆ, ಸಾಮಾಜಿಕ ಜೀವನದ ಮಟ್ಟ ಏರಿದೆ ಎಂದು ಹೇಳುವವರಿದ್ದರೂ ಅದರಿಂದ ನಾವು ಕಳೆದುಕೊಂಡದ್ದು ಮಾತ್ರ ಭಯಾನಕ ಎಂಬುದನ್ನು ಯಾರೂ ಅಲ್ಲಗಳೆಯಲಾರರು’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ಜಾಗತೀಕರಣದಿಂದ ವೃದ್ಧಾಶ್ರಮಗಳಂತಾಗುತ್ತಿರುವ ಹಳ್ಳಿಗಳ ಕುರಿತು ಚರ್ಚಿಸಿದ್ದಾರೆ.

ಜಾಗತೀಕರಣವು ಅವಕಾಶದ ಬಾಗಿಲನ್ನು ತೆರೆಯುವುದರ ಜತೆಗೆ ಅವಾಂತರಗಳನ್ನು ಸೃಷ್ಟಿಸುವ ಯಂತ್ರವೂ ಹೌದು. ಇಂದು ಹಳ್ಳಿಗಳೆಲ್ಲವೂ ಆಧುನಿಕತೆಯ ಭರಾಟೆಗೆ ನಲುಗುತ್ತಿವೆ. ಬದುಕು ಎಷ್ಟು ದುಸ್ತರವಾಗಿದೆ ಎನ್ನುವುದರ ಕಲ್ಪನೆಯೇ ಇಲ್ಲದೆ ಜಾಗತೀಕರಣದ ಬಿಸಿಗಾಳಿಗೆ ಹಳ್ಳಿ ಹಳ್ಳಿಗಳು ಬೇಯುತ್ತಿವೆ.

ಜಾಗತೀಕರಣದಿಂದ ಅವಕಾಶಗಳು ವೃದ್ಧಿಸಿವೆ, ಸಾಮಾಜಿಕ ಜೀವನದ ಮಟ್ಟ ಏರಿದೆ ಎಂದು ಹೇಳುವವರಿದ್ದರೂ ಅದರಿಂದ ನಾವು ಕಳೆದುಕೊಂಡದ್ದು ಮಾತ್ರ ಭಯಾನಕ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಜಾಗತೀಕರಣವು ಸಾಮಾನ್ಯರ ಜೀವನ ಗತಿಯನ್ನು ತ್ರಿಶಂಕು ಸ್ಥಿತಿಗೆ ತಳ್ಳಿದೆ. ಫಲಶ್ರುತಿಯಾಗಿ ಯುವ ಪೀಳಿಗೆಯ ದೊಡ್ಡ ದಂಡೇ ನಗರಗಳಿಗೆ ವಲಸೆ ಹೋಗಿದೆ. ಪರಿಣಾಮ ಆಸರೆಯಿಲ್ಲದ ಹಿರಿಯ ಜೀವಗಳು ಪಡುವ ಪಾಡು ಹೇಳತೀರದು. ತಮ್ಮ ಸಂಧ್ಯಾಕಾಲದಲ್ಲಿ ಕುಳಿತು ಗತ ವೈಭವವನ್ನು ಮೆಲುಕು ಹಾಕುವ ಇಳಿವಯಸ್ಸಿನ ಜೀವಗಳ ಚಿತ್ರಣ ಇಂದಿನ ಬಹುತೇಕ ಹಳ್ಳಿಗಳಲ್ಲಿ ಕಾಣಿಸುತ್ತಿರುವ ವಾಸ್ತವತೆ. ಈ ವಿಪರ್ಯಾಸವು ಹಳ್ಳಿಗಳನ್ನು ವೃದ್ಧಾಶ್ರಮಗಳನ್ನಾಗಿ ಬದಲಿಸಿದ ಕುರುಹಾಗಿದೆ.

ಕೃಷಿಯನ್ನೇ ಅವಲಂಬಿಸಿರುವವರಿಗೆ ಇಂದು ಅದನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಯುವಕ/ ಯುವತಿಯರೆಲ್ಲರೂ ಇಂದು ನಗರವಾಸಿಗಳು! ಇದ್ದ ಅಲ್ಪ ಸ್ವಲ್ಪ ಜಮೀನಿಗೂ ಒಳ್ಳೆಯ ದರ ಬಂದು ಅದೂ ಅಭಿವೃದ್ಧಿಯ ಹೆಸರಲ್ಲಿ ಅನ್ಯರ ಪಾಲಾದ ಮೇಲೆ- ಗಳಿಸಿದ ಹಣವನ್ನಿಟ್ಟುಕೊಂಡು ನಡೆಸುವ ವಿವೇಚನೆಯಿಲ್ಲದ ದರ್ಬಾರು ಜನರನ್ನು ಬರ್ಬಾದ್ ಮಾಡುತ್ತಿದೆ. ಜಾಗತೀಕರಣದ ಫಲಶ್ರುತಿಯೇ ಇಂದು ಕೃಷಿ ಭೂಮಿಗಳಿಗೆ ಬಂಗಾರದ ಬೆಲೆಯನ್ನು ದೊರಕಿಸಿದೆ. ಬಂಗಾರದ ಬೆಲೆಯ ಹಿಂದೆ ಬಿದ್ದು ಮಣ್ಣು ಸೇರಿದ ಜೀವಗಳದೆಷ್ಟೋ? ದಿಢೀರನೆ ಬಂದ ಅದೃಷ್ಟವು ಬದುಕಲ್ಲಿ ಅಸಮತೋಲನವನ್ನು ಉಂಟು ಮಾಡಿದೆ.

ಇನ್ನು ಮದುವೆ ಬಗ್ಗೆ ಯೋಚಿಸಿದರಂತೂ ಎಲ್ಲಾ ಹೆಣ್ಣುಮಕ್ಕಳಿಂದು ಬಯಸುವುದು ನಗರವಾಸಿ ಹುಡುಗನನ್ನೇ. ಹಾಗಿರುವಾಗ ಹಳ್ಳಿವಾಸಿ ವರನಿಗೆಲ್ಲಿಂದ ವಧು ಸಿಕ್ಕಿಯಾಳು? ಹಳ್ಳಿಯ ವಧುವಿನ ಚಿತ್ತ ಕೂಡ ನಗರವಾಸಿ ವರನತ್ತವೇ ಎಂದ ಮೇಲೆ, ಈ ಹಳ್ಳಿ ಹೈಕಳ ಗತಿ ಏನು? ಇರುವ ಚೂರುಪಾರು ತೋಟ, ಗದ್ದೆಗಳ ನಡುವೆ ಅವರು ಇನ್ನಿಲ್ಲದಂತೆ ಕಳೆದು ಹೋಗುತ್ತಿದ್ದಾರೆ. ಆಧುನಿಕತೆಯ ಭರಾಟೆಗೆ ಜನ ಒಂದು ಕಡೆ ನೆಲೆಯನ್ನು ಪಡೆದುಕೊಂಡರೂ, ಇನ್ನೊಂದೆಡೆ ಮೂಲದಿಂದ ಕಳಚಿಕೊಳ್ಳುತ್ತಿದ್ದಾರೆ. ಇತ್ತ ಸಂಬಂಧಗಳು ಸೀಮಾತೀತವಾಗಿ ಬೆಳೆಯತೊಡಗಿವೆ. ಒಟ್ಟಿನಲ್ಲಿ ಜಗತ್ತೇ ಒಂದು ಕುಟುಂಬವಾಗಿ, ಅಲ್ಲಿ ಭಾಷೆ, ಧರ್ಮ, ಸಂಸ್ಕಾರ, ಸಂಸ್ಕೃತಿ ಎಲ್ಲವೂ ಒಂದೇ ಸೂರಿನಡಿ ಮಿಳಿತಗೊಂಡಿವೆ.

ದೂರಸಂಪರ್ಕ ಕ್ಷೇತ್ರದ ಸಾಧನೆಯು ಇಂದು ವಿಶ್ವವನ್ನು ನಮ್ಮ ಬೆರಳ ತುದಿಗೆ ತಂದಿದೆ. ಬಹುತೇಕ ಯುವ ಜನತೆ `ಕಾಲ್ ಸೆಂಟರ್'ಗೆ ಮರುಳಾಗಿದ್ದಾರೆ. ಇದು ಉದ್ಯೋಗವನ್ನೇನೋ ಸೃಷ್ಟಿಸಿಸುತ್ತದೆ ನಿಜ. ಆದರೆ ಉನ್ನತ ಅಧ್ಯಯನಕ್ಕೆ ಕಡಿವಾಣವನ್ನೂ ಹಾಕುತ್ತದೆ. ಮೂಲಭೂತ ವಿಜ್ಞಾನ, ಕಲಾ ವಿಷಯಗಳೆಲ್ಲವೂ ಇಂದಿನ ಯುವ ಪೀಳಿಗೆಗೆ ಅಪಥ್ಯವೆನಿಸಿವೆ. ಕೃಷಿ ಆಧಾರಿತ ಪಾರಂಪರಿಕ ಜೀವನ ನಿರ್ವಹಣೆಯ ವಿಧಾನಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಸಮಾನಂತರ ಅಭಿವೃದ್ಧಿಯು ಹೊರ ಹೊಮ್ಮಲು ಸಾಧ್ಯವಾಗುತ್ತಿಲ್ಲ.

ಈಗ ಇರುವುದು ಒಂದೇ ಗುರಿ- ಧನಿಕನಾಗಬೇಕು ಮತ್ತು ಆಧುನಿಕನಾಗಬೇಕು ಎಂಬುದಷ್ಟೇ. ಬಾಹ್ಯ ಸುಖಗಳಿಗಾಗಿ ಆಧುನಿಕರಾಗುತ್ತಾ ಹೋದಂತೆ, ನಮ್ಮ ನಿಜವಾದ ಆಂತರಿಕ ಸುಖಗಳು ಮಾಯಾ ಜಿಂಕೆಯ ಬೆನ್ನನ್ನು ಹತ್ತುತ್ತವೆ. ಇದರಿಂದಲಾಗಿ ಎಲ್ಲಿಗೂ-ಎಲ್ಲಿಯೂ ಸಲ್ಲದವರಾಗಿ ಬಿಡುತ್ತೇವೆ. ಈ ಅಪಾಯವನ್ನು ಈಗಾಗಲೇ ಮೈಮೇಲೆ ಎಳೆದುಕೊಂಡಿದ್ದೇವೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಕರಾಳ ದಿನಗಳಿಗೆ ನಾವೇ ಜವಾಬ್ದಾರರಾಗ ಬೇಕಾಗುತ್ತದೆ. ಅಭಿವೃದ್ಧಿಯು ಪರಸ್ಪರರ ನಡುವೆ ಅಸಮಾನತೆಯನ್ನು ಸೃಷ್ಟಿಸಬಾರದಲ್ವೇ?

ಜಾಗತೀಕರಣವೆಂಬ ಸಪ್ಪ್ಲಿಮೆಂಟ್ ವಿಟಾಮಿನ್-ಪ್ರೊಟೀನ್ ಸಂಪೂರ್ಣವಾಗಿ ದೇಹವನ್ನು ಆಕ್ರಮಿಸುವ ಮೊದಲು ನಮ್ಮತನವನ್ನು ಉಳಿಸಿಕೊಂಡೇ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು. ಹಳ್ಳಿಗಳೆಲ್ಲವೂ ಹಳ್ಳಿಗಳಾಗಿದ್ದುಕೊಂಡೇ ಆಧುನಿಕ ಯುಗದ ಎಲ್ಲಾ ಸದಾವಕಾಶಗಳನ್ನು ಬಳಸಿಕೊಂಡು ಜಾಗತಿಕ ನೆಲೆಯಲ್ಲಿ ಬದುಕನ್ನು ರೂಪಿಸುವಂತಹ ಹಳ್ಳಿಗಳಾಗಬೇಕು. ಇನ್ನೊಬ್ಬನ ಕೂಳನ್ನು ಕಸಿಯುವ, ಬದುಕನ್ನು ಅಸ್ಥಿರಗೊಳಿಸುವ, ಅಭಿವೃದ್ಧಿಯ ಕೆಂಧೂಳಿನಡಿಯಲ್ಲಿ ನಿಜದ ಬಣ್ಣವನ್ನೇ ಅರಿಯದೇ ಹೋಗಿ ಬಿಡುವ ಜಾಗತೀಕರಣ ಬೇಕೇ ?

ಈ ಅಂಕಣದ ಹಿಂದಿನ ಬರೆಹಗಳು:
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...