ಜಗತ್ತಿನಲ್ಲಿ ಮೊಟ್ಟ ಮೊದಲು ಕಥೆ ಹೇಗೆ ಹುಟ್ಟಿರಬಹುದು?

Date: 22-11-2020

Location: ಬೆಂಗಳೂರು


ಅಕ್ಷರದ ಕನ್ನಡೀಕರಣ ಅಕ್ಕರ. ಅದರಲ್ಲಿ ಅಕ್ಷರವೂ ಇದೆ. ಹಾಗೆಯೇ ಅಕ್ಕರೆ‌ ಕೂಡ. ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ, ದೃಶ್ಯಮಾಧ್ಯಮದ ಮೂಲಕ ಕನ್ನಡಿಗರಲ್ಲಿ ಹೊಸ ಕಂಪನ ಸೃಷ್ಟಿಸಿದವರು ನಿರ್ದೇಶಕ ಪಿ. ಶೇಷಾದ್ರಿ. ಸತತವಾಗಿ ಏಳು ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಹೆಗ್ಗಳಿಕೆ ಇವರದ್ದು. ತೆರೆ ಹಿಂದಿನ ಗಮ್ಮತ್ತನ್ನು ನೆನೆಯುತ್ತಾ, ಜಗತ್ತಿನ ಮೊಟ್ಟ ಮೊದಲು ಹುಟ್ಟಿದ ಕತೆಯನ್ನು ಕೂತೂಹಲದ ಕಣ್ಣಿನಲ್ಲಿ ಕಂಡ ಬಗೆಯನ್ನು ಅವರು ತಮ್ಮ ‘ಅಕ್ಕರದ ತೆರೆ’ ಅಂಕಣದಲ್ಲಿ ಅಕ್ಷರ ರೂಪವಾಗಿಸಿದ್ದು ಹೀಗೆ;

ಜಗತ್ತಿನಲ್ಲಿ ಮೊಟ್ಟ ಮೊದಲು ಕಥೆ ಹೇಗೆ ಹುಟ್ಟಿರಬಹುದು?

ಈ ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡಿದ್ದು `ಕತೆಗಾರ’ ಎಂಬ ದೂರದರ್ಶನ ಧಾರಾವಾಹಿ ಮಾಡಲು ಹೊರಟಾಗ. ಆ ಕಥಾಮಾಲಿಕೆಗೆ ಒಂದು ಪ್ರವೇಶ ಬರೆಯಬೇಕಿತ್ತು. ಆಗ ಹುಟ್ಟಿದ ಈ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಅದು ಸಿಗುವುದೂ ಸಾಧ್ಯವಿಲ್ಲ ಬಿಡಿ. ಎರಡು ಲಕ್ಷ ವರ್ಷಗಳ ಹಿಂದೆ ಮನುಷ್ಯ ಮಾತನಾಡುವುದನ್ನು ಕಲಿತಾಗಲೇ ಕತೆಯೂ ಹುಟ್ಟಿದೆ ಎಂದು ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳಬೇಕಷ್ಟೆ.

1996ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ `ಕತೆಗಾರ’ ಕನ್ನಡ ಸಾಹಿತ್ಯದ ಸಣ್ಣಕತೆಗಳ ಹುಟ್ಟು ಬೆಳವಣಿಗೆಯನ್ನು ದೃಶ್ಯರೂಪದಲ್ಲಿ ಹಿಡಿದಿಟ್ಟ ಅಪರೂಪದ ಧಾರಾವಾಹಿ. ಟಿ.ಎನ್. ಸೀತಾರಾಮ್, ನಾನು ಮತ್ತು ನಾಗೇಂದ್ರ ಶಾ ಒಟ್ಟಿಗೆ ಸೇರಿ ಮಾಡಿದ ವಿಶೇಷ ದೃಶ್ಯಮಾಲಿಕೆ ಅದು. ಆಗ ಪಟ್ಟಿ ಮಾಡಿಕೊಂಡ ಕೆಲವು ಅಂಶಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ.

ಕನ್ನಡದಲ್ಲಿ ಆಧುನಿಕ ಸಣ್ಣಕತೆಯ ಆರಂಭವನ್ನು ಪಂಜೆ ಮಂಗೇಶರಾಯರ ಬರಹದೊಂದಿಗೆ ಗುರುತಿಸಲಾಗುತ್ತದೆ. ಮುಂದೆ ಹೆಚ್ಚೂ ಕಡಿಮೆ ಒಂದೇ ವರ್ಷದಲ್ಲಿ ಎಂ.ಎನ್.ಕಾಮತ್, ಕೆರೂರ ವಾಸುದೇವಾಚಾರ್ಯ ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ ಇವರುಗಳು ಸಣ್ಣಕತೆಗಳನ್ನು ಬರೆದು ಆ ಪ್ರಾಕಾರಕ್ಕೆ ಕೊಡುಗೆ ನೀಡಿದರು. ಅದಕ್ಕೂ ಮೊದಲು ಒಂದು ಸಾವಿರದ ಒಂದು ನೂರು ವರ್ಷಗಳ ಹಿಂದೆ ಶಿವಕೋಟ್ಯಾಚಾರ್ಯರ ಧಾರ್ಮಿಕ ಕಥೆಗಳ ಸಂಕಲನ `ವಡ್ಡಾರಾಧನೆ’ಯನ್ನು ಕನ್ನಡದ ಮೊದಲ ಸಣ್ಣ ಕಥಾಗುಚ್ಛ ಎಂದು ವಿಶ್ಲೇಷಿಸಲಾಗಿದೆ. ಇದರ ಆಧಾರದ ಮೇಲೆ ನಾವು ಕನ್ನಡದ ಕತೆಗಾರನ ಇತಿಹಾಸವನ್ನು `ಸುಕುಮಾರಸ್ವಾಮಿ ಚರಿತೆ’ಯಿಂದ ದಾಖಲಿಸಿದೆವು. ಅದರಲ್ಲಿ ಪ್ರಾರಂಭದ ಒಂದು ಪ್ರಸಂಗ ಹೀಗಿದೆ:

ಕೌಶಾಂಬಿ ಎಂಬ ಪಟ್ಟಣವನ್ನು ಅತಿಬಳನೆಂಬ ರಾಜ ಆಳುತ್ತಿದ್ದ. ಆತನ ಮಂತ್ರಿ ಸೋಮಶರ್ಮ. ಅವನ ಪತ್ನಿ ಕಾಶ್ಯಪಿ. ಅವರಿಗೆ ಅಗ್ನಿಭೂತಿ ಮತ್ತು ವಾಯುಭೂತಿ ಎಂಬ ಇಬ್ಬರು ಮಕ್ಕಳು. ಹೆತ್ತವರ ಮಾತನ್ನು ಕೇಳದೆ, ವೇದ ಶಾಸ್ತ್ರಗಳ ಅಧ್ಯಯನ ಮಾಡದೆ ಇಬ್ಬರೂ ಅಡ್ಡಹಾದಿ ಹಿಡಿಯುತ್ತಾರೆ. ಕಾಲಾನಂತರದಲ್ಲಿ ಮಂತ್ರಿ ಸೋಮಶರ್ಮ ಮರಣ ಹೊಂದುತ್ತಾನೆ. ಅವನ ಮಕ್ಕಳಿಗೆ ಅರಮನೆಯಲ್ಲಿ ಕೆಲಸ ಕೊಡಲು ರಾಜ ಇಬ್ಬರನ್ನೂ ತನ್ನಲ್ಲಿಗೆ ಕರೆಸಿಕೊಳ್ಳುತ್ತಾನೆ. ಇವರನ್ನು ಪರೀಕ್ಷೆಗೆ ಒಡ್ಡಿದಾಗ ಇವರು ವಿದ್ಯಾವಂತರಲ್ಲ, ಸೋಮಾರಿಗಳು ಹಾಗೂ ಉಂಡಾಡಿಗಳು ಎಂಬ ಅರಿವಾಗಿ ಸೋಮಶರ್ಮನ ಮರಣಾ ನಂತರ ಮಂತ್ರಿ ಪದವಿಯನ್ನು ಯೋಗ್ಯತಾ ಆಧಾರದ ಮೇಲೆ ರಾಜನು ಅವರ ದಾಯಾದಿಗೆ ಕೊಡುತ್ತಾನೆ. ಇದರಿಂದ ಅಪಮಾನಗೊಂಡ ಇಬ್ಬರೂ ತಮ್ಮ ತಾಯಿ ಕಾಶ್ಯಪಿಯ ಬಳಿ ಬಂದು ದುಃಖಿಸಿ, ನಾವು ತಪ್ಪು ಮಾಡಿದೆವು. ಇನ್ನು ಮುಂದೆ ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ತೋರುವೆವು ಎಂದು ಶಪಥ ಮಾಡುತ್ತಾರೆ. ಕಾಶ್ಯಪಿಯು ಅವರಿಬ್ಬರನ್ನೂ ತನ್ನ ಸೋದರ ಮಗಧೆಯ ಮಂತ್ರಿ ಸೂರ್ಯಮಿತ್ರನಲ್ಲಿಗೆ ಕಳುಹಿಸುತ್ತಾಳೆ. ಆತ ಇಬ್ಬರನ್ನೂ ಸ್ವಾಗತಿಸುತ್ತಾನೆ. ಆದರೆ ತಾನು ಈ ಇಬ್ಬರ ಸೋದರಮಾವ ಎಂಬ ಸಂಬಂಧವನ್ನು ಮರೆಮಾಚುತ್ತಾನೆ. ತನ್ನ ಬಾಂಧವ್ಯ ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಬಹುದು ಎಂದು ಭಾವಿಸಿ ಬಂಧುತ್ವ ಬಚ್ಚಿಟ್ಟು ಅವರು ವಿದ್ಯಾರ್ಥಿಗಳಾಗಿ ತನ್ನ ಬಳಿ ಇರಲು ಅರ್ಹತಾ ನಿಯಮಗಳನ್ನೊಡ್ಡುವನು. ಓದು ಕಲಿಯಬೇಕೆಂಬ ಶ್ರದ್ಧಾಸಕ್ತಿಗಳನ್ನು ವಿದ್ಯಾರ್ಥಿಗಳು ಮೊಟ್ಟಮೊದಲು ಹೊಂದಿರಬೇಕು, ಭಿಕ್ಷಾಟನೆಯಿಂದ ತಮ್ಮ ಆಹಾರವನ್ನು ತಾವೇ ಗಳಿಸಿಕೊಳ್ಳಬೇಕು ಹಾಗೂ ವೇಷಭೂಷಣಗಳಿಗೆ ಗಮನ ಕೊಡದೆ ನಿಯಮಪೂರ್ವಕವಾಗಿ ಹಗಲು ರಾತ್ರಿಗಳೆಂದೆಣಿಸದೆ ಸೋಮಾರಿತನ ಬಿಟ್ಟು ಕಷ್ಟ ಪಟ್ಟು ವಿದ್ಯೆಯನ್ನು ಅರ್ಜಿಸಬೇಕು. ನಂತರದಲ್ಲಿ ಇವೆಲ್ಲವನ್ನೂ ಪಾಲಿಸುವ ಆ ಇಬ್ಬರೂ ಎಲ್ಲ ಸಕಲ ವಿದ್ಯೆಗಳನ್ನೂ ಕಲಿತು ಸಜ್ಜನರಾಗುತ್ತಾರೆ. ವಿದ್ಯಾರ್ಥಿಗಳಿಗೆ ಹೇಳಿರುವ ಈ ಲಕ್ಷಣಗಳು ಇಂದಿಗೂ ಪ್ರಸ್ತುತ ಎಂಬುದನ್ನು ನಾವು ಮನೆಗಾಣಬೇಕು. ಇದೇ ಈ ಕತೆಯ ಆಶಯ.

ಕತೆಗಾರ ಧಾರಾವಾಹಿಯನ್ನು ಪ್ರಸಾರ ಮಾಡಲು ದೂರದರ್ಶನ ನಮಗೆ ಕೊಡುತ್ತಿದ್ದದ್ದು ಕೇವಲ ಹದಿನೆಂಟು ಸಾವಿರ ರೂಪಾಯಿ. ಅಷ್ಟು ಹಣದಲ್ಲಿ ಅರ್ಧ ಗಂಟೆಯ ಅವಧಿಯ ಚಿತ್ರ ಮಾಡುವುದು ನಮಗೆ ಸವಾಲಾಗಿತ್ತು. ಆ ಸವಾಲನ್ನು ಸ್ವೀಕರಿಸಿ ಗಿರಿನಗರದ ಪಾರ್ಕಿನಲ್ಲಿ, ಹಲಸೂರಿನ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಿದೆವು.

ಕತೆ ಹೇಗೆ ಹುಟ್ಟಿತು?

ಮತ್ತೆ ಕತೆಯ ಹುಟ್ಟಿನ ಬಗ್ಗೆ ಚರ್ಚಿಸುವುದಾದರೆ, ಆದಿ ಮಾನವ ಬೇಟೆಯಾಡಿ ಹಿಂತಿರುಗಿದ ಮೇಲೆ ತನ್ನ ಬೇಟೆಯ ಅನುಭವಗಳನ್ನು ಇತರರಿಗೆ ಹೇಳಿಕೊಳ್ಳುತ್ತಿದ್ದನಂತೆ, ಹಾಗೆ ಹೇಳುತ್ತಿದ್ದುದೇ ಕಥೆಯಾಗಿ ರೂಪು ತಳೆಯಿತು ಎನ್ನುವ ಮಾತಿದೆ. ಇರಬಹುದು. ಆತ ತನ್ನ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುವಾಗ ಸ್ವಲ್ಪ ಕಲ್ಪನೆಯ ಅಂಶಗಳನ್ನು ಸೇರಿಸುತ್ತಿದ್ದಿರಬೇಕು. ಅವನು ಒಂದು ಇಲಿ ಕೊಂದಿದ್ದರೂ ಹುಲಿಯನ್ನೇ ಕೊಂದೆನೆಂದು ತನ್ನ ಓರಗೆಯವರ ಮುಂದೆ ಶೌರ್ಯ ಪರಾಕ್ರಮ ಸೂಚಿತ ಹಾವ ಭಾವಗಳೊಡನೆ ಹೇಳಿರಬಾರದೇಕೆ? ಹಾಗೆ ಹೇಳಿದ್ದರೆ ಅದು ನಿಜಕ್ಕೂ ಕಥೆಯ ಧಾಟಿ ಪಡೆದಿರಲೇಬೇಕಲ್ಲವೆ? ಅಂದರೆ ಕಥೆ ಅನ್ನುವುದು ಕಲ್ಪನೆ ಹಾಗೂ ಉತ್ಪ್ರೇಕ್ಷೆಯ ರೂಪು ತಳೆದಾಗಲೇ ಆಕರ್ಷಕವಾಗುವುದೇ? ಆದಿಮಾನವನ ಕಾಲದಲ್ಲಿ ಅಕ್ಷರಗಳಿರಲಿಲ್ಲ, ಮುದ್ರಣವಿರಲಿಲ್ಲ. ಅವನು ಕಥೆ ಹೇಳುತ್ತಿದ್ದ. ಅವನ ಸಂಜಾತರಾದ ನಾವು ಕಥೆ ಹೇಳುವುದಿಲ್ಲ, ಬರೆಯುತ್ತೇವೆ. ಬರೆದ ಕಥೆ ಒಂದು ಉತ್ತಮವಾದ ಕಲಾಕೃತಿಯಾಗಬೇಕೆಂದು ಬಯಸುತ್ತೇವೆ. ಯಾವುದೇ ಒಂದು ಕಲಾಕೃತಿಯನ್ನು ರಚಿಸಲು ಸೃಜನಶೀಲತೆ ಬೇಕು. ಹಾಗಾದರೆ ಈ ಸೃಜನಶೀಲತೆ ಎಂದರೆ ಏನು?

ಸೃಜನಶೀಲತೆ ಎಂದರೆ ಇತರರಿಗಿಂತ ಭಿನ್ನವಾಗಿ ಆಲೋಚಿಸುವ, ಅನ್ವೇಷಿಸುವ ಮತ್ತು ಶೋಧಿಸುವ ಕ್ರಿಯೆ ಅನ್ನಬಹುದು. ಬದುಕಿನ ಬಗೆಗೆ ಅದಮ್ಯ ಪ್ರೀತಿ, ಕುತೂಹಲ, ಸಹಜೀವಿಗಳಗೆ ಬಗ್ಗೆ ಆಸಕ್ತಿ, ಮೌಲ್ಯಗಳ ಶೋಧನೆ ಇಲ್ಲದೆ ಯಾರೂ ಬರೆಯಲು ಸಾಧ್ಯವಿಲ್ಲ. ಜೊತೆಗೆ ಒಳನೋಟವೂ ಅಷ್ಟೇ ಮುಖ್ಯ.

ಚಿತ್ರಕಲಾವಿದನಿಗೆ-ಬಣ್ಣ, ಕುಂಚ, ಕ್ಯಾನ್ವಾಸ್. ಸಂಗೀತಗಾರನಿಗೆ- ಸ್ವರ, ರಾಗ, ಧ್ವನಿ. ಶಿಲ್ಪಿಗೆ-ಕಲ್ಲು, ಮರ, ಕಟ್ಟಿಗೆ ಇರುವ ಹಾಗೆ ಕಥೆಗಾರನಿಗೆ ಭಾಷೆ ಒಂದು ಮೂಲಸಾಧನ. ಯಾವುದೇ ಒಂದು ಕಥೆ ಆಕಾರ ತಾಳುವುದು ಭಾಷೆಯ ಮೂಲಕ. ಒಂದು ಕಥೆಯ ವಿವರಗಳು, ಧ್ವನಿಗಳು, ಆಶಯಗಳು ಕಣ್ಣಿಗೆ ಕಟ್ಟುವಂತೆ ಮಾಡಲು ಭಾಷೆಯ ಬಳಕೆ ಸಹಾಯಕವಾಗುತ್ತದೆ. ಭಾಷೆಯ ನಂತರ ಮುಖ್ಯ ಅಂಶವೆಂದರೆ ನಿರೂಪಣೆ. ಒಂದು ಕಥೆಯ ಎಲ್ಲ ವಾಕ್ಯಗಳೂ ಪರಸ್ಪರ ಹೇಗೆ ಸಂಬಂಧ ಪಡೆದಿರುತ್ತವೆ ಎಂಬುದನ್ನೇ ಆ ಕಥೆಯ ಸಾವಯುವ ಶಿಲ್ಪ ಹಾಗೂ ಅಂತಿಮ ಧ್ವನಿ ಅವಲಂಬಿಸಿರುತ್ತದೆ. ಒಂದು ಉತ್ತಮ ಕಥೆಯಲ್ಲಿ ಸಾವಯವ ಶಿಲ್ಪ ಮತ್ತು ಭಾವತೀವ್ರತೆ ಹೆಚ್ಚು ಮಹತ್ವದ ಅಂಶಗಳಾಗಿರುತ್ತವೆ.

ಆನಂತರ ನಾವು ಗಮನಿಸಬೇಕಾದ್ದುದು `ದೃಷ್ಟಿಕೋನ’. ಕಥೆಯೆಂದರೆ ಹಲವು ಪಾತ್ರಗಳು ಇರುವುದು ಸಹಜ. ಹೀಗಿರುವಾಗ ಕಥೆಗಾರ ಯಾವ ದೃಷ್ಟಿಕೋನದಿಂದ ಮೊದಲು ಪ್ರಾರಂಭ ಮಾಡಬೇಕು ಎನ್ನುವುದು ಮುಖ್ಯ. ಹಾಗೆಯೇ ಪ್ರತಿಯೊಬ್ಬ ಕಥೆಗಾರನಿಗೂ ಅವನದೇ ಆದ ಶೈಲಿಯೊಂದಿರುತ್ತದೆ. ಇದು ಮುಖ್ಯವಾಗಿ ಭಾಷೆಗೆ ಸಂಬಂಧಿಸಿದ್ದು, ಕಥೆಗಾರ ಉಪಯೋಗಿಸುವ ಶಬ್ದಗಳು, ಆ ಶಬ್ದಗಳು ವಾಕ್ಯವಾಗುವ ರೀತಿ, ವಾಕ್ಯವು ಹೊಮ್ಮಿಸುವ ನಾದ, ಲಯ ಇವೆಲ್ಲ ಶೈಲಿಯನ್ನೇ ಕುರಿತು ಹೇಳುತ್ತವೆ.

ಯಾವುದೇ ಅತ್ಯುತ್ತಮ ಕಥೆ ತನಗೆ ತಾನೇ ಸಾಂಕೇತಿಕವೂ ಆಗಿರುತ್ತದೆ. ಕಥೆಯಲ್ಲಿ ಸಂಕೇತವೆನ್ನುವುದು ಒಂದು ವಸ್ತು, ಸ್ಥಳ, ಕ್ರಿಯೆ ಅಥವಾ ಪಾತ್ರ ಇವು ಯಾವುದೂ ಆಗಿರಬಹುದು. ಈ ಸಂಕೇತ ಕತೆಯ ಉದ್ದೇಶವನ್ನು ಮೀರಿ ಎಷ್ಟು ಬಗೆಯ ಹೊಸ ಅರ್ಥಗಳನ್ನು ಹೊಮ್ಮಿಸುತ್ತದೆಯೋ ಅಷ್ಟೇ ಆ ಕಥೆ ಯಶಸ್ವಿಯಾಗಿದೆ ಎಂದು ಅರ್ಥ.

ಮುಂದಿನದು ಸಂವಿಧಾನ ಅಂದರೆ ಪ್ಲಾಟ್. ಅದು ಪರಸ್ಪರ ಸಂಬಂಧವುಳ್ಳ ಅನೇಕ ಘಟನೆ ಕ್ರಿಯೆಗಳ ಶ್ರೇಣಿ. ಕ್ರಿಯೆಯಲ್ಲಿ ಪಾತ್ರಗಳು ಭಾಗವಹಿಸುವುದರಿಂದ ಸಂವಿಧಾನವು ಪಾತ್ರ ಸೃಷ್ಟಿಯೊಡನೆ ಅನನ್ಯವಾಗಿ ತಾಳೆ ಹಾಕಿಕೊಂಡಿರುತ್ತದೆ.

(ಸಶೇಷ)

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...