ಜಲಾಲ್-ಅಲ್-ದಿನ್-ರೂಮಿಯ Forest and River - ಅಸ್ತಿತ್ವದ ವೈರುದ್ಧ್ಯಗಳು

Date: 18-08-2022

Location: ಬೆಂಗಳೂರು


ಅಸ್ತಿತ್ವಕ್ಕಾಗಿ ಹೋರಾಟ ಒಂದೆಡೆಯಾದರೆ ಅಸ್ತಿತ್ವವನ್ನೆ ನಿರಾಕರಿಸುವ, ಅದನ್ನು ಮೀರಿ ಯೋಚಿಸುವ ಮನಸುಗಳು ಇನ್ನೊಂದೆಡೆ. ಅಸ್ತಿತ್ವವನ್ನು ನಿರಾಕರಿಸುವುದೆಂದರೆ ಸುಲಭ ಸಾಧ್ಯವೇ? ಆದರೆ ಪ್ರತಿ ವ್ಯಕ್ತಿಯಲ್ಲಿಯೂ ಆಗಾಗ ಏಳುವ ಒಂದು ಪ್ರಶ್ನೆ ನನ್ನ ಅಸ್ತಿತ್ವ ಯಾಕಾಗಿ? ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ರೂಮಿ ಕವಿತೆಯೊಂದರ ಬಗ್ಗೆ ಚರ್ಚಿಸಿದ್ದಾರೆ.

ಖಲೀಲ ಗಿಬ್ರಾನ್ ಹೇಳುತ್ತಾರೆ:
“Everyman is two men
One is awake in the darkness
The other is asleep in the light”

ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ಅಸ್ತಿತ್ವಗಳು ಇರುತ್ತವೆ. ಒಂದು ಕತ್ತಲಿನಲ್ಲಿ ಜಾಗ್ರತ ಸ್ಥಿತಿಯಲ್ಲಿದ್ದರೆ ಇನ್ನೊಂದು ಬೆಳಕಿನಲ್ಲೂ ನಿದ್ರಿಸುತ್ತದೆ. ಈ ಮಾತು ವಿಚಿತ್ರ ಎನಿಸಬಹುದು. ಆದರೆ ನಮ್ಮೊಳಗನ್ನೂ ಒಂದಿಷ್ಟು ಆಳವಾಗಿ ಅವಲೋಕಿಸಿದರೆ ಈ ಮಾತು ಸತ್ಯವೆನಿಸುತ್ತದೆ. ದ್ವಿಮುಖ ವ್ಯಕ್ತಿತ್ವ, ದ್ವಂದ್ವ ನಿಲುವು, ಭ್ರಮಾಧೀನತೆ ಹೀಗೆ ಕರೆಯಿಸಿಕೊಳ್ಳುವಿಕೆಗೆ ಕಾರಣ ಇಂತಹ ಮನಃಸ್ಥಿತಿಯೇ ಆಗಿರುತ್ತದೆ. ಪ್ರತಿಯೊಬ್ಬ ವ್ಯಕಿಯೂ ತನ್ನ ಅಸ್ತಿತ್ವದ ಕುರಿತ ಇಂತಹ ಮಾನಸಿಕ ವಿಕಲ್ಪವನ್ನು ಮೆರೆದೇ ಮೆರೆಯುತ್ತಾನೆ.

ಒಮ್ಮೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳೋಣ. ನಾನ್ಯಾರು? ಎಲ್ಲಿಂದ ಬಂದೆ? ಹೇಗಿದ್ದೇನೆ?

ದೇಹ ಮತ್ತು ಆತ್ಮಗಳ ಸಮ್ಮಿಳನವೇ ನಾನು ಅಂತಾದರೆ ಒಂದು ಸ್ಥಾವರವಾಗಿಯೂ ಇನ್ನೊಂದು ಜಂಗಮವಾಗಿಯೂ ಜೊತೆಗೂಡಿದೆ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದರು ಶರಣರು. ಆದರೆ ಮನುಷ್ಯ ಇವೆರಡರ ಸಂಯೋಗವಾಗಿದ್ದಾನೆ. ಹಾಗಾದರೆ ಅಸ್ತಿತ್ವದ ಅಸ್ತಿತ್ವ ಸ್ಥಾವರವೋ? ಜಂಗಮವೋ? ಪ್ರಶ್ನೆ ಬಹುಶಃ ಎಲ್ಲರನ್ನೂ ಕಾಡುವಂಥದ್ದು.

ವ್ಯಕ್ತಿ ತನ್ನ ಬದುಕಿನ ಬಗ್ಗೆ ಮೂಡಿಸಿಕೊಳ್ಳುವ ಅತೃಪ್ತಿಯ ಸೆಲೆ ಅಸ್ತಿತ್ವದ ಬಿಕ್ಕಟ್ಟಿನ ಕುರಿತು ಚಿಂತಿಸುವಂತೆ ಮಾಡುತ್ತದೆ. ಹಾಗಾಗಿ ತನ್ನಲ್ಲಿರುವುದೆಲ್ಲ ಬಿಟ್ಟು ಇರದೇ ಇರುವೆಡೆಗೆ ಮನಸ್ಸು ಕುಣಿಯುತ್ತದೆ. ಮನುಷ್ಯನಿಗೆ ತನ್ನ ಅಸ್ತಿತ್ವದ ಕುರಿತ ಸೂಕ್ಷ್ಮ ಚಿಂತನೆಯಿದು. ಇಂತಹ ದ್ವಂದ್ವವನ್ನು ಕವಿ ಜಲಾಲ್-ಆಲ್-ದಿನ-ರೂಮಿ ತನ್ನ ಕವಿತೆ ‘Forest and River’ ಅದೆಷ್ಟು ಮನೋಜ್ಞವಾಗಿ ಕಟ್ಟಿಕೊಡುತ್ತಾನೆ.

‘I wish I were like you’
Said the forest
To the roaring river
Always travelling
Always sight seeing
Rushing towards the pure domain of the sea
The passionate, vigorous spirit of life
The liquid turquoise of light
With eternal flow”

ಭೂಮಿಯೊಳಗೆ ಬಂಧಿಸಲ್ಪಟ್ಟಂತೆ ಬೆಳೆದ ಮರ ನಿತ್ಯ ಹರಿಯುವ ನದಿಯನ್ನು ಕಂಡು ತಾನು ನದಿಯಾಗಬೇಕಿತ್ತು ಎಂದುಕೊಳ್ಳುತ್ತದೆ. ಸದಾ ಸಂಚರಿಸುತ್ತಾ, ಹೊಸಹೊಸ ಸ್ಥಳದರ್ಶನ ಪಡೆಯುತ್ತಾ ನಿತ್ಯ ಚಲನಶೀಲತೆಗೆ ಸಾಕ್ಷಿಯಾದ ನದಿ ಸಾಗರವನ್ನು ಸೇರಿ ಚೈತನ್ಯವೇ ತಾನಾಗುತ್ತದೆ. ಆದರೆ ತಾನು

“But what am I?
Only a captive
chained to the earth “

ಎಂದು ಗೋಳಾಡುತ್ತದೆ. ಒಂದೇ ಸ್ಥಳದಲ್ಲಿ ಕಟ್ಟಿಹಾಕಿದ ಬದುಕಿನಿಂದ ಪಲಾಯನ ಮಾಡುವ ಬಯಕೆ ಕಾಡಿಗೆ. ನಿಂತಲ್ಲೇ ಬೆಳೆದು, ನಿಂತಲ್ಲೇ ಅರಳಿ ಹೂಹಣ್ಣೂ ನೀಡಿ, ನಿಂತಲ್ಲೆ ನಮೆದು ಬಾಡಿ, ಅಲ್ಲೇ ಕೊನೆಯಾಗುತ್ತದೆ ಅದರ ಬಾಳು. ಇದು ಬದಲಾವಣೆ ಇಲ್ಲದ ಬದುಕು ಎಂದುಕೊಳ್ಳುತ್ತದೆ ಕಾಡಿನ ಮರ. ಸ್ಥಾವರ ಕಲ್ಪನೆಗೆ ಕಾಡಿನ ಮರ ಸಾಕ್ಷಿಯಾಗುತ್ತದೆ.

ಆದರೆ ಆ ನದಿಗಾದರೋ ಮರದಂತಾಗಲು ಆಸೆ. ಹಾಗಾಗೇ ಮರವನ್ನು ಅದು ಅರೆ ಪ್ರಜ್ಞೆಯಲ್ಲಿರುವುದಾಗಿ ವ್ಯಂಗ್ಯವಾಡುತ್ತದೆ.

“I wish I were you,
enjoying a seclusion
Of living emerald”

ನಿರಂತರವಾದ ಗದ್ದಲದ ಬದುಕಿನಿಂದ ರೋಸಿಹೋಗಿದೆ ನದಿ. ಮರದಂತೆ ಏಕಾಂಗಿತನದ ಆನಂದವನ್ನು ಸವಿಯುವ ಅದಮ್ಯ ಆಸೆ ಅದಕ್ಕೆ. ಆದರೆ ತನ್ನದು ಬರೀ ಓಟ ಓಟ ಓಟ, ತನ್ನದು ಬದುಕಿನಿಂದಲೇ ಪಲಾಯನ ಎನ್ನುತ್ತದೆ ನದಿ.

“Your destiny a new life every year
My life running away from myself
All the time
Running running running in bewilderment”

ಕಾಡಿನ ಮರಗಳಿಗಾದರೋ ಪ್ರತಿವರ್ಷ ಹೊಸ ಚಿಗುರು, ಹೊಸ ಬದುಕು, ವಸಂತದ ಸೊಬಗನ್ನು ಮೈತುಂಬಾ ಹೊತ್ತು ಮೆರೆಯುವ ಸೌಭಾಗ್ಯ. ಆದರೆ ತನ್ನದೋ ಶಾಂತಿ ನೆಮ್ಮದಿಯಿಲ್ಲದ, ಅರ್ಥವೇ ಇಲ್ಲದ ಈ ಓಟದ ಬದುಕಿನ ಬಗ್ಗೆ ತಾನೇ ಗೊಂದಲಗೊಂಡಿರುವುದಾಗಿ ನದಿ ಅಲವತ್ತುಕೊಳ್ಳುತ್ತದೆ. ತಾನು ಕಾಡಿನ ಮರವಾದರೂ ಆಗಿದ್ದರೆ ಎಂದುಕೊಳ್ಳುತ್ತದೆ.

ಹೀಗೆ ಕಾಡು ಮತ್ತು ನದಿ ತಮ್ಮಲ್ಲಿಲ್ಲದ ಜಡತ್ವವನ್ನು, ಚೈತನ್ಯವನ್ನು ಪರಸ್ಪರರಲ್ಲಿ ಕಂಡು ಆ ಸಾಮರ್ಥ್ಯ, ಗುಣ ತನ್ನದಾಗಬಾರದಿತ್ತೇ ಎಂದು ಹಪಹಪಿಸುತ್ತಿವೆ. ‘ದೂರದ ಬೆಟ್ಟ ನುಣ್ಣಗೆ’ ಎನ್ನುವಂತೆ ಇತರರಲ್ಲಿಯ ಸಂಗತಿಗಳೇ ಆಕರ್ಷಕವಾಗಿ ನಮ್ಮಲ್ಲಿರುವುದನ್ನು ನಿರ್ಲಕ್ಷಿಸುತ್ತಾ ಬದುಕುವ ಗುಣವಿದು.

ಟ್ಯಾಗೋರರ ‘The cloud and the Bird’ ಪದ್ಯದ ಸಾಲು ಇದೇ ಅರ್ಥ ಧ್ವನಿಸುತ್ತದೆ.

“The bird wishes it were cloud,
the cloud wishes it were a bird”

ಹೌದಲ್ಲವೇ? ಇದು ಮನುಷ್ಯನ ಸ್ವಭಾವವನ್ನೆ ಪ್ರತಿಫಲಿಸುತ್ತದೆ ಅಲ್ಲವೇ? ನಿರ್ಜೀವ ವಸ್ತುಗಳಿಗೆ ಮನುಷ್ಯನ ಗುಣವನ್ನು ಆರೋಪಿಸಿ ವಿಡಂಬಿಸುವ ಈ ಪರಿ ಬಹು ಮಾರ್ಮಿಕವಾಗಿ ಕಾಣುತ್ತವೆ.ಆದರೂ

‘No one can ever know
What other feels’

ಹಾಗಾಗಿ ಕವಿತೆಯ ಕೊನೆಯಲ್ಲಿ ಈ ಕಾಡು ಮತ್ತು ನದಿಯ ಸಂಭಾಷಣೆ ಕೇಳಿಸಿಕೊಂಡ ಮನುಷ್ಯ ಗೊಂದಲಕ್ಕೆ ಬೀಳುತ್ತಾನೆ.

Who am I? A river? A forest?
Or both?
Forest and river
River and forest?

ಹಾಗಾದರೆ ನಾನ್ಯಾರು? ನದಿಯೋ? ಕಾಡೋ? ನಾನು ನಿಜವಾಗಿ ಇರುವೆನೋ? ಅಥವಾ ನಾನೊಂದು ನೆರಳೋ? ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಜಡ ಮತ್ತು ಚೈತನ್ಯದ ಈ ರೂಪಕಗಳ ಮೂಲಕ ಮನುಷ್ಯನ ಅಸ್ತಿತ್ವದ ಬುಡವನ್ನೆ ರೂಮಿ ಜಾಲಾಡುತ್ತಾನೆ.

“ಅಸ್ತಿತ್ವದ ಬಿಕ್ಕಟ್ಟು” ಎಂಬ ಪದ ಅದೆಷ್ಟು ಮನಸ್ಸುಗಳನ್ನು ಕಂಗೆಡಿಸಿದೆಯೋ? ಪದ ರಚನೆಗೂ ಮುನ್ನವೇ ಇದ್ದ ಈ ಮಾನಸಿಕ ವಿಕಲ್ಪ ಸ್ಥಿತಿ ಮನಃಶಾಸ್ತ್ರೀಯ ಹಿನ್ನೆಲೆಯಲ್ಲಿ ವಿವೇಚಿಸಲ್ಪಡುವಂಥದ್ದು. ಭಿನ್ನ ಭಿನ್ನ ರೂಪದಲ್ಲಿ ವಿಶ್ಲೇಷಿಸಲ್ಪಡುವಂಥದ್ದು. ಅಸ್ತಿತ್ವಕ್ಕಾಗಿ ಹೋರಾಟ ಒಂದೆಡೆಯಾದರೆ ಅಸ್ತಿತ್ವವನ್ನೆ ನಿರಾಕರಿಸುವ, ಅದನ್ನು ಮೀರಿ ಯೋಚಿಸುವ ಮನಸುಗಳು ಇನ್ನೊಂದೆಡೆ. ಅಸ್ತಿತ್ವವನ್ನು ನಿರಾಕರಿಸುವುದೆಂದರೆ ಸುಲಭ ಸಾಧ್ಯವೇ? ಆದರೆ ಪ್ರತಿ ವ್ಯಕ್ತಿಯಲ್ಲಿಯೂ ಆಗಾಗ ಏಳುವ ಒಂದು ಪ್ರಶ್ನೆ ನನ್ನ ಅಸ್ತಿತ್ವ ಯಾಕಾಗಿ? ನಾನಿಲ್ಲದೆಯೂ ಎಲ್ಲವೂ ಇರುವುದೆಂದಾದರೆ ನಾನ್ಯಾರು? ಹೇಗೆ ಬಂದೆ? ಯಾಕಾಗಿ ಈ ದೇಹದ ಹಂಗಲ್ಲಿ ಕೊಳೆಯುತ್ತಿರುವೆ? ಹೀಗೆ ಯೋಚಿಸುತ್ತಲೇ ಜೀವನಕ್ಕೆ ಯಾವ ಅರ್ಥವಿದೆ ಎಂಬ ನಿಗೂಢ ಸತ್ಯದ ಕಡೆ ಆಗಾಗ ಪ್ರತಿಯೊಬ್ಬ ಪ್ರಜ್ಞಾವಂತನ

ಮನಸ್ಸು ತುಡಿಯುತ್ತಿರುತ್ತದೆ. ನಿರ್ದಿಷ್ಟ ಗುರಿ, ಉದ್ದೇಶವನ್ನು ಬದುಕಿನಲ್ಲಿ ಹೊಂದಿಯೂ ಕಾಡುವ ಪ್ರಶ್ನೆ ಇದು. ಅದೇ ನಾನ್ಯಾರು???

-ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...