ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.

Date: 18-11-2022

Location: ಬೆಂಗಳೂರು


“ಯುವಕರ ಮನಸ್ಸು ಯೌವನದ ಮದದಲ್ಲಿ, ಶಕ್ತಿಯ ಗರ್ವದಲ್ಲಿ ಇದ್ದು ಅದಕ್ಕೆಲ್ಲಾ ಹಣ ಮತ್ತು ಅಧಿಕಾರದ ಬಲ ಸಿಕ್ಕರಂತೂ ಅವರಿಗೆ ನಿಂತ ನೆಲ ಕಾಣಿಸದು. ಇದಕ್ಕೆ ಅಪವಾದಗಳು ಇರಬಹುದಾದರೂ ಅದು ಕಡಿಮೆ. ಹಾಗಾಗಿ ವಯಸ್ಸಾದವರನ್ನು ಅವರ ಸಾಮರ್ಥ್ಯವನ್ನು ಕಡೆಗಣಿಸುತ್ತಾರೆ. ಹುಂಬತನದಲ್ಲಿ ಅನುಭವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಾರೆ” ಎನ್ನುತ್ತಾರೆ ಲೇಖಕಿ ನಾಗರೇಖ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ‘ಫಾದರ್ ವಿಲಿಯಮ್’ ಕವಿತೆಯ ಕುರಿತು ವಿಶ್ಲೇಷಿಸಿದ್ದಾರೆ.

ಮೊನ್ನೆ ತುಳಸಿ ಪೂಜೆಗೆ ಸಾಮಾನು ತರಲು ಮಾರ್ಕೆಟ್ಟಿಗೆ ಹೋಗಿದ್ದೆ. ಆಗಷ್ಟೇ ಎದ್ದ ಮೀಸೆಯನ್ನು ಹತ್ತಾರು ಬಾರಿ ಕೆತ್ತು ಎರಡೇ ವರ್ಷಗಳಲ್ಲಿ ಏನೇನೋ ಮಾಡಿ ದಪ್ಪ ಮೀಸೆಯಾಗುವಂತೆ ಮಾಡಿಕೊಂಡು ಪೊಗರಿನ ಕುದುರೆ ಏರಿ ಬಂದ ಇಬ್ಬರು ಇಪ್ಪತ್ತರ ಆಸುಪಾಸಿನ ಬೈಸಿಕಲ್ ಸವಾರರು ದಾರಿಗೆ ಅಡ್ಡ ಬಂದ ಅರವತ್ತರ ಸಮೀಪದ ಅರೆ ಮುಪ್ಪಿನ ವ್ಯಕ್ತಿಗೆ ಮನಸ್ಸಿಗೆ ಬಂದಂತೆ ಬೈದು ಹೋದರು. ‘ಈ ಮುದುಕನಿಗೇಕೆ ಪೇಟೆ ತಿರುಗುವ ಹುಚ್ಚು. ಮನೆಯಲ್ಲಿ ಬಿದ್ದುಕೊಳ್ಳೋದನ್ನು ಬಿಟ್ಟು, ಸಂತೆ ಮಾಡೋಕೆ ಬಂದಾನೆ. ನಮ್ಮಂತಹವಿಗೆಲ್ಲಾ ಸುಮ್ಮನೇ ತೊಂದರೆ’, ಅಂತಾ ಒಬ್ಬ ಹೇಳ್ತಿದ್ರೆ, ಇನ್ನೊಬ್ಬ ‘ನಮ್ಮ ಪಪ್ಪಾನೂ ಹಾಗೇ ಗುರು.. ಬೇಡ ಬೇಡ ಅಂದ್ರೂ ತಾವೇ ಎಲ್ಲ ಕಡೆ ಹೋಗೋದು. ನಂಗೆ ಹೋಗೋಕೆ ಬಿಡೋದೆ ಇಲ್ಲ. ವಯಸ್ಸಾಯ್ತು ನಿಮಗೆ ಬೇಡ ಅಂತಾ ಹೇಳಿದ್ರು, ನಿಂಗೇನೋ ಗೊತ್ತಾಗಲ್ಲ. ಅನುಭವ ಇಲ್ಲ ಅಂತಾ ನಂಗೇ ಬೈತಾರೆ.. ಮತ್ತೇ ಈ ಮುದುಕನ ಹಾಗೇ ನಮ್ಮಪ್ಪನೂ ಬೈಸ್ಕೊಂಡು ಬರ‍್ತಿರ್ತಾರೆ” ಎಂದು ಅಪಹಾಸ್ಯದ ರೀತಿಯಲ್ಲಿ ತಂದೆಯ ಮೇಲಿನ ಕೋಪವನ್ನು ಕಾರಿಕೊಂಡ. ಆ ಕ್ಷಣಕ್ಕೆ ನನಗೆ ನೆನಪಾಗಿತ್ತು ಹಿಂದೊಮ್ಮೆ ನಾನು ಪಾಠ ಮಾಡಿದ್ದ “ಫಾದರ್ ವಿಲಿಯಮ್” ಕವಿತೆ.

ಈ ಕವಿತೆಯನ್ನು ಬಹುತೇಕರು ಓದಿರಲೇಬೇಕು. ನವೆಂಬರ್ 14 ಮಕ್ಕಳ ದಿನಾಚರಣೆಯೂ ಹತ್ತಿರ ಬರುತ್ತಿದೆ. ಅದೇ ಕಾರಣವೇನೋ ಲೇವಿಸ್ ಕ್ಯಾರಲ್ ಬರೆದ ಈ ಕವಿತೆ ಈ ಸಂದರ್ಭದಲ್ಲಿ ಅದು ಹೇಗೋ ನೆನಪಾಯಿತು. ಕ್ಯಾರಲ್ ಸುಮಾರು 26 ವರ್ಷಗಳ ಕಾಲ ಗಣಿತದ ಉಪನ್ಯಾಸಕನಾಗಿ ಕೆಲಸ ಮಾಡಿದ್ದರು. ಪ್ರಾಯಕ್ಕೆ ಬರುತ್ತಿರುವ ಹುಡುಗರನ್ನು ದಿನವೂ ಅಭ್ಯಸಿಸಿ ಅವರ ನಿಲುವುಗಳನ್ನು ಕ್ಷಣಕ್ಷಣವೂ ಬದಲಾಗುವ ಅವರ ರೀತಿ ನೀತಿಗಳನ್ನು ಅವರ ಮೊಂಡುತನವನ್ನು, ಹಠಮಾರಿ ಸ್ವಭಾವವನ್ನು, ಅಷ್ಟೇ ಏಕೆ ಹುಚ್ಚು ಆವೇಶಗಳು, ಹಿರಿಯರ ಅನುಭವಗಳಿಗೆ ನಯ್ಯಾಪೈಸೆ ಬೆಲೆಕೊಡದೆ ತಾನೇ ಸರಿ ಎಂಬಂತೆ ವರ್ತಿಸುವುದು ಇವನ್ನೆಲ್ಲಾ ಉಪನ್ಯಾಸಕರಾಗಿ ನೋಡುತ್ತಾ ಆ ವಯಸ್ಸಿನ ವಿಚಾರಗಳ ಕುರಿತಾಗಿಯೇ ಕೆಲವು ಪುಸ್ತಕಗಳನ್ನು ಬರೆದರು. ಪ್ರಸಿದ್ಧವಾದ ‘Through the looking Grass' ಹಾಗೂ ತನ್ನ ಪುಟ್ಟ ಗೆಳತಿ ಅಲೈಸ್ ಲಿಡ್ಡೆಲ್‌ಳನ್ನು ಉದ್ದೇಶಿಸಿ ಬರೆದ ‘Alice's Adventures in wonderland' ಹೆಚ್ಚು ಜನಪ್ರಿಯವಾಗಿವೆ.

ಯುವಕರ ಮನಸ್ಸು ಯೌವನದ ಮದದಲ್ಲಿ, ಶಕ್ತಿಯ ಗರ್ವದಲ್ಲಿ ಇದ್ದು ಅದಕ್ಕೆಲ್ಲಾ ಹಣ ಮತ್ತು ಅಧಿಕಾರದ ಬಲ ಸಿಕ್ಕರಂತೂ ಅವರಿಗೆ ನಿಂತ ನೆಲ ಕಾಣಿಸದು. ಇದಕ್ಕೆ ಅಪವಾದಗಳು ಇರಬಹುದಾದರೂ ಅದು ಕಡಿಮೆ. ಹಾಗಾಗಿ ವಯಸ್ಸಾದವರನ್ನು ಅವರ ಸಾಮರ್ಥ್ಯವನ್ನು ಕಡೆಗಣಿಸುತ್ತಾರೆ. ಹುಂಬತನದಲ್ಲಿ ಅನುಭವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಾರೆ. ಇದು ತಾರುಣ್ಯದ ಪ್ರಭಾವದಿಂದ ಹುಟ್ಟಿಕೊಂಡ ಮದ. ಹೊಸ ವಿಚಾರಗಳು ಹೊಸ ತಲೆಮಾರಿನ ಜನರಲ್ಲಿ ಇರುವುದಾದರೂ ಪಕ್ವತೆಯ ಕೊರತೆ ಇರುತ್ತದೆ. ಅದೇ ಹಳೆಯ ತಲೆಮಾರಿನ ಜನ ಕೆಲವೊಮ್ಮೆ ಅಸಹನೆಯನ್ನೆ ಉಸಿರಾಡುತ್ತಿರುತ್ತಾರೆ. ಕಿರಿಯರ ಅಭಿಪ್ರಾಯವನ್ನು ಗೌರವಿಸುವ, ಪ್ರಯತ್ನ ಮಾಡುವುದಿಲ್ಲ. ಕಿರಿಯರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಬದಲಿಗೆ ಅಸಡ್ಡಾಳ ವರ್ತನೆಯನ್ನು ತೋರಿಸಿ ಕಿರಿಯರಿಂದ ದೂರ ಸರಿಯುತ್ತಾರೆ. ಜನರೇಶನ್ ಗ್ಯಾಪ ಕಾರಣದಿಂದ ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅದನ್ನು ಮನಗಾಣಿಸುತ್ತದೆ ‘ಫಾದರ್ ವಿಲಿಯಮ್ ‘ಕವಿತೆ.

`You are old, Father William, `the young man said,
And your hair has become very white
And yet you incessantly stand an your head
Do you think, at your age, it is right?

ಇದೊಂದು ಸಹಜವಾದ ಕಾಳಜಿಪರವಾದ ದನಿಯೆಂದು ಹೊರನೋಟಕ್ಕೆ ಅನ್ನಿಸಿದರೂ ಒಳಾರ್ಥದಲ್ಲಿ ತಂದೆಯ ಅಸಮರ್ಥತೆಯನ್ನು ಮಗನಾದವ ಎತ್ತಿ ಹೇಳುತ್ತಿದ್ದಾನೆ. ಮುದುಕನಾದ ತಂದೆಯ ವರಸೆ ಮಗನಿಗೆ ಇಷ್ಟವಾಗುತ್ತಿಲ್ಲ. ತಂದೆಗೆ ವಯಸ್ಸಾಗಿದೆ. ತಲೆಗೂದಲೂ ಬಿಳಿಯಾಗಿದೆ. ಇಂತಹ ವಯಸ್ಸಿನಲ್ಲಿ ಚಿಕ್ಕ ಮಕ್ಕಳಂತೆ ತಲೆಕೆಳಗು ಮಾಡಿ ಕಸರತ್ತು ಮಾಡುವುದು ಸರಿಯೇ? ವಯಸ್ಸಿಗೆ ತಕ್ಕಂತೆ ವರ್ತಸಬೇಕಲ್ಲವೇ? ಎಂಬ ಪ್ರಶ್ನೆ ಮಗನದು.

ತಂದೆಯ ಯೋಚನೆಯ ಧಾಟಿ ಭಿನ್ನವಾಗಿದೆ. ಪ್ರಾಯದಲ್ಲಿ ಮಾಡಲಾಗದೇ ಇರುವುದನ್ನು ಈಗಲಾದರೂ ಮಾಡಬೇಕೆನ್ನುವ ಇರಾದೆ ತಂದೆಯದು. ಅಷ್ಟೇ ಅಲ್ಲ ಅದವನಿಗೆ ಕಷ್ಟಸಾಧ್ಯ ಎನಿಸಿಲ್ಲ ಕೂಡಾ.
‘In my youth, Father william replied to his son
I feared it might injure the brain
But now that I'm perfectly sure i have none
Why, I do it again and again.'
ಯೌವನದಲ್ಲಿ ಈ ಕಸರತ್ತು ಮಾಡಿದರೆ ಮೆದುಳಿಗೆ ಘಾಸಿಯಾಗಬಹುದು ಎಂದುಕೊಂಡಿದ್ದ ತಂದೆಗೆ ತನ್ನ ತಲೆಯಲ್ಲಿ ಮೆದುಳೇ ಇಲ್ಲವೆಂದು ಖಾತ್ರಿಯಾದದ್ದು ಈ ಜಗತ್ತಿನೊಂದಿಗಿನ ಅನುಭವಗಳು ಸಿದ್ದಿಸಿದ ಮೇಲೆ. ಹಾಗಾಗಿ ಆ ಕಸರತ್ತನ್ನು ಪದೇ ಪದೇ ಮಾಡಬೇಕೆನ್ನಿಸುವ ತನ್ನ ಇಚ್ಛೆಯನ್ನು ಹೇಳುತ್ತಾನೆ. ತಂದೆಗೆ ಮಗನ ಪ್ರಶ್ನೆಗಳು ಮೂರ್ಖತನದೆನಿಸುತ್ತವೆ. ಮಗನಲ್ಲಿಯ ಅಪೂರ್ಣ ವ್ಯಕ್ತಿತ್ವವನ್ನು, ಮನುಷ್ಯನ ಒಳ ಸಾಮರ್ಥ್ಯವನ್ನು ಹೊರ ಚಹರೆಯ ಮೂಲಕ ಅಳೆಯುವ ಅನನುಭವಿ ನಿಲುವನ್ನು ಗ್ರಹಿಸಿದ ತಂದೆ ಹಾಸ್ಯಮಯವಾಗಿ ವಿಡಂಬನಾತ್ಮಕವಾಗಿ ಉತ್ತರ ನೀಡುತ್ತಾನೆ.

ಮಗ ಮತ್ತೇ ಕೇಳುತ್ತಾನೆ. ತಂದೆಯ ಏರುತ್ತಿರುವ ತೂಕದೊಂದಿಗೆ ಹೆಚ್ಚುತ್ತಿರುವ ವಯಸ್ಸು, ತಲೆಯನ್ನು ನೆಲಕ್ಕೂರಿ ದೇಹವನ್ನು ಮೇಲೆತ್ತಿ ಮಾಡುವ ಈ ಕಸರತ್ತು ಈ ಪ್ರಾಯದಲ್ಲಿ ಸರಿಯಲ್ಲವೆಂದೂ, ಮುಪ್ಪಿನ ಕಾರಣ ಹಲ್ಲಿನ ವಸಡುಗಳೆಲ್ಲ ಸಡಿಲವಾಗಿದ್ದರೂ ಬಾತಿನ ಕೊಕ್ಕು, ಮೂಳೆಯನ್ನು ಬಿಡದೆ ಎಲ್ಲವನ್ನೂ ತಿಂದು ತೇಗುವುದು ಒಳಿತಲ್ಲವೆಂಬುದು ಮಗನ ಅಂಬೋಣ. ಆದರೂ ತಂದೆಯಲ್ಲಿನ ಈ ಸಾಮರ್ಥ್ಯ ಆತನನ್ನು ಆಶ್ಚರ್ಯಗೊಳಿಸುತ್ತಿದೆ. ಹಾಗಾಗಿ ಅದು ಹೇಗೇ ಸಾಧ್ಯ?ಎಂಬ ಚಿಂತನೆಯನ್ನೂ ಮೂಡಿಸುತ್ತದೆ.

ಭಾರ ಶರೀರದ ದೇಹಿ ಅಪಾಯಕಾರಿಯಾದ ಚಟುವಟಿಕೆಗಳ ಮಾಡುವುದು, ಮುಪ್ಪಾದ ವ್ಯಕ್ತಿ ತಿನ್ನಲಾಗದ ಮಾಂಸ ಮೂಳೆಗಳನ್ನು ತಿನ್ನುವುದು ಯೋಗ್ಯವಲ್ಲ ಎಂಬುದು ತರುಣನ ವಾದ. ಇಂತಹದ್ದನ್ನು ಯುವಕರು ಮಾತ್ರ ಮಾಡಬಲ್ಲರೆಂಬ ತೀರ್ಮಾನ. ಕವಿತೆಯ ಉದ್ದಕ್ಕೂ ಹಲವು ಬಾರಿ ‘ನಿನಗೆ ವಯಸ್ಸಾಯಿತು!!’ ಎಂದು ಹಂಗಿಸುವಂತೆ ಬಳಸುವ ಮಾತು ಪುನರಾವರ್ತನೆಯಾಗುವುದು ಆ ಪ್ರಾಯದ ವ್ಯಕ್ತಿಯನ್ನು ಹತಾಶೆಗೆ ತಳ್ಳುವ, ಆತನ ಅಂತರ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನದಂತೆಯೂ ಕಾಣುತ್ತದೆ.

ಆದರೆ ತಂದೆ ಬಹು ಹಾಸ್ಯಮಯವಾಗಿ ಈ ಮಾತುಗಳಿಗೆ ಉತ್ತರಿಸುತ್ತಾನೆ. ತನ್ನ ಕೈಕಾಲುಗಳು ಬಹಳ ಹಗುರ ಹಾಗೂ ಸಡಿಲ ಆಗಿರಲು ಕಾರಣ ತಾನು ಬಳಸುವ ಕೇವಲ ಒಂದು ಶಿಲ್ಲಿಂಗ್ ಬೆಲೆಬಾಳುವ ಕಡಿಮೆ ದರ್ಜೆಯ ಮುಲಾಮು ಎನ್ನುತ್ತಾನೆ. ಎರಡು ಬಾಕ್ಸಗಳನ್ನು ತರುಣ ಮಗನಿಗೆ ಮಾರುವ ಪ್ರಯತ್ನ ಮಾಡುತ್ತಾನೆ.ಅಷ್ಟೇ ಅಲ್ಲ ತನ್ನ ವಸಡುಗಳ ಗಟ್ಟಿತನಕ್ಕೆ ತಾನು ಪ್ರಾಯದಲ್ಲಿ ಮಡದಿಯೊಂದಿಗೆ ಮಾಡಿದ ಮಾತಿನ ಕಾಳಗವೇ ಕಾರಣ ಎನ್ನುತ್ತಾನೆ. ಅವಳೊಂದಿಗೆ ಮಾತಿನ ಗುದ್ದಾಟಕ್ಕಿಳಿದು ಜಯ ಪಡೆದಿದ್ದೇ, ಈಗಲೂ ಹಲ್ಲುಗಳು ಅಂದಿನ ಗಟ್ಟಿತನ ಉಳಿಸಿಕೊಳ್ಳಲು ಕಾರಣ ಎನ್ನುತ್ತಾನೆ.

ಹಿರಿಯರು ದುಂದುವೆಚ್ಚವನ್ನು ವಿರೋಧಿಸುತ್ತಾರೆ. ಹಣವನ್ನು ಉಳಿಸಲು ನೋಡುತ್ತಾರೆ. ಇನ್ನು ಬಹುತೇಕ ಹಿರಿಯರು ಜೀವನದ ಹಾದಿಯನ್ನು ಕಷ್ಟಗಳ ಸರಮಾಲೆಯನ್ನೆ ಎದುರಿಸಿ ಸವೆಸಿರುತ್ತಾರೆ. ಹಾಗಾಗಿ ಆ ಗಟ್ಟಿತನ ಸಹಜವಾಗಿರುತ್ತದೆ. ಎಳೆಯರಿಗೆ ಅಸಂಬದ್ಧ ಎನ್ನಿಸುವುದು ಅವರಿಗೆ ಸಹಜವೆನಿಸುತ್ತದೆ. ಅನುಭವಗಳೂ ಅವರನ್ನು ಗಟ್ಟಿಗೊಳಿಸುತ್ತವೆ.
‘You are old,' said the youth, one would hardly suppose
That your eye was as steady as ever;
Yet you balanced an eel on the end of your nose
What made you so awfully clever?''

`I have answered three questions and that is enough
Said his father. `Don't give yourself airs!
Do you think i can listen all day such stuff
Be off, or i`ll kick you downstairs!''

ಕವಿತೆಯ ಕೊನೆಯ ಈ ಎರಡು ನುಡಿಗಳಲ್ಲಿ ಬರುವ ವಿಚಾರಗಳು ತಂದೆಯನ್ನು ಮಗನಿಗೆ ದರ್ಶಿಸುತ್ತವೆ. ಹಿರಿಯರು ಮತ್ತು ಕಿರಿಯರ ನಡುವಿನ ಭಿನ್ನ ಅಂತರಗಳನ್ನು ಗಮನಿಸುವಂತೆ ಮಾಡುತ್ತವೆ. ಮಗ ತಂದೆಯ ಆ ವಯಸ್ಸಿನಲ್ಲೂ ಚುರುಕಾಗಿರುವ ತಂದೆಯ ದೃಷ್ಟಿಯ ಬಗ್ಗೆ ಕೇಳುತ್ತಾನೆ. ಅವನಷ್ಟು ಬುದ್ಧಿವಂತನಾಗಲು ಕಾರಣವೇನೆಂದು ಕೇಳುತ್ತಾನೆ. ಆಗ ತಂದೆ ಹಾಸ್ಯದ ಧಾಟಿ ಬಿಟ್ಟು ಈಗಾಗಲೇ ಮೂರು ಪ್ರಶ್ನೆಗಳಿಗೆ ಉತ್ತರಿಸಿರುವುದಾಗಿಯೂ ಇನ್ನೊಂದು ಪ್ರಶ್ನೆಗೆ ಉತ್ತರಿಸಲಾಗದೆಂದೂ, ಮರಳಿ ಅದೇ ಪ್ರಶ್ನೆ ಕೇಳಿದರೆ ಒದ್ದು ಕೆಳಗೋಡಿಸುವುದಾಗಿಯೂ ಹೆದರಿಸುತ್ತಾನೆ. ಬಹುಶಃ ಹಿರಿಯರ ಸ್ವಭಾವದಲ್ಲಿಯ ಅಸಂದಿಗ್ಧತೆಯನ್ನು ಇಲ್ಲಿ ಮನೋಜ್ಞವಾಗಿ ಹಿಡಿದಿಡಲಾಗಿದೆ. ಅವರಲ್ಲಿಯ ಅನುಭವದ ಶ್ರೀಮಂತಿಕೆಯಂತೆ ಮುಪ್ಪಿನ ಸಿಡುಕು ಕಾಣುತ್ತದೆ.

ಕವಿತೆಯಲ್ಲಿ ಬರುವ ತಂದೆ ಮಗ ಸಂಬಂಧಗಳು ಕೇವಲ ಆ ಸಂಬಂಧಕ್ಕೆ ಸೀಮಿತ ಎನಿಸುವುದಿಲ್ಲ. ಬದಲಿಗೆ ಎಲ್ಲ ಹಿರಿಯ ತಲೆಗಳ ಮತ್ತು ಕಿರಿಯ ತಲೆಗಳ ನಡುವಿನ ಬೌದ್ಧಿಕ ಸಮರ ಮತ್ತು ದೈಹಿಕ ಸಮರ್ಥತೆಯ ಕುರಿತಾಗಿರುವ ಭಿನ್ನ ನಿಲುವನ್ನು ಪ್ರತಿಪಾದಿಸುತ್ತದೆ.

- ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...