ಜಾತಿ ಸಮಾಜ < ನಾಗರಿಕ ಸಮಾಜ

Date: 20-02-2021

Location: .


ಮೀಸಲಾತಿಯ ನಿಗದಿತ ಪಾಲಿನಲ್ಲಿ ಹೆಚ್ಚಿನ ದಾಯಭಾಗವನ್ನು ಅಪೇಕ್ಷಿಸಿ ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಜಾತಿ ಸಮುದಾಯಗಳ ಬೀದಿ ಹೋರಾಟಗಳು ಸಂವಿಧಾನದ ಮೂಲ ಆಶಯವನ್ನೇ ಅಣಕಿಸುವಂತಿವೆ, ಅಪ್ರಸ್ತುತಗೊಳಿಸುವಂತಿವೆ. ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು? ಇದನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ? ಎಂಬ ಮೂಲಭೂತ ಪ್ರಶ್ನೆಗಳೊಂದಿಗೆ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ ಶೆಟ್ಟಿಯವರು ತಮ್ಮ ಲೋಕೋಕ್ತಿ ಅಂಕಣದಲ್ಲಿ ಚರ್ಚೆಯನ್ನು ಆರಂಭಿಸಿದ್ದಾರೆ. ಅದರ ಮೊದಲ ಕಂತು ಇಲ್ಲಿದೆ.

ಭಾಗ 1

ವಿಶೇಷವೋ ಎಂಬಂತೆ ಕರ್ನಾಟಕದಲ್ಲಿ, ಒಂದು ದಶಕದಿಂದ ಈಚೆಗೆ ಜಾತಿಯನ್ನು ಕೇಂದ್ರವಾಗಿರಿಸಿಕೊಂಡು ಹಲವು ಬಗೆಯ ಬೌದ್ಧಿಕ ವಾಗ್ವಾದಗಳು ಮತ್ತು ಸಾಮಾಜಿಕ-ರಾಜಕೀಯ ಬೆಳವಣಿಗೆಗಳು ಒಂದಾದಮೇಲೊಂದರಂತೆ ಘಟಿಸಿವೆ. ಇವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.

  1. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಬೆಲ್ಜಿಯಂ ದೇಶದ ಘೆಂಟ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಸ್ಥಾಪನೆಯಾದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ನಡೆಸಿದ ಸಂಶೋಧನೆ ಮತ್ತು ಅದು ಹುಟ್ಟು ಹಾಕಿದ ವಾಗ್ವಾದ.
  2. ಇದರ ಮುಂದುವರಿಕೆಯಾಗಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ “ವಚನಗಳು ನಿಜಕ್ಕೂ ಜಾತಿ ವಿರೋಧವನ್ನು ವ್ಯಕ್ತಪಡಿಸಿದ್ದವೋ” ಎಂಬ ವಿಷಯದ ಕುರಿತು ನಡೆದ ಚರ್ಚೆ ಮತ್ತು ಸ್ವತಃ ಪ್ರಜಾವಾಣಿಯೇ ನಡೆಸಿದ “ಜಾತಿ ಸಂವಾದ”.

ಇವು ಜಾತಿಯ ಕುರಿತು ಇತ್ತೀಚಿಗಿನ ದಿನಗಳಲ್ಲಿ ನಮ್ಮಲ್ಲಿ ನಡೆದ ತೀಕ್ಷ್ಣ ಸೈದ್ಧಾಂತಿಕ ವಾಗ್ವಾದಗಳಾದರೆ; ಈ ಕೆಳಗಿನವುಗಳು ಜಾತಿಯ ಪ್ರಶ್ನೆಯನ್ನು ಮುಂದೆ ಇಟ್ಟುಕೊಂಡು ನಡೆದ/ನಡೆಸಿದ/ನಡೆಸಲು ಉದ್ದೇಶಿಸಿರುವ ರಾಜಕೀಯ-ಸಾಮಾಜಿಕ ಹೋರಾಟಗಳಾಗಿವೆ.

  1. ಒಳಮೀಸಲಾತಿಗೆ ಸಂಬಂಧಿಸಿ ಮಾದಿಗ ಸಮುದಾಯ ನಡೆಸಿದ ಅವಿರತ ಹೋರಾಟ
  2. ಲಿಂಗಾಯತ ಮತ್ತು ವೀರಶೈವ ಸಮುದಾಯಗಳನ್ನು ಪ್ರತ್ಯೇಕ ಮಾಡಬೇಕೆಂದು ಆಗ್ರಹಿಸಿ ನಡೆದ ಭಾರೀ ಸಮಾವೇಶಗಳು ಮತ್ತು ನೇರವಾಗಿ ಅಂದಿನ ಕಾಂಗ್ರೆಸ್ ಸರಕಾರ ಮತ್ತು ಸರಕಾರದಲ್ಲಿದ್ದ ಕೆಲವು ಮಂತ್ರಿಗಳು ಅದನ್ನು ನಿರ್ವಹಿಸಿದ ರೀತಿ
  3. ಎಸ್.ಟಿ. ಸಮುದಾಯದ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ ಎಂದು ವಾಲ್ಮೀಕಿ ಸಮುದಾಯದ ಸಂಘಟನೆಗಳು, ಸ್ವಾಮೀಜಿಗಳು ಮತ್ತು ರಾಜಕೀಯ ನಾಯಕರು ನಡೆಸಿದ ಹೋರಾಟ
  4. ನಮ್ಮನ್ನೂ ಎಸ್ ಟಿ ಪಂಗಡಕ್ಕೆ ಸೇರಿಸಿ ಎಂದು ಕುರುಬ ಸಮುದಾಯದ ಮಠಾಧೀಶರು, ರಾಜಕೀಯ ಮುಖಂಡರು ನಡೆಸುತ್ತಿರುವ ಹೋರಾಟ
  5. ಪ್ರವರ್ಗ-2ಕ್ಕೆ ನಮ್ಮನ್ನು ಸೇರಿಸಿ ಎಂದು ಲಿಂಗಾಯತ ಪಂಚಮಸಾಲಿ ಸಮುದಾಯದ ಮಠಾಧೀಶರು, ರಾಜಕೀಯ ಮುಖಂಡರು, ಸಮುದಾಯದ ಮುಖಂಡರು ಮಾಡುತ್ತಿರುವ ಪಾದಯಾತ್ರೆ
  6. ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ಲಿಂಗಾಯತ-ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನೂ ಸೇರಿಸಬೇಕೆಂದು ಲಿಂಗಾಯತ-ವೀರಶೈವ ಮಠಾಧೀಶರ ಒಕ್ಕೂಟದ ಆಗ್ರಹ
  7. ಮೀಸಲಾತಿ ಪಟ್ಟಿಯಲ್ಲಿ ಪರಿಷ್ಕರಣೆ, ಬದಲಾವಣೆ ಮತ್ತು ಮೀಸಲು ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿ ಸಮುದಾಯದ ನಿವೃತ್ತ ಐಎಎಸ್ ಅಧಿಕಾರಿಗಳು ಮತ್ತು ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿಗಳನ್ನೂ ಒಳಗೊಂಡು ಪಾಂಗಿತವಾಗಿ ಹೋರಾಟ ಮಾಡುವ ಮುನ್ಸೂಚನೆ ನೀಡಿರುವ ಒಕ್ಕಲಿಗ ಸಮುದಾಯ
  8. ಬೇಡಜಂಗಮ, ನೇಕಾರ, ಉಪ್ಪಾರ, ಮಡಿವಾಳ, ಮತ್ತು ಕಾಡುಗೊಲ್ಲರೂ ಸೇರಿದಂತೆ ಇನ್ನೂ ಅನೇಕ ಜಾತಿ ಸಮುದಾಯಗಳು ಇಂಥದ್ದೇ ವಿಷಯವನ್ನು ಮುಂದು ಮಾಡಿಕೊಂಡು ತಮ್ಮ ಹೋರಾಟವನ್ನು ನಡೆಸಲು ಸಜ್ಜಾಗುತ್ತಿರುವುದು.
  9. ಈ ಎಲ್ಲ ಹೋರಾಟಗಳ ನಡುವೆಯೇ ಯಾವ ಹೋರಾಟವೂ ಇಲ್ಲದೆ 2018-19ರಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ರಾಜ್ಯ ಸರಕಾರ ಸ್ಥಾಪಿಸಿ ಅದಕ್ಕಾಗಿ 25 ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡಿದ್ದು ಮತ್ತು
  10. 2020ರಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅದಕ್ಕೆ 500 ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡಿದ್ದು ಕೂಡ ಬಹಳ ಮುಖ್ಯವಾದ ಸಂಗತಿಗಳೇ ಆಗಿವೆ. ಇಂದಿನ ಸುದ್ದಿ ನೋಡಿದರೆ ಇಂಥದ್ದೇ ಒಂದು ದೊಡ್ಡ ನಿಧಿಯನ್ನು ಒಕ್ಕಲಿಗ ಸಮಾಜಕ್ಕೂ ನೀಡುವ ಸಾಧ್ಯತೆ ಇದೆ.

ಈ ಎಲ್ಲ ಬೆಳವಣಿಗೆಗಳು ಇದ್ದಕ್ಕಿದ್ದಂತೆ ಘಟಿಸಿದವುಗಳಲ್ಲ. ಇವೆಲ್ಲವುಗಳ ಹಿಂದೆ ಸಿದ್ದರಾಮಯ್ಯನವರು ಜೆಡಿಎಸ್ ನಲ್ಲಿದ್ದಾಗ ಸಂಘಟಿಸಿದ ಅಹಿಂದ ಸಮಾವೇಶಗಳಿಂದ ಉಂಟಾದ ರಾಜಕೀಯ ಮತ್ತು ಸಾಮುದಾಯಿಕ ಜಾಗೃತಿಯೂ ಇದ್ದಿರಬಹುದು. ಹಾಗೆಯೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಹುತೇಕ ಜಾತಿಮಠಗಳಿಗೆ ಸರಕಾರದ ಸಾರ್ವಜನಿಕ ಹಣವನ್ನು ಮೊಗೆಮೊಗೆದು ಕೊಟ್ಟ ಘಟನೆಯ ಪ್ರತಿಧ್ವನಿಗಳೂ ಇವು ಆಗಿದ್ದಿರಬಹುದು ಅಥವಾ ಆಧುನಿಕ ವಿದ್ಯಾಭ್ಯಾಸ ಮತ್ತು ಸಮಾಜ-ಸಂಸ್ಕೃತಿ ಅಧ್ಯಯನಗಳಿಂದ ತಲೆದೋರಿರುವ ವಿಶಿಷ್ಟವಾದ ಸಾಮುದಾಯಿಕ ಜಾತೀಯತೆಯ ಭಾವವೂ ಇದ್ದಿರಬಹುದು. ಇವೇನೇ ಇದ್ದರೂ ನಮ್ಮ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ನಡೆಯುತ್ತಿರುವ ಈ ಎಲ್ಲ ಘಟನೆಗಳು ಜಾತಿಗೆ ಸಂಬಂಧಿಸಿದ ಚರ್ಚೆಯನ್ನು ಕರ್ನಾಟಕದಲ್ಲಿ ಮತ್ತೊಮ್ಮೆ ಮುಂಚೂಣಿಗೆ ತಂದಿರುವುದಂತೂ ದಿಟ.

1918ರಲ್ಲಿ ಅಂದಿನ ಮೈಸೂರಿನ ಮಹಾರಾಜರು, ಹಿಂದುಳಿದ ಸಮುದಾಯಗಳ ಸಾಮಾಜಿಕ-ರಾಜಕೀಯ ಸ್ಥಿತಿ-ಗತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆ ಸಮುದಾಯಗಳ ಏಳಿಗೆಗಾಗಿ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲು ಲೆಸ್ಲಿ ಮಿಲ್ಲರ್ ಸಮಿತಿಯನ್ನು ರಚಿಸಿದ್ದರು. ಆ ಸಮಿತಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯ ಕುರಿತು ಯೋಚಿಸುವುದಕ್ಕಿಂತಲೂ ಬಹುಮೊದಲೇ ಬ್ರಾಹ್ಮಣೇತರ ಸಮುದಾಯಗಳಿಗೆ ಆಡಳಿತಾಂಗದಲ್ಲಿ ಉದ್ಯೋಗಾವಕಾಶ ಮತ್ತು ಶಿಕ್ಷಣದಲ್ಲಿ ಪ್ರತ್ಯೇಕ ಅವಕಾಶಗಳನ್ನು ಸೃಜಿಸುವ ಶಿಫಾರಸ್ಸುಗಳುಳ್ಳ ವರದಿಯನ್ನು ಕೊಟ್ಟಿತು. ಅಲ್ಲಿಂದ ಆರಂಭವಾದ ಸಾಮಾಜಿಕ ಚಲನೆ ಇಂದಿನವರೆಗೂ ಬೇರೆಬೇರೆ ರೂಪಗಳಲ್ಲಿ ಮುಂದುವರಿದುಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಇಂದು ನಾವು ನೋಡುತ್ತಿರುವ ಈ ವಿನೂತನ ಹೋರಾಟಗಳಲ್ಲಿ ಮುಂದುವರಿದ ಜಾತಿಗಳ ಹೊಸಬಗೆಯ ಹಠವನ್ನು ಸಾಮಾಜಿಕ ಚಿಂತನಶೀಲತೆಯ ವಿಕಾಸ ಎಂದು ಕರೆಯುವುದೇ ಅಥವ ಸಾಮಾಜಿಕ ಚಿಂತನಶೀಲತೆಯ ಅಪವಿಕಾಸ ಎಂದು ಗ್ರಹಿಸುವುದೇ ಎಂಬುದರ ಬಗ್ಗೆ ಬೌದ್ಧಿಕ ಸಂವಾದಗಳು ನಡೆಯಬೇಕಾದ ಅಗತ್ಯ ಇದೆ.

ನಮ್ಮ ರಾಜ್ಯದ ’ಆಂದೋಲನ ಜೀವಿಗಳು’ ಈಗ ಜಾತಿಯ ಸಮಸ್ಯೆಯನ್ನು ಎತ್ತಿಕೊಂಡು ’ನ ಭೂತೋ’ ಎನ್ನುವಂತೆ ಸಮಾವೇಶ-ಪಾದಯಾತ್ರೆ-ಉರುಳುಸೇವೆಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಿನ ಈ ಘಟನಾನಿಬಿಡ ಸನ್ನಿವೇಶದಲ್ಲಿ ಜಾತಿ ಸಂಘಟನೆಗಳ, ಮಠ-ಮಾನ್ಯಗಳ ಮುಖ್ಯಸ್ಥರ, ಸಚಿವ-ಶಾಸಕರ ಅಬ್ಬರಕ್ಕೆ, ಒತ್ತಡ ತಂತ್ರಕ್ಕೆ, ಸಾರ್ವಜನಿಕ ಸಮಾರಂಭಗಳಲ್ಲಿ ಆಡುವ ಎಚ್ಚರಿಕೆಯ ಕರೆಗಳಿಗೆ, ’ಪಟ್ಟದಿಂದ ಕೆಳಗಿಳಿಸುತ್ತೇವೆ ಹುಷಾರ್’ ಎಂಬಿತ್ಯಾದಿ ಪದಪ್ರಯೋಗಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಕಂಗಾಲಾಗಿರುವುದು ಎಲ್ಲರಿಗೂ ಎದ್ದು ಕಾಣುವಂತಿದೆ. ಮಾನ್ಯ ಮುಖ್ಯಮಂತ್ರಿಗಳ ಕಷ್ಟ-ಕಾರ್ಪಣ್ಯದ ಮಾತನ್ನು ಪಕ್ಕಕ್ಕಿಡೋಣ. ಆದರೆ ಬಲಿಷ್ಟ ಜಾತಿಗಳ ಈ ಗೌಜು-ಗದ್ದಲದಿಂದ ಸ್ವಂತದ್ದಾದ ಗಟ್ಟಿ ಧ್ವನಿಯೂ ಇಲ್ಲದ; ಹಾಗೆಯೇ ದಿಟ್ಟ ರಾಜಕೀಯ ನಾಯಕತ್ವವೂ ಇಲ್ಲದ ಕರ್ನಾಟಕದ ನೂರಾರು ಸಣ್ಣಪುಟ್ಟ ಜಾತಿಗಳು ಕಿಂಕರ್ತವ್ಯತಾ ಮೂಢವಾಗಿ ದಿಕ್ಕೆಟ್ಟು ನಿಂತಿರುವುದನ್ನು ಕಾಣಲು ದಿವ್ಯದೃಷ್ಟಿಯೇನೂ ಬೇಕಾಗಿಲ್ಲ. ಈ ಇಡೀ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳುವ, ಇದನ್ನು ತಾತ್ತ್ವಿಕವಾಗಿ ಪರಿಶೀಲಿಸಿ ವಿವೇಕದ ಮಾತುಗಳನ್ನು ಆಡಬಹುದಾದ ಸಮಾಜಶಾಸ್ತ್ರೀಯ ಅಧ್ಯಯನ ನಮ್ಮಲ್ಲಿ ಇನ್ನಷ್ಟೇ ನಡೆಯಬೇಕಿದೆ. ಅಂಥ ಸಮಾಜವಿಜ್ಞಾನಿಗಳು ಕರ್ನಾಟಕದ ಉದ್ದಗಲದಲ್ಲಿ ಸದ್ಯದಲ್ಲೆಲ್ಲೂ ಕಂಡು ಬರುವುದೂ ಇಲ್ಲ ಎಂಬುದು ಇನ್ನೊಂದು ನೋವಿನ ಸಂಗತಿ.

ಈ ಅಂಕಣದಲ್ಲಿ ಇವೆಲ್ಲವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಅದನ್ನು ಮಾಡುವುದಕ್ಕೆ ನಾನು ಶಕ್ತನೂ ಅಲ್ಲ. ಆದರೆ ಈ ಎಲ್ಲ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಜಾತಿಯ ಬಗ್ಗೆ ಹೊಸದಾಗಿ ಚಿಂತನೆ ನಡೆಸಬೇಕಾದ ಸಮಯ ಈಗ ಬಂದಿದೆ ಅಂತ ಬಲವಾಗಿ ಅನ್ನಿಸುತ್ತಿದೆ. ಜಾತಿ ಸಮುದಾಯಗಳನ್ನು ಗಟ್ಟಿಗೊಳಿಸುವುದು, ಜಾತಿ ಸಂಘಗಳ ಮೂಲಕ ಅವುಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಪ್ರಯತ್ನ ಪಡುವುದು ಮತ್ತು ಅವುಗಳ ಅನನ್ಯತೆಯನ್ನು ಸಂಗೋಪಿಸುವುದು ಒಂದು ಹಂತದವರೆಗೆ ಸರಿಯೇ ಇದ್ದಿರಬಹುದು. ಆದರೆ ಆ ಹಂತ ಯಾವುದು ಮತ್ತು ಆ ಮಾನದಂಡಗಳನ್ನು ನಿಗದಿ ಪಡಿಸುವ ದಂಡನಾಯಕರು ಯಾರು ಎಂಬ ಪ್ರಶ್ನೆಗೆ ಸಮುಚಿತವಾದ ಉತ್ತರ ದೊರಕುವವರೆಗೂ ಜಾತಿಯನ್ನು ಗಟ್ಟಿಗೊಳಿಸುವ ಪ್ರಯತ್ನಗಳು ಸಜೀವ ಬಾಂಬ್ ಗಳಂತೆಯೇ ಇರುತ್ತವೆ. ಪ್ರಾಯಶಃ ಆ ಹಂತವನ್ನು ನಿಗದಿಗೊಳಿಸಿ ಅದನ್ನು ನಿರ್ದಿಷ್ಟ ಪಡಿಸಬೇಕಾದ ಜವಾಬ್ದಾರಿ ಮತ್ತು ಸಮುದಾಯಗಳ ವಿವೇಕವನ್ನು ಎಚ್ಚರಿಸುವ ಹೊಣೆಗಾರಿಕೆ ನಾಗರಿಕ ಸಮಾಜದ್ದೇ ಹೌದು. ಆದರೆ ಆ ಅಂಥ ನಾಗರಿಕ ಸಮಾಜ ನಮ್ಮ ದೇಶದಲ್ಲಿ ಇದೆಯೇ, ನಾಗರಿಕ ಸಮಾಜ ಅಂದರೆ ಏನು, ಜಾತಿ ಸಮುದಾಯಗಳ ಸಮಾಜ ಬಲಿಷ್ಠಗೊಂಡಲ್ಲಿ, ಹಾಗೆಯೇ ಧರ್ಮಾಧಾರಿತ ಸಮಾಜವನ್ನೂ ನಾವು ಕಟ್ಟಿಕೊಂಡಿದ್ದೇ ಆದಲ್ಲಿ ವಿಶ್ವದಲ್ಲೇ ವಿಶಿಷ್ಟವಾದ ಬಹುರೂಪೀ ಸಂಸ್ಕೃತಿಗಳ ಸಮಾಜವಾಗಿರುವ ಈ ನಮ್ಮ ಭಾರತ ದೇಶದಲ್ಲಿ ಪ್ರಜಾಸತ್ತೆಗೆ ಬರಬಹುದಾದ ಅಪಾಯವೇನು ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಬರವಣಿಗೆಯನ್ನು ನಡೆಸಲಾಗುವುದು.

****

ಲೋಕಾಭಿರಾಮದ ರೀತಿ-ರಿವಾಜಿನಲ್ಲೇ ಮಾತಿಗೆ ತೊಡಗೋಣ. ನಾನು ನನ್ನ ಎಳವೆಯ ಶಾಲಾದಿನಗಳನ್ನು ಈಗ ನೆನಪಿಗೆ ತಂದುಕೊಂಡರೆ, ಆಗ ನಾವು ಯಾರೂ ಜಾತಿ ಬಗ್ಗೆ ಶಾಲೆಯಲ್ಲಿ ಮಾತಾಡುತ್ತಿರಲಿಲ್ಲ. ’ನಮ್ಮ ಜಾತಿಯ ಕುರಿತು, ಇನ್ಬೊಬ್ಬರ ಜಾತಿಯ ಬಗ್ಗೆ ಶಾಲೆಯಲ್ಲಿ ಮಾತಾಡುವುದು ಒಳ್ಳೆಯದಲ್ಲ, ಶಿಷ್ಟಾಚಾರವೂ ಅಲ್ಲ, ಜಾತಿಯ ಬಗ್ಗೆ ಮಾತಾಡಕೂಡದು’ ಎಂದು ನಮಗೆ ನಮ್ಮ ಅಧ್ಯಾಪಕರು ಹೇಳಿಕೊಟ್ಟಿದ್ದರು.

ಒಂದು ಸಲ ಹೀಗೊಂದು ಘಟನೆ ನಡೆಯಿತು. ನಮ್ಮದು ರೈತಾಪಿ ಮನೆತನ. ಮನೆಯಲ್ಲಿ ದನ-ಕರು ಸಾಕಿಕೊಂಡಿದ್ದೆವು. ದಿನಾ ಸಂಜೆ ಹಾಲು ಕರೆದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಮನೆಗೆ ಹಾಲು ಹಾಕುತ್ತಿದ್ದೆವು. ನಾಗೇಶ್ ರಾವ್ ಎಂಬ ಹೆಸರಿನ ಆ ನಮ್ಮ ಹೆಡ್ ಮಾಸ್ಟ್ರು ಕಡುಕೋಪಿಷ್ಟರಾಗಿದ್ದರೂ ಗಣಿತವನ್ನು ಚೆನ್ನಾಗಿ ಕಲಿಸಿ ಕೊಡುತ್ತಿದ್ದರು.

ದೊಡ್ಡ ಮುಚ್ಚಳದ ಎರಡು ಲೀಟರ್ ಹಾಲು ಹಿಡಿಯುವ ಅಲ್ಯೂಮಿನಿಯಂ ಕ್ಯಾನ್ ನಲ್ಲಿ ದಿನಾ ಸಂಜೆ ನನ್ನ ಅಪ್ಪ, ಹೆಡ್ ಮೇಷ್ಟ್ರ ಮನೆಗೆ ಹಾಲು ಹಾಕಿದ ಬಳಿಕ ಅಲ್ಲೇ ಸಮೀಪದ ಚಿಕ್ಕ ಪೇಟೆಯಲ್ಲಿ ಮೀನು ಖರೀದಿ ಮಾಡಿ ಖಾಲಿ ಆದ ಅದೇ ಕ್ಯಾನ್ ನಲ್ಲಿ ಮೀನು ತುಂಬಿಸಿಕೊಂಡು ಮನೆಗೆ ಹೋಗುತ್ತಿದ್ದರು. ಪ್ಲಾಸ್ಟಿಕ್ ಕವರ್ ಇಲ್ಲದ ಕಾಲ ಅದು. ಮೀನು ಮಾರುವ ಹೆಂಗಸರು ತೇಗದ (Teak) ಮರದ ಎಲೆಗಳಲ್ಲಿ ಹಸಿಮೀನುಗಳನ್ನು ಸುತ್ತಿ ಮಡಚಿ ಕಟ್ಟಿಕೊಡುತ್ತಿದ್ದರು. ಆದರೆ ಈ ಮೀನ ಪೊಟ್ಟಣವನ್ನು ಒಂದು ಕೈಯಲ್ಲಿ, ಅಕ್ಕಿ- ಉಪ್ಪು-ಮೆಣಸು-ಹುಳಿ ಇತ್ಯಾದಿ ದಿನಸಿ ಸಾಮಾನುಗಳನ್ನು ಇನ್ನೊಂದು ಕೈಯಲ್ಲಿ ಎತ್ತಿಕೊಂಡು ಹೊಲ-ಗದ್ದೆಗಳ ನಡುವಿನ ಬದುಗಳ ಮೇಲೆ ನಡೆದು ಮನೆ ತಲುಪುವ ಹೊತ್ತಿಗೆ ಕೆಲವು ಮೀನುಗಳು ಉದುರಿ ಹೋಗುತ್ತಿದ್ದವು.

ಆ ಬದುಗಳೋ ಹುಲ್ಲು ಕತ್ತರಿಸುವ ಕತ್ತಿಯ ಬೆನ್ನಿನಷ್ಟು ಸಪೂರವೂ ನಾಜೂಕಾಗಿಯೂ ಇರುತ್ತಿದ್ದವು. ದಾರಿಗಳು ಎಂಬ ದೊಡ್ಡಹೆಸರಿನ ಆ ಸಣ್ಣಬದುಗಳ ಮೇಲೆ ಹೆಜ್ಜೆಯೂ ಜಾರದಂತೆ, ಮೀನೂ ಉದುರದಂತೆ ಉದ್ದಕ್ಕೂ ಕೂಚಿಪುಡಿ ನೃತ್ಯ ಮಾಡುತ್ತಲೇ ನಡೆದು ಹೋಗುವಾಗ; ಬಿದ್ದು ಹೋಗಬಹುದಾದ ಮೀನುಗಳಿಗಾಗಿ ಮೂಗರಳಿಸಿಕೊಂಡು ನಾಲಗೆ ಹೊರಚಾಚಿಕೊಂಡು ಕೆಲವೊಮ್ಮೆ ಊರನಾಯಿಗಳು, ಇನ್ನು ಕೆಲವೊಮ್ಮೆ ಮನೆಬಿಟ್ಟು ಮಲೆ ಏರಿದ ಬೆಕ್ಕುಗಳು ಸಾಲಾಗಿ ಎನ್ ಸಿ ಸಿ ಕೆಡೆಟ್ ಗಳಂತೆ ವಾದ್ಯಘೋಷ ಸಹಿತವಾಗಿ ಮೆರವಣಿಗೆಯಲ್ಲಿ ಬರುತ್ತಿದ್ದವು. ಅವುಗಳನ್ನು ಓಡಿಸಲೂ ಆಗದೆ, ಹಾಗೊಮ್ಮೆ ಓಡಿಸಲು ಪ್ರಯತ್ನ ಪಡುವಾಗ ಕೈಯಲ್ಲಿರುವ ಮೀನುಗಳೂ ಜಾರದಂತೆ ನೋಡಿಕೊಳ್ಳುವುದು ನಮ್ಮ ಅಪಾರ ಸಂಯಮದ, ಚಿತ್ತವೃತ್ತಿಯನ್ನು ನಿರೋಧಿಸುವ ಯೋಗ ಪ್ರದರ್ಶನವೇ ಆಗಿರುತ್ತಿತ್ತು.

ಮಳೆ-ಗಾಳಿ ಬಂದರಂತೂ ಕರಾವಳಿಯ ಈ ಭಾಗದಲ್ಲಿ ಛತ್ರಿಯನ್ನೂ ಹಿಡಿದುಕೊಂಡು ನಡೆಯಬೇಕಾದ ಕರುಣಾಜನಕ ಪರಿಸ್ಥಿತಿಯಲ್ಲಿ ಸದರಿ ದೃಶ್ಯ ದೂರದಿಂದ ನೋಡುವವರಿಗೆ ಸಾಕ್ಷಾತ್ ಪರಮೇಶ್ವರನ ಆನಂದ ತಾಂಡವ ನೃತ್ಯದಂತೆ ನಯನಮನೋಹರವಾಗಿಯೂ ಕಂಡುಬರುತ್ತಿತ್ತು. ಅನುಭವಿಸುವವನಲ್ಲಂತೂ ಹರಹರಾ ಶ್ರೀ ಚೆನ್ನಸೋಮೇಶ್ವರ ಎಂಬ ಉದ್ಗಾರ ಅನಿಯಂತ್ರಿತವಾಗಿ ಹೆಜ್ಜೆಹೆಜ್ಜೆಗೂ ಹೊರಹೊಮ್ಮುತ್ತಿತ್ತು

ಅದಂತಿರಲಿ. ಇಂಥದ್ದನ್ನು ಸ್ವತಃ ಅನುಭವಿಸಿದ್ದ ನನ್ನ ಅಪ್ಪ ಹಾಲಿನ ಕ್ಯಾನ್ ನಲ್ಲಿ ಮೀನು ತುಂಬಿಸಿಕೊಂಡು ಹೋಗುವ ಉಪಾಯವೊಂದನ್ನು ಕಂಡು ಹುಡುಕಿ ನಿರಾಳರಾಗಿದ್ದರು. ಇದು ಹೀಗೇ ನಡೆಯುತ್ತಿರುವಾಗ ನನ್ನ ಸಹಪಾಠಿಯೊಬ್ಬ ಈ ದೃಶ್ಯವನ್ನು ನೋಡಿ ಕಣ್ಣು ತುಂಬಿಕೊಂಡ. ಅವನ ಹೆಸರು ದಿನೇಶ. ಜಾತಿಯಲ್ಲಿ ಬಿಲ್ಲವ. ಮೇಲಾಗಿ ನಮ್ಮ ನೆರೆಮನೆಯವ. ಮರುದಿನ ಬೆಳಿಗ್ಗೆ ತರಗತಿಗೆ ಬಂದವನೇ ನನ್ನ ಕಡೆ ಬೆರಳು ತೋರಿಸಿ, ಸುತ್ತಲಿನ ಹುಡುಗರಿಗೆ ಘಟನೆಯ ಬಗ್ಗೆ ವಿವರಣೆ ಕೊಟ್ಟು-

ಶೆಟ್ಟರ ಮನೆಯ ಹಾಲಿನ ಕ್ಯಾನು
ಭಟ್ಟರ ಮನೆಗೆ ಹೋಗುವ ಕ್ಯಾನು
ಸಂಜೆಯ ಹೊತ್ತಿಗೆ ಮೀನೋ ಮೀನು
ತಕಧಿಮಿತ ತಕಧಿಮಿತ ತಕ ಧಿಮಿ ತಾ

– ಎಂದು ರಾಗ ತಾಳ ಸಹಿತವಾಗಿ ಆಗಿನ ಕಾಲದ ಪ್ರಸಿದ್ಧ ಯಕ್ಷಗಾನ ಭಾಗವತ ದಾಮೋದರ ಮಂಡೆಚ್ಚರ ಶೈಲಿಯಲ್ಲಿ ಹಾಡಿದ. ಹುಡುಗರೆಲ್ಲ ಗಹಗಹಿಸಿ ನಕ್ಕುಬಿಟ್ಟರು. ನಗುವಿನ ಆಸ್ಫೋಟಕ್ಕೆ ಪಕ್ಕದ ಹೆಡ್ ಮಾಸ್ಟ್ರ ಕಛೇರಿ ಅದುರಿತು. ಕಿರುಬೆರಳಿನಷ್ಟು ದಪ್ಪನೆಯ ನಾಗರಬೆತ್ತವನ್ನು ಕೈಯಲ್ಲಿ ಹಿಡಿದು ಜಗಲಿಯಲ್ಲಿ ನಡೆದುಕೊಂಡು ಬಂದರು ಹೆಡ್ ಮಾಸ್ಟ್ರು. ನನಗೋ ದಿಕ್ಕೇ ತೋಚದಂತಾಗಿತ್ತು. ಆಗಷ್ಟೇ ಬಿಡುಗಡೆಯಾಗಿದ್ದ (1982) ಡಾ. ರಾಜ್ ಕುಮಾರ್ ರವರು ನಟಿಸಿದ್ದ ಹಾಲು-ಜೇನು ಸಿನಿಮಾದಂತಿದ್ದ ನಮ್ಮ ಮತ್ತು ಹೆಡ್ ಮಾಸ್ಟ್ರ ಮನೆಯ ಸಂಬಂಧ ಈ ಹಾಲು-ಮೀನು ಪ್ರಕರಣದಿಂದ ಎಲ್ಲಿ ಹಾಳಾಗಿ ಹಳ್ಳ ಹತ್ತುತ್ತೋ ಎಂಬ ಸಂಕಟ ಮತ್ತು ಭಯ. ಜೊತೆಗೆ ದಿನೇಶನ ಮೇಲಿನ ಸಿಟ್ಟು, ಅವನಿಂದ ನನಗಾದ ಅವಮಾನ ಮುಪ್ಪುರಿಗೊಂಡು ಎಲ್ಲವನ್ನೂ ಹೆಡ್ ಮಾಸ್ಟರರ ಮುಂದೆ ವಿಧೇಯನಾಗಿ ನಿವೇದಿಸಿದೆ. ತನ್ನ ಮನೆಗೆ ಬರುವ ಹಾಲಿನ ಕ್ಯಾನಿನಲ್ಲೇ ಮೀನೂ ರವಾನೆಯಾಗುತ್ತದೆ ಎಂಬ ಸಿಟ್ಟಿನಲ್ಲೋ ಅಥವ ದಿನೇಶ ಶಾಲೆಯಲ್ಲಿ ಜಾತಿ ಬಗ್ಗೆ ಮಾತಾಡಿದ್ದರಿಂದಲೋ ರೇಗಿ ಹೋದ ಹೆಡ್ ಮಾಸ್ಟರರು ದಿನೇಶನಿಗಂತೂ “ಜಾತಿ ಬಗ್ಗೆ ಮಾತಾಡ್ತಿಯೇನೋ. ಜಾತಿ ಬಗ್ಗೆ. ಅದೂ ವಿದ್ಯಾ ದೇಗುಲದಲ್ಲಿ. ನಿನ್ನ ಕುಂಡೆಯಲ್ಲಿ ಚರ್ಬಿ ತುಂಬಿಕೊಂಡಿದೆ” ಎಂಬ ವಾಗ್ದಾಳಿಯೊಂದಿಗೆ ಆತನ ಬೆನ್ನ ಮೇಲೆ ಬೆತ್ತದ ಹಲವು ಸ್ಥಿರ ಚಿತ್ರಗಳನ್ನು ಮೂಡಿಸಿದ್ದರು.

ಇದು ನಮ್ಮ ಶಾಲೆಯ ಅನುಭವವಾದರೆ ನಮ್ಮನಮ್ಮ ಮನೆಗಳಲ್ಲಿ ಜಾತಿಯ ಅನುಭವ ಪ್ರತಿದಿನವೂ ನಮಗೆ ಅನಾಯಾಸವಾಗಿ ಒದಗುತ್ತಿತ್ತು. ನಮ್ಮ ಮನೆಗೆ ಬರುವ ಜನರ ಹೆಸರಿನ ಜೊತೆ ಬಾಲದಂತೆ ಅಂಟಿಕೊಂಡಂತಿರುವ ಕುಲನಾಮಗಳಿಂದಲೂ ಜನರ ಜಾತಿ ಗೊತ್ತಾಗುತ್ತಿತ್ತು. ಹಾಗೆಯೇ ಜನರ ಹೆಸರಿನಿಂದಲೂ ಜಾತಿ ಗೊತ್ತಾಗುತ್ತಿತ್ತು. ಯಾವ ಮಾಧ್ವ ಬ್ರಾಹ್ಮಣರೂ ಈಶ್ವರ ಭಟ್ಟ ಅಂತ ಹೆಸರು ಇಟ್ಟುಕೊಳ್ಳಲು ಆ ಕಾಲದಲ್ಲಿ ಸಾಧ್ಯವೇ ಇರಲಿಲ್ಲ. ಹಾಗೆಯೇ ಆ ಕಾಲಕ್ಕೆ ಹವ್ಯಕ ಬ್ರಾಹ್ಮಣರ ಹೆಸರು ರಾಮ ಭಟ್ಟ, ಕೃಷ್ಣ ಭಟ್ಟ ಮತ್ತು ರಾಮಕೃಷ್ಣ ಭಟ್ಟ ಎಂದಷ್ಟೇ ಆಗಿ ಬಹಳ ಹೆಚ್ಚೆಂದರೆ ಮಹಾಲಿಂಗ ಭಟ್ಟ, ಗಣಪತಿ ಭಟ್ಟ ಮತ್ತು ಸುಬ್ರಹ್ಮಣ್ಯ ಭಟ್ಟ ಎಂಬುದಕ್ಕಿಂತ ಮುಂದೆ ಹೋಗುತ್ತಲೇ ಇರಲಿಲ್ಲ.

ಜಾತಿ ಬಗ್ಗೆ ನಾವು ಸಾರ್ವಜನಿಕವಾಗಿ ಮಾತಾಡದಿದ್ದರೂ ನಮ್ಮ ದಿನನಿತ್ಯದ ಬದುಕಿನಲ್ಲಿ ಅದು ಇತ್ತು. ಏನೋ ಪಾರಂಪರಿಕವಾಗಿ ಒಂದು ಐಬು ಉಳಿದುಕೊಂಡು ಬಂದಿದೆ. ಅದನ್ನು ಪಕ್ಕಕ್ಕೆ ಸರಿಸೋಣ ಎಂದು ನಮ್ಮ ಹಿರಿಯರು ಭಾವಿಸುತ್ತ ಒಂದು ಕಾಲಕ್ಕೆ ಮಾಡಿದ ತಪ್ಪು ಏನೆಂದರೆ ಅವರು ಯಾರೂ ಜಾತಿಯನ್ನು ನೇರವಾಗಿ ಉದ್ದೇಶಿಸಿ ಮಾತಾಡಲಿಲ್ಲ. ಸಮಾಜಸುಧಾರಣೆಯ ಕ್ರಿಯಾಚಟುವಟಿಕೆಗಳು ನಮ್ಮಲ್ಲಿ ಆರಂಭವಾದ ಕಾಲದಲ್ಲೂ, ’ಕೆಲವು ಜಾತಿ ಸಮುದಾಯಗಳವರು ಕೆಳಗಿದ್ದಾರೆ, ಅವರನ್ನು ಮೇಲಕ್ಕೆ ತರಬೇಕು’ ಎಂಬ ಅಪ್ಪಟ ಪ್ರಾಮಾಣಿಕತೆ ಇತ್ತೇ ಹೊರತು, ಜಾತಿ ಎನ್ನುವುದೇ ಶುದ್ಧಾಂಗ ತಪ್ಪು ಮತ್ತು ಅದು ಒಂದು ಭ್ರಮೆ ಎಂದು ಗಟ್ಟಿಸಿ ಹೇಳುವ ಹಲವು ಧ್ವನಿಗಳು ಆ ಕಾಲದಲ್ಲಿ ನಮ್ಮ ನಡುವೆ ಇರಲಿಲ್ಲ.

ಜಾತಿಯ ಬಗ್ಗೆ ನಮಗೆ ಕೆಲವು ಪಾಠಗಳನ್ನು ಹೇಳಿಕೊಡಲಾಗಿತ್ತು. ಅವೇನೆಂದರೆ -

’ಮೊಟ್ಟಮೊದಲನೆಯದಾಗಿ ಜಾತಿ ಎಂಬುದು, ನಿಲ್ಲಿಸಿರುವ ಏಣಿಯಂತೆ ಶ್ರೇಣೀಕರಣದ ವಿನ್ಯಾಸದಲ್ಲೇ ಇದೆ. ಬ್ರಾಹ್ಮಣ ಮೇಲಿರುವ; ಅಸ್ಪೃಶ್ಯ ಕಟ್ಟಕಡೆಗಿರುವ ಶ್ರೇಣೀಕರಣ ಇದು. ಎರಡನೆಯದು ಜಾತಿ ಅನ್ನುವುದು ಒಂದು ವ್ಯವಸ್ಥೆ. ಸುಗಮವಾಗಿ ಕಾರ್ಯನಿರ್ವಹಿಸುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸ್ವಲ್ಪ ಅಡ್ಡಾದಿಡ್ಡಿ ಚಲಿಸಿದರೂ ಈ ಸುಗಮ ಸಂಚಾರಕ್ಕೆ ತೊಡಕಾಗುತ್ತದೆ. ಮೂರನೆಯದು ಶತಶತಮಾನಗಳಿಂದಲೂ ಇದು ಹೀಗೆಯೇ ಇದೆ. ರಾಮರಾಜ್ಯ ಬಂದರೂ ರಾಗಿ ಬೀಸೋದು ಹೇಗೆ ತಪ್ಪುವುದಿಲ್ಲವೋ ಹಾಗೆಯೇ ಈ ಜಾತಿ ಮತ್ತು ಜಾತೀಯ ಅಸಮಾನತೆಯೂ ತಪ್ಪುವುದಿಲ್ಲ. ಭಾರತ ಅಂದರೆ ಜಾತಿ ಪದ್ಧತಿ ಮತ್ತು ಜಾತಿ ಪದ್ಧತಿ ಅಂದರೆ ಭಾರತ. ಕೊನೆಯದಾಗಿ ಹಿಂದೂ ಧರ್ಮದ ಅತ್ಯಂತ ಕೇಂದ್ರಸ್ಥಾನದಲ್ಲಿರುವುದು ಜಾತಿಯೇ ಆಗಿದೆ. ಜಾತಿಯನ್ನು ಎತ್ತಿ ಪಕ್ಕಕ್ಕಿಟ್ಟರೆ ಹಿಂದೂ ಧರ್ಮಕ್ಕೆ ಅಸ್ತಿತ್ವವೇ ಇಲ್ಲ ಇತ್ಯಾದಿ ಇತ್ಯಾದಿ. ಈಗ ಆಧುನಿಕತೆ ಬಂದು ಈ ಜಾತಿ-ಪಾತಿ ಎಲ್ಲ ತಪ್ಪು ಎಂಬುದು ನಮಗೆ ಮನವರಿಕೆ ಆಗಿದೆ’ ಇತ್ಯಾದಿ ಇತ್ಯಾದಿ.

ಇವಿಷ್ಟು ನಿರ್ದಿಷ್ಟವಾಗಿ ಒಂದು ಕಾಲದ ಸಂಗತಿಯಾದರೆ ಕಳೆದ ದಶಕದಲ್ಲಿ ಸಮಾಜ ವಿಜ್ಞಾನ ನಿಕಾಯಕ್ಕೆ ಸೇರಿದ ನಮ್ಮವರೇ ಆದ ಕೆಲವು ಅಧ್ಯಾಪಕರು ಮತ್ತು ಸಂಶೋಧಕರು -

’ಜಾತಿ ನೀವಂದುಕೊಂಡಷ್ಟು ಕೆಟ್ಟದ್ದೇನಲ್ಲ. ಅಸಮಾನತೆಯಲ್ಲಿ ತಪ್ಪೂ ಇಲ್ಲ. ಅಸಮಾನತೆ ಎಲ್ಲಿಲ್ಲ?. ಜಗತ್ತಿನ ಎಲ್ಲ ಕಡೆಯೂ ಅಸಮಾನತೆ ಎನ್ನುವುದು ಬೇರೆಬೇರೆ ರೂಪದಲ್ಲಿ ಇದೆ. ಹಾಗೆಯೇ ನಮ್ಮಲ್ಲೂ ಇತ್ತು. ಆದರೆ ನೀವು ಹೇಳುವಂತೆ ನಮ್ಮಲ್ಲಿ ಜಾತಿ ಯಾವತ್ತೂ ಒಂದು ಸಾಮಾಜಿಕ ಪಿಡುಗು ಆಗಿ ಇರಲಿಲ್ಲ. ಅದು ಒಂದು ಪಿಡುಗು ಎಂದು ನಮಗೆ ಹೇಳಿಕೊಟ್ಟವರೇ ಬ್ರಿಟಿಷರು. ನಾವು ಅದನ್ನು ಉರು ಹೊಡೆಯುತ್ತಿದ್ದೀವಿ. ಭಾರತದಲ್ಲಿ ಜಾತಿ ಎನ್ನುವುದು ಆಧುನಿಕಪೂರ್ವ ಕಾಲದಲ್ಲಿ ಒಂದು ಸಮಸ್ಯೆಯೇ ಆಗಿರಲಿಲ್ಲ. ಅದು ನೀವು ಹೇಳುವಷ್ಟು ದೊಡ್ಡ ಸಮಸ್ಯೆ ಆಗಿರುತ್ತಿದ್ದರೆ ವಚನ ಸಾಹಿತ್ಯದಲ್ಲಿ ಜಾತಿಯ ಪ್ರಶ್ನೆ ಬಹಳ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ವಾಸ್ತವದಲ್ಲಿ ಹಾಗೆ ಇಲ್ಲ. ವಚನಗಳಲ್ಲಿ ಜಾತಿಯ ಉಲ್ಲೇಖವನ್ನು ಶೇಕಡಾವಾರು ಪ್ರಮಾಣದಲ್ಲಿ ಲೆಕ್ಕ ಹಾಕಿದರೆ ಬಹಳ ಕಡಿಮೆ ಸಂಖ್ಯೆಯ ವಚನಗಳು ಜಾತಿಯ ಬಗ್ಗೆ ಪ್ರಸ್ತಾವಿಸಿವೆ. ಹಾಗಾಗಿ ಆಗಿನ ಕಾಲದಲ್ಲಿ ಜಾತಿ ಅನ್ನುವುದು ಅಷ್ಟೊಂದು ದೊಡ್ಡ ಸಮಸ್ಯೆ ಆಗಿರಲಿಲ್ಲ. ಜಾತಿ ಒಂದು ಸಮಸ್ಯೆ ಎಂದು ಆದದ್ದು ಬ್ರಿಟಿಷರು ಬಂದು ನಮ್ಮನ್ನು ಆಳಿದ ಬಳಿಕವೇ. ವಸಾಹತುಶಾಹಿ ಸಂದರ್ಭದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ಬ್ರಿಟಿಷರು ನಮ್ಮನ್ನು ಒಡೆಯುವುದಕ್ಕಾಗಿ ನಮ್ಮ ನಡುವೆ ಇರುವ ಜಾತಿಯನ್ನು ಮತ್ತು ಅಸಮಾನತೆಯನ್ನು ಒಂದು ಸಮಸ್ಯೆಯನ್ನಾಗಿ ನಮಗೆ ಕಾಣಿಸಿದರು. ಜನರ ಅನುಭವದಲ್ಲಿ ಜಾತಿಯ ಬಗ್ಗೆ ಅಂಥ ಹೇವರಿಕೆಯ ಮನೋಭಾವವೂ ಇಲ್ಲ. ಪ್ರತಿಯೊಂದು ಜಾತಿಯವರಿಗೂ ತಮ್ಮ ಜಾತಿಯ ಬಗ್ಗೆ ಹೆಮ್ಮೆ ಇದೆ. ಹಾಗಾಗಿ ಜಾತ್ಯಸ್ಥರ ಅನುಭವವೇ ಬೇರೆ. ನೀವು ಹೇಳುತ್ತಿರುವುದೇ ಬೇರೆ’.

- ಹೆಚ್ಚೂ ಕಡಿಮೆ ಇಂಥ ಅರ್ಥ ಬರುವ ಒಂದು ವಾದವನ್ನು ಮಂಡಿಸಿದರು. ಈ ವಾದ ನಮ್ಮಲ್ಲಿ ಅನೇಕರಿಗೆ ಗೊತ್ತು. ಈಗ ಜಾತಿಗೆ ಸಂಬಂಧಿಸಿದ ಎರಡು ವಾದಗಳು ನಮ್ಮ ಮುಂದಿವೆ. ಇವುಗಳಲ್ಲಿರುವ ಸಮಸ್ಯೆಗಳನ್ನು ಮುಂದಿನ ಭಾಗದಲ್ಲಿ ಗಮನಿಸೋಣ.

ಈ ಅಂಕಣದ ಹಿಂದಿನ ಬರಹಗಳು

‘ಸ್ವತಂತ್ರ ಭಾರತ’ ಎಂಬ ಇತ್ಯರ್ಥವಾಗದ ವಿದ್ಯಮಾನ

ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್ ಕಾದಂಬರಿಯೊಂದರ ಮೊದಲ ಪುಟಗಳು

ಅನೇಕಲವ್ಯ – 3

ಅನೇಕಲವ್ಯ-2

ಅನೇಕಲವ್ಯ-1

‘ಇಂದಿರಾಬಾಯಿ’ ಯ ರಾಜಕೀಯ ಓದು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...