ಜಾತ್ಯಾತೀತ ಮನೋಭಾವ

Date: 05-11-2022

Location: ಬೆಂಗಳೂರು


ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಮೊದಲು ಜನ ಸಿದ್ಧರಾಗಬೇಕು. ಜನ ಸಿದ್ಧರಾಗಬೇಕಾದರೆ, ಜನ ಜಾಗೃತಿಯಾಗಬೇಕು. ಅಂತಹ ಕೆಲಸವನ್ನು ಶರಣೆಯರು ಇಲ್ಲಿ ಸಮರ್ಥವಾಗಿ ಮಾಡಿದ್ದಾರೆ. ಭ್ರಾಂತಿಯಿಂದ-ನಿಭ್ರಾಂತಿಯ ಕಡೆಗೆ ಅವರ ಚಲನೆಯಿರುವುದನ್ನು ಕಾಣಬಹುದಾಗಿದೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಜಾತ್ಯಾತೀತ ಮನೋಭಾವದ ಬಗ್ಗೆ ಬರೆದಿದ್ದಾರೆ.

ವೃತ್ತಿಗಳ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಒಂದು ಪ್ರಯತ್ನವಾಗಿ ಜಾತಿ ಪ್ರಾರಂಭವಾಯಿತು. ಆಗ ಜಾತಿಯೆಂಬುದು ವೃತ್ತಿಯನ್ನು ಸೂಚಿಸುವ ಸಂಕೇತವಾಗಿತ್ತು. ಆದರೆ ಚಾತುವರ್ಣವ್ಯವಸ್ಥೆ ಬಂದ ನಂತರ ಜಾತಿಯೆಂಬುದು ಮೇಲು-ಕೀಳುಗಳನ್ನು ಸೂಚಿಸುವ ಸಾಧನವಾಯಿತು. ಇತ್ತೀಚಿಗಂತೂ ಜಾತಿಯೆಂಬುದು ರಾಜಕಾರಣಿಗಳಿಗೆ ಚುನಾವಣೆಯ ತಂತ್ರವಾಯಿತು. ಹೀಗಾಗಿ `ಜಾತಿ' ಎಂದಾಕ್ಷಣ ಒಂದೇ ರೀತಿಯಾದ ಅರ್ಥಗಳಿಲ್ಲ. ಆ ಅರ್ಥಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿವೆ.

ಶರಣರು ಚಾತುರ್ವರ್ಣ ವ್ಯವಸ್ಥೆಯನ್ನು ನೇರವಾಗಿ ವಿರೋಧಿಸಿದ್ದರಿಂದ, ಅವರು ಜಾತಿ-ಜಾತಿಗಳಲ್ಲಿಯ ಅಸಮಾನತೆಯನ್ನು ಗುರುತಿಸಿದರು. ಜಾತಿಯನ್ನು ವಿನಾಶಗೊಳಿಸಿದರೆ ವರ್ಗ ಹುಟ್ಟಿಕೊಳ್ಳುತ್ತವೆ. ವರ್ಗವನ್ನು ಹೋಗಲಾಡಿಸಿದರೆ ಗುಂಪು ಹುಟ್ಟಿಕೊಳ್ಳುತ್ತವೆ. ಹೀಗಾಗಿ ವ್ಯವಸ್ಥೆಯಲ್ಲಿರುವ ಈ ವರ್ಗೀಕರಣವನ್ನು ನಾಶಮಾಡುವದಕ್ಕಿಂತ ಅವುಗಳಲ್ಲಿ ಸಮಾನತೆಯನ್ನು ಹುಟ್ಟುಹಾಕುವುದೇ ಸರಿಯೆಂದು ಶರಣರು ನಿರ್ಧರಿಸಿದರು. ಈ ಸಿದ್ಧಾಂತದ ಹಿನ್ನಲೆಯಲ್ಲಿ ಅವರು ಜಾತಿ-ಜಾತಿಗಳಲ್ಲಿ ಮೇಲು-ಕೀಳುಗಳೆಂಬುದಿಲ್ಲವೆಂದು ಸ್ಪಷ್ಟಪಡಿಸಿದರು.

ವಚನಚಳವಳಿಯ ಮೂಲ ಉದ್ದೇಶವೇ ಸಾಮಾಜಿಕ ನ್ಯಾಯವನ್ನು ತರುವುದಾಗಿತ್ತು. ಹೀಗಾಗಿ ಅವರು ಜಾತಿ ಸಮಾನತೆಗಾಗಿ, ವರ್ಗ ಸಮಾನತೆಗಾಗಿ,ಲಿಂಗ ಸಮಾನತೆಗಾಗಿ ಪ್ರಯತ್ನಿಸಿದರು. ವಚನಕಾರ್ತಿಯರೂ ಇದೇ ಸಿದ್ಧಾಂತವನ್ನು ಪ್ರತಿಪಾದಿಸಿದರು. ಜಾತಿಯಲ್ಲಿ ಮೇಲು-ಕೀಳು ಎಂಬ ಭಾವನೆ ಇರುವುದು ದಲಿತರಿಗೆಸಂಕಟವಾಗಿ ಕಾಡಿದೆ. ಗಂಡು-ಹೆಣ್ಣುಗಳಲ್ಲಿರುವ ಲಿಂಗ ಅಸಮಾನತೆಯತ್ತ ವಚನ ಕಾರ್ತಿಯರು ಗಂಭೀರವಾಗಿ ಚಿಂತನೆಗೆ ತೊಡಗಿದರು. ಜಾತಿಯೆಂಬುದು ಹೇಗೆ ಅಸ್ಪಶ್ಯರನ್ನು ಪಶು-ಪ್ರಾಣಿಗಳಿಗಿಂತ ಕೀಳಾಗಿಸಿತೋ, ಅದೇರೀತಿ ಲಿಂಗಭೇದವು ಮಹಿಳೆಯರ ಅವನತಿಗೆ ಕಾರಣವಾಯಿತು. ಈ ಸತ್ಯವನ್ನರಿತ ವಚನಕಾರ್ತಿಯರು ಜಾತಿಭೇದ ಮತ್ತು ಲಿಂಗಭೇದ ಎರಡರ ವಿರುದ್ಧವೂ ಹೋರಾಟಕ್ಕಿಳಿದರು.

``ಶೀಲವಂತನಾದಡೆ ಜಾತಿಯ ಬಿಡಬೇಕು ಶಿವಜ್ಞಾನಿಯಾದರೆ ಸಮಯವ ಬಿಡಬೇಕು
ಹಿಂಗಲ್ಲದೆ ಜಗದಲ್ಲಿ ನಡೆವ ಭ್ರಾಂತಕ ಸುದ್ಧಿಯೇಕೆ
ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ''
- ಅಮುಗೆ ರಾಯಮ್ಮ (ಸ.ವ. ಸಂ. 5, ವ-691, 1993)

ಅಮುಗೆ ರಾಯಮ್ಮ ಈ ವಚನದಲ್ಲಿ ಧಾರ್ಮಿಕ ಪರಿಭಾಷೆಯ ಮೂಲಕ ಜಾತಿ ನಿರಾಕರಣೆಯ ಮಾತನ್ನಾಡಿದ್ದಾಳೆ. ಇಲ್ಲಿ ಆಕೆ ಎರಡು ಸಂಗತಿಗಳನ್ನು ಪ್ರಸ್ತಾಪಿಸಿದ್ದಾಳೆ. ಶೀಲವಂತ ಮತ್ತು ಶಿವಜ್ಞಾನಿ ಈ ಎರಡೂ ಪದಗಳಿಗೆ ಶರಣರಲ್ಲಿ ಗೌರವವಿದೆ. ಶೀಲಮಾಡುವವರು, ಮಡಿಯುಡಿ ಮಾಡುವವರು ಶೀಲವಂತರೆಂದು ಹಿಂದಿನವರ ನಂಬಿಕೆಯಾಗಿತ್ತು. ಶರಣೆಯರು ಅಂತಹ ನಂಬಿಕೆಗಳನ್ನು ಬುಡಮೇಲು ಮಾಡಿದರು. ಜಾತಿಯನ್ನು ಬಿಟ್ಟವನೇ ನಿಜವಾದ ಶೀಲವಂತನೆಂದು ಸಾರಿದರು. ಶರಣರಲ್ಲಿ ಗುಂಪು ಕಟ್ಟುವುದನ್ನು (ಸಮಯವನ್ನು) ಬಿಟ್ಟವನೇ ನಿಜವಾದ ಶಿವಜ್ಞಾನಿಯೆಂದು ಹೇಳಿದರು. ಅಮುಗೆ ರಾಯಮ್ಮನು ಇಲ್ಲಿ ಶೀಲವಂತ ಮತ್ತು ಶಿವಜ್ಞಾನಿ ಪದಗಳಿಗೆ ಹೊಸ ಅರ್ಥ ನೀಡಿದ್ದಾಳೆ. ಜಾತಿಯನ್ನು ಬಿಟ್ಟಾಗ, ಗುಂಪುಗಾರಿಕೆಯಿಂದ ದೂರಸರಿದಾಗ ಮಾತ್ರ ಶೀಲವಂತ, ಶಿವಜ್ಞಾನಿಯಾಗಲು ಸಾಧ್ಯವೆಂದು ಇಲ್ಲಿ ಅಮುಗೆ ರಾಯಮ್ಮ ಸ್ಪಷ್ಟಪಡಿಸಿದ್ದಾಳೆ. ಈ ಪದಗಳಿಗೆ ತಪ್ಪು ಅರ್ಥ ಕಲ್ಪಿಸಿದವರು ಜಾತಿವಾದಿಗಳು, ಸಂಪ್ರದಾಯವಾದಿಗಳು, ಡಾಂಭಿಕ ಭಕ್ತರೂ ಆಗಿದ್ದರು. ಇಂತಹ ಸಾಂಪ್ರದಾಯಿಕ ನೆಲೆಗಳನ್ನು ನೇರವಾಗಿ ಸ್ಫೋಟಿಸಿದ ರಾಯಮ್ಮ ಈ ಪದಗಳಿಗೆ ಹೊಸ ಅರ್ಥನೀಡಿದಳು. ಇದು ಜನರಲ್ಲಿ ಮೂಡಿಸಬಹುದಾದ ನಿಜವಾದ ಜಾಗೃತಿಯಾಗಿದೆ.

ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಮೊದಲು ಜನ ಸಿದ್ಧರಾಗಬೇಕು. ಜನ ಸಿದ್ಧರಾಗಬೇಕಾದರೆ, ಜನ ಜಾಗೃತಿಯಾಗಬೇಕು. ಅಂತಹ ಕೆಲಸವನ್ನು ಶರಣೆಯರು ಇಲ್ಲಿ ಸಮರ್ಥವಾಗಿ ಮಾಡಿದ್ದಾರೆ. ಭ್ರಾಂತಿಯಿಂದ-ನಿಭ್ರಾಂತಿಯ ಕಡೆಗೆ ಅವರ ಚಲನೆಯಿರುವುದನ್ನು ಕಾಣಬಹುದಾಗಿದೆ.

``ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ? ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ? ಎಲ್ಲಿ ನೋಡಿದಡೆ ಬಯಲೊಂದೆ,
ಭಿತ್ತಿಯಿಂದ ಒಳ ಹೊರಗೆಂಬ ನಾಮವೈಸೆ
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ''
- ಬೊಂತಾದೇವಿ (ಸ.ವ. ಸಂ. 5, ವ-1094, 1993)

ಈ ವಚನದಲ್ಲಿ ಬೊಂತಾದೇವಿ ನಿಸರ್ಗದನೇಮದ ಮೂಲಕ ಜಾತಿ ಅಸಮಾನತೆಯನ್ನು ಹೋಗಲಾಡಿಸಿದ್ದಾಳೆ. ತುಂಬ ಸರಳವಾದ ಉದಾಹರಣೆ ನೀಡುವ ಮೂಲಕ, ಈಕೆ ಜಾತ್ಯಾತೀತ ನಿಲುವನ್ನು ಸ್ಪಷ್ಟಪಡಿಸಿದ್ದಾಳೆ. ಬಯಲು ಎಂಬುದು ಊರ ಒಳಗೂ ಇದೆ. ಊರ ಹೊರಗೂ ಇದೆ. ಹೀಗೆ ಬೇರೆ ಬೇರೆ ಕಡೆ ಇರುವ ಬಯಲು ಒಂದೇಯಾಗಿದೆ. ಅದಕ್ಕೆ ಊರಹೊರಗಣ ಬಯಲು ಅಥವಾ ಊರಒಳಗಣ ಬಯಲು ಎಂದು ಯಾರೂ ಕರೆಯುವುದಿಲ್ಲ. ಎಲ್ಲಿ ನೋಡಿದರೂ ಬಯಲು ಒಂದೇಯಾಗಿದೆ.

ನಿಸರ್ಗದ ನಿಯಮ ಹೀಗೆ ಒಂದೇಯಾಗಿರುವಾಗ ಈ ಸಮಾನತೆಯನ್ನು ಬಯಸದ ಚಾತುರ್ವರ್ಣ ವ್ಯವಸ್ಥೆ ಊರು-ಕೇರಿಗಳೆಂದು ಗ್ರಾಮೀಣ ಜನರನ್ನು ವಿಂಗಡಿಸಿದೆ. ಊರೊಳಗೆ ಬ್ರಾಹ್ಮಣರು, ಮೇಲ್ಜಾತಿಯವರು ಇದ್ದರೆ, ಊರ ಹೊರಗೆ ಕೇರಿಯಲ್ಲಿ ಹೊಲೆಯರು-ಮಾದಿಗರು ಇರುತ್ತಾರೆ. ಬಯಲು ಒಂದೇ ಇದೆ, ಆಕಾಶ ಒಂದೇ ಇದೆ, ಭೂಮಿ ಒಂದೇ ಇದೆ. ಹೀಗಿರುವಾಗ ಊರು-ಕೇರಿಯೆಂಬ ವಿಂಗಡಣೆ ಏಕೆಂದು ಪ್ರಶ್ನಿಸಿರುವ ಬೊಂತಾದೇವಿ ಊರೊಳಗೆ ಬ್ರಾಹ್ಮಣ ಬಯಲು,ಊರ ಹೊರಗೆ ಹೊಲೆ ಬಯಲೆಂದುಂಟೆ ಎಂದು ಪ್ರಶ್ನಿಸಿದ್ದಾಳೆ. ಹೀಗೆ ಪ್ರಶ್ನೆಗಳ ಮೂಲಕ ಚರ್ಚೆಯ ಮೂಲಕ ಜನಸಾಮಾನ್ಯರಲ್ಲಿದ್ದ ಅಜ್ಞಾನವನ್ನು ಹೊಡೆದೋಡಿಸಿದ ಶಿವಶರಣೆಯರು ಕ್ರಾಂತಿಕಾರಕ ವಿಚಾರಗಳನ್ನು ಹೇಳಿದ್ದಾರೆ. ಸತ್ಯಸಂಗತಿಗಳನ್ನು ತುಂಬ ಸರಳವಾಗಿ, ನೇರವಾಗಿ ಪ್ರತಿಪಾದಿಸುತ್ತ ಜನಸಮುದಾಯದಲ್ಲಿ ಜಾಗೃತಿಯನ್ನುಂಟು ಮಾಡಿದ್ದಾರೆ. ಇಂತಹ ಉದಾಹರಣೆಗಳನ್ನು ಕೊಟ್ಟಾಗ ಯಾರಾದರೂ ತಲೆಬಾಗಲೇಬೇಕಾಗುತ್ತದೆ. ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಶರಣೆಯರು ಹೀಗೆ ಸದ್ದಿಲ್ಲದೆ ಸಾಮಾಜಿಕ ಸಮಾನತೆ ತರಲು ಪ್ರಯತ್ನಿಸಿದ್ದಾರೆ.

``ಕುರಿಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು ಶಿವಗೆ ಪಂಚಾಮೃತವ ಕರೆವ ಪಶುವತಿಂಬ ಮಾದಿಗ ಕೀಳು ಜಾತಿಯೆಂಬರು ಅವರೆಂತು ಕೀಳು ಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೋ?
ಬ್ರಾಹ್ಮಣರುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿನೆಕ್ಕಿ ಹೋಯಿತು. ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು. ಅದೆಂತೆಂದಡೆ: ಸಿದ್ಧಲಿಕೆಯಾಯಿತು, ಸಗ್ಗಳೆಯಾಯಿತು. ಸಿದ್ಧಲಿಕೆಯ ತುಪ್ಪವನು, ಸಗ್ಗಳೆಯ ನೀರನು ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ ಉರಿಲಿಂಗ ಪೆದ್ದಿಗಳರಸ ಬಲ್ಲನವ್ವಾ''
- ಕಾಳವ್ವೆ (ಸ.ವ.ಸಂ.5, ವ-733, 1993)

ಕಾಳವ್ವೆಯ ಈ ವಚನದಲ್ಲಿ ಎರಡು ಮುಖ್ಯ ವಿಷಯಗಳಿವೆ. ಜಾತಿಯಲ್ಲಿರುವ ಮೇಲು-ಕೀಳು ಕುರಿತಂತೆ ಇಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳಿವೆ. ಈ ವಚನ ರಚನೆಯು ದಲಿತ ಆಹಾರ ಪದ್ಧತಿಗೆ ಸಂದ ಗೌರವವಾಗಿದೆ. ಇಲ್ಲಿ ಕಾಳವ್ವೆ ತುಂಬ ಸರಳವಾದ ನುಡಿಗಳಲ್ಲಿ ಈ ಜಾತಿತಾರತಮ್ಯವನ್ನು ನಿರಾಕರಿಸುತ್ತ ಹೋಗುತ್ತಾಳೆ. ಕುರಿ, ಕೋಳಿ, ಕಿರಿಮೀನು, ಇವುಗಳನ್ನು ಯಾರೂ ಪೂಜಿಸುವುದಿಲ್ಲ. ಆದರೆ ಅದೇ ಆಕಳನ್ನು ಎಲ್ಲರೂ ಪೂಜಿಸುತ್ತಾರೆ. ಅದು ಶಿವನಿಗೆ ಪಂಚಾಮೃತವನ್ನು ಕೊಡುತ್ತದೆ. ಪೂಜೆಗೆ ಯೋಗ್ಯವಲ್ಲದ ಪ್ರಾಣಿಗಳನ್ನು ಬ್ರಾಹ್ಮಣರು ಹಿಂಸೆ ಮಾಡಿ ತಿಂದಿದ್ದಾರೆ. ಪೂಜೆಗೆ ಯೋಗ್ಯವಾದ ಪ್ರಾಣಿಯನ್ನು ಮಾದಿಗರು ಅಹಿಂಸೆಯ ಮೂಲಕ, ಅದು ಸತ್ತಾಗ ತಿಂದಿದ್ದಾರೆ. ಒಂದು ಹಿಂಸೆಯ ಮೂಲಕ ಆಹಾರವನ್ನು ಹುಡುಕುವ ಪ್ರಯತ್ನವಾದರೆ ಮತ್ತೊಂದು ಅಹಿಂಸೆಯ ಮೂಲಕ ಆಹಾರವನ್ನು ಕಂಡುಕೊಳ್ಳುವ ಕ್ರಮವಾಗಿದೆ.

ಹೀಗಿದ್ದಾಗ ಇಲ್ಲಿ ಯಾರು ಕುಲಜರು? ಯಾವ ಜಾತಿಗಳು ಕೀಳು? ಎಂಬ ಪ್ರಶ್ನೆಗಳನ್ನು ಕಾಳವ್ವೆ ಕೇಳಿದ್ದಾಳೆ. ಕಾಳವ್ವೆಯ ಈ ಪ್ರಶ್ನೆಗಳಿಗೆ ಇಂದಿಗೂ ಸಮಾಜವ್ಯವಸ್ಥೆಯಿಂದ ಉತ್ತರಗಳು ಸಿಕ್ಕಿಲ್ಲ. ಸಿದ್ದಲಿಕೆಯೆಂದರೆ ಎಣ್ಣೆ ಅಳೆಯುವ ಪಾತ್ರೆಯಾಗಿದೆ. ಇನ್ನು ಸುಗ್ಗಳೆಯೆಂದರೆ ತೊಗಲಿನ ಚೀಲವೆಂಬ ಅರ್ಥವಿದೆ. ಇಂತಹ ತೊಗಲಿನ ಚೀಲದ ನೀರು ಪವಿತ್ರವೆಂದು ಕುಡಿಯುವ ಬ್ರಾಹ್ಮಣರು ಏಕೆ ಹೊಲೆ-ಮಾದಿಗರನ್ನು ಪಶು- ಪ್ರಾಣಿಗಳಿಗಿಂತ ಕಡೆಯಾಗಿ ಕಂಡರೆಂದು ಕಾಳವ್ವೆ ಇಲ್ಲಿ ಪ್ರಶ್ನಿಸಿದ್ದಾಳೆ.

"ಕುಲಮದವೆಂಬುದಿಲ್ಲ ಅಯೋನಿ ಸಂಭವವಾಗಿ ಛಲಮದವೆಂಬುದಿಲ್ಲ ಪ್ರತಿದೋರನಾಗಿ ಧನಮದವೆಂಬುದಿಲ್ಲ ತ್ರಿಕರಣಶುದ್ಧನಾಗಿ
ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದನಾಗಿ..."
- ಅಕ್ಕಮಹಾದೇವಿ (ಸ.ವ. ಸಂ. 5, ವ-176, 1993)

ಅಷ್ಟಮದಗಳಲ್ಲಿ ಕುಲಮದವೂ ಒಂದು. ಊರೊಳಗೆ ಇದ್ದವರು ಕುಲಜರು, ಊರ ಹೊರಗಿದ್ದವರು ನೀಚರು ಎಂಬ ಭಾವನೆಯನ್ನು ಚಾತುರ್ವರ್ಣ ವ್ಯವಸ್ಥೆ ಹುಟ್ಟುಹಾಕಿತ್ತು. ಇದನ್ನು ವಿರೋಧಿಸಿರುವ ಅಕ್ಕಮಹಾದೇವಿ ಈ ವಚನದಲ್ಲಿ ಎಲ್ಲ ರೀತಿಯ ಮದಗಳನ್ನೂ ತಿರಸ್ಕರಿಸಿದ್ದಾಳೆ. ಮೇಲು ಜಾತಿಯಲ್ಲಿ ಹುಟ್ಟಿದಾಕ್ಷಣವೇ ತಾನು ಶ್ರೇಷ್ಠ ಎಂಬ ತಿಳುವಳಿಕೆಯನ್ನು ಚಾತುರ್ವರ್ಣ ವ್ಯವಸ್ಥೆ ಹುಟ್ಟುಹಾಕಿತ್ತು. ಹೀಗಾಗಿ ಕುಲಮದಕ್ಕೆ, ಧನಮದಕ್ಕೆ ನೇರವಾಗಿ ಚಾತುರ್ವರ್ಣ ವ್ಯವಸ್ಥೆಯೇ ಕಾರಣವಾಗಿದೆ. ಇಂತಹ ಜಾತಿ ಮತ್ತು ಕುಲಗಳಿಂದ ಹುಟ್ಟುವ ಅಸಮಾನತೆಯನ್ನು ಶರಣೆಯರು ನೇರವಾಗಿಯೇ ತಿರಸ್ಕರಿಸಿದ್ದಾರೆ.

ಮೇಲುಜಾತಿ-ಕೀಳುಜಾತಿಗಳಲ್ಲಿ ಕಂದಕಗಳಿರುವಂತೆ, ಅರಸ ಮತ್ತು ಆಳು ಈ ಇಬ್ಬರಲ್ಲಿಯೂ ಭಯಂಕರವಾದ ಅಸಮಾನತೆಯಿದೆ. ಒಂದು ಜಾತಿಸಂಘರ್ಷಕ್ಕೆ ಕಾರಣವಾದರೆ, ಮತ್ತೊಂದು ವರ್ಗಸಂಘರ್ಷಕ್ಕೆ ಕಾರಣವಾಗುತ್ತದೆ. ಅಕ್ಕಮಹಾದೇವಿ ಆಳು ಮತ್ತು ಅರಸರಲ್ಲಿ ಭೇದಭಾವವಿರಬಾರದೆಂದು ಹೇಳುವುದರ ಮೂಲಕ ವರ್ಗ ಸಮಾನತೆಗೂ ಕಾರಣಳಾಗಿದ್ದಾಳೆ. ಕೌಶಿಕ ಒಬ್ಬ ಅರಸನಾಗಿದ್ದರೂ ಕೂಡ ಅವನು ಶ್ರೇಷ್ಠನೆಂದು ಆಕೆ ಎಂದಿಗೂ ಭಾವಿಸಲಿಲ್ಲ.

"ಆಳುತನದ ಮಾತನಾಡದಿರೆಲವೊ ಮೇಲೆ ಕಾರ್ಯದಿಮ್ಮಿತ್ತಣ್ಣಾ..."
- ಅಕ್ಕಮಹಾದೇವಿ (ಸ.ವ.ಸಂ.5, ವ-70, 1993)
"ಆಳುತನದ ಮಾತನೇರಿಸಿ ನುಡಿದಡೆ
ಆಗಳೆ ಕಟ್ಟದೆನು ಗಂಡುಗಚ್ಚೆಯ..."
- ಅಕ್ಕಮಹಾದೇವಿ (ಸ.ವ.ಸಂ.5, ವ-71, 1993)

ಈ ಎರಡು ವಚನಗಳಲ್ಲಿ ವರ್ಗಹೋರಾಟದ ಆಶಯಗಳಿವೆ. ಆಳುತನದ ಮಾತನ್ನೇ ಆಡಬೇಡವೆಂದು ಆಕೆ ಸ್ಪಷ್ಟವಾಗಿ ಹೇಳುತ್ತಾಳೆ. ಒಂದುವೇಳೆ ಹೀಗೆ ಆಳುತನದ ಮಾತನಾಡಿದರೆ ಗಂಡುಗಚ್ಚೆಯನ್ನು ಕಟ್ಟಬೇಕಾಗುತ್ತದೆಂದು ಎಚ್ಚರಿಕೆಯನ್ನು ಕೊಡುತ್ತಾಳೆ. 12ನೇ ಶತಮಾನದಲ್ಲಿಯೇ ವರ್ಗಹೋರಾಟದ ಬೀಜಗಳನ್ನು ಕಾಣಬಹುದಾಗಿದೆ.

ಬ್ರಾಹ್ಮಣ-ಹೊಲೆಯ ಜಾತಿಗಳ ಅಸಮಾನತೆ ಎಷ್ಟೊಂದು ಸಂಕಟವನ್ನುಂಟುಮಾಡುತ್ತ ದೆಯೋ, ಅದೇರೀತಿ ಆಳು-ಅರಸ ಎಂಬ ಭೇದ ಕೀಳರಿಮೆಯನ್ನು ಹುಟ್ಟುಹಾಕುತ್ತದೆ. ಇಂತಹ ಸಂಕಟ-ಕೀಳರಿಮೆಗಳಿಂದ ಹೊರಬರಬೇಕೆಂದು ಶರಣೆಯರು ಕರೆಕೊಟ್ಟಿದ್ದಾರೆ. ವರ್ಣ ಅಸಮಾನತೆಯ, ವರ್ಗ ಅಸಮಾನತೆಯ ಹುನ್ನಾರಗಳನ್ನು ಹೇಳುತ್ತಲೇ, ಲಿಂಗ ಅಸಮಾನತೆಯ ಅಪಾಯವನ್ನೂ ವಚನಕಾರ್ತಿಯರು ಹೇಳಿದ್ದಾರೆ. ಅಕ್ಕಮಹಾದೇವಿ, ನೀಲಾಂಬಿಕೆ, ಸತ್ಯಕ್ಕ, ಗೊಗ್ಗವ್ವೆ, ಆಯ್ದಕ್ಕಿ ಲಕ್ಕಮ್ಮ, ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಈ ಮೊದಲಾದ ವಚನಕಾರ್ತಿಯರು ಈ ಬಗೆಗೆ ದನಿಯೆತ್ತಿದ್ದಾರೆ. "ಲಿಂಗ ರಾಜಕಾರಣ" ಎಂಬ ಅಧ್ಯಾಯದಲ್ಲಿ ಈ ವಿಷಯದ ಬಗೆಗೆ ಚರ್ಚಿಸಲಾಗಿದೆ. ಆದರೂ ಇಲ್ಲಿ ಗೊಗ್ಗವ್ವೆಯ ಒಂದು ವಚನವನ್ನು ಉದಾಹರಿಸಲಾಗಿದೆ.

"ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಮೀಸೆ ಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ ಹೆಣ್ಣೊ ಗಂಡೊ ನಾಸ್ತಿನಾಥಾ"
- ಗೊಗ್ಗವ್ವೆ (ಸ.ವ.ಸಂ.5, ವ-779, 1963)

ಇದೇ ರೀತಿಯ ವಚನವೊಂದು ಜೇಡರ ದಾಸಿಮಯ್ಯನ ವಚನಗಳ ಸಂಗ್ರಹದಲ್ಲಿ ಪ್ರಕಟವಾಗಿದೆ. ಅಲ್ಲಿ ದಾಸಿಮಯ್ಯ "ನಡುವೆ ಸುಳಿವ ಆತ್ಮ" ಒಂದೇ ಎಂದು ಹೇಳಿದ್ದಾರೆ. ಇಲ್ಲಿ ಗೊಗ್ಗವ್ವೆ "ಇಬ್ಬರಲ್ಲೂ ಇರುವ ಜ್ಞಾನ" ಒಂದೇ ಎಂದು ತಿಳಿಸಿದ್ದಾಳೆ. ಆತ್ಮ ಆಧ್ಯಾತ್ಮದ ಪರಿಭಾಷೆಯಾದರೆ, ಜ್ಞಾನ ಸಾಮಾಜಿಕ ಬೆಳವಣಿಗೆಯಾಗಿದೆ. ಗಂಡು-ಹೆಣ್ಣು ಎಂಬ ಭೇದ ಸಲ್ಲದು, ಅವರಲ್ಲಿರುವ ಜ್ಞಾನ ಒಂದೇ ಆಗಿದೆ. ಜ್ಞಾನ ಅಪೂರ್ವವಾದುದೆಂದು ಇಲ್ಲಿ ಗೊಗ್ಗವ್ವೆ ಹೇಳಿದ್ದಾಳೆ. ಹೀಗೆ ಶರಣೆಯರು ಜಾತ್ಯಾತೀತ ಮನೋಭಾವವನ್ನು ಬೆಳೆಸುತ್ತಲೇ ವರ್ಗಅಸಮಾನತೆ, ಲಿಂಗ ಅಸಮಾನತೆಯನ್ನು ಹೊಡೆದೋಡಿಸಿದ್ದಾರೆ.

- ವಿಜಯಶ್ರೀ ಸಬರದ

ಈ ಅಂಕಣದ ಹಿಂದಿನ ಬರೆಹಗಳು:
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...