ಜಟಿಲ ಕಾನನದ ಕುಟಿಲ ಪಥಗಳಲಿ…

Date: 05-10-2022

Location: ಬೆಂಗಳೂರು


ಒಂದೊಂದೆ ಹೆಜ್ಜೆಗಳನ್ನು ಕಿತ್ತಿಡುತ್ತಾ ಕಲ್ಲಿಗೆ ಮೈಕೊಟ್ಟು ಇಳಿಯುತ್ತಾ ಇಕ್ಕೆಲ ಹಾದಿಗಳನ್ನು ಕ್ರಮಿಸುತ್ತ ಕೆಳಗಿಳಿದು ಮತ್ತೆ ಅದೆ ಸಣ್ಣ ಜಲಧಾರೆ , ಹೆಬ್ಬಾವು ಗುಹೆ ದಾಟಿಕೊಂಡು ದುರ್ಗಮ ದಾರಿ ಏರಿಳಿಯುತ್ತಾ ಬರಬೇಕು ಎನ್ನುತ್ತಾರೆ ಲೇಖಕ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ನಡುವಿನ ಚಾರಣದ ಕುರಿತು ಬರೆದಿದ್ದಾರೆ.

ಪಶ್ಚಿಮಘಟ್ಟದ ಹಸಿರು ತಪ್ಪಲೇ ಹಾಗೆ, ಎಲ್ಲರನ್ನೂ ಥಟ್ಟನೆ ತನ್ನೆಡೆಗೆ ಸೆಳೆದುಕೊಳ್ಳುವ ತಾಕತ್ತು ಇರುವಂತದ್ದು. ಅಪಾರ ಕಗ್ಗತ್ತಲೆಯೆಲ್ಲಾ ಸೀಳಿಕೊಂಡು ಬೆಳಕು ಹರಿದಾಗ ಕಾಡನಡುವಿನ ಅರಲುಗದ್ದೆಗೆ ಅಂಟಿಕೊಂಡ ಹೋಮ್ ಸ್ಟೇ ಗೆ ಬಂದು ನಿಂತಿದ್ದೆವು. ಕಣ್ಣು ಹರಿಸಿದಷ್ಟು ಹಸಿರು. ನೂರು ಮರ ನೂರು ಸ್ವರ ಒಂದೊಂದು ಅತಿ ಮಧುರ ಎನ್ನುವ ಬೇಂದ್ರೆ ಸಾಲುಗಳೆ ಕಣ್ಮುಂದೆ ಬರುವ ಪ್ರಕೃತಿ ಸೌಂದರ್ಯ. ಎಷ್ಟೊಂದು ಚೆಂದದ ಇಂಚರ ಎಷ್ಟೊಂದು ತಾಜಾ ಗಾಳಿ ಆಹಾ ಬೆಳಗೆಂದರೆ ಹೀಗೆ ಇರಬೇಕು ಅನ್ನುವಷ್ಟು ಶುದ್ಧ - ಪರಿಶುದ್ಧ ಬೆಳಗು!

ಹೋಮ್ ಸ್ಟೇ ಒಳಗೆ ಟೀ ಕಾಫಿ ತಿಂಡಿ ಮುಗಿಸಿಕೊಂಡು ಹೆಗಲಿಗೆ ಬ್ಯಾಗೇರಿಸಿಕೊಂಡು ಕೊರಳಿಗೆ ಕ್ಯಾಮೆರಾ ಒಂದನ್ನು ನೇತಾಡಿಸಿಕೊಳ್ಳುತ್ತ ಕಾಡ ಹಾದಿಯ ಜಾಡು ಹತ್ತಿ ಹೊರಟರೆ ಅದರ ಸುಖವೆ ಬೇರೆ! ಮಾಘ ಮಾಸಕ್ಕೆ ಮಾಸಿ ಹೋದ ಎಲೆಗಳನುದುರಿಸಿ ಆಗಷ್ಟೆ ಎಳೆಬಿಸಿಲಿಗೆ ಚಿಗಿತು ಹೊಳೆಯುವ ಸಮೃದ್ಧ ಎಲೆಗಳ ಹಸಿರು ಕ್ರಾಂತಿ ನೋಡಲೆರಡು ಕಣ್ಣು ಸಾಲದು! ಆ ಎಳೆ ಎಲೆಯ ಬಣ್ಣವೆ ಕೌತುಕ ಮೂಡಿಸುವಂತದ್ದು. ದಟ್ಟ ಕಾನನದೊಳಗೆ ಬೆಳಕು ಇಣುಕಿದಾಗ ಬಿಸಿಲುಕೋಲುಗಳ ಎಡವಿ ನಡಿಯುವುದೆ ಚೆಂದ.! ಸುಮಾರು ಒಂದೂವರೆ ಮೈಲಿನಷ್ಟು ಉದ್ದಕ್ಕೂ ಮೈಮುರಿದುಕೊಂಡು ಬಿದ್ದ ತರಗೆಲೆಗಳು ಇಡೀ ದಾರಿಯುದ್ದಕ್ಕೂ ಅವುಗಳದೆ ಮುರುಕಲು ಸದ್ದು! ಅಲ್ಲಲ್ಲಿ ಮುರಿದುಬಿದ್ದ ಮರದ ಕೊಳೆತ ಕಾಂಡದ ಪಳಿಯುಳಿಕೆಗಳು, ಇಕ್ಕೆಲಗಳಲ್ಲಿ ಜಾರಿಬರುವ ಸಣ್ಣ ಸಣ್ಣ ತೊರೆಗಳು, ಅಲ್ಲಲ್ಲಿ ಮೆಫಿಲೆ ಮರದೆಲೆಯಂತವೆ ಕೆಂಪು ಬಣ್ಣದ ಚೂಪು ಎಲೆಗಳು, ಎತ್ತರೆತ್ತರದ ಗಿಡಗಳು ಅಲ್ಲಲ್ಲಿ ಹೂಬಿಟ್ಟ ಬಳ್ಳಿಗಳು, ಅಪಾರ ಔಷಧಿ ಸಸಿಗಳು ಎಲ್ಲವೂ ಸಿಗುವುದು ಈ ಒಂದೂವರೆ ಮೈಲಿ ದಾಟುವುದರೊಳಗಾಗಿಯೆ!

ಅಲ್ಲೊಂದು ಸಣ್ಣ ಇಳಿಜಾರಲಿ ದೊಡ್ಡ ಮಣ್ಣಿನ ಮನೆ. ಸುತ್ತಲೂ ಬಾಳಿಗೊನೆ ಅಡಿಕೆ ಹಲವು ಬಗೆಯ ಹೂಗಳ ಅಪೂರ್ವ ತಾಣ! ದಾಹಕ್ಕೆ ಒಂದಷ್ಟು ಕೂತೆದ್ದು ಬೆಟ್ಟ ಇಳಿಯುತ್ತಿದ್ದರೆ ಪೂರಾ ಹಸಿ ಹಸಿ ಹಸಿರು ಎಲ್ಲೆಡೆ ಹಾವಸೆ ಸಸ್ಯಗಳು ಸಣ್ಣದೊಂದು ತೊರೆ ಅಲ್ಲಿ ಯಾವುದ್ಯಾವುದೊ ಜಾತಿಯ ಔಷಧಿ ಸಸ್ಯಗಳು ಅದೊಂದು ದಾಟಿದರೆ ಪಯಣ ರೋಚಕ! ಸದಾ ಕಾಡ ಇಕ್ಕೆಲಗಳಿಂದ ಬಸಿದು ಬರುವ ನೀರೆಲ್ಲಾ ಒಟ್ಟುಗೂಡಿಸಿ ಸುರಿಸುವ ಈ ಸಣ್ಣ ತೊರೆಯ ಮಡಿಲೊಳಗೆ ಎಷ್ಟು ಶುದ್ಧದ ನೀರಿದೆ ಎಂದರೆ ತಳವೂ ಎದ್ದು ಕಾಣುತ್ತದೆ. ಎದೆಯೆತ್ತರದ ಈ ಗುಂಡಿಯಿಂದ ನೀರು ಸಣ್ಣಗೆ ಇಳಿದು ಹೋಗುವ ದಾರಿಯಲ್ಲೆ ನಾವು ಸಾಗಬೇಕು. ಇಲ್ಲಿ ಹಾದಿ ಇಲ್ಲ. ಸಣ್ಣ ಸಣ್ಣ ಕಲ್ಲುಗಳನೆಲ್ಲ ಎಡವಿಕೊಂಡು ನೀರು ಸಾಗುವ ದಾರಿ ಹಿಡಿದು ನಡೆಯಬೇಕು. ಎರಡೂ ತಡಿಗೆ ಹಲವು ಬಗೆಯ ಮರದ ಬೇರುಗಳಿಗೆ ಈ ನೀರು ಸೋಕಿ ಸಾಗುತ್ತದೆ! ಅಲ್ಲಲ್ಲಿ ತಗ್ಗು ದಿಣ್ಣೆಗಳನು ದಾಟುವ ನೀರಿನ ವೇಗ ಮೂರು ಕಾಲಕ್ಕೂ ಹೇಳಿಕೊಳ್ಳುವ ರಭಸದ್ದೇನಲ್ಲ. ಅಲ್ಲಲ್ಲಿ ಕಾಣಸಿಗುವ ಅಶೋಕ ಮರಗಳ ಹೂವು - ಮತ್ತು ಅದರ ವಿಶೇಷತೆಯ ಕುತೂಹಲ ಎಲ್ಲವೂ ನಿಬ್ಬೆರಗಾಗಿಸುತ್ತದೆ! ಒಂದು ಹಂತದ ನಡಿಗೆಯ ತುದಿಯಲ್ಲಿ ಜೋಡು ತೊರೆಗಳು ಸಂಗಮವಾಗಿ ಬಲಕ್ಕೆ ಸಾಗಿಬಿಡುತ್ತವೆ. ಅಲ್ಲಿಂದ ಎಡಕ್ಕೆ ಕಲ್ಲು ಬೆಟ್ಟದ ದಾರಿ.

ಎತ್ತರೆತ್ತರದ ಕಲ್ಲುಗಳು ಒಂದಕ್ಕೊಂದು ಗಂಟು ಬಿಗಿದಂತೆ ಅಂಟುಕೊಂಡೆ ಬಿದ್ದಂತವು. ಅಲ್ಲಲ್ಲಿ ಉಳಿದ ಸಂದುಗಳಿಂದಲೆ ಹರಿದು ಬರುವ ತೊರೆ. ಇಲ್ಲಿ ಪೂರಾ ಏರಿಳಿವಿನ ಆಟ. ಸೂಕ್ಷ್ಮವಾಗಿ ಸಾಗಬೇಕು. ಮೀನಖಂಡಗಳು ದಣಿದು, ಏರಲು ಚೌಕಾಸಿ ಮಾಡಿದರೂ ನಾವು ಅವೆಲ್ಲವನ್ನೂ ಮೀರಿ ಏರಲೆಬೇಕು! ಮಳೆಗಾಲಕ್ಕಂತೂ ಜರ್‍ರನೆ ಜಾರುವ ಸಂಭವವೆ ಹೆಚ್ಚು. ಮತ್ತು ಆಗ ಇಂಬಳದ ಕಾಟವೂ ಅತಿಯಾಗಿರುತ್ತೆ. ಚಳಿಗಾಲ - ಬೇಸಿಗೆಗೆ ಅಷ್ಟೇನೂ ಕಷ್ಟವಲ್ಲವೆಂದರೂ ಬೆವರ ಹನಿ ಬಾಸಿಂಗ ಕಟ್ಟಿ ಬಿಡುತ್ತವೆ!

ಅದು ಹೆಬ್ಬಾವು ಗುಹೆ! ತುಂಬಾ ಎಚ್ಚರಿಕೆಯಿಂದ ಅದೊಂದು ದಾಟಿದರೆ ಎದುರಿಗೆ ಸಣ್ಣದೊಂದು ಜಲಧಾರೆ. ಸುತ್ತಲೂ ಹಚ್ಚ ಹಸಿರು ಕೆಳಗೆ ಇಣುಕಿದರೆ ಬಂಡೆಗಲ್ಲುಗಳು ಎದುರಿಗೆ ತಣ್ಣನೆ ಜಲಧಾರೆ! ಪಕ್ಕದಲ್ಲೆ ಹೆಬ್ಬಾವಿನ ಗುಹೆ ಇದ್ದರೂ ನಿರ್ಭಯದಿಂದ ನೀರಲ್ಲಿ ಈಜಾಡಿ ಬೆವರೆಲ್ಲಾ ತೊಳೆದು ಮೈಮುರಿದು ಮುಳಿಗೆದ್ದು ಒಂದಿಷ್ಟು ನೀರಾಟದಲಿ ಸೋತು ಕಲ್ಲ ಮೇಲಿಂದ ಜಿಗಿದು ನೀರಾಳಕ್ಕೆ ಇಳಿದು ಸಾಕೆನಿಸುವುಷ್ಟು ಮಿಂದೆದ್ದು ರುಚಿರುಚಿಯಾದ ಊಟ ಮಾಡಿ ಗಡತ್ತಾಗಿ ಮರದ ಕೆಳಗೆ ಕೂತು ಹರಟೆ ಹೊಡೆಯಬಹುದು. ಇನ್ನೂ ಮೇಲಕ್ಕೆ ಹೋಗುವ ಉತ್ಸಹವಿದ್ದವರು ಏರಬಹುದು.

ಅದು ದುರ್ಗಮ ಕಲ್ಲು ಇಕ್ಕೆಲಗಳ ಹಾದಿ. ಮಳೆಗಾಲಕ್ಕೆ ಅತಿಯಾಗಿ ಜಾರುತ್ತವೆ. ಕಲ್ಲು ಬಂಡೆಗಳ ಮಧ್ಯೆದಲ್ಲಿ ಅಪೂರ್ವವೆನಿಸುವಂತಹ ಸರೋವರ ಮಾದರಿಯ ಒಂದಷ್ಟು ನೀರು ನಿಲ್ಲಿಸಿಕೊಂಡು ತುಂಬಿದಾಗ ಹೊರಹಾಕುವ ಜಲಸಂಗ್ರಹಗಾರಗಳು, ಅಲ್ಲಲ್ಲಿ ಕಲ್ಲ ತುದಿಗೆ ಜೇನು ಹಿಂಡು, ಗಿಡದ ಕೊಂಬೆಗೆ ಗಿಜುಗನ ಗೂಡು, ವಿಶಾಲವಾಗಿ ಹಾಸಿದ ಏಕಶಿಲಾ ಬೆಟ್ಟ. ಅದರ ಮೇಲೆ ನಮ್ಮ ನಡಿಗೆ ಒಂದು ಹಂತಕ್ಕೆ ತಲುಪಿದಾಗ ಮೇಲಿಂದ ನೀರು ಕಲ್ಲ ಮೈಮೇಲೆ ಕಚಗುಳಿ ಇಡುತ್ತ ತಣ್ಣಗೆ ಹರಿದು ಬರುತ್ತಿತ್ತು. ಇಲ್ಲಿಂದ ಮೇಲೆ ಹೋಗುವುದಿದೆಯಲ್ಲಾ ಕೈಯಲ್ಲಾ ಬೆವರು ಬರಿಸುವಂತಹ ಕಲ್ಲು ಬೆಟ್ಟದ ಹಾದಿ. ಎಂಬತ್ತು ಡಿಗ್ರಿ ಕೋನದಲ್ಲಿ ಮಲಗಿದ ನುಣುಪಾದ ಕಲ್ಲಿನ ಮೇಲೆ ಏನೇ ಕಸರತ್ತು ಮಾಡಿದರೂ ಜರಿದು ಹೋಗುವಂತ ಇಳಿಜಾರ ಹಾದಿ. ಅದನೇರಿ ಸಾಗಬೇಕು. ಯಾವುದೇ ಹಗ್ಗದ ಸಹಾಯ ಇಲ್ಲ. ಎಂಥ ಚಳಿಗಾಲಕ್ಕೂ ಮೈ ಬೆವರುತ್ತದೆ. ಒಂದೊಂದೆ ಹೆಜ್ಜೆಗಳನ್ನು ನಾಜೂಕುತನದಿಂದ ಕಿತ್ತಿಡಬೇಕು. ಪೂರಾ ಬೆಟ್ಟ ಹತ್ತಿದಾಗ ಎದುರಿಗೆ ದೊಡ್ಡ ಜಲಪಾತ ಅದರ ಅಡಿಯಲ್ಲಿ ವಿಸ್ತಾರವಾದ ಆಳಭರಿತ ನೀರಿನ ಗುಂಡಿ. ನೀರು ಬೇರುಗಳ ತೋಯಿಸಿಕೊಂಡು ಅದರ ರುಚಿಯನುಂಡು ಕಲ್ಲ ಬೆನ್ನ ಸವರಿ ಮೇಲಿಂದ ಕೆಳಗೆ ಬೀಳುವಾಗ ಸೃಷ್ಟಿಗೊಳ್ಳುವ ಈ ಅಪೂರ್ವ ದೃಶ್ಯ ನೊಡಲು ಅತಿ ಸುಂದರ. ಮುಂದೆ ಜಲಪಾತ ಹಿಂದೆ ಹಚ್ಚ ಹಸಿರು ಕೆಳಗೆ ತಲೆತಿರುಗುವಂತಹ ನುಣುಪಾದ ಕಲ್ಲು ಬೆಟ್ಟದ ಹಾದಿ. ಈಗ ನಿಂತದ್ದು ಬೆಟ್ಟದ ತುದಿ. ಜಲಪಾತದ ಅಡಿಗೆ ಹೋಗಲು ಹತ್ತು - ಹದಿನೈದು ಮೀಟರ್ ಗಳಷ್ಟು ಈಜಿ ಹೋಗಬೇಕು. ಹೋಗಿದ್ದಾಯ್ತು. ಅಲ್ಲಿಯೂ ಮಿಂದ್ದದ್ದಾಯ್ತು. ಬಗೆ ಬಗೆಯ ಮೀನುಗಳನು ಸಹ ಕಂಡದ್ದಾಯ್ತು. ಇಲ್ಲಿ ಎಷ್ಟು ಚೆಂದದ ಚಳಿಯುಂಟು ಮಾಡುತ್ತದೆಂದರೆ ಇಡೀ ಕಾಡಿನ ಹಸಿ ತೇವವೆಲ್ಲಾ ಮೈಗೆ ಮೆತ್ತಿಬಿಡುವಷ್ಟು ಚೆಂದದ ಅನುಭವ ಈ ಜಲಪಾತ ನಿಡುತ್ತದೆ.

ಒಂದೊಂದೆ ಹೆಜ್ಜೆಗಳನ್ನು ಕಿತ್ತಿಡುತ್ತಾ ಕಲ್ಲಿಗೆ ಮೈಕೊಟ್ಟು ಇಳಿಯುತ್ತಾ ಇಕ್ಕೆಲ ಹಾದಿಗಳನ್ನು ಕ್ರಮಿಸುತ್ತ ಕೆಳಗಿಳಿದು ಮತ್ತೆ ಅದೆ ಸಣ್ಣ ಜಲಧಾರೆ , ಹೆಬ್ಬಾವು ಗುಹೆ ದಾಟಿಕೊಂಡು ದುರ್ಗಮ ದಾರಿ ಏರಿಳಿಯುತ್ತಾ ಬರಬೇಕು. ಇಲ್ಲಿ ಈ ಎರಡು ತೊರೆಗಳ ಸಂಗಮದ ತಡಿಗಳಲ್ಲಿ ಹಾವು - ಚೇಳು - ಏಡಿ - ಮೀನು - ಉಸುಕು - ಜಾರುವ ಕಲ್ಲು - ಮರದ ಬೇರು - ಹಸಿ ಕೆಸರು - ವಿಧವಿಧವಾದ ಹೂಗಳು ಎಲ್ಲವೂ ಕಾಣಸಿಗುತ್ತವೆ. ಅವೆಲ್ಲವುಗಳನು ನೋಡುತ್ತಾ ಮರಳಿ ಮರಳ ಮೇಲೆ ಕಾಲು ಊರುತ್ತಾ ಉರುಳಿಬಿದ್ದ ಮರಕೆ ಕೈ ಆನಿಸಿಕೊಂಡು ಒಂದೊಂದೆ ಹೆಜ್ಜೆಯನ್ನು ಕಿತ್ತಿಟ್ಟುಕೊಂಡು ಒಂದೂವರೆಯಿಂದ ಎರಡು ಕಿಲೊಮೀಟರ್ ವರೆಗೆ ನೀರಿನಲ್ಲಿ ನಡೆಯುತ್ತಾ ವಾಪಸ್ಸಾಗಬೇಕು. ಮತ್ತದೆ ಇಳಿಜಾರಿಗಿದ್ದ ಮನೆ ಈಗ ಏರಿ ಹೋಗಿ ದಾಹಕ್ಕೆ ಕೂತೆದ್ದು ಮತ್ತದೆ ಕಾಡುಗಳಲಿ ಸಂಜೆ ಸೂರ್ಯನ ಕಿರಣಗಳರಸುತ ನಡೆದ ಬರಬೇಕು! ಪಕ್ಷಿಗಳ ಚಿಲಿಪಿಲಿ ಸದ್ದು ಸಂಜೆಯ ಸುಳಿವು ಕೊಟ್ಟು ಸಾಗುತ್ತವೆ. ಸರಿಸೃಪಗಳು ಸರಸರನೆ ಸರಿದು ಹೋಗುತ್ತವೆ. ಸಂಜೆಗೆ ಸೂರ್ಯ ಕಾರ್ಮೋಡಗಳ ದಾಟುತ ಅಲ್ಲೆಲ್ಲೊ ಬೆಟ್ಟದ ಮರೆಯಾದಾಗ ಕಾಡು ಭಯಂಕರ ಕಗ್ಗತ್ತಲದ ದಟ್ಟ ವಾಸನೆ ಹೊಮ್ಮಿಸುತ್ತದೆ. ಇವೆಲ್ಲವೂಗಳನ್ನೂ ಅತಿ ಸೂಕ್ಷ್ಮವಾಗಿ ಗ್ರಹಿಸುತ್ತ ಹೆಜ್ಜೆ ಹಾಕಿ ಹೋಮ್ ಸ್ಟೇಗೆ ಸೇರುವ ಹೊತ್ತಿಗಾಗಲೆ ಸಂಜೆ ಏಳರ ಮೇಲಾಗಿರುತ್ತೆ. ಮೈ ತೊಳೆದುಕೊಂಡು ಹೊಟ್ಟೆಗೊಂದು ಬರೊಬ್ಬರಿ ಊಟ ಬಿದ್ದಾಗ ಅರಲುಗದ್ದೆಯೊಳಗೆ ಫೈರ್ ಕ್ಯಾಂಪ್ ವ್ಯವಸ್ಥೆ ಮಾಡಲಾಗಿರುತ್ತದೆ.

ಎಲ್ಲವೂ ಮರೆತು ಇಲ್ಲಿ ಕಳೆದುಹೋಗಬೇಕು. ಧಗಧಗನೆ ಸುಡುವ ಬೆಂಕಿಯ ಎದುರಿಗೆ ಎಲ್ಲ ಅಹಂನು ಸುಟ್ಟುಬಿಡಬೇಕು. ಅಗಾಧ ಚಳಿಯೊಳಗೆ ಉರಿವ ಬೆಂಕಿ ಎದುರಿನಲಿ ಬೆಚ್ಚನೆ ನೆನಪುಗಳನು ಪೋಣಿಸಿಡಬೇಕು. ಎಲ್ಲವನು ಮೈಮರೆತು ಅನುಭವಿಸಿ ತಣ್ಣಗೆ ಎದ್ದೇಳಬೇಕು. ಹೋಮ್ ಸ್ಟೇ ಆಚೀಚೆ ಟೆಂಟ್ ಹಾಕಿಕೊಂಡೂ ಸಹ ಮಲಗಿಕೊಳ್ಳಬಹುದು. ಬೆಚ್ಚಗೆ ಮಲಗಿ ಎದ್ದಾಗ ಬೆಚ್ಚನೆ ಕಾಫಿ ರೆಡಿಯಾಗಿರುತ್ತೆ. ಬೆಳ್ ಬೆಳಿಗ್ಗೆ ಪೋಟೊ ಶೂಟ್‌ಗೂ ಚೆಂದದ ಜಾಗೆ. ಮಳೆಗಾಲದಲ್ಲಿ ಇಲ್ಲಿ ಮಳೆ ಹಬ್ಬ ಮಾಡಲಾಗುತ್ತದೆ. ನೂರಾರು ತರಹದ ಮಲೆನಾಡ ಅಡಿಗೆ ಇರುತ್ತದೆ. ಹಗ್ಗ ಜಗ್ಗಾಟ‌ , ಕಬಡ್ಡಿ, ಕೆಸರು ಕಂಬಳ ಇವೆಲ್ಲವೂ ಕೆಸರಿನಲ್ಲಿ ನಡೆಯುತ್ತವೆ. ಮೈಗೆ ಕೆಸರಂಟಿಸಿಕೊಂಡು ಆಡುವ ಈ ಆಟಗಳಿಗೆ ಮಳೆಗಾಲವೆ ಸೂಕ್ತ. ಮಳೆಗಾಲದ ಹೊರತಾಗಿ ಇಲ್ಲಿ ಹೋದರೆ ಎರಡನೆ ದಿನ ದಾಂಡೇಲಿ ನೋಡಬಹುದು. ಅದರ ಅನುಭವ ಮತ್ತೊಮ್ಮೆ ಬರೆಯುವೆ. ಇವೆಲ್ಲವುಗಳನು ಇಂಚಿಂಚು ಅನುಭವಿಸಲು ಅಲೆಮಾರಿ ಅಡ್ವೆಂಚರ್ ಎಂಬ ಚಾರಣ ಗುಂಪು ಸಹಕಾರಿಯಾಯಿತು.

ಮೌನೇಶ ಕನಸುಗಾರ

mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ಕಡಲ ಕಿನಾರೆಯ ಸಡಗರದ ಚಿತ್ರಗಳು
ಮೌನಕಣಿವೆಯ ದಟ್ಟ ಕಾನನದೊಳಗೆ...
ಸಾವನದುರ್ಗದ ನೆತ್ತಿಯ ಮೇಲೆ…
ಕುಮಾರಪರ್ವತದ ಚಾರಣ
ವಿಭೂತಿ ಜಲಪಾತದ ವೈಭವ
ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...