ಜೀವ ಜೀವಗಳ ಅಳು…

Date: 13-04-2021

Location: ಬೆಂಗಳೂರು


ದೇಶ ಅಭಿವೃದ್ಧಿ ಹೊಂದಿದೆ ಎಂದು ಹೇಳಿಕೊಳ್ಳುತ್ತಾ ಬಂದರೂ 'ನಾಚಿಕೆ'ಯಿಂದ ಹೊರಬರಲು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ. ತಮ್ಮ ‘ಅನಂತಯಾನ’ ಅಂಕಣದಲ್ಲಿ ಲೇಖಕ ಬಸವರಾಜ ಸಾದರ ಅವರ 'ಚಿನಾರ್ ವೃಕ್ಷದ ಅಳು' ಕಥಾಸಂಕಲನದ ಬಗ್ಗೆ ಪ್ರಸ್ತಾಪಿಸುತ್ತಾ ವಾಸ್ತವವನ್ನು ತಮ್ಮದೇ ಚಿಂತನೆಗಳಲ್ಲಿ ವಿಶ್ಲೇಷಿಸಿದ್ದಾರೆ.

ಭಾಷೆ ಹಲವು, ಭಾವ ಒಂದು. ಆಚಾರ-ವಿಚಾರ ಸಂಪ್ರದಾಯ, ಒಲವು-ನಿಲುವು-ಆಹಾರ ಪದ್ಧತಿಗಳೆಲ್ಲ ಭಿನ್ನವಾಗಿದ್ದರೂ ಒಳ ತುಡಿತ ಮಾತ್ರ ಒಂದೇ. ಹರಿಯುವ ಕಣ್ಣೀರು ಉಪ್ಪು. ಬಸೆಯುವ ರಕ್ತವೂ ಉಪ್ಪುಪ್ಪೇ. ಕಂಬನಿಯು ಯಾವುದೇ ಬಣ್ಣವನ್ನು ಹೊತ್ತು ಹನಿಯುವುದಿಲ್ಲ. ಚಿಮ್ಮುವ ರಕ್ತಕ್ಕೆ ತನ್ನ ನಿಜದ ಬಣ್ಣದ ಹಂಗು ಬಿಟ್ಟರೆ ಇತರೆ ರಂಗುಗಳ ಹಂಗಿರುವುದಿಲ್ಲ. ಆಯಾ ಮಣ್ಣು ಕಟ್ಟಿಕೊಡುವ ಸುಖ-ದುಃಖಗಳ ಭಾವ ತೀವ್ರತೆಯೊಳಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಕಟ್ಟಿದ ಗರ್ಭ ರೂಪ ತಳೆಯಬೇಕಿದ್ದರೆ ಒಂಭತ್ತು ತಿಂಗಳು ಕಾಯಬೇಕು. ಹೊತ್ತು ಹೆತ್ತದ್ದರ ಭಾರವನ್ನೂ ಹೊತ್ತುಕೊಳ್ಳಬೇಕು. 'ಅಳುವ ಕಂದನ ತುಟಿಯು ಹವಳ'ದಂತೆ - ಕಲ್ಪನೆ ಎಲ್ಲಾ ಹೆತ್ತ ಕರುಳಿನದ್ದೂ. ಬಂಧಗಳನ್ನು ಕಟ್ಟುತ್ತಾ ಸಾಗುವಾಗ ಮಮಕಾರ, ವಾಂಛೆ, ಪ್ರೀತಿ, ಸಿಟ್ಟು, ಸೆಡವುಗಳೆಲ್ಲವೂ ಜತೆಯಲ್ಲೇ ಇರುತ್ತವೆ. ಬೇಕಾದ ಕಡೆಗಳಲ್ಲಿ ಕೆಲವೊಮ್ಮೆ ಅವುಗಳನ್ನು ಇಳಿಸಿ ಹಗುರವಾದರೆ; ಇನ್ನು ಕೆಲವೊಮ್ಮೆ ಭಾರವೇರಿಸಿಕೊಂಡು ಹೈರಾಣಾಗಿ ಬಿಡುವುದಿದೆ. ಒತ್ತಡಗಳಿಂದ ಕೂಡಿದ ಬದಲಾದ ಜೀವನ ಕ್ರಮದಲ್ಲಿ ಕಳೆದುಕೊಳ್ಳುವ, ಸರಿದು ಹೋಗುವ, ಕಾರಣ ಹೇಳದೆ ಕಡಿದು ಹೋಗುವ ಸಂಬಂಧಗಳ ಬೇಗುದಿಯು ನಿಡುಸುಯ್ಯುವಂತೆ-ಇಲ್ಲಿನ ಕತೆಗಳು. ಬಂಧ -ಬಂಧಗಳ ನಡುವೆ ಬಿರುಕು ಮೂಡಿ, ಕಿಚ್ಚಿನ ಕಿಡಿ ಹಚ್ಚಿ ಹಾರುವ ಅನುಭವವು ಸಾಮೂಹ್ಯವಾದದ್ದು. ವಿಷಾದ, ಅಗಲಿಕೆ, ಬೇಸರಗಳ ಜೊತೆಯಲ್ಲಿ ಹೆಜ್ಜೆ ಹಾಕುತ್ತ ನಡೆದಾಗ - ನಿಡಿದಾದ ಉಸಿರನ್ನು ಹೊರ ಚೆಲ್ಲುವ ಜೀವದೊಳಗಿನ ಆಸೆಯು ಕಮರಿರುವುದಿಲ್ಲವಷ್ಟೆ.

ಡಾ. ಬಸವರಾಜ ಸಾದರ ಅವರ- ಭಾರತದ ವಿವಿಧ ಭಾಷೆಗಳ ಸಣ್ಣ ಕಥೆಗಳ ಗುಚ್ಛ, 'ಚಿನಾರ್ ವೃಕ್ಷದ ಅಳು'- ಈ ನಿಟ್ಟಿನಲ್ಲಿ ಮುಖ್ಯ ಎನಿಸಿಕೊಳ್ಳುತ್ತದೆ. ಇಲ್ಲಿನ ಕತೆಗಳು ಉಣಿಸುವ ನೋವುಗಳನ್ನು ಓದಿ ಅನುಭವಿಸಬೇಕು. ನೋವುಗಳನ್ನು ಅನುಭವಿಸಿವುದರಲ್ಲಿಯೂ ಒಂದು ತೆರನಾದ ಸುಖವಿದೆ. ಬಹು ಸಾಂಸ್ಕೃತಿಕ ಆಯಾಮವುಳ್ಳ ಈ ದೇಶದಲ್ಲಿ ಎಲ್ಲಾ ಜೀವದ ಭಾವಗಳು ಒಂದೇ ಎನ್ನುವುದನ್ನು ಇಲ್ಲಿಯ ಕತೆಗಳು ಮತ್ತೆ ಮತ್ತೆ ಹೇಳುತ್ತಿವೆ. ಜೀವ ಬಿಂದುವಿನೊಂದಿಗೆ ಉಸಿರಾಡಲು ಶ್ರಮ ಪಡುವ ದೇಹಗಳ ಕಷ್ಟ ಎಲ್ಲಾ ಕಾಲದಲ್ಲೂ ಹೀಗೆಯೇ ಇರುತ್ತವೆಯೇ? ಯೋಚಿಸುವಂತೆ ಮಾಡಿತು. ಕನ್ನಡದ ಭಾವ ಸೀಮೆಯೊಳಕ್ಕೆ ಆಯಾ ಭಾಷೆಗಳ ಭಾವನೆಗಳನ್ನು ತಂದು ಸಮೃದ್ಧವಾಗಿ ಹಿಡಿದಿಡುವಲ್ಲಿ ಕತೆಗಳು ಯಶಸ್ವಿಯಾಗಿವೆ. ಕನ್ನಡದ ಮಣ್ಣಲ್ಲಿ ಕುಳಿತು ಅನ್ಯ ಭಾಷೆಯ ಮಣ್ಣಿನ ಗಂಧವನ್ನು ಹೀರಿ ಅನುಭವಿಸಿ ಬರೆದುದ್ದರಿಂದ- ಇಲ್ಲಿನ ಕತೆಗಳು ನಮ್ಮದೇ ಕತೆಗಳಾಗಿ ನಮ್ಮೊಳಗಿಳಿದು ಕಾಡುತ್ತಿರುತ್ತವೆ.

ದೇಶ ಅಭಿವೃದ್ಧಿ ಹೊಂದಿದೆ ಎಂದು ಹೇಳಿಕೊಳ್ಳುತ್ತಾ ಬಂದರೂ 'ನಾಚಿಕೆ'ಯಿಂದ ಹೊರಬರಲು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಕಾಲಾನುಕಾಲಕ್ಕೆ ತನ್ನ ವಿಸಿಟಿಂಗ್ ಕಾರ್ಡನ್ನು ಹೊಸದಾಗಿ ಅಚ್ಚು ಹಾಕಿಸುವ 'ಎಂ.ಕೆ.ಗಾಂಧಿ'-ಹಸಿದ ಹೊಟ್ಟೆಗಳನ್ನು ತಣಿಸಲು ಸರಕಾರಿ ಕಚೇರಿಗಳನ್ನು ಅಲೆಯುತ್ತಿರುತ್ತಾರೆ. ವಿಪರ್ಯಾಸವೆಂದರೆ, ಅವರ ಊರುಗೋಲನ್ನೂ ಜನ ಬಿಡುವುದಿಲ್ಲವಲ್ಲ! ಲೇಖನಿಯ ಶಾಯಿಯಿಂದ ಒಂದೊಮ್ಮೆ ಹೊಮ್ಮಿದ ಭಾವ ತರಂಗಗಳು ತಂತ್ರಜ್ಞಾನ ಯುಗದಲ್ಲಿ ಭಾವ ಸ್ಪರ್ಶವಿಲ್ಲದ ಮೆಸೇಜುಗಳ- 'ಎಸ್.ಎಂ.ಎಸ್'-ರೂಪ ತಳೆದು, ನಿರ್ಭಾವುಕ ಒಲುಮೆಯ ಹರಿವಿಗೆ ಕಾರಣವಾಗುತ್ತಿರುವುದನ್ನು ನಂಬದೆ ವಿಧಿಯಿಲ್ಲ. ನಿರ್ಭಾವುಕ ವಸ್ತುವೊಂದು ನಮ್ಮ ಭಾವನೆಗಳನ್ನು ಸಾಗಿಸುವ ಪರಿಕರವಾದದ್ದು ಪ್ರಸಕ್ತ ಕಾಲದ ಬಹುದೊಡ್ಡ ನೋವು. ಭಾವನೆಗಳು ಅಡಗಿ ಕುಳಿತ ಪರಿಣಾಮ- ಮಾತುಗಳು ಕಟ್ಟಿ ಹಾಕಲ್ಪಟ್ಟವು. ಕೂಡು ಕುಟು೦ಬದಂತಿರುವ ‘ಚಿನಾರ್ ವೃಕ್ಷದ ಎಲೆ’ಗಳ ಅಳು ನಮ್ಮಂತೆಯೇ. ಅವುಗಳೂ ಭಾವಪೂರ್ಣವಾಗಿ ಉಸಿರಾಡುತ್ತವೆ-ಚಿಗುರೆಲೆ ಆದಿಯಾಗಿ ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳೂ ಹೇಳುತ್ತವೆ- “ಭಾವದೊಲುಮೆಯ ಉಯ್ಯಾಲೆಯಲ್ಲಿ ತೂಗುತ್ತಿದ್ದೇವೆ. ನವಿರಾದ ಸ್ಪರ್ಶಗಳಿಂದ ಪುಳಕಗೊಳ್ಳುತ್ತಿದ್ದೇವೆ”. ನೆಲಕ್ಕೊರಗುವ ಮುನ್ನ ಪ್ರೀತಿಯ ಗೆಳತಿಯತ್ತ ಕೈ ಚಾಚುವ, ತೇವವನ್ನು ಕಳೆದುಕೊಂಡ ಹಳದಿ ಎಲೆಯ ನೋವು ಹೇಳತೀರದ್ದು. ನೋವುಣ್ಣುತ್ತಲೇ ಉರುಳಿದ 'ಚಿನಾರ್ ವೃಕ್ಷದ ಅಳು'ವಿನ ಮುಂದುವರಿದ ಭಾಗವಾಗಿ ಮನುಷ್ಯ ರೂಪಿ 'ಕಣ್ಣೀರಿನಾಕಳು' ಧುತ್ತೆಂದು ಎದುರು ಬಂದು ನಿಂತು ಬಿಡುತ್ತದೆ. ಇವೆರಡರ ಉಸಿರು ಚೆಲ್ಲುವ ಮೊದಲೆದ್ದ ಆಕ್ರಂಧನವು ಆರ್ದ್ರವಾಗಿಸಿ ತೀವ್ರ ಭಾವ ಗೊಂದಲವನ್ನು ಎಬ್ಬಿಸುತ್ತವೆ.

ನಲ್ಮೆಯ ಮನಸ್ಸಿಗೆ, ಹಸಿದ ಹೊಟ್ಟೆಗೆ ನಂಬಿಕೆ ಮುಖ್ಯವಲ್ಲ. ಅರಿಯದೇ ಆದ ಪ್ರಮಾದಕ್ಕೆ ಕೊರಗುತ್ತಲೇ ಇರುವ ಹೊತ್ತಲ್ಲಿ 'ಬರ್ಗರ್' ನ ನಿಜ ರುಚಿಯ ದರ್ಶನವಾದಾಗ ಬೆಂದ ಮನಸ್ಸಿನ ಆನಂದಕ್ಕೆ ಪಾರವೇ ಇರುವುದಿಲ್ಲ. ತುರುಸಿನ ಸ್ಪರ್ಧೆಯಲ್ಲಿ ಬಿದ್ದಿರುವ ಜನಾಂಗವೊಂದಕ್ಕೆ ನಿಜದ ಇರವಿನ ಗೊಡವೆಯೇ ಇರುವುದಿಲ್ಲ. ಯಂತ್ರದಂತಿರುವ ದೇಹದೊಳಕ್ಕೆ ಭಾವರಹಿತ ಹೃದಯ ಕೂತಿರುತ್ತದೆ. ಅಷ್ಟೇ. ಬಿಡುವೆನೆಂದರೂ ಬಿಡನೆನ್ನುವ ಮಾಯೆಯೆದುರು ಶರಣಾಗುವ ಮಕ್ಕಳು ಮತ್ತು ಭಾವ ತೀವ್ರತೆಯನ್ನು ಸಹಿಸಿಯೂ ಏನೂ ಆಗದವರಂತೆ ಒಳಗೊಳಗೇ ಬಿಕ್ಕುವ ಅಪ್ಪ-ಅಮ್ಮಂದಿರು ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಆದ್ದರಿಂದ ಇಂದೆಲ್ಲರ ಮನೆಯೊಳಗೊಬ್ಬ 'ಅಬನ್ ' ಖಂಡಿತಾ ಇದ್ದಾನೆ.

ಹೊಲಸನ್ನೇ ಹೊರುತ್ತಿದ್ದರೂ ರೇಷ್ಮೆಯ ನವಿರಿನಂತಹ ಬಿಳುಪು ತೊಡೆಗಳನ್ನು ಕಂಡದ್ದೇ ವಾಸನೆಯನ್ನು ಸುವಾಸನೆಯ ಪಟ್ಟಕ್ಕೆ ಏರಿಸಲಾಗುತ್ತದೆ. ಒಳ ತೊಡೆಯ ಒಂದಿಂಚಿನ ದೃಶ್ಯ ಕಣ್ಣಿಗೆ ರಾಚಿದ್ದೇ- ಕಲ್ಪನೆಯೊಳಗೆ ಇಳಿದು ನಿತ್ಯವೂ ಒಂದಿಂಚಿನ ಒಳ ತೊಡೆಗಾಗಿ ಭ್ರಮಿಸುತ್ತಿರುವುದು... ಅದೇ ಆಸೆಯು ಭ್ರಮಕನೆದುರು ಬಂದು ನಿಂತಾಗ ಆತ ಆಶಾತೀತ ಅವಸ್ಥೆಗೆ ತಲುಪಿರುವುದು ಜನಪದದ ಸಾರ,ಸತ್ವವನ್ನು ಎತ್ತಿ ತೋರಿಸುವುದಲ್ಲದೆ; ಬದುಕಿನ ನಗ್ನಸತ್ಯದ ದರ್ಶನವನ್ನೂ ಮಾಡಿಸುತ್ತದೆ - 'ಕಕ್ಕಸಿನ ಕನಸು'- ಎಲ್ಲಾ ಕಾಲಕ್ಕೂ ಅನ್ವಯವಾಗುವಂತ ಒಂದು ಕನಸು.

ನಡೆದುಕೊಂಡು ಬಂದದ್ದನ್ನು ಮುಂದುವರಿಸಿಕೊಂಡೇ ಹೋಗಬೇಕೆನ್ನುವ ಅಲಿಖಿತ ನಿಯಮಕ್ಕೆ ಅಡ್ಡ ಬಿದ್ದು ಅಲ್ಲಿರಲಾರದೆ ಇಲ್ಲೂ ಇರಲಾಗದೆ ತಗಣೆಗಳಿಂದ ಕಡಿಸಿಕೊಳ್ಳುತ್ತ ಸವೆಯುವ 'ಪರಂಪರಾರ್ಜಿತ' ಸುಖವೆಂದುಕೊಂಡ ಬದುಕು ಭಾರವಾಗುವುದು, ಅಂದೊಮ್ಮೆ ದ್ವೇಷಿಸುತ್ತಿದ್ದುದ್ದರ ವಾರಸುದಾರನಾಗುವುದು ನಿಜಕ್ಕೂ ಮಾರ್ಮಿಕವೇ ಸರಿ. ನಿಂತ ನೀರಿಗೆ ಹರಿವಿನ ಸುಖವಿಲ್ಲ. ನಿತ್ಯ ಹೊಸದರತ್ತ ಹೊರಳುವ ಬದುಕಿಗೆ ನಿಂತೇ ಗೊತ್ತಿರುವುದಿಲ್ಲ. ಹಾಗಿರುವಾಗ, ಹೊಸತೊಂದು ಬಂತೆಂದರೆ ಅದನ್ನು ಒಗ್ಗಿಸಿಕೊಳ್ಳುವುದು ಮತ್ತದಕ್ಕೆ ಒಗ್ಗಿಕೊಳ್ಳುವುದು ತ್ರಾಸದಾಯಕ. ಹಾಗಿದ್ದೂ ಬಾಳು ಸಮಾಧಾನಕರ ಎಂದೆನಿಸುವುದು 'ಒಂದು ಬದಲಾವಣೆ' ಬಂದಾಗಲೇ. ತ್ಯಾಗದಿಂದ ಕಟ್ಟಿದ ಬಾಳು ಅರ್ಥಹೀನವೆನಿಸಿ ಬಿಡುವಂತಹ ಕಾಲಘಟ್ಟವಿದು. ಸರ್ವಸ್ವವನ್ನು ತೇಯ್ದರೂ ಸ್ವೀಕರಿಸದೆ ಸುಗಂಧವನ್ನು ಮಾತ್ರ ಹೀರಿ ಕೊರಡನ್ನು ಎಸೆಯುವ ಪ್ರವೃತ್ತಿ ಇಂದು ಹೆಚ್ಛೇ ಇದೆ ಎನ್ನುವುದು ಸೂರ್ಯನ ಬೆಳಕನ್ನು ಹೀರಿ ಬೆಳಗುವ ಚಂದ್ರನಷ್ಟೇ ಸತ್ಯ. ಹಾಗಿದ್ದೂ , ಬಾಳಿನುದ್ದಕ್ಕೂ 'ಸೂರ್ಯ ಮತ್ತು ಚಂದ್ರ' ರು ನಮ್ಮೊಂದಿಗೇ ಇರುತ್ತಾರೆ, ಇರಬೇಕು ಎನ್ನುವುದೂ ನಿಜವಷ್ಟೇ.

ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...