ಜೀವನದ ಬಗೆಗೆ ಪುರಾಣವೇ ಇರಲಿ, ಇತಿಹಾಸವೇ ಇರಲಿ ಹೊಸ ಹೊಸತನ್ನು ಹೇಳುತ್ತ ಹೋಗುತ್ತವೆ: ಮಹಾಬಲಮೂರ್ತಿ ಕೊಡ್ಲೆಕೆರೆ


“ಅಂತೂ ಕಾಣದ ಶಕ್ತಿಗಳು ಮನುಷ್ಯತ್ವದ ಪದರುಗಳು ಗಟ್ಟಿಯಾಗದ ಮೃಗೀಯ ವರ್ತನೆಗಳಿಂದ ಶಾಂತಿಯನ್ನು ಕದಡುತ್ತಲೇ ಇರುತ್ತವೆಯೆ ಹಾಗಾದರೆ ಉಕ್ರೇನ್‌ ದೇಶದ ಮತ್ತು ರಶಿಯಾದ ಯುದ್ಧಗಳ ಕೆಮಿಸ್ಟ್ರಿ ಅರಿತರೆ ಹಲವು ರೀತಿಯ ವಿಚಿತ್ರಗಳು ಮಾನವನ ಪಾಲಿಗೆ ಅನಾಚೀನವಾಗಿ ಲಾಗಾಯ್ತಿನಿಂದ ಅಂಟಿಕೊಂಡು ಬಂದ ಪರದಾಟಗಳಿಗೆ ಬೇಕಾದ ಉರುವಲಗಳಾಗಿವೆ,'' ಎನ್ನುತ್ತಾರೆ ಮಹಾಬಲಮೂರ್ತಿ ಕೊಡ್ಲೆಕೆರೆ. ಅವರು ತಮ್ಮ ರತ್ನ ಖಂಡ ಕೃತಿಗೆ ಬರೆದ ಲೇಖಕನ ಮಾತು ನಿಮ್ಮ ಓದಿಗಾಗಿ.

ನಾನು ಹಲವು ಕಾರಣಗಳಿಗಾಗಿ ಹತ್ತಾರು ರತ್ನಪಡಿ ವ್ಯಾಪಾರಿಗಳನ್ನು ಸಂಧಿಸಿದ ಅನುಭವದಿಂದ ಹೇಳುವುದಾದರೆ ಕಣ್ಣು ಕೋರೈಸುವ ವಜ್ರ ವೈಢೂರ್ಯಗಳ ರಾಶಿ ಅವರ ಬಳಿ ಕಂಡಿದ್ದೇನೆ. ಹಾಗೆಯೇ ಅವರ ಬದುಕಿನ ಬಗೆಗಿನ ಕಣ್ಣೀರು ಕಂಡು ಆಶ್ಚರ್ಯಪಟ್ಟಿದ್ದೇನೆ. ಮುರಳೀಧರ ಬಹುತೆ ಎಂಬ ಮುಖದ ತುಂಬ ಸಿಡುಬಿನ ಕಲೆಗಳಿದ್ದರೂ ಆಕರ್ಷಕ ಮುಖಭಾವ ಹೊತ್ತಿದ್ದ ಯೋಗಿಯೊಬ್ಬನನ್ನು ನೋಡಿದ್ದೇನೆ. ಇವನದೂ ದೊಡ್ಡ ಕತೆ, ಹಾಗೆಯೇ ಮೂಲದಲ್ಲಿ ಸೆರ್ಬಿಯನ್, ಆದರೆ ಇರುವುದು ಇಟಲಿಯಲ್ಲಿ ಅಣ್ಣನ ಬಗ್ಗೆ ಗೌರವ, ಆದರೆ ಅವನ ಹೆಂಡತಿ ಗಯ್ಯಾಳಿ, ಮಾಟ - ಮಂತ್ರ ಮಾಡಿಸಿ ತನ್ನ ಬದುಕನ್ನು ನರಕ ಮಾಡಿಬಿಟ್ಟಿದ್ದಾಳೆ ಎಂಬುದು ಅವನ ವ್ಯಥೆ. ಈತ ಕೆಲವು ಮಾಂಕ್‌ಗಳ ಕುರಿತು ಹಲವು ವಿಚಾರ ಹಂಚಿಕೊಂಡಿದ್ದ ನನ್ನ ಜತೆ, ಇನ್ನೊಬ್ಬಳು ಸರಿತಾ ಎನ್ನುವ ಹೆಣ್ಣು ಮಗಳು. ಕೋಟಿಗಟ್ಟಲೆ ಸ್ವತಃ ತಾನೇ ದುಡಿದಿದ್ದಾಳೆ. ಜತೆಗೆ ಅಪ್ಪ ಕೊಟ್ಟ ಆಸ್ತಿ. ಆದರೆ ಜೀವನದಲ್ಲಿ ಪ್ರವೇಶಿಸಿದ ಪುರುಷರು ಅವಳನ್ನು ಯಾಮಾರಿಸುತ್ತಿದ್ದ ವಿಷಯಗಳು ಹಲವು, ಜಿಮ್‌ನಲ್ಲಿ ಸಂಭವಿಸಿದ ವಿಚಾರ ಒಂದನ್ನು ನನಗೆ ತಿಳಿಸಿದಳು. ಅಮೇರಿಕಾದಲ್ಲಿ ಮ್ಯಾಕ್ ಫುಟ್ ಎನ್ನುವ ಸುಮಾರು 23 ವಯಸ್ಸಿನ ಹುಡುಗ, ಒಂದು ದಿನ ಅವನ ಮನೆಯ ಕತ್ತಲಲ್ಲಿ ಒಂದು ಮನುಷ್ಯ ರೂಪದ ಆಕೃತಿಯನ್ನು ತೋರಿಸಿದ್ದ. ಈ ಅನುಭವ ನನಗೆ ಇಂದಿಗೂ (2015 ಸಪ್ಟೆಂಬರ್ ತಿಂಗಳ ರಾತ್ರಿ ಅದು.) ನಂಬದಿರಲು ಒಂದು ಸವಾಲೇ ಆಗಿದೆ. ಹಲವು ಬಗೆಯ ಅವಧೂತರುಗಳನ್ನು ಸಂಧಿಸಿದ್ದೇನೆ. ಒಬ್ಬ ಅಘೋರಿಯ ಜತೆಗೆ, ಬನಾರಸಿನ ಬೀದಿಗಳಲ್ಲಿ ಸುಮ್ಮನೆ ಓಡಾಡುತ್ತ ಅವನ ಮಾತುಗಳನ್ನು ಕೇಳಿಸಿಕೊಂಡಾಗ ವಿಧ-ವಿವಿಧವಾದ ಅತಿಮಾನುಷ ಶಕ್ತಿಯ ಬಗೆಗೆ ಬೆರಗು ಪಡದೆ ಇರಲಾಗಲಿಲ್ಲ. ಎಲ್ಲವೂ ಸುಳ್ಳು ಎಂಬುದು ಇದ್ದದ್ದೇ. ಆದರೆ ಸ್ವತಃ ಆದ ಅನುಭವಗಳು ನನ್ನ ಪಾಲಿಗಂತೂ ಸುಳ್ಳಲ್ಲ.

ಜಗತ್ತಿನ ಅಸ್ತಿತ್ವ ಒಂದೆಡೆಗಿರಲಿ, ವಿಶ್ವದ ಅಸ್ತಿತ್ವವೇ ಸತ್ಯವೋ, ಮಿಥ್ಯವೋ ಎಂಬುದನ್ನು ನಮ್ಮ ಪರಂಪರೆಯ ಅನೇಕಾನೇಕ ಋಷಿಗಳು, ಮುನಿಗಳು, ಸನ್ಯಾಸಿಗಳು, ಧರ್ಮದ ಪುನರುತ್ಥಾನ ಎಂಬ ಶಿರೋನಾಮೆಯಡಿ ಸಮಾವೇಶವಾಗುವ ಹಲವು ಗುರು ಪರಂಪರೆಯನ್ನು ತಮಗನಿಸಿದ ಚೌಕಟ್ಟಿನಲ್ಲಿ ವಿಶ್ಲೇಷಿಸಿದ್ದಾರೆ. ದಾಖಲಿಸಿದ್ದಾರೆ. ಹಲವಕ್ಕೆ ಉತ್ತರಗಳಿಲ್ಲ. "ಅದು" ಸತ್ಯ, "ಇದು" ಮಿಥ್ಯ ಎಂಬುದನ್ನೂ ನಾವು ಒಪ್ಪಬೇಕು, ನಾನು ಮತ್ತು ಅದು ಬೇರೆ ಎಂಬುದನ್ನೂ ಒಪ್ಪಬೇಕು. ನಾನು ನನ್ನೊಳಗಿನ ಪರಬ್ರಹ್ಮನ ಮೂಲಕ, ನಿನ್ನೊಳಗಿನ ಪರಬ್ರಹ್ಮನನ್ನು ಎದುರಿಸುತ್ತೇನೆ. ಪ್ರೀತಿಸುತ್ತೇನೆ. ವಿರೋಧಿಸುತ್ತೇನೆ. ಆ ಪರಬ್ರಹ್ಮ ಇಷ್ಟಾದರೂ, ಒಬ್ಬನೇ. ಒಂದೇ ನಾಣ್ಯದ ಎರಡು ಮುಖಗಳಾಗಿ, ಒಂದೇ ಅಸ್ತಿತ್ವದ ವಿವಿಧ ಮುಖಗಳನ್ನು ಪ್ರದರ್ಶಿಸುತ್ತಾನೆ. ಇದು ಯಾವ ರೀತಿಯ ಮಾಯೆ ಎಂಬ ವ್ಯಾಖ್ಯಾನಕ್ಕೆ ನಿಲುಕದ್ದು. ಅಂತೂ ಪೂರ್ತಿ ಪರಬ್ರಹ್ಮ, ಪ್ರತಿಯೊಂದರ ಜೀವಾಳವಾಗುತ್ತಾನೆ.

ಇತ್ಯಾದಿ ಇತ್ಯಾದಿಯಾದ ಮಂಥನಗಳು ನಡೆಯುತ್ತಲೇ ಇವೆ ನಮ್ಮ ಪ್ರಪಂಚದಲ್ಲಿ, ಇನ್ನೂ ಹೊಸದೋ ಎಂಬಂತೆ ವಿವಿಧ ತೆರನಾದ ವಿಶ್ಲೇಷಣೆಗಳೂ ನಡೆಯುತ್ತಲೇ ಇರುತ್ತವೆ. “ಮನುಷ್ಯ ಸಹಜವಾದ ವೈಪರೀತ್ಯಗಳು ಮತ್ತು ದ್ವಿಮುಖ ವ್ಯಕ್ತಿತ್ವದ ವಿಚಾರಗಳು” ಕುರಿತಂತೆ ಒಂದು ವಿದೇಶಿ ಯುನಿವರ್ಸಿಟಿಗಾಗಿ “ಅಥರ್ವ ವೇದ ಚೆಲ್ಲುವ ಬೆಳಕು” ಎಂಬ ವಿಷಯದಲ್ಲಿ ಅಧ್ಯಯನ ನಡೆಸುವಾಗ ನಾನು ಭಾರತೀಯ ಜ್ಯೋತಿಷ್ಯವನ್ನು ನನ್ನ ಅಭ್ಯಾಸಕ್ಕೆ ಬೇಕಾದ ತಳಹದಿಯನ್ನಾಗಿಸಿಕೊಂಡೆ. ಭಾರತೀಯ ಜ್ಯೋತಿಷವನ್ನು ಇದು ವಿಜ್ಞಾನವೇ ಆಗಿದೆ ಎಂದು ನಾನು ಪೂರ್ತಿ ನಂಬಿದವನು. ಆಗಾಗ ವಿಜ್ಞಾನವೂ ತನ್ನ ದಾರಿಯಲ್ಲಿ ಎಡವುತ್ತಿದೆ. ಇದಕ್ಕೆ ಭಾರತೀಯ ಜ್ಯೋತಿಷ ವಿಜ್ಞಾನವೂ ಹೊರತಲ್ಲ. “ದೇವ, ದೇವಾಂಗ, ದೇವತಾ ಸಾರ್ವಭೌಮ, ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ಜ್ಞಾನ ಮಾರ್ತಾಂಡ....(ಇಂಥಾ) ಸಾರ್ವಭೌಮ ಎಂದು ಬಿಟ್ಟ ಸ್ಥಳದಲ್ಲಿ ನಮಗೆ ಬೇಕಾದ ದೇವರ ಹೆಸರು ತುಂಬಿಕೊಳ್ಳುವ ವಿಧಾನವೂ ನನ್ನಲ್ಲಿ ಬಹಳಷ್ಟು ಕುತೂಹಲವನ್ನು ಹುಟ್ಟಿಸುತ್ತದೆ. ಹೌದು, ಹುಟ್ಟಿಸುತ್ತಿತ್ತು. ಯಾಕೆಂದರೆ ಎಂದೂ ಕಾಣಿಸದ ಸಾರ್ವಭೌಮನನ್ನು ನಾವು ಎಷ್ಟು ವಿಧವಾಗಿ ಹಾಡಿ ಹೊಗಳಿದ್ದೇವೆ? ನಮಗೆ ಬೇಕಾದ ರಕ್ಷಣೆಗಾಗಿ ಎಂದೂ ಕಾಣದವನನ್ನು ಕಂಡಿದ್ದೇವೆ ಎಂಬಂತೆ ಆಶ್ರಯಿಸಬೇಕಾದ ಅವಶ್ಯಕತೆಯನ್ನು ನಿರ್ಮಿಸಿಕೊಂಡಿದ್ದೇವೆ?

ಪತ್ನಿ ಕಯಾದುವಿನ ಮೂಲಕವೇ ಹಿರಣ್ಯ ಮಗನನ್ನು ನಿಯಂತ್ರಿಸಲು ಮುಂದಾಗುತ್ತಾನೆ. ಎದೆ ಹಾಲು ಕೊಡಬೇಕಾದ ತಾಯಿಯ ಕೈಯಿಂದಲೇ ವಿಷ ಕೊಡಿಸಿ, ತನ್ನ ಪಾಪದ ಕೊಡ ತುಂಬಲಿ ಬೇಗ ಎಂಬುದಕ್ಕೆ ಮುಂದಾಗುವ ಪ್ರಯತ್ನ ಅದು ಅಷ್ಟೇ. “ವಿಷಪ್ರಾಶನ ಮಾಡಿಸು ಮಗನಿಗೆ” ಎನ್ನುವ ಹಿರಣ್ಯಕಶ್ಯಪುವಿಗೆ ವಿಷದಿಂದ ಮಗ ಸಾಯಲಾರ ಎಂಬುದು ಖಡಾಖಂಡಿತವಾಗಿ ತಿಳಿದಿತ್ತು. ಆದರೆ ಅದೇ ವಿಷವನ್ನು ಹಾಗಾದರೆ ಅವನೇ ಕುಡಿಸಬಹುದಿತ್ತಲ್ಲವೇ? ಆದರೆ ಕಶ್ಯಪು ಆ ಕೆಲಸಕ್ಕೆ ಮುಂದಾಗುವುದಿಲ್ಲ. ಮಗನ ಕಾರಣದಿಂದಾಗಿ ತನ್ನ ಸಾವು ಬರಬೇಕು, ಬಂದೇ ಬರುತ್ತದೆ ಅದು ಎಂಬ ನಂಬಿಗೆ ಅವನಿಗೆ, ಈ ಮನೋವೈಜ್ಞಾನಿಕ ಒತ್ತಡ ಅವನಿಗೆ ಉಂಟಾದದ್ದು ಬ್ರಹ್ಮನ ಬಳಿ ತಾನು ಕೇಳಿಕೊಂಡ ವರದಿಂದಾಗಿ, ಯಾರಿಂದಲೂ ತಾನು ಸಾಯಬಾರದು, ಸಾವು ಬರಬಾರದು” ಎಂದು ಕಶ್ಯಪು ಬ್ರಹ್ಮನಲ್ಲಿ ಕೇಳಿದ್ದ ಮೊದಲು. ಆದರೆ ಬ್ರಹ್ಮ ಒಪ್ಪುವುದಿಲ್ಲ ಅದಕ್ಕೆ “ಹುಟ್ಟಿದವನಿಗೆ ಸಾವು ಇದ್ದಿದ್ದೇ. ಅದೊಂದನ್ನು ಬಿಟ್ಟು ಬೇರೆ ವರ ಕೇಳು” ಎಂದು ಹೇಳುತ್ತಾನೆ ಬ್ರಹ್ಮ, “ಮನುಷ್ಯರಿಂದಾಗಲಿ, ಪ್ರಾಣಿಯಿಂದಾಗಲಿ, ಹಗಲಾಗಲಿ, ರಾತ್ರಿಯಾಗಲಿ, ಸೌಧದ ಒಳಗಾಗಲಿ, ಹೊರಗಾಗಲಿ ನನಗೆ ಮರಣ ಬರಬಾರದು” ಎಂದು ನಂತರ ಕಶ್ಯಪು ವಿನಂತಿಸುತ್ತಾನೆ ಬ್ರಹ್ಮನ ಬಳಿ, ಬ್ರಹ್ಮ “ತಥಾಸ್ತು” ಎಂದು ಅವನನ್ನು ಆಶೀರ್ವದಿಸುತ್ತಾನೆ. ಈ ವರವೇ ನಂತರ ಕಶ್ಯಪುವಿನ ಪಾಲಿಗೆ ಪ್ರತಿ ದಿನದ ಸಾವಾಗಿ ಪರಿಣಮಿಸುತ್ತದೆ. ರಾಕ್ಷಸರ ಶ್ರೇಯೋಭಿಲಾಷಿ, ಬಲಾಡ್ಯ ಕಶ್ಯಪುವಿಗೆ ದುರ್ದೈವವಶಾತ್ ತನ್ನ ಮಗನೇ ವಿರೋಧಿಯಾಗುತ್ತಾನೆ. ಮಾನಸಿಕವಾಗಿ ಮಗನೇ ಒಂದು ಸವಾಲಾಗುತ್ತಾನೆ. ಸಂಭವಿಸಲು ಸಾಧ್ಯವೇ ಇರದ ತನ್ನ ಸಾವಿಗಾಗಿ ಕೂಡಿಕೊಳ್ಳಲೇಬೇಕಾದ ಸಮೀಕರಣದ ಬಗೆಗೂ ಕಶ್ಯಪುವಿನ ಮನಸ್ಸು ಪರಿತಪಿಸಲು ಮುಂದಾಗುತ್ತದೆ. ಹರಿಯು ಹೇಗೆ ತನ್ನ ಸಾವಿನ ಕುಣಿಕೆಯನ್ನು ಯಾವ ರೀತಿಯಲ್ಲಿ ಹೊತ್ತು ತರುತ್ತಾನೆ ಎಂಬ ವಿಷಯವೇ ಹಿಂಸೆಯಾಗುತ್ತದೆ. ಹರಿ ಬರಲಾರ, ಬರಲು ಸಾಧ್ಯವೇ ಇಲ್ಲ ಎಂದೇ ಕಶ್ಯಪು ಬಲವಾಗಿ ನಂಬಿರುತ್ತಾನೆ. ಆದರೆ ಕೊನೆಗೂ ಬರುತ್ತಾನೆ. ಬಂದ ರೀತಿಗೆ ತತ್ತರಿಸಿದರೂ ಹರಿಯನ್ನು ಎದುರಿಸಲು ಮುಂದಾಗುತ್ತಾನೆ. ಆದರೆ ಕೈ ಚೆಲ್ಲುತ್ತಾನೆ.

ಈ ಕತೆಯ ಮೂಲಕ ಸಂಭವಿಸಲಾಗದ್ದು ಸಂಭವಿಸುವ ರೀತಿಯ ಬಗೆಗೆ ವಿಸ್ಮಯ ಮೂಡುತ್ತದೆ. ಒಮ್ಮೆ ನಾನು ಬೆಂಗಳೂರಿನಿಂದ ನಮ್ಮ ಊರಿಗೆ (ಸುಮಾರು 42 ವರ್ಷಗಳ ಹಿಂದಿನ ಮಾತು) ಬಸ್ ಪ್ರಯಾಣ ಮಾಡುವಾಗ ಒಬ್ಬ ಮನುಷ್ಯ ಅದೇ ಬಸ್ಸಿನ ಒಳಗೆ ಬರುತ್ತಾನೆ. ನನ್ನ ಅನುಭವ ಇದು. ಇದನ್ನು ಯಥಾವತ್ ಆಗಿ ಇಲ್ಲಿ ದಾಖಲಿಸಿದ್ದೇನೆ. ಬಸ್ಸಿನ ಒಳಗಡೆಗೆ ಬಂದ ಆ ಮನುಷ್ಯ ತಾನು ನನ್ನನ್ನ ಸಮೀಪಿಸಿ “ಈ ಜಾಗ ನನಗೆ ಬಿಡು. ನೀನು ಮೂರು ಸಾಲುಗಳ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತೀಯಾ? ನಾನು ಈ ಸೀಟನ್ನು ಪಡೆಯಬಹುದೆ” ಎಂದು ಕೇಳುತ್ತಾನೆ. ನನಗೆ ತುಸು ಕಿರಿಕಿರಿಯಾದದ್ದು ನಿಜ. ಇಷ್ಟಪಟ್ಟು ಈ ಸೀಟು ಬಯಸಿದ್ದೆ. ಆದರೆ ಆ ಮನುಷ್ಯ ವಿನಂತಿಸಿದ ರೀತಿಗೆ ಇಲ್ಲ ಎಂದು ಅನ್ನಲಾಗಲಿಲ್ಲ. ವಯಸ್ಸಿನಲ್ಲಿ ಹಿರಿಯನೂ ಆಗಿದ್ದ. ನನ್ನ ಸೀಟನ್ನು ಅವನಿಗೆ ಬಿಟ್ಟುಕೊಟ್ಟೆ, ಆ ರಾತ್ರಿಯ ಪ್ರಯಾಣ ನಂತರ ಮುಂದುರಿದು ನಮ್ಮೂರಿಗೆ ಇನ್ನು ಸುಮಾರು ಮೂವತ್ತು, ಮೂವತ್ತೈದು ಕಿಲೋಮೀಟರ್ ಇದೆ ಎನ್ನುವಾಗ ಏನಾಯಿತೋ ಏನೋ? ಒಂದೆಡೆ ಬಸ್‌ ಉರುಳಿ ದಾರಿ ತಪ್ಪಿ ಸಣ್ಣ ಕಂದಕದಲ್ಲಿ ಬಿದ್ದು ದೊಡ್ಡ ಕೋಲಾಹಲವಾಗಿ ಹೋಯ್ತು. ಸುದೈವವೇ ಸರಿ ನನಗೆ ಏನೂ ಆಗಲಿಲ್ಲ. ಆದರೆ ಅಪಘಾತವಂತೂ ದೊಡ್ಡದೇ ಆಗಿತ್ತು. ಸೀಟು ಬದಲಿಸಿಕೊಂಡ ಮನುಷ್ಯ ಒಂದು ಕಬ್ಬಿಣದ ಸಲಾಕೆ ಅಲ್ಲೇ ಮೇಲಕ್ಕೆ ಇತ್ತು ಅದು ಬಹುಶಃ, ಅದು ಅವನ ತಲೆಗೆ ಉರುಳಿ ಬಿದ್ದಿದ್ದರಿಂದ ಅವನು ಪ್ರಾಣ ಕಳಕೊಂಡಿದ್ದ. ನನಗೆ ದಿಗಿಲೇ ಆಗಿತ್ತು. ವಾಸ್ತವವಾಗಿ ನಾನು ಆ ದಿನ ತುಂಬಾ ಬಳಲಿಕೆ ಅನುಭವಿಸಿದ್ದೆ. ಅವನ ಸಾವಿನ ಬಗ್ಗೆ ತಿಳಿದಾಗ ಒಂದು ರೀತಿಯ ನಡುಕ ಎದ್ದಿತ್ತು ನನ್ನಲ್ಲಿ. ಸೀಟಿನ ಬದಲಾವಣೆಯ ವಿಚಾರವು ಎಬ್ಬಿಸಿದ ತಳಮಳ, ತಲ್ಲಣ, ತರ್ಕ, ಇದೇನು ಪವಾಡವೆ ಇತ್ಯಾದಿ ಯಾವುದನ್ನೂ ನಾನು ಇಂದೂ ಕೂಡ ವಿಶ್ಲೇಷಿಸಲಾರೆ ಸೂಕ್ತವಾಗಿ.

ಇದೊಂದೇ ಅಲ್ಲ, ನಾನು ಕಂಡ ಹಲವು ವೈಚಿತ್ರಗಳನ್ನು ಪಟ್ಟಿ ಮಾಡಿ ಹೇಳಬಹುದು. ಬದುಕಿನ ಸಂದರ್ಭದಲ್ಲಿ ಎದುರಾಗುವ ವ್ಯಕ್ತಿಗಳು ತುಂಬಾ ಭಿನ್ನರಾಗಿ ಕಾಣಿಸಿಕೊಳ್ಳುತ್ತಾರೆ. ಜೀವನದ ಬಗೆಗೆ ಪುರಾಣವೇ ಇರಲಿ, ಇತಿಹಾಸವೇ ಇರಲಿ ಹೊಸ ಹೊಸತನ್ನು ಹೇಳುತ್ತ ಹೋಗುತ್ತವೆ. ತಮಗೆ ಬೇಕಾದಂತೆ ವಿಶ್ಲೇಷಿಸಿಕೊಳ್ಳುವ ಹಲವು ವಿಧವಾದ ಜನರು ನೂರಾರು ಗುಂಪುಗಳಾಗಿ ಇದ್ದಾರೆ. ಒಬ್ಬ ಕ್ರಾಂತಿಕಾರಿ ವ್ಯಕ್ತಿ ಎಲ್ಲರೂ ಹೇಗೆ ವರ್ತಿಸಬೇಕು ಎಂಬುದನ್ನು ಒಂದರ್ಥದಲ್ಲಿ ಕೂಗಿ ಹೇಳುವ ಒಬ್ಬ ವ್ಯಕ್ತಿ ವಿವರಿಸಿದ ಘಟನೆ ಕೇಳಿ ದಂಗಾಗಿದ್ದೆ ನಾನು. ಈ ಕತೆ ಹಿಂಸೆಗೆ ಸಂಬಂಧಿಸಿದ್ದು, “ನೀನು ಪುಕ್ಕಲ, ಮಾತನಾಡಿದಷ್ಟು ಸುಲಭ ಅಲ್ಲ” ಎಂದು ಈ ವ್ಯಕ್ತಿಯನ್ನು ಛೇಡಿಸಿದಾಗ ಯಾರೋ, ಯಾವುದರ ಬಗೆಗೋ ಅಂದಾಗ, ತಾನೂ ಮಾಡಬಲ್ಲೆ ಎಂದು ತೋರಿಸಲು ಏನೋ ಒಂದು ಹಿಂಸೆಯನ್ನು ನಡೆಸಿ ತೋರಿಸಿದನಂತೆ. ಇನ್ನೊಂದು ಘಟನೆಯಲ್ಲಿ ಒಬ್ಬ ಜ್ಯೋತಿಷಿಯನ್ನು ನಂಬಿ “ನನಗೆ ಮದುವೆಯೇ ಆಗುತ್ತಿಲ್ಲ, ಯಾವ ದೋಷ ಸ್ವಾಮಿ?” ಎಂದು ಹೆಣ್ಣು ಮಗಳೊಬ್ಬಳು ಕೇಳಲು ಬಂದಾಗ, “ನಿನಗೆ ನಿನ್ನ ಶೀಲವು ಕೆಟ್ಟ ನಂತರವೇ ಮದುವೆ ಎಂಬುದು ನಿನ್ನ ಯೋಗ, ಕೆಡಿಸುವ ಕೆಲಸ ನಾನೇ ಮಾಡುತ್ತೇನೆ” ಹೇಳಿದ್ದನಂತೆ ಆ ಜ್ಯೋತಿಷಿ, ಆಕೆ ತಪ್ಪಿಸಿಕೊಂಡು ಓಡಿ ಬಂದಳು ಅಲ್ಲಿಂದ. ಇದನ್ನು ಆ ಮಹಿಳೆಯ ಬಾಯಲ್ಲೇ ನಾನು ಕೇಳಿದ್ದು, ಒಬ್ಬಳು ವಿಖ್ಯಾತ ನರ್ತನ ವಿಶಾರದೆಗೆ, ವಿದೇಶದಲ್ಲಿ ತನ್ನ ಪ್ರದರ್ಶನ ಏರ್ಪಡಿಸುವ ಅವಕಾಶ ಸಿಕ್ಕಾಗ, ಅವಳು ತನ್ನ ಶಿಷ್ಯಯೊಬ್ಬಳು ತನ್ನ ಜತೆ ವಿದೇಶ ಪ್ರಯಾಣದ ಸಮಯದಲ್ಲಿ ನೆರವಿಗೆ ಬೇಕೇ ಬೇಕು ಎಂಬುದಕ್ಕಾಗಿ “ಬಾ” ಎಂದು ಕರೆದಳಂತೆ. ಆ ಶಿಷ್ಯಗೆ ಆಗ ವಾಸ್ತವಕ್ಕೂ ಎದುರಾಯಿತು ಕಷ್ಟ ಅವಳು ಮದುವೆಯಾಗಿ ಬಹಳ ವರ್ಷಗಳು ಕಳೆದರೂ ಅವಳಿಗೆ ಗರ್ಭ ನಿಂತಿರಲಿಲ್ಲವಂತೆ, ಆದರೆ ಗುರುವಾದ ನರ್ತನ ವಿಶಾರದೆ ವಿದೇಶ ಪ್ರಯಾಣಕ್ಕೆ ಸಜ್ಜಾಗು ಎಂದು ಹೇಳಿದ ಸಂದರ್ಭದಲ್ಲಿ ವಾಸ್ತವಕ್ಕೂ ಆಕೆ ಗರ್ಭಿಣಿಯಾಗಿದ್ದಳಂತೆ. ಈ ಸಂತಸದ ವಿಚಾರವನ್ನು ಗುರುವಾದ ಪ್ರಖ್ಯಾತ ನರ್ತಕಿಗೆ ತಿಳಿಸಿದಾಗ “ಅದೆಲ್ಲ ತಿಳಿಯದು, ನೀನು ಬರಬೇಕು, ಗರ್ಭ ತೆಗೆಸಿಕೊ ಅಷ್ಟೇ” ಎಂದು ಆಜ್ಞಾಪಿಸಿದಳಂತೆ. “ಮನುಷ್ಯಳೇ ಅಲ್ಲದವಳು ನೀನು, ನನಗೆ ಗುರುವಾಗಲಾರೆ” ಎಂದು ಹೇಳಿದ ಶಿಷ್ಯ ನಂತರ ಗುರುವಿನ ಮುಖ ನೋಡಲಿಲ್ಲವಂತೆ. ಈ ವಿಚಾರವನ್ನೂ ಪ್ರತ್ಯಕ್ಷ ಶಿಷ್ಠೆಯೇ ಗುರುವಿನ ಮನೋಸ್ಥಿತಿ ಎಂಥದ್ದು ಇರುತ್ತಿತ್ತು ಎಂಬುದಕ್ಕೆ ಬೇಕಾಗಿ ತಿಳಿಸಿದ್ದಳು ನನ್ನ ಬಳಿ.

ಇವೆಲ್ಲ ಕತೆ ಅಲ್ಲ ವಾಸ್ತವ. ಯಾವ ಉತ್ಪ್ರೇಕ್ಷೆಗಳು ಇರದ ವಾಸ್ತವ, ಸದ್ಯದ “ರತ್ನ ಖಂಡ” ಎಂಬ ಈ ಕಾದಂಬರಿಯಲ್ಲೂ ವಿಸ್ಮಯಗಳು ಇದ್ದಕ್ಕಿದ್ದಂತೆ ಎದ್ದೇಳುವ ಹಲವು ಘಟನೆಗಳನ್ನು, ಒಳಿತನ್ನು ಮಾಡುವ ಶಕ್ತಿಯ ಕುರಿತು ಸವಾಲೆಸೆಯುವ ಅರಿಷ್ಟ ಶಕ್ತಿಗಳ ಗೊಂಚಲನ್ನು ವಿಸ್ತರಿಸಿ ಬರೆಯಲಾಗಿದೆ. ಹುಚ್ಚರಂತೆ ಕಾಣುವ ಮನಸ್ಸುಗಳು ಮುಂದಿನ ಭವಿಷ್ಯವನ್ನು ತಮಗರಿವಿರದ ಆ ಹೊತ್ತಿಗೆ ಎಲ್ಲೋ, ಹೇಗೋ ಅವರೆದುರಿಗೆ ಉದ್ಭವಿಸಿದ ಕಿಟಕಿಯ ಸರಳುಗಳ ಮೂಲಕ ಕಂಡದ್ದನ್ನು ತಿಳಿಸಲು ಹೋಗುತ್ತವೆ. ಭವಿಷ್ಯದ ಏನೋ ಒಂದು ಅಥವಾ ಗೋಜಲುಗಳ ದಾರಿಯಲ್ಲೇ ಕಣ್ಣಿದ್ದರೂ ಕಾಣದಂತಾಗಿ ಹೆಜ್ಜೆ ಇರಿಸಿ ಯಾತನಾಮಯ ಪಾಡುಗಳಲ್ಲಿ ಸಿಕ್ಕಿಬೀಳುವುದು ಇಲ್ಲಿ ಈ ಕಾದಂಬರಿಯಲ್ಲಿ ಸ್ಪಷ್ಟ. ವ್ಯಾವಹಾರಿಕ ಚಾತುರ್ಯದಿಂದ ಸಕಲ ಶಕ್ತಿಯ ಆಗರವಾಗಿ ಕಂಡವರು ಆಂತರ್ಯದಲ್ಲಿ ಭೀತರಾಗಿರುತ್ತಾರೆ. ಮನಸ್ಸು ಕೊಟ್ಟ ಜೀವಗಳು ಬಂದರೂ ಇಷ್ಟಪಟ್ಟ ಜೀವದ ಮಧುರ ಬಂಧುರ ಹೇಗೋ ಎಂತೋ ತಪ್ಪಿಹೋಗುತ್ತದೆ. ಜಮದಗ್ನಿಯ ಪತ್ನಿ ರೇಣುಕೆ ಆಕಾಶದಲ್ಲಿ ವಿಹರಿಸುತ್ತಿದ್ದ ಗಂಧರ್ವ ಜೋಡಿಯ ಅನ್ನೋನ್ಯತೆ ಕಂಡು ನೋಡುತ್ತ ನಿಂತು ಬಿಡುತ್ತಾಳೆ. ಇದರಿಂದ ಉರಿದೆದ್ದ ಜಮದಗ್ನಿ ಮಗನಾದ ಪರಶುರಾಮನಿಂದ ರೇಣುಕಾದೇವಿಯ ಕೊರಳನ್ನು ಕತ್ತರಿಸಲು ಆಗ್ರಹಿಸುತ್ತಾನೆ. ತಾಯಿಯೆಂದು ಲೆಕ್ಕಿಸದ ಪರಶುರಾಮ ರೇಣುಕೆಯ ಹತ್ಯೆಗೆ ತಂದೆಯ ಆಣತಿಯಂತೆ ಮುಂದಾಗುತ್ತಾನೆ.

ಅಂತೂ ಕಾಣದ ಶಕ್ತಿಗಳು ಮನುಷ್ಯತ್ವದ ಪದರುಗಳು ಗಟ್ಟಿಯಾಗದ ಹಾಗೇ ಮೃಗೀಯ ವರ್ತನೆಗಳಿಂದ ಶಾಂತಿಯನ್ನು ಕದಡುತ್ತಲೇ ಇರುತ್ತವೆಯೆ. ಹಾಗಾದರೆ ಉಕ್ರೇನ್‌ ದೇಶದ ಮತ್ತು ರಶಿಯಾದ ಯುದ್ಧಗಳ ಕೆಮಿಸ್ಟ್ರಿ ಅರಿತರೆ ಹಲವು ರೀತಿಯ ವಿಚಿತ್ರಗಳು ಮಾನವನ ಪಾಲಿಗೆ ಅನಾಚೀನವಾಗಿ ಲಾಗಾಯ್ತಿನಿಂದ ಅಂಟಿಕೊಂಡು ಬಂದ ಪರದಾಟಗಳಿಗೆ ಬೇಕಾದ ಉರುವಲಗಳಾಗಿವೆ. ದೇಹವನು ರೋಗ ತುಂಬಿ ದೈಹಿಕವಾಗಿ ದುರ್ಬಲನಾದರೂ ರಶಿಯಾದ ಪುಟಿನ್, ಅಣ್ವಸ್ತ್ರಗಳ ಬಗ್ಗೆ, ಅಣು ತಲೆಯ ಉಗ್ರ ಜ್ವಾಲೆಗಳಿಂದ ಉಕ್ರೇನನ್ನು ಮುಗಿಸಿಬಿಡಲೇ ಎಂಬ ವಿಚಾರಕ್ಕೆ ಬಲವಾಗಿಯೇ ಅಂಟಿಕೊಳ್ಳುತ್ತಾನೆ. ಸೌಮ್ಯ ಮುಖದ ಬೈಡನ್ ಶತಾಯಗತಾಯ ಉಕ್ರೇನ್ ರಕ್ಷಕನಂತೆ ಬೆನ್ನ ಹಿಂದೆ ನಿಂತು “ಮುನ್ನುಗ್ಗು, ಏನೇ ಆಗಲಿ ನಾನಿದ್ದೇನೆ” ಎಂದು ಅನ್ನುತ್ತಿದ್ದಾನೆ. ಒಬ್ಬ ಅಪಘಾನಿಸ್ತಾನದಲ್ಲಿ ಅಮೇರಿಕಾದ ಸೈನ್ಯದ ಭಾಗವಾಗಿದ್ದ ಯೋಧನೊಬ್ಬ ಕೂಟ ಒಂದರಲ್ಲಿ ದೇಶದ ಅಧ್ಯಕ್ಷರನ್ನೇ ತರಾಟೆಗೆ ತೆಗೆದುಕೊಳ್ಳುತ್ತಾನೆ.

ಈ ಕಾದಂಬರಿಯ ಮುಖ್ಯ ಪಾತ್ರಗಳಾದ ಗಿರಿಧರಲಾಲ್ ಮತ್ತು ಕೃಷ್ಣಕಾಮತ್ ಅನೇಕ ರೀತಿಯ ಸಂದಿಗ್ಧಗಳನ್ನು ಹೊತ್ತು ಹೊರಬರಲಾಗದ ಅಸಹಾಯಕತೆಯಲ್ಲಿ, ಆದರೆ ಹಾಗೆಯೇ ಜವಾಬ್ದಾರಿಯುತ ವಹಿವಾಟುಗಳಲ್ಲೂ ಬಲಾಡ್ಯ ಶಕ್ತಿಗಳೇ ಆದ ಸ್ವರೂಪಗಳಲ್ಲಿ ಪ್ರಕಟಗೊಳ್ಳುತ್ತ ಹೋಗುತ್ತಾರೆ. ಈ ಕಾದಂಬರಿಯಲ್ಲಿ ಯಾವ ಉತ್ಪಕ್ಷೆಗಳೂ ಇರದ ಹಲವರ ಜೀವನ, ಪರದಾಟ, ಪ್ರೀತಿ, ಮತ್ಸರ, ಅಹಂ, ಸರ್ವನಾಶಕ್ಕೆ ಕಾರಣವಾಗುತ್ತೇನೆ ಎಂದು ಒಬ್ಬನನ್ನು ಗುರಿಯಾಗಿಸಿಕೊಂಡು ಆರ್ಭಟಿಸುವ ಕೂಗಾಟಗಳನ್ನು ಕಾಣುತ್ತೇವೆ, ನೋಡುತ್ತೇವೆ. ಲೌಕಿಕ, ಅಲೌಕಿಕಗಳ ಸಂಗತಿಗಳು, ಘಟನೆಗಳು, ಪರಿಧಿಗಳು, ಮಾತುಗಳು ಹರಳುಗಟ್ಟುತ್ತಲೇ ಇದ್ದಿವೆ ಕಾದಂಬರಿಯ ತುಂಬಾ. ಇಲ್ಲಿ ಇದು ನಡೆದ ಕತೆಯೋ ಅಂದರೆ, ನಡೆದದ್ದಲ್ಲ ಎಂದೂ ಅನ್ನಲಾಗದ ವಾಸ್ತವಗಳ ಗೊಂಚಲು ವಿಸ್ತಾರಗೊಂಡಿದೆ. ಏನು, ಹೇಗೆ ಎಂದು ಅನ್ನಲಾಗದ ಮನುಷ್ಯನ ತರ್ಕಕ್ಕೆ ಮೀರಿದ ಘಟನೆಗಳೂ ಅನಾವರಣಗೊಂಡಿವೆ. ಇವೆಲ್ಲ ಘಟನೆಗಳು ಅಸಂಗತವಲ್ಲ, ಫ್ಯಾಂಟಸಿಯೂ ಅಲ್ಲ, ಇವು ನಡೆದ, ನಡೆಯುವ, ನಡೆಯುತ್ತಿರುವ ವಿಚಾರಗಳು, ಪರಿಣಾಮದ ವಿಚಾರದಲ್ಲಿ ಓದುಗನ ಅನಿಸಿಕೆಗಳಿಗೆ ಬದ್ಧವಾಗುವ ವಿಚಾರಗಳು, ಛೇ, ಛೇ....ಇವುಗಳು ಈ ರೀತಿಯಲ್ಲಿ ನಡೆಯಲು ಸಾಧ್ಯವೇ ಎಂಬ ಉದ್ಗಾರಗಳು ಬರಲೂಬಹುದು. ಬಾರದಿರಲೂಬಹುದು.

ಷೇಕ್ಸ್‌ಪಿಯರ್ ನಾಟಕಗಳಲ್ಲಿನ ಭವಿಷ್ಯ ಹೇಳುವ ಕಣಿಗಾರರು ದೊರೆ ಸೀಸರ್‌ಗೆ ಅವನ ಕಗ್ಗೊಲೆಗಿಂತಲೂ ಮುಂಚೆ “ನಿನ್ನ ಜೀವಕ್ಕೆ ತೊಂದರೆಗಳಿವೆ," ಎಂದು ಹೇಳುವ, ವಿವರಗಳನ್ನು ಓದಿದ್ದೇವೆ. ಒಳಿತಿಗೇ ಬಯಸುವ ಪ್ರವಾದಿಗಳು ಹೇಗೋ ಏನೋ ಭವಿಷ್ಯಕ್ಕೆ ಕೊರಳು ತೂರಿ ನೋಡುತ್ತ ಆಗಲಿರುವುದನ್ನು ಬಹು ಮುಂಚೆಯೇ ತಿಳಿಸಿ ಹೇಳಿರುವುದನ್ನು ಓದಿರುತ್ತೇವೆ. ಮನುಷ್ಯನ ಜ್ಞಾನ, ಅರಿವು, ಬೌದ್ಧಿಕ ಅಗಾಧತೆ ಮುಂತಾದವು ಅವನಿಗೆ ವರವಂತೂ ಹೌದು, ಆದರೆ ಸಿಲುಕಲೇಬಾರದ ಆತ್ಮಘಾತುಕ ಹಿಂಜರಿಕೆಗಳಿಗೂ ಜ್ಞಾನವೇ ಇರಲಿ, ಬುದ್ಧಿಶಕ್ತಿ ಇರಲಿ, ಅರಿವೇ ಇರಲಿ ಹಲವು ಸಲ ಸಿಲುಕಿ ಹಾಕಿಸಿಬಿಡುತ್ತವೆ. ಕೌರವ ಜೂಜಿಗಾಗಿ ಧರ್ಮರಾಜನನ್ನು ಆಹ್ವಾನಿಸಿದಾಗ "ಇಲ್ಲ, ಬರೆನು" ಎಂದು ಧರ್ಮರಾಯನಿಗೆ ಹೇಳಲಾಗದು. ಬಂಗಾರದ ಜಿಂಕೆ ಕಂಡಾಗ ರಾಮನನ್ನು, ತತ್ಸಂಬಂಧವಾಗಿ ನಂತರ ಲಕ್ಷಣನನ್ನೂ ದೂರವಾಗಿಸಿದ ಸೀತೆ ರಕ್ಕಸನ ಬಂಧಿಯಾಗುತ್ತಾಳೆ. ಕತ್ತಲೆ ತುಂಬಿದ ಹಸ್ತಿನಾವತಿಯ ಅರಮನೆಯಲ್ಲಿ ವ್ಯಾಸ ಯಾರು, ಯಾರಿವರು ಎಂದು ಗುರುತಿಸಲಾಗದ ಅವಸ್ಥೆಯಲ್ಲಿ ನಿಯೋಗಕ್ಕೆ ಮುಂದಾಗುತ್ತಾರೆ. ಯಾಂತ್ರಿಕವಾಗಿ ಬರುವ ಸೂರ್ಯ, ಯಮಧರ್ಮ, ದೇವೇಂದ್ರ, ಮರುತ, ಅಶ್ವಿನಿ ದೇವತೆಗಳೂ ಕೂಡಾ ದುರ್ವಾಸರು ನಿಯೋಜಿಸಿದ ವ್ಯಾಪ್ತಿಗೆ ಬದ್ಧರಾಗಿ ಯಾಂತ್ರಿಕವಾಗಿ ಎಂಬಂತೆ ಕುಂತಿದೇವಿಯ ಬಳಿ ಬರುತ್ತಾರೆ. ಬಂಧಿಗಳಾದರೂ ಸೆರೆಮನೆಯ ಕತ್ತಲಲ್ಲಿ ವಸುದೇವ ದೇವಕಿಯರು ಅಷ್ಟಮ ಗರ್ಭದ ಲೆಕ್ಕ ಹಾಕುತ್ತ ಕೂಡುತ್ತಾರೆ. ಸ್ವಾರಸ್ಯಗಳೇ ತುಂಬಿದ ಈ ವಸುಂಧರೆಯಲ್ಲಿ ಚಲಾವಣೆಗೊಳ್ಳುವ ಎಲ್ಲ ವಿಚಾರಗಳಿಗೂ ಪೂರ್ಣಿಮೆಯ ಬೆಳಕುಂಟು, ಅಮಾವಾಸ್ಯೆಯ ಕತ್ತಲೂ ಉಂಟು. ವಾಸ್ತವ, ಅವಾಸ್ತವಗಳ ನಡುವೆ ಬದುಕೆಂಬ ಪುಟ್ಟ ಪಾತಿ ದೋಣಿಯೊಂದನ್ನು ತೇಲಿಸಲೇಬೇಕಾಗಿದೆ. ಈ ಹಿನ್ನೆಲೆಗಳನ್ನೆಲ್ಲ ಇಟ್ಟುಕೊಂಡೇ ಸದ್ಯ ಈ ನನ್ನ ಕಾದಂಬರಿಯಾದ "ರತ್ನ ಖಂಡ" ವನ್ನು ಓದುಗರ ಮುಂದೆ ಇಟ್ಟಿದ್ದೇನೆ. ಬ್ರಹ್ಮನ ಮಾನಸಪುತ್ರಿ ಶಾರದೆಯೇ ಬ್ರಹ್ಮನ ಮಡದಿಯೂ ಆಗುವ ಸ್ವಾರಸ್ಯದ ಬೆರಗಿಗೆ ಏನು ಹೇಳೋಣ? ಇಂಥ ಈ ರೀತಿಯ ಅನೂಹ್ಯವಾದ ಯಾವುದೋ ದಿವ್ಯಕ್ಕೆ ಶರಣಾಗುತ್ತ ಇಲ್ಲಿನ ವಿಷಯಗಳು ಹದಿಗಟ್ಟಿವೆ.

ನನ್ನ ಈ ಹಿಂದಿನ ಕಾದಂಬರಿ 'ಸದ್ದು' ಬಂದಾಗ ಶಂಕರ ಮೊಕಾಶಿ ಪುಣೇಕರ ಇದೊಂದು ಅದ್ಭುತ ಕಾದಂಬರಿ ಎಂಬುದಾಗಿ ಒಂದು ಪತ್ರ ಬರೆದಿದ್ದರು. ಕೀರ್ತಿನಾಥ ಕುರ್ತಕೋಟಿಯವರು “ಮಹಾಬಲಮೂರ್ತಿ ನಿಮ್ಮ ಬಗ್ಗೆ ನನ್ನ ಮೆಚ್ಚುಗೆ ಪೂರ್ಣಮಟ್ಟದ್ದು” ಎಂದು ಬರೆದಿದ್ದರು. ಈ ಕಾರ್ಡ್‌ಗಳನ್ನು ಕಳಕೊಂಡಿಲ್ಲ. ಆದರೆ ಸಂಗ್ರಹದಲ್ಲಿ ಸಿಗುತ್ತಿಲ್ಲ. ಅವು ಈಗ ಈ ಮೆಚ್ಚುಗೆಗಳನ್ನು ದಾಖಲಿಸಿದ್ದು ನಾನು ನನ್ನನ್ನು ವಿಜೃಂಭಿಸಲು ಅಲ್ಲ. ಈ ಮೆಚ್ಚುಗೆಗಳನ್ನು ನೆನೆಸಿಕೊಳ್ಳದೇ ಇದ್ದರೆ ನಾನು ತಪ್ಪು ಮಾಡಿದಂತಾಗುತ್ತದೆ. ಪ್ರಾತಃಸ್ಮರಣೀಯರಾದ ಮೊಕಾಶಿ ಹಾಗ ಕುರ್ತಕೋಟಿ ಇಬ್ಬರಿಗೂ ನನ್ನ ಗೌರವಾದರಗಳನ್ನು ಸಲ್ಲಿಸುತ್ತೇನೆ. ಪತ್ರ ಬರೆದಿರಲಿಲ್ಲ ಆದರೆ ಗಿರಡ್ಡಿಯವರೂ ತಮ್ಮ ಸಂತೋಷವನ್ನು ಕಾದಂಬರಿಯೊಳಗಿನ ಹಲವು ವಿವರಗಳನ್ನು ವ್ಯಾಖ್ಯಾನಿಸುತ್ತ ಹಂಚಿಕೊಂಡಿದ್ದರು. ಲಂಕೇಶ್ ಅರ್ಧ ಕಾದಂಬರಿ ಓದಿದ್ದರು. “ಹುಚ್ಚನೂ ಒಳ್ಳೆಯದಾಗಿ ಬರೆಯಬಲ್ಲ” ಎಂದು ರೇಗಿಸಿ, ಪೂರ್ತಿ ಓದಿದ ಮೇಲೆ ಬರೆಯುತ್ತೇನೆ ಎಂದು ಅಂದಿದ್ದರು. ಆದರೆ ಆ ಎರಡೇ ದಿನಗಳ ಅಂತರದಲ್ಲಿ ನಂತರ ತೀರಿಕೊಂಡಿದ್ದರು. ಹೀಗಾಗಿ ಗಿರಡ್ಡಿಯವರಿಗೂ, ಲಂಕೇಶರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

MORE FEATURES

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...