‘ಕಾಡ ಸೆರಗಿನ ಸೂಡಿ’ ಬಿಡುಗಡೆಗೊಳಿಸಿದ ಟಿ. ಎನ್. ಸೀತಾರಾಮ್

Date: 10-08-2020

Location: ಬೆಂಗಳೂರು


ಬೆಂಗಳೂರಿನ ಭೂಮಿಕಾ ಕಚೇರಿ ಲೇಖಕ ಮಂಜುನಾಥ್‌ ಚಾಂದ್‌ ಅವರ ನೂತನ ಕಾದಂಬರಿ ‘ಕಾಡ ಸೆರಗಿನ ಸೂಡಿ’ಯನ್ನು ಖ್ಯಾತ ನಾಟಕಕಾರ, ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು "ನಾವು ಬಹಿರಂಗವಾಗಿ ಬಹಳ ಸಂಭ್ರಮದಿಂದ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದ ಸಂದರ್ಭ ಇದ್ದ ಕಾಲದಲ್ಲಿ ಇದ್ದಕ್ಕಿದ್ದ ಹಾಗೆ ಮುಖ ಮುಚ್ಚಿಕೊಂಡು ಪುಸ್ತಕಗಳನ್ನು ಬಿಡುಗಡೆ ಮಾಡಬೇಕಾದ ದುರಿತ ಕಾಲ ಬಂದಿದೆ.  ಈ ಕೊರೊನಾ ಕಾಲದಲ್ಲಿ ಮುಖ ಮುಚ್ಚಿಕೊಂಡು, ಹೆಚ್ಚು ಜನರನ್ನು ಸೇರಿಸದೇ ಸುರಕ್ಷಿತವಾಗಿ ಪುಸ್ತಕ ಬಿಡುಗಡೆ ಮಾಡುವುದೇ ಶ್ರೇಯಸ್ಕರ ಎಂದು ಇಂದು ಈ ರೀತಿ ಕಾರ್ಯಕ್ರಮ ಮಾಡುವ ಅನಿವಾರ್ಯ ಸ್ಥಿತಿ ಬಂದಿದೆ. 

ಸಾಮಾನ್ಯವಾಗಿ ಗೆಳೆತನಕ್ಕಾಗಿ ನಾನು ಪುಸ್ತಕಗಳನ್ನು ಓದಲು ಒಪ್ಪಿಕೊಂಡು ಬಿಡುತ್ತೇನೆ. ಆಮೇಲೆ ಯಾಕಪ್ಪಾ ಒಪ್ಪಿಕೊಂಡೆ ಎಂಬ ಹಿಂಸೆಗೆ ಒಳಗಾಗುತ್ತೇನೆ. ಮಂಜುನಾಥ್ ಚಾಂದ್ ಅವರ ಕಾಡ ಸೆರಗಿನ ಸೂಡಿ ಪುಸ್ತಕ ಹಿಂದಿನ ಶನಿವಾರ ಸಂಜೆ ಅಚ್ಚಿನ ಮನೆಯಿಂದಲೇ ನನ್ನ ಮನೆಗೆ ಬಂತು. ನಾನದನ್ನು ಮೂರು ದಿನ ಕ್ವಾರಂಟೈನ್‍ಗೆ ಹಾಕಿದ್ದೆ. ಅದಾಗಿ ನನ್ನ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಪುಸ್ತಕವನ್ನು ಓದಲು ಹಿಡಿದುಕೊಂಡೆ. ಇಷ್ಟು ದೊಡ್ಡ ಪುಸ್ತಕ ಓದುವುದಕ್ಕೆ ಬಹಳ ಸಮಯ ಬೇಕಾಗಬಹುದು ಎಂಬ ದಿಗಿಲು ಇತ್ತು. ಆ ವೇಳೆಗಾಗಲೇ ಮಿತ್ರರಾದ ಜಗದೀಶ್ ಕೊಪ್ಪ ಅವರು ಒಂದು ನೋಟ್ ಹಾಕಿದ್ದರು, ಚಾಂದ್ ಅವರು ಸ್ವಾತಂತ್ರ್ಯ ಕಾಲದ ಒಂದು ಕಾದಂಬರಿಯನ್ನು ಬರೆದಿದ್ದಾರೆ ಎಂದು. ಆವತ್ತು ಬೆಳಿಗ್ಗೆ ಹನ್ನೊಂದೂವರೆ ಕಾದಂಬರಿಯನ್ನು ಹಿಡಕೊಂಡವನಿಗೆ ಅದನ್ನು ಬಿಡಲು ಸಾಧ್ಯವಾಗಲೇ ಇಲ್ಲ. ಎರಡನೇ ದಿನ ಮಧ್ಯಾಹ್ನದ ಹೊತ್ತಿಗೇ ಚಾಂದ್ ಅವರಿಗೆ ಫೋನ್ ಮಾಡಿ ಹೇಳಿಯೂ ಬಿಟ್ಟಿದ್ದೆ, ಅತ್ಯಂತ ಅದ್ಭುತವಾಗಿ ಬರೆದಿದ್ದೀರಿ ಎಂದು. 

ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೇ 1947ರಲ್ಲಿ. ಅದಕ್ಕೂ ಹತ್ತು ಹನ್ನೆರಡು ವರ್ಷ ಹಿಂದಿನ ಘಟನೆ, ವಸ್ತುವನ್ನು ಇರಿಸಿಕೊಂಡ ಕಾದಂಬರಿ ಇದು. ಇವತ್ತಿನ ಕಾಲದಲ್ಲಿ ನಾವು ಭಾರಿ ವೇಗವಾಗಿ ಸಾಗುತ್ತಿದ್ದೇವೆ. ನೀವು 23 ನಿಮಿಷದ ಧಾರವಾಹಿಯನ್ನು ಇನ್ನೊಂದು ನಿಮಿಷ ಹೆಚ್ಚು ಕೊಟ್ಟರೆ ನೋಡದೇ ಇರುವ ಸಂದರ್ಭ ಇರುತ್ತದೆ. ಎಲ್ಲದರಲ್ಲಿ ವೇಗ ಇರಬೇಕು, ದಾವಂತ ಇರಬೇಕು ಎಂದು ಬಯಸುವವರು ನಾವು. ನಿಧಾನಕ್ಕೆ, ಸೂಕ್ಷ್ಮವಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಆ ರೀತಿಯ ಕಾಲ ಬಂದಾಗ ನಮ್ಮ ಮನಸ್ಸು ಕೂಡ ಅದಕ್ಕೆ ಅಡ್ಜಸ್ಟ್ ಆಗಿ ಬಿಟ್ಟಿರುತ್ತದೆ. ಆದರೆ ಚಾಂದ್ ಅವರ ಈ ಕಾದಂಬರಿ ಇವತ್ತಿನ ಕಾಲದ ವೇಗಕ್ಕೆ, ಇವತ್ತಿನ ಕಾಲದ ಮನಸ್ಸಿಗೆ ಬೇಕಾಗುವ ಹಾಗೆ ಆವತ್ತಿನ ಕಾಲದ ಕಥೆಯನ್ನು ಬರೆದಿದ್ದಾರೆ. ಮಹಾತ್ಮಾ ಗಾಂಧೀಜಿ ಅವರು 1934ರಲ್ಲಿ ಕುಂದಾಪುರಕ್ಕೆ ಬರುತ್ತಾರೆ. ಅದಕ್ಕೂ ಕೆಲ ದಿನಗಳಿಗೆ ಮುಂಚಿತವಾಗಿ ಕುಂದಾಪುರದ ಒಂದು ಕಲ್ಪನೆಯ ಊರಿನಲ್ಲಿ ಅಲ್ಲಿನ ಸೌಪರ್ಣಿಕಾ ನದಿಯ ತಟದಲ್ಲಿರುವ ಪಂಚಮುಖಿ ಕಣಿವೆಯಲ್ಲಿ, ಒಂದು ಸಣ್ಣ ಊರು, ಆ ಕಡೆ ಕಾಡು, ಈ ಕಡೆ ಜಲಪಾತ, ಅದರ ಕೆಳಗೆ ನದಿ ಹರಿಯುತ್ತದೆ, ದೋಣಿಗಳನ್ನು ಇಟ್ಟುಕೊಂಡೇ ಓಡಾಡುತ್ತಿದ್ದ ಜನರ ನಡುವೆ ನಡೆದಿರಬಹುದಾದ ಕಥೆ. ಸಿಡ್ನಿ ಸೆಲ್ಡನ್, ಜೇಮ್ಸ್ ಹ್ಯಾಡ್ಲಿ ಚೇಸ್ ಅವರ ಕಥೆಗಳನ್ನು ಓದುತ್ತಿದ್ದಾಗಲೇ ನನಗೆ ವೇಗ ಅನಿಸುತ್ತಿತ್ತು. ಈಗ ಇವತ್ತಿನ ಕಾಲದಲ್ಲಿ ಚಾಂದ್ ಅವರ ಈ ಕಾದಂಬರಿ ಅಷ್ಟು ವೇಗವಾಗಿ ಓದಿಸಿಕೊಂಡು ಹೋಗುತ್ತದೆ" ಎಂದರು. 

ನಂತರ ಮುಂದುವರೆಸುತ್ತಾ "ಒಂದು ಸ್ಚಾತಂತ್ರ್ಯ ಹೋರಾಟವನ್ನು ರೋಚಕತೆಯ ತುತ್ತತುದಿಯಲ್ಲಿ ನಿಲ್ಲುವಂತೆ ಮಾಡುತ್ತದೆ ಈ ಕಥಾನಕ. ಸ್ವಾತಂತ್ರ್ಯ ಎಂದರೆ ಏನು ಎಂಬುದನ್ನು ತಿಳುವಳಿಕೆ ಇರಲಿಲ್ಲ ಅಲ್ಲಿನ ಜನಕ್ಕೆ. ಮಹಾತ್ಮಾ ಗಾಂಧಿ ಅಂತಂದರೆ ದೇವರೂ ಅಂತಲೂ, ಸಾಮಾನ್ಯ ಮನುಷ್ಯ ಅಂತಲೂ, ಬಹಳ ದೊಡ್ಡ ಗಣ್ಯ ವ್ಯಕ್ತಿ ಎಂದು ತಿಳಿದುಕೊಂಡವರು ಇದ್ದರು. ಮುಗ್ಧತೆಯೇ ತುಂಬಿದ್ದ ಕಾಲವದು. ಈಗ ನಮಗೆ ಫಿಂಗರ್ ಟಿಪ್ಸ್‍ನಲ್ಲಿ ಮಾಹಿತಿ ಸಿಗುತ್ತಾ ಹೋಗುತ್ತದೆ. ಗೂಗಲ್‍ನಲ್ಲಿ ಮಾಹಿತಿಯನ್ನು ಯಾರು ಬೇಕಾದರೂ ಕೊಡಬಹುದು. ಆದರೆ ಅಲ್ಲಿರುವ ಜ್ಞಾನವನ್ನು ಚಾಂದ್ ಅವರು ಬರೆದಿದ್ದಾರೆ. ನೀವು ತಪಸ್ಸಿಗೆ ಕುಳಿತಾಗ ಮಾತ್ರ ಜ್ಞಾನ ಬರುವುದಕ್ಕೆ ಸಾಧ್ಯ. ಚಾಂದ್ ಅಂತಹ ತಪಸ್ಸಿಗೆ ಕುಳಿತು ಬರೆದಿದ್ದಾರೆ. ಎಂತಹ ತಪಸ್ಸು ಅದು, 1934ರ ಇಸವಿಯ ಘಟನೆಯ ಬಗ್ಗೆ 2000ನೇ ಇಸವಿಯ ಈ ಕಾಲಘಟ್ಟದಲ್ಲಿ ತಪಸ್ಸಿಗೆ ಕುಳಿತು ಬರೆದಿರುವ ಅದ್ಭುತ ಕಥಾನಕವಿದು. ಆವತ್ತು ಬರೆಯುವುದಕ್ಕಿಂತ ಹೆಚ್ಚು ರೋಚಕವಾಗಿ ಇದನ್ನು ಚಾಂದ್ ಬರೆದಿದ್ದಾರೆ. 

ನಾನು ಸ್ವಾತಂತ್ರ್ಯ ಕಾಲದ ಅನೇಕ ಕಾದಂಬರಿಗಳನ್ನು ಓದಿದ್ದೇನೆ. ಶಿವರಾಮ ಕಾರಂತರ ಔದಾರ್ಯದ ನೆರಳಲ್ಲಿ, ರಾವ ಬಹದ್ದೂರರ ಬಿತ್ತಿದ ಬೆಳೆಯಂತಹ ಅದ್ಭುತವಾದ ಕಾದಂಬರಿಗಳನ್ನು ಓದಿದ್ದೇನೆ. ಆಗಿನ ಬದುಕನ್ನು ಕಟ್ಟಿಕೊಡುವ ಎಂತಹ ಕಾದಂಬರಿಗಳು ಅವೆಲ್ಲ. ಬದುಕಿನಲ್ಲಿ ಹೇಗೆ ಕೆಲವರು ಹಾದಿ ತಪ್ಪುತ್ತಾರೆ ಮತ್ತು ಹಾದಿಯಲ್ಲೇ ಗಟ್ಟಿಯಾಗಿ ನಿಂತುಬಿಡುತ್ತಾರೆ ಎಂಬುದು ನಿಚ್ಚಳವಾಗಿ ಕಾಣುತ್ತಿತ್ತು ನಮಗೆ. ಈ ಸೂಡಿ ಕಾದಂಬರಿಯಲ್ಲಿ ಹಾದಿ ತಪ್ಪುವುದಿಲ್ಲ, ಹಾದಿಗೆ ಬರುವಂತಹ ಸನ್ನಿವೇಶಗಳಿವೆ. ಚಾಂದ್ ಅವರ ಈ ಕಾದಂಬರಿಯ ಮೊದಲನೇ ಹಿರೋ ಕಾಡು, ಪ್ರಕೃತಿ ಮತ್ತು ನಮಗೆ ಸ್ವಾತಂತ್ರ್ಯ ಬರುತ್ತದೆ ಎಂಬ ಪುಳಕತನ. ಎರಡನೇ ಹಿರೋ ತನಿಯಾ. ಇದನ್ನು ಓದುತ್ತ ಇದ್ದರೆ ಮುಂದಿನ ನೂರು ವರ್ಷ ನಮಗೆ ಸ್ವಾತಂತ್ರ್ಯ ಬರುವುದಿಲ್ಲ ಅನಿಸಿಬಿಡುತ್ತದೆ. 

ಅಲ್ಲೊಂದು ಸಿರಿಪುರ ಎಂಬ ಪೊಲೀಸ್ ಠಾಣೆಯಲ್ಲಿ ಅತ್ಯಂತ ಕ್ರೂರಿಯಾದ ಪರಂಗಿ ಆಫೀಸರ್ ಇರ್ತಾನೆ. ಅವನ ಹೆಸರು ಕೇವಿನ್ ರಾಬರ್ಟ್ ಅಂತ. ಅವನು ಬಹಳ ರಾಕ್ಷಸನಂತಹ ಮನುಷ್ಯ. ಯಾರಾದ್ರೂ ಸ್ವಾತಂತ್ರ್ಯ ಹೋರಾಟಗಾರರು ಇದ್ದರೆ ಅವರನ್ನು ಸಣ್ಣ ಪ್ರೂಫ್ ಕೂಡ ಇಲ್ಲದೆ ಸುಟ್ಟು ಹಾಕಿಬಿಡುವಂತಹ ಮನುಷ್ಯನಾತ. ಆತ ಮೋಟಾರ್ ಸೈಕಲ್ ಏರಿಕೊಂಡು ಬರುತ್ತಿದ್ದರೆ ಇಡೀ ಊರು ನಡುಗುತ್ತಿರುತ್ತದೆ. ಸ್ವಾತಂತ್ರ್ಯ ಇಲ್ಲದ ದಿನಗಳಲ್ಲಿ ಹೇಗಿತ್ತು ಎಂಬ ಕಲ್ಪನೆ ನಮಗೂ ಇಲ್ಲ, ಆಗಿನ ಜನರಿಗೆ ಸ್ವಾತಂತ್ರ್ಯ ಇದ್ದರೆ ಹೇಗಿರುತ್ತದೆ ಎಂಬ ಕಲ್ಪನೆ ಇರಲಿಲ್ಲ. ಅಂತಹ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಜನ ಹಪಹಪಿಸುತ್ತಿರುತ್ತಾರೆ. ಅವನ್ನೆಲ್ಲ ಈ ಕಾದಂಬರಿ ತೆರೆದಿಡುತ್ತಾ ಹೋಗುತ್ತದೆ. 

ಆಗಿನ ಕಾಲದಲ್ಲಿ ಬೆಳಕಿಗೆ ಲಾಂದ್ರ ಇರುತ್ತಿರಲಿಲ್ಲ, ಟಾರ್ಚ್ ಇರುತ್ತಿರಲಿಲ್ಲ. ಬೆಳಕಿಗಾಗಿ ಈ ಸೂಡಿಯನ್ನು ಹಚ್ಚಿಕೊಂಡು ಹೋಗುತ್ತಿದ್ದರು. ಅದಕ್ಕೆ ಪಂಜು ಎಂಬ ಅರ್ಥವೂ ಇದೆ. ಈ ಸೂಡಿ ಸ್ವಾತಂತ್ರ್ಯದ ಬೆಂಕಿಯೂ ಹೌದು, ಸ್ವಾತಂತ್ರ್ಯದ ಬೆಳಕೂ ಹೌದು. ಸ್ವಾತಂತ್ರ್ಯ ಬೇಕು ಎನ್ನುವ ಸಾತ್ವಿಕ ಆಕ್ರೋಶವನ್ನು ಹುಟ್ಟಿಸುವ ಬೆಂಕಿಯೂ ಹೌದು. ಆ ಊರಿನಲ್ಲಿ ಸೂಡಿ ಎಂಬ ಹೆಸರಿನ ಪತ್ರಿಕೆ ಕೂಡ ಇರುತ್ತದೆ. ಬಸ್ಸು, ವಾಹನ ಯಾವುದೂ ಇಲ್ಲದ ಊರಿನಲ್ಲಿ ಆ ಪತ್ರಿಕೆಯನ್ನು ಆ ಊರಿನ ಮುಖಂಡರು ಹೇಗೆ ಹಂಚುತ್ತಿರುತ್ತಾರೆ, ಹಾಗೆ ಮಾಡುವಾಗ ಹೇಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇವೆಲ್ಲವೂ ಕಾದಂಬರಿಯಲ್ಲಿರುವ ಚೇಸಿಂಗ್ ಗುಣ. 

ತನಿಯಾ ಎಂಬ ಏನೂ ಗೊತ್ತಿಲ್ಲದ ಅಮಾಯಕನಿಗೆ ಸರಾಯಿಯ ಆಮಿಷ ಒಡ್ಡಿ ಅವನ ಪಂಚೇಂದ್ರಿಯಗಳನ್ನು ಭ್ರಷ್ಟನನ್ನಾಗಿ ಮಾಡುವಂತಹ ಸನ್ನಿವೇಶ ಬರುತ್ತದೆ. ಆತನಿಗೆ ತನಗೆ ಅನ್ನ ಹಾಕಿದ ಧಣಿಗಳಿಗೆ ದ್ರೋಹ ಮಾಡಬೇಕು ಅಂತೇನೂ ಇರುವುದಿಲ್ಲ. ಆದರೆ ಆಮಿಷಕ್ಕೆ ಒಳಗಾಗಿ ಎಲ್ಲವನ್ನೂ ಹೇಳುತ್ತಾ ಹೋಗುತ್ತಾನೆ. ಈ ತನಿಯಾ ಮತ್ತು ಆತನ ಹೆಂಡತಿ ಸನಿಯಾರು ಕಾಡಿನಲ್ಲಿ ಅದೆಂತಹ ಅದ್ಭುತ ದಾಂಪತ್ಯ ಮಾಡುತ್ತಿರುತ್ತಾರೆ ಎಂದರೆ ಅದನ್ನು ಸುಮ್ಮನೆ ಕಲ್ಪಿಸಿಕೊಳ್ಳಬೇಕು. 

ಇಂತಹ ಊರಿನಲ್ಲಿ ನಿಧಾನಕ್ಕೆ ಗಾಂಧಿಯ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಕಲ್ಪನೆ ಅರಳುತ್ತಾ ಹೋಗುತ್ತದೆ. ಆವತ್ತು ಹೇಗಿತ್ತು ಕಾಡು, ಅದು ಭ್ರಷ್ಟತೆಯಿಂದ ಹೇಗೆ ದೂರವಾಗಿತ್ತು, ಮನಸ್ಸಿನ ಭ್ರಷ್ಟತೆ, ಪರಿಸರವನ್ನು ವಿಧ್ವಂಸ ಮಾಡುವ ಭ್ರಷ್ಟತೆ. ಅಂತಹ ಪರಿಸರವನ್ನು ಚಾಂದ್ ಕಲ್ಪನೆ ಮಾಡಿಕೊಳ್ಳುತ್ತಾರೆ. 

ಅಲ್ಲೊಂದು ವಿಶೇಷವಾದ ಪಾತ್ರ ಬರುತ್ತದೆ, ಗಿರಿಜಾ ಹೆಗಡೆ ಅಂತ. ಆ ನೀರು ಎಷ್ಟು ಚೆಂದ ಬೀಳುತ್ತದೆ, ಈ ಜಲಪಾತ, ಈ ಹೂವು ಎಷ್ಟು ಚೆಂದ ಇದೆ ಎಂಬ ಆಸೆಗಳನ್ನು ಹೊಂದಿರುವ ಮುಗ್ಧ ಹೆಣ್ಣು ಮಗಳು ಆಕೆ. ಅಂಥವಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜುಗೊಳಿಸುತ್ತಾರೆ. ಕಥೆ ಓದುತ್ತಾ ಹೋದರೆ ಎಷ್ಟು ಅದ್ಭುತವಾದ ಭಾಷೆ ಬಳಸಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬರುತ್ತಾ ಹೋಗುತ್ತದೆ. 

ಸ್ವಾತಂತ್ರ್ಯ ಏನು ಎಂಬುದನ್ನು ಆ ಮುಗ್ಧ ಮನಸ್ಸುಗಳಿಗೆ ಹೇಳಬೇಕಲ್ಲ, ಅದನ್ನು ಎಷ್ಟು ಅತ್ಯದ್ಭುತವಾಗಿ ಹೇಳುತ್ತಾರೆಂದರೆ; ನೋಡು ಇಲ್ಲಿನ ಜೇನು ನಮ್ಮದು, ಇಲ್ಲಿನ ಜಲಪಾತಕ್ಕೂ ನಮಗೆ ಸಂಬಂಧವಿದೆ, ಸೌಪರ್ಣಿಕಾ ನದಿಗೂ ನಮಗೂ ಸಂಬಂಧವಿದೆ, ಈ ಕಾಡಿನ ಮರಗಳಿಗೂ ನಮಗೂ ಸಂಬಂಧವಿದೆ. ಆದರೆ ಪರಂಗಿ ಅಧಿಕಾರಿಗೆ ಯಾವ ಸಂಬಂಧವಿದೆ ಹೇಳು? ಅವನು ಬಂದು ಇಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತಾನೆ. ಇವೆಲ್ಲದರ ಅಧಿಕಾರ ನಮ್ಮದಾಗಬೇಕು. ಅದೇ ನಮ್ಮ ಸ್ವಾತಂತ್ರ್ಯ ಎಂಬ ಕಲ್ಪನೆಯನ್ನು ಚಾಂದ್ ಎಲ್ಲೂ ಗೊತ್ತಾಗದೇ ಇರುವ ಹಾಗೆ ನಾಲ್ಕೇ ನಾಲ್ಕು ಸಾಲುಗಳಲ್ಲಿ ಬಹಳ ಚೆನ್ನಾಗಿ ನಮ್ಮ ಮುಂದೆ ಕಟ್ಟಿಕೊಡುತ್ತಾರೆ. 

ಇಂತಹ ಒಳ್ಳೆಯ ಕಾದಂಬರಿ ಬರೆದ ಮಂಜುನಾಥ್ ಚಾಂದ್ ಅವರನ್ನು ಅಭಿನಂದಿಸಲು ಇಷ್ಟಪಡುತ್ತೇನೆ. ಅವರ ಬೇರೆ ಪುಸ್ತಕಗಳನ್ನೂ ಓದಲು ನಾನು ಉತ್ಸುಕನಾಗಿದ್ದೇನೆ. ಅವರು ಪೂರ್ಣಾವಧಿ ಬರವಣಿಗೆಯನ್ನು ತೊಡಗಿಕೊಳ್ಳಬೇಕು ಎಂದು ಬಯಸುತ್ತೇನೆ. ನಾವೀ ಕಾಲಘಟ್ಟದಲ್ಲಿ ಓದಿಗೆ ಹೆಚ್ಚು ಅಭ್ಯಾಸ ಮಾಡಿಕೊಳ್ಳುತ್ತಿದ್ದೇವೆ. ಅಕ್ಷರ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಇಂತಹ ಅಕ್ಷರ ಪ್ರಿಯತೆ ಹೆಚ್ಚಾಗುತ್ತಿರುವ ಕಾಲದಲ್ಲಿ ಇಂತಹ ಕಾದಂಬರಿಯನ್ನು ಓದಬೇಕು. ಚಾಂದ್ ಬಾಂಡ್ ಕಥೆಗಳನ್ನೇನೂ ಬರೆಯಲಿಲ್ಲ. ಒಂದು ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಇಷ್ಟು ರೋಚಕವಾಗಿ ಬರೆದಿರುವ ಮಂಜುನಾಥ್ ಚಾಂದ್ ಒಂದು ರೋಚಕವಾದ ಕಥೆಯನ್ನು ಇನ್ನೆಷ್ಟು ರೋಚಕವಾಗಿ ಬರೆಯಬಹುದು? ಮುಂದಿನ ತಲೆಮಾರಿಗೆ ಇಂತಹ ಕಾದಂಬರಿಗಳು ಬೇಕಾಗಿವೆ" ಎಂದು ಕೃತಿ ಕುರಿತು ವಿಶ್ಲೇಷಿಸಿದರು. 

ಈ ಸಂದರ್ಭದಲ್ಲಿ ಸಾಗ್ಗೆರೆ ರಾಮಸ್ವಾಮಿ ಹಾಗೂ ಕೃತಿಕಾರ ಮಂಜುನಾಥ್‌ ಚಾಂದ್‌ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...