ಕಾಲ ದೇಶಗಳನ್ನು ಮೀರಿ ಪಸರಿಸಿದ ಕಾವ್ಯ ‘ಪರಿಮಳ’


ಲೇಖಕ, ಅನುವಾದಕ ವಿಜಯ್ ನಾಗ್ ಜಿ ಅವರು ವಿವಿಧ ರಾಷ್ಟ್ರಗಳ ಗಮನಾರ್ಹ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ‘ಪರಿಮಳ’ ಶೀರ್ಷಿಕೆಯಡಿ ಪ್ರಕಟಿಸಿದ್ದು, ಈ ಕೃತಿಗೆ ಹಿರಿಯ ಲೇಖಕ ಕೆ. ಅನಂತರಾಮು ಅವರು ಬರೆದ ಮುನ್ನುಡಿ ಇಲ್ಲಿದೆ.

ಶ್ರೀ ವಿಜಯ ನಾಗ್ ಅವರು ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ, ಗ್ರಂಥಗಳ ಒಡನಾಟದಲ್ಲಿಯೇ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಪುಣ್ಯಶಾಲಿಯಾಗಿದ್ದಾರೆ. ಪುಸ್ತಕಗಳ ಒಡನಾಟದಲ್ಲಿದ್ದವರೆಲ್ಲ ತಾವೂ ಓದುತ್ತಾರೆ, ತಾವೂ ಬರೆಯುತ್ತಾರೆ ಎಂದೇನಿಲ್ಲ. ಅದರೆ ವಿಜಯ ನಾಗ್ ಮಾತ್ರ ಪುಸ್ತಕ ಲೋಕದಲ್ಲಿರುತ್ತ ತಮ್ಮನ್ನು ಗಾಢವಾದ ಅಧ್ಯಯನಕ್ಕೆ ಮತ್ತು ಗ್ರಂಥ ನಿರ್ಮಾಣಕ್ಕೆ ತೊಡಗಿಸಿಕೊಂಡಿರುವುದು ಮೆಚ್ಚಿಕೊಳ್ಳಬೇಕಾದ ಸಂಗತಿಯಾಗಿದೆ. ತಾವೊಬ್ಬ ಭಾಷಾಂತರಕಾರರಾಗಿ ವಿಜಯ ನಾಗ್ ಸಾಹಿತ್ಯರಂಗಕ್ಕೆ ಕಾಲಿಟ್ಟಿರುವುದು ಕೂಡ ಒಂದು ವಿಶೇಷ ಸಂಗತಿಯೆಂದು ಹೇಳಬೇಕು. ಈಗಾಗಲೇ ಅವರು ಆಲ್ಬರ್ಟ್ ಐನ್‍ಸ್ಟೀನ್‍ನ ಆಯ್ದ ಬರಹಗಳ ಒಂದು ಕನ್ನಡಾನುವಾದವನ್ನು ಪ್ರಕಾಶಪಡಿಸಿದ್ದಾರೆ. ಅದಕ್ಕಿಂತಲೂ ಮಹತ್ವವಾದ ಕಾರ್ಯವೆಂದರೆ, ಅವರು "ಜೆನ್ ಅನುಭವ" ಎಂಬ ಹೆಸರಿನಲ್ಲಿ ಶ್ರೇಷ್ಠರಾದ, ಜೆನ್ ಸಂಪ್ರದಾಯದ ಗುರುಗಳ ಜೀವನ ಮತ್ತು ಬೋಧನೆಗಳ ಮೂಲಕ, ಅದರ ಐತಿಹಾಸಿಕ ವಿಕಾಸದ ಚಿತ್ರಣ ನೀಡುವ ಹೆಬ್ಬೊತ್ತಿಗೆಯನ್ನೇ ತಂದಿರುವುದು. ಈ ಎರಡೂ ಕೃತಿಗಳ ಮೂಲಕ ವಿಜಯ ನಾಗ್ ಅವರು ಭಾಷಾಂತರ ಕ್ಷೇತ್ರದಲ್ಲಿ ತಮ್ಮ ಹೆಜ್ಜೆಗಳನ್ನು ಗಟ್ಟಿಯಾಗಿ ಊರಿದ್ದಾರೆ. ಶ್ರೇಷ್ಠವಾದ ವಿಶ್ವ ಸಾಹಿತ್ಯರಾಶಿ ಅವರ ಬೆರಳ ತುದಿಯಲ್ಲಿಯೇ ಇರುತ್ತದೆ. ಗದ್ಯದಿಂದ ಪದ್ಯಕ್ಕೆ ಕಾಲಿಟ್ಟು, ಇದೀಗ ಜಗತ್ತಿನ ವಿವಿಧ ರಾಷ್ಟ್ರಗಳ ಗಮನಾರ್ಹ ಕವಿಗಳ ಕವಯತ್ರಿಯರ ಒಳ್ಳೊಳ್ಳೆಯ ಕವಿತೆಗಳನ್ನು ಆಯ್ದು "ಪರಿಮಳ" ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.

ವಿಜಯ ನಾಗ್ ಅವರು ರಷ್ಯಾ, ಫ್ರಾನ್ಸ್, ಸ್ಪೇಯಿನ್, ಚಿಲಿ, ಜರ್ಮನಿ, ಅರ್ಜೆಂಟೀನಾ, ಮೆಕ್ಸಿಕೋ, ಪರ್ಷಿಯಾ ಮೊದಲಾದ ವಿಶ್ವದ ವಿವಿಧ ರಾಷ್ಟ್ರಗಳ ಕವಿತಾ ಜಗತ್ತಿನಿಂದ ತಾವು ಪ್ರೀತಿಸಿದ ಕವಿತೆಗಳನ್ನು ಆಯ್ದುಕೊಂಡು ಸುಂದರವಾಗಿ ಭಾಷಾಂತರಿಸಿ ಕೊಟ್ಟಿದ್ದಾರೆ. ಆಯಾ ರಾಷ್ಟ್ರದ ಕವಿಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಟ್ಟು, ತರುವಾಯ ಆಂಗ್ಲಮೂಲಕ್ಕೆ ಬಂದಿರುವ ಆ ಕವಿತೆಗಳನ್ನೂ ಕೊಟ್ಟು, ವಿಜಯ ನಾಗ್ ಅವರು ತಮ್ಮ ಭಾಷಾಂತರ ಕೈಂಕರ್ಯಕ್ಕೆ ಹೊಸ ಚಾಲನೆ ನೀಡಿದ್ದಾರೆ. ಅಲೆಗ್ಸಾಂಡರ್ ಪುಷ್ಕಿನ್‍ನು 'ವ್ಯಥೆಪಡೆನು ನಾ ವರುಷಗಳೇ' ಎಂಬ ಕವಿತೆಯಲ್ಲಿ ಬಾಳಿನ ವಸಂತದ ಸುಂದರ ವರ್ಷಗಳು ಕಳೆದು ಹೋದುವಲ್ಲಾ ಎಂದು ಅತಿಯಾದ ಕಳವಳವಿಲ್ಲದಿದ್ದರೂ, ಆ ವಸಂತದ ವರ್ಷಗಳು ಮರಳಿ ಬರಬೇಕೆಂದು ಕವಿ ಆಹ್ವಾನಿಸುವುದು ಕಾವ್ಯಪ್ರೇಮಿಗಳ ಮನವನ್ನು ಕಲಕುವಂತಿದೆ ನೋಡಿ:

ಆದರೆ ಸಮಯವೆಲ್ಲಿದೆ ಮೃದುವಾದ ಒಲವಿಗೆ,
ಹೃತ್ಪೂರ್ವಕ ಮೌನಕೆ, ಯುವ ಭರವಸೆಗಳ ನಾದಕೆ?
ಎಲ್ಲಿವೆ ಸ್ಪೂರ್ತಿಯ ಜ್ವಾಲೆಗಳು ಮತ್ತೆಲ್ಲಿವೆ
ಕಣ್ಣೀರುಗಳು?
ಹಿಂದಿರುಗಿ ಬನ್ನಿ, ಓ! ನನ್ನ ವಸಂತದ ವರುಷಗಳೆ!

ಇದೇ ಕವಿಯ 'ನಾ ನಿನ್ನ ಪ್ರೇಮಿಸಿದೆ' ಎಂಬ ಕವಿತೆಯೂ ಶಕ್ತಿಪೂರ್ಣವಾಗಿದೆ:
ನಾ ನಿನ್ನ ಪ್ರೇಮಿಸಿದೆ ಮೃದುವಾಗಿ ಮತ್ತು
ನಿಜವಾಗಿ,
ಮತ್ತೋರ್ವ ನಿನ್ನ ಪ್ರೇಮಿಸದಾ ಹಾಗೆ

ಎಂಬಲ್ಲಿರುವ ಭಾವತೀವ್ರತೆಯನ್ನು ಗಮನಿಸಬೇಕು.

ದೇಸಂಕ ಮಾಕ್ಸಿಮೋವಿಕ್‍ಳ 'ಹುಡುಗಿಯ ಕವನ' ಎಂಬುದಂತೂ ಈ ಸಂಕಲನದ ಅತ್ಯಂತ ಪ್ರಭಾವಶಾಲಿಯಾದ ಕವಿತೆಯೆಂದು ನಾನು ಭಾವಿಸುತ್ತೇನೆ. ತಾನು ಪ್ರೀತಿಸಿದ ಯುವಕನನ್ನು ಆ ಹುಡುಗಿಯು ಆಗಸದ ನಕ್ಷತ್ರಗಳಷ್ಟು ಅಪಾರ ಸಂಖ್ಯೆಯ ಕಣ್ಣುಗಳು ತನಗೆ ಲಭಿಸಿದರೂ ಮನದುಂಬಿ ನೋಡಲಾರಳು. ಮರಮರಗಳ ಅನಂತಶಾಖೆಗಳಷ್ಟು ಬಾಹುಗಳು ತನಗಾದರೂ, ಅವನನ್ನು ಅಪ್ಪಿಕೊಳ್ಳಲಾರಳು. ಅನಂತ ವಸಂತಗಳ ಸಂಗೀತದ ಸುನಾದವೆಲ್ಲ ಒಗ್ಗೂಡಿಸಿದರೂ ಅವನನ್ನು ಕುರಿತು ಹಾಡೊಂದನ್ನು ಹಾಡಲು ಸಾಕಾಗುವುದಿಲ್ಲ. ಆದರೆ, ಆ ಯುವಕನಾದರೋ ಇಷ್ಟು ಗಾಢವಾಗಿ ತನ್ನನ್ನು ಪ್ರೀತಿಸುವ ಹುಡುಗಿಯೊಬ್ಬಳಿದ್ದರೂ ಅವಳಿಂದ ವಿಮುಖನಾಗಿಬಿಟ್ಟ. ಆಗ ಆ ಹುಡುಗಿಗಾದ ನೋವನ್ನು ಕವಯತ್ರಿ ಅದೆಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾಳೆ ನೋಡಿ:

ಎಷ್ಟೊಂದು ಕಲ್ಲುಗಳಿವೆ ಈ ನೆಲದಲಿ
ಮತ್ತೆ ಅವೆಲ್ಲವನು ನನ್ನೆದೆಯ ಮೇಲಿರಿಸಿದರೂ
ಕೂಡ ಈ ನೋವ ಅರ್ಧದಷ್ಟಾಗಲಾರದೇನೋ.

ದೇಹಕ್ಕೆ ಸಾವು ಇದೆಯಾದರೂ ಆತ್ಮಕ್ಕೆ ಸಾವಿಲ್ಲ. ಅದು ಶಾಶ್ವತವಾದುದು. ಜಗತ್ತನೆಲ್ಲ ತುಂಬಿಕೊಂಡ ಆತ್ಮನ ಆ ಅಮರತೆಯ ಗುಣವೇ ಶರೀರದ ಬಂಧನಕ್ಕೆ ತುತ್ತಾಗಿ 'ಜೀವಾತ್ಮ'ನೆನಿಸಿಕೊಂಡ ತತ್ವದಲ್ಲಿಯೂ ಪ್ರತಿಫಲಿಸುತ್ತದೆ. ಆದ್ದರಿಂದಲೇ, ಮನುಷ್ಯನು ತಾನು ಸತ್ತ ಬಳಿಕವೂ ಜೀವಿಸುತ್ತಿರುತ್ತಾನೆ ಎಂಬ ಹಂಬಲವನ್ನು ತೋರ್ಪಡಿಸುತ್ತಾನೆ. ಆ ಭಾವವು ಫೆಡ್ರಿಕೋ ಗಾರ್ಸಿಯಾ ಲೋರ್ಕಾ ಎಂಬ ಕವಿಯ "ವಿದಾಯ" ಎಂಬ ಕಿರುಗವಿತೆಯೊಂದರಲ್ಲಿ ಪ್ರಕಟವಾಗಿದೆ. ನಾನು ಸತ್ತರೂ ನಾನು ಹೊರ ಜಗತ್ತನ್ನು ನೋಡುತ್ತಿದ್ದ ಬಾಲ್ಕನಿಯನ್ನು ತೆರೆದಿಡು ಎಂದು ಕವಿ ಪ್ರಾರ್ಥಿಸುತ್ತಿದ್ದಾನೆ. ಆ ಬಾಲ್ಕನಿಯ ಮೂಲಕ ಕವಿಯು ಪುಟ್ಟ ಬಾಲಕನೊಬ್ಬನು ಕಿತ್ತಳೆಯ ಹಣ್ಣು ಸವಿಯುವ ದೃಶ್ಯವನ್ನು ನೋಡಬೇಕಂತೆ! ರೈತನು ಹೊಲದಲ್ಲಿ ಗೋಧಿ ಬೆಳೆಯ ಕೊಯ್ಲು ಮಾಡುವುದನ್ನು ನೋಡಬೇಕಂತೆ! ಅದಕ್ಕೆ ಕವಿ ಪ್ರಾರ್ಥಿಸುತ್ತಾನೆ:

ನಾ ಸತ್ತರೆ
ಈ ಬಾಲ್ಕನಿಯ ತೆರೆದಿಡು

ಜಾಕ್ವೆಸ್ ಪ್ರೀವರ್ಟ್ ಕವಿಯ "ನಿನಗಾಗಿ ಓ ಪ್ರಿಯೆ" ಕೂಡ ಅತ್ಯಂತ ಮನೋಜ್ಞ ಕವಿತೆಗಳಲ್ಲೊಂದಾಗಿದೆ. ಪ್ರೇಮಿಯೊಬ್ಬನು ಗುಲಾಮರ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದ ಹುಡುಗಿಯೊಬ್ಬಳನ್ನು ಕಂಡು ಪ್ರೀತಿಸಿದ. ಬೆಲೆಕೊಟ್ಟು ಅವಳನ್ನು ಆ ಬಂಧನದಿಂದ ಬಿಡುಗಡೆ ಮಾಡಿಸಿಕೊಂಡು ಮನೆಗೆ ಕರೆ ತರಬೇಕೆಂದು ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಂಡ. ಅವಳಿಗಾಗಿ ಹಕ್ಕಿಯೊಂದನ್ನು ಕೊಂಡು ತಂದ. ಅದನ್ನವಳು ಮೆಚ್ಚುತ್ತಾಳೆಯೇ! ಅದನ್ನು ಬಂಧಿಸಿಡಲು ಅವಳು ಒಪ್ಪಲಾರಳು. ಅವಳಿಗಾಗಿ ಒಂದು ಗುಲಾಬಿ ಹೂವು ತಂದ. ಅದನ್ನವಳು ಖಂಡಿತ ಸ್ವೀಕರಿಸಬಲ್ಲಳು. ಅವಳಿಗಾಗಿ ಒಂದು ಸರಪಳಿಯನ್ನೂ ತಂದ. ಅವಳನ್ನು ಪ್ರೇಮದ ಸರಪಳಿಯಿಂದ ಬಂಧಿಸಿ ಬಿಡಬೇಕೆಂದೋ ಅಥವಾ ಅವಳಿಂದಲೇ ತಾನು ಬಂಧಿಸಲ್ಪಡಬೇಕೆಂದೋ ತಂದನೆಂದು ತೋರುತ್ತದೆ.ಆದರೇನು, ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡು

ಆ ಮಾರುಕಟ್ಟೆಗೆ ಹೋದರೆ ಅವಳು ಅಲ್ಲಿರಲೇ ಇಲ್ಲ!
ಗುಲಾಮರ ಮಾರುಕಟ್ಟೆಗೆ ನಾ ಹೋದೆ
ನಿನಗಾಗಲ್ಲಿ ಹುಡುಕಿದೆ
ಆದರೆ ನೀ ಅಲ್ಲಿ ಕಾಣಲೇಯಿಲ್ಲ
ಓ ನನ್ನ ಪ್ರಿಯೆ

ಕವಿತೆಯ ಅಂತ್ಯದಲ್ಲಿ ಬರುವ ಈ ತಿರುವು ಸಹೃದಯರನ್ನು ವಿಷಾದದ ಹೊನಲಿನಲ್ಲಿ ಕೊಚ್ಚಿಹೋಗುವಂತೆ ಮಾಡಿಬಿಡುತ್ತದೆ! ವಿಜಯ ನಾಗ್ ಅವರು ಮಾಡಿರುವ ಅನುವಾದದ ಹಿರಿಮೆಯನ್ನು ಅರಿಯಬೇಕಾದರೆ ಮೂಲಕವಿತೆಗಳನ್ನು ಓದಿಕೊಳ್ಳಬೇಕು. ವಿವಿಧ ಭಾಷಾರಂಗಕ್ಕೆ ಸೇರಿದ ಈ ಕವಿತೆಗಳು ಆಂಗ್ಲಭಾಷೆಗೆ ಬರುವಾಗಲೇ ಒಮ್ಮೆ ಅನುವಾದಕ್ಕೆ ಪಾತ್ರವಾಗಿ ಬಿಟ್ಟಿವೆ. ಆ ಅರ್ಥದಲ್ಲಿ ಈ ಸಂಕಲನವು ಅನುವಾದದಿಂದ ಅನುವಾದ, ಅನುವಾದದ ಯಾತ್ರೆ. ಆ ಯಾತ್ರೆಯಲ್ಲಿ ಲಭಿಸಿದ ಆನಂದವನ್ನು ತಾವೊಬ್ಬರೆ ಹಿಡಿದಿಟ್ಟುಕೊಳ್ಳಲಾರದೆ ವಿಜಯ ನಾಗ್ ಅವರು ಕನ್ನಡಿಗರಿಗೆಲ್ಲ ಉಣಬಡಿಸಿದ್ದಾರೆ. ಆಸೆ-ನಿರಾಸೆಗಳು, ಬೇನೆ-ಬೇಸರಗಳು, ಪ್ರಣಯ-ವಿರಹಗಳು, ಆನಂದದ ರಸನಿಮಿಷಗಳು, ನಿರಾಸೆಯ ಸುಳಿಗಳು ಮುಂತಾದ ಎಲ್ಲ ಎಲ್ಲವೂ ಬದುಕಿನ ಬಣ್ಣಗಳಲ್ಲದೆ ಬೇರೆಯಲ್ಲ. ಅಂತಹ ಬದುಕಿನ ಬಣ್ಣಗಳ ಕಾಂತಿ ಮಾಸದಂತೆ ಯಥಾವತ್ತಾಗಿ ಗ್ರಹಿಸಿಕೊಡುವ ಪ್ರತಿಭಾಪೂರ್ಣವಾದ ಕಾರ್ಯವನ್ನು ವಿಜಯ ನಾಗ್ ನೆರೆವೇರಿಸಿದ್ದಾರೆ. ಹರಿತವಾದ ಕತ್ತಿಯ ಅಲಗಿನ ಮೇಲೆ ನಡೆದಂತಿದೆ ಈ ಅನುವಾದದ ಹಾದಿ. ಅಂತಹ ಹಾದಿಯನ್ನು ಕ್ರಮಿಸುವಲ್ಲಿ ವಿಜಯ ನಾಗ್ ತುಂಬಾ ಯಶಸ್ವಿಯಾಗಿದ್ದಾರೆ, ತನ್ಮೂಲಕ ಜಗತ್ತಿನ ಕವಿಹೃದಯಗಳು ಸ್ಪಂದಿಸುವ ಪರಿಯನ್ನು ಪರಿಭಾವಿಸುವ ಮಹದಾನಂದಕ್ಕೆ ಎಲ್ಲರನ್ನೂ ಒಡ್ಡಿದ್ದಾರೆ. ಇಲ್ಲಿನ ಕವಿತೆಗಳ ನವನೂತನ ಭಾವಗಳಿಂದ ಉತ್ತೇಜಿತರಾಗಿ ನಮ್ಮ ಯುವಕವಿಗಳು, ಈ ಪರಿಯ ವೈವಿಧ್ಯಕ್ಕೆ ತಮ್ಮನ್ನು ತೆತ್ತುಕೊಳ್ಳುತ್ತಾರೆಂದು ನಾನು ಭಾವಿಸುತ್ತೇನೆ. ಹೊಸಕವಿಗಳು ಸಾಧಿಸಬಹುದಾದ ಹೊಸತನಕ್ಕೆ ಇಲ್ಲಿನ ಕವಿತೆಗಳು ಹೊಳಪು ಕೊಡುವಂತಿವೆ.

ನವೋದಯ ಯುಗದ ಮತ್ತು ನವ್ಯಯುಗದ ಕವಿತೆಗಳ ಹಲವು ಆಯಾಮಗಳ, ಕಲ್ಪನೆಗಳ, ಭಾವನೆಗಳ ವಿಸ್ತಾರವು ವಿಜಯ ನಾಗ್ ಅವರು ಅನುವಾದಿಸಿರುವ ಇಲ್ಲಿನ ಕವಿತೆಗಳಲ್ಲಿದೆ. ಅವರು ಅನುವಾದದಲ್ಲಿ ತೋರಿರುವ ಕ್ರಿಯಾಶೀಲತೆ, ಚೈತನ್ಯಮಯತೆ ಅನುಕರಣೀಯವಾಗಿದೆ.
ಈ ಅನುವಾದವನ್ನು ಒಮ್ಮೆ ಓದಿ ಮಗ್ಗುಲಿಗಿಟ್ಟರೆ ಅವು ಬಿಡುವುದಿಲ್ಲ. ಮತ್ತೆ ಮತ್ತೆ ಓದುವ, ಮತ್ತೆ ಮತ್ತೆ ಅರ್ಥೈಸಿಕೊಳ್ಳುವ, ಮತ್ತೆ ಮತ್ತೆ ಮೆಲುಕು ಹಾಕುವ, ಮತ್ತೆ ಮತ್ತೆ ಹೊಸ ಹೊಸದನ್ನು ಹುಡುಕುವ ಅನಿವಾರ್ಯತೆಗೆ ಅವು ನಮ್ಮನ್ನು ಗುರಿಪಡಿಸುತ್ತವೆ. ಬೋರ್ಜಸ್ ಕವಿಯ "ಅವನ ಕುರುಡು" ಕವಿತೆಯ

ಸೂರ್ಯೋದಯಕೆ ಕಾಯುತಿದೆ. ಒಮ್ಮೆಯಾದರೂ
ಮಾನವನ ಮುಖವೊಂದ ನೋಡಬಯಸುವೆ
ಅದು ನಾನರಿಯದ ವಿಶ್ವಕೋಶವೇ ಆಗಿದೆ.
ನಾ ಹಿಡಿಯಲೇ ಆಗದ ಮಧುರ ಆಟಗಳ
ಸಂಪುಟವೇ ಇದಾಗಿದೆ.

ಎಂಬ ಸಾಲುಗಳನ್ನಾಗಲಿ, ಫ್ಯಾಬ್ಲೊ ನೆರೊಡ ಕವಿಯ ' ನಾ ಸತ್ತರೆ ಪ್ರಿಯೆ' ಕವಿತೆಯ
ಆದರೆ ಪ್ರಿಯೆ, ಈ ಪ್ರೇಮವು ಮುಗಿದಿಲ್ಲ
ಹುಟ್ಟುವುದು ಇಲ್ಲದಿರುವಂತೆ, ಇದು
ಸಾಯುವುದು ಇಲ್ಲ. ಸುದೀರ್ಘವಾದ ನದಿಯಂತೆ
ಕೇವಲ ಪಾತ್ರವನು ಬದಲಾಯಿಸುತ್ತಿದೆ ಮತ್ತು
ತುಟಿಗಳ ಬದಲಾಯಿಸುತ್ತಿದೆ

ಎಂಬ ಸಾಲುಗಳನ್ನು ಪರಿಭಾವಿಸುವುದೇ ಒಂದು ದಿವ್ಯಾನಂದ.

ಒಟ್ಟಿನಲ್ಲಿ ಹೇಳುವುದಾದರೆ, ವಿಜಯ ನಾಗ್ ಅವರ ಈ ಸಂಕಲನವು ಕನ್ನಡನುಡಿಯ ಅಭಿವ್ಯಕ್ತಿ ಸಾಮರ್ಥ್ಯವನ್ನು ಹಿಗ್ಗಿಸುವಂತಿದೆ. ಹೊಸದೊಂದು ಭಾವಜಗತ್ತನ್ನು ಹೊಗಿಸುವ ಸಾರ್ಥಕಯತ್ನ ಇದಾಗಿದೆ. ಭಾಷಾಂತರಕಾರರು ಮೆರೆಯಬಹುದಾದ ಕಲೆಗಾರಿಕೆಗೆ, ಕುಶಲತೆಗೆ ಭಾವಚಾತುರ್ಯಕ್ಕೆ ಈ ಅನುವಾದವೊಂದು ಸಾಕ್ಷಿಯಾಗಿದೆ. ಸಹೃದಯರಾದ ಕನ್ನಡಿಗರು ವಿಜಯ ನಾಗ್ ಅವರ ಈ ಸಂಕಲನವನ್ನು ಪ್ರೀತಿಯಿಂದ ಸ್ವಾಗತಿಸಿ ಅವರನ್ನು ಪ್ರೋತ್ಸಾಹಿಸುತ್ತಾರೆಂದು ನಾನು ಭಾವಿಸುತ್ತೇನೆ. ಈ ಸಂಕಲನಕ್ಕೆ ಕವಿವರ್ಯರು ಕೊಟ್ಟಿರುವ "ಪರಿಮಳ" ಎಂಬ ಶೀರ್ಷಿಕೆಯು ಸಾರ್ಥಕವಾಗಿದೆ. ಹಲವು ರಾಷ್ಟ್ರಗಳ ಸುಂದರ ಕವಿತೆಗಳು ಕನ್ನಡಾನುವಾದದ ಪಾರಿಜಾತದ ಪರಿಮಳವೇ ಇಲ್ಲಿ ಸೂಸುತ್ತಿದೆ.

ವಿಜಯ ನಾಗ್ ಅವರು ಸದಾಕಾಲ ಗ್ರಂಥಗಳ ಸಹವಾಸದಲ್ಲಿಯೇ ಇರುವವರಾಗಿದ್ದಾರೆ. ಆ ಸಹವಾಸವನ್ನು ಅವರು ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಾರೆ. ಅವರಿಂದ ಭಾಷಾಂತರ ಪ್ರಕಾರಕ್ಕೆ ಮಾತ್ರವಲ್ಲದೆ, ಬೇರೆ ಬೇರೆ ಸಾಹಿತ್ಯ ಪ್ರಕಾರಗಳಿಗೂ ಸೇವೆ ಸಲ್ಲಲಿದೆ. ಸೃಜನಶೀಲ ಸಾಹಿತ್ಯ ಕೃಷಿಯತ್ತಲೂ ಮನಸ್ಸುಕೊಟ್ಟು ಅನವರತವೂ ಸಾಹಿತ್ಯಸಂಗದಲ್ಲಿರುವಂತಾಗಲೆಂದು ನಾನು ಹಾರೈಸುತ್ತೇನೆ. ಅವರಿಂದ ಹೆಚ್ಚು ಹೆಚ್ಚಿನದನ್ನು ನಾಡವರು ಬಯಸುತ್ತಿದ್ದಾರೆಂಬುದನ್ನು ನಾನು ಅರಿಕೆ ಮಾಡಿಕೊಳ್ಳುತ್ತಿದ್ದೇನೆ. ವಿಜಯ ನಾಗ್ ತಮ್ಮ ಕೈಂಕರ್ಯವನ್ನು ವಿಜಯಗೊಳಿಸುವುದರಲ್ಲಿ ಸಂಶಯವಿಲ್ಲ.

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...