ಕಾಲಚಕ್ರದಲ್ಲಿ ಹಿಂತಿರುಗಿದಾಗ ಗುಲಬುರ್ಗ ಜಿಲ್ಲೆ ಸಮುದ್ರವಾಗಿತ್ತು!

Date: 28-01-2020

Location: ಬೆಂಗಳೂರು


ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎಲ್ಲಿಂದೆಲ್ಲಿಯ ಸಂಬಂಧ? ಹೀಗೆ ಅನ್ನಿಸುವುದು ಸಹಜ. ಹೌದು ದಖನ್‌ ಪ್ರಸ್ಥಭೂಮಿ ಆಯಕಟ್ಟಿನ ಜಾಗದಲ್ಲಿರುವ ಗುಲಬರ್ಗಾ ಜಿಲ್ಲೆಯು ಹಿಂದೊಮ್ಮೆ ಸಮುದ್ರದ ಭಾಗವಾಗಿತ್ತೇ? ಎಂಬ ಪ್ರಶ್ನೆಗೆ ಭೂಗರ್ಭಶಾಸ್ತ್ರಜ್ಞರು ಹೌದು ಎನ್ನುತ್ತಾರೆ. ಅದಕ್ಕೆ ಅವರು ಕೊಡುವ ಕಾರಣಗಳು ಜಿಲ್ಲೆಯಲ್ಲಿ ಇರುವ ಶಿಲಾಪದರುಗಳ ವಿನ್ಯಾಸ. ಹಿರಿಯ ಭೂಗರ್ಭಶಾಸ್ತ್ರಜ್ಞ ಸಿ. ಗೋಪಾಲಸ್ವಾಮಿ ರಾವ್‌ ಐದು ದಶಕಗಳ ಹಿಂದೆ ಈ ಸಂಶೋಧನೆಯನ್ನು ಕುರಿತ ಲೇಖನ ಪ್ರಕಟಿಸಿದ್ದರು.

 

ಗುಲಬುರ್ಗಾ ಜಿಲ್ಲೆ ಭಾರಿ ಸಮುದ್ರವಾಗಿತ್ತೆ ? ಎಂಥ ಹುಚ್ಚು ಪ್ರಶ್ನೆ. ಕರಾವಳಿಯಿಂದ ಅನೇಕ ನೂರು ಮೈಲು ದೂರವಿದ್ದು ಅತ್ಯಧಿಕ ಉಷ್ಣಾ೦ಶ ಮತ್ತು ಅತ್ಯಲ್ಪ ವರ್ಷ ಫಲ (ಮಳೆ) ಯಿಂದ ಕೂಡಿದ ಈ ಬರಗಾಲದ ನಾಡು ಒಮ್ಮೆ ಜಲಮಯವಾಗಿತ್ತೆಂದು ಹೇಳುವವರಿಗೆ ಸ್ವಲ್ಪ ಬುದ್ದಿ ಕೆಟ್ಟಿರಬೇಕು ಎನಿಸುತ್ತದೆ. ಆದರೆ ಭೂಗರ್ಭ ವಿಜ್ಞಾನಿ ಹಾಗೇ ಹೇಳುತ್ತಾನೆ. ಇದಕ್ಕೆ ಪ್ರಮಾಣವೇನು ಎಂದು ಕೇಳಿದರೆ ಅವನು ಕಲ್ಲುಗಳ ಕಡೆಗೆ ಬೆರಳು ತೋರಿಸುತ್ತಾನೆ. 

ಹಲವಾರು ಕೋಟಿ ವರ್ಷಗಳ ಹಿ೦ದೆ ಸೃಷ್ಟಿಯಾದ ಪೃಥ್ವಿಯಲ್ಲಿ ಹಿಂದ ಏನೇನಾಯಿತು? ಎಂದು ಕಂಡುಹಿಡಿಯುವ ವೈಜ್ಞಾನಿಕ ಪತ್ತೆದಾರಿ ಕೆಲಸದಲ್ಲಿ ಭೂಗರ್ಭವಿಜ್ಞಾನಿಗೆ ಕಲ್ಲುಗಳು ಅಮೂಲ್ಯ ಮೂಕ ಸಾಕ್ಷಿಗಳಾಗಿವೆ. ಅವುಗಳನ್ನು ಪರೀಕ್ಷಿಸಿ ವಿಜ್ಞಾನಿ ಅವು ಯಾವಾಗ, ಹೇಗೆ ಉಂಟಾದವು ಎಂದು ಹೇಳಬಲ್ಲ.

ಭೂಗರ್ಭವಿಜ್ಞಾನಿ ಕಲ್ಲುಗಳನ್ನು ಮೂರು ಬಗೆಯಾಗಿ ವಿಂಗಡಿಸುತ್ತಾನೆ- ಅಗ್ನಿಶಿಲೆ, ಜಲಜಶಿಲೆ ಮತ್ತು ರೂಪಾಂತರಶಿಲೆ. ಪ್ರತಿ ಯೊಂದೂ ತನ್ನ ಕಥೆಯನ್ನು ಹೇಳುತ್ತದೆ. ಅನಾದಿಯಿಂದ ಭೂಗರ್ಭದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಪ್ರಕಂಡ ಉಷ್ಣತೆಯಿ೦ದಲೂ ಒತ್ತಡಗಳಿ೦ದಲೂ ಕರಗಿದ ಶಿಲಾರಸವು ( ಇದಕ್ಕೆ ಮ್ಯಾಗ್ಯ ಎಂದು ಹೆಸರು) ಮೇಲಕ್ಕೆ ಉಕ್ಕಿ ಬಂದು ರಬ್ಬರಿನಂಥ ಸ್ಥಿತಿಸ್ಥಾಪಕ ರೂಪದಿಂದ ಘನ ರೂಪಕ್ಕೆ ಪರಿವರ್ತನೆ ಹೊ೦ದುತ್ತದೆ. ಇದೇ ಅಗ್ನಿ ಶಿಲೆ. ಅಗ್ನಿ ಶಿಲೆಗಳಲ್ಲಿ ಎರಡು ಬಗೆ. ಒಂದು ಇನ್ನೂ ಸೃಷ್ಟಿಯ ಒಳಗಿರುವಾಗಲೇ ಘನೀಭೂತವಾದದ್ದು, ಇನ್ನೊಂದು ಪೃಥ್ವಿಯ ಮೇಲ್ಪದರನ್ನು ಭೇದಿಸಿ ಮೇಲೆ ಉಕ್ಕಿ ಬಂದು ಗಟ್ಟಿಯಾದದ್ದು. ಎರಡಗೊಳಗೆ ಸಾಕಷ್ಟು ಭೇದವಿದೆ. ಮೊದಲನೆಯದರಲ್ಲಿ ಕಲ್ಲುಗಳು ಪೂರ್ಣ ಶಿಲಾಲಕ್ಷಣಗಳನ್ನು ಪಡೆದಿರುತ್ತವೆ. ಅವುಗಳಲ್ಲಿರುವ ಖನಿಜ ಸಮುದಾಯವು ಪೂರ್ಣವಾಗಿ ಸ್ಫಟಿಕೀಕೃತವಾಗಿರುತ್ತವೆ. ಎರಡನೆಯದು ಪೃಥ್ವಿಯ ಹೊರಮೈಗೆ ಹರಿದು ಬಂದುದರಿಂದ ಸ್ಪಟಿಕೀಕರಣಕ್ಕೆ ಸಾಕಷ್ಟು ಅವಕಾಶ ದೊರೆಯುವ ಮೊದಲೇ ಘನರೂಪ ಹೊಂದಿರುತ್ತದೆ. ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದರೆ ಇದರಲ್ಲಿ ಖನಿಜ ಕಣಗಳು ಬಹಳ ಸಣ್ಣವಾಗಿದ್ದು ತೀರ ಅಪೂರ್ಣ ಬೆಳವಣಿಗೆ ಹೊಂದಿರುತ್ತವೆ. ಕೆಲವೇಳೆ ಇದಕ್ಕೂ ಅವಕಾಶ ಸಾಲದೇ ಶಿಲಾರಸವು ಹೊರಬಿದ್ದ ಸ್ಥಿತಿಯಲ್ಲೇ ಗಟ್ಟಿಯಾಗಿ ಬಿಟ್ಟಿರುತ್ತದೆ. ಇದನ್ನೇ 'ಲಾವಾ ಗಾಜು' ಎನ್ನುವುದು.

ಜಲ ಶಿಲೆಗಳ ಕಥೆಯೇ ಬೇರೆ. ಇವು ಕುದಿ  ಯುವ ಶಿಲಾರಸದಿಂದ ಉತ್ಪನ್ನವಾಗಿರದೆ ಸಮುದ್ರ ತಳದಲ್ಲಿ ಉಂಟಾಗಿರುತ್ತವೆ. ಬಿಸಿಲು,

ಗಾಳಿ, ಮಳೆಗಳಿಂದಲೂ ರಾಸಾಯನಿಕ ಬದಲಾವಣೆಗಳಿಂದಲೂ ಛಿದ್ರ ಛಿದ್ರವಾದ ಕಲ್ಲು ಮಣ್ಣುಗಳನ್ನು ತೊರೆ, ಹೊಳೆ, ನದಿಗಳು ಕೊಚ್ಚಿ ಕೊಂಡುಹೋಗಿ, ಕೊನೆಗೆ ಸಮುದ್ರವನ್ನು ಸೇರುತ್ತದೆ. ಶತಶತಮಾನಗಳ ಕಾಲ ಹೀಗೆ ಬಂದುಬಿದ್ದ ಅಗಾಧ ಮಣ್ಣು ಮೆಟ್ಟಿಲುಗಳು ಪದರುಪದುರಾಗಿ ಸಾವಿರಾರು ಅಡಿ ದಪ್ಪವಾಗಿ, ತಮ್ಮ ಮೇಲೆ ಹೊಸದಾಗಿ ಬಂದು ಬೀಳುವ ಕೆಸರಿನ ಮತ್ತು ನೂರಾರು ಅಡಿ ಆಳವಾಗಿ ಮೇಲೆ ನಿಂತ ನೀರಿನ ಭಾರದಿಂದ ಗಟ್ಟಯಾಗಿ ಶಿಲಾರೂಪ ಹೊಂದುತ್ತವೆ. ಇವೇ ಪದರ ಶಿಲೆಗಳು ಅಥವಾ ಜಲಜ ಶಿಲೆಗಳು. 

ಹೀಗೆ ಯುಗ ಯುಗಗಳ ಅವಧಿಯಲ್ಲಿ ಜಲಜ ಶಿಲೆಗಳು ಬೆಳೆಯುವಾಗ ಸಾಮುದ್ರ ಪ್ರಾಣಿಗಳೂ ಸಸ್ಯಗಳೂ ಅವುಗಳೆಡೆಯಲ್ಲಿ ಸಿಕ್ಕಿ ಒತ್ತಲ್ಪಟ್ಟು ಕಲ್ಲಾಗಿ ಮಾರ್ಪಡುತ್ತವೆ. ಇಂಥ ಜಲಜಾತ ಜೀವಿಗಳ ಅವಶೇಷಗಳನ್ನು 'ಪಳೆಯುಳಿಕೆ' (fossil) ಗಳು ಎಂದು ಕರೆಯುತ್ತಾರೆ. ಜಲಜಶಿಲೆಗಳ ಪದರುಗಳ ವಿವಿಧ ಸ್ತರಗಳಲ್ಲಿ ಸಿಗುವ ಈ ಪಳೆಯುಳಿಕೆಗಳು ಪೃಥ್ವಿಯಲ್ಲಿ ಪ್ರಾಣಿಗಳ ಹುಟ್ಟು ಬೆಳವಣಿಗೆಗಳ ಇತಿಹಾಸವನ್ನು ಹೇಳುತ್ತವೆ. ಜೀವಜಾತಗಳ ವಿಕಾಸ ಅಥವಾ ಉತ್ಕ್ರಾಂತಿಯ ಹಂತಗಳನ್ನು ಊಹಿಸಲು ಇವು ತುಂಬ ನೆರವಾಗಿವೆ. 

ರೂಪಾಂತರ ಶಿಲೆಗಳು ಮೂಲತಃ ಅಗ್ನಿ ಶಿಲೆಗಳಾಗಲಿ ಜಲಜಶಿಲೆಗಳಾಗಲಿ ಆಗಿರಬಹುದು. ಅವು ಅಪಾರ ಉಷ್ಣತೆ ಮತ್ತು ಒತ್ತಡಕ್ಕೆ ಒಳ ಪಟ್ಟು ಸಂವರ್ಧಿತವಾದಾಗ ಅವುಗಳ ರಚನೆಯಲ್ಲೇ ಬದಲಾವಣೆಯಾಗಿ ಬಿಡುತ್ತದೆ. ಕೆಲವು ಪದರಪದರವಾಗಿಯೂ ಕೆಲವು ಪುನಃ ಸ್ಫಟಿಕೀಕರಣದಿಂದ ಇನ್ನಷ್ಟು ಕಠಿನವಾಗಿಯೂ ಮಾರ್ಪಡಬಹುದು. ’ಸಿಸ್ಟ್‌’ ಮತ್ತು 'ನೈಸ್’ ಶಿಲೆಗಳು ಇದಕ್ಕೆ ಉದಾಹರಣೆಯಾಗಿವೆ.

ಗುಲಬರ್ಗಾ ಜಿಲ್ಲೆಯಲ್ಲಿ ಇವು ಮೂರೂ ಬಗೆಯ ಕಲ್ಲುಗಳು ದೊರಕುತ್ತವೆ. ಈ ಜಿಲ್ಲೆಯ ಪ್ರದೇಶವು ಇತಿಹಾಸದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆಯೆಂದು ಇದರಿಂದ ಖಚಿತವಾಗುತ್ತದೆ. ಜಿಲ್ಲೆಯ ಈಗಿನ ಹತ್ತು ತಾಲೂಕುಗಳ ಪೈಕಿ, ಚಿಂಚೋಳಿ, ಸೇಡಂ, ಚಿತ್ತಾಪುರ, ಜೇವರಗಿ, ಶಾಹಪುರ ಮತ್ತು ಸುರಪುರ ತಾಲೂಕಿನ ಕೆಲ ಭಾಗಗಳು ಜಲಜ ಶಿಲೆಗಳಿಂದ ಕೂಡಿವೆ. ಇದರಿಂದ ಒಂದಾನೊಂದು ಕಾಲದಲ್ಲಿ ಇಲ್ಲಿ ಅಗಾಧವಾದ ಸಮುದ್ರ ಹಬ್ಬಿತ್ತೆಂದು ಸಿದ್ದವಾಗುತ್ತದೆ. ಭೀಮಾ ನದಿಯ ಪಾತ್ರದ ಗುಂಟ ಈ ಶಿಲೆಯ ವಿಸ್ತಾರ ಹೆಚ್ಚಾಗಿರುವುದರಿಂದ ಇದನ್ನು ’ಭೀಮಾ ಶ್ರೇಣಿ' ಎಂದು ಕರೆಯುವುದುಂಟು.

ಈ ಸಮುದ್ರದ ಇತಿಹಾಸವೇನು ? ಇದು ನೂರಾರು ಚದರ ಮೈಲು ವಿಸ್ತಾರವಾಗಿದ್ದರೂ ಅದು ಭೂಮಧ್ಯ ಸಮುದ್ರ ವಾಗಿತ್ತು - ಅರ್‍ಥಾತ್ ಯಾವುದೇ ಮಹಾ ಸಾಗರಕ್ಕೆ ಅದು ಕೂಡಿರಲಿಲ್ಲ. ಐದೂವರೆ ಲೂಕುಗಳನ್ನು ವ್ಯಾಪಿಸಿದ್ದ ಈ ಸಮುದ್ರ ಮೊದಲು ಹೆಚ್ಚು ಆಳವಾಗಿರದೆ ಬರಬರುತ್ತ ಪೃಥ್ವಿಯ ಮೇಲಾದ ಘೋರ ಸಿತ್ಯಂತರಗಳಲ್ಲಿ ಕೆಳಕೆಳಗೆ ಕುಸಿದು ನೂರಾರಡಡಿ ಆಳವಾದಂತೆ ಕಾಣುತ್ತದೆ. ಆದರೆ ಈ ವಿಶಾಲ ಜಲರಾಶಿಯ ತೀರದಲ್ಲಿ ನಿಂತು ಯಾವ ಮಾನವನೂ ಅದರ ಸೊಬಗನ್ನು ಸವಿಯಲಿಲ್ಲ. ಮಾತ್ರವಲ್ಲ, ಸಮುದ್ರದಲ್ಲಿ ಕೂಡ ಯಾವ ಜಲಚರವೂ ಮಿಸುಕುತ್ತಿರಲಿಲ್ಲ. ಏಕೆಂದರೆ ಈ ಸಮುದ್ರವಿದ್ದಯುಗದಲ್ಲಿ ಮಾನವನೇ ಏಕೆ, ಜೀವಿಗಳೆಂದು ನಾವು ಕರೆಯುವ ಪದಾರ್ಥಗಳೇ ಇನ್ನೂ ಹುಟ್ಟಿರಲಿಲ್ಲವೆಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ಏಕೆಂದರೆ ಇಲ್ಲಿ ಸಿಕ್ಕಿರುವ ಜಲಜ ಶಿಲೆಗಳ ಸುಣ್ಣದ ಕಲ್ಲು ಹೇರಳವಾಗಿ ಮತ್ತು ಜೇಡಿ ಮಳಲು ಬೆರತ ಕಲ್ಲು ಅಲ್ಪ ಪ್ರಮಾಣದಲ್ಲಿದ್ದು ಅವು ಜೀವಿಗಳ ಪಳೆಯುಳಿಕೆಗಳ ರಕ್ಷಣೆಗೆ ತುಂಬಾ ಅನುಕೂಲವಾದವು. ಆದರೆ ಈ ಶಿಲೆಗಳ ಸ್ತರಗಳಲ್ಲಿ ಜೀವಿಗಳಿದ್ದ ಕುರುಹು ಒಂದೇ ಒಂದು ಕೂಡ ವಿಜ್ಞಾನಿಗಳಿಗೆ ದೊರೆತಿಲ್ಲ. ಪೃಥ್ವಿಯಲ್ಲಿ ದೂರೆತ ಅತಿ ಪ್ರಾಚೀನ ಪಳೆಯುಳಿಕೆ ೫೦ ಕೋಟಿ ವರ್ಷಗಳ ಹಿಂದಿನದು. ಈ ಸಮುದ್ರ ಅದಕ್ಕೂ ಎಷ್ಟೋ ಹಿಂದೆ ಹುಟ್ಟಿ, ಆಳವಾಗಿ, ಅನಂತರದ ಉತ್ಥಾನಗಳಲ್ಲಿ ಸಂಪೂರ್ಣವಾಗಿ ಮುಚ್ಚಿ ಆಳಿದು ಹೋಗಿರಬೇಕು. ಈ ಕಣ್ಮರೆಯಾದ ಸಮುದ್ರ ೭೩.೫ ಕೋಟಿ ವರ್ಷಗಳ ಹಿಂದಿತ್ತೆಂದು ವಿಜ್ಞಾನಿಗಳು ಊಹಿಸಿದ್ದಾರೆ.

ಗುಲಬರ್ಗಾ ಜಿಲ್ಲೆ ಕಂಡ ಉತ್ಪಾತ  ಇದೊಂದೇ ಅಲ್ಲ. ಗುಲಬುರ್ಗಾ, ಆಳಂದ, ಕಮಲಾಪೂರ ತಾಲೂಕುಗಳಲ್ಲಿ ಸಿಕ್ಕಿದ ಲಾವಾ ಶಿಲೆಗಳು ಬೇರೊಂದು ಕಥೆ ಹೇಳುತ್ತವೆ. ಈ ಶಿಲೆಗಳು ಮಧ್ಯ ಭಾರತ ಪ್ರದೇಶದಲ್ಲಿ ಸಾವಿರಾರು ಚದರ ಮೈಲುಗಳಷ್ಟು ವ್ಯಾಪಿಸಿವೆ ಪರಿಶೀಲನೆಗಳಿಂದ ಇದು ಜ್ವಾಲಾಮುಖಿಗಳ ಪ್ರಚಂಡ ಚಟುವಟಿಕೆಯ ಪ್ರದೇಶವಾಗಿತ್ತೆಂದು ಕಂಡು ಬಂದಿದೆ. ಇಲ್ಲಿ ಲಾವಾರಸವು ಬೃಹತ್ ಪ್ರಮಾಣದಲ್ಲಿ ಉಕ್ಕಿ ಹರಿದು ಸುತ್ತಲ ಪ್ರದೇಶವನ್ನು ವ್ಯಾಪಿಸಿತು. ಆದರೆ ಅದು ಇಂದು ಅನೇಕ ಕಡೆ ಕಾಣಬರುವಂತೆ ಜ್ವಾಲಾಮುಖಿ ಪರ್ವತಶಿಖರಗಳಿಂದ ಸ್ಫೋಟಸಹಿತವಾಗಿ ಉಕ್ಕಿ ಹರಿದ ಲಾವಾರಸವಾಗಿರದೆ ಶಾಂತವಾಗಿ ಪ್ರವಹಿಸಿದ್ದಾಗಿದೆ. ಪುರಾತನ ಭೂಗರ್ಭೀಯ ಯುಗದಲ್ಲಿ ಪೃಥ್ವಿಯ ಮೇಲ್ಮೈಯಲ್ಲಿ ದೊಡ್ಡ ದೊಡ್ಡ ಬಿರುಕುಗಳು ತೆರೆದಾಗಿನ ಸಂಗತಿ ಇದು. ಈ  ಬಿರುಕುಗಳಿಂದ ಲಾವಾರಸ ಹೊರ ಹೊಮ್ಮಿತು.

ಈ ಯುಗದ ಹೆಗ್ಗುರುತುಗಳು ಇನ್ನೂ ಈ ಪ್ರದೇಶದಲ್ಲಿ ತಲೆಯೆತ್ತಿ ನಿಂತಿವೆ. ಈ ಜ್ವಾಲಾ ಪ್ರವಾಹದ ಕಾಲದಲ್ಲಿ ನಿರ್ಮಿತವಾದ ಕಲ್ಲು ಗುಡ್ಡ ಗಳು ಅಖಂಡ ಶಿಲೆಗಳಾಗಿರದೆ ಗಟ್ಟಿ ಮತ್ತು ಮೃದು ಪದರಗಳಿಂದ ಕೂಡಿವೆ. ಅನಂತರದ ಕಾಲದಲ್ಲಿ ಗಾಳಿ ಮಳೆ ಶಾಖಗಳ ಹೊಡೆತಕ್ಕೆ ಮೃದು ಪದರಗಳೆಲ್ಲ ಸವೆದು ಹೋಗಿ ಗಟ್ಟಿಯಾದ ಪದರಗಳಷ್ಟೇ ಚಪ್ಪಟೆಯಾಕಾರದ ಬೆಟ್ಟಗಳಾಗಿ ಉಳಿದವು. ಗುಲಬುರ್ಗಾ ಸುತ್ತಮುತ್ತಲ ಪ್ರದೇಶಗಳಲ್ಲೆಲ್ಲ ಇ೦ದು ಇ೦ಥ ಬೆಟ್ಟಗಳೇ ಕಾಣಿಸುತ್ತವೆ.

ಈ ಶಿಲಾಪದರುಗಳು ತಮ್ಮಲ್ಲಿ ಮತ್ತೊಂದು ಇತಿಹಾಸದ ಹೆಜ್ಜೆಯನ್ನು ಅಡಕ ಮಾಡಿಕೊಂಡಿವೆ. ಅವುಗಳ ಮಧ್ಯದಲ್ಲಿ ಅಲ್ಲಲ್ಲಿ ವಿಜ್ಞಾನಿಗಳಿಗೆ ಜಲಜ ಶಿಲೆಗಳು ಸಿಕ್ಕಿದವು. ಅವುಗಳಲ್ಲಿ ಪ್ರಾಣಿಗಳ ಆವಶೇಷಗಳು ಕಂಡುಬಂದವು. ಈ ಬೆಟ್ಟಗಳಿಗೆ ಕಾರಣವಾದ ಲಾವಾ ಪ್ರವಾಹ ಒಂದೇ ಸವನೆ ಹೊರಹೊಮ್ಮಲಿಲ್ಲವೆಂದು ಇದರ ಅರ್ಥ. ಪ್ರಥಮ ದಶೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅದು ಹರಿದು ಆಮೇಲೆ ಸಾವಿರಾರು ವರ್ಷ ಕಾಲ ಶಾಂತವಾಗಿದ್ದಿರಬೇಕು. ಈ ಅವಧಿಯಲ್ಲಿ ಜೀವ ಪ್ರಪಂಚವು ಈ ಪ್ರದೇಶವನ್ನು ಆಕ್ರಮಿಸಿತ್ತು. ಮತ್ತೆ ಪೃಥ್ವಿ ರೋಷಗೊ೦ಡು ಕಟವಾಯಿಯಿಂದ ಪ್ರಚಂಡ ಲಾವಾ ಪ್ರವಾಹವನ್ನು ಕಾರಿರಬೇಕು ಮತ್ತು ಅದರಲ್ಲಿ ಜೀವರಾಶಿ ಮಗ್ನನಾಗಿಹೋಗಿರಬೇಕು.

ಈ ಯುಗದಲ್ಲಿ ಅಲ್ಲಿ ಎಂಥ ಪ್ರಾಣಿಗಳು ಜೀವಿಸಿದ್ದವು ? ಖಂಡಿತವಾಗಿ ಮನುಷ್ಯನಲ್ಲ. ಈಗ ದೊರೆತಿರುವ ಜೀವಾವಶೇಷಗಳಲ್ಲಿ ಕಪ್ಪೆ ಚಿಪ್ಪುಗಳೂ ಶಂಖಗಳೂ ಹೇರಳವಾಗಿವೆ. ಅವು ಜೀವಂತವಾಗಿದ್ದ ಯುಗದ ನಂತರದಲ್ಲಿ ಆದ ವಿಪ್ಲವದಲ್ಲಿ ಅವುಗಳಲ್ಲಿನ ಕ್ಯಾಲ್ಸಿಯಂ ಕಾರ್ಬೋನೇಟ್ ಅಂಶವು ಸಿಲಿಕಾಂಶಗಳಾಗಿ ಮಾರ್ಪಾಟು ಹೊಂದಿವೆ. ಅವುಗಳನ್ನೊಳಗೊ೦ಡ ಕಲ್ಲುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವು ಸಮುದ್ರ ಜಲಜೀವಿಗಳಾಗಿರದೆ ಸಿಹಿ ನೀರಿನಲ್ಲಿ ಬಾಳಿದವುಗಳೆಂದು ವ್ಯಕ್ತವಾ

ಗಿದೆ. ಜ್ವಾಲಾಮುಖಿ ಚಟುವಟಕೆಯ ಪ್ರಥಮ ಯುಗಕ್ಕೂ ಎರಡನೇ ಯುಗಕ್ಕೂ ನಡುವೆ ಈ ಪ್ರದೇಶದಲ್ಲಿ ಅಲ್ಲಲ್ಲಿ ಸಿಹಿನೀರಿನ ಸರೋವರ ಗಳು ಇದ್ದವೆಂದೂ ಆಗ ಸೃಷ್ಟಿಯಲ್ಲಿ ಜಲ ಜೀವರಾಶಿಗಳ ಹಬ್ಬುಗೆ ಸಾಕಷ್ಟು ವಿಕಾಸ ಹೊಂದಿಬಿಟ್ಟಿತ್ತೆಂತೆ೦ದೂ ಇದರಿಂದ ತರ್ಕಿಸಬಹುದಾಗಿದೆ.

ಈ ರೀತಿಯ ಅವಶೇಷಗಳು ಗುಲಬುರ್ಗಾ ಜಿಲ್ಲೆಯ ಆಗ್ನೆಯ ಭಾಗದಲ್ಲಿ ವಿಫುಲವಾಗಿ ಸಿಕ್ಕಿವೆ. ಯಾದಗಿರಿ ತಾಲೂಕಿನ ಯಾನೆಗುಂದಿ ಮತ್ತು ಗುರುಮುಟಕಲ್‌ ಹಳ್ಳಿಗಳ ಸುತ್ತಲೂ ಇವುಗಳನ್ನೊಳಗೊಂಡ ಕಲ್ಲುಗಳುಂಟು. ಇವನ್ನು ಕೆಲ ಹಳ್ಳಿಗರು ಒಬ್ಬ ಮಹಿಮಾಶಾಲಿ ಸಾಧುವಿನ ಪವಾಡವೆಂದು ಭಾವಿಸುತ್ತಾರೆ. ನೀರಿಲ್ಲದ ಪ್ರದೇಶದಲ್ಲಿ ಕಲ್ಲಿನ ನಡುವೆ ಶಂಖಗಳು ಅನ್ಯಥಾ ಉಂಟಾಗುವುದಾದರೂ ಹೇಗೆ? ಆ ಸಾಧುವು ಇಲ್ಲಿನ ಕಲ್ಲುಗಳನ್ನು ಮಹಾವಿಷ್ಣುವಿನ ಚಿಹ್ನವಾದ ಶಂಖಗಳನ್ನಾಗಿ ಮಾರ್‍ಪಡಿಸಿದನೆಂದು ನಂಬಿ ಅವರು ಬಹಳ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. 

ಗಾಢವಾದ ಪರೀಕ್ಷೆಯ ನಂತರ ಸಂಶೋಧಕರು ಈಜೀವಾವಶೇಷಗಳಿಂದೊಡಗೂಡಿದ ಸರೋವರಗಳ ಕಾಲ ೪೦ ಕೋಟಿ ವರ್ಷಗಳ ಹಿಂದೆ ಇತ್ತು ಎಂದು ತೀರ್ಮಾನಿಸಿದ್ದಾರೆ. ಆಗ ಮಾನವನ ಉದಯ ಇನ್ನೂ ಬಲು ದೂರದಲ್ಲಿತ್ತು. ವಾಸ್ತವಿಕವಾಗಿ ಅವನು ಇನ್ನೂ ೩೯ ಕೋಟಿ ವರ್ಷಗಳ ನಂತರವೇ ಸೃಷ್ಟಿಯ ಮೇಲೆ ಕಾಣಿಸಿಕೊಂಡ.

ಈ ಬಗೆಯ ಚರಿತ್ರೆ, ಗುಲಬುರ್ಗ ಜಿಲ್ಲೆಯದೇ ವೈಶಿಷ್ಟ್ಯವೆಂದು ಬಗೆಯಬಾರದು. ಭಾರತದ ಪರ್‍ಯಾಯ ದ್ವೀಪ ಭಾಗದಲ್ಲಿ ಇಂಥ ಭೂಗರ್ಭೀಯ ಯುಗಗಳನು ದಾಟಿ ಬಂದ ಭಾಗಗಳೆಷ್ಟೋ ಇವೆ. ನೀರಿದ್ದಲ್ಲಿ ನೆಲ, ನೆಲವಿದ್ದಲ್ಲಿ ನೀರಾಗಿದೆ. ಗುಲಬುರ್ಗ ಒಂದು ಉದಾಹರಣೆ ಮಾತ್ರ.

ಕೃಪೆ: ಕಸ್ತೂರಿ 1969, ನವೆಂಬರ್‌

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...