ಕಾಣದ ಇಟಲಿಯಲ್ಲಿ ಮೈದಳೆದ ‘ರೂಪದರ್ಶಿ’


ಇಟಲಿ ದೇಶವನ್ನೇ ನೋಡದ ಕೆ.ವಿ. ಅಯ್ಯರ್ ಅವರು ‘ರೂಪದರ್ಶಿ’ ಯಂತಹ ಶ್ರೇಷ್ಠ ಕಾದಂಬರಿ ಬರೆಯಬೇಕಾದರೆ ಅವರ ಅದ್ಭುತ ಕಾಲ್ಪನಿಕ ಸೌಂದರ್ಯದ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.  ರೂಪದರ್ಶಿಗಳನ್ನು ಹುಡುಕುತ್ತಾ ಇಟಲಿಯ ಮೂಲೆ ಮೂಲೆಗೂ ಸಂಚರಿಸಿದ ಕಲಾವಿದ ಮೈಕೆಲ್ ಎಂಜಿಲೋ ಅನುಭವವೇ ಕೆ.ವಿ. ಅಯ್ಯರ್ ಅವರ ಯಥಾವತ್ ಕಾಣ್ಕೆಯೂ ಆಗಿದೆ. ಇದು ಹೇಗೆ ಸಾಧ್ಯ ಎಂಬ ಕುತೂಹಲಕಾರಿ ಹಾಗೂ ಅಚ್ಚರಿಯ ಸಂಗತಿಯು ಪತ್ರಕರ್ತ ವೆಂಕಟೇಶ ಮಾನು ಅವರ ಈ ಬರಹದ ವಿಶೇಷ. 

ಇಟಲಿ ದೇಶ ನೋಡಲೇ ಇಲ್ಲ. ಕಲಾವಿದ ಮೈಕಲ್ ಎಂಜಿಲೋ ನಂತೆ ಫ್ಲಾರೆನ್ಸ್, ವ್ಯಾಟಿಕನ್. ಪೀಸಾ ನಗರಗಳ ಮೂಲೆ ಮೂಲೆ ಸುತ್ತಾಡಲಿಲ್ಲ. ಆದರೂ, ಇಟಲಿಯ ಪರಿಸರದಲ್ಲಿ ರೂಪುಗೊಂಡಂತಿರುವ ‘ರೂಪದರ್ಶಿ’ಯಂತಹ ಸುಂದರ ಕಾದಂಬರಿ ರಚಿಸಲು ಕೆ.ವಿ. ಅಯ್ಯರ್ ಅವರಿಗೆ ಸಾಧ್ಯವಾದದ್ದು ಹೇಗೆ? 

ಆ ಕಲ್ಪನಾ ಸೌಂದರ್ಯದ ಎತ್ತರ, ವಿಸ್ತಾರ, ಆಳ ಹೀಗೆ ಅಚ್ಚರಿಭರಿತ ಸಂತಸ ನೀಡುವ ಭವ್ಯ ಕಲಾಕೃತಿಯೊಂದು ರೂಪು ಪಡೆಯುವುದಾದರೂ ಹೇಗೆ? ಬಾಲ ಏಸುವಿನ ಸುಂದರ ಚಿತ್ರಗಳನ್ನು ಬಿಡಿಸಿದ ಕಲಾವಿದ ಮೈಕಲ್ ಎಂಜಿಲೋ, ‘ರೂಪದರ್ಶಿ’ ಯಂತಹ ಸುಂದರ ಕಾದಂಬರಿ ರಚಿಸಿದ ಕೆ.ವಿ. ಅಯ್ಯರ್ -ಈ ಇಬ್ಬರ ವ್ಯಕ್ತಿತ್ವ -ಕಲ್ಪನಾ ಸಾಮರ್ಥ್ಯಗಳು, ಕಾಣುವ ಕಾಲ್ಪನಿಕ ಸೌಂದರ್ಯವು ಹೆಚ್ಚು ಕಡಿಮೆ ಒಂದೇ ಸ್ವರೂಪದವೆ? ಅಥವಾ ಪಡಿಯಚ್ಚೆ?  ಮೈಕೆಲ್ ಎಂಜಿಲೋನಂತಹ ಸೂಕ್ಷ್ಮಜೀವಿ ಎಲ್ಲಿ? ಹೋಟೆಲ್ ಗಳಿಗೆ ನೀರು ಹೊತ್ತು, ಕೊಬ್ಬರಿ, ಬಳ್ಳೊಳ್ಳಿ, ಶುಂಠಿ, ಮಸಾಲೆಗಳನ್ನು ರುಬ್ಬಿರುಬ್ಬಿ, ಚೆಟ್ನಿ ಮಾಡಿ ಕೊಟ್ಟು, ಕೂಲಿ ಪಡೆಯುವ, ಬರೀ ದೇಹ ಬೆಳೆಸಿದ ಕೆ.ವಿ. ಅಯ್ಯರ್ ಎಲ್ಲಿ?

ಆ ಫ್ಲಾರೆನ್ ಚರ್ಚ್‌ನಲ್ಲಿಯ ಬಾಲ ಏಸುವಿನ ಚಿತ್ರಗಳ ಸೌಂದರ್ಯವನ್ನು ಇಲ್ಲಿಯ ಓದುಗ ಅನುಭವಿಸುವಲ್ಲಿಯೂ ಅದೇ ಸೌಂದರ್ಯದ ಕಂಪಿದೆ; ಇಂಪಿದೆ; ಮನಸ್ಸಿಗೆ ತಂಪು ನೀಡುವ ಆಹ್ಲಾದಕರ ಗಾಳಿ ಇದೆ. ಕಾದಂಬರಿ ‘ರೂಪದರ್ಶಿ’ಯ ಓದುಗ ತನಗರಿವಿಲ್ಲದಂತೆ ಇಟಲಿಯ ಆ ಚರ್ಚ್ ಪ್ರವೇಶಿಸಿ, ಬಾಲ ಏಸುವಿನ ಚಿತ್ರಗಳ ಜೀವಂತಿಕೆಯೊಂದಿಗೆ ಸಂಭ್ರಮಿಸುತ್ತಾನೆ. ಚಿತ್ರಗಳು ಮತ್ತು ಅಕ್ಷರಗಳು-ಈ ಎರಡೂ ಕಲಾಕೃತಿಗಳೆ!  ಆದರೆ, ವೀಕ್ಷಕನು, ಓದುಗನು ಅನುಭವಿಸುವ ಪುಳಕ ಒಂದೇ; ಕಲ್ಪನಾ ಸೌಂದರ್ಯ. ಇದೇ ರೀತಿ, ಮೈಕಲ್ ಎಂಜಿಲೋ ಮತ್ತು ಕೆ.ವಿ. ಅಯ್ಯರ್-ಕಲ್ಪನಾ ಸೌಂದರ್ಯ ಸೃಷ್ಟಿಕರ್ತರಲ್ಲಿ ಇಬ್ಬರೂ ಸಮಾನರು. 

ಜ್ಞಾನವಲ್ಲ; ಸೃಜನಶೀಲತೆ ಇರುವುದು ಕಲ್ಪನೆಯಲ್ಲಿ 

ಮನೋವಿಜ್ಞಾನದ ಪ್ರಕಾರ, ಕಲ್ಪನೆಗಳು, ವಿಚಾರ ವಲಯದ ಸೃಷ್ಟಿ. ಕೇಳದೇ, ನೋಡದೇ, ಸ್ಪರ್ಶಿಸದೇ ...ಹೀಗೆ ಇಂದ್ರಿಯಗಳ ನೆರವಿಲ್ಲದೇ ವಸ್ತು, ವ್ಯಕ್ತಿ, ಸನ್ನಿವೇಶಗಳನ್ನು ಸೃಷ್ಟಿಸುವ, ಯೋಚಿಸುವ ಅದ್ಭುತ ಸಾಮರ್ಥ್ಯ. ಈ ಹಿಂದಿನ ಅನುಭವಗಳಿಂದ ಮನಸ್ಸಿನಲ್ಲಿ ಉದ್ಭವಿಸುವ ಆಲೋಚನಾ ಲಹರಿ. ಇವು ತುಂಬಾ ರೋಮಾಂಚಕಾರಿ, ಪುಳಕದ ಅನುಭವ ನೀಡುತ್ತವೆ. ಬಹುತೇಕ ವೇಳೆ, ಸಮಸ್ಯೆಗೆ ಪರಿಹಾರವೂ ಸೂಚಿಸುತ್ತವೆ. ಹೊಸದೊಂದು ಜಗತ್ತನ್ನೇ ಸೃಷ್ಟಿಸುವ ಅದ್ಭುತ ಶಕ್ತಿ ಕಲ್ಪನೆಗಳಿಗೆ ಇರುತ್ತದೆ.

ಲಿಂಬು, ಮಾವುಗಳ ಸಾಮ್ರಾಜ್ಯದ ಕಲ್ಪನೆಯಲ್ಲಿ ವಾಸನೆ ಇದೆ. ರುಚಿ ಇದೆ. ಖುಷಿ ಇದೆ. ಸಮೃದ್ಧಿಯ ಸಂಭ್ರಮವಿದೆ. ಸಮೀಪದಲ್ಲಿ ಎಲ್ಲಿಯೂ ಇವುಗಳ ತೋಟವಿಲ್ಲ. ಆದರೂ, ಲಿಂಬು-ಮಾವುಗಳ ಸಾಮ್ರಾಜ್ಯವೇ ಸೃಷ್ಟಿಸುತ್ತೇವಲ್ಲ….! ಲಿಂಬು -ಮಾವು ನಾವು ನೋಡಿರುವ ಹಣ್ಣು. ಬದುಕಿನಲ್ಲಿ ಎಂದೂ ನೋಡದ ವಸ್ತುವನ್ನು, ಬೇರೆಯದೇ ಆದ ಜಗತ್ತನ್ನು ಸೃಷ್ಟಿಸಲೂ ಸಹ ಈ ಕಲ್ಪನೆಗಳು ಸಮರ್ಥ. 

ಈ ಕಲ್ಪನೆಗಳು ಭ್ರಮೆಯಲ್ಲ; ಭ್ರಾಂತಿಯೂ ಅಲ್ಲ. ಮಾಹಿತಿಯ ಸಣ್ಣ ಎಳೆ ಹಿಡಿದೇ ಅಲ್ಲಿಯ ವಾಸ್ತವಿಕತೆಗೆ ಹತ್ತಿರವಾಗುವ ಆಲೋಚನಾ ಕ್ರಮವಿದು. ಈ ಪ್ರಕ್ರಿಯೆಯಲ್ಲಿ, ಕಲ್ಪನೆಗಳು ವಾಸ್ತವವನ್ನು ಯಥಾವತ್ತಾಗಿ ಬಿಂಬಿಸಬಹುದು ಇಲ್ಲವೇ, ಅದಕ್ಕಿಂತ ಹೆಚ್ಚು ಸುಂದರವಾಗಿಯೂ ಚಿತ್ರಿಸಬಹುದು. ಇದು ವ್ಯಕ್ತಿಯೊಬ್ಬನ ಕಾಲ್ಪನಿಕ ಸಾಮರ್ಥ್ಯವೂ ಆಗಿದೆ.

ಮನೋವಿಜ್ಞಾನದ ಅನ್ವಯ, ಓದುವುದು, ಬರೆಯುವುದು ಇವು ಕೇವಲ ಮಾಹಿತಿ ಸಂಗ್ರಹದ ಕ್ರಿಯೆಗಳು, ಸೃಷ್ಟಿ ಕ್ರಿಯೆ ಇರುವುದು ಕಲ್ಪನೆಯಲ್ಲಿ. ಕಲ್ಪನೆಗಳಿಗೆ ಆ ಅದ್ಭುತ ಶಕ್ತಿ ಇದೆ. ಅದೇ ಅದರ ಸೌಂದರ್ಯವೂ ಆಗಿದೆ. ಮನುಷ್ಯ, ತನ್ನಲ್ಲಿರುವ ಕಲ್ಪನಾ ಸಾಮರ್ಥ್ಯದ ಅರಿವು ಇದ್ದರೆ, ಆತನ ಬರಹದಲ್ಲಿ ಇಂತಹ ಸೌಂದರ್ಯ ಕಾಣಬಹುದು. ಕಲ್ಪನೆಗಳು ಕೇವಲ, ವ್ಯಕ್ತಿಯೊಬ್ಬನ ಅನುಭವದ ಸೊತ್ತಲ್ಲ. ಅವುಗಳು, ಚಿತ್ರಕಲೆ, ಬರಹ, ಶಿಲ್ಪ ಹೀಗೆ ವಿವಿಧ ಮಾಧ್ಯಮಗಳ ಮೂಲಕ ವ್ಯಕ್ತಗೊಂಡು ಸಾರ್ವಕಾಲಿಕ ಹಾಗೂ ಸಾರ್ವಜನಿಕ ಮೌಲ್ಯವನ್ನು ಪಡೆದು, ತನ್ನದೇ ಆದ ಸೌಂದರ್ಯದೊಂದಿಗೆ ಜನಸಾಮಾನ್ಯರನ್ನು ಆಕರ್ಷಿಸುತ್ತದೆ. 

ವಾಸ್ತವ ಅಲ್ಲದಿದ್ದರೂ, ಬದಲಾವಣೆಯೊಂದಿಗೆ ಬೇರೊಂದು ಜಗತ್ತನ್ನು ಹೊಸದಾಗಿ ಸೃಷ್ಟಿಸುವ, ಚಿತ್ರಿಸುವ ಮಾನಸಿಕ ಸಾಮರ್ಥ್ಯ  ಕಲ್ಪನೆಗೆ ಇದೆ. ಅದು; ದೈವದತ್ತವಾಗಿ, ಬಹುತೇಕ ವೇಳೆ ಪ್ರಯತ್ನಪೂರ್ವಕ ಭಾವದ ಸಮರ್ಪಣೆಯೂ ಆಗಿರುತ್ತದೆ. ಆ ಶ್ರದ್ಧೆ, ಬದ್ಧತೆ, ಆಲೋಚನೆಗಳ ವ್ಯಾಪ್ತಿಯನ್ನು ಹಿಗ್ಗಿಸುವ, ಆಳಕ್ಕೆ ತಳ್ಳುವ, ಎತ್ತರಕ್ಕೆ ಚಿಮ್ಮಿಸುವ ಇಂತಹ ಕಸರತ್ತುಗಳಿಂದಲೂ, ಕಾಲ್ಪನಿಕ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ತನ್ನೊಳಗಿನ ಸಾಮರ್ಥ್ಯ-ಶಕ್ಯತೆಗಳನ್ನು ಕಂಡುಕೊಳ್ಳಲು ಹವಣಿಸುವ ಮಗುವಿಗೆ ಸಾಧನೆಗಳು ಸುಲಭವಾಗುವಂತೆ, ಬರಹದಲ್ಲಿ ಈ ಕಲ್ಪನಾ ಸೌಂದರ್ಯ ಕಂಗೊಳಿಸುತ್ತದೆ. ಪ್ರತಿಯೊಬ್ಬರಲ್ಲೂ ಕಲ್ಪನಾ ಶಕ್ತಿ ಇರುತ್ತದೆ. ಆದರೆ, ಅದರ ಸತತ ಹಾಗೂ ತೀಕ್ಷ್ಣ ಉಪಯೋಗದಿಂದ ವಿಕಾಸ ಹೊಂದುತ್ತದೆ. ಈ ಕ್ರಿಯೆಯು ಸೌಂದರ್ಯವಾಗಿ ಸೆಳೆಯುತ್ತದೆ. ಆದ್ದರಿಂದ, ಆಲೋಚನಾ ಕ್ರಮದಲ್ಲಿಯೇ ಕಲ್ಪನೆಗಳ ಬೀಜಗಳಿವೆ. ಮನಸ್ಸಿನಲ್ಲಿ ಸೂಕ್ತ ವಾತಾವರಣ ಕಲ್ಪಿಸಿದರೆ ಆ ಬೀಜ ಗಿಡವಾಗಿ, ಅದರ ಟೊಂಗೆಗಳು ಆಕಾಶಕ್ಕೂ ಚುಂಬಿಸಲು ಹಾತೊರೆಯುತ್ತವೆ. ಅದೇ, ಕಲ್ಪನೆಯ ಅದ್ಭತ ಚಮತ್ಕಾರ.  

ವಿಜ್ಞಾನಿ ಐನ್ ಸ್ಟೈನ್ ಹೇಳುತ್ತಾನೆ- ಜ್ಞಾನಕ್ಕಿಂತ ಕಲ್ಪನೆಗಳು ಅದ್ಭುತ. ಜ್ಞಾನವು ವಿಷಯಕ್ಕೆ ಮಾತ್ರ ಸೀಮಿತ; ಕಲ್ಪನೆಗಳು; ಕಣ್ಣಿಗೆ ಕಾಣುವ ಭೌತಿಕ ಜಗತ್ತು ಮಾತ್ರವಲ್ಲ, ಕಾಣದ ನಿಗೂಢತೆಯನ್ನೂ ಭೇದಿಸಬಹುದು. ಮನೋವಿಜ್ಞಾನದ ಅನ್ವಯ, ಈ ಕಲ್ಪನೆಗಳು ವಿಚಾರಗಳಿಗಿಂತಲೂ ತುಂಬಾ ಪ್ರಭಾಶಾಲಿ ಹಾಗೂ ಪ್ರಬಲ. ಅವು ನಿಗದಿತ ಗುರಿಯನ್ನು ಶೀಘ್ರವೇ ಸಾಕಾರಗೊಳಿಸಲು ನೆರವಾಗಬಲ್ಲವು. ಈ ಕಲ್ಪನಾ ಶಕ್ತಿಯ ದುರ್ಬಳಕೆಯಾದರೆ, ವ್ಯಕ್ತಿಯ ಬದುಕಿನಲ್ಲಿ ಬಿರುಗಾಳಿಗೆ ಮೇಲೇಳುವ ಕಸ-ಕಡ್ಡಿಯ ಸುಳಿಯಂತೆ; ಭಾವದ ಅಸ್ತಿತ್ವವನ್ನೇ ತರಗೆಲೆಯಾಗಿಸಿ ಬಿಡುತ್ತದೆ.

‘ರೀಡರ್‍ಸ್ ಡೈಜಿಸ್ಟ್’ ನಲ್ಲಿ ‘ರೂಪದರ್ಶಿ’ ಬಿಂಬ 
ಇವರೆಂದು ಇಟಲಿಗೆ ಹೋಗಿರಲಿಲ್ಲ. ಸಾಕಷ್ಟು ಸಲ ಅವರು ಕೋಲಾರದಿಂದ ಬೆಂಗಳೂರಿಗೆ ಬಂದು ಹೋದಂತೆ, ಇಟಲಿಯ ಪ್ರಮುಖ ನಗರಗಳ ಗಲ್ಲಿಗಳನ್ನೂ ಚಿತ್ರಿಸಿದ್ದಾರೆ. ಇಟಲಿಯ ಭೌಗೋಲಿಕ ಮಾಹಿತಿ ಪಡೆಯಲು ಆಗ, ಈಗಿನಂತೆ ಗೂಗಲ್ ಜಾಲ ಇರಲಿಲ್ಲ. ಮಗ ಮತ್ತು ಸೊಸೆ ಇಟಲಿಗೆ ಹೋದ ಸಂದರ್ಭ. ಆಗ ಅಲ್ಲಿ ಏನೇನು ನೋಡಬೇಕು ಮತ್ತು ಹೇಗೆ ನೋಡಬೇಕು ಎಂಬ ಬಗ್ಗೆ ಅವರು ಒಂದು ಕಿರು ಉಪನ್ಯಾಸವನ್ನೇ ನೀಡಿದ್ದರಂತೆ. 

ಕುತೂಹಲದ ಸಂಗತಿ ಎಂದರೆ,  ಇವರ ಕಲ್ಪನೆಯಲ್ಲಿ ಮೊದಲು ‘ರೂಪದರ್ಶಿ’ ಮೈದಳೆದಿದ್ದು-ರೀಡರ್‍ಸ್ ಡೈಜಿಸ್ಟ್ ಎಂಬ ಮಾಸಿಕ ಪತ್ರಿಕೆಯಲ್ಲಿ. ಅಲ್ಲಿಯ ಒಂದೇ ಒಂದು ಪುಟದಲ್ಲಿ ಏಸುವಿನ ಬಾಲ್ಯ, ಮೈಕೆಲ್ ಎಂಜಿಲೋ, ಜುದಾಸ್ ಹೀಗೆ ವಿವಿಧ ವ್ಯಕ್ತಿ-ಸನ್ನಿವೇಶ, ಆಯಾಮಗಳ ಸುಂದರ ವಿವರಣೆಯ ಬರಹ ಪ್ರಕಟಗೊಂಡಿತ್ತು. ಅದನ್ನು ಓದಿದ ಕೆ.ವಿ. ಅಯ್ಯರ್, ಎಷ್ಟೊಂದು ಪ್ರಭಾವಿತರಾಗಿದ್ದರು ಎಂದರೆ, ರೂಪದರ್ಶಿ ಬರೆದು ಮುಗಿಸುವವರೆಗೂ, ರೂಪದರ್ಶಿಯಾಗಲು ಸೂಕ್ತ ಪಾತ್ರಕ್ಕಾಗಿ ವ್ಯಕ್ತಿಗಳನ್ನು (ಬಾಲ ಏಸು ಹಾಗೂ ಜುದಾಸ್) ಹುಡುಕಾಡಿದ ಮೈಕೆಲ್ ಎಂಜಿಲೋನಂತೆ, ಇಟಲಿಯಲ್ಲವೂ ಸುತ್ತಾಡಿದಂತೆ ರೂಪದರ್ಶಿಯಾಗುವ ಸೂಕ್ತ ವ್ಯಕ್ತಿಗಳು ಸಿಕ್ಕ ನಂತರ ಮೈಕೆಲ್ ಎಂಜಿಲೋ ಕಲ್ಪನೆಯಲ್ಲಿ ಸೌಂದರ್ಯ ಮೈದಳೆದಂತೆ, ಕೆ.ವಿ. ಅಯ್ಯರ್ ಅವರ ‘ರೂಪದರ್ಶಿ’ ಬರಹಕ್ಕೆ ಸೌಂದರ್ಯದ ಸ್ಪರ್ಶವಾಗುತ್ತಾ ಬಂತು. ಮೈಕೆಲ್ ಎಂಜಿಲೋ, ತನ್ನ ಚಿತ್ರಕಲೆಯಲ್ಲಿ ಮೂಡಿಸಿದ್ದ ಶ್ರದ್ಧೆ, ಸಮರ್ಪಣಾ ಭಾವ, ತಲ್ಲೀನತೆ ಎಲ್ಲವೂ ಅದರ ಯಥಾರೂಪ ಎಂಬಂತೆ ಕೆ.ವಿ. ಅಯ್ಯರ್ ಅವರ ‘ರೂಪದರ್ಶಿ’ ಅಕ್ಷರ ರೂಪು ತಳೆದವು. ಚಿತ್ರಕಲೆಯ ಸೌಂದರ್ಯವನ್ನೇ ಅಕ್ಷರದಲ್ಲಿ ಮೂಡಿಸಿದಂತಿದೆ ಈ ಕಾದಂಬರಿ-ರೂಪದರ್ಶಿ. ಇತಿಹಾಸದ ಸಂಗತಿಗಳನ್ನು ಇಂತಹ ಅದ್ಭುತ ಕಾಲ್ಪನಿಕ ಸೌಂದರ್ಯದಿಂದ ಕೆ.ವಿ. ಅಯ್ಯರ್ ಅವರು ಕನ್ನಡ ಸಾಹಿತ್ಯಕ್ಕೆ  ನೀಡಿದ್ದು ಕೇವಲ ಎರಡು ಕಾದಂಬರಿಗಳು (ಶಾಂತಲಾ, ರೂಪದರ್ಶಿ) ಲೀನಾ, ಕಾದಂಬರಿಯು ರೂಪದರ್ಶಿಯ ಮುಂದುವರಿದ ಭಾಗವಾಗಿದೆಯಷ್ಟೆ. 

ಚಿತ್ರಕಲೆ, ರೂಪದರ್ಶಿ ಪರಿಣಾಮದಲ್ಲಿ ಒಂದೇ…!
ಫ್ಲಾರೆನ್ಸ್ ನಲ್ಲಿ ಹೊಸದಾಗಿ ನಿರ್ಮಿಸಿದ ಚರ್ಚ್ ನಲ್ಲಿ ಏಸುವಿನ ಬಾಲ್ಯ ಸೇರಿದಂತೆ ಪ್ರಮುಖ ಘಟನಾವಳಿಗಳನ್ನು ಚಿತ್ರಿಸಲು ಮೈಕೆಲ್ ಎಂಜಿಲೋ ಒಪ್ಪುತ್ತಾನೆ. ಆದರೆ, ಆತನಿಗೆ ಬಾಲ ಏಸುವಿನ ರೂಪದರ್ಶಿ ಬೇಕಿದೆ. ಹುಡುಕುತ್ತಾ ಹೋಗುತ್ತಾನೆ. ಆರ್ನೆಸ್ಟೋ ಎಂಬ ಬಾಲಕ ಸಿಕ್ಕು, ಆತನಿಗೆ ಕರೆ ತಂದು ಬಾಲ ಏಸುವಿನ ಎಲ್ಲ ಘಟನಾವಳಿಗಳನ್ನು ಚಿತ್ರಿಸುತ್ತಾನೆ. ನಂತರ ಆರ್ನೆಸ್ಟೋ ತಮ್ಮೂರಿಗೆ ಹೋಗುತ್ತಾನೆ. ಕ್ರೌರ್ಯದ ಮೂಲಕ ಹೆಸರಾದ ಜುದಾಸ್ ನನ್ನು ಚಿತ್ರಿಸುವ ಸಮಯ ಬಂದಾಗ, ಮತ್ತೇ ಈ ಕಲಾವಿದನಿಗೆ ರೂಪದರ್ಶಿ ಬೇಕಿರುತ್ತೆ. ಹುಡುಕುತ್ತಾ ಹೊರಡುತ್ತಾನೆ. ಕೊನೆಗೆ ಸಿಕ್ಕಿದ್ದು, ಕುಡುಕರ ಗುಂಪಿನಲ್ಲಿ. ಈ ಮಧ್ಯೆ ಸರಿಸುಮಾರು 60 ವರ್ಷಗಳ ಸಮಯ ಸರಿದಿರುತ್ತದೆ. ಮೈಕೆಲ್ ಎಂಜಿಲೋ ಮುದುಕನಾಗಿರುತ್ತಾನೆ. ಕುಡುಕರ ಗುಂಪಿನಲ್ಲಿ ಸಿಕ್ಕಾತ -ಗಿರಿಬಾಲ್ಡಿ. ಆತನನ್ನು ಚರ್ಚಿಗೆ ಕರೆ ತರುತ್ತಾನೆ. ಅಲ್ಲಿಯ ಚಿತ್ರಗಳನ್ನು ನೋಡಿದ ಗಿರಿಬಾಲ್ಡಿ, ತಾನೇ ಬಾಲ ಏಸುವಾಗಿ, ಇದೇ ಮುದುಕನಿಗೆ ರೂಪದರ್ಶಿಯಾಗಿದ್ದು ನೆನಪಾಗಿ ದಂಗಾಗುತ್ತಾನೆ. ಇದು ಹೇಗೆ ಸಾಧ್ಯ ? ಇಂದು ಅತ್ಯಂತ ಕ್ರೂರಿ, ಕ್ರೌರ್ಯವೇ ಉಸಿರಾಡುವ ಈ ಗಿರಿಬಾಲ್ಡಿಯೇ ಅಂದಿನ ಸೌಮ್ಯ ರೂಪದ, ಕರುಣಾಮಯಿಯಾದ ಆರ್ನೆಸ್ಟೋ ಆಗಿದ್ದ. ಇದು ಕಥೆ. 

ಉತ್ತಮವಾದದ್ದನ್ನೇ ಕೊಡುವ ಏಕೈಕ ಉದ್ದೇಶದೊಂದಿಗೆ ವರ್ಷಗಟ್ಟಲೇ ರೂಪದರ್ಶಿಯನ್ನು ಹುಡುಕುವ ಮೈಕೆಲ್ ಎಂಜಿಲೋ ನ ಶ್ರದ್ಧೆ, ಸಹನೆ, ಸಮರ್ಪಣಾ ಭಾವ ಆ ಎಲ್ಲ ಚಿತ್ರಗಳಿಗೆ ಬರೀ ಜೀವ ಮಾತ್ರವಲ್ಲ; ಅಮರತ್ವವೇ ನೀಡಿವೆ.  ಅದರಂತೆ, ಕೆ.ವಿ. ಅಯ್ಯರ್ ಬರೆದ ರೂಪದರ್ಶಿ ಕಾದಂಬರಿಯು, ಕಾಲ್ಪನಿಕ ಸೌಂದರ್ಯದ ಫಲವಾಗಿ ರೂಪುಗೊಂಡ ಕನ್ನಡದ ಶ್ರೇಷ್ಠ ಕಾದಂಬರಿಯಾಗಿ ಕಂಗೊಳಿಸುತ್ತದೆ. ಅರ್ನೆಸ್ಟೊ, ಗಿರಿಬಾಲ್ಡಿ, ಲಿಸ್ಸಾ, ಬಬನ್ನೆಟ್ಟಿ, ಮಾರ್ಕಸ್, ಟಾಯಟ್, ಜಿಯೋವನಿ ಹೀಗೆ ಪ್ರತಿಪಾತ್ರದ ಹಾವ-ಭಾವ, ವಿಚಾರ, ಸೃಷ್ಟಿಸುವ ಸನ್ನಿವೇಶಗಳು  ಎಲ್ಲವೂ ಕೆಲವೊಂದು ಸಲ ಮನೋವಿಶ್ಲೇಷಣೆಗೂ ಸವಾಲಾಗುವಷ್ಟು ಸುಂದರವಾಗಿ ‘ರೂಪದರ್ಶಿ’ಯಲ್ಲಿ ಚಿತ್ರಿತವಾಗಿವೆ. ಓದುತ್ತಿದ್ದಂತೆ, ಅಲ್ಲಿಯ ಪಾತ್ರಗಳು ಜೀವಂತಿಕೆ ಪಡೆದು ಮಾತನಾಡಲು ತೊಡಗುತ್ತವೆ. ‘ನಾವು ಓದುತ್ತಿದ್ದೇವೆ’ ಎಂದರೆ ಕಲ್ಪನೆಯ ಜಾರುಬಂಡೆಯ ಮೇಲೆ ಕುಳಿತಂತೆ; ಅದು ಕಲ್ಪನೆಯ ಕೊಳದೊಳಗೇ ಇಳಿಸುತ್ತದೆ. ಚಿತ್ರಕಲೆ, ರೂಪದರ್ಶಿ ಹೀಗೆ ಮಾಧ್ಯಮಗಳು ಬೇರೆ ಬೇರೆ. ಪರಿಣಾಮ ಒಂದೇ. ಇದೆಲ್ಲ ಸಾಧ್ಯವಾದದ್ದು;ಅವರ ಅದ್ಭುತ ಕಲ್ಪನಾ ಸೌಂದರ್ಯದ ದರ್ಶನದಿಂದ. ಇಟಲಿಗೆ ಹೋಗದಿದ್ದರೂ ಅಲ್ಲಿಯ ಪರಿಸರದಲ್ಲಿ ‘ರೂಪದರ್ಶಿ’ ಮೈದಳೆದಿದೆ. 

MORE FEATURES

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...