ಕಾದಂಬರಿ ಕತಾವಸ್ತುವಿನ ಹುಡುಕಾಟದಲ್ಲಿ ‘ರಾಜ್‌’

Date: 21-03-2021

Location: .


ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ, ದೃಶ್ಯಮಾಧ್ಯಮದ ಮೂಲಕ ಕನ್ನಡಿಗರಲ್ಲಿ ಹೊಸ ಕಂಪನ ಸೃಷ್ಟಿಸಿದ ನಿರ್ದೇಶಕ ಪಿ. ಶೇಷಾದ್ರಿ ಅವರು, ಸಿನಿಮಾದಿಂದ ಸಾಹಿತ್ಯಕ್ಕೆ ಅನುಕೂಲವಾಗದೇ ಇರಬಹುದು ಆದರೆ ಸಾಹಿತ್ಯದ ನೆರವಿಲ್ಲದೆ ಸಿನಿಮಾಗೆ ಅಸ್ತಿತ್ವವಿಲ್ಲ ಎನ್ನುತ್ತಾರೆ. ಚಲನಚಿತ್ರರಂಗದ ಬೆಳವಣಿಗೆಯುದ್ದಕ್ಕೂ ಹಲವು ಪ್ರಾಕಾರಗಳ ಸಾಹಿತ್ಯವನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸುವಾಗಿನ ಹಲವು ಪ್ರಸಂಗಗಳನ್ನು ವಿಶೇಷವಾಗಿ ಚಲನಚಿತ್ರದ ಕಥಾ ವಸ್ತುವಿನೆಡೆಗೆ ಸಾಕಷ್ಟು ಎಚ್ಚರವಹಿಸುತ್ತಿದ್ದರ ಕುರಿತು ತಮ್ಮ ‘ಅಕ್ಕರೆಯ ತೆರೆ’ ಅಂಕಣದಲ್ಲಿ ವಿವರಿಸಿದ್ದಾರೆ.

ಸಿನಿಮಾವನ್ನು ನಾವು ಕಲೆ ಎಂದು ಕರೆದರೂ ಮೂಲಭೂತವಾಗಿ ಇದು ವಿಜ್ಞಾನದ ಆವಿಷ್ಕಾರ. ಇಲ್ಲಿಗೆ 125 ವರ್ಷಗಳ ಹಿಂದೆ ಇದರ ಜನನವಾಯಿತು. ದೃಶ್ಯ ಹಾಗೂ ಶ್ರವಣೇಂದ್ರಿಯಗಳನ್ನು ಏಕಕಾಲದಲ್ಲಿ ಪ್ರಚೋದಿಸುವ ಇದು ನೋಡುಗರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂದು ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಹೊಸದರಲ್ಲಿ ಇದು ಅಕ್ಷರ ತಿಳಿಯದವರಲ್ಲೂ ಜ್ಞಾನವನ್ನು ಹರಡಲು ಹಾಗೂ ಅವರ ಅರಿವನ್ನು ವಿಸ್ತರಿಸಲು ಬಳಕೆಯಾಗಬಹುದು ಎಂಬ ನಂಬಿಕೆಯಿತ್ತು. ಇನ್ನೂ ಕೆಲವರಲ್ಲಿ ಇದು ಒಂದು ಪ್ರಭಾವಶಾಲಿ ಕಲಾಪ್ರಕಾರವಾಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಇನ್ನೊಂದು ಮಟ್ಟದಲ್ಲಿ ಚಲನಚಿತ್ರಗಳನ್ನು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಲು ಬಳಸಬಹುದು ಎನ್ನುವ ನಿರೀಕ್ಷೆಯಿತ್ತು.

ಆದರೆ, ನಿಧಾನವಾಗಿ ಎಲ್ಲ ನಿರೀಕ್ಷೆಗಳು ಕರಗುತ್ತಾ ಬಂದವು. ಇದು ಬಹು ಬೇಗನೆ ಮನರಂಜನೆಯ ಹಾಗೂ ವ್ಯಾಪಾರಿ ಉದ್ಯಮದ ದಾರಿಯನ್ನು ಹಿಡಿಯಿತು. ಇಂದು ಭಾರತದಲ್ಲಷ್ಟೇ ಅಲ್ಲ ಪ್ರಪಂಚದಾದ್ಯಂತ ಸಿನೆಮಾ ಬೆಳೆದಿರುವುದು, ಹರಡಿರುವುದು ಈ ಮಾರ್ಗದಲ್ಲಿಯೇ. ಹಾಗಾಗಿಯೇ, ‘ಚಲನಚಿತ್ರ ಒಂದು ವ್ಯಾಪಾರೀ ಕಲೆಯ ಅತ್ಯುನ್ನತ ರೂಪ’ ಎಂದು ಪ್ರಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್ ರೇ ಹೇಳುತ್ತಾರೆ.

ಅದೇನೇ ಇದ್ದರೂ ಜಗತ್ತಿನಾದ್ಯಂತ ಸಿನಿಮಾ ಇಂದು ಒಂದು ಪ್ರಭಾವಶಾಲಿ ಮಾಧ್ಯಮ. ಈ ಮಾಧ್ಯಮವು ಅತ್ಯಂತ ಪ್ರಬಲವಾದ ಸಂವಹನ ಮಾಧ್ಯಮವಾಗಿ ಬೆಳೆದು ಉಳಿದಿರುವುದಕ್ಕೆ ಅದರ ಅತ್ಯಪೂರ್ವ ರೀತಿಯ ‘ಕಥಾನಕ’ ಸಾಧ್ಯತೆ ಒಂದು ಪ್ರಮುಖ ಕಾರಣವಾಗಿದೆ. ಹಾಗಾಗಿಯೇ ಯಾವುದೇ ಒಂದು ಸಿನಿಮಾದ ಪ್ರಧಾನ ಆತ್ಮವು ‘ಕಥೆ’ ಮತ್ತು ಕಥಾವಸ್ತುವಾಗಿದೆ.

ಹಾಗಾಗಿಯೇ, ಒಂದು ಒಳ್ಳೆಯ ಕಥಾವಸ್ತು ಇರುವ ಸಿನಿಮಾ ಎಂದೂ ಸೋಲುವುದಿಲ್ಲ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಸ್ಟಾರ್ ನಟರು ತಮ್ಮ ಅಭಿಮಾನಿ ವರ್ಗದ ಸಹಾಯದಿಂದ ಸಿನಿಮಾವನ್ನು ಮಾರುಕಟ್ಟೆಯಲ್ಲಿ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಒಯ್ಯಬಲ್ಲ ಶಕ್ತಿ ಉಳ್ಳವರಾದರೂ ಅವರ ಚಿತ್ರವೂ ಸಂಪೂರ್ಣವಾಗಿ ಯಶಸ್ವಿಯಾಗಲು ಒಂದು ಗಟ್ಟಿ ಕಥಾ ವಸ್ತು ಇರಲೇಬೇಕು.

ಆ ಕಥಾವಸ್ತುವನ್ನು ಬೇರೆ ಬೇರೆ ಮೂಲಗಳಿಂದ ಚಿತ್ರರಂಗ ಪಡೆದುಕೊಳ್ಳುತ್ತಲೇ ಇರುತ್ತದೆ. ಇದು ಮೊದಲು ಕಣ್ಣು ಹಾಕುವುದು ಸಾಹಿತ್ಯ ಲೋಕದ ಕಡೆಗೆ. ಒಂದು ಕಥೆ ದೊರೆತರೆ ಸಾಕು ಅದನ್ನು ಆಕರ್ಷಕವಾಗಿ ಹೇಳಲು ಪ್ರಯತ್ನಿಸುತ್ತಿರುತ್ತಾರೆ.

ಕಾದಂಬರಿಯಲ್ಲಿನ ವಾಸ್ತವ ಮತ್ತು ಅತಿವಾಸ್ತವ ನೆಲೆಯ ಅಭಿವ್ಯಕ್ತಿಗಳು ಚಿತ್ರಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುತ್ತವೆ. ಇದಕ್ಕೆ ಕೆಳ ಮತ್ತು ಮಧ್ಯಮ ವರ್ಗದ ಜನರು ಉತ್ತಮ ಪ್ರತಿಕ್ರಿಯೆ ತೋರುತ್ತಾರೆ. ಹಾಗಾಗಿಯೇ, ಎಂದಿನಿಂದಲೂ ಸರಳ, ಸುಂದರ, ಸಂತೃಪ್ತ ಕೌಟುಂಬಿಕ ಮನಸ್ಥಿತಿಯನ್ನು ಕಟ್ಟಿಕೊಡುವುದರಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿವೆ. ಇಲ್ಲಿಯ ಆದರ್ಶ ಪತಿ, ಪತ್ನಿ, ಮಕ್ಕಳು, ತಾಯಿ ಇವರ ನಡುವಿನ ಮಧುರ ಸಂಬಂಧವಾದ ವಿಶಿಷ್ಟ ಪರಂಪರೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಸೃಷ್ಟಿಸಿದೆ. ಇದಕ್ಕೆ ಉದಾಹರಣೆಯಾಗಿ ಡಾ.,ರಾ॓ಜ್‌ಕುಮಾರ್ ಮುಂತಾದವರ ಅವರ ಅನೇಕ ಚಲನಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು.

ತರಾಸು ಅವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿರುವುದು ಅನೇಕರಿಗೆ ತಿಳಿದೇ ಇದೆ. ಇವರಷ್ಟು ವಿಭಿನ್ನ ಕಥಾವಸ್ತುಗಳನ್ನು ಕೊಟ್ಟವರು ವಿರಳ. ಅದರಲ್ಲಿ ‘ಆಕಸ್ಮಿಕವೂ ಒಂದು. ಇದು ತೆರೆಗೆ ಬಂದದ್ದು ತೊಂಬತ್ತರ ದಶಕದ ಆರಂಭದಲ್ಲಿ. ನಾಗಾಭರಣ ನಿರ್ದೇಶನದ, ರಾಜ್‌ಕುಮಾರ್ ಅಭಿನಯದ ಈ ಚಿತ್ರವು ಮೂರು ಕಾದಂಬರಿಗಳನ್ನು ಆಧರಿಸಿ ನಿರ್ಮಿಸಿದ ಚಿತ್ರ. ತರಾಸು ಅವರು ಒಂದೇ ವಸ್ತುವನ್ನು ‘ಆಕಸ್ಮಿಕ, ‘ಅಪರಾಧಿ, ‘ಪರಿಣಾಮ ಎಂಬ ಮೂರು ಪುಸ್ತಕಗಳಿಗೆ ವಿಸ್ತರಿಸಿದ್ದರು. ಇದರಲ್ಲಿ ಸಹ-ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ನನಗೆ ದೊರೆಯಿತು. ಇದೊಂದು ವಿಶೇಷ ಅನುಭವ ಕೊಟ್ಟ ಚಿತ್ರ. ಡಾ.ರಾಜ್‌ಕುಮಾರ್ ಅವರೊಂದಿಗೆ ತಿಂಗಳಾನುಗಟ್ಟಲೆ ಚಿತ್ರಕಥಾ ರಚನೆಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅವರ ಕಥನಗಾರಿಕೆಯನ್ನು, ಚಿತ್ರಕಥಾ ರಚನೆಯ ಮಟ್ಟುಗಳನ್ನು ಹತ್ತಿರದಿಂದ ಗಮನಿಸಿ ದಂಗಾದೆ. ಅವರೊಬ್ಬ ವಿಶಿಷ್ಟ ಕಲಾವಿದ ಅಷ್ಟೇ ಅಲ್ಲ, ಒಬ್ಬ ಅತ್ಯುತ್ತಮ ಚಿತ್ರಕಥಾ ತಜ್ಞ ಮತ್ತು ಶ್ರೇಷ್ಠ ಸಂಭಾಷಣಾ ಚತುರ ಎಂದು ತಿಳಿಯಿತು. ಆದರೆ ಆ ಕೆಲಸಕ್ಕೆ ಎಂದೂ ಅವರು ಕ್ರೆಡಿಟ್ ತೆಗೆದುಕೊಂಡಿಲ್ಲ. ಅವರೊಂದಿಗೆ ಸಮಯವನ್ನು ಕಳೆಯುತ್ತಿದ್ದ ಆ ಹೊತ್ತಿನಲ್ಲಿ ಅವರು ತಮ್ಮ ಹಿಂದಿನ ಚಿತ್ರಗಳ ಅನೇಕ ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಿದ್ದರು. ಆಗ ಅವರು ಹಂಚಿಕೊಂಡ ಒಂದು ಸನ್ನಿವೇಶ ಕುತೂಹಲಕರವಾಗಿದ್ದು, ಅದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

ರಾಜ್‌ಕುಮಾರ್ ಅವರ ಇನ್ನೂರನೇ ಚಿತ್ರ ‘ದೇವತಾ ಮನುಷ್ಯ. ಇದರ ನಂತರ ಬಂದದ್ದು ‘ಪರುಶುರಾಮ. ಆನಂತರ ಅದೇಕೋ ರಾಜ್‌ಕುಮಾರ್ ಅವರಿಗೆ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಕುಂದಿತು. ಯಾವ ಕತೆ ಕೇಳಿದರೂ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ. ನಾನು ಈ ಪಾತ್ರವನ್ನು ಇದಾಗಲೇ ನಿರ್ವಹಿಸಿದ್ದೇನೆ, ಕತೆಯಲ್ಲಿ ವಿಶೇಷವೇನಿಲ್ಲ ಎಂದು ಕೇಳಿದ್ದೆಲ್ಲವನ್ನೂ ನಿರಾಕರಿಸುತ್ತಾ ಬಂದರು. ಚಿನ್ನದ ಮೊಟ್ಟೆ ಇಡುವ ಕೋಳಿ ಸುಮ್ಮನೇ ಕುಳಿತುಬಿಟ್ಟರೆ ಹೇಗೆ? ಪಾರ್ವತಮ್ಮನವರಿಗೆ ಇದೇ ಚಿಂತೆ. ಹೇಗಾದರೂ ಅವರನ್ನು ಒಪ್ಪಿಸಿ, ನಟಿಸುವಂತೆ ಮಾಡಬೇಕು ಎಂದು ಪ್ರಯತ್ನ ಪಡುತ್ತಲೇ ಇದ್ದರು. ಅದಾಗಲೇ ಮೂರು-ನಾಲ್ಕು ವರ್ಷ ಕಳೆದುಹೋಗಿತ್ತು. ಆಗ ಕೈಗೆ ಸಿಕ್ಕ ಕಾದಂಬರಿಯೇ ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ ‘ವ್ಯಾಪ್ತಿ-ಪ್ರಾಪ್ತಿ. ಇದನ್ನು ಕೈಗೆತ್ತಿಕೊಳ್ಳುವ ಮುಂಚೆ ಸಾಕಷ್ಟು ಶ್ರಮ ಹಾಕಿ ಚಿತ್ರಕಥೆ ರಚಿಸಿ ಅವರಿಗೆ ಒಪ್ಪಿಸಲಾಯಿತು. ಅದರಲ್ಲಿ ಬರುವ ಕಥಾವಸ್ತುವಿನ ಪ್ರಸ್ತುತತೆ ಮತ್ತು ವಿಶ್ವನಾಥಯ್ಯ ಎನ್ನುವ ಪಾತ್ರ ತಮ್ಮ ವಯಸ್ಸಿಗೂ ಒಪ್ಪುತ್ತದೆ ಎನ್ನುವ ಕಾರಣದಿಂದ ಡಾ.ರಾಜ್ ಅದನ್ನು ಒಪ್ಪಿದ್ದರು. ಆಗ ತಾನೇ ಅವರಿಗೆ ಅರವತ್ತು ವರ್ಷ ದಾಟಿತ್ತು.

ಕಥೆಯ ಒಂದು ಸಂದರ್ಭದಲ್ಲಿ ವಿಶ್ವನಾಥಯ್ಯ ಪತ್ನಿಯನ್ನು ಕಳೆದುಕೊಂಡು ಸಂಸಾರದಿಂದ ವಿಮುಖನಾಗಿ ಯಾತ್ರೆ ಹೋಗುತ್ತಾನೆ. ಪ್ರಯಾಣದ ಮಧ್ಯ ಅಪಘಾತವಾಗಿ ಅವನಿದ್ದ ಬಸ್ ಕಣಿವೆಗೆ ಉರುಳಿ ಬೀಳುತ್ತದೆ. ಬಿದ್ದ ಪೆಟ್ಟಿನಿಂದ ವಿಶ್ವನಾಥಯ್ಯ ನಿಧಾನವಾಗಿ ಚೇತರಿಸಿಕೊಂಡರೂ ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ತಾನಾರು ಎಂಬ ಪರಿವೆ ಇಲ್ಲದೆ ಹಿಮಾಲಯದಲ್ಲಿ ಅಲೆಯುತ್ತಿರುತ್ತಾನೆ. ಈ ಕಥೆ ಮುಂದುವರಿಯಬೇಕೆಂದರೆ ಅವನಿಗೆ ನೆನಪಿನ ಶಕ್ತಿ ಹಿಂತಿರುಗಿ ಬರಬೇಕು. ಆದರೆ ಹೇಗೆ? ಅಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಬಂದಿದ್ದ ಹಲವಾರು ಚಿತ್ರಗಳಲ್ಲಿ ಈ ರೀತಿ ನೆನಪಿನ ಶಕ್ತಿ ಹಿಂತಿರುಗಿ ಬರುವ ಅನೇಕ ಸನ್ನಿವೇಶಗಳನ್ನು ಸೃಷ್ಟಿಸಿದ್ದರಿಂದ ಅದಕ್ಕಿಂತ ಭಿನ್ನವಾಗಿ ಇದರಲ್ಲಿ ನೆನಪಿನ ಶಕ್ತಿ ಹಿಂಪಡೆವ ಸನ್ನಿವೇಶವನ್ನು ಹುಟ್ಟುಹಾಕಬೇಕು ಎಂದು ಚರ್ಚೆ ನಡೆಯುತ್ತಿತ್ತು. ಯಾವ ಐಡಿಯಾ ಕೂಡ ಡಾ.ರಾಜ್ ಅವರಿಗೆ ಒಪ್ಪಿತವಾಗಿರಲಿಲ್ಲ. ಚಿತ್ರಕಥಾ ಲೇಖಕರು, ನಿರ್ದೇಶಕರು ಕುಳಿತು ಯೋಚಿಸುತ್ತಲೇ ಇದ್ದರು.

ಒಮ್ಮೆ ಡಾ.ರಾಜ್‌ಕುಮಾರ್ ಮಲಗಿ ಇದರ ಕುರಿತಂತೆಯೇ ಯೋಚಿಸುತ್ತಿದ್ದರಂತೆ ಆಗ ಅವರಿಗೆ ಒಂದು ಸನ್ನಿವೇಶ ಹೊಳೆಯಿತಂತೆ!

(ಸಶೇಷ)

ಈ ಅಂಕಣದ ಹಿಂದಿನ ಬರಹಗಳು

ರವೀಂದ್ರನಾಥ್ ಠ್ಯಾಗೂರ್ ನಿರ್ದೇಶಿಸಿದ ಸಿನಿಮಾ!

ಮಾಧ್ಯಮದಿಂದ ಮಾಧ್ಯಮಕ್ಕೆ - ತೆರೆ ಐದು

ವೆತೆಗಳ ಕಳೆಯುವ ಕತೆಗಾರ! - ತೆರೆ ಮೂರು

ವೆತೆಗಳ ಕಳೆಯುವ ಕತೆಗಾರ! - ತೆರೆ ಎರಡು

ಜಗತ್ತಿನಲ್ಲಿ ಮೊಟ್ಟ ಮೊದಲು ಕಥೆ ಹೇಗೆ ಹುಟ್ಟಿರಬಹುದು?

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...