ಕಾದಂಬರಿಯ ಕಥಾನಕ ವಾಸ್ತವ ಹಾಗೂ ಕನಸುಗಳ ನಡುವಿನ ಒಂದು ಅಸ್ಪಷ್ಟ ಬಂಧ


"ಕಾದಂಬರಿಯ ಆರಂಭವೇ ಬಹಳ ವಿಶಿಷ್ಟವಾಗಿದೆ. ಕಥಾನಾಯಕಿ ಜಾನಕಿಗೆ ಕನಸೊಂದು ಬೀಳುತ್ತದೆ. ಆ ಕನಸಿನಲ್ಲಿ ಕಾಣುವುದು ನೀರಿಲ್ಲದ ಬಾವಿ. ಸ್ವಲ್ಪವೇ ಹೊತ್ತಿನಲ್ಲಿ ಅದರಲ್ಲಿ ನೀರು ಕಾಣಿಸುತ್ತದೆ; ಬಿಳಿಯ ಪಂಚೆಯೊಂದು ತೇಲಿದಂತೆಯೂ, ಕಾಪಾಡಿ ಎನ್ನುವ ಕೈಯೊಂದು ನೀರಿನಿಂದ ಮೇಲೆ ಬಂದಂತೆಯೂ ಕನಸು ಮುಂದುವರಿಯುತ್ತದೆ," ಎನ್ನುತ್ತಾರೆ ರಂಜನಿ ಪ್ರಭು. ಅವರು ಆಶಾ ರಘು ಅವರ ‘ವಕ್ಷಸ್ಥಲ’ ಕೃತಿಗೆ ಬರೆದ ಮುನ್ನುಡಿ.

ಕನ್ನಡದ ಸುಪ್ರಸಿದ್ಧ ಲೇಖಕಿ ಆಶಾ ರಘು ಅವರ ಇತ್ತೀಚಿನ ಕಾದಂಬರಿ ‘ವಕ್ಷಸ್ಥಲ’ವನ್ನು ಓದಿ ಮುಗಿಸಿದ ಮೇಲೆ ನನಗೆ ಥಟ್ಟನೆ ಮನಸ್ಸಿಗೆ  ಸಖೀಗೀತದ ಸಾಲುಗಳು… `ಏಕಾಂತದ ಜಿನುಗು ಲೋಕಾಂತಕೆಳೆಯಿತು’. ಕಾದಂಬರಿಯ ಆರಂಭವೇ ಬಹಳ ವಿಶಿಷ್ಟವಾಗಿದೆ. ಕಥಾನಾಯಕಿ ಜಾನಕಿಗೆ ಕನಸೊಂದು ಬೀಳುತ್ತದೆ. ಆ ಕನಸಿನಲ್ಲಿ ಕಾಣುವುದು ನೀರಿಲ್ಲದ ಬಾವಿ. ಸ್ವಲ್ಪವೇ ಹೊತ್ತಿನಲ್ಲಿ ಅದರಲ್ಲಿ ನೀರು ಕಾಣಿಸುತ್ತದೆ; ಬಿಳಿಯ ಪಂಚೆಯೊಂದು ತೇಲಿದಂತೆಯೂ, ಕಾಪಾಡಿ ಎನ್ನುವ ಕೈಯೊಂದು ನೀರಿನಿಂದ ಮೇಲೆ ಬಂದಂತೆಯೂ ಕನಸು ಮುಂದುವರಿಯುತ್ತದೆ. ಹಾಗೆ `ಕಾಪಾಡಿ’ ಎಂದ ಕೈ ತನ್ನ ನಲ್ಲ, ತನ್ನ ಗಂಡ, ತನ್ನ ಬದುಕು, ತನ್ನ ಸರ್ವಸ್ವ ಎಲ್ಲವೂ ಆದ ರಾಘವನದು ಎನಿಸುತ್ತದೆ.

ಹಾಗೆಯೇ ಪದೇ ಪದೇ ಬೀಳುವ ಮತ್ತೊಂದು ಕನಸು ಎಂದರೆ, ಗುರಿಯೇ ಇರದ ಮುಗಿಯದ ದಾರಿಯಲ್ಲಿ ಅವಳ ಒಂಟಿ ಪಯಣ. ಹಾಗೆ ನೋಡಿದರೆ ಇಡೀ ಕಾದಂಬರಿಯ ಕಥಾನಕ ವಾಸ್ತವ ಹಾಗೂ ಕನಸುಗಳ ನಡುವಿನ ಒಂದು ಅಸ್ಪಷ್ಟ ಬಂಧವಾಗಿದೆ.

ತಿರುಪತಿಯ ಬೆಟ್ಟದ ಮೇಲೆ ಏಕಾಂತವನ್ನರಸಿ ಹೋಗುವ ಜಾನಕಿಗೆ ಸಿಕ್ಕ ಆಶ್ರಯ ಅಜ್ಜಿ. ಅಜ್ಜಿಯ ಪಾತ್ರ ಇಲ್ಲಿ ತಾಯಿಯ ಮಡಿಲು, ಭರವಸೆಯ ಹೆಗಲು ಎರಡೂ ಆಗಿಬಿಡುತ್ತದೆ. ಅವರಿಬ್ಬರ ಅನುಸಂಧಾನದಲ್ಲಿ ಅಜ್ಜಿ ಹೇಳುತ್ತಾ ಹೋಗುವ ಪೌರಾಣಿಕ ಕಥೆಗಳೂ, ಶ್ರೀನಿವಾಸ ಕಲ್ಯಾಣದ ಕಥೆಯೂ ಮತ್ತು ಜಾನಕಿ ಈಗಾಗಲೇ ಬರೆದಿರುವ- ಬರೆಯುತ್ತಿರುವ ಆಂಡಾಳ್, ಮೀರಾ, ಬೀಬಿ ನಾಚಿಯಾರ್, ತರಿಕೊಂಡ ವೆಂಕಮಾಂಬ ಹಾಗೂ ರಾಧಾಕೃಷ್ಣರ ಪ್ರೇಮದ ಕಥೆಗಳೂ ಉಲ್ಲೇಖವಾಗುತ್ತಾ ಹೋಗುತ್ತವೆ.

`ಉತ್ಕಟವಾದ ಪ್ರೇಮವೂ ಭಕ್ತಿಯ ಹಾಗೆಯೇ. ಸಮರ್ಪಣೆಗಾಗಿ ಕಾಯುತ್ತದೆ. ಅಂತಹ ಪ್ರೇಮದ ತೊಳಲಾಟದಲ್ಲಿರುವ ಜೀವ ತನ್ನದೇ ಆದ ಮತ್ತೊಂದು ಜೀವದಿಂದ ಬಹಳ ಕಾಲ ದೂರವಿರುವುದು ಅಸಾಧ್ಯ. ಆತ್ಮ ಪರಮಾತ್ಮನನ್ನು ಸೇರುವಂತೆ ನಲ್ಲೆ ನಲ್ಲನನ್ನು ಸೇರಲೇಬೇಕು.’ `ಲಕ್ಷ್ಮಿಯನ್ನು ವಿಷ್ಣು ತನ್ನ ವಕ್ಷಸ್ಥಲದಲ್ಲಿ ಧರಿಸಿರುವಂತೆ ನಲ್ಲನ ಹೃದಯಮಂದಿರವೇ ಪ್ರಿಯತಮೆಯ ಆವಾಸಸ್ಥಾನ’ ಎನ್ನುವ ಭಾವವೇ ಕಾದಂಬರಿಯ ಸಾರ. ಪ್ರೇಮದ ಆಳ, ಮಹತ್ವ ಇವು ಮೂರು ನೆಲೆಗಳಲ್ಲಿ ಈ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತವೆ.

ಮೊದಲನೆಯದು ಪೌರಾಣಿಕ ನೆಲೆ. ಇಲ್ಲಿ ಶ್ರೀನಿವಾಸ ಕಲ್ಯಾಣದ ವಿವರವಾದ ಪ್ರಸ್ತಾಪವಿದೆ. ಆಕಾಶರಾಜನ ಮಗಳಾಗಿ ಪದ್ಮಾವತಿ ಭೂಲೋಕದಲ್ಲಿ ಜನಿಸುವುದರ ಹಿನ್ನೆಲೆಯಿಂದ ಆರಂಭವಾಗಿ, ಭೂಲೋಕಕ್ಕೆ ಲಕ್ಷ್ಮಿಯನ್ನು ಅರಸುತ್ತಾ ಬಂದ ವಿಷ್ಣು ಶ್ರೀನಿವಾಸನಾಗಿ ಬೆಳೆಯುವುದು, ಪದ್ಮಾವತಿ- ಶ್ರೀನಿವಾಸರ ಪರಸ್ಪರ ಭೇಟಿ, ಅನುರಾಗ, ವಿರಹ, ಮಿಲನ, ವಿವಾಹದ ಕಥೆ ಇತ್ಯಾದಿ ವಿವರಗಳೆಲ್ಲವನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತದೆ. ಗೋಕುಲದ ರಾಧೆ-ಶ್ಯಾಮರ ಪ್ರೇಮ, ಗೋಕುಲ ನಿರ್ಗಮನ, ರಾಧೆಯ ವಿರಹ, ಒಂಟಿತನ ಮತ್ತು ರಾಧೆಯ ವೃದ್ಧಾಪ್ಯದಲ್ಲಿ ಅವರಿಬ್ಬರ ಕೊನೆಯ ಭೇಟಿಯ ಕಥೆ ಕೂಡಾ ಆಪ್ತವಾಗುವಂತೆ ಚಿತ್ರಿತವಾಗಿದೆ. 

ಎರಡನೆಯದು ಐತಿಹಾಸಿಕ ನೆಲೆ. ತಾನು ಆರಾಧಿಸುವ ದೇವರಿಗೆ ತಾನೇ ಹೂಮಾಲೆಯಾಗಿಬಿಡುವ ಆಂಡಾಳ್ ಹಾಗೂ ಅವಳು ರಚಿಸಿದ ತಿರುಪ್ಪಾವೈ ಕಾವ್ಯದ ಕಥಾನಕ ಅತ್ಯಂತ ಆಕರ್ಷಕವಾಗಿ ಚಿತ್ರಿತವಾಗಿದೆ. ಗಿರಿಧರ ಸಖಿ ಮೀರಾಳ ಜೀವನಗಾಥೆ ಮತ್ತು ಕೃಷ್ಣನನ್ನು ಕುರಿತ ಅವಳ ಅಂತರಂಗದ ಆಲಾಪಗಳು ಚಿತ್ರಿತವಾದ ಬಗೆ ಲೇಖಕಿಯ ಭಾಷಾ ಸೌಂದರ್ಯವನ್ನೂ ಪ್ರಬುದ್ಧತೆಯನ್ನೂ ಮನಗಾಣಿಸುತ್ತದೆ. ಬೀಬಿ ನಾಚಿಯಾರಳ ಕೃಷ್ಣನ ಆರಾಧನೆ, ಕೊನೆಯಲ್ಲಿ ತನ್ನ ಪ್ರೀತಿಯ ಗೊಂಬೆ ಚೆಲುವನಾರಾಯಣನಲ್ಲಿಯೇ ಲೀನವಾಗುವ ಕಥೆ ಹಾಗೂ ದೇವರಿಗೆ ಅರ್ಪಿಸುವ ಮುತ್ತಿನ ಆರತಿಯ ಸೇವೆಯನ್ನೇ ಬದುಕಿನ ಗುರಿಯಾಗಿಸಿಕೊಂಡ ತರೀಕೊಂಡ ವೆಂಕಮಾಂಬಳಾ ಕತೆ ಸ್ವಾರಸ್ಯಕರವಾಗಿ ಕಥಾನಕದೊಂದಿಗೆ ಮಿಳಿತವಾಗಿದೆ.

ಮೂರನೆಯದು ವರ್ತಮಾನದ ನೆಲೆ. ಇಲ್ಲಿರುವುದು ಜಾನಕಿ-ರಾಘವರ ಭೇಟಿ, ಸ್ನೇಹ, ಬಾಂಧವ್ಯ, ಪ್ರೀತಿ, ವಿವಾಹ, ಅವರ ಸುಮಧುರ ವೈವಾಹಿಕ ಜೀವನ ಮತ್ತು ವಿರಹದ ಕಥೆ. ಈ ಮೂರೂ ನೆಲೆಗಳಲ್ಲಿ ಪ್ರೇಮ ಮತ್ತು ಆರಾಧನೆಯ ಕಥೆಗಳು ಬೆಳೆಯುತ್ತಾ ಹೋಗುತ್ತವೆ.

ಕಥಾನಾಯಕ ರಾಘವ ಮಕ್ಕಳ ಆಟಿಕೆ ತಯಾರು ಮಾಡುವ ಕಾರ್ಖಾನೆಯ ಒಡೆಯ. ಜಾನಕಿ ಅಲ್ಲಿಯೇ ಉದ್ಯೋಗಸ್ಥೆ. ಅವಳ ಪ್ರವೃತ್ತಿ-ಬರವಣಿಗೆ. ಅರಣ ಅವರ ಮಗ. ಇನ್ನೊಂದು ಮಗುವಿನ ಹಂಬಲ ಇಬ್ಬರಿಗೂ ಇದೆ. ಅವರಿಬ್ಬರ ಮೊದಲ ಭೇಟಿ ಆಗುವುದು ಶ್ರೀನಿವಾಸನ ಗುಡಿಯಲ್ಲಿ ಶ್ರೀನಿವಾಸ ಕಲ್ಯಾಣದ ಆಚರಣೆಯ ಸಂದರ್ಭದಲ್ಲಿ. ಪೂಜೆಯ ನಂತರ ಪ್ರಸಾದದ ಹೂವನ್ನು ಕೊಡುವಾಕೆ ಜಾನಕಿಯನ್ನು ಗಮನಿಸದೆ ಹೋದಾಗ ಅವನ್ನು ಗಮನಿಸಿದ ರಾಘವ ತನ್ನ ಕೈಯಲ್ಲಿರುವ ಹೂವಿನ ಪ್ರಸಾದವನ್ನು ಜಾನಕಿಗೆ ಕೊಡುತ್ತಾನೆ. ಹೀಗೆ ಆರಂಭವಾದ ಅವರ ಪರಿಚಯ-ಸ್ನೇಹ ಕ್ರಮೇಣ ಪ್ರೇಮ ಹಾಗೂ ದಾಂಪತ್ಯದಲಿ ಸ್ಥಿರವಾಗುತ್ತದೆ. 

ಜಾನಕಿಯ ಕುಟುಂಬದಲ್ಲಿ ಇಬ್ಬರು ತಂಗಿಯರು, ಆಟಿಸಂಗೆ ಒಳಗಾದ ತಮ್ಮ, ಇಷ್ಟೇ ಅಲ್ಲದೆ ಜಾನಕಿಯ ತಂದೆಗೆ ಮತ್ತೂ ಒಂದು ಸಂಸಾರವಿದೆ. ಜಾನಕಿಯ ವಿಷಯವನ್ನೆಲ್ಲಾ ಅರಿತ ರಾಘವ ಅವಳಿಗೆ ತನ್ನ ಪ್ರೀತಿಯ ಭದ್ರತೆಯನ್ನೂ ಭರವಸೆಯನ್ನೂ ಕೊಡುತ್ತಾನೆ. ಜಾನಕಿಗೋ ರಾಘವನಲ್ಲಿ ಸಮರ್ಪಣಾಭಾವ, ತನ್ನ ಬದುಕಿನ ನೋವು-ನಲಿವುಗಳನ್ನು ಹಂಚಿಕೊಂಡ ಜಾನಕಿಯೆಡೆಗೆ ರಾಘವನದು ಸದಾ ಪ್ರೀತಿ-ಕೃತಜ್ಞತೆಗಳ ಭಾವ. ಜಾನಕಿಯ ಮಾತಿನಲ್ಲೇ ಹೇಳುವುದಾದರೆ, ‘ರಾಘವನದು ದೊರೆಮಗನ ವ್ಯಕ್ತಿತ್ವ’. ಅವನ ವಕ್ಷಸ್ಥಲದಲ್ಲಿಯೇ ತಾನು ಸದಾ ವಾಸಿಸುವಂತೆ ಅವಳ ಭಾವನೆ. ಆದುದರಿಂದ ಈಗ ಕಳೆದುಕೊಂಡಿರುವ ರಾಘವನನ್ನು ಮತ್ತೆ ಪಡೆದೇ ಪಡೆಯುತ್ತೇನೆಂಬ ಭರವಸೆ ಇದೆ ಜಾನಕಿಗೆ. ಜಾನಕಿಯನ್ನು ಮೊದಲ ಬಾರಿಗೆ ನೋಡಿದ ದಿನದಂದು ಪ್ರತಿವರ್ಷವೂ ತಪ್ಪದೇ ಹೂತಂದುಕೊಂಡುವುದು ರಾಘವನ ಪರಿಪಾಠ. ಹಾಗೆ ಒಮ್ಮೆ ಹೊರಟಾಗಲೇ ರಾಘವ ದಾರಿಯನ್ನು ಕಳೆದುಕೊಂಡಿದ್ದಾನೆ. ಅವನೀಗ ನಡೆಯುತ್ತಿರುವುದು ಕೊನೆಯಿಲ್ಲದ ಒಂದು ಕಾಡಿನಲ್ಲಿ. ಅವನ ಸಹಯಾತ್ರಿ ಒಬ್ಬ ಮುದುಕ. ರಾಘವ ಜಾನಕಿಗಾಗಿ ಕೊಂಡಿದ್ದ ಹೂವು ಎಲ್ಲೋ ಬಿದ್ದುಹೋಗಿದೆ. ಅವನ ಮುದುಕನ ಬಳಿ ಹೇಳುತ್ತಾನೆ, ’ನನ್ನವಳದು ದೈವೀಕವಾದ ವ್ಯಕ್ತಿತ್ವ. ನನ್ನನ್ನು ಕೆಲವೊಮ್ಮೆ ಅವಳು ತಾಯಿಯಂತೆ ಉಪಚರಿಸಿದ್ದಾಳೆ. ಅವಳನ್ನು ಬದುಕಿನಲ್ಲಿ ಪದೆದದ್ದು ನನ್ನ ಅದೃಷ್ಟ’.

ತಿರುಪತಿ ಬೆಟ್ಟದ ಮೇಲೆ ಜಾನಕಿ ಮತ್ತು ಅಜ್ಜಿ ಶ್ರೀನಿವಾಸ ಕಲ್ಯಾಣದ ಕಥೆಯನ್ನು ಮುಗಿಸಿ ಪ್ರಸಾದವನ್ನು ನೈವೇದ್ಯ ಮಾಡುತ್ತಿರುವಾಗ ಕಾಡಿನಲ್ಲಿರುವ ರಾಘವನಿಗೆ ಶುಭಕಾರ್ಯದ ಕಲ್ಪನೆಯೂ ತನ್ನ ಮದುವೆಯ ದಿನದ ಕನಸೂ ಮೂಡುತ್ತದೆ. ಒಂದು ಹೂಮಾಲೆಯಲ್ಲಿ ಸೇರುವ ಹೂಗಳಿಗೂ ಋಣಾನುಬಂಧವಿರುತ್ತದೆ ಎನ್ನುವುದು ಅವನ ನಂಬಿಕೆ. ರಾಘವನನ್ನು ಕುರಿತ ಜಾನಕಿಯ ಭಾವಗಳು ಹೀಗೆ ವ್ಯಕ್ತವಾಗುತ್ತವೆ. ಶ್ರೀನಿವಾಸ ತಾನು ಸೃಷ್ಟಿಸುವ ನಾಟಕದಲ್ಲಿ ತಾನೇ ಪಾತ್ರಧಾರಿಯಾಗುತ್ತಾನೆ. ’ಪ್ರೀತಿಯ ಶಕ್ತಿ ನಿರ್ಮಲವಾದ ಕನ್ನೆಯ ಮನಸ್ಸಿನಲ್ಲಿದೆ. ಹಿಡಿದ ವ್ರತದಲ್ಲಿದೆ. ಪಡೆಯಲೇಬೇಕೆಂದು ಪಟ್ಟು ಹಿಡಿದು ಸಾಧಿಸಿದ ಮುಗ್ಧ ಭಕ್ತಿಯಲ್ಲಿದೆ’. ಜಾನಕಿ ಅಜ್ಜಿಯ ಬಳಿ ಹೇಳುತ್ತಾಳೆ, ’ಎಲ್ಲ ಕಡೆಯೂ ವಿಚಾರಿಸಿದ್ದಾಯಿತು. ರಾಘವ ಎಲ್ಲಿಯೂ ಇಲ್ಲ. ತೊರೆದು ಹೋಗುವಂಥ ತಪ್ಪು ನಾನೇನು ಮಾಡಿದೆ..?’ ಕನ್ನಡಿಯಲ್ಲಿಯೂ ಕೂಡಾ ಜಾನಕಿಗೆ ಕಾಣುವುದು ರಾಘವನೇ. ಪುರಾಣದ ಪದ್ಮಾವತಿಯ ಕನವರಿಕೆ ತನ್ನದೂ ಕೂಡಾ ಎಂಬ ಭಾವ ಜಾನಕಿಯದು. 

`ಸರ್ವಸಮರ್ಪಣ ಭಾವ ಮತ್ತು ಅಹಂಕಾರದ ವಿನಾಶ ದೂರವಾದವರನ್ನೂ ಒಂದುಗೂಡಿಸುತ್ತದೆ’ ಎಂಬ ಒಂದು ನಂಬಿಕೆ ಕಥಾನಕದ ಉದ್ದಕ್ಕೂ ಮಡುಗಟ್ಟಿದೆ. ಜಾನಕಿಯ ಮಗ ಅರುಣನಿಗೆ ಹದಿನೈದು ವರ್ಷ. ತನ್ನ ಬದುಕನ್ನು ಅವನು ಕಟ್ಟಿಕೊಳ್ಳಬಲ್ಲ ಎಂಬ ಭರವಸೆ, ನಂಬಿಕೆ ಜಾನಕಿಗಿದೆ.

`ವಕ್ಷಸ್ಥಲ’ ಒಂದು ಮನೋವೈಜ್ಞಾನಿಕ ಕಾದಂಬರಿಯಾಗಿಯೂ ನನಗೆ ತೋರುತ್ತದೆ. ಸುಪ್ತಪ್ರಜ್ಞೆ ಮತ್ತು ಅರಸುಪ್ತಪ್ರಜ್ಞೆಗಳು ವ್ಯಕ್ತಿಯ ಮನಸ್ಸಿನ ಮೇಲೆ ಮೂಡಿಸುವ ಪರಿಣಾಮ ಕನಸುಗಳ ಮೂಲಕ ವ್ಯಕ್ತವಾಗುವುದನ್ನು ಇಲ್ಲಿ ಗಮನಿಸಬಹುದು. ಮನುಷ್ಯನ ಮೆದುಳಿನ ಎಡಭಾಗ ತಾರ್ಕಿಕತೆ, ಮಾಹಿತಿಗಳಿಗೆ ಸಂಬಂಧಿಸಿದ್ದು. ಚಿಂತನೆ-ಭಾವನೆ-ಸಂವೇದನೆಗಳನ್ನು ಆಳುವ ಬಲಮೆದುಳು ಹೆಚ್ಚು ಸಕ್ರಿಯವಾಗಿ, ಬದುಕಿನ ವಾಸ್ತವವನ್ನು ಚಿತ್ತ(ಒಳಮನಸ್ಸು) ಒಪ್ಪಿಕೊಳ್ಳಲು ಅಸಮರ್ಥವಾದಾಗ ಏನಾಗಬಹುದೆಂಬುದರ ಸಮರ್ಥ ಚಿತ್ರಣ ನಾಯಕಿಯ ಪಾತ್ರದಲ್ಲಿ ಕಾಣಸಿಗುತ್ತದೆ. ಜೀವನದ ಅತ್ಯಂತ ಕಟು-ಕಹಿ ವಾಸ್ತವದ ಪರಿಸ್ಥಿತಿಯನ್ನು ವ್ಯಕ್ತಿ ಒಪ್ಪಿಕೊಳ್ಳಲೂ ಸ್ವೀಕರಿಸಲೂ ಸಿದ್ಧವಿಲ್ಲದಾಗ ಮನಸ್ಸು ಪರ್ಯಾಯ ದಾರಿಗಳನ್ನು ಕಂಡುಕೊಳ್ಳುತ್ತದೆ. ಆದುದರಿಂದಲೇ ಜಾನಕಿ ಕೌಟುಂಬಿಕವಾದ ವಾಸ್ತವದ ನೆಲೆಗಟ್ಟನ್ನು ಬಿಟ್ಟು ಎತ್ತರವಾದ ಒಂದು ಬೇರೆಯೇ ನೆಲೆಗೆ ಹೋಗುತ್ತಾಳೆ, ಆ ಸ್ಥಳವೇ ತಿರುಪತಿಯ ಬೆಟ್ಟ.

ತನ್ನೆಲ್ಲ ನೋವಿನ ಭಾವನೆಗಳನ್ನು ಅವಳು ಬರವಣಿಗೆಯ ಮೂಲಕ ಹೊರಹಾಕಲು ಪ್ರಯತ್ನಪಡುತ್ತಾಳೆ. ಅವಳು ಬರೆದ ಪಾತ್ರಗಳೆಲ್ಲಾ ಪ್ರೇಮದ, ಭಕ್ತಿಯ ಪರಾಕಾಷ್ಟೆಯಲ್ಲಿ ಪರಮಾತ್ಮನನ್ನು ಸೇರಲು ತವಕಿಸುವ ತಲ್ಲಣಿಸುವ ಪಾತ್ರಗಳು. ಆ ಪಾತ್ರಗಳ ಜೊತೆ ನಾಯಕಿ ತನ್ನನ್ನು ತಾನು ಸಮೀಕರಿಸಿಕೊಳ್ಳುತ್ತಾಳೆ. ಇದು ಮತ್ತೊಂದು ರೀತಿಯಲ್ಲಿ ಅವಳ ಮನಸ್ಸು ತನ್ನನ್ನು ತಾನು ಸಂತೈಸಿಕೊಳ್ಳುವ ಪ್ರಯತ್ನ. ಜೀವವು ತಾನು ಅಗಾಧವ್ವಾಗಿ ಪ್ರೀತಿಸುವ ಮತ್ತೊಂದು ಜೀವವನ್ನು ಸೇರಲೇಬೇಕು, ಇದು ಆತ್ಮವು ಪರಮಾತ್ಮನನ್ನು ಸೇರುವಷ್ಟೇ ಸಹಜವಾದುದು ಎಂಬುದನ್ನು ಅವಳ ಚಿತ್ತ ಒಪ್ಪಿಕೊಂಡಿದೆ. ಈ ಒಪ್ಪಿಕೊಳ್ಳುವಿಕೆ ಹಾಗೂ ಅಪ್ಪಿಕೊಳ್ಳುವಿಕೆಯೇ ಕಥಾನಕದ ಬೆಳವಣಿಗೆಯನ್ನು ನಿರ್ಧರಿಸುತ್ತದೆ.

ಇತ್ತ ರಾಘವ ಕಾಡಿನಲ್ಲಿ ಮದುಕನ ಜತೆಯಲ್ಲಿ ನಡೆಯುತ್ತಾ ಹೋಗುವುದು, ಅವರಿಬ್ಬರ ಸಂವಾದ, ರಾಘವನಿಗೆ ಎದುರಾಗುವ ಭಾವ-ಭಾವನೆಗಳು ಎಲ್ಲವೂ ಸೇರಿ ತನಗೆ ತಾನೇ ಒಂದು ಅತೀಂದ್ರಿಯ ಲೋಕವನ್ನು ಸೃಷ್ಟಿಸಿಬಿಡುತ್ತದೆ. ಅಜ್ಜಿ ಮತ್ತು ಮುದುಕ ಇಬ್ಬರೂ ಆತ್ಮೀಯ ಪಾತ್ರಗಳಾಗಿ ದಾರಿ ತೋರಿಸುವ ಕೈದೀಪವಾಗಿ ಇಲ್ಲಿ ಗೋಚರಿಸುತ್ತಾರೆ. ಜಾನಕಿ ರಾಘವರ ಸಾಂಸಾರಿಕ ಬದುಕಿನ ಇನ್ನಷ್ಟು ಘಟನೆಗಳನ್ನು ಸವಿವರವಾಗಿ ಕಾದಂಬರಿಯು ಒಳಗೊಳ್ಳಬಹುದಿತ್ತೇನೋ; ಅದರಿಂದ ಓದುಗನ ಮನಸ್ಸಿನ ಮೇಲೆ ಗಾಢ ಪರಿಣಾಮವಾಗುತ್ತಿತ್ತೇನೋ ಎನ್ನುವುದು ನನ್ನ ಅನಿಸಿಕೆ. ಆದರೆ ನಾಯಕಿಯ ಮನಸ್ಥಿತಿಯ ದೃಷ್ಟಿಯಿಂದ ನೋಡಿದರೆ ಈ ಅನಿಸಿಕೆಗೆ ಬೇರೊಂದು ಮಗ್ಗುಲೂ ದೊರೆಯಬಹುದು. ಅದೆಂದರೆ ನಡೆದ ಘಟನೆಗಳ ಆಂತರ್ಯಕ್ಕೆ ಮತ್ತೆ ಮತ್ತೆ ಹೋಗಲು, ಅದರ ನೋವನ್ನು ಭರಿಸಲು ಒಪ್ಪದ ಅವಳ ಚಿತ್ತಸ್ಥಿತಿ.

ವಾಸ್ತವ-ಕಲ್ಪನೆ-ಅತೀಂದ್ರಿಯ-ದೈವೀಕ ಈ ಎಲ್ಲ ನೆಲೆಗಳ ಚಿತ್ರಣವನ್ನೂ ಏಕತ್ರಗೊಳಿಸಿ ಪ್ರತಿಮಾತ್ಮಕವಾಗಿ ಕಟ್ಟಿಕೊಡುವಲ್ಲಿ ಆಶಾ ಅವರು ಯಶಸ್ವಿಯಾಗಿದ್ದಾರೆ. ಸ್ವಾರಸ್ಯಕರವಾಗಿ ಕಥಾನಕವನ್ನು ಕಟ್ಟಿಕೊಡುವುದರಲ್ಲಿ, ಭಾಷೆಯನ್ನು ಸಮರ್ಥವಾದ ವಾಹಕವಾಗಿಸುವಲ್ಲಿ ಆಶಾ ಅವರು ಸಿದ್ಧಹಸ್ತರು. ಜೀವನ, ಅದರ ಅರ್ಥ, ಪ್ರೇಮ-ವಿಯೋಗ-ಮಿಲನ-ಆತ್ಮ-ಪರಮಾತ್ಮ… ಹೀಗೊಂದು ಮಾಯಾಜಗತ್ತನ್ನು ಅನನ್ಯವಾಗಿ ಸೃಷ್ಟಿಸುವ ’ವಕ್ಷಸ್ಥಲ’ ಕಾದಂಬರಿ ಓದುಗರ ಹೃದಯಕ್ಕೆ ಹತ್ತಿರವಾಗಲಿ ಎಂದು ಆಶಿಸುತ್ತೇನೆ. ಮೊದಲ ಪ್ರತಿಯನ್ನು ಓದಲು ಕೊಟ್ಟು ಮುನ್ನುಡಿಯ ನಾಲ್ಕು ಮಾತುಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಆಶಾ ರಘು ಅವರ ವಿಶ್ವಾಸಕ್ಕೆ ವಂದಿಸುತ್ತೇನೆ.

 

MORE FEATURES

ಕವಿತೆಗಳಿಲ್ಲದಿದ್ದರೆ ಮನುಷ್ಯ ಮೃಗವಾಗಿಯೇ ಇರುತ್ತಿದ್ದ

15-02-2025 ಬೆಂಗಳೂರು

“ಕವಿಯು ಈ ಕವನವು ಹೊಸ ವರ್ಷದ ಆರಂಭವನ್ನು ಸನಾತನ ಸಾಂಸ್ಕೃತಿಕ ಹಬ್ಬಗಳ ಹಿನ್ನೆಲೆಯಲ್ಲಿ ಕವಿಯು ವೈಭೋಗದಿಂದ ವಿವರಿ...

ಅವರ ಹೋರಾಟದ ಕತೆಯೂ ಇದೆ

15-02-2025 ಬೆಂಗಳೂರು

“ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ,” ಎನ್ನ...

Bannada Jinke; ಕವಿಯಾಗದವನು ಸಾಹಿತಿಯಾಗಲು ಸಾಧ್ಯವಿಲ್ಲ

14-02-2025 ಬೆಂಗಳೂರು

“ಇದರಲ್ಲಿ ವಿವಿಧ ಕಾಲಘಟ್ಟದಲ್ಲಿ ಬರೆದ ಅವರ ಬಹುಪಾಲು ಅತ್ಯುತ್ತಮ ಕತೆಗಳು ಇರುವುದರಿಂದ ಪರೋಕ್ಷವಾಗಿ ಇವು ಅವರ ಪ್...