ಕಾದಂಬರಿಯ ಪ್ರತೀ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ಬಿಡುತ್ತದೆ


"ಮಿಲಿಟರಿ ವೈದ್ಯನಾಗಿ ಕೆಲಸ ಮಾಡಿಕೊಂಡು ನಿವೃತ್ತನಾದ ಜನಾರ್ದನ ಅವರ ಜೀವನವೂ ಬೃಂದಾಳ ಕಥೆಗಿಂತ ಭಿನ್ನವಾಗಿರದಿದ್ದರೂ ಅವಳ ಮಗನಷ್ಟು ಇವರ ಮಗ ನಿಷ್ಠೂರವಾದಿಯಾಗಿರಲಿಲ್ಲ. ಹೃದಯ ಸಂಬಂಧಿ ಕಾಯಿಲೆಯಿರುವ ಪತ್ನಿ ತಾಯಿಯಾಗುವುದರಿಂದ ಅವಳ ಜೀವಕ್ಕೆ ಅಪಾಯವಾಗಬಹುದು ಎಂದು ಜನಾರ್ದನ ಅಂದುಕೊಂಡರೂ ಪತ್ನಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದು ಚಿನ್ಮಯ್ ನ ಜನನವಾಗಿತ್ತು," ಎನ್ನುತ್ತಾರೆ ವಿದ್ಯಾ ನಾಯಕ್. ಅವರು ಪೂರ್ಣಿಮಾ ಮಾಳಗಿಮನಿ ಅವರ ‘ಅಗಮ್ಯ’ ಕೃತಿ ಕುರಿತು ಬರೆದ ವಿಮರ್ಶೆ.

ಪುಸ್ತಕದ ಶೀರ್ಷಿಕೆ: ಅಗಮ್ಯ
ಲೇಖಕರು: ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು: ಸಪ್ನ ಬುಕ್ ಹೌಸ್

ಈ ಪುಸ್ತಕದ ಶೀರ್ಷಿಕೆಯೇ ಅತ್ಯಂತ ವಿಭಿನ್ನವಾಗಿದ್ದು ಓದುಗರನ್ನು ಸೆಳೆಯುತ್ತದೆ. ಗಮ್ಯದೆಡೆಗಿನ ಪಯಣದಲ್ಲಿ ಸಫಲವಾಗದೆ ಜೀವನ ಮತ್ತೆ ಮಗ್ಗಲು ಬದಲಾಯಿಸಿದಾಗ ಉಂಟಾದ ಅನಿಶ್ಚಿತತೆ ಇಲ್ಲಿ ಬಹುವಾಗಿ ಕಾಡುತ್ತದೆ. ವೃದ್ಧಾಪ್ಯದ ಹಂತದಲ್ಲಿರುವ ಅನೇಕ ಮನಸ್ಸುಗಳನ್ನು ಬಿಚ್ಚಿಡುವ ಈ ಕಾದಂಬರಿಯ ಪ್ರತೀ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಮುಖ್ಯ ಪಾತ್ರಗಳಾದ ಬೃಂದಾ ಮತ್ತು ಜಾನಿ (ಜನಾರ್ದನ್) ತಮ್ಮ ಕಥೆಯನ್ನು ಹೇಳುವಂತೆ ನಿರೂಪಣೆ ಇರುವ ಈ ಕಾದಂಬರಿ ಬೇರೆ ಕಾದಂಬರಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಹಿರಿಯ ಜೀವಗಳಿಬ್ಬರ ಮುದ್ದಾದ ಮುಗ್ಧ ಪ್ರೇಮ ಕಥೆಯೊಂದು ಇಲ್ಲಿ ಮನಸೆಳೆಯುತ್ತದೆ.

ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿರುವ ಬೃಂದಾ ಆ ಹಂತವನ್ನು ತಲುಪಲು ಪಟ್ಟ ಕಷ್ಟ ಸಾಮಾನ್ಯವಾಗಿರಲಿಲ್ಲ. ಕವನಗಳ ಮೂಲಕ ಹುಚ್ಚು ಹಿಡಿಸಿದ ಹುಡುಗನ ಜೊತೆಗೆ ಬದುಕಲು ಬಯಸಿದಾಗ ಅಪ್ಪನಿಂದ ತೀವ್ರ ವಿರೋಧ ವ್ಯಕ್ತವಾಗಿ 'ನನ್ನ ಆಸ್ತಿಯಲ್ಲಿ ನಿನಗೆ ಕಿರುಗಾಸೂ ಸಿಗುವುದಿಲ್ಲ' ಎಂದಾಗಲೂ ಬಗ್ಗದೇ ಪ್ರೀತಿಸುವ ಹುಡುಗನ ಹಿಂದೆ ಹೊರಟು ಬಿಟ್ಟಿದ್ದಳು. ಕಾಲೇಜು ಮುಗಿಸುವ ಮೊದಲೇ ತಾಯಿಯಾಗುತ್ತಿದ್ದ ಅವಳು ಕಾಲೇಜು ಬಿಟ್ಟು ಮಕ್ಕಳಿಗೆ ಟ್ಯೂಷನ್ ಹೇಳಿಕೊಟ್ಟು ಬಾಡಿಗೆ ಮನೆಯಲ್ಲಿ ವಾಸಮಾಡುತ್ತಾಳೆ. ಆಕಾಶ್ ಮಡಿಲ ಮಗನಾಗಿರುವಾಗಲೇ ಬೈಕ್ ಆಕ್ಸಿಡೆಂಟಿನಲ್ಲಿ ಗಂಡನನ್ನು ಕಳೆದುಕೊಂಡು ಸಾಂತ್ವನ ಹೇಳುವವರಿಲ್ಲದೇ ಒಂಟಿಯಾಗಿದ್ದಳು.

ನರ್ಸರಿ ಮಕ್ಕಳಿಗೆ ಪಾಠ ಮಾಡುತ್ತಾ ಪದವಿ, ಬಿ ಎಡ್, ಎಮ್ ಏ ಮಾಡಿ ತನ್ನ ಪ್ರಿಯವಾದ 'ಕವಿತೆಗಳಲ್ಲಿ ಹಾಸ್ಯ' ದ ಕುರಿತು ಪಿ ಎಚ್ ಡಿ ಯನ್ನೂ ಮಾಡಿಕೊಂಡು ದೊಡ್ಡ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗುತ್ತಾಳೆ. ಆದರೆ ಈಗ ಅವಳಿಗಿರುವ ಒಂದೇ ನೋವು ಮಗ ಆಕಾಶನದ್ದು. ಎದುರಾದ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ತಾನು ಈಗ ನೆಲೆ ನಿಲ್ಲಲು, ಐಷಾರಾಮಿ ಅಪಾರ್ಟ್‌ಮೆಂಟಿನ ಒಡತಿಯಾಗಲು ಕಾರಣವಾದ ಛಲ ಮಗನಲ್ಲಿರದೆ ತನ್ನ ಖರ್ಚುಗಳಿಗೆ ಇನ್ನೂ ತಾಯಿಯನ್ನು ಅವಲಂಬಿಸಿರುವುದು. ಅವಳ ಪ್ರಕಾರ ಅವನೊಬ್ಬ ಪಾರಾಸೈಟ್. ಒಳ್ಳೆಯ ಸಂಬಳವನ್ನು ಪಡೆಯುವ ಮೊದಲೇ ಪಕ್ಕದ ರಸ್ತೆಯ ಚಿಕ್ಕ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ತನ್ನ ತಾಯಿಯ ಆಸರೆಯಲ್ಲಿದ್ದುಕೊಂಡೇ ಅವಳನ್ನು ಮನೆಯಿಂದ ಹೊರಗೆ ಹಾಕುವ ಯೋಚನೆಯಲ್ಲಿರುತ್ತಾರೆ.

ಇಂತಹ ಅನೇಕ ಪ್ರಸಂಗಗಳಿಂದ ನೊಂದ ಬೃಂದಾ ಜಿದ್ದಿಗೆ ಬಿದ್ದವಳಂತೆ ತನ್ನ ಅಪಾರ್ಟ್‌ಮೆಂಟಿನ ಲೈಬ್ರರಿಯಲ್ಲಿ 'ಡಿಸೌನ್ಡ್' ಎಂದು ಬರೆದ ಬೋರ್ಡನ್ನು ಕುತ್ತಿಗೆಗೆ ತೂಗು ಹಾಕಿಕೊಂಡು ಎರಡು ದಿನ ಕಳೆಯುತ್ತಾಳೆ. ಸಾಮಾನ್ಯವಾಗಿ ಅಪಾರ್ಟ್‌ಮೆಂಟಿನ ಜನರು ತಮಗೆ ಬೇಡವಾದ ಸಾಮಗ್ರಿಗಳನ್ನು ಇಲ್ಲಿ ತಂದು ಹಾಕಿ ಬೇಕಾದವರು ತೆಗೆದುಕೊಂಡು ಹೋಗಲು ಇರುವ ವ್ಯವಸ್ಥೆಗೆ ಯಾರೂ ಅತಿಯಾಗಿ ಉಪಯೋಗಿಸದ ಲೈಬ್ರರಿಯನ್ನು ಆಯ್ಕೆಮಾಡಿದ್ದರು. ಹೀಗೆಯೇ ಅಣ್ಣನ ಮಗನ ಮನೆಯ ಗೃಹಪ್ರವೇಶಕ್ಕೆಂದು ಬಂದ ಜನಾರ್ದನ್ ತನ್ನ ಇಷ್ಟದ ಕ್ಯಾಮೆರಾವನ್ನು ಹಿಡಿದು ಅಪಾರ್ಟ್ಮೆಂಟ್ ಸುತ್ತಾಡುತ್ತಿರುವಾಗ ಅಚಾನಕ್ಕಾಗಿ ಲೈಬ್ರರಿಯಲ್ಲಿ ಬಂದಾಗ ಬೃಂದಾಳನ್ನು ನೋಡುತ್ತಾನೆ. ಮೊದಲಿಗೆ ಹೆದರಿ ಆತ ನಂತರ ಸೆಕ್ಯುರಿಟಿಗೆ ತಿಳಿಸಿ ಈ ಮಾಹಿತಿಯನ್ನು ಅಪಾರ್ಟ್‌ಮೆಂಟಿನ ಗ್ರೂಪಿನಲ್ಲಿ ಹಾಕಿಸುತ್ತಾನೆ. ಇವರ ಈ ಅಧಿಕ ಪ್ರಸಂಗಿತನದಿಂದ ಅಸಮಾಧಾನಗೊಂಡ ಜನಾರ್ದನರವರ ಮಗ ಸೊಸೆ ಅವರಿಗೆ ಬೈಯ್ಯುವಂತಾಗುತ್ತದೆ.

ಮಿಲಿಟರಿ ವೈದ್ಯನಾಗಿ ಕೆಲಸ ಮಾಡಿಕೊಂಡು ನಿವೃತ್ತನಾದ ಜನಾರ್ದನ ಅವರ ಜೀವನವೂ ಬೃಂದಾಳ ಕಥೆಗಿಂತ ಭಿನ್ನವಾಗಿರದಿದ್ದರೂ ಅವಳ ಮಗನಷ್ಟು ಇವರ ಮಗ ನಿಷ್ಠೂರವಾದಿಯಾಗಿರಲಿಲ್ಲ. ಹೃದಯ ಸಂಬಂಧಿ ಕಾಯಿಲೆಯಿರುವ ಪತ್ನಿ ತಾಯಿಯಾಗುವುದರಿಂದ ಅವಳ ಜೀವಕ್ಕೆ ಅಪಾಯವಾಗಬಹುದು ಎಂದು ಜನಾರ್ದನ ಅಂದುಕೊಂಡರೂ ಪತ್ನಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದು ಚಿನ್ಮಯ್ ನ ಜನನವಾಗಿತ್ತು. ಆದರೆ ಇತ್ತೀಚಿಗೆ ಕೆಲವು ವರ್ಷಗಳ ಹಿಂದೆ ಅವರು ಹೆಂಡತಿಯನ್ನು ಅದೇ ಕಾಯಿಲೆಯಿಂದಾಗಿ ಕಳೆದುಕೊಂಡಿದ್ದರು. ಈಗ ಅವರು ಒಂಟಿ ಜೀವಿ.

ನಿವೃತ್ತಿಯಾದ ನಂತರ ಅಪ್ಪ ಇನ್ನೊಂದ್ಯಾವುದಾದರೂ ನರ್ಸಿಂಗ್ ಹೋಂ ಕೆಲಸಕ್ಕೆ ಸೇರಬಹುದು ಎಂದು ಆಸೆ ಪಟ್ಟರೆ, ಅತ್ತೆ ತನ್ನ ಮಕ್ಕಳನ್ನು ನೋಡಿಕೊಂಡರೆ ತಾನು ಕೆಲಸ ಬಿಡಬೇಕಾಗಿಲ್ಲ ಎಂದು ಯೋಚಿಸುತ್ತಿದ್ದ ಸೊಸೆ, ಅತ್ತೆಯ ಅನಾರೋಗ್ಯದ ಕಾರಣ ನಿರಾಶೆಗೊಂಡಿದ್ದಳು. ಅವರ ಸಾವಿನ ನಂತರ ಮಕ್ಕಳ ಬಹುತೇಕ ಕೆಲಸಗಳನ್ನು ಮಾವನಿಗೆ ವಹಿಸಿದ್ದಳು. ಮಕ್ಕಳ ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಶಾಲೆಯ ಬಸ್ಸು ತಪ್ಪಿದರೆ ಅವರನ್ನು ಶಾಲೆಗೆ ಬಿಡುವುದು, ತುರ್ತು ಅವಶ್ಯಕತೆ ಬಿದ್ದಾಗ ಪಕ್ಕದ ಅಂಗಡಿಯಿಂದ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿಯನ್ನು ತೆಗೆದುಕೊಂಡು ಬರುವುದು ಎಲ್ಲಾ ಕೆಲಸಗಳನ್ನು ಅವರು ಆಸ್ಥೆಯಿಂದ ಮಾಡುತ್ತಿದ್ದರು. ಕೊನೆ ಕೊನೆಗೆ ಮನೆಯ ಕೆಲಸದವಳನ್ನು ಬಿಡಿಸಿ, ಮಕ್ಕಳ ಶಾಲಾ ವ್ಯಾನನ್ನೂ ರದ್ದುಗೊಳಿಸಿ ಎಲ್ಲವನ್ನೂ ಜನಾರ್ದನರವರ ಹೆಗಲಿಗೆ ಕಟ್ಟಿದ್ದಳು. ಇನ್ನಾದರೂ ತನಗಾಗಿ ಬದುಕಬೇಕು ಎಂದುಕೊಂಡ ಜನಾರ್ದನನಿಗೆ ಈಗ ಒಂದು ಗಳಿಗೆಯೂ ಪುರುಸೊತ್ತಿಲ್ಲ ಎಂಬಂತಾಯಿತು. ಗೆಳೆಯರ ಜೊತೆ ವಾಕಿಂಗ್ ಹೋದರೂ ಮನೆಗೆ ಹೋಗಿ ವಹಿಸಿದ ಕೆಲಸ ಮುಗಿಸುವ ಧಾವಂತದಲ್ಲಿರಬೇಕಾಯಿತು.

ಇದು ಇವರದಷ್ಟೇ ಕಥೆಯಲ್ಲ. ಅಪಾರ್ಟ್ಮೆಂಟಿನ ಇವರ ಅನೇಕ ವೃದ್ಧ ಗೆಳೆಯರ ಕಥೆಯೂ ಹೀಗೆಯೇ ಅಥವಾ ಜನಾರ್ದನರವರ ಪ್ರಕಾರ ಇವರಿಗಿಂತ ಹೀನಾಯವಾಗಿತ್ತು. ಒಬ್ಬರ ಮನೆಯಲ್ಲಿ ಒಂದೊಂದು ರೀತಿಯ ಮಾನಸಿಕ ಹಿಂಸೆ. ಒಂದು ಕಾಲದಲ್ಲಿ ಉನ್ನತ ಕೆಲಸದಲ್ಲಿದ್ದು ತಲೆ ಎತ್ತಿ ನಡೆದವರೆಲ್ಲರೂ ಈಗ ಚಿಪ್ಪಿನೊಳಗೆ ಸೇರಿ ಬಿಟ್ಟಿದ್ದರು. ಇಂತಹವರಿಗೆಲ್ಲಾ ಆಶಾಕಿರಣವಾಗಿ ಕಂಡವನು ಆಯುಷ್ಮಾನ್ ಎಂಬ ಯುವಕ. ಅಪಾರ್ಟ್‌ಮೆಂಟಿನ ವೃದ್ಧರ ಗೋಳನ್ನು ಸಂಯಮದಿಂದ ಕೇಳಿ ಅವರೆಲ್ಲರ ಕಷ್ಟಗಳಿಗೆ ತಿಲಾಂಜಲಿ ಇಡಲು ಒಂದೊಳ್ಳೆ ಯೋಜನೆ ರೂಪಿಸುತ್ತಾನೆ.

ಎಲ್ಲರೂ ಸ್ವಲ್ಪ ಬಂಡವಾಳ ಹಾಕಿ ನಗರದಲ್ಲಿರುವ ದೊಡ್ಡ ಮನೆಯೊಂದನ್ನು ಖರೀದಿಸಿ ತಮಗಿಷ್ಟ ಬಂದಂತೆ ಇರುವ ಒಂದು ಓಲ್ಡ್ ಏಜ್ ಕೇರ್ ನ ಕನಸು ವೃದ್ಧರಲ್ಲಿ ಬಿತ್ತುತ್ತಾನೆ. ಅದು ವೃದ್ಧಾಶ್ರಮ ಅಲ್ಲವೆಂದೂ ವೃದ್ಧರು ಯಾರಿಗೂ ಹೆದರದೆ ಸ್ವತಂತ್ರವಾಗಿರುವ ತಾಣವಾಗಿರುತ್ತದೆಂದು ಹೇಳಿದ. ತಾನು ಯಾವುದೋ ಒಂದು ಒಳ್ಳೆಯ ಮನೆ ನೋಡಿದ್ದೇನೆಂದೂ, ಅದರ ಮಾಲೀಕರಿಗೆ ಹಣದ ಅವಶ್ಯಕತೆ ಇರುವುದರಿಂದ ಕಮ್ಮಿ ರೇಟಿಗೆ ಮನೆ ಸಿಕ್ಕಿದೆಯೆಂದೂ ಆದರೆ ಮಾಲೀಕರ ಸೋದರಿಯೊಬ್ಬಳು ಆಸ್ತಿಯಲ್ಲಿ ಪಾಲು ಬೇಕೆಂದು ಮಾರಾಟಕ್ಕೆ ತಡೆ ತಂದಿದ್ದಾಳೆಂದು ಹೇಳಿದ. ಈಗ ಆ ಸೋದರಿ ಎಲ್ಲಾ ವೃದ್ಧರ ಕಣ್ಣಿನಲ್ಲಿ ಖಳ ನಾಯಕಿಯಾದಳು. ಅವಳನ್ನು ಬಗ್ಗಿಸಲು ಅವಳ ಕಾಲೇಜಿನ ಎದುರು ಮುಷ್ಕರ ನಡೆಸುವುದೆಂಬ ನಿರ್ಧಾರವಾಯಿತು.

ಮದುವೆಯಾದಾಗಿನಿಂದ ದೂರವಾದ ತವರಿನ ಸಂಬಂಧಗಳ ಬಗ್ಗೆ ಮನಸ್ಸಲ್ಲಿ ಹಲವಾರು ಪ್ರಶ್ನೆಗಳಿದ್ದರೂ ಯಾವತ್ತೂ ಅವರಿಗೆ ಕೆಟ್ಟದನ್ನು ಬಯಸಿದವಳಲ್ಲ ಬೃಂದಾ. ಆದರೆ ಇತ್ತೀಚಿಗೆ ತನ್ನ ಪಾರಾಸೈಟ್ ಮಗನ ಕಣ್ಣು ತನ್ನ ತಾಯಿಯ ಹಕ್ಕಿನ ಆಸ್ತಿಯಾದ ತವರಿನ ಮನೆಯ ಮೇಲೆ ಬಿದ್ದಾಗ ಅದು ಮಾರಿ ಹೋಗದಂತೆ ತಡೆ ಹಾಕಿ ಅದಕ್ಕೆ ಮೋಸದಿಂದ ಬೃಂದಾಳ ಸಹಿ ಹಾಕಿಸಿರುತ್ತಾನೆ. ಅದರಿಂದ ಅನೇಕ ಸಲ ಅವಳ ಅಣ್ಣ ಬಂದು ಗಲಾಟೆ ಮಾಡಿ ಹೋಗಿರುತ್ತಾನೆ. ಈಗ ಯಾರೋ ಮುಷ್ಕರಕ್ಕೆ ಬಂದಿದ್ದವರನ್ನು ಅವನೇ ಕಳುಹಿಸಿರುತ್ತಾನೆ ಅಂದುಕೊಂಡು ಸಂಧಾನಕ್ಕೆ ಒಬ್ಬನನ್ನು ಬರುವಂತೆ ಹೇಳುತ್ತಾಳೆ. ಹೀಗೆ ಜನಾರ್ದನ್ ಮತ್ತು ಬೃಂದಾ ಮತ್ತೆ ಎರಡನೇ ಸಲವೂ ಒಂದು ವಿಚಿತ್ರ ಸನ್ನಿವೇಶದಲ್ಲಿ ಭೇಟಿಯಾಗುತ್ತಾರೆ.

ಒಂಟಿಯಾಗಿ ಸಾಗುತ್ತಿದ್ದ ಎರಡು ಜೀವಗಳು ತಮ್ಮ ಗಮ್ಯವನ್ನರಸುತ್ತಿದ್ದ ಕಾಲದಲ್ಲಿ ಭೇಟಿಯಾಗಿ ಇಬ್ಬರೂ ಜೊತೆಯಾಗಿ ಆ ಗಮ್ಯದೆಡೆಗೆ ಸಾಗುವಂತಾಯಿತೇ? ಈ ಪಯಣದಲ್ಲಿ ಅವರಿಗೆ ಉಂಟಾದ ಅಡೆತಡೆಗಳೇನು? ಊಹೆಗೂ ನಿಲುಕದ ತಿರುವುಗಳಿಂದ ಅಂತ್ಯವಾಗುವ ಪುಟ್ಟ ಕಾದಂಬರಿ, ಓದುಗರಿಗೆ ಸ್ವಲ್ಪವೂ ಬೇಸರವಾಗದಂತೆ ಓದಿಸಿಕೊಂಡು ಹೋಗುತ್ತದೆ.

MORE FEATURES

ಕವಿತೆಗಳಿಲ್ಲದಿದ್ದರೆ ಮನುಷ್ಯ ಮೃಗವಾಗಿಯೇ ಇರುತ್ತಿದ್ದ

15-02-2025 ಬೆಂಗಳೂರು

“ಕವಿಯು ಈ ಕವನವು ಹೊಸ ವರ್ಷದ ಆರಂಭವನ್ನು ಸನಾತನ ಸಾಂಸ್ಕೃತಿಕ ಹಬ್ಬಗಳ ಹಿನ್ನೆಲೆಯಲ್ಲಿ ಕವಿಯು ವೈಭೋಗದಿಂದ ವಿವರಿ...

ಅವರ ಹೋರಾಟದ ಕತೆಯೂ ಇದೆ

15-02-2025 ಬೆಂಗಳೂರು

“ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ,” ಎನ್ನ...

Bannada Jinke; ಕವಿಯಾಗದವನು ಸಾಹಿತಿಯಾಗಲು ಸಾಧ್ಯವಿಲ್ಲ

14-02-2025 ಬೆಂಗಳೂರು

“ಇದರಲ್ಲಿ ವಿವಿಧ ಕಾಲಘಟ್ಟದಲ್ಲಿ ಬರೆದ ಅವರ ಬಹುಪಾಲು ಅತ್ಯುತ್ತಮ ಕತೆಗಳು ಇರುವುದರಿಂದ ಪರೋಕ್ಷವಾಗಿ ಇವು ಅವರ ಪ್...