ಕಲಬುರಗಿ ಅಂದ್ರ ಏನನ್ಕೊಂಡೀರಿ:ಕಲಬುರಗಿ ಪರಿಸರದ ಸಾಹಿತ್ಯ ಬಾಶೆಗಳು

Date: 04-02-2020

Location: ಕಲಬುರಗಿ


ಕಲಬುರಗಿ ಪರಿಸರದಲ್ಲಿರುವ ಸಾಹಿತ್ಯದ ಭಾಷೆಗಳ ಬಗ್ಗೆ ಡಾ. ಬಸವರಾಜ ಕೋಡಗುಂಟಿ ಅವರು ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

 

ಕಲಬುರಗಿ ಪರಿಸರದ ಸಾಹಿತ್ಯ ಎಂದಕೂಡಲೆ ಸುತ್ತಮುತ್ತ ಇದ್ದ ಹಲವಾರು ದಾರ್‍ಮಿಕ, ಸಾಹಿತ್ಯಿಕ, ಶಿಕ್ಶಣಿಕ ಕೇಂದ್ರಗಳು ನೆನಪಿಗೆ ಬರುತ್ತವೆ. ಕನಕಗನಹಳ್ಳಿ, ಸನ್ನತಿ, ಮಸ್ಕಿ, ಕೊಪ್ಪಳ, ಮಳಕೇಡ, ನಾಗಾವಿ, ಸಾಲೋಟಗಿ, ಕಲ್ಯಾಣ, ಬೀದರ, ಪಿರೋಜಾಬಾದ, ವಿಜಯಪುರ, ಕಲಬುರಗಿ ಮೊದಲಾದ ಪ್ರದಾನ ಮತ್ತು ಇನ್ನೂ ಹಲವು ಕೇಂದ್ರಗಳನ್ನು ಇಲ್ಲಿ ಪಟ್ಟಿ ಮಾಡಬಹುದು. ಈ ಊರುಗಳಲ್ಲಿ ಸಾಹಿತ್ಯಿಕ ಇಲ್ಲವೆ ಸಾಹಿತ್ಯಕ್ಕೆ ಪೂರಕವಾದ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಹೇಳುವುದಕ್ಕೆ ಬೇಕಾದಶ್ಟು ಆದಾರಗಳು ಇವೆ.
ಕಲಬುರಗಿ ಪರಿಸರದಾಗ ಅನುಮಾನಿಸಬಹುದಾದ ಬಹುಹಳೆಯ ಸಾಹಿತ್ಯ ಪಾಲಿ-ಪ್ರಾಕ್ರುತ. ಕನಗನಹಳ್ಳಿಯ ಬವುದ್ದಸ್ತೂಪ ಮತ್ತು ಅಲ್ಲಿನ ಶಿಕ್ಶಣಿಕ, ತಾತ್ವಿಕ, ದಾರ್‍ಮಿಕ, ಶಿಲ್ಪಕಲೆ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮೊದಲಾದವನ್ನು ಇಲ್ಲಿ ಹೇಳಬಹುದು. ಅಲ್ಲಿ ದೊರೆಯುವ ೨೫೦ರಶ್ಟು ಶಾಸನಗಳೂ ಇದನ್ನು ಹೇಳುತ್ತವೆ. ಆನಂತರ ಕನ್ನಡ ಮತ್ತು ಸಂಸ್ಕ್ರುತ. ನಾಗಾವಿ ಬಹುಹಿಂದಿನಿಂದಲೂ ಶಿಕ್ಶಣ ಕೇಂದ್ರವಾಗಿದ್ದಿತು. ಇಲ್ಲಿ ಮೊದಲಿಗೆ ಬವುದ್ದ ಶಿಕ್ಶಣ ಇದ್ದಿರಬಹುದಾದ ಸಾದ್ಯತೆ ಇದೆ. ಅದರ ಹೊರತಾಗಿ ಸಂಸ್ಕ್ರುತದಲ್ಲಿ ಮತ್ತು ಕನ್ನಡದಲ್ಲಿ ಅದ್ಯಯನ-ಅದ್ಯಾಪನ ನಡೆಯುತ್ತಿದ್ದವು ಎಂಬುದಕ್ಕೆ ಹಲವು ಆದಾರಗಳು ಇವೆ. ರಾಶ್ಟ್ರಕೂಟರ ಕಾಲದಲ್ಲಿ ಮಳಕೇಡ ಕನ್ನಡ, ಪ್ರಾಕ್ರುತ, ಸಂಸ್ಕ್ರುತ ಸಾಹಿತ್ಯದ ಕೇಂದ್ರವಾಗಿದ್ದಿತು. ಹಾಗಾಗಿ ಈ ಪರಿಸರದಲ್ಲಿ ಪ್ರಾಕ್ರುತದಲ್ಲಿ ಜಯ್ನ ದಾರ್‍ಮಿಕ ಪಟ್ಯಗಳು, ವ್ಯಾಕರಣ, ಮೀಮಾಂಸೆಗಳು, ಸಂಸ್ಕ್ರುತದಲ್ಲಿ ವ್ಯಾಕರಣ, ಮೀಮಾಂಸೆ, ಗಣಿತ, ಕಗೋಳ, ಕಾನೂನು, ವಯಿದ್ಯ ಮೊದಲಾದ ಕೆಲಸಗಳು ನಡೆಯುತ್ತವೆ. ಸುರಪುರದ ದೊರೆಗಳ ಕಾಲದವರೆಗೂ ಸಂಸ್ಕ್ರುತ ಈ ಬಾಗದಲ್ಲಿ ಸಾಹಿತ್ಯದ ಬಾಶೆಯಾಗಿ ಇದ್ದಿತು. ಶರಣಬಸ್ಸಪ್ಪನ ಮೇಲಿನ ಸಂಸ್ಕ್ರುತ ಕಾವ್ಯವೊಂದನ್ನು ಇಲ್ಲಿ ನೆನಪಿಸಬಹುದು. ರಾಶ್ಟ್ರಕೂಟರ ಕಾಲದಿಂದ ಕನ್ನಡದಲ್ಲಿ ಸಾಹಿತ್ಯ, ಶಾಸ್ತ್ರಗಳು ಹುಟ್ಟುತ್ತವೆ. ಶ್ರೀವಿಜಯನ ಕವಿರಾಜಮಾರ್‍ಗದಿಂದ ಮೊದಲ್ಗೊಂಡು ತತ್ವಪದ, ಬಯಲಾಟದ ಸಾಹಿತ್ಯ ಮತ್ತು ಆದುನಿಕ ಕಾಲದ ದೊಡ್ಡಪ್ರಮಾಣದ ಸಾಹಿತ್ಯವನ್ನು ಕನ್ನಡದಲ್ಲಿ ನೋಡಬಹುದು. ಇವುಗಳ ನಂತರದ ಈ ಬಾಗದ ಸಾಹಿತ್ಯ ಬಾಶೆಯಾಗಿ ದೊರೆಯುವುದು ಮರಾಟಿ. ಬಹಮನಿಗಳ ಕಾಲದಿಂದ ಇಲ್ಲಿಗೆ ಅರಾಬಿಕ್-ಪರ್‍ಶಿಯನ್ ಬಾಶೆಗಳು ಬರುತ್ತವೆ. ಈ ಎರಡೂ ಬಾಶೆಗಳಲ್ಲಿ ಸಾಕಶ್ಟು ಶಾಸನಗಳೂ, ಸಾಹಿತ್ಯ, ಶಾಸ್ತ್ರಕ್ರುತಿಗಳೂ ರಚನೆಯಾಗುತ್ತವೆ. ಮರಾಟಿ ಆನಂತರದ ಇನ್ನೊಂದು ಸಾಹಿತ್ಯದ ಬಾಶೆ. ವಾಕಟಾಕರ ಶಾಸನ ಮರಾಟಿಯಲ್ಲಿ ಬೀದರ ಬಾಗದಲ್ಲಿ ದೊರೆಯುತ್ತದೆ. ಇಂದಿಗೂ ಮರಾಟಿ ಬರೆಯುವ ಸಾಹಿತಿಗಳು ಕಲಬುರಗಿ ನಗರದಲ್ಲಿ ಇದ್ದಾರೆ. ಆನಂತರ ಬೆಳೆದ ಉರ್‍ದು ಈ ಬಾಗದ ದೊಡ್ಡ ಸಾಹಿತ್ಯ ಬಾಶೆ. ಬಂದೆನವಾಜನ ಕ್ರುತಿಗಳಿಂದಲೆ ಉರ್‍ದು ಸಾಹಿತ್ಯ ಮೊದಲಾಗುತ್ತದೆ. ಇದರಂತೆಯೆ ತೆಲುಗು, ಇಂಗ್ಲೀಶಿನಲ್ಲಿ ಬರೆಯುತ್ತಿರುವವರು ಇಂದು ನಗರದಲ್ಲಿ ಕಂಡುಬರುತ್ತಾರೆ. ಆದುನಿಕಪೂರ್‍ವ ಕಾಲದಲ್ಲಿ ಜನಪದ ಸಾಹಿತ್ಯದಲ್ಲಿ ಈ ಬಾಗದಿಂದ ಮರಾಟಿ, ತೆಲುಗು, ಉರ್‍ದು ವ್ಯಾಪಕವಾಗಿ ಅಲ್ಲಲ್ಲಿ ಕಂಡುಬರುತ್ತವೆ. ಕನ್ನಡದೊಂದಿಗೆ ಈ ಮೂರೂ ಬಾಶೆಗಳು ದ್ವಿಬಾಶಿಕ ಪಟ್ಯದಲ್ಲಿಯೂ ಬರುತ್ತವೆ. ಆದುನಿಕ ಕಾಲದಲ್ಲಿ ಹಿಂದಿ ಸಾಹಿತ್ಯವೂ ಇಲ್ಲಿ ದೊಡ್ಡಪ್ರಮಾಣದಲ್ಲಿ ಹುಟ್ಟುತ್ತಿದೆ.
ಕ್ರಿಸ್ತಪೂರ್‍ವದಿಂದಲೂ ಕನ್ನಡ ಸಾಹಿತ್ಯ ಬೆಳೆದು ಇಲ್ಲಿ ಮಂದಿಯ ಬಾಯಾಗ ಬದುಕಿದ್ದಿತು ಎಂದು ಅನುಮಾನಿಸಲು ಸಾದ್ಯ. ಈ ಬಾಗದ ಹಲವಾರು ಬಾಶೆಗಳಲ್ಲಿಯೂ ಜನಪದ ಸಾಹಿತ್ಯ ಇರುವುದನ್ನು ಕಾಣಬಹುದು. ಇವುಗಳಲ್ಲಿ ಕನ್ನಡದ ಹೊರತಾಗಿ ಅತ್ಯಂತ ಮುಕ್ಯವಾಗಿರುವವು ಲಂಬಾಣಿ ಮತ್ತು ಆನಂತರ ತೆಲುಗು. ಲಂಬಾಣಿಯಲ್ಲಿ ದೊಡ್ಡಪ್ರಮಾಣದ ಸಮ್ರುದ್ದ ಸಾಹಿತ್ಯ ಬಳಕೆಯಲ್ಲಿದೆ. ಉರ್‍ದು, ಮರಾಟಿಯಲ್ಲಿಯೂ, ಕೆಲವು ತೆಲುಗಿನ ಒಳನುಡಿಗಳಲ್ಲಿಯೂ ಸಾಹಿತ್ಯ ದೊರೆಯುತ್ತದೆ.

 

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...