ಕಲಬುರಗಿಗೆ ಹೀಂಗ ಬರ್ರಿ

Date: 05-02-2020

Location: ಕಲಬುರಗಿ


ಕಲಬುರಗಿ ಪ್ರದೇಶವನ್ನು ನೋಡುವ-ಅರಿಯುವ ಬಗೆ ಹೇಗೆ ಎಂಬುದನ್ನು ಡಾ. ಬಸವರಾಜ ಕೋಡಗುಂಟಿ ಅವರು ಈ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ.

 

ಹತ್ತನೆಯ ಶತಮಾನದಾಗ ಕಲುಂಬರಿಗೆಯ ಹೆಸರಿನ ಉಲ್ಲೇಕ ಕಲ್ಯಾಣಿ ಚಾಲುಕ್ಯರ ಶಾಸನವೊಂದರಾಗ ಸಿಗುತ್ತದೆ. ಆದರೆ, ಕಲಬುರಗಿ ಊರು ಸುಮಾರು ಮೂರು ಸಾವಿರ ವರುಶಗಳ ಹಿಂದೆಯೆ ಹುಟ್ಟಿದ ಊರು. ಸಮ್ಮೇಳನಕ್ಕೆ ಬಂದಾಗ ಸುಮ್ಮನೆ ಸುತ್ತುವುದಕ್ಕೆ ಇಲ್ಲಿ ನೂರಾರು ಅದ್ಬುತ ಕ್ಶೇತ್ರಗಳಿವೆ. ನೋಡುವ ಕಣ್ಣುಗಳಿದ್ದರೆ, ಕಾಲೊಳಗಿಶ್ಟು ಶಕುತಿ ಇದ್ದರೆ, ಮುಕ್ತವಾದ ಮನಸಿದ್ದರೆ ಎರಡು ದಿನ ಇಲ್ಲಿ ಸುತ್ತಾಡಿರಿ. ಇಲ್ಲಿ ನಾಲ್ಕಾರನ್ನು ಮಾತ್ರ ಉಲ್ಲೇಕಿಸಿದೆ.
ಕಲಬುರಗಿ ಹತ್ತಿರದಲ್ಲಿಯೆ, ಕನಗನಹಳ್ಳಿಯಲ್ಲಿ ಬೀಮಾ ನದಿಯ ಬಳುಕಿನ ಮಗ್ಗುಲೊಂದರಲ್ಲಿ ಸುಮಾರು ಎರಡು ಸಾವಿರ ವರುಶಗಳ ಹಳೆಯ ಬುದ್ದ ಸ್ತೂಪದ ಅವಶೇಶಗಳು ಇವೆ. ೨೫೦ರಶ್ಟು ಶಾಸನಗಳು ಇವೆ, ಹತ್ತಾರು ಬಿನ್ನ ಬಂಗಿಯಲ್ಲಿರುವ ಬುದ್ದನ ವಿಗ್ರಹಗಳಿವೆ. ಮವುರ್‍ಯ ರಾಜ ಅಸೋಕನ ಚಿತ್ರವೂ ರಾಯ ಅಸೋಕ ಎಂಬ ಉಲ್ಲೇಕದೊಂದಿಗೆ ಇಲ್ಲಿದೆ. ಇದು ರಾಜನೊಬ್ಬನ ಈ ದೇಶದ ಹಳೆಯ ಕೆತ್ತನೆ. ಇಲ್ಲಿಯೆ ಶಾತವಾಹನರ ಹಲವಾರು ಶಾಸನಗಳು, ಕೆಲವು ರಾಜರ ಕೆತ್ತನೆಗಳು ಇವೆ. ಅದ್ಬುತವಾದ ಸ್ತೂಪ ನೋಡುಗರನ್ನೂ, ಸಂಶೋದಕರನ್ನೂ ಕಯ್ ಬೀಸಿ ಕರೆಯುತ್ತಿವೆ. ಅಲ್ಲಿಯೆ ಮುಂದೆ ಬವುದ್ದನಿಲ್ಲಿಗೆ ಬಂದಾಗ ಅವನೊಂದಿಗೆ ಜಗಳವನ್ನಾಡಿ, ಕ್ರಮೇಣ ಅನುಸಂದಾನ ಮಾಡಿಕೊಂಡಿರಬಹುದಾದ ಸನ್ನತಿಯ ಚಂದಮ್ಮ, ಇಲ್ಲವೆ ಚಂದ್ರಲಾಂಬಾ ಇದೆ. ಅಲ್ಲಿ ಸುತ್ತಮುತ್ತ ಇನ್ನೂ ಹಲವಾರು ಊರುಗಳಲ್ಲಿ ಪ್ರಾಕ್ರುತ ಶಾಸನಗಳು ಇಂದಿಗೂ ಸಿಗುತ್ತಿವೆ. ಈ ಸಣ್ಣ ಸಣ್ಣ ಹಳ್ಳಿಗಳು ಆ ಕಾಲದ ದೊಡ್ಡ ದೊಡ್ಡ ಕತೆಗಳನ್ನು ತಮ್ಮೊಳಗೆ ಅದುಮಿಟ್ಟುಕೊಂಡಿವೆ.
ಸನ್ನತಿಯಿಂದ ಮುಂದೆ ಹೊಳೆ ದಾಟಿ ತುಸು ಹೋದರೆ ಶಿರವಾಳ ಇದೆ. ಶಿರವಾಳ ಎಂದರೆ ಕಲ್ಯಾಣ ಚಾಲುಕ್ಯರ ಕಾಲದ ಅರಸರ, ರಸಿಕರ, ಕಲಾವಿದರ, ಶಿಲ್ಪವಿಗ್ನಾನಿಗಳ ತವರೂರಿನಂತೆಯೆ ಕಾಣುತ್ತದೆ. ಶಿರವಾಳದಲ್ಲಿ ಇದ್ದಬಿದ್ದ ದೇವರುಗಳು ಇರುವುದು ಗುಡಿಗಳಲ್ಲಿ ಮಾತ್ರವಲ್ಲ, ಇಲ್ಲಿನ ಮಂದಿಯೂ ಈ ಗುಡಿಗಳಲ್ಲಿಯೆ ಇದ್ದಾರೆ, ಮಾತ್ರವಲ್ಲ ಇಲ್ಲಿನ ದನಕರುಗಳು, ಕುರಿಗಳು ಅಶ್ಟಲ್ಲದೆ ಇಲ್ಲಿನ ಹಂದಿಗಳೂ ಕೂಡ ಕಲ್ಯಾಣ ಚಾಲುಕ್ಯರು ಕಟ್ಟಿಸಿದ ಕೇಂದ್ರಗಳಲ್ಲಿಯೆ ಇರುತ್ತವೆ. ಕಲಾರಸಿಕರಾದ ಕಲ್ಯಾಣ ಚಾಲುಕ್ಯರ ದೊರೆಗಳು ತಮ್ಮ ರಾಜಕೀಯ ನೂರರಿಂದ ದೂರದಲ್ಲಿ ಜಗತ್ತಿನ ಶ್ರೇಶ್ಟ ಕಲಾವಿದರನ್ನೆಲ್ಲ ಇಲ್ಲಿಗೆ ತಂದು ಕಲೆ ಹಾಕಿ, ಅವರ ಮನೆಮಟ ನೋಡಿಕೊಳ್ಳುವುದಕ್ಕೆಂದು ಹಲವರನ್ನು ನೇಮಿಸಿ ಕಲಾವಿದರ ಸ್ವಾತಂತ್ರಕ್ಕೆ ಮುಗಿಲನ್ನು ತೆರೆದಂತೆ ಕಾಣಿಸುತ್ತದೆ. ನೂರರಶ್ಟು ಕೇಂದ್ರಗಳು ಇದೊಂದೆ ಊರಿನಲ್ಲಿ ಇದ್ದಿರಲೂಬಹುದು. ಇಲ್ಲಿ ನೆಲವನ್ನು ಅಗೆದರೆ ಶಿಲ್ಪ, ಕಟ್ಟಡ, ಶಾಸನ ಮಾತ್ರವಲ್ಲದೆ ಪಿಂಗಾಣಿಯ ವಸ್ತುಗಳೂ, ಸುಂದರವಾದ ಮಡಿಕೆಕುಡಿಕೆಗಳು ಏನೇನೊ ಸಿಗುತ್ತವೆ. ನಿಮಗಿಂದು ನಂಬಲು ಸಾದ್ಯವಿರಲಿಕ್ಕಿಲ್ಲ, ಸಾದ್ಯವೆ ಇರಲ್ಲ ಬಿಡಿ. ಸಾಮಾನ್ಯವಾಗಿ ಈ ಬಾಗದಲ್ಲಿ ಶ್ರಾವಣದ ಮಳೆಗೆ ಮೊಳಕೆಯೊಡೆವುದು ಸರಕಾರಿ ಜಾಲಿ ಎಂಬುದೆ ಎಲ್ಲರ ತಿಳುವಳಿಕೆ, ನಮ್ಮವರದೂ ಕೂಡ. ಆದರೆ ಶಿರವಾಳದಲ್ಲಿ ಇಂದಿಗೂ ಶ್ರೀಗಂದದ ಸಸಿಗಲೆ ಮೊಳಕೆಯೊಡೆಯುತ್ತವೆ.
ಅಲ್ಲಿಯೆ ಹತ್ತಿರದಲ್ಲಿ ಮಳಕೇಡ ಅಂತ ಒಂದು ಊರು ಇದೆ. ಅದೆ, ಕನ್ನಡದ ಮೊದಲ ಕ್ರುತಿ ಹುಟ್ಟಿದ ಊರು, ಕವಿರಾಜಮಾರ್‍ಗ ಬರೆದ ಆ ಶ್ರೀವಿಜಯ ಬದುಕಿದ್ದ ಊರು, ಅವನಿಗೆ ಆಶ್ರಯವಿತ್ತ ದೊರೆ ನ್ರುಪತುಂಗನ ಊರು. ಅಲ್ಲಿ ಒಳಪೊಗಲು ಶ್ರೀವಿಜಯನ ತಿರುಗಾಟ, ನೇಹಿಗರೊಂದಿಗೆ ಹರಟೆಗೆಂದು ನಿಂತಹಾಗೆ ಕಣ್ಣ ಮುಂದೆ ಹಾದುಹೋಗದೆ? ಕಾಗಿಣಾ ನದಿಯ ಸುಂದರ ತಿರುವಿನ ಮೇಲ್ಮುಕದಲ್ಲಿ ಕೋಟೆಯನ್ನು ಕಟ್ಟಿಕೊಂಡು ರಾಶ್ಟ್ರಕೂಟರು ಆಳಿದರು. ಇಲ್ಲಿ ಕನ್ನಡ, ಪ್ರಾಕ್ರುತ, ಸಂಸ್ಕ್ರುತ ಬಾಶೆಗಳಲ್ಲಿ ಸಾಹಿತ್ಯ, ವ್ಯಾಕರಣ, ಮೀಮಾಂಸೆ, ತತ್ವಗ್ನಾನ, ಗಣಿತ, ಕಗೋಳ ಕೆಲಸ ನಡೆದವು. ಜಯ್ನರ ಅತ್ಯಂತ ಮಹತ್ವದ ನೆಲೆಯಾಗಿದ್ದ ಇಲ್ಲಿ ಕುಂದುಕುಂದರು ಇದ್ದರು. ನೂರಾರು ವರುಶಗಳ ಜಯ್ನ ದಿಗಂಬರ ಮಟವೊಂದನ್ನು ನೋಡುವದಕ್ಕೆ ಮರೆಯದಿರಿ. ಮಳಕೇಡದಲ್ಲಿ ಮಹತ್ವದ ದರಗಾವೊಂದಿದೆ. ಮದ್ವಾಚಾರ್‍ಯನಿಗೆ ಟೀಕೆಯನ್ನು ಬರೆದು ಟೀಕಾಚಾರ್‍ಯನ ಮಟವೂ ಅಲ್ಲಿದೆ.
ಹಾಗೆ ಮಳಕೇಡದ ಸಿಮೆಂಟ್ ಕಾರ್‍ಕಾನೆಯನ್ನು ಹಾಗೆ ಒಮ್ಮೆ ಸುತ್ತಿ ನೋಡಬೇಕು ಮಳಕೇಡ ಮಾತ್ರವಲ್ಲದೆ ಅಲ್ಲೆಲ್ಲ ಸುತ್ತ ಹಲವಾರು ಊರುಗಳಲ್ಲಿ ಕಲಬುರಗಿ, ಯಾದಗಿರಿ ಪರಸರದ ಸುತ್ತ ಹಲವಾರು ಕಡೆ ದೇಶದ ದೊಡ್ಡ ದೊಡ್ಡ ಸಿಮೆಂಟ್ ಕಾರ್‍ಕಾನೆಗಳು ಇಲ್ಲಿ ನೆಲೆ ಊರಿವೆ. ಈ ಸಿಮೆಂಟ್ ಕಾರ್‍ಕಾನೆಗಳನ್ನು ನೆನಪಿಸಿಕೊಳ್ಳುತ್ತಿದ್ದಂತೆ ಇಲ್ಲಿನ ಕಲ್ಲುಗಳನ್ನ ನೆನಪಿಸಿಕೊಳ್ಳಲೇಬೇಕಲ್ಲವೆ. ಶಾಬಾದ ಕಲ್ಲಿಗೆ ಬಹುದೊಡ್ಡ ಹೆಸರು. ಸುತ್ತ ಪರಿಸರದಲ್ಲಿ ಸಿಗುವ ಹಲವಾರು ಜಾತಿಯ ಕಲ್ಲುಗಳು ಇಲ್ಲಿ ಸಿಗುತ್ತವೆ. ಸಿಮೆಂಟಿಗೆ ಬೇಕಾದ ಕಚ್ಚಾ ಸರಕು ಇಲ್ಲಿ ವೆಗ್ಗಳವಾಗಿದೆ. ಅಂದ ಹಾಗೆ ಈ ಮೇಲೆ ಮಾತನಾಡಿದ ಕನಗನಹಳ್ಳಿಯ ಸ್ತೂಪವನ್ನು ಕಟ್ಟಿದ್ದು ಇದೆ ಜಾತಿಯ ಕಲ್ಲುಗಳಿಂದ.
ಸರಿ, ಇನ್ನು ಅಲ್ಲೆ ನಾಗಾವಿಯನ್ನೊಮ್ಮೆ ನೋಡದಿದ್ದರೆ ಹೇಗೆ? ಬುದ್ದ ಶಿಕ್ಶಣ ವ್ಯವಸ್ತೆ ಇಲ್ಲಿ ಮೊದಲಲ್ಲಿ ಇದ್ದ ಹಾಗಿದೆ. ಆನಂತರ ಜಿನ, ಶಯಿವ, ವಯಿದಿಕ, ಇಸ್ಲಾಂ ಮೊದಲಾದ ಮತಪಂತಗಳು ಒಟ್ಟು ಈ ಸಂಸ್ತೆಯ ಹಿಂದೆ ಇದ್ದವು. ಈ ಶಿಕ್ಶಣ ಸಂಸ್ತೆಯನ್ನು ಉಲ್ಲೇಕಿಸಿ ವಿವರಿಸುವ ಶಾಸನ ಹಲವಾರು ಮಾಹಿತಿಗಳನ್ನು ಕೊಡುತ್ತದೆ. ಗ್ರಂತಪಾಲಕರೂ, ಉಪಗ್ರಂತಪಾಲಕರೂ, ವಿಶೇಶ ಪರಿಣತಿಯ ಪ್ರಾದ್ಯಾಪಕರೂ ಇಲ್ಲಿದ್ದರು. ಕಿಲೊಮೀಟರುಗಟ್ಟಲೆ ವ್ಯಾಪ್ತಿಯ ಈ ಸಂಸ್ತೆಯಲ್ಲಿ ಅಶ್ಟು ಮಂದಿ ಮಕ್ಕಳು, ಪ್ರಾದ್ಯಾಪಕರು ಓದುತ್ತಿದ್ದರೆಂಬುದೆ ಒಂದು ಬೆರಗಿನ ವಿಚಾರ. ಜಗತ್ತಿನ ಹಳೆಯ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಇಂಟರ್‍ನೆಟ್ಟಲ್ಲಿ ನೋಡುವ, ನಲಂದ, ತಕ್ಶಶಿಲ ಮೊದಲಾದ ಹಳೆಯ ಕೇಂದ್ರಗಳ ಬಗೆಗೆ ಮಾತನಾಡುವವರು ನಾಗಾವಿಯನ್ನೊಮ್ಮೆ ಸುತ್ತಾಡಿ. ನಾಗಾವಿಯ ಅರವತ್ತು ಕಂಬದ ಬಸದಿಯನ್ನು, ಸುಂದರವಾದ ಮಂಟಪಗಳನ್ನು, ಬವ್ಯ ನಿಜಮೂರ್‍ತಿಗಳನ್ನು, ತಣ್ಣನೆಯ ಬಾವಿಗಳನ್ನು, ಸುಂದರ ಕೆತ್ತನೆಯ ಕಟ್ಟಡಗಳು, ಅಲ್ಲಲ್ಲಿ ಬಿದ್ದುಕೊಂಡಿರುವ ಶಾಸನಗಳು ಇವೆಲ್ಲವನ್ನು ನೋಡಿ. ಅಂದ ಹಾಗೆ ಈ ನಾಗಾವಿಯಲ್ಲೊಬ್ಬ ಗವುತಮ ಪ್ರಿಯದರ್‍ಶಿಯಾದ, ಪರ್‍ಶಿಯನ್ ಶಿಲ್ಪಕಲಾ ಶಯ್ಲಿಯ, ವಯಿದಿಕ ವಿವರಣೆಗಳೊಂದಿಗೆ ಬದುಕಿರುವ ಎಲ್ಲಮ್ಮ ಪಂತದ ಆಚರಣೆಯ ನಾಗಾವಿ ಎಲ್ಲಮ್ಮ ಇದ್ದಾಳೆ. ಆಕೆಯ ದರುಶನವನ್ನೊಮ್ಮೆ ಪಡೆದು ನಾಗಾವಿಯ ಸುತ್ತಾಟಕ್ಕೆ ಮೊದಲಾದರೆ ಮಜಾ.
ಆಳಂದದ ಕಡೆ ಒಮ್ಮೆ ಬರ್ರಿ. ಆಳಂದ ಕಲಬುರಗಿಯಿಂದ ನಲವತ್ತು ಕಿಲೊಮೀಟರು ದೂರದಲ್ಲಿರುವ ಪಟ್ಟಣ. ಒಂದೊಮ್ಮೆ ಆಳಂದೆ ೩೦೦ ಎಂದು ಪ್ರಸಿದ್ದವಾಗಿದ್ದ ಈ ಊರು ಇತಿಹಾಸದಲ್ಲಿ ಹಲವಾರು ಕಾರಣಗಳಿಗೆ ಪ್ರಸಿದ್ದ. ಇಲ್ಲಿ ಅಂಬವ್ವ ಇದ್ದಾಳೆ. ತುಳಜಾಪುರದಲ್ಲಿ ಇಂದು ಜಗತ್ಪ್ರಸಿದ್ದವಾದ ಅಂಬಾಬವಾನ ಮೂಲತಾ ಆಳಂದದಾಕೆ. ಇಲ್ಲಿಂದ ತುಳಜಾಪುರಕ್ಕೆ ಈಕೆ ಹೋಗುತ್ತಾಳೆ. ನಡುಗಾಲದಲ್ಲಿ ಹೆಸರಾದ ಏಕಾಂತದ ರಾಮಯ್ಯನೂ ಇಲ್ಲಿಯವನೆ. ಇಲ್ಲಿ ನಡುಗಾಲದ ಬಹಳ ದೊಡ್ಡ ಸಾಂಸ್ಕ್ರುತಿಕ ವ್ಯಕ್ತಿಯಾಗಿದ್ದ ಲಾಡ್ಲೆ ಮಶಾಕನ ದರಗಾ ಇದೆ. ಈ ದರಗಾವನ್ನು ದೂರ ಗೂಗಲ್ ವಿವ್ ಅಲ್ಲಿ ನೋಡಬೇಕು. ವ್ಯಾಪಕವಾದ ನೆಲದಲ್ಲಿ ಇರುವ ಈ ದರಗಾ ಕಣ್ಣು, ಮನಸಿಗೆ ಮುದಗೊಳಿಸದೆ ಇರದು. ನಿಮಗಿದೆಲ್ಲ ಯೋಚಿಸಲು ಸಾದ್ಯವೆ ಇಲ್ಲ. ಏನು ಗೊತ್ತೆ. ಈ ಲಾಡ್ಲೆ ಮಶಾಕನ ದರಗಾ ನಡುಗಾಲದ ದೊಡ್ಡ ವಯಿದಿಕ ಸಂತನಾದ ರಾಗವ ಚಯಿತನ್ಯನ ಸಮಾದಿ ಎಂಬ ನಂಬಿಕೆ.
ಆಳಂದ-ಕಲಬುರಗಿ ನಡುವೆ ನಿಮಗೆ ಸಾವಳಗಿ ಸಿಗುತ್ತದೆ. ಸಾವಳಗಿಯ ಶಿವಲಿಂಗ ನಡುಗಾಲದ ಮಹಾನ್ ವ್ಯಕ್ತಿತ್ವ. ಬಂದೆನವಾಜ ಇವನನ್ನು ಬೇಟಿ ಆಗೋದಕ್ಕೆ ಹುಲಿಯೇರಿ ಬಂದಿದ್ದನಂತೆ. ಹುಲಿಯೇರಿ ಬಂದ ಬಂದೆನವಾಜನನ್ನು ಕುಳಿತ ಕಟ್ಟೆಯನ್ನೆ ಮುಂದೆ ನಡೆಸಿ ಎದುರುಗೊಂಡವನು ಶಿವಲಿಂಗ. ಈ ಶಿವಲಿಂಗನ ಮಟಕ್ಕೆ ತಮಿಳುನಾಡನ್ನೂ ಒಳಗೊಂಡು ಹಲವು ಕಡೆ ಶಾಕಾಮಟಗಳಿವೆ. ಈ ಮಟ ನೋಡಿಕೊಳ್ಳುವುದಕ್ಕೆಂದು ಕೆಲವು ಮುಸಲ್ಮಾನ ಮನೆತನಗಳಿವೆ. ಶಿವಲಿಂಗನ ಜಾತ್ರಗೆ ಬಂದೆನವಾಜನ ದರಗಾದ ಚಾದಾರ ಪ್ರತಿವರುಶ ತಪ್ಪದೆ ಬರುತ್ತದೆ. ಹಯ್ದರಾಬಾದ ಕರ್‍ನಾಟಕ ಪರಿಸರವನ್ನು ತನ್ನ ಸಾಮ್ರಾಜ್ಯದೊಳಗೆ ಸೇರಿಸಿಕೊಳ್ಳಬೇಕೆಂಬ ಆಸೆಯಲ್ಲಿ ಸುರಪುರದ ಮೇಲೆ ಯುದ್ದಕ್ಕೆ ಬಂದ ದೆಹಲಿಯ ಮಹಾದೊರೆ ಅವುರಂಗಜೇಬ ಸಾವಳಗಿಯ ಶಿವಲಿಂಗನನ್ನು ಬಂದು ಬೇಟಿಯಾಗುತ್ತಾನೆ. ಈ ಶಿವಲಿಂಗ ಸುರಪುರದ ದೊರೆ ಕಡಲಪ್ಪ ನಿಶ್ಟಿಯ ಕಡೆಯಿಂದ ಬರ ಬಿದ್ದ ನಾಡಿಗೆ ನೂರೊಂದು ಕೆರೆ, ನೂರೊಂದು ಅನ್ನಚತ್ರಗಳನ್ನು ಕಟ್ಟಿಸುತ್ತಾನೆ.
    ಇಲ್ಲಿಯೆ ಹತ್ತಿರದಾಗ ಮಾಡ್ಯಾಳ ಇದೆ. ಅಯ್ಯೊ ರಾಮ-ಸೀತೆ ಮದುವೆ ಮಾಡಿಕೊಂಡು ಜೀವನ ಸಮಸ್ಯೆ ಎದುರಿಸುತ್ತಾ ಕಾಡಡವಿಯಲ್ಲಿ ಇದ್ದಾಗ ಇದ್ದು ಮುಕ್ಕು ಅಕ್ಕಿಯಲ್ಲಿ ಮಾಡಿದ ಅನ್ನ ನಾಯಿ ಮುಟ್ಟಿ ಹಾಳಾಯಿತಂತೆ, ಅಂದರೆ ಮಾಡಿ ಹಾಳು ಆಯಿತು ಅನ್ನೊ ಕತೆಯ ಈ ಊರು ಬಲುಮಜವಾಗಿದೆ. ಇಲ್ಲಿ ಅಲ್ಲಮಪ್ರಬು ದರಗಾ ಇದೆ. ಬೀದರಿನ ಅಶ್ಟೂರಿನಲ್ಲಿ ಬರಬಿದ್ದಾಗ ಅರಸೊತ್ತಿಗೆಯ ಹಣವನ್ನೆ ಮಂದಿಗೆ ದಾನ ನೀಡಿದ್ದ ಜನಾನುರಾಗಿ ಬರೀದ್ ದೊರೆ ಶಾ ವಲಿಯ ಸಮಾದಿ ಇದೆ. ಅದನ್ನೆ ಇಲ್ಲಿ ಮಂದಿ ಅಲ್ಲಮಪ್ರಬು ದರಗಾ ಎಂದು ನಂಬಿರುವುದು. ಯಾಕೆಂದರೆ ಈ ದೊರೆ ಶಾ ವಲಿ ಅಲ್ಲಮಪ್ರಬುವಿನ ಪುನರ್‍ಜನ್ಮ. ಇರಲಿ, ಈ ಅಶ್ಟೂರಿನ ದರಗಾದ ಜೊತೆಗೆ ಸುಪ್ರಸಿದ್ದವಾದ ಮತ್ತು ಮಹತ್ವದ, ಅಶ್ಟೂರಿನ ಈ ದರಗಾದೊಂದಿಗೆ ನೇರ ನಂಟು ಹೊಂದಿರುವ ಇನ್ನೊಂದು ಅಲ್ಲಮಪ್ರಬು ದರಗಾ ಮಾಡ್ಯಾಳದಲ್ಲಿದೆ. ಇಲ್ಲಿ ಹಲವಾರು ಶಿಲ್ಪಕಲಾ ಕೇಂದ್ರಗಳು, ಶಾಸನಗಳು, ಬಾವಿಗಳು ಇವೆ. ಊರಿನ ದೊಡ್ಡ ಗುಡಿಯಾದ ಶಂಕರದೇವರಿಗೆ ಸೂಳೆಕೆರೆಯ ನೆಲವನ್ನು ದಾನವಾಗಿ ಕೊಟ್ಟಿದ್ದಾರೆ. ಅಂದ ಹಾಗೆ ಇಲ್ಲಿ ಊರು ದಾಟುವಾಗ ತುಸು ದೂರದಲ್ಲಿ ದೊಡ್ಡದಾದ ಒಂದು ಚಾಲುಕ್ಯರ ಕಾಲದ ಗುಡಿ ಇದೆ. ಗುಡಿಯೊಳಗೆ ಯಾರಿದ್ದಾರೆ ಅಂತ ಕೂಡ ಒಮ್ಮೆ ಗಮನಿಸಿ. ಗುಡಿಯನ್ನೆ ಒಲ್ಲದ ಎಲ್ಲಮ್ಮ ಈ ಗುಡಿಯ ಒಳಗೆ ಕುಳಿತಿದ್ದಾಳೆ.
ಇಲ್ಲೆ ಹತ್ತಿರದಲ್ಲಿ ಗತ್ತರಗಿ ಅಂತ ಊರಿದೆ. ಗತ್ತರಗಿ ಬಾಗಮ್ಮ ಬಹಳ ದೊಡ್ಡಾಕೆ. ಲಕ್ಶ ಸಂಕೆಯ ಬಕ್ತರು ಬೀಮಾ ತೀರದ ಈ ತಾಯಿಗೆ ಬರುತ್ತಾರೆ. ಆಯಿ ಎಂದು ಕರೆಸಿಕೊಳ್ಳುವ ಈಕೆಯ ದೊಡ್ಡದಾದ ಗುಡಿಯ ಒಳಗೆ ಹೋದಾಗ ಗರ್‍ಬಗುಡಿಯ ಒಳಹೋದಾಗ ಮೂರ್‍ತಿಯ ಬೆನ್ನು ಕಾಣಿಸುತ್ತದೆ. ಬಾಗಿಲಿಗೆ ಬೆನ್ನುಮಾಡಿಕೊಂಡ ದೊಡ್ಡದಾದ ಮೂರ್‍ತಿ ಒಳಗಿದೆ. ಶಾಸನದಲ್ಲಿ ಬಹಳ ಕಡೆ ಕಾಣಿಸುವ ಸಿಡಿ ಆಟದ ಇತ್ತೀಚಿನ ದಾಕಲೆಗಳು ಸಿಗುತ್ತವೆ. ಸಿಡಿಗೆ ಬಳಸುವ ಸಾದನವನ್ನು ಇಂದಿಗೂ ನೋಡಬಹುದು. ಅಂದಹಾಗೆ ಬಾಗಮ್ಮನಿಗೆ ಸಂಬಂದಿಸಿ ಹಲವಾರು ಕತೆಗಳಿವೆ. ಈಕೆ ಅಳಿಯ ರಾಮರಾಯನ ಸೊಕ್ಕನ್ನು ಮುರಿದಾಕೆ. ಬಹುಶಾ ಅಳಿಯ ರಾಮರಾಯನ ವಿರುದ್ದ ಬೀದರಿನ ಬರೀದ್ ಶಾಹಿಗಳ ಜೊತೆ ಸೇರಿ ಮಸಲತ್ತು ನಡೆಸಿದಾಕೆ ಇರಬೇಕು. ಈ ಬಾಗದ ಆಯಿಗಳ ಬಗೆಗೆ ಇಲ್ಲೆ ಹೇಳಲೇಬೇಕು. ಕಲಬುರಗಿ ಸುತ್ತ ಹಲವು ಕಡೆ ಚತ್ತು ಇಲ್ಲದ ಹಲವಾರು ಗುಡಿಗಳು ಇವೆ. ಇವು ಹೆಚ್ಚಾಗಿ ಹೆಣ್ಣು ದೇವರುಗಳು, ಆಯಿಗಳು. ಗುಡಿಯನ್ನು, ರಚನೆಯನ್ನು ತಿರಸ್ಕರಿಸುವ ಈ ತಾತ್ವಿಕತೆ ಇಂದಿಗೂ ಇಲ್ಲಿ ಉಳಿದುಕೊಂಡು ಬಂದಿದೆ.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...