“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

Date: 17-11-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ' . ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಅಮೆರಿಕಾದ ಕಲಾವಿದ ಜೆಫ್ರಿ ಕೂನ್ಸ್ ಅವರ ಕಲೆಯ ಕುರಿತು ಬರೆದಿದ್ದಾರೆ.

ಕಲಾವಿದ: ಜೆಫ್ರಿ ಕೂನ್ಸ್ (Jeffrey Koons)
ಜನನ: 21 ಜನವರಿ, 1955
ಶಿಕ್ಷಣ: ಮೇರಿಲ್ಯಾಂಡ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಬಾಲ್ಟಿಮೋರ್ ಮತ್ತು ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಚಿಕಾಗೊ, ಅಮೆರಿಕ
ವಾಸ: ಯಾರ್ಕ್, ನ್ಯೂಯಾರ್ಕ್ (ಅಮೆರಿಕ)
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ನಿಯೊ-ಪಾಪ್ ಸ್ಕಲ್ಪ್ಚರ್ ಗಳು

ಜೆಫ್ ಕೂನ್ಸ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಜೆಫ್ ಕೂನ್ಸ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

ತಾನು ಆಡುವುದೇ ಗ್ಯಾಲರಿಗಾಗಿ ’to communicate with the masses” ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡಿರುವ ಕಲಾವಿದ ಜೆಫ್ ಕೂನ್ಸ್ ತನ್ನ ಕಲಾಕೃತಿಗಳಲ್ಲಿ ಒಳಾರ್ಥ- ಗೂಢಾರ್ಥಗಳೆಲ್ಲ ಇಲ್ಲ ಅನ್ನುತ್ತಲೇ, ಜಗಮಗಿಸುವ ದೈನಂದಿನ ಸಾಧಾರಣ ಸಂಗತಿಗಳನ್ನೇ ಕಲಾತ್ಮಕವಾಗಿ ಕಟ್ಟಿ ಕೊಡುತ್ತಾರೆ. ಒಂದೆಡೆ ಅವರ ಪರವಾಗಿ ನಿಂತವರು, ಕೊಳ್ಳುಬಾಕತನ (ಕನ್ಸ್ಯೂಮರಿಸಂ) ಮತ್ತು ಪ್ರಾಪಂಚಿಕತೆಗಳ (ಮಟೀರಿಯಲಿಸಂ) ಮೇಲಿನ ಜೆಫ್ ಕೂನ್ಸ್ ವ್ಯಾಖ್ಯಾನಗಳು ಮತ್ತವರು ಕಟ್ಟಿಕೊಡುವ ವೈರುಧ್ಯಗಳು ಸಾಂಪ್ರದಾಯಿಕ ಶಿಲ್ಪಗಳ ವ್ಯಾಖ್ಯಾನಗಳ ಅರ್ಥವಿಸ್ತರಣೆ ಮಾಡಿವೆ ಎಂದರೆ, ಅವರ ವಿರುದ್ಧ ಇರುವವರು, “ಈತ ಕಲಾಜಗತ್ತಿನ ಡೊನಾಲ್ಡ್ ಟ್ರಂಪ್. ಸಾರ್ವಜನಿಕ ಅಭಿರುಚಿ, ಸೂಕ್ಷ್ಮ ಸಂವೇದನೆಗಳನ್ನು ಈತನಷ್ಟು ಹಾಳುಗೆಡವಿದವರು ಬೇರಾರೂ ಇಲ್ಲ. ಪ್ರತಿಭೆಗೂ- ಮಾಡಿಕೊಂಡ ದುಡ್ಡಿಗೂ ಸಂಬಂಧ ಇರಬೇಕಾಗಿಲ್ಲ ಎಂದು ಸಾಬೀತು ಮಾಡಿದ್ದಾರೆ” ಎಂದು ಉಗಿಯುತ್ತಿದ್ದಾರೆ.

ಇಷ್ಟು ಮತ್ತು ಇದಕ್ಕಿಂತ ಹೆಚ್ಚು ವಿವಾದಾಸ್ಪದ ಕಲಾವಿದರಾಗಿದ್ದರೂ ಜೆಫ್ ಕೂನ್ಸ್ ಆರ್ಥಿಕವಾಗಿ ಜಗತ್ತಿನ ಅತ್ಯಂತ ಯಶಸ್ವೀ ಕಲಾವಿದರಲ್ಲೊಬ್ಬರು ಮತ್ತು ಹರಾಜುಕಟ್ಟೆಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದವರು. ಅವರ Triple Elvis (2009) ಪೇಂಟಿಂಗಿಗೆ ಕ್ರಿಸ್ತೀಸ್ ಹರಾಜುಕಟ್ಟೆಯಲ್ಲಿ 2015ರ ಹರಾಜಿನಲ್ಲಿ 60 ಕೋಟಿ ರೂಪಾಯಿಗಳಿಗೆ ಹರಾಜಾದದ್ದು ಒಂದು ದಾಖಲೆ. ಗಗೋಷಿಯನ್, ಸೊನ್ನಾಬೆಂಡ್ ಗ್ಯಾಲರಿಯಂತಹ ಪ್ರಮುಖ ಕಲಾ ಮಾರುಕಟ್ಟೆಯ ಪ್ರಮುಖ ವಣಿಕರ ಮೂಲಕ ತನ್ನ ಕಲಾಕೃತಿಗಳನ್ನು ಮಾರುಕಟ್ಟೆಗಿಳಿಸುವ ಕೂನ್ಸ್, ಅಮೆರಿಕ ಮತ್ತು ಯುರೋಪಿನಲ್ಲಿ ಕಲಾಗ್ರಾಹಕರಿಗೆ ಅಚ್ಚುಮೆಚ್ಚು.

ಅಪ್ಪನ ಫರ್ನಿಚರ್ ಅಂಗಡಿಯಲ್ಲಿ ಹಳೆಯ ಪ್ರಸಿದ್ಧ ಕಲಾವಿದರ ಕಲಾಕೃತಿಗಳ ಪ್ರತಿ ರಚಿಸಿ, ಅದಕ್ಕೆ ಜೆಫ್ ಕೂನ್ಸ್ ಎಂದೇ ಸಹಿ ಮಾಡಿ ಮಾರುತ್ತಿದ್ದ ಈ ಬಾಲಕ ಜೆಫ್ರಿಗೆ ಕಲೆಯ ಬಗ್ಗೆ ಗಂಭೀರ ಆಸಕ್ತಿ ಮೂಡಿದ್ದು 1974ರಲ್ಲಿ ಚಿಕಾಗೋ ಸರ್ರಿಯಲಿಸ್ಟ್ ಚಳುವಳಿಯ ಕಲಾವಿದ ಜಿಮ್ ನಟ್ ಅವರ ಕಲಾಪ್ರದರ್ಶನ ಕಂಡಾಗ. ಅದರಿಂದ ಕೂನ್ಸ್ ಎಷ್ಟು ಪ್ರಭಾವಿತರಾದರೆಂದರೆ, ತಾನೂ ಚಿಕಾಗೊಗೆ ಹೊರಟುಬಿಟ್ಟರು. ಬಳಿಕ ತನ್ನ ಹುಟ್ಟಿದೂರು ಬಾಲ್ಟಿಮೋರ್ ಗೆ ವಾಪಸ್ ಬಂದು, ಅಲ್ಲಿ ಮೇರಿಲ್ಯಾಂಡ್ ವಿವಿಯಲ್ಲಿ ಕಲಾಪದವಿ ಪಡೆದರು. ಆ ಬಳಿಕ MoMA (ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್) ನಲ್ಲಿ ಅದರ ಸದಸ್ಯತ್ವ ಸೇಲ್ಸ್ ಎಕ್ಸೆಕ್ಯೂಟಿವ್ ಆಗಿ, ಕೆಲಸ ಮಾಡುವಾಗ ಈಸ್ಟ್ ವಿಲೇಜ್ ಆರ್ಟ್ ಎಂಬ ಅಮೆರಿಕನ್ ಪರ್ಯಾಯ ಕಲಾ ತಂಡದ ಪರಿಚಯ ಆದದ್ದು ಮತ್ತು 1980ರಲ್ಲಿ ಮ್ಯೂಚುವಲ್ ಫಂಡ್ ಸೇಲ್ಸ್ ಎಕ್ಸೆಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾಗ ನಿಧಾನಕ್ಕೆ ಕಲಾ ಜಗತ್ತನ್ನು ಅರ್ಥಮಾಡಿಕೊಳ್ಳತೊಡಗಿದ್ದು ಜೆಫ್ ಕೂನ್ಸ್ ಅನ್ನು 1986ರ ಹೊತ್ತಿಗೆ ಜಗತ್ತು ಗಮನಿಸುವಂತೆ ಮಾಡಿತು.

ವೈಯಕ್ತಿಕವಾಗಿ ವಿವಾದಗಳಲ್ಲೇ ಸುದ್ದಿಮಾಡುತ್ತಿದ್ದ ಜೆಫ್ 1990ರ ಸುಮಾರಿಗೆ ಇಟಲಿಯ ಅಶ್ಲೀಲ ಚಿತ್ರಗಳ ನಟಿ ಇಲೊನಾ ಸ್ಟೆಲ್ಲಾರ್ (Ciccolina) ಅವರನ್ನು ಕಂಡು ಆಕರ್ಷಿತರಾಗಿ, ಅಲ್ಲಿಗೆ ಹೋಗಿ ಆಕೆಯ ಸಹಾಯದಿಂದ ಒಂದಿಷ್ಟು ಕಲಾಕೃತಿಗಳನ್ನು ರಚಿಸಿಕೊಂಡದ್ದು ಮತ್ತು ಕೊನೆಗೆ ಆಕೆಯನ್ನೇ ಮದುವೆ ಆದದ್ದು ಅವರ Made in Heaven (1990) ಕಲಾಸರಣಿಗಳ ಯಶಸ್ಸಿಗೆ ಪಾಲು ನೀಡಿತು. ಆ ಚಿತ್ರಗಳು ಅಶ್ಲೀಲತೆಯ ಅಂಚಿನಲ್ಲೇ ಇದ್ದವು. ಕೊನೆಗೆ ಆತ ಆಕೆಗೆ ವಿಚ್ಛೇದನ ನೀಡಿ, ಈಗ ಜಸ್ಟಿನ್ ವೀಲರ್ ಎಂಬ ತನ್ನ ಕಲಾ ಸ್ಟುಡಿಯೊ ಸಹಾಯಕಿ ಕಲಾವಿದೆಯನ್ನೇ ಮದುವೆ ಆಗಿ ಸಂಸಾರ ನಡೆಸುತ್ತಿದ್ದಾರೆ.

ಜೆಫ್ ಅವರ ಸೆಲಬ್ರೇಶನ್ (1994), ಬಲೂನ್ ಡಾಲ್ (1994-2005), ಪಾಪ್ ಐ, ಹಲ್ಕ್ ಎಲ್ವಿಸ್ ಸರಣಿಗಳು ಬಹಳ ಜನಪ್ರಿಯ. ಬ್ರಿಟಿಷ್ ಕಲಾವಿದ ಡೇಮಿಯನ್ ಹರ್ಸ್ಟ್ ತನ್ನ ಮೇಲೆ ಜೆಫ್ ಕೂನ್ಸ್ ಪ್ರಭಾವ ಇದೆ ಎಂದು ಹೇಳಿಕೊಂಡಿದ್ದಾರೆ. ಆಂಡಿ ವಾರೋಲ್ ತನ್ನ ಕಲಾಕೃತಿಗಳ ಮೂಲಕ ಕೊಳ್ಳುಬಾಕತನ-ಮಟೀರಿಯಲಿಸಂಗಳ ಬಗ್ಗೆ ಮಾಡಿದ ವ್ಯಾಖ್ಯಾನಗಳನ್ನು ಮತ್ತೊಂದು ಮಜಲಿಗೆ ಕೊಂಡೊಯ್ದ ಜೆಫ್ ಕೂನ್ಸ್, ಸಿಬ್ಬಂದಿಗಳನ್ನು ನೇಮಿಸಿಕೊಂಡು ತನ್ನ ಕಲಾಸ್ಟುಡಿಯೊವನ್ನು ಕಲಾಕೃತಿ ಉತ್ಪಾದನೆಯ ಕಾರ್ಖಾನೆಯ ಸ್ವರೂಪಕ್ಕೆ ಬದಲಿಸಿಕೊಳ್ಳುವ ಮೂಲಕ ಕಲಾಜಗತ್ತಿನಲ್ಲಿ ಅಂತಹದೊಂದು ಸಾಧ್ಯತೆಯತ್ತ ಗಮನ ಹರಿಯುವುದಕ್ಕೂ ಕಾರಣರು.

2019ರಲ್ಲಿ ಪ್ಯಾರಿಸ್ ನಲ್ಲಿ, 2015-16ರ ನಡುವೆ ಭಯೋತ್ಪಾದಕ ಕೃತ್ಯಗಳಲ್ಲಿ ಮಡಿದವರ ಸ್ಮರಣೆಗೆಂದು ಅವರು ರಚಿಸಿದ ಬೃಹತ್ Bouquet of tulips (2019) ಶಿಲ್ಪಕ್ಕೆ ಭಾರೀ ಪ್ರತಿರೋಧ ಎದುರಾಗಿತ್ತು. ಅದು ಅವಕಾಶವಾದಿ ಸಿನಿಕ ಶಿಲ್ಪ ಎಂದು ಸಾವಜನಿಕರ ಪ್ರತಿಕ್ರಿಯೆ ಬಂದದ್ದರಿಂದ, ಅದನ್ನು ಕಮಿಷನ್ ಮಾಡಿದ್ದ ಅಲ್ಲಿನ ಅಮೆರಿಕನ್ ದೂತಾವಾಸವು ಆ ಶಿಲ್ಪದ ವೆಚ್ಚವನ್ನು ಸರ್ಕಾರಿ ಖಜಾನೆಯಿಂದ ಬಳಸದೇ ಖಾಸಗಿಯವರಿಂದ ಪಡೆದು ಬಳಸಬೇಕಾಯಿತು.

ಈಗ ಕೊರೊನಾ ಕಾಲದಲ್ಲಿ, ಸ್ಪೇನಿನ ಬಿಲ್ಬಾವ್ ನಗರದಲ್ಲಿರುವ ಗುಗ್ಗಿನ್‌ಹ್ಯಾಂ ಮ್ಯೂಸಿಯಂ ನ ಎದುರಿರುವ ಅವರ ಪ್ರಸಿದ್ಧ ಪುಷ್ಪಶಿಲ್ಪ Puppy (1992) ಗೆ ಹೂವುಗಳದ್ದೇ ಮಾಸ್ಕ್ ತೊಡಿಸಿದ್ದು ಸುದ್ದಿ ಮಾಡುತ್ತಿದೆ.

ಹಾರ್ವರ್ಡ್ ವಿವಿಯಲ್ಲಿ ಜೆಫ್ ಕೂನ್ಸ್ ಉಪನ್ಯಾಸ:

ಕಲಾವಿದ, ಸಿನೆಮಾಕರ್ಮಿ ಜೂಲಿಯಾನ್ ಶ್ನಾಬೆಲ್ ಅವರೊಂದಿಗೆ ಜೆಫ್ ಕೂನ್ಸ್ ಸಂವಾದ.

ಜೆಫ್ ಕೂನ್ಸ್ ಬಗ್ಗೆ ಬಿಬಿಸಿ ರಚಿಸಿದ ಸಾಕ್ಷ್ಯಚಿತ್ರ

ಚಿತ್ರ ಶೀರ್ಷಿಕೆಗಳು

ಜೆಫ್ ಕೂನ್ಸ್ ಅವರ Bouquet of Tulips (2016-2019)

ಜೆಫ್ ಕೂನ್ಸ್ ಅವರ Bourgeois Bust – Jeff and Ilona (ಮೇಡ್ ಇನ್ ಹೆವನ್ ಸರಣಿಯ ಶಿಲ್ಪ)

ಜೆಫ್ ಕೂನ್ಸ್ ಅವರ Dutch Couple (2007)

ಜೆಫ್ ಕೂನ್ಸ್ ಅವರ Play-Dough ಅಲ್ಯುಮೀನಿಯಂ ಶಿಲ್ಪ (1994-2014)

ಜೆಫ್ ಕೂನ್ಸ್ ಅವರ Fisherman Golfer (1986)

ಜೆಫ್ ಕೂನ್ಸ್ ಅವರ Hulk (organ) (2004-14)

ಜೆಫ್ ಕೂನ್ಸ್ ಅವರ Michael Jackson and Bubbles (1988)

ಜೆಫ್ ಕೂನ್ಸ್ ಅವರ New and New too (1983)

ಜೆಫ್ ಕೂನ್ಸ್ ಅವರ Popeye (2009-2012)

ಜೆಫ್ ಕೂನ್ಸ್ ಅವರ Puppy (1997) ಮಾಸ್ಕ್ ಧರಿಸಿರುವುದು

ಜೆಫ್ ಕೂನ್ಸ್ ಅವರ Balloon Dog (Magenta) (1994-2000) ಸ್ಟೀಲ್ ನಲ್ಲಿ ರಚಿಸಿದ ಬೃಹತ್ ಗಾತ್ರದ ಶಿಲ್ಪ.

MORE NEWS

ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು...

11-05-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ರವೀಂದ್ರನಾಥ ಟ್ಯಾಗೋರರ ಪ್ರಭಾವದಲ್ಲ...

07-05-2021 ಬೆಂಗಳೂರು

ಗುರುದೇವ ರವೀಂದ್ರನಾಥ ಟ್ಯಾಗೋರರ ಸಾಧನಾ ಎಂಬ ಅದ್ಭುತ ಪ್ರಬಂಧಗಳ ಸಂಕಲನ ಮತ್ತು ಕೆಲವು ಕವಿತೆಗಳ ಅಚ್ಚಳಿಯದ ಪ್ರಭಾವದಲ್ಲಿ...

ಕಲಾ ಜಗತ್ತಿನ ಉಕ್ಕಿನ ಮನುಷ್ಯ- ರಿಚ...

04-05-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...