ಕಲ್‌ಬರ್ಗಿ ಇಲ್ಲವೆ ಕಲ್‌ಬುರ್ಗಿ: ರೂಪಸಾಧುತ್ವದ ಚರ್ಚೆ

Date: 31-01-2020

Location: ಬೆಂಗಳೂರು


ಹಿರಿಯ ಶಾಸನತಜ್ಞ-ಇತಿಹಾಸಕಾರ-ಪುರಾತತ್ವಜ್ಞ ಪಾಂಡುರಂಗ ದೇಸಾಯಿ (ಪಿ.ಬಿ. ದೇಸಾಯಿ) ಅವರು ಮೂಲತಃ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸೇರಿದವರು. ಗುರುಮಿಟಕಲ್‌ನಲ್ಲಿ ಜನಿಸಿದ ಪಾಂಡುರಂಗ ಅವರು ತಮ್ಮ ಬಾಲ್ಯ ಕಳೆದದ್ದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ. ಉದಕಮಂಡಲ (ಊಟಿ)ಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ತಜ್ಞರಾಗಿ ಕೆಲಸಕ್ಕೆ ಸೇರಿದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ವಿಜಯನಗರ, ಬಸವಣ್ಣ ಹಾಗೂ ಅವನ ಕಾಲ, ಜೈನಧರ್ಮ, ಶಾಸನಗಳು-ಭಾಷಾವಿಜ್ಞಾನದಲ್ಲಿ ಗಣನೀಯ ಕಾರ್ಯ ನಿರ್ವಹಿಸಿದ್ದಾರೆ. ಪಿ.ಬಿ. ದೇಸಾಯಿ ಅವರು ಕರ್ನಾಟಕದ ವಿವಿಧ ನಗರಗಳ ಹೆಸರುಗಳನ್ನು ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ’ಕನ್ನಡ ನುಡಿ’ ಪತ್ರಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದರು. ಕಲಬುರಗಿ ಬಗ್ಗೆ ದೇಸಾಯಿ ಅವರ ಲೇಖನ ಇಲ್ಲಿದೆ-

 

ಕಲ್‌‌ಬರ್ಗಿ ಉತ್ತರ ಕರ್ನಾಟಕದ ಒಂದು ಜಿಲ್ಲೆಯ ಮುಖ್ಯ ಸ್ಥಳ. ಚರಿತ್ರೆಯ ದೃಷ್ಟಿಯಿಂದ ಮಹತ್ತ್ವವುಳ್ಳ ಪಟ್ಟಣವಿದು. ಈ ಊರಿನ ಹೆಸರು ಬೇರೆ ಬೇರೆಯಾಗಿ ಉಚ್ಚರಿಸಲಾಗುತ್ತದೆ ಮತ್ತು ಬರೆಯಲಾಗುತ್ತದೆ. ಕೆಲವರು ಗುಲ್ಬರ್ಗ ಎಂದರೆ ಇನ್ನೂ ಕೆಲವರು ಕಲ್‌ಬುರ್ಗಿ ಎನ್ನುತ್ತಾರೆ. ಗುಲ್‌ಬರ್ಗ ಎಂಬ ಪದವು ಮುಸಲ್ಮಾನರ ಆಳಿಕೆಯಿಂದ ರೂಢಿಗೆ ಬಂದಿದೆ. ಇದು ಕೃತಕವಾಗಿದೆ. ಇದರ ಅರ್ಥ ಹೂದೋಟ. ಇದನ್ನು ಬಿಟ್ಟರೆ ಕಲ್‌ಬುರ್ಗಿ ಎಂಬ ರೂಪವು ಸಹಜವೇ, ಚಾರಿತ್ರಕವೇ ? ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಸಂದೇಹವನ್ನು ಇಲ್ಲಿ ಸ್ವಲ್ಪ ದೂರಕ್ಕೆ ವಿಮರ್ಶಿಸುತ್ತೇನೆ.

ಗಜಪತಿ ಪ್ರತಾಪರುದ್ರನ ಸರಸ್ವತೀವಿಲಾಸ ಎಂಬ ಸಂಸ್ಕೃತ ಗ್ರಂಥದಲ್ಲಿ ಅಧ್ಯಾಯಾ೦ತ ಗದ್ಯದಲ್ಲಿ ಆ ರಾಜನ ಪ್ರಶಸ್ತಿ ಬರುತ್ತದೆ. ಅದರಲ್ಲಿ 'ಕಲುಬುರಿಗೀ ' ಎಂಬ ರೂಪವು ಕಾಣಿಸಿಕೊಳ್ಳುತ್ತದೆ.

ರಾಯ ವಾಚಕಮು ಎಂಬ ತೆಲುಗು ಗ್ರಂಥದಲ್ಲಿ (Sources of Vijayanagara History, p. 127) ಹಾಗೂ ಕೆಳದಿನೃಪ ವಿಜಯದಲ್ಲಿ (Further Sources of Vijayanagara History, p. 253) ’ಕಲುಬರಿಗೆ' ಎಂಬ ರೂಪವು ಸಿಕ್ಕುತ್ತದೆ. ಕೃಷ್ಣ ದೇವರಾಯಕೃತವೆಂದು ಪ್ರತೀತಿಯಿರುವ ಆಮುಕ್ತ ಮಾಲ್ಯದಾ ಎಂಬ ತೆಲುಗು ಗ್ರಂಥದಲ್ಲಿ (Sources of Vijayanagara History, p. 136) ' ಕಲ್ಬರಿಗ’ ಎಂಬ ಪ್ರಯೋಗವು ದೊರೆಯುತ್ತದೆ. ಶಿವತತ್ತ್ವ ರತ್ನಾಕರದಲ್ಲಿ (Ibid. p. 198) ' ಕಲ್ಲುಬುರಿಗಿ' ಎಂದು ಉಲ್ಲೇಖಿಸಲಾಗಿದೆ. ನ್ಯೂನಿಝನ ಬರವಣಿಗೆಯಲ್ಲಿ (Further Sources etc. p. 214) ’ಕುಲ್‌ಬೆರ್ಗು’ (Culbergura)' ಎಂಬ ವಿಕೃತ ರೂಪವನ್ನು ಲಕ್ಷಿಸಬಹುದು.

ಕಾಲದ ದೃಷ್ಟಿಯಿಂದ ಪರೀಕ್ಷಿಸಿದರೆ ಮೇಲೆ ಸಂದರ್ಭಿಸಿದ ಪ್ರಯೋಗಗಳೆಲ್ಲ ಹದಿನೈದನೆಯ ಶತಮಾನದಿ೦ದ ಈಚೆಯವಾಗುತ್ತವೆ. ಮಾತ್ರವಲ್ಲದೆ ಅವು ಹೆಚ್ಚು ಕಡಿಮೆ ಸಂಸ್ಕೃತದ ವರ್ಚಸ್ಸಿಗೆ ಒಳಪಟ್ಟು ಕೃತ್ರಿಮತೆಯನ್ನು ಸಮೀಪಿಸಿವೆ. ಆದರೆ ಇದಕ್ಕೂ ಸುಮಾರು ಐದು ಶತಮಾನಗಳಷ್ಟಾದರೂ ಹಿಂದಿನ ಶಾಸನಗಳಲ್ಲಿ ಈ ಊರಿನ ನಿರ್ದೆಶಗಳು ಬರುತ್ತಿರುವದರಿಂದ ಪ್ರಸ್ತುತ ಜಿಜ್ಞಾಸೆಯಲ್ಲಿ ಈ ಶಾಸನಗಳ ಬಲವತ್ತರ ಸಾಕ್ಷ್ಯವನ್ನು ಪರಿಶೀಲಿಸುವದು ಅವಶ್ಯಕವಾಗಿದೆ.

ಕಲ್ಬರ್ಗಿಯಿಂದ ಸ್ವಲ್ಪ ದೂರದಲ್ಲಿರುವ ಹುಣಸಿ ಹಡಗಲಿ ಗ್ರಾಮದ ಕ್ರಿ. ಶ. 1098ರ ಒಂದು ಶಾಸನದಲ್ಲಿ (ಸ್ವಂತ ಶಾಸನಸಂಗ್ರಹ, ನನ್ನ ಜೈನಗ್ರಂಥದಲ್ಲಿ ಬೇಗನೆ ಪ್ರಕಟವಾಗಲಿದೆ) ಈ ಊರಿನ ಹೆಸರನ್ನು ಉಲ್ಲೇಖಿಸುವ ಪಂಕ್ತಿ ಹೀಗಿದೆ: 

 

ಆ ಯೆರಡು ಬಸದಿಯ ಖಂಡ ಸ್ಫುಟಿತ ಜೀರ್ಣೋದ್ದಾರದ 

ಬೆಸಕ್ಕವಾ ಹಡಂಗಿಲೆಯ ವಾಯವ್ಯದ ಹೊಲದಲ್‌ 

ಕಲುಂಬರಗೆಯಲ್‌ ನುಡಿದಂತೆ ಗಂಡನ ಗಡಿಂಬದಲು 

ಬಿಟ್ಟ ಕರಿಯ ನೆಲ ಮತ್ತು ಹನ್ನೆರಡು |

ಬಿದರ ಜಿಲ್ಲೆಯ ಕಲ್ಯಾಣ ಗ್ರಾಮದ ಕೋಟೆಯಲ್ಲಿ ದೊರೆತ ಕ್ರಿ. ಶ. 1143ರ ಒಂದು ಶಾಸನದಲ್ಲಿ ದಾತಾರರಾದ ವರ್ತಕ ಸಮುದಾಯದವರನ್ನು ನಿರ್ದೇಶಿಸುವ ಸಂದರ್ಭದಲ್ಲಿ ' ಹೊಟ್ಟಳ ಕೆರೆಯ  ಭ್ರಮಾನ್ತುಕ ನಾಯಕರು೦ - ಸಾವಾಸಿ ಭ್ರಮಾನ್ತುಕರು ಕಲುಂಬರಗೆಯ ಭ್ರಮಾನ್ತುಕ ಸಾಯಿಪಯ್ಯ ನಾಯಕರುಂ ಮಾದಿಮಯ್ಯ ನಾಯಕರುಂ -ಪ್ರಮುಖವಾಗಿ

ಸಮಸ್ತ ಕನ್ನಡ ಭ್ರಮಾನ್ತುಕರು|' ಮುಂತಾಗಿ ವರ್ಣನೆ ಬರುತ್ತದೆ. ಅದೇ ಗ್ರಾಮದ ಅದೇ ಕಾಲದ (ಕ್ರಿ. ಶ.1143) ಇನ್ನೊಂದು ಶಾಸನದಲ್ಲಿಯೂ

‘ಕಲುಂಬರಗೆಯ ಭಮಾನ್ತುಕರು' ಎಂಬ ಪದ ಉಕ್ತವಾಗಿದೆ. ಈ ಪ್ರಯೋಗಗಳಲ್ಲಿನ ಭ್ರಮಾನ್ತುಕ ಎಂಬ ಮಾತಿಗೆ ಸಂಚಾರೀ ವರ್ತಕ ಎಂಬ ಅಭಿಪ್ರಾಯವಿದೆ. ಕಲ್ಯಾಣದ ಈ ಶಾಸನಗಳು 1957 ಜನೆವರಿಯನನ್ನ ಶಾಸನ ಸಂಚಾರದಲ್ಲಿ ಸಂಗ್ರಹಿಸಲಾಗಿದೆ. 

ಮೇಲಿನ ಶಾಸನಾಧಾರದಿಂದ ಇ೦ ದಿ ನ ಕಲ್ಬರ್ಗಿಯ ಪ್ರಾಚೀನ ಹೆಸರು ‘ಕಲುಂಬರಗೆ’ ಆಗಿದ್ದಿತು ಎಂಬ ಅಂಶ ಸ್ಫುಟವಾಗುತ್ತದೆ. ಇದರ ಕ್ರಮಪರಿವರ್ತಿತ ರೂಪವು 'ಕಲ್‌ಬರಗೆ-ಕಲ್‌ಬರ್ಗಿ' ಎಂದು ನಿಷ್ಪನ್ನವಾಗುತ್ತದೆ. 

ಈ ವಿಚಾರವನ್ನು ಕೆಲವು ಉದಾಹರಣೆಗಳಿಂದ ಸ್ಪಷ್ಟಗೊಳಿಸಬಹುದು. ಕಲ್ಬರ್ಗಿಯಿಂದ ಸ್ವಲ್ಪ ದೂರದಲ್ಲಿ ನಿಂಬರ್ಗಿ ಎಂಬ ಗ್ರಾಮವಿದೆ. ಶಾಸನಗಳಲ್ಲಿ ದೊರೆಯುವ ಇದರ ಹಿಂದಿನ ರೂಪ 'ನಿಂಬರಗೆ'. ಇನ್ನೊಂದು ಊರ ಹೆಸರು ಉ೦ಬರಗಿ ; ಇದು ’ಉ೦ಬರಗೆ'ಯಿಂದ ಬಂದುದು. ಇದೇ ಮೇರೆಗೆ ’ಬರಗೆ' ಎಂಬ ಪದದಿಂದ ಕೊನೆಗೊಳ್ಳುವ ಅನೇಕ ಊರುಗಳು ಈ ಪ್ರದೇಶದಲ್ಲಿ ಸಿಕ್ಕುತ್ತವೆ.

’ಕಲುಂಬರಗೆ'ಯಿಂದ ' ಕಲ್ಬುರ್ಗಿ ' ಎಂಬ ರೂಪ ಹುಟ್ಟಲು ಕಾರಣ ಇಲ್ಲದೆ ಇಲ್ಲ. ಈ ಕಾರಣವೆಂದರೆ ಬಕಾರದ ಹಿಂದಿನ ಉಕಾರವು 'ಉಚ್ಚಾರ ಸೌಲಭ್ಯದ ನಿಮಿತ್ತ ಮುಂದಿನ ಬಕಾರಕ್ಕೆ ಅಂಟಿಕೊಳ್ಳುವದು. ಇದಕ್ಕೆ ಸಾದೃಶ್ಯವಿಲ್ಲದ ಉದಾಹರಣೆಗಳೂ ಉಂಟು. 'ಪಾನುಂಗಲ್' ಎಂಬ ಹೆಸರಿನಲ್ಲಿಯ ಉಕಾರವು ಲುಪ್ತವಾಗಿ 'ಹಾನ್ಗಲ್' ಎಂದಾಗಿದೆ. ’ಕಲ್ಬುರ್ಗಿ'ಗೆ ಸಮೀಕರಿಸಿದರೆ ಅದು ' ಹಾನ್ಗುಲ್‌’ ಎಂದು ಆಗಬೇಕಾಗಿತ್ತು.

’ಯಲ್ಬರ್ಗಿ' ರಾಯಚೂರು ಜಿಲ್ಲೆಯಲ್ಲಿ ತಾಲ್ಲೂಕಿನ ಮುಖ್ಯ ಸ್ಥಳವು. ಹಿಂದಿನ ಕಾಲದ ಶಾಸನಗಳಲ್ಲಿ ಈ ಹೆಸರು ’ಎರಂಬರಗೆ' ಎಂದು ಉಕ್ತವಾಗಿದೆ. ಇದರ ಅನಂತರದ ರೂಪ 'ಯಲಂಬರಗೆ' ಹದಿನಾಲ್ಕನೆಯ ಶತಮಾನದ ಶಾಸನದಲ್ಲಿ ದೊರೆಯುತ್ತದೆ. ’ಯಲಂಬರಗೆ'ಯ ಆಧುನಿಕ ರೂಪ 'ಯಲ್ಬರ್ಗಿ’ ಎಂದಾಗಬೇಕು. ಇದನ್ನು 'ಯಲ್ಬುರ್ಗಿ' ಎಂದು ಹೇಳುವುದು ಶುದ್ದ ತಪ್ಪು. ಏಕೆಂದರೆ ಮೇಲೆ ಸೂಚಿಸಿದಂತೆ 'ಕಲ್ಬುರ್ಗಿ'ಯಲ್ಲಿ ಉಕಾರವು ಹಣೆಯಿಕ್ಕಲಿಕ್ಕೆ ಅವಕಾಶವಿದೆ. ಅಂಥ ಅವಕಾಶವು 'ಯಲ್ಬುರ್ಗಿ’ಯಲ್ಲಿ ಇಲ್ಲವೇ ಇಲ್ಲ.

ಇಂತು ಕಲುಂಬರಗೆಯಿಂದ ಬಂದ ’ಕಲ್ಬರ್ಗಿ' ಎಂಬ ರೂಪವು ನನ್ನ ದೃಷ್ಟಿಯಿಂದ ಹೆಚ್ಚು ಚಾರಿತ್ರಕವೂ ಸಯುಕ್ತಿಕವೂ ಆಗಿದೆ. ತದ್ವಿರುದ್ದ 'ಕಲ್ಬುರ್ಗಿ'ಯಲ್ಲಿ ಸ್ವಲ್ಪ ಕೃತ್ರಿಮತೆಯ ಅಂಶವಿದೆ.

ಹೀಗೆ ಈ ವಿಷಯವನ್ನು ಪರಾಮರ್ಶಿಸಿ ಈಚೆಗೆ ನಾನು ನನ್ನ ಲೇಖನದಲ್ಲಿ 'ಕಲ್ಬರ್ಗಿ' ಎಂಬ ರೂಪವನ್ನೇ ಉಪಯೋಗಿಸುತ್ತ ಇದ್ದೇನೆ. ಈ ರೂಪದ ಸಾಧುತ್ವವನ್ನು ಕುರಿತು ಕೆಲವರು ನನ್ನನ್ನು ಪ್ರಶ್ನಿಸಿಯೂ ಇದ್ದಾರೆ. ಈ ಪ್ರಶ್ನೆಗೆ ಉತ್ತರ ಪ್ರಸ್ತುತ ಚರ್ಚೆಯಲ್ಲಿ ದೊರೆಯಬಹುದಾಗಿದೆ.

(ಶಾಸನದ ಚಿತ್ರಗಳು ಸಾಂದರ್ಭಿಕ: ಬರೆಹದಲ್ಲಿ ಉಲ್ಲೇಖಿಸಿದ ಶಾಸನಗಳ ಚಿತ್ರಗಳಲ್ಲ)

ಕೃಪೆ: ಕನ್ನಡ ನುಡಿ, ಸಂಪುಟ-20, ಸಂಚಿಕೆ 7, ಜುಲೈ 1957 ಪುಟ-184-185

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...