ಕಲಬುರಗಿ ಅಂದ್ರ ಏನನ್ಕೊಂಡೀರಿ: ಕಲಬುರಗಿ ಕನ್ನಡದ ವಿಶಿಶ್ಟ ಲಕ್ಶಣಗಳು

Date: 02-02-2020

Location: ಕಲಬುರಗಿ


ಕಲಬುರಗಿ ಪ್ರದೇಶದ ಭಾಷೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ’ಕಲಬುರಗಿ ಕನ್ನಡ’ ಎಂದು ಗುರುತಿಸಲಾಗುವ ಈ ಭಾಷೆಯ ಸ್ವರೂಪ, ಒಳನುಡಿಯಾಗಿ ಬೆಳೆದ ರೀತಿಗಳನ್ನು ಡಾ. ಬಸವರಾಜ ಕೋಡಗುಂಟಿ ಅವರು ಈ ಲೇಖನದಲ್ಲಿ ನೀಡಿದ್ದಾರೆ.


ಸಹಜವಾಗಿ ಹಲಕಾಲ ಮತ್ತು ವ್ಯಾಪಕ ಪ್ರದೇಶದಲ್ಲಿ ಬಳಕೆಯಲ್ಲಿರುವ ಬಾಶೆ ಹಲವು ಒಳನುಡಿಗಳನ್ನು ಪಡೆದುಕೊಳ್ಳುತ್ತದೆ. ಹಾಗೆಯೆ ಕನ್ನಡವೂ ಹಲವಾರು ಒಳನುಡಿಗಳನ್ನು ಪಡೆದುಕೊಂಡಿದೆ. ಒಂದು ಒಳನುಡಿ ಎಂದರೆ ಅದು ಇತರ ಒಳನುಡಿಗಳಿಂದ ಬಿನ್ನವಾಗಿರುವುದು. ದ್ವನಿ, ಆಕ್ರುತಿಮಾ, ಅರ್‍ತ, ಶಯ್ಲಿ ಹೀಗೆ ಹಲವು ನೆಲೆಗಳಲ್ಲಿ ಕೆಲವೊಮ್ಮೆ ವಾಕ್ಯ ಹಂತದಲ್ಲಿಯೂ ಈ ಬಿನ್ನತೆಗಳನ್ನು ಕಾಣಬಹುದು. ಅದರಲ್ಲಿ ಕೆಲವು ಮಾತ್ರ ಆ ಒಳನುಡಿಗೆ ವಿಶಿಶ್ಟವಾಗಿರುವಂತವು ಇರಬಹುದು. ಕಲಬುರಗಿ ಕನ್ನಡಕ್ಕೆ ವಿಶಿಶ್ಟವಾದ ಒಂದೆರಡು ಅಂಶಗಳನ್ನು ಇಲ್ಲಿ ಗಮನಿಸೋಣ. ದ್ವನಿ, ಪ್ರತ್ಯಯಗಳಿಗೆ ಸಂಬಂದಿಸಿದ ಒಂದೊಂದು ಮತ್ತು ಪದಕ್ಕೆ ಸಂಬಂದಿಸಿದ ಎರಡು ಬಳಕೆಗಳನ್ನು ಇಲ್ಲಿ ತೋರಿಸಿದೆ.
ಕಲಬುರಗಿ ಕನ್ನಡದಾಗ ಸ್ವರದ ಉದ್ದ ತುಸು ಬಿನ್ನವಾಗಿದೆ. ಬೀಮಾ ನದಿಯ ಈಕಡೆಯಿಂದ ಗಿಡ್ಡಸ್ವರ-ಉದ್ದಸ್ವರ ಇವುಗಳ ನಡುವಿನ ಗೆರೆ ಸ್ಪಶ್ಟವಾಗಿ ಇಲ್ಲ. ಅದು ಗಿಡ್ಡಕ್ಕರವೂ, ಉದ್ದಕ್ಕರವೂ ಆಗಿರುವಂತೆ ತೋರುತ್ತಿರುತ್ತದೆ. ಅದರಿಂದಾಗಿಯೆ ಈ ಬಾಗದಲ್ಲಿ ಗಿಡ್ಡಸ್ವರ-ಉದ್ದಸ್ವರಗಳನ್ನು ಬರೆಯುವಲ್ಲಿ ಒಂದು ನಿರ್‍ದಿಶ್ಟತೆ ಕಂಡುಬರುವುದಿಲ್ಲ. ಇದು ಕಲಬುರಗಿ ಕನ್ನಡದ ವಿಶಿಶ್ಟ ಲಕ್ಶಣ. ಕೊಡು-ಕೋಡು, ಮೊಬಾಯಿಲ-ಮೋಬಾಯಿಲ ಮೊದಲಾದವನ್ನು ಗಮನಿಸಬಹುದು.
ಹೋಗೋಣ ಎಂಬ ಶಿಶ್ಟಕನ್ನಡದ ರೂಪ ಕಲಬುರಗಿ ಕನ್ನಡದಾಗ ಹೋಗಾಮ, ಹೋಗಾಮಿ, ಹೋಗಾರಿ ಎಂಬ ಹಲವು ರೂಪಗಳಲ್ಲಿ ಬಳಕೆಯಲ್ಲಿದೆ. ಹಲವಾರು ಒಳನುಡಿಗಳಲ್ಲಿ ಒಂದು ಕೆಲವು ಒಳನುಡಿಗಳಲ್ಲಿ ಎರಡು ರೂಪಗಳು ಇದಕ್ಕೆ ಇದ್ದಿರಬಹುದು. ಆದರೆ ಕಲಬುರಗಿ ಕನ್ನಡದಾಗ ಕನಿಶ್ಟ ಮೂರು ರೂಪಗಳು. ಬೇರೆ ಕನ್ನಡಗಳಲ್ಲಿ ಹೋಗೋಣ, ಹೋಗಾಮ, ಓಗಾಮ, ಹೋಗುವಾ ಮೊದಲಾದ ರೂಪಗಳು ಇವೆ. /ಮ್/ ಮತ್ತು /ವ್/ ದ್ವನಿಗಳು ತುಟಿಯಲ್ಲಿ ಹುಟ್ಟುವಂತವು. /ಮ್/ ಮತ್ತು /ಣ್/ ಇವುಗಳ ನಡುವೆ ಸಮಾನತೆ ಇಲ್ಲವೆ ಸಾಮೀಪ್ಯತೆ ಕಾಣಿಸದಿದ್ದರೂ ಅವು ಅನುನಾಸಿಕಗಳು. ಇವಾವಕ್ಕೂ /ರ್/ ದ್ವನಿ ಹತ್ತಿರವಲ್ಲ. ಇದರ ಬೆಳವಣಿಗೆ ತುಂಬಾ ಕುತೂಹಲಕರವಾಗಿದೆ. ಹೋಗಾಮ ಇದರ ಮೇಲೆ ಬಹುವಚನ ಪ್ರತ್ಯಯ -ರಿ ಸೇರಿ ಹೋಗಾಮ್ರಿ ಎಂದು ಬೆಳೆದು, ಕ್ರಮೇಣ, ಅದರಲ್ಲಿನ /ಮ್/ ದ್ವನಿ ಕಳೆದು ಹೋಗಿ ಹೋಗಾರಿ ಎಂಬ ರೂಪ ಬೆಳೆದಿದೆ. ಹೀಗಾಗಿ ಇದೊಂದು ಕಲಬುರಗಿ ಕನ್ನಡದ ವಿಶಿಶ್ಟತೆ.
ಸರ್‍ವನಾಮ ರೂಪಗಳಲ್ಲಿ ಬಡಗನ್ನಡಗಳಲ್ಲಿ (ಉತ್ತರ ಕರ್‍ನಾಟಕ, ಗೋವಾ, ಮಹಾರಾಶ್ಟ್ರ, ತೆಲಂಗಾಣ) ಸಾಕಶ್ಟು ವಿವಿದತೆ ಕಂಡುಬರುತ್ತದೆ. ಕಲಬುರಗಿಯಲ್ಲಿ ತುಂಬಾ ವಿಶಿಶ್ಟವಾದ ಸರ್‍ವನಾಮ ರೂಪಗಳು ಕಂಡುಬರುತ್ತವೆ. ಕಕಿ, ಕಿಕಿ, ಕ~ವ, ಕಿ~ವ, ಕದು, ಕಿದು, ಕವ್ರು, ಕಿವ್ರು, ಕವು, ಕಿವು ಮೊದಲಾದವು. ಕನ್ನಡದಾಗ ಎಲ್ಲ ಒಳನುಡಿಗಳಲ್ಲಿ ಅದಿಂದ ಮೊದಲಾಗುವ ಸರ್‍ವನಾಮಗಳು ಇವೆ. ಕಲಬುರಗಿ ಪರಿಸರದಲ್ಲಿ ಮಾತ್ರ ಇವು ಕ್ದಿಂದ ಆರಂಬವಾಗುತ್ತವೆ (ಬೀದರಲ್ಲಿಯೂ ಇವೆ). ಇದು ಅಕೊ-ಅ~ವ ಎಂಬ ರಚನೆ. ಅವು ಕೂಡಿ ಕ~ವ ಎಂಬ ರೂಪ ಬೆಳೆದಿದೆ.
ಹಾಗೆಯೆ ಶಿಶ್ಟಕನ್ನಡ ಮತ್ತು ಕ್ರಿಶ್ಣಾನದಿಯ ಕೆಳಬಾಗದಾಗ ಉದಿಂದ ಮುಗಿಯುವ ನಗು, ಮಗು ಎಂಬ ನಾಮಪದಗಳೂ, ನೂಕು, ಹಾಕು ಎಂಬ ನಾಮಪದಗಳೂ ಬಳಕೆಯಲ್ಲಿ ಇವೆ. ಆದರೆ ಕ್ರಿಶ್ಣಾನದಿಯ ಮೇಲ್ಬಾಗದ ಪರಿಸರದಾಗ ಇವು ಅಕಾರಾಂತಗಳಂತೆ ಬಳಕೆಯಲ್ಲಿವೆ. ನಗ, ಮಗ, ನೂಕ, ಹಾಕ ಮೊದಲಾದವು.

*

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...